Nikhil Kolpe – Peepal Media

ಕೋಮಿಗಳು ದ್ವೇಷಿಸುವ “ಕ್ರೈಸ್ತ ಸಂಸ್ಥೆ”ಯಲ್ಲಿ ಮೌಲ್ಯಗಳ ಕಲಿಕೆ
ಈ ಬರಹದ ಶೀರ್ಷಿಕೆಯಲ್ಲಿ “ಕ್ರೈಸ್ತ ಸಂಸ್ಥೆ” ಎಂಬುದನ್ನು ಉದ್ಧರಣ ಚಿಹ್ನೆಯಲ್ಲಿ, ಅಂದರೆ, ಕೋಟ್ ಮಾರ್ಕ್‌ನಲ್ಲಿ ಬರೆದಿರುವುದು ಉದ್ದೇಶಪೂರ್ವಕವಾಗಿದೆ. ಇದು ಕ್ರೈಸ್ತರು ಸ್ಥಾಪಿಸಿದ, ಅವರ ಆಡಳಿತವಿರುವ ವಿದ್ಯಾಸಂಸ್ಥೆಯಾಗಿದ್ದರೂ, ಎಂದಿಗೂ ಯಾವುದೇ ಕ್ರೈಸ್ತೇತರರಿಗೆ ಹಾಗನಿಸುವಂತೆ ಯಾರೂ ನಡೆದುಕೊಂಡಿಲ್ಲ ಎಂಬುದೇ ಇದಕ್ಕೆ ಕಾರಣ. ಹಿಂದೂ “ಮೇಲ್ಜಾತಿ” ಶಾಲೆಗಳಲ್ಲಿ ಕಲಿತ ಅನುಭವದಿಂದ ಇದನ್ನು ಹೇಳುತ್ತಿದ್ದೇನೆ.

ಜೊತೆಗೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತೆ, ಕಲಿಸುತ್ತಿದ್ದೇನೆ ಎಂದು ಪೂರ್ತಿ ಸುಳ್ಳು, ಅರೆಬರೆ ಸತ್ಯ ಹೇಳುವ ಹೇಳುವ *ಎಂಟೈರ್ ಪೊಲಿಟಿಕಲ್ ಸಾಯನ್ಸ್” ಮೋದಿಯ ಶಿಷ್ಯನಾದ ಡಾ. ಅರುಣ ಎಂಬಾತ ದ್ವೇಷ ಭಾಷಣ ಮಾಡಿ ಕೇಸು ಹಾಕಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬರಹ ಓದಬೇಕೆಂದು ವಿನಂತಿ. ಒಟ್ಟಿನಲ್ಲಿ ಈತ ಸಮಾಜವನ್ನು”ಅವರು”, “ನಾವು” ಎಂದು ಕೋಮು ನೆಲೆಯಲ್ಲಿ ವಿಭಜಿಸುತ್ತಾನೆ. “ಅವರ” ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಬೇಡಿ; “ನಮ್ಮ” ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿ ಎನ್ನುವ ಈ ದ್ವೇಷಪ್ರೇಮಿ ಬಾಲಕ- “ಅವರ” ಆಸ್ಪತ್ರೆಗೆ ಸೇರಿಸಬೇಡಿ, “ನಮ್ಮ” ಆಸ್ಪತ್ರೆಗೆ ಸೇರಿಸಿ ಎಂದು ಹೇಳಿಲ್ಲ ಸದ್ಯ! ಈ ಶೂದ್ರ – “ನಮ್ಮವರು” ಎನ್ನುತ್ತಲೇ ಪ್ರತ್ಯೇಕಿಸುವ, ಅಸ್ಪೃಶ್ಯತೆಯ ವಕ್ತಾರ ಬ್ರಾಹ್ಮಣ್ಯದ ಚಾಕರಿ ಮಾಡುತ್ತಲೇ ಕೋಮು ನೆಲೆಯಲ್ಲಿ ಅಸ್ಪೃಶ್ಯತೆ ತರಲು ಬಯಸುತ್ತಿದ್ದಾನೆ.

ಬಾಲ್ಯದಲ್ಲಿ ಶಾಲೆ, ಕಾಲೇಜುಗಳಲ್ಲಿ ನನ್ನ ಕ್ರೈಸ್ತ ಗೆಳೆಯರ ಒಡನಾಟದ ಬಗ್ಗೆ ಹಿಂದೆ ಬರೆದಿದ್ದೆ. ಆದರೆ, ನನಗೆ ಅವರ ಜೀವನದ ಅತ್ಯಂತ ಹತ್ತಿರದ ಪರಿಚಯವಾದುದು ನಾನು ಇದೀಗ ಯೌವನಕ್ಕೆ ಕಾಲಿಡುತ್ತಿದ್ದೇನೆ ಎನ್ನುತ್ತಿರುವಾಗಲೇ ಮುಂಬಯಿಗೆ ಹೋದ ಸಂದರ್ಭದಲ್ಲಿ. ಅದಕ್ಕಿಂತ ಮೊದಲು ಒಂದು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಒಂದು ವರ್ಷದ ಬಗ್ಗೆ ಇಲ್ಲಿ ಬರೆಯಬೇಕು. ಆರನೇ ತರಗತಿವರೆಗೆ ಸದಾ ಎರಡನೇ ಸ್ಥಾನ, ಮತ್ತೆ ಮೊದಲನೇ ಸ್ಥಾನ, ನಂತರ ಕನಿಷ್ಟ ಮೊದಲನೇ ದರ್ಜೆಯಲ್ಲಿಯಾದರೂ ಪಾಸಾಗುತ್ತಿದ್ದ ನಾನು ಎರಡನೇ ಪಿಯುಸಿಯಲ್ಲಿ ಮೊದಲ ಬಾರಿಗೆ ಫೇಲ್ ಆದದ್ದು ನನ್ನ ಮನೆಯವರಿಗೆ ಆಘಾತ ತಂದಿತ್ತು. ನಿನ್ನ ಆಸಕ್ತಿಗೆ ಆರ್ಟ್ಸ್ ಒಳ್ಳೆಯದೆಂಬ ತಂದೆಯವರ ಸಲಹೆಯನ್ನು ಮೀರಿ, ವಿಜ್ಞಾನ ವಿಷಯ ತೆಗೆದುಕೊಂಡಿದ್ದ ನನಗೆ ಅದು, ಅದರಲ್ಲೂ ಮುಖ್ಯವಾಗಿ ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರಿಯವಾಗಿತ್ತು. ಅಂಕಗಣಿತದಲ್ಲೂ ಸಾಕಷ್ಟು ಹುಷಾರಾಗಿದ್ದ ನನಗೆ ಮುಂದೆ ಎದುರಾದ ಬೀಜಗಣಿತ, ಟ್ರಿಗ್ನಾಮೆಟ್ರಿ, ಕ್ಯಾಲ್ಕ್ಯುಲಸ್ ಇತ್ಯಾದಿ ತಲೆತಿರುಗಿಸಿಬಿಟ್ಟಿತು. ಉಳಿದ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳಿದ್ದರೂ, ಗಣಿತದಲ್ಲಿ 13 ಅಂಕ ಪಡೆದು ಫೇಲಾದೆ.

ಮನೆಯ ಪ್ರೀತಿಯ ಕಿರಿಕಿರಿ ಚುಚ್ಚುತ್ತಿದ್ದುದರಿಂದ ಮಂಗಳೂರಿನ ಸೈಂಟ್ ಎಲೋಸಿಯಸ್ ಸಂಜೆ ಕಾಲೇಜಿನ ಆರ್ಟ್ಸ್ ವಿಭಾಗ ಸೇರಿ ತರಗತಿಗೆ ಮೊದಲನೆಯವನಾಗಿ ಪಿಯುಸಿ ಮುಗಿಸಿದೆ. ಈ ಎಲೋಶಿಯಸ್ ಕಾಲೇಜಿನಲ್ಲಿ ಕ್ರೈಸ್ತರ ಸಂಖ್ಯೆ ತುಲನಾತ್ಮಕವಾಗಿ ಹೆಚ್ಚು ಇದ್ದುದರಿಂದ ಅವರನ್ನು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು. ಅದಕ್ಕಿಂತಲೂ ಹೆಚ್ಚಾಗಿ, ಈಗ ಸಂಘಪರಿವಾರವು ಕರಾವಳಿಯಲ್ಲಿ ಕ್ರೈಸ್ತರ ವಿರುದ್ಧ ದ್ವೇಷವನ್ನು ಹರಡುತ್ತಿರುವ ಸಂದರ್ಭದಲ್ಲಿ, ಅವರು ಕರಾವಳಿಗಾಗಿ ಏನು ಮಾಡಿದ್ದಾರೆ ಎನ್ನುತ್ತಾ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮುಖ್ಯವಾಗಿ ಆರ್ಥಿಕವಾಗಿ ಅವರ ಯಶಸ್ಸಿಗೆ ಅಸೂಯೆ ಪಡುತ್ತಿರುವವರಿಗೆ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ದಲಿತರ ಲೆಕ್ಕವಿಲ್ಲದಷ್ಟು ಮಕ್ಕಳಿಗೆ ಶಿಕ್ಷಣ ಒದಗಿಸಿ, ಅವರನ್ನು ಜೀವನದಲ್ಲಿ ಮುನ್ನೆಲೆಗೆ ತಂದ ನೂರಾರು ಕ್ರೈಸ್ತ ಸಂಸ್ಥೆಗಳಲ್ಲಿ ಅಲೋಶಿಯಸ್ ಕಾಲೇಜನ್ನು ಮೊದಲ ಸಾಲಿನಲ್ಲಿ ಹೆಸರಿಸಬೇಕು. ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಕ್ರೈಸ್ತರು ಸ್ಥಾಪಿಸಿದ ಸಂಸ್ಥೆಗಳ ಮಹಾನ್ ಕೊಡುಗೆಗಳ ಬಗ್ಗೆಯೇ ಮುಂದೆ ಬರೆಯಬೇಕು.

ಸೈಂಟ್ ಅಲೋಶಿಯಸ್ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಲೀನಾ ಮಥಾಯಸ್ ಎಂಬವರು ನನ್ನ ನೆನಪಿನಲ್ಲಿ ಬಹಳವಾಗಿ ಉಳಿದಿದ್ದಾರೆ. ಅದಕ್ಕೆ ಕಾರಣಗಳಿವೆ. ನಾನು ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೆ ಕೇವಲ ಗಣಿತ ಕಾರಣವಲ್ಲ. ವಿದ್ಯಾರ್ಥಿಗಳು ಒಂದು ವಿಷಯ ತೆಗೆದುಕೊಂಡಾಗ ಕಲಿಯುವ ವಿಷಯಗಳ ಸೀಮಿತತೆ ನನಗೆ ಇಷ್ಟವಿರಲಿಲ್ಲ. ಕಾಲೇಜಿಗೆ ಹೋಗಿ, ಇಡೀ ವರ್ಷ ನಾಲ್ಕಾರು ವಿಷಯಗಳ ಹತ್ತಾರು ಪಠ್ಯಗಳನ್ನೇ ಓದಿ ಪರೀಕ್ಷೆ ಬರೆಯುವುದೇಕೆ ಎಂಬುದು ನನ್ನ ವಾದವಾಗಿತ್ತು. ಹೊರಗೆ, ಲೈಬ್ರರಿಯಲ್ಲಿ ಹಲವಾರು ವಿಷಯಗಳ ಸಾವಿರಾರು ಪುಸ್ತಕಗಳು ಇರುವಾಗ, ನಾವೇಕೆ ನಮ್ಮ ಕಲಿಕೆಯನ್ನು ಸೀಮಿತಗೊಳಿಸಬೇಕು? ಕಾಲೇಜಿಗಾದರೂ ಯಾಕೆ ಹೋಗಬೇಕು? ನಮ್ಮ ಜ್ಞಾನದ ಹರವು ಅಂದರೆ, ಅಗಲದಷ್ಟೇ ಆಳವೂ ಮುಖ್ಯ ಎಂದು ನನಗಾಗ ಹೊಳೆದಿರಲಿಲ್ಲ. ಅದನ್ನು ತಿಳಿಸಿ, ಸಾಂಸ್ಥಿಕ ಶಿಕ್ಷಣದ ಮಹತ್ವವನ್ನು ಸಾಕಷ್ಟು ಮನವರಿಕೆ ಮಾಡಿದವರೇ ಲೀನಾ ಮಥಾಯಸ್.

ಅದು ನಡೆದದ್ದು ಹೀಗೆ: ನನ್ನ ತಾಯಿ ನನ್ನ ಮನವೊಲಿಸಿ ಒಂದು ದಿನ ಸೈಂಟ್ ಅಲೋಶಿಯಸ್ ಸಂಜೆ ಕಾಲೇಜಿಗೆ ಕರೆದುಕೊಂಡುಹೋಗಿ ಪ್ರಿನ್ಸಿಪಾಲರ ಚೇಂಬರಿನಲ್ಲಿ ಲೀನಾ ಮಥಾಯಸ್ ಅವರ ಮುಂದೆ ಕೂರಿಸಿದರು. ನನ್ನ ಬಗ್ಗೆ ದೂರನ್ನೂ, ಮೆಚ್ಚುಗೆಯನ್ನೂ, ನಾನು ಫೇಲಾದುದರ ಬಗ್ಗೆ, ನಾನು ಕಾಲೇಜಿಗೆ ಹೋಗದಿರುವ ಬಗ್ಗೆ ನನ್ನ ನಿರ್ಧಾರದ ಕುರಿತು ತನ್ನ ಗೋಳನ್ನೂ ನನ್ನ ತಾಯಿ ಹರಿಯಬಿಟ್ಟರು. ಇದನ್ನೆಲ್ಲಾ ತಾಳ್ಮೆಯಿಂದ ಕೇಳಿಸಿಕೊಂಡ ಪ್ರಿನ್ಸಿಪಾಲರು, ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಸ್ವಲ್ಪ ಅಚ್ಚರಿಗೆ ಗುರಿಯಾದಂತಿತ್ತು. ಗಣಿತ ಬಿಟ್ಟು ಉಳಿದೆಲ್ಲವೂ ಅತ್ಯುತ್ತಮವೇ ಆಗಿತ್ತು. ಇಷ್ಟು ಮಾರ್ಕುಬಂದಿದೆ. ಇಷ್ಟು ಪ್ರತಿಭೆ ಇಟ್ಟುಕೊಂಡು ಜೀವನವನ್ನೇಕೆ ಹಾಳುಮಾಡುತ್ತೀಯಾ ಎಂದು ಅರ್ಧಗಂಟೆ ಔಪಚಾರಿಕ ಶಿಕ್ಷಣದ ಅಗತ್ಯ ಇತ್ಯಾದಿಗಳ ಕುರಿತು ಪಾಠವನ್ನೇ ಮಾಡಿಬಿಟ್ಟರು. ನನ್ನನ್ನು ಬಾಹ್ಯ ಅಂದರೆ, ಅನೌಪಚಾರಿಕ ವಿದ್ಯಾರ್ಥಿಯಾಗಿ ನೇರವಾಗಿ ಎರಡನೇ ಪಿಯುಸಿಗೆ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ ಇರುವ ತರಗತಿಗೆ ಸೇರಿಸಿಕೊಂಡರು. ಈ ರೀತಿಯ “ಎಕ್ಸ್‌ಟರ್ನಲ್” ವಿದ್ಯಾರ್ಥಿ ನಾನೊಬ್ಬನೇ ಆಗಿದ್ದೆ. ಅವರ ಬುದ್ಧಿವಾದದಿಂದ ಚೆನ್ನಾಗಿ ಕಲಿಯಬೇಕೆಂದು ಮನಸ್ಸು ಬಂದು ಕ್ಲಾಸಿಗೆ ಹೋಗಿ ಮೊದಲ ಸಾಲಿನಲ್ಲಿ ಮೊದಲ ಜಾಗದಲ್ಲೇ ಕುಳಿತುಕೊಂಡೆ. ಅದಾಗಲೇ ನಾನು ಹಿಂದೆ ವಿಜ್ಞಾನದಲ್ಲಿ ಇದ್ದರೂ, ಮುಂದೆ ಕಲಿಯಬೇಕಿರುವ ವಿಷಯಗಳನ್ನು ಕುತೂಹಲದಿಂದ ಮೊದಲೇ ಓದಿ ಇದ್ದುದರಿಂದ ಮತ್ತು ಎಡಪಂಥೀಯ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಇದ್ದುದರಿಂದ ಪ್ರಾಧ್ಯಾಪಕರ ಜೊತೆಗೆ “ಭಯಂಕರ” ಚರ್ಚೆಗೆ ಇಳಿಯುತ್ತಿದ್ದೆ. ಇದು ಮತ್ತು ಸೈಂಟ್ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಕಳೆದ ಒಂದು ವರ್ಷವೇ ಮುಂದಿನ ಕಲಿಕೆಗೆ ಮತ್ತು ಪತ್ರಕರ್ತನಾಗಲು ಪೀಠಿಕೆಗೆ ಕಾರಣವಾಯಿತು ಎಂಬುದನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ.

ಯಾಕೆಂದರೆ, ಇವತ್ತು ಬೇರೆ ಜಾತಿ, ಧರ್ಮಗಳ ಮಕ್ಕಳು ವಿದ್ಯೆ ಕಲಿತು “ಇತರರು” ತಮ್ಮನ್ನು ಮೀರಿಸಿದರೆ ಸಹಿಸಲಾಗದ, ಅದಕ್ಕೆ ಧಾರ್ಮಿಕ ನೆಪಗಳ ಮೂಲಕ ತಡೆಯೊಡ್ಡುವ, ಬೇರೆ ಧರ್ಮಗಳ ಮಕ್ಕಳು ಸಹಿತ ಯಾರು ಸತ್ತರೂ, ಕೊಲೆಯಾದರೂ, ಸಾಮಾಜಿಕ ಜಾಲತಾಣಗಳಲ್ಲಿ ನಗುವಿನ ಸಿಂಬಲ್ ಒತ್ತುವ, ಸಂಭ್ರಮಿಸುವ ಕಾಲದಲ್ಲಿ ನನಗೆ ಬುದ್ಧಿ ಹೇಳಿ ಕಲಿಯುವಂತೆ ಪ್ರೇರೇಪಿಸಿದ ಆ ತಾಯಿಯರನ್ನು ನೆನಪಿಸುತ್ತೇನೆ.

ಕೆಲವೇ ದಿನಗಳಲ್ಲಿ ಇದೇ ಲೀನಾ ಮಥಾಯಸ್ ಅವರ ಜೊತೆ ತರಗತಿಯಲ್ಲಿಯೇ ನನ್ನ ಮುಖಾಮುಖಿ ಚರ್ಚೆಯಾಯಿತು. ಅವರು ಒಂದು ನಿಯಮ ತಂದರು. ಅದರಂತೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳು ಅವರ ಹೆಸರಿಗೆ ಅನುಗುಣವಾಗಿ ಅಂದರೆ, ಆಲ್ಫಾಬೆಟಿಕ್ ಆರ್ಡರ್‌ನಲ್ಲಿ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಗೆಳೆಯರ ಜೊತೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಇದರಿಂದ ಅಸಮಾಧಾನವಾಯಿತು. ಮೊದಲ ಸಾಲಲ್ಲಿ ಕುಳಿತಿದ್ದ ನನಗೆ ಹಿಂದೆ ಹೋಗಬೇಕು ಎಂಬ ಬೇಸರ. ವಿದ್ಯಾರ್ಥಿಗಳು ಪ್ರತಿಭಟಿಸಿದರು. ಈ ಪ್ರಿನ್ಸಿಪಾಲರು ಮಿತಿಮೀರಿದ ಖಡಕ್ ಶಿಸ್ತಿಗೆ ಹೆಸರುವಾಸಿ. ಎಲ್ಲರೂ ಅವರಿಗೆ ಹೆದರುತ್ತಿದ್ದರು. ಎಲ್ಲಾ ಪ್ರಾಧ್ಯಾಪಕರು ನಿಮಗೆ ಬೇಕಾದಲ್ಲಿ ಕುಳಿತಿರಿ ಎಂದರೂ, ಒಬ್ಬರು ಮಾತ್ರ- ಪ್ರಿನ್ಸಿಪಾಲರು ಹೇಳಿದ ರೀತಿಯಲ್ಲೇ ಕುಳಿತುಕೊಳ್ಳಬೇಕು, ಇಲ್ಲದಿದ್ದರೆ ಪಾಠ ಮಾಡುವುದಿಲ್ಲ ಎಂದು ಹಟ ಹಿಡಿದರು. ನಾವೂ ಹಟ ಬಿಡಲಿಲ್ಲ. ಒಂದು ಸಂಜೆ ಅವರು ಪ್ರಿನ್ಸಿಪಾಲರನ್ನೇ ಕರೆದುಕೊಂಡು ಬಂದಾಗ ಎಲ್ಲರೂ ಗಾಬರಿಯಿಂದ ಎದ್ದು ನಿಂತರು.

ಇದನ್ನಿಲ್ಲಿ ಬರೆಯಲು ಕಾರಣವೆಂದರೆ, ಕ್ರೈಸ್ತ ಮೌಲ್ಯಗಳ ಬಗ್ಗೆ ಮುಂದೆ ನಡೆದ ಚರ್ಚೆ. ಪ್ರಿನ್ಸಿಪಾಲರು ಬಂದವರೇ, ನಾನು ಹೇಳಿದಂತೆ ಕುಳಿತುಕೊಳ್ಳಲು ಒಪ್ಪುವವರು ತಕ್ಷಣ ಅಲ್ಲಲ್ಲೇ ಕುಳಿತುಕೊಳ್ಳಿ ಎಂದರು. ಎಂತಾ ಭೇದೋಪಾಯ! ಕೆಲವರು ಬಡಬಡನೇ ಕುಳಿತರು. ಪ್ರಿನ್ಸಿಪಾಲರು ಮೌನವಾಗಿಯೇ ನಿಂತಿದ್ದರು. ನಿಂತೇ ಇದ್ದ ನಾನು ಸುತ್ತಲೂ ನೋಡುತ್ತೇನೆ: ಕೆಲವರಷ್ಟೇ ನಿಂತಿದ್ದಾರೆ. ಮುಂದಿನ ಒಂದು ನಿಮಿಷದಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಎಂದು ಎಲ್ಲರೂ ಕುಳಿತರು. ನಿಂತು ಉಳಿದವನು ನಾನೊಬ್ಬನೇ! ಪ್ರಭುತ್ವವು ಪ್ರಜೆಗಳನ್ನು ದಮನಿಸುವ ಸರಳ ವಿಧಾನವಿದು. ಅವರ ದೌರ್ಬಲ್ಯಗಳನ್ನು ಉಪಯೋಗಿಸಿ ಒಡೆಯುವುದು.

ನಾನು ನೇರವಾಗಿ ಚರ್ಚೆಗೆ ಇಳಿದೆ. “ನೀವೇ ಬುದ್ಧಿ ಹೇಳಿದಂತೆ, ಚೆನ್ನಾಗಿ ಕಲಿಯಬೇಕೆಂದು ನಾನು ಇಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದೇನೆ. ನನ್ನನ್ನು ಈಗ ಹೆಸರಿನ ಪ್ರಕಾರ ಹಿಂದಿನ ಸಾಲಿಗೆ ಕಳಿಸುವುದು ಅನ್ಯಾಯ; ಗಿಡ್ಡಗಿರುವವರು ಕೆಲವರು ಕೊನೆಯ ಸಾಲಿಗೆ ಹೋಗುತ್ತಾರೆ. ಎತ್ತರದವರು ಮುಂದಿನ ಸಾಲಿಗೆ ಹೋಗುತ್ತಾರೆ. ಇದು ಅನ್ಯಾಯ” ಎಂದು ವಾದಿಸಿದೆ. ಅವರು ಜಪ್ಪಯ್ಯ ಅನ್ನಲಿಲ್ಲ. “ಚರ್ಚೆ ಬೇಡ, ನೀನು ನನ್ನ ರೂಲ್ ಒಪ್ಪುತ್ತೀಯೋ ಇಲ್ಲವಾ? ಗಿಡ್ಡಗೆ ಇರುವವರು ಅವರೇ ಮಾತನಾಡುತ್ತಾರೆ. ಉದ್ದ ಇರುವ ನೀನು ಮಾತಾಡುವ ಅಗತ್ಯ ಇಲ್ಲ” ಎಂದವರು ಹೇಳಿದರು.

ಎಳೆಯನಾಗಿದ್ದ ನಾನು ಸ್ವಲ್ಪ ಉದ್ಧಟತನ ಮತ್ತು ಅವಿವೇಕದಿಂದಲೇ ಏಸುಕ್ರಿಸ್ತನನ್ನು ಚರ್ಚೆಗೆ ಎಳೆದುತಂದೆ. “ಧ್ವನಿ ಇಲ್ಲದವರ ಪರ ಮಾತನಾಡಬೇಕು ಎಂದು ಏಸುವೇ‌ ಹೇಳಿದ್ದು. ರೋಮನರ ದಬ್ಬಾಳಿಕೆ ವಿರುದ್ಧ ಮಾತನಾಡಿದ್ದಕ್ಕೆ ಅವರು ಶಿಲುಬೆಯೇರಿದರು” ಎಂದು ವರಸೆ ಹಾಕಿದೆ. ಅವರು ಉತ್ತರ ನೇರವಾಗಿತ್ತು: “ಅವರು ಶಿಲುಬೆ ಏರಿದರು; ನೀನು ನೇರ ಮನೆಗೆ ಹೋಗುತ್ತಿ. ನೀನು ಎಕ್ಸ್‌ಟರ್ನಲ್ ಸ್ಟೂಡೆಂಟ್ ಎಂಬುದನ್ನು ಮರೆಯಬೇಡ. ಟಿ.ಸಿ. ಕೊಟ್ಟು ಮನೆಗೆ ಕಳಿಸುತ್ತೇನೆ.”

ಯಾವುದೇ ಧರ್ಮದ ಬೋಧನೆಗೂ, ಆಚರಣೆಗೂ, ವ್ಯತ್ಯಾಸವಿದೆ ಎಂಬುದು ನನಗೆ ತಿಳಿದುಹೋಯಿತು. ನನ್ನನ್ನು ಹೊರಗೆ ಹಾಕಿದರೆ ನನ್ನ ತಂದೆ, ತಾಯಿಯ ಮುಖ ಹೇಗಾಗಬಹುದೆಂಬ ಚಿತ್ರ ಕಣ್ಣೆದುರು ಬಂತು. “ಆಯ್ತು. ನನ್ನ ಪ್ರತಿಭಟನೆ ದಾಖಲಿಸಿ ನಿಮ್ಮ ರೂಲ್ ಒಪ್ಪುತ್ತೇನೆ” ಎಂದು- ಈಗ ಅನಿಸುವಂತೆ- ನಾಟಕೀಯವಾಗಿ, ಆದರೆ, ಪ್ರಾಮಾಣಿಕವಾಗಿಯೇ ಹೇಳಿ ನಾನು ಪುಸ್ತಕಗಳನ್ನು ಎತ್ತಿಕೊಂಡು ಹಿಂದಿನ ಸಾಲಲ್ಲಿ ಹೋಗಿ ಕುಳಿತೆ.

ಈ ಘಟನೆ ನನ್ನನ್ನು ಆಳವಾದ ಚಿಂತನೆಗೆ ಗುರಿ ಮಾಡಿತು. ಕ್ರೈಸ್ತ ಮೌಲ್ಯಗಳ ಜೊತೆಗೆ ನನ್ನ ಬಡವರು ಮತ್ತು ಶೋಷಿತರ ಪರವಾದ ಎಡಪಂಥೀಯ ಚಿಂತನೆಗಳೂ ಬೆಳೆದವು ಎಂಬುದಕ್ಕೆ ನಾಲ್ಕೂವರೆ ದಶಕಗಳ ಹಿಂದಿನ ಈ ಘಟನೆಯನ್ನು ಇವತ್ತೇ ನಡೆದಿರುವಂತೆ ಈಗ ನೆನಪಿಸಿ ಬರೆಯುತ್ತಿರುವುದೇ ಸಾಕ್ಷಿ. ಮೌಲ್ಯಗಳ ತಾಕಲಾಟ, ಚರ್ಚೆ ನಡೆಯಬೇಕು. ಅದು ಪ್ರಾಮಾಣಿಕವಾದ ಮಾನವೀಯ ನಂಬಿಕೆಗಳ ಆಧಾರದಲ್ಲಿ ನಡೆಯಬೇಕೇ ಹೊರತು ಕರ್ಮಠ ಚರ್ಚೆಗಳು, ನಾನೇ ಮೇಲೆ, ನನ್ನದೇ ಮೇಲೆ ಎಂಬ ಸಂಘರ್ಷಕ್ಕೆ ಕಾರಣವಾಗಬಾರದು.

ಮುಂದೆ ಕೆಲವರ್ಷಗಳ ನಂತರ ನಾನು ಅಂತೊನಿಯೋ ಕಝಂತ್ಸಾಕಿಸ್ ಎಂಬ ಗ್ರೀಕ್ ಲೇಖಕನ “ಲಾಸ್ಟ್ ಟೆಂಪ್ಟೇಷನ್ ಆಫ್ ಕ್ರೈಸ್ಟ್” ಎಂಬ ಕಾದಂಬರಿ ಓದಿದಾಗಲೂ ಈ ಘಟನೆ ನೆನಪಿಗೆ ಬಂತು. ರೋಮನರ ದಬ್ಬಾಳಿಕೆಗೆ ವಿರುದ್ಧವಾಗಿ ಹೋರಾಟ ಮಾಡಿ ಶಿಲುಬೆಯ ಶಿಕ್ಷೆಗೆ ಗುರಿಯಾದ ಏಸುವಿನ ಮುಂದೆ “ಸೆವೆನ್ ಸಿನ್ಸ್” ಅಂದರೆ, ಏಳು ಪಾಪಗಳು, ಅಥವಾ ಏಳು ಲಾಲಸೆಗಳು ಕುಣಿಯುತ್ತವೆ. ಅವನು ತನ್ನ ಹೋರಾಟದ ಹಾದಿಯಿಂದ ಜಗ್ಗುವುದಿಲ್ಲ. ಅವನಿಗೆ ಆಗಿನ ಶೋಷಕರು ಅಧಿಕಾರ ಸಂಪತ್ತಿನ ಇನ್ನೊಂದು ಕೊನೆಯ ಲಾಲಸೆ ಒಡ್ಡುತ್ತಾರೆ. ಅದನ್ನು ಮೀರಿ ನಿಂತು ಆತ ಶಿಲುಬೆಗೇರುತ್ತಾನೆ. ಈ ಕಾದಂಬರಿಯ ರಾಜಕೀಯ ಪರಿಣಾಮ, ಅಭಿಪ್ರಾಯ ಏನೇ ಇರಲಿ. ಹಾಗಾದರೆ, ನಾನ್ಯಾಕೆ ಲೀನಾ ಮಥಾಯಸ್ ಅವರ “ಅನ್ಯಾಯ” ಪ್ರತಿಭಟಿಸಿ ಮನೆಗೆ ಹೋಗದೇ ತರಗತಿಯಲ್ಲಿ ಉಳಿದೆ? ಚಿಂತನೆಯನ್ನು ನಿಮಗೆ ಬಿಡುತ್ತೇನೆ.

ಇದರ ನಂತರ ನಡೆದ ಕತೆಯನ್ನೂ ಸ್ವಲ್ಪ ಬರೆಯುತ್ತೇನೆ. ಪ್ರಿನ್ಸಿಪಾಲರ ಎದುರು ಮಣಿಯಬೇಕಾದುದಕ್ಕೆ ನನಗೇನೂ ಅವಮಾನವಾಗಲಿಲ್ಲ. ಬದಲಾಗಿ, ಅವರ ಎದುರು ಕೊನೆಯ ವರೆಗೆ ನಿಂತು ವಾದಿಸಿದಕ್ಕೆ ವಿದ್ಯಾರ್ಥಿಗಳ ನಡುವೆ ನಾನು “ದೊಡ್ಡಜನ” ಆದೆ. ಇದಕ್ಕೆಲ್ಲಾ ಕಾರಣರಾದ ಆ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರ ಮೇಲೆ ನಮಗೆ ಸಿಟ್ಟಿತ್ತು. ಹಾಗಾಗಿ ಅವರು ಕ್ಲಾಸಿಗೆಂದು ಕಾರಿಡಾರಿನಲ್ಲಿ ಬರುತ್ತಿರುವಾಗಲೇ ಎಲ್ಲರೂ ಕಾ, ಕೀ, ಕೂ ಎಂದು ಕಿರುಚಿ, ಅವರು ಒಳಬರುತ್ತಿದ್ದಂತೆ ಸುಮ್ಮನಾಗುತ್ತಿದ್ದರು‌. ನಾನಂತೂ ನನ್ನನ್ನು ಹಿಂದಿನ ಸಾಲುಗಳಿಗೆ ಕಳಿಸಿದ್ದು ಮತ್ತು ನನ್ನ ಉದ್ದ ಕಾಲುಗಳ ಲಾಭ ಪಡೆದು ಡೆಸ್ಕನ್ನು ಮೊಣಕಾಲುಗಳಿಂದ ಎತ್ತಿ ಧಡಾರನೇ ಕೆಳಗೆ ಬಿಡುತ್ತಿದ್ದೆ. ಇದರಿಂದ ಅವರು ತುಂಬಾ ವಿಚಲಿತರಾದರೂ, ಮೂಲ ಕಿಡಿಗೇಡಿಯಾದ ನನ್ನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಮೇಲಾಗಿ, ನಾನು ಇನ್ನೊಂದು ಕಿರುಕುಳ ಆರಂಭಿಸಿದ್ದೆ. ಇದು ನನ್ನ “ಅಹಿಂಸಾತ್ಮಕ” ಪ್ರತಿಭಟನೆಯಾಗಿತ್ತು. ಅದೆಂದರೆ, ದಿನದ ಪಾಠವನ್ನು ಮೊದಲೇ ಓದಿ ಬಂದು, ಚರ್ಚಿಸಬಹುದಾದ ವಿಷಯಗಳಲ್ಲಿ ತಕ್ಷಣವೇ ಎದ್ದುನಿಂತು ಪ್ರಶ್ನೆಕೇಳಿ, ಚರ್ಚೆ ಮಾಡಿ ಪಾಠಕ್ಕೆ ತಡೆಯೊಡ್ಡುವುದು. ಇದು ಎಷ್ಟರ ಮಟ್ಟಿಗೆ ನಡೆಯಿತು ಎಂದರೆ, ಒಂದು ದಿನ ಅವರು ಬಂದವರೇ, “ನಾನು ನನ್ನ ಜೀವನದಲ್ಲಿ ಹಲವಾರು ಪೋಲಿ ಪುಂಡರನ್ನು ನೋಡಿದ್ದೇನೆ. ನನಗೆ ಸ್ವಲ್ಪವೂ ಬೇಜಾರಿಲ್ಲ. ಆದರೆ, ಪ್ರತಿಭಾವಂತ ವಿದ್ಯಾರ್ಥಿಗಳೇ ಹೀಗೆ ಮಾಡುವುದೆಂದರೆ….” ಎಂದು ಮುಂದೆ ಮಾತನಾಡಲಾಗದೆ ಗದ್ಗದಿತರಾದರು. ನನಗೆ ಎಷ್ಟು ಪಶ್ಚಾತ್ತಾಪ ಆಯಿತೆಂದರೆ, ಮುಂದೆ ಅವರ ತಂಟೆಗೆ ಹೋಗಲಿಲ್ಲ.

ಇದು ಅವರಲ್ಲೂ ಬಹಳ ಬದಲಾವಣೆ ತಂದಿತು. ನಾನು ಯುವ ಕಮ್ಯುನಿಸ್ಟ್ ರಾಜಕೀಯದಲ್ಲಿ ಇದ್ದುದರಿಂದ ಕೇವಲ ಹಾಜರಾತಿಗಾಗಿ ಮಾತ್ರ ಕ್ಲಾಸಿಗೆ ಹೋಗುತ್ತಿದ್ದೆ. ಒಂದು ಸಲ ಅವರು ಬಂದವರೇ ನನ್ನನ್ನು ಗಮನಿಸಿ, ಒಂದು ಜೋಕು ಹೊಡೆದರು: “ನಾನು ಹಗಲು ಲಾ ಕಾಲೇಜಿನಲ್ಲಿ ಕಲಿಸುತ್ತೇನೆ. ಇಲ್ಲಿ ಪಾರ್ಟ್ ಟೈಮ್ ಗೆಸ್ಟ್ ಲೆಕ್ಚರರ್. ಅದೇ ರೀತಿಯಲ್ಲಿ ಇಲ್ಲಿ ಕೆಲವು ಪಾರ್ಟ್ ಟೈಮ್ ಗೆಸ್ಟ್ ಸ್ಟೂಡೆಂಟುಗಳಿದ್ದಾರೆ. ಅವರು ಮನಸ್ಸಾದಾಗ ಕ್ಲಾಸಿಗೆ ಬರುವುದು, ಲೆಕ್ಚರರಿಗೇ ಪ್ರಶ್ನೆ ಕೇಳಿ, ಅವರಿಗೇ ಪಾಠ ಮಾಡಿ ಹೋಗುವುದು” ಎಂದು ನನ್ನನ್ನು ತೋರಿಸಿ ನಕ್ಕರು. ಎಲ್ಲರೂ ನಕ್ಕರು. ಎಲ್ಲವೂ ತಿಳಿಯಾಯಿತು. ಮುಂದೆ ನಾನು ಹೇಳಿಕೊಳ್ಳುವ ಮಾರ್ಕು ಪಡೆಯಲಿಲ್ಲವಾದರೂ, ಕ್ಲಾಸಿನಲ್ಲಿ ಉಳಿದ ಎಲ್ಲರಿಗಿಂತ ಹೆಚ್ಚು ಮಾರ್ಕು ಪಡೆದಿದ್ದೆ. ಇದಕ್ಕಾಗಿ ನನ್ನನ್ನು ಮೊದಲಿಗೆ ಅಭಿನಂದಿಸಿದವರು ಇದೇ ಪ್ರಾಧ್ಯಾಪಕರು ಮತ್ತು ಪ್ರಿನ್ಸಿಪಾಲರು.

ಇದನ್ನು ಉಲ್ಲೇಖಿಸಿದ ಕಾರಣ ಎಂದರೆ, ನನ್ನ ಪ್ರತಿಭಟನೆಯ “ಅಹಿಂಸಾತ್ಮಕ” ವಿಧಾನ ಮತ್ತು ಅವರು ಬಳಸಿದ ಮನಪರಿವರ್ತನೆಯ ವಿಧಾನ ಬುದ್ಧ, ಏಸು, ಗಾಂಧಿ ಮುಂತಾದ ಮಹಾತ್ಮರ ವಿಧಾನಗಳ ತೀರಾ ಪೇಲವ ಉದಾಹರಣೆಗಳಾದರೂ, ಪರಿಣಾಮಕಾರಿ ಎಂಬ ತಿಳುವಳಿಕೆ ನನ್ನಲ್ಲಿ ಮೂಡಿಸಿದ್ದು.

ಸೈಂಟ್ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಹಲವಾರು ಪ್ರಾಧ್ಯಾಪಕರಾಗಿದ್ದ ಕ್ರೈಸ್ತರು ಮತ್ತು ಪಾದ್ರಿಗಳ ಜೊತೆಯೂ ಮಾತುಕತೆ, ಚರ್ಚೆ ನಡೆಯುತ್ತಿತ್ತು. ಕಾಲೇಜಿನ ಆವರಣದಿಂದ ಕೋರ್ಟಿನ ಕಡೆಗೆ ಹೋಗುವ ಒಂದು ಒಳರಸ್ತೆಯಿದೆ. ಅಲ್ಲಿಯೇ ಗೋಡೆಯ ಮೇಲೆಲ್ಲಾ ಪೈಂಟಿಂಗ್ಸ್ ಇರುವ ಚಾಪೆಲ್ ಮತ್ತು ಕಾಲೇಜಿನ ಜೀವಶಾಸ್ತ್ರದ ಪ್ರಯೋಗಶಾಲೆಗಳು, ಚಿಕ್ಕ ಬೊಟಾನಿಕಲ್ ಗಾರ್ಡನ್ ಇದ್ದುದನ್ನು ಹಿಂದೆ ಹೇಳಿದ್ದೇನೆ. ನನಗೆ ಕೆಲವು ಸಲ ಅಲ್ಲಿಗೆ ಒಬ್ಬನೇ ಹೋಗಿ ತಿರುಗಾಡುವ ಅಭ್ಯಾಸವಿತ್ತು. ಎರಡೂ ಕಡೆ ಇದ್ದ ಪಾದ್ರಿಗಳು ಏನು ಎತ್ತ ಎಂದು ವಿಚಾರಿಸಿ, ಬೇಕಾದ ವಿವರಣೆಗಳನ್ನು ನೀಡುತ್ತಿದ್ದರು. ಪ್ರಾಣಿಗಳು ಮತ್ತು ದೇಹದ ಭಾಗಗಳನ್ನು ಫಾರ್ಮಾಲಿನ್ ದ್ರಾವಣ ಇದ್ದ ಬಾಟಲಿಗಳಲ್ಲಿ ತುಂಬಿಸಿ ಇಟ್ಟದ್ದು, ಬೇರೆ ಬೇರೆ ರೀತಿಯ ಒಣ ಎಲೆಗಳನ್ನು ಸಂಗ್ರಹಿಸಿ ಇಟ್ಟದ್ದನ್ನು ನನಗೆ ಮೊದಲ ಬಾರಿಗೆ ತೋರಿಸಿದ್ದು ಅವರೇ; ಒಬ್ಬರು ಪಾದ್ರಿ. ಅವರೆಂದೂ ಭೇದಭಾವವನ್ನು ತೋರಿದ್ದಾಗಲೀ, ತಮ್ಮ ಧರ್ಮವನ್ನು ಹೊಗಳಿದ್ದು, ಬೇರೆ ಧರ್ಮಗಳನ್ನು ಹೀಯಾಳಿಸಿದ್ದು ಕಂಡಿಲ್ಲ. ಕರಾವಳಿಯ ಕ್ರೈಸ್ತರು ಸಾಮಾನ್ಯವಾಗಿ ಹೀಗೆಯೇ ಇರುವುದನ್ನು ಕಂಡಿದ್ದೇನೆ. ಇದಕ್ಕೆ ವ್ಯತಿರಿಕ್ತವಾಗಿ ಇರುವ ಕರ್ಮಠರು ಎಲ್ಲಾ ಕಡೆ ಇದ್ದೇ ಇರುತ್ತಾರೆ ಬಿಡಿ. ಇಂದು ಇಂತಾ ಸಾಮರಸ್ಯದ ವಾತಾವರಣಕ್ಕೆ ಹುಳಿ ಹಿಂಡುವವರನ್ನು ನೋಡುವಾಗ ನೋವಾಗುತ್ತದೆ; ಸಿಟ್ಟೂ ಬರುತ್ತದೆ. ಅವರು ಅವವರವ ನಂಬಿಕೆಗಳನ್ನು ಇಟ್ಟುಕೊಳ್ಳಲಿ; ನೀವು ನಿಮ್ಮ ನಿಮ್ಮ ನಂಬಿಕೆಗಳನ್ನು! ಅದರಿಂದ ಯಾರಿಗಾದರೂ ತೊಂದರೆ ಇದೆಯೇ?! ಇಲ್ಲ! ಧರ್ಯದ ಹೆಸರಿನಲ್ಲಿ ಒಬ್ಬರು ಇನ್ನೊಬ್ಬರ ಕತ್ತು ಹಿಸುಕಲು ಹೋದರೆ ಮಾತ್ರ ಎಲ್ಲರೂ ನೋಯುತ್ತೀರಿ; ಸಾಯುತ್ತೀರಿ!

-ನಿಖಿಲ್ ಕೋಲ್ಪೆ

ಈ-ರಾಮ, ಆ-ರಾಮ!
ಬೊಗಸೆಗೆ ದಕ್ಕಿದ್ದು-8 | ನಿಖಿಲ್‌ ಕೋಲ್ಪೆ

ಢಂ.. ದಡಾರ್… ಡಢುಂ… ಛಟ್…ಭಯಾನಕ ಸಿಡಿಲು ಗಾಳಿ ಮಳೆಗೆ ಚಿಮಣಿ ದೀಪಗಳೆಲ್ಲಾ ನಂದಿ ಹೋಗಿ ಕರ್ಗುಡೆ ಕತ್ತಲೆಯಾದಾಗ ಛಳಿರ್ ಛಟಿಲ್ ಎಂದು ಮಿಂಚು ನಮ್ಮ ಪಟ ತೆಗೆಯುತ್ತಿದ್ದಾಗ, ನಾವು ಮಕ್ಕಳೆಲ್ಲಾ ಈ ಪಟಾಕಿಯ ಲಕ್ಷದೀಪ ನೋಡಲು ಬಾಗಿಲ ಹೊರಗೆ, ತಟ್ಟಿಯ ಹೊರಗೆ ಇಣುಕುತ್ತಿದ್ದಾಗ, ನನ್ನ ಚಿಕ್ಕ ಅಜ್ಜಿ ಮಕ್ಕಳನ್ನು ಬೆನ್ನ ಹಿಂದೆ ತಳ್ಳಿ ತಾನೇ ಎದುರು ನಿಂತು “ಭಯಂಕರ ಧೈರ್ಯ”ದಿಂದ ಗಡಗಡ ನಡುಗುತ್ತಲೇ ಹೇಳುತ್ತಿದ್ದುದು ಒಂದೇ ಮಾತು: “ರಾಮರಾಮ… ರಾಮರಾಮ…ರಾಮರಾಮ” ಇದು ಭಯದಿಂದ ಬಂದ ಭಕ್ತಿಯೋ ಅಥವಾ ಬೇರೆಯೋ ಎಂದು ಈಗ ಯೋಚಿಸಿದಾಗ ಆಶ್ಚರ್ಯ ಏನೂ ಆಗುವುದಿಲ್ಲ. ದೇವರ ಕಲ್ಪನೆ ಹುಟ್ಟಿದ್ದೇ ಭಯದಿಂದ.

ಸುಮ್ಮನೇ ಒಂದನ್ನು ಊಹಿಸಿಕೊಳ್ಳಿ. ಆದಿ ಮಾನವನ ಯುಗಕ್ಕೆ ಹೋಗಿ. ಯಾವುದೇ ಕೋರೆ ದಾಡೆಗಳೂ, ಹರಿತವಾದ ಉಗುರುಗಳೂ, ಮಾಂಸಾಹಾರಿ ಪ್ರಾಣಿಗಳಂತೆ ಬಲವಾದ ಸ್ನಾಯುಗಳೂ ಇಲ್ಲದ ಮನುಷ್ಯ ಜೀವಿ ಒಬ್ಬ ಪ್ರಾಣಿಯಾಗಿ ಆಹಾರದ ಸರಪಳಿಯಲ್ಲಿ ಒಂದು ದುರ್ಬಲ ಜೀವಿ. ಆದರೆ, ಮೆದುಳಿನಲ್ಲಿ ಅಲ್ಲ. ಹೀಗಿರುತ್ತಾ ಆಹಾರಕ್ಕಾಗಿ ಪರದಾಡಬೇಕಿದ್ದ ಈ ಜೀವಿ ಅನಿವಾರ್ಯವಾಗಿ ಸಾಮೂಹಿಕ ಜೀವಿಯಾದ. ಆಯುಧಗಳನ್ನು ಹುಡುಕಿದ, ತನಗಿಂತ ದೊಡ್ಡ, ಶಕ್ತಿಶಾಲಿ ಪ್ರಾಣಿಗಳನ್ನು ಬೇಟೆಯಾಡಲು ಕಲಿತ. ಬೆಳೆಗಳನ್ನು ಬೆಳೆದು, ಕೆಲವು ಪ್ರಾಣಿ ಪಕ್ಷಿಗಳನ್ನೇ ಸಾಕಲು ಆರಂಭಿಸಿ, ಅವುಗಳನ್ನು ನಂಬಿಸಿ ವಂಚಿಸಿದ. ಮೆದುಳು ಇನ್ನಷ್ಟೂ ಬೆಳೆಯಿತು. ಕಲ್ಪನೆಯೂ ಬೆಳೆಯಿತು.

ಪ್ರಾಣಿಗಳಿಂದ ಅಪಾಯದ ಜೊತೆಗೆ ಆತನಿಗೆ ಅರ್ಥವೇ ಆಗದ ಭಯ ವಿಸ್ಮಯಗಳನ್ನು ಉಂಟುಮಾಡುವ ಪ್ರಾಕೃತಿಕ ಘಟನೆಗಳು ದಿಡೀರ್ ಎಂದು ಎರಗಿ ಆತನನ್ನು ಕಂಗೆಡಿಸುತ್ತಿದ್ದವು. ಸಿಡಿಲು, ಮಿಂಚು, ಅಬ್ಬರಿಸುವ ಬಿರುಗಾಳಿ, ಬೋರ್ಗರೆಯುವ ಮಳೆ, ಪ್ರವಾಹ, ಬೆಂಕಿ ಉಗುಳುವ ಜ್ವಾಲಾಮುಖಿ, ಭೂಮಿಯನ್ನೇ ಗಡಗಡ ನಡುಗಿಸಿ ಎಲ್ಲವನ್ನೂ ಮಗುಚಿಹಾಕುವ ಭೂಕಂಪ, ಮರಗಟ್ಟಿಸುವ ಚಳಿ, ಹಿಮಪಾತ….ಜೊತೆಗೆ ಕೊನೆಯೇ ಇಲ್ಲದಂತೆ ಕಾಣುವ ಆಕಾಶ, ಸೂರ್ಯ, ಚಂದ್ರ, ತಾರೆಗಳು, ಉಲ್ಕೆಗಳು; ದಾಟಲು ಸಾಧ್ಯವೇ ಇಲ್ಲದಂತೆ ಕಾಣುವ ಸಮುದ್ರ…ಸಾಮೂಹಿಕವಾಗಿ ಮನುಷ್ಯ ಪ್ರಾಣಿಗೆ ತಾನು ಎಷ್ಟು ದುರ್ಬಲ ಎಂದು ಅನಿಸಿರಬೇಕು.

ಹಾಗಾಗಿ ಇದನ್ನೆಲ್ಲಾ ಉಂಟುಮಾಡಿದ ಯಾವುದೋ ಒಂದು ಶಕ್ತಿಯೋ, ವ್ಯಕ್ತಿಯೋ ಇರಲೇಬೇಕು, ಕೊಲ್ಲಬಹುದಾದ ಅದು ಶರಣಾದರೆ ರಕ್ಷಿಸಲೂಬಹುದು ಎಂಬ ಕಲ್ಪನೆ ಹುಟ್ಟಿತು. ತನ್ನಿಂದ ಪ್ರಬಲವಾದ ಎಲ್ಲವನ್ನೂ ಪ್ರಾಣಿಗಳನ್ನು, ಪಕ್ಷಿಗಳನ್ನು… ಒಟ್ಟಿನಲ್ಲಿ ಪ್ರಕೃತಿಯನ್ನು ಆರಾಧಿಸಲು ಆರಂಭಿಸಿದ. ನಂತರದಲ್ಲಿ ಅದಕ್ಕೆ ತನ್ನದೇ ಪ್ರತಿರೂಪವಾದ ಮೂರ್ತ ರೂಪದ ದೇವರನ್ನು ತನ್ನ ಕಲ್ಪನೆಯಲ್ಲೇ ಸೃಷ್ಟಿಸಿದ. ಅವುಗಳಿಗೆ ಅಸಾಧಾರಣ ಶಕ್ತಿಗಳನ್ನೂ, ಕೊಟ್ಟ. ಆದರೂ ಯಾರು ದೇವರು ಎಂಬ ಬಗ್ಗೆ ಜಿಜ್ಞಾಸೆ ಅಂತೂ ಮನಸ್ಸಿನಲ್ಲಿ ಇತ್ತು. ಹಾಗಾಗಿಯೇ ಒಂದೋ ಅಥವಾ ಸಾವಿರಾರು ದೇವರುಗಳ ಹೆಸರಿನಲ್ಲಿ ಕಾದಾಡುವ ಮನುಷ್ಯನ ಡಿಎನ್ಎಯಲ್ಲಿಯೇ ಭಯ ಮತ್ತು ದೇವರು ಸೇರಿಹೋಗಿರಬೇಕು-ತನ್ನ ನೆರಳಿಗೆ ತಾನೇ ಹೆದರುವ ಮಗುವಿನಂತೆ! ಇಂದು ರಾಮ, ಕೃಷ್ಣಾದಿ ಸಾವಿರಾರು ದೇವರುಗಳ ವಕ್ತಾರರ- ಹಿಂದೂ ಧರ್ಮದಲ್ಲಿ ಮೂಲಗ್ರಂಥವೆನ್ನಲಾಗುವ- ಋಗ್ವೇದದಲ್ಲಿ ಈ ಪುರಾಣಗಳ ದೇವರುಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಉಲ್ಲೇಖವೇ ಇಲ್ಲ. ಆಲ್ಲಿರುವ ದೇವರುಗಳು- ಮಳೆ ಸುರಿಸುವ ಇಂದ್ರ, ಅಗ್ನಿ ಮತ್ತು ವಾಯು, ವರುಣ ಮುಂತಾದ ಶಕ್ತಿಗಳೇ. ರಾಮ, ದೂಮ, ಚೋಮರೆಲ್ಲಾ ನಂತರ ಬಂದವರು.

ಇಂತಹ ಕೊನೆಯಿಲ್ಲದ ಜಿಜ್ಞಾಸೆಗಳನ್ನು ಇಲ್ಲಿ ಉಲ್ಲೇಖಿಸಲು ಕಾರಣವೆಂದರೆ, ಮೇಲೆ ಹೇಳಿದ ನನ್ನ ಆಜ್ಜಿಯ “ರಾಮರಾಮ, ರಾಮರಾಮ, ರಾಮ”ನೇ! ತುಳು, ಅಲ್ಪಸ್ವಲ್ಪ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲದ, ತೀರಾ ಅಪರೂಪಕ್ಕೆ ಹೊರಗಿನ ಪ್ರಪಂಚದ ನೋಡಿದ, ತುಳುನಾಡಿನ ಬೂತಗಳೆಂದರೆ ಗಡಗಡನೇ ನಡುಗುವ, ಸಿಟ್ಟುಬಂದರೆ ಅವುಗಳಿಗೇ ವಾಚಾಮಗೋಚರ ಬೈಯ್ಯುವ ನಮ್ಮ ಆಜ್ಜಿಯ ತಲೆಯೊಳಗೆ ಉತ್ತರ ಭಾರತದ “ರಾಮ” ಅಷ್ಟು ಆಳವಾಗಿ ಕುಂಡೆಯೂರಿ ಕೂತದ್ದು ಹೇಗೆ ಎಂದು ಹಲವಾರು ಬಾರಿ ಯೋಚಿಸಿದ್ದೇನೆ.

ಬಹುಶಃ ಅದು ಅವರು ನೋಡಿದ ಯಕ್ಷಗಾನ ಮತ್ತು ಅಲ್ಲಲ್ಲಿ ಕೇಳಿರಬಹುದಾದ ರಾಮಾಯಣ ಪಠಣಗಳಿಂದ ಬಂದಿರಬೇಕು. ಆದರೂ ಬೇರೆ ದೇವರುಗಳಿಗಿಂತ ರಾಮನೇ ಯಾಕೆ ಅಷ್ಪು ಪ್ರಿಯವಾದ ಎಂದರೆ, ಆತ ಜೀವನಕ್ಕೆ ಹತ್ತಿರವಾದ ಒಬ್ಬ ಆದರ್ಶ ವ್ಯಕ್ತಿ ಎಂಬ ನಂಬಿಕೆಯಿಂದಲೇ ಆಗಿರಬಹುದು. ತುಳುನಾಡಿನ ಬೂತಗಳೆಲ್ಲವೂ ಶೋಷಣೆಯ ವಿರುದ್ಧ ಹೋರಾಡಿ ಮಡಿದ, ಕೊಲೆಯಾದ ಐತಿಹಾಸಿಕ ವ್ಯಕ್ತಿಗಳೇ. ಹಾಗಾಗಿ ನನ್ನ ರಾಮ ಅಥವಾ ಸೀತೆ ಒಬ್ಬ ಐತಿಹಾಸಿಕ ವ್ಯಕ್ತಿಗಿಂತ, ಕುವೆಂಪು ಅವರ ಸೃಷ್ಟಿಗಳಾದ ಹೂವಯ್ಯ, ಸೀತೆ, ಸುಬ್ಬಮ್ಮ, ನಾಯಿಗುತ್ತಿ ಮತ್ತು ಗುತ್ತಿನಾಯಿಯಂತೆ ಒಂದು ಕಥಾ ಪಾತ್ರ ಮಾತ್ರ. ಅವರನ್ನು ಅದೇ ದೃಷ್ಟಿಯಿಂದ ವಿಮರ್ಶಿಸುವುದು ಬೇರೆ ಮತ್ತು ಅವರು ಶಿವಮೊಗ್ಗ ತೀರ್ಥಹಳ್ಳಿ ಆಸುಪಾಸಿನಲ್ಲಿ ಬದುಕಿದ್ದರು ಎಂದು ನಂಬಿ ಬದುಕಿರುವುದು ಬೇರೆ. ಕುವೆಂಪು ಅವರ ಈ ಪಾತ್ರಗಳಿಗೆ ಪ್ರೇರಣೆಯಾದ ವ್ಯಕ್ತಿಗಳು ಇದ್ದಿರಲೇಬೇಕಾದರೂ ಅವರು ಇದ್ದರು, ಇಲ್ಲಿ, ಈ ನಿರ್ದಿಷ್ಟ ಜಾಗದಲ್ಲೇ ಹುಟ್ಟಿದರು ಎಂದು ನಂಬಲು ಆಗದು. ಕತೆ, ನಂಬಿಕೆ, ಪುರಾಣಗಳಿಗೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳದಷ್ಟು ನಾವು ಭ್ರಮೆಗೆ ಒಳಗಾಗುವುದು ಮೇಲೆ ಹೇಳಿದ ಅದೇ ಆದಿ ಮಾನವನ ಡಿಎನ್‌ಎಯ ಬಳುವಳಿಯೇ. ಹಾಗಾಗಿಯೇ ರಾಮ- ಜನರ ಮನಸ್ಸಿನಲ್ಲಿ ಕುಳಿತುಬಿಟ್ಟಿದ್ದಾನೆ. ನಮ್ಮ ಆಜ್ಜಿಯಂತೆಯೇ ಕುವೆಂಪು ಅವರನ್ನೂ ಅವನು ಬಿಟ್ಟಿಲ್ಲ. ಹಾಗಾಗಿಯೇ ನಿಮ್ಮ ಕಲ್ಪನೆಯ ರಾಮ ಯಾರು ಎಂದು ನೀವೇ ನಿರ್ಧರಿಸಬೇಕಾಗುತ್ತದೆ.

ನನಗೆ ರಾಮನ ಪರಿಚಯವಾದದ್ದು ಯಕ್ಷಗಾನ ತಾಳಮದ್ದಳೆಗಳಿಂದಲೇ ಮತ್ತು ನಂತರ ಕೆಲವು ಚಿಕ್ಕಪುಟ್ಟ ಪುಸ್ತಕಗಳಿಂದ. ಆದರೆ ಬಿಜೆಪಿಯ ಚಡ್ಡಿರಾಮನಿಗಿಂತ, ಅಜ್ಜಿಯ ಮೂಢರಾಮನಿಗಿಂತ ತದ್ವಿರುದ್ಧನಾದ ಕುವೆಂಪು ಅವರ ರಾಮನಿಗೆ ಹತ್ತಿರವಾದ ನನ್ನ ರಾಮ ನನ್ನ ಕಲ್ಪನೆಯಲ್ಲಿ ಹುಟ್ಟಿದ ಚಿಕ್ಕ ಬಾಲಕತೆ ಹೇಳಿ ಮುಗಿಸಿಬಿಡುತ್ತೇನೆ. ಇದನ್ನೇ ನಮ್ಮ ಕಡೆ “ರಾಮಾಯಣಡೊಂಜಿ ಪಿಟ್ಕಾಯಣ” ಎನ್ನುವುದು. ಇದು ವಾಲ್ಮೀಕಿ ಬರೆದದ್ದೆನ್ನಲಾದ ರಾಮಾಯಣಕ್ಕೆ ಸೇರಿಕೊಂಡ ಸಾವಿರಾರು ಉಪಕತೆಗಳಂತೆಯೇ.

ನಾನು ಆರನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ನನ್ನನ್ನು ವಿದ್ಯಾರ್ಥಿ ಸಂಘದ ಲೈಬ್ರರಿ ಮಂತ್ರಿ ಮಾಡಿದರು. ೭೦೦ರಷ್ಟು ಮಕ್ಕಳು ಕಲಿಯುತ್ತಿದ್ದ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಮೂರೋ ನಾಲ್ಕೋ ಮರದ ಕಪಾಟುಗಳಲ್ಲಿ ಧೂಳು ಹತ್ತಿಸಿಕೊಂಡು ಸ್ನಾನ ಮಾಡದೇ ಬಿದ್ದುಕೊಂಡಿದ್ದವು. ಅದಾಗ ತಾನೇ ಸೇರಿದ ಯುವಶಿಕ್ಷಕ ಜಯಂತ ನಾಯಕ್ ಮಾಷ್ಟ್ರು ನನ್ನ ಲೈಬ್ರರಿ ಖಾತೆಗೆ ಉಸ್ತುವಾರಿ. ಸಂಜೆ ಶಾಲೆ ಬಿಟ್ಟ ಮೇಲೆ ಇಬ್ಬರೂ ಪುಸ್ತಕಗಳ ಧೂಳು ಹೊಡೆದು ಅವುಗಳಿಗೆ ಒಂದೊಂದು ನಂಬರ್ ಕೊಟ್ಟು ಒಂದು ದೊಡ್ಡ ಲೆಜ್ಜರ್ ಪುಸ್ತಕದಲ್ಲಿ ಪಟ್ಟಿ ಬರೆದೆವು. ಚೆನ್ನಾಗಿ ಜೋಡಿಸಿದೆವು. ಇದು ಈ ಚಡ್ಡಿಗಳ ರಾಮನ ಲೆಕ್ಕ, ಕೃಷ್ಣನ ಲೆಕ್ಕದಂತೆ ಅಲ್ಲ. ಇದು ಅಯೋಧ್ಯೆಯ ನಿರ್ದಿಷ್ಟ ಜಾಗದಲ್ಲೇ ರಾಮ ಹುಟ್ಟಿದ, ದ್ವಾರಕೆಯ ಇಂತಹಾ ಜಾಗದಲ್ಲಿ ಇಷ್ಟೇ ಹೊತ್ತಿಗೆ ದೇವಕಿಗೆ ಹೆರಿಗೆ ನೋವು ಬಂದು ಕೃಷ್ಣ ಹುಟ್ಟಿದ ಎಂಬ ಕಾಲ್ಪನಿಕ ಇತಿಹಾಸವಲ್ಲ. ಯಾಕೆಂದರೆ ಇತ್ತೀಚೆಗೆ ನೂರು ವರ್ಷ ಪೂರೈಸಿದ ಈ ಶಾಲೆಯಲ್ಲಿ ಈಗ ಹಿಂದಿನಂತೆಯೇ ಧೂಳು ಹತ್ತಿ ಮಲಗಿರುವ ಪುಸ್ತಕಗಳನ್ನು ಕೇಳಬೇಡಿ. ಅಲ್ಲಿ ಇರಬಹುದಾದ ಲೆಜ್ಜರಿನಲ್ಲಿ ಈ ಪುಸ್ತಕಗಳ ಹೆಸರು, ನಂಬರು ಇದೆ ಮತ್ತು ಅದನ್ನು ಬರೆದ ಆಕ್ಷರಗಳು ಇದೇ ಬಾಲಕನದ್ದು.

ಅದಿರಲಿ, ಈಗ ರಾಮನ ವಿಷಯಕ್ಕೆ ಬರೋಣ. ಇಲ್ಲಿಯೇ ನಾನು ರಾಮನ ಕುರಿತ ಹಲವಾರು ಪುಸ್ತಕಗಳನ್ನು ಓದಿದ್ದು. ಒಂದು ದಿನ ಅಲ್ಲಿ ಒಂದು ಏಳೆಂಟು ದಪ್ಪ ಪುಸ್ತಕಗಳ ಅಟ್ಟಿ ಕಂಡಿತು. ಅದನ್ನು ನೋಡಿದರೆ ರಾಮಾಯಣದ ಒಂದೊಂದು ಖಾಂಡವನ್ನೂ ಪ್ರತ್ಯೇಕವಾಗಿ ಬರೆಯಲಾಗಿದೆ. ಎ.ಆರ್. ಕೃಷ್ಣ ಶಾಸ್ತ್ರಿಗಳ ಹೆಸರು ನೆನಪಿಗೆ ಬರುತ್ತದಾದರೂ ಬರೆದವರು ಅವರಲ್ಲ ಎನಿಸುತ್ತದೆ. ಅವುಗಳನ್ನು ಓದಬೇಕು ಎಂಬ ಆಸೆ ಎಷ್ಟು ಹೆಚ್ಚಾಯಿತು ಎಂದರೆ ಒಂದೊಂದೇ ಪುಸ್ತಕವನ್ನು ಮನೆ ಕೊಂಡೊಯ್ದು ರಾತ್ರಿ ಚಿಮಣಿ ದೀಪದಡಿ ಓದಿದರೂ, ಹಗಲು ಪಾಠ ನಡೆಯುತ್ತಿರುವಾಗಲೇ ಡೆಸ್ಕಿನ ಮರೆಯಲ್ಲಿ ಮೊಣಕಾಲ ಮೇಲೆ ಇಟ್ಟು ಓದಿದರೂ ಇದು ಮುಗಿಯುವುದಿಲ್ಲ.

ಕೊನೆಗೊಂದು ಉಪಾಯ ಮಾಡಿದೆ. ರಾಮಾಯಣದ ಎಲ್ಲಾ ಖಾಂಡಗಳನ್ನು ಹೊತ್ತುಕೊಂಡು ಮನೆಗೆ ಹೋದವನೇ ಮರುದಿನ ಶಾಲೆಗೆ ಹೋಗಲಿಲ್ಲ. ನಮ್ಮ ಚಿಕ್ಕ ಊರನ್ನು ಆವರಿಸಿರುವ ಕೋಂಗಲಪಾದೆ ಎಂಬ ಚಿಕ್ಕ ಬೆಟ್ಟಕ್ಕೆ ಹೋಗಿ ದೊಡ್ಡ ಬಂಡೆ ಮರೆಯಲ್ಲಿ ರಾಮಾಯಣ ಓದಲಾರಂಭಿಸಿದೆ. ಅನ್ನ, ನೀರು ಯಾವುದರ ನೆನಪೂ ಇಲ್ಲ! ಕತ್ತಲು ಬಿದ್ದು ಓದಲಾಗದೇ ಎಚ್ಚರ ಆದಾಗ ಮನೆಗೆ ಓಟ. ಮನೆಯಲ್ಲಿ ಇವನ ಲೈಬ್ರರಿ ಕೆಲಸದಂತೆ ತಡವಾಗುತ್ತಿದೆ ಎಂದೇ ಭಾವಿಸಿದ್ದರು. ಈ ಬಾಲ ರಾಮನ ಕಲ್ಪನೆ ಗರಿಗೆದರಿದ್ದು ಆಗಲೇ. ನಂತರದ ಏಳು ದಿನ ಶಾಲೆಯಾಗಿ ಇದ್ದದ್ದು- ಇದುವೇ ಬಂಡೆಯ ಬುಡ. ಇದುವೇ ಅಯೋಧ್ಯೆ, ಇದುವೇ ಕಿಷ್ಕಿಂಧೆ, ಇದುವೇ ಲಂಕೆ!

ಮರುದಿನ ರಾಮಾಯಣ ಮುಗಿದಾಗ ಶಾಲೆಗೆ ಹೋಗಬೇಕು! ಮನೆಯಲ್ಲೂ, ಶಾಲೆಯಲ್ಲೂ ಮಹಾಭಾರತ ಆರಂಭವಾಗುತ್ತದೆ ಎಂದಾಗುತ್ತಲೇ ನಡುಕ ಶುರುವಾಗಿತ್ತು. ಒಂದು ಏಳು ದಿನಗಳ ರಜಾ ಅರ್ಜಿ ಬರೆದು ತಂದೆಯ ನಕಲಿ ಸಹಿ ನಾನೇ ಹಾಕಿ ಕೊಟ್ಟೆ. ಮುಖ್ಯೋಪಾಧ್ಯಾಯರಾಗಿದ್ದ, ನನ್ನ ಮಟ್ಟಿಗೆ ಈಗಲೂ ಪೂಜ್ಯ ಕೃಷ್ಣರಾಜ ಶೆಟ್ಟಿ (ಜೈನರು) ಅವರು ಅದನ್ನು ಹಿಡಿದು ನನ್ನನ್ನು ಹೀಯಾಳಿಸಿ, ಬೈದು, ಬುದ್ಧಿವಾದ ಹೇಳಿ ಮನೆಗೆ ಕಳಿಸಿದರು. ಮರುದಿನ ನಾನು ಅತೀ ಬುದ್ಧಿವಂತ! ಅರ್ಧ ದಿನ ತಲೆನೋವೆಂದು ರಜೆ ಮಾಡಿದೆ. ಒಂದು ಉಪಾಯದ ರಜಾ ಅರ್ಜಿ ಬರೆದು ಅರ್ಧ ದಿನದ ರಜೆಗೆ ತಂದೆಯವರ ಸಹಿ ಹಾಕಿಸಿದೆ. ಏಳು ಸೇರಿಸಿ, ಏಳೂವರೆ ದಿನಗಳ ಅರ್ಜಿಯನ್ನು ಮಾಷ್ಟ್ರಿಗೆ ಕೊಟ್ಟೆ. ಅವರು ನಂಬಿದರು.

ಅರ್ಥ ಇಷ್ಟೇ. ಇಷ್ಟಪಟ್ಟು ರಾಮಾಯಣ ಓದಿದರೂ ನಾನು ರಾಮಾಯಣವನ್ನು ಅರ್ಥ ಮಾಡಿಕೊಳ್ಳದೆ, ಅದರ ಮೌಲ್ಯ, ಅಪಮೌಲ್ಯ ತಿಳಿದುಕೊಳ್ಳದೇ ವಂಚಕನಾಗಿದ್ದೆ. ತಂದೆ, ತಾಯಿ, ಗುರುಗಳನ್ನು ವಂಚಿಸಿದ್ದೆ- ಬರೇ ಆರನೇ ತರಗತಿಯಲ್ಲಿ. ಪುಸ್ತಕಗಳು ನನ್ನನ್ನು ವಂಚಿಸಲಿಲ್ಲ. ಆದರೀಗ ಇವರು ರಾಮನ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ರಾಮಾಯಣ, ನಂತರ ಮಹಾಭಾರತ ನನ್ನನ್ನು ವಂಚಿಸಲಿಲ್ಲ. ನಾನು ಜೀವನದ ಕೆಲವು ಸಮಾನ ಮೌಲ್ಯಗಳನ್ನು ಕಲಿತೆ; ಕೆಲವು ಆದರ್ಶಗಳನ್ನು ಬೆಳೆಸಿಕೊಂಡೆ, ಅನ್ಯಾಯದ ವಿರುದ್ಧ ಪ್ರತಿಭಟನೆ ಜೊತೆಗೆ ದೌರ್ಬಲ್ಯಗಳನ್ನು ಸೇರಿಸಿಕೊಂಡೆ.

ಅದೇನೇ ಇದ್ದರೂ, ರಾಮನನ್ನು ರಾಜಕೀಯ ಲಾಭಕ್ಕಾಗಿ ಬೀದಿಗೆಳೆದು ಎಳೆದಾಡಿದ, ಕೋಟಿಗಟ್ಟಲೆ ಹಣ ಮಾಡಿದ, ದುಷ್ಟ, ವಂಚಕ ಕ್ರಿಮಿಗಳ ಬಗ್ಗೆ ನನಗೆ ಸಿಟ್ಟಿದೆ. ಹಾಗೆಯೇ ನನ್ನ ಕಾಲ್ಪನಿಕ ಕಥಾಪಾತ್ರಗಳಾದ ರಾಮ, ಸೀತಾದಿಗಳ ಬಗ್ಗೆಯೂ, ರಾಮರೋಗ ಪೀಡಿತ ದಲಿತ, ಶೂದ್ರರ ಬಗ್ಗೆ, ಅದನ್ನು ವಿರೋಧಿಸಲು ಶಕ್ತಿ ಇಲ್ಲದ ನನ್ನ ಬಗ್ಗೆ ನನಗೆ ಕನಿಕರ ಇದೆ. ಹಾಗಾಗಿ, ನನ್ನ ರಾಮ, ನಿಮ್ಮ ರಾಮ, ಅವರಿವರ ರಾಮನ ಬಗ್ಗೆ ಇಲ್ಲಿಯೇ ಇನ್ನಷ್ಟು ಬರೆಯುವ ಸಂಕಲ್ಪ ಇದೆ.
ಈ ರಾಮ ಬೇರೆ, ಆ ರಾಮನಿಂದ ಆರಾಮವಿಲ್ಲ.

ಕಾಗೆ ಕೂರುವುದಕ್ಕೂ… ಕೊಂಬೆ ಮುರಿಯುವುದಕ್ಕೂ…
ಬೊಗಸೆಗೆ ದಕ್ಕಿದ್ದು – 7

ನಿಖಿಲ್ ಕೋಲ್ಪೆ

ಕಾಕತಾಳೀಯ! ಒಂದಕ್ಕೊಂದು ಸಂಬಂಧವೇ ಇಲ್ಲದ ಎರಡು ಘಟನೆಗಳು ಅವಿನಾಭಾವ ಸಂಬಂಧ ಇವೆಯೋ ಎಂಬಂತೆ ಭ್ರಮೆ ಹುಟ್ಟಿಸುವ ರೀತಿಯಲ್ಲಿ ನಡೆದರೆ ಅದನ್ನು ಕಾಕತಾಳೀಯ ಎನ್ನುತ್ತೇವೆ. ಅದೊಂದು ಮ್ಯಾಜಿಕಲ್ ಕ್ಷಣ! “ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಸರಿಹೋಯ್ತು” ಎಂದೋ “ಕಾಗೆ ಕೂರುವುದಕ್ಕೂ ಹಣ್ಣು ಉದುರುವುದಕ್ಕೂ ಸರಿಹೋಯ್ತು” ಎಂದೋ ಹೇಳುತ್ತಾರೆ. ವಾಸ್ತವದಲ್ಲಿ ಎರಡಕ್ಕೂ ಸಂಬಂಧ ಒಂದು ಚೂರೂ ಇಲ್ಲದಿದ್ದರೂ ಕಾಗೆ ಕೂತದ್ದೇ ಕೊಂಬೆ ಮುರಿದದ್ದಕ್ಕೋ, ಹಣ್ಣು ಉದುರಿದ್ದಕ್ಕೋ ಕಾರಣ ಎಂಬ ಭ್ರಮೆ ನಮ್ಮನ್ನು ಆವರಿಸುತ್ತದೆ.

ಕೆಟ್ಟು ಹೋದ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ ಎಂಬುದು ಹಳೆಯ ಮಾತು. ಬಹಳಷ್ಟು ಜನರಿಗೆ ಇದನ್ನು ಹೇಳಿದರೆ, ಅದು ಹೇಗೆ ಎಂದು ಕೇಳುತ್ತಾರೆ! “ಗಡಿಯಾರದ ಮುಳ್ಳು ೬.೦೦ ಗಂಟೆಯ ಹೊತ್ತು ತೋರಿಸುವ ಹೊತ್ತಿಗೇ ಕೆಟ್ಟು ನಿಂತಿತು ಎಂದಿಟ್ಟುಕೊಳ್ಳಿ. ನಂತರವೂ ಪ್ರತೀ ದಿನ ನೀವು ಬೆಳಗ್ಗೆ ಮತ್ತು ಸಂಜೆ ೬.೦೦ ಗಂಟೆ ಹೊತ್ತಿಗೆ ಗಡಿಯಾರ ನೋಡಿದರೆ ಅದು ಸರಿಯಾದ ಸಮಯವನ್ನೇ ತೋರಿಸುತ್ತದಲ್ಲ?” ಎಂದೆಲ್ಲಾ ಅಂತವರಿಗೆ ವಿವರಿಸಬೇಕಾಗುತ್ತದೆ.

ಬಹುಶಃ ಇಂತಹ “ಬುದ್ಧಿವಂತ” ಜನರೇ ಪ್ರಪಂಚದಲ್ಲಿ ತುಂಬಿರುವಂತಿದೆ. ಇಲ್ಲವಾದಲ್ಲಿ ಯಾವುದೇ ಒಬ್ಬ ಜ್ಯೋತಿಷಿ ಹೇಳಿದ್ದು ನಿಜವಾಗುತ್ತದೆ ಎಂದೋ, ಅಸ್ತಿತ್ವದಲ್ಲಿಯೇ ಇಲ್ಲದ ರಾಹು- ಕೇತುಗಳು ನಮ್ಮ ಜೀವನ, ಭವಿಷ್ಯದ ಮೇಲೆ ಪ್ರಭಾವ ಬೀರುತ್ತವೆ ಎಂದು ಯಾರಾದರೂ ನಂಬುತ್ತಾರೆಯೇ? ಮಂತ್ರಿಸಿದ ನೂಲಿನಿಂದ, ಅಥವಾ ನೀರಿನಿಂದ ರೋಗ ಗುಣವಾಗುತ್ತದೆ ಎಂದರೆ ಯಾರಾದರೂ ನಂಬುತ್ತಾರೆಯೇ? ಇವುಗಳಿಗೆ ದೇವರ, ನಂಬಿಕೆಯ, ಡೋಂಗಿ ವಿಜ್ಞಾನದ ಬಣ್ಣ ನೀಡಿ ನಂಬಿಸಲಾಗುತ್ತದೆ. ವಿಜ್ಞಾನಿಗಳೇ ಇಂತವುಗಳನ್ನು ನಂಬುವಾಗ ಸಾಮಾನ್ಯ ಜನರ ಪಾಡೇನು? ಮಂತ್ರದಿಂದ ಆಥವಾ ಪಾಯಸದಿಂದ ಮಕ್ಕಳಾಗುತ್ತವೆ ಎಂದು ಪುರಾಣಗಳಲ್ಲಿ ಹೇಳಿದ್ದರೂ, ಹಾಗೆಂದು ಈಗ ಯಾರಾದರೂ ಯಾರಾದರೂ ನಂಬುತ್ತಾರೆಯೆ? ಅದೂ ಮಕ್ಕಳಾಗುವುದು ಹೇಗೆ ಎಂದು ಸ್ವಲ್ಪ ದೊಡ್ಡ ಮಕ್ಕಳಿಗೂ ಗೊತ್ತಿರುವಾಗ?! ಅಥವಾ ನಂಬುವುದಿಲ್ಲ ಎಂದು ನಂಬುವುದಾದರೂ ಹೇಗೆ?- ನವಿಲಿಗೆ ಕಣ್ಣೀರಿನಿಂದ ಮಕ್ಕಳಾಗುತ್ತವೆ ಎಂದೊಬ್ಬ ಬೃಹಸ್ಪತಿ ನ್ಯಾಯಾಧೀಶನೇ ಹೇಳಿರುವಾಗ!?

ಅದಿರಲಿ, ನಾನೀಗ ನನ್ನ ಬಾಲ್ಯದಲ್ಲಿ ನಡೆದ, ನಿಮಗೆ ನಂಬಲು ಕಷ್ಟವಾಗಬಹುದಾದ ಎರಡು ಕಾಕತಾಳೀಯ ಘಟನೆಗಳನ್ನು ನಿಮಗೆ ಹೇಳುತ್ತೇನೆ.

ನಾಲ್ಕು ದಶಕಗಳಿಗೂ ಹಿಂದಿನ ಕತೆಯಿದು. ನಾನಾಗ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಒಂದು ದಿನ ಸಂಜೆ ಹೈಸ್ಕೂಲಿನಿಂದ ಮನೆಗೆ ಬರುತ್ತಿದ್ದಂತೆ ಹಿತ್ತಿಲಲ್ಲಿ ಆರನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ತಮ್ಮನೂ, ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ದೊಡ್ಡ ತಂಗಿಯೂ ಹಿತ್ತಿಲಲ್ಲಿ ಬಹಳ ತನ್ಮಯತೆಯಿಂದ ಏನೋ ಮಹಾನ್ ಕೆಲಸದಲ್ಲಿ ತೊಡಗಿದ್ದಾರೆ. ಕುತೂಹಲ ತಾಳದೆ ಹೋಗಿ ಏನೆಂದು ನೋಡಿದರೆ ಇಬ್ಬರೂ ಹಳೆಯ ನೇಗಿಲ ಮೊನೆಯಲ್ಲಿ ಗುಂಡಿ ತೋಡಿ ತುಳಸಿ ಗಿಡ ನೆಡಲು ಸಿದ್ಧತೆ ನಡೆಸುತ್ತಿದ್ದಾರೆ. ಬದಿಯಲ್ಲಿ ಒಂದು ಚಿಕ್ಕ ಬುಟ್ಟಿಯಲ್ಲಿ ಬೂದಿ, ಬಳೆಚೂರುಗಳು, ಅದೂ ಇದೂ ಮಣಿ ಸರಕುಗಳೆಲ್ಲಾ ಇದ್ದವು!

ಇದೇನಿದೆಂದು ಕೇಳಿದರೆ, ಯಾರೋ ಶಾಲೆಯಲ್ಲಿ ಹೇಳಿದ್ದಂತೆ: ಹಿತ್ತಿಲಲ್ಲಿ ಗುಂಡಿ ತೋಡಿ, ಬೂದಿ, ಬಳೆಚೂರು ಮಣ್ಣು ಮಸಣ ಎಲ್ಲಾ ಹಾಕಿ ತುಳಸಿ ಗಿಡ ನೆಡಬೇಕಂತೆ. ಪ್ರತಿದಿನ ಬೆಳಿಗ್ಗೆ, ಸಂಜೆ ನೀರು ಹಾಕಬೇಕಂತೆ! ಒಂದು ವಾರ ಬಿಟ್ಟು ಗಿಡ ಅಗೆದರೆ ಅಡಿಯಲ್ಲಿ ಚಿನ್ನ ಸಿಗುತ್ತದಂತೆ! ನಾನು ನಕ್ಕು ಮನೆಗೆ ಹೋದೆ. ಇವರ ಚಿನ್ನದ ಬೇಸಾಯ ಮುಂದುವರಿದಿತ್ತು. ಪ್ರತೀ ನಿತ್ಯ ಬೆಳಿಗ್ಗೆ ಬೇಗನೇ ಎದ್ದು ನೀರು ಹಾಕುವುದು ನಡೆದೇ ಇತ್ತು.

ಒಂದು ವಾರ ಕಳೆಯಿತು. ನಾನು ಸಂಜೆ ಮನೆಗೆ ಬಂದು ನೋಡುತ್ತೇನೆ: ತಮ್ಮ, ತಂಗಿ, ತಂದೆ, ತಾಯಿ, ಅಜ್ಜಿಯಂದಿರು, ಎಲ್ಲಾ ಭಾರೀ ಖುಷಿಯಲ್ಲಿ ಇದ್ದಾರೆ! ಹಾಗೆ ಹೀಗೆ ಮಾತುಗಳು! ಏನೆಂದು ಕೇಳಿದರೆ, “ಚಿನ್ನ ಸಿಕ್ಕಿತು! ಮಕ್ಕಳಿಗೆ ಚಿನ್ನ ಸಿಕ್ಕಿತು!” ಎಂದರು ತಂದೆ! ಹೌದು! ಗಿಡವನ್ನು ಅಗೆದು ತೆಗೆದಾಗ ಮಕ್ಕಳಿಗೆ ಚಿನ್ನದ ಬೆಂಡೋಲೆಯೊಂದು ಸಿಕ್ಕಿತ್ತು. ಆದರೆ, ಅದು ಸ್ವಲ್ಪ ಕರಕಲಾಗಿತ್ತು. ಸಹಜವಾಗಿಯೇ ಅದು ಗಿಡದಲ್ಲಿ ಬೆಳೆದ ಚಿನ್ನವಾಗಿರದೆ, ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಚಿನ್ನದ ಬೆಂಡೋಲೆಗಳಲ್ಲಿ ಒಂದಾಗಿತ್ತು. ತಾಯಿಯ ಬಳಿ ಇದ್ದ ಎರಡು ಜೊತೆ ಬೆಂಡೋಲೆಗಳಲ್ಲಿ ಒಂದು ಜೊತೆ ಕಪಾಟಿನಲ್ಲಿ ಇತ್ತು. ಅದನ್ನವರು ಕಾಗದದಲ್ಲಿ ಸುತ್ತಿ ಇಟ್ಟಿದ್ದರಂತೆ. ಅದನ್ನು ಎಷ್ಟು ಹುಡುಕಿದರೂ, ಮನೆಯ ಬೂತಗಳಿಗೆ ಹರಕೆ ಹೊತ್ತರೂ ಅವು ಸಿಕ್ಕಿರಲಿಲ್ಲ. ಕಪಾಟಿನಿಂದ ಅದನ್ನು ಯಾರೂ ಕದ್ದೊಯ್ಯುವಂತೆಯೂ ಇರಲಿಲ್ಲ.

ನನ್ನ ತಂದೆ ಶೆರ್ಲಾಕ್ ಹೋಮ್ಸ್ ತರ ಲೆಕ್ಕಾಚಾರ ಹಾಕಿ ಒಂದು ವಿಶ್ಲೇಷಣೆ ಮಾಡಿದರು. ತಾಯಿ ಕಪಾಟು ತೆರೆದಾಗ ಅದು ಹೇಗೋ ಬೆಂಡೋಲೆ ಇದ್ದ ಕಾಗದದ ಪೊಟ್ಟಣ ಕೆಳಗೆ ಬಿದ್ದಿರಬೇಕು. ಗುಡಿಸುವಾಗ ಕಸದ ಜೊತೆಗೆ ಮನೆಯ ಒಲೆ ಸೇರಿರಬೇಕು. ಕೃಷಿಕರಾದ ನಮ್ಮ ಬಚ್ಚಲ ಪಕ್ಕದಲ್ಲೇ ದೊಡ್ಡ ಬೂದಿ ಗುಂಡಿ ಇತ್ತು. ಮನೆ ಒಲೆಗಳ ಬೂದಿ, ಬಚ್ಚಲು ಒಲೆಯ ಬೂದಿ, ಭತ್ತ ಬೇಯಿಸುವ ಒಲೆಗಳ ಬೂದಿ, ಎಮ್ಮೆ ದನ ಕೋಣಗಳಿಗೆ ಕಲಗಚ್ಚು ಕಾಯಿಸುವ ಒಲೆಯ ಬೂದಿ ಬಂದು ಸೇರುವುದು ಈ ಬೂದಿ ಗುಂಡಿಯನ್ನೇ. ಮಕ್ಕಳು ಗಿಡ ನೆಡುವಾಗ ಅಲ್ಲಿಂದ ತೆಗೆದು ಹಾಕಿದ ಬೂದಿಯಲ್ಲಿ ಈ ಬೆಂಡೋಲೆಯೂ ಇತ್ತು. ಇದು ಸರಿಯಾದ ವಿಶ್ಲೇಷಣೆ.

ಆದರೆ, ಅಗಾಧವಾದ ಬೂದಿ ರಾಶಿಯೊಳಗಿನಿಂದ ಮಕ್ಕಳು ತೆಗೆದ ಒಂದು ಚಿಕ್ಕ ಬುಟ್ಟಿ ಬೂದಿಯಲ್ಲೇ ಬೆಂಡೋಲೆ ಬರುವ ಸಾಧ್ಯತೆ ತೀರಾ ತೀರಾ ಕಡಿಮೆಯಾದುದರಿಂದ ಮುದುಕರೆಲ್ಲಾ ಅದರಲ್ಲೂ ಬೂತದ ಕಾರಣಿಕ ಹುಡುಕಿ, ಅದನ್ನೇ ನಂಬಿದರು. ನನ್ನ ದೊಡ್ಡ ಅಜ್ಜಿ ಹೋದದ್ದು ಹೋಯ್ತು, ಬಂದದ್ದು ಬಂತು ಎಂಬಂತೆ ಸಮಾಧಾನದಿಂದ ಇದ್ದರೂ, ಅಸಾಧ್ಯ ಪಿಟ್ಟಾಸಿಯಾದ ಚಿಕ್ಕ ಅಜ್ಜಿ ಆ ಬೂದಿ ಗುಂಡಿ ಜಾಲಾಡಿದರೂ ಇನ್ನೊಂದು ಬೆಂಡೋಲೆ ಸಿಗಲಿಲ್ಲ! ಮಕ್ಕಳು ಮತ್ತೆ ಗಿಡ ನೆಟ್ಟರೂ ಸಿಗಲಿಲ್ಲ.

ಮತ್ತೊಂದು ಘಟನೆ ಅದಕ್ಕಿಂತಲೂ ಮೊದಲು, ನಾನೇ ಮೂರನೆಯೋ, ನಾಲ್ಕನೆಯೋ ಕ್ಲಾಸಿನಲ್ಲಿ ಇದ್ದಾಗ ನಡೆದದ್ದು. ಒಂದು ಸಂಜೆ ನಾನು ಅಂಗಳದಲ್ಲಿ ಆಟವಾಡುತ್ತಾ ಇದ್ದೆ. ಅಲ್ಲೇ ಅಡುಗೆ ಮನೆ ಬಾಗಿಲ ಹೊರಗೆ ಇದ್ದ ತೆರೆದ ಜಾಗದಲ್ಲಿ ದೊಡ್ಡದೊಂದು ಅರೆಯುವ ಕಲ್ಲಿನಲ್ಲಿ ಅಕ್ಕಿ ಕಡೆಯುತ್ತಾ ತಾಯಿ ಮತ್ತು ಮೀನ್‌ದ ಅಬ್ಬ (ಮೀನಿನ ಅಜ್ಜಿ) ಪಟ್ಟಾಂಗದಲ್ಲಿ ತೊಡಗಿದ್ದರು. ಆಗ ಗದ್ದೆ ಕೆಲಸಕ್ಕೆ ತುಂಬಾ ಜನ ಬರುತ್ತಿದ್ದರಿಂದ ತುಂಬಾ ಅಕ್ಕಿ ಕಡೆಯಬೇಕಾಗಿತ್ತು.

ಇಲ್ಲಿ ಮೀನಿನ ಅಬ್ಬನ ಬಗ್ಗೆ ಕರಾವಳಿಯಲ್ಲಿ ಇದ್ದ ಒಂದು ರೀತಿಯ ಸೌಹಾರ್ದಕ್ಕೆ ಸಾಕ್ಷಿಯಾಗಿ ಎರಡು ಮಾತುಗಳನ್ನು ಬರೆಯಬೇಕು. ಅವರು ನಮ್ಮ ಸಂಬಂಧಿ ಅಲ್ಲ. ಉಪ್ಪಳ, ಮಂಜೇಶ್ವರ ಕಡೆಯ ಮೊಗವೀರರು. ತನಿಯಾರು ಎಂದವರ ಹೆಸರು. ಒಣ ಮೀನಿನ ಮಾರಾಟಕ್ಕೆ ಈ ಕಡೆ ಬಂದರೆ, ವಾರಗಳ ತನಕ ನಮ್ಮ ಮನೆಯಲ್ಲೇ ವಾಸ. ಬೆಳಗಾತ ಎದ್ದು ಸುತ್ತಲಿನ ಒಂದೊಂದೇ ಊರು ತಿರುಗಿ ಮೀನು ಮಾರಿ ಸಂಜೆ ಬರುತ್ತಿದ್ದರು. ಅವರು ಪಡೆದ ಅಕ್ಕಿ, ಮುಡಿಯಾಗಿ ನಮ್ಮ ಅಟ್ಟದಲ್ಲೇ ದಾಸ್ತಾನು. ಅದನ್ನು ನಂತರ ಪೇಟೆಯಲ್ಲಿ ಮಾರುತ್ತಿದ್ದರು. ಗಂಡ ಸತ್ತಿದ್ದರೂ ಬಾಯಿ ಬರದ ಮಗಳನ್ನು ಒಬ್ಬಂಟಿಯಾಗಿ ಸಾಕಿದ ಗಟ್ಟಿಗಿತ್ತಿ. ಬಹಳ ವಯಸ್ಸಾಗುವ ವರೆಗೂ ಬರುತ್ತಿದ್ದರು.

ಇರಲಿ, ಅಕ್ಕಿ ಕಡೆಯುತ್ತಿದ್ದ ತಾಯಿ ಮತ್ತು ಅವರ ಪಟ್ಟಾಂಗ ಕೇರೆ ಹಾವಿನ ಕಡೆ ಹರಿಯಿತು. ನನ್ನ ಕಿವಿ ನೆಟ್ಟಗಾಯಿತು. ಅವರ ಸಂಭಾಷಣೆ ಹೆಚ್ಚು ಕಡಿಮೆ ಹೀಗಿತ್ತು.

ತಾಯಿ: ಕೇರೆ ಹಾವನ್ನು ಮೊರಜ (ಬತ್ತದ ಹುಲ್ಲಿನ ಹಗ್ಗ), ಮಹಾರಾಜ ಎಂದೆಲ್ಲಾ ಕರೆಯುವುದು ಯಾಕೆ?

ಅಬ್ಬ: ಹಾಗೆಲ್ಲಾ ಹೆಸರು ಹಿಡಿದು ಕರೆದರೆ ಅದಕ್ಕೆ ಅವಮಾನವಾಗಿ ಹೋಗಿಬಿಡುತ್ತದೆ.

(ಆಗೆಲ್ಲಾ ಕೇರೆ ಮನೆಗೆ ಬಂದರೆ, ಜನರಿಗೆ ಕುಶಿ. ಇಲಿ ಕಾಟ ಕಡಿಮೆ ಆಗುತ್ತದೆ ಎಂದು. ನಿರುಪದ್ರವಿ ಕೇರೆಯನ್ನು ಯಾರು “ಕ್ಯಾರೆ?” ಎನ್ನುತ್ತಿರಲಿಲ್ಲ. ಆದರೆ ಕೇರೆ ಎಂದು ಹೆಸರು ಹೇಳಿ ಕರೆಯುತ್ತಿರಲಿಲ್ಲ!)

ತಾಯಿ: ಕೇರೆ ರಾತ್ರಿ ಹೊತ್ತು ಮನೆಯಲ್ಲಿ ನಿಲ್ಲುವುದಿಲ್ಲ ಅಲ್ಲವಾ?

ಅಬ್ಬ: ಅದಕ್ಕೆ ಮರ್ಯಾದೆ ಇಲ್ಲವಾ? ದಿನಕ್ಕೆ ಒಂದು ಮುಡಿ ಉಪ್ಪು ಖರ್ಚಾಗುವ ದೊಡ್ಡ ದೊಡ್ಡ ಮಹಾರಾಜ ಮನೆಯಲ್ಲಿ ಮಾತ್ರ ಅದು ರಾತ್ರಿ ನಿಲ್ಲುವುದು!

ತಾಯಿ: ಕೇರೆಗೆ ಹೆದರುವುದು ಯಾಕೆ ಅಲ್ವಾ? ಅದೇನೂ ಕಚ್ಚುವುದಿಲ್ಲ. ಕಚ್ಚಿದರೂ ವಿಷವೇನೂ ಇಲ್ಲ!

ಅಬ್ಬ: ಏನು?! ವಿಷ ಇಲ್ಲವ?! ಅದು ಕಚ್ಚುವುದಿಲ್ಲವ?! ಕಚ್ಚಿದರೆ ಮನುಷ್ಯ ಬದುಕುತ್ತಾನ?! ಕೇರೆ ಅಂದರೆ….

ಅವರು ಮಾತು ಮುಗಿಸುವ ಮೊದಲೇ ದೊಡ್ಡದೊಂದು ಕೇರೆ ಹಾವು ಮೇಲೆ ಮಾಡಿನಲ್ಲಿ ಓಡಾಡುತ್ತಿದ್ದದ್ದು ದೊಪ್ಪನೇ ಇವರ ಪಕ್ಕದಲ್ಲಿ ಬಿತ್ತು. ಕೇರೆ, ತಾಯಿ, ಅಬ್ಬ ಮೂವರೂ ಬದುಕಿದರೆ ಬೇಡಿ ತಿಂದೇವು ಎಂದು ಮೂರು ದಿಕ್ಕಿಗೆ ಓಡಿದರು. ನಾನು ಬಿದ್ದು ಬಿದ್ದು ನಕ್ಕು, ನಂತರ ಸರಿಯಾಗಿ ಬೈಗುಳ ತಿಂದೆ!

ಇವರು ಕೇರೆ ಹಾವಿನ ಬಗ್ಗೆ ಮಾತನಾಡುತ್ತಿರುವಾಗಲೇ ಅದು ಅವರ ಪಕ್ಕದಲ್ಲೇ ಉದುರಿ ಬೀಳುವುದು ಕಡಿಮೆ ಕಾಕತಾಳೀಯವೇ!?

ನಮ್ಮ ನಿತ್ಯ ಜೀವನದಲ್ಲಿ ನೂರಾರು ಕಾಕತಾಳೀಯಗಳು ನಡೆಯುತ್ತಿರುತ್ತವೆ. ನೀವು ಯಾವುದಾದರೂ ಒಂದು ವಿಷಯದ ಬಗ್ಗೆ ಮಾತಾಡುತ್ತಲೋ, ಯೋಚಿಸುತ್ತಲೋ ಇರುತ್ತೀರಿ. ಟಿವಿಯಲ್ಲಿ ಪಕ್ಕನೇ ಅದುವೇ ಮಾತು ಬರುತ್ತದೆ! ಆದರೂ ನಾವು ಅದನ್ನು ಗಮನಿಸುವುದಿಲ್ಲ. ಹಾಳಾದ ಗಡಿಯಾರದಂತೆ ಯಾವುದೋ ಜ್ಯೋತಿಷಿ ಹೇಳಿದ್ದು ಒಂದೆರಡು ಸಲ ನಿಜವಾದರೆ ಅದನ್ನೇ ಪ್ರಚಾರ ಮಾಡುತ್ತೇವೆ. ನೂರು ಬಾರಿ ಸುಳ್ಳಾದರೂ ಪಾಠ ಕಲಿಯುವುದಿಲ್ಲ. ಒಂದು ವೇಳೆ ಕಲಿಯುತ್ತಿದ್ದರೆ ಟಿವಿಯಲ್ಲಿ ಬರುವ ಬ್ರಹ್ಮಾಂಡ ಜ್ಯೋತಿಷಿಗಳ ಒಂದು ಅಂಡವಾದರೂ ಉಳಿದಿರುತ್ತಿತ್ತೆ!? ಸುಳ್ಳುಗಳನ್ನು ನಂಬುವುದು ನಮಗೆ ಅಭ್ಯಾಸವಾಗಿದೆ, ರಕ್ತಗತವಾಗಿದೆ. ಹಾಗಾಗಿಯೇ ದೇಶದಲ್ಲಿ ಸುಳ್ಳರದ್ದೇ ಕಾರುಬಾರು ನಡೆಯುತ್ತಿದೆ. ಸತ್ಯ ನಮಗೆ ಬೇಕಾಗಿಲ್ಲ! ವಿಜ್ಞಾನದ ಲಾಭಗಳು ಬೇಕು, ವಿಜ್ಞಾನ ಬೇಕಾಗಿಲ್ಲ. ನಮಗೆ ಆಜ್ಞಾನದ ಕೊಳಚೆ ಗುಂಡಿಯೇ ಇಷ್ಟ!

ನಮ್ಮ ಬೊಗಸೆಗೆ ದಕ್ಕಿದ್ದಷ್ಟೇ ನಮ್ಮದು!
ನಿಖಿಲ್ ಕೋಲ್ಪೆ

ಸಾಮಾನ್ಯವಾಗಿ ಅಂಕಣಗಳಿಗೆ ಇಡಲಾಗುವ ಹೆಸರುಗಳಿಗೆ ಯಾರೂ ವಿವರಣೆಯನ್ನೇನೂ ನೀಡುವುದಿಲ್ಲ. ಆ ಕಾರಣದಿಂದಲೇ ನಾವು ಅಂತದೊದ್ದೊಂದು ಪುಟ್ಟ ವಿವರಣೆಯೊಂದಿಗೇ ಆರಂಭಿಸೋಣ. ಅಂಕಣಗಳ ಹೆಸರುಗಳು- ಅಲ್ಲಿ ಮುಂದೆ ಬರಬಹುದಾದ ವಿಷಯಗಳ ಕುರಿತು ಸೂಚನೆಯೊಂದನ್ನು ನೀಡುವುದಂತೂ ನಿಜ.

ನಾನು ಹಿಂದೆ ಕೆಲವು ಅಂಕಣಗಳನ್ನು ಬರೆದದ್ದುಂಟು. ಉದಾಹರಣೆಗೆ ೧೯೯೦ರ ಆರಂಭದ ಹೊತ್ತಿಗೆ ನಾನು “ಗೋಲದ ಸುತ್ತ ಒಂದು ಸುತ್ತು” ಎಂಬ ಒಂದು ಅಂಕಣವನ್ನು ಬರೆಯುತ್ತಿದ್ದೆ. ಹೆಸರೇ ತಿಳಿಸುವಂತೆ, ಕಳೆದೊಂದು ವಾರದಲ್ಲಿ ಪ್ರಪಂಚದಲ್ಲಿ, ಅದರಲ್ಲೂ ಮುಖ್ಯವಾಗಿ, ಆಗ “ತೃತೀಯ ರಾಷ್ಟ್ರಗಳು” ಎಂದು ಕರೆಯಲಾಗುತ್ತಿದ್ದ ಬಡ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ನಡೆದ ಪ್ರಮುಖ ವಿದ್ಯಮಾನಗಳನ್ನು ಚುಟುಕಾಗಿ ಬರೆಯುತ್ತಿದ್ದೆ. ನಮ್ಮ ಸ್ಥಳೀಯ ಪತ್ರಿಕೆಗಳಲ್ಲಿ ವಿದೇಶಿ ಸುದ್ದಿಗಳು ಕಾಟಾಚಾರಕ್ಕೆ ಪ್ರಕಟವಾಗುತ್ತಿದ್ದ, ಇಂಟರ್ನೆಟ್ ಇತ್ಯಾದಿಗಳು ಕೇಳಿ ಮಾತ್ರ ಗೊತ್ತಿದ್ದ ಕಾಲದಲ್ಲಿ ಇಂತಹ ಸುದ್ದಿಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ನಂತರ “ಅನಾವರಣ” ಎಂಬ, ವಾರದಲ್ಲಿ ಐದು ದಿನ ಇರುತ್ತಿದ್ದ ಅಂಕಣವನ್ನು ಸಂಜೆ ಪತ್ರಿಕೆಯೊಂದಕ್ಕೆ ಬರೆಯುತ್ತಿದ್ದೆ. ಇದರಲ್ಲಿ ಪ್ರಚಲಿತ ವಿದ್ಯಮಾನಗಳ ಬೇರೆಯೇ ಮುಖಗಳು ಅಥವಾ ಆಯಾಮಗಳನ್ನು ಓದುಗರ ಮುಂದೆ “ಅನಾವರಣ”ಗೊಳಿಸಲಾಗುತ್ತಿತ್ತು. ನಂತರ ೨೦೦೦ರ ದಶಕದಲ್ಲಿ ಮೈಸೂರಿನಲ್ಲಿ ಗೆಳೆಯ ವಿಲ್ಫ್ರೆಡ್ ಡಿಸೋಜಾ ಅವರು ಹೊರತರುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ವಿಷಯಗಳ ಕುರಿತ “ಸಾಲುಹೆಜ್ಜೆ” ಮಾಸ ಪತ್ರಿಕೆಗೆ ಕೆಲಸ ಮಾಡುತ್ತಿದ್ದಾಗ, “ಆಲದ ಬೀಜ” ಎಂಬ ಅಂಕಣವು ಪಂಚಾಯಿತಿ ರಾಜ್ ಕಾರ್ಯಕರ್ತರು ಮತ್ತು ತರಬೇತಿದಾರರ ನಡುವೆ ಜನಪ್ರಿಯವಾಗಿತ್ತು. ಅದರಲ್ಲಿ ಜೀವನದಲ್ಲಿ ನಾವು ನೋಡಿದ, ಅನುಭವಿಸಿದ ಚಿಕ್ಕಪುಟ್ಟ- ಹೆಚ್ಚಿನವರು ಗಮನಿಸಿಯೂ ಇರದ ವಿಷಯಗಳಲ್ಲಿ ಅಡಗಿರುವ ದೊಡ್ಡದೊಂದು ವಿಷಯವನ್ನು ತೋರಿಸಿಕೊಡುವುದು ಉದ್ದೇಶವಾಗಿತ್ತು. ಸಾಸಿವೆ ಕಾಳಿನ ಗಾತ್ರವೂ ಇರದ ಆಲದಬೀಜದೊಳಗೆ ಭವಿಷ್ಯದ ಅಷ್ಟು ಬೃಹತ್ತಾದ ಮರ ಒಂದರ ಜೀವ-ಜೀವಾಳವೆಲ್ಲವೂ ಆಡಗಿದೆ ಎಂದು ಗಮನಿಸುವವರು ಕಡಿಮೆ. ಇದುವೇ ಬೊಗಸೆಗೆ ದಕ್ಕಿದ್ದು!

ಇರಲಿ, ಇಲ್ಲಿ ಈಗ ಒಂದು ಅಂಕಣ ಬರೆಯಬೇಕು ಎಂದು ಯೋಚಿಸಿದಾಗ ಬರೆಯಬಹುದಾದ ಸಾವಿರಾರು ವಿಷಯಗಳು ಮನಸ್ಸಿನ ಮುಂದೆ ಹಾದುಹೋದವು. ಇದಕ್ಕೊಂದು ಹೆಸರಿಡಿ ಎಂದು ಹೇಳಿದಾಗ ಒಂದೇ ಒಂದು ನಿಮಿಷದಲ್ಲಿ “ಬೊಗಸೆ” ಎಂಬುದು ಹೊಳೆಯಿತು. ಇದಕ್ಕೆ ಕಾರಣವಾದದ್ದು ಇಲ್ಲಿರುವ ಈ ದಯನೀಯ ಚಿತ್ರ ಮತ್ತು ಅಲ್ಲಿ ಕಾಣುವ ಬೊಗಸೆ. ನಮ್ಮ ಸುತ್ತಲೂ ಇರುವ ಜ್ಞಾನ, ತಿಳುವಳಿಕೆ, ಅನುಭವ, ವಿವೇಕಗಳ ಮಹಾಸಾಗರದಲ್ಲಿ ನಮಗೆ ಒಮ್ಮೆಗೆ ದಕ್ಕುವುದೊಂದು ಬೊಗಸೆ ಮಾತ್ರವೇ. ಆ ಬೊಗಸೆಗೆ ದಕ್ಕಿದ್ದು ಕೂಡಾ ಶಾಶ್ವತವಾಗಿರದೆ ಬೆರಳ ಸಂದುಗಳಲ್ಲಿ ಸೋರಿಹೋಗುವಂತದ್ದೇ. ಒಂದು ಬೊಗಸೆ, ನೀರು, ಒಂದು ಬೊಗಸೆ ಧಾನ್ಯ, ಒಂದು ಬೊಗಸೆ ಅವಲಕ್ಕಿ… ಹೀಗೆ ಬೊಗಸೆಯೆಂಬುದು ಒಂದು ಅನಾದಿ ಕಾಲದ ಕೊಡುಕೊಳ್ಳುವಿಕೆಯ ಸಂಕೇತವಾಗಿದೆ. ಆದರೆ, ಒಂದು ಸಹಜೀವಿಗೆ ಒಂದು ಬೊಗಸೆ ಶುದ್ಧ ಕುಡಿಯುವ ನೀರನ್ನೂ ಕೊಡಲಾಗದ, ಚರಂಡಿಯ ಕಲುಷಿತ ನೀರನ್ನು ಕುಡಿಯಬೇಕಾದ ಸಮಾಜ ಒಂದರಲ್ಲಿ ನಾವು ಬದುಕಿದ್ದೇವೆ ಎಂಬುದನ್ನು ಈ ಚಿತ್ರ ಮತ್ತೆಮತ್ತೆ ನೆನಪಿಸಿ ಚುಚ್ಚುತ್ತದೆ. ಇಲ್ಲಿರುವ ಬೊಗಸೆಯು ಕಾಡುತ್ತದೆ.

ಬಹಳ ಕಾಲ ಈ ಚಿತ್ರವು “ಫೇಸ್‌ಬುಕ್”‌ನಲ್ಲಿ ನನ್ನ ಪ್ರೊಫೈಲ್ ಚಿತ್ರವಾಗಿತ್ತು. ಅದನ್ನು ನೋಡಿದ ತಕ್ಷಣವೇ ಅದು ನನ್ನನ್ನು ತಲ್ಲಣಗೊಳಿಸಲು ಕಾರಣವೆಂದರೆ, ನನ್ನ ಬಾಲ್ಯಕಾಲದಲ್ಲಿಯೇ ನನ್ನನ್ನು ಕಾಡಿದ ಒಬ್ಬಳು ಮಹಿಳೆಯ ಜೊತೆಗೆ ಈ ಚಿತ್ರಕ್ಕೆ ಇರುವ ಸಾಮ್ಯ. ಆ ಮಹಿಳೆಯ ಕತೆಯನ್ನೇ ಇಲ್ಲಿ ಸಂಕ್ಷಿಪ್ತವಾಗಿ ಹೇಳಿ ಮುಂದುವರಿಯೋಣ.

ಇದು ನಾಲ್ಕೂವರೆ ದಶಕಗಳ ಹಿಂದಿನ ವಿಷಯ. ನಾನು ಕರಾವಳಿ-ಪಶ್ಚಿಮ ಘಟ್ಟಗಳ ನಡುವಿನ ಪ್ರದೇಶದಲ್ಲಿರುವ ನಮ್ಮ ಹಳ್ಳಿಯಿಂದ ಹತ್ತಿರದ ಪೇಟೆಯ ಅಂಚಿನ ಶಾಲೆಗೆ ಹೋಗುತ್ತಿದ್ದೆ. ಪೇಟೆಯ ಏಕೈಕ ಮತ್ತು ಆಗ ಮಕ್ಕಳ ಕಣ್ಣಿಗೆ ಕೊನೆಯೇ ಇಲ್ಲದಂತೆ ಕಾಣುತ್ತಿದ್ದ ಉದ್ದವಾದ ರಸ್ತೆಯಲ್ಲಿ ಒಬ್ಬಳು “ಹುಚ್ಚಿ” ತಿರುಗಾಡುತ್ತಿದ್ದಳು. ನಾನಾಕೆಯನ್ನು ಮೊದಲ ಬಾರಿಗೆ ನೋಡಿದಾಗ ತೆಳ್ಳಗೆ, ಬೆಳ್ಳಗಿದ್ದ ಈಕೆ ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥರು ಹೇಗಿರುತ್ತಾರೋ ಹಾಗೆಯೇ ಕಾಣುತ್ತಿದ್ದಳು. ಜಾತಿ, ಧರ್ಮ, ಭಾಷೆ ಎಂದು ಕಚ್ಚಾಡುವ ಈ ಪ್ರಪಂಚದಲ್ಲಿ ಆಕೆಗೆ ಅಂತಹ ಯಾವುದೇ ಗುರುತು ಇರಲಿಲ್ಲ. ಅವಳ ದೇಹದ ಮೇಲೆ ಯಾವುದೇ ಜಾತಿಯ ಗುರುತು, ಸಂಕೇತಗಳೂ ಇರಲಿಲ್ಲ. ಅವಳು ಯಾವ ಭಾಷೆಯನ್ನೂ ಮಾತನಾಡುತ್ತಿರಲಿಲ್ಲ. ಯಾಕೆಂದರೆ, ಅವಳು ಮೂಕಿಯಾಗಿದ್ದಳು. ಅವಳನ್ನು ಎಲ್ಲರೂ ಕೈಬಿಟ್ಟಿದ್ದರು, ಯಾಕೆಂದರೆ ಅವಳು ಯಾರವಳೂ ಆಗಿರಲಿಲ್ಲ. ಅವಳು ಎಲ್ಲಿಂದ ಬಂದವಳೆಂದೂ ಯಾರಿಗೂ ಗೊತ್ತಿರಲಿಲ್ಲ.

ಅವಳಿಂದ ಯಾರಿಗೂ ತೊಂದರೆಯೇ ಇರಲಿಲ್ಲ. ಅವಳು ತನಗೆ ಸೇರಿದ ಸರಕುಗಳನ್ನು ಯಾವುದಾದರೊಂದು ಮೂಲೆಯಲ್ಲಿ ಪೇರಿಸಿಟ್ಟು ಜೀವನ ನಡೆಸುತ್ತಿದ್ದಳು. ಅವುಗಳಲ್ಲಿ ಹೆಚ್ಚಿನವು ಗುಜರಿ, ಗೋಣಿ, ಚಿಂದಿ ಸಾಮಾನುಗಳೇ ಆಗಿದ್ದವು. ಹಗಲಿಡೀ ತನಗೆ ತಾನೇ ಗೊಣಗುತ್ತಾ ಬೀದಿಯ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಎಡೆಬಿಡದೇ ನಡೆಯುತ್ತಾ, ರಾತ್ರಿ ಯಾವುದಾದರೂ ಮುಚ್ಚಿದ ಅಂಗಡಿ ಮುಂಗಟ್ಟಿನಲ್ಲಿ ಮಲಗುತ್ತಿದ್ದಳು. ಹೊಟೇಲಿನವರು, ಅಂಗಡಿಯವರು ಏನಾದರೂ ಚೂರುಪಾರು ಕೊಟ್ಟರೆ ಅದನ್ನೇ ತಿಂದು ಬದುಕುತ್ತಿದ್ದಳು. ಅವಳ ಕೈಯಲ್ಲೊಂದು ದೊಣ್ಣೆ ಇದ್ದು ಅದನ್ನು ಝಳಪಿಸುತ್ತಾ ಅವಳು ತನ್ನನ್ನು ಅಣಕಿಸಿ, ಪೀಡಿಸುತ್ತಿದ್ದ ಪಡ್ಡೆ ಹುಡುಗರನ್ನು ದೂರವಿಡುತ್ತಿದ್ದಳು.

ನಂತರ ಗೊತ್ತಾದಂತೆ, ಎಲ್ಲರೂ ಈ ಬಡಪಾಯಿ ಮಹಿಳೆಯನ್ನು ದೂರ ಇಟ್ಟಿರಲಿಲ್ಲ. ಇದು ಅವಳ ಹೊಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಇದೆ ಎಂಬುದು ಜನರ ಗಮನಕ್ಕೆ ಬಂದಾಗ ಗೊತ್ತಾಯಿತು. ಜನರು ಅವಳ ದುಃಸ್ಥಿತಿಯನ್ನು ಚಪ್ಪರಿಸುತ್ತಾ, ಆಶ್ಲೀಲ ಜೋಕ್‌ಗಳನ್ನು ಮತ್ತು ಕಟ್ಟುಕಥೆಗಳನ್ನು ಹರಿಯಬಿಟ್ಟರು. ಸುತ್ತಮುತ್ತಲಿನ ಮೈಲುಗಟ್ಟಲೆ ದೂರದ ಹಳ್ಳಿಗಳಲ್ಲಿಯೂ ಆಕೆ ಜನರ ಕೆಟ್ಟ ಗಾಸಿಪ್‌ಗಳಿಗೆ ಸರಕಾದಳು. ಆಗ ಜನರಿಗೆ ಈಗಿನಂತೆ ಆಡಿಕೊಳ್ಳಲು ದೇಶವಿದೇಶಗಳ ತಾರೆಯರ ಗಾಸಿಪುಗಳಿರಲಿಲ್ಲ. ನಂತರ ಒಂದು ದಿನ ಏಕಾ‌ಏಕಿಯಾಗಿ ಆಕೆ ಮಾಯವಾದಳು. ಒಂದೆರಡು ವಾರಗಳ ನಂತರ ಅಷ್ಟೇ ಏಕಾ‌ಏಕಿಯಾಗಿ ಆಕೆ ಮರಳಿ ಕಾಣಿಸಿಕೊಂಡಾಗ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡಹುವ ರೀತಿಯಲ್ಲಿ ಅವಳ ಹೆಗಲಿಗೆ ಹಾಕಿಕೊಂಡ ಬಟ್ಟೆಯ ಜೋಳಿಗೆಯಲ್ಲಿ ಎದೆಗವಚಿಕೊಂಡು ಪುಟ್ಟ ಮಗು ಒಂದಿತ್ತು. ಬಹಳ ದಿನಗಳ ನಂತರ ಒಂದು ದಿನ ಅವಳ ಬಳಿ ಮಗುವಿರಲಿಲ್ಲ. ಅದು ಎಲ್ಲಿ ಹೋಯಿತೆಂದು ಯಾರಿಗೂ ಯಾವ ಸುಳಿವೂ ಇರಲಿಲ್ಲ. ಯಾರೂ ಅದಕ್ಕೆ ತಲೆಕೆಡಿಸಿಕೊಳ್ಳಲೂ ಇಲ್ಲ.

ನನ್ನ ಶಾಲಾ ದಿನಗಳಲ್ಲಿ ನಾನು ಹೆಚ್ಚು ಕಡಿಮೆ ಪ್ರತಿ ವರ್ಷವೂ ಆಕೆಯನ್ನು ಹೊಸ ಮಗುವಿನೊಂದಿಗೆ ನೋಡಿದ್ದೇನೆ. ಅವು ನಂತರ ತಪ್ಪದೇ ಮಾಯವಾಗುತ್ತಿದ್ದವು. ಅವಳು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯಾದ ನೇತ್ರಾವತಿಯಲ್ಲಿ ಎಸೆದುಬರುತ್ತಿದ್ದಳು ಎಂದು ಜನರು ಆಡಿಕೊಳ್ಳುತ್ತಿದ್ದರು. ಈ ನದಿಯ ತಟದಲ್ಲಿಯೇ ನಮ್ಮ ಈ ಪಟ್ಟಣವಿರುವುದು. ಆದರೆ, ಖಚಿತವಾಗಿ ಯಾರಿಗೂ ಗೊತ್ತಿರಲಿಲ್ಲ. ಆ ಶಿಶುಗಳ ಶವ ಯಾವತ್ತೂ ಸಿಗಲಿಲ್ಲ. ಸರಕಾರಿ ಆಡಳಿತವಾಗಲೀ, ಯಾವುದೇ ಸಂಘಸಂಸ್ಥೆಯಾಗಲೀ, ವ್ಯಕ್ತಿಯಾಗಲೀ ಇದನ್ನು ತಿಳಿಯುವ ಗೋಜಿಗೆ ಹೋಗಲಿಲ್ಲ. ಒಂದು ದಿನ ಏಕಾ‌ಏಕಿಯಾಗಿ ಆಕೆಯೂ ಮಾಯವಾದಳು. ಮುಂದೆಂದೂ ಅವಳು ಕಾಣಿಸಿಕೊಳ್ಳಲಿಲ್ಲ.

30-40 ವರ್ಷಗಳ ಹಿಂದೆ ಸಮಾಜ ಇಂತಹಾ ವಿಷಯಗಳ ಬಗ್ಗೆ ಹೆಚ್ಚು ಸೂಕ್ಷ್ಮತೆ ತೋರಿಸುತ್ತಿರಲಿಲ್ಲ. ಆದರೆ, ಆಕೆಯ ಗರ್ಭಕ್ಕೆ ಕಾರಣವಾಗುತ್ತಿದ್ದ ವ್ಯಕ್ತಿ ಅಥವಾ ವ್ಯಕ್ತಿಗಳು ತಮ್ಮ ಸ್ವಂತ ರಕ್ತ ಮಾಂಸದ ಬಗೆಗಾದರೂ ಒಂದಿಷ್ಟಾದರೂ ಚಿಂತಿಸಲಿಲ್ಲವೆ ಮುಂತಾದ ನಿಮ್ಮನ್ನೂ ಈಗ ಕಾಡಬಹುದಾದ ಹಲವಾರು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ನಾನಾಗ ಚಿಕ್ಕವನು; ಆಕೆಯ ದುಃಖಮಯ ಜೀವನದ ಕುರಿತು ನಿರಂತರ ಮರುಕವಲ್ಲದೇ ನನಗಾಗ ಬೇರೇನೂ ಅನಿಸುತ್ತಿರಲಿಲ್ಲ. ಆ ಕುರಿತು ನನಗೆ ಇನ್ನೂ ಕೆಲವೊಮ್ಮೆ ಪಾಪಪ್ರಜ್ಞೆ ಕಾಡುತ್ತದೆ ಮತ್ತು ಅಂತಹ ನಿರ್ದಯಿ ಸಮಾಜದ ಭಾಗವಾಗಿದ್ದುದಕ್ಕೆ ನಾಚಿಕೆ ಎನಿಸುತ್ತದೆ. ಇಂತಹಾ ಸಾವಿರಾರು ಮಹಿಳೆಯರು ಕಿರುಕುಳ, ಶೋಷಣೆ, ಅಸಡ್ಡೆಗಳಿಗೆ ಗುರಿಯಾಗುತ್ತಾ ನಮ್ಮ ಬೀದಿಗಳಲ್ಲಿ ಜೀವನ ಕಳೆಯುತ್ತಿದ್ದಾರೆ. ಅಂತವರನ್ನು ಕಂಡಾಗಲೆಲ್ಲಾ ನನಗೆ ಈಕೆಯ ಚಿತ್ರ ಕಣ್ಣಮುಂದೆ ಬಂದು ಆಕೆ ನೆನಪಾಗುತ್ತಾಳೆ.

ಮುಂದಿನ ಘಟನೆ ೧೯೯೦ರ ದಶಕದ್ದು. ಮೇಲೆ ಹೇಳಿದ ಪೇಟೆಯ ಒಂಟಿ ರಸ್ತೆಯಲ್ಲಿ ಮುಂದುವರಿದರೆ ಅದು ರಾಷ್ಟ್ರೀಯ ಹೆದ್ದಾರಿ ಸೇರುತ್ತದೆ. ಅಲ್ಲಿ ಇನ್ನೊಂದು ಪಟ್ಟಣವಿದೆ. ಈಗ ಅದು ಬಹಳಷ್ಟು ಬೆಳೆದಿದೆ. ಅಲ್ಲಿನ ಬಸ್ ತಂಗುದಾಣದಲ್ಲಿ ಒಬ್ಬಳು “ಹುಚ್ಚಿ” ವಾಸವಾಗಿದ್ದಳು. ಯುವತಿಯಾಗಿ ಮೈದುಂಬಿಕೊಂಡಿದ್ದ ಈಕೆಗೆ ಕೆಲವು ಪಡ್ಡೆ ಯುವಕರು ಛೇಡಿಸುವುದು, ಕಿರುಕುಳ ನೀಡುವುದು ಮಾಡುತ್ತಲಿದ್ದರಂತೆ.

ಒಂದು ರಾತ್ರಿ ಇವಳ ಮೇಲೆ ಕೆಲವು ಯುವಕರು ಸಾಮೂಹಿಕ ಅತ್ಯಾಚಾರ ಮಾಡಿದರೆಂಬ ಸುದ್ದಿ ಮರುದಿನ ಆ ಪಟ್ಟಣದಲ್ಲಿ ಗುಸುಗುಸು ರೂಪದಲ್ಲಿ ಹರಿದಾಡಿತು. ತಂಗುದಾಣದ ಅರೆಗತ್ತಲೆಯಲ್ಲಿ ನಡೆದ ಗದ್ದಲ, ಆಕೆಯ ಬೊಬ್ಬೆ ಎಲ್ಲವನ್ನೂ ರಾತ್ರಿ ತಡವಾಗಿ ಬಾಗಿಲು ಮುಚ್ಚುವ ಅಂಗಡಿ ಹೊಟೇಲುಗಳವರು ಸೇರಿದಂತೆ ಹಲವರು ನೋಡಿದ್ದರು, ಕೇಳಿದ್ದರು. ಆದರೆ, ಯಾರೂ ಇದನ್ನು ನಿಲ್ಲಿಸುವ ಪ್ರಯತ್ನ ಮಾಡಿರಲಿಲ್ಲ. ಒಂದನೆಯದು ಭಯ, ಎರಡನೆಯದು ಹುಚ್ಚಿಯಲ್ಲವೇ ಎಂಬ ಅಸಡ್ಡೆ.

ಆಗ ನಾನು “ಮುಂಗಾರು” ಪತ್ರಿಕೆಯನ್ನು ಅನಿವಾರ್ಯವಾಗಿ ಬಿಟ್ಟು, ಸಂಜೆ ಪತ್ರಿಕೆಯೊಂದರಲ್ಲಿ ಬಂಟ್ವಾಳ ತಾಲೂಕು ವರದಿಗಾರನಾಗಿದ್ದೆ. ಯುವಕನ ಉತ್ಸಾಹ ಇದ್ದರೂ, ಒಳ್ಳೆಯ ಉಪಸಂಪಾದಕ ಎಂದು ಗುರುತಿಸಿಕೊಂಡಿದ್ದರೂ ಫೀಲ್ಡ್ ವರದಿಗಾರಿಕೆಯಲ್ಲಿ ಹೆಚ್ಚಿನ ಅನುಭವವಿರಲಿಲ್ಲ. ಇದ್ದಿದ್ದರೆ, ಇನ್ನಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೆ. ಈ ಯುವಕರು ಆಕೆಯನ್ನು ಹಗಲು ಹೊತ್ತಿನಲ್ಲಿ ಹತ್ತಿರದ ಬೆಟ್ಟಕ್ಕೆ ಕರೆದೊಯ್ದು ಅಲ್ಲಿನ ಕೆರೆಯೊಂದರಲ್ಲಿ ಸ್ನಾನ ಮಾಡಿಸಿದ್ದುದನ್ನೂ ನೋಡಿದವರಿದ್ದರು. ಹೀಗಿದ್ದರೂ, ಘಟನೆ ನಡೆದಿರುವುದು ನಿಜ ಎಂದು ನನಗೆ ಖಚಿತವಾಗಿದ್ದುದರಿಂದ ನಾನೊಂದು ಚಿಕ್ಕ ಸುದ್ದಿ ಕಳಿಸಿದೆ. ಅದು ಪ್ರಕಟವಾಯಿತು.

ಮಂಗಳೂರಿನಲ್ಲಿ ಪ್ರಕಟವಾಗುವ ಈ ಪತ್ರಿಕೆ ನಮ್ಮ ಪೇಟೆಗೆ ತಲಪುವ ಹೊತ್ತಿಗೇ ವಿಷಯ ಪೊಲೀಸ್ ಮೇಲಧಿಕಾರಿಗಳಿಗೆ ತಿಳಿದು, ಆಗ ಪುತ್ತೂರಿಗೆ ಎಎಸ್ಪಿಯಾಗಿ ಹೊಸದಾಗಿ ನೇಮಕವಾಗಿದ್ದ ನನಗಿಂತಲೂ ಚಿಕ್ಕಪ್ರಾಯದ ಯುವ ಅಧಿಕಾರಿಯ ಮೇಲೆ ಒತ್ತಡ ಹೇರಲಾಗಿತ್ತು. ಆತ ತಾಲೂಕು ಕೇಂದ್ರ ಬಿ.ಸಿ.ರೋಡಿನಲ್ಲಿ ಮೊಕ್ಕಾಂ ಹೂಡಿದರು. ಸಂಜೆಯ ಹೊತ್ತಿಗೆ ನನ್ನನ್ನು ಎಲ್ಲಾ ಕಡೆ ಪೊಲೀಸರು ಹುಡುಕುತ್ತಿದ್ದಾರೆ ಎಂದು ತಿಳಿದು ಕಮ್ಯುನಿಸ್ಟ್ ಪಕ್ಷದ ಸಭೆಯೊಂದರ ವರದಿ ಮಾಡಲು ಅದರ ಕಚೇರಿಗೆ ಹೋಗಿದ್ದ ನಾನು ತಕ್ಷಣವೇ ಠಾಣೆಗೆ ಹೋದೆ.

ಠಾಣೆಗೆ ಹೋದದ್ದೇ ತಡ, ನನ್ನನ್ನು ಎಎಸ್ಪಿಯ ಮುಂದೆ ಕುಳ್ಳಿರಿಸಿ ಸುತ್ತಲೂ ಎಸ್ಸೈಯಾದಿಯಾಗಿ ಪೊಲೀಸರು ನೆರೆದು ಒತ್ತಡ ಹೇರಲು ಆರಂಭಿಸಿದರು. ಆಗ, ಪೊಲೀಸರಿಗೆ ಹತ್ತಿರವಾಗಿ “ಗೆಳೆತನ”ದಲ್ಲಿ ಹೊಂದಿನಡೆಯುತ್ತಿದ್ದ ಪತ್ರಕರ್ತರು- ಒಬ್ಬನ ಹೊರತು- ಯಾರೂ ನೆರವಿಗೆ ಬರಲಿಲ್ಲ. ಅವರೆಲ್ಲರೂ ಆಗ ಅರೆಕಾಲಿಕ ವರದಿಗಾರರಾಗಿದ್ದು, ನಾನೊಬ್ಬನೇ ತಾಲೂಕಿನಲ್ಲಿ ಪೂರ್ಣಕಾಲಿಕ ವರದಿಗಾರನಾಗಿದ್ದುದರಿಂದ ಅವರಿಗೆ ಸ್ವಲ್ಪ ಉರಿ ಇದ್ದಿತ್ತು. ಪೊಲೀಸರು ಅತ್ಯಾಚಾರ ಮಾಡಿದವರು ಯಾರು ಎಂದು ತಿಳಿದುಕೊಳ್ಳುವುದರಲ್ಲಿ ಆ ಅಧಿಕಾರಿಗೆ ಆಸಕ್ತಿಯೇ ಇರಲಿಲ್ಲ. ನನಗೆ ಈ ಸುದ್ದಿ ತಿಳಿಸಿದವರ ಹೆಸರನ್ನು ಹೇಳಬೇಕೆಂದು ಒತ್ತಾಯಿಸಿದರು. ಸುದ್ದಿ ಮೂಲವನ್ನು ಬಹಿರಂಗಪಡಿಸಲು ಆಗದು ಎಂದು ನಾನು ಹೇಳಿದೆ. ನಮ್ಮ ಸಂಪಾದಕರಿಗೆ ಫೋನ್ ಮಾಡಿದಾಗ, ಹಿಂದೆ ಸುದ್ದಿಯ ಬಗ್ಗೆ ಹಿರಿಹಿರಿ ಹಿಗ್ಗಿದ್ದ ಅವರೂ, ಈಗ ಹೆಚ್ಚಿನ ಬೆಂಬಲ ನೀಡದೆ, ಹೆಸರು ತಿಳಿಸಲು ಹೇಳಿದರು. ಹೆಸರು ತಿಳಿಸಿದರೆ ತಾನು ಸಮಗ್ರ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವುದಾಗಿ ಆ ಅಧಿಕಾರಿ ಭರವಸೆ ನೀಡಿದುದರಿಂದ ನಾನು ನಂಬಿ ಮಾಹಿತಿದಾರರ ಹೆಸರು ನೀಡಿದೆ. ಇದು ವರದಿಗಾರ ಮಾಡಬಹುದಾದ ಬಹುದೊಡ್ಡ ತಪ್ಪಾಗಿತ್ತು, ಒಂದು ರೀತಿಯಲ್ಲಿ ಶಿಕ್ಷೆ ಇಲ್ಲದ ಅಪರಾಧವೇ ಆಗಿತ್ತು- ಅದೆಂದರೆ, ಸುದ್ದಿ ಮೂಲವನ್ನು ಅವರ ಒಪ್ಪಿಗೆಯಿಲ್ಲದೇ ಬಹಿರಂಗಪಡಿಸುವುದು.

ಮಾಹಿತಿ ನೀಡಿದವರ ಹೆಸರು ಗೊತ್ತಾದ ತಕ್ಷಣವೇ ಈ ಅಧಿಕಾರಿ ಮಾಡಿದ ಕೆಲಸ ನನ್ನ ಊಹೆಗೆ ಮೀರಿದ್ದಾಗಿತ್ತು. ಅವರ ಮನೆಗೆ ಪೊಲೀಸರನ್ನು ನುಗ್ಗಿಸಿ, ಠಾಣೆಗೆ ಕರೆದುಕೊಂಡು ಬಂದು ಇಂತಹ ಘಟನೆ ನಡೆದೇ ಇಲ್ಲವೆಂದು ಹೇಳುವಂತೆ ಒತ್ತಡ ಹೇರಿ ಲಿಖಿತ ಹೇಳಿಕೆ ತೆಗೆದುಕೊಂಡದ್ದು. ಆ ಹೊತ್ತಿಗೆ ನಿಜವಾದ ಆರೋಪಿಗಳನ್ನು ಅವರು ಮುಟ್ಟಲೇ ಹೋಗಲಿಲ್ಲ. ಅವರ ಪ್ರಕಾರ “ನಡೆಯದ” ಘಟನೆಯಲ್ಲಿ ಆರೋಪಿಗಳು ಎಲ್ಲಿಂದ!? ಅಂತೂ ಇಂತೂ ಈ ಘಟನೆಗೆ ತಿಪ್ಪೆಸಾರಿಸಿ ಮುಚ್ಚಿಹಾಕಲಾಯಿತು. ವಾಸ್ತವವಾಗಿ ಪೊಲೀಸರು ಮಾಡಿದ್ದು ಸಾಕ್ಷ್ಯವನ್ನು ದಮನಿಸುವ ಶಿಕ್ಷಾರ್ಹ ಕ್ರಿಮಿನಲ್ ಅಪರಾಧವಾಗಿತ್ತು.

ಅತ್ಯಾಚಾರಗಳ ಬಗ್ಗೆ, ಅದರಲ್ಲೂ ಮಾನಸಿಕ ಅಸ್ವಸ್ಥರ ಮೇಲೆ ನಡೆಯುವ ಅತ್ಯಾಚಾರಗಳ ಬಗ್ಗೆ ಜನಸಾಮಾನ್ಯರಾಗಲೀ, ಪೊಲೀಸರಾಗಲೀ ಎಷ್ಟು ಅಸೂಕ್ಷ್ಮವಾಗಿರುತ್ತಾರೆ ಎಂದು ನನಗಾಗ ಗೊತ್ತಾಯಿತು. ಒಬ್ಬ ಸಾಮಾನ್ಯವಾಗಿ ದಕ್ಷ ಮತ್ತು ಒಳ್ಳೆಯ ಪೊಲೀಸ್ ಅಧಿಕಾರಿ ಎನಿಸಿಕೊಂಡವರು ನನಗೆ ಹೇಳಿದ್ದು: “ಇದನ್ನೆಲ್ಲಾ ಯಾಕೆ ಬರೆದು ನಮಗೆ ಯಾಕೆ ಕೆಲಸ ಹೆಚ್ಚಿಸುತ್ತೀರಿ? ನಿಮಗೆ ಗೊತ್ತಿಲ್ಲ; ಹುಚ್ಚಿಯರಿಗೆ ಸೆಕ್ಸ್ ತೆವಲು ಹೆಚ್ಚಿರುತ್ತದೆ!” ಇದು ನನಗೆ ಆಘಾತ ಉಂಟುಮಾಡಿತು.

ನಂತರ ನಡೆದದ್ದೆಂದರೆ, ಈ “ಹುಚ್ಚಿ”ಯೂ ದಿಢೀರ್ ನಾಪತ್ತೆಯಾದಳು. ಪೊಲೀಸರೇ ಅವಳನ್ನು ಜೀಪಿನಲ್ಲಿ ಹಾಕಿ ಯಾವುದೋ ಒಂದು ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದರು. ನಾನು ಏಕಾಂಗಿಯಾಗಿ ಈ ಸುದ್ದಿಯ ಬೆನ್ನು ಹತ್ತಲು ಬೇಕಾದ ಬೆಂಬಲವೂ ಇರಲಿಲ್ಲ, ಅಲ್ಪ ಸಂಬಳದಲ್ಲಿ, ಲಂಚ-ಗಿಫ್ಟ್ ಮುಟ್ಟದೆ ಬದುಕುವವರಿಗೆ ಅಂತಹ ಸಂಪನ್ಮೂಲವೂ ಇರುವುದಿಲ್ಲ. ಆದರೆ, ಎಎಸ್ಪಿ ಘಟನೆ ನಡೆದೇ ಇಲ್ಲ ಎಂದು ಸಾಧಿಸಿದರೂ, ಕೆಳ ಹಂತದ ಪೊಲೀಸರ ಮನಸ್ಸಿಗೆ ಏನೋ ಕಾಡಿದಂತಾಗಿ ಆ ಐವರು ಯುವಕರನ್ನು ಅನಧಿಕೃತವಾಗಿ ವಿಚಾರಣೆ ನಡೆಸಿ, ಚೆನ್ನಾಗಿ ಬೆಂಡೆತ್ತಿ, ಬಹಳ ಕಾಲ ಊರಿನತ್ತ ತಲೆಯೇ ಹಾಕದಂತೆ ಮಾಡಿದರು. ಘಟನೆ ನಡೆದುದುದು ನಿಜವಾಗಿತ್ತು. ಇವರಲ್ಲಿ ಇಬ್ಬರು ನನ್ನ ಪರಿಚಿತರಾಗಿದ್ದು, ಒಬ್ಬ ಬಹಳ ವರ್ಷಗಳ ನಂತರ ಸಿಕ್ಕಿ, ನನ್ನಲ್ಲಿ ಪಶ್ಚಾತ್ತಾಪ ತೋಡಿಕೊಂಡಿದ್ದ. ಟಿಬಿ ಇತ್ಯಾದಿ ತಗಲಿ, ಚೇತರಿಸಿಕೊಂಡು, ಸ್ವಭಾವ ಸುಧಾರಿಸಿಕೊಂಡು, ಚಾಲಕನಾಗಿ ಬದುಕುತ್ತಿದ್ದ. ಈಗ ಅವನು ಬದುಕಿಲ್ಲ.

ಅಷ್ಟಕ್ಕೂ ಆ ಯುವ ಆಧಿಕಾರಿ ಹಾಗೆ ಮಾಡಿದ್ದಾದರೂ ಯಾಕೆ? ನನಗೆ ಅನುಭವ ಹೆಚ್ಚಾದಂತೆ ತಿಳಿದ್ದೆಂದರೆ, ಹೊಸದಾಗಿ ಬರುವ ಅಧಿಕಾರಿಗಳು ತಮ್ಮ ಕೆಲಸದ ದಾಖಲೆಯಲ್ಲಿ ಯಾವುದೇ ಕಪ್ಪು ಕಲೆ ಬಯಸುವುದಿಲ್ಲ. ಇಂತಹ ಘಟನೆಯು ತನ್ನ ಕಾರ್ಯಕ್ಷೇತ್ರದಲ್ಲಿ ನಡೆದಿದೆ ಎಂದು ಒಪ್ಪಿಕೊಳ್ಳುವುದು ಆತನಿಗೆ ಬೇಡವಾಗಿತ್ತು. ಮುಂದೆ ಈ ಅಧಿಕಾರಿ ಬೇರೆ ಜಿಲ್ಲೆಗೆ ಎಸ್ಪಿಯಾಗಿ ಭಡ್ತಿ ಹೊಂದಿ ಹೋದಾಗ ಇದು ಬಹಿರಂಗವಾಯಿತು. ಜಿಲ್ಲೆಯಲ್ಲಿ ಸರಣೆ ಸಶಸ್ತ್ರ ದರೋಡೆಗಳು ನಡೆದಿದ್ದವು. ಇಲಾಖೆಯಲ್ಲಿ ನಿರ್ದಿಷ್ಟ ಮೊತ್ತ ಮೀರಿದ, ಸಶಸ್ತ್ರ ಪ್ರಕರಣಗಳನ್ನು ಎಸ್ಪಿಯೇ ವಹಿಸಬೇಕಾಗುತ್ತದೆ. ಈ ಅಧಿಕಾರಿ ಈ ಎಲ್ಲಾ ಪ್ರಕರಣಗಳನ್ನು ಈ ಆಧಿಕಾರಿ ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆಯ ಕೇವಲ ಕಳವು ಪ್ರಕರಣಗಳೆಂದು ದಾಖಲಿಸುವಂತೆ ಕೆಳ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಜವಾಬ್ದಾರಿಯಿಂದ ನುಣುಚಿಕೊಂಡು, ತನ್ನ ಅದಕ್ಷತೆ ಮುಚ್ಚಿಹಾಕಲು ಯತ್ನಿಸಿದ್ದರು. ಆದರೆ, ಜನರ ಗಮನಕ್ಕೆ ಇದು ಬಂದು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸ್ ಇಲಾಖೆಯ ಆಂತರಿಕ ತನಿಖೆ ನಡೆದು, ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ಆತನನ್ನು ವರ್ಗಾಯಿಸಲಾಗಿತ್ತು.

ನಾವು- ಹುಚ್ಚರು ಎಂದು ಕ್ಷುಲ್ಲಕವಾಗಿ ಕರೆಯುತ್ತಿದ್ದವರಿಗೆ ಈಗ “ಮಾನಸಿಕ ಅಸ್ವಸ್ಥರು, ಸವಾಲುಗಳನ್ನು ಎದುರಿಸುತ್ತಿರುವವರು…” ಇತ್ಯಾದಿಯಾಗಿ ರಂಗಿನ, ಬೇಗಡೆ ಹೆಸರುಗಳನ್ನು ಕೊಟ್ಟಿರಬಹುದು. ಬೀದಿಗೆ ಬಿದ್ದು ದಯನೀಯವಾಗಿ ಬದುಕುವ ಇಂತವರ ಬಗ್ಗೆ ಜನರ, ಕೆಲವು ಸಮಾಜ ಸೇವಕರ, ಸಂಘಸಂಸ್ಥೆಗಳ, ಸರಕಾರೇತರ ಸಂಸ್ಥೆಗಳ… ಸರಕಾರದ ಕಾಳಜಿಯು- ಮೇಲಿನ ಘಟನೆಗಳು ನಡೆದ ಕಾಲಕ್ಕೆ ಹೋಲಿಸಿದಾಗ- ಬಹಳಷ್ಟು ಸುಧಾರಿಸಿದೆ ಎಂಬುದು ನಿಜವಾದರೂ, ಜಾಗತಿಕವಾಗಿ ಸಮಸ್ಯೆಯು ಇನ್ನೂ ಪರ್ವತಾಕಾರವಾಗಿಯೇ ಇದೆ. ಮುಂದೆ ಇದನ್ನು ಇನ್ನಷ್ಟು ಪರಿಶೀಲನೆ ನಡೆಸೋಣ

ಗ್ಯಾರಂಟಿಗಳು: ಜನರಿಗೆ ಖುಶಿ; ಪ್ರತಿಪಕ್ಷಕ್ಕೆ ಉರಿ!
ಜನಸಾಮಾನ್ಯರ ಸಶಕ್ತೀಕರಣದ ಉದ್ದೇಶ ಹೊಂದಿರುವ, ಅವರ ಕೈಗೆ ಚಲಾವಣೆಯ ಹಣ ಒದಗಿಸುವ, ಆ ಮೂಲಕ ಮಾರುಕಟ್ಟೆ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಲ್ಲ, ಹೆಚ್ಚು ವಿಸ್ತಾರವಾದ, ಮತ್ತು ಇಷ್ಟು ದೊಡ್ಡ ಯೋಜನೆ ಬೇರೆಲ್ಲೂ ಬಂದಿಲ್ಲ – ನಿಖಿಲ್ ಕೋಲ್ಪೆ, ಹಿರಿಯ ಪತ್ರಕರ್ತರು

ಪ್ರಜಾಸತ್ತಾತ್ಮಕ, ಜಾತ್ಯತೀತ, ಸಮಾಜವಾದಿ ಗಣರಾಜ್ಯವಾಗಿರುವ ಭಾರತದಲ್ಲಿ ಎಲ್ಲರ ಅಭಿವೃದ್ಧಿಯು ಪ್ರತಿಯೊಂದು ಸರಕಾರದ ಸಾಂವಿಧಾನಿಕ ಜವಾಬ್ದಾರಿ. ದೇಶದ ಪ್ರತಿಯೊಬ್ಬರೂ ಶಾಂತಿ, ನೆಮ್ಮದಿ, ಸಮಾನತೆ ಮತ್ತು ಸಾಮರಸ್ಯದ ವಾತಾವರಣದಲ್ಲಿ ಬದುಕುವಂತಾಗಬೇಕು ಎಂಬುದು ಸಂವಿಧಾನದ ಆಶಯ. ಆ ಸಾಮಾಜಿಕ, ಆರ್ಥಿಕ, ರಾಜಕೀಯ ಆಶಯಗಳಲ್ಲಿ ನಾವು ಬೇರೆಬೇರೆ ಪ್ರಮಾಣದ ಯಶಸ್ಸು, ವೈಫಲ್ಯ ಮತ್ತು ತಾರತಮ್ಯಗಳನ್ನು ಕಂಡಿದ್ದೇವೆ. ಜನಸಾಮಾನ್ಯರ ಸಾಮಾಜಿಕ ಮತ್ತು ರಾಜಕೀಯ ಶಕ್ತಿಯು ಅವರ ಆರ್ಥಿಕ ಶಕ್ತಿಯ ಜೊತೆಗೆ/ಮೇಲೆ ನೇರವಾದ ಸಂಬಂಧ/ಪರಿಣಾಮ ಹೊಂದಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ನೀಡಿದ್ದ ಮತ್ತು ಸರಕಾರ ಅಸ್ತಿತ್ವಕ್ಕೆ ಬಂದ ನಂತರವೀಗ ತಪ್ಪದೇ ಅನುಷ್ಟಾನಗೊಳಿಸುತ್ತಿರುವ ಐದು “ಗ್ಯಾರಂಟಿ” ಎಂದೇ ಜನಪ್ರಿಯವಾಗಿರುವ ಐದು ಜನಪರ ಯೋಜನೆಗಳನ್ನು ನೋಡಬೇಕು.

ಬಡವರ ಪರ ಯೋಜನೆಗಳು ಇಂದು ನಿನ್ನೆಯವಲ್ಲ

ಇಂತಾ ನೆರವುಗಳ ತಾತ್ವಿಕ ಮತ್ತು ಪ್ರಯೋಗಿಕ ಉದ್ದೇಶಗಳನ್ನು ಚುಟುಕಾಗಿ ನೋಡುವುದಾದರೆ, ಸಮಾಜದ ಬಡವರಿಗೆ ನೆರವಾಗುವ ಯೋಜನೆಗಳು ಇಂದು ನಿನ್ನೆಯವು ಏನಲ್ಲ. ರಾಜಪ್ರಭುತ್ವದ ಕಾಲದಲ್ಲಿ ಇದನ್ನು “ದಾನ” ಎಂಬ ಹೆಸರಿನಲ್ಲಿ ಮಾಡಲಾಗುತ್ತಿತ್ತು. ಉತ್ಪಾದನಾ ಸಾಧನಗಳ-ಮುಖ್ಯವಾಗಿ ಭೂಮಿಯ- ಸಂಪೂರ್ಣ ಒಡೆತನ ಹೊಂದಿ, ಜನರಿಂದ ಯದ್ವಾತದ್ವಾ ಸುಲಿದು ಸಂಗ್ರಹಿಸಿದ ಹಣವನ್ನು ಮೇಲ್ವರ್ಗದ ಐಷಾರಾಮಿಗೂ, ರಾಜ್ಯ ರಕ್ಷಣೆ, ವಿಸ್ತರಣೆಗೆ ಮಾಡುವ  ಯುದ್ಧಗಳಿಗೆ ವೆಚ್ಚ ಮಾಡಿ, ಉಳಿದದ್ದನ್ನು ಜನರಿಗಾಗಿ ವೆಚ್ಚ ಮಾಡುವ ವ್ಯವಸ್ಥೆಯು ಅನಿವಾರ್ಯ ರಾಜನಿಷ್ಟೆ ಮತ್ತು ಜೀಹುಜೂರ್ ಗುಲಾಮಗಿರಿಯನ್ನು ಪ್ರೋತ್ಸಾಹಿಸುವಂತೆ ಇತ್ತು. ಕೆಲವು ಉದಾರಿ ರಾಜರು ತಮ್ಮ ಪ್ರಜೆಗಳಿಗೆ ಬಹಳಷ್ಟನ್ನು ಮಾಡಿ ಜನಪ್ರಿಯರಾದ ಉದಾಹರಣೆಗಳೂ ಇತಿಹಾಸದಲ್ಲಿ ಇವೆ. ತಮ್ಮ ಅಧಿಕಾರವನ್ನು ಭದ್ರಪಡಿಸಲು, ಬಂಡಾಯ ಏಳದಂತೆ ತಡೆಯಲೂ ಇಂತಾ “ದಾನ-ಧರ್ಮ-ಸತ್ಕಾರ್ಯ”ಗಳು ಅನಿವಾರ್ಯವಾಗಿದ್ದವು ಕೂಡಾ.

ನಂತರ ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆಜೊತೆಗೆಯೇ ಬಂಡವಾಳಶಾಹಿ ವ್ಯವಸ್ಥೆ ಕೂಡಾ ಬೆಳೆದುಬಂತು ಎಂಬುದನ್ನು ಗಮನಿಸಬೇಕು. ಆರ್ಥಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಮೆರೆಯುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯು ಬಡವರನ್ನು ನಿರಂತರವಾಗಿ ಇನ್ನಷ್ಟು ಬಡವರನ್ನಾಗಿಯೂ, ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ನಾಜೂಕಿನ ವಂಚಕ ವ್ಯವಸ್ಥೆ ಎಂಬುದನ್ನು ಬಹಳ ಜನರು ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರಸ್ತುತ ಪ್ರಪಂಚದ ಬಹುತೇಕ ದೇಶಗಳಲ್ಲಿ- ಅವು ರಾಜಪ್ರಭುತ್ವ, ಪ್ರಜಾಪ್ರಭುತ್ವ ಅಥವಾ ಬೇರೆಬೇರೆ ಮುಖವಾಡಗಳನ್ನು ಹೊತ್ತಿರುವ ಸರ್ವಾಧಿಕಾರವೇ ಆಗಿರಲಿ- ಬಂಡವಾಳಶಾಹಿ ವ್ಯವಸ್ಥೆಯೇ ಇದೆ. ಜನರ-ಜನರ ನಡುವಿನ, ಪ್ರದೇಶ-ಪ್ರದೇಶಗಳ ನಡುವಿನ, ದೇಶ-ದೇಶ-ದೇಶಗಳ ನಡುವಿನ ಅಸಮಾನತೆಯ ಕಂದಕ ದಿನದಿಂದ ದಿನಕ್ಕೆ ಆಳವಾಗುತ್ತಾ ಹೋಗುತ್ತಿರುವುದನ್ನು ಅಂಕಿಅಂಶಗಳು ಸಾಬೀತುಮಾಡುತ್ತವೆ. ಕೆಲವೇ ಅತಿಶ್ರೀಮಂತರು ಪ್ರಪಂಚದ ಬಹುತೇಕ ಸಂಪತ್ತನ್ನು ಹೊಂದಿದ್ದು, ಬಹುಸಂಖ್ಯಾತ ಜನರು ತಮ್ಮೊಳಗೆ ಹಂಚಿಕೊಳ್ಳಬೇಕಾದ ಸಂಪತ್ತಿನ ಪಾಲು ತೀರಾ ಕಡಿಮೆ ಎಂಬುದನ್ನೂ ಈ ಅಂಕಿಅಂಶಗಳು ತಿಳಿಸುತ್ತವೆ. ಇದನ್ನೂ ಜನರು ಅರ್ಥಮಾಡಿಕೊಳ್ಳುವುದಿಲ್ಲ.

ಸವಲತ್ತುಗಳು ʼಭಿಕ್ಷೆʼ ಅಲ್ಲ, ʼಹಕ್ಕುʼ

ಇಂತಾ ಸಂದರ್ಭದಲ್ಲಿ ಜನಪರ, ಜನಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡು ಜನರ ಅಸಮಾಧಾನ, ಬಂಡಾಯಗಳನ್ನು ನಿಯಂತ್ರಣದಲ್ಲಿ ಇಡುವುದು ಸರಕಾರಗಳಿಗೆ ಅನಿವಾರ್ಯವಾಗುತ್ತದೆ. ಜಾತಿ, ಧರ್ಮಗಳನ್ನು ಒಡೆದಾಳುವ ನೀತಿ ಬಹಳ ಕಾಲ ಬಾಳದು. ಶ್ರೀಮಂತ ದೇಶಗಳು ಬಡದೇಶಗಳಿಗೆ ತಾವು ದೋಚಿದ ಹಣದಲ್ಲೇ “ನೆರವು” ನೀಡುವುದು ಕೂಡಾ ಇದಕ್ಕಾಗಿಯೇ. ಇದು ನ್ಯಾಯಯುತ ವ್ಯವಸ್ಥೆ ಎಂದು ತೋರಿಸಿಕೊಳ್ಳಲು ಮತ್ತು ಈ ಸಂಪತ್ತಿನ ಉತ್ಪಾದಕರಾದ ಶ್ರಮಜೀವಿ, ನೌಕರವರ್ಗವನ್ನು ಜೀವಂತವಾಗಿ ಇಡಲು ಇದು ಅನಿವಾರ್ಯ. ಇಲ್ಲವಾದಲ್ಲಿ ನಾವು ದೌರ್ಜನ್ಯದ ಗುಲಾಮಗಿರಿಯ ಕರಾಳಯುಗಕ್ಕೆ ಮರಳಬೇಕಾಗುತ್ತದೆ. ಹಾಗಾಗಿ, ಸರಕಾರ ಜನರಿಗೆ ನೀಡುವ ಸವಲತ್ತುಗಳು “ಭಿಕ್ಷೆ” ಎಂದು ತಿಳಿದುಕೊಂಡು, ಅವುಗಳನ್ನು ಕುಟಿಲವಾಗಿ, ಅತಾರ್ಕಿಕವಾಗಿ ವಿರೋಧಿಸುತ್ತಿರುವ- ರಾಜಪ್ರಭುತ್ವವಾದಿ, ಸರ್ವಾಧಿಕಾರವಾದಿ, ಧರ್ಮಾಡಳಿತವಾದಿ ಬಲಪಂಥೀಯರ ವಿಚಾರಗಳಿಗೆ ವ್ಯತಿರಿಕ್ತವಾಗಿ, ಅವು ಜನರಿಗೆ ತಾವು ಸೃಷ್ಟಿಸಿದ ಸಂಪತ್ತಿನ, ತಾವು ಕಟ್ಟಿದ ತೆರಿಗೆಯ ಮೇಲೆ ಇರುವ ಹಕ್ಕು ಎಂಬುದನ್ನು ತಿಳಿದುಕೊಳ್ಳಬೇಕು. ಇದು ಕೂಡಾ ಮೀಸಲಾತಿಯಂತೆ ಹಕ್ಕೇ ಹೊರತು, ಭಿಕ್ಷೆಯಲ್ಲ.

ಬೇರೆಬೇರೆ ಸರಕಾರಗಳು ಶಿಕ್ಷಣದ ಮೇಲೆ, ಆರೋಗ್ಯ ಸೇವೆ ಇತ್ಯಾದಿಗಳ ಮೇಲೆ ಖರ್ಚು ಮಾಡುತ್ತಾ ಬಂದಿವೆ. ಮುಖ್ಯವಾಗಿ ಉನ್ನತ ಶಿಕ್ಷಣದಲ್ಲಿ ಕೋಟಿಗಟ್ಟಲೆ ಡೊನೇಷನ್ ನೀಡಿ, ನಂತರ ವಿದೇಶಗಳಿಗೆ ಓಡುವ ಶ್ರೀಮಂತ, ಮೇಲ್ಜಾತಿ, ಮೇಲ್ವರ್ಗಗಳ ವಿದ್ಯಾರ್ಥಿಗಳಿಗೂ ಇದು ಅನ್ವಯಿಸುತ್ತದೆ. ಇದು ವೈಯಕ್ತಿಕವಾಗಿ ಸಿಗುವ ಸಮಲತ್ತುಗಳು. ಇನ್ನು ಮೂಲಸೌಕರ್ಯಗಳ ವಿಷಯ ಬಂದಾಗ, ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳಿಗಿಂತ ಶ್ರೀಮಂತರಿಗೆ ಅನುಕೂಲಕರವಾದ ಯೋಜನೆಗಳಿಗೇ ಸರಕಾರಗಳು ಹೆಚ್ಚಿನ ಹಣ ವ್ಯಯಿಸುತ್ತವೆ. ಉದಾಹರಣೆಗೆ ವಾಹನ ಇರುವವರು ಟೋಲ್ ಕೊಟ್ಟು ಓಡಾಡಬೇಕಾದ, ಖಾಸಗಿಯವರಿಗೆ ಲಾಭ ತರುವ, ಎಕ್ಸ್‌ಪ್ರೆಸ್ ಹೈವೇಗಳಿಂದಾಗಲೀ, ಸಾಮಾನ್ಯ ರೈಲುಗಳ ಜಾಗದಲ್ಲಿ ಬರುತ್ತಿರುವ ದುಬಾರಿ “ವಂದೇ ಭಾರತ್” ಬಡಾಯಿಯಿಂದಾಗಲೀ ಬಡಜನರಿಗೆ ನೇರ ಲಾಭವಿದೆಯೇ?

ಇವುಗಳನ್ನು ಗಮನಿಸಿ..

ಹೀಗಿದ್ದರೂ, ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ತಂದಿರುವ ಐದು ಜನಪರ ಯೋಜನೆಗಳು- ಮಹಿಳೆಯರಿಗೆ ಮಾಸಿಕ ೨,೦೦೦ ರೂ.ಗಳನ್ನು ನೀಡುವ ಗೃಹಲಕ್ಷ್ಮೀ, ಬಡವರಿಗೆ ತಿಂಗಳಿಗೆ ೧೦ ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ, ೨೦೦ ಯುನಿಟ್‌ಗಳ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ವಿದ್ಯಾವಂತರಿಗೆ ಎರಡು ವರ್ಷಗಳ ಕಾಲ ನೆರವು ನೀಡುವ ಯೋಜನೆಗಳಿಂದ ದೇಶದ ಆರ್ಥಿಕತೆ ದಿವಾಳಿಯಾಗುತ್ತಿದೆ ಎಂದು ಕೂಗಾಡುತ್ತಾ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕೂಡಾ ಮಾಡಿದ ವಿರೋಧವನ್ನು ಗಮನಿಸಿ. ಚುನಾವಣೆಯಲ್ಲಿ ಸೋತ ಕೂಡಲೇ ಅವುಗಳ ವ್ಯವಸ್ಥಿತ ಜಾರಿಗೆ ಒತ್ತಾಯಿಸುತ್ತಾ, ಅವಸರ ಮಾಡುತ್ತಾ, ಕಾಂಗ್ರೆಸ್ ಜನರನ್ನು ವಂಚಿಸಿದೆ ಎಂದು ಮಾಡಿದ ಚೀರಾಟವನ್ನೂ, ಇಬ್ಬಗೆ ನೀತಿಯನ್ನೂ ಗಮನಿಸಿ. ಇದೀಗ ಈ ಯೋಜನೆಗಳು ಜಾರಿಯಾದಾಗ ಮಾಡುತ್ತಿರುವ ಟೀಕೆಗಳು, ಕುಹಕಗಳು, ಹುಡುಕುತ್ತಿರುವ ಹುಳುಕುಗಳು ಮತ್ತು ಸೃಷ್ಟಿಸುತ್ತಿರುವ ಗೊಂದಲಗಳನ್ನೂ ಗಮನಿಸದೇ ಇರಬೇಡಿ.

ಇಷ್ಟು ದೊಡ್ಡ ಯೋಜನೆ ಬೇರೆಲ್ಲೂ ಬಂದಿಲ್ಲ

ಮಹಾರಾಷ್ಟ್ರ, ತಮಿಳುನಾಡು, ಕೇರಳ, ದಿಲ್ಲಿ, ಪಂಜಾಬ್ ಮತ್ತು ಕೆಲವು ಉತ್ತರ ಪ್ರದೇಶದಂತ ಬಿಜೆಪಿ ಆಡಳಿತದ ಬೇರೆ ರಾಜ್ಯಗಳು ಕೂಡಾ ಬೇರೆಬೇರೆ ಉಚಿತ ಅಥವಾ ನೆರವಿನ ಯೋಜನೆಗಳನ್ನು ನಡೆಸುತ್ತಿವೆ. ಹಿಂದಿನ ಸಿದ್ದರಾಮಯ್ಯ ಸರಕಾರದ ‘ಭಾಗ್ಯ’ ಯೋಜನೆಗಳೂ ಜನಪ್ರಿಯ. ಆದರೆ, ಇವುಗಳ ನಡುವಿನ ವ್ಯತ್ಯಾಸ ಎಂದರೆ, ಬಿಜೆಪಿಯ ಕೊಡುಗೆಗಳು ಸಮಾಜದಲ್ಲಿ ಮತೀಯ ಬಿರುಕು ಮಾಡಬಲ್ಲ ಧಾರ್ಮಿಕ ಸ್ವರೂಪದ ಕೊಡುಗೆಗಳಾದರೆ, ಉಳಿದ ರಾಜ್ಯಗಳಲ್ಲಿ ಇರುವುದು ಅನ್ನ, ವಸತಿ, ಶಿಕ್ಷಣ, ಮಹಿಳಾ ಸಶಕ್ತೀಕರಣ ಮುಂತಾದ ಬಡಜನರ ಉಳಿವಿಗೆ ಅಗತ್ಯವಾದ ಕೊಡುಗೆಗಳು. ಆದರೆ, ಜನಸಾಮಾನ್ಯರ ಸಶಕ್ತೀಕರಣದ ಉದ್ದೇಶ ಹೊಂದಿರುವ, ಅವರ ಕೈಗೆ ಚಲಾವಣೆಯ ಹಣ ಒದಗಿಸುವ, ಆ ಮೂಲಕ ಮಾರುಕಟ್ಟೆ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಲ್ಲ, ಹೆಚ್ಚು ವಿಸ್ತಾರವಾದ, ಮತ್ತು ಇಷ್ಟು ದೊಡ್ಡ ಯೋಜನೆ ಬೇರೆಲ್ಲೂ ಬಂದಿಲ್ಲ.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿ- ಸಂಕುಚಿತ, ಕುಟಿಲ ಮತ್ತು ಕ್ರೂರವಾದ ಬಿಜೆಪಿ ರಾಜಕಾರಣವನ್ನು ಸೋಲಿಸುವಲ್ಲಿ ಸಫಲವಾದ “ಕರ್ನಾಟಕ ಮಾಡೆಲ್” ರೀತಿಯ ಯೋಜನೆಗಳನ್ನು ರಾಜಸ್ಥಾನ ಮುಂತಾದ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವುದು ಬಿಜೆಪಿಗೆ ಉರಿ, ಹೊಟ್ಟೆ ನೋವು ಉಂಟುಮಾಡಿದೆ. ಈ ಕಠಿಣ ಪದಗಳನ್ನು ಬಳಸಲು ಕಾರಣವೆಂದರೆ, ಅದು ಮಾಡುತ್ತಿರುವ ತರ್ಕ, ವಿವೇಕ, ಸಭ್ಯತೆಯೂ ಇಲ್ಲದ ದುಷ್ಟ ಟೀಕೆಗಳು. ಪ್ರಧಾನಿ ನರೇಂದ್ರ ಮೋದಿಯಂತೂ- ರಾಜಸ್ಥಾನದಲ್ಲಿ ಮಾಡಿದ “ಅಪಪ್ರಚಾರ” ಭಾಷಣದಲ್ಲಿ ಕರ್ನಾಟಕದ ಉಚಿತ ಕೊಡುಗೆಗಳನ್ನು “ದಿವಾಳಿ ಕೊಡುಗೆ”ಗಳೆಂದು ಟೀಕಿಸಿ, ಇದು ದೇಶದ ಆರ್ಥಿಕತೆಯನ್ನು ನಾಶಪಡಿಸುವುದೆಂಬ ಅಗ್ಗದ ಹೇಳಿಕೆ ನೀಡಿದರು.

ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಜಾಗದಲ್ಲೀಗ ಜನಪ್ರಿಯ ಕರ್ನಾಟಕ ಮಾಡೆಲ್

ಅರಾಜಕವಾದ, ಮೇಲ್ಜಾತಿ ಪ್ರಾಬಲ್ಯದ, ದಲಿತರು ಮತ್ತು ಮುಸ್ಲಿಮರ ಮೇಲಿನ ದೌರ್ಜನ್ಯದ, ಪೊಲೀಸ್ ರಾಜ್ಯದ- ವಿದೇಶಿ ಕಾಮಗಾರಿಗಳ ಚಿತ್ರ ಹಾಕಿ ತಮ್ಮ ಸಾಧನೆ ಎಂದು ಹೇಳುತ್ತಾ ಸಾವಿರಾರು ಕೋಟಿ ರೂ. ವೆಚ್ಚದ ಜಾಹೀರಾತುಗಳು, ಮಾರಿಹೋದ ಕೊಳಕು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಬಾಡಿಗೆ ಭಾಷಣಕಾರರು ಸೃಷ್ಟಿಸಿದ ಟೊಳ್ಳು “ಗುಜರಾತ್ ಮಾಡೆಲ್”, “ಯುಪಿ ಮಾಡೆಲ್” ಇತ್ಯಾದಿಗಳ ಜಾಗದಲ್ಲಿ ಜನಪರ “ಕರ್ನಾಟಕ ಮಾಡೆಲ್” ಜನಪ್ರಿಯವಾಗುತ್ತಿರುವುದು ಬಿಜೆಪಿಯಲ್ಲಿ ಆತಂಕ ಉಂಟುಮಾಡಿದೆ ಎಂಬುದು ಅದರ ಯದ್ವಾತದ್ವಾ ಪ್ರತಿಕ್ರಿಯೆಗಳಿಂದಲೇ ಗೊತ್ತಾಗುತ್ತದೆ.

ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ, ಕಟೀಲ್, ಯತ್ನಾಳ, ಸಿ.ಟಿ. ರವಿ, ಸಂತೋಷ, ಪ್ರತಾಪಸಿಂಹ, ಸೂಲಿಬೆಲೆ, ಮಹೇಶ್ ಹೆಗ್ಡೆ, ಬಾಡಿಗೆ ಬರಹಗಾರರು- ಮುಂತಾದವರು ಕೀಳುಮಟ್ಟದ ಟೀಕೆಯನ್ನು ಮಾಡುತ್ತಲೇ ಇದ್ದಾರೆ. ಇವರಲ್ಲಿ ಹೊಸ ಸಂಪುಟವು ಪ್ರಮಾಣವಚನ ಸ್ವೀಕರಿಸುವ ಮೊದಲೇ “ಸರಕಾರ ಮಾತು ತಪ್ಪಿ ವಂಚಿಸಿದೆ” ಎಂದು ಹೇಳಿದ ಬೊಮ್ಮಾಯಿ, ಮುಸ್ಲಿಮರ ಬಹುಪತ್ನಿತ್ವದ ಬಗ್ಗೆ ಆಧಾರರಹಿತ ಕುತ್ಸಿತ ಟೀಕೆ ಮಾಡಿ ಕೋಮುಬಣ್ಣ ಹಚ್ಚಲು ಯತ್ನಿಸಿದ ಸಂಸದ ಪ್ರತಾಪ್ ಸಿಂಹ, ಡಾಲರ್ ಲೆಕ್ಕ ಗೊತ್ತಿಲ್ಲದಿದ್ದರೂ, ಮಹಾನ್ ಆರ್ಥಿಕ ತಜ್ಞನಂತೆ ವರ್ತಿಸುವ ನಳಿನ್ ಕುಮಾರ್ ಕಟೀಲ್ ನಗೆಪಾಟಲಿಗೂ, ಜನರ ಕೋಪಕ್ಕೂ ಗುರಿಯಾದರು. ಗುಲಾಮಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಸಾಕುನಾಯಿಗಳಂತೆ ಇವರನ್ನೇ ಅನುಸರಿಸಿದವು. ದೇಶದಲ್ಲಿ ಪ್ರತಿಯೊಂದು ವಸ್ತುವನ್ನು ಕೊಳ್ಳುವಾಗಲೂ, ಪ್ರತೀ ಸೇವೆಯನ್ನು ಪಡೆಯುವಾಗಲೂ ಜನರು ತೆರಿಗೆ ಕಟ್ಟುತ್ತಾರೆ ಎಂಬುದನ್ನು ಮರೆತ- ಸರಕಾರದಿಂದ ಅಗ್ಗದ ಬೆಲೆಗೆ ಸಾವಿರಾರು ಎಕರೆ ಜಮೀನು, ಸರಕಾರಿ ಖರ್ಚಿನಲ್ಲಿ ಮೂಲ ಸೌಕರ್ಯ, ತೆರಿಗೆ ಸಹಿತ ಹಲವು ವಿನಾಯಿತಿ ಪಡೆದ ಬಹುರಾಷ್ಟ್ರೀಯ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥ- ತಾವು ಕಟ್ಟುವ ತೆರಿಗೆ ಹಣವನ್ನು ಬಡವರಿಗೆ ನೀಡಬಾರದು ಎಂಬರ್ಥದ ಹೇಳಿಕೆ ನೀಡಿ, ಜನರ ಕೋಪಕ್ಕೆ ಗುರಿಯಾದ. ಹಣ ಎಲ್ಲಿಂದ ತರುತ್ತೀರಿ ಎಂಬುದರಿಂದ ಹಿಡಿದು, ದೇಶ ದಿವಾಳಿಯಾಗುತ್ತದೆ, ಆರ್ಥಿಕತೆ ನಾಶವಾಗುತ್ತವೆ ಎಂಬುದು ಇವರ ಕೂಗು.

ಬಿಜೆಪಿಯ ವಂಚಕ ಆರ್ಥಿಕ ಸಿದ್ಧಾಂತ!

ಹಲವಾರು ವಂಚಕ ಉದ್ಯಮಿಗಳು (ಬಹುತೇಕ ಪ್ರಧಾನಿ ಮತ್ತು ಗೃಹ ಸಚಿವರ ರಾಜ್ಯದವರು) ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ಲಕ್ಷಾಂತರ ಕೋಟಿ ರೂ. ವಂಚಿಸಿ ದೇಶಬಿಟ್ಟು ಓಡಿದಾಗ, ಸರಕಾರದ ಒಲವು ಪಡೆದಿರುವ ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಮನ್ನಾ ಮಾಡಿದಾಗ ಅಥವಾ ಅದಾನಿ ಸಂಸ್ಥೆಗಳು ಶೇರುದಾರರಿಗೆ ಸಾವಿರಾರು ಕೋಟಿ ನಷ್ಟ ಉಂಟುಮಾಡಿದಾಗ, ಲೆಕ್ಕವೇ ಕೊಡದ “ಪಿಎಂ ಕೇರ್ಸ್” ಮತ್ತು ಪಕ್ಷಕ್ಕೆ “ಚುನಾವಣಾ ಬಾಂಡ್”ಗಳಿಂದ ಹಲವು ಸಾವಿರ ಕೋಟಿ ದೇಣಿಗೆ ಪಡೆದಾಗ- ತಲಾ ೪,೨೦೦ ಕೋಟಿ ರೂ. ವೆಚ್ಚದ ಎರಡು ಐಷಾರಾಮಿ ಬೋಯಿಂಗ್ ೭೭೭ ವಿಮಾನಗಳನ್ನು, ದುಬಾರಿ ವಿದೇಶಿ ಕಾರುಗಳನ್ನು ಸ್ವಂತ ಉಪಯೋಗಕ್ಕೆ ಹೊಂದಿರುವ, ದುಬಾರಿ ಸೂಟು, ಬೂಟುಗಳ ಐಷಾರಾಮಿ ಜೀವನ ನಡೆಸುತ್ತಿರುವ, ಸ್ವಂತ ಪ್ರಚಾರಕ್ಕೆ ಸಾವಿರಾರು ಕೋಟಿ ರೂ. ವ್ಯಯಿಸುತ್ತಿರುವ, ವಿಮಾನವೇ ಈ ತನಕ ಬಂದಿಳಿಯದ ಶಿವಮೊಗ್ಗದಂತಾ ವಿಮಾನ ನಿಲ್ದಾಣಗಳನ್ನು ಉದ್ಘಾಟಿಸಲು, ಯಕಶ್ಚಿತ್ ರೈಲುಗಳಿಗೆ ಬಾವುಟ ತೋರಿಸಲು ಕೋಟಿಗಟ್ಟಲೆ ತೆರಿಗೆ ಹಣವನ್ನು ಸ್ವಂತದ ಮತ್ತು ಪಕ್ಷದ ಪ್ರಚಾರಕ್ಕೆ ಬಳಸುವ ಪ್ರಧಾನಿಯ ದುಂದು ವೆಚ್ಚದಿಂದ ದೇಶವಾಗಲೀ ಆರ್ಥಿಕತೆಯಾಗಲಿ ದಿವಾಳಿಯಾಗಲಿಲ್ಲ. ಒಂದು ವಿಮಾನದ ವೆಚ್ಚದಲ್ಲಿ ಇಡೀ ಒಂದು ವರ್ಷ ರಾಜ್ಯದ ಮಹಿಳೆಯರು ಉಚಿತ ಬಸ್ (ಪ್ರಧಾನಿಯಂತೆ ಐಷಾರಾಮಿ ಅಲ್ಲ) ಪ್ರಯಾಣ ಮಾಡಿದರೆ, ಬಡವರು ಸವಲತ್ತು ಪಡೆದರೆ ದೇಶ ದಿವಾಳಿಯಾಗುತ್ತದೆ! ಇದೇ ಬಿಜೆಪಿಯ ವಂಚಕ ಆರ್ಥಿಕ ಸಿದ್ಧಾಂತ!

ಅವರ ಪ್ರಶ್ನೆ: ಹಣ ಎಲ್ಲಿಂದ ಬರುತ್ತದೆ?

ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಆದಾಯ ಮತ್ತು ತೆರಿಗೆ ಸಂಗ್ರಹ ಇರುವ ರಾಜ್ಯಗಳಲ್ಲಿ ಕರ್ನಾಟಕ ಇದೆ. 3.80 ಲಕ್ಷ ಕೋಟಿ ರೂ.ಗಳ ಅಂದಾಜು ವಾರ್ಷಿಕ ಬಜೆಟ್ ಹೊಂದಿರುವ ರಾಜ್ಯಕ್ಕೆ- ಈ ಯೋಜನೆಗಳಿಗೆ ಬೇಕಾಗಿರುವ 5೦,೦೦೦ ಕೋಟಿ ರೂ.ಗಳನ್ನು ಹೊಂದಿಸಲು ಕಷ್ಟವಾಗಬಾರದು. ಇಲ್ಲಿ – ದಕ್ಷಿಣ ರಾಜ್ಯಗಳು, ಮಹಾರಾಷ್ಟ್ರ, ಪಂಜಾಬ್ ಮುಂತಾದ ಅತ್ಯಂತ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಕೇಂದ್ರಕ್ಕೆ ಸಲ್ಲಿಸುವ ರಾಜ್ಯಗಳ ಕಾನೂನುಬದ್ಧ ಪಾಲು ಮರಳಿಸದೆ, ಬಿಜೆಪಿ ಆಡಳಿತವಿರುವ ಕಡಿಮೆ ತೆರಿಗೆ ಸಂಗ್ರಹಿಸುವ ಉತ್ತರಪ್ರದೇಶದಂತ ರಾಜ್ಯಗಳಿಗೆ ಹೆಚ್ಚು ಪಾಲು ನೀಡುವ ದುಷ್ಟ ಸಂಚಿನ ಬಲಿಪಶುಗಳಲ್ಲಿ ಕರ್ನಾಟಕವೂ ಒಂದು. (ಉದಾಹರಣೆಗೆ ರಾಜ್ಯವು ಸಂಗ್ರಹಿಸಿದ ಒಂದು ರೂಪಾಯಿ ಜಿಎಸ್‌ಟಿಯಲ್ಲಿ ರಾಜ್ಯಕ್ಕೆ 35 ಪೈಸೆ ಮರಳಿಸಿದ್ದರೆ, ಉತ್ತರ ಪ್ರದೇಶಕ್ಕೆ ಒಂದು ರೂಪಾಯಿಗೆ 1.70 ರೂಪಾಯಿ ನೀಡಲಾಗಿದೆ. ಕೆಲವರ್ಷಗಳಿಂದ ಅಂಕಿಅಂಶಗಳನ್ನೇ ಸರಿಯಾಗಿ ಇಡದ, ಕಡ್ಡಾಯ ದಶವಾರ್ಷಿಕ ಜನಗಣತಿಯನ್ನೂ ನಡೆಸದ, ಅಂಕಿಅಂಶ ಸಚಿವರು ನಿದ್ದೆ ಮಾಡುತ್ತಿರುವ ಸರಕಾರದಿಂದ ನಿಖರ ಅಂಕಿಅಂಶಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಹೀಗಿರುವಾಗ, ಈ ಜನಪರ ಕಾರ್ಯಕ್ರಮಗಳನ್ನು ಅಸಹನೆಯಿಂದ ವಿರೋಧಿಸುತ್ತಿರುವವರು, ಗೊಂದಲ ಸೃಷ್ಟಿಸುತ್ತಿರುವವರು, ಅವಹೇಳನ ಮಾಡುತ್ತಿರುವವರು ಯಾರು? ಹೀಗೆ ಮಾಡುವವರು- ಬಡವರು ಬಡವರಾಗಿಯೇ ಉಳಿಯಬೇಕೆಂದು, ತಮ್ಮ ಚಾಕರಿ ಮಾಡುತ್ತಲೇ ಇರಬೇಕೆಂದು ಬಯಸುವ ಮೇಲ್ವರ್ಗದವರು ಮತ್ತು ಮೂರು ಚಿಲ್ಲರೆ ಪರ್ಸೆಂಟ್ ಇದ್ದರೂ- ಮೊಗಲರಿರಲಿ, ಬ್ರಿಟಿಷರಿರಲಿ ಅಥವಾ ಈಗಲೂ ಅಧಿಕಾರದಲ್ಲಿ, ಆಡಳಿತದಲ್ಲಿ ಬಹುದೊಡ್ಡ ಪಾಲನ್ನು ಆಕ್ರಮಿಸಿದವರು. ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿದ್ದರೂ ಇದೀಗ ತಮ್ಮ ಸಂಖ್ಯೆ ಮೀರಿದ ಹತ್ತು ಶೇಕಡಾ ಮೀಸಲಾತಿಯನ್ನು ಚಪ್ಪರಿಸುತ್ತಿರುವವರು. ಸಾವಿರಾರು ವರ್ಷಗಳಿಂದ ಧರ್ಮದ ಹೆಸರಲ್ಲಿ ಜನರನ್ನೂ, ರಾಜರನ್ನೂ ನಿಯಂತ್ರಿಸುತ್ತಾ ಅಥವಾ ಅವರ ಪದತಲದಲ್ಲಿ ತಲೆಯಿಟ್ಟು ಹೊಗಳಿ ಸಾವಿರಾರು ಎಕರೆ ಜಮೀನಿನ ಉಂಬಳಿ, ದೇವಸ್ಥಾನಗಳಂತಾ ಉದ್ದಿಮೆಗಳನ್ನು ಪಡೆದವರು. ಮೃಷ್ಟಾನ್ನ ಭೋಜನವನ್ನು ಬಿಟ್ಟಿಯಾಗಿ ಉಣ್ಣುವುದಕ್ಕೂ ಗೋದಾನ, ಭೂದಾನ, ಸುವರ್ಣದಾನ ಇತ್ಯಾದಿ ದಕ್ಷಿಣೆ ಪಡೆದವರು. ಬಹುಸಂಖ್ಯಾತರನ್ನು ವಿದ್ಯೆಯಿಂದ ದೂರವಿಟ್ಟವರು, ಅಧಿಕಾರದ ಲಾಲಸೆಯಿಂದ ಅವರ ಜೊತೆಗೆ ಸೇರಿದವರು. ಅವರು ಧರ್ಮದ ಹೆಸರಲ್ಲಿ ರೂಪಿಸಿರುವ ರಾಜಕೀಯ ಸಂಘಟನೆಗಳು ಮತ್ತು ಪಕ್ಷಗಳಿಗೆ- ಅದೇ ತಾರತಮ್ಯದ ಧರ್ಮದ ಹೆಸರಿನಲ್ಲಿ ಪರಂಪರಾಗತ ಗುಲಾಮರಾಗಿರಲು ಬಯಸುವವರು ಎಂಬುದನ್ನು ತಿಳಿದುಕೊಂಡು, ಯಾವತ್ತೂ ನೆನಪಿಡೋಣ.

ನಿಖಿಲ್‌ ಕೋಲ್ಪೆ

ಹಿರಿಯ ಪತ್ರಕರ್ತರು

ಇದನ್ನು ಓದಿದ್ದೀರಾ?-ಉಚಿತ ಸವಲತ್ತುಗಳ ರಾಜಕೀಯ

ಬಡತನ ಮತ್ತು ಅಸಮಾನ ಹಂಚಿಕೆಯ ಇತಿಹಾಸ
ನಾವು ನೋಡಿರುವಂತೆ ವ್ಯವಸ್ಥೆಗಳು ಬದಲಾಗಿವೆಯೇ ಹೊರತು ದೋಚುವ, ವಂಚಿಸುವ ಮೂಲ ಉದ್ದೇಶ ಬದಲಾಗಿಲ್ಲ ಮತ್ತು ಈಗಿನ ನವ ಉದಾರೀಕರಣದ ಕಾಲಘಟ್ಟದಲ್ಲಿ ಅವು ಇನ್ನಷ್ಟು ಧನದಾಹಿಯಾಗಿ, ನಾಜೂಕಾಗಿ ಕುತ್ತಿಗೆ ಕೊಯ್ಯುವ ವ್ಯವಸ್ಥೆಗಳಾಗಿವೆ. ಬಡತನದ ಕುರಿತು ನಿಖಿಲ್ ಕೋಲ್ಪೆ ಬರೆಯುವ  ಮಹತ್ವದ ಸರಣಿ ಲೇಖನಗಳನ್ನುಓದಿ

ಹಸಿವಿನ ಮತ್ತು ಅದರಿಂದ ಉಂಟಾದ ನರಳಿಕೆ ಹಾಗೂ ಸಾವುಗಳ ಇತಿಹಾಸ ಮೊದಲಿನದು;  “ಬಡತನ”ದ  ಮತ್ತು ಅದರಿಂದ ಉಂಟಾದ ನರಳಿಕೆ ಹಾಗೂ ಸಾವುಗಳ ಇತಿಹಾಸ ನಂತರದ್ದು ಎಂದು ಹೇಳಿದರೆ ಬಹಳಷ್ಟು ಮಂದಿಗೆ ಆಶ್ಚರ್ಯ ಆಗಬಹುದಲ್ಲವೆ? ಇದು ನಿಜ. ಮಾನವ ಕುಲದ ನಿಜ ಇತಿಹಾಸ ಇದನ್ನೇ ಹೇಳುತ್ತದೆ. ಹಸಿವು ಮತ್ತು ಬಡತನಗಳ ಸಂಬಂಧವೇನು? ಇವುಗಳನ್ನು ಉಂಟು ಮಾಡಿರುವವರು ಯಾರು? ಯಾಕೆ? ಇದು ಈಗಿನ “ಆಧುನಿಕ” ಕಾಲಘಟ್ಟದಲ್ಲಿಯೂ ಮುಂದುವರಿದಿರುವುದು ಏಕೆ? ಬಡತನ ನಿರ್ಮೂಲನೆಯ ಇತಿಹಾಸ ಪ್ರಸಿದ್ಧ, ದೇಶ-ಕಾಲ-ಧರ್ಮಾತೀತ ವಂಚನಾ ನಾಟಕ ಮುಂದುವರಿದಿರುವಂತೆಯೇ, ಈ ಬಗ್ಗೆ ಕೆಲವು ವಾಸ್ತವಾಂಶಗಳನ್ನು ತಿಳಿದುಕೊಳ್ಳೋಣ ಮತ್ತು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳೋಣ.

ಆದಿ ಮಾನವ ಸಮಾಜ

ಆದಿ ಮಾನವ ಸಮಾಜದಲ್ಲಿ ಗುಂಪಾಗಿ ಮನುಷ್ಯ ಬೇಟೆಯಾಡಿ ಅಥವಾ ಆಹಾರ ಸಂಗ್ರಹಿಸಿ ಬದುಕುತ್ತಿದ್ದ ಕಾಲದಲ್ಲಿ ಹಸಿವು ಇತ್ತಾದರೂ, ಬಡತನ ಅಥವಾ ಶ್ರೀಮಂತಿಕೆಯ ಪರಿಕಲ್ಪನೆ ಇರಲಿಲ್ಲ. ಬಹಳಷ್ಟು ಬಲಿಷ್ಟ ಪ್ರಾಣಿಗಳು ಓಡಾಡುತ್ತಿದ್ದ ಕಾಲದಲ್ಲಿ ತಾವೇ ಆಹಾರ ಆಗಬಹುದಾದ ದುರ್ಬಲ ಪ್ರಾಣಿಗಳಾದ ಮಾನವರು ಬೇಟೆಯಾಡ ಬೇಕೆಂದರೆ ಜೊತೆಯಾಗಿಯೇ ಇರಬೇಕಿತ್ತು. ಈ ಅನಿವಾರ್ಯತೆ ಸಮಾಜವನ್ನು ಕಟ್ಟಿತು. ಇದ್ದರೆ ಎಲ್ಲರಿಗೂ ಉಂಟು, ಇಲ್ಲದಿದ್ದರೆ ಯಾರಿಗೂ ಇಲ್ಲ. ಎಲ್ಲವನ್ನೂ ಹಂಚಿತಿನ್ನುವ ಈ ಮೊದಲ ಸಮಾಜವಾದಿ ಪರಿಕಲ್ಪನೆಯ ಸಮಾಜವು ಮಳೆ, ಬಿಸಿಲು, ಗಾಳಿ, ಚಳಿ, ರೋಗರುಜಿನ ಎಲ್ಲವನ್ನೂ ಸಮಾನವಾಗಿ ಮತ್ತು ಜೊತೆಯಾಗಿ ಎದುರಿಸಬೇಕಿತ್ತು. ಸುತ್ತಲೂ ಬೇಟೆ ಮತ್ತು ಆಹಾರದ ಲಭ್ಯತೆಯ ಆಧಾರದಲ್ಲಿ ಒಂದು ಪಂಗಡದ ಬಡತನವೋ, ಶ್ರೀಮಂತಿಕೆಯೋ ನಿರ್ಧಾರವಾಗುತ್ತಿತ್ತೇ ಹೊರತು, ನಿನ್ನ ತಲೆಗೆ ನಿನ್ನ ಕೈ ಎಂಬ ಪರಿಸ್ಥಿತಿ ಇರಲಿಲ್ಲ. ಗುಂಪುಗಳ ನಡುವೆ ಆಹಾರ ಮತ್ತು ಅದು ಸಿಗುವ ಪ್ರದೇಶಕ್ಕಾಗಿ ಟೆರಿಟೋರಿಯಲ್ ಕಚ್ಚಾಟಗಳು ನಡೆಯುತ್ತಿದ್ದವು. ಆಗ ಎಲ್ಲವೂ ಸ್ವರ್ಗವಾಗಿತ್ತು ಎಂದು ಭಾವಿಸಬೇಕಿಲ್ಲ. ಬದುಕುವುದು ಸವಾಲಾಗಿತ್ತು ಮತ್ತು ಸರಾಸರಿ ಆಯಸ್ಸು ಬಹಳ ಕಡಿಮೆ ಇತ್ತು. ಆದರೂ, ಬಡತನ- ಶ್ರೀಮಂತಿಕೆಯ ಮೇಲುಕೀಳು ಇರಲಿಲ್ಲ. ಆಸ್ತಿ ಮತ್ತು ಒಡೆತನದ ಕಲ್ಪನೆಯೇ ಇರಲಿಲ್ಲ

ಮುಂದೆ ಬೇಟೆಯಾಡಲೆಂದು ರೂಪಿಸಿದ ಆಯುಧಗಳೇ ಮಾನವ ವಿಕಾಸಕ್ಕೆ ಕಾರಣವಾಗುವುದರ ಜೊತೆಗೆ, ಈ ಆಯುಧಗಳು ಮತ್ತು ಟೆರಿಟೋರಿಯಲ್ ಗುಣಗಳೇ ರಾಜ್ಯಗಳ ಸ್ಥಾಪನೆ ಮತ್ತು ಯುದ್ಧಗಳಿಗೆ ತಳಹದಿಯಾಗುವುದರ ಜೊತೆಗೆ, ಬಡವರ ಬದಲಾಗಿ ಬಡತನವನ್ನು ಪೋಷಿಸುವ ಅಸಮಾನ ಹಂಚಿಕೆಯ ವ್ಯವಸ್ಥೆಗಳನ್ನು ರೂಪಿಸಿದ್ದು ವಿಪರ್ಯಾಸ.

ಆಸ್ತಿ ಮತ್ತು ಒಡೆತನ

ಮುಂದೆ ಮಾನವರು ಕೃಷಿ ಮಾಡಲು ಕಲಿತು, ಬೇಲಿ ಹಾಕಲು ಆರಂಭಿಸಿದಾಗ ಆಸ್ತಿ ಮತ್ತು ಒಡೆತನದ ಕಲ್ಪನೆಯು ಹುಟ್ಟಿತು. ಜೊತೆಗೆ ಸಾಮುದಾಯಿಕ ಬೇಟೆಗಾಗಿ ಆವಿಷ್ಕರಿಸಿದ್ದ ಆಯುಧಗಳೇ ಅಭಿವೃದ್ಧಿ ಹೊಂದಿ, ಹಕ್ಕು ಸ್ಥಾಪನೆಗೆ ಬಳಕೆಯಾದವು. ಇಡೀ ವಿಶಾಲ ಭೂ ಪ್ರದೇಶಗಳನ್ನು ತಮ್ಮದೆಂದು ಹೇಳಿಕೊಳ್ಳುವುದು ಆರಂಭವಾಯಿತು. ರಾಜ್ಯಗಳು, ಪಾಳೆಯಗಾರಿಕೆ ಆರಂಭವಾಯಿತು. ಬಲಪ್ರಯೋಗ ಮತ್ತು ಯುದ್ಧ ಸಾಮರ್ಥ್ಯವೇ ಆಸ್ತಿ ಮತ್ತು ಶ್ರೀಮಂತಿಕೆಗೆ ಸಾಧನವಾಯಿತು. ಶಕ್ತಿವಂತರು ಆ ಕಾಲದ ಸಂಪನ್ಮೂಲಗಳಾದ ಜಮೀನನ್ನು ತಮ್ಮದನ್ನಾಗಿ ಮಾಡಿಕೊಂಡಾಗ, ಭೂರಹಿತರು ಬಡವರಾದರು. ಹಲವರು ಕಾಡುಪಾಲಾಗಿ ಆದಿ ಮಾನವ ಜೀವನವನ್ನೇ ಮುಂದುವರಿಸಬೇಕಾಯಿತು. ಭೂರಹಿತರಿಗೆ ಗುಲಾಮರಾಗುವುದು, ಉಳ್ಳವರ ಚಾಕರಿ ಮಾಡುವುದು, ಅಡಿಯಾಳುಗಳಾಗುವುದು, ಸೈನಿಕರಾಗುವುದು ಅಥವಾ ಆ ಕಾಲದ ದೈನಂದಿನ ಅಗತ್ಯಗಳನ್ನು ಪೂರೈಸುವ ಇತರ ಉದ್ಯೋಗ, ಕುಶಲ ಕರ್ಮಗಳಲ್ಲಿ ತೊಡಗುವುದರ ಹೊರತು ಬೇರೆ ದಾರಿಯಿರಲಿಲ್ಲ. ಗುಲಾಮರು, ಸಾಮಾನ್ಯ ಕೆಲಸಗಾರರು, ಗೇಣಿ ಕೊಡುವ ಸಣ್ಣ ರೈತರು, ಕಪ್ಪಕೊಡುವ ಜಮೀನ್ದಾರರು, ಪಾಳೆಯಗಾರರು, ಸಾಮಂತರು ಮತ್ತು ಅಂತಿಮವಾಗಿ ರಾಜ-ಸಾಮ್ರಾಟ- ಹೀಗೆ ಒಂದು ಶ್ರೇಣಿಕೃತ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಸಮಾನ ವ್ಯವಸ್ಥೆ ರೂಪುಗೊಂಡಿತು. ಈ ವ್ಯವಸ್ಥೆಯ ಆಧಾರದಲ್ಲಿಯೇ ಹಕ್ಕುಗಳು ನಿರ್ಧಾರವಾದವು. ರಾಜ್ಯಗಳು, ರಾಜ ಮನೆತನಗಳು ಹುಟ್ಟಿದವು, ವಿಸ್ತರಿಸಿದವು, ಕುಸಿದವು.

ಆದರೆ, ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಬಡವರು ಬಡವರಾಗುತ್ತಾ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಾ ನಡೆದರು. ಇದಕ್ಕೆ ವ್ಯತಿರಿಕ್ತವಾದ ನಿದರ್ಶನಗಳು ಆಗೊಮ್ಮೆ ಈಗೊಮ್ಮೆ ಆಗಲೂ, ಈಗಲೂ ಸಿಗುತ್ತವೆ. ಒಟ್ಟಿನಲ್ಲಿ ಬಡಜನರ ಬೆವರಿನ ಫಲವು ಹಂತಹಂತವಾಗಿ ಒಂದೇ ಕಡೆ ಸೇರುವ ವ್ಯವಸ್ಥೆಯಿದು. ರಾಜನ ಸ್ವಭಾವ, ರಾಜಕೀಯ ಸಂದರ್ಭಗಳಿಗೆ ಅನುಗುಣವಾಗಿ ಜನರೇ ತಮ್ಮ ದುಡಿಮೆಯನ್ನು ಭಿಕ್ಷೆಯಾಗಿ, ಕೊಡುಗೆಯಾಗಿ ಆಳುವವರ ಔದಾರ್ಯವೋ ಎಂಬಂತೆ ಪಡೆಯುವ ವ್ಯವಸ್ಥೆಯಿದು. ಇತಿಹಾಸದ ಉದ್ದಕ್ಕೂ ಪಕ್ಕದ ರಾಜ್ಯಗಳ ಮೇಲೆ ಆಕ್ರಮಣ ಮಾಡಿ ಲೂಟಿ ಹೊಡೆದಾಗ ಹೋದ ಜೀವಗಳಿಗೆ, ನಡೆದ ಅತ್ಯಾಚಾರ- ಅನಾಚಾರಗಳಿಗೆ ಲೆಕ್ಕ ಇಟ್ಟವರಿಲ್ಲ. ಬರ, ಹಸಿವುಗಳಿಂದ ಸತ್ತವರಿಗೂ ಲೆಕ್ಕ ಇಲ್ಲ. ಬಡವರ ಲೆಕ್ಕಕ್ಕೆ ಇನ್ನಷ್ಟು ಜನರು ಸೇರುತ್ತಾ ಹೋದರು ಅಷ್ಟೇ. ಅವರ ಜೀವನ ಶಾಂತಿಕಾಲದಲ್ಲಿಯೂ ಅಷ್ಟೇ. ಯುದ್ಧಕಾಲದಲ್ಲೂ ಅಷ್ಟೇ.

ಒಟ್ಟಿನಲ್ಲಿ ಹೇಳಬೇಕೆಂದರೆ, ಎಲ್ಲರ ಸೊತ್ತಾದ ಸಂಪನ್ಮೂಲಗಳಿಗೆ ಕೆಲವರೇ ಒಡೆಯರಾದಾಗ ಬಡತನ ಹುಟ್ಟುತ್ತದೆ. ನಾವು ಈಗ ಓದುವ ಇತಿಹಾಸದಲ್ಲಿ ರಾಜ, ಅವನ‌ ರಾಣಿಯರು, ಮಾಡಿದ ಯುದ್ಧಗಳು, ಕಟ್ಟಿದ ಮಹಲುಗಳು, ಮಾಡಿದ ದಾನದತ್ತಿಗಳು, ಸಾಲು ಮರ ನೆಡಿಸಿದ್ದು, ಬೀದಿಬದಿ ಮುತ್ತುರತ್ನ ವ್ಯಾಪಾರ ಇತ್ಯಾದಿ ಜುಜುಬಿ ವಿಷಯಗಳ ಬಗ್ಗೆ ಇದೆಯೇ ಹೊರತು, ಬಡಜನರ ಜೀವನದ ಪಾಡಿನ ಬಗ್ಗೆ ಏನೂ ಇಲ್ಲ. ಕೆಲವೊಮ್ಮೆ ಒಳ್ಳೆಯ ಜನಪ್ರೇಮಿ ರಾಜರು ಆಗಿ ಹೋಗಿದ್ದಾರೆ. ಅವರನ್ನು ನಾವು ಈಗಲೂ ಹಾಡಿಹೊಗಳುತ್ತೇವೆ. ಆದರೆ, ಇಡೀ ರಾಜಪ್ರಭುತ್ವ ವ್ಯವಸ್ಥೆಯೇ ಅಸಮಾನ ಹಂಚಿಕೆಯ ಒಂದು ಪ್ರತಿಷ್ಟಿತ, ಸುಸಜ್ಜಿತ ದರೋಡೆಕೋರ ವ್ಯವಸ್ಥೆ. ನಮ್ಮ ಪುರಾಣಗಳ ರಾಜಸೂಯ ಮತ್ತು ಅಶ್ವಮೇಧ ಯಾಗಗಳಿಂದ ಹಿಡಿದು ಪ್ರಪಂಚದ ಬೇರೆಬೇರೆ ರಾಜವಂಶಗಳು ಮಾಡಿದ ದಂಡಯಾತ್ರೆಗಳೆಂಬ ವೈಭವೀಕೃತ ಮತ್ತು ಘೋರ ದರೋಡೆ ಆಭಿಯಾನಗಳ ಬಗ್ಗೆ ನಾವು ತಿಳಿದೇ ಇದ್ದೇವೆ.

ವಸಾಹತುಶಾಹಿಯ ದರೋಡೆ

ರಾಜ ಪ್ರಭುತ್ವಗಳ ಹಣದಾಹದ ಮುಂದುವರಿದ ಭಾಗವೇ ವಸಾಹತುಶಾಹಿ ವ್ಯವಸ್ಥೆ. ಈ ವ್ಯವಸ್ಥೆಯೇ ಮುಂದೆ ಬಂಡವಾಳಶಾಹಿ ವ್ಯವಸ್ಥೆಗೆ ದಾರಿಮಾಡಿ ಕೊಟ್ಟಿತು. ಬ್ರಿಟಿಷ್, ಸ್ಪಾನಿಷ್, ಫ್ರೆಂಚ್, ಪೋರ್ಚುಗೀಸ್, ಡಚ್, ಡೇನ್, ಚೀನಿ, ಜಪಾನಿ ಮುಂತಾದ ರಾಜಪ್ರಭುತ್ವಗಳು- ಕೇವಲ ಆಕ್ರಮಣ ಮಾಡಿ, ದೋಚಿ ಓಡಿಹೋಗುವ ಬದಲು ದೇಶದೇಶ ಮತ್ತು ದೊಡ್ಡ ದೊಡ್ಡ ಭೂಭಾಗಗಳನ್ನು ಆಕ್ರಮಣ ಮಾಡಿ, ಶಾಶ್ವತವಾಗಿ ವಶಪಡಿಸಿಕೊಂಡು, ಅಲ್ಲಿನ ಜನರನ್ನು ಅಡಿಯಾಳಾಗಿಸಿ ದೋಚುವ ವ್ಯವಸ್ಥೆಯೇ ವಸಾಹತುಶಾಹಿ. ಇಡೀ ಆಫ್ರಿಕಾ, ಎರಡು ಅಮೇರಿಕಾ ಖಂಡಗಳು, ಏಷ್ಯಾ ಈ ವಸಾಹತುಶಾಹಿಯಿಂದ ಕೊಳ್ಳೆಹೋದವು. ಭಾರತೀಯರಿಗೆ ಇದರ ಅನುಭವ ಬಹಳಷ್ಟು ಇದೆ.

ದಕ್ಷಿಣ ಅಮೇರಿಕಾದ ಮೂಲ ನಿವಾಸಿಗಳನ್ನು ಪ್ರಾಣಿಗಳಂತೆ ಕೊಂದು, ಟನ್ನುಗಟ್ಟಲೆ ಚಿನ್ನ ಬೆಳ್ಳಿ ಸಾಗಿಸಿದ ಸ್ಪ್ಯಾನಿಶ್ ಮತ್ತಿತರ ವಸಾಹತುಶಾಹಿ ಮತ್ತು ಉತ್ತರ ಅಮೇರಿಕಾದಲ್ಲಿ ರೆಡ್ ಇಂಡಿಯನ್ಸ್ ಎಂದು ಕರೆಯಲಾಗುವ, ತಮ್ಮ ಪಾಡಿಗೆ ತಾವು ಬದುಕಿಕೊಂಡಿದ್ದ ಆಪಾಚಿ, ಕೊಮಾಂಚೆ, ಕಿಯೋವ ಇತ್ಯಾದಿ ನೂರಾರು ಬುಡಕಟ್ಟುಗಳ ಲಕ್ಷಾಂತರ ಜನರನ್ನು ಪ್ರಾಣಿಗಳಂತೆ ಕೊಂದು ಜಮೀನನ್ನು ಸ್ವಾಧೀನಪಡಿಸಿಕೊಂಡು ಯುಎಸ್‌ಎ, ಕೆನಡಾ ದೇಶಗಳನ್ನು ಸ್ಥಾಪಿಸಿ ತಮ್ಮದೆಂದು ಹೇಳಿಕೊಳ್ಳುತ್ತಿರುವ ಐರೋಪ್ಯ ವಲಸಿಗರು, ಆಫ್ರಿಕಾ ಖಂಡವನ್ನೇ ಕೊಳ್ಳೆ ಹೊಡೆದದ್ದು ಮಾತ್ರವಲ್ಲ; ಕರಿಯ ಜನರನ್ನು ಹಿಡಿದು ಅಮಾನುಷವಾಗಿ ಸಾಗಿಸಿ ಗುಲಾಮರನ್ನಾಗಿ ಮಾಡಿಕೊಂಡು, ಪುಕ್ಕಟೆ ದುಡಿಸಿದ ಐರೋಪ್ಯ ದೇಶಗಳ ವಸಾಹತುಶಾಹಿಯ ರಕ್ತಚರಿತ್ರೆಯ ಕುರಿತು ಪ್ರತ್ಯೇಕ ಬರೆಯಬಹುದು.

ಇವೆಲ್ಲವೂ ಸಾಧ್ಯವಾದುದು ಬಂದೂಕು ಮತ್ತು ಮದ್ದುಗುಂಡುಗಳ ಆವಿಷ್ಕಾರದಿಂದ ಮತ್ತು ನಿರ್ದಯಿ ಹತ್ಯಾಕಾಂಡಗಳಿಂದ. ಇಂಗ್ಲೆಂಡ್ ಮತ್ತು ಇತರ ಐರೋಪ್ಯ ದೇಶಗಳಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯು ವಸಾಹತುಶಾಹಿಯ ಬೆಳವಣಿಗೆಗೆ ಕಾರಣವಾದಂತೆಯೇ, ಅದರ ಪತನಕ್ಕೂ ಕಾರಣವಾಯಿತು. ಹೊಸ ಕಾರ್ಮಿಕ ವರ್ಗದ ಉಗಮ ಮತ್ತು ಪ್ರಜಾಪ್ರಭುತ್ವದ ಹುಟ್ಟಿಗೂ ಕಾರಣವಾಯಿತು. ಆದರೆ, ದೋಚಲೆಂದೇ  ಹುಟ್ಟಿಕೊಂಡ ವಸಾಹತುಶಾಹಿಯು ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಒದಗಿಸುವ ಸಲುವಾಗಿ ಇನ್ನಷ್ಟು ಬೆಳೆಯಿತು. ಇದು ಜೊತೆಗೆ ಹೆಚ್ಚು ನಾಜೂಕಾದ ಬಂಡವಾಳಶಾಹಿ ವ್ಯವಸ್ಥೆಯನ್ನೂ ಹುಟ್ಟುಹಾಕಿತು.

ಬಂಡವಾಳಶಾಹಿ ವ್ಯವಸ್ಥೆ

ಮೇಲೆ ಹೇಳಿದ ರೀತಿಯಲ್ಲಿ ದೋಚಿದ ಸಂಪತ್ತು ಮತ್ತು ಅಗ್ಗದ ಕೂಲಿ, ಗುಲಾಮರ ಬಿಟ್ಟಿ ಶ್ರಮದಿಂದ ಕಟ್ಟಿದ ಸಂಪತ್ತೇ ಇಂದಿನ ಐರೋಪ್ಯ ಶ್ರೀಮಂತಿಕೆಗೆ ಮತ್ತು ಹಿಂದುಳಿದ  ರಾಷ್ಟ್ರಗಳ ಬಡತನಕ್ಕೆ ಮೂಲಕಾರಣ ಮಾತ್ರವಲ್ಲ, ಬಂಡವಾಳಶಾಹಿ ವ್ಯವಸ್ಥೆಯ ಮೂಲ ಬಂಡವಾಳ. ಈ ಬಂಡವಾಳಶಾಹಿ ವ್ಯವಸ್ಥೆ ಎಂಬುದು ಎಂತಾ ನಾಜೂಕಾದ ಮೋಸದ ವ್ಯವಸ್ಥೆ ಎಂದರೆ, ಅದು ಸಮಾನ ಅವಕಾಶ, ರಾಜಕೀಯ ಅಧಿಕಾರ, ಪ್ರಜಾಪ್ರಭುತ್ವ, ಮುಕ್ತ ಸಮಾಜ ಮುಂತಾದ ಕನಸುಗಳನ್ನು ತೋರಿಸಿಯೇ ಬೆಳೆಯುತ್ತಿದೆ. ವಾಸ್ತವದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಪ್ರಜಾಪ್ರಭುತ್ವದ ಅನಿವಾರ್ಯ ಭಾಗ ಎಂಬಂತೆ ಬಿಂಬಿಸಿ ನಂಬಿಸಲಾಗುತ್ತದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ನೈತಿಕ ಆಯಾಮಗಳಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೂ, ಕೇವಲ ಆರ್ಥಿಕವಾದ, ಆದರೆ ಬೇರೆಯವುಗಳ ಮೇಲೆ ಗಾಢ ಪ್ರಭಾವ ಬೀರಿ, ಅವುಗಳ ಮೇಲೆ ಉಕ್ಕಿನ ಹಿಡಿತ ಹೊಂದಿರುವ ಬಂಡವಾಳಶಾಹಿಗೂ ಯಾವುದೇ ಸಂಬಂಧವಿಲ್ಲ. ಸರ್ವಾಧಿಕಾರಿ ವ್ಯವಸ್ಥೆ ಒಂದರಲ್ಲೂ ಬಂಡವಾಳಶಾಹಿ ಹುಲುಸಾಗಿ ಬೆಳೆಯಬಲ್ಲದು. ಅದೇ ರೀತಿಯಲ್ಲಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ಸಮಾಜವಾದಿ ವ್ಯವಸ್ಥೆ ಕೂಡಾ ಅಷ್ಟೇ ಹುಲುಸಾಗಿ ಬೆಳೆಯಬಹುದು ಎಂಬುದು ಬಹುತೇಕರಿಗೆ ಅರ್ಥವಾಗದಿರುವುದು ದುರಂತ. ಒಟ್ಟಿನಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಅಡಿಪಾಯವೇ ಅನ್ಯಾಯದಿಂದ ಗಳಿಸಿದ ರಕ್ತಸಿಕ್ತ ಸಂಪತ್ತು ಎಂಬುದು ನಮಗೆ ನೆನಪಿರಲಿ.

ಮೇಲಾಗಿ ಈ ಭೂಮಿಯು ಇತರ ಜೀವಿಗಳ ಜೊತೆಗೆ ಮಾನವ ಕುಲದ ಸಮಾನ‌ ಸಂಪತ್ತು ಎಂದು ನೈತಿಕವಾಗಿ ಒಪ್ಪುವುದಾದರೆ, ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅಧಿಕೃತವಾಗಿಯೇ ದೋಚುವ ಅವಕಾಶ ನೀಡುವ ವ್ಯವಸ್ಥೆ ನ್ಯಾಯಬದ್ಧವಾಗಿ ಇರಲು‌ ಹೇಗೆ ಸಾಧ್ಯ? ಇದನ್ನು ಅರ್ಥ ಮಾಡಿಕೊಂಡರೆ, ಈ ಲೇಖನ ಸರಣಿಯ ಮೂಲಾಧಾರವಾದ ಸಂಪತ್ತು ಮತ್ತು ಅವಕಾಶಗಳ ಅಸಮಾನ ಹಂಚಿಕೆಯೇ ಬಡತನಕ್ಕೆ ಕಾರಣ ಮತ್ತು ಇದನ್ನು ಸರಿಪಡಿಸದೆ, ಕೇವಲ ದಾನಧರ್ಮ, ಕೊಡುಗೆಗಳಿಂದ ಬಡತನ ನಿವಾರಣೆ ಸಾಧ್ಯವಿಲ್ಲ ಎಂಬ ಸತ್ಯ ಮನದಟ್ಟಾಗುತ್ತದೆ.

ಈ ಬರಹದಲ್ಲಿ ಮೇಲುಮೇಲಕ್ಕೆ ಬಡತನ ಮತ್ತು ಅಸಮಾನ ಹಂಚಿಕೆಯ ಇತಿಹಾಸವನ್ನು ಹೇಳಲಾಗಿದೆ. ನಾವು ನೋಡಿರುವಂತೆ ವ್ಯವಸ್ಥೆಗಳು ಬದಲಾಗಿವೆಯೇ ಹೊರತು- ದೋಚುವ, ವಂಚಿಸುವ ಮೂಲ ಉದ್ದೇಶ ಬದಲಾಗಿಲ್ಲ ಮತ್ತು ಈಗಿನ ನವ ಉದಾರೀಕರಣದ ಕಾಲಘಟ್ಟದಲ್ಲಿ ಅವು ಇನ್ನಷ್ಟು ಧನದಾಹಿ ಮತ್ತು ಕೂದಲಲ್ಲಿ ಬೆಣ್ಣೆ ಸೀಳಿದಷ್ಟು ನಾಜೂಕಾಗಿ ಕುತ್ತಿಗೆ ಕೊಯ್ಯುವ ವ್ಯವಸ್ಥೆಗಳಾಗಿವೆ. ಇಲ್ಲಿನ ತನಕ ಎತ್ತಲಾದ ವಿಷಯಗಳು ಎಷ್ಟು ಆಳವಾಗಿವೆ ಮತ್ತು ಒಂದಕ್ಕೊಂದು ಎಷ್ಟೊಂದು ತಳಕುಹಾಕಿಕೊಂಡಿವೆ ಎಂದರೆ, ಪ್ರತಿಯೊಂದು ಅಂಶಗಳ ಬಗ್ಗೆ ಮುಂದೆ ಪ್ರತ್ಯೇಕವಾಗಿಯೇ ಬರೆಯ ಬಹುದು.

(ಮುಂದಕ್ಕೆ: ಬಡತನ ಮತ್ತು ಧರ್ಮಗಳ ಇತಿಹಾಸ)

ನಿಖಿಲ್ ಕೋಲ್ಪೆ

ಹಿರಿಯ ಪತ್ರಕರ್ತರು

ಬಡತನ ನಿರ್ಮೂಲನಾ ದಿನದಂದು ಸಾಕವ್ವನ ಮುಂಗೈಗೆ ಬೆಲ್ಲ!
ಬಡತನದ ಮೂಲ ಇರುವುದು ಸಂಪತ್ತಿನ, ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಅನ್ಯಾಯದ ದೋಚುವಿಕೆ ಮತ್ತು ಒಡೆತನದಲ್ಲಿಯೇ. ಸಾಮಾಜಿಕ, ಸಾಂಸ್ಕೃತಿಕವಾದ ತಾರತಮ್ಯದಿಂದ ಕೂಡಿದ ಬಡತನ ಹಂಚಿಕೆಯನ್ನು ನಾವು ಗಮನಿಸಬೇಕು ಎನ್ನುತ್ತಾರೆ ಹಿರಿಯ ಪತ್ರಕರ್ತ ನಿಖಿಲ್‌ ಕೋಲ್ಪೆ

ಪ್ರತೀ ವರ್ಷದಂತೆ ಅಕ್ಟೋಬರ್ 17ನ್ನು ವಿಶ್ವ ಬಡತನ ನಿರ್ಮೂಲನಾ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಡಿಯಲ್ಲಿ ಆಚರಿಸಲಾಗುವ ಇತರ ಹಲವಾರು ದಿನಗಳಂತೆ ಇದರ ಉದ್ದೇಶವು ನಿರ್ದಿಷ್ಟವಾಗಿ ಜಾಗತಿಕ ಬಡತನ ನಿರ್ಮೂಲನೆ ಕುರಿತು ಗಮನ ಕೇಂದ್ರೀಕರಿಸಿ, ಒಂದು ಸಂಕಲ್ಪ ಮಾಡುವುದು. ಈ ಸಂಕಲ್ಪವನ್ನು ಯಾರು ಮಾಡಬೇಕು? ಒಂದೊಂದು ರಾಷ್ಟ್ರ ಮತ್ತು ಒಟ್ಟಾಗಿ ಜಾಗತಿಕ ಸಮುದಾಯ ಮಾಡಬೇಕು. ಆದರೆ, ಸಂಕಲ್ಪ ಮಾತ್ರದಿಂದಲೇ ಬಡತನ ನಿರ್ಮೂಲನೆ ಸಾಧ್ಯವೆ? ಯಾಕೆಂದರೆ, ಬಡತನ ಎಂಬುದೇ ಮಾನವ ಜೀವನದ ಹಲವು ವಿಷಯಗಳಿಗೆ ಥಳಕು ಹಾಕಿಕೊಂಡಿರುವ ಬಹು ಆಯಾಮಗಳ ವಿಷಯ. ಈ ಆಯಾಮಗಳ ಕುರಿತು ಒಂದು ಲೇಖನ ಸರಣಿಯನ್ನೇ ಬರೆಯಬಹುದಾದುದರಿಂದ ಇಲ್ಲಿ ಈ ಸಮಸ್ಯೆಯ ಸ್ಥೂಲ ಪರಿಚಯವನ್ನಷ್ಟೇ ನೀಡಲಾಗಿದೆ.

ವಿಶ್ವಸಂಸ್ಥೆಯೇನೋ 2022ರ ಬಡತನ ನಿರ್ಮೂಲನಾ ದಿನಾಚರಣೆಯಲ್ಲಿ “ಆಚರಣೆಯಲ್ಲಿ ಎಲ್ಲರಿಗೂ ಘನತೆ” ಎಂಬ ವಿಷಯವನ್ನು ಇಟ್ಟುಕೊಂಡಿದೆ; ಮಾತ್ರವಲ್ಲದೆ, ಇದನ್ನು ಸಾಮಾಜಿಕ ನ್ಯಾಯ, ಶಾಂತಿ ಮತ್ತು ಈ ಭೂಮಿಗಾಗಿ ನಮ್ಮ ಬದ್ಧತೆಯ ಜೊತೆಗೆ ತಳಕುಹಾಕಿದೆ. ವಿಶ್ವಸಂಸ್ಥೆಯ ಪ್ರಕಾರ‌- “ಮಾನವ ಘನತೆ” ಎಂಬುದು ಕೇವಲ ಒಂದು ಮೂಲಭೂತ ಹಕ್ಕು ಮಾತ್ರವಲ್ಲ; ಅದು ಉಳಿದೆಲ್ಲಾ ಮೂಲಭೂತ ಹಕ್ಕುಗಳಿಗೆ ಅಡಿಪಾಯವಾಗಿದೆ. ಆದುದರಿಂದ “ಮಾನವ ಘನತೆ” ಎಂಬುದು ಒಂದು ಆಮೂರ್ತ ಕಲ್ಪನೆಯಲ್ಲ. ಅದು ಪ್ರತಿಯೊಬ್ಬ ಮಾನವ ಜೀವಿಗೂ ಸೇರಿದುದಾಗಿದೆ. ಆದರೇನು? ಇಂದು ಜಾಗತಿಕವಾಗಿ ಕೋಟ್ಯಂತರ ಜನರು ಕಿತ್ತು ತಿನ್ನುವ ಬಡತನದ ಕಾರಣದಿಂದ ಪ್ರತೀದಿನ, ಪ್ರತೀಕ್ಷಣ, ತಮ್ಮ, ಕುಟುಂಬದ, ಸಮುದಾಯದ ಮತ್ತು ದೇಶದ ಘನತೆ ಮಣ್ಣು ಪಾಲಾಗುವುದನ್ನು ನೋಡುತ್ತಿದ್ದಾರೆ.

ಈ ಹೊತ್ತಿನಲ್ಲಿ ವಿಶ್ವಸಂಸ್ಥೆಯ ಮೂಲಕ ವಿಶ್ವ ಸಮುದಾಯ ತೋರಿಸುತ್ತಿರುವ ಆಶಾವಾದವು ಮಾತ್ರ ಪ್ರಧಾನಿ ನರೇಂದ್ರ ಮೋದಿಯ “ಅಚ್ಛೇ ದಿನ್” ನಂತೆ ನಗೆಪಾಟಲಿನ ವಿಷಯವಾಗಿ ಕಾಣುತ್ತದೆ. ಇದಕ್ಕೆ ಕಾರಣವೇನೆಂದು ಮುಂದೆ ಓದುತ್ತಾ ಹೋದಂತೆ ಸ್ಪಷ್ಟವಾದೀತು. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಅಡಿಯಲ್ಲಿ ಬಡತನ ನಿರ್ಮೂಲನೆಗೆ, ಶಾಂತಿಗೆ ಮತ್ತು ನಮ್ಮ ಗ್ರಹದ ರಕ್ಷಣೆಗೆ 2030ರ ಗಡಿಯನ್ನು ನಿಗದಿಪಡಿಸಿದೆ. ವಿಶ್ವಸಂಸ್ಥೆಯ 2030 ಕಾರ್ಯಕ್ರಮವು (2030 ಅಜೆಂಡಾ) ಕೂಡಾ ಇದೇ ಗಡುವನ್ನು ನಿಗದಿ ಪಡಿಸಿದೆ. ಕಣ್ಣಿರುವ ಯಾರಾದರೂ ನಮ್ಮದೇ ಪರಿಸ್ಥಿತಿಯನ್ನು ಒಮ್ಮೆ ಗಮನವಿಟ್ಟು ನೋಡಿದರೆ ಇನ್ನು ಎಂಟೇ ವರ್ಷಗಳಲ್ಲಿ ಇದು ಸಾಧ್ಯವೇ ಇಲ್ಲ; ಬದಲಾಗಿ, ಬಡತನವು ಹೆಚ್ಚಲಿದೆ ಎಂಬುದು ಅರಿವಾಗುತ್ತದೆ. ಅಂದರೆ, ವಿಶ್ವಸಂಸ್ಥೆಯು ಪ್ರತಿನಿಧಿಸುವ ಜಗತ್ತಿನ ಶ್ರೀಮಂತ, ಬಡ ರಾಷ್ಟ್ರಗಳು ಅಷ್ಟೊಂದು ಕುರುಡಾಗಿವೆಯೇ? ಅಥವಾ ಬಡವರ ಮುಂಗೈಗೆ ಬೆಲ್ಲ ಹಚ್ಚುತ್ತಿವೆಯೆ? ಇದು ಸಿನಿಕತನದಂತೆ ಕಾಣಬಹುದು. ಆದರೆ, ಇಂಥಾ ದಿನಾಚರಣೆ ಮತ್ತು ಕಾರ್ಯಕ್ರಮಗಳ ಜಾತಕ ಮತ್ತು ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಇದುವೇ ಕಹಿಯಾದ ವಾಸ್ತವ. ಅಧಿಕೃತ ಅಂಕಿ ಅಂಶಗಳ ಪ್ರಕಾರವೇ 130 ಕೋಟಿ ಜನರು, ಅಂದರೆ, ಹೆಚ್ಚು ಕಡಿಮೆ ಭಾರತದ ಜನಸಂಖ್ಯೆಯಷ್ಟೇ ಜನರು ಬಡತನದಿಂದ ಬಳಲುತ್ತಿದ್ದಾರೆ ಎಂಬುದೇ ಈ ವಾಸ್ತವ. ಯಾಕೆಂದರೆ, “ಕಡುಬಡತನ” ನಿವಾರಣಾ ದಿನಕ್ಕೆ 35 ವರ್ಷಗಳಾದವು. ಈಗ ಆಚರಿಸಲಾಗುತ್ತಿರುವ ದಿನಕ್ಕೆ 30 ವರ್ಷಗಳು. ಒಂದು ಬಡ ಮಗುವು ಯವ್ವನಾವಸ್ಥೆ ತಲಪುವಷ್ಟು ಸಮಯವಿದು.

ಬಡತನ ಎಂದರೆ ಹಸಿವು ಮಾತ್ರವಲ್ಲ…

ಹಾಗಾದರೆ, ಬಡತನ ಎಂದರೇನು? ಬಡತನವೆಂದರೆ ಬರೇ ಹಸಿವು ಮಾತ್ರವೆ? ಬಡತನದ ಮತ್ತದರ ಎಲ್ಲಾ ಆಯಾಮಗಳ ಅತ್ಯುತ್ತಮ ವಿವರಣೆಯು ಮೇಲೆ ಉಲ್ಲೇಖಿಸಿದ ಎರಡು ದಿನಾಚರಣೆಗಳು ಆರಂಭವಾಗುವುದಕ್ಕೆ ದಶಕಗಳ ಮೊದಲು, ನಿಖರವಾಗಿ 1978 ರಲ್ಲಿ ದೇವನೂರ ಮಹಾದೇವರು ಬರೆದ “ಒಡಲಾಳ” ಎಂಬ ಪುಟ್ಟ ಕಾದಂಬರಿಯಲ್ಲಿದೆ. ಅದು ಮುದುಕಿ, ಮನೆ ಯಜಮಾನಿ ಸಾಕವ್ವನ ಪ್ರೀತಿ, ಸಿಡುಕು, ಸ್ವಾರ್ಥ, ಹಳಹಳಿಕೆಯಲ್ಲಿದೆ. ಅದು ಅವಳ ಕುಸಿಯಲಿರುವ “ತೊಟ್ಟಿ ಮನೆ” ಎಂಬ ಹಟ್ಟಿ, ಮಳೆಯಿಲ್ಲದೇ ಪಾಳು ಬಿದ್ದ ಅವಳ ಹೊಲ, ಮನೆಯಲ್ಲಿ ನೇಣು ಹಾಕಿಕೊಂಡಿರುವ ಹಳೆಯ ಕಾಲದ ನೂಲುವ ರಾಟೆ, ಮದುವೆಯಾದರೂ ತವರು ಮನೆಗೆ ಮಕ್ಕಳೊಂದಿಗೆ ಬಂದು ಕುಂತಿರುವ ಗೌರಮ್ಮನ ಜೀವನದಲ್ಲಿದೆ. ಅದು ಅವಳ ಕೂಸು, ಮೂಲೆ ಹಿಡಿದಿರುವ “ದುಪ್ಟಿ ಕಮೀಸನರು” ತರ ಅಸಹಾಯಕವಾಗಿದೆ. ಅದು, ಕಾಳಣ್ಣ ಕದ್ದ ಕಡಲೆ ಬೀಜಗಳನ್ನು ಒಂದೂ ಕಾಳೂ ಬಿಡದೆ ತಿಂದು, ಟೀ ನೀರು ಕುಡಿದ ಭಯಾನಕ ಹಸಿವಿನಲ್ಲಿದೆ ಮತ್ತು ಹಿಟ್ಟಿಲ್ಲದ ಈ ಮನೆ ಬಾಗಿಲಿಗೂ ತಡರಾತ್ರಿ ಬಂದು ಒಲೆಯಲ್ಲಿ ನೀರಿಟ್ಟು ಅಳುತ್ತಿರುವ ಕೂಸಿಗಾಗಿ “ಅರೆ ಪಾವು ಹಸಿಟ್ಟು ಕೊಡವ್ವ” ಎಂದು ಅಂಗಲಾಚುವ ನೆರೆಮನೆ ತಾಯಿಯ ನೋವಿನಲ್ಲಿದೆ. ಶಿವುವಿನ ಓದಿಗೆ ಎಣ್ಣೆ ಇಲ್ಲದ ಬೆಳಕಿನ ಸೊಳ್ಳಿನಲ್ಲಿದೆ. ಎತ್ತಪ್ಪನವರ ಹಟ್ಟಿಯ ಗೋವುಗಳ ಸಮೃದ್ಧಿಯಲ್ಲಿದೆ. “ಅದ್ರಾಗ ಒಂದೆಮ್ಮೆ ಸಾಯಬಾರ್ದಾ” ಎಂಬ ಆಸೆಯಲ್ಲಿದೆ. “ಅಲ್ಲೊಂದು ಇಲ್ಲೊಂದು ಹೊಗೆಯಾಡುವ ಮನೆಗಳ ಹಿಟ್ಟಿನ ಮಡಕೆಗಳಲ್ಲಿವೆ”. ಅದು ಸಾಕವ್ವನ ಚಂದಗಾಣವಾಗಿ ಮನೆ ಬಿಟ್ಟ “ನನ್ನುಂಜ” ವನ್ನು ಹುಡುಕುವ ನೆಪದಲ್ಲಿ ಜತೆಗಾರ ಹುಂಜವನ್ನೂ ಜೀಪಿನಲ್ಲಿ ಎತ್ತೊಯ್ಯುವ ಪೊಲೀಸರ, ವ್ಯವಸ್ಥೆಯ ಭ್ರಷ್ಟತೆ, ಲಾಠಿ-ಕೋವಿ-ಜೈಲುಗಳ ಭಯದಲ್ಲಿದೆ. ಅದಕ್ಕಿಂತಲೂ ಹೆಚ್ಚಾಗಿ, ಶಿವುವಿನ ಬೆರಗು, ಗುರುಸಿದ್ದುವಿನ ಹೊಳೆಯುವ ವಾಚು, ಪುಟ್ಟಗೌರಿಯ ಕನಸಿನ “ಕಾಲಿನಿಂದ ತಲೆಗೆ ಬರೆದ” ನವಿಲಲ್ಲಿದೆ. ಅದು ಬಲಪಂಥೀಯ ಪ್ರಧಾನಿ ನರೇಂದ್ರ ಮೋದಿ ಫೋಟೋಶೂಟಿಗಾಗಿ ಸಾಕುವ ನವಿಲಲ್ಲಿ ಇಲ್ಲ. ಚೀತಾದಲ್ಲೂ ಇಲ್ಲ. ಮಾತೆಯಾಗಿಬಿಟ್ಟ ಗೋವಿನಲ್ಲಂತೂ ಇಲ್ಲವೇ ಇಲ್ಲ.

ಬಡವರ “ಮಹಾ ಭಾರತ”ವನ್ನೇ ಕಣ್ಣ ಮುಂದೆ ಇಡುವ ದೇವನೂರರ “ಒಡಲಾಳ”ವನ್ನು ಸಾಹಿತ್ಯವಾಗಿ ಮಾತ್ರವಲ್ಲ; ಬಡತನದ ಅರ್ಥಶಾಸ್ತ್ರವಾಗಿ, ನಿರ್ಜೀವ ಅಂಕಿ ಅಂಶಗಳ ಮಾಯಾಜಾಲದಲ್ಲೇ ತೊಳಲಾಡುವ, ತೊಳಲಾಡಿಸುವ, ಕನಸು ಬಿತ್ತಿ, ಓಟಿನ ಬೆಳೆ ತೆಗೆಯುವ ನಮ್ಮ ಆರ್ಥಿಕ ತಜ್ಞರ, ರಾಜಕಾರಣಿಗಳ ಪಠ್ಯವಾಗಿಸಬೇಕು. ವಿಶ್ವಸಂಸ್ಥೆಯ, (ಕೆಲವರ ಕ್ಷಮೆಕೋರಿ) ಭಾರೀ ಸಂಬಳ ಪಡೆಯುವ ವೃತ್ತಿಪರ ಸಮಾಜಸೇವಕರಿಗೂ ಇದು ಪಠ್ಯವಾಗಬೇಕು. ಯಾಕೆಂದರೆ, ಹಸಿವಿನ ಅನುಭವವಿಲ್ಲದ ಅರ್ಥಶಾಸ್ತ್ರ ಒಂದು ಆಳ-ಅಗಲ ಇರುವ ಮಾಯಾಜಾಲ. ಇಲ್ಲಿ ನಾನು ನಿರ್ಜೀವ ಅಂಕಿ ಅಂಶಗಳ ಬಗ್ಗೆ ಹೆಚ್ಚಿನ ಗಮನಕೊಡುತ್ತಿಲ್ಲ. ಆದರೂ, ಗಾಳಿಯಲ್ಲಿ ಬರೆದಂತಾಗಬಾರದು ಎಂಬ ಕಾರಣದಿಂದಾಗಿ ಮಾತ್ರವೇ, ವಿಶ್ವಸಂಸ್ಥೆಯೇ ನೀಡಿರುವ ಕೆಲವೇ ಅಂಕಿ ಅಂಶಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.

ಅಂಕಿ ಅಂಶಗಳು ಹೇಳುತ್ತವೆ…

ಕೋವಿಡ್ ಪಿಡುಗು 14.3 ಕೋಟಿಯಿಂದ 16.3 ಕೋಟಿ ಜನರನ್ನು ಬಡತನದತ್ತ ತಳ್ಳಿರುವ ಸಾಧ್ಯತೆ ಇದೆ. ಈ “ಅಂದಾಜಿನ” ನಿಖರತೆಯನ್ನು ಎರಡು ಕೋಟಿ ಜನರ-ನೆನಪಿಡಿ, ಸಂಖ್ಯೆಗಳ ವ್ಯತ್ಯಾಸದಿಂದಲೇ ಗುರುತಿಸಬಹುದು. ನಮ್ಮಲ್ಲೇ “ನಮ್ಮ ಮೋದಿ” ಮಧ್ಯರಾತ್ರಿಯ ಅನಾಣ್ಯೀಕರಣ ಮತ್ತು ಲಾಕ್‌ಡೌನ್‌ಗಳಿಂದ ಹೊಸಕಿ ಹಾಕಿದ ಜೀವನಗಳೆಷ್ಟು? ಯಾವ ಲೆಕ್ಕವಿದೆ? ಈ ಪಿಡುಗಿನ ಮೇಲೆ, ಎಲ್ಲಾ ಸರಕಾರಗಳಂತೆಯೇ ಎಲ್ಲಾ ಭಾರ ಹೊರಿಸಿರುವ ವಿಶ್ವಸಂಸ್ಥೆಯೇ 2020ರಲ್ಲಿ ಬಡತನ 8.1 ಶೇಕಡಾ ಹೆಚ್ಚಾಯಿತು ಎಂದು ಹೇಳುತ್ತದೆ. ಅದು ತಿಣುಕಿ ತೀಡಿ ಎರಡು ವರ್ಷಗಳ ಹಿಂದಿನ ಅಂಕಿಅಂಶಗಳನ್ನಷ್ಟೇ ನೀಡುತ್ತದೆ. ಅಂತರರಾಷ್ಟ್ರೀಯ ಬಡತನದ ರೇಖೆ, ರಾಷ್ಟ್ರೀಯ ಬಡತನ ರೇಖೆ ಎಂಬ ಯಾರೂ ಘನತೆಯಿಂದ ಬದುಕಲಾಗದ ಮಾನದಂಡವನ್ನು ಮೇಲೆ ಕೆಳಗೆ ಮಾಡಿ, ಬಡವರ ಸಂಖ್ಯೆಯನ್ನು ಹೆಚ್ಚು ಕಡಿಮೆ ಮಾಡುವ ದೇವನೂರರು ಹೇಳುವ ಮಾಯಾವಿಗಳಿವರು. ಮುಖ್ಯವಾಗಿ ಆಫ್ರಿಕಾ, ಯುದ್ಧಗ್ರಸ್ತ ದೇಶಗಳಲ್ಲಿ ಬಡವರ ಸಂಖ್ಯೆ 2015ರ ನಂತರ ಈಗ ದ್ವಿಗುಣಗೊಂಡಿದೆ ಎಂದ ವಿಶ್ವಸಂಸ್ಥೆಯೇ ಯಾವ ಆಶಾವಾದ ಇಟ್ಟುಕೊಂಡು, ಹಸಿದ ಹೊಟ್ಟೆಗೆ ಕನಸು ಬಡಿಸುತ್ತಿದೆ? ಸಿರಿಯಾ ಸಹಿತ ನೂರಾರು ಅಂತರ್ಯುದ್ಧಗಳಿಂದ, ಉಕ್ರೇನ್ ಮೇಲೆ ರಷ್ಯಾ ನಡೆಸಿದಂತ ಯುದ್ಧಗಳಿಂದ ನಿರಾಶ್ರಿತರು ಮತ್ತು ಬಡತನ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ಹೇಳುತ್ತಿದೆ. ಈ ಹಲ್ಲಿಲ್ಲದ ಹುಲಿಯು ಸಂಪನ್ಮೂಲ ಇರುವ, ಪ್ರಜಾಪ್ರಭುತ್ವದ ಧ್ವಜಧಾರಿ ಬಂಡವಾಳಶಾಹಿ ದೇಶಗಳು ಮತ್ತು ಸಮೃದ್ಧ ರಾಜಾಡಳಿತಗಳು ಅಂತರ್ಯುದ್ಧಗಳನ್ನು ಪ್ರಚೋದಿಸಿ, ಹಣ ಶಸ್ತ್ರಾಸ್ತ್ರ ನೀಡಿ ಪ್ರೋತ್ಸಾಹಿಸುವ ಈ ಯುದ್ಧಗಳನ್ನು ನಿಲ್ಲಿಸಲು ತಾಕತ್ತಿಲ್ಲದ ಈ ವಿಶ್ವಸಂಸ್ಥೆಯು ಯಾರ ಮುಂಗೈಗೆ ಬೆಲ್ಲ ಮುಟ್ಟಿಸುತ್ತಿದೆ?

ಈ ಅಂಕಿ ಆಂಶಗಳ ಸಂಗ್ರಹವಾದರೂ ಹೇಗೆ? ವಿಶ್ವಾಸಕ್ಕೆ ಅರ್ಹವಲ್ಲದ ಕೊಳೆತ ಸರಕಾರಿ ಅಂಕಿ ಅಂಶಗಳ‌ ಸಂಗ್ರಹವೇ ಇದು. ಹಸಿವಿನಿಂದ ಬಳಲುತ್ತಿರುವವರ, ಮನೆ ಇಲ್ಲದವರ, ಅಪೌಷ್ಟಿಕತೆಯಿಂದ ನರಳುತ್ತಿರುವವರ, ಕೆಲಸ ಇಲ್ಲದವರ, ಅವಕಾಶ ವಂಚಿತರ; ಶಿಶು, ಗರ್ಭಿಣಿ, ಬಾಣಂತಿಯರಾಗಿರುವಾಗ ಸತ್ತವರ, ಅತ್ಯಾಚಾರ, ಕೊಲೆ, ದೌರ್ಜನ್ಯಕ್ಕೆ ಒಳಗಾದವರ ಅಂಕಿಅಂಶಗಳೂ ನೇರವಾಗಿ ಬಡತನಕ್ಕೆ ಸಂಬಂಧಿಸಿದವುಗಳೇ ಆಗಿವೆ. ಭಾರತದಂಥ “ವಿಶ್ವಗುರು” ದೇಶದಲ್ಲಿಯೇ, ಸಂಖ್ಯಾಶಾಸ್ತ್ರಕ್ಕೊಂದು ಸಚಿವಾಲಯ ಮತ್ತು ನಾಲಾಯಕ್ ಮಂತ್ರಿ ಇರುವ ಭಾರತದಲ್ಲಿಯೇ ಸುಳ್ಳುಗಳನ್ನು ಹೊಲಿಯುವ ನಿರ್ಮಲಾ ಸೀತಾರಾಮನ್ ಅಂಥಾ ಕಳಪೆ ದರ್ಜಿಗಳ ಅಂಕಿ ಅಂಶಗಳ ಮಾಯೆ ಮಾತ್ರವೇ ಸಿಗುವಾಗ ಈ ಅಂಕಿ ಅಂಶಗಳನ್ನು ನಂಬಲು ಹೇಗೆ ಸಾಧ್ಯ?

ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಏರುತ್ತಿದೆ…

ಇಡೀ ಪ್ರಪಂಚದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಏರುತ್ತಿದೆ. ಬೆರಳೆಣಿಕೆ ಜನರು ಮಾತ್ರವೇ ತ್ವರಿತವಾಗಿ ಮೇಲಕ್ಕೆ ಏರಿದರೆ, ಬಹುಸಂಖ್ಯಾತರು ಅದೇ ವೇಗದಲ್ಲಿ ಬಡತನದತ್ತ ಜಾರುತ್ತಿದ್ದಾರೆ. ಇದನ್ನು ನೇರವಾಗಿ ಭಾರತದಲ್ಲಿ ಕಾಣಬಹುದು. ಬಡವರು ತಮ್ಮ ಸ್ವಂತ ಹಣ ತೆಗೆಯಲು ತೆರಿಗೆ ಕಕ್ಕುತ್ತಿರುವಾಗ, ತೆರಿಗೆಗಳ್ಳ ಶ್ರೀಮಂತರಿಗೆ ವಿನಾಯಿತಿಗಳನ್ನು, ಇನ್ನಷ್ಟು ಸಾಲಗಳನ್ನು ನೀಡಲಾಗುತ್ತಿದೆ. ಸಾಲ ತೆಗೆದು ಕಟ್ಟಲಾಗದ ರೈತಾದಿಗಳ ಆಸ್ತಿ ಹರಾಜಾಗುತ್ತಿರುವವರ ಪುಟಗಟ್ಟಲೆ ಜಾಹೀರಾತು ನೋಡುತ್ತಿರುವ ಹೊತ್ತಿನಲ್ಲಿ, ದೇಶಭಕ್ತ ಶ್ರೀಮಂತರ ಸಾಲ ಮನ್ನಾ, ಪರಾರಿ ಸುದ್ದಿಗಳನ್ನೂ ಕೇಳುತ್ತೇವೆ. ಎಲ್ಲಾ ಕಡೆ ಸರ್ವಾಧಿಕಾರ, ಬಲಪಂಥೀಯ ಸರಕಾರಗಳು ಗೊತ್ತೇ ಆಗದಂತೆ ಬರುತ್ತಿವೆ. ನವೋತ್ತರ ಬಂಡವಾಳವಾದ, ಬೌದ್ಧಿಕ ವಸಾಹತುಶಾಹಿ ಬಂದಾಗಿದೆ. ಕತ್ತಿಯಿಂದಲ್ಲ, ಕೂದಲಿನಿಂದ ಬೆಣ್ಣೆ ಕೊಯ್ದಂತೆ ಕತ್ತು ಕುಯ್ಯುತ್ತಾರೆ.

ಬಲಪಂಥೀಯರು ಎಂದರೆ ಯಾರು?

ಈ ಬಲಪಂಥೀಯರು ಎಂದರೆ ಯಾರು? ಬರೇ ಮತಾಂಧರು ಮಾತ್ರವೇ ಅಲ್ಲ. ಹಸಿದ, ವಂಚಿತ ಜನರಿಗೆ ಪಡಿತರ ಅಕ್ಕಿ ಬಿಡಿ, ಮಕ್ಕಳಿಗೆ ಮಧ್ಯಾಹ್ನದ ಊಟ, ಮೊಟ್ಟೆ ಕೊಡುವುದನ್ನೂ ವಿರೋಧಿಸುವ ಶೋಷಕ ಮತ್ತವರ ಗುಲಾಮಿ, ಅಜ್ಞಾನಿ ಬಾಲಬಡುಕ ವರ್ಗವೇ ಬಲಪಂಥೀಯರು. ನಾವಿಂದು ಮೀಸಲಾತಿ, ಉಚಿತ ಕೊಡುಗೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಉಚಿತ ಕೊಡುಗೆ ಎಂಬುದಿಲ್ಲ. ಅದು ನಿಮ್ಮ ಸಂಪತ್ತು ದೋಚಿದವರು, ಇರಲಿ ಬಿಡು ಎಂದು ಕಿಂಚಿತ್ತನ್ನು ಕನಿಕರದಿಂದ ನಿಮಗೆ ಬಿಟ್ಟುಹೋದ ಅಥವಾ ಕೊಟ್ಟುಹೋದ ಭಿಕ್ಷೆಯೂ ಅಲ್ಲ. ಕುಂ. ವೀರಭದ್ರಪ್ಪರ “ಕತ್ತಲನು ತ್ರಿಶೂಲ ಹಿಡಿದ ಕತೆ” ಯಂತೆ ಕತ್ತಲನು ಹಸಿದು, ಕೆರಳಿ ತ್ರಿಶೂಲ ಹಿಡಿಯದಿರಲಿ ಎಂದು ಮಾಡಿರುವ ಉಪಾಯವಷ್ಟೇ. ಅದನ್ನೂ ವಿರೋಧಿಸುವ ಮೂರು ಪರ್ಸೆಂಟ್ ಮೂರ್ಖರು ಮುಂದೆ ಕತ್ತಲನ ಹಸಿದ ತ್ರಿಶೂಲ ಎದುರಿಸಬೇಕಾಗುತ್ತದೆ.

ಮಾಯಾಜಾಲದ ಆರ್ಥಿಕತೆಯಲ್ಲಿ ಬೆಳೆಯುತ್ತಿರುವ ಆರ್ಥಿಕತೆ, ಟ್ರಿಲಿಯನ್ ಡಾಲರ್ ಇಕಾನಮಿ, ಬೆಳೆಯುತ್ತಿರುವ ಜಿಡಿಪಿ ಇವೆಲ್ಲವೂ ನಿಮ್ಮನ್ನು ಇನ್ನಷ್ಟು ಬಡವರನ್ನಾಗಿ ಮಾಡಿ, ಅದಾನಿ, ಅಂಬಾನಿಯಂತವರನ್ನು ಇನ್ನಷ್ಟು ಕೊಬ್ಬಿಸುವುದನ್ನು, ಸರಕಾರದ ಅಂದರೆ, ನಿಮ್ಮ ಆಸ್ತಿಯನ್ನು ಅವರಿಗೆ ಮೂರುಕಾಸಿಗೆ ಮಾರುವುದನ್ನು ಮರೆಸುವ ಕಣ್ಕಟ್ಟು. ಕೋಮುವಾದ ಅವುಗಳಲ್ಲಿ ಒಂದು.

ಬಡತನದ ಹಂಚಿಕೆ..

ಕೊನೆಗೊಂದು ಮಾತು. ಪ್ರಭುತ್ವ ಹೇಳುವ ಪ್ರಗತಿಗೂ ಬಡತನಕ್ಕೂ ಯಾವ ಸಂಬಂಧವೂ ಇಲ್ಲ. ಯುಎಸ್‌ಎ‌ಯಂಥ ಮತ್ತು ಸಿರಿವಂತ ತೈಲ ದೇಶಗಳಲ್ಲೂ ಬೀದಿಪಾಲು ಭಿಕ್ಷುಕ ಬಡವರಿದ್ದಾರೆ. ಬಡತನದ ಮೂಲ ಇರುವುದು ಸಂಪತ್ತಿನ, ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಅನ್ಯಾಯದ ದೋಚುವಿಕೆ ಮತ್ತು ಒಡೆತನದಲ್ಲಿಯೇ. ಸಾಮಾಜಿಕ, ಸಾಂಸ್ಕೃತಿಕವಾದ ತಾರತಮ್ಯದಿಂದ ಕೂಡಿದ ಬಡತನ ಹಂಚಿಕೆಯನ್ನು ನಾವು ಗಮನಿಸಬೇಕು. ಬಿಳಿಯರಲ್ಲಿ ಬಡವರಿದ್ದಾರೆ. ಆದರೆ, ಕರಿಯರಲ್ಲಿ ಆತ್ಯಂತ ಹೆಚ್ಚು. ಭಾರತದಲ್ಲಿ ಮೇಲ್ಜಾತಿಯಲ್ಲಿ ಅಪರೂಪಕ್ಕೆ ಬಡವರಿದ್ದಾರೆ. ಆದರೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಲ್ಲೇ ಬಡವರು ಹೆಚ್ಚಾಗಿರುವುದು, ದಲಿತರಲ್ಲಿ ಬಹುತೇಕ ಎಲ್ಲರೂ ಬಡವರಾಗಿರುವುದು ಬರೇ ಕಾಕತಾಳೀಯವಲ್ಲ. ಆದು ನಿರಂತರ ಶೋಷಣೆಯ ಫಲ. ಆ ಕುರಿತಂತೆ ಯಾವುದೇ ಚಿಂತನೆ ಮಾಡದೆ, ಉಳಿದೆಲ್ಲಾ ದಿನಾಚರಣೆಗಳು, ಸಂಕಲ್ಪಗಳು, ಕಾರ್ಯಕ್ರಮಗಳು ಬರೇ ಮೋಸದ ಕಣ್ಕಟ್ಟು ಎಂದೇ ಹೇಳಬೇಕಾಗುತ್ತದೆ.

ಈ ವಿಷಯದ ಆಳ-ಆಗಲದ ಕಾರಣದಿಂದಲೇ ಇದನ್ನು ಒಂದು ಲೇಖನದ ಮಿತಿಯಲ್ಲಿ ವಿವರಿಸುವುದು ಕಷ್ಟ. ಜಾಗತಿಕವಾಗಿ ಮತ್ತು ದೇಶೀಯವಾಗಿ, ಮೇಲೆ ಹೇಳಿದ ಈ ಆಯಾಮಗಳ ಕುರಿತಾಗಿಯೇ ಮುಂದೆ ಅಂಕಿ ಅಂಶಗಳ ಆಧಾರದಲ್ಲಿಯೇ, ಇದೇ “ಪೀಪಲ್” ವೇದಿಕೆಯಲ್ಲಿ ಲೇಖನಗಳನ್ನು ಬರೆಯಲಿದ್ದೇನೆ. ಯಾಕೆಂದರೆ, ನಿರ್ಜೀವ ಅಂಕಿ ಅಂಶಗಳೂ ಮಾನವೀಯ ಕಾಳಜಿಯೊಂದಿಗೆ ಅಕ್ಕಪಕ್ಕದಲ್ಲಿ ಇಟ್ಟು ನೋಡಿದಾಗ ಜೀವ ತಳೆದು, ಹೊಸ ಒಳನೋಟಗಳನ್ನು ನೀಡಬಲ್ಲವು.

ನಿಖಿಲ್ ಕೋಲ್ಪೆ
ಹಿರಿಯ ಪತ್ರಕರ್ತರು, ವೃತ್ತಿಪರ ಅನುವಾದಕರು.