Guru Sulya – Peepal Media

‘ಡ್ರೈವ್ ಮೈ ಕಾರ್’ – ಒಂದು ಸಿನಿಮಾ ಪಯಣ
ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಸೆಣೆಸಿರುವ ಪ್ರಮುಖ ಚಿತ್ರಗಳಲ್ಲಿ ‘ಡ್ರೈವ್ ಮೈ ಕಾರ್’  ಕೂಡಾ ಒಂದು. ಹತ್ತಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಪ್ರಶಂಸೆಯನ್ನು ಪಡೆದಿರುವ ಈ ಚಿತ್ರದ ಕುರಿತು ಯುವನೋಟದಲ್ಲಿ ಬರೆದಿದ್ದಾರೆ ಗುರು ಸುಳ್ಯ

ಜಪಾನಿನೆಡೆಗಿನ ಇಷ್ಟ

ಜಪಾನ್ ದೇಶದೆಡೆಗೊಂದು ಪ್ರತ್ಯೇಕವಾದ ಇಷ್ಟವಿದೆ ನನಗೆ. ಕಲೆಗೆ ಸಂಬಂಧಿತ ವಿಷಯಗಳಲ್ಲಿ ಜಪಾನಿನ ಹೆಸರು ಕೇಳಿದರೆ ನನ್ನ ಕಿವಿ ನಿಮಿರುತ್ತದೆ. ಜಪಾನೀ ನಿರ್ದೇಶಕ ‘ಕೋರಿ ಇಡಾ’ ನ ಸಿನಿಮಾಗಳು ನನಗೆ ತುಂಬಾ ಇಷ್ಟ. ಆತನ ‘ಮಾಬೊರೋಸಿ’ ಚಿತ್ರ ನನ್ನ ಮನಸ್ಸಿಗೆ ಇವತ್ತಿಗು ಬಣ್ಣ ಹಚ್ಚುತ್ತಿದೆ. ಇತ್ತೀಚೆಗೆ ಪ್ರಕಟವಾದ ‘ಮಂಜುನಾಥ ಚಾರ್ವಾಕ’ ಅನುವಾದಿಸಿರುವ ಜಪಾನಿ ಬರಹಗಾರ ‘ಮುರಕಾಮಿ’ಯ ‘ಕಿನೊ ಮತ್ತು ಇತರ ಕಥೆಗಳು’ ಕೂಡ ನನ್ನನ್ನು ಬಹುವಾಗಿ ಆವರಿಸಿದ್ದವು. ಕೆಲವೊಂದು ಸಿನಿಮಾಗಳು, ಆ ಸಿನಿಮಾದ ಬಗ್ಗೆ ಒಂದಕ್ಷರ ಬರೆಯಲಾಗದಷ್ಟು ತಮ್ಮೊಳಗೆ ಎಳೆದುಕೊಂಡು ಬಿಡುತ್ತವೆ. ಆಧುನಿಕ ಯುಗದ ಜನಪ್ರಿಯ ಕಲೆಯಾದ  ಸಿನಿಮಾ ನನ್ನ ಅಂತರಾಳವನ್ನು ಕಲಕುವ ಪರಿಗೆ ಬೆರಗು ಗೊಳ್ಳುತ್ತೇನೆ. ಕಳೆದ ವಾರ ಮುರಕಮಿ ಕಥೆಗಳನ್ನು ಆದರಿಸಿದ ಸಿನಿಮಾವೊಂದನ್ನು ನೋಡಿದೆ. ಅದರ ಬಗ್ಗೆ ಸುಮ್ಮನೆ ಮಾಡಿಟ್ಟುಕೊಂಡ ಟಿಪ್ಪಣಿಗಳು ವಿಸ್ತೃತಗೊಂಡು ಈ ಬರಹವಾಗಿದೆ.

ಮಾತಿನ ಪರಿಮಿತಿಗಳ ಆಚೆಗೆ

ನನ್ನ ಪಾಲಿಗೆ ಈ ಸಿನಿಮಾ ತೆರೆದುಕೊಳ್ಳುವುದೆ ಡೈನಿಂಗ್ ಟೇಬಲಿನಲ್ಲಿ. ಊಟದ ನಡುವೆ ಸನ್ನೆಗಳಲ್ಲಿ ಹರಡಿಕೊಳ್ಳುವ ಮೂಕಿ ಹುಡುಗಿಯ ಜೊತೆಗಿನ ಸಂಭಾಷಣೆಯಲ್ಲಿ. ಆ ದೃಶ್ಯ ಬರುವ ಹೊತ್ತಿಗಾಗಲೇ ಅರ್ಧ ಸಿನಿಮಾ ಮುಗಿದು ಹೋಗಿರುತ್ತದೆ. ಆದರೆ, ಅಲ್ಲಿಂದ ಹಿಂದಕ್ಕೂ-ಮುಂದಕ್ಕೂ ಚಲಿಸುತ್ತಾ, ನನ್ನನ್ನು ಒಂದು ಟೇಪ್ ರೆಕಾರ್ಡರಿನಂತಾಗಿಸಿತು ಆ ಸಿನಿಮಾ. ಆಡಿದ್ದು, ಆಡದ್ದು ಎಲ್ಲವನ್ನು ರೆಕಾರ್ಡ್ ಮಾಡಿಕೊಳ್ಳುವ ಅಸ್ತವ್ಯಸ್ತ ಬದುಕಿನಲ್ಲಿ ಕ್ಷಣಗಳಿಗೆ ಅಂಟಿಕೊಂಡು ಚದುರುವ ಚಿತ್ರಗಳು ನಾವು. ಈ ಚಲನಚಿತ್ರವು ಅಂತದ್ದೇ ಏನೋ ಒಂದು ಹೇಳಲಾಗದ ಸಂಕಟಗಳ ಸುರುಳಿಯನ್ನು ಹರವಿಟ್ಟು ನೋಡು ಎನ್ನುತ್ತದೆ. ಸಿನಿಮಾದಲ್ಲಿ, ಅಲ್ಲಲ್ಲಿ ಕಾರಿನ ಸ್ಟೀರಿಯೋದಲ್ಲಿ ‘ಕಫುಕು’ ರೆಕಾರ್ಡ್ ಮಾಡಿಟ್ಟುಕೊಂಡ ಪಾತ್ರಗಳ ಮಾತುಗಳು ಪ್ಲೇ ಆಗುತ್ತಿರುತ್ತವೆ. ಆ ಮಾತುಗಳು ರಿಯಾಲಿಟಿಯನ್ನು ಪ್ರತಿಬಿಂಬಿಸುತ್ತವೆ. ಕಫುಕು ಒಬ್ಬ ನಾಟಕಕಾರ. ಜಪಾನಿನ ‘ಹಿರೋಶಿಮ’ ನಗರದಲ್ಲಿ ನಡೆಯುವ ಆತನ ಹೊಸ ನಾಟಕ, ನಾಟಕಕಾರ ‘ಚೆಕಾವ್’ನ ‘ಅಂಕಲ್ ವ್ಯಾನ್ಯಾ’. ಕಫುಕುವಿನ ಬದುಕಿನ ಸಂದಿಗ್ಧತೆಗಳು ಈ ನಾಟಕದೊಳಗೂ ಹಾಸು ಹೊಕ್ಕಾಗಿರುತ್ತದೆ. ಈ ನಾಟಕಕ್ಕಾಗಿ ವಿವಿಧ ಭಾಷೆಗಳ ಕಲಾವಿದರನ್ನು ಆಯ್ಕೆ ಮಾಡಲು ಹುಡುಕಾಟ ನಡೆಯುತ್ತದೆ. ಜಪಾನ್, ಕೊರಿಯ, ಚೈನೀಸ್, ಥಾಯ್ ಇತ್ಯಾದಿ ಭಾಷೆಗಳನ್ನು ಒಟ್ಟಿಗೆ ಒಂದೇ ರಂಗದಲ್ಲಿ ತರುವ ಉದ್ದೇಶವು ಇದಕ್ಕಿರುತ್ತದೆ. ಈ ಹುಡುಕಾಟದ ನಡುವೆ ಸಿಗುವವಳೇ ಈ ಸದ್ದಿಲ್ಲದೆ ಮಾತನಾಡುವ ಹುಡುಗಿ. ಭಾಷೆಯ ಪರಿಮಿತಿಯನ್ನು ಮೀರಲು ಯತ್ನಿಸುವ ಮುರಕಾಮಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ. ಮಾತು ಬಾರದ ಹುಡುಗಿಯ ಮಾತುಗಳು, ಸಿನಿಮಾದ ಡೈಲಾಗುಗಳಾಗಿ ಮೌನದ ರೂಪದಲ್ಲಿ ಚಿತ್ರದುದ್ದಕ್ಕೂ ಹರಿಯುತ್ತಲೇ, ಅಂತ್ಯ ಹಾಡುತ್ತದೆ.

ಕಾರಿಗೂ ಜೀವವಿದೆ

ಚಿತ್ರದ ಹೆಸರು ‘ಡ್ರೈವ್ ಮೈ ಕಾರ್’. ‘ನಾರ್ವೇಯನ್ ವುಡ್’ ಹಾಡಿನಂತೆಯೇ ಮುರಕಾಮಿಯ ಇಷ್ಟದ ‘ಬೀಟಲ್ಸ್ ಮ್ಯೂಸಿಕ್ ಬ್ಯಾಂಡಿನ’ ಹಾಡೊಂದರ ಸಾಲಿದು. ಕಥೆಯಲ್ಲಿ ಹಳದಿ ಬಣ್ಣದಲ್ಲಿರುವ ಕಾರನ್ನು ನಿರ್ದೇಶಕ ಎದ್ದು ಕಾಣುವ ಕೆಂಪು ಬಣ್ಣವಾಗಿಸಿದ್ದಾನೆ. ಸಿನಿಮಾದ ಮುಖ್ಯ ಪಾತ್ರವಾಗಿರುವ ‘ಕಫುಕು’ವಿನ ಕಾರಿನ ಡ್ರೈವರ್ ಆಗಿ ಬರುವವಳು ‘ಮಿಸಾಕಿ’. ಕಾರಿಗೂ ಜೀವವಿದೆ ಎಂಬಂತೆ ಚಲಾಯಿಸುವ ಮಿಸಾಕಿ, ಅಪಘಾತ ಮತ್ತು ಚೇತರಿಕೆಗಳರೆಡಕ್ಕೂ ಸಾಕ್ಷಿಯಂತಿರುವವಳು. ಕಾರಿನ ಚಾಲಕಿಯಾದ ಈ ಹುಡುಗಿ ನಿಂತು ಹೋದಂತಿದ್ದ ಆತನ ಚಲನೆಯನ್ನು ಉದ್ದೀಪಿಸುತ್ತಾಳೆ. ಯಾರಿಗೂ ಬೇಡವಾದ ಕಸದ ರಾಶಿಯನ್ನು ಸಂಸ್ಕರಿಸುವ ಜಾಗ ಆಕೆಯ ಇಷ್ಟದ ಜಾಗ. ಇದು ಹಿರೋಶಿಮದಲ್ಲಿ ನಡೆದ ಮಾರಣಹೋಮದ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕದ ಸ್ವಲ್ಪ ಹತ್ತಿರದಲ್ಲಿರುವುದು ಸಿನಿಮಾದ ಮಟ್ಟಿಗೆ ಕಾಕತಾಳೀಯವೇನಲ್ಲ. ಹಿರೋಶಿಮ ನಗರಕ್ಕೆ ಅಂಟಿಕೊಂಡಿರುವ ನೋವಿನ ಇತಿಹಾಸದ ಮೇಲೆ ನೇರವಾಗಿ ಕ್ಯಾಮರ ಚಲಿಸುವುದೇ ಇಲ್ಲ. ಹಿರೋಶಿಮದ ರಸ್ತೆಗಳಲ್ಲಿ ಓಡಾಡುವ ಕಾರನ್ನು ತೋರಿಸುವ ದೃಶ್ಯಗಳಲ್ಲಷ್ಟೇ ಆ ನಗರ ಓಡಾಡುವುದು.

ಕಫುಕು ಮತ್ತು ಮಿಸಾಕಿ, ತಮ್ಮ ಬದುಕಿನ ಕಥೆಗಳನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಳ್ಳುತ್ತಾರೆ. ಗೂಗಲ್ ಮ್ಯಾಪ್ ತೆರೆದಿಟ್ಟು ತಮ್ಮ

ಗಮ್ಯವನ್ನು ಹುಡುಕಿ ಕೊಳ್ಳುವಂತಿರುತ್ತದೆ ಅವರಿಬ್ಬರ ಪಯಣ. ಕಫುಕು – ನೀನು ಬಿಟ್ಟು ಬಂದ ಊರಿಗೆ, ನಿನ್ನಮ್ಮ ಸತ್ತ ಜಾಗಕ್ಕೆ ನನ್ನನ್ನು ಕರೆದೊಯ್ಯಿ ಅನ್ನುತ್ತಾನೆ. ಹಿಮಪಾತವಾದ, ಮಂಜುತುಂಬಿದ ಜಾಗಕ್ಕೆ ಹೋಗುತ್ತಾರೆ ಇಬ್ಬರೂ. ದೇಹ ತಣ್ಣಗಾಗುವ ಮಂಜಿನ ಮಧ್ಯೆ ಅವಳು ಸೇದಿ ಮುಗಿಸಿದ ಸಿಗರೇಟಿನ ತುಂಡನ್ನು ನೆಡುತ್ತಾಳೆ. ಮರಣಕ್ಕೆ ಸಾಂತ್ವನಿಸುವಂತೆ, ಉರಿದು ಹೋಗುವ ಸಿಗರೇಟಿಗೆ ಲಾಲಿ ಹಾಡುತ್ತದೆ ಹಿಮ. ಇಬ್ಬರೂ ಸೇರಿಕೊಂಡು ಸತ್ತವರ ನೆನಪುಗಳಿಗೆ ಅಂಟಿದ ಕೊಳೆಯನ್ನು ತೊಳೆಯುತ್ತಾರೆ. ಅದನ್ನು ನೋಡುತ್ತಿರುವಾಗಲೇ, ‘ಸ್ಮಶಾನದಲ್ಲಿ ಮಾತನಾಡುವವರ, ಮೌನವನೊಮ್ಮೆ ಆಲಿಸಿ’ ಅನ್ನುವ ‘ರೂಮಿ’ ಯ ಸಾಲುಗಳು ನೆನಪಾಗುತ್ತವೆ.

ಗುಪ್ತಗಾಮಿನಿ

ಸಿನಿಮಾದ ಶುರುವಿಂದ ಕೊನೆಯವರೆಗೆ ಹರಿಯುವ ಗುಪ್ತಗಾಮಿನಿ ಕಫುಕುವಿನ ಹೆಂಡತಿ ‘ಒಟೊ’. ಆ ಹರಿವಿಂದ ಹುಟ್ಟಿದ ಕಥೆಗಳೇ ಎಲ್ಲವೂ. ಅವಳು ಯಾರ ಜೊತೆಗಾದರು ಸೆಕ್ಸ್ ಮಾಡುವಾಗ ಅವಳಲ್ಲಿ ಹುಟ್ಟುವ ಕಥೆಗಳನ್ನು ಕಾಣಬಹುದು, ಕೇಳಬಹುದು. ಇದು ಮನುಷ್ಯರ ವಿಕಾಸದಲ್ಲಿ ಕಥೆಗಳು ವಹಿಸಿದ ಪಾತ್ರವನ್ನು ಹೇಳುವಂತಿದೆ. ಅವಳ ಕಥೆಯೊಂದರಿಂದ ಪಾತ್ರವೊಂದು ಎದ್ದು ಬಂದು, ಉಳಿದ ಕಥೆ ತಾನೇ ಹೇಳುವಂಥ ಪಾತ್ರವೊಂದಿದೆ ಚಿತ್ರದಲ್ಲಿ. ಆ ಪಾತ್ರದ ಹೆಸರು ‘ಕೋಶಿ’. ಆತನ ಹುಡುಕಾಟಕ್ಕಿರುವ ಪ್ರಾಮಾಣಿಕತೆ ತೀವ್ರ ತರವಾದದ್ದು. ಕಪುಕು ಮತ್ತು ಒಟೊ ದಂಪತಿಗಳ ಮಗು ತೀರಿ ಹೋಗಿರುತ್ತದೆ. ಕಫುಕುವಿನ ಹೆಂಡತಿ ಒಟೊ ಕೂಡ ತೀರಿಕೊಳ್ಳುತ್ತಾಳೆ. ಮಿಸುಕಿಯ ತಾಯಿ ಸತ್ತಿರುತ್ತಾಳೆ. ಮಿಸುಕಿ ತನ್ನ ತಾಯಿ ಸಾಯುವುದನ್ನು ಹತಾಶೆ, ಪ್ರೀತಿ ಮತ್ತು ತಣ್ಣಗಿನ ಕ್ರೌರ್ಯದೊಂದಿಗೆ ನೋಡಿದ ತನ್ನ ನಡವಳಿಕೆಯನ್ನು ಕಫುಕುವಿನೊಂದಿಗೆ ಹಂಚಿಕೊಳ್ಳುತ್ತಾಳೆ. ಕಫುಕು ತನ್ನ ಹೆಂಡತಿ ಸಾಯುವ ಮುಂಚೆ ತನಗೆ ಏನೋ ಹೇಳಬೇಕೆಂದಿದ್ದನ್ನು ಕೇಳಿಸಿಕೊಳ್ಳದೇ ಹೋದುದಕ್ಕೆ ಪರಿತಪಿಸುತ್ತಾನೆ. ಬದುಕಿನೊಳಗೆ ಮೌನವಾಗಿ ಪ್ರವಹಿಸುವ ಸಾವು ನೋಡುಗರನ್ನು ಸೋಕುತ್ತದೆ.

ಏಕತಾನತೆಯ ಪ್ರತಿನಿಧಿಗಳು

ಯಾವುದು ನಮ್ಮ ಮನೆ ? ಒಂದು ಕಟ್ಟಡವೋ, ಒಬ್ರು ವ್ಯಕ್ತಿಯಾ? ಅಪರಿಚಿತ ಮನೆಯಲ್ಲಿನ ನಾಯಿ, ನಿನಗೊಂದು ಮನೆಯ ಫೀಲ್ ಕೊಡಬಲ್ಲುದಾ? ಹೌದು; ಒಂದು ಕಾರು, ಪ್ರಾಣಿ , ಮನುಷ್ಯರು, ಒಂದು ಭಾವ, ನಾಟಕದ ಥಿಯೇಟರ್ ಅಥವಾ ಇನ್ಯಾವುದೇ ವಸ್ತು ಮನೆಯಾಗಬಲ್ಲುದು. ಇದು ಸಿನಿಮಾದೊಳಗೆ ಅಲ್ಲಲ್ಲಿ ವ್ಯಕ್ತವಾಗುತ್ತದೆ. ಮುಖ್ಯವಾಗಿ ಮಿಸುಕಿ ಪಾತ್ರದ ಆಳಕ್ಕಿಳಿದಾಗ ಅದಿನ್ನು ಸ್ಪಷ್ಟವಾಗುತ್ತದೆ. ಎಲ್ಲವೂ ಪರ್ಫೆಕ್ಟ್ ಆಗಿ ಸಾಗಬೇಕು ಅನ್ನುವ ಏಕತಾನತೆಗೆ ಹೊಂದಿಕೊಂಡಿರುವ ಕಫುಕು ಅದಕ್ಕೆ ಸಾಕ್ಷಿಯೆಂಬಂತೆ, ತುಂಬಾ ನೀಟಾಗಿ ಕಾಣಿಸುವ ಅವನ ಹಳೇ ಕಾರಿನಲ್ಲಿ ನೆನಪುಗಳನ್ನು ಸಾಗಿಸುತ್ತಿರುತ್ತಾನೆ. ತನ್ನ ಬದುಕಿನ ಬಗೆಗಿನ ಗಿಲ್ಟ್ ಅನ್ನು ಉಳಿಸಿ ಕೊಂಡಿರುವಾಕೆ ಮಿಸುಕಿ. ಯಾವುದನ್ನೂ ಪೂರ್ತಿಯಾಗಿ ಅಪ್ಪಿಕೊಳ್ಳದೇ, ಬದುಕಿನ ಸಣ್ಣ ಖುಷಿಗಳನ್ನು, ದುಃಖದಿಂದೆಂಬಂತೆ ಅನುಭವಿಸುತ್ತಿರುವಾಕೆ. ತನಗೇನು ಬೇಡ ಎಂಬಂತೆ ಒಂದರಿಂದ ಇನ್ನೊಂದಕ್ಕೆ ಸಾಗುವ ಮಿಸುಕಿ ಕೂಡ ಒಂದು ರೀತಿಯಲ್ಲಿ ಏಕತಾನತೆಯ ಪ್ರತಿನಿಧಿ. ನಾಟಕದ ಪರದೆ ಚೂರು ಚೂರೇ ಸರಿಯುವಂತೆ, ವೈರುಧ್ಯ ತುಂಬಿದ ಅವರವರ ಬದುಕು ಮತ್ತೆ ಮುಂದುವರೆಯುತ್ತದೆ. ಹಿಂದಿನದ್ದನ್ನು ಹಿಂದೆಯೇ ಬಿಟ್ಟು, ಬದುಕಿನೊಂದಿಗೆ ಪ್ರಾಮಾಣಿಕವಾಗಿರ ಬಯಸುವ ಬೀಜ ಚಿಗುರೊಡೆಯುತ್ತದೆ.

ಕಾಫ್ಕಾನ ಕೀಟ

‘ನಿನ್ನ ಹೆಂಡತಿ, ನಿನ್ನನ್ನು ಪ್ರೀತಿಸುವಷ್ಟೇ ಸಹಜವಾಗಿ ಬೇರೆ ಗೆಳೆಯರೊಂದಿಗೆ ಲೈಂಗಿಕ ಸಾಂಗತ್ಯವನ್ನು ಹೊಂದಿದ್ದಳು ಎಂದ್ಯಾಕೆ ನೀನು ತಿಳಿಯಬಾರದು’ – ಇದು ಒಂದು ಹಂತದಲ್ಲಿ ಕಫುಕುವಿಗೆ ಮಿಸುಕಿ ಹೇಳುವ ಮಾತುಗಳಿವು. “ನಮಗೆ ವಿವಿಧ ತರದ ಮನುಷ್ಯ ಸ್ವಭಾವಗಳನ್ನು ಅದು ಇರುವಂತೆಯೇ ನೋಡಲು ಸಾಧ್ಯವಾಗುವುದಿಲ್ಲ. ಅರ್ಥವಾಗದಿರುವ ಸಂದರ್ಭಗಳನ್ನು ಅತೀಂದ್ರಿಯತೆಗೆ ಆರೋಪಿಸಲು ಹಾತೊರೆಯುತ್ತೇವೆ. ಸಹಜವಾದ ನಡವಳಿಕೆಗಳನ್ನು ಸಂಶಯದ ಬಲಿಗಲ್ಲಿಗೆ ಒಡ್ಡುವಾಗ ನಮ್ಮಲ್ಲಿರುವ ಕ್ರೌರ್ಯದ ಅಂಶಗಳನ್ನು ಮರೆಯುತ್ತೇವೆ” – ಇವನ್ನೆಲ್ಲಾ ಒರೆಗಲ್ಲಿಗೆ ಹಚ್ಚುವ ಸಿನಿಮಾದ ಸಂಭಾಷಣೆ, ಅಲ್ಲಲ್ಲಿ ಚೂರು ಚೂರೇ ಸಾಣೆ ಹಿಡಿಯುತ್ತದೆ. ಕಫುಕು ಪಾತ್ರದ ಹೆಸರು ಬರುವಲ್ಲೆಲ್ಲಾ, ನಾನು ‘ಕಾಫ್ಕಾ’ ಅಂತಾನೆ ಕೇಳಿಸ್ಕೋತಾ ಇದ್ದೆ. ಕಾಫ್ಕಾನ ಕೀಟ ಒಳಗೆಲ್ಲೋ ಸುಳಿದಾಡಿದಂತಿದೆ.

ಯಾರೋ  ಕಿವಿಗೆ ಉಸಿರು ಸೋಕುವಷ್ಟು ಹತ್ತಿರ ಕೂತ್ಕೊಂಡು ಹೇಳಿದಂತಿದೆ ಇಲ್ಲಿನ ಕಥಾನಕಗಳು. 120 ನಿಮಿಷದಷ್ಟು ಉದ್ದವಿರುವ, ತುಂಬಾ ನಿಧಾನವಾಗಿ ಸರಿಯುವ ಸಿನಿಮಾ, ಅದರೊಳಗೆ ಇಳಿಯದಿದ್ದರೆ ಬೋರ್ ಹೊಡೆಸುವ ಸಾಧ್ಯತೆಯಿದೆ. ಇಲ್ಲಿನ ಪಾತ್ರಗಳು ಕಥೆ ಹೇಳುತ್ತಾ, ಹೇಳುತ್ತಾ ಕಥೆಗಳಾಗುತ್ತಾ ಹೋಗುತ್ತವೆ. ಮುರಕಾಮಿ ಕಥೆಗಳನ್ನು ಓದುವುದು ಹಾಗೇ ಇರುತ್ತದೆ; ಈ ಸಿನಿಮಾ ಕೊಡುವ ಫೀಲ್’ನ ಹಾಗೆ. ‘ಹೇಳಲಾಗದ್ದನ್ನು, ಹೇಳದೆಯೇ ಉಳಿಸಿಯೂ, ಓದುಗನೆಡೆಗೆ ತಲುಪಿಸುವ’ ಮುರಕಾಮಿಯ ಕ್ರಾಫ್ಟ್ ಅನ್ನು ಈ ಸಿನಿಮಾದ ನಿರ್ದೇಶಕ ‘ಹಮಗುಚಿ ರುಯ್ಯುಸ್ಕೆ’ ಅವಾಹಿಸಿಕೊಂಡಂತಿದೆ.

ಗುರು ಸುಳ್ಯ

ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.

‘ಚಲಂ’ ಎಂಬ ಬದುಕಿನ ಕಡು ವ್ಯಾಮೋಹಿ
ತೆಲುಗಿನ ಪ್ರಭಾವಿ ಲೇಖಕ  ಗುಡಿಪಾಟಿ ವೆಂಕಟಾಚಲಂ ಬದುಕಿದ ರೀತಿ ಅದ್ಭುತ. ʼಚಲಂʼ ಅವರ ಆತ್ಮಕತೆ. ಅವರಷ್ಟು ನಿರ್ಭಿಡೆಯಿಂದ ಆತ್ಮಕತೆಯನ್ನು ಬರೆದವರು ವಿರಳಾತಿ ವಿರಳ ಅನ್ನಬಹುದು. ಚಲಂ ಅವರ ಬಗ್ಗೆ ಆಪ್ತವಾಗಿ ಈ ವಾರದ ʼಯುವನೋಟʼದಲ್ಲಿ ಬರೆದಿದ್ದಾರೆ ಗುರು ಸುಳ್ಯ

ಇಪ್ಪತ್ತನೆಯ ಶತಮಾನ ಬಾಯಿ ತೆರೆಯುತ್ತಿದ್ದಾಗ..

ರವಿ ಬೆಳಗೆರೆಯೆಂಬ ಬರಹಗಾರನನ್ನು ಓದಲು ನಿಲ್ಲಿಸಿ ಅದಾವುದೋ ಕಾಲವಾಯಿತು. ಆದರೆ ಆತ ಅನುವಾದಿಸಿದ ತೆಲುಗು ಬರಹಗಾರ ‘ಗುಡಿಪಾಟಿ ವೆಂಕಟಾಚಲಂ’ ನ ಜೀವನಚರಿತ್ರೆ ‘ಚಲಂ’ ಮಾತ್ರ ನನ್ನನ್ನು ಬಿಟ್ಟು ಹೋಗಲೇ ಇಲ್ಲ. ಹದಿನೈದು ವರ್ಷಗಳ ಹಿಂದೆ ಓದಿದಾಗ ನನ್ನೊಳಗೆ ಒಂದು ಸಣ್ಣ ಕಿಡಿ ಹೊತ್ತಿಸಿದ್ದ ಪುಸ್ತಕವದು. ಆವತ್ತು, ಆವಾಗಷ್ಟೇ  ಒಳಗೆ ಭುಗಿಲೇಳುತ್ತಿದ್ದ ಪ್ರಶ್ನೆಗಳ ಮೇಲೆ ರೋಡ್ ರೋಲರ್ ಹತ್ತಿಸಿದ ಹಾಗಾಗಿತ್ತು. ಇವತ್ತು ಮತ್ತೆ ಓದಿದಾಗ, ಅನುವಾದಕನ ಹಂಗಿಲ್ಲದೇ ಚಲಂ ಅನ್ನೋ ವ್ಯಕ್ತಿತ್ವ, ಆತ ಸೃಷ್ಟಿಸಿದ ಕಲೆ, ಬದುಕಿದ ರೀತಿ- ವೈಭವೀಕರಿಸ ಬೇಕಾದದ್ದಾಗಿಯೋ, ತಿರಸ್ಕರಿಸ ಬೇಕಾದದ್ದಾಗಿಯೋ ಕಾಣಿಸುತ್ತಿಲ್ಲ. ಚಲಂನನ್ನು ಅನುಕರಿಸಲು ಸಾಧ್ಯವಿಲ್ಲ, ಪ್ರಯತ್ನಿಸಬೇಡಿ ಅನ್ನುತ್ತಾರೆ ರವಿ. ನನಗನಿಸುವ ಮಟ್ಟಿಗೆ ಯಾರು ಯಾರನ್ನು ಅನುಕರಿಸಬೇಕಿಲ್ಲ. ಪ್ರತಿಯೊಬ್ಬರ ಬದುಕು, ಅದರ ಭಾವನೆಗಳ ಆವೇಗ, ಅಲೋಚನೆಯ ರೂಪಾಂತರಗಳು ಭಿನ್ನ. ಸಾಯುವವರೆಗೆ ಬದುಕುವ ನಶೆ ಕಳೆದುಹೋಗದಿರಲಿ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

1894 ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಇಪ್ಪತ್ತನೆಯ ಶತಮಾನ ಬಾಯ್ತೆರೆಯುವಾಗ ಬದುಕಲಾರಂಭಿಸಿದವನು ಚಲಂ. ಆವಾಗ ಅಧಿಕಾರದ ಗದ್ದುಗೆಯಲ್ಲಿದ್ದವರು ಮುಂದೆ ಭಾರತವೆಂಬ ದೇಶವನ್ನು ಹುಟ್ಟು ಹಾಕಿದ ಬ್ರಿಟೀಷರು. ಜಾತಿ ಪದ್ಧತಿಯ ಕೊಳಚೆಯಿಂದಾಗಿ, ಬ್ರಿಟೀಷರ ಸರಕಾರದಲ್ಲಿ ದೊಡ್ಡ ಹುದ್ದೆಗಳನ್ನು, ಹೆಚ್ಚಿನ ವಿದ್ಯಾಭ್ಯಾಸಗಳನ್ನು ಬ್ರಾಹ್ಮಣರು ಮಾತ್ರ ಪಡೆಯುತ್ತಿದ್ದ ಕಾಲಘಟ್ಟವದು. ಇಂಗ್ಲೀಷರ ಸರಕಾರವಿದ್ದುದರಿಂದಲೇ ಚಲಂನ ಬರಹಗಳು ನಿ‍ಷೇಧಕ್ಕೆ ಒಳಗಾಗಿರಲಿಲ್ಲ. ವಿಜ್ಞಾನ ತನ್ನ ಹೆಜ್ಜೆಗಳನ್ನು ವೇಗವಾಗಿರಿಸುತ್ತಿದ್ದ ವರುಷಗಳು ಅವು. ಇಂಗ್ಲೀಷ್ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದ ಚಲಂ, ಜೀವ ವಿಕಾಸದ ಸಂಶೋಧನೆಗಳನ್ನು ಹೆಚ್ಚಾಗಿ ಓದಿಕೊಂಡಿರುವ ಸಾಧ್ಯತೆಗಳಿವೆ. ದೇವರನ್ನು ತಿರಸ್ಕರಿಸಿ ಬದುಕಿದರೂ, ದೇವರ ಇರುವಿಕೆ-ಇಲ್ಲದಿರುವಿಕೆಯ ಕುರಿತು ಚಲಂ ಗೊಂದಲದ ಗೂಡಾಗಿದ್ದುದು, ಅದು ಅವನನ್ನು ತಳಮಳಕ್ಕೀಡು ಮಾಡಿದ್ದು ಗೊತ್ತಾಗುತ್ತದೆ. ಆದ್ದರಿಂದಲೇ, ಆತನ ವೈಜ್ಞಾನಿಕ ಅರಿವಿಗೆ ಇತಿ-ಮಿತಿಗಳಿರುವುದು ತಿಳಿಯುತ್ತದೆ. ಆದರೂ, ಯಾವ ಗೊಡ್ಡು ನಂಬಿಕೆಗಳಿಗು ಬಲಿಯಾಗದೆ ಬದುಕಿನ ರಸವನ್ನೆಲ್ಲ ಹೀರುತ್ತಾ, ನಿರ್ಭಿಡೆಯಾಗಿ ಬರೆದು, ಬದುಕಿಕೊಂಡ ಚಲಂ.

ಮಾನವತಾವಾದಿ ಚಲಂ

ಮೊದ ಮೊದಲು ಬ್ರಹ್ಮ ಸಮಾಜದೆಡೆಗೆ ಆಕರ್ಷಿತನಾಗಿ ಅವರ ತತ್ವಗಳನ್ನು ಪಾಲಿಸಲು ಶ್ರಮಿಸಿದ. ತನ್ನ ಜನಿವಾರ ಕಿತ್ತೆಸೆದ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಚಲಂನ ಹೆಂಡತಿ ತನ್ನ ತಾಳಿಯನ್ನು ಕಿತ್ತೆಸೆಯುತ್ತಾಳೆ. ಬ್ರಹ್ಮ ಸಮಾಜವನ್ನು ಸ್ಥಾಪಿಸಿದ ‘ರಾಜಾರಾಮ್ ಮೋಹನ ರಾಯ್’ ರ ಚಳುವಳಿಯು ಪ್ರಮುಖ ಕಾರಣವಾಗಿ ‘ವಿಧವಾ ಮರು ವಿವಾಹ’ ಕಾನೂನು ಜಾರಿಗೆ ಬಂದಿತ್ತು. ವಿಧವಾ ಮರು ವಿವಾಹ ಚಳುವಳಿಯನ್ನು ಆಂಧ್ರದಲ್ಲಿ ಮುಂದುವರಿಸಿದವರು ಒಂದು ಹಂತದಲ್ಲಿ ಚಲಂನ ಗುರುವಾಗಿ ಕಂಡ ವೀರೇಶ ಲಿಂಗಂ. ಆದರೆ ಚಲಂ ವಿವಾಹ ಅನ್ನೋ ಪದ್ಧತಿಯನ್ನೆ ವಿರೋಧಿಸುತ್ತಾನೆ. ಸಂಪೂರ್ಣ ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಾನೆ, ಹಾಗೆಯೇ ಬದುಕುತ್ತಾನೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಗಂಡಿನಷ್ಟೇ ಹಕ್ಕು ಹೆಣ್ಣಿಗು ಸಿಗಬೇಕೆಂದು ಒತ್ತಾಯಿಸುತ್ತಾ, ವೈಯಕ್ತಿಕ ಕ್ರಾಂತಿಗೆ ಒಳಗಾಗುತ್ತಾನೆ. ಹೆಣ್ಣಿನೆಡೆಗಿನ ಆಕರ್ಷಣೆ ಅವನನ್ನು ಬ್ರಹ್ಮ ಸಮಾಜದಿಂದ ವಿಮುಖನನ್ನಾಗಿಸುತ್ತದೆ. ಧಾರ್ಮಿಕ ಪರಿಶುದ್ಧತೆಯನ್ನು ಆಚರಿಸಲಾಗದೆ ತೊಳಲಾಡುತ್ತಾನೆ. ದೇವರನ್ನು ಹಾಗು ಮನುಷ್ಯ ಬದುಕಿಗೆ ವಿರುದ್ಧವಾದ ಎಲ್ಲಾ ಆಚರಣೆಗಳನ್ನು ಧಿಕ್ಕರಿಸುತ್ತಾನೆ. ದಿಕ್ಕಿಲ್ಲದವರನ್ನು, ದಿಕ್ಕೆಟ್ಟವರನ್ನು, ಮುಟ್ಟಬಾರದವರನ್ನು, ದರಿದ್ರರೆನಿಸಿಕೊಂಡವರನ್ನು ಜಾತಿ-ಮತ-ಧರ್ಮಗಳ ಹಂಗಿಲ್ಲದೇ ಅಪ್ಪಿಕೊಳ್ಳುತ್ತಾನೆ. ಇಡೀ ಸಮಾಜದ ನಿಯಮಗಳಿಗೆ ವಿರುದ್ಧವಾಗಿ ಬರೆಯುತ್ತಿದ್ದ ಚಲಂನನ್ನು ಅತಿಯಾಗಿ ಪ್ರೀತಿಸುವ ಮತ್ತು ಅತಿಯಾಗಿ ದ್ವೇಷಿಸುವ ಎರಡೂ ಬಗೆಯ ಜನರೂ ಇದ್ದರು. ಪರಿಚಯಸ್ಥ ಸಮಾಜದಿಂದ ಬಹಿಷ್ಕೃತನಾದ. ಸಂಪ್ರದಾಯವಾದಿಗಳನ್ನು ಎದುರು ಹಾಕಿಕೊಂಡ. ಯಾವುದಕ್ಕು ಜಗ್ಗದೆ ತನ್ನಿಷ್ಟದಂತೆಯೇ ಜೀವಿಸುತ್ತಾನೆ ಚಲಂ ಅನ್ನೋ ಮಾನವತಾವಾದಿ.

ದೇಹದ ಮೋಹವ ಹತ್ತಿಕ್ಕದಿರು

ಗೋದಾವರಿಯ ತೀರಗಳಲ್ಲಿ, ತುಂಗೆಯ ಮಡಿಲಲ್ಲಿ , ಮದ್ರಾಸಿನ ಬೀದಿಗಳಲ್ಲಿ ಓಡಾಡಿದ ಚಲಂ ಸ್ವಾತಂತ್ರ್ಯವನ್ನೇ ಉಸಿರಾಡಿದ. ಕಾಕಿನಾಡ, ಕರೀಂನಗರ, ರಾಜಮಂಡ್ರಿ ಮುಂತಾದೆಡೆ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಲೇ, ಸರಕಾರದ ಈ ಕೆಲಸವೆಂಬುದು ಗುಲಾಮಗಿರಿ ಅಂತಂದುಕೊಂಡ. ಆತನ ಬರಹಗಳಿಂದ ಪ್ರೇರಿತರಾಗಿ, ಅವನಂತೆಯೇ ಸ್ವಚ್ಛಂದವಾಗಿ ಬದುಕಲು, ಇದ್ದ ನೌಕರಿಗೆ ರಾಜೀನಾಮೆ ಕೊಟ್ಟು ಹೊರಟವರಿದ್ದಾರೆ. ಅವನನ್ನು ಅನುಕರಿಸಲು ಹೋಗಿ, ಸಾಧ್ಯವಾಗದೇ ಭ್ರಮನಿರಸನ ಗೊಂಡವರಿದ್ದಾರೆ. ಆತನನ್ನು ದ್ವೇಷಿಸುತ್ತಲೇ, ಅವನ ಪ್ರಭಾವದಿಂದ ತಪ್ಪಿಸಿ ಕೊಳ್ಳಲಾಗದೆ ಹೋದವರು ಅನೇಕರು. ಬ್ರಾಹ್ಮಣ್ಯವನ್ನು ಧಿಕ್ಕರಿಸಿ ಹೊರಟವನ ರೊಮ್ಯಾನ್ಸಿನ ತಪನೆ ಯಾವತ್ತಿಗೂ ಮುಗಿಯಲಿಲ್ಲ. ತನ್ನನ್ನು ಸಂಪೂರ್ಣನನ್ನಾಗಿಸುವ ಸ್ತ್ರೀ ಚೈತನ್ಯವೊಂದರ ಬರುವಿಕೆಯ ಕಲ್ಪನೆಯಲ್ಲೇ ಬಹುಕಾಲ ಬದುಕಿದ್ದ ಆತ. ಅವನ ಶೃಂಗಾರ ವಾಂಛೆಗಳು ಯಾವತ್ತಿಗೂ ಒಂದು ಹೆಣ್ಣು ಅನ್ನುವಲ್ಲಿಗೆ ನಿಂತಿರಲಿಲ್ಲ. “ಹೆಣ್ಣಿಗೊಂದು ದೇಹವಿದೆ ಅದಕ್ಕೆ ವ್ಯಾಯಾಮ ಬೇಕು, ಹೆಣ್ಣಿಗೊಂದು ಮೆದುಳಿದೆ ಅದಕ್ಕೆ ಅರಿವು ಬೇಕು, ಹೆಣ್ಣಿಗೊಂದು ಹೃದಯವಿದೆ ಅದಕ್ಕೆ ಅನುಭವ ಬೇಕು’ ಎಂದು ವಾದಿಸಿದ, ಬರೆದ, ಬದುಕಿದ ಚಲಂ. ತಾನು ಪ್ರೀತಿಸಿದವರೆಲ್ಲರಿಗೂ ಎಲ್ಲಾ ಕಾಲದಲ್ಲು ಹೆಗಲಾಗಿರುವುದು ಚಲಂಗೆ ಸಾಧ್ಯವಾಗದೇ ಇರಬಹುದು. ಆದರೆ, ಅವರಿಗೆ ಮಡಿಲಾಗಿ, ಜೊತೆಗೇ ಕೂತು ಅಳುತ್ತಲೂ ಇದ್ದ ವಾಸ್ತವ ಮತ್ತು ಭಾವತೀವ್ರತೆಯ ಮಿಶ್ರಣದಂತಿದ್ದ ಚಲಂ. ಸೆಕ್ಸಿಗು, ರೊಮ್ಯಾನ್ಸಿಗು, ರೇಪಿಗು ವ್ಯತ್ಯಾಸವೇ ಗೊತ್ತಿಲ್ಲದ, ಕಾಮವನ್ನು ನಿಷಿದ್ಧವೆನ್ನುವ ಸಮಾಜದಲ್ಲಿ ಚಲಂ ಎಂಬ ರೊಮ್ಯಾಂಟಿಸ್ಟ್ ನಿರಾಡಂಬರವಾದ ಪ್ರೇಮ ಪಾಠವನ್ನು ಬೋಧಿಸಿದ. ಚಲಂನ  ‘ಪ್ರೇಮಲೇಖನುಲು’ ಪರಿಮಿತಿಗಳಿಲ್ಲದ ಪ್ರೇಮಿಗಳಿಗೆ ಹೊಸತೊಂದು ಲೋಕವನ್ನು ತೆರೆದು ಕೊಟ್ಟಿತು. ದೇಹದ ಮೋಹವನ್ನು ತೊರೆಯದಿರಿ, ಅದಕ್ಕೆ ಪರಿಶುದ್ಧತೆಯನ್ನು ಲೇಪಿಸದಿರಿ, ವೈವಿಧ್ಯತೆಯನ್ನು ಅರಸಿ ಹೋಗುವ ದೇಹವನ್ನು ನಿರ್ಬಂಧಿಸದಿರಿ, ಅದರ ಇಂಚಿಂಚನ್ನು ಅನುಭವಿಸಿರಿ ಎಂದು ಕರೆ ಕೊಟ್ಟ. “ಹೆಣ್ಣೇ, ಗಂಡು ಮೆದುಳಿನ ಕುತಂತ್ರಗಳಿಗೆ ಬಲಿಯಾಗದಿರು – ನಿನ್ನ ದೇಹ ಮತ್ತು ಮನಸ್ಸಿನ ಸಂಪೂರ್ಣ ಹಕ್ಕು ನಿನ್ನದು, ನಿನ್ನದು ಮಾತ್ರ” ಎಂದು ಸಾರಿ ಹೇಳಿದ.

ಮೈದಾನಂ ಮತ್ತು ಹೆಣ್ಣು

ಆ ಕಾಲಕ್ಕೆ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದ ಚಲಂನ ‘ಮೈದಾನಂ’ ಕಾದಂಬರಿಯನ್ನು ‘ರಮೇಶ್ ಅರೋಲಿ’ ಕನ್ನಡಕ್ಕೆ ತಂದಿದ್ದಾರೆ. ಇದೇ ಡಿಸೆಂಬರ್ ಮೊದಲ ವಾರದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಭಾಷಾ ವಿಭಾಗ, ಆ ಕಾದಂಬರಿಯಲ್ಲಿನ ಸ್ತ್ರೀ ಸಂವೇದನೆಯ ಮೇಲೆ ಸಂವಾದವೊಂದನ್ನು ಏರ್ಪಡಿಸಿತ್ತು. ಗೌರವಾನ್ವಿತ ಸಮಾಜದಲ್ಲಿ ಬದುಕುವ ಅರ್ಹತೆಯನ್ನೇ ಕಳೆದು ಕೊಂಡಂತಿರುವ ಅಮೀರ್ ಮತ್ತು ಶೋಕೇಸಿನಂತ ತನ್ನ ದಾಂಪತ್ಯವನ್ನು ತೊರೆದು ಅವನ ಮೋಹದಲ್ಲಿ ಬೀಳುವ ಬ್ರಾಹ್ಮಣ ಕುಲದ ರಾಜೇಶ್ವರಿಯ ಪ್ರೇಮವನ್ನು ಜಲಪಾತವಾಗಿಸಿ, ಜಾತಿ-ಮತಗಳನ್ನು ಕೊಚ್ಚೆಯಾಗಿಸಿ ಬಿಡುತ್ತಾನೆ ಚಲಂ. ಹೆಣ್ಣನ್ನು ಪಾಪಿಯನ್ನಾಗಿ ಬಿಂಬಿಸುತ್ತಿದ್ದ ಶೃಂಗಾರದ ಎಲ್ಲಾ ಮಿತಿಗಳನ್ನು ಒಡೆದು ಬದುಕಿನ ಆನಂದವನ್ನು ಸವಿಯಲು ಎಲ್ಲಾ ಮಹಿಳೆಯರಿಗು ಕರೆಕೊಡುತ್ತದೆ ರಾಜೇಶ್ವರಿಯ ಪಾತ್ರ. ಒಂದು ಬದಿಯಲ್ಲಿ ವಿವಾಹವೆಂಬ ಸ್ತ್ರೀ ವಿರೋಧಿ ವ್ಯವಸ್ಥೆಯನ್ನು ಚಿಂದಿ ಮಾಡುವ ಕಾದಂಬರಿಯದು. ಇನ್ನೊಂದು ಬದಿಯಲ್ಲಿ ಸ್ತ್ರೀ ಸಂವೇದನೆಗೆ ವಿರುದ್ಧವೆನಿಸುವ ಹೆಣ್ಣಿನ ಅಸಹಾಯಕತೆ ಮತ್ತು ತ್ಯಾಗಗಳು ಕಾದಂಬರಿಯಲ್ಲಿ ಸೇರಿಕೊಂಡಿರುವುದು ಸುಳ್ಳಲ್ಲ. ಚಲಂ ಸುಸಂಸ್ಕೃತ ಸಮಾಜಕ್ಕೆ ನಿಷಿದ್ಧ ಎನಿಸಿದ ಎಲ್ಲವನ್ನೂ ಬಿಡು ಬೀಸಾಗಿ ಬರೆದು ಬಿಟ್ಟಿದ್ದ. ಒಂಟಿ ಕೋಣೆಯೊಳಗಿನ ಕತ್ತಲೆಯನ್ನು ಸರಿಸಲು, ಗುಟ್ಟಾಗಿ ನಡೆಯುವ ಪ್ರಣಯ ಕೇಳಿಯನ್ನು ಪ್ರಕೃತಿಯ ಸಹಜತೆಯೊಂದಿಗೆ ಮಿಲನ ಗೊಳಿಸಲು, ಆಡಂಬರಗಳಿಂದ ಪ್ರೇಮವನ್ನು ಮುಕ್ತಗೊಳಿಸಲು ಚಲಂ ಸ್ತ್ರೀ ಪಾತ್ರಗಳು ಶ್ರಮಿಸುತ್ತವೆ. ನಿಜ ಬದುಕಿನಲ್ಲಿ ಚಲಂ ಮತ್ತು ‘ವೊಯ್ಯಿ’ಯ ಪ್ರಣಯವು ಹಾಗೇ, ಅದಿರುಗಳಿಲ್ಲದ್ದು. ಚಲಂನ ಹೆಂಡತಿಯ ಹೆಸರು ‘ರಂಗನಾಯಕಮ್ಮ’. ವೊಯ್ಯಿ ಚಲಂನ ಹೆಂಡತಿಯ ಅಕ್ಕ. ಅವಳ ಹೆಸರು ಕೂಡ ರಂಗನಾಯಕಮ್ಮ ಅಂತಲೇ. ಅದರೆ ಮಕ್ಕಳು ಮತ್ತು ಚಲಂ ಅವಳನ್ನು ವೊಯ್ಯಿ ಅಂತಲೇ ಕರೆಯುತ್ತಾರೆ. ಅವರಿಬ್ಬರೂ ಸೇರಿ ತೊರೆಗಳಲ್ಲಿ, ಕಾಡಿನ ಕುಟೀರಗಳಲ್ಲಿ, ನದಿ ತೀರಗಳಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡು ಪ್ರೇಮಿಸುತ್ತಿದ್ದರು. ಇಂಗ್ಲೀಷ್ ಓದಲು ಬರದಿದ್ದ ವೊಯ್ಯಿಯನ್ನು ಅವಳಿಷ್ಟದಂತೆ ಓದಿಸಿ ಡಾಕ್ಟರ್ ಮಾಡಿಸುತ್ತಾನೆ ಚಲಂ. ವೊಯ್ಯಿ – ಚಲಂನನ್ನು, ಅವನ ಸ್ವಂತ ಮತ್ತು ಸಾಕಿದ ಮಕ್ಕಳನ್ನು, ದಿಕ್ಕಿಲ್ಲದೆ ಬಂದ ಹೆಣ್ಣುಗಳನ್ನು, ಅವರ ಮಕ್ಕಳನ್ನು ತಾನು ಸಾಯುವವರೆಗು ಅಕ್ಷರಶಃ ಪೊರೆದವಳು.

‘T’

ಚಲಂ ತನ್ನ ಹೆಂಡತಿ ರಂಗನಾಯಕಮ್ಮಳನ್ನು ‘T’ ಅಂತ ಕರೆಯುತ್ತಾನೆ. ಮನೆ, ಮಕ್ಕಳು, ಗಂಡ  ಅಂತ ಗಂಡನ ಅಡಿಯಾಳಾಗಿ ಬದುಕಿದ ಹೆಂಗಸರ ನಡುವೆ ಚಲಂನಿಂದ ಪ್ರತ್ಯೇಕ ವ್ಯಕ್ತಿತ್ವವಾಗಿ ನಿಲ್ಲುತ್ತಾಳೆ ರಂಗನಾಯಕಮ್ಮ. ಚಲಂ ತನ್ನ ಹೆಂಡತಿಯನ್ನೂ ಸೇರಿಸಿ, ಎಲ್ಲಾ ಮಹಿಳೆಯರಿಗೂ ಅವರದೇ ಆದ ವ್ಯಕ್ತಿತ್ವವಿದೆ, ಅವರು ಯಾರ ಸೊತ್ತೂ ಅಲ್ಲ, ಅವರು ಅವರಿಗೆ ಬೇಕಾದ ಹಾಗೇ ಬದುಕಲು ಸ್ವತಂತ್ರರು ಅಂತ  ಹೇಳುತ್ತಲೇ, ಬದುಕಿನುದ್ದಕ್ಕೂ ಹಾಗೆಯೇ ನಡೆದುಕೊಂಡ. ಅವಳನ್ನು ಓದಿಸಲು ಮನೆಮಂದಿಯ ವಿರೋಧ ಕಟ್ಟಿಕೊಂಡ. ಸೈಕಲ್ ಮೇಲೆ ಹೆಂಡತಿ ರಂಗನಾಯಕಮ್ಮನವರನ್ನು ಕಾನ್ವೆಂಟ್ ಶಾಲೆಗೆ ಬಿಟ್ಟು ಬರುತ್ತಿದ್ದ ಚಲಂನನ್ನು ಅವನದೇ ಸಮುದಾಯದವರು ಗೇಲಿ ಮಾಡುತ್ತಿದ್ದರು. ಚಲಂಗೋಸ್ಕರ ತನ್ನಿಡೀ ಪರಿವಾರವನ್ನು, ಆಸ್ತಿಯನ್ನು ಬಿಟ್ಟು ಬಂದಿದ್ದಳು ರಂಗನಾಯಕಮ್ಮ. ಚಲಂಗೆ ಇದ್ದ ಪ್ರೇಯಸಿಯರು, ಸ್ವಾತಂತ್ರ್ಯವೇ ಪರಮೋನ್ನತವಾದುದು ಎಂಬ ಬದುಕು ಅವಳನ್ನು ಒಂದಿಷ್ಟು ಕಂಗೆಡಿಸಿದ್ದು ಸುಳ್ಳಲ್ಲ. ಮಕ್ಕಳು ಕೂಡ ಚಲಂನ ಪರವಾಗಿಯೇ ಇದ್ದುದು ಅವಳನ್ನು ಇನ್ನಷ್ಟು ಅಧೀರಳನ್ನಾಗಿಸಿತ್ತು. ಮಕ್ಕಳನ್ನು ಹೊಡೆಯುವುದು ಮತ್ತು ಬಯ್ಯುವುದು ಮಾಡಿದರಷ್ಟೇ ತಡೆಯುತ್ತಿದ್ದ ಚಲಂ, ಉಳಿದಂತೆ ಗಂಡು ಸಮಾಜದ ಬೇರೇ ಯಾವುದೇ ನಿರ್ಬಂಧಗಳನ್ನು ಅವಳ ಮೇಲೆ ಹೇರಲು ತಯಾರಿರಲಿಲ್ಲ. ತನ್ನ ಕೊನೆಯ ದಿನಗಳಿಗೂ ಮುಂಚೆ ರಂಗನಾಯಕಮ್ಮ  ಅರುಣಾಚಲಂನ ರಮಣ ಮಹರ್ಷಿಗಳ ಆಶ್ರಮದಲ್ಲಿದ್ದಳು. ಅಲ್ಲಿಂದ ಆಕೆ ಬರೆದು ಕಳುಹಿಸಿದ ರಾಶಿಗಟ್ಟಲೆ ಪತ್ರಗಳನ್ನು ಚಲಂ ಕಸದ ಬುಟ್ಟಿಗೆ ಹಾಕುತ್ತಾನೆ. ಅದಕ್ಕೆ ಕಾರಣ, ಮನೋ ವೈಕಲ್ಯದಿಂದ ಬಳಲುತ್ತಿದ್ದ ಅವಳ ಪತ್ರಗಳಲ್ಲಿ ಯಾವುದೇ ಅರ್ಥವಿಲ್ಲದೆ ಎಲ್ಲವೂ ಕಲಸುಮೇಲೋಗರವಾಗಿರುತ್ತಿದ್ದುದು. ಮುಂದೆ, ಆ ಪತ್ರಗಳು ಸಾಧಾರಣ ಮನುಷ್ಯರು ಓದಲಾಗದ್ದಕ್ಕೆ, ನನ್ನ ಪರಿಮಿತಿಗಳು ಕಾರಣವಾಗಿದ್ದಿರಬಹುದು ಎಂದು ನೊಂದುಕೊಳ್ಳುತ್ತಾನೆ ಚಲಂ. ಒಳಗಿನ ತಿರುಳನ್ನು ಬಸಿದು ಬರೆದರೆ ಅರ್ಥವಾಗದೆಂದು ದೂರ ತಳ್ಳುವವರ ನಡುವೆ ರಂಗನಾಯಕಮ್ಮ ಬರೆದ ಪತ್ರಗಳು ಹುಚ್ಚಿಯ ಪ್ರಲಾಪಗಳಾದವು. ಚಲಂನ ಸಂಗ ಮಾಡಿದ ಯಾರೂ ಮೊದಲಿನ ಹಾಗಿರುತ್ತಿರಲಿಲ್ಲ. ರೂಪಾಂತರಗೊಳ್ಳುತ್ತಿದ್ದರು. ವೈವಿಧ್ಯರಾಗಿರುತ್ತಿದ್ದರು, ಅವರ ಚಿತ್ತ ಚಿತ್ತಾರವಾಗಿ ಬಿಡುತ್ತಿತ್ತು.

ಠಾಗೋರ್ ಮತ್ತು ಉಮಾರ್ ಖಯ್ಯಾಂ

ಚಲಂ ಮಕ್ಕಳಿಗೆ ಸ್ವತಃ ತಾನೇ ಅಕ್ಷರಾಭ್ಯಾಸ ಮಾಡಿಸುತ್ತಿದ್ದ. ಠಾಗೋರಾರ ಗೀತಾಂಜಲಿಯನ್ನು, ಉಮರ್ ಖಯಾಮನ  ರುಬಾಯಿಗಳನ್ನು ಮಕ್ಕಳಿಗಾಗಿ, ಸ್ನೇಹಿತರಿಗಾಗಿ ಅನುವಾದಿಸಿ ಓದಿ ಹೇಳುತ್ತಿದ್ದ. ಅವರು ಖುಷಿ ಪಡದ ಯಾವುದನ್ನೂ ಮಾಡು ಎಂದು ಒತ್ತಾಯಿಸುತ್ತಿರಲಿಲ್ಲ. ಗೋದಾವರಿ ನದಿಯಲ್ಲಿ ಮಕ್ಕಳನ್ನು ಕರೆದುಕೊಂಡು ದೋಣಿ ಏರಿ ಹೊರಟು ಬಿಡುತ್ತಿದ್ದ, ಮಕ್ಕಳೊಂದಿಗೆ ಈಜಾಡುತ್ತಿದ್ದ ಚಲಂಗೆ ಮಕ್ಕಳ ಬಗ್ಗೆ ಅತೀವ ಪ್ರೀತಿಯಿತ್ತು. ಆದ್ದರಿಂದಲೇ, ಬದುಕಿರುವವರೆಗು ಮದುವೆ ಮತ್ತು ವಿದ್ಯಾಭ್ಯಾಸ ವ್ಯವಸ್ಥೆಯ ಕಡು ವಿರೋಧಿಯಾಗಿದ್ದ. ಮಕ್ಕಳು ನಿಭಾಯಿಸಬೇಕಾದ ಶಾಲೆಗಳನ್ನು ದೊಡ್ಡವರು ಜೈಲು ಮಾಡಿ ಬಿಟ್ಟಿದ್ದಾರೆ ಅನ್ನುತ್ತಿದ್ದ. ಹಾಡು ಕೇಳಿಸಿಕೊಂಡ ಹಾಗೆ, ರುಚಿಯಾದ ತಿಂಡಿಯನ್ನು ಬಾಯಿ ಚಪ್ಪರಿಸಿ ತಿಂದ ಹಾಗೆ, ಆಟವಾಡಿದ ಹಾಗೆ – ಯಾವುದೇ ಒತ್ತಾಯವಿಲ್ಲದೆ ಖುಷಿಯಿಂದ ಇಷ್ಟವಾದದ್ದನ್ನು ಕಲಿಯಬೇಕಾದದ್ದಷ್ಟೇ ವಿದ್ಯೆ ಅನ್ನುತ್ತಿದ್ದ.

ಲೋಕ ನಿಂದಿತ ಚಲಂ

ಚಲಂ ತುಂಬಾ ಇಷ್ಟ ಪಡುವ ‘ರವೀದ್ರನಾಥ್ ಠಾಗೋರ್’ ಅವನ ಮನೆಯ ಸಮೀಪದಲ್ಲೇ ಒಂದೆರಡು ದಿನ ವಾಸವಿದ್ದರಾದರೂ  ಚಲಂಗೆ ಅವರನ್ನು ನೋಡುವ ಉಮೇದಿರಲಿಲ್ಲ. ತಾನು ತುಂಬಾ ಇಷ್ಟ ಪಡುವವರು ತನ್ನೆಡೆಗೆ ಬಂದು ತನ್ನಲ್ಲಿ ಐಕ್ಯವಾಗಬೇಕು ಅನ್ನುವಂತಿತ್ತು ಅವನ ಸೆಳೆತ. ಒಂದು ಭೇಟಿಯಿಂದ, ಔಪಚಾರಿಕ ಮಾತುಗಳಿಂದ ತೃಪ್ತನಾಗುವಂತಿರಲಿಲ್ಲ ಅವನು. ಸಿಕ್ಕರೆ ಪೂರ್ತಿಯಾಗಿ ಸಿಗುವಂತಿರಬೇಕು, ಇಲ್ಲದಿದ್ದರೆ ಏನು ಬೇಕಾಗಿಲ್ಲ ಎಂದವನಿಗೆ ನಡುವಿನ ದಾರಿ ಎಂಬುದಿರಲಿಲ್ಲ. ಅದು ತನ್ನ ಪ್ರೇಯಸಿಯರಾದರು ಅಷ್ಟೇ , ತಾನು ಇಷ್ಟ ಪಡುವ ಗಾಂಧಿಯಾದರು ಸರಿಯೇ. ಚಲಂ ಗೆಳೆಯರೆಡೆಗೆ ಆಕರ್ಷಿತನಾಗುತ್ತಿದ್ದನೇ ಹೊರತು, ಸಿನಿಮಾ, ಸಂಗೀತ ಕಛೇರಿಗಳು ಸೇರಿದಂತೆ ಇಂತಹ ಉಳಿದ ವಿಷಯಗಳೆಡೆಗೆ ಆಕರ್ಷಿತನಾಗಿರಲಿಲ್ಲ. ಅವನ ಅಭಿರುಚಿಯೆಂದರೆ ಪುಸ್ತಕಗಳು, ಅದರಲ್ಲು ತನ್ನನ್ನು ಎಲ್ಲಿಂದೆಲ್ಲಿಗೋ ಕರೆದೊಯ್ಯುವ ಇಂಗ್ಲೀಷ್ ಪುಸ್ತಕಗಳು. ನನ್ನನ್ನು ಓದು ಓದು ಎಂದು ತೀವ್ರತರವಾಗಿ ಹುರಿದುಂಬಿಸಿದ ಒಂದೇ ಒಂದು ತೆಲುಗು ಪುಸ್ತಕ ಇಲ್ಲ ಅನ್ನುತ್ತಾನೆ ಚಲಂ. ಹಾಗೆಯೇ ಚಲಂ ಕಾಟಾಚಾರಕ್ಕೆ ಏನನ್ನೂ ಬರೆಯಲಿಲ್ಲ. ಅಡುಗೆ ಮನೆ, ಮಲಗುವ ಕೋಣೆಗಳ ನಲುಗುಗಳನ್ನು ಜಗಕ್ಕೆ ತಿಳಿಸಿದ. ಹೆಣ್ಣಿನ ಕೊರಳಿನಲ್ಲಿ ಸಿಲುಕಿಕೊಂಡ ಧ್ವನಿಗೆ ಮೈಕ್ ಕೊಟ್ಟ. ಲೋಕವನ್ನೇ ಮರೆತು ಬೀದಿ ಬೀದಿಯಲ್ಲಿ, ಹೊಳೆ ತೀರಗಳಲ್ಲಿ, ಬೆಳದಿಂಗಳ ರಾತ್ರಿಗಳಲ್ಲಿ ಕಳೆದು ಹೋಗುತ್ತಾ, ಊರೂರು  ಅಲೆದಾಡುವುದನ್ನು ಇಷ್ಟ  ಪಡುತ್ತಿದ್ದಾತ ಲೋಕ ನಿಂದಿತ ಚಲಂ.

ಕೊನೆಗೆ ತನ್ನ ಪ್ರೀತಿಯ ನಾಯಿ ‘ಲೂಲು’ವನ್ನು ಬಿಡದೇ, ತನ್ನ ಜೊತೆಗಿರುವವರನ್ನೆಲ್ಲಾ ಕಟ್ಟಿಕೊಂಡು ರಮಣಾಶ್ರಮ ಸೇರಿಕೊಂಡು ಬಿಡುತ್ತಾನೆ. ಕೊನೆಯ ಮೂವತ್ತು ವರ್ಷ ಏನೂ ಬರೆಯದ ಚಲಂ, ತಾನು ಬರೆದ ಯಾವುದನ್ನೂ ಹಿಂತಿರುಗಿ ನೋಡುವುದೂ ಇಲ್ಲ. ಅತ್ತ ಆಂಧ್ರದಲ್ಲಿ ಮಾತ್ರ ಚಲಂ ಸಾಹಿತ್ಯದ ಬಗ್ಗೆ ಪುಂಖಾನುಪುಂಖವಾಗಿ ಚರ್ಚೆಗಳಾದುವು. ‘ಚಲಂ ಸ್ಮಶಾನ ಸಾಹಿತ್ಯ’ ಅಂತ ಲೇಖನಗಳೂ ಬರೆಯಲ್ಪಟ್ಟವು. ಇವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಚಲಂ ಎಲ್ಲರಂತೆಯೇ ಸತ್ತು ಹೋದ.

ಗುರು ಸುಳ್ಯ

ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.

ಎಡಗಾಲ ಕವಿತೆ-ಲಿಯೋನೆಲ್ ಮೆಸ್ಸಿ
ಫುಟ್ಬಾಲ್‌ ಜಗತ್ತಿನ ದಂತ ಕತೆ ಲಿಯೋನೆಲ್‌ ಮೆಸ್ಸಿ ಕತಾರ್‌ ನಲ್ಲಿ ತಮ್ಮ ವೃತ್ತಿಜೀವನದ ಕೊನೆಯದೆಂದು ಹೇಳಲಾಗುವ ವಿಶ್ವ ಕಪ್‌ ಅನ್ನು ಆಡಿದ್ದಾರೆ. ಅರ್ಜೆಂಟೀನಾ ಸೋತರೂ ಮೆಸ್ಸಿ ಅನ್ನೋ ಹೆಸರು, ಕವಿತೆಯಂತ ಆತನ ಆಟ ಅಷ್ಟು ಸುಲಭದಲ್ಲಿ ಮನಸ್ಸಿನಿಂದ ಮರೆಯಾಗುವಂತದ್ದಲ್ಲ. ಮೆಸ್ಸಿಗೆ ಹ್ಯಾಟ್ಸಾಪ್‌ ಎಂದಿದ್ದಾರೆ  ಗುರು ಸುಳ್ಯ

ಶಾಲೆಯ ಮೈದಾನ, ಪಕ್ಕದ ಮನೆಯ ಕಿಟಕಿ ಇವೆರಡೂ ಸುಖದ ಒಡ್ಡಾಣವೆನಿಸಿದ್ದ ಕಾಲವೊಂದಿತ್ತು. ಕ್ರಿಕೆಟ್ ಆಡುವುದು ಮತ್ತು ಕಿಟಕಿಯಲ್ಲಿ ಇಣುಕಿ ಕ್ರಿಕೆಟ್‌ ನೋಡುವುದೇ ಬದುಕು ಅನ್ನಿಸಿಕೊಂಡ ಕಾಲ. ತಿಂಡಿ ಕಟ್ಟಿ ತಂದ ಯಾವುದೇ ಕಾಗದ ಸಿಕ್ಕಿದರೂ ಓದುವ ಹಸಿವು ಇದ್ದ ಕಾಲವಾಗಿತ್ತದು. ಆಗ ರದ್ದಿ ಕಾಗದ, ಬಾಟಲಿಗಳು, ಬಟ್ಟೆಯ ಉಂಡೆ, ಅಲ್ಯೂಮೀನಿಯಮ್ ಟಿನ್ ಗಳನ್ನೇ ಬಾಲಾಗಿಸಿ ಆಟವಾಡುವ, ಫುಟ್ಬಾಲ್ ಅಂದ್ರೆ ಜೀವ ಬಿಡುವ ಮಕ್ಕಳಿರುವ ಪ್ರಪಂಚವಿರುವುದು ಗಮನಕ್ಕೆ ಬಂದಿದ್ದು ಕಡಿಮೆಯೇ ಆಗಿತ್ತು. ಪಕ್ಕದ ಕೇರಳದಲ್ಲಿ ಫುಟ್ಬಾಲ್ ಜ್ವರವಿದ್ರೂ, ನಮಗದು ಅಷ್ಟಾಗಿ ತಟ್ಟಿರಲಿಲ್ಲ. ನ್ಯೂಸ್ ಪೇಪರ್ ತಂದರೆ, ಸಿನಿಮಾ ಪುಟಗಳಿಗು ಮೊದಲು ಆಟಕ್ಕೆ ಸಂಬಂಧಿಸಿ ಪುಟವನ್ನು ದಮ್ಮು ಕಟ್ಟಿ ಓದುವುದು ಅಭ್ಯಾಸವಾಗಿತ್ತು. ಅದರಿಂದಾಗಿಯಷ್ಟೇ ಫುಟ್ಬಾಲ್ ಆಟಗಾರರಾದ ರೊನಾಲ್ಡೋ, ರೊನಾಲ್ಡಿನೋ, ಜಿದಾನ್ ಮುಂತಾದವರ ಹೆಸರುಗಳು ಗೊತ್ತಿದ್ದವೇ ಹೊರತು, ಮ್ಯಾಚ್‌ ನೋಡುವ ಉಮೇದಂತೂ ಕ್ರಿಕೆಟಿನಷ್ಟಿರಲೇ ಇಲ್ಲ.

ಫುಟ್ಬಾಲ್ ಜಗತ್ತು

ಈವಾಗ ಫುಟ್ಬಾಲಿನ ಕನಸು ಕಂಗಳು ಯುರೋಪ್ ಮತ್ತು ಲ್ಯಾಟೀನ್ ಅಮೇರಿಕಾವನ್ನು ಮೀರಿ ಜಗತ್ತಿನಾದ್ಯಂತ ತೆರೆದುಕೊಂಡಿವೆ. ಆಫ್ರಿಕಾ, ಗಲ್ಫ್ ದೇಶಗಳು ಫುಟ್ಬಾಲ್ ಹುಚ್ಚಿನಲ್ಲಿ ಮುಳುಗೇಳುತ್ತಿವೆ. ಭಾರತದಲ್ಲೂ ಫುಟ್ಬಾಲ್ ಹೆಚ್ಚು ಜನಪ್ರಿಯವಾಗುತ್ತಿದೆ. ಫುಟ್ಬಾಲ್ ತಾರೆಯರನ್ನು ಕೊಳ್ಳಲು ಫುಟ್ಬಾಲ್ ಕ್ಲಬ್ಬುಗಳು, ಜಾಹಿರಾತು ಕಂಪೆನಿಗಳು ಹೂಡುವ ಹೇರಳವಾದ ಮೊತ್ತ ಮತ್ತಷ್ಟೂ ಹೆಚ್ಚುತ್ತಲೇ ಇದೆ. ಇದೇ ನವೆಂಬರ್ ಇಪ್ಪತ್ತಕ್ಕೆ 2022 ರ ಫುಟ್ಬಾಲ್ ವರ್ಲ್ಡ್ ಕಪ್ ಶುರುವಾಗಿದೆ. ಹುಡುಗಿಯರು ಫುಟ್ಬಾಲ್ ನಲ್ಲಿ ಹಿಂದೆಯೇನು ಇಲ್ಲದಿದ್ದರೂ, ಎಲ್ಲಾ ಕಡೆಯು ಆಗುವಂತೆ ಫುಟ್ಬಾಲ್ ಜಗತ್ತಿನಲ್ಲು ಪುರುಷರದ್ದೇ ಆಧಿಪತ್ಯ. ಗಲ್ಫ್ ದೇಶಗಳ ಶೀತಲ ಸಮರದ ನಡುವೆ ‌ʼಕತಾರ್ʼ ವಿಶ್ವಕಪ್ಪಿನ ಸಾರಥ್ಯ ವಹಿಸಿ, ಈ ಪಂದ್ಯಾಟವನ್ನೇ ಮೂಲವಾಗಿಟ್ಟುಕೊಂಡು ತನ್ನಿಡೀ ಆರ್ಥಿಕ ವ್ಯವಸ್ಥೆಯನ್ನೇ ಜೂಜಿಗಿಟ್ಟಿದೆ. ತಿನ್ನೋದಿಕ್ಕಿಲ್ಲದ ಕೋಟ್ಯಾಂತರ ಜನರ ನಡುವೆ ಆಟಕ್ಕಾಗಿ ಹಣದ ಹೊಳೆ ಹರಿಯುತ್ತಿದೆ. ಇವೆಲ್ಲದರ ನಡುವೆ ಇರಾನ್ ಪುರುಷರ ಫುಟ್ಬಾಲ್ ತಂಡ ತನ್ನ ಮೊದಲ ಪಂದ್ಯದಲ್ಲಿ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸುವ ಮೂಲಕ, ಇರಾನಿನ ಮಹಿಳಾ ಹಕ್ಕುಗಳ ಪರವಾಗಿ ಮೌನವಾಗಿ ನಿಲ್ಲುವ ಪ್ರಯತ್ನ ಮಾಡಿದೆ. ಈ ವಿಶ್ವಕಪ್ ಪಂದ್ಯಾಟದಲ್ಲಿ, ಇವತ್ತಿನ ಫುಟ್ಬಾಲ್ ಜಗತ್ತಿನ ತಾರೆಗಳಾದ ಮೆಸ್ಸಿ, ರೊನಾಲ್ಡೋ, ನೇಮರ್, ಎಂಬಪೆ ಮುಂತಾದವರ ಬಗ್ಗೆ ಭಾರೀ ನಿರೀಕ್ಷೆಗಳಿವೆ ಮತ್ತು ಅಭಿಮಾನಿ ವರ್ಗ ಇವರುಗಳ ಆಟ ನೋಡಲು ಕಾತರದಿಂದಿದೆ. ಇವರಲ್ಲಿ ನಾನೀಗ ಹೇಳಲು ಹೊರಟಿರುವುದು ತನ್ನ ಎಡಗಾಲಿನಿಂದ ಮೈದಾನದುದ್ದಕ್ಕೂ ಕವಿತೆ ಬರೆಯುವ ಅರ್ಜೆಂಟೇನಿಯನ್ ಫುಟ್ಬಾಲರ್ ‘ಲಿಯೋನಲ್ ಮೆಸ್ಸಿ’ ಬಗ್ಗೆ.

ಫುಟ್ಬಾಲ್ ಮೈದಾನದಲ್ಲಿ  ಹೂವರಳಿಸಿದ..

ಅರ್ಜೇಂಟೀನಾದ ರೊಸಾರಿಯೊ ಗಲ್ಲಿಗಳಲ್ಲಿ ಫುಟ್ಬಾಲ್ ಆಡುತ್ತಿದ್ದ ಪುಟ್ಟ ಹುಡುಗ ಮೆಸ್ಸಿ. ಮುಂದೆ ಎಫ್‌ ಸಿ ಬಾರ್ಸಿಲೋನ’ ಎಂಬ ಪ್ರಖ್ಯಾತ ಫುಟ್ಬಾಲ್ ಕ್ಲಬ್ಬಿನ ಎಲ್ಲವೂ ಆಗಿ ಬದಲಾದದ್ದು, ಆ ಮೂಲಕ ಫುಟ್ಬಾಲ್ ಅಂಗಳಗಳನ್ನು ಕವಿತೆಯ ಗುಚ್ಛಗಳನ್ನಾಗಿ ಅರಳಿಸಿದ್ದು ಇವಾಗ ಇತಿಹಾಸ. ಫುಟ್ಬಾಲ್ ಮೈದಾನದಲ್ಲಿ ಈ ಹುಡುಗ ಬಾರಿಸಿದ ಒಂದೊಂದು ಗೋಲು, ಮಾಡಿದ ಬಹುಪಾಲು ಡ್ರಿಬ್ಲಿಂಗುಗಳು, ಕೊಟ್ಟ ಒಂದೊಂದು ಪಾಸುಗಳು- ಒಂದೊಂದು ಹೂವರಳಿದ ಹಾಗೇ. ತನ್ನ ಎಡಗಾಲಿನಿಂದ ಆತ ಸೃಷ್ಟಿಸಿದ ಹೂದೋಟದಲ್ಲಿ ವಿಹರಿಸುತ್ತಿರುವ ಅಭಿಮಾನಿಗಳು ಅಸಂಖ್ಯ. ಮೆಸ್ಸಿಗೆ ನಾಲ್ಕನೇ ವಯಸ್ಸಿರುವಾಗ ಪುಟ್ಬಾಲ್ ನೋಡಲು ಅವನನ್ನು ಕರೆದುಕೊಂಡು ಹೋಗುತ್ತಿದ್ದ ಅವನ ಅಜ್ಜಿಯೇ, ಮುಂದೆ ಅಲ್ಲಿನ ಸ್ಥಳೀಯ ಫುಟ್ಬಾಲ್ ಕೋಚಿನ ವಿನಂತಿಯಂತೆ ಮೊದಲ ಬಾರಿಗೆ ಮೈದಾನದೊಳಕ್ಕೆ ಬಿಡುತ್ತಾಳೆ. ಹೀಗೆ, ಕ್ಲಬ್ ಫುಟ್ಬಾಲ್ ಆಡಲು ಶುರು ಮಾಡುವ ಮೆಸ್ಸಿ, ಇವತ್ತಿಗೂ ಗೋಲು ಹೊಡೆದಾಗ ಎರಡೂ ಕೈಗಳನ್ನು ಮೇಲಕ್ಕೆತ್ತಿ ಬೆರಳುಗಳನ್ನು ಆಕಾಶದೆಡೆಗೆ ತೋರುವುದು ತನ್ನ ಅಜ್ಜಿಯ ನೆನಪಿಗಾಗಿಯೇ ಅನ್ನಲಾಗುತ್ತದೆ. ಫುಟ್ಬಾಲ್ ಎಂದರೆ ಪ್ರೇಮವೆನ್ನುವಂತೆ ಪುಳಕಿತನಾಗುವ ಮೆಸ್ಸಿ, “ತನ್ನನ್ನು ತಾನೇ ಆಶ್ಚರ್ಯಚಕಿತನಾಗಿಸಲು, ಆನಂದ ತುಂದಿಲನಾಗಿರಲು ಯಾವಾಗಲೂ ಚೆಂಡು ಸಿಗುವ ಮಗುವಿನ ಖುಷಿಯಲ್ಲಿ ಆಡಲಿಚ್ಛಿಸುತ್ತೇನೆ” ಅನ್ನುತ್ತಾನೆ. ಆತ ಗಳಿಸಿದ ಪ್ರಶಸ್ತಿ, ಮೀರಿದ ಫುಟ್ಬಾಲ್ ದಾಖಲೆಗಳಿಗೆ ಲೆಕ್ಕವಿಲ್ಲವಾದರೂ, ಅದನ್ನು ಹೇಳುವುದು ಈ ಬರಹದ ಉದ್ದೇಶವಲ್ಲ.

ಟಿಶ್ಯೂ ಪೇಪರಿನ ಮೇಲೆ ಕರಾರು!

ಬಾರ್ಸಿಲೋನ ಫುಟ್ಬಾಲ್ ಕ್ಲಬ್ ಹದಿಮೂರು ವರ್ಷದ ಈ ಬಾಲಕನನ್ನು ಕರಾರು ಮಾಡಿಕೊಂಡದ್ದೇ ಒಂದು ಆಸಕ್ತಿಕರ ಘಟನೆ. ಕೇವಲ ಏಳು ನಿಮಿಷ ಈ ಹುಡುಗನ ಆಟ ನೋಡಿ ಅತೀವ ಆಕರ್ಷಿತನಾದ ಅಂದಿನ ಬಾರ್ಸಿಲೋನ ಕ್ಲಬ್ಬಿನ ಜನರಲ್ ಸೆಕ್ರೆಟರಿ ‘ಕಾರ್ಲೆಸ್ ರೆಕ್ಸಾಚ್’ ಮೆಸ್ಸಿಯ ಪೋಷಕರನ್ನು ಒಂದೆರಡು ಸಲ ಭೇಟಿಯಾಗುತ್ತಾನೆ. ಮೆಸ್ಸಿಯನ್ನು ಖರೀದಿಸಿದರೆ ಆತನ ಪೂರ್ತಿ ವೈದ್ಯಕೀಯ ವೆಚ್ಚವನ್ನು ವಹಿಸಬೇಕಾದ್ದರಿಂದ, ಬಾರ್ಸಿಲೋನ ಕ್ಲಬ್ಬಿನ ಉನ್ನತರ ಮನವೊಲಿಸುವುದು ಸುಲಭವಿರಲಿಲ್ಲ. ಕೊನೆಯ ಭೇಟಿಯಲ್ಲಿ ಮೆಸ್ಸಿಯ ತಂದೆ, ನಿಮಗೆ ಬೇಡದಿದ್ದರೆ ಬೇರೆ ಕ್ಲಬ್ಬಿಗೆ ಮೆಸ್ಸಿಯನ್ನು ಕೊಂಡೊಯ್ಯತ್ತೇನೆ ಎಂದಾಗ, ಪರಿಸ್ಥಿತಿಯ ಪೂರ್ತಿ ಭಾರವನ್ನು ಹೊತ್ತುಕೊಳ್ಳುವ ರೆಕ್ಸಾಚ್ ಅಲ್ಲೇ ಇದ್ದ ಟಿಶ್ಯೂ ಪೇಪರಿನ ಮೇಲೆ ಬಾರ್ಸಿಲೋನ ಕ್ಲಬ್ಬಿಗಾಗಿ ಆಡುವ ಆರಂಭದ ಕರಾರನ್ನು ಮೆಸ್ಸಿಯ ಜೊತೆ ಮಾಡಿಕೊಳ್ಳುತ್ತಾನೆ. ಆ ಟಿಶ್ಯೂ ಪೇಪರ್ ಆದರೋ, ಮೆಸ್ಸಿಯ ಪ್ರತಿಭೆಯ ಪ್ರತಿಬಿಂಬವಾಗಿ ಫೋಟೋ ಫ್ರೇಮಿನೊಳಗೆ ಶಾಶ್ವತವಾಗಿ ಕೂತಿದೆ. ‘ಲಿಯೋನಲ್ ಆ್ಯಂಡ್ರೋಸ್ ಮೆಸ್ಸಿ’ ಎಂಬ ಪ್ರತಿಭಾ ಭಂಡಾರವನ್ನು ಇನ್ಯಾರಾದರು ತಮ್ಮದಾಗಿಸಿಕೊಳ್ಳುವ ಮೊದಲೇ ಬಾರ್ಸಿಲೋನ ತನ್ನದಾಗಿಸಿಕೊಂಡದ್ದು ಹೀಗೆ.

ʼಲಾ ಪುಲ್ಗಾʼ

ತನ್ನ ಬಾಲ್ಯದ ದಿನಗಳಿಂದಲೇ ಮೆಸ್ಸಿ ‘ಲಾ ಪುಲ್ಗಾ’ ಎಂದು ಕರೆಯಿಸಿಕೊಳ್ಳುತ್ತಿದ್ದ. ಹುಡುಗರಲ್ಲಿ ನೋಡಲು ಸಣ್ಣವನಾಗಿದ್ದು, ಆಟದಲ್ಲಿ ಮಾತ್ರ ಚುರುಕಾಗಿದ್ದುದರಿಂದ ಮೆಸ್ಸಿಗೆ ಆ ಹೆಸರು ಬಂದಿತ್ತು. ಆರಂಭದ ದಿನಗಳಲ್ಲಿ, ಆಟದ ನಂತರ ಮಾತೇ ಆಡದಿರುತ್ತಿದ್ದ ಮೆಸ್ಸಿಗೆ ಒಂದೊಮ್ಮೆ ಸಹ ತಾರೆಯರು ‘ಮೂಗ’ ಎಂದೂ ಕರೆಯುತ್ತಿದ್ದುದುಂಟು. ಮೊದಲಿಗೆ ಸಣ್ಣ ಸಣ್ಣ ಕ್ಲಬ್ಬುಗಳಲ್ಲಿ ಆಡಿದ ನಂತರ, ಮೆಸ್ಸಿಯನ್ನು ಆಡಿಸಲು ಅರ್ಜೆಂಟೀನಾದ ಫುಟ್ಬಾಲ್ ಕ್ಲಬ್ಬಾದ ‘ರಿವರ್ ಪ್ಲೇಟ್’ ಕೂಡಾ ತಯಾರಿತ್ತಾದರು, ಅವನ ವೈದ್ಯಕೀಯ ಖರ್ಚನ್ನು ವಹಿಸುವಷ್ಟು ಆರ್ಥಿಕವಾಗಿ ಅದು ಬಲಿಷ್ಠವಾಗಿರಲಿಲ್ಲ. ತರಾತುರಿಯಲ್ಲಿ ಮೆಸ್ಸಿ ಅನ್ನೋ ಪುಟ್ಟ ಹುಡುಗನನ್ನು ಕ್ಲಬ್ಬಿಗೆ ಸೇರಿಸಿಕೊಂಡ ಬಾರ್ಸಿಲೋನಾ, ಮುಂದೆ ‘ಬೆಳವಣಿಗೆಯ ಹಾರ್ಮೋನ್’ ಕೊರತೆಯಿಂದ ಬಳಲುತ್ತಿದ್ದ ಮೆಸ್ಸಿಯ ಸಂಪೂರ್ಣ ವೈದ್ಯಕೀಯ ಖರ್ಚನ್ನು ತಾನೇ  ವಹಿಸಿಕೊಂಡಿತ್ತು.

ಚೆಂಡಿಗೂ ಮೆಸ್ಸಿಯ ಕಾಲಿಗೆ ಅಂಟಿಕೊಂಡಿರಲು ಇಷ್ಟ!

ತನ್ನ ಹನ್ನೊಂದನೇ ವಯಸ್ಸಿನಿಂದಲೇ ಸ್ಪೇನಿನಲ್ಲಿರುವ ಮೆಸ್ಸಿಗೆ, ಸ್ಪೇನ್ ದೇಶದ ಪೌರತ್ವವು ಇದೆ. ಸ್ಪೇನ್ ತನ್ನ ಪರವಾಗಿ ಆಡಲು ಮೆಸ್ಸಿ ಕೇಳಿದ್ದೆಲ್ಲವನ್ನು ಕೊಡಲು ತುದಿಗಾಲಲ್ಲಿ ನಿಂತು ಆಹ್ವಾನಿಸಿತ್ತು. ಆ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಮೆಸ್ಸಿಗೆ ತನ್ನ ದೇಶವಾದ ಅರ್ಜೆಂಟೀನಾದ ಜೆರ್ಸಿ ಹಾಕಿ ವಿಶ್ವಕಪ್ ಗೆಲ್ಲುವ ಅತೀವ ಹಂಬಲವಿದೆ. ಕ್ಲಬ್ಬಿನ ಪರವಾಗಿ ಆಡುವಾಗಲಷ್ಟೇ ತನ್ನ ಪ್ರತಿಭೆಯ ಔನ್ನತ್ಯವನ್ನು ತಲುಪುತ್ತಾನೆ, ದೇಶದ ಬಗ್ಗೆ ಆತನಿಗೆ ಅಂತಹ ಪ್ರೀತಿಯೇನಿಲ್ಲ ಎಂದು ದೂಷಿಸುವವರಿದ್ದಾರೆ. ನನಗೆ ಆತ ಪ್ರೀತಿಸುವವರ ಮಧ್ಯೆ ಆರಾಮಾಗಿ ಆಡುತ್ತಾನೆ ಎಂಬುದು ದೇಶಪ್ರೇಮವೆಂಬ ಗುಂಗಿಗಿಂತ ಸುಂದರವಾಗಿ ಕಾಣಿಸುತ್ತೆ. ಅಂತರ್ಮುಖಿ ಸ್ವಭಾವವಿರುವ, ನಗು ಬರುವಾಗ ನಗುವ, ಅಳು ಬರುವಾಗ ಬಿಕ್ಕಿ ಅಳುವ ಮೆಸ್ಸಿ ಇಷ್ಟವಾಗುವುದು ಮೈದಾನದೊಳಗಿನ ಆತನ ವ್ಯಕ್ತಿತ್ವದಿಂದಲೂ ಕೂಡ. ಬಲ ಪ್ರಯೋಗಿಸಿ ಎದುರಾಳಿಯನ್ನು ತಳ್ಳುವುದು, ಬೀಳಿಸುವುದು ಫುಟ್ಬಾಲಿನಲ್ಲಿ ನಾವು ಸಾಮಾನ್ಯವಾಗಿ ಕಾಣತ್ತೇವೆ, ಇದಕ್ಕಾಗಿ ಕೆಂಪು ಕಾರ್ಡ್ ಪಡೆಯುವ ಆಟಗಾರರು ಬೇಕಾದಷ್ಟಿದ್ದಾರೆ. ಆದರೆ, ಮೆಸ್ಸಿಯ ವಿಷಯಕ್ಕೆ ಬಂದರೆ, ಎದುರಾಳಿ ಯಾರೇ ಆದರೂ ಆತನ ಮೇಲೆರಗದೆ ಚೆಂಡನ್ನು ಚಲಾಯಿಸುವ ತನ್ನ ಚಾಕಚಕ್ಯತೆಯಿಂದಲೇ ತಬ್ಬಿಬ್ಬುಗೊಳಿಸುವ ಕಲೆಗಾರ ಆತ. ಗೋಲು ಹೊಡೆದಾಗ ತೋರಿಸುವ ಸಂಭ್ರಮದಾಚೆಗೆ ಆತ ಉಳಿದವರಂತೆ ಒರಟನಾಗಿ ವರ್ತಿಸುವುದಿಲ್ಲ. ಆತನಿಗೆ ಫುಟ್ಬಾಲ್ ಶಕ್ತಿ ಪ್ರದರ್ಶಿಸುವ ಅಥವಾ ದರ್ಪ ತೋರಿಸುವ ಆಟವಲ್ಲ. ಫುಟ್ಬಾಲ್ ದಂತಕಥೆ ‘ಡಿಯಾಗೋ ಮರಡೋನ’ ಹೇಳುವಂತೆ ಚೆಂಡಿಗೂ ಮೆಸ್ಸಿಯ ಕಾಲಿಗೆ ಅಂಟಿಕೊಂಡಿರಲು ಇಷ್ಟ.

ಗೋಲ್ ಸ್ಕೋರರ್ ಅಲ್ಲ ಪ್ಲೇ ಮೇಕರ್

ಬ್ರೆಜಿಲ್ ದೇಶದ, ಉಬ್ಬು ಹಲ್ಲಿನ, ಗುಂಗುರು ಕೂದಲಿನ ಕಪ್ಪು ಹುಡುಗನ ಬೆನ್ನ ಮೇಲೆ ಕೂತು ಗೆಲುವನ್ನು ಸಂಭ್ರಮಿಸುವ ಅರ್ಜೆಂಟೀನಾದ ನೀಳ ಕೂದಲಿನ, ಬಿಳಿ ಹುಡುಗನ ಚಿತ್ರ ಜಗತ್ತಿನ ಫುಟ್ಬಾಲ್ ಪ್ರೇಮಿಗಳಿಗೆಲ್ಲಾ ಚಿರಪರಿಚಿತ. ಬಾರ್ಸಿಲೋನ ಕ್ಲಬ್ಬಿಗಾಗಿ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಸೀನಿಯರ್ ಲೆವೆಲ್ ಅಲ್ಲಿ ಮೊದಲ ಗೋಲ್ ಹೊಡೆದಾಗ, ಅವನನ್ನು ಬೆನ್ನ ಮೇಲೆ ಹೊತ್ತು ಸಂಭ್ರಮಿಸುವ ರೊನಾಲ್ಡಿನೋನನ್ನು ಮರೆಯಲು ಸಾಧ್ಯವಿಲ್ಲ. ಹಿರಿಯಣ್ಣನಂತೆ ಮೆಸ್ಸಿಯ ಜೊತೆಗಿದ್ದ ರೊನಾಲ್ಡಿನೋಗೆ ಮೆಸ್ಸಿಯ ಬಗ್ಗೆ ಅಪಾರ ಪ್ರೀತಿಯಿತ್ತು ಮತ್ತು ಅದು ಮೆಸ್ಸಿಯ ಬೆಳವಣಿಗೆಗು ಸಹಕಾರಿಯಾಗಿತ್ತು. ಇಪ್ಪತ್ತೆರಡು ವರ್ಷಗಳಿಂದ ಮೆಸ್ಸಿ ಫುಟ್ಬಾಲ್ ಆಡ್ತಾನೇ ಇದ್ದಾನೆ. ಬಾರ್ಸಿಲೋನ ಕ್ಲಬ್ಬಿನೊಂದಿಗಿನ ಸುದೀರ್ಘ 20 ವರ್ಷಗಳ ನಂತರ ಇವಾಗ ಫ್ರಾನ್ಸಿನ ‘ಪ್ಯಾರೀಸ್ ಸೇಂಟ್ ಜರ್ಮನ್’ ಕ್ಲಬ್ಬಿನ ಮುಖಾಂತರ ಆಟ ಮುಂದುವರಿಸಿದ್ದಾನೆ. ಬಾರ್ಸಿಲೋನವನ್ನು ತೊರೆಯುವಾಗ ಕಣ್ಣೀರು ಹಾಕಿದ್ದಾನೆ. ಬಾರ್ಸಿಲೋನ ತೊರೆದು ಕೆಲವು ಕಾಲ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟಪಟ್ಟನಾದರು, ಈವಾಗ ತನ್ನ ಎಂದಿನ ಆಟಕ್ಕೆ ಮರಳಿದ್ದಾನೆ. ಗೋಲ್ ಸ್ಕೋರರ್ ಅನ್ನುವುದಕ್ಕಿಂತಲು ಹೆಚ್ಚಾಗಿ ‘ಪ್ಲೇ ಮೇಕರ್’ ಆಗಿ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿದ್ದಾನೆ.

‘ಮೆಸ್ಸಿಯ ಕೊನೆಯ ಡ್ಯಾನ್ಸ್’

ಈ ಬಾರಿ, ತಮ್ಮ ನಾಯಕನನ್ನು ಅತೀವವಾಗಿ ಪ್ರೀತಿಸುವ ಯುವ ಪಡೆಯೊಂದಿಗೆ ಅರ್ಜೆಂಟೀನಾ ತಂಡ ತನ್ನ ಅಂತಿಮ ಪ್ರಯತ್ನಕ್ಕೆ ಸಜ್ಜಾಗಿದೆ. ಮೆಸ್ಸಿ ಆಡುವ ಕೊನೆಯ ವಿಶ್ವಕಪ್ ಇದಾಗಿರುವ ಸಾಧ್ಯತೆಯೇ ಹೆಚ್ಚಿರುವುದರಿಂದ ‘ಮೆಸ್ಸಿಯ ಕೊನೆಯ ಡ್ಯಾನ್ಸ್’ ಎಂಬ ಪ್ರಚಾರ ಕೂಡ ಇದಕ್ಕೆ ಸಿಕ್ಕಿದೆ. ಇದಾಗಲೇ ಮೊದಲ ಪಂದ್ಯದಲ್ಲೇ  ಸೌದಿ ಅರೇಬಿಯಾ ಕೈಯಲ್ಲಿ ಸೋಲುಂಡಿರುವ ಅರ್ಜೆಂಟೀನಾ ತಂಡ ಆಘಾತಕ್ಕೊಳಗಾಗಿದೆ. ಈ ಸೋಲು ಮೆಸ್ಸಿ, ಅರ್ಜೆಂಟೀನಾ ತಂಡ ಮತ್ತು ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರಾಸೆಯನ್ನೂ ಉಂಟುಮಾಡಿದೆ. ಅರ್ಜೆಂಟೀನಾ ವಿಶ್ವಕಪ್ ಗೆದ್ದರೂ, ಇಲ್ಲದಿದ್ದರೂ ಮೆಸ್ಸಿ ಅನ್ನೋ ಹೆಸರು, ಕವಿತೆಯಂತ ಆತನ ಆಟ ಅಷ್ಟು ಸುಲಭದಲ್ಲಿ ಮನಸ್ಸಿನಿಂದ ಮರೆಯಾಗುವಂತದ್ದಲ್ಲ.

ಗುರು ಸುಳ್ಯ

ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.

ಮಕ್ಕಳು ಅವರವರ ಆಯ್ಕೆಯಾಗಿರಲಿ- ಒಂದು ಪ್ರೇಮಮಯ ಬೇಡಿಕೆ
ಭಾರತೀಯ ಸಮಾಜ ಬದಲಾವಣೆಯ ಹಾದಿಯಲ್ಲಿದೆ. ಯುವ ಜನತೆ ಸ್ವಯಂ ತೀರ್ಮಾನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರ ಮನದ ಕಿಟಕಿಗಳು ಹೊಸ ಗಾಳಿಗೆ ತೆರೆದಿವೆ. ʼಮಕ್ಕಳು ಬೇಡʼ ಅಂತಿದೆ ಹೊಸ ಜನರೇಶನ್‌. ಮಕ್ಕಳನ್ನು ಹುಟ್ಟಿಸುವುದೋ ಬೇಡವೋ ಎಂಬುದು ಆಯ್ಕೆಯಾಗಿರಲಿ ಎಂಬ ಪ್ರೇಮಮಯ ಬೇಡಿಕೆ ಈ ವಾರದ ಗುರು ಸುಳ್ಯ ಅವರ ಯುವನೋಟ ಅಂಕಣದಲ್ಲಿ.

ಒಲವಿಗೆ ಪೋಷಕಾಂಶಗಳನ್ನು ಒದಗಿಸುವ ವಿಧವಿಧವಾದ ಆಕರ್ಷಣೆಗಳ ರಸಾಯನಕ್ಕೆ ನಾವು ಕಟ್ಟಿಕೊಂಡ  ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಯಾವುದೇ ಇರಾದೆಗಳಿರುವುದಿಲ್ಲ. ಅಂತದ್ದರಲ್ಲಿ ಬೇಕೋ, ಬೇಡವೋ ಎಂಬಂತೆ ಬದುಕುವುದು ಅಭ್ಯಾಸವಾದ ನಾವು ಜನ್ಮಾಂತರಗಳ ಪೇಲವತೆಯನ್ನು ಲೇಪಿಸಿ ಪ್ರೇಮಕತೆಗಳನ್ನು ಕಟ್ಟುತ್ತಲೇ ಕಟ್ಟುಕತೆಗಳಿಗೆ ಬಲಿಯಾಗುತ್ತೇವೆ. ನಿತ್ಯ ಅಪಘಾತಗಳಾಗುವ ದಾರಿಯಲ್ಲೇ ಪ್ರೇಮಿಗಳು ರಸ್ತೆ ದಾಟುವಾಗ, ಸಾಯುವ ಬಂಧಗಳ ಬಗೆಗಿನ ಭಯವೆಲ್ಲಿಯದು? ಭಯವೇ ಮೂಲವಾಗಿರುವ ಸಮಾಜವನ್ನು ಕಟ್ಟಿಕೊಂಡಿರುವವರು ನಾವು. ಸಾರ್ವಕಾಲಿಕತೆಯೆಂಬ ಒತ್ತಾಯಕ್ಕೆ ಗಂಟುಬಿದ್ದು ಅಲಾರಮಿನ ಸದ್ದಿಗೆ ಕಿವಿಗೊಡುವುದರಲ್ಲೇ ಆಯುಷ್ಯವೊಂದು ಕಳೆದಿರುತ್ತದೆ. ಪ್ರಾಣಿಗಳನ್ನು, ಮರಗಳನ್ನು, ಬೆಟ್ಟ-ಗುಡ್ಡಗಳನ್ನು ನುಂಗಿ ನೀರು ಕುಡಿದು ಜಲಾಶಯಗಳನ್ನೆಲ್ಲ ಇಂಗಿಸಿದ ಮೇಲೂ, ಮಕ್ಕಳನ್ನು ಹುಟ್ಟಿಸಲು ಮರೆಯುವುದಿಲ್ಲ. ಮನುಷ್ಯರು ಹೆಚ್ಚುತ್ತಲೇ ಅವರ ಅಗತ್ಯಗಳು ಹೆಚ್ಚಾಗುತ್ತವೆ. ಆ ಅಗತ್ಯಗಳಿಗೆ ಭೂಮಿ ಸಾಲೋದಿಲ್ಲ. ಬಂಡವಾಳಶಾಹಿಯನ್ನು ಬಯ್ಯುವುದು, ಅದರೊಳಗೊಂದಾಗಿ ಅಗತ್ಯಗಳನ್ನು ಪೂರೈಸುವ ದಾರಿಯಲ್ಲಿ ಮೆದುಳಿಗೆ ಮಂಕುಬಡಿಯುವುದು ಗೊತ್ತಾಗುವುದೇ ಇಲ್ಲ.

ಕುಲ ಉಳಿಸುವ ತೆವಲಿನಿಂದ ಹೊರಬರುವ ದಾರಿ ಕಂಡಿದೆಯೇ?

ಎಷ್ಟೇ ನಿಯಮಗಳಿದ್ದರು ನಗರಗಳಲ್ಲಿ ಹೆಚ್ಚಾಗುತ್ತಲೇ ಹೋಗುವ ಟ್ರಾಫಿಕ್ ನೋಡ್ತಾ ಇದ್ದೀವಿ. ಏರುತ್ತಲೇ ಹೋಗುವ ಜನದಟ್ಟಣೆಯಲ್ಲಿ ಮುಳುಗಿ ಹೋಗುತ್ತಿದ್ದೇವೆ. ರಸ್ತೆ ಅಗಲೀಕರಣ, ಓವರ್ ಬ್ರಿಡ್ಜ್-ಅಂಡರ್ ಬ್ರಿಡ್ಜ್ ಗಳನ್ನು ಕಟ್ಟುವುದೆಂಬ ತಾತ್ಕಾಲಿಕ ಪರಿಹಾರದಾಚೆಗೆ ನಾವು ಯೋಚಿಸುವುದಿಲ್ಲ. ಯೋಚಿಸಿದರೂ, ಅವು ಕಾರ್ಯಗತವಾಗುವುದಿಲ್ಲ. ಕಾಡನ್ನು ಬರಿದುಗೊಳಿಸಿದ ಮನುಷ್ಯರಿಗೆ ಬ್ರಿಡ್ಜುಗಳನ್ನು ತುಂಬುವುದು ಯಾವ ಲೆಕ್ಕ! ಬ್ರಿಡ್ಜ್ ಗಳ ಅಡಿಯಲ್ಲೇ ಸಂಸಾರ ನಡೆಸುತ್ತಿರುವವರಿಗೆ ಅನುಕಂಪ ತೋರಿಸುವುದಷ್ಟೇ ಸಾಧ್ಯವಾಗಿರುತ್ತೆ. ಜನಸಂಖ್ಯಾ ಸ್ಪೋಟ ಎಂಬುದು, ಯಂತ್ರಗಳಾಗಿ ಬದಲಾದ ಮನುಷ್ಯರು ನಿಜ ಅರ್ಥದಲ್ಲಿ ಬಾಂಬುಗಳಾಗಿ ಪರಿವರ್ತನೆಗೊಳ್ಳುತ್ತಾ, ಭೂಮಿಗೆ ಭಾರವಾಗಿರುವುದೇ ಆಗಿದೆ. ಅತಿ ಬುದ್ಧಿವಂತರು ಅನ್ನಿಸಿಕೊಂಡರೂ ತಮ್ಮ ಕುಲ ಉಳಿಸುವ ತೆವಲಿನಿಂದ ಹೊರಬರುವ, ಬದುಕಿನ ಭಯದಿಂದ ಮುಕ್ತರಾಗುವ ದಾರಿಯಿನ್ನೂ  ಮನುಷ್ಯರಿಗೆ ಗೋಚರಿಸಿಲ್ಲ. ‘ಜಾಗತಿಕ ತಾಪಮಾನ’ ವೆಂಬುದು ವಾರ್ತೆಗಳಲ್ಲಿನ ಆಕರ್ಷಕ ಪದವಾಗಿ ಕೇಳಿ ಕೇಳಿ ಅಭ್ಯಾಸವಾಗಿ ಬಿಟ್ಟಿದೆ ಅಷ್ಟೇ. ಪ್ರೇಮವೆನ್ನುತ್ತೇವೆ, ಸಂಬಂಧಗಳ ಮಹತ್ವ ಸಾರುತ್ತೇವೆ, ಹುಟ್ಟನ್ನು ಸಂಭ್ರಮಿಸುತ್ತೇವೆ, ಬದುಕು ಕಟ್ಟಿಕೊಳ್ಳಲು ನಮ್ಮನ್ನು ನಾವೇ ಕೊಂದು ಕೊಳ್ಳತ್ತಾ ಕಾಯಕ ಮಾಡುತ್ತೇವೆ. ‘ಸಮೂಹ ಸನ್ನಿ’, ‘ಹೆಮ್ಮೆಯ ಭಾವ’ ಗಳೆಂಬ ಖಾಯಿಲೆಗಳಿಗೆ ಬಲಿಬಿದ್ದು ರೋಗ ಹರಡುತ್ತೇವೆ. ಕೊನೆಗೆ, ಸತ್ತಾಗ ಅಳಲು ಯಾರಾದರು ಬೇಕೆಂದು ಗೋಳಾಡುತ್ತೇವೆ

ಮನುಷ್ಯ ಕುಲ ಬೆಳೆದಂತೆಲ್ಲ ನರಳುವಿಕೆ ಹೆಚ್ಚಾಗುತ್ತಿದೆ

ಮೂರ್ನಾಲ್ಕು ವರ್ಷಗಳ ಹಿಂದೆ ‘ಹ್ವಾನ್ ರುಲ್ಫೋ’ ಬರೆದಿರೋ, ‘ಓ ಎಲ್ ನಾಗಭೂಷಣ ಸ್ವಾಮಿ’ ಅನುವಾದಿಸಿರುವ ‘ಬೆಂಕಿ ಬಿದ್ದ ಬಯಲು ಮತ್ತು ಪೆದ್ರೋ ಪರಾಮೋ’ ಪುಸ್ತಕ ಓದಿದ್ದೆ. ಅದರಲ್ಲಿ ಬದುಕಿರುವವರಿಗಿಂತ ಸತ್ತವರೇ ಹೆಚ್ಚಾಗಿ ಪಾತ್ರಗಳಾಗಿ ಬರ್ತಾರೆ. ಅದರಲ್ಲಿ ಬರುವ ಬಹುತೇಕ ಹೆಣ್ಣು ಪಾತ್ರಗಳು ಹುಚ್ಚಿಯರು. ಅದು ನಮ್ಮ ಸುತ್ತಲಿನ ವಾಸ್ತವದೊಂದಿಗೆ ಹೊಂದಾಣಿಕೆಯಾಗುತ್ತಾ ನನ್ನನ್ನು ಅಲೋಚನೆಗೆ ಹಚ್ಚಿದ ಕಾದಂಬರಿ. ಅಮ್ಮಂದಿರ ಮೇಲೆ ನಡೆದ ಮಾನಸಿಕ ಹಿಂಸೆಯ ಪ್ರತಿನಿಧಿಗಳಾಗಿ, ಹುಚ್ಚಿಯರಾಗಿ ಹೋದ ತಲೆಮಾರೊಂದನ್ನು ಗಮನಿಸಿದ್ದೀರಾ ? ಇಲ್ಲವಾದರೆ, ಅವರ ಮಕ್ಕಳಾಗಿ ರೋಗಗ್ರಸ್ಥ ಸಮಾಜದೊಳಗೆ ಖಿನ್ನತೆಗೊಳಗಾಗಿ, ಅದನ್ನೇ ಬದುಕೆನ್ನುತ ಸಾಯುವುದನ್ನೇ ನಿತ್ಯದ ಹಾಡಾಗಿಸಿ ಗುನುಗುವುದನ್ನಾದರು ಕಲಿತಿರುತ್ತೀರಿ. ಗರ್ಭಧಾರಣೆ, ಮಗುವನ್ನು ಹೆರುವುದು ಮತ್ತು ಅಡಿಯಾಳಾಗಿ ಬದುಕುವುದರ ನಡುವೆ ಹುಚ್ಚಿಯರಾಗಿ ಅಳಿದು ಹೋದ ಹೆಣ್ಣುಗಳದೆಷ್ಟೋ! ಹಾಗಂತ ಮಾನಸಿಕವಾಗಿ ನರಳುವುದು ಹೆಣ್ಣಷ್ಟೇ ಎಂದು ಅರ್ಥವಲ್ಲ. ಮನುಷ್ಯ ಕುಲ ಬೆಳೆದಂತೆಲ್ಲ ನರಳುವಿಕೆ ಹೆಚ್ಚಾಗುತ್ತಲೇ ಹೋಗಿದೆ. ಪ್ರೇಮ, ಜೊತೆ ಬಾಳುವಿಕೆ, ಮಕ್ಕಳನ್ನು ಹುಟ್ಟಿಸುವುದು – ಇವೆಲ್ಲಾ ನಿಮ್ಮ ಮೇಲೆ ಹೇರಿಕೆಯಾಗಿದೆಯೇ ಅಥವಾ ನಿಮಗೆ ನಿಜವಾಗಿಯೂ ಬೇಕಾಗಿದೆಯೇ ಎಂಬುದನ್ನು ಅರಿಯಿರಿ ಎಂದಷ್ಟೇ ವಿನಂತಿ. ಬದುಕು ಸ್ಪರ್ಧಾತ್ಮಕ ಪರೀಕ್ಷೆಗಳದೊಂದು ಓಟದಂತಾಗಿದ್ದು, ಆ ಜೀವ ಹಿಂಡುವ ಓಟದ ನಡುವಿಗೆ ಎಳೆಯ ಜೀವವೊಂದನ್ನು ಬಿಡುವಾಗ ‘ಒಂದು ಹಿಡಿ ಅನ್ನ, ಒಂದಿಷ್ಟು ಸಮಾಧಾನ, ಸ್ವಸ್ಥವಾದ ಗಾಳಿ, ಚೂರು ಪ್ರೀತಿ, ಇರಲೊಂದು ಸೂರು’ ಇಷ್ಟಾದರು ಸಿಗುವ ವಾತಾವರಣ ಇಲ್ಲುಂಟಾ ಗಮನಿಸಿರಿ.

ಮಗು ಹೆರುವುದು ಆಯ್ಕೆಯಾಗಲಿ…

ಗರ್ಭ ಧರಿಸಿದಾಗ ಮತ್ತು ಹೆತ್ತ ಮೇಲೆ, ಹುಟ್ಟಿದ ಮಗು ಹಾಗೂ ತಾಯಿಯ ನಡುವಿನ ಜೈವಿಕ ಬಂಧದ ಆಳವನ್ನು ವಿವರಿಸುವುದು ಕಷ್ಟ ಸಾಧ್ಯ. ಹೆತ್ತಾದ ಮೇಲೆ ಅತ್ಯಂತ ಖುಷಿಯನ್ನು ಅನುಭವಿಸುವವರಿರುವಂತೆ, ತೀವ್ರ ತರದ ಆತಂಕ, ಒತ್ತಡಗಳಿಗೆ ಈಡಾಗುವವರೂ ಇದ್ದಾರೆ. ಅಮ್ಮ ಅನ್ನುವ ಪದವನ್ನು ರೊಮ್ಯಾಂಟಿಸೈಸ್ ಮಾಡಿದಷ್ಟು, ಇನ್ಯಾವುದನ್ನು ಮಾಡಿರಲಾರರು. ಅಮ್ಮನ ಪ್ರೀತಿ, ಅಮ್ಮನ ಕೈಯಡುಗೆ, ದೇವತೆಯಂತಾ ಅಮ್ಮ …ಹೀಗೇ ಅಮ್ಮ ಅನ್ನುವುದೊಂದು ಆಸೆಗಳಿಲ್ಲದ ತ್ಯಾಗಮಯಿ ಜೀವಿಯೆಂಬಂತೆ ಬಿಂಬಿಸಿದವರೇ ನಾವೆಲ್ಲಾ. ಪ್ರತಿಯೊಂದು ಮನುಷ್ಯ ಜೀವಿಯು ಭಿನ್ನ ಅನ್ನೋದು ನಮಗೆ ಗೊತ್ತಿದೆ, ಆದರೂ ಮಕ್ಕಳನ್ನೇ ಇಷ್ಟ ಪಡದ ಹೆಣ್ಣುಗಳಿದ್ದಾರೆ ಎಂಬುದನ್ನು ಒಪ್ಪಲು ನಾವು ತಯಾರಿರುವುದಿಲ್ಲ ಯಾಕೆ? ಸಂತಾನೋತ್ಪತಿಯೆಂಬುದು ಜೀವ ವಿಕಾಸದ ಅತಿಮುಖ್ಯ ಭಾಗವಾಗಿ ಪರಿಣಮಿಸಿದ್ದು ಹೌದು. ಹಾಗೆಯೇ, ಮನುಷ್ಯರು ಸಹಜ-ಅಸಹಜವೆಂಬುದಿಲ್ಲದ ಜೀವ ವಿಕಾಸದ ಕೊಂಡಿಯಲ್ಲಿ ಎಲ್ಲವನ್ನು ನಿರ್ಧರಿಸಿ ಬದಲಾಯಿಸುವಷ್ಟರ ಮಟ್ಟಿಗೆ ಬದಲಾಗಿರುವುದು ಕೂಡಾ ನಿಜವೇ. ಶತಮಾನಗಳಿಂದ ಅನಿವಾರ್ಯ ಕ್ರಿಯೆಯಾಗಿಯೇ ನೋಡಲ್ಪಟ್ಟಿರುವ ಗರ್ಭಧಾರಣೆ, ಇವತ್ತು ಹಾಗೆಯೇ ಉಳಿದಿಲ್ಲ. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮಕ್ಕಳು ಮಾಡಿಕೊಳ್ಳಲು ಹಲವು ವಿಧಾನಗಳಿರುವಂತೆಯೇ, ಮಕ್ಕಳನ್ನು ಮಾಡಿಕೊಳ್ಳದೆ ಇರುವುದು ಸಹಜವಾದ ಜೀವನ ವಿಧಾನ ಎಂಬುದನ್ನು ಒಪ್ಪಬೇಕಿದೆ.

ರಕ್ತಸಂಬಂಧ, ಕುಟುಂಬ ಗೌರವದೊಳಗೇ ಬದುಕುವುದೆಂದರೆ…

ಲೆಬನಾನಿನ ಸೂಕ್ಷ್ಮ ಸಂವೇದನೆಗಳಿರುವ ಸೃಜನಶೀಲ ನಿರ್ದೇಶಕಿ ‘ನಡೈನ್ ಲಬಾಕಿ’  ‘ಕ್ಯಾಪರ್ನಮ್’ ಎಂಬ ಸಿನಿಮಾ ಮಾಡಿದ್ದಾಳೆ. ತಂದೆ, ತಾಯಿ, ತಂಗಿ ಜೊತೆಗಿದ್ದರೂ ಛಿದ್ರವಾದ ಕುಟುಂಬದ ಪುಟ್ಟ ಹುಡುಗ ಮನೆ ಬಿಟ್ಟು ಹೊರಟು ಪಡುವ ಕಷ್ಟಗಳು ಮತ್ತು ಕೊನೆಗೆ ತನ್ನನ್ನು ಹುಟ್ಟಿಸಿದ್ದಕ್ಕಾಗಿ ಪೋಷಕರ ವಿರುದ್ಧ ಕೋರ್ಟಿಗೆ ಹೋಗುವುದು ಸಿನಿಮಾದ ಕಥೆ. “ಮಕ್ಕಳು ಹೆತ್ತವರನ್ನು ನೋಡಿಕೊಳ್ಳಬೇಕು ಅಂತ ಸಮಾಜ ತೀರ್ಪು ನೀಡುವಾಗ, ನನ್ನನ್ನು ಹುಟ್ಟಿಸುವಾಗ ನನ್ನ ಅನುಮತಿ ಪಡೆದಿದ್ದೀಯಾ ಅಂತ ಮಗು ಪ್ರಶ್ನಿಸಿದರೆ” ಏನಾಗುತ್ತದೆ ಎಂಬುದನ್ನು ಚಿತ್ರ ತಾರ್ಕಿಕವಾಗಿ ಪರಿಶೋಧಿಸುತ್ತದೆ. ಇದನ್ನು ತೆರೆಗೆ ತಂದಿರುವ ರೀತಿ ಕಲೆಯ ಶಕ್ತಿಯನ್ನು ಎತ್ತಿ ತೋರಿಸುವಂತಿದೆ. ಟರ್ಕಿಯ ಕಡಲ ತಡಿಗೆ ಬಂದು ಬಿದ್ದ ಮೂರು ವರ್ಷದ ಸಿರಿಯನ್ ನಿರಾಶ್ರಿತ ಮಗುವಿನ ಮನಕಲಕುವ ಚಿತ್ರ ನೀವೆಲ್ಲರೂ ನೋಡಿರುತ್ತೀರಿ. ಆ ಮಗು ದಡಕ್ಕೆ ಬಂದು ಮಲಗಿದ್ದು ಮತ್ತು ಅದಕ್ಕಿಂತ ಮುಂಚೆ ಕಡಲಿನಲ್ಲಿ ಮಗುವಿನ ಮನಸ್ಥಿತಿಯನ್ನು ಊಹಿಸುತ್ತಾ, ಸಂಕಟ ಪಡುತ್ತಲೇ ನಡೈನ್ ಈ ಸಿನಿಮಾಕ್ಕಾಗಿ ಸಂಶೋಧನೆ ನಡೆಸುತ್ತಾಳೆ. ಮುಂದೆ ಈ ಸಿನಿಮಾ ಮಾಡಬೇಕಾಗಿ ಬಂದ ಕಾರಣಗಳನ್ನು ಹೇಳುತ್ತಾ – ತಮ್ಮ ಕುಟುಂಬಗಳನ್ನು ನೋಡಲು ಎಳೆ ವಯಸ್ಸಿನಲ್ಲಿ ಕೆಲಸ ಮಾಡುತ್ತಿರುವ, ಭಿಕ್ಷೆ ಬೇಡುತ್ತಿರುವ, ಮದುವೆ / ವೇಶ್ಯಾವಾಟಿಕೆಗಳಿಗೆ ತಳ್ಳಲ್ಪಡುತ್ತಿರುವ ಲಕ್ಷಗಟ್ಟಲೆ ಮಕ್ಕಳ ಬಗ್ಗೆ ವಿವರಿಸುತ್ತಾಳೆ. ಇದು ಪ್ರಪಂಚದೆಲ್ಲೆಡೆ ನಡೆಯುತ್ತಿರುವುದೇ ಆಗಿದ್ದರೂ, ನಾವಿನ್ನೂ ರಕ್ತಸಂಬಂಧ, ಕುಟುಂಬ ಗೌರವಗಳ ಬಗ್ಗೆ ಅದೆಷ್ಟು ಅಮಾನವೀಯವಾಗಿ ಯೋಚಿಸುತ್ತಾ, ಹಾಗಿರುವುದು ಮಾತ್ರ ಸಹಜವೆನ್ನುತ್ತಾ ಬದುಕುತ್ತಿದ್ದೇವೆ. ಯಾಕೆ ?

ಮಕ್ಕಳನ್ನು ಹುಟ್ಟಿಸದಿರಿ ಅನ್ನುವ ಬೇಡಿಕೆಯ ಅಂತರಾಳ ಪ್ರೇಮಮಯವಾದದ್ದು…

ಗಂಟೆಗೆ 3,300 ಕ್ಕಿಂತ ಅಧಿಕ ಮಕ್ಕಳು ಹುಟ್ಟುವ ಮತ್ತು ಗಂಟೆಗೆ 1,100 ರಷ್ಟು ಮನುಷ್ಯರು ಸಾಯುವ ದೇಶವಾದ ಭಾರತದಲ್ಲಿ ನಾವು ವಾಸಿಸುತ್ತಿದ್ದೇವೆ. ವೈಯಕ್ತಿಕವಾಗಿ ಮಕ್ಕಳು ಮತ್ತು ಪ್ರಾಣಿಗಳನ್ನು ತುಂಬಾ ಇಷ್ಟ ಪಡುತ್ತೇನಾದರು, ನನ್ನ ಮುಂದುವರಿಕೆಯಾಗಿ ಜೀವವೊಂದನ್ನು ಬಿಟ್ಟು ಹೋಗುವ ಯಾವ ಅಲೋಚನೆಯು ನನಗಿಲ್ಲ. ಮದುವೆ, ಮಕ್ಕಳು ಅನ್ನುವ ಗೋಜಿಗೆ ಹೋಗದೆ ಬದುಕುವವರ ಸಂಖ್ಯೆ ಅತಿ ವಿರಳ ಎಂಬುದು ಗೊತ್ತಿರುವಂತದ್ದೆ. ಸರಿಯಾದ ಸೆಕ್ಸ್ ಎಜ್ಯುಕೇಶನ್ ಹಾಗೂ ಅದನ್ನು ಕೊಡಬೇಕಾದ ತಿಳುವಳಿಕೆಯಿರೋ ಟೀಚರುಗಳೋ ನಮ್ಮಲ್ಲಿ ಇಲ್ಲ. ಇವೆಲ್ಲವುಗಳಿಂದಾಗಿ, ಮಕ್ಕಳನ್ನು ಹುಟ್ಟಿಸದಿರಿ ಅನ್ನುವ ಬೇಡಿಕೆಯ ಅಂತರಾಳ ಪ್ರೇಮಮಯವಾದದ್ದು ಅಂತ ವಿವರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಇಷ್ಟೆಲ್ಲಾ ಸುತ್ತಿ ಬಳಸಿ, ಸಾವಿನಿಂದ ಉದ್ರೇಕದೆಡೆಗೆ ಎಂಬಂತೆ ಬರೆಯುತ್ತಿದ್ದೇನೆ. ಮೋಸ, ಜವಾಬ್ದಾರಿ, ಸ್ಥಿರತೆ, ನಿರಂತರ ಎಂಬ ಪದಗಳಿಗೆಲ್ಲ ಅರ್ಥವಿಲ್ಲದ ಪ್ರೇಮಕೋಶ ನಮ್ಮದಾಗಿರುವಾಗಲೂ, ನಾವು ಅರ್ಥ ಹುಡುಕುವ ನಿರರ್ಥಕ ಪ್ರಯತ್ನ ಮಾಡುತ್ತೇವೆ. ಪ್ರೇಮ ಪಾಲಿಸಬೇಕಾದ ಒಂದು ನಿಯಮವಲ್ಲವಾದ್ದರಿಂದ, ಇನ್ನೊಬ್ಬರನ್ನು ಬಲಿ ಕೊಡುವುದರ ಹೊರತಾದ ಎಲ್ಲಾ ಭಾವನೆಗಳನ್ನು ತಮ್ಮಷ್ಟಕ್ಕೆ ಹರಿಯಲು ಬಿಟ್ಟು, ಸಂಸ್ಕೃತಿ ಹೇರಿದ ನಿಯಮಗಳನ್ನು ಮರೆತುಬಿಡಬಹುದಲ್ಲವೆ ?

ಮಗುವನ್ನು ಭೂಮಿಗೆ ತರುವುದು ಅವರವರ ಆಯ್ಕೆಯಾಗಲಿ…

ಹೆಣ್ಣನ್ನು ವಸ್ತುವಾಗಿ, ಹೆರುವ ಯಂತ್ರವಾಗಿ ಉಪಯೋಗಿಸಿಕೊಂಡಿದ್ದೇವೆ. ನಗರಗಳಲ್ಲಿ ಸ್ವತಂತ್ರವಾಗಿ ಜೀವಿಸುತ್ತಾರೆ ಅಂತನ್ನಿಸುವವರ ಗುಲಾಮಗಿರಿಯಂಥ ಕೆಲಸ, ಕ್ಷಣಿಕ ಸುಖ ಮತ್ತು ಅದರ ನೂರರಷ್ಟಿದ್ದು ದಿನಪೂರ್ತಿ ಕಾಡುವ ನೋವು ಎಲ್ಲೆಡೆಗೂ ಹರಡುತ್ತಿವೆ. ಮಕ್ಕಳನ್ನು ಹುಟ್ಟಿಸಿ – ಮನುಷ್ಯರ ಹೇರಿಕೆಯ, ಗುಲಾಮಗಿರಿಯ, ಮನುಷ್ಯರಷ್ಟೇ ಮುಖ್ಯವೆನಿಸುವ ಲೋಕಕ್ಕೆ ಬಿಡುವ ಮುನ್ನ ಯೋಚಿಸಿ ಅನ್ನುವಾಗಲೂ ಅದು ಸಂಪೂರ್ಣವಾಗಿ ಹುಟ್ಟಿಸುವವರ ಆಯ್ಕೆ ಎಂಬುದನ್ನು ಮರೆಯುತ್ತಿಲ್ಲ. ಹುಟ್ಟಿಸುವುದು, ಬಿಡುವುದು ಹೆಣ್ಣಿನ ಅಥವಾ ಆ ನಿರ್ದಿಷ್ಟ ವ್ಯಕ್ತಿಗಳ ಆಯ್ಕೆಯಷ್ಟೇ ಆಗಬೇಕು. ಹಾಗಾದಾಗ ಆಗಬಹುದಾದ ಬದಲಾವಣೆ ಪುರುಷಾಧಿಪತ್ಯ ಸಮಾಜಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗಲಿ ಮತ್ತು ಆ ದಿನಗಳು ಬೇಗನೆ ಬರಲಿ.

ಗುರು ಸುಳ್ಯ
ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.

ಶಾಲೆಯಲ್ಲಿ ಕಲಿಕೆಯ ಹೊಸ ಅಲೆ ಆರಂಭವಾಗಬೇಕಿದೆ
ಕಲ್ಪನೆಯ ಚಂದಮಾಮ ಕಥೆಗಳನ್ನು ಕೇಳಿ ಖುಷಿ ಪಡುವ ಮಕ್ಕಳ ಸಂತೋಷವನ್ನು ನೋಡುವುದೇ ಚಂದ. ಆದರೆ, ಕಲ್ಪಿತ ಕಥೆಗಳನ್ನು ರಿಯಾಲಿಟಿ ಅನ್ನೋ ತರ ಬಿಂಬಿಸಿ ಮಕ್ಕಳ ಬೆಳವಣಿಗೆಗೆ ಏಟು ಕೊಡುವ ಹಿರಿಯರಿಂದ ಬೆಳೆಸಲ್ಪಡುವ  ಮಕ್ಕಳ ಒಳಗಿನ ಕಥೆಗಳೇ ಕೊನೆಯಾಗುತ್ತವೆ .. ಗುರು ಸುಳ್ಯ ಅವರ ಈ ವಾರದ ಅಂಕಣ ಬರೆಹ ಮುಂದೆ ಓದಿ..

ಜಾತಿಯ ಕ್ರೌರ್ಯ ಮೆರೆದಾಡಿದ ಈ ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ‘ಕಲಿಕೆ’ ಒಂದು ಜಾತಿಯ ಸ್ವತ್ತಾಗಿತ್ತು. ಹಲವಾರು ಗುಂಪುಗಳಾಗಿ ವಾಸಿಸುತ್ತಿದ್ದ, ತಮ್ಮದೇ ರೀತಿಯ ಬದುಕು ಕಟ್ಟಿಕೊಳ್ಳುವ, ತಮ್ಮ ಕಲಾ ಪರಂಪರೆಗಳೊಂದಿಗೆ ಬದುಕುತ್ತಿದ್ದ ಜನರನ್ನು ಗುಲಾಮಗಿರಿಗೆ ತಳ್ಳಿದ ಬಿಳಿನೆರಳು ಇನ್ನೂ ಇದೆ‌ ಇಲ್ಲಿ. ಇವೆಲ್ಲಕ್ಕು ಪಾಠ ಕಲಿಸಲು, ಓದಿನ ಮಹತ್ತ್ವ ಅರುಹಲು ಆಧುನಿಕ ಮಹಾಗುರುವಾಗಿ ರೂಪುಗೊಂಡ ಅಂಬೇಡ್ಕರ್ ನ್ನು ಗ್ರಹಿಸಲು ವರ್ತಮಾನದೊಂದಿಗೆ ಮಿಳಿತವಾಗಿರುವ ಇತಿಹಾಸದ ಅರಿವಿರುವುದು ಮುಖ್ಯ. ವೈದಿಕ ಗಂಡಸರ ಕುತಂತ್ರವೇ ವಿದ್ಯೆಯಾಗಿ ಗೋಚರಿಸಿದ್ದ ಕಾಲಘಟ್ಟದ ಕುಂಡೆಗೆ ಒದೆಯಲು ಸಾಧ್ಯವಾಗಿದ್ದೇ ಭಾರತದ ಸಂವಿಧಾನದ ನಿರ್ಮಾತೃವಿನಿಂದ.  ಅರಿವು ನಿಂತ ನೀರಲ್ಲ. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದ ಬಸವ ತತ್ವ ನೀರಿನಂತೆ ಬಸವಣ್ಣನನ್ನು ಬಿಟ್ಟು ಹರಿಯುತ್ತಲೇ ಇದೆ!

ಕಲಿಕೆಯ ರೀತಿ ಹೇಗಿರಬೇಕು?

ಕಲಿಕೆ ನಿರಂತರ ಅನ್ನುವುದು ದಿಟವೇ ಆದರೂ, ಕಲಿಕೆಯ ರೀತಿ ಹೇಗಿರಬೇಕು ? ಕಲಿಯಬೇಕಾದದ್ದು ಏನನ್ನು ? ಉತ್ತರ ಕಾಲಕ್ಕನುಗುಣವಾಗಿ ಬದಲಾಗುತ್ತಾ ಹೋಗಬಹುದು. ಗುರು-ಶಿಷ್ಯರ ನಡುವೆ ಅದಲು ಬದಲಾಗಬೇಕಾದ ಪ್ರಶ್ನೋತ್ತರಗಳು, ಬಹುತೇಕ ಪ್ರಶ್ನೆ ಪತ್ರಿಕೆ-ಉತ್ತರ ಪತ್ರಿಕೆ ಎಂಬಲ್ಲಿಗೆ ಸೀಮಿತವಾಗಿದೆ. ಹಾಗಿಲ್ಲದಿದ್ದರೆ ಹಳಬರಿಗಿಂತ ಹೆಚ್ಚು ಚಿಂತನಾ ಸಾಮರ್ಥ್ಯವಿರುವ ಯುವ ಜನತೆ ಅದೇ ಹಳೇ ಸಂಪ್ರದಾಯಗಳ ಹೇರುವಿಕೆಗೆ ಬಲಿಯಾಗುತ್ತಿರಲಿಲ್ಲ. ಕೋಮುವಾದ ಮತ್ತು ಬಂಡವಾಳಶಾಹಿಗಳ ನಡುವೆಯಷ್ಟೇ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯ ಹಳ್ಳದಲ್ಲೇ ಒದ್ದಾಡಬೇಕಾದ ಪರಿಸ್ಥಿತಿಯೂ ಇರುತ್ತಿರಲಿಲ್ಲ. ಎಲ್ಲರನ್ನು ಒಳಗೊಳ್ಳುವುದು, ಶಾಲೆ ಎಂಬುದರ ಮೂಲಭೂತ ಸ್ವಭಾವ ಹೌದು. ಆದರೆ, ಸ್ವಭಾವತಃ ಪ್ರತಿ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಗಿಂತ  ಭಿನ್ನವೆಂಬುದು ಗೊತ್ತಿರುವಾಗ, ಎಲ್ಲರಿಗೂ ಒಂದೇ ರೀತಿಯ ಕಲಿಕಾ ಪದ್ಧತಿಯಿರುವುದು ಹೇಗೆ ಸರಿ? ಒಳ್ಳೆಯ ಶಾಲೆ, ಕಲಿಯುತ್ತಲೇ ಕಲಿಸುವ ಅಧ್ಯಾಪಕರುಗಳೂ ಕೆಲವೆಡೆ ಇದ್ದಾರೆ ಎಂಬುದೇನೋ ಸರಿಯೆ. ಪ್ರಶ್ನೆಯಿರುವುದು ವಿಮರ್ಶಾತ್ಮಕ ಚಿಂತನೆ, ಸಹಿಷ್ಣುತೆ, ಸರ್ವ ಸಮಾನತೆ, ಪ್ರತಿಯೊಂದು ಕಡೆಯು ಇರಬೇಕಾದ ಪ್ರಜಾಪ್ರಭುತ್ವದ ಅರಿವು, ಸೃಜನಶೀಲತೆಯ ವಿಸ್ತರಣೆ – ಇವೆಲ್ಲಾ ಒಂದಿಷ್ಟು ಮಂದಿಗಷ್ಟೇ ದಕ್ಕಬೇಕಾದದ್ದು ಅಲ್ಲವಲ್ಲ! ಶಿಕ್ಷಣ ಮತ್ತು ವೈದ್ಯಕೀಯ ಅದರ ಎಲ್ಲಾ ವೈವಿಧ್ಯಗಳೊಂದಿಗೆ ಎಲ್ಲಾ ಮನುಷ್ಯರಿಗು ಮೂಲಭೂತವಾಗಿ ದೊರೆಯಬೇಕಾದ ಎರಡು ಸೌಕರ್ಯಗಳು. ಆದರೆ, “ಅರಿವು ನಿಮ್ಮನ್ನು ಸ್ವತಂತ್ರವಾಗಿ ಹಾರಲು ಸಹಾಯ ಮಾಡುತ್ತದೆ ಎಂದಾದರೆ, ನಿಮಗೆ ಕಲಿಸುತ್ತಿರುವ ವ್ಯವಸ್ಥೆಯನ್ನೇ ಕಿತ್ತೊಗೆಯಲು ಬೇಕಾಗುವಂತ ವಿದ್ಯಾಭ್ಯಾಸವನ್ನು ಅವರ್ಯಾರು ಕೊಡಲಾರರು; ನಿಮ್ಮ ನಿಜದ ಇತಿಹಾಸವನ್ನು ಅಥವಾ ನಿಮ್ಮ ನಿಜದ ನಾಯಕರ ಬಗ್ಗೆ  ಅವರ್ಯಾರು ಕಲಿಸಲಾರರು” ಇದು ಅಮೇರಿಕಾದ ರಾಜಕೀಯ ಹೋರಾಟಗಾರ್ತಿಯೂ, ‘ಬ್ಲ್ಯಾಕ್ ಲಿಬರೇಶನ್ ಆರ್ಮಿ’ ಯ ಸದಸ್ಯೆಯೂ ಆಗಿದ್ದ ‘ಅಸ್ಸತಾ  ಶಕೂರ್’ ಅವರ ಮಾತುಗಳು. ಈ ಮಾತಿನ ಸತ್ಯಾಸತ್ಯತೆ ಇವತ್ತಿನ ಕಿತ್ತೊಗೆಯಲಾಗದ ಬಂಡವಾಳಶಾಹಿಯ ಗುಲಾಮರಾಗಿರುವ ನಮ್ಮೆಲ್ಲರಿಗು ಗೊತ್ತಿಲ್ಲದ್ದೇನಲ್ಲ. ಅರಿವಿನ ವಿಸ್ತರಣೆ ಮತ್ತು ಉತ್ಸಾಹಿತ ವಿಷಯಗಳ ಬಗೆಗಿನ ಅಧ್ಯಯನಕ್ಕೆ ಹಾದಿಯಾಗಿರಬೇಕಾದ ಕಲಿಕೆಯು ಕೆಲಸ ಹುಡುಕಲು ಬೇಕಾದ ಅನಿವಾರ್ಯತೆಯಾಗಿ ಬದಲಾಗಿರುವ ದುರಿತ ಕಾಲವಿದು. ಈ ಕಾಲದಲ್ಲಿ ಮನುಷ್ಯರ ಹೃದಯವಂತಿಕೆಯ, ಕ್ರೂರತೆಯ ಗುಣಲಕ್ಷಣಗಳನ್ನು ಸೀಮಿತ ಸಂಪ್ರದಾಯವಾದಿ ಕಣ್ಣುಗಳಲ್ಲಿ ನೋಡಲು ಹೇಗ ಸಾಧ್ಯವಿಲ್ಲವೋ, ಹಾಗೆಯೇ ವಿದ್ಯಾಭ್ಯಾಸದ ಆಧಾರದಲ್ಲಿ ಅಳೆಯಲೂ ಸಾಧ್ಯವಿಲ್ಲ.

ಕಲಿಕೆ ಅನ್ನುವಾಗ..

ಇಲ್ಲಿ ಮುಖ್ಯವಾಗಿ ಹೇಳುತ್ತಿರುವುದು ಪ್ರಾಥಮಿಕ ಶಾಲೆಯ ಆ ಆರೇಳು ವರ್ಷಗಳ ಬಗ್ಗೆ. ಒಳಗೊಳಗೆ ಕುಗ್ಗಲು ಬಿಡದೆ, ಜಗತ್ತಿಗೆ ತೆರೆದುಕೊಳ್ಳುವ ಮಕ್ಕಳ ಕಣ್ಣಾಗ ಬೇಕಾದ ಶಾಲೆಗಳ ಬಗ್ಗೆ; ಪ್ರತಿ ಮನಸ್ಸನ್ನು ಅರಿವಿಗೆ ಒಡ್ಡಲು ಪ್ರೇರೇಪಿಸಿ ಖುಷಿಪಡಿಸಬೇಕಾದ ವಿವಿಧ ಪ್ರಕ್ರಿಯೆಗಳ ರೂವಾರಿಗಳಾಗಬೇಕಾದ ಶಾಲೆಗಳ ಟೀಚರುಗಳ ಬಗ್ಗೆ; ಪ್ರತಿ ಶಾಲೆಗಳ ಅಗತ್ಯ ಮತ್ತು ಶಾಲೆಗಳಲ್ಲಿನ ಅನಗತ್ಯ ರೀತಿ ರಿವಾಜುಗಳ ಬಗ್ಗೆ ಹೆಚ್ಚು ಚರ್ಚೆಗಳಾಗಿ ತಾರ್ಕಿಕ ಪರಿಹಾರಗಳು ಸಿಗಬೇಕಿದೆ ಅನ್ನುವ ಬಗ್ಗೆ. ಆಟದ ಬೆಲ್ ಹೊಡೆಯುವುದನ್ನು ಕಾಯುವಷ್ಟೇ ಸಹಜವಾಗಿ ಗಣಿತದ ಅಥವಾ ಇನ್ಯಾವುದೇ ವಿಷಯದ ಕ್ಲಾಸಿಗೆ ಕಾಯುವಂತೆಯೂ ಮಾಡಬಹುದು. ಕಥೆ ಕೇಳಲು ಬಹಳ ಇಷ್ಟ ಪಡುವ ಮಕ್ಕಳು ಒಂದು ಹಂತದಿಂದಾಚೆ ಕನ್ನಡ ಅಥವಾ ಸಮಾಜದ ಪಾಠಗಳಿಗೆ ಅಷ್ಟೊಂದು ಉತ್ಸಾಹ ತೋರಿಸದೇ ಹೋಗುವುದು ಯಾಕೆಂದು ಆಲೋಚಿಸಿದರೆ ಮಾತ್ರ ಹಾಗೆ ಕಲಿಸುವಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಬಹುದು. ಸರಿಯಾದ ಬಾಲ್ಯವನ್ನೇ ಕೊಡದೆ, ಶಾಲೆಯನ್ನು ಜೈಲಿನಂತಾಗಿಸಿ ‘ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು’ ಅನ್ನುವುದು ಒಂಥರಾ ಹರಿದ ಶಾಲಾ ಸಮವಸ್ತ್ರಕ್ಕೆ ತೇಪೆ ಹಚ್ಚುವ ಸರಕಾರದ ಮಾತುಗಳಂತೆ ಕಾಣಿಸುತ್ತವೆ. ಯಾವತ್ತಿಗೂ ವಯಸ್ಸಾದವರಿಂದಲೇ ತುಂಬಿರುವ ಸರ್ಕಾರದ ಭಾಗವಾಗುವವರು ಈ ಪ್ರಜೆಗಳೇ ಆಗಿರುತ್ತಾರೆ!

ಇಂಥ ಶಾಲೆಗಳು ಬೇಕು..

“ನನ್ನ ಕೆಲಸ ಮಕ್ಕಳನ್ನು ಪೋಷಕರಿಂದ ರಕ್ಷಿಸುವುದಾಗಿದೆ” ಎಂಬುದು ಡ್ಯಾನಿಷ್ ಸೀರೀಸ್ ‘ರೀಟಾ’ ದ ಮುಖ್ಯ ಪಾತ್ರವಾದ ಟೀಚರ್  ಹೇಳೋ ಮಾತುಗಳು. ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ತಮ್ಮ ಸಿದ್ಧಾಂತ, ಸಂಪ್ರದಾಯಗಳಿಗೆ ಅನುಗುಣವಾಗಿ ಮಕ್ಕಳನ್ನು ಕಟ್ಟಿಹಾಕುವ ಪೋಷಕರಷ್ಟೇ ತಪ್ಪು ನಮ್ಮ ಶಿಕ್ಷಕರದೂ ಇದೆ. ಶಿಕ್ಷಣ ಅಂದ್ರೆ ಶಿಕ್ಷೆ ಅನ್ನುವ ಮನೋಭಾವ ಮನೆಮಾಡಿರುವುದು ಮಕ್ಕಳಲ್ಲಿ ಮಾತ್ರವಲ್ಲ, ಅದು ನಮ್ಮ ಸಮಾಜದ ಪ್ರತಿಬಿಂಬ. ಮೂರು- ನಾಲ್ಕು ವರ್ಷದ ತಮ್ಮ ಪ್ರೀತಿಯ ಮಗುವಿನ ಬೆನ್ನಿಗೆ ಹೊರೆಹಾಕುವ ಪೋಷಕರ ತಲೆ ಅದೆಷ್ಟರ ಮಟ್ಟಿಗೆ ಭ್ರಷ್ಟವಾಗಿರಬೇಡ ! ಕಲ್ಪನೆಯ ಚಂದಮಾಮ ಕಥೆಗಳನ್ನು ಕೇಳಿ ಖುಷಿ ಪಡುವ ಮಕ್ಕಳ ಸಂತೋಷವನ್ನು ನೋಡುವುದೇ ಚಂದ. ಆದರೆ, ಕಲ್ಪಿತ ಕಥೆಗಳನ್ನು ರಿಯಾಲಿಟಿ ಅನ್ನೋ ತರ ಬಿಂಬಿಸಿ ಮಕ್ಕಳ ಬೆಳವಣಿಗೆಗೆ ಏಟು ಕೊಡುವ ಹಿರಿಯರಿಂದ ಬೆಳೆಸಲ್ಪಡುವ ಮಕ್ಕಳ ಒಳಗಿನ ಕಥೆಗಳೇ ಕೊನೆಯಾಗುತ್ತವೆ!. ಹೀಗಿರುವಾಗ, ಕಲ್ಪನೆ ಮತ್ತು ಅದಕ್ಕಂಟಿಕೊಂಡಿರುವ ಸೃಜನಶೀಲತೆಯು ನಿಜದ ಅನ್ವೇಷಣೆಯ ದಾರಿಯಲ್ಲಿ ನಡೆಯಲು ಅವಕಾಶ ಮಾಡಿಕೊಡುವಂತಹ ಶಾಲೆಗಳು ಬೇಕು.

ಚಿತ್ರಕೃಪೆ: ಸಿಎಫ್‌ಎಲ್‌ ಬೆಂಗಳೂರು

ಇಲ್ಲಿ ಪ್ರೈವೇಟ್ ಶಾಲೆಗಳಿಲ್ಲ!

ಫಿನ್ ಲ್ಯಾಂಡ್ ದೇಶದಲ್ಲಿ ‘ಎಲ್ಲ ಮಕ್ಕಳಿಗೂ ಸಮಾನ ಅವಕಾಶ’ ಎಂಬ ಆಶಯದೊಂದಿಗೆ ಎಲ್ಲಾ ಶಾಲೆಗಳನ್ನು ಸರಕಾರವೇ ನಡೆಸುತ್ತದೆ. ಬಡವ ಬಲ್ಲಿದರೆನ್ನದೆ ಎಲ್ಲರಿಗೂ ಉಚಿತ ಮತ್ತು ಸಮಾನ ವಿದ್ಯೆಯನ್ನು ನೀಡುವ ಇಲ್ಲಿ ಪ್ರೈವೇಟ್ ಶಾಲೆಗಳಿಲ್ಲ. ಶಾಲೆಗಳು ಶುಲ್ಕ ಅಥವ ದೇಣಿಗೆ ಕೇಳುವುದನ್ನು ಕಾನೂನು ರೀತ್ಯಾ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಅಲ್ಲಿಗೆ ವಲಸೆ ಬಂದ ಜನಗಳ ಮಕ್ಕಳು ಶಾಲೆಗೆ ಸೇರುತ್ತಿರುವಾಗ, ಅವರುಗಳ ಮಾನಸಿಕ ಅವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಮನಸ್ಸಿಗೆ ಭಾರವಾಗದಂತೆ ಪಾಠಗಳ ಪರಿಷ್ಕರಣೆಯು ನಡೆಯುತ್ತಿದೆ. ವೈವಿಧ್ಯತೆಯ ಒಳಗೊಳ್ಳುವಿಕೆಯನ್ನು ತರಗತಿಗಳು ಅಕ್ಷರಶಃ ಪಾಲಿಸುತ್ತವೆ. ಆ ದೇಶದ ಕೆಲವು ಶಾಲಾ ರೀತಿಗಳು ಈ ಕೆಳಗಿನಂತಿವೆ

ಮಕ್ಕಳ ಜೊತೆಗೆ ಕೂತು, ಮಾತನಾಡಿ ಬೇಕಾದ ಪಾಠಗಳನ್ನು ನಿರ್ಧರಿಸುವುದು

ಪಠ್ಯೇತರ ಚಟುವಟಿಕೆಗಳ ಜೊತೆಗೇ, ಅದಕ್ಕಿಂತಲೂ ಹೆಚ್ಚಾಗಿ ಅಗತ್ಯವಾದ ವಿಷಯಗಳಿಗೆ ಆದ್ಯತೆ ನೀಡುವುದು

ದೈನಂದಿನ ಕೆಲಸಗಳಿಂದ ಮುಕ್ತಗೊಳಿಸಲು ಪುಟಾಣಿ ಮೆದುಳಿಗೆ ನಿಗದಿತ ವಿರಾಮಗಳನ್ನು ನೀಡುವುದು

ಮಕ್ಕಳನ್ನು ತರಗತಿಯೊಳಗೆ ಓಡಾಡಲು ಪ್ರೋತ್ಸಾಹಿಸುವುದು

ಮನೆ ಕೆಲಸದ ಪ್ರಮಾಣ ಅತ್ಯಂತ ಕಡಿಮೆಯಾಗಿರುವಂತೆ ನೋಡಿಕೊಳ್ಳುವುದು

ನಾವು ಸಾಗಬೇಕಾದ ದಾರಿ ಬಹಳ ದೂರವಿದೆ

ಕಡಿಮೆ ಜನಸಂಖ್ಯೆ ಇರುವ, ಹೆಚ್ಚು ತೆರಿಗೆ ಇರುವ ಫಿನ್ಲ್ಯಾಂಡನ್ನು ಭಾರತಕ್ಕೋ, ಕರ್ನಾಟಕಕ್ಕೋ ಹೋಲಿಸುವುದು ಸಾಧ್ಯವಿಲ್ಲ. ಅಲ್ಲಿನ ಅಥವಾ ಎಲ್ಲಿಯದೇ ವ್ಯವಸ್ಥೆಯನ್ನು ಅನುಕರಿಸುವುದು ಕೂಡ ಮೂರ್ಖತನವೇ ಆಗುತ್ತದೆ. ಜಾತಿ ವ್ಯವಸ್ಥೆ, ಭ್ರಷ್ಟಾಚಾರ, ಕೋಮುವಾದ, ಅವ್ಯವಸ್ಥಿತ ಸರಕಾರಗಳಿಂದ ಬಳಲುತ್ತಿರುವ ನಾವು ಸಾಗಬೇಕಾದ ದಾರಿಯಿನ್ನೂ ಬಹಳ ದೂರವಿದೆ. ಪ್ರೈವೇಟ್ ಶಾಲೆಗಳನ್ನು ಕಡಿತಗೊಳಿಸಿ, ಸಮಾನ ವಿದ್ಯಾಭ್ಯಾಸದ ಶಾಲೆಗಳನ್ನು ಜಾರಿಗೆ ತರಲು ಶ್ರಮಿಸಬಹುದು. ಹೆಣ್ಣು-ಗಂಡು ಎಂದು ಎಳವೆಯಲ್ಲಿಯೇ ಮಕ್ಕಳನ್ನು ಬೇರೆ ಬೇರೆ ಕೂರಿಸುವ, ವೈವಿಧ್ಯಮಯ ಜೆಂಡರ್ ಐಡೆ‌ಂಟಿಟಿಗಳನ್ನು ನಿರಾಕರಿಸುವ, ಸಮವಸ್ತ್ರದ ಬಣ್ಣಗಳ ಹೊರತಾಗಿಯೂ ಹೆಣ್ಣು-ಗಂಡು ಅಂತಷ್ಟೇ ನಿರ್ಧರಿಸಿ ನಿರ್ದಿಷ್ಟ ಶೈಲಿಯ ಬಟ್ಟೆಗಳನ್ನು ಹಾಕಲು ಒತ್ತಾಯಿಸುವ ಅವೈಜ್ಞಾನಿಕ-ಅಸಾಂವಿಧಾನಿಕ ಕ್ರಮಗಳನ್ನು ಖಡಾಖಂಡಿತವಾಗಿ ನಿಲ್ಲಿಸಬೇಕು.

ಇನ್ನು ಈ ಜಾಗತೀಕರಣದ ಯುಗದಲ್ಲಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ‘ಹೋಮ್ ಸ್ಕೂಲಿಂಗ್’ ಮತ್ತು ‘ಅನ್ ಸ್ಕೂಲಿಂಗ್’ ಎಷ್ಟರ ಮಟ್ಟಿಗೆ ಮಕ್ಕಳನ್ನು ಇತರರೊಂದಿಗೆ ಬೆರೆಯಬೇಕಾದ ಅಗತ್ಯಗಳನ್ನು ಪೂರೈಸುತ್ತದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಗುಲಾಮರಾಗುವತ್ತಲೇ ಮಕ್ಕಳನ್ನು ಕೊಂಡೊಯ್ಯುವ ಈ ಸಮಾಜದ ಜೊತೆಗೆ ಎಷ್ಟು ಬೇಕೋ ಅಷ್ಟು ಬೆರೆತರೆ ಸಾಕೆಂಬುದು ಈ ವಿಧಾನದ ಉದ್ದೇಶವಾಗಿರಬಹುದಾದರು, ಇದರ ಪರಿಣಾಮಗಳು ಯಾವ ರೀತಿಯದ್ದಾಗಿರಬಹುದೆಂಬುದರ ಊಹೆ ಬಹುಪಾಲು ಪೋಷಕ ಸಮುದಾಯಕ್ಕಿದ್ದಂತಿಲ್ಲ. ಇದರ ಜೊತೆ ಮುಂದಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಮಕ್ಕಳನ್ನು ಈ ವಿದ್ಯಾಭ್ಯಾಸ ವಿಧಾನ ಯಾವ ರೀತಿ ಸದೃಢರನ್ನಾಗಿಸುತ್ತದೆ ಎಂಬುದನ್ನು ವಿಜ್ಞಾನವೆ ಹೇಳಬೇಕು.

ಜನಸಂಖ್ಯೆ ಮಿತಿಮೀರಿ ಮನುಷ್ಯರು ಭೂಮಿಯ ವೃಣವಾಗಿರುವ ಈ ಹೊತ್ತು, ಆ ಕೀವಿಗೆ ಹಚ್ಚಬೇಕಾದ ಮದ್ದುಗಳಲ್ಲಿ  ಶಿಕ್ಷಣ ಕೂಡ ಬಹುಮುಖ್ಯವಾದದ್ದು. “ಪ್ರಕೃತಿಯ ಸಮತೋಲನದ ಭಾಗವಾಗಿ ಇರಬೇಕಾಗಿದ್ದ ಮನುಷ್ಯರ ಸಂಖ್ಯೆ, ಭೂಮಿಗೆ ಭಾರವಾಗುವಷ್ಟಾಗಿರುವುದು – ಕಲಿಕೆಯೆಂಬುದು ಅರಿವು ಉಂಟುಮಾಡುವ ಬದಲಾಗಿ, ಕೆಲಸ ಗಿಟ್ಟಿಸುವ ಯಾಂತ್ರಿಕ ಸರಕಾಗಿ ಬದಲಾಗಲು ಕಾರಣವೂ ಹೌದು”. ಇದು ವಿಕಸನಗೊಳ್ಳುತ್ತಲೇ ಇರುವ ಮನುಷ್ಯ ಮೆದುಳಿನ ಪರಿಣಾಮವೆಂದರು ಕೂಡ, ಮನುಷ್ಯರ ನಡುವಿನ ಸಾಮರಸ್ಯಕ್ಕೆ, ಸಮತ್ವಕ್ಕೆ ಇದರಿಂದಾಗಿರುವ ಸಮಸ್ಯೆ ಕಂಗೆಡಿಸುವಂತದ್ದು.

ಮಕ್ಕಳ ಜಗತ್ತೊಂದು ಬೆಳೆಯುತ್ತಿರುತ್ತದೆ…

ಮಹಿಳೆ ಟೀಚರ್ ಆದರೆ ಸೀರೆ ಉಟ್ಟುಕೊಂಡೇ ಬರಬೇಕು ಎನ್ನುವ ಶತಮಾನದಷ್ಟು ಹಳೆಯ ಪದ್ಧತಿಯಲ್ಲಿ ಕೊಳೆಯುತ್ತಿರುವ ನಮ್ಮ ಶಾಲೆಗಳಲ್ಲಿ ಕಲಿತು ಮಹಿಳಾವಾದವನ್ನು, ಅಂಬೇಡ್ಕರನ್ನು, ಜೆಂಡರ್ ಸೆನ್ಸಿಟಿವಿಟಿಯನ್ನು, ಸೈಂಟಿಫಿಕ್ ಟೆಂಪರ್ ಅನ್ನು ಅರಿಯುವಷ್ಟರ ಮಟ್ಟಿಗೆ ವಿಮರ್ಶಾತ್ಮಕ ಚಿಂತನೆಯನ್ನು ಕೆಲವರಾದರು ಬೆಳೆಸಿಕೊಂಡಿದ್ದಾರೆಂಬುದೇ ಸಂತಸದ ವಿಷಯ. ಸಾವಿತ್ರಿಬಾಯಿ ಫುಲೆಯ ಮುಂದುವರಿಕೆಯಾಗಿ – ಎಲ್ಲಾ ನಿರ್ಬಂಧ ಮತ್ತು ಒತ್ತಡಗಳ ನಡುವೆ ಮಕ್ಕಳನ್ನು ಪೋಷಿಸುತ್ತಾ, ಪ್ರೀತಿಸುತ್ತಾ, ಕಲಿಸುತ್ತಾ ಖುದ್ದು ನವೀಕರಣಗೊಳ್ಳುತ್ತಿರುವ ಕೆಲವೇ ಕೆಲವು ಟೀಚರುಗಳ ಪ್ರಯತ್ನಕ್ಕೆ ಸಲಾಮ್. “ಬೆಳೆಯುವ ಮಕ್ಕಳಿಗೆ ಎದುರಾಗಿ ಜಗತ್ತು ತೆರೆಯುತ್ತಿರುವಾಗ, ನಮ್ಮೆದುರು  ಮಕ್ಕಳ ಜಗತ್ತೊಂದು ಬೆಳೆಯುತ್ತಿರುತ್ತದೆ”.

ಚಿತ್ರಕೃಪೆ: ಸಿಎಫ್‌ಎಲ್‌ ಬೆಂಗಳೂರು

ಯು ಜಿ ಕೃಷ್ಣಮೂರ್ತಿಯವರ ಮಾತುಗಳು…

ಇಷ್ಟೆಲ್ಲಾ ಈವಾಗಿನ ಕಲಿಕಾ ವ್ಯವಸ್ಥೆಯನ್ನು ಸುತ್ತುತ್ತಾ ಬರೆದ ಮೇಲೂ, ಪರಿಹಾರವಿಲ್ಲದ ನಿರ್ವಾತವೊಂದು ಆವರಿಸುತ್ತಿದೆ. ಆದ ಕಾರಣ, ನಮ್ಮ ಕಲಿಕಾ ವಿಧಾನಕ್ಕೆ ವೈರುಧ್ಯದಂತಿರುವ ಯು ಜಿ ಕೃಷ್ಣಮೂರ್ತಿಯವರ ಕಲಿಕೆಯ ಕುರಿತಾದ ವೈಯಕ್ತಿಕ ಮಾತುಗಳಿಂದ ಈ ಬರಹವನ್ನು ಮುಗಿಸದೇ ಬೇರೆ ದಾರಿ ಕಾಣಿಸುತ್ತಿಲ್ಲ – “ಮನುಷ್ಯರನ್ನು ಪ್ರಭಾವಿಸಿದ ಎಲ್ಲಾ ಗುರುಗಳು ತಮ್ಮನ್ನು ವಂಚಿಸಿಕೊಳ್ಳುತ್ತಲೇ ಇಡೀ ಮನುಷ್ಯ ಕುಲವನ್ನೂ ವಂಚಿಸಿದರು. ಆದ್ದರಿಂದ ನನ್ನ ಹುಡುಕಾಟವನ್ನು ಖುದ್ದು ನಾನೇ ನಡೆಸಬೇಕಿತ್ತು ಮತ್ತು ಇನ್ನೊಬ್ಬರನ್ನು ಅವಲಂಬಿಸಿಕೊಂಡಿರುವವರೆಗೆ ಅದು ಸಾಧ್ಯವಿರಲಿಲ್ಲ” ಯುಜಿ ಯವರು ಮುಂದುವರೆದು ‘ಅಲೋಚನೆ’ ಎಂಬ ಕ್ರಿಯೆಯನ್ನೇ ನಿರಾಕರಿಸುತ್ತಾರೆ. ಆದರೂ, ಸ್ವಯಂ ಕಲಿಕೆ ಎನ್ನುವುದೊಂದಿದೆ ಎಂಬುದನ್ನೂ ಮರೆತು, ಮೆದುಳನ್ನು ಅಡವಿಟ್ಟುಕೊಂಡು ಬದುಕುತ್ತಿರುವವರಿಗೂ  ಯುಜಿಯವರ ಮಾತುಗಳು ಅನ್ವಯಿಸುತ್ತವೆ.

(ಲೇಖಕರು ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು)

ಆ ಫೋಟೋ ಫ್ರೇಮ್ ಒಡೆಯಲಿ
ʼಯುವ ನೋಟʼ  ಜಗತ್ತಿನ ಆಗು ಹೋಗುಗಳ ಕಡೆಗೆ ಬೆರಗು ಕಣ್ಣಿಂದ ನೋಡುತ್ತಾ ತಮ್ಮ ಲೋಕ ದೃಷ್ಟಿಯನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿರುವ ಯುವ ಜನರಿಗೆ ಪೀಪಲ್‌ ಮೀಡಿಯಾ ಒದಗಿಸಿರುವ ವೇದಿಕೆ. ಬರವಣಿಗೆ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡಲು ಆಶಿಸುವವರಿಗೂ ಈ ವೇದಿಕೆ ಮುಕ್ತವಾಗಿದೆ. ಈ ಅಂಕಣದ ಮೊದಲ ನೋಟ ಗುರು ಸುಳ್ಯ ಅವರದು.

“ಇನ್ನು ಮುಂದೆ ನನ್ನ ಬಯಾಲೋಜಿಕಲ್ ತಂದೆಯ ಜೊತೆ ನನಗೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಮತ್ತು ನನ್ನ ಹೆಸರನ್ನು ನನ್ನಿಷ್ಟದಂತೆ ಬದಲಾಯಿಸಿಕೊಂಡು, ನನ್ನ ತಾಯಿಯ ಹೆಸರನ್ನು ಸರ್ ನೇಮ್ ಆಗಿ ಇಟ್ಟುಕೊಳ್ಳುತ್ತೇನೆ. ಇದಕ್ಕಾಗಿ ಕಾನೂನಿನ ಅನುಮತಿ ಕೋರುತ್ತೇನೆ ಮತ್ತು ಈ ಮೂಲಕ ನನಗೆ ಹೊಸ ಜನ್ಮಪ್ರಮಾಣ ಪತ್ರ ನೀಡಬೇಕಾಗಿ ವಿನಂತಿಸುತ್ತೇನೆ”. ಇದು ಮನುಷ್ಯರ ದುಡ್ಡಿನ ಲೋಕದ ಅತಿ ಶ್ರೀಮಂತರಲ್ಲಿ ಒಬ್ಬನಾದ ‘ಎಲಾನ್ ಮಸ್ಕ್’ ನ ‘ಟ್ರಾನ್ಸ್‌ ಜೆಂಡರ್’ ಮಗಳು ‘ವಿವಿಯನ್ ಜೆನ್ನ ವಿಲ್ಸನ್’  ನ್ಯೂಯಾರ್ಕಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ. ನ್ಯಾಯಾಲಯ ಇದನ್ನು ಮಾನ್ಯ ಮಾಡಿದೆ ಕೂಡ. ಈ ಘಟನೆಯನ್ನು ಉಲ್ಲೇಖಿಸಿದ್ದು, ನಮ್ಮ ಕುಟುಂಬ ಎನ್ನುವ ಪರಿಕಲ್ಪನೆ, ಒಡೆಯದೆಯೇ ಜಡ್ಡುಗಟ್ಟಿರುವ ಅದರ ಕಟ್ಟುಪಾಡುಗಳ ಬಗ್ಗೆ ಅಲೋಚಿಸಲಿ ಎಂಬ ಕಾರಣಕ್ಕಾಗಿ. ಅನುಕೂಲಸ್ಥರ ಮನೆಗಳಲ್ಲಿ ಇವೆಲ್ಲವು ನಡೆಯುತ್ತದೆ ಎಂದು ನೀವು ಅನ್ನಬಹುದು. ಆದರೆ ಪ್ರತಿ ಮನೆಯ, ಪ್ರತಿ ಮನುಷ್ಯರಿಗೂ ತಮ್ಮ ಬದುಕನ್ನು ರೂಪಿಸಿಕೊಳ್ಳುವ, ಬದುಕುವ ಹಕ್ಕಿದೆ ಅಲ್ವೇ ? ‘ಬಡವ ಮಡುಗಿದಂಗಿರು’ ಅನ್ನೋ ಕ್ರೂರವಾದ ನುಡಿಗಟ್ಟುಗಳು ಮೇಲ್ವರ್ಗದವರ ಕೊಡುಗೆಗಳು.  ಇದನ್ನು ಒಡೆದು ಬಾಳಬೇಕಾದುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ.

ನಮ್ಮ ಸಮಾಜ ಮತ್ತದರ ನಾಯಕರುಗಳು, ನಮ್ಮ ಮನೆ ಮತ್ತದರ ಯಜಮಾನರುಗಳ ಮುಂದುವರಿಕೆಯಾಗಿಯೇ ಇರುವಂತದ್ದು. ನಮ್ಮ ಸರಕಾರಗಳು, ಸ್ವಾಯತ್ತ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ವ್ಯಾಪಾರ ವಹಿವಾಟುಗಳು ಪುರುಷಾಧಿಪತ್ಯದ ಉಕ್ಕಿನ ಕೈಗಳಲ್ಲಿಯೇ ಇವೆ. ಹೀಗಿರುವಾಗ ಎಲ್ಲವೂ ಸರಿಯಾಗಿದೆ ಅನ್ನುವಂತೆ ಬದುಕೋದು ಯಾಕೆ ಸಾಧ್ಯವಾಗ್ತಿದೆ ? ನಮ್ಮ ನಮ್ಮ ಮನೆಗಳಲ್ಲಿ ಸಮಾನತೆ ಬೇಕೆಂಬ ಅಲೋಚನೆ ಕನಿಷ್ಠ ಪಕ್ಷ ಸಂವಿಧಾನದ ಅರಿವು ಇರುವವರಿಗಾದರು ಬರಬೇಕಲ್ಲವೆ?  ತಂದೆ-ತಾಯಿ, ಯಂತ್ರದಂತ ಕೆಲಸ, ತಂದೆ ತಾಯಿಯರ ಋಣ ತೀರಿಸಲು ಎಂಬಂತೆ ಬೆಳೆಸಲ್ಪಡುವ ಮಕ್ಕಳು, ಅವರ ಮದುವೆ ಮತ್ತು ಇವಕ್ಕೆಲ್ಲಾ ಅಂಟಿಸಿಕೊಂಡಿರುವ ಸೆಂಟಿಮೆಂಟ್ ಇವುಗಳಲ್ಲೇ ಮುಳುಗಿ ಹೋದರೆ ಹೇಗೆ!. ಪೂರ್ತಿ ಜಗತ್ತು ವಿಕಸನಗೊಳ್ಳುತ್ತಲೇ ಇದೆ ಎಂಬುದು ಆಧಾರಗಳೊಂದಿಗೆ ವಿಜ್ಞಾನ ಕಂಡುಕೊಂಡಿರುವ ಸತ್ಯ. ಇವನ್ನೆಲ್ಲಾ ಅನ್ವೇಷಿಸಿ ಪತ್ತೆ ಹಚ್ಚಿರುವ ಮನುಷ್ಯರು ಮತ್ತು ನಮ್ಮ ಮೆದುಳು ಕೂಡ ಈ ವಿಕಸನದ ಭಾಗ. ವಿಜ್ಞಾನವೆಂದರೆ ನಮಗೆ ಸಂಬಂಧವಿರದ ಯಾರೋ ಅನ್ವೇಷಿಸುವ ನಿಗೂಢ ಕ್ರಿಯೆಯೇನಲ್ಲ. ಮೊದ ಮೊದಲು ಮಡಿಕೆ ಕಂಡು ಹಿಡಿದ ಮನುಷ್ಯರು ಕೂಡ ವಿಜ್ಞಾನಿಗಳೇ.

ನಮ್ಮ ಇತಿಹಾಸ, ಅನುಭವ, ಬಾಲ್ಯದ trauma ಗಳು ನಮ್ಮನ್ನು ರೂಪಿಸಿದಂತೆಯೇ, ಮನುಷ್ಯ ಬುದ್ಧಿ-ಭಾವಗಳು ನಿತ್ಯ ಹೊಸತಾಗುತ್ತಿರುವುದನ್ನು ಅರಿಯಬೇಕು; ತೆರೆದುಕೊಳ್ಳಬೇಕು. ಮನುಷ್ಯರು ‘ಬದುಕು’ ಎಂದು ಏನನ್ನು ವೈಭವವೀಕರಿಸುತ್ತಾರೋ, ಅದು ಜೀವ ವಿಕಾಸದ ಭಾಗವಷ್ಟೇ. ಆದ್ದರಿಂದ, ಕನಿಷ್ಠ ಜೀವಶಾಸ್ತ್ರದ ಪಾಠಗಳನ್ನು ಪೋಷಕರಾಗುವ ಮೊದಲು ಕಲಿಯಬೇಕು. ಆ ಮೂಲಕ ಬೇರೆಯದೆ ಜಗತ್ತನ್ನು ಒಳಗಿಟ್ಟುಕೊಂಡು ಬೆಳೆಯುವ ನಮ್ಮ ಮಕ್ಕಳನ್ನು ವಿಶಾಲವಾಗಿ ಪ್ರೀತಿಸುವುದು, ಬೆಂಬಲಿಸುವುದು ಸಾಧ್ಯವಾಗಬೇಕು. ಸಂಘ ಜೀವಿಗಳಾದ ಮಾನವರು ಗುಂಪುಗಳಾಗಿಯೇ ಬದುಕುವವರು. ಆದರೆ, ಆ ಗುಂಪುಗಳು ಬದಲಾಗುತ್ತಾ ಹೋಗುತ್ತವೆ. ತಾಯಿಯೇ ಪ್ರಧಾನವಾಗಿದ್ದ ಗುಂಪುಗಳಲ್ಲಿ ವಾಸಿಸುತ್ತಿದ್ದ, ಜೊತೆಯಲ್ಲಿ ಬದುಕುವವರೆಲ್ಲರ ಪೋಷಣೆಯಲ್ಲಿ ಬೆಳೆಯುತ್ತಿದ್ದವರು ಮಕ್ಕಳು. ಬಹುಶಃ ಸ್ಥಿರ ಕೃಷಿ ಪದ್ಧತಿಯ ನಂತರದ ದಿನಗಳಲ್ಲಿ ಹೆಚ್ಚು ಪುರುಷ ಪ್ರಧಾನವೂ, ವ್ಯಕ್ತಿ ಸ್ವಾತಂತ್ರ್ಯ ಹರಣವೂ ಆದ ಕುಟುಂಬಗಳಾಗಿ ಬದಲಾಯಿತು. ಆ ರೀತಿಯಲ್ಲಿ ಮಣ್ಣು ಮತ್ತು ಹೆಣ್ಣು ಎರಡರ ಮೇಲೂ ಅತ್ಯಾಚಾರಗಳು ನಿರಂತರವಾದುವು.

ಮನುಷ್ಯರ ನಡುವೆ ಹಲವು ತೆರನಾದ ಆಕರ್ಷಣೆಗಳು, ಅನಾಕರ್ಷಣೆಗಳು ಇವೆ. ಪ್ರೇಮ ಮತ್ತು ಕಾಮಕ್ಕೆ ಪರಿಧಿಯನ್ನು ನಿರ್ಧರಿಸಲಾಗುವುದಿಲ್ಲ.  ಪ್ರೇಮ, ಕಾಮ, ಹಂಚುವಿಕೆ, ಹೊಣೆಗಾರಿಕೆ, ಬೆಂಬಲ, ಸ್ಥೈರ್ಯ ಎಲ್ಲವನ್ನೂ ಒಂದರಲ್ಲಿ ಗಂಟುಹಾಕಿ ಮದುವೆ, ಕುಟುಂಬ ಎಂದು ಹಾಕುವ ಚೌಕಟ್ಟು ಸರಿಯಾದುದಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಆಲೋಚಿಸಿದರೆ ಅರ್ಥವಾಗುವಂತದ್ದು. ಆದರೆ ಈಗಾಗಲೇ ಬಹುದೊಡ್ಡ ಹಗರಣವಾಗಿ ಬೆಳೆದಿರುವ ಮುಖ ಮತ್ತು ದೇಹ ಸೌಂದರ್ಯವೆಂಬ ಭ್ರಮೆಯನ್ನು, ಆರ್ಥಿಕ ಅಸಮಾನತೆಯ ಕರಾಳತೆಯನ್ನು ಕಿತ್ತು ಹಾಕುವುದು ಅಷ್ಟು ಸುಲಭವೂ ಅಲ್ಲ. ಅದರ ಭಾಗವಾಗಿಯೇ ಮದುವೆಯ ಸಂಕೋಲೆಗೆ ಕೊರಳೊಡ್ಡುವ ಪದ್ಧತಿ ನಿರಂತರವಾಗಿ ಸಾಗಿದೆ. ಬ್ರಾಹ್ಮಣ್ಯದ ಕಡುವಿರೋಧಿಗಳು, ಸ್ತ್ರೀ ಸಮಾನತೆಯ ಹರಿಕಾರರು ಕೂಡ ‘ಮಂತ್ರ ಮಾಂಗಲ್ಯ’ ಕ್ಕೆ ಗಂಟು ಬಿದ್ದಿರುವುದು ಯಾಕೋ ಅರ್ಥವಾಗುತ್ತಿಲ್ಲ. ಮಂತ್ರಗಳು ಸಾಯಿಸಿದ ಜೀವಗಳು, ಮಾಂಗಲ್ಯದ ನೇಣಲ್ಲಿ ಬಿದ್ದು ಸತ್ತವರು, ಇನ್ನೂ ಸಾಯುತ್ತಿರುವವರು ಕಾಣುತ್ತಿಲ್ಲವೇ ! ವಿವಾಹ ಮತ್ತು ವಿಚ್ಛೇದನ ಎರಡನ್ನು ಸಮವಾಗಿ ಕಾಣುವುದಾದರು ಸಾಧ್ಯವೇ ಎಂದರೆ, ಅದೂ ಇಲ್ಲ.

ಭಾರತದಲ್ಲಿ ತಮ್ಮ ‘ಜೆಂಡರ್’ ಮತ್ತು ‘ ಸೆಕ್ಷ್ಯುವಲ್ ಓರಿಯಂಟೇಷನ್’ ಕಾರಣವಾಗಿ, ಸರಿಯಾದ ವಿದ್ಯಾಭ್ಯಾಸವು ದೊರೆಯದೆ ಮನೆ ಬಿಟ್ಟು ಓಡಿ ಹೋಗುವವರು ಅದೆಷ್ಟೋ ಮಂದಿ. ‘ಲಿಂಗ ಬದಲಾವಣೆ’ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಾಗ ಕಳಪೆ ಡಾಕ್ಟರುಗಳ ಕಾರಣವಾಗಿ ಮೈಯೆಲ್ಲಾ ನೋವಿನ ಮುದ್ದೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರುವ ಹಲವಾರು ಜೀವಗಳಿವೆ ಇಲ್ಲಿ. ಕಳೆದ ವರ್ಷ ಕೇರಳದಲ್ಲೆಲ್ಲಾ ಸುದ್ದಿಯಾದ, ಚುನಾವಣೆಗೂ ನಿಂತಿದ್ದ ‘ಅನನ್ಯ ಕುಮಾರಿ ಅಲೆಕ್ಸ್” ಳ ಆತ್ಮಹತ್ಯೆ ಇದಕ್ಕೆ ಒಂದು ಉದಾಹರಣೆ ಅಷ್ಟೇ. ಅದೇ ರೀತಿ ಲೆಸ್ಬಿಯನ್, ಗೇ, ಬೈ ಸೆಕ್ಷ್ಯುವಲ್ ಜೋಡಿಗಳನ್ನು ನಮ್ಮ ಸಮಾಜ ಹಿಂಸಿಸುತ್ತಿರುವುದು ನಡೆದೇ ಇದೆ. ಈ ಹಿನ್ನೆಲೆಯಲ್ಲಿ ನೋಡಿದರೂ ‘ಗಂಡಿಗೊಂದು ಹೆಣ್ಣು’ ಎನ್ನುವ ಮದುವೆಯ ಸಂಪ್ರದಾಯ ಅರ್ಥಹೀನವಾಗಿಯೇ ಕಾಣುತ್ತದೆ.

ದೇಹದ ವ್ಯವಹಾರದಲ್ಲಿ ತೊಡಗುವ ಮುನ್ನ ದೇಹಕ್ಕೆ ತಗುಲುವ ರೋಗಗಳ ಬಗ್ಗೆ, ಒಪ್ಪಿಗೆಯ ಬಗ್ಗೆ, ಗರ್ಭಧಾರಣೆಯ ಬಗ್ಗೆ, ಪರಸ್ಪರರ ದೇಹಗಳ ಬಗ್ಗೆ  ತಿಳುವಳಿಕೆ ಇರಬೇಕಾದದ್ದು ಈ ಕಾಲದ ಸಹಜ ಅಗತ್ಯ. ಅದರಲ್ಲೂ ಹೆಣ್ಣು ದೇಹಕ್ಕೆ ಪ್ರಕೃತಿದತ್ತವಾಗಿ ಹೆಚ್ಚಿನ ಹೊರೆ ಮತ್ತು ನೋವು ದಕ್ಕಿದೆ (ಇದನ್ನು ಸೌಭಾಗ್ಯವೆಂದು, ಹೆಣ್ತನದ ಔನ್ನತ್ಯವೆಂದು ಕೊಂಡಾಡುವವರಿಗೇನು ಕಮ್ಮಿಯಿಲ್ಲ). ವಯಸ್ಸುಗಳನ್ನು ಮೀರಿ ಹೆಣ್ಣು, ಗಂಡು, ಟ್ರಾನ್ಸ್‌ ಜೆಂಡರ್ ಇಂಟರ್ ಸೆಕ್ಸ್ –  ಎಲ್ಲಾ ತರದ ಮನುಷ್ಯರ ನಡುವೆ ವಿವಿಧ ರೀತಿಯ ಬಂಧಗಳು ಸಂಭವಿಸುತ್ತವೆ. ನೆನಪಿಡಿ – “ಹೆತ್ತರಷ್ಟೇ ತನ್ನ ಮಗು ಆಗುವುದಿಲ್ಲ. ಕುಟುಂಬ ಎಂದರೆ ರಕ್ತ ಸಂಬಂಧಿಗಳಾಗಿರಬೇಕು ಎಂದೇನು ಇಲ್ಲ”. ಹೀಗಿಲ್ಲದೆ ಹೋದರೆ ಎಲ್ಲವೂ ಉಲ್ಟಾಪಲ್ಟಾ ಆಗುತ್ತದೆ ಎಂದು ಭ್ರಮೆಯಲ್ಲಿರಬೇಡಿ. ಜವಾಬ್ದಾರಿಯೆಂಬುದು ಸಂಪ್ರದಾಯಗಳ ಕಟ್ಟುಪಾಡುಗಳಲ್ಲಿ ಪರೋಕ್ಷವಾಗಿ ಬಂಧಿಸಿಡುವಂತದ್ದಲ್ಲ. ಲೈಸೆನ್ಸ್ ಇರುವ ಸಲ್ಮಾನ್ ಖಾನ್ ನಂತವರು ಎರ್ರಾಬಿರ್ರಿ ಗಾಡಿ ಓಡಿಸಿ ಕೊಲೆ ಮಾಡಬಲ್ಲರು. ಲೈಸೆನ್ಸ್ ಇಲ್ಲದಿರುವ ಟೀನೇಜ್ ಹುಡುಗಿ ತುಂಬಾ ಜಾಗರೂಕಳಾಗಿ ಗಾಡಿ ಚಲಾಯಿಸಬಲ್ಲಳು; ಮನುಷ್ಯರು ಯಂತ್ರಗಳಲ್ಲ ಎಂಬುದಷ್ಟೇ ಮುಖ್ಯ. ಇದೆಲ್ಲದರಾಚೆಗೂ ಮನುಷ್ಯರು ಅದಾಗಲೇ ಭೂಮಿಗೆ ಮಾರಕವಾಗಿ ಆಗಿದೆ. ಜ್ಞಾನ, ವಿಜ್ಞಾನ, ಪ್ರೇಮಗಳು ನಮಗೆ ನಮ್ಮ ಸರಕಾರ, ಶಾಲೆಗಳು ತಲುಪಿಸಿರುವುದಕ್ಕಿಂತಲೂ ಹೆಚ್ಚು ವಿವರಗಳೊಂದಿಗೆ ಮಾನವ ಸಂಕುಲದ ನಡುವೆ ಲಭ್ಯವಿದೆ. ಅಲ್ಪ ಬುದ್ಧಿಯವರಾಗದೇ, ಬುದ್ಧಿವಂತಿಕೆಯ ಅಹಮ್ಮುಗಳನ್ನು ಹೊಂದದೆ, ಅರಿವು ಹಂಚೋಣ. ನಮ್ಮ ಮುಖಗಳು ಫ್ಯಾಮಿಲಿ ಫೋಟೋ ಫ್ರೇಮಿನೊಳಗೆ ಕಾಣುವಷ್ಟು ನೀರಸವು, ಸಂತುಷ್ಟವು ಆದುದಲ್ಲ. ನಾವು ಆ ಫ್ರೇಮಿನ ಒಳಗೆ ಕೂರಿಸಲ್ಪಟ್ಟವರು ಅಷ್ಟೇ. ಆದ ಕಾರಣ ಆ ಫ್ರೇಮ್ ಒಡೆಯಲಿ, ಪ್ರೀತಿ ಹರಿಯಲಿ.

ಗುರು ಸುಳ್ಯ
ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.