Poovappa Kaniyooru – Peepal Media

ತುಳುವರ ಸಂಸ್ಕೃತಿ ಮತ್ತು ಚೌತಿ ಆಚರಣೆ
ಕೃಷಿ ಮೂಲದ ಸಂಸ್ಕೃತಿಯಲ್ಲಿ ಆಚರಣೆಗೆ ಹೆಚ್ಚು ಮಹತ್ತ್ವ. ಹಾಗೆ ನೋಡಿದರೆ, ಭಾರತೀಯ ಸಮಾಜ ಆಚರಣೆಯ ಮೂಲದ್ದೇ ಹೊರತು, ಶಾಸ್ತ್ರ ನಿರ್ದೇಶಿತ, ಧರ್ಮಗ್ರಂಥ ಪರಿಪೋಷಿತ ಸಮಾಜವಲ್ಲ. ಕೃಷಿ ಮೂಲದ ಗಣಪತಿ ಆಚರಣೆಯಲ್ಲಿ ಮೂರ್ತಿ ಇಡುವುದಾದರೂ, ಸೆಗಣಿಯ ಅಥವಾ ಮಣ್ಣಿನಿಂದ ಮಾಡುವ ಸಣ್ಣ ಗಾತ್ರದ ಗಣಪತಿಯನ್ನು ಸಂಕೇತಿಸಿಡುವುದು ವಾಡಿಕೆ. ಅಂತಹ ಶಿಲ್ಪಗಳ ಕೈಯಲ್ಲಿ ಪಾಶ-ಅಂಕುಶದ ಬದಲು ಕಬ್ಬಿನ ದಂಟು, ಬತ್ತದ ತೆನೆ, ದಾಳಿಂಬೆ ಇವುಗಳನ್ನು ಇಟ್ಟು ಆ ಮೂಲಕ ಸಮೃದ್ಧಿ ಮತ್ತು ಫಲವಂತಿಕೆಯ ಸಂಕೇತದ ಆಶಯವನ್ನು ಕಾಣಲಾಗುತ್ತದೆ… ಜನಪದರ ಚೌತಿ ಆಚರಣೆಯ ಕುರಿತು ಮುಂದೆ ಓದಿ ಜಾನಪದ ತಜ್ಞ ಡಾ.ಪೂವಪ್ಪ ಕಣಿಯೂರು ಅವರ ಲೇಖನ

ಭತ್ತ ಬೆಳೆಯುವ ತುಳುನಾಡಿನ ಅಥವಾ ಕರಾವಳಿ ಭಾಗದ ಜನ ಸಮುದಾಯ ‘ಗಣೇಶ ಹಬ್ಬ’ ಅಂತ ಆಚರಿಸುತ್ತಿರಲಿಲ್ಲ. ಸಾರ್ವಜನಿಕ ಆಚರಣೆಯ ಪರಿಕಲ್ಪನೆಯೇ ಅವರಲ್ಲಿ ಇರಲಿಲ್ಲ. ಸೋಣದಲ್ಲಿ ಬರುವ ಚೌತಿಯ ಕಲ್ಪನೆ ಮಾತ್ರ ಇದ್ದದ್ದು. ಈ ಚೌತಿಯ ಆಚರಣೆಯಾದರೋ ಕೃಷಿಕ ಸಮುದಾಯದಲ್ಲಿ ತೀರಾ ಸರಳ ಆಚರಣೆಯಾಗಿತ್ತು.

ಚೌತಿಯ ದಿನವನ್ನುಳಿವಂತೆಯೂ ಗಣಪತಿಯನ್ನು ಯಾವುದೇ ಹೊಸ ಶುಭಕಾರ್ಯವನ್ನು ಮಾಡುವುದಾದರೂ ಗಣಪತಿಗೆ ‘ಸುತ್ತಿಗೆ’ ಇಡುವ ಕ್ರಮವನ್ನು ಮಾಡುವುದು ಸಂಪ್ರದಾಯ. ಅದೊಂದು ಕೆರೆ ತೋಡುವುದು ಇರಬಹುದು, ಮನೆಗೆ ಅಡಿಪಾಯ ತೆಗೆಯುವುದು ಇರಬಹುದು. ಒಂದು ಸೇರು ಬಿಳಿ ಅಕ್ಕಿ, ಒಂದು ತೆಂಗಿನಕಾಯಿ, ಐದೆಲೆ ಸಹಿತ ಒಂದು ಅಡಿಕೆ, ಗಂಧದ ಕಡ್ಡಿ ಉರಿಸಿಟ್ಟು, ಹೂವು ಅಕ್ಕಿ ಹಿಡಿದು (ಪೊವರಿ) ಏನೂ ವಿಘ್ನ ಬಾರದಂತೆ ಪ್ರಾರ್ಥಿಸುವುದು ತುಳು ಸಂಸ್ಕೃತಿಯ ಪ್ರಧಾನ ಭಾಗವೇ ಆಗಿತ್ತು; ಆಗಿದೆ. ಪಣಿಯಾರ ಇಡುವ ಎಲೆಯ ತುದಿಯಲ್ಲಿ ಇಪ್ಪತ್ತೈದು ಪೈಸೆಯ ನಾಣ್ಯ ಕೂತ ತಕ್ಷಣಕ್ಕೆ ನಮ್ಮ ಕೃಷಿ ಮೂಲ ಆರಾಧನೆಗಳೆಲ್ಲ ವಾಣಿಜ್ಯೀಕರಣಕ್ಕೊಳಗಾಗಿವೆ.

ತುಳುವರು ಮೂಲತಃ ಫಲವಂತಿಕೆಯ ದೈವವಾದ ನಾಗಾರಾಧಕರು. ಬೆಳೆದ ಬೆಳೆಯನ್ನು ರಕ್ಷಿಸುವ ಹಿನ್ನೆಲೆಯಲ್ಲಿ ದೈವಾರಾಧಕರು. ದೈವ ಜಗತ್ತಿನ ಪಂಜುರ್ಲಿ, ಮೈಸಂದಾಯ, ನಂದಿಗೋಣ, ಹುಲಿದೈವಗಳ ಹಿಂದಿನ ಆಲೋಚನೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ, ಅಲ್ಲಿ ಪ್ರಾಣಿ ಮತ್ತು ಭತ್ತದ ಬೆಳೆಗಿರುವ ಅಂತರ್ ಸಂಬಂಧ ಕಾಣುತ್ತದೆ. ದೈವಾರಾಧನೆಯೂ ಮೂಲತಃ ಇಲ್ಲಿನ ಮೂಲ ನಿವಾಸಿಗಳವರದ್ದೇ ಅಗಿದೆ. ಇಲ್ಲಿನ ಮೂಲ ನಿವಾಸಿಗಳಲ್ಲಿ ಕುಲ ಲಾಂಛನವಾಗಿದ್ದ ಪ್ರಾಣಿಗಳೇ ಕ್ರಮೇಣ ದೈವ ಪರಿಕಲ್ಪನೆಯಲ್ಲಿ ಆರಾಧನೆಗೆ ಬಂದವುಗಳಾಗಿವೆ. ಜತೆಗೆ, ಕಾಡು ಪ್ರಾಣಿಗಳಾದ ಅವು ತೊಂದರೆ ಕೊಟ್ಟು ಕಾಡುವುದರಿಂದ ಅವುಗಳನ್ನು ಒಲಿಸಿಕೊಳ್ಳುವ ಹಿನ್ನೆಲೆಯಲ್ಲಿ ಅವು ಆರಾಧಿಸಲ್ಪಟ್ಟವು ಆಗಿದೆ. ಗಣಪತಿಯ ಆರಾಧನೆಯ ಮೂಲದಲ್ಲೂ ಇದೇ ವಿಚಾರಗಳು ಅಡಕವಾಗಿವೆ.

ಗಣನಾಯಕನ ಪರಿಕಲ್ಪನೆಯ ಹಿನ್ನೆಲೆಯನ್ನು ಚಾರಿತ್ರಿಕ ನೆಲೆಯಲ್ಲಿ ಆಲೋಚಿಸಲೂ ಅವಕಾಶವಿದೆ. ನೆಲಮುಖ ಚಿಂತನೆಯ ಪ್ರಕಾರ, ಇತಿಹಾಸ ಪೂರ್ವದಲ್ಲಿ ಮಾನವ – ಗಣಗಳಾಗಿ, ಗುಂಪಾಗಿ ಭಿನ್ನ ಪ್ರದೇಶಗಳಲ್ಲಿ ಬದುಕುತ್ತಿದ್ದರು. ಈ ಗಣಗಳಿಗೆ ಗಣಪತಿ, ಅಂದರೆ ನಾಯಕನೊಬ್ಬ ಇರುತ್ತಿದ್ದ. ಅವನು ಬೇರೆ ಗಣಗಳಿಂದಾಗುವ ವಿಘ್ನಗಳಿಂದ ರಕ್ಷಣೆ ನೀಡುವವ ಮತ್ತು ವಿರೋಧಿಗಳಿಗೆ ತೊಂದರೆ ಕೊಡುವವನಾಗಿದ್ದ. ಈ ಗುಣದ ಗಣಪತಿಯೇ ಕಾಲಾನುಕ್ರಮದಲ್ಲಿ ‘ವಿನಾಯಕ’ನಾಗಿ ನಂಬಿಕೆಯ ನೆಲೆಯಲ್ಲಿ ಆರಾಧನೆಗೆ ಒಳಗಾದವನಾಗಿದ್ದಾನೆ. ಭಯಮೂಲವಾಗಿ ಭಕ್ತಿಯ ನೆಲೆಯಲ್ಲಿ ವಿಘ್ನ ನಿವಾರಕನಾಗಿ ಅತ್ಯಂತ ಪ್ರೀತಿಯ ದೈವತ್ವವನ್ನು ಪಡೆದಿದ್ದಾನೆ.

ಮೂಲತಃ ಗಣಪತಿ ಕೃಷಿ ದೇವತೆ. ತುಳುನಾಡಿನಲ್ಲಿ ಬಹಳ ಪ್ರಸಿದ್ಧವಾದ ಬಾಮಕುಮಾರ ಸಂಧಿ ಪ್ರಚಲಿತವಾಗಿದೆ. ಈ ಸಂಧಿಯ ಪ್ರಕಾರ ಇವನು ಪಾರ್ವತಿಯ ಸುತನಲ್ಲ; ಮೈಸಗೆ ಎನ್ನುವ ಸಿರಿಯಲ್ಲಿ ಈಶ್ವರನಿಗೆ ಹುಟ್ಟುವ ಮಗುವಾಗಿದ್ದಾನೆ. ಬಾಮ ಎನ್ನುವ ಪದಕ್ಕೆ ಸುಂದರ ಎನ್ನುವ ಅರ್ಥವೇ. ಈ ಮಗುವಿನ ಜನನವಾಗುವಾಗ ಈಶ್ವರ ದೇವರು ಅರಮನೆಯಲ್ಲಿ ಇರುವುದಿಲ್ಲ. ಯುದ್ಧ ಜಯಿಸುವುದಕ್ಕೆ ಮಿರಿ ಲೋಕಕ್ಕೆ ಹೋಗಿರುತ್ತಾನೆ (ಇಲ್ಲಿ ಈಶ್ವರನೂ ಒಬ್ಬ ರೈತನಂತೆಯೂ ಅಲೌಕಿಕ ಶಕ್ತಿವಂತನಾಗಿಯೂ ಚಿತ್ರಿತನಾಗಿದ್ದಾನೆ). ಅವನು ಬರುವಾಗ ಮಗು ಜನಿಸಿ ದೊಡ್ಡವನಾಗಿರುತ್ತಾನೆ. ತನ್ನ ಮಾತನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಈಶ್ವರ ಹುಡುಗನ ತಲೆ ಕತ್ತರಿಸುತ್ತಾನೆ. ಸಾಕು ತಾಯಿ ಪಾರ್ವತಿಯ ನೋವಿಗೆ ಸ್ಪಂದಿಸುವ ಶಿವ ಆನೆಯ ತಲೆ ಕಡಿಸಿ ಬಾಮಕುಮಾರನನ್ನು ಬದುಕಿಸುತ್ತಾನೆ. ಮಗನ ಮುಂದಿನ ಗತಿಯೇನೆಂದು ಕೇಳುವ ಪಾರ್ವತಿಗೆ ಆದೇಶ ರೂಪವಾಗಿ ಈಶ್ವರನು ಬಾಮಕುಮಾರನಿಗೆ ‘ಬಾಲ ಬಾಮ ಕುಮಾರ, ಹೋಗು, ಮಹಾ ಗಣಪತಿ ಆಗು, ವರ್ಷಕ್ಕೊಂದು ದಿನ ಚೌತಿಯಂದು ಬುಟ್ಟಿ ಹೆಣೆಯುವವರ ಕೊಪ್ಪವೆಂದು ಬಿಡಬೇಡ. ಮನ್ಸರ ಕೇರಿಯೆಂದು ಬಿಡಬೇಡ, ಬೈರರ ಗುಡಿಸಲೆಂದು ಬಿಡಬೇಡ. ಎಲ್ಲ ಜಾತಿಗಳವರ ಮನೆಗೆ ಹೋಗಿ ನಿನ್ನ ಹೊಟ್ಟೆ ಹೊರೆದುಕೊಳ್ಳು. ಒಬ್ಬೊಬ್ಬರು ಒಂದು ತೆಂಗಿನಕಾಯಿ, ಒಂದು ಸೇರು ಅಕ್ಕಿ ಇಟ್ಟು ಸ್ವಾಮೀ ಗಣಪತಿ ಎಂದು ಹೇಳಿದವರ ಸಹಾಯಕ್ಕೆ ನಿಲ್ಲು’ ಎಂದು ವರ ನೀಡುತ್ತಾನೆ. ಗಣಪತಿಗೆ ಪನಿವಾರ ಇಡುವಲ್ಲಿ ಇಂದು ಇದೇ ವಸ್ತುಗಳು ಸಾಕಾಗುತ್ತವೆ.

ಕೃಷಿ ಮೂಲದ ಸಂಸ್ಕೃತಿಯಲ್ಲಿ ಆಚರಣೆಗೆ ಹೆಚ್ಚು ಮಹತ್ತ್ವ. ಹಾಗೆ ನೋಡಿದರೆ, ಭಾರತೀಯ ಸಮಾಜ ಆಚರಣೆಯ ಮೂಲದ್ದೇ ಹೊರತು, ಶಾಸ್ತ್ರ ನಿರ್ದೇಶಿತ, ಧರ್ಮಗ್ರಂಥ ಪರಿಪೋಷಿತ ಸಮಾಜವಲ್ಲ. ಕೃಷಿ ಮೂಲದ ಗಣಪತಿ ಆಚರಣೆಯಲ್ಲಿ ಮೂರ್ತಿ ಇಡುವುದಾದರೂ, ಸೆಗಣಿಯ ಅಥವಾ ಮಣ್ಣಿನಿಂದ ಮಾಡುವ ಸಣ್ಣ ಗಾತ್ರದ ಗಣಪತಿಯನ್ನು ಸಂಕೇತಿಸಿಡುವುದು ವಾಡಿಕೆ. ಅಂತಹ ಶಿಲ್ಪಗಳ ಕೈಯಲ್ಲಿ ಪಾಶ-ಅಂಕುಶದ ಬದಲು ಕಬ್ಬಿನ ದಂಟು, ಬತ್ತದ ತೆನೆ, ದಾಳಿಂಬೆ ಇವುಗಳನ್ನು ಇಟ್ಟು ಆ ಮೂಲಕ ಸಮೃದ್ಧಿ ಮತ್ತು ಫಲವಂತಿಕೆಯ ಸಂಕೇತದ ಆಶಯವನ್ನು ಕಾಣಲಾಗುತ್ತದೆ. ಜನಪದರಲ್ಲೂ ಗೌರಿ ಆಚರಣೆಯನ್ನು ಕೇವಲ ‘ನೆಕ್ಕಿ ಸೊಪ್ಪಿನ ಕಂತೆಯಲ್ಲಿ ಕಾಣಿಸಿ’ ನೀನು ಏನೇನು ಕಂಡೆ, ನಾನು ಸಮೃದ್ಧಿಯನ್ನು ಕಂಡೆ ಎನ್ನುವ ಹಾಡಿನ ಮೂಲಕ ಇದೇ ಆಶಯವನ್ನು ಕಾಣಲಾಗುತ್ತದೆ.

ಗಣಪತಿಯ ಇಡಿಯಾದ ಸ್ವರೂಪವನ್ನು ಕಂಡಾಗಲೂ ಅದು ಬೆಳೆ ಮತ್ತು ಪ್ರಾಣಿ ಜಗತ್ತಿನ ಅಂತರ್ ಸಂಬಂಧವನ್ನೇ ನಿರೂಪಿಸುವಂತಿದೆ. ಪ್ರಾಣಿಗಳಲ್ಲಿ ಅತಿ ದೊಡ್ಡದಾದ ಆನೆ ಮತ್ತು ಅತಿ ಸಣ್ಣದಾದ ಇಲಿ ಬೆಳೆಗೆ ಹೆಚ್ಚು ಹಾನಿಯುಂಟು ಮಾಡುವ ಪ್ರಾಣಿಗಳು. ತಲೆ ಭಾಗದಲ್ಲಿ ಆನೆಯನ್ನು ವಕ್ರತುಂಡ ಶರೀರವಿರುವ ನರನ ಕಾಲಬುಡದಲ್ಲಿ ಇಲಿಯನ್ನಿಟ್ಟು ಸಾಂಕೇತಿಸುವಲ್ಲಿ ಆ ಪ್ರಾಣಿಗಳನ್ನು ನಿಯಂತ್ರಿಸುವ ಅಥವಾ ನಂಬಿಕೆಯ ನೆಲೆಯಲ್ಲಿ ಒಲಿಸುವ, ಒಪ್ಪಿಸಿಕೊಳ್ಳುವ ಆಶಯವೇ ಪ್ರಧಾನವಾಗಿದೆ. ಗಮನಿಸಲೇಬೇಕಾದ ಇನ್ನೊಂದು ಅಂಶವೆಂದರೆ, ‘ಗೌರಿ ಗಣೇಶ’ ಹಬ್ಬದ ಕಾಲ ಹಿಂದಿನ ಕಾಲದಲ್ಲಿಯಾದರೆ ಭತ್ತದ ಬೆಳೆ ಕಟಾವಿಗೆ ಬರುವ ಕಾಲದಲ್ಲಿಯೇ ಆಚರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿಯೂ ಚೌತಿ ಗಣಪತಿಯ ಆಚರಣೆ ಸಮೃದ್ಧಿ, ಉತ್ಕರ್ಷದ ಆಶಯವನ್ನು ವ್ಯಕ್ತ ಮಾಡುತ್ತದೆ.

ಅಕ್ಷರ ಪರಂಪರೆಯ ಗಣಪತಿಯ ತೀರಾ ಮೂಲಕ್ಕೆ ಹೋದರೆ, ಅದೂ ಅಲಿಖಿತ ಪರಂಪರೆಗೇ ಜೋಡಣೆಯಾಗುತ್ತದೆ. ಯಜುರ್ವೇದದಲ್ಲಿ ಗಣನಾಥನ ಉಲ್ಲೇಖ ಬರುತ್ತದೆಯಾದರೂ ಅದು ಚೌತಿ ಗಣನಾಥನದಲ್ಲ. ಅದು ದೇವತೆಗಳ ಗಣನಾಥ ಬೃಹಸ್ಪತಿಯದ್ದಾಗಿದೆ. ಪುರಾಣದ ಎಲ್ಲ ಕತೆಗಳೂ ಹೇರಂಬ ಗಣನಾಥ, ವಿಘ್ನೇಶ ಎಂದು ನೂರೆಂಟು ಹೆಸರುಗಳಿಂದ ಕರೆದುಕೊಳ್ಳುವ ಗಣಪತಿ ಪಾರ್ವತಿ ಸುತನಲ್ಲ. ಬೇರೆ ಕೆಲವು ಪುರಾಣ ಪ್ರಕಾರ ರುದ್ರ, ವಿಷ್ಣು ಇವರಿಂದ ಅಸುರರನ್ನು ಕೆಡಿಸಲು ವಿಘ್ನಗಳನ್ನು ಉಂಟುಮಾಡುವುದಕ್ಕಾಗಿ ಸೃಷ್ಟಿಯಾದವ. ಏನೇ ಇರಲಿ, ಮೋದಕ ಪ್ರಿಯ ಗಣಪ ಎಲ್ಲಾ ದೃಷ್ಟಿಯಿಂದಲೂ ಪ್ರೀತಿಯ ದೈವ.

ನನ್ನ ಬಾಲ್ಯದ ಮನೆಯಲ್ಲಿ ಚೌತಿಯ ಆಚರಣೆ ಹೀಗೆ ನಡೆಯುತ್ತಿತ್ತು. ಅವಲಕ್ಕಿ, ಹೊದಳು, ಹೆಸರುಬೇಳೆ, ಎಳ್ಳು, ಕಬ್ಬಿನ ಸಿಹಿಯಾದ ದಂಟಿನ ಹೋಳುಗಳು- ಇವುಗಳನ್ನು ಅಚ್ಚುಬೆಲ್ಲ, ದನದ ತುಪ್ಪ ಹಾಕಿ ತಯಾರಿಸಿದ ತಿಂಡಿ, ಸಿಹಿ ಕಡುಬು ಹರಸಿನ ಎಲೆಯ ಅಡ್ಯೆ ತಯಾರಿಸುತ್ತಿದ್ದಳು ಅಮ್ಮ. ಅಡುಗೆ ಮನೆ ಎನ್ನುವ ದೇವರ ಕೋಣೆಯಲ್ಲಿ ಮಣೆಯಲ್ಲಿ ಕಾಲು ದೀಪ ಉರಿಸಿಟ್ಟು ಒಂದು ಚೆಂಬು ನೀರು, ಕೆಳಗೆ ಐದೆಲೆಯನ್ನು ಹಾಕಿ ಮಾಡಿದ ತಿಂಡಿಗಳನ್ನುಬಡಿಸಿ “ಬುಲೆಕ್ಕ್, ಜನಜಾನುವಾರ್ ಗ್ ಬರ್ಪಿ ತೊಂದರೆ ಬರಂದಿಲೆಕ್ಕೊ ಮಲ್ತ್ ಕೊರ್ಲೆ ಸ್ವಾಮಿ ದೇವೆರೇ” (ಬೆಳೆಗೆ, ಜನ ಜಾನುವಾರುಗಳಿಗೆ ಬರುವ ತೊಂದರೆ ಬರದಂತೆ ಮಾಡಿಕೊಡು ಸ್ವಾಮಿ ದೇವರೇ) ಎಂದು ಹೇಳುವುದು ಕ್ರಮ. ಒಂದಷ್ಟು ಹೊತ್ತಿನ ಬಳಿಕ ಬಡಿಸಿದ ಎಡೆಯಲ್ಲಿ ಎರಡನ್ನು ಮಕ್ಕಳಾದ ನಮ್ಮ ಕೈಗೆ ಕೊಟ್ಟು, ಕಟಾವಿಗೆ ಸಿದ್ಧವಾಗಿದ್ದ ಬೆಟ್ಟು ಗದ್ದೆಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಇಲಿ ಬಿಲಗಳ ಹತ್ತಿರ ಇಟ್ಟು ಬರಲು ಹೇಳುತ್ತಿದ್ದಳು. ನಾವು ಹಾಗೆಯೇ ಮಾಡುತ್ತಿದ್ದೆವು. ತಿಂಡಿ ತಿನ್ನುವಲ್ಲಿಗೆ ನಮ್ಮ ಚೌತಿ ಆಚರಣೆ ಮುಗಿಯುತ್ತಿತ್ತು.

ಪ್ರೌಢಾವಸ್ಥೆಗೆ ಬರುವಾಗ ಈಗಿನ ಮನೆ, ಊರು, ಬೀದಿಗಳಲ್ಲಿ ಪ್ರತಿಷ್ಠಾಪನೆಯಾಗುವ ನೂರೆಂಟು ಹೆಸರಿನ ಆಳೆತ್ತರದ ಗಣಪತಿಗಳನ್ನು ನಾನು ನೋಡುವಂತಾಯಿತು. 1894 ರಲ್ಲಿ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಆಚರಣೆಗೆ ಬಂದ ಗಣಪತಿ ಇಂದು ‘ಪಕ್ಷಗಳ’ ಗಣಪತಿಯಾಗಿ ಹೊರಳಿದ್ದು ನಮ್ಮ ವರ್ತಮಾನದ ದೊಡ್ಡ ವ್ಯಂಗ್ಯ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳಾಗಿರುತ್ತವೆ)

ಡಾ. ಪೂವಪ್ಪ ಕಣಿಯೂರು,
ನಿವೃತ್ತ ಪ್ರಾಂಶುಪಾಲರು, ಜಾನಪದ ತಜ್ಞರು.