H S Anupama – Peepal Media

ಮಣಿಪುರ: ಕೆಲವು ಹೆಣ್ಣು ಪ್ರಶ್ನೆಗಳು
ನಮಗಿನ್ನೂ ಭರವಸೆಗಳಿವೆ. ಬದುಕುಳಿದು ಬಂದ ಕೆಲ ಕುಕಿಗಳು ಹೇಳುತ್ತಿರುವಂತೆ ನಾಗಾ, ಪಂಗಲ್, ಮೈತಿಗಳೂ ಸಹಾ ಕೆಲವು ಕುಕಿ ಕುಟುಂಬಗಳಿಗೆ ಆಶ್ರಯ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಮತ್ತೆ ಕೆಲವರು ರಿಸ್ಕ್ ತೆಗೆದುಕೊಂಡು ತಪ್ಪಿಸಿಕೊಂಡು ಹೋಗಲು, ಅಡಗಿಕೊಳ್ಳಲು ಸಹಾಯ ಮಾಡಿದ್ದಾರೆ. ಹೆಣ್ಣು ಮತ್ತು ಹಿಂಸೆ ವಿರುದ್ಧ ಪದಗಳು. ನಾವೇನಿದ್ದರೂ ಪ್ರೇಮಿಸುವವರು, ಪ್ರಶ್ನಿಸುವವರು, ಪೊರೆಯುವವರು. ಇದು ಎಲ್ಲ ಮಹಿಳೆಯರ ಕಣ್ಣರಿವಾಗಲಿ – ಡಾ. ಎಚ್ ಎಸ್‌ ಅನುಪಮಾ, ವೈದ್ಯರು, ಲೇಖಕರು

ನಮಗೆ ಮಹಿಳೆಯರಿಗೆ ಮಣಿಪುರದ ಪ್ರಸಕ್ತ ಪರಿಸ್ಥಿತಿಯು ಹಲವು ಕಾರಣಗಳಿಂದ ಒಳಬೇಗುದಿಯಾಗಿ ಕಾಡತೊಡಗಿದೆ. ಕಣ್ಣಲ್ಲಿ ನೀರಲ್ಲ, ರಕ್ತ ಹರಿಯುವಷ್ಟು ಭಯಾನಕವಾದ ಆ ವೀಡಿಯೋ ನೋಡಿದ ಬಳಿಕ ಹೆಣ್ಣುಮನಸುಗಳು ಶಾಂತವಾಗಿ ಯೋಚಿಸಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಸಾವಿರದಷ್ಟು ಗಂಡಸರ ಮನಸ್ಸುಗಳಲ್ಲಿ ಇಬ್ಬರು ಹೆಣ್ಣುಗಳನ್ನು ಹಾಗೆ ಬತ್ತಲೆಗೊಳಿಸಿ ಎಳೆದೊಯ್ಯುವ, ಅದನ್ನು ಚಿತ್ರೀಕರಿಸಿ ಹಂಚಿಕೊಳ್ಳುವ ಕ್ರೌರ್ಯ ಹುಟ್ಟಿದ್ದು ಹೇಗೆ? ಮೊದಲು ಮೈತಿ ಮಹಿಳೆಯರನ್ನು ಕುಕಿ ಗಂಡಸರು ರೇಪ್ ಮಾಡುವ ವೀಡಿಯೋಗಳು ಹರಿದಾಡಿದವಂತೆ! ಅದನ್ನು ಕಂಡು ಕೆರಳಿ ಮೈತಿ ಗಂಡಸರು ಕುಕಿ ಹೆಣ್ಣುಗಳನ್ನು ತಂದು ಅತ್ಯಾಚಾರ ಮಾಡಿ ಸೇಡು ತೀರಿಸಿದರಂತೆ!! ತಮ್ಮ ಹೆಣ್ಣುಗಳು ನೊಂದಿದ್ದಕ್ಕೆ ಬಹುಮಾನವಾಗಿ ಅನ್ಯ ಹೆಣ್ಣುಗಳನ್ನು ನೋಯಿಸುವುದು, ಅಲಲಾ! ಯಾವುದಕ್ಕೆ ಯಾವುದು ಉತ್ತರ?! ನಾವು ಕೇಳಿದ ಕಥೆಯ ದ್ರೌಪದಿಗೆ ಆದಂತೆ ನಿಜಜೀವನದಲ್ಲಿ ಯಾವ ದೇವರೂ ಅತ್ಯಾಚಾರವಾಗುತ್ತಿರುವ ಮಹಿಳೆಗೆ ಬಟ್ಟೆ ಹೊದಿಸಿ ಅತ್ಯಾಚಾರಿಗಳ ಸಂಹಾರ ಮಾಡಲು ಬರುವುದಿಲ್ಲ ನಿಜ. ಆದರೆ ಪ್ರಜಾಪ್ರಭುತ್ವ ಭಾರತದ ಮಣಿಪುರದಲ್ಲಿ ಕೊನೆಯಪಕ್ಷ ಹೆಂಗಸರೂ ಅವರ ನೆರವಿಗೆ ಬರಲಿಲ್ಲವೇ? ಅತ್ಯಾಚಾರ ಮಾಡುವ ತಮ್ಮ ಗಂಡಸರನ್ನು ಮೈತಿ ಮಹಿಳಾ ಸಂಘಟನೆ `ಮೈರಾ ಪೈಬಿ’ಯಾದರೂ ತಡೆಯಬಹುದಿತ್ತಲ್ಲವೆ? ಹೆಣ್ಣುಗಳೂ ಅಸ್ಮಿತೆಯ ಕುರುಡಿಗೆ ಬಲಿಯಾಗಿ ಮತ್ತೊಂದು ಹೆಣ್ಣಿನ ಸಹಾಯಕ್ಕೆ ಧಾವಿಸದಿರುವ ಸಂದರ್ಭಗಳು ಏಕೆ ಮತ್ತೆಮತ್ತೆ ಪುನರಾವರ್ತನೆ ಅಗುತ್ತಿರುವ ಕಟುವಾಸ್ತವಗಳಾಗಿವೆ? ಇವೇ ಮುಂತಾದ ಸಂಕಟದ ಪ್ರಶ್ನೆಗಳು ಮಹಿಳಾ ಮನಸ್ಸುಗಳನ್ನು ಸುಡತೊಡಗಿವೆ. `ಸ್ತ್ರೀವಾದಿಗಳೇ ನೋಡಿ, ಮಹಿಳಾ ಸಂಘಟನೆಗಳ ಮನಸ್ಥಿತಿ’ ಎಂಬ ಕುಹಕದ ಮಾತುಗಳು ಎದ್ದು ಬರುತ್ತಿವೆ. ಬೆಂಕಿಗೆ ತುಪ್ಪ ಸುರಿವಂತೆ ಹೊಸಹೊಸ ಅಪ್ಡೇಟ್‍ಗಳು ಬರುತ್ತಿವೆ.

ಜೂನ್ 20, 2023. ಶಸ್ತ್ರಾಸ್ತ್ರ ಹೊಂದಿದ್ದ ಆಧಾರದ ಮೇಲೆ ನಾಲ್ವರು ಮೈತಿ ತರುಣರನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸೇನಾವಾಹನವನ್ನು ತಡೆಗಟ್ಟಿ ಮೈರಾ ಪೈಬಿ ಮಹಿಳೆಯರು ಅವರನ್ನು ಬಿಡುಗಡೆ ಮಾಡಿಸಿದರು. ಜೂನ್ 24, 2023. 1,200 ಮೈತಿ ಮಹಿಳೆಯರು ಪೂರ್ವ ಇಂಫಾಲದ ಇತ್ತಮ್ ಊರಿನ ರಸ್ತೆಯಲ್ಲಿ ಸೇನಾವಾಹನವನ್ನು ತಡೆಗಟ್ಟಿದರು. `ದ ಕ್ವಿಂಟ್’ ಮಾಡಿದ ವರದಿಯಂತೆ ಆ ವಾಹನದಲ್ಲಿ ನಿಷೇಧಿತ ಉಗ್ರ ಸಂಘಟನೆಯ 12 ಮೈತಿ ತರುಣರಿದ್ದು ಅವರನ್ನು ಬಿಡಬೇಕೆನ್ನುವುದು ಆ ಮಹಿಳೆಯರ ಒತ್ತಾಯವಾಗಿತ್ತು. 21 ಜುಲೈ, 2023. ಪೂರ್ವ ಇಂಫಾಲ ಜಿಲ್ಲೆಯಲ್ಲಿ 18 ವರ್ಷದ ತರುಣಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಬಳಿಕ ಆಕೆ ಮೈರಾ ಪೈಬಿ ಹೆಂಗಸರು ನಾಲ್ವರು ಶಸ್ತ್ರಧಾರಿಗಳಿಗೆ ತನ್ನನ್ನು ಒಪ್ಪಿಸಿದರು ಎಂದು ಹೇಳಿದಳು. `ದಿ ಕ್ಯಾರವಾನ್’ನಲ್ಲಿ ಕರಣ್ ಥಾಪರ್‌ರೊಂದಿಗಿನ ಸಂದರ್ಶನದಲ್ಲಿ ಸಂತ್ರಸ್ತರಾಗಿ ಎದ್ದುಬಂದ ಇಬ್ಬರು ಕುಕಿ ಮಹಿಳೆಯರು ಮೈರಾ ಪೈಬಿ ಮಹಿಳೆಯರೇ ತಮ್ಮ ಸಮುದಾಯದ ಪುರುಷರು ಕುಕಿ ಮಹಿಳೆಯರ ಮೇಲೆ ಅತ್ಯಾಚಾರ, ಹಿಂಸೆ ನಡೆಸಲು ಪ್ರಚೋದಿಸುತ್ತಾರೆ ಎಂದು ಆರೋಪಿಸಿದರು. ಊರು ಬಿಟ್ಟು ಬೇರೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಕುಕಿ ಗುಂಪಿನ ಮೇಲೆ ದಾಳಿ ಮಾಡಿ ಕೊಲೆ, ಲೂಟಿ, ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವಾಗಲೂ ಇದೇ ಪುನರಾವರ್ತನೆಯಾಯಿತು.

ಮೈತಿ ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ ಎಂದು ಹರಡಿದ ಸುಳ್ಳುಸುದ್ದಿಯೇ ಅದಕ್ಕೆ ಕಾರಣ ಎಂದು ಈಗ ಹೇಳಲಾಗುತ್ತಿದೆ. ಆಗ ಹರಡಿದ ಸುಳ್ಳು ಸುದ್ದಿಗಳಿವು:

1. ಚುರಾಚಾಂದಪುರದಲ್ಲಿ ಮೇ 3ರಂದು ಮೈತಿ ಸಮುದಾಯದ ನರ್ಸ್ ಒಬ್ಬಳ ಮೇಲೆ ಕುಕಿ ಪುರುಷರಿಂದ ಅತ್ಯಾಚಾರವಾಗಿದೆ. (ಬಳಿಕ ಆಕೆಯ ತಂದೆಯೇ ಮಾಧ್ಯಮದೆದುರು ಅದು ಸುಳ್ಳುಸುದ್ದಿ ಎಂದು ತಿಳಿಸಿದ.)

2. ಅದೇ ಸಮಯದಲ್ಲಿ 37 ಮೈತಿ ಮಹಿಳೆಯರ ಪೋಸ್ಟ್ ಮಾರ್ಟಂ ವರದಿ ಹರಿದಾಡಿತು. ಮಣಿಪುರದ ಶಿಜಾ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ನಡೆಯಿತೆಂದೂ, ಅದರ ಪ್ರಕಾರ ಆ ಮಹಿಳೆಯರ ಮೇಲೆ (ಕುಕಿಗಳಿಂದ) ಅತ್ಯಾಚಾರವಾಗಿದೆ ಎಂಬ ಸುದ್ದಿ ವೈರಲ್ ಆಯಿತು. (ಬಳಿಕ ಆ ಆಸ್ಪತ್ರೆಯೇ ತಾನಂತಹ ಪರೀಕ್ಷೆ ನಡೆಸಿಯೂ ಇಲ್ಲ, ವರದಿಯನ್ನೂ ನೀಡಿಲ್ಲ ಎಂದು ಅಲ್ಲಗಳೆಯಿತು)

3. ಗುಡ್ಡಗಾಡು ಪ್ರದೇಶವೊಂದರಲ್ಲಿ ಮೈತಿ ಮಹಿಳೆಯ ಅತ್ಯಾಚಾರ ನಡೆಯುತ್ತಿರುವ ದೃಶ್ಯ ಎಂದು ವೀಡಿಯೋ ವೈರಲ್ ಆಯಿತು. ದೆಹಲಿಯ ಮೈತಿ ಪ್ರತಿಭಟನಾಕಾರರೂ ಅದನ್ನು ಪ್ರದರ್ಶಿಸಿದರು. (ಆದರೆ ಅದು ಅರುಣಾಚಲ ಪ್ರದೇಶದ ಕೌಟುಂಬಿಕ ದೌರ್ಜನ್ಯವೊಂದರ ಫೇಸ್ಬುಕ್‍ನ ಹಳೆಯ ಪೋಸ್ಟ್ ಆಗಿತ್ತು.) ಆದರೆ ಇವೆಲ್ಲ ಸುಳ್ಳೋ, ನಿಜವೋ ತಿಳಿಯುವುದರೊಳಗೆ ಕಾಡ್ಗಿಚ್ಚು ಹೊತ್ತಿಕೊಂಡಿತು. ನಂದಿಸುವುದು ಅಸಾಧ್ಯವೋ ಎಂಬಂತೆ ಅದೀಗ ಧಗಧಗಿಸಿ ಉರಿಯುತ್ತಿದೆ.

ಈ ಕೋರೈಸುವ ಬೆಂಕಿ ಬೆಳಕಲ್ಲಿ ಮೈರಾ ಪೈಬಿ ಎಂಬ ಮಹಿಳಾ ಸಂಘಟನೆಯ ಹೆಣ್ಣು ಕಣ್ಣ ದೀಪ ಮಂಕಾದಂತೆ ಕಾಣಿಸುತ್ತಿದೆ.

ಶತಮಾನಗಳ ಇತಿಹಾಸವಿರುವ ಮೈರಾ ಪೈಬಿ ಎಂಬ ಮಹಿಳಾ ಸಂಘಟನೆ ಎಂತಹ ಹಿನ್ನೆಲೆಯಿರುವಂತಹುದು ಗೊತ್ತೆ?

ನವೆಂಬರ್ 2, 2000ನೇ ಇಸವಿಯಿಂದ 15 ವರ್ಷಗಳ ಕಾಲ `ಸಶಸ್ತ್ರ ಪಡೆಗಳ ವಿಶೇಷಾಧಿಕಾರ’ ರದ್ದು ಪಡಿಸಿ ಎಂದು ಉಪವಾಸ ಕುಳಿತ ಇರೋಂ ಶರ್ಮಿಳಾ ಚಾನು ಒಬ್ಬ ಮೈರಾ ಪೈಬಿ ಮಹಿಳೆ. 2004, ಜುಲೈ 15. `ಇಂಡಿಯನ್ ಆರ್ಮಿ, ರೇಪ್ ಅಸ್’, `ಇಂಡಿಯನ್ ಆರ್ಮಿ, ಟೇಕ್ ಅವರ್ ಫ್ಲೆಶ್’ ಎಂದು ಭಾರತೀಯ ಸಶಸ್ತ್ರ ಪಡೆಗಳು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯ ಖಂಡಿಸಿ, ತಂಗ್ಜಂ ಮನೋರಮಾ ಎಂಬ ಯುವತಿಯ ಮೇಲೆಸಗಿದ್ದ ಘನಘೋರ ಅತ್ಯಾಚಾರ-ಕೊಲೆ ಖಂಡಿಸಿ, ಅಸ್ಸಾಂ ರೈಫಲ್ಸ್ ಕಚೇರಿಯ ತನಕ ಇಂಫಾಲದ ಬೀದಿಗಳಲ್ಲಿ ಬೆತ್ತಲಾಗಿ ನಡೆದ 12 ಇಮಾಗಳು (ತಾಯಂದಿರು) ಇದೇ ಮೈರಾ ಪೈಬಿಗಳೇ. ಅದಾಗಿ ಹಲವು ವರ್ಷಗಳು ಕಳೆದಿವೆ. ಕಣಿವೆಯಲ್ಲಿ ಸಾಕಷ್ಟು ಹೊಸನೀರು ಹರಿದಿದೆ. ಈಗ ಜನಾಂಗೀಯ ದ್ವೇಷವೇ ಆಧಾರವಾಗಿ ಇಷ್ಟೊಂದು ಹೆಣ್ಣುಗಳನ್ನು ಬೆತ್ತಲಾಗಿಸಿ, ಮೆರವಣಿಗೆ ಮಾಡಿ, ಅತ್ಯಾಚಾರ-ಕೊಲೆ ನಡೆಯುತ್ತಿದ್ದರೂ ಬಂಡಾಯದ ಹೆಣ್ಣು ಮನಸ್ಸುಗಳು ಮೌನವಾಗಿರುವ ತನಕ ಅಲ್ಲಿನ ಸಮಾಜೋ ರಾಜಕೀಯ ಪರಿಸ್ಥಿತಿ ಕದಡಿ ಹೋಗಿದೆ.

ಈಗ ನಮ್ಮೆಲ್ಲರಲ್ಲೂ ಒಂದೇ ಪ್ರಶ್ನೆ: ಮೈರಾ ಪೈಬಿಗಳು ಹೀಗೇಕಾದರು? ಹೆಣ್ಣುಗಳೇಕಿಷ್ಟು ಹಿಂಸಾನಂದಿಗಳಾದರು?

’ಪಂಜುಧಾರಿಣಿ’ ಮೈರಾ ಪೈಬಿ

ಮೇಲಿನ ಪ್ರಶ್ನೆಗಳ ಗಹನತೆ ಅರಿಯಲು ಮಣಿಪುರದ ಇತಿಹಾಸವನ್ನು ಅಲ್ಲಿಯ ಹೆಣ್ಣು ಬದುಕಿನ ಮೂಲಕ ಒಮ್ಮೆ ನೋಡಬೇಕು.

ಬೆಟ್ಟಕಣಿವೆಗಳ ಮಣಿಪುರದ ಜನ ಶ್ರಮಜೀವಿಗಳು. ಶತಮಾನಗಳಿಂದಲೂ ಗಂಡಸರು ಗಡಿ ಕಾಯುವುದರಲ್ಲಿ, ರಾಜ್ಯ ವಿಸ್ತರಿಸುವುದರಲ್ಲಿ ಮುಳುಗಿರುವಾಗ ಹೊಟ್ಟೆಪಾಡಿಗಾಗಿ ಬೆವರು ಹರಿಸಿದವರು ಮಹಿಳೆಯರು. `ತಾತ ಮುತ್ತಾತನಿಂದ ಜ್ಞಾನ ಸಿಗುತ್ತೆ, ಅಮ್ಮಅಜ್ಜಿ ಕಾದಿಟ್ರೆ ಮಾತ್ರ ಆಸ್ತಿ ಸಿಗುತ್ತೆ’; `ಕಟ್ಟಿಗೆ ತರೋನಷ್ಟೇ ಗಂಡ, ಉಳಿದಿದ್ದನ್ನೆಲ್ಲ ತರೋಳೇ ಹೆಂಡತಿ’ ಮುಂತಾದ ಮಣಿಪುರಿಯ ಗಾದೆಗಳೇ ಅದನ್ನು ಹೇಳುತ್ತವೆ. ಸ್ವತಂತ್ರಪೂರ್ವ ಕಾಲದಲ್ಲಿ 17ರಿಂದ 60 ವರ್ಷದೊಳಗಿನ ಗಂಡಸು ಯಾವಾಗೆಂದರೆ ಆಗ ರಾಜನ ಸೇವೆಗೆ ಲಭ್ಯವಿರಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು. ಹೆಣ್ಣುಮಕ್ಕಳೇ ಮನೆಯ ಜವಾಬ್ದಾರಿ ಹೊರುತ್ತಿದ್ದರು. ಕೌಟುಂಬಿಕ ಕೆಲಸ ಕಾರ್ಯಗಳ ಜೊತೆಗೆ ಸಂಸಾರದ ಆರ್ಥಿಕ ಹೊರೆಯನ್ನೂ ನಿಭಾಯಿಸುವಂತಾಯಿತು. ಸ್ವಾತಂತ್ರ್ಯಾನಂತರವೂ ಬಡತನ, ನಿರುದ್ಯೋಗ, ಮಾದಕದ್ರವ್ಯ ವ್ಯಸನ, ಬಂಡುಕೋರ ಸಶಸ್ತ್ರ ಗುಂಪುಗಳ ಕದನ, ಸೇನಾ ದೌರ್ಜನ್ಯ ಮುಂತಾದ ಕೊನೆಯಿಲ್ಲದ ಸಮಸ್ಯೆಗಳಲ್ಲಿ ಮಹಿಳೆಯರ ಬದುಕೂ ಮುಳುಗಿಹೋಗಿತ್ತು. ಅದಕ್ಕೆಲ್ಲ ಉತ್ತರವೋ ಎಂಬಂತೆ ಹುಟ್ಟಿಕೊಂಡದ್ದು `ಮೈರಾ ಪೈಬಿ’. (ಕನ್ನಡದಲ್ಲಿ ’ಪಂಜುಧಾರಿಣಿ’). ಎರಡು ಅಡಿ ಉದ್ದದ ಬಿದಿರ ಗಳದಲ್ಲಿ ಸೀಮೆಎಣ್ಣೆ ತುಂಬಿ ಒಳಗೊಂದು ಬಟ್ಟೆ ತುಂಡು ನೇತುಬಿಟ್ಟು ಮೇಲ್ತುದಿಯನ್ನು ಉರಿಸಿದರೆ ಬೆಂಕಿಯೂ ಅದೇ, ಬೆಳಕೂ ಅದೇ, ದಾರಿದೀಪವೂ ಅದೇ. ಬೆಂಕಿ ಹಚ್ಚಿದ ಪಂಜು `ಮೈರಾ’ ನ್ಯಾಯ ಕೇಳುವ ಹೋರಾಟದ ಸಂಕೇತ. ರಾತ್ರಿ ಹೊತ್ತಿನ ಪುರುಸೊತ್ತಿನಲ್ಲೇ ಅವರು ಸಮಾಜದ ಕೆಲಸ ಮಾಡುತ್ತಿದ್ದದ್ದರಿಂದ ಮೊದಲೆಲ್ಲ ಚಲನವಲನಕ್ಕೆ ಪಂಜು ಹಿಡಿಯುವುದು ಅನಿವಾರ್ಯವಾಗಿತ್ತು. ಅದನ್ನು ಹಿಡಿದ ಮಹಿಳೆಯರ ಸಂಘಟನೆಯೇ ಮೈರಾ ಪೈಬಿಯಾಗಿ ಬೆಳೆಯಿತು. ಅದು ಮಣಿಪುರದ ಬಹುಸಂಖ್ಯಾತ ಮೈತಿ ಮಹಿಳೆಯರ ಸಂಘಟನೆಯಾಗಿ ಬೆಳೆಯಿತು.

ಅವರ ಮೊದಲ `ಮಹಿಳಾ ಯುದ್ಧ’ (ನೂಪಿ ಲಾನ್) 1904ರಲ್ಲಿ ನಡೆಯಿತು. ಬ್ರಿಟಿಷ್ ಅಧಿಕಾರಿಗಳ ನಿವಾಸ ಕಟ್ಟಲು ಅಗತ್ಯವಿರುವ ಮರಮುಟ್ಟು ಕಡಿಯಲು ಸಮುದಾಯದ ಗಂಡಸರನ್ನು ಪುಕ್ಕಟೆ ಬಳಸಿಕೊಳ್ಳುವುದರ ವಿರುದ್ಧ ನಡೆದ ಪ್ರತಿರೋಧ ಅದು. 1939ರಲ್ಲಿ ಎರಡನೆಯ ನೂಪಿ ಲಾನ್ ನಡೆಯಿತು. ಬೆಳೆದ ಅಕ್ಕಿಯನ್ನು ಆಳ್ವಿಕರು ರಫ್ತು ಮಾಡುತ್ತಿದ್ದದ್ದರಿಂದ ಬೆಳೆದವರಿಗೇ ಅನ್ನವಿಲ್ಲವಾಯಿತು. ಕಂಗೆಟ್ಟ ಮಹಿಳೆಯರು ಸ್ಥಳೀಯ ಉತ್ಪನ್ನ ಸ್ಥಳೀಯರಿಗೇ ಸಿಗಬೇಕೆಂದು ರಾಜನಿಗೆ ಅಹವಾಲು ಸಲ್ಲಿಸಿದರು. ಅಕ್ಕಿ ಮೂಟೆಯ ಹೇರು ಗಾಡಿಗಳನ್ನು ಅಡ್ಡಗಟ್ಟಿ ವಶಪಡಿಸಿಕೊಂಡರು. ರಾತ್ರೋರಾತ್ರಿ ಅಕ್ಕಿ ಗಿರಣಿ ಲೂಟಿ ಮಾಡಿದರು.

ನೂಪಿ ಲಾನ್

ನಂತರದ ನೂಪಿ ಲಾನ್ ಅತಿ ದೀರ್ಘವಾದದ್ದು. 70-80ರ ದಶಕದಲ್ಲಿ ಮತ್ತೊಂದು ಗಂಭೀರ ಸಾಮಾಜಿಕ ಸಮಸ್ಯೆ ತಲೆದೋರಿತು. ರಾಜ್ಯದ ಯುವ ಜನತೆ ಭೂಗತ ಚಟುವಟಿಕೆಗಳು ಹಾಗೂ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡರು. ಸಾರಾಯಿ-ಹೆರಾಯಿನ್‍ಗಳಲ್ಲಿ ಮುಳುಗಿಹೋದರು. ವಿಯೆಟ್ನಾಂ ಮತ್ತು ಲಾವೋಸ್‍ನಿಂದ ಭಾರತ-ಮ್ಯಾನ್ಮಾರ್ ಗಡಿ ಮೂಲಕ ಮಣಿಪುರಕ್ಕೆ ಮಾದಕ ವಸ್ತು ಬರುತ್ತದೆ. ಹೆರಾಯಿನ್‍ನ ಅತಿ ಶುದ್ಧ ರೂಪವಾದ ನಂ.4 ಅಲ್ಲದೇ ಇನ್ನೂ ಎಷ್ಟೋ ಮಾದಕ ವಸ್ತುಗಳು ಮಣಿಪುರದಲ್ಲಿ ಸುಲಭವಾಗಿ ಸಿಗುತ್ತವೆ. ಪರಿಣಾಮವಾಗಿ ಹದಿವಯಸ್ಸಿನ ಮಾದಕ ವ್ಯಸನಿಗಳ ಸಂಖ್ಯೆ ಏರತೊಡಗಿತು. ಇದಕ್ಕೆ ಬಂಡುಕೋರ ಗುಂಪುಗಳೂ ಕಾರಣವಾದವು. ಮಣಿಪುರದಲ್ಲಿ ಏಳು ಪ್ರಬಲ ಬಂಡುಕೋರ ಗುಂಪುಗಳಿದ್ದು ಅದರಲ್ಲಿ ಕನಿಷ್ಠ ಮೂರು ಸಮಾನಾಂತರ ಸರ್ಕಾರ ನಡೆಸುತ್ತ ತಮ್ಮ `ಜನ’ರ ಮೇಲೆ ತೆರಿಗೆ ವಿಧಿಸುತ್ತವೆ. ಗುಂಪುಗಳ ನಡುವಿನ ಜಗಳ, ಒಳಜಗಳಗಳಿಂದ ಅಪಹರಣ, ಕೊಲೆ, ಲೂಟಿ ಸರ್ವೇಸಾಮಾನ್ಯವಾಗಿದೆ. ಕನಿಷ್ಠ ಮೂರು ಗುಂಪುಗಳಿಗಾದರೂ ಹಫ್ತಾ ಕೊಡದೇ ಯಾವ ಸಾರಿಗೆ ವ್ಯವಸ್ಥೆಯೂ, ವ್ಯಾಪಾರ-ವ್ಯವಹಾರವೂ ಅಲ್ಲಿ ನಡೆಯಲು ಸಾಧ್ಯವಿಲ್ಲ. ಬಂಡುಕೋರ ಗುಂಪುಗಳ ಪ್ರಮುಖ ಆರ್ಥಿಕ ಚಟುವಟಿಕೆ ಮಾದಕ ವಸ್ತು ವ್ಯವಹಾರದ ಮೇಲೇ ನಿಂತಿದೆ. ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಣಾ ಜಾಲ ಅಬಾಧಿತವಾಗಿ ಹರಡಲು ಅಧಿಕಾರಸ್ಥರು ಶಾಮೀಲಾಗಿರುವುದೂ ಕಾರಣವಾಗಿದೆ.

ಮಾದಕ ವ್ಯಸನಿಗಳು ಅದೇ ಸಿರಿಂಜುಗಳನ್ನು ಮತ್ತೆಮತ್ತೆ ಗುಂಪುಗಳಲ್ಲಿ ಬಳಸುತ್ತ ಎಚ್‍ಐವಿ ಹರಡುವಿಕೆಗೂ ಕಾರಣವಾದರು. ಮಣಿಪುರವೆಂದರೆ ಭಾರತದ ಎಚ್ಚೈವಿ ರಾಜಧಾನಿಯೆನ್ನುವಂತಾಯಿತು. 1990ರಲ್ಲಿ ಹೆರಾಯಿನ್ ಚುಚ್ಚಿಕೊಳ್ಳುವವರಲ್ಲಿ 1-2% ಎಚ್‍ಐವಿ ಬಾಧಿತರಿದ್ದದ್ದು ಕೇವಲ ಆರು ತಿಂಗಳಲ್ಲಿ 50%ಗೇರಿತು. 1997ರ ಹೊತ್ತಿಗೆ ಈ ಸಂಖ್ಯೆ 89%ಕ್ಕೇರಿತು. ಯುವ ರೋಗಿಗಳು ಅಪೌಷ್ಟಿಕತೆ, ಓವರ್‍ಡೋಸ್, ಕಾಯಿಲೆಗಳಿಂದ ತೀರಿಕೊಳ್ಳತೊಡಗಿದರು. ಇಂಥ ಹೊತ್ತಿನಲ್ಲಿ, ಒಂದೆಡೆ ರಕ್ಷಣಾ ಪಡೆಗಳು ವಿಶೇಷಾಧಿಕಾರ ಪಡೆದು ತಮ್ಮ ಗಂಡ, ಮಕ್ಕಳನ್ನು ಹಿಂಸಿಸುವಾಗ, ಸಾರಾಯಿ-ಮಾದಕ ವ್ಯಸನದಿಂದ ಕುಟುಂಬಗಳು ಒಡೆದು ಹೋಗುವಾಗ ಮಹಿಳೆಯರು ಪ್ರತಿ ಊರುಕೇರಿಯಲ್ಲೂ ಪಂಜು ಹಿಡಿದು ಹೊರಟರು.

ಮೈರಾ ಪೈಬಿಗಳು ಮನೆಮನೆಗಳಿಗೆ ತೆರಳಿದರು. ವ್ಯಸನ ಮುಕ್ತಗೊಳಿಸುವ ಕ್ಯಾಂಪುಗಳನ್ನು ನಡೆಸಿದರು. ಪ್ರತಿರಾತ್ರಿ ಹಳ್ಳಿಯ ಹೊರವಲಯದಲ್ಲೊಂದು ಚಾದರ ಹಾಸಿಕೊಂಡು ಗುಂಪುಗಳಲ್ಲಿ ಕಾಯತೊಡಗಿದರು. ಕರೆಂಟು ಕಂಬಕ್ಕೆ ಕಲ್ಲು ಕುಟ್ಟಿ ಟಣ್‍ಟಣ್ ಸದ್ದಿನಿಂದ ಎಚ್ಚರಿಸುತ್ತಿದ್ದರು. ಕುಡಿದು ಬಂದು ಹೆಂಡತಿಯನ್ನು ಹೊಡೆವ, ಮಾದಕ ವ್ಯಸನಿಗಳಾಗಿ ಬಿದ್ದುಕೊಳ್ಳುವ, ಹೆಂಗಸರನ್ನು ಹಿಂಸಿಸುವ ಗಂಡಸರನ್ನು ರಾತ್ರಿಪಾಳಿಯ ಪೈಬಿಗಳು ತಡೆಯುತ್ತಿದ್ದರು, ಬಡಿಯುತ್ತಿದ್ದರು. ಸ್ಥಳೀಯವಾಗಿ ತಯಾರಾಗುತ್ತಿದ್ದ ಸಾರಾಯಿಯನ್ನು ವಶಪಡಿಸಿಕೊಂಡು ನಾಶಗೊಳಿಸತೊಡಗಿದರು. ಶಾಂತಿಯುತ ಸಮಾಜ ಕಟ್ಟುವ ಉದ್ದೇಶ ಹೊತ್ತು ಶುರುವಾದ ನಡೆ ಕ್ರಮೇಣ ಹಳ್ಳಿಹಳ್ಳಿಗೂ ತಂತಾನೇ ಹಬ್ಬಿತು. ಇಮಾ ಚೋಬಿ ನೇತೃತ್ವದಲ್ಲಿ `ಅಖಿಲ ಮಣಿಪುರ ಮಹಿಳಾ ಅಭಿವೃದ್ಧಿ ಮತ್ತು ಸುಧಾರಣಾ ಸಮಾಜ’ವೂ ಸೇರಿದಂತೆ ಹಲವು ಮಹಿಳಾ ಗುಂಪುಗಳು ಆರಂಭವಾದವು. ಎಲ್ಲವೂ ತಮ್ಮನ್ನು `ಮೈರಾ ಪೈಬಿ’ ಎಂದೇ ಗುರುತಿಸಿಕೊಂಡವು. ಕಳ್ಳತನ, ಉಗ್ರಗಾಮಿಗಳಿಂದ ಹಣ ವಸೂಲಿ, ವಿವಾಹ ಬಾಹಿರ ಸಂಬಂಧ, ಮಾದಕ ವ್ಯಸನ, ಪ್ರೇಮಿಸಿ ಮನೆ ಬಿಟ್ಟು ಹೋಗುವುದು, ಹೆಂಡತಿಯನ್ನು ಬಿಟ್ಟು ಹೋಗುವುದು, ಸೈನ್ಯ ಕಾರ್ಯಾಚರಣೆ ಮೊದಲಾದುವುಗಳಿಂದ ಉದ್ಭವಿಸುವ ಬಿಕ್ಕಟ್ಟುಗಳನ್ನು ಬಗೆಹರಿಸತೊಡಗಿದವು.

ಒಂದು ಕಡೆ ಆಂತರಿಕ ಸ್ವಾಯತ್ತತೆಗೆ ಹೊಡೆದಾಡುವ ವಿವಿಧ ಬಂಡುಕೋರ ಗುಂಪುಗಳು, ಇನ್ನೊಂದು ಕಡೆ ಆಧುನಿಕ-ಜಾಗತಿಕ-ಧಾರ್ಮಿಕ ಜಗತ್ತು ಒಡ್ಡುತ್ತಿರುವ ವಿಪ್ಲವಗಳು – ಈ ಎಲ್ಲದರ ನಡುವೆ ಉಸಿರು ಕಟ್ಟಿದಂತಹ ವಾತಾವರಣದಲ್ಲಿ ಹಿಂಸೆಗೆ ಪ್ರತಿಹಿಂಸೆ ಉತ್ತರವಾಗದಂತೆ ಅಹಿಂಸಾತ್ಮಕ ಪ್ರತಿರೋಧ ಶಕ್ತಿಯಾಗಿ, ಮಾದರಿಯಾಗಿ ಅವರು ನಮ್ಮ ಮುಂದಿದ್ದರು. ಮಹಿಳಾ ಚಳವಳಿ ಹುಡುಕುತ್ತಿರುವ ಪರ್ಯಾಯ ನ್ಯಾಯವ್ಯವಸ್ಥೆಯ ಮಾದರಿಯಾಗಬಲ್ಲಂಥ ಅನನ್ಯ ಮಹಿಳಾ ಶಕ್ತಿಯ ಪ್ರತೀಕ ಮೈರಾ ಪೈಬಿ ಎಂದು ಸೂಕ್ಷ್ಮ ಮಹಿಳಾ ಮನಸ್ಸುಗಳು ಅತ್ತ ನೋಡತೊಡಗಿದವು.

ವಿನಾಶಕಾರಿ ನೂಪಿ-ಲಾನ್

ದಮನಿತ ಅಸ್ಮಿತೆಯನ್ನು ಗುರುತಿಸಿಕೊಂಡು ಅದರ ನಿವಾರಣೆಗಾಗಿ ಸಂಘಟಿತಗೊಂಡು ಹೋರಾಡಲು ಒಂದು ಐಡೆಂಟಿಟಿ ಬೇಕು, ನಿಜ. ಆದರೆ ಆ ಕಾರಣಕ್ಕಾಗಿ ಒಂದು `ಗುಂಪಿಗೆ ಸೇರಿದ’ ಐಡೆಂಟಿಟಿಯಾಗಿ ಹುಟ್ಟಿಕೊಳ್ಳುವ ಪ್ರಾದೇಶಿಕತೆ/ರಾಷ್ಟ್ರೀಯತೆ/ಜಾತಿ-ಧರ್ಮ-ಮತ-ಕುಲ-ಬುಡಕಟ್ಟು ಅಸ್ಮಿತೆಗಳು `ಗುಂಪಿಗೆ ಸೇರದ’ವರನ್ನು ಗುರುತಿಸಿ ಹೊರಗಿಡುವ ದೌಷ್ಟ್ಯದ ತನಕ ಮುಂದುವರೆಯುತ್ತವೆ. ಎಂದೇ ನಮ್ಮ ಅಸ್ಮಿತೆಗಳನ್ನು ಎಷ್ಟರಮಟ್ಟಿಗೆ, ಯಾತಕ್ಕೆ ಪೋಷಿಸಬೇಕೆನ್ನುವುದನ್ನು ಸ್ಪಷ್ಟಗೊಳಿಸಿಕೊಳ್ಳುವುದು ತೀರಾ ಅಗತ್ಯವಾಗಿದೆ. ಇಲ್ಲದೇ ಹೋದರೆ ಯಾವ ಹಿಂಸೆಯನ್ನು ವಿರೋಧಿಸುತ್ತೇವೋ ಇನ್ನೊಬ್ಬರ ಮೇಲೆ ಅದೇ ಹಿಂಸೆ ಸಂಭವಿಸಲು ನಾವೇ ಕಾರಣವಾಗುವ, ಹಿಂಸೆಯ ಉಪಕರಣಗಳಾಗುವ ಅಪಾಯ ಸೃಷ್ಟಿಯಾಗುತ್ತದೆ.

ಬಹುಶಃ ಈ ಐಡೆಂಟಿಟಿ ಪ್ರಜ್ಞೆಯೇ ಮೈರಾ ಪೈಬಿಗಳ ಬೌದ್ಧಿಕ ಹರವು ವಿಶಾಲಗೊಳ್ಳದೇ ಹೋಗಲು ಕಾರಣವಾಗಿದೆ. ಮಣಿಪುರವನ್ನು ಒಡೆದು ತಮಗೆ ಬೇರೆ ರಾಜ್ಯ ಕೊಡಬೇಕೆಂದು ಒತ್ತಾಯಿಸುವ ಕುಕಿ ಮತ್ತು ಜೋಮಿ ಬುಡಕಟ್ಟು ಹಾಗೂ ಗ್ರೇಟರ್ ನಾಗಾಲ್ಯಾಂಡಿಗೆ ಮಣಿಪುರದ ಕೆಲ ಭಾಗ ಸೇರಿಸಬೇಕೆನ್ನುವ ನಾಗಾ ಬುಡಕಟ್ಟುಗಳನ್ನು ಮೈರಾಗಳು ವಿರೋಧಿಸುತ್ತಿದ್ದರು. ಏಕೆಂದರೆ ಅವು ಮಣಿಪುರದ ಭೌಗೋಳಿಕ ಸಮಗ್ರತೆ, ಸಂಸ್ಕೃತಿಗಳಬಗ್ಗೆ ಹೇಳದೇ ತಂತಮ್ಮ ಕುಲಗಳ ಆಧಾರದ ಮೇಲೆ ಪ್ರತ್ಯೇಕ ರಾಜ್ಯ ಕೇಳುತ್ತ ಬಂಡುಕೋರ ಗುಂಪುಗಳನ್ನು ಕಟ್ಟಿಕೊಂಡಿದ್ದಾರೆಂದು ಆರೋಪಿಸುತ್ತಿದ್ದರು. ಎಂದೇ ಕುಕಿ, ಜೋಮಿ, ನಾಗಾಗಳ ಮೇಲೆ ನಡೆವ ಸೇನಾ ದೌರ್ಜನ್ಯ ಕುರಿತು ಮೈತಿಗಳ ಮೈರಾ ಪೈಬಿಗಳು ಮೌನ ತಾಳಿದ್ದರು. ಹೀಗೆ ಬುಡಕಟ್ಟುಗಳ ನಡುವಿನ ಹಿತಾಸಕ್ತಿ ಸಂಘರ್ಷ, ಭೌಗೋಳಿಕ-ಸಾಂಸ್ಕೃತಿಕ ಅಂತರಗಳು ಮೈತಿಯೇತರ ಮಹಿಳೆಯರು ಮೈರಾ ಪೈಬಿಯೊಳಗೆ ಬರದಂತೆ ಮಾಡಿತ್ತು. ಈಗ ಕೋಮುದ್ವೇಷದ ಆಧಾರದಲ್ಲಿಯೇ ರಾಜದಂಡ ಹಿಡಿಯ ಹೊರಟಿರುವ ಆಳುವವರಿಗೆ ಯಾವುದೇ ಸಂಘರ್ಷವನ್ನು ಕೋಮು ಸಂಘರ್ಷವಾಗಿ ಪರಿವರ್ತಿಸುವುದು ಸುಲಭವಾಗಿದೆ. ಮಾದಕವಸ್ತು, ಬಂಡುಕೋರ ಗುಂಪುಗಳಿಂದ ತಮ್ಮ ಯುವಜನರನ್ನು ರಕ್ಷಿಸಿಕೊಂಡ ಮೈರಾ ಪೈಬಿಗಳಿಗೆ ಈಗ ಎದುರಾದ ಸವಾಲು `ಕುಲದ ಹೆಮ್ಮೆ’, `ಧರ್ಮ ರಕ್ಷಣೆ’, `ರಾಷ್ಟ್ರಭಕ್ತಿ’ ಎಂದು ವೇಷ ಬದಲಿಸಿಕೊಂಡು ವಿರಾಟ್ ರೂಪದಲ್ಲಿ ಬೆಳೆದು ನಿಂತಿದೆ. ಅದರ ಹಿಂದಿನ ಪುರುಷ ಪ್ರಾಧಾನ್ಯ ಶಕ್ತಿಯು ತಮ್ಮ ಮೇಲೆ ಬಿಗಿಪಟ್ಟುಗಳನ್ನು ಹೇರುತ್ತಿದೆ ಎನ್ನುವುದನ್ನು ಗುರುತಿಸಲು ಅವರು ಅಸಮರ್ಥರಾಗಿದ್ದಾರೆ.

ಯಾಕೆಂದರೆ ಅವರು ಸಾಮಾಜಿಕವಾಗಿ ಜಾಗೃತರಾದರೂ ರಾಜಕೀಕರಣಗೊಂಡ ಹೆಣ್ಣುಪ್ರಜ್ಞೆಯನ್ನು ಗಳಿಸಿಕೊಳ್ಳಲಾಗಲಿಲ್ಲ. ಪಿತೃಪ್ರಾಧಾನ್ಯತೆಯ ವಿವಿಧ ಮುಖಗಳನ್ನು ಗುರುತಿಸಲಾಗಲಿಲ್ಲ. ಲೋಕದ ಹೆಣ್ಣುಗಳೊಡನೆ ತಮ್ಮನ್ನು ಗುರುತಿಸಿಕೊಳ್ಳಬೇಕೆಂಬ ಮಾಗಿದ ಬೌದ್ಧಿಕತೆಯನ್ನು ಪ್ರದರ್ಶಿಸಲಾಗಲಿಲ್ಲ. ಎಂದೇ ರಾಜ್ಯವನ್ನು ಅರಾಜಕತೆಗೆ ದೂಡಿದ ನಾಲಾಯಕ್ ಮುಖ್ಯಮಂತ್ರಿಯನ್ನು ಕೆಳಗಿಳಿಸಬೇಕಾದ ಮಹಿಳೆಯರೇ ಅವ `ತಮ್ಮವ’ನೆಂಬ ಕಾರಣಕ್ಕೆ ಅವನ ಕೈಯ ರಾಜೀನಾಮೆ ಪತ್ರ ಹರಿದು ಬಿಸುಡುವ ನಾಟಕ ಆಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ, ಮೈತಿ ಅಸ್ಮಿತೆಯನ್ನುಳಿಸಿಕೊಳ್ಳಲು ಅನ್ಯರನ್ನು ನಾಶ ಮಾಡಬೇಕೆಂಬ ವಿನಾಶಕಾರಿ ಕೋಮುಭಾವನೆಯನ್ನು `ನವ ನೂಪಿ ಲಾನ್’ ಎನ್ನಲಾಗುತ್ತಿದೆ!

ಪ್ರತಿ ವ್ಯಕ್ತಿಗೆ, ಅದರಲ್ಲೂ ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಅಸ್ಮಿತೆಗಳಿರುತ್ತವೆ. ಜಾತಿ/ಧರ್ಮ/ರಾಜಕೀಯ ಒಲವು/ಪ್ರದೇಶ/ಭಾಷೆ/ಪಕ್ಷ/ಸಂಘಟನಾ ಐಡೆಂಟಿಟಿಗಳ ಎದುರು ಹೆಣ್ಣು ತನ್ನ ಜೆಂಡರ್ ಐಡೆಂಟಿಟಿಯನ್ನು ಹಿಂದೆ ಸರಿಸುವಂತೆ ಸಮಾಜ ಮಾಡುತ್ತದೆ. ಮಾನವಪರ ಗುಂಪುಗಳೊಳಗೂ ಸಹ `ಮೂರು ಜಡೆ ಕೂಡದಿರಲಿ’ ಎಂದು ಹಾರೈಸುವ ಗಂಡು ಮನಸ್ಥಿತಿಯೇ ಮಹಿಳಾ ಒಗ್ಗೂಡುವಿಕೆಯನ್ನು ಬೇರೆಬೇರೆ ಐಡೆಂಟಿಟಿಗಳ ನೆಪದಲ್ಲಿ ಒಡೆಯುತ್ತದೆ. `ನಾವು, ಈ ಜಗದ ಹೆಣ್ಣುಗಳು, ನಾವೆಲ್ಲ ಒಂದು’ ಎನ್ನದ ಹಾಗೆ ಜಾತಿ/ಧರ್ಮ/ಉದ್ಯೋಗ/ಸಂಘಟನೆಗಳ ಗೋಡೆಗಳನ್ನು ಹೆಣ್ಣುಗಳ ನಡುವೆ ಎಬ್ಬಿಸಲಾಗುತ್ತದೆ. ಕುಕಿ ಹೆಣ್ಣುಗಳನ್ನು ಮೈತಿ ಹೆಣ್ಣುಗಳೇ ಹಿಡಿದುಕೊಟ್ಟು ಅತ್ಯಾಚಾರಕ್ಕೆ ಕಾರಣವಾಗುವ; ಬಿಲ್ಕಿಸ್ ಬಾನುವಿನ ಅತ್ಯಾಚಾರಿಗಳಿಗೆ ಅವರವರ ಮನೆಗಳ/ಕುಲಗಳ ಹೆಣ್ಣುಗಳು ಆರತಿಯೆತ್ತಿ ಸ್ವಾಗತಿಸುವ; ಖೈರ್ಲಾಂಜಿ ಹತ್ಯಾಕಾಂಡದಲ್ಲಿ ಸುರೇಖಾ ಭೋತಮಾಂಗೆಯ ಅತ್ಯಾಚಾರ/ಹತ್ಯೆಯನ್ನು ಕುಣಬಿ ಹೆಣ್ಣುಗಳು ಕೈಕಟ್ಟಿ ನೋಡುತ್ತ ಬೆಂಬಲಿಸುವ ಮತ್ತು ಇದರಂತಹ ಅಸಂಖ್ಯ ದುರದೃಷ್ಟಕರ ಅಪಸವ್ಯಗಳಿಗೆ ಇದೇ ಕಾರಣವಾಗಿದೆ. ಗಂಡುಹಿರಿಮೆಯೆಂಬ ಕೊಡಲಿಗೆ ತಾನು ಕಾವಾದರೆ ಅದು ಕೊನೆಗೆ ತನ್ನ ಬುಡವನ್ನೂ ಕಡಿಯುತ್ತದೆ ಎಂಬ ಅರಿವಿರದ `ಅ-ರಾಜಕೀಯ’ ಹೆಣ್ಣುಗಳೇ ಇವತ್ತಿನ ಸಮಾಜದಲ್ಲಿ ತುಂಬಿರುವುದರಿಂದ ಇಂತಹ ಘಟನೆಗಳು ಮತ್ತೆಮತ್ತೆ ಮರುಕಳಿಸುತ್ತಿವೆ. `ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಹುಸಿ ಗಾದೆ ಉಪ್ಪುಕಾರ ಹಚ್ಚಿಕೊಂಡು ಹರಿದಾಡುತ್ತಿದೆ.

ಆದರೆ ತನ್ನನ್ನು ತಾನೇ ಸಮಾಜ ಹೇಗಾದರೂ ಒಡೆದುಕೊಳ್ಳಲಿ, ಎಲ್ಲ ಮನುಷ್ಯರ ಪರವಾಗಿ ತಾಯಂದಿರು ಒಗ್ಗೂಡಲೇಬೇಕು. ನಮ್ಮ ಹೆಣ್ಣು ಅಸ್ಮಿತೆಯೇ ಮೊದಲು ಮತ್ತು ಮುಖ್ಯವಾಗಬೇಕು. ಆಗ ಎಲ್ಲ ಜಾತಿ, ವರ್ಗ, ಧರ್ಮ, ಉದ್ಯೋಗ, ಸಿದ್ಧಾಂತವೇ ಮೊದಲಾದ ಅಸ್ಮಿತೆಗಳ ಜೊತೆಜೊತೆಗೆ ಹೆಣ್ಣು ನ್ಯಾಯದ ಕಣ್ಣು ಹೊಂದಲು ಸಾಧ್ಯವಾಗುತ್ತದೆ. `ಅಸ್ಮಿತೆ ಪ್ರಜ್ಞೆ’ ಮತ್ತು `ಟೆರಿಟೋರಿಯಲ್ ಪ್ರಜ್ಞೆ’ಗಳೆಂಬ ಪುರುಷ ಪ್ರಜ್ಞೆಗಳನ್ನು ಮೀರಲು ಮಹಿಳೆಗೆ ಸಾಧ್ಯವಾಗುತ್ತದೆ. ಸುಳ್ಳುಸುದ್ದಿಗಳನ್ನು ನಂಬದಿರಲು, ಪ್ರಭುತ್ವದ ಪುರುಷ ಹುನ್ನಾರಗಳನ್ನರಿಯಲು, ಮನುಷ್ಯ ಮನಸ್ಸುಗಳನ್ನು ಸಂಕುಚಿಸುವ ಎಲ್ಲವನ್ನು ಮೀರಿದ ನ್ಯಾಯಸೂಕ್ಷ್ಮವನ್ನು ಸ್ತ್ರೀಪುರುಷರೆಲ್ಲರಲ್ಲಿ ಉದ್ದೀಪಿಸಲು ಸಾಧ್ಯವಾಗುತ್ತದೆ.

ಗಾಯವಾದರೆ ಎಲ್ಲ ಮನುಷ್ಯರಿಗೂ ಬರುವುದು ಹನಿ ಕಣ್ಣೀರು ಮತ್ತು ಒಸರುವುದು ಕೆಂಪು ರಕ್ತ. ನೊಂದವರೆಲ್ಲ ಒಂದುಗೂಡಲು ಈ ನೋವೇ ನೆಲೆಯಾಗಬೇಕು. ಮೈತಿ, ಕುಕಿ, ಜೋಮಿ, ನಾಗಾ ಎಂದು ಈಶಾನ್ಯದ ಸೋದರ, ಸೋದರಿಯರು ಒಡೆದು ಹೋಗದಿರಲು ಅಸ್ಮಿತೆಗಳಾಚೆಗಿನ ಮಾನವೀಯತೆ ಅರಳಬೇಕು. ಇದು ಸಾಧ್ಯವೋ ಅಸಾಧ್ಯವೋ ಗೊತ್ತಿಲ್ಲ ಮಣಿಪುರವೇ, ಇದು ನಮ್ಮ ಮನದಾಳದ ಪ್ರಾರ್ಥನೆ. ಹಾಗಾದಲ್ಲಿ ಮಾತ್ರ ಅಗ್ನಿಕುಂಡವಾಗಿರುವ ಈಶಾನ್ಯದ ನೆಲವು ಹೂದೋಟವಾಗಿ ನಳನಳಿಸಲು ಸಾಧ್ಯವಿದೆ.

ಹೌದು. ನಮಗಿನ್ನೂ ಭರವಸೆಗಳಿವೆ. ಮೇ 4ರಂದು ಚುರಾಚಾಂದಪುರದಲ್ಲಿದ್ದ ಮೈತಿಗಳು ಸುರಕ್ಷಿತ ಸ್ಥಳಗಳಿಗೆ ಹೊರಟಾಗ ಅವರನ್ನು ಕರೆದೊಯ್ಯುತ್ತಿದ್ದ ಸೇನಾವಾಹನಕ್ಕೆ ಬೆಂಬಲವಾಗಿ, ಹಿಂದಿನಿಂದ ಬರುತ್ತಿರುವ ಬಂಡುಕೋರ ಗುಂಪು ಅವರನ್ನು ತಡೆಯದಂತೆ ಜೋಮಿ ಮಹಿಳೆಯರು ಮಾನವ ಸರಪಳಿ ನಿರ್ಮಿಸಿ ಕಳಿಸಿಕೊಟ್ಟರು. ಬದುಕುಳಿದು ಬಂದ ಕೆಲ ಕುಕಿಗಳು ಹೇಳುತ್ತಿರುವಂತೆ ನಾಗಾ, ಪಂಗಲ್, ಮೈತಿಗಳೂ ಸಹಾ ಕೆಲವು ಕುಕಿ ಕುಟುಂಬಗಳಿಗೆ ಆಶ್ರಯ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಮತ್ತೆ ಕೆಲವರು ರಿಸ್ಕ್ ತೆಗೆದುಕೊಂಡು ತಪ್ಪಿಸಿಕೊಂಡು ಹೋಗಲು, ಅಡಗಿಕೊಳ್ಳಲು ಸಹಾಯ ಮಾಡಿದ್ದಾರೆ. ಬತ್ತಲಾದ ಹೆಣ್ಣುಗಳನ್ನು ಗುಂಪು ಹಿಂಸಿಸುತ್ತಿದ್ದ ಆ ಭಯಾನಕ ವೀಡಿಯೋಗೆ ಜುಲೈ 20ರಂದು ಕೆಲವು ಮೈರಾ ಪೈಬಿ ಮಹಿಳೆಯರು ಪ್ರತಿಕ್ರಿಯಿಸಿ ಖಂಡಿಸಿದ್ದಾರೆ. `ಯಾರೋ ರೋಗಗ್ರಸ್ತ ಕ್ರಿಮಿನಲ್ಲುಗಳ ಹೇಯಕೃತ್ಯವು ಅವರ ಸಮುದಾಯದ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ. ಅದು ಅತಿ ಹೇಯ ಮತ್ತು ಪೈಶಾಚಿಕ ಕೃತ್ಯ. ಮೈತಿ ಸಮುದಾಯವು ಮಹಿಳೆಯರನ್ನು ಅತ್ಯಂತ ಗೌರವದಿಂದ ನೋಡುತ್ತದೆ. ಅತ್ಯಾಚಾರಿಗಳ ಕುಲ ಯಾವುದೇ ಆಗಿರಲಿ, ಅಂತಹ ಪ್ರಾಣಿಸದೃಶ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಲಿ. ಅವರಿಗೆ ನ್ಯಾಯ ಸಿಗಬೇಕೆನ್ನುವುದರಲ್ಲಿ ರಾಜಿಯೇ ಇಲ್ಲ’ ಎಂದು ಇಮಾ ಲೈರಿಕ್ಲಿಯೆಮಾ ಎಂಬ ಮಹಿಳೆ ಮಾಧ್ಯಮದೆದುರು ಹೇಳಿದ್ದಾರೆ. `ಅದು ಒಪ್ಪಲು ಅಸಾಧ್ಯವಾದ ಹೀನ ಕೃತ್ಯ. ನಮ್ಮ ಇಡೀ ಸಮುದಾಯವೇ ನ್ಯಾಯಕ್ಕಾಗಿ ಆಗ್ರಹಿಸುತ್ತದೆ’ ಎಂದು ಆರ್. ಕೆ. ತರಕ್ಸಾನಾ ಎಂಬ ಮೈರಾ ನಾಯಕಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ದುರದೃಷ್ಟವೆಂದರೆ ಭರವಸೆಗಳು ಎಂದೂ `ವೈರಲ್’ ಆಗದೇ ಮರೆಯಲ್ಲೇ ನಿಲ್ಲುತ್ತವೆ.

ಆದರೆ ನಮಗಿನ್ನೂ ಭರವಸೆಗಳಿವೆ. ಮನುಷ್ಯರ ಇತಿಹಾಸದಲ್ಲಿ ಬಿಕ್ಕಟ್ಟುಗಳ ಕಾಲದಲ್ಲೇ ಅವರ ಒಳ್ಳೆಯತನ ಹೊರಬಂದಿದೆ. ದೊಡ್ಡ ಮಿದುಳಿನ ಮನುಷ್ಯರ ಚಿಂತನೆಯಲ್ಲಿ ಸಹಕಾರ-ಸಹಬಾಳ್ವೆಯೇ ಮೂಲವಾಗಿದೆ. ಅವರು ಗುಂಪಾಗಿ ಜೀವಿಸಲಿಕ್ಕೆ, ಗುಂಪಿಗೆ ಹಿತವಾಗುವಂತೆ ನಡೆದುಕೊಳ್ಳಲಿಕ್ಕೆ ಸೃಷ್ಟಿಯಾಗಿದ್ದಾರೆ. ಬರಬರುತ್ತ ಸ್ವಮೋಹದಿಂದ ಖಾಸಗಿತನ, ಕೇಡು ಎದ್ದು ಕಾಣುವಂತೆ ಆಗಿದ್ದರೂ ಆಳದಲ್ಲಿ ಮನುಷ್ಯರು ಉದಾತ್ತತೆ, ಸಹಬಾಳ್ವೆಯನ್ನೇ ಮೂಲಗುಣವಾಗಿ ಹೊಂದಿದ್ದಾರೆ.

ಮತ್ತು,

ಹೆಣ್ಣು ಮತ್ತು ಹಿಂಸೆ ವಿರುದ್ಧ ಪದಗಳು. ನಾವೇನಿದ್ದರೂ ಪ್ರೇಮಿಸುವವರು, ಪ್ರಶ್ನಿಸುವವರು, ಪೊರೆಯುವವರು. ಇದು ಎಲ್ಲ ಮಹಿಳೆಯರ ಕಣ್ಣರಿವಾಗಲಿ. ನೊಂದವರಿಗೆಲ್ಲ ಒಂದು ಹೆಣ್ಣು ಮನವು ಆಸರೆಯಾಗಿ ದೊರೆಯಲಿ. ಲೋಕವೇ ಹೆಣ್ಣಾಗಲಿ. ಮನದ ತಾವರೆಗಳು ಅರಳಲಿ. ಓಂ ಮಣಿ ಪದ್ಮಯೇ..

ಡಾ. ಎಚ್. ಎಸ್. ಅನುಪಮಾ

ವೈದ್ಯರು, ಲೇಖಕರು

ಇದನ್ನೂ ಓದಿ-‘ಸಂಭ್ರಮ ಇದೆ, ಆದರೆ ‘ಸ್ವಾತಂತ್ರ್ಯ’ ಎಲ್ಲಿದೆ?!

ಕೆಂಪು-ಬಿಳಿ-ಹಸಿರು ಸಂಗಾತಿ: ಪ್ರಕಾಶ್ ಹಿಟ್ನಳ್ಳಿ
ಬದುಕಿಡೀ ಚಳುವಳಿಯನ್ನೇ ಹಾಸಿ ಹೊದ್ದ ಪ್ರಕಾಶ್ ಹಿಟ್ನಳ್ಳಿ ಇವತ್ತು ನಮ್ಮನ್ನಗಲಿದ್ದಾರೆ. ಹಿರಿಯ ಸಂಗಾತಿಯ ಬಗೆಗೆ ಬರೆಯಲು ಮೂರು ತಿಂಗಳ ಹಿಂದೆ ಡಾ.ಎಚ್‌ ಎಸ್‌ ಅನುಪಮಾ ಅವರ ಮನೆಗೆ ಹೋಗಿಬಂದಿದ್ದರು. ಅವರ ಸಂದರ್ಶನ ಲೇಖನವನ್ನು ಅವರಿಗೆ  ನುಡಿನಮನವಾಗಿ ಪ್ರಕಟಿಸುತ್ತಿದ್ದೇವೆ.

ವಿಜಯಪುರದ ಬಳಿಯ ಹಿಟ್ಟಿನಹಳ್ಳಿ ಊರಲ್ಲಿ ಅಂದು ಜಾತ್ರೆ. ನೆತ್ತಿ ಮೇಲೇ ನೇಸರಿತ್ತು. ಅದರ ಪರಿವೆಯಿಲ್ಲದ ಮಕ್ಕಳು ಜೀಕುವ, ತೂಗುವ, ಹತ್ತಿಳಿವ ಆಟ ನಡೆಸಿದ್ದರು. ಬೀದಿಬೀದಿಗಳ ದಾಟಿ, ಸಂದಿ ಓಣಿ ಹಾಯ್ದು ಹೋಗುತ್ತಲೇ ಇದ್ದೆವು. ಗಾಳಿ ಬೆಳಕಾದರೂ ಎಲ್ಲಿಂದ ಬಂದೀತು ಎಂದು ನಾವಚ್ಚರಿಗೊಳ್ಳುವಂತೆ ಕಟ್ಟಿದ ಕಿರಿದಾದ ಮಣ್ಣಿನ ಮನೆಗಳು. ಊಟದ ಸಮಯವೆಂದು ಮನೆಗಳಿಂದ ಹೊರಸೂಸುತ್ತಿದ್ದ ನಾನಾ ಪರಿಮಳಗಳು ತಿಳಿಸುತ್ತಿದ್ದವು.

ಕಿರಿದಾದ ಓಣಿಗಳ ಹಾದು ಮನೆಯೆದುರು ನಿಂತೆವು. ಅದು ಮನೆಯೇ? ಸುಣ್ಣಬಣ್ಣ ಕಾಣದ ಮಣ್ಣು, ಕಲ್ಲುಗಳು ಸಹಜ ರೂಪ, ಬಣ್ಣದಲ್ಲಿ ಅಂಟಿಕೊಂಡು ನಿಂತಿದ್ದವು. ಗೋಡೆಗಳು ಮೂಲೆಯಲ್ಲಿ ಕೂಡಿಕೊಂಡು ಅಷ್ಟು ಆಗಸವನ್ನು ಸೂರಿನಡಿ ಹಿಡಿದಿಟ್ಟು ಮನೆಯೆಂಬ ಆವರಣ ಸೃಷ್ಟಿಸಿದ್ದವು. ನೂರಾರು ವರ್ಷ ಹಳೆಯ ಮರದ ಬಾಗಿಲಿನ ಹೊಳಪು ಮಾಸಿದ್ದರೂ, ಮೈ ಬಿರಿಬಿಟ್ಟರೂ ತನ್ನ ಗಾತ್ರ ಮಾತ್ರದಿಂದ ಧೃಡತೆಯನ್ನು ಸಾರುತ್ತ ನಿಂತಿತ್ತು. ಬಾಗಿಲುವಾಡದ ಮೇಲೆ ಮತ್ತು ಎರಡೂ ಬದಿ ಗೂಡುದೀಪಗಳಿಗೆ ಮಾಡಿದ್ದ ಗೂಡುಗಳು ಖಾಲಿಯಿದ್ದವು.

ಹೊರಜಗಲಿಯ ಮೇಲೆ ಪುಳ್ಳೆ ಒಣಗುತ್ತಿವೆ. ಅರೆತೆರದ ಬಾಗಿಲ ಒಳಗೆ ಯಾವ ಸದ್ದೂ ಕೇಳಿಸುತ್ತಿಲ್ಲ. ಒಂದು ಜೊತೆ ಜೋಡೂ ಹೊರಗಿಲ್ಲ. ಬಾಗಿಲಾಚೆ ನೇತಾಡುತ್ತಿದ್ದ ಪೈಪಿನ ತುದಿಗಂಟಿದ ಕೆಇಬಿ ಮೀಟರು ಒಳಗ್ಯಾರೋ ವಾಸವಿರುವರೆಂದು ಸೂಚಿಸಿತು. 200 ವರ್ಷಗಳ ಹಿಂದಿನ ಕಾಲದ ತುಣುಕೊಂದನ್ನು ಅನಾಮತ್ ಎತ್ತಿತಂದು ಸಣ್ಣಪುಟ್ಟ ತಾರಸಿ ಮನೆಗಳ ಈ ಗಲ್ಲಿಯಲ್ಲಿ ಇಟ್ಟಂತೆ ಅನಿಸಿತು.

ಬಾಗಿಲು ಸರಿಸಿದರೆ ಒಳಗೆ ನಿತಾಂತ ಮೌನ. ಅಲ್ಲಿ, ನಡುಮನೆಯಲ್ಲಿ ಮೌನಚಾಪೆಯ ಮೇಲೆ ಎರಡು ಅಂಗೈಗಳನ್ನೇ ತಲೆದಿಂಬಾಗಿಸಿ ಅಂಗಾತ ಮಲಗಿದ ರೂಹು ಕಾಣಿಸಿತು. ಕಾಮ್ರೇಡ್ ಎಂದು ಕರೆದದ್ದೇ ಕೃಶಜೀವವೊಂದು ಧಿಗ್ಗನೆದ್ದು ಕುಳಿತಿತು. ಹಣೆಮೇಲೆ ಕೈಯಿಟ್ಟು ಕಣ್ಣು ಕಿರಿದಾಗಿಸಿ ಉರಿವ ಬಿಸಿಲ ಬೀದಿಯೆಡೆಗೆ ನೋಡಿತು. ಬಂದವರಾರೆಂದು ತಿಳಿದದ್ದೇ ಕಾಷ್ಟವೇ ಜೀವ ತಳೆದಂತಾಯಿತು. ಬರ್‍ಬರ್ರೀ, ಬರ್‍ಬರ್ರೀ ಎನ್ನುತ್ತ ತಡಬಡಿಸಿ ಎದ್ದು ಬಂದವರನ್ನು ಸ್ವಾಗತಿಸಿ, ಕೂರಿಸಲು ತಾವು ಹುಡುಕತೊಡಗಿತು.

ಕಟ್ಟೆಯ ಮೇಲೆ ನಾವು ಕೂರಬೇಕು, ಕೆಳಗೆ ತಾನು ಕೂರಬೇಕು ಎನ್ನುವುದು ಅವರ ವ್ಯವಸ್ಥೆ. ಬೇಡಬೇಡವೆಂದರೂ ಹೊರಹೋಗಿ `ಸಂತೋಷ’ ಎಂದು ಕೂಗಿ ಕರೆದು ನೀರು, ಸಿಹಿ ತರಿಸಿದರು. `ಇದು ಗಾಂವ್ಟಿ ಸ್ವೀಟ. ಕರದಂಟು, ತಗೋರಿ’ ಎಂದು ಎರಡೂ ಕೈ ತುಂತುಂಬಿ ಕೊಡತೊಡಗಿದರು. ಇದನೂ ತಗೋರಿ, ಇನ್ನೂ ತಗೋರಿ, ನೀವು ಕೂಡ್ರಿ, ಇಲ್ಲೆ ಬರ್ರಿ ಎಂದು ಆ ಜೀವ ಪಟ್ಟ ಸಂಭ್ರಮದಲ್ಲಿ, ಅವರ ನಡೆ, ಮಾತು, ಚರ್ಯೆಯಲ್ಲಿ, `ನಿಮ್ಮ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ’ವೆಂಬ ಬಸವಣ್ಣನ ಮಾತು ಮೈವೆತ್ತಿಬಂದಂತೆ ಕಂಡಿತು. ಅವರನ್ನು ನೋಡುತ್ತ ಸರಿಯಾಗಿ ಮಾತನಾಡಲು ಸಾಧ್ಯವಾಗುವಂತೆ ನಡುಮನೆಯ ನಡುವೆ ಕುರ್ಚಿ ಮೇಲೆ ಅವರನ್ನು ಕುಳ್ಳಿರಿಸಿ ಸುತ್ತ ನಾವು ಕೂತೆವು.

ಅವರು ಪ್ರಕಾಶ ಕುಲಕರ್ಣಿ. ಶರಣ ಪ್ರಕಾಶ ಕುಲಕರ್ಣಿ. ಅಷ್ಟೇ ಅಲ್ಲ, ಕಾಮ್ರೇಡ್ ಪ್ರಕಾಶ್ ಕುಲಕರ್ಣಿ. ಮನ್ನಿಸಿ, ಪ್ರಕಾಶ ಹಿಟ್ನಳ್ಳಿ.

ಹೌದು. ಪ್ರಕಾಶ್ ಕುಲಕರ್ಣಿಯಾಗಿ ದೊಡ್ಡ ರೈತ ಮನೆತನದ ವಾಡೆಯಲ್ಲಿ ಹುಟ್ಟಿದ ವ್ಯಕ್ತಿ ಪ್ರಕಾಶ್ ಹಿಟ್ನಳ್ಳಿಯಾದದ್ದರ ಹಿಂದೆ ಒಂದು ಪರಿವರ್ತನೆಯ ಕಥನವಿದೆ.

1940ರಲ್ಲಿ ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯ ಕುಲಕರ್ಣಿಯವರ ಕೃಷಿ ಮನೆತನದಲ್ಲಿ ಹುಟ್ಟಿದ ಹುಡುಗ ಪ್ರಕಾಶ. 10 ತಿಂಗಳ ಎಳವೆಯಲ್ಲಿಯೇ ಮೂರು ಮಕ್ಕಳನ್ನು ಬಿಟ್ಟು ಅವನ ತಾಯಿ ತೀರಿಹೋದಳು. ತಂದೆ ಮರುಮದುವೆಯಾಗಲಿಲ್ಲ. ಪ್ರಾಥಮಿಕ ಶಾಲೆ ಊರಲ್ಲೇ ಮುಗಿಯಿತು. ಬಳಿಕ ಕೃಷಿಕ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದು ನಡೆಯಿತು. ತಾಯಿಲ್ಲದ ಮನೆಯ ಹುಡುಗ ಬಳಗದೊಳಗೇ ಏಕಾಂಗಿಯಂತಿದ್ದ. ಅವನಾಯಿತು, ಅವನ ಲೋಕವಾಯಿತು. ಸದಾ ಏನನ್ನೋ ಯೋಚಿಸುತ್ತ ಹುಬ್ಬು ಗಂಟಾಗಿಸಿ, ಕಣ್ಣು ಕಿರಿದಾಗಿಸಿ, ಒಂದುಕಡೆ ಕೂತು ಯೋಚಿಸುತ್ತಿದ್ದ. ನೂರೆಂಟು ಪ್ರಶ್ನೆಗಳು, ಸಂದೇಹಗಳು, ಹಿಂಜರಿಕೆಗಳು. ಜೊತೆಗೊಂದಷ್ಟು ಮನೆತನದ ಹಿರಿಮೆ ಮತ್ತು ಗಂಡು ಗತ್ತು. ತಾನು, ತನ್ನ ಸ್ಥಿತಿಗತಿಯ ಬಗೆಗೆ ಕೇಳಿಕೊಳ್ಳುತ್ತ ಬೆಳೆದ ಅವನು ಪ್ರೌಢಶಾಲೆ ಪ್ರವೇಶಿಸಿದ. ಚುರುಕಿನ ಹುಡುಗ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾದರೂ ಎಸ್ಸೆಸ್ಸೆಸಿ ಫೇಲಾದ. ಕಾರಣ ಅವನ ಗಮನ ಓದಿನಿಂದ ಹೋರಾಟದತ್ತ ತಿರುಗಿತು. ವೆಂಕಟೇಶ್ ಕುಲಕರ್ಣಿ ಅವನ ಮಾಸ್ತರಾಗಿದ್ದರು. (ನಂತರ ವಕೀಲರಾದರು.) ಅವರು ವಿದ್ಯಾರ್ಥಿಗಳಲ್ಲಿ ಹೋರಾಟದ ಪ್ರವೃತ್ತಿ ಬೆಳೆಸುತ್ತಿದ್ದರು. ಒಂದುದಿನ ಹಳತಾದ ಶಾಲೆಯ ಕಟ್ಟಡ ಕುಸಿದುಬಿತ್ತು. ಸದ್ಯ, ಮಕ್ಕಳು ಒಳಗಿರದಿದ್ದರಿಂದ ಪ್ರಾಣಾಪಾಯ ತಪ್ಪಿತು. ಅದು ಶಿಥಿಲವಾಗಿದೆಯೆಂದು ಎಷ್ಟು ಬಾರಿ ಪತ್ರ ಬರೆದರೂ, ಖುದ್ದು ಹೋಗಿ ಹೇಳಿದರೂ ರಿಪೇರಿ ಮಾಡಿಸದ ಆಡಳಿತದವರಿಗೆ ಚುರುಕು ಮುಟ್ಟಿಸಬೇಕೆಂದು ಮಾಸ್ತರರು ಇಡೀ ಶಾಲೆಯ ಮಕ್ಕಳನ್ನು ಮುನ್ಸಿಪಾಲ್ಟಿ ಕಟ್ಟಡಕ್ಕೆ ಒಯ್ದರು. ಅಲ್ಲೇ ಒಳಗೆ ಕೂರಿಸಿ ಪಾಠ ಮಾಡತೊಡಗಿದರು. ಅದು ಸಂಘರ್ಷ, ಹೋರಾಟದೆಡೆಗೆ ಎಳೆಯ ಹುಡುಗ ಪ್ರಕಾಶನ ಮೊದಲ ಪಯಣ. ಬಳಿಕ ಬಿಜಾಪುರದಲ್ಲಿ ಆರಂಭವಾಗಿದ್ದ `ಜಾಗೃತ ಭಾರತ ಸಂಘಟನೆ’ಯಲ್ಲಿ ಹುಡುಗ ಸೇರಿಕೊಂಡ. ಮುಂದಿನದನ್ನು ಪ್ರಕಾಶ್ ಅವರ ಮಾತುಗಳಲ್ಲೇ ಕೇಳಬೇಕು:

`ಅಲ್ಲಿ ಲಾಯದಗುಂದಿ ಅಂತ ನಂ ಲೀಡರೊಬ್ಬರಿದ್ದರು. ಅವರಿಗೆ ಸಿದ್ಧಪ್ಪ ನಿಂಬರಗಿ ಲೀಡರ್. ನಿಂಬರಗಿ ಅವರಿಗೆ ಡಾಕ್ಟರ್ ಗಂಗಾಧರ ಅಧಿಕಾರಿ ಲೀಡರ್. ಡಾಕ್ಟರ್ ಅಧಿಕಾರಿ ಗೊತ್ತೇನಿಲ್ಲೋ? ಗೊತ್ತಿರಲೇಬೇಕು ನಿಮಗ. ಜರ್ಮನಿಯ ಬರ್ಲಿನಿನಲ್ಲಿ ಕೆಮಿಸ್ಟ್ರಿ ಪಿಎಚ್ಡಿ ಮಾಡಿದ್ದರು. ಐನ್‍ಸ್ಟೀನ್, ಜೆ. ಸಿ. ಬೋಸ್, ಸಿ. ವಿ. ರಾಮನ್ ಅಂಥವರ ಪರಿಚಿತರು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಲ್ಲೊಬ್ಬರು. ಮೀರತ್ ಕೇಸಿನಲ್ಲಿ ಜೈಲಿಗೆ ಹೋದ 33 ಜನರಲ್ಲಿ ಅವರೂ ಒಬ್ಬರು. ಅವರು ನಾಲ್ಕು ಜನರನ್ನು ತಯಾರು ಮಾಡಿದರು: ಬಾಲಸಿಂಗ್ ಮಾಸ್ತರ್, ಸದಪ್ಪ ಅಕ್ಕಿ, ರಾಜಪ್ಪ ದುಬೆ, ಲಾಯದಗುಂದಿ. ಅದರಾಗ ದುಬೆ ಅನ್ನೋರು (ಬಿಜಾಪುರದಿಂದ ಆಮೇಲೆ ಎರಡು ಸಲ ಎಂಪಿ ಆದ್ರು), ಕಮ್ಯುನಿಸ್ಟ್, ಸೋಷಲಿಸ್ಟ್, ಅಂಬೇಡ್ಕರ್ವಾದಿ ಅಂತ ಯಾರ್ಯಾರು ಕಾಂಗ್ರೆಸ್ಸಿಂದ ದೂರದೂರ ಇರತಿದ್ದರೋ, ಅವರನ್ನೆಲ್ಲ ಎಳೆದೆಳೆದು ಕಾಂಗ್ರೆಸ್ಸಿಗೆ ತರತಿದ್ರು. `ಕಾಂಗ್ರೆಸ್ ನಿಮ್ದೂ ಹೌದು, ನಮ್ಮಂಥಾ ಎಲ್ಲರ್ದೂ ಹೌದು. ನೀವೂ ಬರ್ರಿ, ಕಾಂಗ್ರೆಸ್‍ನ ಕಬ್ಜಾ ಮಾಡ್ರಿ’ ಅಂತಿದ್ರು. ಎಸ್. ಎಸ್. ಅರಕೇರಿ ಅಂತ. 1967ರಾಗ ಎಂಎಲ್‍ಎ ಆಗಿದ್ರು. ಅವರ್ನೂ ಕಾಂಗ್ರೆಸ್ಸಿಗೆ ಕರಕಂಡು ಬಂದ್ರು.

ಕಾಂಗ್ರೆಸ್ ಬಿಟ್ಟು ಎಡಕ್ಕೆ ಯಾಕೆ ಬಂದ್ರಿ?

ಬ್ಲಿಟ್ಸ್‌ನಂತಹ ಪತ್ರಿಕೆ ಓದಿ, ಪಾಟೀಲ ಪುಟ್ಟಪ್ಪ, ಬೊಮ್ಮಾಯಿ ಬರೆದ ಎಂ. ಎನ್. ರಾಯ್ ಕುರಿತ ಬರಹ ಓದಿ, ಅನ್ಯಾಯದ ವಿರುದ್ಧ ಹೋರಾಟ ಅಂದ್ರೆ ಕಾಂಗ್ರೆಸ್ ವಿರುದ್ಧ ಹೋರಾಟ ಅಂತ ಅನಿಸಿಬಿಟ್ಟಿತ್ತು. ಕಾಂಗ್ರೆಸ್ ಬಗ್ಗೆ ವಿರೋಧ ಭಾವನೆ ಬಂದಿತ್ತು. ನನ್ನಂಗೆ ಅನಿಸಿದೋರು ಅಲ್ಲಾವುದ್ದೀನ್ ಹಿಪ್ಪರಗಿ, ದಸ್ತಗೀರ್ ಸಾಹೇಬ್ ಕೊಲ್ಹಾರ್, ಬಾಲಸಿಂಗ್ ಉಸ್ತಾದ ಮೊದಲಾಗಿ ಬಾಳ ಮಂದಿ ಇದ್ರು. ಇವರೆಲ್ಲ ಉತ್ತರ ಕರ್ನಾಟಕ ಭಾಗದಲ್ಲಿ ಕಮ್ಯುನಿಸ್ಟ್ ಪಕ್ಷ, ಚಿಂತನೆ ಬೆಳೆಯಕ್ಕೆ ಕಾರಣ ಆದವರು. 1945-46ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಶುರು ಮಾಡಿದ್ರು. ನಾನು ಕಾಂಗ್ರೆಸ್ ಬಿಟ್ಟು ಎಡಕ್ಕೆ ಬರಲು ಡಾ. ಸಂಗಪ್ಪ ಮನಗೂಳಿ ಕಾರಣ. ಅವರು ನಾನಾಸಾಹೇಬರ ತೂಫಾನ್ ಸೇನೇಲಿದ್ರು. ರಾಮದುರ್ಗ, ಜತ್ತ್, ಸಾಂಗ್ಲಿ, ಜಮಖಂಡಿ ಸಂಸ್ಥಾನಗಳ ವಿರುದ್ಧ ಪ್ರಜಾ ಪರಿಷತ್ ಕಟ್ಟೋದ್ರಲ್ಲಿ ಅವರು ಪಾತ್ರ ದೊಡ್ಡದು. 1962ರಲ್ಲಿ ಜಾಗೃತ ಭಾರತ ಪತ್ರಿಕೆ ಶುರುವಾಯ್ತು. ನಮ್ಮ ಸಂಬಂಧ ಗಾಢವಾಗಿ ಬೆಳೀತು. ರಾವ್ ಬಹಾದೂರ್, ಸದಪ್ಪ ಅಕ್ಕಿ ಅವರ ಪರಿಚಯ ಆಯ್ತು. ಇಂಚಗೇರಿ ಸಂಪ್ರದಾಯದ ಪರಿಚಯಾನೂ ಆತು. ಇಂಚಗೇರಿ ಊರಂತೂ ಕಮ್ಯುನಿಸ್ಟ್ ಊರಿನಂಗಿತ್ತು. ಅಲ್ಲಿ ಮಕ್ಕಳಿಗೆ ಲೆನಿನ್, ಮಾವೋ ಅಂತೆಲ್ಲ ಹೆಸರಿಟ್ಟಿದ್ರು. ಆ ಹೆಸರಿನೋರು ಈಗೂ ಸಿಗತಾರೆ ನಿಮಗೆ. ಅವರು ಭೂಮಾಲಿಕರ ವಿರುದ್ಧ ದೊಡ್ಡ ಹೋರಾಟ ನಡೆಸಿದರು. ಭೀಮಾ ನದಿ ದಂಡೆಯ ಜಾಗೀರದಾರರ ವಿರುದ್ಧ ಭಾಳ ಹೋರಾಟ ನಡೆದವು. ಈ ಹೋರಾಟ ಕಟ್ಟಲಿಕ್ಕೆ ಅಂತನೇ ರೈತಸಂಘದ ಯುನಿಟ್ಸ್ ಇದ್ದವು. ತೆಲಂಗಾಣ, ಬಂಗಾಳ, ಯುಪಿ ತರಾನೇ ಇಲ್ಲೂ ಸಣ್ಣಪುಟ್ಟ ಭೂ ಹೋರಾಟ ನಡೆದೇ ಇತ್ತು. ಇಂಚಗೇರಿ ಮಹಾದೇವಪ್ಪನವರ ನಂತರ ಭೂಪಾಲ ನಾಂದ್ರೇಕರ್ ಅಲ್ಲಿಗೆ ಬಂದ್ರು. ಇಂಚಗೇರಿ ಮಠ ಹೇಗಿತ್ತು ಅಂದ್ರೆ ಎಲ್ಲೇ ಏನೇ ತಕರಾರು ನಡೀಲಿ, ಮಠ ಮಧ್ಯಪ್ರವೇಶ ಮಾಡಿ ಲೋಕಲ್ ಕೋರ್ಟ್ ತರಹ ನ್ಯಾಯ ಬಗೆಹರಿಸ್ತಾ ಇತ್ತು. ಯಾವ್ದೇ ಭಾಗದಲ್ಲಿ ಹೋರಾಟ ನಡೀಲಿ, 200, 300, 500 ಜನ ಕಾರ್ಯಕರ್ತರ ತಂಡ ತಗಂಡು ಇಂಚಗೇರಿಯ ಲೀಡರ್ಸ್ ಬರ್ತಿದ್ರು. ಸರ್ಕಾರದೋರು ಎಷ್ಟೋ ಸಲ ಡಾಂಗೆ, ಇಂಚಗೇರಿ ಮಹಾದೇವಪ್ಪ, ಡಾ. ಮನಗೂಳಿ ಅವರನ್ನೆಲ್ಲ ಅರೆಸ್ಟ್ ಮಾಡಿ ಆರ್ಥರ್ ರೋಡ್ ಜೈಲಲ್ಲಿಟ್ಟಿದ್ರು. ಒಂದ್ಸಲ ಜೈಲಲ್ಲಿ ಡಾಂಗೆ ಮರ್ಡರ್ ಆಗ್ತಿದ್ರು. ಅವರನ್ನು ಅಂಕೋಲಾದ ಗಣು ನಾಯ್ಕರ್ ಉಳಿಸಿದ್ದು. ಆಗ ಬಿ. ವಿ. ಕಕ್ಕಿಲ್ಲಾಯ ಅವರ ಹತ್ರ ಭೂಗತ ಪಾರ್ಟಿಯ ಕೆಲವು ಜವಾಬ್ದಾರಿಗಳಿದ್ವು. ಅವರು ಮಹಾರಾಷ್ಟ್ರ ಪಾರ್ಟಿ ಯುನಿಟ್‍ಗಿಂತ ಬೆಂಗಳೂರು ಯುನಿಟ್ ಜೊತೆ ಹೆಚ್ಚು ಸಂಪರ್ಕ ಇಟ್ಕಂಡಿದ್ರು. ಹಿಂಗಾಗಿ ಕರ್ನಾಟಕದ ಏಕೀಕರಣಕ್ಕೆ ಮುಂಚೆನೇ ನಾವು ಬೆಂಗ್ಳೂರಿನ ಪಾರ್ಟಿ ಜನರ ಜೊತೆಗೆ ಹೆಚ್ಚು ಸಂಪರ್ಕ ಬೆಳೆಸಿದ್ವಿ.

ನೀವು ಜಮೀನ್ದಾರರ ಮನೆಯವರು. ಭೂ ಹೋರಾಟದಲ್ಲಿ ತೊಡಗಿದ್ದಕ್ಕೆ ಮನೆಯಲ್ಲಿ ಏನೂ ಹೇಳಲಿಲ್ವಾ?

ಯಾರೂ ನನ್ನನ್ನ, ನನ್ನ ಕೆಲ್ಸಾನ ಕೇರ್ ಮಾಡ್ಲಿಲ್ಲ. ಇಂವಾ ಏನೋ ಹೇಳತಾನ, ಹೋರಾಟ ಗೀರಾಟ ಅಂತ ಅನ್ನತಾನ, ಹಂಗೆಲ್ಲಾಕತಿ ಅಂತ ಬಾಳ ಧೈರ್ಯದಾಗಿದ್ರು. ಮುಂಬೈ ಪ್ರಾಂತ್ಯದೊಳಗ ಒಂದು ಕುಟುಂಬ ಹೆಚ್ಚಂದ್ರ 52 ಎಕರೆ ಜಮೀನು ಇಟಗೋಬೌದು; ಒಕ್ಕಲುತನಕ್ಕ ಬ್ಯಾರೇದರಿಗೆ ಕೊಟ್ಟ ಜಮೀನು ಉಳೋರಿಗೇ ಸೇರತದೆ ಅನ್ನೋ ಕಾಯ್ದೆನ ಮೊರಾರ್ಜಿ ದೇಸಾಯಿ ಜಾರಿಗೆ ತರತಾನೆ ಅಂತ ಸುದ್ದಿ ಬಿತ್ತು. ಅದು ಗೊತ್ತಾಗಿದ್ದೇ ಮೋಜಣಿ ಇಲಾಖೇಲಿ ನೌಕರ ಆಗಿದ್ದ ನಮಪ್ಪ ಹೊಲಾ ಎಲ್ಲ ವಾಪಸ್ ತಗಂಡು ಒಕ್ಕಲುತನಾ ಚಾಲೂ ಮಾಡಿದ. ನಾ ಸಣ್ಣಾವಿದ್ದಾಗೇ, 10 ತಿಂಗಳಾ ಇರಬೇಕು, ಅವ್ವ ತೀರ್ಕಂಡಿದ್ಲು. ಮತ್ತೆ ಮದುವೆ ಆಗಲಿಲ್ಲ. ನಮ್ಮನ್ನು ನೋಡಿಕಳೋ ಕೆಲಸ, ರೈತಾಪಿ ಎಲ್ಲಾ ಮಾಡಾಕ ಹತ್ತಿದ್ದ. 1966ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆದಾಗ ಟೆನನ್ಸಿ ತರಹದ ಏನೋ ಮಾಡಾಕ್ ಹೋದ್ರು. ಆದ್ರೆ ಅದು ಸರಿ ಇರ್ಲಿಲ್ಲ. ಉಳೋರಿಗೆ ಸಿಗೋ ಭೂಮಿಗೂ ಒಂದು ಸೀಲಿಂಗ್ ಹಾಕಿದ್ರು. ಅದಕ್ಕೆ ಬಾಳ ವಿರೋಧ ಬಂದವು. ಆದರೆ ದೇವರಾಜ ಅರಸು ಕಾಯ್ದೆ ಬಂತಲ್ಲ, ಅದು ನಿಜಕೂ ರೆವಲ್ಯೂಷನರಿನೇ. ಬಂಗಾಳ, ಕೇರಳದ ಕಾಯ್ದೆಕಿಂತಾ ಅದು ರೆವಲ್ಯೂಷನರಿ. ಯಾಕಂತಿರಾ? ಅಲ್ಲಿ ಪಹಣಿಯಿರಬೇಕು, ಉಳುಮೆ ಮಾಡುತ್ತಿರುವ ರೈತರ ಹೆಸರಿರಬೇಕು ಅಂದಿದ್ರು. ಇಲ್ಲಿ ಅದೇನಿಲ್ಲ. ಸಾಕ್ಷಿ ಸಾಕು. ಟ್ರಿಬ್ಯೂನಲ್ ಮಾಡಿಬಿಟ್ರು, ಲೋಕಲ್ ಟ್ರಿಬ್ಯೂನಲ್. ಅದರಲ್ಲಿ ಬೇರೆಬೇರೆ ಗುಂಪಿನ ಹಿರೇರನ್ನ ಹಾಕಿ ಒಬ್ರಿಗೊಬ್ರು ಸುಳ್ಳು ಹೇಳಲಾರದಂಗ ಸತ್ಯ ಸೀಲ್ ಆಗೋಹಂಗ ಆತು. ನಿಂ ಕಾರವಾರ, ದಕ್ಷಿಣಕನ್ನಡ ಜಿಲ್ಲೆ ವಳಗ ಬಾರೀ ಸಕ್ಸಸ್ ಆಯ್ತು. ಹೌದಿಲ್ಲೋ? ಆದ್ರ ನಂ ಜಿಲ್ಲೆಯೊಳಗ ಬಾಳ ಮಂದಿ ಉಳುಮಿ ಮಾಡೋರ ಹತ್ರ ಜುಲುಮಿಂದ ಸಹಿ ತಗೊಂಡ್ರು. ಅದ ತಿಳಿದು ನಾವು ಹೋರಾಟ ಮಾಡ್ತಿದ್ದೆವು.

ಇನ್ನ ನಂ ಮನೆಯೋರು. ಅವರು ನನ್ನ ಲೆಕ್ಕದಿಂದ ಬಿಟ್ಟಿದ್ರು. ಯಾಕ? ನಾ 16 ವರ್ಷಕ್ಕ ಜನಿವಾರ ತಗದು ಹರ್ದುಹಾಕಿದ್ದೆ. ಗುಡಿಗೆ ಹೋಗೋದು ಬಿಟ್ಟಿದ್ದೆ. ಹಾಗಂತ ಮನೇ ಬಿಡಲಿಲ್ಲ. ಹೋಗಿ ಬರತಾ ಇರ್ತಿದ್ದೆ. ಅಪ್ಪ ಇಲ್ಲಾದ ಮ್ಯಾಲ ಜಮೀನು ಉಳುಮಿ ಮಾಡ್ತಿದ್ದೆ. ನಂಗೆ ಅವರು ಸಪೋರ್ಟೂ ಕೊಡ್ಲಿಲ್ಲ, ವಿರೋಧನೂ ಮಾಡಲಿಲ್ಲ. ಅವರಿಗೆ ಎರಡು ವಿಷ್ಯ ಗೊತ್ತಿದ್ವು: ಇಂವಾ ಕೆಣಕಿದರ ಸುಮ್ಮಿರಾಂವಲ್ಲ ಅನ್ನೋದೊಂದು. ಮತ್ತ ಇಂವಾ ಕೆಟ್ ಕೆಲ್ಸಾ ಮಾಡಂಗಿಲ್ಲ ಅನ್ನೋದು ಇನ್ನೊಂದು. ನಾ ಯಾವ ಪುಸ್ತಕ ತಂದು ಓದತಿದ್ನೋ ನಮಪ್ಪ ಅವನೆಲ್ಲಾ ಓದತಿದ್ದ. ಅವರಿಗೆ ನಂದೇನು ಅಂತ ಗೊತ್ತಿತ್ತು. ಹಂಗಾಗಿ ಯಾವುದಕೂ ಜುಲುಮಿ ಮಾಡಲಿಲ್ಲ.

ಪ್ರೇಮ ಗೀಮ?

ಏ ಎಲ್ಲಾದ್ರೂ ಐತೆನು? ಆಗೆಲ್ಲ ಗಂಡು, ಹೆಣ್ಣು ಒಟ್ಟು ಕೂಡಿ ಕೆಲ್ಸಾ ಮಾಡೋ ಹೊಕ್ಕು ಬಳಕೆನೇ ಇದ್ದಿದ್ದಿಲ್ಲ. ಮುಂಬೈ, ಕಲಕತ್ತಾದಂತ ಕಡೆ ಇದ್ದಿರಾಕಬೇಕು ಅಷ್ಟ. ಕರ್ನಾಟಕದ ಕಮ್ಯುನಿಸ್ಟ್ ವಲಯದಾಗಂತೂ ಹೆಣ್ಣುಮಕ್ಕಳು ಗಂಡುಮಕ್ಕಳು ಒಗ್ಗೂಡಿ ಕೆಲಸಾ ಮಾಡೋದು ಒಟ್ ಇರ್ಲಿಲ್ಲ.

ಆದರೆ ಕಾಂಗ್ರೆಸ್ಸಿನಲ್ಲಿ, ನೀವಿದ್ದ ಸೇವಾದಳದಲ್ಲಿ ಸಾಕಷ್ಟು ಹೆಣ್ಣುಮಕ್ಕಳಿದ್ರು. 300 ವಿಧವೆಯರ ಒಂದು ಮಹಿಳಾ ತಂಡವನ್ನು ಉಮಾಬಾಯಿ ಕುಂದಾಪುರ ಕಟ್ಟಿದ್ದರು. ಗಾಂಧೀಜಿಯವರ ಕಾಲದಲ್ಲಿ ಹೆಚ್ಚು ಹೆಣ್ಣುಮಕ್ಕಳು ಸಾಮಾಜಿಕವಾಗಿ ತೊಡಗಿಕೊಂಡಿದ್ರು.

ಹೌದು. ಉಮಾಬಾಯಿ, ಯಶೋಧರಮ್ಮ ತರಾ ಬಾಳ ಮಂದಿ ಹೆಣಮಕ್ಕಳು ಕಾಂಗ್ರೆಸ್ಸಿಗೆ ಬಂದ್ರು. ಆದರ ಕಮ್ಯುನಿಸ್ಟ್ ಪಕ್ಷದೊಳಗ ಅಷ್ಟು ನಡೀಲಿಲ್ಲ ಅಂತ ಅನಸತದ. ಸಮಸಮಾಜ ಅನ್ನೋವಂತಾ ನಾವು, ಹುಡಕಿ ಹುಡುಕಿ ಇನ್ನೂ ಅಷ್ಟು ಹೆಣಮಕ್ಳನ್ನ ಸೇರಿಸಿಕೋಬೇಕಿತ್ತು ಅಂತನಿಸತದ.

ಸಮಸಮಾಜ ಕನಸಿನ ಪಕ್ಷದ ಅಜೆಂಡಾದಲ್ಲಿ ಗಂಡುಹೆಣ್ಣು ಸಮಾನತೆ ಇರಲಿಲ್ಲ ಅಂತಾಯ್ತು. ಇವತ್ತಿಗೂ ಕಮ್ಯುನಿಸ್ಟ್ ಪಕ್ಷಗಳ ಪಾಲಿಟ್ ಬ್ಯೂರೋದಲ್ಲಿ ಮಹಿಳೆಯರು ವಿರಳವಾಗಿರೋದಕ್ಕೆ ಇದೇ ಮನಸ್ಥಿತಿ ಕಾರಣವಾಗಿರಬಹುದೇ?

ಹೌದು. ನೀವು ಹೇಳಿದ್ದನ್ನೆಲ್ಲ ನಾನು ಹೊತಗೋತೀನಿ, ತಪ್ಪಾಗೇದ. ಮಹಿಳಾ ಪ್ರಶ್ನೆ ನಮಗ ಮುಖ್ಯ ಆಗಲಿಲ್ಲ. ನಮದಷ್ಟೇ ಅಲ್ಲ, ನನಗನಿಸತದ, ಏಷ್ಯನ್ ದೇಶಗಳಲ್ಲೆಲ್ಲ ಹೀಂಗ ಆಗೇದ. ಮತ್ಯಾರೂ ಬೇಡ, ಕಾಮ್ರೇಡುಗಳು ಅವರವರ ಮನೆ ಹೆಣಮಕ್ಳನ್ನ ಕರಕಂಡು ಬಂದ್ರೂ ಸಾಕಿತ್ತು. ಜಾಗೃತಿ ಬೆಳೀತಿತ್ತು. ಅದು ಆಗಲಿಲ್ಲ. ಇನ್ನು ಯುವಕಾರ್ಯಕರ್ತರಿಗೆ ವೈರಾಗ್ಯ, ಬ್ರಹ್ಮಚರ್ಯಗಳು ಮಹಾ ಮೌಲ್ಯಗಳು ಅನ್ನಂತಹ ವಾತಾವರಣ. ನನ್ನ ಮೇಲೆ ಆನಂದಮಠ ಕಾದಂಬರಿ ಪ್ರಭಾವ, ಅರಬಿಂದೋ, ದಯಾನಂದ ಸರಸ್ವತಿ, ವಿವೇಕಾನಂದರ ಪ್ರಭಾವ ಆಗಿರಬಹುದು. ನಾನಂತ್ರೂ ಗಾಂಧಿ ಪುಸ್ತಕ ಓದೇ ಲಗ್ನಾ ಆಗದು ಬಿಟ್ಟೆ. ಮದಿವಿ ಕಡೆ ಮನಸ್ಸೇ ಹರೀಲಿಲ್ಲ. ಮನಿಯಾಗ ಮದವಿ ಅಂದ್ರು. ಇಲ್ಲ, ಸ್ವಾಮಿ ವಿವೇಕಾನಂದರ ಹಾದೀ ವಳಗ, ಗಾಂಧೀ ಹೇಳಿದಂಗ ಬ್ರಹ್ಮಚಾರಿಯಾಗಿ ಇರತೀನಿ ಅಂದೆ. ಅಣ್ಣಂದ್ರ ಮದುವೆಯಾತು, ಅವರ ಸಂಸಾರ ಬೆಳಕೋತ ಹೋಯ್ತು.

ನೀವು ಅರೆಸ್ಟ್ ಆಗಿದ್ರಾ? ಭೂಗತ ಆಗಿದ್ರಾ?

ಅರೆಸ್ಟ್ ಆಗೇನಿ, ಆದರ ಭೂಗತ ಆಗಲಿಲ್ಲ. ನನ್ನ ಕೆಲಸದ ರೀತೀಲಿ ಯಾವಾಗೂ ಭೂಗತ ಆಗೂ ಪ್ರಸಂಗ ಬರಲಿಲ್ಲ. ಆದರ ಭಾಳ ಮಂದಿ ಭೂಗತ ಆಗಿ ಕೆಲಸಾ ಮಾಡ್ಯಾರ. ಹುತಾತ್ಮ ಆಗ್ಯಾರ. ಮನೀಮಠ ಆಸಿ ಬಿಟ್ಟು ಜೈಲಿನ್ಯಾಗ ಕೊಳತಾರ. ನಾ ಲಾಕಪ್ಪಿನಾಗ ಹೊಡತ ಬಡತ ತಿಂದೇನಿ, ಭೂಗತ ಆಗಲಿಲ್ಲ.

ಕಮ್ಯನಿಸ್ಟೇತರ ಚಟುವಟಿಕೆಗಳಲ್ಲೂ ಇದ್ರಾ?

1955 ಅನಸತದ, ಗೋವಾ ವಿಮೋಚನೆ ಟೈಮಲ್ಲಿ ಬೇರೆ ಬೇರೆ ಕಡೆಯಿಂದ ಕಾರ್ಯಕರ್ತರನ್ನ ಕಳಿಸಿ ಹೋರಾಡಿದವರು ಕಮ್ಯುನಿಸ್ಟರೇ. ಅದು ಇಂಪೀರಿಯಲಿಸ್ಟ್ಸ್ ವಿರುದ್ಧ ಹೋರಾಟದಂಗ ತಿಳಿದಿವಿ. ಆಗೆಲ್ಲ ನಂ ಕಡೆಯಿಂದ ಕಾರ್ಯಕರ್ತರು ಗೋವಾದ ಒಳಗ ನುಸುಳಿದರು.

ಕಮ್ಯುನಿಸ್ಟೇತರ ಚಟುವಟಿಕೆ ಅಂದ್ರ, ನಾ ಒಬ್ಬನ ಅಲ್ಲ, ನಾವು ಬಾಳ ಮಂದಿ ಪಿಎಸ್‍ಪಿ, ಆರ್‍ಪಿಐ ಕೂಡೇ ಕೆಲಸ ಮಾಡತಿದ್ವಿ. 1960ರಲ್ಲಿ ರಾಷ್ಟ್ರೀಯ ಕಾರ್ಮಿಕ ಮುಷ್ಕರ ಆತು. ಜಾಗೃತ ಭಾರತ ಸಂಘಟನೆಯಿಂದ ಒಟ್ಟೇ ಹೋರಾಡಿದ್ವಿ. ನಾನು ಮೂರು ದಿನ ಲಾಕಪ್‍ನಲ್ಲಿದ್ದೆ. ಆಮ್ಯಾಲೆ ನಮ್ಮನ್ನ ಬಿಟ್ರು. ನಂ ಲೀಡರುಗಳನ್ನಷ್ಟೇ ಜೈಲಿಗೆ ಹಾಕಿದ್ರು. 1962ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೋರಾಟ ನಡೀತು. ಆಗ ಅದನ್ನ ಕೊಯ್ನಾ-2 ಪ್ರಾಜೆಕ್ಟ್ ಅಂತಿದ್ರು. ಮಹಾರಾಷ್ಟ್ರಕ್ಕ 4 ಕೋಟಿ ರೂಪಾಯಿ ಮೊದಲೇ ಕೊಟ್ಟಿದ್ದಿದ್ರೆ ವಿಜಾಪುರನೂ ಬಾಳ ಮೊದಲೇ ಸೊಲ್ಲಾಪುರದಂಗ ಆಗತಿತ್ತು. ಹಂಗಾಗಲಿಲ್ಲ. ಹೋರಾಟ ನಡೀತು. ವಿಜಾಪುರ ನಗರ ಸೇವಾ ಸಮಿತಿ ಅಂತ ಆತು. ಪಿ. ಎಸ್. ಪಾಟೀಲ್ ಅಧ್ಯಕ್ಷರು, ಲಾಯದಗುಂದಿ ಅದರ ಸೆಕ್ರೆಟರಿ. 4 ಲಕ್ಷ ಎಕರೆಗೆ ನೀರುಣಿಸೋ ಕೊಯ್ನಾ-2 ಬ್ಯಾಡ ನಮಗ, 22 ಲಕ್ಷ ಎಕರೆಗೆ ನೀರುಣಿಸೋ ಆಲಮಟ್ಟಿ ಪ್ರಾಜೆಕ್ಟ್ ತಗಳಿ ಅಂತ ಹೋರಾಟ ನಡೀತು. ಅದರಾಗ ನಾನಿದ್ದೆ. ನಾ ಒಬ್ಬನ ಅಲ್ಲ, ನಾವು ಬಾಳ ಮಂದಿ ಹೋರಾಟ ಮಾಡಿದ್ವಿ. ಕೊನೆಗೆ 1964ರಾಗ ಶಾಸ್ತ್ರಿಯವರು 15 ಲಕ್ಷ ಎಕರೆ ಯೋಜನೆಗೆ ಶಂಕುಸ್ಥಾಪನೆ ಮಾಡಿದರು.

ಕಮ್ಯುನಿಸ್ಟ್ ಪಕ್ಷ ವಿಭಜನೆ ಬಗ್ಗೆ ಏನು ಹೇಳ್ತೀರಿ?

ವಿಕೇಂದ್ರೀಕರಣ ಆಗಬೇಕೇ ಹೊರತು ವಿಚ್ಛಿದ್ರ ಆಗಬಾರದು. ನಾ ಇವತ್ಗೂ ಸಾಧ್ಯ ಇದ್ದಷ್ಟೂ ಒಂದಾಗ್ಬೇಕು ಅಂತೀನಿ. ಆದರ ಕಾಲ ಹೀಂಗ ಹೊಂಟದ, ಕಮ್ಯುನಿಸ್ಟ್ ಪಕ್ಷ ಅಷ್ಟ ಅಲ್ಲ, ಎಲ್ಲಾವ್ದೂ ಹೋಳಾಗ್ಯಾವ, ಆಗಲಿಕತ್ತಾವ. ಅದಕ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಿಂತ ಸ್ವಹಿತಾಸಕ್ತಿನೇ ಹೆಚ್ಚು ಕಾರಣ ಅನಸತದ ನನಗ. ನನ್ನ ಮಾತು ಸರಿ ಹೌದಲ್ಲೋ ನೀವ ಯೋಚನೆ ಮಾಡರಿ. ನೆಹರೂ ಸರ್ಕಾರದ ಜೊತೆ ಹೋಗಬೇಕೋ ಬೇಡವೋ ಅನ್ನುವುದೇ ಮುಖ್ಯ ಕಾರಣವಾಗಿ ಪಕ್ಷ ಒಡೀತು. ರಷ್ಯಾ ಜೋಡಿ ನೆಹರೂ ಗೌರ್ಮೆಂಟಿನ ಸಂಬಂಧ ಚಲೋ ಇತ್ತಲ, ಕೆಲವ್ರು ಕಾಂಗ್ರೆಸ್ ಜೊತೆನೇ ಇರೋ ನಿರ್ಧಾರ ಮಾಡಿದ್ರು. ಇಂಡೋಚೀನಾ ಯುದ್ಧ ಆಯ್ತು. ನೆಹರೂ ಜೊತೆ ಇಲ್ಲದೇ ಇರೋರು ಅರೆಸ್ಟ್ ಆದ್ರು. ಅವರೆಲ್ಲ ಸೇರಿ ಹೊಸಾ ಪಕ್ಷ ಹುಟ್ಟತು. ಇದ್ರ ಬಗ್ಗೆ ಬಾಳಾ ಮಾತುಕತೆ ಆಗಿದೆ. ಬಾಳ ಗೊಂದಲ. ಎಷ್ಟು ಮಾತಾಡಿದರೂ ಸಮಾಧಾನ ಆಗಂಗಿಲ್ಲ. ಏನು ಹೇಳದು. ರಷ್ಯಾ ಚೀನಾ ದೂರ ಆಗಿ ಇಲ್ಲಿ ಎರಡು ಪಕ್ಷ ಆದ್ವು ಅನಿಸತದ. ಇಲ್ಲೀ ಬಾಳ ಮಂದಿ ಆಚೆಗ್ ಹೋದ್ರು. ಮೂಲ ಪಕ್ಷದಾಗ ಸ್ವಲ್ಪ ಜನ ಅಷ್ಟ ಉಳದ್ವಿ. ನಾನೂ ಮೂಲ ಪಕ್ಷದಾಗೇ ಉಳದೆ. ಪಕ್ಷ ಒಡದಿದ್ದು ಮತ್ತ ಒಡೀತು, ಮತ್ತ ಒಡೀತು. ಇದುತನಾ 20-30 ಹೋಳಾತಂದರ ಪಕ್ಷ, ಐಡಿಯಾಲಜಿ ಉಳೀತಾವೇನು? ಏನ್ ಡಿಫರೆನ್ಸ್ ಐತಿ, ಕೂತು ಮಾತಾಡಿ ಬಗೆಹರಿಸಿಕೋಬೇಕು, ಅಷ್ಟೇ ಶಿವಾಯ್ ಪಕ್ಷ ಒಡೀಬಾರ್ದು.

ತುರ್ತುಪರಿಸ್ಥಿತಿಯಲ್ಲಿ ನಿಮ್ಮ ಪಕ್ಷ ಕಾಂಗ್ರೆಸ್ಸನ್ನು ಬೆಂಬಲಿಸಿತಲ್ಲ?

ನನ್ನ ತಿಳುವಳಿಕೆ ಮಟ್ಟಿಗೆ ತುರ್ತು ಪರಿಸ್ಥಿತಿ ಬೆಂಬಲಿಸಲಿಕ್ಕೆ ಒಂದೇ ಕಾರಣ ಇದ್ದದ್ದು ನಮಗ. ಇಂದಿರಾ ಗಾಂಧಿ 20 ಅಂಶದ ಕಾರ್ಯಕ್ರಮ ಹಾಕಿದ್ರಲ್ಲ, ಅದು ಪೂರಾ ಆಂಟಿ ಫ್ಯೂಡಲ್ ಕಾರ್ಯಕ್ರಮ ಮತ್ತು ಅದು ಜಾರಿಗೆ ಬರೋದರಲ್ಲಿ ನಮ್ಮ ಹೋರಾಟನೂ ಇತ್ತು. ಹೌದಿಲ್ಲೋ ನೀವ ನೋಡ್ರಿ, 1969ರಿಂದ 1975-76ರ ತನಕದ ಇಂದಿರಾ ಕಾಂಗ್ರೆಸ್ ಬೇರೆ. ಎಮರ್ಜೆನ್ಸಿ ನಂತರದ ಸಂಜಯ್ ಗಾಂಧಿ ಕಾಂಗ್ರೆಸ್ ಬೇರೆ. ಹಾಗಾಗಿ 20 ಅಂಶದ ಕಾರ್ಯಕ್ರಮ ಅನುಷ್ಠಾನ ಆಗಾಕ ಎಮರ್ಜೆನ್ಸಿ ಒಳ್ಳೇ ಅವಕಾಶ ಅಂತ ತಿಳಿದಿವಿ. ಬಾಳ ಕೆಲಸಾ ಮಾಡಿದಿವಿ. ಅದು ಎಲ್ಲೆಲ್ಲಿ ಅನುಷ್ಠಾನ ಆಕೋತ ಹೋಯ್ತೋ, ಅಲ್ಲೆಲ್ಲ ನಾವು ಅರೆಸ್ಟ್ ಆದ್ವಿ. ದೇಶಾದ್ಯಂತ ಒಟ್ಟು 32,000 ಸಿಪಿಐ ಕಾರ್ಯಕರ್ತರು ಬಂಧನಕ್ಕೊಳಗಾಗ್ಯಾರ. ಆದರ ಎಮೆರ್ಜೆನ್ಸಿ ಹೊತ್ತಿನಾಗೂ ಸರ್ಕಾರನ ಸಪೋರ್ಟ್ ಮಾಡಿದ್ದಕ್ಕೆ ಪಕ್ಷ ಬಾರೀ ಹೊಡೆತ ತಿಂದಿದೆ. ಮತ್ತ ಪಾರ್ಟಿ ಒಳಗ ವಿರೋಧ ಅಭಿಪ್ರಾಯ ಬಂದು ಒಡೆದಿದೆ. ನಂ ಲೀಡರಾಗಿದ್ದ ಡಾಂಗೆಯವರನ್ನೆ ತೆಗೆದು ಹಾಕಿದಾರೆ. ಪಕ್ಷ ಮತ್ತ ಮತ್ತ ಒಡೀಲಿಕ್ಕೆ, ದುರ್ಬಲ ಆಗೋದಕ್ಕೆ ಇವೆಲ್ಲ ಕಾರಣ ಆಗ್ಯಾವ. ಆದರ ಈಗ ಯಾಕೋ ದೊಡ್ಡ ಶತ್ರು ಎದುರು ಬಂದು ನಿಂತಂತ ಹೊತ್ತಿನ್ಯಾಗ ಎಲ್ರೂ ಕೂಡುವ ಮಾತಾಡ್ಲಿಕ್ ಹತ್ಯಾರ. ನೀವೂ ಎಲ್ಲಾರ್ನೂ ಕೂಡಿಸಿಕೋತ ಹೊಂಟೀರಿ. ಅದ ಸ್ವಲ್ಪು ಸಮಾಧಾನ ಅನಿಸೇದ. ಒಂದೇ ದಾರೀ ವಳಗ ಹೋಗೋರು, ಒಂದೇ ಕನಸಿನ್ಯಾಗ ದುಡಿಯೋರು ನಾವು `ನಾನು, ನಂದು’ ಆಗಬಾರ್ದು. ಕೂಡಿ ಚರ್ಚಾ ಮಾಡಬೇಕು, ಕೂಡಿ ಕೆಲಸಾ ಮಾಡಬೇಕು, ಕೂಡಿ ಬಾಳಬೇಕು. ಆಗ ಸಮಾಜದಾಗ ಏನಾದರೂ ಬದಲಾವಣೆ ತರೋಕೆ ಸಾಧ್ಯ ಆಗತದ. ಹೌದಿಲ್ಲೋ?

ನಾನು ಎನ್ನುವುದನ್ನು ಆದಷ್ಟು ತಪ್ಪಿಸಿಕೊಳ್ಳಲು ನೋಡುತ್ತಿದ್ದ ಆ ಸಂಘಜೀವಿ, `ಏ, ನಾ ಮಾಡಿದ್ದಲ್ಲದು’, `ನಾವೊಬ್ಬನ ಅಲ್ಲ’, `ನಾವು ಅಷ್ಟ್ರೂ ಕೂಡಿ ಮಾಡೇವಿ’ಯಂತಹ ಮಾತುಗಳನ್ನು ಪದೇಪದೇ ಹೇಳುತ್ತ `ನಾನು’ವಿನಿಂದ ದೂರ ಇರಲು ಯತ್ನಿಸಿದ್ದು ವಿಶೇಷವೆನಿಸಿತು. ಅವರ ಆರೋಗ್ಯದ ಬಗೆಗೆ ವಿಚಾರಿಸಿದಾಗಲೂ ಸಹ, ಅದೇನೂ ದೊಡ್ಡ ಸಮಸ್ಯೆಯಲ್ಲವೆಂಬಂತೆ ತೇಲಿಸಿದರು. ಮಾತಾಡುವಾಗ ಬರುವ ಏದುಸಿರು, ಬಾತುಕೊಂಡ ಕಾಲು, ಆಯ ತಪ್ಪುತ್ತ ನಡೆಯುತ್ತಿದ್ದ ಪರಿಗೆ ಮತ್ತೆಮತ್ತೆ ಆರೋಗ್ಯದ ಬಗೆಗೆ ಕೇಳಿದೆವು. `ಹಾರ್ಟಿನ ಪಂಪ್ ಏನೋ ಸರೀ ಕೆಲಸ ಮಾಡತಿಲ್ಲ ಅನತಾರ, ಅದಕ ಮಾತ್ರೆ ಕೊಟ್ಟಾರ. ಊಟ ಎಷ್ಟ್ ಉಣತೀನೋ ಅಷ್ಟು ಮಾತ್ರೆನೂ ತಗೋರಿ ಅನತಾರ. ನಮದೆಲ್ಲ ಮುಗೀತಿನ್ನು, ಗುಳಿಗಿ ಪಳಿಗಿ ಅಂತ ರೊಕ್ಕಾ ವೇಸ್ಟು. ಅದಕ ನಾನ ಕಡಿಮಿ ಮಾಡಿಕೋತ ಬಂದೇನಿ. ಶುಗರು ಬಂದದ ಅಂದರು. ಅದು ಬ್ಯಾಡ, ಇದು ಬ್ಯಾಡ ಅಂದ್ರು. ಈಗ ಯಾರೋ ಹೊಸಬ ಡಾಕ್ಟರು ಸಿಕ್ಕಾರ. ಔಷಧ ಇಲ್ಲದಂಗ ಕಡಿಮಿ ಮಾಡಿ ಕೊಡತೇನಿ ಅಂದಾರ. ಎಲ್ಲಾನೂ ಕಡಿಮಿ ಈಗ’ ಎಂದು ಆರೋಗ್ಯದ ವಿಷಯ ಬೆಳೆಸಲಿಚ್ಛಿಸದೆ ಮೊಟಕುಗೊಳಿಸಿದರು. ಬಹುತೇಕ ಹೋರಾಟಗಾರರು ಪ್ರಾಯದ ಕಾಲದಲ್ಲಿ ಆರೋಗ್ಯದ ಬಗೆಗೆ ಕಾಳಜಿ ವಹಿಸಿರುವುದಿಲ್ಲ. ದೇಹ ಮಾಗಿದಾಗಲೂ ಕಾಯಿಲೆಗೆ ಔಷಧಿ, ಆಹಾರಕ್ರಮ, ವ್ಯಾಯಾಮಗಳ ಬಗೆಗೆ ವಿಶ್ವಾಸವಿಡುವುದಿಲ್ಲ. ಗಾಂಧಿ ಇದಕ್ಕೊಂದು ಅಪವಾದದಂತಿದ್ದದ್ದು ಬಿಟ್ಟರೆ ಬಹುತೇಕರು ಹೀಗೇ ಇರುವರಲ್ಲ ಎಂದುಕೊಳ್ಳುತ್ತ ಮೇಲೆದ್ದೆವು.

ಒಮ್ಮೆ ಅವರ ಮನೆ ಸುತ್ತು ಹಾಕೋಣವೆಂದು ಹೊರಟೆವು. ಆ ಮನೆಗೆ ಎಲ್ಲೂ ಕಿಟಕಿಯಿಲ್ಲ, ಮೇಲೊಂದು ಸಣ್ಣ ಗೂಡಿನಂತಹ ಕಿಂಡಿ ಮಾತ್ರ. ಆದರೂ ನಂಬಿ, ಬಿರುಬೇಸಿಗೆಯ ಒಂದು ದಿನ, ವಿಜಯಪುರ ಜಿಲ್ಲೆಯ ಒಂದೂರಿನಲ್ಲಿ, ಫ್ಯಾನಿಲ್ಲದ ಮನೆಯ ಕೋಣೆಯಲ್ಲಿ ಸೆಕೆಯಿಲ್ಲದೆ ಕುಳಿತಿದ್ದೆವು. ಎರಡು ಮೊಳ ದಪ್ಪದ ಗೋಡೆಗಳ ಒಳಗಿನ ಕೋಣೆಯಂತೂ ಎಸಿ ರೂಮಿನಷ್ಟು ತಣ್ಣಗಿತ್ತು. ಮಣ್ಣುಕಲ್ಲು ಸೇರಿಸಿ ಕಟ್ಟಿದ ಹಳೆಯ ಮನೆಗಳು ಹಾಗೆಯೇ ಎಂಬ ತಂಪು ಎಂಬ ಉತ್ತರ ಹಿಟ್ನಳ್ಳಿಯವರಿಂದ ಬಂದಿತು.

ಆ ಮನೆಯಲ್ಲಿ ಫ್ಯಾನಷ್ಟೇ ಅಲ್ಲ, ಇನ್ನೆಷ್ಟೆಷ್ಟೋ ಇಲ್ಲ. ಮುಂದಿನ ಬಾಗಿಲು ಪೂರಾ ಹಾಕಲಾಗುವುದಿಲ್ಲ. ಹಿಂದಿನ ಬಾಗಿಲಿಗೆ ಕದವೇ ಇಲ್ಲ. ಅಡುಗೆಯ ಮನೆಯ ಒಂದುಕಾಲದ ಸಮೃದ್ಧಿ, ಸುವರ್ಣ ಯುಗಗಳನ್ನು ಸಾರುತ್ತ ಇರುವ ಒಲೆ, ತೋಡೊಲೆ, ನಾಗಂದಿಗೆ, ನೇತು ಹಾಕುವ ಗೂಟ, ನಿಲ, ಕಪಾಟು, ದೀಪದ ಗೂಡುಗಳು ಹತ್ತಾರು ವರ್ಷಗಳಿಂದ ಉಪಯೋಗವಾಗುತ್ತಿಲ್ಲ. ಅಡುಗೆ ಮನೆಯ ಹಿಂದಿನ ಬಾವಿ, ಬಟ್ಟೆ-ಪಾತ್ರೆ ತೊಳೆವ ಕಲ್ಲಿನ ಕಟ್ಟೆಗಳ ಸುತ್ತ ಜಾಲಿ, ಹಳು, ಕಳೆ ಬೆಳೆದು ಅವು ಕಾಣುವುದೇ ಇಲ್ಲ. ಮುಕ್ಕಾಲು ಭಾಗ ಬಳಸದೇ ಇರುವ ಮನೆಯು ಕೆಲವೇ ದಿನದಲ್ಲಿ ನೆಲಸಮವಾಗುವುದನ್ನು ತಪ್ಪಿಸುವ ಪ್ರಯತ್ನಗಳು ನಡೆದಂತಿಲ್ಲ. `ಇನ್ನೇಸು ದಿನ ಇರತೀನಿ ನಾ? ಎಲ್ಲ ಕಾಯಲಿಕತಾರ, ಈ ಮುತ್ಯಾ ಯಾವಾಗ ಸಾಯತಾನಂತ. ನಾ ಸತ್ತ ಕೂಡಲೇ ಈ ಮನೀ ಬೀಳತದ, ತಾರಸಿ ಮನೀ ಏಳತಾವ, ನೋಡತಿರ್ರಿ’ ಎನ್ನುತ್ತ ಮನೆ ರಿಪೇರಿ ಮಾಡಿಸುವ ಸಲಹೆಯನ್ನು ತುಂಡರಿಸಿ ವಿದಾಯದ ಮಾತು ಹೇಳಿದರು. `ನಿಮ್ಮನ್ನ ಬಿಟ್ಟು ಬರತೀನಿ’ ಅಂತ ತೇಲುಗಾಲು ಹಾಕುತ್ತ ನಮ್ಮ ಜೊತೆ ಬಂದರು. ಬೇಡಬೇಡವೆಂದು ನಾವು ಹೇಳಿದರೂ; `ಬಿಸುಲ್ಯಾಗ ಯಾಕ ಹೊಕ್ಕೀರಿ ಅಜ್ಜಾರ. ನಂ ಹುಡುಗ್ರನ್ನ ಕಳಸ್ತೀವಿ, ನೀವ್ ಹೋಗಬ್ಯಾಡ್ರಿ’ ಅಂತ ಬಾಜು ಮನೆಯ ಹೆಂಗಸರು ಕೂಗಿದರೂ ಅಜ್ಜ ಕೇಳಲಿಲ್ಲ. `ಮುತ್ಯಾ ಮಾತು ಕೇಳಂಗಿಲ್ಲ’ ಎಂದು ಅವರು ಗೊಣಗಿಕೊಂಡಿದ್ದು ಸರಿಯೆನ್ನುವಂತೆ ಅಜ್ಜಾರು ಪಂಚೆ ಚುಂಗನ್ನು ಒಂದು ಕೈಲಿ ಹಿಡಿದು, ಮತ್ತೊಂದು ಕೈ ಗಾಳಿಯಲ್ಲಾಡಿಸುತ್ತ ಮೂಲೆಯ ತನಕ ಬಂದು ನಮ್ಮನ್ನು ಕಳಿಸಿಯೇ ಹಿಂತಿರುಗಿದರು.

ಅದು ಕಾಮ್ರೇಡ್ ಪ್ರಕಾಶ್.

ಪ್ರಾಯದಲ್ಲಿ ಘನತೆಯಿಂದ, ದಿಟ್ಟವಾಗಿ ಲೋಕಕ್ಕಾಗಿ ಬದುಕಿ ಜೀವನ ಸವೆಸಿದ ಎಷ್ಟೋ ಹಿರಿಯ ಜೀವಗಳು ಇಳಿಗಾಲದ ಒಂಟಿತನ, ಅಸಹಾಯಕತೆ, ಏಕಾಂಗಿತನಕ್ಕೆ ಹಣ್ಣಾಗಿ ಆತ್ಮಮರುಕದಲ್ಲಿ ಮುಳುಗಿಹೋಗುತ್ತವೆ. ದಯನೀಯ ಮನಸ್ಥಿತಿ ತಲುಪುತ್ತವೆ. ಮತ್ತೆ ಕೆಲವರು ತಾವು ನಂಬಿದ್ದಕ್ಕೆ ವಿರುದ್ಧ ದಿಕ್ಕಿನತ್ತ ಚಲಿಸಿ ಢಿಕ್ಕಿ ಹೊಡೆದು ನಿಂತು ಮಣ್ಣಾಗುವುದೂ ಇದೆ. ಆದರೆ ಈ 83ರ ಹರೆಯದ ಘಾಟಿ ತರುಣ ಪ್ರಕಾಶ ಹಿಟ್ನಳ್ಳಿ ಮಾತ್ರ ಇಳಿಗಾಲದಲ್ಲೂ ತಮ್ಮ ವಿನಯ, ವಿಶ್ಲೇಷಣೆ, ವಿಮರ್ಶೆಯ ಗುಣಗಳನ್ನು ಬಿಟ್ಟುಕೊಡದೆ ಆರೋಗ್ಯಕರ ಮನಸ್ಸನ್ನು ಹೊಂದಿರುವುದು; ವರ್ತಮಾನದ ಸಣ್ಣ ಸೂಕ್ಷ್ಮಗಳನ್ನೂ ಗಮನಿಸಿ ಚರ್ಚಿಸುವುದು ಅನುಕರಣೀಯ ಗುಣವಾಗಿದೆ. ಸೆಕೆ, ಚಳಿ, ದೂಳು, ಬಿಸಿಲು, ಬರಗಳ ಸಮ್ಮಿಶ್ರ ನೆಲ ವಿಜಯಪುರವು ಇಂದು ಅಷ್ಟಿಷ್ಟಾದರೂ ಸಮೃದ್ಧಿ, ನೆಮ್ಮದಿ ಪಡೆದಿದ್ದರೆ ಅದಕ್ಕೆ ಪ್ರಕಾಶರ ತಲೆಮಾರಿನ ಹತ್ತುಹಲವು ಹೋರಾಟಗಾರರ ನಿಸ್ವಾರ್ಥ ತೆತ್ತುಕೊಳ್ಳುವಿಕೆ ಕಾರಣವಾಗಿದೆ. ಇವರೆಲ್ಲರ ಹೋರಾಟದ ಬದುಕುಗಳು ಕಾಲದ ವಿಸ್ಮೃತಿಗೆ ಸರಿಯುವ ಮುನ್ನ ದಾಖಲಿಸುವ ಕೆಲಸವಾಗಬೇಕಿದೆ ಎಂದುಕೊಳ್ಳುತ್ತ, ಅವರ ಬದ್ಧತೆ ನಮ್ಮ ಕಣ್ಣುಗಳಲ್ಲಷ್ಟು ಕನಸನ್ನಾದರೂ ತುಂಬಲಿ ಎಂದು ಹಾರೈಸಿಕೊಳ್ಳುತ್ತಾ ರಣಬಿಸಿಲಿನಡಿ ನಡೆಯತೊಡಗಿದೆವು.

ಡಾ. ಎಚ್. ಎಸ್. ಅನುಪಮಾ

ವೈದ್ಯರು, ಲೇಖಕರು

ಇದನ್ನೂ ಓದಿ-ಗದ್ದರ್ : ಮರೆಯಲಾಗದ ‘ಪಾಟ’, ಮರೆಯಬಾರದ ಪಾಠ

ಉಚಿತ `ಭಾಗ್ಯ’
ಅರ್ಥಶಾಸ್ತ್ರ ಹೇಳುವಂತೆ ಹಣವಂತರು ತಿಜೋರಿಗಳಲ್ಲಿ ಬಂಗಾರದ ಗಟ್ಟಿ, ನೋಟಿನ ಕಂತೆ ಕೂಡಿಟ್ಟರೆ, ಸಿಕ್ಕಸಿಕ್ಕಲ್ಲಿ ಸೈಟು ಕೊಂಡು ಬೇಲಿ ಹಾಕಿಸಿಟ್ಟರೆ ಆರ್ಥಿಕತೆ ಕುಸಿಯುತ್ತದೆ. ಆರ್ಥಿಕತೆಯನ್ನು `ಬೂಸ್ಟ್’ ಮಾಡಲು ಜನ ಖರ್ಚು ಮಾಡುವಂತಾಗಬೇಕು. ಈ `ಭಾಗ್ಯ’ಗಳ ಮೂಲಕ ಖರ್ಚು ಮಾಡಲು ಜನರ ಕೈಯಲ್ಲಿ ಕಾಸಿರಲಿದೆ ಎಂದಾದರೆ, ಮತ್ತು ಆ ಹಣ ಕೂಡಿಡುವುದಕ್ಕಲ್ಲದೆ ದಿನನಿತ್ಯದ ಉಪಯೋಗಗಳಿಗೆ ಚಲಾವಣೆಯಾಗುವುದಾದರೆ ಅದರಿಂದ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದೇ ಆಗಲಿದೆ – ಡಾ. ಎಚ್ ಎಸ್‌ ಅನುಪಮಾ

ಕಾಂಗ್ರೆಸ್ ಸರಕಾರ ಕೊಡುತ್ತಿರುವ ಐದು `ಭಾಗ್ಯ’ಗಳು ಉಚಿತವಾದವು. ಉಚಿತ ಎಂಬ ಪದದ ಅರ್ಥ ಪುಕ್ಕಟೆ ಅಲ್ಲ, `ಸೂಕ್ತ’ ಎಂದು. ಎಂದರೆ ಈ ಐದೂ ಕೊಡಲೇಬೇಕಾದ ಜವಾಬ್ದಾರಿಗಳು. ಕೊಡದಿರುವುದು ಅನುಚಿತ. ಬಡತನದ ಬಿಕ್ಕಟ್ಟುಗಳ ಅರಿವಿಲ್ಲದ, ಆರ್ಥಿಕತೆಯ ಗಂಧಗಾಳಿ ಇಲ್ಲದ `ಟ್ಯಾಕ್ಸ್‌ಪೇಯರ್’ಗಳು, ಯಾವುದನ್ನು ಹೇಗೆ ವಿರೋಧಿಸಬೇಕೆಂದರಿಯದ ವಿರೋಧಪಕ್ಷಗಳು ಭಾಗ್ಯಗಳ ಬಗೆಗೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಈಗಾಗಲೇ ಜಾರಿಯಾಗಿರುವ, ಮಹಿಳೆಯರಿಗೆ ಶುಲ್ಕರಹಿತ ಬಸ್ ಪ್ರಯಾಣ `ಶಕ್ತಿ’ಯ ಬಗೆಗಂತೂ ವಿಪರೀತದ ಕುಹಕ ಕೇಳಿಬರುತ್ತಿದೆ. ಏನಚ್ಚರಿ? ಮಹಿಳೆಯರ ದುಡಿಮೆ, ವಿರಾಮ, ಮನರಂಜನೆಯ ಬಗೆಗೆ ಸಮಾಜ ಹೊಂದಿರುವ ಅಸಡ್ಡೆ ಈ ಪ್ರತಿಕ್ರಿಯೆಗಳಲ್ಲಿ ವ್ಯಕ್ತವಾಗುತ್ತಿದೆ. ಇದೇ ಮುಂದುವರಿದು ಬರಿಯ ಒಂಭತ್ತು ಮಹಿಳೆಯರಷ್ಟೇ ಶಾಸನ ಸಭೆಗೆ ಆಯ್ಕೆಯಾಗಿರುವ, ನಾಲ್ವರು ಶಾಸಕಿಯರಲ್ಲಿ ಒಬ್ಬರಷ್ಟೇ ಮಂತ್ರಿಯಾಗುವತನಕ ಮುಂದುವರೆದಿದೆ.

ಆದಾಯ ತೆರಿಗೆ ಕಟ್ಟುವ `ಟ್ಯಾಕ್ಸ್‌ಪೇಯರ್’ಗಳು ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುತ್ತಿದ್ದಾರೆ. ಬಹುಶಃ ಅವರು ತಾವಷ್ಟೇ ತೆರಿಗೆ ಕಟ್ಟುವವರೆಂದು ಭಾವಿಸಿದಂತಿದೆ. ಹಾಗೆ ನೋಡಿದರೆ ಪ್ರತಿಯೊಬ್ಬ ನಾಗರಿಕರೂ ತೆರಿಗೆ ಕೊಡುವವರೇ. ತಾವು ಕೊಳ್ಳುವ ಊದುಬತ್ತಿ, ಪೆನ್ನು, ನೋಟ್‍ಬುಕ್, ಮೊಬೈಲು, ಗುಟ್ಕಾ, ಬಿಸ್ಕೀಟು, ಹಾಲು, ಅಕ್ಕಿ, ಬಳೆ, ಟಿಕ್ಲಿ, ಹೆಂಡ, ಬಟ್ಟೆ, ಬೀಡಿ, ಬೆಂಕಿಪೊಟ್ಣ ಮುಂತಾಗಿ ಪ್ರತಿಯೊಂದು ವಸ್ತುವಿನ ಮೇಲೂ ವಿಧಿಸಲ್ಪಟ್ಟ ಜಿಎಸ್ಟಿ ತೆರಿಗೆ ತೆತ್ತು ಅವರು ವಸ್ತುಗಳನ್ನು ಕೊಂಡಿರುತ್ತಾರೆ. ವಿದ್ಯುತ್, ನೀರು, ಗ್ಯಾಸ್, ವಸತಿಗಳಿಗೆ ಬಿಲ್ ಜೊತೆಗೆ ತೆರಿಗೆ ಕಟ್ಟುತ್ತಾರೆ. ಬಡವರ ಸೀಮಿತ ಆದಾಯಕ್ಕೆ ಹೋಲಿಸಿದರೆ ಅವರು ಕೊಡುವ ವಸ್ತುಗಳ ಮೇಲಿನ ತೆರಿಗೆ ತುಂಬ ಹೆಚ್ಚು. ಸರ್ಕಾರದ ಬೊಕ್ಕಸಕ್ಕೆ ಆದಾಯ ತೆರಿಗೆಯಿಂದ ಬರುವ ಹಣಕ್ಕಿಂತ ಇಂತಹ ಪರೋಕ್ಷ ತೆರಿಗೆಗಳಿಂದ ಬರುವ ಆದಾಯವೇ ಹೆಚ್ಚು. ಇದೇ ಬಡವರ ಇದೇ ತೆರಿಗೆ ಹಣ ಬಳಸಿ ಅವರೆಂದೂ ಬಳಸದ ಏರ್‌ಪೋರ್ಟ್, ಫ್ಲೈ ಓವರ್, ಸಂಸತ್ ಭವನ, ವಿಶ್ವವಿದ್ಯಾಲಯ, ಸಂಸ್ಥೆಗಳನ್ನು ಕಟ್ಟಿದೆವು. ಭಾರೀ ಮೂರ್ತಿ, ಸ್ಮಾರಕಗಳ ನಿಲ್ಲಿಸಿದೆವು. ಕಟ್ಟುವಾಗ ನಾಲ್ಕು ಜನರಿಗೆ ಸಿಕ್ಕ ಕೂಲಿಯ ಕೆಲಸದ ಹೊರತು ಬಡವರಿಗೆ ಅವುಗಳಿಂದ ಏನೂ ಉಪಯೋಗವಿಲ್ಲ. ಬಡವರ ತೆರಿಗೆ ಹಣವನ್ನು ಉಳ್ಳವರು ಕಸಿಯುತ್ತಿರುವುದರ ಪರಿಜ್ಞಾನವಿಲ್ಲದೆ `ಭಾಗ್ಯ’ಗಳ ಬಗೆಗೆ ವಿಪರೀತ ಅಪಪ್ರಚಾರ ನಡೆಯುತ್ತಿದೆ.

ಭಾಗ್ಯಗಳಲ್ಲಿ ಒಂದಾದ, ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಶುಲ್ಕರಹಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಯ ಬಗೆಗೆ ಮೆಚ್ಚಿಗೆ, ಧನ್ಯತಾಭಾವಗಳಷ್ಟೇ ಟೀಕೆ, ವಿರೋಧಗಳೂ ವ್ಯಕ್ತವಾಗುತ್ತಿವೆ. ಭಾರತದ ಅರ್ಧಕ್ಕರ್ಧ ಕುಟುಂಬಗಳ ತಿಂಗಳ ಆದಾಯ 10 ಸಾವಿರದ ಆಸುಪಾಸು. ಎಂದೇ ದುಡಿಯುವ ಮಹಿಳೆಯರಲ್ಲಿ 92% ಕುಟುಂಬ ನಡೆಸಲು ಉದ್ಯೋಗ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಸಿಕ್ಕಷ್ಟು ಸಿಗಲಿ ಎಂದು ಕಡಿಮೆ ವೇತನಕ್ಕೆ ದುಡಿಯುವವರೇ ಆಗಿದ್ದಾರೆ. ಬೆಂಗಳೂರು ಒಂದರಲ್ಲೇ 3 ಲಕ್ಷದಷ್ಟು ಮಹಿಳೆಯರು ಗಾರ್ಮೆಂಟ್ ಉದ್ದಿಮೆಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿನಿತ್ಯ ಕನಿಷ್ಟ 8 ಗಂಟೆ ದುಡಿದು, ತಿಂಗಳಿಗೆ 8ರಿಂದ 10 ಸಾವಿರ ರೂಪಾಯಿ ವೇತನ ಪಡೆಯುವ ಅವರು ದುಬಾರಿ ಬಾಡಿಗೆ ಕೊಟ್ಟು ನಗರದಲ್ಲಿ ವಾಸಿಸಲಾರರು. ಬಹುತೇಕರು ಅಕ್ಕಪಕ್ಕದ ಊರುಗಳಿಂದ ಅಥವಾ ನಗರದ ಹೊರವಲಯದ ಬಡಾವಣೆಗಳಿಂದ ಕೆಲಸದ ಸ್ಥಳಗಳಿಗೆ ಪಯಣಿಸುತ್ತಾರೆ. ಗಾರ್ಮೆಂಟ್ ಅಷ್ಟೇ ಅಲ್ಲ, ಬೆಂಗಳೂರಿನಲ್ಲೇ ಒಂದುಕಡೆಯಿಂದ ಇನ್ನೊಂದೆಡೆಗೆ ಪ್ರತಿನಿತ್ಯ ಪಯಣಿಸುವ ಲಕ್ಷಾಂತರ ಉದ್ಯೋಗಿಗಳಿದ್ದಾರೆ. ಅವರು ಪ್ರಯಾಣಕ್ಕಾಗಿಯೇ ಸಂಬಳದ ಒಂದು ಪಾಲನ್ನು ಎತ್ತಿಡಬೇಕು. ಅಂಥವರಿಗೆ ಶುಲ್ಕರಹಿತ ಬಸ್ ಪ್ರಯಾಣ ವರದಾನವಾಗಿದೆ.

ಇನ್ನು ಒಂದೂರಿನಿಂದ ಬೇರೆ ಊರಿಗೆ ಗುಳೆಬಂದು ಕಟ್ಟಡ ನಿರ್ಮಾಣ, ರಸ್ತೆ ಕೆಲಸ, ಜಂಗಲ್ ಕಟಿಂಗ್, ಮರಳು ಸಾಗಣೆ, ಮನೆಗೆಲಸ, ಕೂಲಿ ಕೆಲಸಗಳಲ್ಲಿ ತೊಡಗಿಕೊಂಡ ಲಕ್ಷಾಂತರ ವಲಸಿಗರಿದ್ದಾರೆ. ಅಂಥವರು ದೂರದ ತಮ್ಮೂರಿಗೆ ಹೋಗಿ ಬರುವುದೆಂದರೆ ಒಂದು ವಾರದ ದುಡಿಮೆಯನ್ನು ಬಸ್‌ಚಾರ್ಜ್‌ಗೇ ತೆಗೆದಿಡಬೇಕಾಗುತ್ತದೆ. ಎಂದೇ ಊರಿಗೆ ಹೋಗುವ ಬಯಕೆಯಿದ್ದರೂ ಹೋಗದೇ ಯಂತ್ರಗಳಂತೆ ದುಡಿಯುತ್ತಾರೆ. ಅಂಥವರಿಗೆ ಮಹಿಳೆಯರಿಗೆ ಟಿಕೆಟ್ ಇಲ್ಲವೆಂದರೆ ಅರ್ಧ ಖರ್ಚಿನಲ್ಲಿ ಊರಿಗೆ ಹೋಗಿಬರಲು ಅನುಕೂಲವಾಗುತ್ತದೆ.

ಶಾಲೆಕಾಲೇಜಿಗೆ ಹೋಗಿಬರಲು ಪಾಸ್ ಮಾಡಿಸಲೂ ಸಾಧ್ಯವಾಗದೇ ಎಷ್ಟೋ ಬಡ ಮನೆತನಗಳ ಹೆಣ್ಣುಮಕ್ಕಳು ಶಾಲೆ ಬಿಟ್ಟು ಮನೆಯಲ್ಲಿ ಕೂತಿರುವುದನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಇಂಥವರಿಗೆಲ್ಲ ಶಕ್ತಿ ಯೋಜನೆ ಸಹಾಯವಾಗುತ್ತದೆ. ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಸರ್ಕಾರವು ಅವರ ಶೈಕ್ಷಣಿಕ ಅವಕಾಶ, ದುಡಿಮೆಯ ಶಕ್ತಿ, ಗಳಿಕೆಯನ್ನು ಹೆಚ್ಚು ಮಾಡಿದಂತಾಗುತ್ತದೆ. ಅದರ ಜೊತೆಗೆ ಪ್ರತಿ ಮನೆಯೊಡತಿಗೆ ಎರಡು ಸಾವಿರ ರೂಪಾಯಿಯೂ ಬಂದರೆ, ನಿರುದ್ಯೋಗಿ ಪದವೀಧರ ಯುವಜನರಿಗೆ ಭತ್ಯೆಯೂ ದೊರೆತರೆ ಕುಟುಂಬಗಳ ಆರ್ಥಿಕ ಸ್ಥಿತಿ ಕೊಂಚ ಸುಧಾರಿಸುತ್ತದೆ. ಪ್ರತಿ ತಿಂಗಳು 10 ಸಾವಿರದಲ್ಲಿ ಬದುಕಿನ ಬಂಡಿ ತೂಗಿಸಬೇಕಾದವರಿಗೆ ನಾನಾ ಯೋಜನೆಗಳಿಂದ 5,000 ರೂ. ದೊರೆಯುವಂತಾದರೆ ಅವರ ಆರೋಗ್ಯ, ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲವೆ?

ಹೀಗೆ ಬಸ್‌ ಚಾರ್ಜ್‌ ಇಲ್ಲದೆ ಉಳಿಸಿದ, `ಭಾಗ್ಯ’ದಿಂದ ದೊರಕಿದ ಹೆಚ್ಚುವರಿ ಹಣವನ್ನು ಮಹಿಳೆಯರು ಏನು ಮಾಡಿಯಾರು? ತರಕಾರಿ, ಹಣ್ಣು, ಮಾಂಸ, ಹಾಲು, ಬಟ್ಟೆ ಕೊಂಡಾರು. ಸಾಲ ತೀರಿಸಿಯಾರು. ಮುಂದೇನಕ್ಕೋ ಬೇಕೆಂದು ತೆಗೆದಿಟ್ಟುಕೊಂಡಾರು. ಔಷಧೋಪಚಾರ, ಆಸ್ಪತ್ರೆಗೆ ಹೋಗಿ ಬಂದಾರು. ಕೈಸಾಲ, ಬ್ಯಾಂಕಿನ ಸಾಲ ತೀರಿಸಿಯಾರು. ಕೈಯಲ್ಲಿ ನಾಕು ಕಾಸು ಇಟ್ಟುಕೊಂಡಾರು. ಅಡವಿಟ್ಟ ಚೂರು ಬಂಗಾರ ಬಿಡಿಸಿಕೊಂಡಾರು. ಬಾಕಿಯಿರುವ ಹರಕೆ, ಮನದಾಸೆ ತೀರಿಸಿಕೊಳ್ಳಲು ತೀರ್ಥಕ್ಷೇತ್ರಗಳಿಗೆ ಹೋದಾರು. ಎಲ್ಲೋ ಕೆಲವರು ಟೂರಿಗೂ ಹೋಗಬಹುದು. ತಮಗಿಷ್ಟದ ಬಟ್ಟೆ, ಬಳೆ ಕೊಳ್ಳಬಹುದು. ಅವರು ಹಾಗೆ ಮಾಡುವುದರಿಂದ ಅಂಗಡಿಗಳಿಗೆ ವ್ಯಾಪಾರವಾಗುತ್ತದೆ. ಬ್ಯಾಂಕುಗಳ ಸಾಲ ಮರುಪಾವತಿಯಾಗುತ್ತದೆ. ತೀರ್ಥಕ್ಷೇತ್ರಗಳಲ್ಲಿ ಪೂಜೆ ಮಾಡುವ ಪುರೋಹಿತವರ್ಗದಿಂದ ಹಿಡಿದು ಚಿಕ್ಕಿ, ಬಲೂನು, ಪ್ರಸಾದ, ಬಳೆ ಟಿಕ್ಲಿ ಮಾರುವವರವರೆಗೆ, ಹೋಟೆಲು, ರಿಕ್ಷಾ, ಲಾಡ್ಜುಗಳವರೆಗೆ ಎಲ್ಲರ ವ್ಯಾಪಾರ ವೃದ್ಧಿಸುತ್ತದೆ.

ಅಂದರೆ ಸರ್ಕಾರದಿಂದ ಜನರ ಕೈಗೆ ಬಿದ್ದ ಕಾಸು ಊರಿಡೀ ಓಡಾಡುತ್ತದೆ. ಸರ್ಕಾರ ಅವರ ಪ್ರಯಾಣದ ರಖಮನ್ನು ಸಾರಿಗೆ ಸಂಸ್ಥೆಗಳಿಗೆ ಪಾವತಿಸುವುದರಿಂದ ಅವೂ ನಷ್ಟವನ್ನು ಕಡಿಮೆ ಮಾಡಿಕೊಳ್ಳುತ್ತವೆ. ಮಹಿಳೆಯರ ಜೊತೆಗೆ ಗಂಡಸರು, ಮಕ್ಕಳೂ ಬಸ್ ಹತ್ತಿ ಟಿಕೆಟ್ ಪಡೆಯುವುದರಿಂದ ಒಟ್ಟು ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಶಕ್ತಿ ಯೋಜನೆ ಆರಂಭಕ್ಕಿಂತ ಮೊದಲು ನಿತ್ಯ 84.14 ಲಕ್ಷ ಜನ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಮೊದಲ 6 ದಿನಗಳಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆಯು 84 ಲಕ್ಷದಿಂದ 1.16 ಕೋಟಿಗೇರಿತು. ಮಹಿಳಾ ಪ್ರಯಾಣಿಕರ ಸಂಖ್ಯೆಯೂ 41.34 ಲಕ್ಷದಿಂದ 55.09 ಲಕ್ಷಕ್ಕೇರಿತು. ದಿನನಿತ್ಯ 50% ಆಸನಗಳಲ್ಲಿ ಪುರುಷರೂ ಪ್ರಯಾಣಿಸುವುದರಿಂದ ಒಟ್ಟಾರೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಸಾರಿಗೆ ನಿಗಮಗಳಿಗೆ ತಿಂಗಳಿಗೆ 337 ಕೋಟಿ ರೂಪಾಯಿ, ವರ್ಷಕ್ಕೆ 4051 ಕೋಟಿ ರೂಪಾಯಿ ಆದಾಯ ಜನರಿಂದ ಬರದಿದ್ದರೂ ಸರ್ಕಾರದಿಂದ ಪಾವತಿಯಾಗಲಿದೆ.

ಇದರಿಂದ ಇನ್ನೂ ಹಲವು ಅನುಕೂಲಗಳಿವೆ. ಎಲ್ಲ `ಅಭಿವೃದ್ಧಿ’ ಮಾದರಿಗಳಲ್ಲಿ ಹೆಣ್ಣು ಹೊರಗೇ ಉಳಿದಿರುತ್ತಾಳೆ. ಈ ಮೂಲಕ ಅವಳನ್ನು ಒಳಗೊಳ್ಳಲು ಸಾಧ್ಯವಾಗಬಹುದು. ಮಹಿಳೆಯರು ಹೆಚ್ಚೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಹುದು. ಹೆಚ್ಚೆಚ್ಚು ಸಾರ್ವಜನಿಕ ಸಾರಿಗೆ ಬಳಸಬಹುದು. ಕಾರು, ಬೈಕು, ರಿಕ್ಷಾ ಹತ್ತದೆ ಸರ್ಕಾರಿ ಬಸ್ಸನ್ನೇರಿದರೆ ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗಬಹುದು. ಸಾರ್ವಜನಿಕ ಸಾರಿಗೆ ಶುಲ್ಕರಹಿತವಾದ ದೇಶಗಳಲ್ಲೆಲ್ಲ ಆರ್ಥಿಕತೆ, ವಾಹನ ದಟ್ಟಣೆ, ವಾಯುಮಾಲಿನ್ಯ ಸುಧಾರಿಸಿದ ಉದಾಹರಣೆಗಳಿವೆ.

ಪದವೀಧರರ ಭತ್ಯೆಯಿಂದ, ಗೃಹಿಣಿಗೆ ಕೊಡುವ `ಭಾಗ್ಯ’ದಿಂದಲೂ ಇಂತಹುದೇ ಪರಿಣಾಮಗಳಾಗಲಿವೆ. ಸಮಾಜದ ಎಲ್ಲ ಬಡವರಿಗೂ, ಮಹಿಳೆಯರಿಗೂ, ನಿರುದ್ಯೋಗಿ ಯುವಜನರಿಗೂ ಉಪಯೋಗವಾಗುವ ಇಂತಹ `ಭಾಗ್ಯ’ಗಳು ಹಲವು ದೇಶಗಳಲ್ಲಿ ಜಾರಿಯಲ್ಲಿದ್ದು ಯಶಸ್ವಿಯಾಗಿವೆ. ಭಾರತದಲ್ಲೂ ದೆಹಲಿ, ತಮಿಳುನಾಡು ಮತ್ತಿತರ ರಾಜ್ಯಗಳು ಭಾಗ್ಯಗಳನ್ನು ಯಶಸ್ವಿಗೊಳಿಸಿವೆ. ಕರ್ನಾಟಕವೂ ಮೊದಲು ಸಾಕಷ್ಟು ಭಾಗ್ಯಗಳನ್ನು ಕೊಟ್ಟಿದೆ. ಈಗ ಇವನ್ನೂ ಯಶಸ್ವಿಗೊಳಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಲ್ಲ, ಎಲ್ಲರ ಮೇಲಿದೆ.

ಅರ್ಥಶಾಸ್ತ್ರ ಹೇಳುವಂತೆ ಹಣವಂತರು ತಿಜೋರಿಗಳಲ್ಲಿ ಬಂಗಾರದ ಗಟ್ಟಿ, ನೋಟಿನ ಕಂತೆ ಕೂಡಿಟ್ಟರೆ, ಸಿಕ್ಕಸಿಕ್ಕಲ್ಲಿ ಸೈಟು ಕೊಂಡು ಬೇಲಿ ಹಾಕಿಸಿಟ್ಟರೆ ಆರ್ಥಿಕತೆ ಕುಸಿಯುತ್ತದೆ. ಆರ್ಥಿಕ ವ್ಯವಸ್ಥೆ ಆರೋಗ್ಯಕರವಾಗಿರಲು ಹಣ ಚಲಾವಣೆಯಾಗಬೇಕು. ಆರ್ಥಿಕತೆಯನ್ನು `ಬೂಸ್ಟ್’ ಮಾಡಲು ಜನ ಖರ್ಚು ಮಾಡುವಂತಾಗಬೇಕು. ಅಂದರೆ ಹಣವಿಲ್ಲದವರ ಬಳಿಗೆ ನಗದು ಹರಿಯಬೇಕು. ಈ `ಭಾಗ್ಯ’ಗಳ ಮೂಲಕ ಖರ್ಚು ಮಾಡಲು ಜನರ ಕೈಯಲ್ಲಿ ಕಾಸಿರಲಿದೆ ಎಂದಾದರೆ, ಮತ್ತು ಆ ಹಣ ಕೂಡಿಡುವುದಕ್ಕಲ್ಲದೆ ದಿನನಿತ್ಯದ ಉಪಯೋಗಗಳಿಗೆ ಚಲಾವಣೆಯಾಗುವುದಾದರೆ ಅದರಿಂದ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದೇ ಆಗಲಿದೆ.

ಇಷ್ಟಾದಮೇಲೂ ಬೊಕ್ಕಸಕ್ಕೆ ನಷ್ಟ ಎನ್ನುವವರು ಟಿಕೆಟ್ ಪಡೆದು ಬಸ್ಸಿನಲ್ಲಿ ಪಯಣಿಸಲಿ. ರಶ್ ಇರುವ ಬಸ್ಸಿನಲ್ಲಿ ಬೆವರ ವಾಸನೆಯವರು ಪರಪರ ಕೆರೆಯುತ್ತ ಪಕ್ಕ ಕೂತು ತಮಗೆ ಅಸಹ್ಯವಾಗುವುದೆನ್ನುವವರು `ಭಾಗ್ಯ’ ಬೇಡವೆಂದು ತಮ್ಮ ಕಾರಿನಲ್ಲೇ ಪಯಣಿಸಲಿ. ಆ ಮೂಲಕ ಸರ್ಕಾರದ ಹೊರೆಯನ್ನು ಇಳಿಸಲಿ.

ಹಲವು ಭಾಗ್ಯಗಳನ್ನು ಲಾಗಾಯ್ತಿನಿಂದ ಕೊಡುತ್ತ ಬಂದಿರುವ ದಕ್ಷಿಣದ ಐದು ರಾಜ್ಯಗಳು ದೇಶದ ಜಿಡಿಪಿಗೆ 30% ಸಂದಾಯ ಮಾಡುವಷ್ಟು ಮುಂದುವರೆದಿರುವುದು ಹೇಗೆ ಎಂದು ಮುಂದುವರಿದವರು ಇನ್ನಾದರೂ ಯೋಚಿಸಲಿ.

ಸರ್ಕಾರಿ ಉದ್ಯೋಗ, ಬ್ಯಾಂಕ್, ಸೇನೆ, ಕಾರ್ಪೊರೇಷನ್ನುಗಳ ಎಷ್ಟೋ ನೌಕರರು ನಿವೃತ್ತರಾದ ಬಳಿಕ ಪಿಂಚಣಿ ಪಡೆಯುತ್ತಿದ್ದಾರೆ. ಕೆಲವರು ಎಷ್ಟು ವರ್ಷ ಸೇವೆ ಮಾಡಿದರೋ ಅಷ್ಟೇ ವರ್ಷ ಪಿಂಚಣಿ ಪಡೆದಿದ್ದಾರೆ. ಅವರ ಬಳಿಕ ಅವರ ಸಂಗಾತಿಯೂ ಪಡೆದಿದ್ದಾರೆ. ಐದಂಕಿ ಸಂಬಳ ಎಣಿಸುವ ಮೇಲ್ವರ್ಗದ ಅಧಿಕಾರಿಗಳೂ ದಿನಭತ್ಯೆ, ಪ್ರಯಾಣ ಭತ್ಯೆ ಎಂದು ಸುಳ್ಳು ಬಿಲ್ಲುಗಳ ಸೃಷ್ಟಿಸಿ ಕ್ಲೇಮ್ ಮಾಡುತ್ತಾರೆ. ಸಂಬಳದ ನೂರುಪಟ್ಟು ಗಿಂಬಳ ಪಡೆಯುತ್ತಾರೆ. `ಹಿರಿಯ ನಾಗರಿಕರ’ ರಿಯಾಯ್ತಿಯನ್ನು ಉಳ್ಳವರೂ ಸಂಕೋಚವಿಲ್ಲದೆ ಪಡೆಯುತ್ತಾರೆ. ಅದಷ್ಟೇ ಅಲ್ಲ, ಮತ್ಯಾವುದೇ ವಿನಾಯ್ತಿ, ರಿಯಾಯ್ತಿ ಇದೆಯೆಂದು ತಿಳಿದರೂ ತಕ್ಷಣ ಅದಕ್ಕೆ ಮುಗಿಬೀಳುತ್ತಾರೆ. ಬಡಜನರ ಸಮಾನ ಸಂಪನ್ಮೂಲದ ಪಾಲಿನಿಂದ, ರೈತರ ಬೆವರಿನಿಂದ, ಪ್ರತಿ ನಾಗರಿಕರಿಗೆ ವಿಧಿಸುವ ಆದಾಯ ತೆರಿಗೆ, ವಸ್ತು ತೆರಿಗೆಯ ಹಣದಿಂದ ಅವರಿಗೆ ಈ `ಭಾಗ್ಯ’ಗಳನ್ನು ಸರ್ಕಾರ ಕೊಟ್ಟಿದೆ. ಆಗಲಿ, ಅವರಿಗೆ ಕೊಡಲೆಂದೇ ಮಾಡಿರುವುದನ್ನು ಪಡೆಯಲಿ. ಆದರೆ ತಾವು ಪಡೆಯುವಾಗ ಚಕಾರ ಎತ್ತದ ವರ್ಗವೇ ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟರೆ ಅವರು ಕುಳಿತುಂಡು ಸೋಮಾರಿಗಳಾಗುತ್ತಾರೆ; ಪುಕ್ಕಟೆ ಪ್ರಯಾಣ ಮಾಡಲು ಅವಕಾಶ ಕೊಟ್ಟರೆ ಹೆಂಗಸರು ಮನಬಂದಂತೆ ತಿರುಗುತ್ತಾರೆ; ಮನೆಯೊಡತಿಗೆ 2000 ರೂ. ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂಬ ಅಸಹ್ಯ ವಾದ ಮಂಡಿಸುತ್ತಿರುವುದು ವಿಚಿತ್ರವಾಗಿದೆ. ಮಹಿಳೆಯರು ಕಿತ್ತಾಡುವ ಯಾವ್ಯಾವುದೋ ಹಳೆಯ ವೀಡಿಯೋ, ಫೋಟೋಗಳನ್ನು ನಿನ್ನೆಮೊನ್ನೆಯದೆಂಬಂತೆ ಸೃಷ್ಟಿಸಿ ಫಾರ್ವರ್ಡ್ ಮಾಡಲಾಗುತ್ತಿದೆ. ಫೇಕ್‍ನ್ಯೂಸ್ ಫ್ಯಾಕ್ಟರಿಗೆ ಪುರುಸೊತ್ತೇ ಇಲ್ಲದಾಗಿದೆ.

ಭಾರೀ ಬಂಡವಾಳಶಾಹಿ ಕುಳಗಳು ಲಕ್ಷಕೋಟಿ ಸಾಲ ಮಾಡಿ, ಅಸಲುಬಡ್ಡಿ ಕಟ್ಟದೇ ಬ್ಯಾಂಕುಗಳನ್ನು ಮುಳುಗಿಸಬಹುದು; ಬಳಿಕ ದಿವಾಳಿ ಎಂದು ಘೋಷಿಸಿಕೊಂಡು ಫಾರಿನ್ನಿಗೆ ಓಡಬಹುದು. ಮತ್ಯಾವುದೋ ಬಿಂಬಾನಿ ಕಂಪನಿಯ 17 ಲಕ್ಷಕೋಟಿ ರೂಪಾಯಿ ಸಾಲವನ್ನು ಕಟ್ಟಲಾಗದ ಸಾಲವೆಂದು ಪರಿಗಣಿಸಿ ಸರ್ಕಾರವೇ ಮುಚ್ಚುಮರೆಯಲ್ಲಿ ಮನ್ನಾ ಮಾಡಬಹುದು. ಭವನ-ಮೂರ್ತಿ-ಸ್ಮಾರಕ-ಮಂದಿರ ನಿರ್ಮಾಣಗಳಿಗೆ ಸಾವಿರ ಕೋಟಿ ಖರ್ಚು ಮಾಡಬಹುದು. ದೇವರು, ಧರ್ಮ, ದನದ ಹೆಸರ ರಾಜಕೀಯಕ್ಕೆ ರಕ್ತ ಹರಿಸಬಹುದು. ಇದರ ಬಗೆಗೆ ದೇಶಭಕ್ತರಾರೂ ಸೊಲ್ಲೆತ್ತಲಾರರು. ಆದರೆ ಬಡವರಿಗೆ/ನಿರುದ್ಯೋಗಿ ಪದವೀಧರರಿಗೆ ಕಾಸು ಕೊಟ್ಟರೆ, ಕಡಿಮೆ ಬೆಲೆಗೆ ಹೊಟ್ಟೆ ತುಂಬ ಅನ್ನ ಉಣ್ಣಲು ಕ್ಯಾಂಟೀನುಗಳ ತೆರೆದರೆ, ಮನೆಯೊಡತಿಗೆ ಮತ್ತೆರೆಡು ಸಾವಿರ ಕೊಟ್ಟು ಸ್ವಾಯತ್ತವಾಗಲು ಉಚಿತ ಪ್ರಯಾಣ ಒದಗಿಸಿದರೆ – ಓಹೋಹೋ, ಆರ್ಥಿಕತೆ ಕುಸಿದೇ ಹೋಯಿತೆಂದು ದೊಡ್ಡ ಬೊಬ್ಬೆಯೇಳುತ್ತದೆ. ಅದೂ ಮಹಿಳೆಯರಿಗೆ ಕೊಡುವುದೆಂದರೆ ಮುಗಿದೇ ಹೋಯಿತು. ಮೇಲೆನಿಸಿಕೊಂಡ ವರ್ಗ-ಜಾತಿಗಳ ಮಹಿಳೆಯರು ತಾವು ಸವಲತ್ತು ಬಳಸಿಕೊಂಡ ಮೇಲೂ ಬಡ ಹೆಣುಮಕ್ಕಳಿಗೆ ಕೊಡುವುದರ ಬಗೆಗೆ ಅಸಡ್ಡೆಯ ಮಾತನಾಡುತ್ತಾರೆ. ಇದೆಂಥ ಆಷಾಢಭೂತಿತನ!

ಭಾರತದಲ್ಲಿ ಮೌಲ್ಯವ್ಯವಸ್ಥೆ ಬಲು ದ್ವಂದ್ವಮಯವಾಗಿದೆ. ಉದಾತ್ತತೆ, ನ್ಯಾಯಪ್ರಜ್ಞೆಗಳನ್ನು ಸ್ವಮತಧರ್ಮದ ಮೋಹ, ಸ್ವಜಾತಿ ಪ್ರೇಮಗಳು ನುಂಗಿ ಹಾಕಿವೆ. ಹಣ, ವಸ್ತುಗಳೇ ಮುಖ್ಯವಾಗಿರುವ ಕಾಲಮಾನದಲ್ಲಿ ಬರುವ ತಲೆಮಾರಿಗಾದರೂ ಜಾತಿ, ಧರ್ಮ, ಲಿಂಗತ್ವ ಮೀರಿದ ಮನುಷ್ಯಪ್ರೇಮವನ್ನು ಅರ್ಥಮಾಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಡಾ. ಎಚ್. ಎಸ್. ಅನುಪಮಾ

ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯರಾಗಿರುವ ಇವರು ತನ್ನ ವೃತ್ತಿಯಂತೆಯೇ ಸಾಹಿತ್ಯವನ್ನೂ ಎದೆಗಾನಿಸಿಕೊಂಡು ಬಹು ಅಮೂಲ್ಯ ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಟ್ಟಿದ್ದಾರೆ. ವಿಚಾರವಾದಿ, ಚಿಂತಕಿ, ವಾಗ್ಮಿ, ದಲಿತ-ಮಹಿಳಾಪರ ಆಂದೋಲನಗಳ  ಕಾರ್ಯಕರ್ತೆ, ಸಂಘಟಕಿ, ಕವಿ, ಪ್ರಕಾಶಕಿ ಹೀಗೆ ಜನಪರ ಕಾಳಜಿಗಳನ್ನೇ ಉಸಿರಾಡುತ್ತಿರುವವರು.

ಇದನ್ನೂ ಓದಿ-ಬಿಟ್ಟಿ ಭಾಗ್ಯಗಳಲ್ಲ.. ಜನಸಾಮಾನ್ಯರ ಶ್ರಮ ನುಂಗಿದ್ದಕ್ಕೆ ಪರಿಹಾರ

ಹೊಸ ತಲೆಮಾರಿಗೆ ಅಂಬೇಡ್ಕರ್
`ತುಂಬ ಕಷ್ಟ ಎದುರ್ಸಿದಿನಿ’ ಎಂದು ಉಕ್ಕುಕ್ಕಿ ಬರುವ ಬಿಕ್ಕುಗಳ ನಡುವೆ, ಕಣ್ಣೀರು ಕೆಳಗಿಳಿಯದಂತೆ ಸಾವರಿಸಿಕೊಂಡು ಅವಳು ಹೇಳುತ್ತಿದ್ದರೆ ಆ ಕಣ್ಣುಗಳೆಂಬ ದೊಂದಿಯ ಕಿಚ್ಚು ಧಗಧಗ ಉರಿಯುತ್ತ ಕೇಳುವವರನ್ನು ಸುಡಲಾರಂಭಿಸಿತು. ಅತಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಸಮುದಾಯದ ಕಷ್ಟ ನೋವುಗಳೊಂದು ಕಡೆ, ಅದರೊಳಗಿನ ಗಂಡು ಜಗತ್ತು ಕೊಡುತ್ತಿರುವ ದಿನನಿತ್ಯದ ನೋವು ಮಗದೊಂದು ಕಡೆ – ಅಂತೂ ಅವಳ ಮಾತು ಕೇಳುವವರ ಕಣ್ಮನಗಳನ್ನು ತೆರೆಸುವ ಶಕ್ತಿನುಡಿಯಾಗಿಬಿಟ್ಟಿತು – ಡಾ. ಎಚ್. ಎಸ್. ಅನುಪಮಾ

ಬಾಳಿಹೋದ ಮಹಾನ್ ವ್ಯಕ್ತಿತ್ವ, ಚಿಂತನೆಗಳ ಕಡೆಗೆ ಜಾಗತೀಕರಣಗೊಂಡ, ಮಾರ್ಕೆಟೀಕರಣವಾದ ಹೊಸ ತಲೆಮಾರನ್ನು ಸೆಳೆಯುವುದು ಹೇಗೆ ಎನ್ನುವುದು ಇವತ್ತಿನ ಬಹುದೊಡ್ಡ ಸವಾಲಾಗಿದೆ. ನೇರವಾಗಿ ಓದಿ, ಕೇಳಿ, ಚರ್ಚಿಸಿ ಅಭಿಪ್ರಾಯ ಹೊಂದುವುದಕ್ಕಿಂತ ಯಾರೋ ಮಾಡಿದ ದುರುದ್ದೇಶಪೂರಿತ ವಿಮರ್ಶೆ, ತಪ್ಪು ಮಾಹಿತಿಗಳನ್ನು ಪರಿಶೀಲಿಸದೇ ಒಪ್ಪಿ ಉದಾತ್ತವಾದುದನ್ನು ಒಡೆವ ಸತ್ಯಭಂಜಕತನವನ್ನು ತಂತ್ರಜ್ಞಾನಸ್ನೇಹಿ ತಲೆಮಾರಿನಲ್ಲಿ ಬೆಳೆಸಲಾಗುತ್ತಿದೆ. ಕಾಲದ ತುರ್ತುಗಳನ್ನು, ಲೋಕದ ಸಂಕಟಗಳನ್ನು ಯುವಸಮೂಹವು ಗಮನಿಸದಂತೆ ಮಾರುಕಟ್ಟೆ ಬಿತ್ತಿ ಬೆಳೆಸಿದ `ನಾನು-ನನ್ನ’ ಭ್ರಮಾಲೋಕ ಆವರಿಸಿಕೊಂಡಿದೆ. ಎಂದೇ `ಟ್ವೆಂಟಿ ಫಸ್ಟ್ ಸೆಂಚುರಿಯನ್ಸ್’ಗೆ ಬಾಬಾಸಾಹೇಬರನ್ನು ಮಂಡಿಸುವುದು ಕಷ್ಟವಾಗಿದೆ.

ಟ್ವೆಂಟಿ ಫಸ್ಟ್ ಸೆಂಚುರಿಯನ್ಸ್’ಗೆ ಬಾಬಾಸಾಹೇಬರನ್ನು ಮಂಡಿಸುವುದು ಹೇಗೆ?

`ಮೇಲೆʼ ಎಂದುಕೊಂಡ ಜಾತಿಗಳ ಬಹುತೇಕ ಯುವಜನರಿಗೆ ಬಾಬಾಸಾಹೇಬರ ಹೆಸರು ಕೇಳಿದರೆ ಸಾಕು, ತಮ್ಮ ಅವಕಾಶವನ್ನು ಮೀಸಲಾತಿ ರೂಪದಲ್ಲಿ ಕಸಿದುಕೊಂಡ ವ್ಯಕ್ತಿಯೆಂಬ ಸಿಟ್ಟು ಒಳಗೊಳಗೇ ಕುದಿಯುತ್ತದೆ. ಅದಕ್ಕೆ ಕಾರಣ ಅವರ ಮನೆಗಳಲ್ಲಿ ನಡೆಯುವ (ಅ)ರಾಜಕೀಯ ಚರ್ಚೆಗಳು. ಕೈಬೆರಳೆಣಿಕೆಯಷ್ಟು `ಜನರಲ್ ಕೆಟಗರಿ’ಯ ಹೃದಯಗಳಿಗಷ್ಟೇ ಅಂಬೇಡ್ಕರ್ ಬೆಳಕಾಗಿ ಮಾರ್ಗದರ್ಶಿಯಾಗುತ್ತಾರೆ. ಇನ್ನು, ದಲಿತೇತರ `ಮಧ್ಯಮ’ ಜಾತಿಗಳ ಯುವಜನರಿಗೆ ತಾವು ಪಡೆದ ಹಕ್ಕು, ಸೌಲಭ್ಯ, ಸೌಕರ್ಯಗಳನ್ನು ಬಾಬಾಸಾಹೇಬರೇ ಕೊಡಿಸಿದ್ದು ಎಂಬ ಕನಿಷ್ಟ ಜ್ಞಾನವೂ ಇಲ್ಲದ ಅರಿವುಗುರುಡು ಆವರಿಸಿದೆ. ದಲಿತ ಸಮುದಾಯದೊಳಗಿನ ನೂರಾರು ಪರಿಶಿಷ್ಟ ಜಾತಿ, ಬುಡಕಟ್ಟುಗಳಲ್ಲಿ ಕೆಲವರಿಗಷ್ಟೇ ಬಾಬಾಸಾಹೇಬರ ಹೋರಾಟ, ಸಾಧನೆಯ ಅರಿವಿದೆ. ಮಿಕ್ಕವರು ಅಂಬೇಡ್ಕರರ ಚಿಂತನೆಗಳ ಕಿಂಚಿತ್ ಅರಿವಿಲ್ಲದೆ, ಅವರ ಬದ್ಧವಿರೋಧಿ ಪಾಳೆಯದಲ್ಲಿ ಕೈಗೊಂಬೆಗಳಾಗಿ, ಕಾಲಾಳುಗಳಾಗಿ ಮೆರೆಯುತ್ತಿದ್ದಾರೆ. ಇನ್ನು ಬಾಬಾಸಾಹೇಬರ ಕಟ್ಟಾ ಅನುಯಾಯಿಗಳಲ್ಲಿ ಅವರ ಭಾವಚಿತ್ರವನ್ನು ದೇವರ ಮನೆಯಲ್ಲಿಟ್ಟು ಪೂಜಿಸುವ; `ಅವರಿದ್ದರೆಂದೇ ಇವತ್ತು ನಾವಿದ್ದೇವೆ’ಂದು ಆರಾಧಿಸುವ; ಬಾಬಾಸಾಹೇಬರಿಗೇನಾದರೂ ಅಪಚಾರವಾದರೆ ಕೆರಳಿ ಬಿಡುವ ಕೋಟ್ಯಂತರ ಜನರಿದ್ದಾರೆ. ಆದರೆ ಜಾತಿಯಷ್ಟೇ ವರ್ಗ ಅಸ್ಮಿತೆಯೂ ಮುಖ್ಯವಾದದ್ದು. ಮೇಲ್ಚಲನೆ ಪಡೆದ, ನಗರದ ಮಧ್ಯಮ, ಮೇಲ್ಮಧ್ಯಮ ವರ್ಗದ ದಲಿತ ಮಕ್ಕಳಿಗೆ ಹಿಂದಿನ ತಲೆಮಾರು ಎದುರಿಸಿದ ಅಸ್ಪೃಶ್ಯತೆಯ ಅನುಭವವಾಗಲೀ, ಜಾತಿ ತಾರತಮ್ಯ ಹುಟ್ಟಿಸುವ ರೋಷವಾಗಲೀ, ಸಂಘಟಿತರಾಗಿ ಹೋರಾಡಬೇಕೆಂಬ ಸಾಮುದಾಯಿಕ ಪ್ರಜ್ಞೆಯಾಗಲೀ ಕಡಿಮೆಯಾಗಿದೆ. ಸಮತೆಯೆಡೆಗೆ ತುಡಿಯುವ ಅತಿವಿರಳ ಸಂಖ್ಯೆಯ ಯುವಮನಸುಗಳಷ್ಟೇ ತಂತ್ರಜ್ಞಾನದ ಸಕಲ ಸಾಧ್ಯತೆಗಳ ಮೂಲಕ ಉದಾತ್ತ ವಿಚಾರಗಳನ್ನು ಹಂಚುತ್ತಿದ್ದಾರೆ.

ಹೀಗಿರುತ್ತ ಕಾಣುವುದೆಲ್ಲವ ಬಿಟ್ಟು ಕಾಣದುದರೆಡೆಗೆ ತುಡಿಯುವ ಯುವಸಮೂಹದ ಎದೆಗಿಳಿಯುವಂತೆ ಅಂಬೇಡ್ಕರರನ್ನು, ಅವರ ವಿಚಾರಗಳನ್ನು ಮಂಡಿಸುವುದು ಹೇಗೆ? ಈ ಪ್ರಶ್ನೆಗೆ ಯುವಜನರ ಒಡನಾಟವೇ ದಾರಿ ತೋರಿಸಿದ್ದನ್ನಿಲ್ಲಿ ಹಂಚಿಕೊಳ್ಳಬಯಸುವೆ.

`ಪ್ರಜ್ಞಾ ಜಾಗೃತಿ ಶಿಬಿರ’ದಲ್ಲೇನು ನಡೆಯಿತು?

ಕರ್ನಾಟಕದ ವಿವಿಧ ಜಿಲ್ಲೆ, ಜಾತಿ, ವರ್ಗ, ಧರ್ಮಕ್ಕೆ ಸೇರಿದ 25-30 ಯುವಮನಸ್ಸುಗಳನ್ನು ಎರಡು ದಿನದ ಮಟ್ಟಿಗೆ `ಪ್ರಜ್ಞಾ ಜಾಗೃತಿ ಶಿಬಿರ’ಕ್ಕಾಗಿ ಪ್ರತಿ ತಿಂಗಳೂ ನಮ್ಮೂರಿಗೆ ಕರೆಯುತ್ತೇವೆ. ಅಪರಿಚಿತರಾಗಿ ಬಂದು ಮಿತ್ರ, ಮಿತ್ರೆಯರಾಗಿ ಹಿಂದಿರುಗುವ ಪ್ರಕ್ರಿಯೆ ಅಚ್ಚರಿ, ಭರವಸೆಗಳನ್ನು ಹೊತ್ತು ತರುತ್ತಿದೆ. ಏಪ್ರಿಲ್ ತಿಂಗಳ ಶಿಬಿರಾರ್ಥಿಗಳಿಗೆ `ನಾನು ಹುಟ್ಟಿದ ಜಾತಿ: ಒಂದು ಅನುಭವ’ ಎಂಬ ವಿಷಯದ ಬಗೆಗೆ ತಮ್ಮ ಹೆಸರು ನಮೂದಿಸದೇ ಬರೆಯಬೇಕೆಂದು ಹೇಳಲಾಗಿತ್ತು. 27 ಮಿತ್ರೆಯರ ಬರಹಗಳನ್ನು ಅವಲೋಕನದ ವೇಳೆ ಓದತೊಡಗಿದೆ. `ಎಲ್ರೂ ಸಮಾನ ಅಂದ್ರೆ ರಿಸರ್ವೇಶನ್ ತಪ್ಪಲ್ವಾ?’, `ಎಲ್ಲ ಜಾತೀಲೂ ಬಡವ್ರು, ಕಷ್ಟ ಪಡೋರಿದಾರೆ, ನಮಿಗಷ್ಟೇ ಕೊಡದು ಸರಿಯಲ್ಲ’, `ಅಟ್ರಾಸಿಟಿ ಅನ್ನುವುದನ್ನು ಪೇಪರಲ್ಲಿ ಓದಿಯಷ್ಟೇ ಗೊತ್ತು, ಬಟ್ ನಂಗೆ ಅನುಭವ ಆಗಿಲ್ಲ, ಫ್ರೆಂಡ್ಸ್ ತುಂಬ ಚೆನಾಗಿ ನೋಡ್ಕೊಂತಾರೆ’; `ಎಸ್ಸಿಎಸ್ಟಿಗೆ ರಿಸರ್ವೇಶನ್ ಕೊಟ್ ಕೊಟ್ಟು ನಮ್ಗೆ ಕೆಲ್ಸಾನೇ ಇಲ್ದಂಗಾಗಿದೆ, ಈ ಅನ್ಯಾಯ ಸರಿ ಮಾಡ್ಬೇಕು’; `ಜಾತಿಕಾಲಂ ಕೇಳಿಕೇಳಿ ಜಾತೀಯತೆ ಬೆಳೆಸ್ತಾರೆ. ಮೊದ್ಲು ಆ ಕಾಲಂ ತೆಗಿಬೇಕು’; `ಎಸ್ಸಿ ಆದ್ರೂ ನಂ ಜಾತಿ ಬಗ್ಗೆ ತುಂಬ ಹೆಮ್ಮೆ ಇದೆ. ನನ್ ಫ್ರೆಂಡ್ಸ್ ಎಲ್ಲ ಅಯ್ಯೋ ಗೊತ್ತೇ ಆಗಲ್ಲ ನೀ ಎಸ್ಸಿ ಅಂತ ಅಂತಾರೆ. ನಾವು ಹಾಗೆ ಇದೀವಿ’ ಮುಂತಾಗಿ ಸ್ವಾನುಭವವಷ್ಟೇ ಸತ್ಯ ಎಂದು ನಂಬಿದವರ ಬರಹಗಳು ಒಂದಾದಮೇಲೊಂದು ಕೈಗೆ ಬಂದವು. ಅವನ್ನೆಲ್ಲ ಓದುತ್ತ ಯಾವ ದಿಕ್ಕಿನಿಂದ ಇವರನ್ನು ಬಾಬಾಸಾಹೇಬರ ಬಳಿಗೊಯ್ಯಲಿ ಎಂದು ಯೋಚಿಸತೊಡಗಿದೆ.

ಆ ಹೊತ್ತಿಗೊಂದು ಬರಹದ ಪುಟ ಕೈಗೆ ಬಂದಿತು. ಮುಚ್ಚಿಕೊಂಡ ಎದೆ ಬಾಗಿಲುಗಳೆಲ್ಲ ಹಾರು ಹೊಡೆದು ಒಂದರೊಳಗೊಂದಾಗುವಂತೆ ಮಾಡಿಬಿಟ್ಟಿತು.

ದಿಕ್ಕು ತೋರಿದ ಅವಳ ಬರಹ..

ಅದು 5ನೆಯ ತರಗತಿಗೆ ಶಾಲೆ ಬಿಡಬೇಕಾಗಿ ಬಂದ `ಸುಡುಗಾಡು ಸಿದ್ಧ’ರ ಹುಡುಗಿಯು ತನಗೆ ಬರೆಯಲು ಬಾರದೆಂದು ಹೊಸ ಗೆಳತಿಗೆ ಹೇಳಿ ಬರೆಸಿದ ಬರಹ. ಚರಂಡಿಗಳ ಮೇಲೆ, ಪೈಪುಗಳ ಒಳಗೆ, ರೈಲ್ವೇ ಟ್ರ್ಯಾಕುಗಳ ಪಕ್ಕ ಟೆಂಟುಗಳಲ್ಲಿ ಅವಳ ಕುಲವು ಬದುಕು ನಡೆಸಿತ್ತು. ಅವಳವ್ವ ನಾಲ್ಕನೆಯ ಹೆರಿಗೆಯ ವೇಳೆ ಅತೀವ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿರುವಾಗ ಅವಳಿನ್ನೂ ಐದನೆಯ ತರಗತಿಯಲ್ಲಿದ್ದಳು. ಗುಡ್ಡೆ ಬೀಳುತ್ತಿದ್ದ ತಾಯಿಯ ರಕ್ತಸಿಕ್ತ ಬಟ್ಟೆಗಳನ್ನು ತೊಳೆತೊಳೆದು, ಆಸ್ಪತ್ರೆಗೂ ಮನೆಗೂ ಅಲೆದಲೆದು, ಭಿಕ್ಷೆಯೆತ್ತಿ ತಂಗಿತಮ್ಮಂದಿರ ಹೊಟ್ಟೆ ಹೊರೆಯಬೇಕಾದ ಜವಾಬ್ದಾರಿಯಲ್ಲಿ ಅವಳ `ಸಾಲಿ’ ಕರಗಿ ಹೋಗಿತ್ತು. ಅದಾಗಿ ಹನ್ನೆರೆಡು ವರ್ಷಗಳೇ ಸಂದಿವೆ. ಬರೆಯುವುದು ಮರೆತು ಹೋಗಿದೆ. ಉಳಿದವರೆಲ್ಲ ಸರಸರ ಬರೆಯುತ್ತಿರಬೇಕಾದರೆ ತನಗೆ ಬರೆಯಲಾಗದ ಬಗೆಗೆ ಅವಳಿಗೆ ತುಂಬ ಬೇಸರವಿದೆ. ಮಕ್ಕಳನ್ನು ಶಾಲೆಗೇ ಕಳಿಸದ ತನ್ನವರ ಬಗ್ಗೆ ಸಿಟ್ಟಿದೆ. `ಯಾರನ್ನಾ ಬಿಳಿಬಟ್ಟೆ ಹಾಕ್ಕಂಡ್ ಬಂದ್ರೆ ಸಾಕು, ಕೈಕಟ್ಟಿ ನಿಂತುಬಿಡತರೆ ನಮ್ಜನ. ಕೆಲ್ಸಾ ಕೊಡ್ಸಿ, ಮನೆ ಕೊಡ್ಸಿ ಅಂತ ಅವುರ್ನ ಕೇಳನ; ದುಡ್ಡಿಸ್ಕ್ಯಬೇಡ್ರಿ ಅಂದ್ರೂ ತಿಳೆಂಗಿಲ್ಲ ಅವುರ್ಕೆ’ ಎಂಬ ಕೋಪವಿದೆ. ಜೊತೆಜೊತೆಗೆ ಭಿಕ್ಷಾಟನೆಯಿಲ್ಲದೆ ಬದುಕಬಹುದೆಂದು ತನ್ನ ಜನರಿಗೆ ತೋರಿಸಿಕೊಡುತ್ತೇನೆಂಬ ಛಲವೂ ಆ ಬರಹದಲ್ಲಿದೆ.

ಹುಟ್ಟಿದ ಜಾತಿಯಲ್ಲಿ ಅವಳಿಗಾಗುತ್ತಿರುವ ಅನುಭವ ಓದುತ್ತ ಹೋದಂತೆ ನಮ್ಮ ಎದೆಬಡಿತ ನಮಗೇ ಕೇಳುವಷ್ಟು ನಿಶ್ಶಬ್ದ ಆವರಿಸಿತು. ಸಮಾನತೆ, ಮೀಸಲಾತಿ, ಜಾತಿ ಕಾಲಂ, ಜಾತಿ ಹೆಮ್ಮೆ ಮುಂತಾದ ಪದಗಳು ನಾಚಿ ತಲೆತಗ್ಗಿಸಿ ಹಾರಿಹೋದವು. ಅನಾಮಿಕರಾಗಿ ಬರೆಯಬೇಕೆಂದು ಹೇಳಿದ್ದೆವು. ಆದರೂ ಈ ಬರಹ ಬರೆದವರಾರೆಂದು ತಿಳಿವ ಹಂಬಲ ಎಲ್ಲರಲ್ಲಿ ವ್ಯಕ್ತವಾಯಿತು. ಅಂತಹ ಒಂದೆರೆಡು ಅಭಿಪ್ರಾಯ ಕೇಳಿದ್ದೇ ಥಟ್ಟನೆ ಅವಳು ಎದ್ದು ನಿಂತಳು. ತಾನು `ತುಂಬ ಕಷ್ಟ ಎದುರ್ಸಿದಿನಿ’ ಎಂದು ಉಕ್ಕುಕ್ಕಿ ಬರುವ ಬಿಕ್ಕುಗಳ ನಡುವೆ, ಕಣ್ಣೀರು ಕೆಳಗಿಳಿಯದಂತೆ ಸಾವರಿಸಿಕೊಂಡು ಅವಳು ಹೇಳುತ್ತಿದ್ದರೆ ಆ ಕಣ್ಣುಗಳೆಂಬ ದೊಂದಿಯ ಕಿಚ್ಚು ಧಗಧಗ ಉರಿಯುತ್ತ ಕೇಳುವವರನ್ನು ಸುಡಲಾರಂಭಿಸಿತು. ಅತಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಸಮುದಾಯದ ಕಷ್ಟ ನೋವುಗಳೊಂದುಕಡೆ, ಅದರೊಳಗಿನ ಗಂಡು ಜಗತ್ತು ಕುಡಿತ-ಹೊಡೆತ-ದೌರ್ಜನ್ಯ-ತಾರತಮ್ಯಗಳ ಮೂಲಕ ಕೊಡುತ್ತಿರುವ ದಿನನಿತ್ಯದ ನೋವು ಮಗದೊಂದು ಕಡೆ – ಅಂತೂ ಅವಳ ಮಾತು ಕೇಳುವವರ ಕಣ್ಮನಗಳನ್ನು ತೆರೆಸುವ ಶಕ್ತಿನುಡಿಯಾಗಿಬಿಟ್ಟಿತು.

ಅದಾದ ಬಳಿಕ ಓದಿದ ಮಿಕ್ಕವರ ಬರಹಗಳೂ ನ್ಯಾಯದ ದೊಂದಿಯನ್ನು ಉರಿಸುತ್ತ ಹೋದವು. ಇವತ್ತಿಗೂ ತಮ್ಮೂರ ಚಾನೆಲ್ಲಿನ ಮೇಲ್ಭಾಗದಲ್ಲಿ ಮೇಲ್ಜಾತಿಯವರಷ್ಟೇ ಬಟ್ಟೆ ತೊಳೆಯಬೇಕು, ತಳಸಮುದಾಯವರು ಕೆಳಗೇ ತೊಳೆಯಬೇಕೆಂಬ ಅಲಿಖಿತ ನಿಯಮವಿರುವುದು; ಬಾಯಾರಿ ಪಕ್ಕದ ಹೊಲದ ಬಾನಿಯ ನೀರು ಕುಡಿದಿದ್ದಕ್ಕೆ ಇಡೀ ಬಾನಿಯ ನೀರನ್ನು ಮುಖಕ್ಕೆ ಎರಚಿಸಿಕೊಂಡು ಮಾದಿಗರ ಹುಡುಗಿ ಅವಮಾನ ಅನುಭವಿಸಿದ್ದು; ಲಿಂಗಾಯತ ತಂದೆ-ಮಾದಿಗ ತಾಯಿಯ ಮಗಳಾದ ದೇವದಾಸಿ ಕುಟುಂಬದ ಹುಡುಗಿ ಅಪ್ಪನ ಜಾತಿಯವರಿಂದ ಎದುರಿಸಿದ ದೂಷಣೆಗಳು; ಕುಡುಕ ತಂದೆಯ ಗಲಾಟೆಯ ನಡುವೆಯೂ ಚಿಮಣಿ ಬುಡ್ಡಿ ಬೆಳಕಲ್ಲಿ ಕಷ್ಟಪಟ್ಟು ಓದಿ 93% ಅಂಕ ಗಳಿಸಿದ ಹುಡುಗಿ ಮುಂದೆ ಓದಲಾಗದ ಪರಿಸ್ಥಿತಿಯಲ್ಲಿರುವುದು; ಶಿಕ್ಷಕಿಯಾಗುವಷ್ಟು ಓದಿದ `ಗಂಡಬಿಟ್ಟ’ ತಾಯಿ ಮಗಳಿಗೆ ಫೀಸು ಹೊಂದಿಸಲಾಗದೇ ಹೊಲದ ಕೂಲಿಗೆ ಹೋಗುತ್ತಿರುವುದು; `ಕೆಟ್ಟು ಹೋದವಳು’ ಎಂಬ ಪಟ್ಟಕಟ್ಟಿದ ತನ್ನ ಅಲೆಮಾರಿ ಸಮುದಾಯವು ಜಾತಿ ಪಂಚಾಯ್ತಿಗೆ ಲಕ್ಷ ರೂಪಾಯಿ ದಂಡ ಕಟ್ಟಬೇಕೆಂಬ ದುಸ್ಸಾಧ್ಯ ಶಿಕ್ಷೆ ವಿಧಿಸಿರುವುದೇ ಮೊದಲಾದ ಜಾತಿಗ್ರಸ್ತ ಭಾರತದ ಅವಮಾನಿತರ ಚಿತ್ರಣಗಳು ಅರ್ಧಕ್ಕರ್ಧದಷ್ಟಿದ್ದ ಮೇಲ್ವರ್ಗ-ಮೇಲ್ಜಾತಿಯ ಮನಸುಗಳನ್ನು ಬೆಣ್ಣೆಯಂತೆ ಕರಗಿಸಿ ವಾಸ್ತವವನ್ನು ತಿಳಿಸಿಕೊಟ್ಟವು. ಇದುವರೆಗೆ ಮೀಸಲಾತಿ-ಜಾತಿಪದ್ಧತಿ-ಎಸ್ಸಿಎಸ್ಟಿ ಬಗೆಗೆ ಇಟ್ಟುಕೊಂಡ ಪೂರ್ವಗ್ರಹಗಳೆಲ್ಲ ತರಗೆಲೆಯಂತೆ ಹಾರಿಹೋದದ್ದು ನಂತರದ ಮಾತು-ಪ್ರತಿಕ್ರಿಯೆಯಲ್ಲಿ ತಿಳಿದುಬಂತು.

ಅಸ್ಪೃಶ್ಯತೆ, ಹೊರಗಿಡುವಿಕೆಯ ಅವಮಾನ, ಬೇಗೆಗಳನ್ನು ಮೈತ್ರಿ, ಸ್ನೇಹಗಳು ತಂಪಾಗಿಸಿದ ಮೇಲೆ ಬಾಬಾಸಾಹೇಬರ ಸಮತೆಯ ಬೀಜಗಳನ್ನು ಬಿತ್ತುವುದು ಸುಲಭವಾಯಿತು. ಹುಸಿಯ ತೆರೆ ಹರಿಯಲು ಸತ್ಯದೊಡನೆ ಸಖ್ಯವೊಂದೇ ದಾರಿ ಎಂಬ ಹೊಸ ಪಾಠವಾಯಿತು.

ಬಾಬಾಸಾಹೇಬರು ಅರಿವಿಗೆ ದಕ್ಕಲು ಹೀಗೆಲ್ಲ ಮಾಡಬೇಕು…

ಹೌದು. ಒಯ್ಯಬೇಕು ಯುವಮನಸುಗಳನ್ನು ವಾಸ್ತವದೆಡೆಗೆ. ತೋರಿಸಬೇಕು ನೋಡಲೇಬೇಕಾದದ್ದನ್ನು ಅವರಿಗೆ. ಅವರ  ನಾಡಿಮಿಡಿತ ಹಿಡಿದು, ಕಾಸಿ, ಹದ ನೋಡಿ ಬಡಿಯಬೇಕು. ಕಣ್ಣುಗಳ ತೆರೆಸಿ ಬಾಬಾಸಾಹೇಬರೆಂಬ ನ್ಯಾಯದ ಕನ್ನಡಿಯೆದುರು ನಿಲ್ಲಿಸಬೇಕು. ಸಮಾಜದ ಸ್ವರೂಪ, ವಿರೂಪಗಳನ್ನು ಅವರ ಕಣ್ಣೆದುರು ಅನಾವರಣಗೊಳಿಸಿದರೆ ಬಾಬಾಸಾಹೇಬರು ಅರಿವಿಗೆ ದಕ್ಕುತ್ತಾರೆ. ಹೀಗಾದಾಗಲಷ್ಟೇ ಅಂಬೇಡ್ಕರ್, ಗಾಂಧಿ, ಬುದ್ಧ, ಬಸವಣ್ಣ, ಅಕ್ಕ, ಪೆರಿಯಾರ್, ಫುಲೆಗಳನ್ನು ಹೊಸ ತಲೆಮಾರು ತನ್ನ ಕುಲನೆಲೆಗಳಾಚೆ ಎದುರುಗೊಂಡು ಎದೆಗಿಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದಲ್ಲ ನಾಳೆ ಮೈತ್ರಿ, ಕರುಣೆ, ಸಮತೆಯ ಸಮಾಜ ನೆಲೆಯಾಗುತ್ತದೆ.

ಡಾ. ಎಚ್. ಎಸ್. ಅನುಪಮಾ

ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯರಾಗಿರುವ ಇವರು  ವಿಚಾರವಾದಿ, ಚಿಂತಕಿ, ವಾಗ್ಮಿ, ದಲಿತ-ಮಹಿಳಾಪರ ಆಂದೋಲನಗಳ  ಕಾರ್ಯಕರ್ತೆ, ಸಂಘಟಕಿ, ಕವಿ, ಪ್ರಕಾಶಕಿ ಹೀಗೆ ಜನಪರ ಕಾಳಜಿಗಳನ್ನೇ ಉಸಿರಾಡುತ್ತಿರುವವರು.

ಇದನ್ನೂ ಓದಿ-ದಲಿತ ಸರಣಿ ಹತ್ಯೆ, ತುಟಿ ಬಿಚ್ಚದ ಹಿಂದೂ ಸಂಘಟನೆಗಳು

ಮನದಿಚ್ಛೆಯಂತೆ ಇದ್ದೆ, ಉಟ್ಟೆ, ತೊಟ್ಟೆ-ನಜ್ಮಾ ಬಾಂಗಿ
ಸಿನಿಮಾ ನೋಡುವಂತಹ ಒಂದು ಸಾಮಾನ್ಯ ಸಂಗತಿಯು ಕೆಲವೊಮ್ಮೆ ಎಂತಹ ಸ್ಫೋಟಕ ಪರಿಣಾಮ ಬೀರಬಹುದು ಎನ್ನಲು ಉದಾಹರಿಸುವ ಹೆಸರು ನಜ್ಮಾ ಬಾಂಗಿಯದು. ಇವರು 1982 ನೇ ಇಸವಿಯಲ್ಲಿ ಸಿನೆಮಾ ನೋಡಿದ ಕಾರಣಕ್ಕೇ ಮೂಲಭೂತವಾದಿಗಳ ಕೆಂಗಣ್ಣಿಗೆ  ಗುರಿಯಾದವರು. ಯಾವುದಕ್ಕೂ ಹೆದರದೆ  ನಿರ್ಭೀತೆಯಾಗಿ ಬದುಕಿದ ಬಿಜಾಪುರದ ನಜ್ಮಾ ಬಾಂಗಿ ಈ ಬಾರಿಯ ಮೇ ಸಾಹಿತ್ಯಮೇಳದ ಉದ್ಘಾಟಕರಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಸಂದರ್ಶಿಸಿ ಬರೆದಿದ್ದಾರೆ ಡಾ. ಎಚ್ ಎಸ್‌ ಅನುಪಮಾ.

1982. ಸಮಾಜಕ್ಕಾಗಿ ಏನೂ ಮಾಡಲಾಗದೇ ಮಕ್ಕಳನ್ನು ಹೆರುವುದರಲ್ಲಿ ತಾನು ಕಳೆದುಹೋದೆನಲ್ಲ ಎಂದು ಮೂರನೆಯ ಹೆಣ್ಣುಮಗುವನ್ನು ಹೆತ್ತ ಹಾಸನದ ವಕೀಲೆಯೋರ್ವಳು ವಿಷಾದಗೊಂಡಿದ್ದಳು. ಅಕಸ್ಮಾತ್ ಅವಳ ಮನೆಗೆ ಬಂದ `ಲಂಕೇಶ್ ಪತ್ರಿಕೆ’ಯಲ್ಲಿ ಬಿಜಾಪುರದ ಮುಸ್ಲಿಂ ಯುವತಿಯೊಬ್ಬಳು ಥಿಯೇಟರಿಗೆ ಹೋಗಿ ಸಿನಿಮಾ ನೋಡಿದ್ದಕ್ಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದಳೆಂದೂ, ಅವಳ ಮೇಲೆ ಫತ್ವಾ ಹೊರಡಿಸಲಾಗಿದೆಯೆಂದೂ ಸುದ್ದಿ ಬಂದಿತ್ತು. ದಂಡಿಯಾಗಿ ಭಾರತೀಯ ಸಿನಿಮಾಗಳು ತಯಾರಾಗುತ್ತಿದ್ದ 1982ನೇ ಇಸವಿಯಲ್ಲಿ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದು ಅಪರಾಧವಾಗಬಹುದೇ? ಹೆಣ್ಣುಮನಸ್ಸು ಆಸ್ಫೋಟಿಸಿತು. ಮಗುವನ್ನು ಮಲಗಿಸಿ ಆಕೆ ಪೆನ್ನು ಹಿಡಿದಳು. `ಇಸ್ಲಾಮಿನಲ್ಲಿ ಮಹಿಳೆಗೂ ಮನರಂಜನೆಗೆ ಅವಕಾಶವಿದೆ. ಒಮ್ಮೆ ಪ್ರವಾದಿಯವರ ಎದುರು ಈಜಿಪ್ಟಿನ ಬುಡಕಟ್ಟು ಜನ ಪಲ್ಟಿ ಲಾಗ ಹಾಕುತ್ತಾ ಆಟ ಪ್ರದರ್ಶಿಸಿದಾಗ ಪತ್ನಿ ಆಯೆಷಾರನ್ನು ಕರೆಸಿ, ತಮ್ಮ ಬೆನ್ನ ಹಿಂದೆ ನಿಲ್ಲಿಸಿ ಅದನ್ನು ತೋರಿಸಿದ್ದರು. ಹದೀಸಿನಲ್ಲಿಯೂ ಎರಡು ಕಡೆ ಹೆಣ್ಣಿಗೂ ಮನರಂಜನೆ ಪಡೆಯುವ ಅವಕಾಶ ಇದೆಯೆಂಬ ಉಲ್ಲೇಖವಿದೆ’ ಎಂದು ಪಕ್ಕಾ ವಕೀಲಳಾಗಿ ದಾಖಲೆ ಸಮೇತ ಬರೆದಳು. ಅದು ಅವಳು ಬರೆದ ಮೊದಲ ಬರಹವಾಗಿತ್ತು. ಅವಳಿಗೆ ಹೆಗಲಾಗಿದ್ದ ಬಾಳಸಂಗಾತಿ ಪತ್ರಿಕೆಗೆ ಕಳಿಸಿದರು. ಬರುವ ವಾರ ಅದು ಪ್ರಕಟವಾಗಿಯೇಬಿಟ್ಟಿತು! ಆ ಯುವತಿ ಹಾಸನದ ಬಾನು ಮುಷ್ತಾಕ್.

ಅವರ ಬರಹದ ಜೊತೆಜೊತೆಗೇ ಇನ್ನೂ ಒಂದು ಬರಹ ಲಂಕೇಶ್ ಪತ್ರಿಕೆಯಲ್ಲಿ ಬಂದಿತ್ತು. ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಎಲ್ಲ ಸಮುದಾಯದ ಮಹಿಳೆಯರೂ ದೇಶ ತಮಗೆ ಕೊಟ್ಟ ಸ್ವಾತಂತ್ರ್ಯವನ್ನು ಧರ್ಮದ ಚೌಕಟ್ಟಿನೊಳಗೆ ಪಡೆಯಲು ಸಾಧ್ಯವಿದೆ; ಶಿಕ್ಷಣ, ಉದ್ಯೋಗ, ಮನರಂಜನೆ ಪಡೆಯುವ ಹಕ್ಕು ಮುಸ್ಲಿಂ ಹೆಣ್ಣುಮಕ್ಕಳಿಗೂ ಇದೆ ಎಂದವರು ಭಾರತೀಯ ಮುಸ್ಲಿಂ ಮಹಿಳೆಯ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿದಿದ್ದರು. ಆಕೆ ಮಂಗಳೂರಿನ ಸಾರಾ ಅಬೂಬಕರ್. ಇಬ್ಬರಿಗೂ ಲಂಕೇಶರು ಪತ್ರ ಬರೆದು ಪತ್ರಿಕೆಗೆ ಬರೆಯುತ್ತಿರುವಂತೆ ಸೂಚಿಸಿದರು. ಮುಂದೆ ಅವರಿಬ್ಬರೂ ಮುಸ್ಲಿಂ ಮಹಿಳಾ ಸಂವೇದನೆಯನ್ನು ಕನ್ನಡಕ್ಕೆ ಪರಿಚಯಿಸಿದ ಮಹತ್ವದ ಲೇಖಕಿಯರಾದರು.

ಇದಾವುದರ ಅರಿವೂ ಇಲ್ಲದ, ಇದಕ್ಕೆಲ್ಲ ಕಾರಣಳಾದ, ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರೂ ನಿರ್ಭೀತೆಯಾಗಿ ಇದ್ದ ಆ ಬಿಜಾಪುರದ ಯುವತಿ ನಜ್ಮಾ ಬಾಂಗಿ.

ಒಂದು ತಲೆಮಾರಿನ ಮಹಿಳೆಯರ ಅದರಲ್ಲೂ ಮುಸ್ಲಿಂ ಮಹಿಳೆಯರ ಗಮನ ಸೆಳೆದು ಅವರನ್ನು ಲೇಖಕಿಯರನ್ನಾಗಿಸಿದ; ದೇಶವಿದೇಶಗಳಲ್ಲೆಲ್ಲ ಸುದ್ದಿಯಾಗಿದ್ದ; ನ್ಯಾಯವಾಗಿ, ಪರಹಿತಕಾರಿಯಾಗಿ, ತನ್ನಿಷ್ಟದ ಹಾಗೆ ಬದುಕಲು ಒಂಟಿಹೆಣ್ಣಿಗೂ ಅವಕಾಶ ಇದೆಯೆಂದು ಧೃಢವಾಗಿ ನಂಬಿ ಬದುಕಿದ ನಜ್ಮಾ ಬಾಂಗಿಯ ಹೆಸರು ಆವಾಗೀವಾಗ ಕಿವಿಮೇಲೆ ಬೀಳುತ್ತಿತ್ತು. ಹೆಣ್ಣಿನ ಸ್ವಾತಂತ್ರ್ಯಹರಣ, ದಮನದ ಮಾತು ಬಂದಾಗ ಸಭೆ, ಸೆಮಿನಾರು, ಪ್ರಬಂಧಗಳಲ್ಲಿ ಸುಳಿಯುತ್ತಿತ್ತು. ಸಿನಿಮಾ ನೋಡುವಂತಹ ಒಂದು ಸಾಮಾನ್ಯ ಸಂಗತಿಯು ಕೆಲವೊಮ್ಮೆ ಎಂತಹ ಸ್ಫೋಟಕ ಪರಿಣಾಮ ಬೀರಬಹುದು ಎನ್ನಲು, ಒಂದು ತಲೆಮಾರಿನ ಮೇಲೆ ಅದರ ಪ್ರಭಾವ, ಪ್ರತಿಫಲವನ್ನು ಗುರುತಿಸಲು ಪ್ರಕರಣವನ್ನು ಉದಾಹರಿಸುತ್ತಿದ್ದೆವು. ಆದರೆ ಆಕೆ ಎಲ್ಲಿ ಹೋದಳು? ಏನು ಮಾಡುತ್ತಿರಬಹುದು? ಒತ್ತಡಕ್ಕೆ ಮಣಿದು ತಣ್ಣಗಾದಳೋ? ಫೈರ್‌ ಬ್ರಾಂಡ್ ಗುಣವನ್ನಿನ್ನೂ ಉಳಿಸಿಕೊಂಡಿರುವಳೋ? ಎಂಬ ಕುತೂಹಲವುಳಿದಿತ್ತು. ಇದೇ ಏಪ್ರಿಲ್ 30ರಂದು ಬಿಜಾಪುರದಲ್ಲಿ ಅವರನ್ನು ಭೇಟಿಯಾದ ನಂತರ ಕೊರೆಯುತ್ತಿದ್ದ ಪ್ರಶ್ನೆಯ ಹುಳಗಳು ಉತ್ತರದ ಚಿಟ್ಟೆಗಳಾಗಿ ಹಾರಿದವು.

ಅಂದು ಏಪ್ರಿಲ್ 30, ರವಿವಾರ. ಸಂಜೆ ಆರು ಗಂಟೆಯ ಮೇಲೆ ಯಾರನ್ನೂ ಭೇಟಿ ಮಾಡದ ಕಾರಣ ಬೆಳಿಗ್ಗೆಯೇ ವಿಜಯಪುರದ ಗಲ್ಲಿಗಲ್ಲಿ ಸುತ್ತಿ ಗಣೇಶಗುಡಿಯ ಬಳಿಯಿದ್ದ ನಜ್ಮಾರ ಮನೆಗೆ ಹೋದೆವು. ಹೊರಗಿನಿಂದ ಅರೆಬರೆ ಮುಗಿತಾಯವಾಗಿದ್ದ ಕಾಂಕ್ರೀಟ್ ಮನೆ. ಕೈದೋಟದಲ್ಲಿ ಬಹಳ ಕಾಲದಿಂದ ಯಾರೂ ಕೈಯಾಡಿಸಿಲ್ಲವೆಂದು ಹೇಳುವ ಗಿಡಗಂಟಿಗಳು. ಮೆಲ್ಲನೆ ಹೊರಬಂದು ಓರೆದೃಷ್ಟಿ ಬೀರಿ ಮೈಮುರಿದು ಅಲ್ಲಾಚೆ ಮೆಟ್ಟಿಲ ಮೇಲೆ ದಿಗಂತ ನೋಡುತ್ತ ಕೂತ ಮುದಿಬೆಕ್ಕು. ಒಳಗೆ ವ್ಯವಹಾರದ ಮಾತು ಕೇಳುತ್ತಿತ್ತು. ಹತ್ತು ನಿಮಿಷ ಕಾದು ಬಂದವರು ಹೊರಟ ಮೇಲೆ ಒಳಹೋದೆವು. ಮನೆಯೊಡತಿ ಮುಗುಳ್ನಕ್ಕು ಮರೆಯಾದರು. ಬೇಗ ಬಂದೆವೇನೋ, ಅವರ ಚಹಾತಿಂಡಿಯಾದರೂ ಆಗಿದೆಯೋ ಇಲ್ಲವೋ ಎಂದು ಹಿಂಜರಿದು ಕೇಳಿದೆವು. `ಆಗಿದೆ, ಆಗಿದೆ. ಪೈಲೆ ಖಾನಾಪೀನಾ. ಬಾದಮೇ ನಾಹ್ನಾ, ಕಮಾನಾ. ಸಹೀ?’ ಎಂದು ಜೋರಾಗಿ ನಕ್ಕರು. ಆ ನಗುವಿನೊಂದಿಗೆ ನಮ್ಮ ನಡುವಿದ್ದ ಅಪರಿಚಿತತೆ, ಹಿಂಜರಿಕೆಯ ಗೋಡೆ ಕುಸಿದು ಬಿತ್ತು. ಮುಂದಿನ ಎರಡೂವರೆ ತಾಸು ಅವರೊಡನೆ ಹಿಂದಿ, ಇಂಗ್ಲಿಷ್, ಕನ್ನಡಗಳಲ್ಲಿ ಬಹು(ಮಿಶ್ರ)ಭಾಷಾ ಮಾತುಕತೆ ನಡೆಯಿತು. ಅದರ ಸಾರ ಇಲ್ಲಿದೆ:

ನಿಮ್ಮ ಹೆಸರಿನ, ಮನೆತನದ ಹಿನ್ನೆಲೆ.

ನನ್ನ ತಂದೆ ಎ. ಎಸ್. ಬಾಂಗಿ. ಮೂಲತಃ ವಿಜಯಪುರದವರು. ಆದಿಲ್‍ಶಾಹಿ ಅರಸರಿಗೆ ಹತ್ತಿರವಿದ್ದ, ಶಿಕ್ಷಿತರ ಕುಟುಂಬದವರು. ಹಳೆಯ ಬಿಜಾಪುರ ಗೆಜೆಟಿನಲ್ಲಿ ಇನಾಂದಾರ್, ಜಾಗೀರದಾರ್, ಪೀರ್‍ಜಾದೆ ಅಂತೆಲ್ಲ ಎಂಟು ಕುಟುಂಬಗಳ ಉಲ್ಲೇಖವಿದೆ. ಅದರಲ್ಲಿ ನಮ್ಮದೂ ಒಂದು. 400 ವರ್ಷಗಳ ಕೆಳಗೆ ಅರಸರೊಡನೆ ನಮ್ಮ ಹಿರೀಕರೊಬ್ಬರು ಬೇಟೆಗೆ ಹೋದರು. ನಮಾಜಿನ ಸಮಯದಲ್ಲಿ ಅಜಾನ್ ಕೂಗಲು ಯಾರೂ ಇಲ್ಲದ್ದರಿಂದ ನಮ್ಮ ಹಿರೀಕ ಅಜಾನ್ ಕೂಗಿದರು. ಅರಸರಿಗೆ ಖುಷಿಯಾಗಿ ಬಾಂಗಿ ಅನ್ನುವ ಬಿರುದು ಕೊಟ್ಟು, ಹಿಟ್ಟಿನಹಳ್ಳಿಯ ಹತ್ತಿರ, ಮನಗೂಳಿಯ ಹತ್ತಿರ ನೂರಾರು ಎಕರೆ ಕೃಷಿ ಭೂಮಿಯನ್ನು ಇನಾಮು ಕೊಟ್ಟರು. ಬಾಂಗಿ ಎಂದರೆ ಅಜಾನ್ ಕೂಗುವವರು ಎಂದರ್ಥ.

ನಮ್ಮ ಮತ್ತೊಬ್ಬ ಹಿರೀಕರು ಹಕೀಂ ಆಗಿದ್ದರು. ಯಾರೂ ವಾಸಿ ಮಾಡಲಾಗದ ಖಾಯಿಲೆಗಳಿಗೆಲ್ಲ ಔಷಧಿ ಕೊಡುತ್ತಿದ್ದರು. ಸತಾರಾದ ಸಾಹೂ ಮಹಾರಾಜರಿಗೆ ಚಿಕಿತ್ಸೆ ನೀಡಿ ಹೊಟ್ಟೆಯಲ್ಲಿದ್ದ ಗಂಟು ಕರಗಿಸಿದ್ದರು. ಅದನ್ನು ಮೆಚ್ಚಿ ಸತಾರಾದ ರಾಜರು ದಿನಕ್ಕೊಂದು ರೂಪಾಯಿ ಭಕ್ಷೀಸು ಕಳಿಸುತ್ತಿದ್ದರು. ನನಗಿನ್ನೂ ವರ್ಷಕ್ಕೊಮ್ಮೆ 365 ರೂಪಾಯಿ ಬರುತ್ತಿದ್ದದ್ದು ನೆನಪಿದೆ. 1969 ಇರ್ಬೇಕು, ಇಂದಿರಾಗಾಂಧಿ ಪ್ರೈವಿ ಪರ್ಸ್ ಬಂದ್ ಮಾಡಿದಾಗ ದುಡ್ಡು ಬರುವುದು ನಿಂತಿತು.

ನನ್ನ ಓದು ಬಿಜಾಪುರದಲ್ಲೇ. ತಂದೆ ಮುಂಬಯಿಯಲ್ಲಿ ಮೆಟ್ರಿಕ್ ಮಾಡಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ 40 ವರ್ಷ ಗೋಳಗುಮ್ಮಟದ ಕಸ್ಟೋಡಿಯನ್ ಆಗಿದ್ದರು. ದೇಶವಿದೇಶಗಳ ಗಣ್ಯರಿಗೆ ಗೋಳಗುಮ್ಮಟ ತೋರಿಸ್ತಿದ್ರು. ನಾವು ಅದನ್ನು ನೋಡ್ತಾ ಬೆಳೆದೆವು. `ಗೋಳಗುಮ್ಮಟ ನಮ್ದೇ. ಅದನ್ನ ದೇಶಕ್ಕೆ ತೋಫಾ ಕೊಟ್ಟಿದೀವಿ’ ಅಂತ ಅಂದುಕೊಂಡಿದ್ದೆವು.

ಅಮ್ಮ ಫಾತಿಮುನ್ನಿಸಾ ಬೇಗಂ ಹೈದರಾಬಾದಿನವರು. ಬಡಜನರ ಪ್ರೀತಿಪಾತ್ರಳು. ಮನೆಯ ಬಜೆಟ್ ಮಾಡಿ, ಖರ್ಚು ನಿಭಾಯಿಸಿ, ಬಡವರಿಗೂ ಕೊಟ್ಟು, ಆಪತ್ತಿಗೆಂದು ದುಡ್ಡು ಉಳಿಸುತ್ತಿದ್ದಳು. ನಮ್ಮ ಬಡಾವಣೆಯ ಮುದುಕರು, ಅನಾಥರು ಊಟದ ಹೊತ್ತಿಗೆ ಮನೆಗೆ ಬಂದು ಬಿಡೋರು. ಅವರೆಲ್ಲ ಅಮ್ಮನ್ನ ಬೀಬೀ ಅಂತ ಕರೆಯೋದು ಕೇಳಿ ನಾವೂ ಬೀಬೀ ಅಂತನೇ ಕರೀತಿದ್ವಿ. ಅಮ್ಮನ ತಾಯಿ, ನಮ್ಮಜ್ಜಿ, ಹೈದರಾಬಾದಲ್ಲಿ ಹೆಡ್‍ಮಿಸ್ ಆಗಿದ್ದರು. ಚಿಕನ್ ಕಾಟನ್ ಸೀರೆಯುಟ್ಟು, ಶೂಸ್ ಹಾಕಿ, ಕಾಲುಮೇಲೆ ಕಾಲು ಹಾಕಿ ಕುರ್ಚೀಲಿ ಕೂತರೆ ನೋಡಬೇಕು, ರಾಣಿ ತರಹ ಕಾಣ್ತಿದ್ದರು. ಆಗ ಬಡಮಕ್ಕಳು ಜಾಣರಾಗಿದ್ರೂ ಓದಕ್ಕೆ ಆಗ್ತಿರಲಿಲ್ಲ. ಅವರಿಗೆಲ್ಲ ಅಜ್ಜಿ ಸಹಾಯ ಮಾಡೋರು. ಮನೆಮನೆಗೆ ಹೋಗಿ ಹುಡುಗ್ರಿಗೆ ಓದಿಸಿ ಅಂತ ಕರ್ಕೊಂಡು ಬರ್ತಿದ್ರು. ಅದಕ್ಕೇ ಅವರಂದ್ರೆ ಎಲ್ಲರಿಗೂ ಗೌರವ. ಕಂಡಕಂಡಲ್ಲಿ ಗುರುಮಾತೆಗೆ ನಮಸ್ಕಾರ ಮಾಡೋರು. `ದುವಾ ಮಾಡಿ, ನಮಗೆ ಒಳ್ಳೇದೇ ಆಗುತ್ತೆ’ ಅಂತಿದ್ದರು. (ಈಗ ಶಿಕ್ಷಕರು ಮಕ್ಕಳ ಕಾಲಿಗೆ ಬಿದ್ದು ದುವಾ ಮಾಡಿ ಅನ್ಬೇಕು, ಹಾಗಾಗಿದೆ ಅಲ್ವಾ ಎಂದು ನಜ್ಮಾ ನಗಲು, ಆ ನಗುವಿನ ಹೊಡೆತಕ್ಕೆ ಬಾಬ್‍ಕಟ್ ಆದ ಬಿಳಿಕರಿ ಕೂದಲು ಅತ್ತಿತ್ತ ಓಲಾಡಿ ತಾನೂ ಬಿದ್ದುಬಿದ್ದು ನಗಾಡಿತು.) ಆದರೆ ಅಂಥ ಅಜ್ಜಿಯ ಮಗಳು ನಮ್ಮಮ್ಮ ತುಂಬ ಸಾಂಪ್ರದಾಯಿಕಳು. ಬಿಲ್ಕುಲ್ ಮನೆಬಿಟ್ಟು ಹೊರಗೆ ಬರಲಿಲ್ಲ. ಏಳನೇಯತ್ತೆವರೆಗೆ ಮಾತ್ರ ಓದಿದ್ದು. ಪ್ರಯಾಣಿಸುವಾಗ ಟಾಂಗಾದ ಸುತ್ತ ಚಾದರ್ ಕಟ್ಟಿ ಯಾರಿಗೂ ಕಾಣದಂತೆ ಹೋಗಿಬರುತ್ತಿದ್ದಳು.

ನನಗೆ ಇಬ್ಬರು ಸೋದರರು, ನಾಲ್ವರು ಸೋದರಿಯರು. ಒಬ್ಬ ಅಣ್ಣ ಎಸ್ಸೆಲ್ಸಿ ತನಕ ಕನ್ನಡ ಮೀಡಿಯಂನಲ್ಲಿ ಓದಿ ಇಂಗ್ಲಿಷ್ ಎಂಎ ಮಾಡಿ ಉದ್ಯೋಗ ಹಿಡಿದ. ತಮ್ಮ ಇಂಗ್ಲಿಷ್ ಮೀಡಿಯಂನಲ್ಲಿ ಓದಿ, ಪದವಿ ಪಡೆದು ಟೈಮ್ಸ್ ಆಫ್ ಇಂಡಿಯಾ ಸೇರಿದ. ಒಬ್ಬ ಸೋದರಿ ಮರಾಠಿ ಮೀಡಿಯಂನಲ್ಲಿ ಓದಿ, ಉಸ್ಮಾನಿಯಾದಿಂದ ಎಕನಾಮಿಕ್ಸ್ ಪದವಿ ಪಡೆದಳು. ಮತ್ತೊಬ್ಬ ಸೋದರಿ ಹಿಂದಿ ಮೀಡಿಯಂನಲ್ಲಿ ಕಲಿತು ಬಿಎ ಮಾಡಿದಳು. ನಾನು ಹೈಸ್ಕೂಲಿನವರೆಗೆ ಉರ್ದು ಮೀಡಿಯಂ. ಆಮೇಲೆ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಬಿಎಸ್ಸಿ ಸಿಬಿಜಡ್ ಓದಿದೆ. ಪ್ರವಾದಿಯವರ ಹೇಳಿಕೆಯಂತೆ ನನ್ನ ತಾಯ್ತಂದೆ ಮಕ್ಕಳೆಲ್ಲರಿಗೂ ಶಿಕ್ಷಣ ಕೊಡಿಸಿದರು. ಬೇರೆಬೇರೆ ಭಾಷಾ ಮಾಧ್ಯಮದಲ್ಲಿ ಕಲಿಸಿದರು.

ಸಾಂಪ್ರದಾಯಿಕ ರೂಢಿಗಳನ್ನು ನಿರಾಕರಿಸಿ ಬದುಕೋಕೆ ಹೇಗೆ ಸಾಧ್ಯವಾಯಿತು?

ಅಪ್ಪ ಮುಕ್ತ ಯೋಚನೆಗಳಿದ್ದೋರು. ಅಮ್ಮ ಮಾತ್ರ ಸಾಂಪ್ರದಾಯಿಕಳು. ಮೊದಲಿಂದ ನಾನು `ಒಂಥರಾ’. ಎಷ್ಟು ನಕ್ಕು ನಗಿಸ್ತೀನೋ ಅಷ್ಟೇ ಹಠಾ ಹಿಡೀತಿದ್ದೆ. ನನಗೇನು ಇಷ್ಟವೋ ಹಾಗೆ ಮಾಡುವುದೇ. ತುಂಬ ಜಗಳಗಂಟಿ. ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿ ಆಗಿದ್ದೆ. ಯೂನಿಯನ್ ಲೀಡರ್ ಆಗಿದ್ದೆ. ಅದೇನೂ ಹುಡುಗಿಯರ ಕಾಲೇಜಲ್ಲ, ಕಂಬೈನ್ಡ್. ಪರ್ದಾ ಇರಲಿಲ್ಲ. ಒಂದಿನ ಬಸ್ಸಲ್ಲಿ ತುಂಬ ರಶ್ ಇತ್ತು. ನನ್ನ ಪಕ್ಕದ ಸೀಟಲ್ಲಿ ಒಬ್ಬ ಹುಡುಗ ಬಂದು ಕೂತ. `ಹುಡುಗ್ರ ಸೀಟು ಅಲ್ಲಿದೆ, ಇಲ್ಯಾಕೆ ಕೂತ್ಯೋ?’ ಅಂದೆ. ಅವನು ಏಳಲಿಲ್ಲ. ಕೋಪ ಬಂದು ಬಸ್ಸಿಳಿದಿದ್ದೇ ಪ್ರಿನ್ಸಿಪಾಲ್ ಹತ್ರ ಹೋದೆ. ಅವನ್ನ ಕರೆಸಿ ಡಿಬಾರ್ ಮಾಡ್ತಿವಿ ಅಂದಾಗ ಹೆದರಿ ಕಾಲಿಗೆ ಬೀಳಕ್ಕೆ ಬಂದ. ನಾನು ಯಾರಿಗೂ, ಯಾವುದಕ್ಕೂ ಹೆದರ್ತಾ ಇರ್ಲಿಲ್ಲ. ನಾವು ಸರಿ ದಾರೀಲಿರುವಾಗ ಯಾಕೆ ಹೆದರಬೇಕು ಅಂತ. ಒಂದ್ಸಲ ಯಾರೋ ಹಿಂದಿನಿಂದ ಚುಡಾಯಿಸಿದ್ರು. ಲೂನಾ ನಿಲಿಸಿ, ಚಪ್ಲಿ ತಗಂಡು ಹೊಡೆದು ಬಂದಿದೀನಿ. ಹ್ಞಾಂ, ಬಿಜಾಪುರದಲ್ಲಿ ಲೂನಾ ಓಡ್ಸಿದ ಮೊದಲ ಹೆಣ್ಣುಮಗಳು ನಾನು. 20 ವರ್ಷ ಓಡಿಸಿದ್ರೂ ನಾನು ಅದನ್ನ ಬಿಡಲಿಲ್ಲ. ಕೊನೆಗೆ ಅದಕ್ಕೇ ಬೋರಾಗಿ ನನ್ನ ಬಿಟ್ಟೋಯ್ತು. (ಅಂದ್ರೆ ಪಾರ್ಕಿಂಗಿನಲ್ಲಿ ನಿಲ್ಲಿಸಿದ್ದನ್ನು ಯಾರೋ ಕದ್ದು ಒಯ್ದರಂತೆ.)

ಬಿಎಸ್ಸಿ ಆಯ್ತು, ಆಮೇಲೆ?

ಅಷ್ಟೊತ್ತಿಗೆ ತಂದೆಗೆ ಅನಾರೋಗ್ಯವಾಯ್ತು. ಬಂಗಾಳದಲ್ಲಿ ಗಲಭೆ ಆಗಿ ಕೆಲಸ ಕಳೆದುಕೊಂಡು ಒಬ್ಬ ಅಣ್ಣ ಮನೆಗೆ ಬಂದ. ನಾನು ಜಮೀನು ನೋಡ್ತೀನಿ ಅಂತ ಹಳ್ಳಿ ಕಡೆ ಹೋಗ್ಬಿಟ್ಟ. ಆಗೆಲ್ಲ ಬಿಎಸ್ಸಿ ಮಾಡಿದರೆ ಹೈಸ್ಕೂಲಲ್ಲಿ ಸುಲಭದಲ್ಲಿ ಕೆಲಸ ಸಿಗತಿತ್ತು. ಅಂಜುಮನ್ ಸಂಸ್ಥೆಯಲ್ಲಿ ಶಿಕ್ಷಕಿಯಾದೆ. ಕೆಲಸ ಮಾಡ್ತನೇ ಬಿಎಡ್ ಕಟ್ಟಿದೆ. ಎರಡು ಸಲ ರಜೆ ಬಂದಾಗ ಧಾರವಾಡಕ್ಕೆ ಹೋಗಿ ಪಾಠ ತಗೊಂಡು ಬಂದು ಬಿಎಡ್ ಮುಗಿಸಿದೆ. ಇನ್ನೂ ಏನಾದರೂ ಓದಬೇಕಲ್ಲ ಅನಿಸಿ ಎಲ್‍ಎಲ್‍ಬಿ ಕಟ್ಟಿದೆ. ಆದರೆ ಮುಗಿಸಕ್ಕೆ ಆಗಲಿಲ್ಲ. ಹೀಗೇ ಎಲ್ಲ ನಡೀತಿತ್ತು. ಪಾಠ ಮಾಡ್ತಾ, ನಗುತ್ತ, ಕೀಟಲೆ ಮಾಡ್ತಾ, ವಿದ್ಯಾರ್ಥಿಗಳಿಗೆ `ಸ್ಟ್ರಿಕ್ಟ್’ ಆದರೂ ಪೆಟ್ ಟೀಚರಾಗಿ ಆರಾಮವಾಗಿ ಇದ್ದುಬಿಟ್ಟೆ. ಇಷ್ಟಬಂದಲ್ಲಿ ಹೋದೆ, ಇಷ್ಟಬಂದದ್ದು ಖರೀದಿ ಮಾಡಿದೆ. ಮನದಿಚ್ಛೆಯಂತೆ ಉಟ್ಟೆ, ತೊಟ್ಟೆ. ಬುರ್ಖಾ ತೊಡು, ತಲೆಗೆ ಬಟ್ಟೆ ಸುತ್ತಿಕೋ ಅಂತ ಅಮ್ಮ ಒತ್ತಾಯ ಮಾಡಿದರೂ ಕ್ಯಾರೇ ಅನ್ನಲಿಲ್ಲ. ಅಪ್ಪ ನನ್ನಿಷ್ಟದಂತೆ ಇರಕ್ಕೆ ಸಪೋರ್ಟ್ ಮಾಡಿದರು.

1982ನೇ ಇಸವಿ ಬಗೆಗೆ ಹೇಳಿ.

ಏನಂತ ಹೇಳೋದು?! ಆಗ ಕೆಲವು ಹೆಣ್ಣುಮಕ್ಕಳಿಗೆ ಸಿನಿಮಾ ಹುಚ್ಚು ಹಿಡಿದಿತ್ತು. ಕದ್ದು ಮುಚ್ಚಿ ನೋಡೋರು. ಮನೆ ಕೆಲಸ ಮುಗಿಸಿ ಸೆಕೆಂಡ್ ಶೋಗೆ ಹೋಗೋರು. ಮಸಾಲೆ ಸಿನಿಮಾನೂ ನೋಡೋರು. ಪರ್ದಾ ಇಲ್ಲ ಅಂತ ತಕರಾರು ಬರಬಾರದಲ್ಲ, ಟಾಕೀಸಲ್ಲಿ ಪರ್ದಾ ಕಟ್ಟಿಸಿ ನೋಡಿಬರೋರು. ಸಿನಿಮಾ ಅಂದ್ರೆ ಹರಾಂ. ಹೆಂಗಸರು ಪಿಚ್ಚರ್ ನೋಡಿ ಹಾಳಾಗೋದನ್ನ ಹೇಗೆ ನಿಲಿಸೋದು ಅಂತ ಕೆಲವರಿಗೆ ತಲೆಬಿಸಿಯಾಗಿಬಿಟ್ಟಿತ್ತು. `ಬಂದ್ ಕರೋಮಾ ಬಂದ್ ಕರೋ, ಪಿಚ್ಚರ್ ದೇಖನಾ ಬಂದ್ ಕರೋ’ ಅಂತ ಹಾಡು ಹೇಳಿಸುತ್ತಿದ್ರು. ಆದ್ರೆ ಹೀರೋ ಹೀರೋಯಿನ್‍ಗಳಲ್ಲಿ ಎಷ್ಟೊಂದು ಜನ ಮುಸ್ಲಿಮರೇ ಇದ್ದರು. `ಅರೆ, ಅವ್ರೆಲ್ಲ ಆಕ್ಟಿಂಗ್ ಮಾಡ್ತಾರಲ್ವಾ? ಸಿನಿಮಾ ತೆಗೆದಿರೋದು ಯಾಕೆ ಮತ್ತೆ, ನೋಡಕ್ಕಲ್ವ?’ ಅಂತ ನನಗನಿಸ್ತಿತ್ತು. ಆಗ `ಲಾ ಖುದಾ’ ಅಂತನೋ ಏನೋ ಒಂದು ಸಿನಿಮಾ ಲಕ್ಷ್ಮಿ ಥಿಯೇಟರಿಗೆ ಬಂತು. ನೋಡೇಬಿಡಣ ಅಂತ ಹೋದೆ. ಟಿಕೆಟ್ ತಗೊಂಡೆ. ಯಾರೋ ನನ್ನ ನೋಡಿ ಫೋನ್ ಮಾಡಿ ನಮ್ಮ ಜನರನ್ನ ಕರೆಸಿದ್ರು. ಟಿಕೆಟ್ ಕೊಟ್ಟಾಂವ ಬಂದು, `ಯವ್ವಾ, ಮನೀಗ್ ಹೋಗವ್ವ, ನೀವ್ ಬರಂಗಿಲ್ಲಂತ ಇಲ್ಲೆಲ್ಲ’ ಅಂದ. ನಾನು ಸುಮ್ನೆ ಅವನ ಕಡೆ ನೋಡಿ ಒಳಗೆ ಹೋದೆ. ತಗೋ, ಹೊರಗೆ ಗಲಾಟೆ ಶುರುವಾಯ್ತು. ಥಿಯೇಟರಿನ ಮ್ಯಾನೇಜರ್ ಬಂದು, `ನಮ್ಮಲ್ಲಿ ಪರ್ದಾ ಸಿಸ್ಟಂ ಇಲ್ಲ, ನೀವ್ ಹೊರಗ ಹೋಗರಿ ಮೇಡಂ’ ಅಂತ ಕೈಮುಗಿದ. `ನಾನು ದುಡ್ ಕೊಟ್ಟು ಟಿಕೆಟ್ ತಗಂಡಿದಿನಿ. ಸಿನಿಮಾ ನೋಡೇ ನೋಡ್ತಿನಿ. ಅವ್ರು ಗಲಾಟೆ ಮಾಡ್ತಿದ್ರೆ ಪೊಲೀಸರನ್ನ ಕರೆಸಿ. ನಾ ಯಾಕೆ ಹೊರಗೆಹೋಗಲಿ’ ಅಂತ ಕೂತ್ಬಿಟ್ಟೆ. ಆರಾಮಾಗಿ ಪೂರ್ತಿ ಸಿನಿಮಾ ನೋಡಿ ಹೊರಗೆ ಬಂದ್ರೆ ಎಲ್ಲ ಕೆರಳಿ ನಿಂತಿದಾರೆ. `ಸಿನಿಮಾ ಕೆಟ್ಟದು, ನೋಡಬಾರ್ದು’ ಅಂದ್ರು. `ಕೆಟ್ಟದಾದ್ರೆ ಮುಸ್ಲಿಂ ಗಂಡಸರೆಲ್ಲ ಸಿನಿಮಾ ನೋಡತಾರಲ, ಅವರಿಗೂ ಬರಬೇಡ ಅಂತ ಹೇಳಿ’ ಅಂದೆ. `ಉಲ್ಟಾ ಮಾತಾಡ್ಬೇಡ. ಇನ್ನು ಪಿಚ್ಚರ್ಗೆ ಬಂದ್ರೆ ಸರೀ ಇರಲ್ಲ. ಥಿಯೇಟ್ರನ್ನೇ ಬಂದ್ ಮಾಡಸ್ತೀವಿ’ ಅಂದ್ರು. `ಕೆಟ್ಟದನ್ನೆಲ್ಲ ಬಂದ್ ಮಾಡ್ಸದಾದ್ರೆ ಮೊದ್ಲು ಹೆಂಡದ ಅಂಗ್ಡಿ ಬಂದ್ ಮಾಡ್ಸಿ’ ಅಂದೆ. ಅವ್ರಿಗೆ ಕೆರಳೋಯ್ತು. `ಮರ್ಯಾದಸ್ಥರ ಮನಯೋಳಂಗೆ ಕಾಣ್ತೀ. ಜಮಾತಿಂದ ಹೊರಗಾಕಿಸ್ತೀವಿ ನೋಡು’ ಅಂದ್ರು. ಗದ್ದಲ ಶುರುವಾಯ್ತು. ತಳ್ಳಾಟ, ನೂಕಾಟ, ಕೆಟ್ಟಕೆಟ್ಟ ಮಾತು. ಅಷ್ಟೊತ್ಗೆ ಉಂಯ್ಞ್ ಉಂಯ್ಞ್ ಅಂತ ಪೊಲೀಸ್ ವ್ಯಾನ್ ಬಂದಿದ್ದೇ ಎಲ್ಲ ಓಡೋದ್ರು. ಪೊಲೀಸ್ ಜೀಪಲ್ಲಿ ನನ್ನನ್ನ ಮನೆಗೆ ತಂದು ಬಿಟ್ಟರು.

ಮರುದಿನ ಶಾಲೆಗೆ ಹೋಗ್ಬೇಕು ಅಂತ ಹೊರಗೆ ಬಂದ್ರೆ, `ಹೊರಗ್ಬಾ, ನಿನ್ ಸುಟ್ಟಾಕ್ತೀವಿ. ನಿನ್ ಮನೆ ಸುಡ್ತೀವಿ’ ಅಂತ ಒಂದು ಗುಂಪೇ ಜಮಾಯಿಸಿದೆ! ಅಪ್ಪನಿಗೆ ಸಖತ್ ಸಿಟ್ಟು ಬಂತು. `ನನ್ನ ಮನೆ ಮುಂದೆನೇ ನಿಂತು ಸುಟ್ಟಾಕ್ತೀನಿ ಅಂತೀರಾ? ನನ್ನ ಮಗಳು ಅವಳು, ನೀವ್ಯಾರ್ರೋ ಕೇಳೋಕೆ? ಅದೆಂಗ್ ಸುಟ್ಟಾಕ್ತೀರೋ ನೋಡೇಬಿಡ್ತೀನಿ’ ಅಂತ ಸ್ಟೇಷನ್ನಿಗೆ ಹೋದ್ರು. ನಾನೂ ಹೋದೆ. ಕಂಪ್ಲೇಂಟ್ ಬರ್ದೆ. ಮನೆ ಹತ್ರ ಪೊಲೀಸ್ ಕಾವಲು ಹಾಕಿದ್ರು. ಹಿಂದೊಬ್ರು, ಮುಂದೊಬ್ರು ಪೊಲೀಸ್. ಶಾಲೆಗೆ ಹೋದ್ರೆ ನನ್ನ ಜೊತೆಗೇ ಪೊಲೀಸ್. ಡಿಸಿ ಆಫೀಸಿಗೆ ಹೋಗಿ ಬರಲಿಕ್ಕೂ ಹಿಂದೆ ಮುಂದೆಲ್ಲ ಪೊಲೀಸ್ ವೆಹಿಕಲ್. ಹೀಗೇ ನಡೀತು.

ಪತ್ರಿಕೆಯವರು, ಹೋರಾಟಗಾರರು ನಿಮಗೆ ಬೆಂಬಲ ಕೊಡಲಿಲ್ವಾ?

ಕೊಟ್ಟಿದಾರೆ. ಈ ಘಟನೆ ಬಗ್ಗೆ ಎಲ್ಲಾ ಕಡೆ ಸುದ್ದಿ ಬಂತು. ಒಂದು ಕನ್ನಡ ಪೇಪರ್ ಇಡೀ ಪುಟ ಸುದ್ದಿ ಹಾಕ್ತು. ಎಲ್ಲಾ ಬಂದ್ರು. ಬಿಬಿಸಿ, ವಾಷಿಂಗ್ಟನ್ ಪೋಸ್ಟಲ್ಲೂ ಸುದ್ದಿ ಬಂತಂತೆ. ಒಂದು ಪತ್ರಿಕೇಲಿ, (ಲಂಕೇಶ್ ಪತ್ರಿಕೆ ಅನಿಸುತ್ತೆ), `ಧರ್ಮದ ಗುತ್ತಿಗೆ ಹಿಡಿದ ಮೂಲಭೂತವಾದಿಗಳನ್ನು ಎದುರಿಸಿ, ತಾರತಮ್ಯವನ್ನು ಪ್ರತಿಭಟಿಸಿ, ಅವಿವಾಹಿತ ಯುವತಿ ಸಿನಿಮಾ ನೋಡಿಬಂದು ಹೋರಾಟ ಮಾಡಿದಳು’ ಅಂತ ಬರೆದುಬಿಟ್ಟಿದ್ರು. ಯುದ್ಧನೇ ಶುರು ಆಯ್ತು. `ಕುರಾನ್ ವಿರುದ್ಧ ಹೇಳೋವಷ್ಟು, ಧರ್ಮನೇ ಎದುರು ಹಾಕ್ಕೊಳೋವಷ್ಟು ಸೊಕ್ಕಾ ನಿಂಗೆ’ ಅಂದರು. ನಿಜವಾಗಿ ನಾನು ಧರ್ಮನ ಎದುರು ಹಾಕ್ಕೊಳಕ್ಕೆ ಅಂತ ಸಿನಿಮಾ ನೋಡಲಿಲ್ಲ. ನೋಡಬೇಕನಿಸಿ ನೋಡಿದ್ದೆ ಅಷ್ಟೆ. ಇದ್ದಕ್ಕಿದ್ದಂಗೆ ವಿಲನ್ ಆಗಿಬಿಟ್ಟಿದ್ದೆ.

ಅಷ್ಟು ಗಲಾಟೆ ಆದಮೇಲೆ ಕೆಲಸ ಮಾಡಕ್ಕೆ ಕಷ್ಟವಾಗಲಿಲ್ವಾ?

ಆಯ್ತು. ಹೆಜ್ಜೆಹೆಜ್ಜೆಗೂ ಕಷ್ಟ. ಮಕ್ಕಳನ್ನು ನನ್ನ ವಿರುದ್ಧ ಎತ್ತಿ ಕಟ್ಟಿದರು. ಈ ಮೇಡಂ ಪಾಠ ಮಾಡಲ್ಲ, ಧರ್ಮದ ವಿರುದ್ಧ ಹೇಳ್ತಾರೆ, ನಮಗವರ ಪಾಠ ಬೇಡ ಅಂತ ಸ್ಟೂಡೆಂಟ್ಸ್ ಹತ್ತಿರ ಬರೆಸಿಕೊಂಡರು. ಒತ್ತಾಯಕ್ಕೆ ಬರೆದುಕೊಟ್ಟ ಮಕ್ಕಳು ನನ್ನ ಹತ್ರ ಅಳ್ತಾ ಬಂದು ಹೇಳಿದವು. ವಸ್ತ್ರಸಂಹಿತೆ ಬೇರೆ ಅನುಸರಿಸ್ತಾ ಇರಲಿಲ್ಲ ಅಂತ ಕೋಪವಿತ್ತು. ಸಸ್ಪೆಂಡ್ ಮಾಡಿದರು. ಆದರೆ ಒಂದೇ ತಿಂಗಳಲ್ಲಿ ಖುದ್ದು ಪ್ರಧಾನಿಯೇ ಆಸಕ್ತಿ ವಹಿಸಿ ಸಸ್ಪೆನ್ಶನ್ ರದ್ದಾಯಿತು. ಆದರೆ ನಾನಾರೀತಿಯ ಕಿರುಕುಳ. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಫುಟ್ಬಾಲಿನಂತೆ ಓಡಾಡಿಸಿದರು. ಪಾಠ ಮಾಡಕ್ಕೆ ತರಗತಿಗಳನ್ನೇ ಕೊಡಲಿಲ್ಲ. ಟೈಂಟೇಬಲ್ ಹಾಕಲಿಲ್ಲ. ಸಂಬಳ ಸರಿಯಾಗಿ ಬರಲಿಲ್ಲ. ಪದೇಪದೇ, ರಾತ್ರೋರಾತ್ರಿ ಮನೆಯ ನೀರಿನ ಪೈಪ್ ಒಡೀತಿದ್ದರಿಂದ ನೀರಿಗೂ ಪರದಾಡಬೇಕಾಯಿತು. ಅಷ್ಟಾದರೂ 12 ವರ್ಷ ಕೆಲಸ ಮಾಡಿದೀನಿ. ಕೊನೆಗೆ ದುಡ್ಡು ಮುಖ್ಯವಲ್ಲ, ನೆಮ್ಮದಿಯಿಂದ ಬದುಕೋದು ಮುಖ್ಯ ಅಂತ ಅಪ್ಪ ಕೆಲಸ ಬಿಡಲಿಕ್ಕೆ ಹೇಳಿದರು. ವಿಆರೆಸ್ ತಗೊಂಡೆ.

ಪ್ರೀತಿ, ಪ್ರೇಮ, ಮದುವೆ ಅಂತೆಲ್ಲ..

ನೋ ನೋ ನೋ. ಲವ್ ಗಿವ್ವೆಲ್ಲ ಆಗಲಿಲ್ಲ. ಇಷ್ಟು ಜೋರಿರೋ ಹೆಂಗ್ಸನ್ನ ಯಾವ ಗಂಡಸಾದ್ರೂ ಲವ್ ಮಾಡ್ತಾನಾ? (ಕಣ್ಣು ಮಿಟುಕಿಸಿ ನಗು.) ಮನೆಯಲ್ಲಿ ಮದುವೆಯ ಮಾತು ಬರ್ತಿತ್ತು. ಅಕ್ಕಂದಿರ, ಅಣ್ಣಂದಿರ ಮದುವೆ ಆಗಿತ್ತು. ನಾನು ಮಾತ್ರ ಗಟ್ಟಿಯಾಗಿ `ಒಲ್ಲೆ’ ಅಂದೆ. `ಮದುವೆಯಾದರೆ ಮುಗೀತು, ಬಾಳೆಲ್ಲ ಗುಲಾಮಗಿರಿ. ನಾನೂ ದುಡಿತೇನೆ, ಅವನೂ ದುಡೀತಾನೆ. ಆದ್ರೆ ಸಂಜೆ ಬಂದ್ಮೇಲೆ ಆರಾಮ ಕೂತು ಚಾ ಅಂದರೆ ಚಹಾ ಕೊಡಬೇಕು. ತಲೆನೋವೆಂದರೆ ಬಾಮ್ ಉಜ್ಜಬೇಕು. ನಾಕು ಸಾಮಾನು ಪಟ್ಟಿ ಬರೆದು ತರಿಸೋಕೆ ಬೆಣ್ಣೆ ಹಚ್ಚಬೇಕು. ಅವರು ಹೇಳಿದಂಗೇ ಅಡುಗೆ, ಮಾತು, ಬಟ್ಟೆ, ಯಾತ್ರೆ, ಮಕ್ಕಳುಮರಿ, ಸಂಸಾರ. ಅಬ್ಬಬ್ಬ, ನನ್ನ ಕೈಲಿ ಸಾಧ್ಯವಿಲ್ಲ. ನನಗೂ ಸೇವೆ ಮಾಡೋವಂತಾ, ಜೊತೆಯಿದ್ರೂ ನನ್ನಿಷ್ಟದಂತೆ ಇರೋಕೆ ಬಿಡೋ ಗಂಡು ಸಿಕ್ಕರಷ್ಟೇ ಮದುವೆ ಅಂದೆ. ಅವತ್ತಷ್ಟೇ ಅಲ್ಲ, ಯಾವತ್ತಿಗೂ ಅಂತಹ ಗಂಡು ಭೂಮಿ ಮೇಲೆ ಸಿಗಲ್ಲ ಅನ್ನೋದು ಗೊತ್ತಾಗಿ ಮನೆಯವರು ಸುಮ್ಮನಾದ್ರು.

ಮನೆಯಲ್ಲೇ ಇರಕ್ಕೆ ಬೇಸರ ಆಗಲಿಲ್ಲವೆ?

ಬೇಸರ ಕಳೆಯಲಿಕ್ಕೆ ಒಂದೇಸಮ ಓದಿದೆ. ಲೈಬ್ರರಿ ಪುಸ್ತಕ, ನ್ಯೂಸ್‍ಪೇಪರ್ ಓದಿದ್ದೇ ಓದಿದ್ದು. ಆಲಮಟ್ಟಿ ಅಣೆಕಟ್ಟೆ ಏರಿಸುವ ಹೋರಾಟದ ಬಹಿರಂಗ ಸಭೆಗೆ ಹೋಗಿದ್ದೆ. ಮಹಿಳಾ ಸಂಘಟನೆಗಳು ಕರೆದವು. ಸ್ವಲ್ಪಸ್ವಲ್ಪ ಪಾಲ್ಗೊಂಡೆ. ಬೆಳಗಾವಿಯ ಮಹಿಳಾ ದಿನಾಚರಣೆಯೊಂದಕ್ಕೆ ಕರೆದರು. ರಾಯಚೂರು ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಹೋಗಿಬಂದೆ. ಆದರೆ ಅದರಲ್ಲೇ ಪೂರಾ ತೊಡಗಿಕೊಳ್ಳಲಿಕ್ಕೆ ಸಾಧ್ಯವಾಗಲಿಲ್ಲ. ಯಾಕೆಂದರೆ ಪುಸ್ತಕಗಳ ನಂಟು ಹೆಚ್ಚಾಯಿತು. ಅಟ್ಟದಲ್ಲಿದ್ದ ಹಿರೀಕರ ದಫ್ತರಗಳನ್ನು ತೆಗೆದೆ. ಓಹೋ, ಅದೊಂದು ಬೇರೆಯದೇ ಜಗತ್ತು. ಆಗಲೇ ಹೇಳಿದೆನಲ್ಲ, ಒಬ್ಬ ಹಿರೀಕರು ಹಕೀಮರಾಗಿದ್ದರು ಅಂತ, ಹಕೀಮತಿಯ ಪುಸ್ತಕಗಳನ್ನ ಓದಿ ಔಷಧಿ ಕೊಡಲಿಕ್ಕೆ ಶುರು ಮಾಡಿದೆ. ಕಾಮಾಲೆ, ಸಂಧಿವಾತ, ಕಣ್ಣುಬೇನೆಯಂತಹ ಕಾಯಿಲೆಗೆ ಚೂರ್ಣ, ಮದ್ದು ಮಾಡಿ ಕೊಟ್ಟೆ. ಮನೆಯ ತಾಪತ್ರಯ ಹೇಳಿಕೊಂಡು ಬಂದವರಿಗೆ ಧೈರ್ಯ ಹೇಳಿ ತಾಯಿತ ಮಾಡಿಕೊಟ್ಟೆ. ಹಲವರಿಗೆ ಕಾಯಿಲೆ ಗುಣವಾಯಿತು, ತಾಯಿತ ದಾರಿ ತೋರಿಸಿತು. ಗಂಡ ಬಾಳಾ ತ್ರಾಸು ಕೊಡತಾನಂತ ಒಬ್ಬಳು ಬಂದಳು. ತಾಯಿತ ಮಾಡಿಕೊಟ್ಟೆ. ಅದನ್ನವಳು ಕಟ್ಟಿಕೊಂಡ ಮೇಲೆ ಗಂಡ ಕೂರು ಅಂದ್ರೆ ಕೂರ್ತಾನಂತೆ, ನಿಲ್ಲು ಅಂದ್ರೆ ನಿಲ್ತಾನಂತೆ! ನೆಮ್ಮದಿ ಇಲ್ಲ ಅಂತ ಬಂದೋರಿಗೆ ತಾಯಿತ ಬರೀತಾ, ಸಮಾಧಾನ ಹೇಳ್ತಾ ನಾನೂ ನೆಮ್ಮದಿ ಪಡಕೊಂಡಿದೇನೆ. (ಮದ್ವೆಯಾಗಿದೀಯಾ? ನಿನ್ಗೇನಾದ್ರೂ ಅಂಥದು ಬೇಕಾ ಎನ್ನುತ್ತ ಮುಂಬಾಗಿ ತುಂಟತನದಿಂದ ನಕ್ಕರು.)

ಅಂದು ಬುರ್ಖಾ ತೊಡದೇ ನೀವಿದ್ದದ್ದನ್ನು ಸಮಾಜ ಸಹಿಸಿತೇ?

ಅವತ್ತು ಬಾಳ ಜನ ಬುರ್ಖಾ ಹಾಕ್ತಾ ಇರಲಿಲ್ಲ. ಹೊರಗೆ ಹೋಗುವಾಗ ಮಾತ್ರ ಕೆಲವರು ಹಾಕ್ತಾ ಇದ್ದಿದ್ದು. ಕೆಳವರ್ಗದ ಹೆಣ್ಣುಮಕ್ಕಳಿಗಂತೂ ಅವೆಲ್ಲ ಗೊತ್ತೇ ಇರಲಿಲ್ಲ. ಅದನ್ನು ಕಂಪಲ್ಸರಿ ಅಂತ ಎಲ್ಲೂ ಹೇಳಿಲ್ಲ. ಈಗ ಎಷ್ಟು ಸಣ್ಣ ಹುಡುಗಿಯರಿಗೂ ಸ್ಕಾರ್ಫ್, ಗ್ಲೋವ್, ಸಾಕ್ಸ್ ಹಾಕಿ ಬುರ್ಖಾ ತೊಡಿಸ್ತಾರೆ! ನಾನು ತಮಾಷೆ ಮಾಡ್ತೀನಿ, `ಹಜ್ ಕರ್ಕೇ ಆಯೀ ಕ್ಯಾ ಮಾ?’ ಅಂತ. ದೇಹವನ್ನು ಸೆಕ್ಸಿ ಆಗಿ ತೋರಿಸದಂತೆ ಸಡಿಲ ಬಟ್ಟೆ ಹಾಕಬೇಕು ಎನ್ನುವುದು ಬುರ್ಖಾ ಹಿಂದಿದ್ದ ಉದ್ದೇಶ ಅಷ್ಟೇ. ಟೈಟ್ ಫಿಟಿಂಗ್ ಮಾಡಿಸಿ, ಮನಸೆಳೆಯುವಂತಹ ಡಿಸೈನ್ ಮಾಡಿ ಹಾಕೋಹಾಗಿದ್ದರೆ ಬುರ್ಖಾನೂ ಒಂದೇ, ಸಲ್ವಾರ್ ಕಮೀಜೂ ಒಂದೇ. ಬಟ್ಟೆಗಳದ್ದೇ ದೊಡ್ಡ ಬಿಸಿನೆಸ್. ಅವರದ್ದೇ ಕುಮ್ಮಕ್ಕು. ನಾನು ಅವತ್ತಿಗೂ ಇವತ್ತಿಗೂ ಬುರ್ಖಾ ತೊಟ್ಟಿಲ್ಲ, ಎಂದೆಂದೂ ತೊಡುವುದೂ ಇಲ್ಲ. ನನ್ನ ಬಟ್ಟೆ ಎಷ್ಟು ಸಡಿಲ ಇದೆಯೆಂದರೆ ಇದೇ ಬುರ್ಖಾದಂತೆ ಕವರ್ ಮಾಡತ್ತೆ. ಹಿಜಾಬ್‍ನೂ ಹಿಂದಿಂದ ಎಳೀಬಹುದು. ಆದ್ರೆ ನನ್ನ ಬಾಬ್‍ಕಟ್ ಯಾರೂ ಎಳೆಯಕ್ಕಾಗಲ್ಲ. ಪರ್ಫೆಕ್ಟ್ ಅಲ್ವಾ?

ಇಸ್ಲಾಂನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಪರದೆಯೊಳಗೆ ಕೂಡಿ ಹಾಕಲಾಗಿದೆ ಎಂಬ ಮಾತಿದೆಯಲ್ಲ?

ಇಸ್ಲಾಮಲ್ಲಿ ಹೆಣ್ಣುಮಕ್ಕಳಿಗೆ ಲಿಬರ್ಟಿ ಇದೆ, ಆದರೆ ಕೆಲವೆಡೆ ಇಲ್ಲ. ಉದಾಹರಣೆಗೆ ಅಜಾನ್ ಕೂಗಕ್ಕಾಗಲ್ಲ, ಮಸೀದಿಗೆ ಹೋಗಕ್ಕಾಗಲ್ಲ, ಅಪರಿಚಿತ ಸ್ತ್ರೀಪುರುಷರು ಒಟ್ಟೊಟ್ಟಿಗೆ ಇರಕ್ಕಾಗಲ್ಲ. ಆದರೆ ಏನಿದೆ ಏನಿಲ್ಲ ಅಂತ ನಾವೇ ಓದಿ ಅರ್ಥ ಮಾಡ್ಕೋಬೇಕು. ಇದೆಯೆಂದಿರುವುದನ್ನೂ ತಪ್ಪಾಗಿ ಅರ್ಥೈಸಿ ಇಲ್ಲ ಅಂದಿರೋದು ಸಾಕಷ್ಟಿದೆ. ಅದಕ್ಕೇ ಸುಮ್ನೇ ಯಾರೋ ಹೇಳಿದ್ದನ್ನ ನಂಬಿ ಅನುಸರಿಸೋದಲ್ಲ. ನಾವೇ ಸ್ವತಃ ಓದಿ, ಯೋಚಿಸಿ ತಿಳಕೋಬೇಕು.

ಈ ಕಾಲಮಾನದಲ್ಲಿ ಹೀಗೆ ನೀವಿಬ್ರೇ ಮನೇಲಿದೀರ, ಭಯ ಅನಿಸಲ್ಲವೆ?

ನನಗೆ ಯಾವತ್ತೂ ಭಯ ಇಲ್ಲ. ಅನ್ಯಾಯ ಮಾಡಿದರಷ್ಟೇ ಭಯ ಪಡಬೇಕು. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಜೊತೆಗೆ ಹಿರೀಕರಿಂದ ಬಂದ ಗೌರವ, ಪ್ರೀತಿ, ವಸ್ತುಗಳು ಇದಾವೆ. ಈ ಪೆಟ್ಟಿಗೆ ಕಾಣ್ತಾ ಇದೆಯಲ್ಲ, ಸಾಗವಾನಿಯದು, 200 ವರ್ಷ ಹಳೆಯದು. ಈ ಬೀಗ ಹೇಗಿದೆ ಅಂದ್ರೆ ಬಾಗಿಲು ಮುರಿದರೂ ಬೀಗ ಮುರಿಯಲ್ಲ. ಈ ಗಡಿಯಾರ ನೋಡಿ, ಕೀ ಕೊಟ್ರೆ ಇವತ್ತಿಗೂ ನಡೆಯುತ್ತೆ. ಈ ಟೇಬಲ್ಲಿನ ಕಾಲು ನೋಡಿ, ಮಜಬೂತಾಗಿದಾವೆ. ಸ್ವಲ್ಪ ಪಾಲಿಶ್ ಮಾಡಿದ್ರೆ ಬಾರೀ ಚೆನ್ನಾಗಾಗುತ್ತೆ. ಈ ಕಂಚಿನ ತಟ್ಟೆ ನೋಡಿ, `ಸೈಯದ್ ಮೆಹಬೂಬ್ ಸುಭಾನ್-1287’ ಅಂತ ಬರೆದಿದೆ. 800 ವರ್ಷ ಹಳೇದು. ಬಗದಾದಿನ ಸೂಫಿಗಳು ದುವಾ ಮಾಡುವಾಗ ಕೈಯಲ್ಲಿ ಹಿಡೀತಿದ್ದ ತಟ್ಟೆ ಅದು. ಇದನ್ನ ಹಿಡಿದು ನಾನು ಎಷ್ಟೋ ಜನರಿಗೆ ದುವಾ ಕೇಳಿದೇನೆ. ನಿಜ ಆಗಿದೆ. ಹಿರೀಕರ ಇಂಥಾ ವಸ್ತುಗಳ ಮಧ್ಯನೇ ಇರೋದಕ್ಕೋ ಏನೋ ಆ ಕಾಲದಲ್ಲೇ, ಅವರ ಮಧ್ಯನೇ ಇದೀವಿ ಅನಿಸಿದೆ. ಭಯನೇ ಇಲ್ಲ. ಆದರೆ ಸಾಕಷ್ಟು ವಸ್ತುಗಳನ್ನ ಮ್ಯೂಸಿಯಂಗೆ ಕೊಟ್ಟಿದೀವಿ. ಉಳಿದಿದ್ದು ಒಂದೊಂದೇ ಮಾರಾಟ ಮಾಡತಾ ಇದೇವೆ. ವಯಸ್ಸಾಗ್ತಾ ಇದೆ, ಸಂಬಂಧಿಕರೆಲ್ಲ ಹೈದರಾಬಾದಿನಲ್ಲಿ ಇದಾರೆ. ನಾವೂ ಅಲ್ಲಿಗೇ ಹೋಗುವ ಅಂದುಕೊಂಡಿದೇವೆ. ಹೀಗೇ ಇನ್ನೆಷ್ಟು ದಿನನೋ ಗೊತ್ತಿಲ್ಲ. ಇರುವಷ್ಟು ದಿನ, ಯಾರಿಗೂ ತೊಂದರೆ ಕೊಡದ ಹಾಗೆ, ಅಯ್ಯೋ ಹೀಗಾಯ್ತಂತ ಅಳದ ಹಾಗೆ, ಅದುಬೇಕು ಇದುಬೇಕಂತ ಆಸೆ ಪಡದ ಹಾಗೆ, ನಾಲ್ಕು ಜನರ ಕಣ್ಣೀರು ಒರೆಸಿ, ಕೊನೆಗೆ ನಡೆದುಬಿಡೋದು. ಏನಂತೀರಾ?

ಏನೆನ್ನುವುದು ನಾವು?

ಈಗ ಅಜಮಾಸು 75 ವಯಸ್ಸಿನವರಿರಬಹುದಾದ ಅವರು ತಮಗೆಷ್ಟು ವರ್ಷ ಎಂದು ಏನು ಮಾಡಿದರೂ ಹೇಳಲಿಲ್ಲ. `ಮೈ ಸೋಲಾ ಸಾಲ್ ಜೈಸೀ ದಿಖ್ತಾ ನಹೀ? ಸೋಲಾ ಬರಸ್ ಲಿಖೋ’ ಎಂದೇ ತುಂಟತನದಿಂದ ಬೆನ್ನು ಚಪ್ಪರಿಸಿದರು. ತಾನು ವಿಧಿಸಿದ ಚೌಕಟ್ಟನ್ನು ಮೀರಿ, ಮದುವೆಯೆಂಬ ಆತ್ಯಂತಿಕ ಹೆಣ್ಣು ಗುರಿಯನ್ನು ಮುಟ್ಟಲೊಲ್ಲದೆ ಏಕಾಂಗಿಯಾಗಿ ಸಂತೋಷವಾಗಿ ಬದುಕುವ ಹೆಣ್ಣುಗಳ ಬಗೆಗೆ ಸಮಾಜಕ್ಕೆ ತೀವ್ರ ಅಸಮಾಧಾನ, ಅಸಡ್ಡೆ ಇರುತ್ತದೆ. ಸಣ್ಣ ಕಾರಣ ಸಿಕ್ಕರೆ ಸಾಕು, ನೂರೊಂದು ಕತೆಗಳು ಹುಟ್ಟಿಕೊಳ್ಳುತ್ತವೆ. ಸಹಾಯವೆಂದೋ, ಸಾಂಗತ್ಯವೆಂದೋ ಒಬ್ಬ ಒಂಟಿ ಹೆಣ್ಣು ಗಂಡಿನೊಡನೆ ಸಂಪರ್ಕವಿಟ್ಟುಕೊಂಡರೆ ಅದಕ್ಕೊಂದು ತರಹದ ಕತೆ. ಒಂಟಿ ಹೆಣ್ಣು ಮತ್ತೊಂದು ಹೆಣ್ಣಿನೊಡನಿದ್ದರೆ ಅದು ಮಗದೊಂದು ದಿಕ್ಕಿನ ಕತೆ. ಅಂಥ ಎಲ್ಲದಕ್ಕೂ ಗ್ರಾಸವಾಗಿ, ಕೇಳಬಾರದ್ದನ್ನು ಕೇಳಿ, ಹೇಳಬೇಕಾದ್ದನ್ನು ಹೇಳಿ, ತನ್ನಿಷ್ಟದಂತೆ ಜೀವಿಸುವ ಹಕ್ಕು ತನಗಿದೆ ಎಂದು ಬದುಕಿ ತೋರಿಸುತ್ತಿರುವ ಅಪರೂಪದ ದಿಟ್ಟ ಮಹಿಳೆ ನಜ್ಮಾರ ಬದುಕೇ ಒಂದು ಹೋರಾಟದಂತಿದೆ.

ರಾಜಕಾರಣದ ಪ್ರತಿ ಆಗುಹೋಗುಗಳ ಬಗೆಗೂ ಅಪ್‍ಡೇಟ್ ಆಗಿರುವ ರಾಜಕೀಯ ಪ್ರಜ್ಞೆ, ತಮ್ಮನ್ನೇ ಲೇವಡಿ ಮಾಡಿಕೊಳ್ಳುವ ಹಾಸ್ಯ ಪ್ರಜ್ಞೆ, ಇರುವುದನ್ನು ಅದಿರುವಂತೆ ಗುರುತಿಸಬಲ್ಲ ವಾಸ್ತವ ಪ್ರಜ್ಞೆ, ಸುತ್ತಮುತ್ತಿನವರಿಗೆ ಸಾಧ್ಯವಿರುವಷ್ಟು ಸಹಾಯ ಮಾಡಬೇಕೆಂಬ ಸಮುದಾಯ ಪ್ರಜ್ಞೆ ಇರುವ ನಜ್ಮಾ ನೆನಪು-ಮರೆವುಗಳ ಸಮನ್ವಯದ ವಯೋಮಾನದಲ್ಲಿ ಬದುಕುತ್ತಿದ್ದಾರೆ. ಅವರ ದೇಹಭಾಷೆಯಲ್ಲಿ ತುಂಟತನ, ನಗೆಚಾಟಿಕೆ, ಮುಕ್ತ ಅಭಿವ್ಯಕ್ತಿ ಹಾಸುಹೊಕ್ಕಾಗಿವೆ. ಅವರಲ್ಲಿ ಹಲವು ವೈವಿಧ್ಯಗಳ ಸಮನ್ವಯವಿದೆ. ಆಧುನಿಕತೆ, ಆಂಟಿಕ್ವಿಟಿಯ ಸಮನ್ವಯವಿದೆ. ಧರ್ಮಶ್ರದ್ಧೆ, ವೈಯಕ್ತಿಕ ಸ್ವಾತಂತ್ರ್ಯಗಳ ಸಮನ್ವಯವಿದೆ. ಕನ್ನಡ, ಉರ್ದು, ಇಂಗ್ಲಿಷ್, ಮರಾಠಿ ಭಾಷೆಗಳ ಸಮನ್ವಯವಿದೆ. ತಮಾಷೆಯಿದೆ, ವಿಷಾದವಿದೆ. ಒಂಟಿತನದ ಅಸಹಾಯಕತೆಯಿದೆ; ಅದೂ ಬದುಕಿನ ಒಂದು ಮಜಲಷ್ಟೇ ಎಂದು ದಾಟಿ ಬಿಡುವ ಸ್ಫೂರ್ತಿಯಿದೆ.

ನಜ್ಮಾ ಈಗ ಅಕ್ಕನೊಡನೆ ಒಂದು ಪುಟ್ಟ ಮನೆಯಲ್ಲಿದ್ದಾರೆ. ಅವರ ತಾಯತ, ಮದ್ದು, ಔಷಧಿಗಳು ಜನರೊಡನೆ ಅಷ್ಟಿಷ್ಟು ಒಡನಾಟ ಒದಗಿಸಿ ಬದುಕನ್ನು ಸಹ್ಯಗೊಳಿಸಿರುವಂತಿದೆ. ಆದರೆ ಸಣ್ಣಪುಟ್ಟ ಸಹಾಯಕ್ಕೂ ಯಾರೂ ಇಲ್ಲದಿರುವುದು ಕಷ್ಟವಾಗಿದೆ. ನಾವು ಹೋದಾಗ ಕುಡಿಯುವ ನೀರು ಮುಗಿದುಹೋಗಿತ್ತು. ಕ್ಯಾನು ತುಂಬಿಸಿ ತರುವವರು ಕಾಣದೇ ತಳಮಳಗೊಂಡಿದ್ದರು. ಆದರೂ ಎಲ್ಲ ಇಲ್ಲಗಳ ನಡುವೆ ಮನೆಯೆದುರಿನ ಒಂಟಿಮರದ ಹಾಗೆಯೇ ಧೃಢವಾಗಿ, ಚಲನಶೀಲವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ನಿರಾವಲಂಬಿ, ಸರಳ, ನಿರ್ಭೀತ ಬದುಕು ಘನತೆಯ ಬದುಕಿಗೊಂದು ಒಳ್ಳೆಯ ಮಾದರಿಯಾಗಿದೆ.

ಡಾ. ಎಚ್. ಎಸ್. ಅನುಪಮಾ

ವೈದ್ಯೆ , ಲೇಖಕಿ

ಇದನ್ನೂ ಓದಿ-ದಲಿತ ಲೋಕದ ಅನರ್ಘ್ಯ ರತ್ನ : ಕುಮಾರ ಕಕ್ಕಯ್ಯ ಪೋಳ

ಮೇ ಸಾಹಿತ್ಯ ಮೇಳ | ಲಿಂಗಾಂತರಿ ಸಮುದಾಯದ ಹೊಸ ಬೆಳಗು – ವಿಹಾನ್
ಮೇ 27, 28 ರಂದು ನಡೆಯಲಿರುವ ಒಂಭತ್ತನೇ ಮೇ ಸಾಹಿತ್ಯ ಮೇಳದ ಉದ್ಘಾಟಕರಲ್ಲಿ ಒಬ್ಬರಾಗಿರುವ ವಿಹಾನ್‌ ಲಿಂಗಾಂತರಿ ಸಮುದಾಯದ ಹೊಸ ದನಿ. ವಿಹಾನ್ ನಡೆದುಬಂದ ದಾರಿಯನ್ನು ಅವಲೋಕಿಸಿದ್ದಾರೆ ಡಾ. ಎಚ್‌ ಎಸ್‌ ಅನುಪಮಾ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡೆಂದು ಗುರುತಿಸಲ್ಪಟ್ಟ ಜೀವಕ್ಕೆ ತಂತಾನೇ ಒಂದಷ್ಟು ಸ್ವಾತಂತ್ರ್ಯ, ಆಯ್ಕೆ, ಅವಕಾಶಗಳು ಸಿಗುತ್ತವೆ. ಎಂದೇ ಗಂಡಾಗಿ ಹುಟ್ಟಿ ತಾನು ಹೆಣ್ಣೆಂದು ಗುರುತಿಸಿಕೊಂಡ ಲಿಂಗಾಂತರಿ ಹೆಣ್ಣುಗಳು ಕೊಂಡ ಹಾಯ್ದು ಬದುಕು ಕಟ್ಟಿಕೊಂಡರೂ ವಿಪುಲ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಪುರಾಣದಲ್ಲೂ ಶಿಖಂಡಿಯಂತಹ ಪಾತ್ರಗಳು ಕಂಡುಬರುತ್ತವೆ. ಆದರೆ ಹುಟ್ಟಿನಿಂದ ಹೆಣ್ಣೆಂದು ಗುರುತಿಸಲ್ಪಟ್ಟ ಜೀವಕ್ಕೆ ಮೊದಲು ಸಿಗುವ ಅನುಭವಗಳು ತಾರತಮ್ಯ, ದಮನ, ಸ್ವಾತಂತ್ರ್ಯದ ನಿರ್ಬಂಧ. ಹಾಗಾಗಿ ಹೆಣ್ಣು ಎಂದು ಕರೆದ ಜೀವಕ್ಕೆ ತಾನು ಗಂಡು ಎಂದೆನಿಸಿದರೂ ಹೇಳುವುದು ಸುಲಭವಿಲ್ಲ. ಹೇಳಿದರೂ ಬದುಕುವುದು ಸುಲಭವಿಲ್ಲ. ಎಂದೇ ಪುರಾಣ-ಕತೆಗಳಲ್ಲಿ ಹೇಗೋ ಹಾಗೆ ನಿಜಜೀವನದಲ್ಲೂ ಹೆಣ್ಣಾಗಿ ಗಂಡಾದ ಲಿಂಗಾಂತರಿ ಪುರುಷರು ಅದೃಶ್ಯರಾಗಿಯೇ ಇರುವಂತಾಗಿದೆ. ಮೊದಲೇ ಅಂಚಿಗೆ ದೂಡಲ್ಪಟ್ಟ ಹೆಣ್ಣುಲೋಕದಲ್ಲೂ ಅದರ ಅಂಚಿಗೆ ತಳ್ಳಲ್ಪಟ್ಟ ಟ್ರಾನ್ಸ್‌ಮ್ಯಾನ್‌ಗಳ ನೋವಿಗೂ ಹೆಣ್ಣು ಕಿವಿಯಾಗಬೇಕಿದೆ.

ಮಹಾರಾಷ್ಟ್ರದ ಪುಣೆಯ ಬಳಿಯ ಮರಾಠಿ ಮನೆಮಾತಿನ  26  ವರ್ಷದ ವಿಹಾನ್, ‘ಬಹುಜನ ಲಿಂಗಾಂತರಿ ಸ್ತ್ರೀವಾದಿ ಪುರುಷ’ ಎಂದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ವಿಹಾನ್ ಎಂಬ ಪದದ ಅರ್ಥ ‘ಮುಂಬೆಳಗು’. ತನ್ನ ದೇಹ, ಬದುಕಿನ ಹೊಸದಾರಿ ದಿಕ್ಕನ್ನು ತಾನೇ ರೂಪಿಸಿಕೊಂಡ ವಿಹಾನ್, ವಿರಳ ಸಂಖ್ಯೆಯ ಲಿಂಗಾಂತರಿ ಪುರುಷ ಸಮುದಾಯದ ಹೊಸ ದನಿಯಾಗಿ ಹೊರಹೊಮ್ಮುತ್ತಿದ್ದಾರೆ. ತನ್ನ ಆಯ್ಕೆಯ ಅವಕಾಶಕ್ಕೆ ನಿರಂತರ ಹೋರಾಡುತ್ತಲೇ ಇರಬೇಕಾದ ಮಹಿಳಾ ಸಮುದಾಯಕ್ಕೆ ಇದುವರೆಗೆ ವಿಹಾನ್ ನಡೆದುಬಂದ ದಾರಿಯನ್ನೊಮ್ಮೆ ಅವಲೋಕಿಸುವುದು ಸೂಕ್ತವಾಗಿದೆ.

‘ನೀನು ಹೆಣ್ಣು, ಅದಕ್ಕೇ..’

ಹುಟ್ಟುವಾಗ ಹೆಣ್ಣೆಂದು ಗುರುತಿಸಲ್ಪಟ್ಟು ಅದರಂತೆ ಬೆಳೆಯಬೇಕೆಂಬ ಸಾಮಾಜೀಕರಣಕ್ಕೆ ವಿಹಾನ್ ಒಳಗಾದರು. ಕುಟುಂಬ, ಶಾಲೆ, ಬೀದಿ, ಸಂಘಸಂಸ್ಥೆಗಳೆಲ್ಲ ಅವರನ್ನು ಹೆಣ್ಣೆಂದೇ ಗುರುತಿಸಿ ಗೆರೆಯೆಳೆಯುತ್ತ ಹೋದವು. ಎಳೆಯ ವಯಸ್ಸಿನಲ್ಲಿಯೇ ತನ್ನ ಹುಡುಗಿತನ ಎಲ್ಲರಂತಿಲ್ಲ ಎಂದು ತಿಳಿಯಿತು. ಆದರೆ ಕುಟುಂಬ ವಹಿಸುತ್ತಿದ್ದ ಹೆಣ್ಣು ಪಾತ್ರಕ್ಕೆ ತಕ್ಕಂತೆ ಅಭಿನಯಿಸಲೇಬೇಕಾಗುತ್ತಿತ್ತು. ಹೆಣ್ಣುಮಕ್ಕಳು ಕಲಿಯಬೇಕಾದ ಕೆಲಸ ಮಾಡಬೇಕಿತ್ತು. ತನಗದು ಬರುವುದಿಲ್ಲ, ಮಾಡಲು ಇಷ್ಟವಿಲ್ಲ, ಸೋದರರೂ ಮಾಡಲಿ ಎಂದರೆ, ‘ಸೋಂಬೇರಿ, ಕೆಲ್ಸಾ ಮಾಡಕ್ಕಾಗದೆ ಅವರಿವರು ಮಾಡ್ಲಿ ಅಂತಿಯಾ? ನೀನು ಹೆಣ್ಣು, ಮೊದ್ಲು ಅಚ್ಚುಕಟ್ಟಾಗಿ ಕೆಲ್ಸ ಮಾಡದ್ ಕಲಿ’ ಎಂದು ಮನೆಯವರು ಜೋರು ಮಾಡುತ್ತಿದ್ದರು.

ಬೆಳೆಯುತ್ತ ಹೋದಂತೆ ಬಳೆ, ಟಿಕ್ಲಿ, ಮೆಹೆಂದಿ, ಗೆಜ್ಜೆ, ಜಡೆ, ಹೂವು, ಸರ, ಓಲೆ, ಒಡವೆಗಳಲ್ಲಿ ಮನೆಯ ಹೆಂಗಸರು, ಸಹಪಾಠಿ ಗೆಳತಿಯರು ಮುಳುಗಿಹೋದರೆ, ವಿಹಾನ್‌ಗೆ ಅದ್ಯಾವುದೂ ಇಷ್ಟವಾಗುತ್ತಿರಲಿಲ್ಲ. ಬೋಳು ಕೈ, ಬೋಳು ಹಣೆ, ಬೋಳುಕಿವಿಯಲ್ಲಿರುವುದೇ ಇಷ್ಟ. ಹುಡುಗರ ಜೊತೆಗೇ ಆಟ, ಗುದ್ದಾಟ. ಆತ್ಮೀಯ ಸ್ನೇಹಬಳಗವೆಲ್ಲ ಹುಡುಗರದೇ. ಶಾಲೆಯ ಪ್ರವಾಸವಿರಲಿ, ನೆಂಟರ ಮನೆಯ ಜಾತ್ರೆಯಿರಲಿ, ಅಂಬೇಡ್ಕರ್ ಜಯಂತಿಯ ಕುಣಿತ, ಸಂಭ್ರಮಗಳಿರಲಿ, ಸದಾ ಹುಡುಗರ ತಂಡದಲ್ಲೇ ಇರುವುದು. ಹುಡುಗರ ಜೊತೆಗೆ ತನ್ನ ಅಸ್ಮಿತೆಯಿದೆ; ಅವರೊಡನೆ ತಾನು ಸಲೀಸಾಗಿರಬಲ್ಲೆ, ತಾನು ಹೆಣ್ಣಲ್ಲ ಎಂಬ ಅರಿವು ಬೆಳೆಯತೊಡಗಿತು. ಗಂಡಿನೊಡನೆ ಹೆಚ್ಚೆಚ್ಚು ಸ್ನೇಹ ಬೆಳೆಸಿದ್ದಕ್ಕೆ ಬಜಾರಿ, ಗಂಡುಬೀರಿ, ದಿಂಡೆ, ಮುಂತಾದ ಕುಹಕದ ವಿಶೇಷಣಗಳನ್ನು ಕೇಳಬೇಕಾಯಿತು.

ಪ್ರಾಯ ಬರುವಾಗ ಮೊಲೆ ಮೂಡತೊಡಗಿದವು. ಕತ್ತರಿಸಿ ಬಿಸಾಡುವಷ್ಟು ತನ್ನ ದೇಹದ ಮೇಲೆ ಕೋಪ ಬರುತ್ತಿತ್ತು. ಅದನ್ನು ಮುಚ್ಚಲು ಎರಡೆರೆಡು ಬಿಗಿಯಾದ ಅಂಗಿ ತೊಟ್ಟು ಚಪ್ಪಟೆ ಮಾಡಲೆತ್ನಿಸಿದರು. ಮುಟ್ಟು ಆರಂಭವಾದಾಗ ವಿಪರೀತ ಹಿಂಸೆ ಅನುಭವಿಸಿದರು. ತಾನು ಹುಡುಗ; ಈ ಮೊಲೆ, ಗರ್ಭಕೋಶಗಳನ್ನು ಕತ್ತರಿಸಿ ತೆಗೆಸಿಬಿಡಬೇಕು ಎಂದು ಪದೇಪದೇ ಅನಿಸುತ್ತಿತ್ತು. ಅದೇ ವೇಳೆ ಮನೆಯ, ಕೇರಿ-ಊರಿನ ಗಂಡಸರ ಕುಡಿತ, ಜಗಳ, ಹಿಂಸಾವತಾರಗಳು ಎಳ್ಳಷ್ಟೂ ಇಷ್ಟವಾಗುತ್ತಿರಲಿಲ್ಲ. ಥೋ, ತಾನು ಇಂತಹ ಗಂಡಸಲ್ಲ ಎಂದೂ ಬಲವಾಗಿ ಅನಿಸುತ್ತಿತ್ತು. ‘ತಾನು ಯಾರು? ಅಂತಹ ಗಂಡಸೇ? ಇಂತಹ ಹೆಂಗಸೇ?’ ಎಂಬ ದ್ವಂದ್ವ ಬೆಳೆಯುತ್ತ ಹೋಯಿತು. ಅಂತೂ ವಯಸ್ಕ ಗಂಡಸರಿಗಿಂತ ಸಮವಯಸ್ಕ ಹುಡುಗರ ಒಡನಾಟ ಹೆಚ್ಚುತ್ತ ಹೋಯಿತು.

ಆದರೆ ಹೆಣ್ಣೆಂದು ಗುರುತಿಸಲ್ಪಟ್ಟ ವ್ಯಕ್ತಿಯು ತನ್ನ ಲಿಂಗತ್ವವನ್ನು ಭಿನ್ನವೆಂದು ನಿರೂಪಿಸುವುದು ಸುಲಭವಲ್ಲ. ಅವರ ಬಿಡುಗಡೆಯ ಹಾದಿ ದುರ್ಗಮವೂ, ಮೌನಕಣಿವೆಯೊಳಗಿಂದ ಸ್ಫೋಟಿಸಬೇಕಾದ ಜ್ವಾಲಾಮುಖಿಯಂತಹುದೂ ಆಗಿದೆ. ವಿಹಾನ್‌ಗೆ ಆದದ್ದು ಅದೇ. ಬೇಲಿಗಳು ಬಿಗಿಯಾದವು. ಗಡಿ ಮೀರುವ ಹಂಬಲ ಹೆಚ್ಚಾದಷ್ಟೂ ಹಿಂಸೆಯೂ ಹೆಚ್ಚುತ್ತ ಹೋಯಿತು. ತನ್ನನ್ನು ಗುರುತಿಸಿಕೊಳ್ಳಬಹುದು ಎನಿಸುವಂತಹ ಸಮಾನ ಸಮುದಾಯ ಸಿಗಲಿಲ್ಲ. ಕಣ್ಣೆದುರು ಹುಡುಗನಾಗಿ ಹುಟ್ಟಿ ಹುಡುಗಿಯಾದವರು ಕಾಣುತ್ತಿದ್ದರೇ ಹೊರತು ಹುಡುಗಿಯಾಗಿ ಹುಟ್ಟಿ ಹುಡುಗನಾದ ವ್ಯಕ್ತಿಗಳು ಕಾಣಲಿಲ್ಲ. ಗಂಡಾಗಿ ಹುಟ್ಟಿ ಹೆಣ್ಣೆಂದುಕೊಂಡ ಜೀವಗಳನ್ನು ಹೆಣ್ಣುಕುಲವು ಸ್ವೀಕರಿಸಿದ ಹಾಗೆ ಹೆಣ್ಣೆನಿಸಿಕೊಂಡು ಹುಟ್ಟಿ ಗಂಡಾದವರನ್ನು ಪುರುಷ-ಸಮಾಜ ಸ್ವೀಕರಿಸುವುದಿಲ್ಲ ಎಂಬ ಅರಿವಾಯಿತು. ಇಲ್ಲೂ ಅಲ್ಲೂ ಎಲ್ಲೂ ಸಲ್ಲದಂತಾಗುವ ನಿರಂತರ ಭಯ, ಅಭದ್ರತೆಯಲ್ಲಿ ಬೆಳೆದರು.

ಲಿಂಗತ್ವ ಕುರಿತ ಗೊಂದಲ, ತಾರತಮ್ಯದ ಅನುಭವಗಳು ಒಂದುಕಡೆಯಾದರೆ, ಬಹುಜನ ಸಮುದಾಯದ ವಿಹಾನ್ ಜಾತಿ ತಾರತಮ್ಯ, ಬಡತನದ ಅವಮಾನಗಳನ್ನೂ ಜೊತೆಗೇ ಅನುಭವಿಸತೊಡಗಿದರು. ಜಾತಿ, ವರ್ಗ, ಲಿಂಗತ್ವವೆಂಬ ಮೂರಲಗಿನ ಕೂರಂಬು ಎತ್ತೆತ್ತಲಿಂದಲೂ ಚುಚ್ಚಿ ಚುಚ್ಚಿ ತಿವಿಯತೊಡಗಿತು.

ಈ ವೇಳೆಗೆ ಪುಣೆಯ ಬಿ. ಜಿ. ಢೇರೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಫರ್ಗ್ಯೂಸನ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪದವಿಯನ್ನೂ ಪಡೆದರು. ಕುಟುಂಬ ಮುಂಬಯಿಗೆ ಸ್ಥಳಾಂತರಗೊಂಡಿತು. ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಟಿಸ್)ನಿಂದ ಸಮಾಜಸೇವೆಯ ಬಗೆಗೆ ಸ್ನಾತಕೋತ್ತರ ಪದವಿ ಪಡೆದರು. ಮನೆಯ ವಾತಾವರಣ ಉಸಿರುಗಟ್ಟಿಸತೊಡಗಿದ್ದರೂ ಗಂಭೀರ ಓದಿಗೆ ತೆತ್ತುಕೊಂಡು ಜಾತಿ ಮತ್ತು ಲಿಂಗತ್ವ ಕುರಿತು ಆಳ ಅಧ್ಯಯನ ನಡೆಸಿದರು. ‘ಮಹಿಳಾ ಕೇಂದ್ರಿತ ಆಚರಣೆ’ಗಳ ಬಗೆಗೆ ಪ್ರಬಂಧ ಮಂಡಿಸಿದರು. ಹಾರ್ವರ್ಡ್‌ನ ಕೆನೆಡಿ ಸ್ಕೂಲಿನಲ್ಲಿ ಐದು ತಿಂಗಳ ಲೀಡರ್‌ಶಿಪ್ ಆರ್ಗನೈಸಿಂಗ್ ಆಕ್ಷನ್ ವಿಷಯದಲ್ಲಿ ತರಬೇತಿ ಪಡೆದರು. ಆಳದ ಓದು, ಶಿಕ್ಷಣ ನೀಡಿದ ಧೈರ್ಯ, ಭರವಸೆಗಳು ವಿಹಾನ್‌ಗೆ ತನ್ನನ್ನು ತಾನು ‘ಅಂಬೇಡ್ಕರೈಟ್ ಕ್ವೀರ್ ಫೆಮಿನಿಸ್ಟ್’ ಎಂದು ಸ್ನೇಹಬಳಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಉನ್ನತ ಶಿಕ್ಷಣವು ಸ್ವಾಯತ್ತತೆಯ ಬದುಕಿನ ಕಡೆಗೆ ಚಲಿಸಲು ರಹದಾರಿಯಾಯಿತು.

ಮದುವೆಯ ಒತ್ತಡ

ಮದುವೆ ಮಾಡಿದರೆ ‘ದಾರಿ ತಪ್ಪಿದ ಮಗಳು’ ಸರಿ ಹೋದಾಳು ಎಂದು ಮನೆಯವರು  ಗಂಡು ಹುಡುಕತೊಡಗಿದರು. ಈಗ ನಿಜವಾದ ಪರೀಕ್ಷೆ ಎದುರಾಯಿತು. ಸ್ನೇಹಬಳಗಕ್ಕಷ್ಟೇ ಅಲ್ಲ, ಮನೆಯವರಿಗೂ ತನ್ನ ಲಿಂಗತ್ವ ಅಸ್ಮಿತೆ ಬೇರೆ ಎಂದು ತಿಳಿಸಬೇಕಿತ್ತು. ಅದು ತಿಳಿಸಿದ ಬಳಿಕ ಮನೆಯಲ್ಲುಂಟಾದ ಕ್ಷೋಭೆ, ಗಲಾಟೆ, ಹಿಂಸೆಯ ವಾತಾವರಣದಲ್ಲಿ ಮನೆಯಲ್ಲಿರಲು ಸಾಧ್ಯವಿರಲಿಲ್ಲ. ಮನೆಬಿಟ್ಟು ಹೋಗಿಬಿಡಬೇಕು ಎಂಬ ಹಂಬಲ ಬಲವಾಯಿತು. ಆದರೆ ಎಲ್ಲಿ ಹೋಗುವುದು? ಏನು ಮಾಡುವುದು? ಮನೆ ಎಂದರೆ ಬರಿಯ ನಾಲ್ಕು ಗೋಡೆಯೊಳಗಿನ ಅವಕಾಶ ಮಾತ್ರವೇ? ಗೋಡೆಯೊಳಗಿನ ಜನರೂ ಮುಖ್ಯ ಎಂದಾದರೆ ಇದು ನನ್ನ ಮನೆಯೇ? ಇವರಲ್ಲ ಎಂದಾದರೆ ನನ್ನವರಾರು? ಈ ನಂಟುಗಳನ್ನು ಬಿಡುವುದು ಹೇಗೆ? ಆಮೇಲಿನ ಬದುಕು ಸುರಕ್ಷಿತವೇ? ತನ್ನ ಪತ್ತೆ ಹಚ್ಚಿ ಮತ್ತಷ್ಟು ಹಿಂಸೆ ಎದುರಾದರೆ? ಇವರನ್ನೆಲ್ಲ ಬಿಟ್ಟು ಬದುಕಲು ಸಾಧ್ಯವೇ? ಮುಂತಾದ ನೂರೆಂಟು ಪ್ರಶ್ನೆಗಳು ಮನದಲ್ಲಿ ಭೋರ್ಗರೆಯತೊಡಗಿದವು.

ಒಂದು ಅಂಬೇಡ್ಕರ್ ಜಯಂತಿಯ ದಿನ. ಸಭೆ, ಸಮಾರಂಭಗಳ ಬಳಿಕ ತನ್ನ ವಿಷಯ ತಿಳಿದಿದ್ದ ಅಂಬೇಡ್ಕರೈಟ್ ಗೆಳೆಯನೊಟ್ಟಿಗೆ ಮನದ ಗೊಂದಲ ಚರ್ಚಿಸಿದರು. ಅವನು ವಿಹಾನ್‌ನ ಎಲ್ಲ ಹಂತಗಳ ಬೆಳವಣಿಗೆ ಕಂಡಿದ್ದವನು. ವಿಹಾನ್‌ಗೆ ದೆಹಲಿಯಲ್ಲಿ ‘ಮಾ’ ಸಿಕ್ಕಿರುವುದು, ಒಬ್ಬಳು ಪ್ರೇಮಿಯೂ ಇರುವುದು, ಅವಳೀಗ ದೆಹಲಿಗೇ ಹೋಗಿರುವುದು ಗೊತ್ತಿತ್ತು. ಹೇಗಿದ್ದರೂ ಉನ್ನತ ಶಿಕ್ಷಣದ ಬೆಂಬಲವಿರುವುದರಿಂದ ಉದ್ಯೋಗವೂ ದೊರೆತೀತು ಎಂಬ ಭರವಸೆಯಿತ್ತು, ‘ಹೊರಟು ಹೋಗು’ ಎಂದು ಧೈರ್ಯ ತುಂಬಿ ಕೆಲವು ಲಗೇಜುಗಳೊಡನೆ ರೈಲ್ವೇ ಸ್ಟೇಶನ್ನಿಗೆ ಕರೆತಂದು ಬಿಟ್ಟ. ರೈಲು ಬರಲು ೧೫ ನಿಮಿಷ ಇದೆ ಎನ್ನುವಾಗಲೂ ದ್ವಂದ್ವ, ದುಃಖ.

ಬಹುಜನ ಕುಟುಂಬಗಳಲ್ಲಿ ಶಿಕ್ಷಣ ಕೊಡಿಸಿದ ಮಕ್ಕಳ ಮೇಲೆ ಇಡಿಯ ಕುಟುಂಬವೇ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತದೆ. ಮಕ್ಕಳ ಕಾಲದಲ್ಲಾದರೂ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸೀತು ಎಂಬ ಆಶಾಭಾವನೆಯಿರುತ್ತದೆ. ಹಾಗಿರುವಾಗ ಅವರ ಬೆವರ ಫಲದಲ್ಲಿ ಶಿಕ್ಷಣ ಪಡೆದು, ‘ನಾನು ಗಂಡು’ ಎಂದು ಘೋಷಿಸಿಕೊಂಡು ಮನೆಯವರಿಗೆ ಊರುಗೋಲಾಗಬೇಕಾದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವೆನೇ ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಗೊತ್ತಿಲ್ಲದ ಊರಿಗೆ, ಹೊಸದಾಗಿ ಏರ್ಪಟ್ಟ ನಂಟು ನೆಚ್ಚಿ ಹೋಗುವುದು ಸರಿಯೇ? ಸಂಕಟಕಾಲದಲ್ಲೂ ಅವರು ನನ್ನ ಕೈಬಿಡಲಾರರೇ? ಮುಂತಾದ ಅಭದ್ರತೆಯ ಭಯ ಒತ್ತರಿಸಿ ಬಂತು.

ಅಂತೂ ರೈಲು ಬಂದೇ ಬಿಟ್ಟಾಗ ಮನೆಯ ದೃಶ್ಯ, ಅದೃಶ್ಯ, ದೈಹಿಕ-ಮಾನಸಿಕ ಹಿಂಸೆಗಳ ಚಿತ್ರಣ ಕಣ್ಣೆದುರು ತಂದುಕೊಂಡು, ಉಸಿರುಗಟ್ಟಿಸುವ ಅಲ್ಲಿರಲು ಸಾಧ್ಯವೇ ಇಲ್ಲ ಎನಿಸಿ ದೆಹಲಿಯ ರೈಲು ಹತ್ತೇಬಿಟ್ಟರು.ಅಷ್ಟೇ. ಅಲ್ಲಿಂದೀಚಿನದು ‘ವಿಹಾನ್’, ಅಂದರೆ ಹೊಸಬೆಳಗು.

ರೈಲು ಮುಂಬಯಿಯ ಗಡಿ ದಾಟುವಾಗ, ಗುಜರಾತಿನಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಹೊಸಬದುಕಿಗಾಗಿ ತನ್ನ ಸಮುದಾಯವನ್ನು ಸೇರಿಕೊಳ್ಳಲು ಹೋಗುವಾಗ ಎಲ್ಲ ಕಳಚಿಕೊಂಡ ಅನುಭವ. ‘ಕೋಶ ಕಟ್ಟಿಕೊಂಡ ಮರಿಹುಳ ತನ್ನ ಸುತ್ತಣ ಬಲೆಯ ತಾನೇ ಹರಿದು ಹೊರಬರುವಂತೆ ಎಲ್ಲವನ್ನು ಕಳಚಿಕೊಳ್ಳಲೇಬೇಕು. ಇಲ್ಲದಿದ್ದರೆ ಚಿಟ್ಟೆ ಹೊರಬರಲಾರದು. ಮರಿಹುಳ ಉಸಿರುಗಟ್ಟಿ ಒಳಗೇ ಸಾಯಬೇಕಾದೀತು. ಹಳೆಯ ಹೆಸರು, ಕುಟುಂಬ, ಹಳೆಯ ಸಹಪಾಠಿಗಳು, ಗೆಳೆತನದ ಬಳಗ, ಗುರುಗಳು, ನೆಂಟರು, ಉದ್ಯೋಗ, ನೆರೆಹೊರೆ ಎಲ್ಲ ಅಂದರೆ ಎಲ್ಲವನ್ನು ಕಳಚಿಕೊಳ್ಳಬೇಕು. ತನ್ನ ನಿಜಗುರುತು ತಿಳಿಯದ, ನಿಜಗುರುತನ್ನೊಪ್ಪದ ಎಲ್ಲರಿಂದ ಬಿಡಿಸಿಕೊಳ್ಳಬೇಕು. ನನ್ನ ಹೊಸ ಹುಟ್ಟನ್ನು ನಾನೇ ರೂಪಿಸಿಕೊಳ್ಳಬೇಕು.’

ಇದರ ಮೊದಲ ಮೆಟ್ಟಿಲಾಗಿ ಜನ್ಮನಾಮವನ್ನು ಮೃತನಾಮ ಎಂದು ಘೋಷಿಸಿಕೊಂಡು ಹಳೆಯ ಹೆಸರು ಅಳಿಸಿಕೊಂಡರು. ವಿಹಾನ್ ಆದರು. ಕಲಿತು ಬಂದ ಕಾಲೇಜಿಗೆ ಪದವಿಪ್ರದಾನ ಮಾಡುವಾಗ ತಾಯ್ತಂದೆಯರಿಗೆ ಹಳೆಯ ಹೆಸರಿನ ಡಿಗ್ರಿ ಸರ್ಟಿಫಿಕೇಟ್ ಕಳಿಸಬೇಡಿ ಎಂದು ಪತ್ರ ಬರೆದರು. ಮನೆಯವರಿಗೆ ಗುರುತು ಹತ್ತದಿರಲೆಂದು ಹಳೆಯ ಅಕೌಂಟ್, ಫೋನ್, ಸಂಪರ್ಕ, ಹೆಸರು ಎಲ್ಲವನ್ನೂ ಅಳಿಸಿ ಹಾಕಿದರು.

ದೆಹಲಿ ತಲುಪಿ ಸಾಕು ಅಮ್ಮನ ಮಡಿಲು ಸೇರಿದ್ದಾಯ್ತು. ಒಂದು ಉದ್ಯೋಗವೂ ದೊರೆಯಿತು. ಒಂದು ಬಾಡಿಗೆ ಮನೆಯೂ ಸಿಕ್ಕೇಬಿಟ್ಟಿತು. ಪ್ರೇಮಿಯ ಸಖ್ಯ ಬೆಚ್ಚನೆಯ ಅನುಭವ ನೀಡಿತು. ಇನ್ನು ತನಗೆ ತಾನೇ ಆಗಿ ಬದುಕುವ ದಿನಗಳು ಬಂದವು ಎಂದುಕೊಳ್ಳುವಾಗ ಒಂದು ಬ್ಯಾಂಕ್ ಖಾತೆ ತೆರೆಯಬೇಕಾದ ಅನಿವಾರ್ಯತೆ ಎದುರಾಯಿತು. ಅದೊಂದು ತಿಂಗಳುಗಟ್ಟಲೆಯ ಹೋರಾಟ. ಹೊಸಹೆಸರು ಮಾತ್ರ ಸಾಕೆಂದರೆ ಹಳೆಯ ದಾಖಲೆ ಪತ್ರಗಳೆಲ್ಲ ನಿರುಪಯೋಗಿಯಾಗುತ್ತಿದ್ದವು. ಮತ್ತೊಂದೆಡೆ ದಾಖಲೆಗಳಿಲ್ಲದೆ ಅಸ್ತಿತ್ವವೇ ಇಲ್ಲ ಎಂಬಂತಹ ಸಾಮಾಜಿಕ ಪರಿಸ್ಥಿತಿ. ಹಳೆಯದು ಇರಲಿ ಎಂದರೆ ಮತ್ತದಕ್ಕೇ ಮರಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ತನ್ನ ಲಿಂಗತ್ವವನ್ನೂ, ಅದಕ್ಕೊಪ್ಪುವ ಹೆಸರನ್ನೂ ತಾನೇ ಇಟ್ಟುಕೊಂಡ ಜೀವಂತ ವ್ಯಕ್ತಿಯ ಬಗೆಗೆ ಸಮಾಜ ತೋರಿಸುವ ಅಸಡ್ಡೆ, ಕೋಪ, ಸಾಮಾಜಿಕ ರಚನೆಯಲ್ಲೇ ಹುದುಗಿಹೋಗಿರುವ ರಾಚನಿಕ ಹಿಂಸೆಗಳು ತುದಿಬೆರಳಿನ ಅನುಭವವೆಂಬಂತೆ ನಿಲುಕಿದವು.

ಓಹ್! ಒಂದೇ, ಎರಡೇ. ನೂರೆಂಟು ದ್ವಂದ್ವಗಳ, ಸವಾಲುಗಳ ಬದುಕು. ಏರುಪೇರಾಗುವ ಮಾನಸಿಕ ಸ್ವಾಸ್ಥ್ಯ, ನಿದ್ರಾಹೀನತೆ, ಅದಕ್ಕೆ ಚಿಕಿತ್ಸೆ. ಜೊತೆಗೆ ಬಿಟ್ಟುಬಂದದ್ದರ ಕಡೆಗೆ ಸೆಳೆತ. ಮನೆಗೆ ಹೋಗಿ, ನೋಡಿ, ಹೇಳಿ, ಅವರನ್ನೂ ಒಪ್ಪಿಸುವ ತುಡಿತ. ಬಂದ ಒಂದೇ ತಿಂಗಳಿಗೆ ಮತ್ತೆ ಮುಂಬಯಿಗೆ ಹೋದರು. ಕೊಂಚ ಸಮಾಧಾನ ಪಡೆದು ಮತ್ತೆ ಕೆಲಸದಲ್ಲಿ ತೊಡಗಿದರು. ವಿರಹ, ವಿರಸ, ಒಡಕುಗಳ ಫಲವಾಗಿ ದೆಹಲಿ ಬಿಟ್ಟು ಈಗ ಒಂದೂವರೆ ವರ್ಷದಿಂದ ಬೆಂಗಳೂರು ವಾಸಿಯಾಗಿದ್ದಾರೆ. ಲಿಂಗತ್ವ, ಜಾತಿ, ಅಭಿವೃದ್ಧಿ ಅಧ್ಯಯನ ಕೆಲಸದಲ್ಲಿ ತೊಡಗಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯ ಬಗೆಗೆ ಅಪಾರ ಕಾಳಜಿಯಿರುವ ವಿಹಾನ್ ಅದನ್ನೂ ಸೇರಿಸಿದಂತೆ ಅಂತರ್‌ಶಿಸ್ತೀಯ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಲಿಂಗಾಂತರಿ ಪುರುಷ ಸಮುದಾಯದ ಕಷ್ಟಗಳ ಬಗೆಗೆ ಬರೆದು ಗಮನ ಸೆಳೆದಿದ್ದಾರೆ. ಕೋವಿಡ್ ಕಾಲದಲ್ಲಿ ಆ ಸಮುದಾಯ ಎದುರಿಸಿದ ಸಂಕಷ್ಟಗಳ ಬಗೆಗೆ ಸಂಶೋಧನೆ ನಡೆಸಿದ್ದಾರೆ. ಕ್ವೀರ್ ಗುಂಪಿನ ಆಪ್ತಸಹಾಯಕರಾಗಿ, ಮಹಿಳೆ-ಕ್ವೀರ್-ಯುವಜನತೆಯ ಬೆಂಬಲ ಗುಂಪು ‘ಹಂಸಫರ್’ನ ಭಾಗವಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಯುವಜನತೆಯ ದನಿಯನ್ನು ಮುನ್ನೆಲೆಗೆ ತರುವ ‘ಹೈಯ್ಯಾ’ ಸಂಸ್ಥೆಯ ಪ್ರಚಾರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಏಷಿಯಾ ಪೆಸಿಫಿಕ್ ಲಿಂಗಾಂತರಿ ಸಮುದಾಯದ ಸಂಪರ್ಕ ಜಾಲವಾಗಿ ಕೆಲಸ ಮಾಡುತ್ತಾರೆ. MasculiniTea: Kuch Mardani Gupshup ಎಂಬ ಪಾಡ್‌ಕಾಸ್ಟ್ ನಡೆಸುತ್ತ ಲಿಂಗಾಂತರಿ ಪುರುಷರ ಅನುಭವಗಳನ್ನು ದಾಖಲಿಸುತ್ತಿದ್ದಾರೆ. ಸೂಕ್ಷ್ಮ ಬರಹಗಾರರಾದ ವಿಹಾನ್, ಸರಳವಾದ ಆಪ್ತಶೈಲಿಯಲ್ಲಿ ಬದುಕಿನ ಅನುಭವಗಳನ್ನು ಹಲವು ಅಂತರ್ಜಾಲ ನಿಯತಕಾಲಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದಾರೆ.

ಹಲವು ಅಡೆತಡೆ, ಬೇಲಿ, ಕಂದಕ, ಕೊಂಡಗಳ ಹಾಯ್ದು ಬಂದ 26 ವರ್ಷದ ವಿಹಾನ್ ಈಗ ತನ್ನ ಅನ್ನ ತಾನೇ ಗಳಿಸಿಕೊಳ್ಳುತ್ತ, ತನ್ನಿಷ್ಟದಂತೆ ಬದುಕುವ ಮಾರ್ಗ ಕಂಡುಕೊಳ್ಳುತ್ತ ಬೆಂಗಳೂರಿನಲ್ಲಿದ್ದಾರೆ. ಅವರ ಸಮುದಾಯ ಬೆನ್ನಿಗಿದೆ. ಆದರೂ ತನಗೆ ಬೇಕಾದ, ತಾನು ಮಾಡಲೇಬೇಕಾದ ಇನ್ನೂ ಏನೋ ‘ಆ’ ಅದು ಇದೆಯೆಂದು ಹುಡುಕಾಟ ನಡೆಸುತ್ತಲೇ ಇದ್ದಾರೆ. ಅವರು ಒಲ್ಲೆನೆಂದು ಬಂದು ಈಗ ಪಡೆದಿರುವ ಹೊಸ ಪುರುಷ ಅಸ್ಮಿತೆಯು ಹಳೆಯ ಪಾರಂಪರಿಕ ಚೌಕಟ್ಟನ್ನು ಮೀರಿ ಮಾನವ ಅಸ್ಮಿತೆಯೆಡೆಗೆ ತಮ್ಮನ್ನು ಒಯ್ಯುತ್ತಿದೆಯೆ ಎಂದವರು ಪರಿಶೀಲಿಸಿಕೊಳ್ಳಬೇಕಿದೆ. ಕ್ರಮಿಸಬೇಕಾದ ದಾರಿ ದೂರವಿದೆ.

‘ನೊಂದೆ’ ಎಂದವರನ್ನೆಲ್ಲ ಮಹಿಳಾ ಚಳವಳಿ, ಬಹುಜನರ ಚಳವಳಿಗಳು ಒಳಗೊಳ್ಳುತ್ತವೆ. ತಮ್ಮ ಲಿಂಗತ್ವ-ಹೆಸರು-ಬದುಕುಗಳನ್ನು ತಾವೇ ಕಟ್ಟಿಕೊಳ್ಳಲಿಚ್ಛಿಸಿ ನೋವು, ಅವಮಾನ, ಅಭದ್ರತೆ ಎದುರಿಸುವ ಎಲ್ಲ ಜೀವಗಳ ಜೊತೆಗೂ ಜೀವಪರ ಚಿಂತನೆ, ಚಳವಳಿ, ಸೈದ್ಧಾಂತಿಕ ವಾದಗಳು ಹೆಜ್ಜೆಯಿಡುತ್ತವೆ. ನಮ್ಮ ಸುತ್ತಲ ಲೋಕದ ಬಿಡುಗಡೆಯೇ ನಮ್ಮ ಬಿಡುಗಡೆ. ಸಮಾನತೆ, ಸ್ವಾಯತ್ತತೆ, ಘನತೆಯ ಬದುಕುಗಳು ಒಬ್ಬೊಬ್ಬರಿಗಷ್ಟೇ ಸಿಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಸಿಕ್ಕಾಗಲಷ್ಟೇ ಅವಕ್ಕೆ ಬೆಲೆ, ಅರ್ಥ ಸಿಗುವುದು.

ಆಪ್ತ ಬೆಂಬಲ, ಒಪ್ಪಿಕೊಳ್ಳುವಿಕೆ, ಪ್ರೇಮ ಇಲ್ಲದೇ ಲೋಕವಿರುವುದೇ? ಇದನ್ನೆಲ್ಲ ತುಂತುಂಬಿ ಕೊಟ್ಟು ನಮ್ಮೊಳಗನ್ನು ತುಂಬಿಕೊಂಡರೆ ದುಃಖವೇ ಇರಲಾರದು, ಅಲ್ಲವೇ? ಅದಕ್ಕೇ ಎಲ್ಲ ಒಗ್ಗೂಡಿ ವಿಹಾನರುಗಳ ಕೈಕೈ ಹಿಡಿದು ಹೆಜ್ಜೆ ಹಾಕಬೇಕಿದೆ. ಬನ್ನಿ, ವಿಹಾನ್ ತನ್ನ ಸಮಾನ ಮನಸ್ಕರೊಡಗೂಡಿ ಉದ್ಘಾಟಿಸಲಿರುವ ಮೇ 27,28 ರಂದು ನಡೆಯಲಿರುವ ಒಂಭತ್ತನೇ ಮೇ ಸಾಹಿತ್ಯ ಮೇಳಕ್ಕೆ, ವಿಜಯಪುರಕ್ಕೆ.

(ವಿಹಾನ್‌ ಕುರಿತ ಲೇಖನವನ್ನು ಈ ಹಿಂದೊಮ್ಮೆ ಪ್ರಕಟಿಸಲಾಗಿತ್ತು. ಅವರು ಮೇ ಮೇಳದಲ್ಲಿ  ಉದ್ಘಾಟಕರಲ್ಲೊಬ್ಬರಾಗಿ   ಭಾಗವಹಿಸುವುದರಿಂದ  ಪುನ: ಪ್ರಕಟಿಸಿದ್ದೇವೆ- ಸಂ.)

ಡಾ. ಎಚ್. ಎಸ್. ಅನುಪಮಾ

ವೈದ್ಯೆ, ಲೇಖಕಿ.

ಇದನ್ನೂ ಓದಿ-

ದಲಿತ ಲೋಕದ ಅನರ್ಘ್ಯ ರತ್ನ : ಕುಮಾರ ಕಕ್ಕಯ್ಯ ಪೋಳ

ಮೇ ಸಾಹಿತ್ಯ ಮೇಳವೆಂಬ ಅರಿವಿನ ಪ್ರವಾಹದಲ್ಲಿ…

ಮಹಿಳಾ ದಿನ ವಿಶೇಷ | ಲಿಂಗಾಂತರಿ ಸಮುದಾಯದ ಹೊಸ ಬೆಳಗು: ವಿಹಾನ್
ತುಮಕೂರಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮಾ. 7, 8ರಂದು ನಡೆಸುತ್ತಿರುವ `ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಮಾತುಗಳನ್ನಾಡಲಿರುವ ವಿಹಾನ್‌ ಲಿಂಗಾಂತರಿ ಪುರುಷ ಸಮುದಾಯದ ಹೊಸ ದನಿ. ವಿಹಾನ್ ನಡೆದುಬಂದ ದಾರಿಯನ್ನು ಅವಲೋಕಿಸಿದ್ದಾರೆ ಡಾ. ಎಚ್‌ ಎಸ್‌ ಅನುಪಮಾ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡೆಂದು ಗುರುತಿಸಲ್ಪಟ್ಟ ಜೀವಕ್ಕೆ ತಂತಾನೇ ಒಂದಷ್ಟು ಸ್ವಾತಂತ್ರ್ಯ, ಆಯ್ಕೆ, ಅವಕಾಶಗಳು ಸಿಗುತ್ತವೆ. ಎಂದೇ ಗಂಡಾಗಿ ಹುಟ್ಟಿ ತಾನು ಹೆಣ್ಣೆಂದು ಗುರುತಿಸಿಕೊಂಡ ಲಿಂಗಾಂತರಿ ಹೆಣ್ಣುಗಳು ಕೊಂಡ ಹಾಯ್ದು ಬದುಕು ಕಟ್ಟಿಕೊಂಡರೂ ವಿಪುಲ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಪುರಾಣದಲ್ಲೂ ಶಿಖಂಡಿಯಂತಹ ಪಾತ್ರಗಳು ಕಂಡುಬರುತ್ತವೆ. ಆದರೆ ಹುಟ್ಟಿನಿಂದ ಹೆಣ್ಣೆಂದು ಗುರುತಿಸಲ್ಪಟ್ಟ ಜೀವಕ್ಕೆ ಮೊದಲು ಸಿಗುವ ಅನುಭವಗಳು ತಾರತಮ್ಯ, ದಮನ, ಸ್ವಾತಂತ್ರ್ಯದ ನಿರ್ಬಂಧ. ಹಾಗಾಗಿ ಹೆಣ್ಣು ಎಂದು ಕರೆದ ಜೀವಕ್ಕೆ ತಾನು ಗಂಡು ಎಂದೆನಿಸಿದರೂ ಹೇಳುವುದು ಸುಲಭವಿಲ್ಲ. ಹೇಳಿದರೂ ಬದುಕುವುದು ಸುಲಭವಿಲ್ಲ. ಎಂದೇ ಪುರಾಣ-ಕತೆಗಳಲ್ಲಿ ಹೇಗೋ ಹಾಗೆ ನಿಜಜೀವನದಲ್ಲೂ ಹೆಣ್ಣಾಗಿ ಗಂಡಾದ ಲಿಂಗಾಂತರಿ ಪುರುಷರು ಅದೃಶ್ಯರಾಗಿಯೇ ಇರುವಂತಾಗಿದೆ. ಮೊದಲೇ ಅಂಚಿಗೆ ದೂಡಲ್ಪಟ್ಟ ಹೆಣ್ಣುಲೋಕದಲ್ಲೂ ಅದರ ಅಂಚಿಗೆ ತಳ್ಳಲ್ಪಟ್ಟ ಟ್ರಾನ್ಸ್‌ ಮ್ಯಾನ್‌ ಗಳ ನೋವಿಗೂ ಹೆಣ್ಣು ಕಿವಿಯಾಗಬೇಕಿದೆ.

ಮಹಾರಾಷ್ಟ್ರದ ಪುಣೆಯ ಬಳಿಯ ಮರಾಠಿ ಮನೆಮಾತಿನ 26 ವರ್ಷದ ವಿಹಾನ್, `ಬಹುಜನ ಲಿಂಗಾಂತರಿ ಸ್ತ್ರೀವಾದಿ ಪುರುಷ’ ಎಂದು ತಮ್ಮನ್ನು ಗುರುತಿಸಿ ಕೊಳ್ಳುತ್ತಾರೆ. ವಿಹಾನ್ ಎಂಬ ಪದದ ಅರ್ಥ `ಮುಂಬೆಳಗು’. ತನ್ನ ದೇಹ, ಬದುಕಿನ ಹೊಸದಾರಿ ದಿಕ್ಕನ್ನು ತಾನೇ ರೂಪಿಸಿಕೊಂಡ ವಿಹಾನ್, ವಿರಳ ಸಂಖ್ಯೆಯ ಲಿಂಗಾಂತರಿ ಪುರುಷ ಸಮುದಾಯದ ಹೊಸ ದನಿಯಾಗಿ ಹೊರಹೊಮ್ಮುತ್ತಿದ್ದಾರೆ. ತನ್ನ ಆಯ್ಕೆಯ ಅವಕಾಶಕ್ಕೆ ನಿರಂತರ ಹೋರಾಡುತ್ತಲೇ ಇರಬೇಕಾದ ಮಹಿಳಾ ಸಮುದಾಯಕ್ಕೆ ಇದುವರೆಗೆ ವಿಹಾನ್ ನಡೆದುಬಂದ ದಾರಿಯನ್ನೊಮ್ಮೆ ಅವಲೋಕಿಸುವುದು ಸೂಕ್ತವಾಗಿದೆ.

`ನೀನು ಹೆಣ್ಣು, ಅದಕ್ಕೇ..’

ಹುಟ್ಟುವಾಗ ಹೆಣ್ಣೆಂದು ಗುರುತಿಸಲ್ಪಟ್ಟು ಅದರಂತೆ ಬೆಳೆಯಬೇಕೆಂಬ ಸಾಮಾಜೀಕರಣಕ್ಕೆ ವಿಹಾನ್ ಒಳಗಾದರು. ಕುಟುಂಬ, ಶಾಲೆ, ಬೀದಿ, ಸಂಘಸಂಸ್ಥೆಗಳೆಲ್ಲ ಅವರನ್ನು ಹೆಣ್ಣೆಂದೇ ಗುರುತಿಸಿ ಗೆರೆಯೆಳೆಯುತ್ತ ಹೋದವು. ಎಳೆಯ ವಯಸ್ಸಿನಲ್ಲಿಯೇ ತನ್ನ ಹುಡುಗಿತನ ಎಲ್ಲರಂತಿಲ್ಲ ಎಂದು ತಿಳಿಯಿತು. ಆದರೆ ಕುಟುಂಬ ವಹಿಸುತ್ತಿದ್ದ ಹೆಣ್ಣು ಪಾತ್ರಕ್ಕೆ ತಕ್ಕಂತೆ ಅಭಿನಯಿಸಲೇ ಬೇಕಾಗುತ್ತಿತ್ತು. ಹೆಣ್ಣುಮಕ್ಕಳು ಕಲಿಯಬೇಕಾದ ಕೆಲಸ ಮಾಡಬೇಕಿತ್ತು. ತನಗದು ಬರುವುದಿಲ್ಲ, ಮಾಡಲು ಇಷ್ಟವಿಲ್ಲ, ಸೋದರರೂ ಮಾಡಲಿ ಎಂದರೆ, `ಸೋಂಬೇರಿ, ಕೆಲ್ಸಾ ಮಾಡಕ್ಕಾಗದೆ ಅವರಿವರು ಮಾಡ್ಲಿ ಅಂತಿಯಾ? ನೀನು ಹೆಣ್ಣು, ಮೊದ್ಲು ಅಚ್ಚುಕಟ್ಟಾಗಿ ಕೆಲ್ಸ ಮಾಡದ್ ಕಲಿ’ ಎಂದು ಮನೆಯವರು ಜೋರು ಮಾಡುತ್ತಿದ್ದರು.

ಬೆಳೆಯುತ್ತ ಹೋದಂತೆ ಬಳೆ, ಟಿಕ್ಲಿ, ಮೆಹೆಂದಿ, ಗೆಜ್ಜೆ, ಜಡೆ, ಹೂವು, ಸರ, ಓಲೆ, ಒಡವೆಗಳಲ್ಲಿ ಮನೆಯ ಹೆಂಗಸರು, ಸಹಪಾಠಿ ಗೆಳತಿಯರು ಮುಳುಗಿಹೋದರೆ, ವಿಹಾನ್‍ಗೆ ಅದ್ಯಾವುದೂ ಇಷ್ಟವಾಗುತ್ತಿರಲಿಲ್ಲ. ಬೋಳು ಕೈ, ಬೋಳು ಹಣೆ, ಬೋಳು ಕಿವಿಯಲ್ಲಿರುವುದೇ ಇಷ್ಟ. ಹುಡುಗರ ಜೊತೆಗೇ ಆಟ, ಗುದ್ದಾಟ. ಆತ್ಮೀಯ ಸ್ನೇಹ ಬಳಗವೆಲ್ಲ ಹುಡುಗರದೇ. ಶಾಲೆಯ ಪ್ರವಾಸವಿರಲಿ, ನೆಂಟರ ಮನೆಯ ಜಾತ್ರೆಯಿರಲಿ, ಅಂಬೇಡ್ಕರ್ ಜಯಂತಿಯ ಕುಣಿತ, ಸಂಭ್ರಮಗಳಿರಲಿ, ಸದಾ ಹುಡುಗರ ತಂಡದಲ್ಲೇ ಇರುವುದು. ಹುಡುಗರ ಜೊತೆಗೆ ತನ್ನ ಅಸ್ಮಿತೆಯಿದೆ; ಅವರೊಡನೆ ತಾನು ಸಲೀಸಾಗಿರಬಲ್ಲೆ, ತಾನು ಹೆಣ್ಣಲ್ಲ ಎಂಬ ಅರಿವು ಬೆಳೆಯತೊಡಗಿತು. ಗಂಡಿನೊಡನೆ ಹೆಚ್ಚೆಚ್ಚು ಸ್ನೇಹ ಬೆಳೆಸಿದ್ದಕ್ಕೆ ಬಜಾರಿ, ಗಂಡುಬೀರಿ, ದಿಂಡೆ, ಮುಂತಾದ ಕುಹಕದ ವಿಶೇಷಣಗಳನ್ನು ಕೇಳಬೇಕಾಯಿತು.

ಪ್ರಾಯ ಬರುವಾಗ ಮೊಲೆ ಮೂಡತೊಡಗಿದವು. ಕತ್ತರಿಸಿ ಬಿಸಾಡುವಷ್ಟು ತನ್ನ ದೇಹದ ಮೇಲೆ ಕೋಪ ಬರುತ್ತಿತ್ತು. ಅದನ್ನು ಮುಚ್ಚಲು ಎರಡೆರೆಡು ಬಿಗಿಯಾದ ಅಂಗಿ ತೊಟ್ಟು ಚಪ್ಪಟೆ ಮಾಡಲೆತ್ನಿಸಿದರು. ಮುಟ್ಟು ಆರಂಭವಾದಾಗ ವಿಪರೀತ ಹಿಂಸೆ ಅನುಭವಿಸಿದರು. ತಾನು ಹುಡುಗ; ಈ ಮೊಲೆ, ಗರ್ಭಕೋಶಗಳನ್ನು ಕತ್ತರಿಸಿ ತೆಗೆಸಿಬಿಡಬೇಕು ಎಂದು ಪದೇಪದೇ ಅನಿಸುತ್ತಿತ್ತು. ಅದೇ ವೇಳೆ ಮನೆಯ, ಕೇರಿ-ಊರಿನ ಗಂಡಸರ ಕುಡಿತ, ಜಗಳ, ಹಿಂಸಾವತಾರಗಳು ಎಳ್ಳಷ್ಟೂ ಇಷ್ಟವಾಗುತ್ತಿರಲಿಲ್ಲ. ಥೋ, ತಾನು ಇಂತಹ ಗಂಡಸಲ್ಲ ಎಂದೂ ಬಲವಾಗಿ ಅನಿಸುತ್ತಿತ್ತು. `ತಾನು ಯಾರು? ಅಂತಹ ಗಂಡಸೇ? ಇಂತಹ ಹೆಂಗಸೇ?’ ಎಂಬ ದ್ವಂದ್ವ ಬೆಳೆಯುತ್ತ ಹೋಯಿತು. ಅಂತೂ ವಯಸ್ಕ ಗಂಡಸರಿಗಿಂತ ಸಮವಯಸ್ಕ ಹುಡುಗರ ಒಡನಾಟ ಹೆಚ್ಚುತ್ತ ಹೋಯಿತು.

ಆದರೆ ಹೆಣ್ಣೆಂದು ಗುರುತಿಸಲ್ಪಟ್ಟ ವ್ಯಕ್ತಿಯು ತನ್ನ ಲಿಂಗತ್ವವನ್ನು ಭಿನ್ನವೆಂದು ನಿರೂಪಿಸುವುದು ಸುಲಭವಲ್ಲ. ಅವರ ಬಿಡುಗಡೆಯ ಹಾದಿ ದುರ್ಗಮವೂ, ಮೌನಕಣಿವೆಯೊಳಗಿಂದ ಸ್ಫೋಟಿಸ ಬೇಕಾದ ಜ್ವಾಲಾಮುಖಿಯಂತಹುದೂ ಆಗಿದೆ. ವಿಹಾನ್‍ಗೆ ಆದದ್ದು ಅದೇ. ಬೇಲಿಗಳು ಬಿಗಿಯಾದವು. ಗಡಿ ಮೀರುವ ಹಂಬಲ ಹೆಚ್ಚಾದಷ್ಟೂ ಹಿಂಸೆಯೂ ಹೆಚ್ಚುತ್ತ ಹೋಯಿತು. ತನ್ನನ್ನು ಗುರುತಿಸಿ ಕೊಳ್ಳಬಹುದು ಎನಿಸುವಂತಹ ಸಮಾನ ಸಮುದಾಯ ಸಿಗಲಿಲ್ಲ. ಕಣ್ಣೆದುರು ಹುಡುಗನಾಗಿ ಹುಟ್ಟಿ ಹುಡುಗಿಯಾದವರು ಕಾಣುತ್ತಿದ್ದರೇ ಹೊರತು ಹುಡುಗಿಯಾಗಿ ಹುಟ್ಟಿ ಹುಡುಗನಾದ ವ್ಯಕ್ತಿಗಳು ಕಾಣಲಿಲ್ಲ. ಗಂಡಾಗಿ ಹುಟ್ಟಿ ಹೆಣ್ಣೆಂದುಕೊಂಡ ಜೀವಗಳನ್ನು ಹೆಣ್ಣುಕುಲವು ಸ್ವೀಕರಿಸಿದ ಹಾಗೆ ಹೆಣ್ಣೆನಿಸಿಕೊಂಡು ಹುಟ್ಟಿ ಗಂಡಾದವರನ್ನು ಪುರುಷ-ಸಮಾಜ ಸ್ವೀಕರಿಸುವುದಿಲ್ಲ ಎಂಬ ಅರಿವಾಯಿತು. ಇಲ್ಲೂ ಅಲ್ಲೂ ಎಲ್ಲೂ ಸಲ್ಲದಂತಾಗುವ ನಿರಂತರ ಭಯ, ಅಭದ್ರತೆಯಲ್ಲಿ ಬೆಳೆದರು.

ಲಿಂಗತ್ವ ಕುರಿತ ಗೊಂದಲ, ತಾರತಮ್ಯದ ಅನುಭವಗಳು ಒಂದು ಕಡೆಯಾದರೆ, ಬಹುಜನ ಸಮುದಾಯದ ವಿಹಾನ್ ಜಾತಿ ತಾರತಮ್ಯ, ಬಡತನದ ಅವಮಾನಗಳನ್ನೂ ಜೊತೆಗೇ ಅನುಭವಿಸತೊಡಗಿದರು. ಜಾತಿ, ವರ್ಗ, ಲಿಂಗತ್ವವೆಂಬ ಮೂರಲಗಿನ ಕೂರಂಬು ಎತ್ತೆತ್ತಲಿಂದಲೂ ಚುಚ್ಚಿ ಚುಚ್ಚಿ ತಿವಿಯತೊಡಗಿತು.

ಈ ವೇಳೆಗೆ ಪುಣೆಯ ಬಿ. ಜಿ. ಢೇರೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಫಗ್ರ್ಯೂಸನ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪದವಿಯನ್ನೂ ಪಡೆದರು. ಕುಟುಂಬ ಮುಂಬಯಿಗೆ ಸ್ಥಳಾಂತರಗೊಂಡಿತು. ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಟಿಸ್)ನಿಂದ ಸಮಾಜಸೇವೆಯ ಬಗೆಗೆ ಸ್ನಾತಕೋತ್ತರ ಪದವಿ ಪಡೆದರು. ಮನೆಯ ವಾತಾವರಣ ಉಸಿರುಗಟ್ಟಿಸತೊಡಗಿದ್ದರೂ ಗಂಭೀರ ಓದಿಗೆ ತೆತ್ತುಕೊಂಡು ಜಾತಿ ಮತ್ತು ಲಿಂಗತ್ವ ಕುರಿತು ಆಳ ಅಧ್ಯಯನ ನಡೆಸಿದರು. `ಮಹಿಳಾ ಕೇಂದ್ರಿತ ಆಚರಣೆ’ಗಳ ಬಗೆಗೆ ಪ್ರಬಂಧ ಮಂಡಿಸಿದರು. ಹಾರ್ವರ್ಡ್‍ನ ಕೆನೆಡಿ ಸ್ಕೂಲಿನಲ್ಲಿ ಐದು ತಿಂಗಳ ಲೀಡರ್‌ಶಿಪ್ ಆರ್ಗನೈಸಿಂಗ್ ಆಕ್ಷನ್ ವಿಷಯದಲ್ಲಿ ತರಬೇತಿ ಪಡೆದರು. ಆಳದ ಓದು, ಶಿಕ್ಷಣ ನೀಡಿದ ಧೈರ್ಯ, ಭರವಸೆಗಳು ವಿಹಾನ್‍ಗೆ ತನ್ನನ್ನು ತಾನು `ಅಂಬೇಡ್ಕರೈಟ್ ಕ್ವೀರ್ ಫೆಮಿನಿಸ್ಟ್’ ಎಂದು ಸ್ನೇಹಬಳಗದಲ್ಲಿ ಗುರುತಿಸಿ ಕೊಳ್ಳುವಂತೆ ಮಾಡಿತು. ಉನ್ನತ ಶಿಕ್ಷಣವು ಸ್ವಾಯತ್ತತೆಯ ಬದುಕಿನ ಕಡೆಗೆ ಚಲಿಸಲು ರಹದಾರಿಯಾಯಿತು.

ಮದುವೆಯ ಒತ್ತಡ

ಮದುವೆ ಮಾಡಿದರೆ `ದಾರಿ ತಪ್ಪಿದ ಮಗಳು’ ಸರಿ ಹೋದಾಳು ಎಂದು ಮನೆಯವರು  ಗಂಡು ಹುಡುಕ ತೊಡಗಿದರು. ಈಗ ನಿಜವಾದ ಪರೀಕ್ಷೆ ಎದುರಾಯಿತು. ಸ್ನೇಹಬಳಗಕ್ಕಷ್ಟೇ ಅಲ್ಲ, ಮನೆಯವರಿಗೂ ತನ್ನ ಲಿಂಗತ್ವ ಅಸ್ಮಿತೆ ಬೇರೆ ಎಂದು ತಿಳಿಸ ಬೇಕಿತ್ತು. ಅದು ತಿಳಿಸಿದ ಬಳಿಕ ಮನೆಯಲ್ಲುಂಟಾದ ಕ್ಷೋಭೆ, ಗಲಾಟೆ, ಹಿಂಸೆಯ ವಾತಾವರಣದಲ್ಲಿ ಮನೆಯಲ್ಲಿರಲು ಸಾಧ್ಯವಿರಲಿಲ್ಲ. ಮನೆಬಿಟ್ಟು ಹೋಗಿ ಬಿಡಬೇಕು ಎಂಬ ಹಂಬಲ ಬಲವಾಯಿತು. ಆದರೆ ಎಲ್ಲಿ ಹೋಗುವುದು? ಏನು ಮಾಡುವುದು? ಮನೆ ಎಂದರೆ ಬರಿಯ ನಾಲ್ಕು ಗೋಡೆಯೊಳಗಿನ ಅವಕಾಶ ಮಾತ್ರವೇ? ಗೋಡೆಯೊಳಗಿನ ಜನರೂ ಮುಖ್ಯ ಎಂದಾದರೆ ಇದು ನನ್ನ ಮನೆಯೇ? ಇವರಲ್ಲ ಎಂದಾದರೆ ನನ್ನವರಾರು? ಈ ನಂಟುಗಳನ್ನು ಬಿಡುವುದು ಹೇಗೆ? ಆಮೇಲಿನ ಬದುಕು ಸುರಕ್ಷಿತವೇ? ತನ್ನ ಪತ್ತೆ ಹಚ್ಚಿ ಮತ್ತಷ್ಟು ಹಿಂಸೆ ಎದುರಾದರೆ? ಇವರನ್ನೆಲ್ಲ ಬಿಟ್ಟು ಬದುಕಲು ಸಾಧ್ಯವೇ? ಮುಂತಾದ ನೂರೆಂಟು ಪ್ರಶ್ನೆಗಳು ಮನದಲ್ಲಿ ಭೋರ್ಗರೆಯ ತೊಡಗಿದವು.

ಒಂದು ಅಂಬೇಡ್ಕರ್ ಜಯಂತಿಯ ದಿನ. ಸಭೆ, ಸಮಾರಂಭಗಳ ಬಳಿಕ ತನ್ನ ವಿಷಯ ತಿಳಿದಿದ್ದ ಅಂಬೇಡ್ಕರೈಟ್ ಗೆಳೆಯನೊಟ್ಟಿಗೆ ಮನದ ಗೊಂದಲ ಚರ್ಚಿಸಿದರು. ಅವನು ವಿಹಾನ್‍ನ ಎಲ್ಲ ಹಂತಗಳ ಬೆಳವಣಿಗೆ ಕಂಡಿದ್ದವನು. ವಿಹಾನ್‍ಗೆ ದೆಹಲಿಯಲ್ಲಿ `ಮಾ’ ಸಿಕ್ಕಿರುವುದು, ಒಬ್ಬಳು ಪ್ರೇಮಿಯೂ ಇರುವುದು, ಅವಳೀಗ ದೆಹಲಿಗೇ ಹೋಗಿರುವುದು ಗೊತ್ತಿತ್ತು. ಹೇಗಿದ್ದರೂ ಉನ್ನತ ಶಿಕ್ಷಣದ ಬೆಂಬಲವಿರುವುದರಿಂದ ಉದ್ಯೋಗವೂ ದೊರೆತೀತು ಎಂಬ ಭರವಸೆಯಿತ್ತು, `ಹೊರಟು ಹೋಗು’ ಎಂದು ಧೈರ್ಯ ತುಂಬಿ ಕೆಲವು ಲಗೇಜುಗಳೊಡನೆ ರೈಲ್ವೇ ಸ್ಟೇಶನ್ನಿಗೆ ಕರೆತಂದು ಬಿಟ್ಟ. ರೈಲು ಬರಲು 15 ನಿಮಿಷ ಇದೆ ಎನ್ನುವಾಗಲೂ ದ್ವಂದ್ವ, ದುಃಖ.

ಬಹುಜನ ಕುಟುಂಬಗಳಲ್ಲಿ ಶಿಕ್ಷಣ ಕೊಡಿಸಿದ ಮಕ್ಕಳ ಮೇಲೆ ಇಡಿಯ ಕುಟುಂಬವೇ ನಿರೀಕ್ಷೆಗಳನ್ನಿಟ್ಟು ಕೊಂಡಿರುತ್ತದೆ. ಮಕ್ಕಳ ಕಾಲದಲ್ಲಾದರೂ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸೀತು ಎಂಬ ಆಶಾಭಾವನೆಯಿರುತ್ತದೆ. ಹಾಗಿರುವಾಗ ಅವರ ಬೆವರ ಫಲದಲ್ಲಿ ಶಿಕ್ಷಣ ಪಡೆದು, `ನಾನು ಗಂಡು’ ಎಂದು ಘೋಷಿಸಿಕೊಂಡು ಮನೆಯವರಿಗೆ ಊರುಗೋಲಾಗಬೇಕಾದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವೆನೇ ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಗೊತ್ತಿಲ್ಲದ ಊರಿಗೆ, ಹೊಸದಾಗಿ ಏರ್ಪಟ್ಟ ನಂಟು ನೆಚ್ಚಿ ಹೋಗುವುದು ಸರಿಯೇ? ಸಂಕಟಕಾಲದಲ್ಲೂ ಅವರು ನನ್ನ ಕೈಬಿಡಲಾರರೇ? ಮುಂತಾದ ಅಭದ್ರತೆಯ ಭಯ ಒತ್ತರಿಸಿ ಬಂತು.

ಅಂತೂ ರೈಲು ಬಂದೇ ಬಿಟ್ಟಾಗ ಮನೆಯ ದೃಶ್ಯ, ಅದೃಶ್ಯ, ದೈಹಿಕ-ಮಾನಸಿಕ ಹಿಂಸೆಗಳ ಚಿತ್ರಣ ಕಣ್ಣೆದುರು ತಂದುಕೊಂಡು, ಉಸಿರುಗಟ್ಟಿಸುವ ಅಲ್ಲಿರಲು ಸಾಧ್ಯವೇ ಇಲ್ಲ ಎನಿಸಿ ದೆಹಲಿಯ ರೈಲು ಹತ್ತೇಬಿಟ್ಟರು. ಅಷ್ಟೇ. ಅಲ್ಲಿಂದೀಚಿನದು `ವಿಹಾನ್’, ಅಂದರೆ ಹೊಸಬೆಳಗು.

`ವಿಹಾನ್’, ಅಂದರೆ ಹೊಸಬೆಳಗು

ರೈಲು ಮುಂಬಯಿಯ ಗಡಿ ದಾಟುವಾಗ, ಗುಜರಾತಿನಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಹೊಸಬದುಕಿಗಾಗಿ ತನ್ನ ಸಮುದಾಯವನ್ನು ಸೇರಿಕೊಳ್ಳಲು ಹೋಗುವಾಗ ಎಲ್ಲ ಕಳಚಿಕೊಂಡ ಅನುಭವ. `ಕೋಶ ಕಟ್ಟಿಕೊಂಡ ಮರಿಹುಳ ತನ್ನ ಸುತ್ತಣ ಬಲೆಯ ತಾನೇ ಹರಿದು ಹೊರಬರುವಂತೆ ಎಲ್ಲವನ್ನು ಕಳಚಿಕೊಳ್ಳಲೇಬೇಕು. ಇಲ್ಲದಿದ್ದರೆ ಚಿಟ್ಟೆ ಹೊರಬರಲಾರದು. ಮರಿಹುಳ ಉಸಿರುಗಟ್ಟಿ ಒಳಗೇ ಸಾಯಬೇಕಾದೀತು. ಹಳೆಯ ಹೆಸರು, ಕುಟುಂಬ, ಹಳೆಯ ಸಹಪಾಠಿಗಳು, ಗೆಳೆತನದ ಬಳಗ, ಗುರುಗಳು, ನೆಂಟರು, ಉದ್ಯೋಗ, ನೆರೆಹೊರೆ ಎಲ್ಲ ಅಂದರೆ ಎಲ್ಲವನ್ನು ಕಳಚಿಕೊಳ್ಳಬೇಕು. ತನ್ನ ನಿಜಗುರುತು ತಿಳಿಯದ, ನಿಜಗುರುತನ್ನೊಪ್ಪದ ಎಲ್ಲರಿಂದ ಬಿಡಿಸಿಕೊಳ್ಳಬೇಕು. ನನ್ನ ಹೊಸ ಹುಟ್ಟನ್ನು ನಾನೇ ರೂಪಿಸಿಕೊಳ್ಳಬೇಕು.’

ಇದರ ಮೊದಲ ಮೆಟ್ಟಿಲಾಗಿ ಜನ್ಮನಾಮವನ್ನು ಮೃತನಾಮ ಎಂದು ಘೋಷಿಸಿಕೊಂಡು ಹಳೆಯ ಹೆಸರು ಅಳಿಸಿಕೊಂಡರು. ವಿಹಾನ್ ಆದರು. ಕಲಿತು ಬಂದ ಕಾಲೇಜಿಗೆ ಪದವಿಪ್ರದಾನ ಮಾಡುವಾಗ ತಾಯ್ತಂದೆಯರಿಗೆ ಹಳೆಯ ಹೆಸರಿನ ಡಿಗ್ರಿ ಸರ್ಟಿಫಿಕೇಟ್ ಕಳಿಸಬೇಡಿ ಎಂದು ಪತ್ರ ಬರೆದರು. ಮನೆಯವರಿಗೆ ಗುರುತು ಹತ್ತದಿರಲೆಂದು ಹಳೆಯ ಅಕೌಂಟ್, ಫೋನ್, ಸಂಪರ್ಕ, ಹೆಸರು ಎಲ್ಲವನ್ನೂ ಅಳಿಸಿ ಹಾಕಿದರು.

ದೆಹಲಿ ತಲುಪಿ ಸಾಕುಅಮ್ಮನ ಮಡಿಲು ಸೇರಿದ್ದಾಯ್ತು. ಒಂದು ಉದ್ಯೋಗವೂ ದೊರೆಯಿತು. ಒಂದು ಬಾಡಿಗೆ ಮನೆಯೂ ಸಿಕ್ಕೇಬಿಟ್ಟಿತು. ಪ್ರೇಮಿಯ ಸಖ್ಯ ಬೆಚ್ಚನೆಯ ಅನುಭವ ನೀಡಿತು. ಇನ್ನು ತನಗೆ ತಾನೇ ಆಗಿ ಬದುಕುವ ದಿನಗಳು ಬಂದವು ಎಂದುಕೊಳ್ಳುವಾಗ ಒಂದು ಬ್ಯಾಂಕ್ ಖಾತೆ ತೆರೆಯಬೇಕಾದ ಅನಿವಾರ್ಯತೆ ಎದುರಾಯಿತು. ಅದೊಂದು ತಿಂಗಳುಗಟ್ಟಲೆಯ ಹೋರಾಟ. ಹೊಸಹೆಸರು ಮಾತ್ರ ಸಾಕೆಂದರೆ ಹಳೆಯ ದಾಖಲೆ ಪತ್ರಗಳೆಲ್ಲ ನಿರುಪಯೋಗಿಯಾಗುತ್ತಿದ್ದವು. ಮತ್ತೊಂದೆಡೆ ದಾಖಲೆಗಳಿಲ್ಲದೆ ಅಸ್ತಿತ್ವವೇ ಇಲ್ಲ ಎಂಬಂತಹ ಸಾಮಾಜಿಕ ಪರಿಸ್ಥಿತಿ. ಹಳೆಯದು ಇರಲಿ ಎಂದರೆ ಮತ್ತದಕ್ಕೇ ಮರಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ತನ್ನ ಲಿಂಗತ್ವವನ್ನೂ, ಅದಕ್ಕೊಪ್ಪುವ ಹೆಸರನ್ನೂ ತಾನೇ ಇಟ್ಟುಕೊಂಡ ಜೀವಂತ ವ್ಯಕ್ತಿಯ ಬಗೆಗೆ ಸಮಾಜ ತೋರಿಸುವ ಅಸಡ್ಡೆ, ಕೋಪ, ಸಾಮಾಜಿಕ ರಚನೆಯಲ್ಲೇ ಹುದುಗಿಹೋಗಿರುವ ರಾಚನಿಕ ಹಿಂಸೆಗಳು ತುದಿಬೆರಳಿನ ಅನುಭವವೆಂಬಂತೆ ನಿಲುಕಿದವು.

ಓಹ್! ಒಂದೇ, ಎರಡೇ. ನೂರೆಂಟು ದ್ವಂದ್ವಗಳ, ಸವಾಲುಗಳ ಬದುಕು. ಏರುಪೇರಾಗುವ ಮಾನಸಿಕ ಸ್ವಾಸ್ಥ್ಯ, ನಿದ್ರಾಹೀನತೆ, ಅದಕ್ಕೆ ಚಿಕಿತ್ಸೆ. ಜೊತೆಗೆ ಬಿಟ್ಟುಬಂದದ್ದರ ಕಡೆಗೆ ಸೆಳೆತ. ಮನೆಗೆ ಹೋಗಿ, ನೋಡಿ, ಹೇಳಿ, ಅವರನ್ನೂ ಒಪ್ಪಿಸುವ ತುಡಿತ. ಬಂದ ಒಂದೇ ತಿಂಗಳಿಗೆ ಮತ್ತೆ ಮುಂಬಯಿಗೆ ಹೋದರು. ಕೊಂಚ ಸಮಾಧಾನ ಪಡೆದು ಮತ್ತೆ ಕೆಲಸದಲ್ಲಿ ತೊಡಗಿದರು. ವಿರಹ, ವಿರಸ, ಒಡಕುಗಳ ಫಲವಾಗಿ ದೆಹಲಿ ಬಿಟ್ಟು ಈಗ ಒಂದೂವರೆ ವರ್ಷದಿಂದ ಬೆಂಗಳೂರು ವಾಸಿಯಾಗಿದ್ದಾರೆ. ಲಿಂಗತ್ವ, ಜಾತಿ, ಅಭಿವೃದ್ಧಿ ಅಧ್ಯಯನ ಕೆಲಸದಲ್ಲಿ ತೊಡಗಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯ ಬಗೆಗೆ ಅಪಾರ ಕಾಳಜಿಯಿರುವ ವಿಹಾನ್ ಅದನ್ನೂ ಸೇರಿಸಿದಂತೆ ಅಂತರ್‍ ಶಿಸ್ತೀಯ ಅಧ್ಯಯನದಲ್ಲಿ ತೊಡಗಿ ಕೊಂಡಿದ್ದಾರೆ. ಲಿಂಗಾಂತರಿ ಪುರುಷ ಸಮುದಾಯದ ಕಷ್ಟಗಳ ಬಗೆಗೆ ಬರೆದು ಗಮನ ಸೆಳೆದಿದ್ದಾರೆ. ಕೋವಿಡ್ ಕಾಲದಲ್ಲಿ ಆ ಸಮುದಾಯ ಎದುರಿಸಿದ ಸಂಕಷ್ಟಗಳ ಬಗೆಗೆ ಸಂಶೋಧನೆ ನಡೆಸಿದ್ದಾರೆ. ಕ್ವೀರ್ ಗುಂಪಿನ ಆಪ್ತಸಹಾಯಕರಾಗಿ, ಮಹಿಳೆ-ಕ್ವೀರ್-ಯುವಜನತೆಯ ಬೆಂಬಲ ಗುಂಪು `ಹಂಸಫರ್’ನ ಭಾಗವಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಯುವಜನತೆಯ ದನಿಯನ್ನು ಮುನ್ನೆಲೆಗೆ ತರುವ `ಹೈಯ್ಯಾ’ ಸಂಸ್ಥೆಯ ಪ್ರಚಾರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಏಷಿಯಾ ಫೆಸಿಫಿಕ್ ಲಿಂಗಾಂತರಿ ಸಮುದಾಯದ ಸಂಪರ್ಕ ಜಾಲವಾಗಿ ಕೆಲಸ ಮಾಡುತ್ತಾರೆ. MasculiniTea: Kuch Mardani Gupshup ಎಂಬ ಪಾಡ್‍ಕಾಸ್ಟ್ ನಡೆಸುತ್ತ ಲಿಂಗಾಂತರಿ ಪುರುಷರ ಅನುಭವಗಳನ್ನು ದಾಖಲಿಸುತ್ತಿದ್ದಾರೆ. ಸೂಕ್ಷ್ಮ ಬರಹಗಾರರಾದ ವಿಹಾನ್, ಸರಳವಾದ ಆಪ್ತಶೈಲಿಯಲ್ಲಿ ಬದುಕಿನ ಅನುಭವಗಳನ್ನು ಹಲವು ಅಂತರ್ಜಾಲ ನಿಯತಕಾಲಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದಾರೆ.

ಹಲವು ಅಡೆತಡೆ, ಬೇಲಿ, ಕಂದಕ, ಕೊಂಡಗಳ ಹಾಯ್ದು ಬಂದ 26 ವರ್ಷದ ವಿಹಾನ್ ಈಗ ತನ್ನ ಅನ್ನ ತಾನೇ ಗಳಿಸಿಕೊಳ್ಳುತ್ತ, ತನ್ನಿಷ್ಟದಂತೆ ಬದುಕುವ ಮಾರ್ಗ ಕಂಡುಕೊಳ್ಳುತ್ತ ಬೆಂಗಳೂರಿನಲ್ಲಿದ್ದಾರೆ. ಅವರ ಸಮುದಾಯ ಬೆನ್ನಿಗಿದೆ. ಆದರೂ ತನಗೆ ಬೇಕಾದ, ತಾನು ಮಾಡಲೇಬೇಕಾದ ಇನ್ನೂ ಏನೋ `ಆ’ ಅದು ಇದೆಯೆಂದು ಹುಡುಕಾಟ ನಡೆಸುತ್ತಲೇ ಇದ್ದಾರೆ. ಅವರು ಒಲ್ಲೆನೆಂದು ಬಂದು ಈಗ ಪಡೆದಿರುವ ಹೊಸ ಪುರುಷ ಅಸ್ಮಿತೆಯು ಹಳೆಯ ಪಾರಂಪರಿಕ ಚೌಕಟ್ಟನ್ನು ಮೀರಿ ಮಾನವ ಅಸ್ಮಿತೆಯೆಡೆಗೆ ತಮ್ಮನ್ನು ಒಯ್ಯುತ್ತಿದೆಯೆ ಎಂದವರು ಪರಿಶೀಲಿಸಿಕೊಳ್ಳಬೇಕಿದೆ. ಕ್ರಮಿಸಬೇಕಾದ ದಾರಿ ದೂರವಿದೆ.

`ನೊಂದೆ’ ಎಂದವರನ್ನೆಲ್ಲ ಮಹಿಳಾ ಚಳವಳಿ ಒಳಗೊಳ್ಳುತ್ತದೆ. ತಮ್ಮ ಲಿಂಗತ್ವ-ಹೆಸರು-ಬದುಕುಗಳನ್ನು ತಾವೇ ಕಟ್ಟಿಕೊಳ್ಳಲಿಚ್ಛಿಸಿ ನೋವು, ಅವಮಾನ, ಅಭದ್ರತೆ ಎದುರಿಸುವ ಎಲ್ಲ ಜೀವಗಳ ಜೊತೆಗೂ ಮಹಿಳಾ ಚಿಂತನೆ, ಮಹಿಳಾ ಚಳವಳಿ, ಸ್ತ್ರೀವಾದಗಳು ಹೆಜ್ಜೆಯಿಡುತ್ತವೆ. ನಮ್ಮ ಸುತ್ತಲ ಲೋಕದ ಬಿಡುಗಡೆಯೇ ನಮ್ಮ ಬಿಡುಗಡೆ. ಸಮಾನತೆ, ಸ್ವಾಯತ್ತತೆ, ಘನತೆಯ ಬದುಕುಗಳು ಒಬ್ಬೊಬ್ಬರಿಗಷ್ಟೇ ಸಿಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಸಿಕ್ಕಾಗಲಷ್ಟೇ ಅವಕ್ಕೆ ಬೆಲೆ, ಅರ್ಥ ಸಿಗುವುದು.

ಆಪ್ತ ಬೆಂಬಲ, ಒಪ್ಪಿಕೊಳ್ಳುವಿಕೆ, ಪ್ರೇಮ ಇಲ್ಲದೇ ಲೋಕವಿರುವುದೇ? ಇದನ್ನೆಲ್ಲ ತುಂತುಂಬಿ ಕೊಟ್ಟು ನಮ್ಮೊಳಗನ್ನು ತುಂಬಿಕೊಂಡರೆ ದುಃಖವೇ ಇರಲಾರದು, ಅಲ್ಲವೇ? ಅದಕ್ಕೇ ಬನ್ನಿ, ಎಲ್ಲ ಒಗ್ಗೂಡಿ, ವಿಹಾನರುಗಳ ಕೈಕೈ ಹಿಡಿದು ಹೆಜ್ಜೆ ಹಾಕೋಣ. ತುಮಕೂರಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮಾ. 7, 8ರಂದು ನಡೆಸುತ್ತಿರುವ `ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯನ್ನು ಪ್ರೀತಿಯ ರಾಜಕಾರಣದ, ಹೆಣ್ಣು ಚೈತನ್ಯದ ದಿನವಾಗಿಸಿ ಅರ್ಥಪೂರ್ಣವಾಗಿಸೋಣ.

ಡಾ. ಎಚ್. ಎಸ್. ಅನುಪಮಾ

ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯರಾಗಿರುವ ಇವರು ತನ್ನ ವೃತ್ತಿಯಂತೆಯೇ ಸಾಹಿತ್ಯವನ್ನೂ ಎದೆಗಾನಿಸಿಕೊಂಡು ಬಹು ಅಮೂಲ್ಯ ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಟ್ಟಿದ್ದಾರೆ. ವಿಚಾರವಾದಿ, ಚಿಂತಕಿ, ವಾಗ್ಮಿ, ದಲಿತ-ಮಹಿಳಾಪರ ಆಂದೋಲನಗಳ  ಕಾರ್ಯಕರ್ತೆ, ಸಂಘಟಕಿ, ಕವಿ, ಪ್ರಕಾಶಕಿ ಹೀಗೆ ಜನಪರ ಕಾಳಜಿಗಳನ್ನೇ ಉಸಿರಾಡುತ್ತಿರುವವರು.

ಸೋಲಿಗೆ ಸೋಲದ ಶಾಂತಮ್ಮ
ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್‌ ಮೀಡಿಯಾವು ಪ್ರಕಟಿಸುತ್ತಿರುವ ಸರಣಿಯಲ್ಲಿ, ಬದುಕಿನಲ್ಲಿ ಎಷ್ಟೇ ಸೋಲಾದರೂ ಅವುಗಳಿಗೆ ಸೆಡ್ಡುಹೊಡೆದು ಬದುಕಿ ಬಾಳುತ್ತಿರುವ ಕೋಲಾರದ ಶಾಂತಮ್ಮ  ಅವರು ಬದುಕು ಸಾಧನೆಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ ಡಾ. ಎಚ್.‌ ಎಸ್‌ ಅನುಪಮಾ.

ಕೊನೆಮೊದಲಿರದ ದೈಹಿಕ ಹಿಂಸೆ, ದೌರ್ಜನ್ಯ, ಅವಮಾನಗಳ ನಡುವೆ ಅವರ ವಿವಾಹ ಬಂಧನದಲ್ಲಿ ಯಾವುದೇ ಸಂಬಂಧ ಉಳಿದಿರಲಿಲ್ಲ. ಬರಿಯ ಅನುಮಾನ, ಅವಮಾನ, ಸುಳ್ಳುಗಳ ಮೇಲೆ ನಿಂತ ದಾಂಪತ್ಯದಲ್ಲಿ ಸತಿಪತಿಯರು ಒಮ್ಮೆಯೂ ಅಕ್ಕಪಕ್ಕ ಕುಳಿತು ಮಾತನಾಡಿರಲಿಲ್ಲ. ಒಂದುದಿನದ ಮಟ್ಟಿಗೂ ಅವ ಕೈಹಿಡಿದು ಬಂದವಳ ಮೇಲೆ ಕಕ್ಕುಲಾತಿ ತೋರಿಸಿರಲಿಲ್ಲ. ಮದುವೆಯಾಗಿ ವಾರದೊಳಗೇ ವಧುವಿನ ಗೆಳತಿಯೊಡನೆ ದೈಹಿಕ ಸಂಬಂಧಕ್ಕೆ ಹಾತೊರೆಯುವಷ್ಟು ಹೆಣ್ಣು ಮರುಳು ವರ ಅವನು. ಆದರೂ ನೂರೆಂಟು ದಿಕ್ಕಿನ ಒತ್ತಡಗಳಿಗೆ ಸಿಲುಕಿ ಗಂಡನೆಂದು ಅವಳು ಒಪ್ಪಿಕೊಳ್ಳಬೇಕಾಗಿತ್ತು. ಇಬ್ಬರು ಮಗಂದಿರನ್ನೂ ಹೆತ್ತದ್ದಾಯಿತು. ಆದರೆ ಗೆಳೆತನವಿರದ ಶುಷ್ಕ, ಅರ್ಥಹೀನ, ಯಾತನಾಮಯ ದಾಂಪತ್ಯ ಸಂಬಂಧವನ್ನೇ ಕೊನೆತನಕ ಸಹಿಸಿ ಇರುವುದು ಹೇಗೆ? ಏನು ಮಾಡಲಿ? ಏನು ಮಾಡಲಿ?

ಅವರ ಸಂಕಟ ಯಾವ ಸೀತಾ ಸಂಕಟಕ್ಕೂ ಕಡಿಮೆಯಿರಲಿಲ್ಲ.

ಆ ಜೀವ ಪದೇಪದೇ ಈ ಪ್ರಶ್ನೆ ಕೇಳಿಕೊಳ್ಳುತ್ತಿತ್ತು. ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಳೆದು ಓದಿದರೂ ಮನೆಯ ಸಾಂಪ್ರದಾಯಿಕ ವಾತಾವರಣದ ಕಾರಣದಿಂದ 10ನೆಯ ತರಗತಿಗೇ ಆಕೆ ಓದು ನಿಲ್ಲಿಸಿದ್ದಳು. ಮದುವೆಯಾಗಿ ಎರಡು ಮಗಂದಿರ ತಾಯಿಯಾಗಿದ್ದಳು. ಚಂದದ ಹೆಂಡತಿಯ ಮೇಲೆ ಗಂಡನಿಗೆ ನಿರಾಧಾರ ಅನುಮಾನ. ಬರಿದೇ ಅನುಮಾನ. ಸ್ವತಃ ತಾನು ಲೆಕ್ಕವಿಲ್ಲದಷ್ಟು ಹೆಣ್ಣುಗಳ ಸಂಗದಲ್ಲಿ ಬಿದ್ದೆದ್ದು ಬಂದವನು ಮನೆಗೆ ಬಂದರೆ ಹೆಂಡತಿಯನ್ನು ಹೊಡೆಯಲಿಕ್ಕೊಂದು ನೆಪ ಹುಡುಕುತ್ತಿದ್ದ. ಎರಡು ಚಿಕ್ಕ ಮಗಂದಿರ ಸಂಭಾಳಿಸುತ್ತ, ಮನೆಗೆಲಸ ಮಾಡುತ್ತ ಮನೆಯ ಗೋಡೆಗಳಾಚೆ ಹೋಗದ ಎಳೆಯ ಹೆಂಡತಿಯ ಮೇಲೆ ಅನುಮಾನ ಪಡುವಂಥದು ಏನೂ ಇರದಿದ್ದರೂ ತನಗೆ ಹೆದರಿ, ಬೆದರಿ ವಿಧೇಯಳಾಗಿರುವಂತೆ ಮಾಡಬೇಕೆಂದರೆ ಹೊಡೆಯುತ್ತ ಬಡಿಯುತ್ತ ಇರಬೇಕು ಎಂಬ ತಪ್ಪು ಪಾಠವನ್ನು ಆ ಗಂಡಿಗೆ ಸಮಾಜ ಹೇಳಿಕೊಟ್ಟಿತ್ತು. ಮೂರನೆಯ ಬಾರಿ ಬಸುರಾದವಳ ಎದುರು ಅವ ಈಗ ಹೊಸ ವರಾತ ತೆಗೆದಿದ್ದ: ಬಲವಂತದ ದೈಹಿಕ ಸಂಬಂಧದಲ್ಲಿ ಸಿಲುಕಿ ದೇಹವಾಂಛೆಗಳನ್ನೇ ಕಳೆದುಕೊಂಡಂತಿದ್ದವಳಿಗೆ `ಅದು ನನ್ನ ಮಗು ಅಲ್ಲ, ನೀನು ಇನ್ನಾರಿಗೋ ಬಸುರಾಗಿರುವೆ’ ಎನ್ನುವ ಬಿರುದನ್ನು ಅವ ಕೊಟ್ಟಿದ್ದ! ಹಾಗಲ್ಲ ಎಂದು ಸಾಧಿಸಿ ತೋರಿಸುವುದು ಹೇಗೆ? ಹೇಳಿದ್ದೇನನ್ನೂ ನಂಬಬಾರದೆಂದು ಪೂರ್ವ ನಿಶ್ಚಯ ಮಾಡಿಕೊಂಡವನೆದುರಿಗೆ ಆಡುವ ಒಂದೊಂದು ಮಾತೂ, ಅನುನಯದ ಒಂದೊಂದು ನುಡಿಯೂ ಹೊಡೆತಗಳಿಗೆ ದಾರಿ ಮಾಡುತ್ತಿದ್ದವು. ಬಸುರಿ ಹೆಂಡತಿಯನ್ನು ಆಸ್ಪತ್ರೆಗೊಯ್ಯುವುದು, ತಪಾಸಣೆ ಮಾಡಿಸುವುದರ ಯಾವ ಯೋಚನೆಯೂ ಆತನಿಗಿರಲಿಲ್ಲ. ತವರಿಗೂ ಹೋಗುವಂತಿಲ್ಲ. ಮನೆಯಿಂದಾಚೆ ಕಾಲಿಡುವಂತಿಲ್ಲ. ಸಣ್ಣಮಕ್ಕಳ, ಮನೆಗೆಲಸದ ಹೊರೆ ಒಂದು ಕಡೆಯಾದರೆ ಬಸುರಿನ ಸುಸ್ತು ಸಂಕಟಗಳ ನಡುವೆ ಗಂಡನ ಅನುಮಾನದ ಹೊಡೆತ ಬಡಿತ ಮತ್ತೊಂದು ಕಡೆ. ಆ ಬಸುರಿನಲ್ಲಿ ಅವಳನುಭವಿಸಿದ್ದು ಯಾವ ಸೀತಾ ಸಂಕಟಕ್ಕೂ ಕಡಿಮೆಯಿರಲಿಲ್ಲ.

ಮತ್ತದೇ ಹಳೆಯ ರಾಗ..

ಅದರ ನಡುವೆ ಮೂರನೆಯ ಮಗು, ಹೆಣ್ಣು ಮಗು, ಹುಟ್ಟಿತು. ಹೆರಿಗೆ ತುಂಬ ಕಷ್ಟವಾಯಿತು. ಹೇಗೋ ಒಂದು ಜೀವ ಎರಡಾಗಿ ನಿಟ್ಟುಸಿರು ಬಿಟ್ಟು ಮಗುವನ್ನು ಮುದ್ದಿಸಿದಳು. `ಮಗುವೇ, ನಿನ್ನ ಅಳುವಿನ ಜೊತೆಗೆ ನನ್ನ ಅಳುವೂ ಕೊನೆಗೊಳ್ಳಲಿ, ನಿನ್ನ ಬೆಳವಣಿಗೆಯ ಜೊತೆಗೆ ನನ್ನನ್ನೂ ಬೆಳೆಸು’ ಎಂದು ಮುತ್ತಿಕ್ಕಿ ತನಗೆ ತಾನೇ ಹಾರೈಸಿಕೊಂಡಳು. ಆದರೆ ಅವ ಮಗುವನ್ನು ನೋಡಲು ತಾನು ಬರದೇ ಮತ್ಯಾರನ್ನೋ ಕಳಿಸಿದ. ನೋಡಿಬಂದವರು ಅದರ ಮೂಗು, ಮುಖ, ಕೈಕಾಲು ಅವನನ್ನು ಹೋಲುವಂತಿದೆ ಎಂದ ಮೇಲೆ ಮನೆಯ ಬಾಗಿಲುಗಳು ತೆರೆದುಕೊಂಡವು. ದಿನನಿತ್ಯ ಮತ್ತದೇ ಹಳೆಯ ರಾಗ.

ಮನೆ ಬಿಟ್ಟು ಹೊರ ಬಂದರು!

ಅಮ್ಮ ಸಂತಸದಲ್ಲಿದ್ದಾಳೋ, ನೊಂದಳೋ ಎಂಬ ಪರಿವೆಯಿಲ್ಲದೆ ಮಗು ಬೆಳೆಯತೊಡಗಿತು. ಮಗುವಿನ ಜೊತೆಗೆ ಮಗುವಿನ ಅಮ್ಮನ ಆತ್ಮಗೌರವ ಪುಟಿದೆದ್ದಿತು. ಹೆಣ್ಣು ಎಂದರೆ `ನನ್ನ ಕಾಲಿನ ಚಪ್ಪಲಿಗೆ ಸಮ’ ಎನ್ನುವವನ ಜೊತೆ ಬದುಕಬೇಕೇ ಎಂಬ ಪ್ರಶ್ನೆ ಧುತ್ತನೆದ್ದಿತು. ಆದರೆ ಒಬ್ಬಳೇ ಬದುಕುವುದು ಹೇಗೆ? ಎರಡು ರೂಪಾಯಿ ಕೊಡಲಿಕ್ಕೂ ಹಂಗಿಸುವ ಅವನ ದುಡ್ಡಿಗಂತೂ ಕೈ ಚಾಚಲೇಬಾರದು; ಅವನನ್ನಷ್ಟೇ ಅಲ್ಲ, ಯಾರನ್ನೂ ದುಡ್ಡು ಕೇಳಬಾರದು. ಹಾಗೆ ಏನಾದರೊಂದು ಕೆಲಸ ಮಾಡಿ ಬದುಕುವುದೇ ಸರಿ ಎಂಬ ನಿರ್ಧಾರ ಹುಟ್ಟಿತು. `ಮನೆಬಿಟ್ಟು ಹೊರಡಬೇಕು, ನನ್ನದನ್ನು ನಾನೇ ದುಡಿದು ಕೊಳ್ಳಬೇಕು. ಹಂಗಿನರಮನೆ ಇನ್ನು ಸಾಕು’ ಎಂದು ಒಂದು ದಿನ ಇದ್ದಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಮನೆ ಬಿಟ್ಟು ಬಂದಳು. 1972ರಲ್ಲಿ ಮದುವೆಯಾಗಿದ್ದವಳು 17 ವರ್ಷ ಮನೆಯೆಂಬ ಸೆರೆವಾಸ ಅನುಭವಿಸಿ 1989ರಲ್ಲಿ ಹೊರ ಬಂದಳು.

ಬೀದಿ ಅಪರಿಚಿತವೇ ಆಗಿದ್ದರೂ ಮನೆಯಷ್ಟು ಭಯ ಹುಟ್ಟಿಸಲಿಲ್ಲ. ಇಲ್ಲಿ ಕೊನೆಪಕ್ಷ ಆ ಹಿಂಸಾರೂಪಿ ಅವನಿಲ್ಲ ಎಂಬ ನೆಮ್ಮದಿಯಲ್ಲಿ ನಿರಾಳ ಅನುಭವಿಸಿದಳು.

ತನ್ನ ಹಣ ತಾನೇ ದುಡಿದುಕೊಳ್ಳಬೇಕು…

ತಂದೆ ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ಚೀಫ್ ಎಕ್ಸಾಮಿನರ್ ಆಗಿ ನಿವೃತ್ತರಾಗಿದ್ದರು. ಎಸ್. ಶಾಂತಾಬಾಯಿ ಅಥವಾ ಶಾಂತಮ್ಮ ಕೋಲಾರ ಅಥವಾ ಕುಟೀರದ ಶಾಂತಮ್ಮ ಗಂಡನ ಮನೆ ಬಿಟ್ಟು ಬಂದಾಗ ತವರು ಮನೆಯವರು ಮೊದಲು ಆತಂಕಕ್ಕೊಳಗಾದರು. ಬೇರೆ ದಾರಿಯೇ ಅವಳಿಗಿರಲಿಲ್ಲವೆಂದು ತಿಳಿದಾಗ ಬೆಂಬಲ ನೀಡಿದರು. `ಎಲ್ಲಿಯೇ ಆಗಲಿ, ಹಣಕ್ಕೆ ಕೈಯೊಡ್ಡುವಂತಾದಾಗ ಅವಮಾನ, ದೌರ್ಜನ್ಯ, ನೋವು ಸಹಿಸಬೇಕಾಗುತ್ತದೆ. ರಾಜಿ ಆಗಬೇಕಾಗುತ್ತದೆ. ಅವರ ಜೇಬಿಗೆ ನಾವು ಕೈಹಾಕಿದರೆ ಅವರು ನಮ್ಮ ಮೈಮೇಲೆ ಕೈಹಾಕುತ್ತಾರೆ; ಅದಕ್ಕೆ ಆಸ್ಪದವೇ ಕೊಡಬಾರದು ಎಂದರೆ ತನ್ನ ಹಣ ತಾನೇ ದುಡಿದುಕೊಳ್ಳಬೇಕು’ ಎಂದು ನಿರ್ಧರಿಸಿ ಶಾಂತಮ್ಮ ಕೆಲಸ ಹುಡುಕತೊಡಗಿದರು.

ದುಡಿಮೆಗೆ ತಕ್ಕಂತೆ ಬದುಕ ತೊಡಗಿದರು..

ಉದ್ಯೋಗ ಸಿಗುವುದು ಅಷ್ಟು ಸುಲಭವಲ್ಲ. ಆದರೆ ಸ್ವಾವಲಂಬಿಯಾಗಲೇಬೇಕೆಂದು ಮನಸ್ಸು ಮಾಡಿದರೆ ಬದುಕುವ ಒಂದಲ್ಲ ಒಂದು ದಾರಿ ತೆರೆದುಕೊಳ್ಳುತ್ತದೆ. ತವರಿನ ರಕ್ತಸಂಬಂಧದ ನಂಟು ಇಟ್ಟುಕೊಂಡರೂ ಆರ್ಥಿಕವಾಗಿ ತನ್ನ ಕಾಲಮೇಲೆ ನಿಲ್ಲಬೇಕು ಎಂದು ಮಕ್ಕಳಿಗೆ ಟ್ಯೂಷನ್ ಹೇಳತೊಡಗಿದರು. ಒಂದನೆಯ ಕ್ಲಾಸಿನ ಮಕ್ಕಳಿಗೆ ಒಂದು ರೂಪಾಯಿ, ಎರಡನೆಯ ಕ್ಲಾಸಿನವರಿಗೆ ಎರಡು ರೂಪಾಯಿ. ಮೊದಲ ತಿಂಗಳು ತಾನೇ ದುಡಿದು ಗಳಿಸಿದ 18 ರೂಪಾಯಿ ಕೈಗೆ ಬಂದಾಗ ಅತೀವ ಆನಂದ ಅನುಭವಿಸಿದರು. ಅದು ತಿಂಗಳ ಬದುಕಿಗೆ ಸಾಲದು, ಆದರೆ ದುಡಿಮೆಗೆ ತಕ್ಕಂತೆ ಬದುಕ ತೊಡಗಿದರು. `ನಮ್ಮಪ್ಪ ಸೋನಾ ಮಸೂರಿ ಅನ್ನ ತಿನ್ನಿಸಿದ್ದ, ಅಮ್ಮ ಹಾಲುತುಪ್ಪ ಹಾಕೋಳು, ಈಗ ಹಿಂಗಾಯ್ತು ಅಂತ ಅಳ್ತಾ ಕೂರಕ್ಕಾಗುತ್ತ? ನಾವು ದುಡಿದಿದ್ರಲ್ಲಿ ಹೆಚ್ಚು ಇದ್ದರೆ ಅನ್ನ ತಿನ್ನು, ಕಡಿಮೆ ಇದ್ರೆ ಬನ್ನು ತಿನ್ನು ಅಷ್ಟೇ. ಯಾರ್ಗೂ ಮೋಸ ಮಾಡದೇ, ಯಾರ ಹೊಟ್ಟೆ ಮೇಲೂ ಹೊಡೀದೇ ಕಷ್ಟಪಟ್ಟು ದುಡಿದು ಗಂಜಿ ಕುಡುದ್ರೂ ಪರ್ವಾಗಿಲ್ಲ, ಆ ಸುಖದ ಮುಂದೆ ಬೇರೆ ಯಾವ ಸುಪ್ಪತ್ತಿಗೇನೂ ಇಲ್ಲ’ ಎಂದು ಅರಿತುಕೊಂಡರು.

ಶಾಂತಾಬಾಯಿ ಶಾಂತಮ್ಮ ಆಗಿ ರೂಪುಗೊಂಡದ್ದು ಹೀಗೆ…

`ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಪತಿ, ವೃದ್ಧಾಪ್ಯದಲ್ಲಿ ಮಗ – ಹೀಗೆ ಹೆಣ್ಣು ಸದಾಕಾಲ ಒಬ್ಬ ಗಂಡಿನ ಅಧೀನದಲ್ಲಿಯೇ ಬದುಕಬೇಕು’ ಎಂಬ ಮನುಧರ್ಮಶಾಸ್ತ್ರದ ನಿರ್ಬಂಧವನ್ನು ಅವರು ಒಡೆಯಲೇಬೇಕಿತ್ತು. ಟ್ಯೂಷನ್ ಜೊತೆಗೆ ಕಸೂತಿ, ಹೆಣಿಗೆಯನ್ನೂ ಕಲಿತರು. ಅವರಿಗೇ ಅಚ್ಚರಿಯಾಗುವಂತೆ ಜೊತೆಯಿದ್ದ ಇಬ್ಬರು ಮಗಂದಿರ ಮತ್ತು ತಮ್ಮ ಬದುಕು ನಡೆಯುವಷ್ಟು ಸಂಪಾದನೆಯಾಗತೊಡಗಿತು. ಗಂಡನ ಬಳಿಯಿದ್ದ 10 ವರ್ಷದ ಮಗಳ ಕಸ್ಟಡಿಗಾಗಿ, ಮಗಂದಿರನ್ನು ತಮ್ಮ ಬಳಿಯಿಟ್ಟುಕೊಳ್ಳುವ ಹಕ್ಕಿಗಾಗಿ ಹೋರಾಟ ಆರಂಭಿಸಿದರು. ಆ ಕಾನೂನು ಹೋರಾಟವು ಕೌಟುಂಬಿಕ ಮಹಿಳೆ ಶಾಂತಾಬಾಯಿ ಸಾಮಾಜಿಕ ಹೋರಾಟಗಾರ್ತಿ ಶಾಂತಮ್ಮ ಆಗಿ ರೂಪುಗೊಳ್ಳಲು ದಾರಿ ಮಾಡಿತು.

ಸಿಯೆಡ್ಸ್ ಸಂಸ್ಥೆಯ ಆಸರೆ..

ಆಗ ಪರಿಚಯವಾದ ಸಂಸ್ಥೆ `ಸೆಂಟರ್ ಫಾರ್ ಇನ್‍ಫಾರ್ಮಲ್ ಎಜುಕೇಷನ್ ಅಂಡ್ ಡೆವೆಲಪ್‍ಮೆಂಟ್ ಸ್ಟಡೀಸ್’ ಅಥವಾ ಸಿಯೆಡ್ಸ್. ಮಹಿಳೆಯರ ಮೇಲಿನ ಹಿಂಸೆ, ದೌರ್ಜನ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ, ಮಹಿಳೆಯರ ರಕ್ಷಣೆಗಾಗಿ ಕೇಂದ್ರಗಳ ನಡೆಸುವ, ಪರಿಸರ ಸಂರಕ್ಷಣೆ ಮೊದಲಾದ ವಿಷಯಗಳ ಬಗೆಗೆ ಕೆಲಸ ಮಾಡುವ ಆಶಯದೊಂದಿಗೆ ಹುಟ್ಟಿಕೊಂಡ ಸರ್ಕಾರೇತರ ಸಂಸ್ಥೆ ಅದು. ಅಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಲೇ ಶಾಂತಮ್ಮ ತನ್ನ ಬದುಕಿನ ಮಾರ್ಗಗಳನ್ನು ಗಟ್ಟಿ ಮಾಡಿಕೊಂಡರು. ನೊಂದವಳು ತಾನೊಬ್ಬಳಷ್ಟೇ ಅಲ್ಲ, ತನ್ನಂತೆ ಹಲವರು ಅಗ್ನಿಪರ್ವತದ ಬಾಯಿಯಲ್ಲಿ ಬದುಕು ನಡೆಸುತ್ತಿರುವವರು ಎಂದು ಅರಿವಾಯಿತು. ಆ ವೇಳೆಗೆ ಮುಂಬೈಯ ಕಾಮಾಟಿಪುರಕ್ಕೆ ವೇಶ್ಯಾವೃತ್ತಿಗೆಂದು ಕಳ್ಳಸಾಗಾಟವಾಗಿ ಮಾರಲ್ಪಟ್ಟ 400 ಹೆಣ್ಣುಮಕ್ಕಳನ್ನು ಕೇಂದ್ರಸರ್ಕಾರ ರಕ್ಷಿಸಿ ಕರೆತಂದಿತು. ಬೇರೆಬೇರೆ ರಾಜ್ಯಗಳಿಗೆ ಸೇರಿದ ಹೆಣ್ಣುಮಕ್ಕಳಲ್ಲಿ 92 ಮಕ್ಕಳು ಕರ್ನಾಟಕದವರು. ಅವರಲ್ಲಿ ಕೆಲವರಾಗಲೇ ಬಸುರಿಯರಾಗಿದ್ದರು. ಅವರನ್ನು ಬೆಂಗಳೂರಿನ ಸ್ಟೇಟ್ ಹೋಂಗೆ ಕಳಿಸುವ ಮುನ್ನ ಮುಂಬೈ ಉಚ್ಚ ನ್ಯಾಯಾಲಯವು ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತೆಯರನ್ನೂ ಮಕ್ಕಳ ಮೇಲ್ವಿಚಾರಣೆಗೆ ನೇಮಿಸಬೇಕು ಎಂದು ಹೇಳಿತು. ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆಯ ಮೇಲ್ವಿಚಾರಣೆ ಕೆಲಸ ವಹಿಸಿಕೊಂಡ ಶಾಂತಮ್ಮ ಪ್ರತಿ ಶನಿವಾರ ಅಲ್ಲಿಗೆ ಹೋಗುತ್ತಿದ್ದರು. ತಿಂಡಿ, ಊಟ, ಹಣ್ಣುಹಂಪಲು, ಜೊತೆಗೆ ಸಮೃದ್ಧ ಪ್ರೀತಿಯನ್ನು ಹೊತ್ತು ತರುತ್ತಿದ್ದ ಅವರನ್ನು ಮಕ್ಕಳು ಅಮ್ಮ ಅಮ್ಮ ಎಂದೇ ಕರೆಯತೊಡಗಿದರು. ಅವರಲ್ಲಿ ಹೋದಾಗ ಮಕ್ಕಳು ಮೈಮೇಲೆ ಬೀಳುವುದೇನು, ಕಣ್ಣಾಮುಚ್ಚಾಲೆ ಆಡುವುದೇನು? ಮುತ್ತಿಕ್ಕುವುದೇನು? ಆ ಮಕ್ಕಳ ಪ್ರೀತಿಯೆದುರು ಅವರು ಕರಗಿ ಹೋದರು. ಮಕ್ಕಳಿಗೆ ಸಿಗದ ಸೌಲಭ್ಯಗಳಿಗಾಗಿ ಹೋರಾಡಿದರು. ತಮ್ಮ ತಾಯ್ತನವನ್ನೆಲ್ಲ ಮಕ್ಕಳಿಗೆ ಧಾರೆಯೆರೆದರು. ಬಾಣಂತನ, ಕೂಸಿನ ನಾಮಕರಣ ಎಲ್ಲವನ್ನೂ ಸಂಭ್ರಮದಿಂದ ನಡೆಸಿದರು

ನನಗೆ ಅಮ್ಮ ಬೇಡ ಎಂದ ಮಗಳು!

ಆ ವೇಳೆಗೆ ನ್ಯಾಯಾಲಯದಲ್ಲಿ ತನ್ನ ಕಸ್ಟೋಡಿಯನ್ ಯಾರಾಗಿರಬೇಕು ಎಂದು 15 ವರ್ಷ ವಯಸ್ಸಿನವಳಾದ ಮಗಳೇ ನಿರ್ಧರಿಸುವ ಕಾಲ ಬಂತು. ಅಂದು ನ್ಯಾಯಾಲಯದಲ್ಲಿ ಕಟಕಟೆಯಲ್ಲಿ ನಿಂತ ಮಗಳು ಅಮ್ಮನ ಕಡೆಗೂ ನೋಡದೇ `ಅಮ್ಮನ ಜೊತೆ ಹೋಗಲು ಇಷ್ಟವಿಲ್ಲ, ನನಗೆ ಅಮ್ಮ ಬೇಡ. ಅಪ್ಪನ ಜೊತೆಗೇ ಇರುವೆ’ ಎಂದು ಹೇಳಿಬಿಟ್ಟಳು.

ಹೆತ್ತ ಅಮ್ಮನನ್ನು ಮಗಳು ಬೇಡ ಎನ್ನುವುದೇ?! ಶಾಂತಮ್ಮ ತಮ್ಮ ಬದುಕಿನ ಅತಿ ಕಠೋರ ಶಾಕ್ ಎದುರಿಸಿದರು. ತನ್ನ ಹೋರಾಟ, ದುಡಿಮೆ ಎಲ್ಲ ವ್ಯರ್ಥವಾಯಿತೇ ಎಂಬ ಭಾವ ಸುಳಿದು ಹೋಯಿತು. ಆದರೆ ಅದನ್ನು ಅರಗಿಸಿಕೊಂಡ ಮರುಕ್ಷಣ ಮಿಂಚಿನಂಥ ನಿರ್ಧಾರವೊಂದು ಸುಳಿಯಿತು. `ಅಮ್ಮ ಬೇಡ ಎನ್ನುವ ಮಗಳಿಗಾಗಿ ತಾನೇಕೆ ಹೋರಾಡಬೇಕು? ಅಮ್ಮ ಬೇಕು ಎನ್ನುವ, ಅಮ್ಮನಿಲ್ಲದ, ತನ್ನಲ್ಲಿ ಅಮ್ಮನನ್ನು ಕಾಣುವ ಸಾವಿರಾರು ಮಕ್ಕಳಿರುವಾಗ ಅವರಿಗೆ ಅಮ್ಮನಾಗುತ್ತೇನೆ. ಹೆತ್ತ ಮಕ್ಕಳಷ್ಟೇ ಮಕ್ಕಳಲ್ಲ. ಇನ್ನು ನನ್ನ ಮಕ್ಕಳಿಗಾಗಿ ಅಳುವುದಿಲ್ಲ’ ಎಂದು ನಿಶ್ಚಯಿಸಿದರು. ಇದುವರೆಗೆ ಯಾವ ತಂದೆ ಆ ಮಗಳು ತನ್ನ ಮಗಳಲ್ಲ ಎಂದು ಅನುಮಾನಿಸುತ್ತಿದ್ದನೋ, ಈಗ ಅದೇ ಮಗಳ ಕಸ್ಟಡಿಯನ್ನು ತಾಯಿಗೆ ಕೊಡಲಾರೆ ಎಂದು ಸಾಧಿಸಿದ್ದ ಮತ್ತವಳನ್ನು ನಿಜವಾಗಿಯೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಶಾಂತಮ್ಮನವರಿಗೆ ಇದೂ ಒಂದು ತರಹದ ವಿಜಯವೇ ಅನಿಸಿ ಕೂಡಲೇ ವಿಚ್ಛೇದನ ಪಡೆದುಕೊಂಡರು.

ಬದುಕಿನ ಮತ್ತೊಂದು ಮುಖ ಅಲ್ಲಿ ತೆರೆದುಕೊಂಡಿತು..

ಸ್ಟೇಟ್ ಹೋಂನ ಮಕ್ಕಳು ಶಾಂತಮ್ಮ ಅವರ ತಾಯ್ತನವನ್ನು ಜಾಗೃತಗೊಳಿಸಿದ್ದರು. ಈಗದರ ವ್ಯಾಪ್ತಿ ವಿಸ್ತಾರಗೊಳ್ಳುತ್ತಾ ಹೋಯಿತು. ಅದಕ್ಕೆ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಕೆಲಸ ಕಾರ್ಯಗಳು ನೀರೆರೆದವು. ಕೋಲಾರದ ಹೊರಭಾಗದಲ್ಲಿರುವ ಅಂದ್ರ ಹಳ್ಳಿಯಲ್ಲಿ ಸಂಸ್ಥೆಯ ವತಿಯಿಂದ ಶುರುವಾದ ಕುಟೀರವು ಗತಿಯಿಲ್ಲ ಎಂದುಕೊಂಡು ಬಂದ, ದೌರ್ಜನ್ಯಕ್ಕೊಳಗಾದ, ಅಸಹಾಯಕರಾದ ಸಾವಿರಾರು ಹೆಣ್ಣುಮಕ್ಕಳಿಗೆ ಆಶ್ರಯತಾಣವಾಗಿ ನ್ಯಾಯದ ದಾರಿ ತೋರಿಸಿತು. ಹೆಣ್ಣು ಕಣ್ಣೀರುಗರೆಯುತ್ತ ಸುಮ್ಮನೇ ಕೂರದಂತೆ ತಡೆದು ಬದುಕುವ ಧೈರ್ಯವನ್ನು ತಂದುಕೊಟ್ಟಿತು. ಆ ಸಂಸ್ಥೆಯ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿ ಶಾಂತಮ್ಮ ಬೆಳೆದರು. ಶಾಂತಕ್ಕ, ಶಾಂತಾ, ಶಾಂತಾಬಾಯಿ, ಶಾಂತಮ್ಮ, ಶಾಂತಜ್ಜಿ ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಅವರಿಂದ ಮಮತೆ, ಧೈರ್ಯ, ವಿಶ್ವಾಸ, ಸಹಾಯಗಳನ್ನು ಸಾವಿರಾರು ಜೀವಗಳು ಪಡೆದವು.

ಬದುಕಿನ ಮತ್ತೊಂದು ಮುಖ ಅಲ್ಲಿ ತೆರೆದುಕೊಂಡಿತು. ಮನೆ ಬಿಟ್ಟು ಬರುವವರು ಎಲ್ಲವನ್ನು ಅಲ್ಲಿಯೇ ಬಿಟ್ಟು ಬಂದು ಯಾವುದೂ ದಾಖಲೆಯಿಲ್ಲದೇ ಪರದಾಡುತ್ತಿದ್ದರು. ಮದುವೆ, ಗಂಡನ ಮನೆಯ ವಾಸವೇ ಹೆಣ್ಣು ಬದುಕಿನ ಆತ್ಯಂತಿಕ ಗುರಿ; ಎಂದಿದ್ದರೂ ತಾವು ಮತ್ತೆ ಅಲ್ಲಿಗೆ ಹೋಗಬೇಕಾದವರೆಂಬ ಒತ್ತಡಕ್ಕೊಳಗಾಗುತ್ತಿದ್ದರು. ಹಾಗೆಂದು ಅವರಷ್ಟೇ ಅಲ್ಲ, ಕೌಟುಂಬಿಕ ನ್ಯಾಯಾಲಯ, ಮಹಿಳಾಪರ ಇಲಾಖೆ-ಸಂಸ್ಥೆ-ಸರ್ಕಾರಗಳೂ ನಂಬಿದ್ದವು. ಮನೆ ಬಿಟ್ಟು ಬಂದ ಹೆಣ್ಣುಮಕ್ಕಳ ಪ್ರಕರಣ ದಾಖಲಿಸಿ `ಗುರುತು ಪತ್ತೆ ಮಾಡಿ ಪಾಲಕರಿಗೆ ಒಪ್ಪಿಸಲಾಗಿದೆ’, `ಗುರುತು ಪತ್ತೆ ಮಾಡಿ ಗಂಡನಿಗೆ ಒಪ್ಪಿಸಲಾಗಿದೆ’, `ಗುರುತು ಪತ್ತೆ ಮಾಡಿ ಮಗನಿಗೆ ಒಪ್ಪಿಸಲಾಗಿದೆ’ ಎಂದು ಒಪ್ಪಿಸಿ ಬಿಡುತ್ತಿದ್ದರು. ಹೊಸಿಲು ದಾಟುವುದು ಹೆಣ್ಣಿಗೆ ಅತಿಕಷ್ಟದ ಕ್ಷಣ. ಆ ಸಮಯದ ಹೆಣ್ಣಿನ ಮನಃಕ್ಲೇಷ, ಪರಿಸ್ಥಿತಿಯನ್ನು ಅವಲೋಕಿಸದೇ ಮನೆಯ ಮರ್ಯಾದೆ ಕಾಪಾಡುವ ಸಲುವಾಗಿ ಮತ್ತೆ ಅವರನ್ನು ಅದೇ ಕೂಪಕ್ಕೆ ತಳ್ಳಿ `ಒಪ್ಪಿಸಿಬಿಡುವ’ ಕ್ರಮ ಸರಿಯಲ್ಲ ಎಂದು ಶಾಂತಮ್ಮ ಮತ್ತವರ ಸಹವರ್ತಿಗಳಿಗೆ ಅನಿಸುತ್ತಿತ್ತು. ಮನೆಯಿಂದ ಬಂದವಳಿಗೆ ಮರಳಿ ಹೋಗುವ ಇಷ್ಟವಿದೆಯೋ ಇಲ್ಲವೋ ಎಂದು ತಿಳಿದು ಹ್ಯಾಂಡ್‍ಓವರ್ ಮಾಡಬೇಕೆಂದು ಹೋರಾಡಿದರು.

ಅಂಜದೆ ಅಳುಕದೆ ಮುನ್ನಡೆದರು…

ಶಾಂತಮ್ಮ ಮತ್ತು ಸಂಗಾತಿಗಳು ತಮ್ಮ ಕೆಲಸದಲ್ಲಿ ಎದುರಿಸಿದ ಅಡೆತಡೆ ಒಂದೆರೆಡಲ್ಲ. ನೊಂದವರೂ ಸಹ ಇವರನ್ನು ಬಡಪೆಟ್ಟಿಗೆ ನಂಬಿಬಿಡಲಿಲ್ಲ. ಅಲ್ಲೂ ಅಗ್ನಿದಿವ್ಯಗಳ ಅಂಗೈಲಿ ಹಿಡಿದು ದಾಟಿದರು. ಗಂಡಹೆಂಡತಿಯರನ್ನು ಕೂಡಿಸುವ ಬದಲು ಹೆಂಡತಿ ಬೇರೆ ಇರಲು ಸಹಾಯ ಮಾಡುವ `ಮನೆಹಾಳಿ’ಯರೆಂದು ಕೆಲವರು ಜರೆದರು. ಹೀಗೊಂದು ಸಂಸ್ಥೆ, ಒಂದು ಮಹಿಳಾ ಗುಂಪು ಯಾರೂ ಕೇಳದ ತಮ್ಮನ್ನು ಬೇಷರತ್ತಾಗಿ ಬೆಂಬಲಿಸುತ್ತಿದೆ, ಸಹಾಯಕ್ಕೆ ಒದಗುತ್ತದೆ ಎನ್ನುವುದನ್ನು ಅರಗಿಸಿಕೊಳ್ಳಲಿಕ್ಕೇ ನೊಂದ ಮಹಿಳೆಯರಿಗೆ ಕಷ್ಟವಾಗುತ್ತಿತ್ತು. ಇವರ ಮೇಲೇ ಅನುಮಾನಗೊಂಡು ಹೇಳದೇ ಕೇಳದೇ ಹಿಂದಿರುಗಿ ಹೋಗಿ ಮತ್ತೆ ದೌರ್ಜನ್ಯಕ್ಕೊಳಗಾಗುವುದೂ ಇತ್ತು. ಅಪಾರ ತಾಳ್ಮೆಯಿಂದ, ದಿಟ್ಟತನದಿಂದ, ಆತ್ಮಸ್ಥೈರ್ಯದಿಂದ ಶಾಂತಮ್ಮ ಅಂಥದನ್ನೆಲ್ಲ ಎದುರಿಸಿದರು. ಅವರಿಗೆ ಉದ್ದಕ್ಕೂ ಜೊತೆ ನೀಡಿದ ಗೆಳತಿಯರು, ಸಂಘಸಂಸ್ಥೆಗಳ ಬೆಂಬಲದಿಂದ ಒಂದೇಸಮ ಮುನ್ನಡೆದರು. ಜೊತೆಗಾರಿಕೆಯೂ ಸರಳವಾಗಿರಲಿಲ್ಲ. ಎಲ್ಲ ಸಂಘಸಂಸ್ಥೆಗಳಲ್ಲಿರುವವರಿಗೂ, ಹೋರಾಟಗಾರರಿಗೂ ಆವಾಗೀವಾಗ ಹೆಡೆಯೆತ್ತುವ ಅಹಮು ನೇರವಾಗಿರುವ ಶಾಂತಮ್ಮನಂಥವರನ್ನು ಬಿಕ್ಕಟ್ಟಿಗೀಡುಮಾಡುತ್ತಿತ್ತು. ಆದರೆ ಯಾವುದಕ್ಕೂ ಅಂಜದೇ, ಅಳುಕದೇ ತಮ್ಮ ಗುರಿಯತ್ತ  ಪ್ರಾಮಾಣಿಕವಾಗಿ ಒಂದೇಸಮ ನಡೆದರು.

ಹೀಗೆ ಒಳಗೂ, ಹೊರಗೂ ಕನ್ನಡಿ ಹಿಡಿದು ಕಪ್ಪುಬಿಳಿ ಯಾವುದೆಂದು ಗುರುತಿಸುತ್ತ, ದಾರಿಯನ್ನು ನೇರ್ಪುಗೊಳಿಸಿಕೊಳ್ಳುತ್ತ 71ರ ಹರೆಯ ತಲುಪಿರುವ ಶಾಂತಮ್ಮ ಈಗ ಕೋಲಾರದಲ್ಲಿ ನೆಲೆಸಿದ್ದಾರೆ. ಸಂಘಟನೆ, ಹೋರಾಟದ ನಡುವೆ ತಮ್ಮೊಡನಿದ್ದ ಇಬ್ಬರು ಗಂಡುಮಕ್ಕಳನ್ನು ಓದಿಸಿದ್ದಾರೆ. ಉದ್ಯೋಗ ಹಿಡಿದು ನೆಲೆಯಾದ ಮೇಲೆ ಇಬ್ಬರಿಗೂ ಮದುವೆ ಮಾಡಿದ್ದಾರೆ.

ಅಂದುಕೊಂಡ ಹಾಗೆ ಬದುಕುತ್ತಿರುವ ಶಾಂತಮ್ಮ…

ಅವರ 60ನೆಯ ವಯಸ್ಸಿನಲ್ಲಿ ಸೊಸೆಯಂದಿರು ಪ್ರೀತಿಯ ಒತ್ತಾಯ ತಂದರೂ ಕೇಳದೇ ಒಬ್ಬರೇ ಬದುಕುವ ನಿರ್ಧಾರ ಮಾಡಿದರು. ಮನುಧರ್ಮಶಾಸ್ತ್ರ ಹೇಳಿದಂತೆ ಮುಪ್ಪಿನಲ್ಲಿ ಮಗಂದಿರ ಆಸರೆಯಲ್ಲಿ ಬದುಕ ಬೇಕೆನ್ನುವುದನ್ನು ಮುರಿಯ ಬಯಸಿ ಬೇರೆ ಮನೆ ಮಾಡಿದರು. ತಮ್ಮ ಮನೆಯಲ್ಲಿ ತಾವೇ ಆಗಿ ಒಬ್ಬರೇ ಇರತೊಡಗಿದರು. `ಮನೆಗೆಲಸಕ್ಕೆ ಇದ್ದರೆ ಅವರು ಅದು ಮಾಡಲಿಲ್ಲ, ಇದು ಮಾಡಲಿಲ್ಲ, ಲೇಟ್ ಬಂದರು, ರಜೆ ತಗೊಂಡರು ಮುಂತಾಗಿ ಗೊಣಗುತ್ತೇವೆ. ಒಬ್ಬರೇ ಇದ್ದರೆ? ಏಳಲು ಆದರೆ ಎದ್ದು ಕಾಫಿ ಮಾಡಿ ಕುಡಿಯುವುದು, ಅಡುಗೆ ಮಾಡುವುದು. ಇಲ್ಲದಿದ್ದರೆ ಗಾಡಿಯಲ್ಲಿ ಬರುವ ಇಡ್ಲಿಯೋ, ಬನ್ನೋ ತಿನ್ನುವುದು’ ಎಂದು ತಮ್ಮ ಎಲ್ಲ ಅವಶ್ಯಕತೆಗಳನ್ನು ಅತಿ ಮಿತಗೊಳಿಸಿಕೊಂಡು ಬದುಕತೊಡಗಿದರು. ಕೋಲಾರ ಜಿಲ್ಲಾ ಕಾನೂನು ಸಲಹಾ ಪ್ರಾಧಿಕಾರದಲ್ಲಿ ಪಾರಾಲೀಗಲ್ ವಾಲಂಟಿಯರ್ ಆಗಿ, ನೊಂದ ಮಹಿಳೆಯರ ಆಸರೆಯಾಗಿ ಮಾಡಬೇಕಾದ ಕೆಲಸ ಕೈತುಂಬ ಇರುವುದರಿಂದ ಏಕಾಂಗಿತನ, ಭಯದ ಪ್ರಶ್ನೆಯೇ ಅವರಿಗಿಲ್ಲ. ಇದುವರೆಗೆ 10 ಶಸ್ತ್ರಚಿಕಿತ್ಸೆಗಳನ್ನು ಕಂಡ ಅವರು ಆತ್ಮವಿಶ್ವಾಸ, ಧೈರ್ಯದಿಂದ ಸ್ವಾವಲಂಬಿಯಾಗಿ, ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಮಾಡದ ಕೆಲಸಗಳು ಇನ್ನೂ ಎಷ್ಟು ಉಳಿದಿವೆಯಲ್ಲ ಎಂಬ ಅತೃಪ್ತಿ ಸದಾ ಕೊರೆಯುತ್ತಿದ್ದರೂ ಅಂದುಕೊಂಡ ಹಾಗೆ ಬದುಕುತ್ತಿರುವ ಬಗೆಗೆ ಅವರಿಗೆ ತೃಪ್ತಿಯಿದೆ.

ಸಹಾಯಕ್ಕೆ ಧಾವಿಸುವವರಲ್ಲಿ ಶಾಂತಮ್ಮನೇ ಮೊದಲಿಗರು…

ಈಗ ಕೋಲಾರದ ಆಸುಪಾಸಿನ ಯಾವುದೇ ಹೆಣ್ಣುಜೀವ ನೊಂದೆ ಎಂದುಕೊಂಡರೆ ನೆನಪಿಗೆ ಬರುವ ಹೆಸರುಗಳಲ್ಲಿ, ಸಹಾಯಕ್ಕೆ ಧಾವಿಸುವವರಲ್ಲಿ ಶಾಂತಮ್ಮ ಮೊದಲಿಗರಾಗಿದ್ದಾರೆ. ದಿಕ್ಕಿಲ್ಲದ ಹೆಣ್ಣುಗಳಿಗೆ ಸಾಯುವುದೊಂದೇ ದಾರಿ ಅಲ್ಲ, ಬೇರೆ ದಾರಿಗಳೂ ಇವೆ ಎಂದು ಸ್ವಾನುಭವದ ಮಾತುಗಳಿಂದ ತಿಳಿಸಿ ಹೇಳುವ ಅವರು ಹೆಣಿಗೆ, ಕಸೂತಿ, ಹೊಲಿಗೆ, ಕುಂಬಾರಿಕೆ, ಮಡಕೆ ಮೇಲೆ ಚಿತ್ರ ಬರೆಯುವುದೇ ಮೊದಲಾದ ಕೈ ಕೆಲಸ ಕಲಿಸಿ ಸ್ವಾವಲಂಬಿ ಬದುಕನ್ನು ಪ್ರೋತ್ಸಾಹಿಸುತ್ತಾರೆ. `ಮನೆಬಿಟ್ಟು ಬರುವ ಮುನ್ನ ಯೋಚಿಸಿ ಬನ್ನಿ; ಬರಿಗೈಯಲ್ಲಿ ಬರದೇ ನಿಮ್ಮ ಎಲ್ಲ ದಾಖಲೆಗಳನ್ನು ಎತ್ತಿಕೊಂಡು ಬನ್ನಿ; ಮೊದಲು ಆರ್ಥಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿಗತ ಸ್ವಾತಂತ್ರ್ಯ ಪಡೆದುಕೊಳ್ಳಿ. ಬಳಿಕ ಉಳಿದ ಬಿಡುಗಡೆಯ ದಾರಿಗಳು ತಾವೇ ತೆಗೆದುಕೊಳ್ಳುತ್ತವೆ’ ಎಂದು ಹೆಣ್ಣುಜೀವಗಳಿಗೆ ಸಲಹೆ ಕೊಡುತ್ತಾರೆ. ಜೀವನ ಶಾಲೆಯ ಪಾಠಗಳನ್ನು ಸಂಘಸಂಸ್ಥೆಗಳ ಜೊತೆಗೆ, ಹಂಪಿ ಕನ್ನಡ ವಿವಿ, ವಿಜಯಪುರ ಮಹಿಳಾ ವಿವಿ ಮೊದಲಾದೆಡೆ ಹಂಚಿಕೊಂಡಿದ್ದಾರೆ.

`ನಮ್ಮ ಅಕ್ಕ, ನಮ್ಮ ಹಿರಿಮೆ’

ಕೋಲಾರಮ್ಮನ ಮಗಳು, ಕೋಲಾರದ ಅಮ್ಮ ಶಾಂತಮ್ಮ ಸಹಾಯ ಕೇಳಿ ಬರುವವರಿಗೆಲ್ಲ ಆಸರೆಯಾಗಿದ್ದಾರೆ. ತಾಯ್ತನದ ಜೊತೆಗೆ ದಿಟ್ಟತನ, ಸ್ವಾವಲಂಬನೆ, ಆತ್ಮಸ್ಥೈರ್ಯವನ್ನು ಹಂಚುತ್ತ ಕ್ರಿಯಾಶೀಲರಾಗಿದ್ದಾರೆ. ಪ್ರಶಸ್ತಿಗಳನ್ನು ಅವರು ಬಯಸದಿದ್ದರೂ ಪ್ರಶಸ್ತಿಗಳೇ ಅವರನ್ನು ಅರಸಿ ಬರುವಂತೆ ಬದುಕಿದ್ದಾರೆ. ಹೋರಾಟದ ಕೆಚ್ಚನ್ನು, ಉದಾತ್ತ ಗುಣಗಳನ್ನು, ಸಾಮೂಹಿಕತೆಯ ಸ್ಫೂರ್ತಿಯನ್ನು ಮೈಗೂಡಿಸಿಕೊಂಡ ಇಂತಹ ದಿಟ್ಟ ಮಹಿಳೆ `ನಮ್ಮ ಅಕ್ಕ, ನಮ್ಮ ಹಿರಿಮೆ’ಯಾಗಿದ್ದಾರೆ.

ಡಾ. ಎಚ್‌ ಎಸ್‌ ಅನುಪಮಾ

ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಲೇಖಕಿ, ಕವಯಿತ್ರಿಯಾಗಿರುವಂತಯೇ ಸಾಮಾಜಿಕ ಹೋರಾಟಗಾರ್ತಿಯೂ ಆಗಿದ್ದಾರೆ..

ಮಕ್ಕಳೆಷ್ಟು? ನನ್ನ ಆಯ್ಕೆ
ವಿಶ್ವ ಗರ್ಭನಿರೋಧಕ ಜಾಗೃತಿ ದಿನ- ಸೆ. ೨೬

ಮೂಗ ಕೋಲೆ ಬಸವನಂತೆ ಬಲಿ ಪಶುವಾಗಿರುತ್ತಿದ್ದ ಹೆಣ್ಣು ಈಗೊಂದು ಶತಮಾನದಿಂದೀಚೆಗೆ ಪ್ರಜನನ ಹಕ್ಕುಗಳ ಬಗ್ಗೆ ಎಚ್ಚೆತ್ತಿದ್ದಾಳೆ. ಆದರೆ ಆ ಅರಿವು-ಹಕ್ಕು ಸಾಮಾನ್ಯ ಮಹಿಳೆಯರ ಪಾಲಿಗಿನ್ನೂ ದೂರವಾಗಿಯೇ ಇದೆ ಎನ್ನುತ್ತಾರೆ ವೈದ್ಯೆ, ಲೇಖಕಿ ಎಚ್‌ ಎಸ್‌ ಅನುಪಮಾ.

ಕೊಂಕುಳಲ್ಲಿ ಒಂದೂವರೆ ವರ್ಷದ ಮಗುವನ್ನು ಚಚ್ಚಿಕೊಂಡು ಒಳ ಬಂದವಳೇ ಉಸ್ಸಪ್ಪ ಎಂದು ಹಣೆಯ ಬೆವರನ್ನು ಸೆರಗಿನಿಂದ ಒರೆಸಿಕೊಳ್ಳುತ್ತ ಧಪ್ಪನೆ ಖುರ್ಚಿಯ ಮೇಲೆ ಕುಳಿತಳು ಮಾಲಕ್ಷ್ಮಿ. ಅವಳ ಹಿಂದೇ ಸೇರು, ಪಾವು, ಚಟಾಕುಗಳಂತೆ ಸರಸರ ಅವಳ ಹಿರಿಯ ಮೂರು ಮಕ್ಕಳು ಒಳ ಬಂದವು. ಆರು ವರ್ಷಕ್ಕೆ ನಾಲ್ಕು ಮಕ್ಕಳನ್ನು ಹೆತ್ತ ಅವಳನ್ನು ನಾನು `ನೀನು ಮಾಲಕ್ಷ್ಮಿ ಅಲ್ಲ, ಮಾತಾಯಿ’ ಎಂದು ತಮಾಷೆ ಮಾಡುವುದುಂಟು. ಮೂರನೆಯ ಮಗು ಬಸ್ಸಿಳಿದು ಬರುತ್ತಾ ಬಿದ್ದು ಕೈಕಾಲೆಲ್ಲ ತರಚಿಕೊಂಡು ಅಳುತ್ತಿತ್ತು. ಅದರ ಮೂಗು ಕಣ್ಣನ್ನೆಲ್ಲ ಒರೆಸಿ ಒಂದು ಸಲ ಗದರಿ ಕುಳಿತಳು. `ಜೊತೆಯಲ್ಲಿ ಯಾರೂ ಬರಲಿಲ್ವಾ?’ ಎಂದು ನಾನು ಕೇಳಿದ್ದೇ ಅವಳ ಕಣ್ಣುಗಳು ಕೊಳಗಳಾದವು. ಅವರು ಬ್ಯಾಡಂದ್ರೂ ತಾಯಿ ಮನಿಗೆ ಹೋಗಿದ್ದೆ ಅಂತ ಸಿಟ್ಟುಮಾಡ್ಕಂಡು `ಈಗ ನೀನೊಬ್ಳೇ ಬಾ. ಮತ್ತೆ ಮಕ್ಕಳಿಗೇನಾರೂ ಸೀಕು ಆಗಿದ್ರೆ ಮದ್ದು ಮಾಡ್ಕಂಡೇ ಬಾ, ನನಗ್ಗೊತ್ತಿಲ್ಲ’ ಅಂದ್ರು ಇವರು. ಈಗ ಈ ಮೂರು ಮಕ್ಕಳನ್ನೂ ಮೂರು ಮೈಲು ದೂರ ನಡೆಸಿ ಊರು ಮುಟ್ಟುವುದು ಹ್ಯಾಗೋ ಏನೋ’ ಎನ್ನುತ್ತ ಮತ್ತೆ ಬಿಕ್ಕಿದಳು. ಮತ್ತೆ ಏನೂ ಮಾತನಾಡದೇ ಬ್ಲೌಸಿನೊಳಗೆ ಕೈ ಹಾಕಿ ಪುಟ್ಟ ಗಂಟು ಹೊರತೆಗೆದವಳು ಮೆಲ್ಲಗೆ ನನ್ನೆದುರು ತೂರಿದಳು.

`ಎಂತ ಮಾರಾಯ್ತಿ? ಮದ್ದು ಕೊಡಲಿಕ್ಕೆ ಮೊದಲೇ ದುಡ್ಡು ಕೊಡ್ತಿದೀಯಲೆ’ ಎಂಬ ನನ್ನ ಮಾತಿಗೆ ಒಮ್ಮೆ ಹೊರಗೆ ಇಣುಕಿ ನೋಡಿ ಕಣ್ಣೊರೆಸಿಕೊಂಡವಳು ಶುರು ಮಾಡಿದಳು. `ಅಮಾ, ನಾನೀಗ ಮುಟ್ಟಾಗಿ ಎರಡು ತಿಂಗಳಾತು. ಈ ನಾಕನೇ ಹುಡುಗಿಯನ್ನು ಹೆತ್ತಾಗಲಾದರೂ ಆಪರೇಶನ್ ಮಾಡಿಸ್ಕಂತೆ ಎಂದು ಎಷ್ಟು ಹೇಳಿದ್ನೋ ಏನೋ. ಅವ್ರು ಕೇಳಲಿಲ್ಲ. ಈಗ ಮುಟ್ಟು ನಿಂತಿದೆ ಅಂತ ತಿಳಿದಿದ್ದೇ ಎಲ್ಲೆಲ್ಲೋ ಹೋಗಿ ಪ್ರಸಾದ ಕೇಳಿ, ಜಾತಕ ತೋರಿಸ್ಕಂಡು ಬಂದಿದಾರೆ. ಈ ಸಲ ಹುಟ್ಟದು ಗಂಡೇ ಅಂತಾರೆ. ಆದ್ರೆ ನಾನು ನಂ ತಾಯಿ ಮನೆ ಚೌಡಿ ಹತ್ರ ಕೇಳ್ದಾಗ ಅದು ಈ ಸಲ ಹೆಣ್ಣೇ ಆಗ್ತದೆ ಅಂತ ಹೇಳ್ಬಿಟ್ಟದೆ. ನನಕೈಲಿ ಮತ್ತೆಮತ್ತೆ ಹೆಣ್ಣು ಹೆತ್ತು, ಆ ಅಬ್ಬೆಮಗನ ಹತ್ರ ಪಿರಿಪಿರಿ ಬೈಸಿಕೊಳ್ಳೋಕೆ ಸಾದ್ದಿಲ್ಲೆ ಅಮಾ. ಬರೀ ಹೆತ್ತು ಹಾಕಿರೆ ಆಯ್ತಾ? ಆ ಮಕ್ಳ ದೇಖರೇಖೆ ನೋಡಬ್ಯಾಡ್ವಾ? ಈ ಗಣಸ್ರಿಗೆ ಅದೆಂತ ತಿಳೀತಿಲ್ಲೆ. ನಾನು ದುಡ್ಕಬಂದು ಹಾಕ್ತೆ, ನಿಂಗೆ ಮಕ್ಳ ಸಾಕುಕೇನ್ ಕಷ್ಟ ಅಂತ ಕೇಳ್ತ್ರು ಅಮಾ.’

`ಓಹ್. ಹಾಗಾದರೆ ಮತ್ತೊಂದು ಬಾಣಂತನಕ್ಕೆ ತಯಾರಿನಾ?’

`ಎಂತ ಬಾಣಂತನ ಅಮಾ. ಆ ಸಲ ನೋಡಿದ್ರಲೆ ನೀವು, ಹದಿನೈದು ದಿನ ಕಳೆಯದರಾಗೆ ಎದ್ದು ಎಲ್ಲ ಕೆಲ್ಸ ಶುರು ಮಾಡ್ಬೇಕು. ಅದಿರ್ಲಿ, ಇನ್ನು ಎರಡು ಮೂರು ದಿನದಾಗೆ ಇವ್ರು ನನ್ನ ಕರ್ಕಬತ್ತಾರೆ. ಆಗ ನೀವು ಈ ಸಲದ್ದೂ ಹೆಣ್ಣೆಯಾ ಅಂತೇಳಿ ಸ್ಕ್ಯಾನ್ ಮಾಡಿ ಹೇಳಿಬಿಡಿ, ಆಗ ತೆಗೆಸುಕೆ ಒಪ್ತಾರೆ.’

`ಆದ್ರೆ ಹಂಗೆ ಹೇಳಿದ್ರೆ ನನ್ನ ಹಿಡ್ದು ಜೈಲಿಗೆ ಹಾಕ್ತಾರೆ ಅಷ್ಟೇ. ಅಲ್ಲದೇ ಇಷ್ಟು ಬೇಗ ಅದು ತಿಳಿಯುದೇ ಇಲ್ಲ. ಅದಕ್ಕೆ ಏಳು ತಿಂಗಳ ಮೇಲೆ ಆಗ್ಬೇಕು’, ಆತ್ಮ ರಕ್ಷಣೆಗೆ ಸುಳ್ಳೊಂದನ್ನು ಹೇಳಿದೆ.

`ಹಾಗಾದ್ರೆ ಮತ್ತೇನಾರೂ ಸೀಕು ಸಂಕ್ಟದ ವಿಷ್ಯ ಹೇಳಿ. ಒಟ್ಟೂ ನನಗೀ ಬಸುರು ಬ್ಯಾಡ ಅಷ್ಟೇ. ಈ ದುಡ್ನ ಇಟ್ಕಳಿ. ನಮಣ್ಣ ಕೊಟ್ಟಿದ್ದು, ನಂಗೆ ಬೇಕಾದಾಗ ಇಸ್ಕಂತೆ. ಇವ್ರತ್ರ ತಕಹೋಗಿ ಕೊಟ್ರೆ ಎರಡೇ ದಿನಕ್ಕೆ ಅದು ಕಾಣೆಯಾಗೋಗುತ್ತೆ. ಮತ್ತೆ ನಾನು ಇಲ್ಲಿ ಬಂದ ವಿಷ್ಯ ಅವ್ರಿಗೂ ನಮತ್ತೆ ಮಾವಂಗು ಹೇಳ್ಬೇಡಿ. ಇದು ನಿಮ್ಮಲ್ಲೇ ಇರ್ಲಿ.’

ಕುಟುಂಬದ ಗಾತ್ರ ಎಷ್ಟಿರಬೇಕೆಂದು ನಿರ್ಧರಿಸುವಲ್ಲಿ ಮೊದಲಿನಿಂದ ಮಹಿಳೆಗೆ ಎರಡನೇ ಅಥವಾ ಮೂರನೇ ಸ್ಥಾನ. ಗಂಡ, ಅವನ ಹೆತ್ತವರು ಅವಳಿಗೆ ಎಷ್ಟು ಮಕ್ಕಳು ಬೇಕೆಂದು ನಿರ್ಧರಿಸುವವರು. ಹೆರುವವಳು ಅವಳೇ ಆಗಿದ್ದರೂ ಹೆರುವಾಗಿನ ಎಲ್ಲ ದೈಹಿಕ, ಮಾನಸಿಕ ಕಾಂಪ್ಲಿಕೇಷನ್ ಮತ್ತು ಒತ್ತಡಗಳಿಗೆ ಅವಳೇ ಈಡಾಗುವುದಾದರೂ ಎಷ್ಟು ಹೆರಬೇಕು, ಎಷ್ಟು ಸಾಕು ಎಂದು ನಿರ್ಧರಿಸುವಲ್ಲಿ ಅವಳ ಪಾತ್ರ ಏನೇನೂ ಇರಲಿಲ್ಲ. ಇದು ಈಗಲೂ ಮುಂದುವರೆದುಕೊಂಡು ಬರುತ್ತಿರುವ ಚಾರಿತ್ರಿಕ ಅನ್ಯಾಯ.

ಪಿತೃಪ್ರಧಾನ, ಸನಾತನ, ಅನಕ್ಷರಸ್ಥ ಭಾರತೀಯ ಗ್ರಾಮೀಣ ಸಮಾಜದಲ್ಲಷ್ಟೇ ಈ ಪರಿಸ್ಥಿತಿ ಎಂದು ತಿಳಿದರೆ ಅದು ತಪ್ಪು. ಧರ್ಮಶಾಸ್ತ್ರವನ್ನು ಮಿದುಳಿನಿಂದಷ್ಟೇ ಓದಿದರೆ, ಡಿಕ್ಷನರಿ ಇಟ್ಟು ಅರ್ಥೈಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಕ್ರೈಸ್ತ, ಇಸ್ಲಾಂ ಧರ್ಮಗಳಲ್ಲೂ ಉದಾಹರಣೆಗಳು ಸಿಗುತ್ತವೆ. ಭ್ರೂಣಹತ್ಯೆ ಮಾನವ ಹತ್ಯೆಗೆ ಸಮ ಎಂದು ಮಾನವಿಕ ನೆಲೆಯಿಂದ ಹೇಳಿರುವುದನ್ನೇ ಅಕ್ಷರಶಃ ಗರ್ಭಪಾತ ನಿಷೇಧ ಎಂದು ಕಟ್ಟಳೆ ಗೊಳಿಸಿ ಎಷ್ಟೋ ಹೆಣ್ಣುಮಕ್ಕಳ ಸಾವು ಸಂಭವಿಸುತ್ತಿದೆ. ಹೆಣ್ಣಿನ ದೇಹ ಒಂದು ರಣಾಂಗಣ. ಅಲ್ಲಿ ಧರ್ಮ-ರಾಜಕೀಯ-ಪುರುಷ ಪ್ರಾಧಾನ್ಯ-ಸಮಾಜದ ಎಲ್ಲ ಪಟ್ಟುಗಳನ್ನೂ ಪ್ರಯೋಗಿಸಲಾಗುತ್ತದೆ. ಧರ್ಮಗಳು ಸಮಾಜ ಶಾಸ್ತ್ರೀಯವಾಗಿ ಮತ್ತು ಜೀವ ಶಾಸ್ತ್ರೀಯವಾಗಿ ಹೇಗೆ ವರ್ತಿಸುತ್ತವೆ ಎನ್ನುವುದನ್ನು ನೋಡಿದರೆ ಲಿಂಗತಾರತಮ್ಯ ಅರ್ಥವಾಗುತ್ತದೆ. ಹೆಚ್ಚು ಕಡಿಮೆ ಎಲ್ಲ ಧರ್ಮಗಳು ಹೆಣ್ಣಿಗೆ ಅವಳ ದೇಹದ ಹಕ್ಕನ್ನು ನೀಡುವುದಿಲ್ಲ. ಎಷ್ಟು ಮಕ್ಕಳು ಯಾವಾಗ ಬೇಕು ಎಂದು ನಿರ್ಧರಿಸುವಲ್ಲಿ ಅವಳ ಸ್ಥಾನ ಕೊನೆಯದು. ಲೈಂಗಿಕತೆ, ತಾಯ್ತನ ಮತ್ತು ಪ್ರಜನನ ಹಕ್ಕುಗಳ ಮೇಲೆ ಪುರುಷ ಮೊಹರು ಬೀಗ ಹಾಕಿ ಕುಳಿತಿರುತ್ತದೆ. ಆದರೆ ಸಮಾಜ ಶಾಸ್ತ್ರೀಯವಾಗಿ ಧರ್ಮಗಳು ಭಿನ್ನವಾಗಿ ವರ್ತಿಸುತ್ತವೆ. ಜಗತ್ತಿನ ಅತ್ಯಂತ ಮಹಿಳಾ ಸ್ನೇಹಿ ಧರ್ಮ ಇಸ್ಲಾಂ ಮಹಿಳೆಯ ಶಿಕ್ಷಣ, ವಿಚ್ಛೇದನೆ, ಮರುವಿವಾಹ, ವಿಧವಾ ವಿವಾಹ, ಜೀವನಾಂಶದಂತಹ ವಿಷಯಗಳ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಿದರೂ ಅವುಗಳನ್ನು ತಿರುಚಿ ಅರ್ಥೈಸಿ ಪರದೆ ತೊಡಿಸಲಾಯಿತು. ಅಲ್ಲೂ ಪ್ರಜನನ ಹಕ್ಕುಗಳನ್ನು ನೀಡಲಿಲ್ಲ. ಆದರೆ ಬಹುತೇಕ ಎಲ್ಲ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ತಾಯಿ ಜೀವಕ್ಕೆ ಅಪಾಯ ಒದಗಿಸುವಂತಿದ್ದರೆ ಗರ್ಭಪಾತವನ್ನು ಸಮ್ಮತಿಸಲಾಗುತ್ತದೆ.

ಸಿರಿವಂತ, ಸುಶಿಕ್ಷಿತ, ಕಾನೂನು ಸಾಕ್ಷರತೆಯ ಅಮೆರಿಕ ಸಮಾಜದಲ್ಲೂ `ರಿಪ್ರೊಡಕ್ಟಿವ್ ರೈಟ್ಸ್’ಗಾಗಿ ದೊಡ್ಡ ಹೋರಾಟವೇ ನಡೆದಿದೆ. ಕ್ರೈಸ್ತ ಧರ್ಮದಲ್ಲಿ ಭ್ರೂಣಹತ್ಯೆ ಪಾಪವೆಂಬ ಕಾರಣವೊಡ್ಡಿ ತೀರಾ ಇತ್ತೀಚಿನವರೆಗೂ ಗರ್ಭಪಾತಕ್ಕೆ ಕಾನೂನು ಬದ್ಧ ಅವಕಾಶಗಳಿರಲಿಲ್ಲ. ಆದರೆ ಅದೇ ವೇಳೆಗೆ ಕರಿಯ ಗುಲಾಮಿ ಹೆಂಗಸರು, ಪೋರ್ಟರಿಕನ್ ಮತ್ತು ಚಿಕನಾ ಮಹಿಳೆಯರು ಮಕ್ಕಳನ್ನು ಹೆತ್ತು ದೇಶದ ಸಂಪನ್ಮೂಲ ಕಬಳಿಸುತ್ತಿದ್ದಾರೆಂದೂ, ನಗರ ವಾಸಿಗಳಾದ ಬಿಳಿಯ ಮಹಿಳೆಯರು ಮಕ್ಕಳನ್ನು ಕಡಿಮೆ ಹೆತ್ತು `ಸಂತತಿ ಆತ್ಮಹತ್ಯೆ’ಗೆ ಕಾರಣವಾಗುತ್ತಿದ್ದಾರೆಂದೂ ದೂರಲಾಗಿತ್ತು. ಯೂಜೆನಿಕ್ಸ್ ಥಿಯರಿಯನ್ನು ಆಧಾರವಾಗಿಟ್ಟುಕೊಂಡು ಶ್ರೇಷ್ಠ ತಳಿಯಾದ ಬಿಳಿಯರು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕೆಂದು ಹೇಳಲಾಗುತ್ತಿತ್ತು. ಇಂಥ ಮನಸ್ಥಿತಿಯ ಸಮಾಜದ ನಡುವೆ ಪ್ರಜನನ ಹಕ್ಕುಗಳಿಗಾಗಿ ಅಲ್ಲಿ ದೊಡ್ಡ ಹೋರಾಟವೇ ನಡೆಯಿತು. ಧರ್ಮದ ನೆಪವೊಡ್ಡಿ ಹೆಣ್ಣನ್ನು ಹೆರುವ ಯಂತ್ರವಾಗಿಸುವುದರಲ್ಲಿ ಇಸ್ಲಾಂ ದೇಶಗಳು ಹಿಂದೆ ಬಿದ್ದಿಲ್ಲ.

ಹಾಗೆ ನೋಡಿದರೆ ತೃತೀಯ ಜಗತ್ತಿನ ರಾಷ್ಟ್ರಗಳೇ ಮಹಿಳೆಗೆ ಸಮಾಜ ಕಲ್ಯಾಣ ಕಾರ್ಯಕ್ರಮದ ನೆಪದಲ್ಲಿ ಶಿಕ್ಷಣ, ರಾಜಕೀಯ, ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಮಾನತೆಯನ್ನೂ, ಪ್ರಾತಿನಿಧ್ಯವನ್ನೂ ಒದಗಿಸಿವೆ ಎನ್ನಬಹುದು. ಜಗತ್ತಿನ ಬಹಳಷ್ಟು ದೇಶಗಳಲ್ಲಿ ಧರ್ಮವನ್ನು ಆಧಾರವಾಗಿಟ್ಟುಕೊಂಡು ಈಗಲೂ ಗರ್ಭಪಾತ ಕಾನೂನು ವಿರೋಧಿಯಾಗಿದೆ. ಆದರೆ ಕಡಿಮೆ ಮರಣ ಪ್ರಮಾಣ ಮತ್ತು ಹೆಚ್ಚಿದ ಜನನ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಯಿತು. ಬಡತನ, ಅನಕ್ಷರತೆ, ನಿರುದ್ಯೋಗಗಳಂತಹ ಸಾಮಾಜಿಕ ಸಮಸ್ಯೆಗಳನ್ನು ಎದುರಿಟ್ಟುಕೊಂಡು ಭಾರತ ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಸ್ವಾತಂತ್ರ್ಯ ಬರುವ ಮೊದಲೇ ಅಳವಡಿಸಿಕೊಂಡಿತು. ಮೈಸೂರು 1921ರ ಸುಮಾರಿಗೆ ಕುಟುಂಬ ಯೋಜನೆ ಅಳವಡಿಸಿಕೊಂಡಿದ್ದು ವಿಶ್ವದಲ್ಲೇ ಕುಟುಂಬ ಯೋಜನೆಯನ್ನು ನೀತಿಯಾಗಿ ಅಳವಡಿಸಿ ಅನುಷ್ಠಾನಗೊಳಿಸಿದ ಪ್ರಪ್ರಥಮ ರಾಜ್ಯವಾಗಿದೆ. ಅದರ ಭಾಗವಾಗಿ ವೈದ್ಯಕೀಯ ಗರ್ಭಪಾತಕ್ಕೆ ದಶಕಗಳ ಹಿಂದೆಯೇ ಅನುಮತಿ ನೀಡಲಾಗಿದೆ.

ಆದರೆ ಇಲ್ಲೂ ಮತ್ತೊಂದು ಲಿಂಗ ರಾಜಕಾರಣವಿದೆ. ಹೆರಲು, ಹೊರಲು ಹೇಗೆ ಹೆಣ್ಣು ತನ್ನ ದೇಹವನ್ನೇ ಸಂಪೂರ್ಣ ಒಡ್ಡಿ ಕೊಳ್ಳಬೇಕೋ ಹಾಗೆ ಕುಟುಂಬ ಯೋಜನೆಯೂ ಸಂಪೂರ್ಣ ಅವಳದೇ ಜವಾಬ್ದಾರಿಯಾಗಿದೆ. ಹಾಗೆ ನೋಡಿದರೆ ಮಹಿಳೆಯರಿಗೆ ಮಾಡುವ ಕುಟುಂಬ ಯೋಜನೆ ಆಪರೇಶನ್ನಿಗಿಂತ ಗಂಡಸರಿಗೆ ಮಾಡುವ ವ್ಯಾಸೆಕ್ಟಮಿ ಅತ್ಯಂತ ಸರಳ, ಸುಲಭ. ಮಹಿಳೆಯರು ಬಳಸುವ ಕುಟುಂಬ ಯೋಜನಾ ವಿಧಾನಗಳ ಅಡ್ಡ ಪರಿಣಾಮಗಳಿಗಿಂತ ಗಂಡಸರು ಕಾಂಡೋಮ್ ಬಳಸುವುದು ಸಂಪೂರ್ಣ ನಿರಪಾಯಕಾರಿ ಮತ್ತು ಸುಲಭ. ಆದರೆ ಬಹುತೇಕ ಪುರುಷ ವೃಂದವು ದೈಹಿಕವಾಗಿ ಸುಖ ಅನುಭವಿಸುವುದಷ್ಟೇ ತಮ್ಮ ಹಕ್ಕು; ಕುಟುಂಬ ಯೋಜನೆ, ಮಣ್ಣುಮಸಿಗಳೆಲ್ಲ ಹೆಂಗಸರ ಹಣೆಬರಹ ಎಂದು ಭಾವಿಸಿದ್ದಾರೆ. ಇವತ್ತಿಗೂ ಟ್ಯುಬೆಕ್ಟಮಿ-ಲ್ಯಾಪರೋಸ್ಕೋಪಿ ಕ್ಯಾಂಪುಗಳು ಮಹಿಳೆಯರಿಗಾಗಿ ನಡೆಯುತ್ತಿವೆ. ವ್ಯಾಸೆಕ್ಟಮಿ ಕ್ಯಾಂಪುಗಳು ಬಹುತೇಕ ನಿಂತು ಹೋಗಿವೆ. ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸೆಯ ಬಗೆಗಿರುವ ತಪ್ಪು ಕಲ್ಪನೆ ಮತ್ತು ಹೆಣ್ಣುದೇಹ-ಆರೋಗ್ಯದ ಬಗೆಗಿರುವ ಅನಾದರ, ನಿಷ್ಕಾಳಜಿಗಳು ಅದಕ್ಕೆ ಕಾರಣವಾಗಿವೆ.

ಸಣ್ಣ ಕುಟುಂಬ ಸುಖೀ ಕುಟುಂಬ ಎಂದು ಬಿಂಬಿಸಿ ಮಿತಸಂತಾನ ಉತ್ತೇಜಿಸುವುದಕ್ಕೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗೊಳಗಾದವರಿಗೆ ಧನ ಸಹಾಯ ಮತ್ತಿತರ ಅನುಕೂಲ ಒದಗಿಸಿಕೊಡುವುದರ ಮೂಲಕ ಮಹಿಳೆಗೆ ಕುಟುಂಬದಲ್ಲಿ ಎಷ್ಟು ಮಕ್ಕಳು ಯಾವಾಗ ಬೇಕೆಂದು ಯೋಜಿಸಿ ನಿರ್ಧರಿಸಲು ಹಕ್ಕು ನೀಡಲಾಗಿದೆ. ಕುಟುಂಬ ಯೋಜನೆಯನ್ನು ಒತ್ತಾಯ ಪೂರ್ವಕ ಮಾಡುವಂತಿಲ್ಲ. ಅದು ಮಾನವ ಹಕ್ಕು ಉಲ್ಲಂಘನೆ. 1975ರ ತನಕ ಅಮೆರಿಕದಲ್ಲಿ ಕರಿಯ ಮೆಕ್ಸಿಕನ್ ಹೆಣ್ಣುಮಕ್ಕಳನ್ನು, ಮದುವೆಯಾಗದ ಹದಿಹರೆಯದವರನ್ನೂ ಕರೆತಂದು ಅವರಿಗೆ ಗೊತ್ತೇ ಆಗದ ಹಾಗೆ ಕುಟುಂಬ ಯೋಜನಾ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈ ಅನಾಗರಿಕ ತಾರತಮ್ಯ ಧೋರಣೆ ಎಷ್ಟೋ ವರ್ಷ ಮುಂದುವರೆದು ವರ್ಷಕ್ಕೆ 2 ಲಕ್ಷ ಇಂತಹ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದವು. ಮಾನವ ಹಕ್ಕು ಪ್ರತಿಪಾದಿಸುವ ಗುಂಪುಗಳು ಈ ಬಗ್ಗೆ ವಿಸ್ತ್ರತ ಅಧ್ಯಯನ, ವರದಿ ತಯಾರಿಸಿ ಅಂತೂ 1975ರಲ್ಲಿ ಗರ್ಭಪಾತ ಹಕ್ಕು ನೀಡಲಾಯಿತು.

ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಕಾಲದಲ್ಲೂ ಹೀಗೇ ಒತ್ತಾಯವಾಗಿ ಹೆಣ್ಣುಮಕ್ಕಳನ್ನು ಕರೆತಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅದರ ಕೆಟ್ಟ ಪರಿಣಾಮವೆಂದರೆ ಸರ್ಕಾರಿ ಕಾರ್ಯಕ್ರಮಗಳು ಜನಪರವಾದುವಲ್ಲ ಎಂಬ ಅವಿಶ್ವಾಸ ಜನರಲ್ಲಿ ಬೆಳೆದದ್ದು. ಜನಸಂಖ್ಯೆ ಆಧರಿಸಿ ಆರೋಗ್ಯ ಕಾರ್ಯಕರ್ತರಿಗೆ ವರ್ಷಕ್ಕೆ ಇಷ್ಟೇ ಕುಟುಂಬ ಯೋಜನೆ ಆಪರೇಷನ್ ಮಾಡಿಸಬೇಕು ಹಾಗೂ ಕುಟುಂಬ ಯೋಜನೆಯ ಇತರ ವಿಧಾನಗಳನ್ನು ಅಳವಡಿಸಬೇಕೆಂಬ ಗುರಿ ನೀಡಲಾಗಿತ್ತು. ಈಗ ಗುರಿ ಆಧಾರಿತ ಯೋಜನೆಗಳು ಹೋಗಿ ಸೇವೆ ಆಧಾರಿತ ಯೋಜನೆಗಳು ಬಂದಿವೆ.

ಮೂಗ ಕೋಲೆ ಬಸವನಂತೆ ಬಲಿಪಶುವಾಗಿರುತ್ತಿದ್ದ ಹೆಣ್ಣು ಈಗೊಂದು ಶತಮಾನದಿಂದೀಚೆಗೆ ಪ್ರಜನನ ಹಕ್ಕುಗಳ ಬಗ್ಗೆ ಎಚ್ಚೆತ್ತಿದ್ದಾಳೆ. ಆದರೆ ಆ ಅರಿವು-ಹಕ್ಕು ಸಾಮಾನ್ಯ ಮಹಿಳೆಯರ ಪಾಲಿಗಿನ್ನೂ ದೂರವಾಗಿಯೇ ಇದೆ. ತನಗೆ ಮಗು ಬೇಕು-ಬೇಡ; ಕಾಂಪ್ಲಿಕೇಟೆಡ್ ಬಸಿರು ಇರಲಿ-ಇರುವುದು ಬೇಡ ಎಂದು ಕೊನೆಗೂ ನಿರ್ಧರಿಸುವವರು ಯಾರು? ಬಸುರೆಂಬ ಪುನರ್ಜನ್ಮ ಪಡೆಯಲು ದೈಹಿಕ-ಮಾನಸಿಕ-ಸಾಮಾಜಿಕವಾಗಿ ಎಲ್ಲ ಅಡೆತಡೆಗಳನ್ನು ಯಶಸ್ವಿಯಾಗಿ ಎದುರಿಸಿಯೇ ತಾಯಿಯಾಗಬೇಕು. ಆದರೆ ಎಷ್ಟು, ಯಾವಾಗ ಎಂದು ನಿರ್ಧರಿಸುವಲ್ಲಿ ಹೆಣ್ಣಿಗೆ ಸಂಪೂರ್ಣ ಅಧಿಕಾರ ದೊರೆಯಬೇಕು.

ಡಾ. ಎಚ್.ಎಸ್.ಅನುಪಮಾ
ವೈದ್ಯೆ, ಲೇಖಕಿ, ಹೋರಾಟಗಾರ್ತಿ.

🔸 ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನೂ ನೋಡಿ: https://youtu.be/1QoI-Wt6d6o