Vani Satish – Peepal Media

“ಅಯ್ಯಪ್ನೆ.. ಹೋಯ್ತ್ ನನ್ ಜೀವ”
(ಈ ವರೆಗೆ…)

ಎಮ್ಮೆ ಮೇಯಿಸುತ್ತಿದ್ದ ಗಂಗೆ ಸುಸ್ತಾಗಿ, ಅವುಗಳನ್ನು ಹಗ್ಗದಿಂದ ಕಟ್ಟಿಹಾಕಿ ನಿದ್ದೆಗೆ ಜಾರುತ್ತಾಳೆ. ಹಗ್ಗ ಬಿಡಿಸಿಕೊಂಡು ಅವು ರಾಗಿ ಹೊಲವನ್ನೆಲ್ಲ ಮೆಯ್ದು ಮೈದುನನಿಂದ ಬೈಸಿಕೊಳ್ಳುತ್ತಾಳೆ. ಕೋಪದಿಂದ ಅವನಿಗೆ ಎರಡೇಟು ಬಿಗಿಯುತ್ತಾಳೆ. ವಿಷಯ ಅತ್ತೆಗೂ ತಲಪಿ ಅವರಿಬ್ಬರೂ ಗಂಗೆಯನ್ನು ದಂಡಿಸಿದಾಗ ಆಕೆ ಸಿಡಿದೇಳುತ್ತಾಳೆ. ಅಡುಗೆ ಮನೆಯೊಳಗೆ ತನ್ನ ಸ್ವಾತಂತ್ರ್ಯವನ್ನು ಮೊದಲು ಚಲಾಯಿಸುತ್ತಾಳೆ. ಇನ್ನು ಮುಂದೆ ನಾನಿರೋದೇ ಹೀಗೆ ಎಂದು ಮನೆಯವರನ್ನು ಎಚ್ಚರಿಸುತ್ತಾಳೆ. ಗಂಗೆಯ ನಿರ್ಧಾರ ಹಾಗೆಯೇ ಉಳಿಯಿತೇ ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼಯ ಐವತ್ತ ಎಂಟನೆಯ ಕಂತು.

ನಾನು ಇನ್ಮುಂದಕ್ಕೆ ಹಿಂಗೆ ಇರೋಳು ಎನ್ನುವ ಗಟ್ಟಿ ನಿರ್ಧಾರದೊಂದಿಗೆ ರಾತ್ರಿ ಗಡದ್ದು ನಿದ್ದೆಗೆ ಜಾರಿದ್ದ ಗಂಗೆಗೆ, ಬೆಳಗಿನ ಜಾವ ಮೋಹನನ ಚುರುಗುಟ್ಟಿಸುವ ಹೊಡೆತ ಬೆನ್ನಿನ ಮೇಲೆ ಬಿದ್ದಾಗಲೇ ಎಚ್ಚರ. ಬೆಂಕಿ ತಾಕಿದಂತೆ ಉರಿಯುತ್ತಿದ್ದ ಬೆನ್ನಿನ ಮೇಲೆ ಸರಕ್ಕನೆ ಕೈ ಹಾಕಿ “ಯವ್ವೇ…ಅವ್ವಣ್ಣಿ…”  ಎಂದು ದಡಕ್ಕನೆ ಎದ್ದು ಕುಳಿತವಳಿಗೆ ಕೋಪದಿಂದ ಅದುರುತ್ತಾ ನಿಂತಿದ್ದ ಮೋಹನ ಕಣ್ಣಿಗೆ ಬಿದ್ದ.

“ಹಾಕ್ಲಾ ಇನ್ನೊಂದ್ನಾಕು. ಬೀದಿಲ್ ನಿಂತು ಬಾಯಿ ಬಡ್ಕೊತಳೆ ಬೋಸುಡಿ ಮುಂಡೆ. ಮೈ ಚರ್ಬಿ ಎಲ್ಲಾ ಇಳಿದೋಗ್ಬೇಕು ಹಂಗ್ ಬಡಿ ಹೇಳ್ತಿನಿ” ಕಸಗುಡಿಸುತ್ತಿದ್ದ ಚಿಕ್ಕತಾಯಮ್ಮ ಬರಲಿನ ಸಮೇತ ಪ್ರತ್ಯಕ್ಷಳಾಗಿ ಉರಿಯುತ್ತಿದ್ದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಳು. ಅವ್ವನ  ಮಾತಿಗೆ ಮೋಹನನ ರಟ್ಟೆ ಹುರಿಗೊಂಡು, ಗಂಟಲ ನರಗಳುಬ್ಬಿ “ಬೀದಿಲ್ ನಿಂತು ಮನೆ ಮರ್ಯಾದಿ ಹರಾಜಾಕ್ತಿಯೇನೆ ಲೋಫರ್…” ಹಲ್ಲು ಕಡಿಯುತ್ತಾ ಅವ್ವನ ಕೈಲಿದ್ದ ಬರಲು ಕಡ್ಡಿ ಕಸಿದು ಕೈ ಸೋಲುವವರೆಗೂ ಬಡಿದ.

“ಅಯ್ಯಯ್ಯಪ್ಪನೇ.. ನಿಮ್ ದಮ್ಮಯ್ಯ ನನ್ನ ಮಾತ್ನೊಸಿ ಕೇಳಿ” ಗಂಗೆಯ ಕೂಗಾಟ ಎಮ್ಮೆ ಚರ್ಮದ ಮೋಹನನ ಕಿವಿಗೆ ತಾಗಲೇ ಇಲ್ಲ. ತಪ್ಪಿಸಿಕೊಂಡು ಓಡಲಾರದಂತೆ ಕಟ್ಟಿಹಾಕಿದ್ದ ತುಂಬು ಬಸುರನ್ನು ಗಟ್ಟಿಯಾಗಿ ತಬ್ಬಿ, ಆಗಿದ್ದಾಗಲಿ ಎಂದು ನಿರ್ಧರಿಸಿ ಮೈ ಕೊಟ್ಟು ತಟಸ್ಥಳಾಗಿ ಕೂತಳು ಗಂಗೆ. ಕುಯ್ಯೊ ಮರ್ರೊ ಅನ್ನದೆ ಮೊಂಡಿಯಂತೆ ಕೂತಿದ್ದ ಹೆಂಡತಿಯನ್ನು ಕಂಡು ಮತ್ತಷ್ಟು ಸಿಟ್ಟಿಗೆದ್ದ ಮೋಹನನಿಗೆ ಹೊಡೆತದ ಬಿಗಿ ಸಾಲದೆನಿಸಿತು. ಹಿಡಿದಿದ್ದ ಬರಲನ್ನು ಪಕ್ಕಕ್ಕೆಸೆದು ಮುಷ್ಟಿ ಬಿಗಿದು ತನ್ನ ಬಲವನ್ನೆಲ್ಲಾ ಒಟ್ಟುಗೂಡಿಸಿ  ಅವಳ ಬೆನ್ನಿನ ಮೇಲೆ ಸರಿಯಾಗಿಯೇ ಗುದ್ದಿದ. ಗಂಡನ ಕೊನೆಯ ಹೊಡೆತಕ್ಕೆ ಬಸುರು ಜಾರಿದಂತಾಗಿ ಉಸಿರು ಕಟ್ಟಿ ವಿಲಿ ಗುಟ್ಟಿದ ಗಂಗೆ ” ಅಯ್ಯಪ್ನೇ…ಹೋಯ್ತ್ ನನ್ನ್ ಜೀವ” ಎನ್ನುತ್ತಾ  ಕೂತ ಕೌದಿಯ ಮೇಲೆಯೇ ಉರುಳಿದಳು.

ಎದೆ ಅಲುಗಿಸಿದ ಗಂಗೆಯ ಆರ್ದ್ರವಾದ ದನಿಗೆ ಮೈ ಕಸುವೆಲ್ಲಾ  ಇಂಗಿದವನಂತೆ ಸೋತ ಮೋಹನ, ಮನೆಯವರೆದುರು ಅದನ್ನು ತೋರಗೊಡದೆ ಹುಂಕರಿಸುತ್ತಲೆ ಇನ್ನಷ್ಟು ಕೋಪ ಪ್ರದರ್ಶಿಸುತ್ತಾ ಬಿರುಗಾಳಿಯಂತೆ ಕಣ್ಮರೆಯಾದ. ತಂಪಾದ ಚಿಕ್ಕತಾಯಮ್ಮನ ಜೀವ “ಹಿಂಗೆ  ಸಾಯಿ ಲೌಡಿ… ” ಎಂದು ಗೊಣಗಿ ಕೊಳ್ಳುತ್ತಾ ಆಗಬೇಕಾದ ಕೆಲಸಗಳತ್ತ ಹೊರಳಿಕೊಂಡಿತು.

ಇಷ್ಟು ತಿಂಗಳು ಯಾವ ಹೈದರಾಬಾದಿಗೂ ಹೋಗದೆ ಸುಕನ್ಯಾಳ ಮನೆಯಲ್ಲಿಯೇ ತಲೆಮರೆಸಿಕೊಂಡು ಕೂತಿದ್ದ ಮೋಹನನಿಗೆ, ಹಿಂದಿನ ರಾತ್ರಿ ತಮ್ಮ ಪರಮೇಶ ನಾಗರಕಟ್ಟೆಯ ಎಸ್. ಟಿ. ಡಿ ಬೂತಿನಿಂದ  ಫೋನಾಯಿಸಿದ್ದ. ಗಂಗೆಯ ಮೇಲೆ ಅವ್ವ ಹೊರಿಸಿದ್ದ ಆರೋಪಗಳ ದೊಡ್ಡಪಟ್ಟಿಯನ್ನೇ ಅಣ್ಣನ ಕಿವಿಯಲ್ಲಿ ಊದಿ ಅವನೊಳಗೆ ಕಿಚ್ಚುಹೊತ್ತಿಸಿ, ಈಗಲೇ ಹೊರಟು ಬರಬೇಕೆಂದು ಹೇಳಿದ್ದ ಅವ್ವನ ಆಜ್ಞೆಯನ್ನು ಇನ್ನಷ್ಟು ಕಟುವಾಗಿ ದಾಟಿಸಿ ಫೋನ್ ಇಟ್ಟಿದ್ದ. ಮೊದಲೇ ಆ ಹುಡುಗಿಯ ಸಾವಿನಿಂದ ಕಂಗೆಟ್ಟಿದ್ದ ಮೋಹನನಿಗೆ, ಪರಮೇಶ ಹೇಳಿದ ಗಂಗೆಯ ಅವಾಂತರಗಳನ್ನೆಲ್ಲ ಕೇಳಿ ಗಂಡಾಂತರವೆ ತನ್ನ ಕುತ್ತಿಗೆ ಹಿಡಿದು ಅಮುಕಿದಂತಾಯಿತು. ಕೂತಲ್ಲಿ ಕೂರಲಾರದೆ ನಿಂತಲ್ಲಿ ನಿಲ್ಲಲಾರದೆ ರಾತ್ರೋರಾತ್ರಿ ಬಸ್ಸು ಲಾರಿ ಹಿಡಿದು ಬೆಳಗಿನ ಜಾವಕ್ಕೆ ಬಂದು ಊರು ಮುಟ್ಟಿದ್ದ.

ಬಂದ ಬಿರುಸಿನಲ್ಲಿಯೇ ಹಿಂದೆ ಮುಂದೆ ನೋಡದೆ  ಗಂಗೆಯ ಮೈನೀರಿಳಿಸಿ ಚಡಪಡಿಸುತ್ತಾ ಬಂದು ಊರ ತುದಿಯ ಕೊನೆ ಮನೆ ಸ್ನೇಹಿತ ವಿಶ್ವನ ಮನೆ ಸೇರಿದ್ದ. ಹಸಿಯುತ್ತಿದ್ದ ಹೊಟ್ಟೆಗೆರಡು ರೊಟ್ಟಿ ಇಳಿಸಿ ವಿಶ್ವನ ಕೋಣೆ ಸೇರಿ ನಿದ್ದೆ ತೆಗೆಯಲೆಳಿಸಿದವನಿಗೆ ಜಪ್ಪಯ್ಯ ಅಂದರು ಕಣ್ಣು ಕೂಡಿಸಲಾಗಲಿಲ್ಲ. “ಅಯ್ಯಪ್ನೆ.. ಹೋಯ್ತ್ ನನ್ ಜೀವ”  ಎಂದು ನರಳಿದ್ದ ಗಂಗೆಯ ದನಿ ಮೋಹನನ ಎದೆಯನ್ನು ಒದ್ದೆಯಾಗಿಸುತ್ತಲೇ ಇತ್ತು.

ಗಂಗೆಯ ಬಳಿ ಹೋಗಿಬಿಡಬೇಕೆನ್ನಿಸುವ ಒತ್ತಡ ಒತ್ತರಿಸಿ ಬರುತ್ತಿತ್ತಾದರೂ ತಾಯಿ ತಮ್ಮನ ಮುಖವೇ ಅಡ್ಡ ಬಂದು ಅತ್ತ ಹೋಗದಂತೆ ಅವನನ್ನು ತಡೆದು ನಿಲ್ಲಿಸಿತ್ತು. ನಾಲ್ಕು ಕೋಣೆಯ ಒಳಗಿರಲಾರದೆ ಚಡಪಡಿಸುತ್ತಿದ್ದವನನ್ನು ವಿಶ್ವನೇ ತೋಟ ಸುತ್ತಾಡಿ ಬರಲು ಕರೆದುಕೊಂಡು ಹೊರಟ. ಹಾಗೂ ಹೀಗೂ ತೋಟವನ್ನೆಲ್ಲಾ ಸುತ್ತಾಡಿ, ಎಳನೀರು ಕುಡಿದು ಮಧ್ಯಾಹ್ನ ಜಾರಿಸಿ ಮನೆಯತ್ತ ಹೊರಟವನಿಗೆ ಹಿರೇಗೌಡರ ಮನೆಯ ಕೆಲಸದಾಳು ಶಿವಲಿಂಗಿ ಎದುರಾದಳು. “ಇವತ್ಯಾಕಣ್ಣಯ್ಯ ಗಂಗಕ್ಕ ಎಮ್ಮೆ ಮೇಸುಕ್ ಬರ್ಲಿಲ್ಲ. ಹುಸಾರಾಗೈತೆ ತಾನೆಯ” ಎಂದು ಮುಖ ಸಣ್ಣದು ಮಾಡಿಕೊಂಡು ಕೇಳಿತು. “ಒಂಚೂರು ಜ್ವರ ಬಂದಂಗಿತ್ತು ಕಣವ್ವ ಶಿವಿ…ಮೋಹನನ ಮಾತಿನ್ನು ಪೂರ್ಣವಾಗಿರಲಿಲ್ಲ̤ ಜ್ವರ ಎನ್ನುವುದನ್ನು ಕೇಳಿ ದುಃಖಿತಳಾದ ಶಿವಲಿಂಗಿ “ಪಾಪ ಆ ಮನೆಯವೌರು ಅವಕ್ಕುಂಗೆ ತಿನ್ನಕ್ ಕೊಟೌರೋ ಇಲ್ವೊ. ವಸಿ ಈ ಎಮ್ಮೆತವ್ಲೆ ಇರಣ್ಣ, ಹೋಗಿ ಗಂಗಕ್ಕುನ್ಗಿದ ತಿನ್ನುಸಿ ಬಿರ್ರುನ್ ಬಂದ್ಬುಡ್ತಿನಿ” ಎಂದು ತನ್ನ ಕೈ ಚೀಲದಲ್ಲಿಟ್ಟುಕೊಂಡಿದ್ದ ಬೇಯಿಸಿದ ಮೊಟ್ಟೆ ಸೊಪ್ಪು ಕಾಳಿನ ಗಂಟನ್ನು ಹೊರತೆಗೆಯಿತು.

ಓಡಲನುವಾದ ಹುಡುಗಿಯ ರಟ್ಟೆಯನ್ನು ಹಿಡಿದು ನಿಲ್ಲಿಸಿದ ಮೋಹನ, ” ಹಾಗಿದ್ರೆ ಗಂಗಕ್ಕ ದಿನ ಎಮ್ಮೆ ಮೇಸೋದಕ್ಕೆ ಬರ್ತಳ ಮರಿ” ಎಂದು ಕೇಳಿದ. ಅವನಷ್ಟು ಕೇಳಿದ್ದೆ ತಡ  ಒಂದೇ ಉಸಿರಿಗೆ ಅವಳ ಪಡಿಪಾಟಲನ್ನೆಲ್ಲ ಕಣ್ಣು ತುಂಬಿಸಿಕೊಂಡು ಹೇಳಿದ ಶಿವಲಿಂಗಿ, “ಇರಣ್ಣಯ್ಯ ಇದುನ್ನ ಕೊಟ್ಟು ಬಂದು ಇನ್ನು ವಸಿ ಹೇಳ್ತೀನಂತೆ”  ಎಂದಿತು. ತಾನೇ ಕೊಡುವುದಾಗಿ ಹೇಳಿ ಆ ಶಿವಲಿಂಗಿಯಿಂದ ಗಂಗೆಯ ವಿಷಯವನ್ನು ಇನ್ನಷ್ಟು ಕಲೆಹಾಕಿಕೊಂಡ ಮೋಹನ, ತನ್ನ ತಪ್ಪಿನ ಅರಿವಾಗಿ ಭಾರವಾದ ಮನಸ್ಸಿನಿಂದ ಮನೆಯತ್ತ ಹೊರಟ.

ಬೆಳಗ್ಗಿನಿಂದಲೂ ಮೇಲೇಳಲಾರದೆ ಬಿದ್ದುಕೊಂಡಲ್ಲೇ ಬಿದ್ದುಕೊಂಡು ನರಳಾಡುತ್ತಿದ್ದ ಗಂಗೆ, ಅತ್ತೆಯನ್ನು ನಾದಿನಿಯನ್ನು “ಹೊಟ್ಟೆ ಹಸ್ದು ಪ್ರಾಣಹೋತೈತೆ ನಿಮ್ ದಮ್ಮಯ್ಯ ವಸಿ ತಿನ್ನಕೆ ಏನಾರ ಕೊಡಿ” ಎಂದು ಬೇಡಿ ಬೇಡಿ ಸುಸ್ತಾಗಿ ವಿಧಿಯಿಲ್ಲದೆ ನಿದ್ದೆಗೆ ಜಾರಿದ್ದಳು. ಹುಡುಗಿ ಕೊಟ್ಟ ಗಂಟಿನೊಂದಿಗೆ ಗಂಗೆಯ ಹತ್ತಿರ ಬಂದ ಮೋಹನನಿಗೆ ಕಾಲಿಗೆ ಏನೋ ಅಂಟಿಕೊಂಡಂತಾಗಿ ಸರಕ್ಕನೆ ಕಾಲು ತೆಗೆದು ಹಿಂದಕ್ಕಿಟ್ಟು  ನೆಲವನ್ನೇ ದಿಟ್ಟಿಸಿ ನೋಡಿದ. ಗಂಗೆ ಮಲಗಿದ್ದ ದಟ್ಟವೆಲ್ಲ ಒದ್ದೆಯಾಗಿ ಆ ನೀರು ನೆಲದವರೆಗೂ ಹರಿದು ನಿಂತಿತ್ತು. ಮುಟ್ಟಿದರೆ ಅಂಟುತ್ತಿದ್ದ ಆ ನೀರನ್ನು ಕಂಡು ಗಾಬರಿಬಿದ್ದ ಮೋಹನ, ಗಂಗೆಯನ್ನು ತಟ್ಟಿ ಎಬ್ಬಿಸಿ “ಇದೇನಿದು ದಟ್ಟ ಎಲ್ಲ ಒದ್ದೆ ಆಗೈತೆ” ಎಂದು ಮೆಲ್ಲಗೆ ಕೇಳಿದ. ಮಾತಾಡುವ ತ್ರಾಣವಿಲ್ಲದೆ ಸಣ್ಣ ದನಿಯಲ್ಲಿ ” ನೀವು ಹೊಡ್ದೊದಗ್ನಿಂದ್ಲು ಹಿಂಗೆ ನೀರು ಬಳ್ ಬಳ್ ಅಂತ ಬತ್ತನೇ ಐತೆ ಕರುದ್ರೆ ಯಾರು ಬತ್ತನೇ ಇಲ್ಲ” ಎಂದಳು ಉಸಿರೊಡೆಯುತ್ತಾ. ಗಂಗೆಯನ್ನು ಗಟ್ಟಿಯಾಗಿ ತಬ್ಬಿ “ಸಾರಿ ಗಂಗೂ ಸಾರಿ ಗಂಗೂ” ಎಂದು ಅಳಲು ತೊಡಗಿದ  ಮೋಹನನನ್ನು ತಾನೇ ಸಮಾಧಾನಿಸಿದ ಗಂಗೆ, “ಹೊಟ್ಟೆ ಹಸ್ವು ತಡಿನಾರೆ ತಿನ್ನಕೊಂಚೂರು ಏನಾರ ಕೊಡ್ಸಿ” ಎಂದು ಬೇಡಿದಳು. ಅಣ್ಣನ ಒಂದೇ ಒಂದು ಕೂಗಿಗೆ ನಡುಗುತ್ತಾ ಎದುರು ಬಂದು ನಿಂತ ರತ್ನ  ತರಾತುರಿಯಲ್ಲಿಯೇ ಒಲೆ ಹತ್ತಿಸಿ ಅನ್ನಕ್ಕಿಟ್ಟಳು. ಬಿಸಿ ಅನ್ನಕ್ಕಷ್ಟು ಬೆಣ್ಣೆ ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ ಶಿವಲಿಂಗಿ ಕೊಟ್ಟಿದ್ದ ಮೊಟ್ಟೆ, ಸೊಪ್ಪಿನ ನೆಂಚಿಕೆಯೊಂದಿಗೆ ತನ್ನ ಕೈಯಾರೆ ಒಂದು ತಟ್ಟೆ ಅನ್ನ ಉಣ್ಣಿಸಿದ ಮೋಹನ, ಅವ್ವನನ್ನು ಕೂಗಿ “ಇವ್ಳುನ್ ಆಸ್ಪತ್ರೆಗೆ ಕರ್ಕೊಂಡೋಗ್ ಬೇಕು ಹೊರ್ಟಿರು ಬಂದೆ” ಎಂದು ಗಡುಸಾಗಿಯೇ ಹೇಳಿದ. ಬಡಪೆಟ್ಟಿಗೆ ಬಗ್ಗದ ಚಿಕ್ಕತಾಯಮ್ಮ  “ನೀ ಮುಂದೋಗಿರು ವಸಿ ಕೆಲ್ಸ ಮುಗ್ಸಿ ಆಮ್ಯಾಕ್ ಬತ್ತಿನಿ” ಎಂದು ಮೂತಿ ತಿರುವಿ ಮಾಯವಾದಳು. ಅವ್ವನ ವಿರುದ್ಧ ಮುನಿದು ನಿಲ್ಲುವ ಸಮಯ ಅದಾಗಿರಲಿಲ್ಲವಾದ್ದರಿಂದ ಮೋಹನ ಬುಸುಗುಡುತ್ತಲೇ  ಹಿರೇ ಗೌಡರ ಮನೆಗೆ ಓಡಿ ತರಾತುರಿಯಲ್ಲಿಯೇ ಗಾಡಿ ಕಟ್ಟಿಸಿಕೊಂಡು ಬಂದ. ತಂಗಿ ರತ್ನಳ ಸಹಾಯ ಪಡೆದು ಗಂಗೆಯನ್ನು ಮೆಲ್ಲಗೆ ಗಾಡಿ ಹತ್ತಿಸಿ ಮಲಗಿಸಿಕೊಂಡು ಸಂಪಿಗೆ ಕಟ್ಟೆಯ ಗೌರ್ಮೆಂಟ್ ಆಸ್ಪತ್ರೆ ತಲುಪಿದ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಈ ಹಿಂದಿನ ಕಂತು- “ನಾನು ಇನ್ಮುಂದುಕ್ಕೆ ಹಿಂಗೆ ಇರೋಳು”

“ನಾನು ಇನ್ಮುಂದುಕ್ಕೆ ಹಿಂಗೆ ಇರೋಳು”
(ಈ ವರೆಗೆ…) ಕೆಟ್ಟು ಅಪ್ಪನ ಮನೆ ಸೇರಬಾರದೆಂದು ನಿರ್ಧರಿಸಿದ್ದ ಗಂಗೆ ಅತ್ತೆ ಮನೆಯ ಎಲ್ಲ ಕಾಟಗಳನ್ನು ಸಹಿಸಿ ಕೊಳ್ಳುತ್ತಾಳೆ. ದಿನಾ ಎಮ್ಮೆ ಮೇಯಿಸಲು ಹೋಗುವ ಗಂಗೆಯ ದಯನೀಯ ಪರಿಸ್ಥಿತಿ ಊರಿನ ಹೆಂಗಸರಿಗೆ ತಿಳಿದು ಅವರು ಬಸುರಿಗೆ ಬೇಕಾದ ಊಟ, ಹಣ್ಣು ಹಂಪಲುಗಳನ್ನು ದಿನಾ ತಲಪಿಸುತ್ತಾರೆ. ಇದರಿಂದಾಗಿ ಮೈಕೈ ತುಂಬಿಕೊಳ್ಳುವ ಗಂಗೆ ಅತ್ತೆಯ ಕಣ್ಣು ಕುಕ್ಕುತ್ತಾಳೆ. ಮುಂದೇನಾಗುತ್ತದೆ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼಯ ಐವತ್ತ ಏಳನೆಯ ಕಂತು.

ಬೆಳಗ್ಗಿನಿಂದಲೂ ಸುಟ್ಟು ಬರೆಹಾಕುತ್ತಿದ್ದ ಬಿಸಿಲ ಝಳಕ್ಕೆ ತುಂಬು ಬಸುರಿ ಗಂಗೆಯ ಮೈ ನೀರೆಲ್ಲಾ ಇಳಿದು ಆಯಾಸ ಆವರಿಸಿತ್ತು. ಬಯಲಿನಲ್ಲಿ ಬಿಟ್ಟುಕೊಂಡಿದ್ದ ಎಮ್ಮೆಗಳನ್ನು ತಂದು ಹತ್ತಿರವೇ ಇದ್ದ ತಮ್ಮ ಹೊಲದ ಒಂದು ಬದಿಗೆ ಕಟ್ಟಿ, ಸೊಂಪಾಗಿ ನೆರಳು ಚೆಲ್ಲಿದ್ದ ಮರದ ಕೆಳಗೆ ತಲೆ ಆನಿಸಿ ನಿದ್ದೆಗೆ ಜಾರಿದ್ದಳು.  ಚಿಕ್ಕ ತಾಯಮ್ಮನ ಆರ್ಭಟಕ್ಕೆ ಹೆದರಿ ಒಂದು ನಾಯಿ ನರಿ ಕೂಡ ಅವಳ ತುಂಡು ಹೊಲದ ಕಡೆ ಸುಳಿಯುತ್ತಿರಲಿಲ್ಲ. ಹಾಗಾಗಿಯೇ ಎಮ್ಮೆಗಳು ಹಗ್ಗ ಕಿತ್ತುಕೊಂಡು ಬೆಳೆದು ನಿಂತಿದ್ದ ರಾಗಿ ಹೊಲವನ್ನು ಅರ್ಧಕ್ಕರ್ಧ ಮುಗಿಸಿದ್ದರು ಗಂಗೆಗೆ ಎಚ್ಚರವೆಂಬುದೇ ಇಲ್ಲ.ಎಂದಿನಂತೆ ಹೊಲಕ್ಕೆ ನೀರು ತಿರುಗಿಸಿ ಹೋಗಲು ಬಂದ ಪರಮೇಶ ಗಂಗೆಯ ಸುಖ ನಿದ್ದೆಯನ್ನೂ, ಬೋಳಾಗಿ ಕಣ್ಣಿಗೆ ರಾಚುತ್ತಿದ್ದ  ರಾಗಿ ಹೊಲವನ್ನೂ ನೋಡಿ ಹೊಟ್ಟೆಗೆ ಬೆಂಕಿ ಬಿದ್ದವನಂತೆ ” ಅಯ್ಯೋ ಸೂಳೆ ಮುಂಡೆ ನಾನ್ ಕಷ್ಟಪಟ್ಟು ಬೆಳುದ್ ಬೆಳೆನೆಲ್ಲಾ ಗುಡ್ಸಿ ಗುಂಡಾಂತ್ರ ಮಾಡಿದ್ದಿಯಲ್ಲೆ ” ಎಂದು ಚೀರಾಡುತ್ತಾ ಎಮ್ಮೆಗಳನ್ನು ಹಿಡಿದು ತಂದು ಗಂಗೆಯ ಮೇಲೆಯೇ ನುಗ್ಗಿಸಿದ. ಪರಮೇಶನ ಹೊಡೆತಕ್ಕೆ ಮುಲುಗುಟ್ಟಿದ ಎಮ್ಮೆಯೊಂದು ಅತ್ತಿತ್ತ ಜಗ್ಗಾಡುತ್ತಾ ಸುಖ ನಿದ್ದೆಯಲ್ಲಿದ್ದ  ಗಂಗೆಯ ಕಾಲನ್ನು ಬಲವಾಗಿಯೇ ತುಳಿದು “ಅಂಬಾ” ಎಂದಿತು.

ಚುರುಗುಟ್ಟಿದ ಪಾದವನ್ನು ಭಯದಿಂದ ಜೋರಾಗಿಯೇ ಜಾಡಿಸಿ ಕಣ್ಣು ಬಿಟ್ಟ ಗಂಗೆ, ಇನ್ನೇನು ತನ್ನ ಮೇಲೆಯೇ ಏರಿ ಬರುವಂತಿದ್ದ ಎಮ್ಮೆಯಿಂದ ತಪ್ಪಿಸಿಕೊಳ್ಳಲು  ಪಕ್ಕಕ್ಕೆ ಉರುಳಿಕೊಂಡಳು. ಸೊಂಟಕ್ಕೆ ಕೈ ಕೊಟ್ಟು ಭಾರದಿಂದ ಕೆಳಕ್ಕೆ ಜಗ್ಗುತ್ತಿದ್ದ ಹೊಟ್ಟೆಯನ್ನು ಮೆಲ್ಲನೆ ಮೇಲಕ್ಕೆತ್ತಿ “ದರ್ವೇಸಿ ನನ್ ಮಗ್ನೆ ನೀನೆನ್ ಮನುಷ್ಯನೋ ದಯ್ಯನೆನ್ಲಾ. ಎಮ್ಮೆಗೊಳ್ನ ಹಿಂಗೆ ಮೈಮೇಲೆ ಹೊಡ್ಕೊಂಡು ಬತ್ತಿದ್ಯಲ್ಲ. ನನ್ ಹೊಟ್ಟೆ ಗಿಟ್ಟೆ ಮೇಲೆ ಕಾಲಿಕ್ಕಿದಿದ್ರೆ ‌ಏನ್ ಆಗ್ಬೇಕಿತ್ತು ನನ್ಗತಿ” ಎನ್ನುತ್ತಾ ಎದ್ದು ನಿಂತವಳೆ ಅವನ ರಟ್ಟೆಯನ್ನು ಜಗ್ಗಿ ಕೆನ್ನೆಗೊಂದು ಸರಿಯಾಗಿಯೇ ಬಾರಿಸಿದಳು. ಅನಿರೀಕ್ಷಿತವಾದ ಅವಳ ಹೊಡೆತದಿಂದ ತತ್ತರಿಸಿದ ಪರಮೇಶ ಅವಮಾನವಾದವನಂತೆ ಕಂಪಿಸುತ್ತಾ “ಮನಿಗ್ ಬಾ ಮುಂಡೆ ನಿನ್ಗೊಂದು ಗತಿ ಕಾಣುಸ್ತೀವಿ” ಎಂದು ಕೈಯಲ್ಲಿ ಹಿಡಿದಿದ್ದ ಎಮ್ಮೆಯ ಹಗ್ಗವನ್ನು ರಪ್ಪನೆ ಝಾಡಿಸಿ ದುಮುಗುಡುತ್ತಾ ಮನೆಯ ಕಡೆ ನಡೆದ.

ಏನಾಗುತ್ತದೋ ಆಗಿಯೇ ಬಿಡಲಿ ಎಂದು ನಿರ್ಧರಿಸಿದ್ದ ಗಂಗೆ ಹಸಿವಿನಿಂದ ಚುರುಗುಟ್ಟುತ್ತಿದ್ದ ಹೊಟ್ಟೆಯೊತ್ತು ಎಮ್ಮೆಗಳೊಂದಿಗೆ ಮನೆಯತ್ತ ಹೆಜ್ಜೆ ಹಾಕಿದಳು. ಪ್ರತಿದಿನ ಅತ್ತ ಇತ್ತ ತಲೆ ಎತ್ತಿಯೂ ನೋಡದೆ ಎಮ್ಮೆಯ ಅಂಡುಗಳೆಡೆ ಮಂಕರಿ ಹಿಡಿದೆ ಮನೆ ಸೇರುತ್ತಿದ್ದ ಗಂಗೆ, ಅವತ್ತು ಉಕ್ಕಿ ಬರುತ್ತಿದ್ದ ಕೋಪಕ್ಕೆ ಮಂಕರಿಯನ್ನು ಹೊಲದಲ್ಲಿ ಒಗೆದು ಬಂದಿದ್ದಳು. ಅದಾಗಲೇ ಪರಮೇಶ ಬಂದು ಅವ್ವನ ಕಿವಿಯನ್ನು ಸರಿಯಾಗಿ ಚುಚ್ಚಿ  ಕೆರಳಿಸಿ ಕೂರಿಸಿದ್ದ.

ಗಂಗೆಯ ದಾರಿಯನ್ನೇ ನೋಡುತ್ತಾ ಕೂತಿದ್ದ  ಚಿಕ್ಕತಾಯಮ್ಮ ಅವಳು  ಎಮ್ಮೆ ಕಟ್ಟಿ ಒಳ ಬಂದದ್ದೆ ತಡ  ” ನಿನ್ ವಂಸ್ ಹಾಳಾಗ ಬೇಕು ಅಂತ್ಲೆಯ ಕಷ್ಟಪಟ್ಟು ಬೆಳುದ್ ಬೆಳೆನೆಲ್ಲ ಎಮ್ಮೆ ಬುಟ್ಟು ಮೇಸ್ಕೊಂಡು ಬಂದಿದಿಯೇನೆ ಬಿಕನಾಸಿ” ಎಂದು ಕೂಗಾಡುತ್ತಾ ಗಂಗೆಯ ಕೂದಲಿಗೆ ಕೈ ಹಾಕಿ  ಬಗ್ಗಿಸಿಕೊಂಡಳು. ಇದಕ್ಕಾಗಿಯೇ ಕಾಯುತ್ತಿದ್ದವನಂತೆ ಪರಮೇಶ ಓಡಿ ಬಂದವನೆ ಅವ್ವನೊಂದಿಗೆ ಸೇರಿ ಗಂಗೆ ಸುಧಾರಿಸಿ ಕೊಳ್ಳಲು ಅವಕಾಶವನ್ನೇ ಕೊಡದಂತೆ ಬೆನ್ನೆಲ್ಲಾ ಚುರುಗುಟ್ಟುವಂತೆ  ಬಡಿದರು. ಹಸಿವು, ನೀರಡಿಕೆ, ಕೋಪದಿಂದ ಕಂಗಾಲಾಗಿದ್ದ ಗಂಗೆ ಲಬಲಬನೆ ಬಾಯಿ ಬಡಿದು ಕೊಳ್ಳುತ್ತಾ  ಸೀದಾ ಬೀದಿಗೆ ಓಡಿ ಬಂದು ನಿಂತಳು.” ಇವ್ರೆಲ್ಲಾ ಸೇರಿ ನನ್ನ ಜೀವ ತಗಿತರೆ ಬನ್ರಪ್ಪೋ…” ಅವಳ ಚೀರಾಟ ಕೇಳಿ ಓಡಿ ಬಂದ ಅಕ್ಕಪಕ್ಕದವರು ” ನಾವು ನೋಡ್ತಾನೆ ಇದ್ದೀವಿ.. ದಿನ ತುಂಬಿದ್ ಭೀಮನ್ಸೆ ಅನ್ನದುನ್ನು ಕಾಣ್ದಂಗೆ ಈ ಪಾಪುದ್ ಹುಡ್ಗಿಗಿನ ಅದೇನರಿ ಗೋಳುಯ್ಕೊತಿದ್ದೀರಿ. ನೋಡು ಚಿಕ್ಕಕ್ಕ ನಿನ್ನ ಕೈಲಾದ್ರೆ ಬಾಳ್ಸು ಇಲ್ದಿದ್ರೆ ಇವ್ರಪ್ಪನ ಮನೆಗ್ ಕಳುಸ್ಬುಡು. ಇಲ್ಲ ಇದು ಹಿಂಗೇ ಮುಂದುವರುದ್ರೆ ನಾವೇ ಹೋಗಿ ಪೋಲಿಸ್ನೋರಿಗೆ ಕಂಪ್ಲೇಂಟ್ ಕೊಟ್ಟು ಬತ್ತಿವಿ ಆಟೆಯ” ಹೀಗೆ ಒಬ್ಬರಾದ ಮೇಲೆ ಒಬ್ಬರು ಚಿಕ್ಕತಾಯಮ್ಮನ ನೀರಿಳಿಸಲಾಗಿ ಗಂಟಲು ಹರಿದು ಹೋಗುವಂತೆ ಕೂಗಾಡುತ್ತಿದ್ದವಳು ಗಪ್ಚುಪ್ಪಾಗಿ ಅಡುಗೆ ಕೋಣೆ ಸೇರಿಕೊಂಡಳು.

ಊರಿನ ಜನವೆಲ್ಲ ಗಂಗೆಗೆ ಧೈರ್ಯ ತುಂಬಿ ಒಳಗೆ ಕಳುಹಿಸಿದರು. ಗಂಗೆಯ ಕೋಪವಿನ್ನು ಆರಿರಲಿಲ್ಲ. ಅಡುಗೆ ಕೋಣೆಗೆ ಬಂದವಳೇ, ಒಂದು ಒಲೆಯಲ್ಲಿ ದೊಡ್ಡ ತಪ್ಪಲಿಯಲ್ಲಿ ತುಂಬಾ ಬಿಸಿನೀರು ಕಾಯಲು ಇಟ್ಟು, ಇನ್ನೊಂದರಲ್ಲಿ ಅನ್ನಕ್ಕೆ ಎಸರಿಟ್ಟು “ನೀವ್ ಅವ್ವ ಮಕ್ಳು ಮಾತ್ರ ಮೂರ್ ಹೊತ್ತು ಅನ್ನ ಮಾಡ್ಕೊಂಡು ಬೆಣ್ಣೆ ತುಪ್ಪ ಹಾಕ್ಕೊಂಡು ತಿಂತೀರಿ, ನನಗೆ ತಂಗ್ಳಿಟ್ಟು, ನೀರ್ ಮಜ್ಜಿಗೆ ಉಣ್ಣಾಕ್ ಹಾಕ್ತಿರಿ. ನಾನೇನು ಬೀದಿಲ್ ಬಿದ್ದ್ ಬೇವಾರ್ಸಿ ಅನ್ಕೊಂಡ್ರಾ, ಒಂದಿನುಕ್ಕಾದ್ರು ಮೈ ತುಂಬಾ ಅಚ್ಕಾಟ್ಟಾಗಿ ಬಿಸ್ಬಿಸಿ ನೀರ್ ಹೊಯ್ಕೊಳಕ್ಬುಟ್ಟಿದಿರ. ಅದೇನ್ ಮಾಡ್ಕೊತಿರೋ ಮಾಡ್ಕ ಹೋಗಿ. ದಿನ ನಿಮ್ ಕೈಲಿ ಅನ್ನುಸ್ಕೊಂಡು ತಿವುಸ್ಕೊಂಡು  ನನ್ಗು ಸಾಕಾಗದೆ.  ನಾನು ಇನ್ಮುಂದುಕ್ಕೆ ಹಿಂಗೆ ಇರೋಳು ” ಎನ್ನುವ ತನ್ನ ಗಟ್ಟಿ ನಿರ್ಧಾರವನ್ನು ಅತ್ತೆಯ ಕಿವಿಗೆ ಅಪ್ಪಳಿಸುವಂತೆ ಹೇಳಿ, ಒಲೆ ಮೇಲೆ ಕೊತ ಕೊತನೆ ಕುದಿಯುತ್ತಿದ್ದ ಬಿಸಿನೀರಿನಲ್ಲಿ ಚೆನ್ನಾಗಿ ಮಿಂದು ಮೈಕೈಯನ್ನೆಲ್ಲಾ ಹಗುರವಾಗಿಸಿಕೊಂಡು ಬಂದಳು. ಮಾಡಿಟ್ಟು ಕೊಂಡಿದ್ದ ಬಿಸಿ ಬಿಸಿ ಅನ್ನಕ್ಕೆ  ಎರಡು ನಿಂಬೆ ಗಾತ್ರದ ಬೆಣ್ಣೆ ಹಾಕಿ ಉಪ್ಪು ಮೆಣಸಿನ ಪುಡಿಯೊಂದಿಗೆ ಚೆನ್ನಾಗಿ ಮಿದ್ದಿ ಎಷ್ಟೋ ದಿನಗಳ ಮೇಲೆ ಸಂತೃಪ್ತಿಯಾಗಿ ಹೊಟ್ಟೆ ತುಂಬಾ ಉಂಡು ಮಲಗಿದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು- ಕೆಟ್ಟು ಅಪ್ಪುನ್ಮನೆಗ್ ಮಾತ್ರ ಹೋಗ್ಬಾರ್ದು” https://peepalmedia.com/kettu-appana-manege-matra-hogabardu/

ಕೆಟ್ಟು ಅಪ್ಪುನ್ಮನೆಗ್ ಮಾತ್ರ ಹೋಗ್ಬಾರ್ದು”
ಅವಸರದಲ್ಲಿ ಗಂಗೆಯನ್ನು ತನ್ನ ತಾಯಿ ಚಿಕ್ಕತಾಯಮ್ಮನ  ಬಳಿ ಬಿಟ್ಟು ಮೋಹನ  ತೆರಳುತ್ತಾನೆ. ಗಂಗೆಯ ಅತ್ತೆ ಆಕೆಗೆ ಊಟವನ್ನೂ ಸರಿ ಕೊಡದೆ ಕೆಟ್ಟದಾಗಿ ವರ್ತಿಸುತ್ತಾಳೆ. ಹಸಿವೆ ತಡೆಯಲಾರದೆ ಮಜ್ಜಿಗೆ, ಬೆಣ್ಣೆಯನ್ನು ತಿಂದು ಅತ್ತೆಯ ಬಿರುಮಾತಿಗೆ ಈಡಾದಾಗ ಆಕೆಯ ಸಹನೆಯ ಕಟ್ಟೆ ಒಡೆಯುತ್ತದೆ. ಮುಂದೇನಾಯ್ತು? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼಯ ಐವತ್ತ ಆರನೆಯ ಕಂತು.

ಕುಡಿದ ಹುಳಿ ಮಜ್ಜಿಗೆ, ಬೆಣ್ಣೆಯ ಜಿಡ್ಡಿನ ಸಲುವಾಗಿ ರಾತ್ರಿ ಇಡೀ  ಕಕ್ಕಿ ಕಕ್ಕಿ ಸುಸ್ತಾಗಿ ಮಲಗಿದ್ದ ಗಂಗೆಗೆ ಮುಂಜಾನೆ ಅತ್ತೆ ಚಿಕ್ಕತಾಯಮ್ಮ ಬಂದು ಕಾಲಿನಲ್ಲಿ ತಿವಿದು ತಿವಿದು ಎಬ್ಬಿಸಿದಾಗಲೆ ಎಚ್ಚರ. “ಎಷ್ಟೊತ್ಕಂದ್ರೆ ಅಷ್ಟೊತ್ತಿಗೆದ್ದೇಳಕ್ಕೆ ಇದೇನು ನಿಮ್ಮಪ್ಪುನ್ ಮನೆ ಕೆಟ್ಟೋಯ್ತಾ .. ಎದ್ದೋಗಿ ಕೊಟ್ಟಿಗೆ ಕಸ ಹಾಕು ನಡಿ” ಕಣ್ಣು ಬಿಡುತ್ತಿದ್ದಂತೆ ಕಿವಿಗಪ್ಪಳಿಸಿದ ಅತ್ತೆಯ ಮಾತಿಗೆ ಎರಡಾಡದ ಗಂಗೆ  ಸಣ್ಣಗೆ ನರಳಿ ಮಗ್ಗುಲು ಬದಲಾಯಿಸಿ ಮತ್ತೆ ಕಣ್ಣು ಮುಚ್ಚಲೆತ್ನಿಸಿದಳು .

ಮಲಗುವ ಕೋಣೆಯಿಂದೆದ್ದು ಬಂದ ಮೈದುನ ಪರಮೇಶ “ಏನ್ರತ್ಗೆ ಅಕ್ಕ ಹೇಳ್ತಿರೋದು ಕೇಳ್ತಿಲ್ವ ಏಳೇಳಿ ಮ್ಯಾಕೆ” ಎನ್ನುತ್ತಿದ್ದಂತೆ  ಮೈಮೇಲೆ ಕುದಿನೀರು ಬಿದ್ದವಳಂತೆ ದಡ್ಡನೆ ಮೇಲೆದ್ದು, ಅವನ ಕೊರಳ ಪಟ್ಟಿಹಿಡಿದು “ನಾನೇನು ನೀನ್ ಕಟ್ಕೊಂಡಿರೋ ಹೆಂಡ್ತಿನೇನ್ಲಾ. ಇಷ್ಟು ದಿನ ಅತ್ಗೆ ಅತ್ಗೆ ಅಂತ ಬೆನ್ನಿಂದೆ  ಸುತ್ಕೊಂಡ್ ಓಡಾಡ್ತಿದ್ದೋನು ಈಗೇನು ಮೈ ಮೇಲೆ ದಯ್ಯ ಬಡ್ಕೊಂಡೋನಂಗ್ ಮಾತಾಡ್ತಿ.  ಬೇಕಾದ್ರೆ ನೀನೇ ಆ ಕಸ ಬಾಚಾಕೋ ಹೋಗು”…. ಗಂಗೆಯ ಮಾತಿನ್ನೂ ಮುಗಿದಿರಲಿಲ್ಲ. ಉಸಿರು ತಿರುಗಿಸಿಕೊಳ್ಳಲು ಆಗದಷ್ಟು ಬಲವಾಗಿ ಅವಳ ಬೆನ್ನಿನ ಮೇಲೆ  ದಪ್ ಎಂದು ಗುದ್ದಿದಳು ಚಿಕ್ಕತಾಯಮ್ಮ. “ಏನೇ ಮಾರಾಜುನ್ ಮೊಮ್ಮಗ್ಳೆ ಈ ಧಿಮಾಕ್ನೆಲ್ಲ ಬುಟ್ಟು ನಾವು ಹೇಳ್ದಂಗೆ ಕೇಳ್ಕೊಂಡಿರಂಗಿದ್ರೆ ಇರು. ಇಲ್ಲ ನಿಮ್ಮಪ್ಪುನ್ ಮನೆಗೆ ಗಾಡಿ ಬುಡ್ತಾ ಇರು” ಕಡ್ಡಿ ಮುರಿದಂತೆ ಹೇಳಿ ಪೊರಕೆ ತಂದು ಗಂಗೆಯ ಮುಂದೆಸೆದು ಹೋದಳು.

“ಕೆಟ್ಟು ಅಪ್ಪುನ್ಮನೆಗ್ ಮಾತ್ರ ಹೋಗ್ಬಾರ್ದು” ಎಂದು ಎಂದೋ ನಿರ್ಧರಿಸಿದ್ದ ಗಂಗೆ, ತನ್ನ ಮೊಂಡಾಟ ಬದಿಗೊತ್ತಿ ಪೊರಕೆ ಹಿಡಿದು ಕೊಟ್ಟಿಗೆಗೆ ನಡೆದಳು. ಚಿಕ್ಕವಳಿದ್ದಾಗ ಅಣ್ಣ ಚಂದ್ರಹಾಸ ತನ್ನ ಹೆಗಲಿಗೆ ಬಿದ್ದಿದ್ದ ಈ ಕೆಲಸವನ್ನು ಐದು ಪೈಸೆಯ ಆಸೆ ತೋರಿಸಿ ಇವಳ ಕೈಯಲ್ಲಿ ಮಾಡಿಸುತ್ತಿದ್ದ ದಿನಗಳು ನೆನಪಾದವು ಗಂಗೆಗೆ. ತುಂಬು ಹೊಟ್ಟೆ ಹೊತ್ತು ಅಸ್ ಉಸ್ ಎಂದು ಕೆಲಸ ಮುಗಿಸಿದವಳಿಗೆ ಬಾಯಿ ಬಡಿದುಕೊಳ್ಳುವಂತಹ ಹಸಿವು ಶುರುವಾಯಿತು. ಕೈಕಾಲು ತೊಳೆದು ಸೀದಾ ಅಡಿಗೆ ಕೋಣೆಗೆ ನುಗ್ಗಿದವಳೆ ಅನ್ನಕ್ಕಿಟ್ಟುಕೊಳ್ಳಲು ಅಕ್ಕಿ ಡಬ್ಬಕ್ಕೆ ಕೈ ಹಾಕಿದಳು. ಪಕ್ಕದಲ್ಲಿಯೇ ಒಲೆ ಮುಂದೆ ಕೂತಿದ್ದ ಚಿಕ್ಕ ತಾಯಮ್ಮ ಚಂಗನೆದ್ದು  “ಈ ಅಕ್ಕಿ ಮಕ್ಳಿಗೆ ಮಾತ್ರ, ಹಿಟ್ಗೆ ಎಸ್ರಿಟ್ಟಿದಿನಿ ತಿರ್ವೊ ತನ್ಕ ವಸಿ ತಡ್ಕೊ ರಾಕ್ಷಸಿ ಹಂಗಾಡ್ಬೇಡ” ಗಬಕ್ಕನೆ ಅಕ್ಕಿ ಡಬ್ಬವನ್ನು ಕಿತ್ತುಕೊಂಡು ತನ್ನ ಅಂಡಿನ ಕೆಳಗಿಟ್ಟುಕೊಂಡು ಒಲೆ ಉರುಬುತ್ತಾ ಕೂತಳು.

ತಪ್ಪಲೆ ಕೆರೆದು ತೆಗೆದ ಕೊನೆಯ ಮುದ್ದೆಯೊಂದಿಗೆ, ಉಪ್ಪು ಹಸಿರು ಮೆಣಸು, ಹುಣಸೆ ಹಣ್ಣನ್ನು ತಂದು ಗಂಗೆಯ ಮುಂದೆ ಕುಕ್ಕಿ “ತಗೋ ಕಿವ್ಕೊಂಡುಂಡು  ಎಮ್ಮೆ ಮೇಯ್ಸಕೋಗು” ಎಂದು ತಾಕೀತು ಮಾಡಿ ಹೋದಳು ಚಿಕ್ಕತಾಯಮ್ಮ. ಅತ್ತೆಯ ಮಾತು ಕೇಳಿ ಕ್ಷಣ ಗರ ಬಡಿದಂತಾದ ಗಂಗೆ  ಸಾವರಿಸಿಕೊಂಡು ” ನಂಗೆ ನಾಚ್ಕೆ ಆಯ್ತದೆ ಕಣ್ ಅತ್ಯಮ್ಮ ನಿಮ್ ದಮ್ಮಯ್ಯ ಎಮ್ಮೆ ಮೇಸಕ್ ಮಾತ್ರ ಕಳುಸ್ಬೇಡಿ” ಎಂದು ಗೋಗರೆದುಕೊಂಡಳು. ಚಂಡಿಯಂತೆ ಮುನಿದು ನಿಂತ ತಾಯಮ್ಮ “ಏನಂದೆ ಎಮ್ಮೆ ಮೇಸದು ನಾಚಿಗೆಟ್ ಕೆಲಸ ಅಂತಿಯೇನೆ ರಂಡೆ. ನಾನು ಅದುನ್ ಮಾಡಿ ಮಗುನ್ ಬೆಳೆಸಿದ್ದುಕ್ಕೆ ನೀನು ಇವತ್ತು ಹೊಟ್ಟೆ ಹೊತ್ಕೊಂಡ್ಬಂದು ಕೂತಿರದು ತಿಳ್ಕೊ. ನಿಮ್ಮಪ್ಪುನ್ ಮನೆಗ್ಹೋಗಿ ಆಸ್ತಿ ಇಸ್ಕೊಂಡ್ ಬಾ ಮತ್ತೆ ಕೂರ್ಸಿ ಅನ್ನ ಹಾಕ್ತೀನಿ. ಇಲ್ದಿದ್ರೆ ನನ್ ಮಗ ಹೇಳ್ದಂಗೆ ಕೇಳ್ಕೊಂಡು ಸಂಪಾದ್ನೆಗಿಳಿ, ಅಪ್ಪುನಂತ ಸೊಸೆ ಅಂತ ಊರ್ತುಂಬಾ ಮೆರುಸ್ತೀನಿ. ಆರ್ಕಾಸ್ಗಿಲ್ಲ ಮೂರ್ಕಾಸ್ಗಿಲ್ಲ ಮರ್ಯಾದೆ ಬೇರೆ ಕೇಡು ನಿನ್ ಮಕ್ಕೆ. ಬಾಯ್ಮುಚ್ಕೊಂಡು ಉಂಡು ನಡಿಯೇ” ಕಿವಿಗಡಚಿಕ್ಕುವಂತೆ ಚೀರಿಳು.

ನುಂಗಿದ ಹಿಟ್ಟು ಗಂಟಲಲ್ಲಿ ಸಿಕ್ಕಿಕೊಂಡಂತೆ ಒದ್ದಾಡುತ್ತಿದ್ದ ಗಂಗೆ, ತಡೆಹಿಡಿಯಲಾರದ ಕಣ್ಣೀರನ್ನು ಮರೆಮಾಡಲು ತಲೆ ತುಂಬಾ ಸೆರಗೊದ್ದು, ಎಮ್ಮೆಯ ಹಗ್ಗ ಹಿಡಿದು ಕೊಟ್ಟಿಗೆಯಿಂದ ಹೊರ ಬಂದಳು. ದಡ್ಡನೆ ಮಂಕರಿಯೊಂದಿಗೆ ಪ್ರತ್ಯಕ್ಷಳಾದ ತಾಯಮ್ಮ  “ನೋಡು ಎಮ್ಮೆ ಹಾಕಿದ್ ಸಗಣಿ ನೆಲುಕ್ ಬೀಳ್ದಂಗೆ ಇದ್ರೊಳಕೆ ಹಿಡಿಬೇಕು. ಮಣ್ಣಿಗೇನಾರ ಬಿತ್ತೊ  ಹೊಟ್ಟೆಗ್ ತಣ್ಣೀರ್ ಬಟ್ಟೆನೆ ಗತಿ  ತಿಳ್ಕೊ. ಭುಸುಗುಟ್ಟಿ  ಮಂಕರಿ ಕುಕ್ಕಿ ಒಳ ನಡೆದಳು.

ಮದುವೆಯಾದ ಹೊಸತಿನಲ್ಲಿ ಸಂಪಿಗೆ ಕಟ್ಟೆಯ ಎಸ್. ಐ ನ ದೆಸೆಯಿಂದ ಇಡೀ ಊರಿನವರ ಗೌರವಕ್ಕೆ ಪಾತ್ರಳಾಗಿದ್ದ ಗಂಗೆ, ಈಗ ಅದೇ ಊರಿನವರೆದುರು ಗತಿ ಕೆಟ್ಟವಳಂತೆ ಕಂಕುಳಲ್ಲಿ ಮಂಕರಿ ಇರುಕಿ, ಒಂದು ಕೈಲಿ ಎಮ್ಮೆಗಳ ಹಗ್ಗವನ್ನೂ, ಇನ್ನೊಂದು ಕೈಲಿ ಬಾರುಕೋಲನ್ನು ಹಿಡಿದು ತಲೆ ಎತ್ತದಂತೆ ಮಗುಮ್ಮಾಗಿ ಬಂದು ಹೊಲ ಸೇರಿದಳು.

ಸಂಜೆಯ ಹೊತ್ತಿಗಾಗಲೇ, ಎಮ್ಮೆಯ ಹಿಂದೆ ಹೋದ ತುಂಬು ಬಸುರಿ ಗಂಗೆಯ ಚಿತ್ರ ಬಾಯಿಂದ ಬಾಯಿಗೆ ತಲುಪಿ ಊರವರ ಎದೆಯಲ್ಲಿ ಅನುಕಂಪದ ಹೊಳೆಯೇ ಹರಿದಿತ್ತು.  ಘಟವಾಣಿ ತಾಯಮ್ಮನಿಗೆ ಸಾಲುಮುನ್ನಾಗಿ ಶಾಪಹಾಕಿ ಸಮಾಧಾನ ಗೊಳ್ಳಲೆತ್ನಿಸಿದರು ಊರ ಜನ. ಕೆಲವರಂತೂ ಕುತೂಹಲ ತಾಳಲಾರದೆ ಏನೇನೋ ನೆಪ ಹುಡುಕಿ ಬಂದು ಗಂಗೆಯನ್ನು ಮಾತಾಡಿಸಿ ಹೋದರು.

ಹಿಂದಿನ ಕಂತು ಓದಿದ್ದೀರಾ?  “ಹಂಗಿದ್ರೆ ನಾನು ಈ ಮನೆಗೆ ಏನು ಅಲ್ವಾ ಅತ್ಯಮ್ಮ?”

ಮೊದಮೊದಲು ಗಂಗೆಗೆ ಇವೆಲ್ಲ ಸಂಕೋಚ ಎನ್ನಿಸಿದರು  ಊರಿನವರು ಅವಳಿಗೆ ತೋರುತ್ತಿದ್ದ  ಪ್ರೀತಿ ಮತ್ತು ಕಾಳಜಿಗಳು,  ನೀರಸವಾಗಿದ್ದ ಆ ಮನೆಯಲ್ಲಿ ಉಸಿರು ಕಟ್ಟಿ ಬದುಕಲು ಅವಳಿಗೆ ಇಂಬಾಗಿ ನಿಂತವು.  ಒಂದು ನಾಲ್ಕು ದಿನ ಮಧ್ಯಾಹ್ನದ ಹೊತ್ತು  ಹಿಟ್ಟು ತಂದು ಕೊಟ್ಟು ಹೋದ ರತ್ನ ಐದನೆಯ ದಿನಕ್ಕೆ ಇತ್ತ ತಲೆಹಾಕಲೇ ಇಲ್ಲ. ಗಂಗೆಯ ತೊಳಲಾಟ ನೋಡಲಾರದ ಜೊತೆಯೊಂದಿಗರು ತಾವು ತಂದ ಬುತ್ತಿಯನ್ನೇ ಅವಳೊಂದಿಗೆ ಹಂಚಿ ಉಣ್ಣುತ್ತಾ ಹಸಿವು ತಣಿಸುತ್ತಿದ್ದರು.  ಊರಿನ ಹಿರೇಗೌಡರ ಮನೆಯ ಕೆಲಸದಾಳು ಹದಿಮೂರರ ಪೋರಿ ಶಿವಿಲಿಂಗಿ ಕೂಡ ಗಂಗೆ ಎಷ್ಟು ಬೇಡವೆಂದರು ಕೇಳದೆ ಕದ್ದು ಮುಚ್ಚಿ ಕೋಳಿಮೊಟ್ಟೆ ತಂದು  ತಿನ್ನಿಸಿ, ಅವಳ ಹೊಟ್ಟೆಯ ಕೂಸಿನ ಮೇಲೊಮ್ಮೆ ಕೈಯಾಡಿಸಿ ಮುದಗೊಳ್ಳುತ್ತಿದ್ದಳು. ಒಂದು ದಿನ  ಹೀಗೆ ಕದ್ದು ಮೊಟ್ಟೆ ಹೊತ್ತು ತರುತ್ತಿದ್ದ ಹುಡುಗಿ ಹಿರೇಗೌಡರ ಹೆಂಡತಿ ಕೈಗೆ ಸಿಕ್ಕಿಬಿದ್ದಿತು. ಅವಳಿಂದ ಗಂಗೆಯ ಪರಿಸ್ಥಿತಿಯನ್ನೆಲ್ಲಾ  ತಿಳಿದುಕೊಂಡ ಹಿರೇಗೌಡರ ಹೆಂಡತಿ, ಅನುಕಂಪಗೊಂಡು  ತಾನೇ  ಪ್ರತೀ ದಿನ  ಮುತುವರ್ಜಿ ವಹಿಸಿ ಗಂಗೆಗಾಗಿ ಬೇಯಿಸಿದ ಕಾಳು ಸೊಪ್ಪು ಸೆದೆ ಹಣ್ಣು ಹಂಪಲುಗಳನ್ನು ಇದೇ ಶಿವಲಿಂಗಿ ಕೈಯಲ್ಲಿ ಕೊಟ್ಟು  ಕಳುಹಿಸ ತೊಡಗಿದಳು. ತುಸು ಬಡಕಲಾಗಿ ಹೊಟ್ಟೆ ಮಾತ್ರ ಎದ್ದು ಕಾಣುತ್ತಿದ್ದ ಗಂಗೆಯ ದೇಹ ಈಗ ನೋಡ ನೋಡುತ್ತಿದ್ದಂತೆ  ತುಂಬಿಕೊಳ್ಳ ಹತ್ತಿತ್ತು. ಗಂಗೆಯನ್ನು ಸೂಕ್ಷ್ಮವಾಗಿ ಗಮನಿಸಿದ  ಚಿಕ್ಕತಾಯಮ್ಮ ಮಾತ್ರ ಒಳಗೊಳಗೆ ಕುದಿಯುತ್ತಾ, ಆಗಾಗ ಆವಿಹೊರ ಚೆಲ್ಲಿದಂತೆ “ಯಾವ ಮಿಂಡ್ಗಾರುನ್ ಆರೈಕೆಯೋ ಏನೋ ಕನೇ ರತ್ನ, ನಿಮ್ಮ್ ಅತ್ಗೆ ಮೈಕೈ ತುಂಬ್ಕೊಂಡು ಕುಣಿತಾವ್ಳಪ್ಪಾ ” ಎಂದು ಉಜ್ಜಾಡುತ್ತಾ ಕೊಂಕಾಡಿ ತಣಿಯುತ್ತಿದ್ದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

“ನಿಮ್ಮ್ ದಮ್ಮಯ್ಯ ಆ ಹುಡ್ಗಿನ ಬುಟ್ಬುಡಿ”
(ಈ ವರೆಗೆ…) ಗಂಗೆಗೆ ಮೋಹನನ ದುಡಿಮೆ ಇಷ್ಟವಾಗದಿದ್ದರೂ ಒಂದಷ್ಟು ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸಿದಳು. ಗಂಗೆಯ ಮೌನವನ್ನು ಸಮ್ಮತಿ ಎಂಬಂತೆ ಗ್ರಹಿಸಿ  ಮೋಹನ ಹುಡುಗಿಯರನ್ನು ಮನೆಗೆ ತಂದು ಇರಿಸಿ ಮತ್ತೆ ಅವರನ್ನು ಆ ಮನೆಗೆ ಒಯ್ಯುವುದನ್ನು ಅಭ್ಯಾಸ ಮಾಡಿಕೊಂಡ. ಒಂದು ದಿನ ಅಳುತ್ತಾ ಬೊಬ್ಬೆ ಹೊಡೆಯುತ್ತಿದ್ದ ಹುಡುಗಿಯೊಬ್ಬಳನ್ನು ರೂಮೊಳಗೆ ತಳ್ಳಿ ಆಕೆಯನ್ನು ಹೊರಬಿಡದಂತೆ ಗಂಗೆಗೆ ತಾಕೀತು ಮಾಡಿ ಹೊರ ಹೋಗುತ್ತಾನೆ. ಗಂಗೆ ಏನು ಮಾಡಿದಳು? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼಯ ಐವತ್ತ ನಾಲ್ಕನೆಯ ಕಂತು.

“ನಂಗೆ ಈ ಕೆಲ್ಸ ಮಾಡೋಕೆ ಇಷ್ಟ ಇಲ್ಲ.. ಪ್ಲೀಸ್ ನಿನ್ನ ಕಾಲ್ ಹಿಡಿತೀನಿ.. ನನ್ನ ಬಿಟ್ಟು ಬಿಡು” ಒಳಗಿನಿಂದ ಒಂದೇ ಸಮನೆ ಬಾಗಿಲು ಬಡಿಯುತ್ತಾ ಅಳುತ್ತಿದ್ದಳು ಆ ಹುಡುಗಿ. ಅವಳ ಗೋಳಾಟ ಕೇಳಲಾರದ ಗಂಗೆ “ಅಲ್ಲ ಕನವ್ವ ನೀ ಹಿಂಗೆ ಯಾರಿಗೂ ಹೇಳ್ದೆ ಕೇಳ್ದೆ ಮನೆ ಬುಟ್ಟು ಬಂದಿರದು ಸರಿಯ ಹೇಳು? ಈ ದೊಡ್ಡ್ ಸಿಟಿಲಿ ನಿನ್ನ ಸುಮ್ನೆ ಬುಟ್ಟಾರ ಕೆಟ್ಟ್ ಜನಗೊಳು. ಇರು, ನಮ್ಮನೆಯವ್ರು ನಿನ್ನ ಅಣ್ಣದಿರ್ನ ಕರ್ಕೊಂಡು ಬರಕ್ಕ್ ಹೋಗವ್ರೆ, ಸುಮ್ನೆ ಅವ್ರ್ ಜೊತೆ ಊರಿಗೆ ಹೋಗಿ ಮರ್ಯಾದಿಲಿ ಬಾಳದ್ ನೋಡು” ಬಾಗಿಲ ಹೊರ ನಿಂತು ಆ ಹುಡುಗಿಗೆ ತಿಳಿ ಹೇಳಲು ಪ್ರಯತ್ನಿಸಿದಳು.

ಮೋಹನ ಮನೆಯಲ್ಲಿಲ್ಲ ಎಂದು ಅರಿತ ಹುಡುಗಿ ಇನ್ನಷ್ಟು ಚುರುಕಾದಳು “ಪ್ಲೀಸ್ ಮೇಡಂ ಒಂದು ನಿಮಿಷ ಬಾಗಿಲು ತೆಗೆದು ನನ್ನ ಮಾತು ಕೇಳಿಸಿಕೊಳ್ಳಿ” ಗೋಗರೆದ ಹುಡುಗಿಯ ಮಾತಿಗೆ ಕರಗಿ ಬಾಗಿಲು ತೆಗೆದಳು ಗಂಗೆ. ಆ ಹುಡುಗಿ ಒಂದೇ ಉಸಿರಿಗೆ “ತನ್ನ ಪ್ರಿಯಕರನನ್ನು ನಂಬಿ ಓಡಿ ಬಂದಿದ್ದು, ಆತ ಮೋಹನನಿಗೆ ತನ್ನನ್ನು ಮಾರಾಟ ಮಾಡಿ ಕಣ್ಣು ತಪ್ಪಿಸಿ ಓಡಿ ಹೋದದ್ದು, ಮೋಹನ ಈಗ ತನ್ನನ್ನು ಬಾಂಬೆಗೆ ಸಾಗಿಸಲು ಹವಣಿಸುತ್ತಿರುವುದು ಎಲ್ಲವನ್ನು ಹೇಳಿ “ನನ್ನಾಣೆಗೂ ನನಗಿಲ್ಲಿ ಯಾವ ಅಣ್ಣಂದಿರು ಇಲ್ಲ ಮೇಡಂ. ವಾಪಸ್ ಊರಿಗೆ ಹೋಗಿ ಬಿಡ್ತೀನಿ ಪ್ಲೀಸ್ ನನ್ನ ಇಲ್ಲಿಂದ ಬಿಟ್ಟುಬಿಡಿ” ಎನ್ನುತ್ತಾ ಗಂಗೆಯ ಕಾಲಿಗೆ ಬಿದ್ದು ಗೋಳಾಡಿದಳು.

ಗಂಡನ ಮೇಲಿದ್ದ ಕುರುಡು ಪ್ರೀತಿಯೋ, ಅನಿವಾರ್ಯತೆಯೋ ಒಟ್ಟಿನಲ್ಲಿ ಅವನು ಹೇಳುತ್ತಿದ್ದದ್ದನ್ನೆಲ್ಲಾ ಚಾಚೂ ತಪ್ಪದೆ ನಂಬಿ ಪಾಲಿಸುತ್ತಿದ್ದ ಗಂಗೆ, ಕೂಡಲೇ ಎಚ್ಚೆತ್ತವಳಂತೆ  ತರಾತುರಿಯಲ್ಲಿ  ಬಾಗಿಲು ತೆಗೆದು “ಜ್ವಾಪಾನ ಬಿರ್ನ್ ಹೋಗ್ಬುಡವ್ವಾ” ಎಂದು ಆ ಹುಡುಗಿಯನ್ನು ಕಳುಹಿಸಿಯೇ ಬಿಟ್ಟಳು. ಬಾಗಿಲು ಹಾಕಿಕೊಂಡು ಒಳ ಬಂದವಳಿಗೆ ಮೋಹನನನ್ನು ನೆನೆದು, ಒಮ್ಮೆಲೆ ತಳಮಳ ಆರಂಭವಾಯಿತು. ಹೊಟ್ಟೆ ಕಲಸಿದಂತಾಗಿ ಓಡಿಹೋಗಿ ಬಾತ್ರೂಮು ಸೇರಿ ಬಾಗಿಲು ಮುಚ್ಚಿ ಕೂತಳು. ಗಂಡನ ಬಿರುಗಣ್ಣಿನಿಂದ ತಪ್ಪಿಸಿಕೊಳ್ಳಲು ಹೊಸ ಕಥೆಯೊಂದನ್ನು ಹೊಸೆಯುವುದರಲ್ಲಿ ತಲ್ಲೀನಳಾಗಿದ್ದ ಗಂಗೆಗೆ, ಇದ್ದಕ್ಕಿದ್ದಂತೆ ಹೊರಗಿನಿಂದ ದಬದಬನೇ ಬಾಗಿಲು ಬಡಿದ ಸದ್ದು ಕೇಳಿತು.

ಭಯದಿಂದ ತತ್ತರಿಸಿದ್ದ ಗಂಗೆಯ ದೇಹ ನಡುಗುತ್ತಿತ್ತು.  ಹೃದಯ ಸಿಡಿದು ಚೂರಾಗಿ ಬಿಡುವುದೋ ಎಂಬಂತೆ ಜೋರಾಗಿ ಬಡಿದು ಕೊಳ್ಳುತ್ತಿತ್ತು. ಶಕ್ತಿಕಳೆದುಕೊಂಡ ಕಾಲುಗಳು ರಚ್ಚೆ ಹಿಡಿದಂತೆ ಮುಂದಡಿಯಿಡಲಾರದೆ ಗಂಗೆಯನ್ನು ಪರದಾಡುವಂತೆ ಮಾಡಿತು. ಹೊರಗಿನಿಂದ ” ಎಲ್ಲ್ ಸತ್ತೆ ಗಂಗೂ, ಬೇಗ ಬಂದು ಬಾಗ್ಲು ತೆಗಿ” ಎನ್ನುವ ಗಡುಸು ದನಿ ಕೇಳಿಸಿತು. ತನ್ನ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಬಂದು ಬಾಗಿಲು ತೆಗೆದ ಗಂಗೆಯ ಎದುರು,  ಇಬ್ಬರು ದಾಂಡಿಗರ ಬಿಗಿಮುಷ್ಠಿಯನ್ನು ಕೊಸರಿಕೊಳ್ಳುತ್ತಿದ್ದ ಆ ಹುಡುಗಿ ಕಂಡಳು.  ಅವಳ ಹಿಂದೆ ಕೋಪದಿಂದ ಉರಿಯುತ್ತಾ ನಿಂತಿದ್ದ ಮೋಹನ  ಅನಾಮತ್ತಾಗಿ ಬಂದು, ಗಂಗೆಯ ಜಡೆಗೆ ಕೈ ಹಾಕಿ ” ಹೇಳಿದ್ದೊಂದು ಕೆಲ್ಸಾನ ನೆಟ್ಟುಗ್ ಮಾಡೋಕೆ ಏನ್ ರೋಗ ನಿನ್ಗೆ” ಎಂದು ಗದರಿ ರೂಮಿಗೆ ಎಳೆದು ಕೊಂಡು ಹೋಗಿ ಚಿಲಕ ಹಾಕಿಕೊಂಡು ಹೊರಬಂದ.

ಮುಂದಿನ ಬಾಗಿಲು ಭದ್ರಗೊಳಿಸಿ ಆ ಹುಡುಗಿಯ ಮೇಲೆ ಹರಿ ಹಾಯ್ದ ಮೋಹನ “ಲೋಫರ್ ಮುಂಡೆ ನಿನ್ನ್ ಮೇಲೆ ಎಷ್ಟು ಬಂಡವಾಳ ಹಾಕಿದ್ದೀನಿ ಗೊತ್ತೇನೆ. ನನ್ ಕಣ್ಣಿಗೆ ಮಣ್ಣೆರ್ಚಿ ಹೋಗಕ್ಕ್ ನೋಡ್ತಿಯ” ಎನ್ನುತ್ತಾ ಅವಳ ಬೆನ್ನಿನ ಮೇಲೆ ದಪ್ಪನೆ ಗುದ್ದಿದ. ಅದುವರೆಗೂ ದಾಂಡಿಗರ ಬಿಗಿ ಮುಷ್ಟಿಯಿಂದ ಬಿಡಿಸಿಕೊಳ್ಳಲು ಕೊಸರಾಡುತ್ತಿದ್ದ ಹುಡುಗಿ ಒಮ್ಮೆಗೆ  ಕೋಪ ನೆತ್ತಿಗೇರಿ “ಲೇ ಪಿಂಪ್, ನಾನಲ್ಲ ಕಣೋ ಲೋಫರ್ ನೀನು” ಎಂದು ಗಟ್ಟಿಯಾಗಿ ಚೀರಾಡ ತೊಡಗಿದಳು. ಅವಳ ಚೀರಾಟ ಕೇಳಿ ಮತ್ತಷ್ಟು ಸೆಟೆದು ನಿಂತ ಮೋಹನ, ಅವಳ ಬಾಯಿಗೆ ಭದ್ರವಾಗಿ ಬಟ್ಟೆ ತುರುಕಿ ತನ್ನ ಕೈ ಸೋಲುವವರೆಗೂ ಹೊಡೆದ.

ಈ ಹಾರಾಟ ಚೀರಾಟಗಳನ್ನೆಲ್ಲಾ ಒಳಗಿನಿಂದಲೇ ಕೇಳಿಸಿಕೊಳ್ಳುತ್ತಿದ್ದ ಗಂಗೆ, ತನ್ನ ಗರ್ಭವೇ ಜಾರಿ ಬಿದ್ದಂತೆ ತತ್ತರಿಸಿ “ನಿಮ್ಮ್ ದಮ್ಮಯ್ಯ ಆ ಹುಡ್ಗಿನ ಬುಟ್ಬುಡಿ  ಏನು ಮಾಡಬೇಡಿ” ಎಂದು ತನ್ನ ಶಕ್ತಿ ಮೀರಿ  ಬಾಗಿಲು ಬಡಿಯುತ್ತಲೇ ಇದ್ದಳು. ಅವಳ ಮಾತು ಕೇಳಿಸಿ ಕೊಳ್ಳುವ ವ್ಯವಧಾನವಾಗಲಿ, ಅಕ್ಕಪಕ್ಕದ ಮನೆಯವರ ಬಗೆಗಿನ ಎಚ್ಚರವಾಗಲಿ ಯಾವುದೊಂದರ ಬಗ್ಗೆಯೂ ಗಮನವಿಲ್ಲದ  ಮೋಹನ, ಉಸಿರು ನಿಂತು ಉರುಳಿ ಬಿದ್ದಿದ್ದ ಆ ಹುಡುಗಿಯನ್ನು ದಾಂಡಿಗರೊಂದಿಗೆ ಸೇರಿ  ಎತ್ತಿ ತಂದು ಕಾರಿಗೆ ಹಾಕಿ ಕೊಂಡು ಹೊರಟೆ ಹೋದ. ಬರ್ರ್ ಎಂದು ಹೋದ ಕಾರಿನ ಸದ್ದಿನೊಂದಿಗೆ ಎಲ್ಲವೂ ಸ್ತಬ್ಧವಾದಂತಾಗಿ ಗಂಗೆ ಏನೊಂದನ್ನು ಊಹಿಸಲಾರದೆ ತಳಮಳದಿಂದ ಕಂಪಿಸಿದಳು.

ಎಷ್ಟೋ ತಾಸಿನ ಮೇಲೆ ಮನೆಗೆ ಬಂದ ಮೋಹನ ರೂಮಿನ ಬಾಗಿಲು ತೆಗೆದು “ನೋಡು ಅರ್ಜೆಂಟ್ ಕೆಲ್ಸದ ಮೇಲೆ ನಾನು ಹೈದರಾಬಾದಿಗೆ ಹೋಗ್ತಿದ್ದೀನಿ ಬರೋದು ಎಷ್ಟು ದಿನ ಆಗುತ್ತೋ ಗೊತ್ತಿಲ್ಲ. ನಿನ್ನ ಭೋಗನೂರಿಗೆ ಬಿಟ್ಟು ಬರ್ತೀನಿ   ಬೇಗ ನಿನ್ನ ಬಟ್ಟೆ ಬರೆಗಳನ್ನೆಲ್ಲಾ  ಪ್ಯಾಕ್ ಮಾಡ್ಕೊಂಡ್ ಬಾ    ಕಾರ್‌ ನಲ್ಲಿರ್ತೀನಿ”  ಎಂದು ಯಾವ ಉದ್ವೇಗವು ಇಲ್ಲದೆ ತಣ್ಣಗೆ ಹೇಳಿ ಹೊರ ನಡೆದ.

ಬಾಯಾರಿಕೆಯಿಂದ ತತ್ತರಿಸಿ ಹೋಗಿದ್ದ ಗಂಗೆಗೆ ಗಂಟಲೊಣಗಿ   ದನಿ ಏಳದಂತಾಗಿತ್ತು. ಅಡಿಗೆ ಕೋಣೆಗೆ ಓಡಿದವಳೆ ಗಟಗಟನೆ ಒಂದು ಚಂಬು ನೀರು ಕುಡಿದು ಸುಧಾರಿಸಿಕೊಂಡು ಹೊರಬಂದಳು. ನಡುಮನೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಹನಿ ಅವಳ ಕಣ್ಣಿಗೆ ಬಿತ್ತು, ಒಂದು ರೀತಿಯ ತಳಮಳ ಅವಳನ್ನು ಆವರಿಸಿ ಎದೆ ಭಾರವಾದಂತೆನಿಸಿತು. ಕೂಡಲೇ  ಹೊರಗಿದ್ದ ಮೋಹನನನ್ನು ಕೂಗಿಕೊಂಡಳು. “ಏನೀ ಇದು ರಕ್ತ…. ಆ ಹುಡ್ಗಿನ ಏನ್ ಮಾಡುದ್ರಿ ಹೇಳಿ” ಎಂದು ಅಳುತ್ತಾ ಕೂತಳು. ಗಂಗೆಯ ಮಾತಿಗೆ ನಿರ್ಲಕ್ಷ್ಯ ದಿಂದಲೇ ಉತ್ತರಿಸಿದ  ಮೋಹನ “ನೋಡು ಗಂಗೂ ನಿನ್ಗೆ ಸಂಬಂಧ ಪಡದ ವಿಷಯದಲ್ಲಿ ತಲೆ ಹಾಕಬೇಡ. ನಿನ್ನ ಹೊಟ್ಟೆ ಬಟ್ಟೆಗ್ ತೊಂದ್ರೆ ಆದ್ರೆ ಮಾತ್ರ ನಿನ್ಗೆ ಕೇಳೋ ಅಧಿಕಾರ ಇರೋದು. ಟೈಮ್ ಕಮ್ಮಿ ಇದೆ ಇನ್ನು ಹತ್ತು ನಿಮಿಷದಲ್ಲಿ ಹೊರ್ಡು ಎಂದು ತಾಕೀತು ಮಾಡಿದ. ಅವನ ನಿರ್ಲಕ್ಷ್ಯದ ಮಾತು ಕೇಳಿ ಅಸಮಾಧಾನಗೊಂಡ ಗಂಗೆ “ನಿಂತ್ ಕಾಲಿನ ಮೇಲೆ ಹೊಂಡು ಅಂದ್ರೆ ಹೆಂಗ್ ಹೊಂಡದು ನನ್ಗೂ ಸುಸ್ತಾಗೈತೆ ಬಂದು ವಸಿ ಕೈ ಜೋಡ್ಸಿ” ಎಂದು ಹೇಳಿ ಅಡುಗೆ ಮನೆಯ ದಿನಸಿಯೊಂದಿಗೆ ತನ್ನ ಬಟ್ಟೆಬರೆಗಳನ್ನೆಲ್ಲಾ ಜೋಡಿಸಿಕೊಂಡು ಕಾರು ಹತ್ತಿ ಕುಳಿತಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು- ದು:ಖಿತ ಗಂಗೆಗೆ ಬಸುರಿನ ಕೂಸೇ ಸಾಂತ್ವನ

ದು:ಖಿತ ಗಂಗೆಗೆ ಬಸುರಿನ ಕೂಸೇ ಸಾಂತ್ವನ
(ಈ ವರೆಗೆ…) ಮನೆಯಲ್ಲಿ ತಿನ್ನಲೇನೂ ಇಲ್ಲದೆ ಕಂಗಾಲಾದ ಗಂಗೆ ಹಸಿವು ತಾಳಲಾರದೆ ಮಣ್ಣಿನುಂಡೆಯನ್ನೇ ತಿನ್ನುತ್ತಾಳೆ. ಆ ಹೊತ್ತಿನಲ್ಲಿ ಮನೆಗೆ ಬಂದ ಮೋಹನನಿಗೆ ಅವಳ ಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಹುಟ್ಟಿ ಮುಂದೆ ಹೀಗಾಗದು ಎಂದು ಆಕೆಯನ್ನು ನಂಬಿಸಿ ತಿನ್ನಲು ತಂದು ಕೊಡುತ್ತಾನೆ. ಹೊಟ್ಟೆಯ ಹಸಿವು ತಗ್ಗಿದಾಗ ಗಂಗೆ ಈ ಬಿಸಿನೆಸ್‌ ಬಿಡುವಂತೆ ಗೋಗರೆಯುತ್ತಾಳೆ. ಸಿಟ್ಟುಗೊಂಡ ಮೋಹನ ಹೀಗೆ ಮಾತಾಡಿದ್ರೆ ತವರು ಮನೆಗೆ ಬಿಟ್ಟು ಬರುವುದಾಗಿ ಗದರುತ್ತಾನೆ. ಗಂಗೆಯ ಮುಂದಿನ ನಡೆ ಏನು? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಐವತ್ಮೂರನೆಯ ಕಂತು.

ನಾರಿಪುರದಲ್ಲಿದ್ದ ಹೆಚ್ಚಿನ ಹೆಣ್ಣುಮಕ್ಕಳೆಲ್ಲಾ ತಮ್ಮ ದಾಂಪತ್ಯವನ್ನು ಅರ್ಧಕ್ಕೆ ಮುರಿದುಕೊಂಡು ಬಂದು ತವರು ಸೇರಿದವರೇ ಆಗಿದ್ದರು. ಇಂತವರ ನಡುವೆಯೇ ಬೆಳೆದು ದೊಡ್ಡವಳಾದ ಗಂಗೆ, ಆ ಹೆಣ್ಣುಮಕ್ಕಳ ಬಗ್ಗೆ ಊರಿನವರು ಆಡುತ್ತಿದ್ದ ತಾತ್ಸಾರದ ಮಾತುಗಳನ್ನು ಕೇಳಿ, ತಾನು ಮಾತ್ರ ಯಾವ ಕಾರಣಕ್ಕೂ ಕೆಟ್ಟು ತವರು ಸೇರಬಾರದೆಂದು  ನಿರ್ಧರಿಸಿದ್ದಳು. ಅಲ್ಲದೆ ಪ್ರೀತಿ ಎಂಬ ಪದದ ಅರ್ಥವೇ ತಿಳಿಯದ ಬರಡೆದೆಯ ಅಣ್ಣಂದಿರು ತನ್ನನ್ನು ಖಂಡಿತ ತವರಿನಲ್ಲಿ ಬಾಳಿಸುವುದಿಲ್ಲ, ಎನ್ನುವುದು ಅವಳಿಗೆ ಸ್ಪಷ್ಟವಾಗಿಯೇ ತಿಳಿದಿತ್ತು. ಹಾಗಾಗಿಯೆ ಮೋಹನ  ನಿಮ್ಮಪ್ಪನ ಮನೆಗೆ ಬಿಟ್ಟು ಬರ್ತೀನಿ ಎಂದ ಮಾತು ಕೇಳಿ ಗಂಗೆ ಜಂಘಾಬಲವೇ ಉಡುಗಿದಂತೆ ಕನಲಿದಳು.

ಕೈ ಕೊಸರಿ ಮೇಲೆದ್ದವನ ಕಾಲುಗಳನ್ನು ಗಟ್ಟಿಯಾಗಿ ಬಿಗಿದಪ್ಪಿ “ನಿಮ್ಮ ದಮ್ಮಯ್ಯ ಅಂತ ಮಾತ್ ಮಾತ್ರ ಆಡಬ್ಯಾಡಿ ಕನಿ, ಉಪ್ಪೋ ಗಂಜಿನೋ, ಇದ್ರು ನಿಮ್ಜೊತೆಗೆ, ಸತ್ರು ನಿಮ್ಜೊತೆಗೆ ” ಎನ್ನುತ್ತಾ ಬಿಕ್ಕಳಿಸ ತೊಡಗಿದಳು. ಅವಳನ್ನು ತಬ್ಬಿ ಮತ್ತೆ ಸಂತೈಸಿದ ಮೋಹನ “ನಿನ್ನ್ ಅಣ್ತಮ್ಮದಿರ್ ಬೇಜವಾಬ್ದಾರಿತನ ನಂಗೊತ್ತು ಗಂಗೂ. ಅವರು ಸರಿಯಾಗಿದ್ದಿದ್ರೆ ನಿನ್ನ  ನನ್ನಂತೋನಿಗೆ ಯಾಕೆ ಕಟ್ತಿದ್ರು ಹೇಳು. ಅವ್ರಿಗೆ ಆ ಟೈಮ್ಗೆ ತಿನ್ನೋಕೆ ಕುಡಿಯೋಕೆ ಬೇಕಾಗಿತ್ತು, ಖರ್ಚಿಲ್ದಂಗೆ ನಿನ್ನೂ ಸಾಗಾಕ್ ಬೇಕಿತ್ತು, ಹಂಗಾಗಿ ನನ್ಗೆ ಕೊಟ್ಟು ಕೈ ತೊಳ್ಕೊಂಡ್ರು ಅಷ್ಟೇ.

ಪ್ರಪಂಚ ನಡಿತಿರೋದೆ ಹಾಗೆ ಗಂಗೂ. ನೀನು ಏನು ಕೊಡ್ತಿ… ಅದಕ್ಕೆ ತಿರುಗಿ ನಾನೇನು ಕೊಡ್ಬೇಕು.. ಅನ್ನೋ ಲೆಕ್ಕಾಚಾರದ್ ಮೇಲೆ. ಅಂತದ್ರಲ್ಲಿ ನಿನ್ನ ಈ ವೇದಾಂತ ಯಾವ ಕೆಲ್ಸುಕ್ಕ್ ಬರ್ತದೆ ಹೇಳು. ಯಾವಾಗ್ಲು ಪ್ರಾಕ್ಟಿಕಲ್‌ ಆಗಿ ಇರ್ಬೇಕು ಮಂಗಮ್ಮ. ಎಮೋಷನಲ್ ಆಗಿದ್ರೆ ಬದುಕೋದು ಕಷ್ಟ” ಅವಳ ಕೆನ್ನೆ ತಿವಿದು ಹೇಳಿದ. ಆ ಮಾತುಗಳ ಅರ್ಥ ತಿಳಿಯದ ಗಂಗೆ ” ಅದೇನೋ ಅಂದ್ರಲ್ಲ ಹಂಗದ್ರೇನು ಒಂಚೂರು ಬುಡ್ಸೇಳಿ”  ಎಂದಳು ಮುಗ್ಧವಾಗಿ. ಅವಳನ್ನೆಳೆದುಕೊಂಡು ಹಾಸಿಗೆಯಲ್ಲಿ ಉರುಳಿಕೊಂಡ ಮೋಹನ, ಅವಳ ಉಬ್ಬಿದ ಹೊಟ್ಟೆ ಎದೆಗಳ ಮೇಲೆ  ಕೈಯಾಡಿಸುತ್ತಾ ನೀತಿಪಾಠದಾಚೆಗಿನ ಲೋಕಪಾಠವನ್ನು ಅರ್ಥಮಾಡಿಸಲು ಹೆಣಗಾಡಿದ.

ಮೋಹನ ಏನೇ ಸಮರ್ಥನೆ ನೀಡಿದರು ಗಂಗೆಗೆ ಮಾತ್ರ ಅವನ ದುಡಿಮೆಯ ಮಾರ್ಗ ಅಪಥ್ಯವಾಗಿಯೇ ಉಳಿಯಿತು. ತನ್ನದು ಎನ್ನುವ ಯಾವ ದಾರಿಯು ಕಾಣದ್ದರಿಂದಾಗಿ ಕಣ್ಣು ಮುಚ್ಚಿ ಅವನೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಲು ಗುದ್ದಾಡ ಹತ್ತಿದಳು.

ಹೆಂಡತಿಗೆ ಎಲ್ಲಾ ವಿಚಾರಗಳು ತಿಳಿದ ಮೇಲಂತೂ ಮೋಹನ ಸಂಪೂರ್ಣ ನಿರಾಳನಾಗಿ ಬಿಟ್ಟ. ಚಕಾರವೆತ್ತದ ಅವಳ ಮೌನವನ್ನೇ ಸಮ್ಮತಿ ಎಂದುಕೊಂಡವನಂತೆ, ತಿಂಗಳು ತಿಂಗಳು ಹೊರಗಾಗಿ ಕುಳಿತ ಸುಕನ್ಯಾಳ ಮನೆಯ ಹೆಣ್ಣುಗಳನ್ನೆಲ್ಲಾ ಮೂರು ದಿನದ ಮಟ್ಟಿಗೆ ಗಂಗೆಯ ಮನೆಯಲ್ಲಿ ತಂದಿಟ್ಟು, ಅವರ ಮುಟ್ಟೆಲ್ಲ ತಿಳಿಯಾದ ನಂತರ ಮತ್ತೆ ಸುಕನ್ಯಾಳ ಮನೆಗೆ ಸಾಗಿಸುವ ಪರಿಪಾಠ ಮಾಡಿಕೊಂಡ.

ಮೊದಮೊದಲು ಗಂಗೆ ಇದನ್ನು ಕಂಡು ಇರುಸು ಮುರುಸು ಗೊಳ್ಳುತ್ತಿದ್ದಳಾದರು, ಅವಳಿಗೆ ಮೋಹನನನ್ನು ವಿರೋಧಿಸಿ ನಿಲ್ಲುವ ಧೈರ್ಯವಿಲ್ಲದೆ ತೆಪ್ಪಗಾದಳು. ಹಾಗಾಗಿ ಅವನು ಹೇಳುತ್ತಿದ್ದ ಎಲ್ಲಾ ಕಟ್ಟು ಕತೆಗಳಿಗೆ ತಲೆಯಾಡಿಸುತ್ತಾ  ಕಂಡೂ ಕಾಣದಂತೆ, ಬಂದ ಹೆಣ್ಣುಮಕ್ಕಳನ್ನೆಲ್ಲಾ ಚೆನ್ನಾಗಿ ನೋಡಿಕೊಂಡು ಕಳುಹಿಸುವುದನ್ನು ರೂಢಿಸಿಕೊಂಡಳು. ಆ ಹೆಣ್ಣು ಮಕ್ಕಳು ಕೂಡ ಗಂಗೆಯ ಮುಗ್ಧತೆ, ಒಳ್ಳೆಯತನ ಕಂಡು ಮರುಕ ಗೊಳ್ಳುತ್ತಿದ್ದರು. ಆ ಮೂರು ದಿನದಲ್ಲಿ ಇವಳನ್ನು ಸ್ವಂತ ಅಕ್ಕನಂತೆಯೇ ಭಾವಿಸಿ, ತಾವು ತಪ್ಪಿ ಕಾಲಿಟ್ಟಿರುವ ಈ ಕರಾಳ ಜಗತ್ತಿನ ಹಲವು ಕತೆಯನ್ನು  ಗಂಗೆಯ ಮುಂದೆ ಬಿಚ್ಚಿಡುತ್ತಿದ್ದರು. ಇಲ್ಲಿ ಹೆಣೆದು ಕೊಂಡಿರುವ ದೊಡ್ಡ ಜಾಲ, ತಮ್ಮನ್ನು  ಬಿಡಿಸಿ ಕೊಂಡು ಹೊರ ಹೋಗದಂತೆ ಹೇಗೆ ಸರ್ಪಗಾವಲಾಕಿ ಕಾಯುತ್ತಿದೆ ಎನ್ನುವ ಸಂಕಟವನ್ನೆಲ್ಲಾ ಅವಳ ಮುಂದೆ ತೋಡಿಕೊಂಡು  ಹಗುರಾಗಲು ಪ್ರಯತ್ನಿಸುತ್ತಿದ್ದರು.

ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಗಂಗೆ ಹೊರ ಜಗತ್ತಿನ ಬಗ್ಗೆ ಮತ್ತಷ್ಟು ಭಯಭೀತಳಾಗಿ ಮೋಹನನ ತೆಕ್ಕೆಗೆ ಮತ್ತಷ್ಟು ಒರಗ ತೊಡಗಿದಳು. ಅವರೊಳಗೆ ತಾನೂ ಒಬ್ಬ ಸಂತ್ರಸ್ತಳಂತೆನಿಸಿ ಆಗಾಗ ದುಃಖಗೊಳ್ಳುತ್ತಿದ್ದ ಗಂಗೆಯನ್ನು ಬಸುರಲ್ಲಿದ್ದ ಕೂಸು ಮಿಡುಕಾಡಿ ಎಚ್ಚರಗೊಳಿಸಿ, ಎಲ್ಲವನ್ನು ಒಪ್ಪಿಕೊಂಡು ತಣ್ಣಗೆ ನಡೆಯುವಂತೆ ಮಾಡಿ ಬಿಡುತ್ತಿತ್ತು.

ಒಂದು ದಿನ ಇದ್ದಕ್ಕಿದ್ದಂತೆ, ಗಂಗೆ ಇದುವರೆಗೂ ನೋಡದ ಒಬ್ಬ ಹುಡುಗಿಯ ಕೈ ಹಿಡಿದುಕೊಂಡು ಧುಮುಗುಡುತ್ತಾ ಒಳ ಬಂದ ಮೋಹನ, ಅಲ್ಲಿ ಕೂತಿದ್ದ ತನ್ನ ಹೆಂಡತಿಯನ್ನು ಲೆಕ್ಕಿಸದೆ ಆ ಹುಡುಗಿಯನ್ನು ಸೀದಾ ರೂಮಿನತ್ತ ಎಳೆದೊಯ್ದು ಬಾಗಿಲಿಕ್ಕಿಕೊಂಡ. ಹೀಗೆ ತನ್ನ ಕೋಣೆಗೆ ರಾಜಾರೋಷವಾಗಿ ಇನ್ನೊಂದು ಹೆಣ್ಣನ್ನು ಕರೆದುಕೊಂಡು ಹೋಗಿ ಬಾಗಿಲಿಕ್ಕಿಕೊಂಡಿದ್ದು ಗಂಗೆಗೆ ಸಂಕಟವೆನಿಸಿತು. ಒತ್ತರಿಸಿ ಬಂದ ಕೋಪವನ್ನು ತಡೆಯಲಾರದೆ  ಮನೆಯ ಹೊರ ಬಂದು ನಿಂತು ಮನಸ್ಸನ್ನು ಶಾಂತ ಗೊಳಿಸಲೆತ್ನಿಸಿದಳು. ಆದರೂ ಒಳಗಿನ ಚಡಪಡಿಕೆ ಅವಳನ್ನು ಸುಮ್ಮನಿರಲು ಬಿಡಲಿಲ್ಲ ಆಗಿದ್ದಾಗಲಿ ಎಂದು ಸೀದಾ ಎದ್ದು ರೂಮಿನತ್ತ ದಾಪುಗಾಲಿಟ್ಟಳು.

ಒಳಗಿನಿಂದ ಇಬ್ಬರ ಜೋರು ಜೋರು ದನಿ ಗಂಗೆಯ ಕಿವಿಗಪ್ಪಳಿಸಿತು. ಸದ್ದಾಗದಂತೆ ಬಾಗಿಲಿಗೆ ಕಿವಿಯಾನಿಸಿ ನಿಂತಳು. “ಆ ಬೆವರ್ಸಿ ನನ್ಗೆ ಇಂಥ ಮೋಸ ಮಾಡ್ತಾನೆ ಅಂದ್ಕೊಂಡಿರಲಿಲ್ಲ….. ನಮ್ಮಪ್ಪ ಮೇಷ್ಟ್ರು…. ನಮ್ದು ಸಂಸ್ಕಾರವಂತ್ರು ಫ್ಯಾಮಿಲಿ… ಹೀಗೆ ಅರ್ಥವಾಗದ ಹರಕು ಮುರುಕು ಮಾತುಗಳು ಗಂಗೆಯ ಕಿವಿ ಮೇಲೆ ಬೀಳುತ್ತಿತ್ತು. ಇದ್ದಕ್ಕಿದ್ದಂತೆ ಆ ಹುಡುಗಿ “ಲೇ ತಲೆಹಿಡುಕ ನನ್ನ ಬಿಟ್ಬಿಡೋ” ಎಂದು ಜೋರಗಿ ಕಿರುಚಿದಳು. ಒಳಗಿನಿಂದ ಛಟೀರನೆ ಸದ್ದು ಬಂದಿತು. ಆ ಹುಡುಗಿಯ ಕೂಗಾಟ ನಿಂತಿತು.

ದಡಾರನೆ ಬಾಗಿಲು ತೆಗೆದು ಹೊರಬಂದ ಮೋಹನ, ಅಲ್ಲಿ ನಿಂತಿದ್ದ ಗಂಗೆಯನ್ನು ಅಡಿಗೆ ಮನೆಗೆ ಕರೆದುಕೊಂಡು ಹೋಗಿ  “ನೋಡು ಇವ್ಳು ನಮ್ಮೂರ್ ಮೇಷ್ಟ್ರು ಮಗ್ಳು. ಮನೆ ಬಿಟ್ಟು ಓಡಿ ಬಂದಿದ್ದಾಳೆ. ಪಾಪ ಅವ್ರು ನನ್ಗೆ ಫೋನ್ ಮಾಡಿ ನನ್ನ ಮಗ್ಳನ್ನ ಹುಡುಕ್ಕೊಡಪ್ಪ ಅಂತ ಗೋಳಾಡಿದ್ರು. ಕಷ್ಟ ಬಿದ್ದು ಹುಡ್ಕಿ ತಂದಿದ್ದೀನಿ. ಇಲ್ಲೆ ಪಕ್ಕದ ಏರಿಯಾದಲ್ಲಿ ಅವಳ ಅಣ್ಣಂದಿರವ್ರೆ ಕರ್ಕೊಂಡು ಬಂದ್ಬಿಡ್ತೀನಿ. ಯಾವ ಕಾರ್ಣಕ್ಕೂ ರೂಮ್ ಬಾಗ್ಲು ಮಾತ್ರ ತೆಗಿಬೇಡ. ಅಕಸ್ಮಾತ್ತಾಗಿ ತೆಗೆದ್ಯೊ ನಿನ್ನ ಕತೆ ನೆಟ್ಗಿರಲ್ಲ ತಿಳ್ಕೋ” ಎಂದು ಭದ್ರವಾಗಿ ಬಾಗಿಲ ಚಿಲಕ ಹಾಕಿಕೊಳ್ಳುವಂತೆ ತಾಕೀತು ಮಾಡಿ ಹೊರನಡೆದ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು-ಬಸುರಿಯ ಹಸಿವೆಗೆ ಮಣ್ಣಿನುಂಡೆಯೇ ಮುದ್ದೆಯಾಯಿತು!

ಬಸುರಿಯ ಹಸಿವೆಗೆ ಮಣ್ಣಿನುಂಡೆಯೇ ಮುದ್ದೆಯಾಯಿತು!
(ಈ ವರೆಗೆ…) ಸುಕನ್ಯಾಳ ಮನೆ ಹೊಕ್ಕ ಗಂಗೆ ಅಲ್ಲಿ ನಡೆಯುತ್ತಿರುವ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸಿದಳು. ಅಂದವಾಗಿ ಅಲಂಕರಿಸಿದ ಮನೆ, ಕರಿಮಣಿ ಹೊತ್ತ ಸುಕನ್ಯಾ ಅವಳಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದವು. ಸುಕನ್ಯಾ, ಮೋಹನ ಮತ್ತು ಆಕೆಯ ಸಂಬಂಧ, ಅವರಿಬ್ಬರೂ ಮಾಡುತ್ತಿರುವ ಬಿಸಿನೆಸ್‌ ಬಗ್ಗೆ ವಿವರಿಸಿದಳು. ಹೆತ್ತ ಬಳಿಕ ಗಂಗೆಯನ್ನೂ ಜತೆಯಾಗುವಂತೆ ಕರೆದಳು. ಅಸಹ್ಯ ಅನ್ನಿಸಿ ಅಲ್ಲಿಂದ ಒಂದೇ ಉಸಿರಿಗೆ ಓಡಿ ಮನೆಗೆ ಬಂದ ಗಂಗೆ  ಏನು ಮಾಡಿದಳು? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಐವತ್ತೆರಡನೆಯ ಕಂತು.

ಸುಕನ್ಯಾಳ ಮಾತು ಕೇಳಿ ನಿಗಿ ಕೆಂಡವಾಗಿದ್ದ ಗಂಗೆಯನ್ನು, ಅವಳ ತಲೆ ಮೇಲೆ ಬಿದ್ದ ತಣ್ಣನೆಯ ನೀರಿನ ಹರಿವು ವಾಸ್ತವಕ್ಕೆಳೆದು ತಂದಿತು. ಕತ್ತಿ ಅಲುಗಿನ ಮೇಲೆ ನಿಂತಂತೆನಿಸಿ ಒಮ್ಮೆಗೆ ಕಂಪಿಸಿದಳು. ಒಂಟಿತನದ ಭಾವ ಭೂತದಂತೆ ಆವರಿಸಿ ಅವಳ ಕುತ್ತಿಗೆ ಹಿಸುಕಿದಂತಾಯಿತು. ಆ ಅಪರಿಚಿತ ಊರು, ಜನರ ನಡುವೆ ತನಗೆ ಇಂಬಾಗಿ ನಿಲ್ಲಬಹುದಾದ ಪ್ರೀತಿಯ ಜೀವಕ್ಕಾಗಿ ಹಂಬಲಿಸಿ ನಿರಾಶಳಾದಳು. ತನ್ನ ಬದುಕನ್ನು ಇಂತಹ ದುಸ್ಥಿತಿಗೆ ದೂಡಿದ ಅಣ್ಣಂದಿರ ಬೇಜವಾಬ್ದಾರಿತನ, ಅಪ್ಪನ ಅಸಹಾಯಕತೆ ಅವಳ ಸಂಕಟವನ್ನು ಮತ್ತಷ್ಟು ಇಮ್ಮಡಿಗೊಳಿಸಿ ಹೈರಾಣ ಗೊಳಿಸಿತು. ಮುಂದಿನ ದಾರಿಯ ತಡಕಾಟಕ್ಕಿಳಿದ ಅವಳ ಜೀವ,  ದಿಕ್ಕು ಕಾಣದೆ ಬಳಲಿ ಸೋತಿತು.

ಇದ್ದಕ್ಕಿದ್ದಂತೆ ನಿದ್ದೆಯಿಂದ ಎಚ್ಚರಗೊಂಡು ರಚ್ಚೆ ಹಿಡಿದ ಮಗುವಿನಂತೆ ಬುಗ್ಗನೆದ್ದ ಹೊಟ್ಟೆಹಸಿವು, ಗಂಗೆಯ ಕೈ ಕಾಲುಗಳನ್ನೇ ಅದುರಿಸಿ ಕಣ್ಕತ್ತಲಾಗಿಸಿ ಬಿಟ್ಟಿತ್ತು. ಬಸುರು ಕಟ್ಟಿದಾಗಿನಿಂದ ಅವಳಿಗೆ ಹೀಗಾಗುವುದು ಮಾಮೂಲಾಗಿ ಹೋಗಿತ್ತು. ಮೊದಮೊದಲು ಇದಕ್ಕೆ ಸರಿಯಾಗಿಯೆ ತಯಾರಿ ನಡೆಸಿ ಅನ್ನ ಸಾರಿನ ಪಾತ್ರೆ ಸದಾ ತುಂಬಿರುವಂತೆ ಎಚ್ಚರ ವಹಿಸುತ್ತಿದ್ದಳು. ಆದರೆ ಮೋಹನನ ಗೈರು ಹೆಚ್ಚಾದಂತೆಲ್ಲಾ ಅಡಿಗೆ ಮನೆ ಪಾತ್ರೆಗಳು ಬಣಗುಟ್ಟತೊಡಗಿ, ಕೈಕಾಲುಗಳ ನಡುಕ ತಡೆಯಲು ಕಂಬಳಿ ಹೊದ್ದು ಮಲಗಿ ಬಿಡುತ್ತಿದ್ದಳು. ಸಾಧ್ಯವೇ ಆಗದಿದ್ದಾಗ ಅಂಗಳದ ಕೆಮ್ಮಣ್ಣು ಕೆರೆದು ತನ್ನ ಒಡಲನ್ನು ಸಂತೈಸಿಕೊಳ್ಳುವುದನ್ನು ರೂಢಿಸಿಕೊಂಡು ಬಿಟ್ಟಿದ್ದಳು. ಅವತ್ತು ಕೂಡ ಇನ್ನೇನು ಕುಸಿದೇ ಬಿಟ್ಟೆ ಎಂದುಕೊಂಡವಳು, ತನ್ನ ಅಂತರ್ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ  ಚಂಬು ಬಚ್ಚಲ ನೀರನ್ನೆ ಗಟಗಟನೆ ಗುಟುಕರಿಸಿ ಬೆತ್ತಲ ಮೈಗೆ ಸೀರೆ ಸುತ್ತಿ ಅಡಿಗೆ ಕೋಣೆಗೆ ಧಾವಿಸಿದಳು.

ಡಬ್ಬದ ತಳ ಸೇರಿದ್ದ ಹಿಡಿ‌ ಅಕ್ಕಿಯನ್ನೆ ಮುಕ್ಕಿ, ಸಮಾಧಾನವಾಗದೆ  ಬಾಗಿಲು ತೆರೆದು ಮೆಲ್ಲನೆ ಹೊರಗಿಣುಕಿದಳು. ಅಕ್ಕಪಕ್ಕದ ಮನೆಗಳೆಲ್ಲ ಬಾಗಿಲು ಬಡಿದುಕೊಂಡು ಮುಗುಮ್ಮಾಗಿ ಕೂತಿದ್ದವು. ಒಂದು ಲೋಟ ನೀರಿಡಿದು ಹೊರಬಂದವಳೇ ಮನೆಯ ಪಕ್ಕದಲ್ಲಿ ತಾನೇ ಕೆರೆದು ಕೆರೆದು ಗುಣಿಯಾಗಿಸಿದ್ದ ನೆಲದ ಬಳಿ ಕೂತು ಒದ್ದೆಯಾದ ಆ ಕೆಮ್ಮಣ್ಣನ್ನು  ಸಣ್ಣ ಸಣ್ಣ ಉಂಡೆಗಳನ್ನಾಗಿಸಿ ಮುದ್ದೆಯಂತೆ ನುಂಗತೊಡಗಿದಳು.

ಬೆನ್ನು ತಿರುಗಿಸಿ ಕೂತಿದ್ದ ಗಂಗೆಯತ್ತ ಸದ್ದಾಗದಂತೆ ಮೆಲ್ಲನೆ ಹೆಜ್ಜೆ ಇಕ್ಕುತ್ತಾ ಕಣ್ಣುಮುಚ್ಚಲು ಬಂದ ಎದುರು ಮನೆಯ ಎಂಟು ವರ್ಷದ ಚೋಟಿ ಗಂಗೆ ಮಣ್ಣು ತಿನ್ನುವುದನ್ನು ದಂಗಾಗಿ ನೋಡಿ, “ಛೀ ಆಂಟಿ ಯು ಆರ್ ಬ್ಯಾಡ್”  ಎಂದು ಕೂಗುತ್ತಾ ಓಡಿ ಹೋಗಿ ತನ್ನ  ಮಮ್ಮಿಯನ್ನು ಎಳೆದು ತಂದಿತು. ಹಾಗೆ ಒಬ್ಬೊಬ್ಬರೇ ಸೇರಿ ಒಂದು ಪುಟ್ಟ ಗುಂಪೆ ಅಲ್ಲಿ ಸೇರಿ ಕೊಂಡಿತು. ಹಲವರು ಇತ್ತ ತಲೆ ಹಾಕದ ಮೋಹನನ ಬಗ್ಗೆ ಅಣಕವಾಡಿಕೊಂಡರೆ, ಇನ್ನು ಕೆಲವರು ಬಸುರಿ  ಬಯಕೆಯ ಬಗ್ಗೆ ಕಂತೆ ಪುರಾಣಗಳನ್ನೆ ಬಿಚ್ಚಿ ಕೂತರು. ಯಾರು ಹಿಡಿ ಅನ್ನ ನೀಡಿ ಬಸುರಿಯ ಹಸಿವು ತಣಿಸುವ  ದೊಡ್ಡ ಮನಸ್ಸು ಮಾಡಲೇ ಇಲ್ಲ.

ಇವರೆಲ್ಲರ ಆಹಾಕಾರ, ಓಹೋಕಾರಗಳ ಸದ್ದು ಕಿವಿಮೇಲೆ ಬಿದ್ದಿತೋ ಎಂಬಂತೆ, ಅಸಮಾಧಾನದ ಕಿಡಿಕಾರುತ್ತಲೇ  ಪ್ರತ್ಯಕ್ಷನಾದ ಮೋಹನ, ತನ್ನ ಮನೆ ಮುಂದೆ ಜಮಾಯಿಸಿದ್ದ ಹೆಂಗಸರನ್ನು ಕಂಡು ಕ್ಷಣ ಹಿಂಜರಿದು ನಿಂತ. ಬೆನ್ನು ತಿರುಗಿಸಿ ಕೂತಿದ್ದ ಗಂಗೆಯನ್ನು ಗುರುತಿಸಿ ಸ್ವಲ್ಪ ಸಮಾಧಾನಗೊಂಡು ಸರ್ರನೆ ಒಳನಡೆದುಬಿಟ್ಟ. ಅವನ ಹಿಂದೆಯೆ ಓಡಿಬಂದ ಚೋಟಿ ” ಅಂಕಲ್ ನಿಮ್ಗೆ ಗೊತ್ತಾ  ಆಂಟಿ ಮಣ್ ತಿನ್ತಿದ್ರು ಅಂತ.. ಹಾಗೆ ತಿಂದ್ರೆ ಹೊಟ್ಟೆ ನೋವು ಬರುತ್ತೆ ಅಂತ ಮಮ್ಮಿ ಹೇಳ್ತಿದ್ರು. ಈ ಆಂಟಿಗೆ ಬುದ್ದಿನೇ ಇಲ್ಲ. ನೀವು ಪನಿಷ್ ಮಾಡಿ ಅಂಕಲ್ ಆಗ ತಿನ್ನೋದು ಬಿಡ್ತಾರೆ”. ಎಂದು ಹೇಳಿ ಬರ್ರನೆ ಹೊರಗೋಡಿತು. ಅಡಿಗೆ ಮನೆಯನ್ನೆಲ್ಲ ಹೊಕ್ಕಾಡಿ ಬಂದ ಮೋಹನ ಪಶ್ಚಾತಾಪದಿಂದ ಕುಸಿದು ಕುಳಿತ.

ಇತ್ತ ಜನರ ಲೊಚಗುಟ್ಟುವಿಕೆಯಿಂದ ಕಂಗಾಲಾಗಿ ಮುದುಡಿ ಹೋಗಿದ್ದ ಗಂಗೆ, ಅವರೆಲ್ಲರು ಕರಗುತ್ತಲೂ ಅದುವರೆಗೂ ತಡೆದಿಟ್ಟಿದ್ದ  ದುಃಖವನ್ನು ಹೊರಚೆಲ್ಲುತ್ತಾ ಬಂದು  ತಲೆ ತುಂಬಾ ಕಂಬಳಿ ಗುಬ್ಬರು ಹಾಕಿ ಮಲಗಿ ಬಿಟ್ಟಳು. ಗಂಗೆಯನ್ನು ಮಾತಾಡಿಸುವ ಧೈರ್ಯವಾಗದೆ, ಮೋಹನ ಬಾಗಿಲು ಮುಂದಕ್ಕೆಳೆದುಕೊಂಡು ಹೊರಬಂದವನೇ ಮಾರ್ಕೆಟಿಗೆ ನುಗ್ಗಿ, ಮೊಟ್ಟೆ ಸೊಪ್ಪು ತರಕಾರಿ ಹಣ್ಣು ಹಂಪಲುಗಳೊಂದಿಗೆ ಎರಡು ಬಿರಿಯಾನಿಯನ್ನು ಕಟ್ಟಿಸಿಕೊಂಡು ಮನೆಗೆ ಬಂದ.

ಹಸಿವು ತಾಳಲಾರದೆ ಮುಲುಕುತ್ತಾ ಮಲಗಿದ್ದ ಗಂಗೆಯ ಬಳಿ ಕೂತ ಮೋಹನ, ಅವಳು ಹೊದ್ದ ಮುಸುಕೆಳೆದು ಮುಖದ ತುಂಬಾ ಲೊಚ ಲೊಚನೆ ಮುತ್ತಿನ ಮಳೆಗರೆದ. “ಇನ್ನೊಂದ್ಸಾರಿ ಹೀಗೆ ಮಾಡಲ್ಲ ಪ್ಲೀಸ್ ಅಳ್ಬೇಡ ಗಂಗೂ ಎದ್ದೇಳು ಊಟ ಮಾಡು” ಎಂದು  ಅವಳೊಂದಿಗೆ ತಾನು ಕಣ್ಣೀರು ಸುರಿಸುತ್ತಾ ಕುಳಿತ. ಹೆಚ್ಚು ಮೊಂಡಾಟ ಆಡಲು ಅವಕಾಶವನ್ನೇ ಕೊಡದೆ ಭೂತದಂತೆ ಕಾಡುತ್ತಿದ್ದ ಅವಳ ಬಸುರ ಹಸಿವು, ಅವಳು ತಟ್ಟನೆ ರಾಜಿಮಾಡಿಕೊಳ್ಳುವಂತೆ ಮಾಡಿಬಿಟ್ಟಿತು. “ಗಂಡುಸ್ರು ಕಣ್ಣೀರಾಕಿದ್ರೆ ಮನೆಗೆ ದರಿದ್ರ ಬತ್ತದಂತೆ ಅಳ್ಬೇಡಿ ತಗಿರಿ” ಎನ್ನುತ್ತಾ ಮೂಗಿಗೆ ಬಡಿಯುತ್ತಿದ್ದ  ಬಿರಿಯಾನಿ ಘಮಲಿನತ್ತ ತನ್ನ ದೃಷ್ಟಿ ಹರಿಸಿದಳು.

ಗರ್ಭನಿಂತ ದಿನದಿಂದಲೂ ಅವಳ ರಾಕ್ಷಸ ಹಸಿವನ್ನು ಕಣ್ಣಾರೆ ಕಂಡಿದ್ದ ಮೋಹನ ತಡಮಾಡದೆ ತಾನು ತಂದ ಬಿರಿಯಾನಿಯ ಎರಡೂ ಪೊಟ್ಟಣವನ್ನು ಅವಳಿಗೆ ತಿನ್ನಿಸಿ ನೀರುಕುಡಿಸಿ ನಿರಾಳಾದ. ಹೊಟ್ಟೆ ತುಂಬಿದ ಗಂಗೆಯ ಮನಸ್ಸೆಲ್ಲಾ  ಈಗ ಸುಕನ್ಯಾಳ ಕಡೆಗೆ ಹರಿದು ಮುಖಗಂಟಿಕ್ಕಿದಳು ” ಅಲ್ಲ ಕನಿ ನಾನು ನಿಮ್ಗೆ ಏನ್ ಅನ್ಯಾಯ ಮಾಡಿದ್ದೆ ಅಂತ ನನ್ಗೆ ಮೋಸ ಮಾಡಿದ್ರಿ. ಆ ಸುಕನ್ನಿನ ಮದ್ವೆ ಆಗಿದ್ದೀರಂತೆ..?  ನೀವು ಮಾಡಿದ್ದು ತಪ್ಪಲ್ವ”  ಎಂದು ಸೊರ ಸೊರ ಮೂಗೆಳೆದು ಕೊಂಡಳು.

ಅವಳನ್ನು ಬಾಚಿ ಇನ್ನಷ್ಟು ತಬ್ಬಿ ಕುಳಿತ ಮೋಹನ ” ಅಯ್ಯೋ ಗಂಗೂ ಅವಳು ಹಠ ಮಾಡ್ತಿದ್ಲು ಅಂತ  ನಾಟ್ಕಕ್ಕೆ ತಾಳಿ ಕಟ್ಟಿದ್ದೀನಷ್ಟೆ. ನನ್ಗೆ ಬಿಸ್ನೆಸ್ ಮುಖ್ಯವೆ ಹೊರ್ತು ಈ ಮದುವೆ ಮುಂಜಿ ಅಲ್ಲ. ನೋಡು ಮನಪೂರ್ತಿಯಾಗಿ ನೀನು ಮಾತ್ರ ನನ್ನ್ ಹೆಂಡ್ತಿ ಇನ್ಯಾರ್ ಬಂದು ಹೋದ್ರು ಬಿಸ್ನೆಸ್ ಪರ್ಪಸ್ ಅಷ್ಟೆ ಗಂಗೂ, ಇನ್ಮುಂದೆ ಈ ಯಾವುದ್ರು ಬಗ್ಗೆನು ನೀನು ತಲೆಕೆಡಿಸ್ಕೋಬೇಡ. ನಿನ್ಗೆ ಯಾವ ತೊಂದ್ರೆನೂ ಆಗ್ದಂಗೆ ನೋಡ್ಕೊಳ್ಳೊ ಜವಾಬ್ದಾರಿ ನಂದು. ಇನ್ಯಾವತ್ತೂ ನೀನು ಆ ಮನೆ ಹತ್ರ ಮಾತ್ರ  ಕಾಲಿಡೋಕೆ ಕೂಡ್ದು. ನೀನು ಮೈಲಿಗೆ ಆಗೋದು ನನಗೆ ಇಷ್ಟ ಇಲ್ಲ” ಎಂದು ಅವಳ ಹಣೆಗೆ ಗಟ್ಟಿಯಾಗಿ ಮುತ್ತಿಕ್ಕಿದ. ಅವನ ಈ ಮಾತಿನಿಂದ ಇರುಸು ಮುರುಸುಗೊಂಡ ಗಂಗೆ ” ಅಲ್ಕನಿ ಅವ್ರು ನನ್ನಂಗೆ ಹೆಣ್ಮಕ್ಳಲ್ವ… ಅವ್ರ ಬದ್ಕ್ ಹಾಳ್ಮಾಡದು ಎಷ್ಟು ಸರಿ ಹೇಳಿ…. ಅವ್ರ್ ಶಾಪ ನಮ್ಗೆ ತಟ್ಟೋದು ಬ್ಯಾಡ.  ಈ ಕುಲ್ಗೆಟ್ ಕೆಲ್ಸ  ಬುಟ್ಬುಡಿ. ಇಬ್ರು ಗಟ್ಮುಟ್ಟಾಗಿದ್ದೀವಿ ಯಾವುದಾದ್ರು ಫ್ಯಾಕ್ಟ್ರಿ ಸೇರ್ಕೊಳನ ನಡಿರಿ. ನಮ್ಮಿಬ್ರು ಹೊಟ್ಟೆಗೆ ಇನ್ನೆಷ್ಟು ಬೇಕು ಹೇಳಿ” ಎಂದು ಹೇಳಿದ್ದೆ ತಡ,  ಮೋಹನ ತಬ್ಬಿದ್ದ ತನ್ನ ಕೈ ಸಡಿಲಿಸಿ “ನೋಡು ಗಂಗೂ ನೀನು ನನ್ಗೆ ಬುದ್ದಿಹೇಳೋಕ್ ಬರ್ಬೇಡ. ನಿನ್ನ್  ವೇದಾಂತದಿಂದ ಹೊಟ್ಟೆ ತುಂಬೋದೆ ಹೊರ್ತು, ನನ್ನ್ ಕನಸುನ್ನ ನನುಸ್ ಮಾಡ್ಕೊಳ್ಳೋಕೆ ಖಂಡಿತಾ ಆಗಲ್ಲ. ನಾನು ಬಾಳ ದೂರ ಬಂದಾಗಿದೆ. ಈಗಷ್ಟೇ ನಾನು ಅಂದುಕೊಂಡಿದ್ದೆಲ್ಲ ನಡಿಯೋಕೆ ಶುರುವಾಗಿದೆ ಅಂತದ್ರಲ್ಲಿ ಇಂತ ಅಡ್ಮಾತಾಡ್ತಿಯಲ್ಲ. ನೋಡು ನನ್ನ ಒಪ್ಕೊಂಡು ಬದುಕಂಗಿದ್ರೆ ನಂಜೊತೆ ಇರ್ಬಹುದು. ಇಲ್ಲ ಅಂದ್ರೆ ಹೇಳು ನಿಮ್ಮಪ್ಪನ ಮನೆಗೆ ಬಿಟ್ಟು ಬರ್ತೀನಿ ವೇದಾಂತ ಹಾಡ್ಕೊಂಡು ಕೂತ್ಕೊಳಿವಂತೆ”  ಎಂದು ಹೇಳಿ ಅವಳ ಕೈ ಕೊಸರಿ ತಟ್ಟನೆ  ಮೇಲೆದ್ದ…

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು ಓದಿದ್ದೀರಾ? ಸೆಟೆದು ನಿಂತ ಗಂಗೆಯ ಸ್ವಾಭಿಮಾನ

ಸೆಟೆದು ನಿಂತ ಗಂಗೆಯ ಸ್ವಾಭಿಮಾನ
(ಈ ವರೆಗೆ…)ಮನೆಯಲ್ಲಿ ಊಟಕ್ಕೆ ಪರದಾಡುವ ಸ್ಥಿತಿ ಗಂಗೆಗೆ ಬಂದರೂ ಮೋಹನ ಈಚೆ ತಲೆಹಾಕಲಿಲ್ಲ. ತರಕಾರಿ ಮಾರುವ ಹೆಂಗಸಿಗೆ ಗಂಗೆಯ ಪರಿಸ್ಥಿತಿ ತಿಳಿದು ಮೋಹನ ಅಲ್ಲೇ  ಪಕ್ಕದ ರಸ್ತೆಯ ಮನೆಯಲ್ಲಿ ಇರುವುದಾಗಿ ಹೇಳುತ್ತಾಳೆ. ಗಂಗೆ ಆತನನ್ನು ನೋಡಲು ಆ ಮನೆಗೆ ಹೋಗುತ್ತಾಳೆ. ದೊಡ್ಡದಾದ ಮನೆಯಲ್ಲಿ ಸುಕನ್ಯಾ ಮತ್ತಿತರರು ಇರುತ್ತಾರೆ. ಆ ಮನೆಯಲ್ಲಿ ಗಂಗೆ ಏನು ನೋಡಿದಳು? ಸುಕನ್ಯಾ ಏನು ಕೇಳಿದಳು? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಐವತ್ತೊಂದನೆಯ ಕಂತು.

ಸುಕನ್ಯಾ ಇನ್ನೇನು ಮೋಹನ ತನಗೆ ಪರಿಚಯವಾದ ಕತೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಅಕ್ಕಪಕ್ಕದ ಕೋಣೆಗಳಿಂದ ಒಂದಾದ ಮೇಲೊಂದು ಅಲರಾಂಗಳು ಹೊಡೆದು ಕೊಳ್ಳತೊಡಗಿದವು. ಅಲರಾಮಿನ ತಲೆ ಮೇಲೆ ಹೊಡೆದು ಒಬ್ಬೊಬ್ಬರೇ ಹುಡುಗಿಯರು ಕಣ್ಣುಜ್ಜಿ ಕೊಳ್ಳುತ್ತಾ ಹೊರಬಂದರು. ಅಲ್ಲೇ ಟೇಬಲ್ಲಿನ ಮೇಲಿದ್ದ ನೋಟ್ ಬುಕ್ ತೆರೆದ ಸುಕನ್ಯಾ, ಒಬ್ಬೊಬ್ಬ ಹುಡುಗಿಯ ಹೆಸರನ್ನು ಕರೆಯುತ್ತಾ, ಆ ದಿನ ಅವರು ಬುಕ್ ಆಗಿರುವ ವ್ಯಕ್ತಿ, ಸಮಯ, ಸ್ಥಳಗಳ ಬಗ್ಗೆ ಮಾಹಿತಿ ನೀಡಿದಳು. “ಇವತ್ತು ಭಾನುವಾರ ಗಿರಾಕಿಗಳ ಸಂಖ್ಯೆ ಜಾಸ್ತಿ ಇರ್ತದೆ. ಯಾರು ಒಂದೇ ಕಡೆ ಹೆಚ್ಚು ಹೊತ್ತು ಅಂಟ್ಕೊಂಡು ಕೂತ್ಕಬೇಡಿ. ಕೆಲ್ಸ ಮುಗಿತಿದ್ದಂಗೆ ಹೊರಟು ಬಂದ್ಬಿಡಿ. ತಡ ಮಾಡ್ಬೇಡಿ. ಬೇಗ ರೆಡಿಯಾಗಿ  ಹೋಗಿ” ಎಂದು ತಾಕಿತು ಮಾಡಿ ಅವರನ್ನೆಲ್ಲ ಅತ್ತ  ಕಳುಹಿಸಿದಳು.

ಬಲಗೈ ಬಂಟಳಾಗಿದ್ದ ತನ್ನ  ಸೋದರ ಸಂಬಂಧಿ, ವಸುಧಳನ್ನು ಕರೆದು ” ವಸು ಇವತ್ತು ಭಾನುವಾರ ಅನ್ನೋದು ನೆನಪಿದೆ ತಾನೇ. ಹೆಚ್ಚಾಗಿ ಆಫೀಷಿಯಲ್ಸೆ ಬರ್ತಿರೋದು. ಹೊಸದಾಗಿ ಬಂದಿರೊ ಆ ಸೋನು, ಬೀನ, ಗೀತಾ, ವಿಮಲಾ ಇವರನ್ನೆಲ್ಲ ಮನೆಯಲ್ಲೆ ಇಟ್ಕೋ, ಹೊರಗೆ ಕಳಿಸ್ಬೇಡ. ಬಂದವರ ಜೊತೆ ಹೇಗೆ ಖುಷಿಯಾಗಿ ಇರಬೇಕು, ಅವ್ರು ಮತ್ತೆ ಮತ್ತೆ ಬರೋಹಾಗೆ ಹೇಗೆ ಮಾಡ್ಬೇಕು, ಅನ್ನೊ ವಿಚಾರಗಳನ್ನೆಲ್ಲಾ ಅವರಿಗೆ ಸರಿಯಾಗಿ ಅರ್ಥಮಾಡ್ಸು. ಯಾಕೋ ಒಂದು ವಾರದಿಂದ ಆ ಇನ್ಸ್ಪೆಕ್ಟರ್ ಸಾಹೇಬ್ರು ನನ್ನ ಬೆನ್ನು ಬಿದ್ದವ್ರೆ.   ಇವತ್ತಿಡೀ ದಿನ ನಾನು ಅವರ್ಜೊತೆಗೆ ಇರ್ಬೇಕಾಗಬಹುದು. ಚಿಂತೆ ಮಾಡ್ಬೇಡ.. ಮೋಹನ್ಗೆ ಎಲ್ಲೂ ಹೋಗ್ಬೇಡಿ ಇವತ್ತು ಮನೆಯಲ್ಲೆ ಇರಿ ಅಂತ ಹೇಳಿದ್ದೀನಿ” ಎಂದು ಅವತ್ತಿನ ಕೆಲಸಕಾರ್ಯಗಳ ಒಂದು ದೊಡ್ಡ ಪಟ್ಟಿಯನ್ನೇ ಅವಳಿಗೆ ಕೊಟ್ಟು ಕಳುಹಿಸಿದಳು.

“ಬೀನಾ…” ಎಂದು ಕರೆದೊಡನೆ, ಕೆಲಗಳಿಗೆಯ ಹಿಂದಷ್ಟೇ ಬಾಗಿಲಲ್ಲಿ ರಂಗೋಲಿ ಹಾಕುತ್ತಾ ಕುಳಿತಿದ್ದ ಬೆದರುಗಣ್ಣಿನ ಹುಡುಗಿ ಸುಕನ್ಯಾಳ ಎದುರು  ಪ್ರತ್ಯಕ್ಷವಾದಳು. “ಬೆಳಗ್ಗೆ ಆರಕ್ಕೆ ಬರ್ಬೇಕಿದ್ದ ವರ್ತ್ನೆ ಹುಡ್ಗ ಯಕೋ ಇನ್ನೂ ಬಂದಿಲ್ಲ. ಕಾಯ್ತಾ ಕೂರೋದು ಬೇಡ.  ಇವರೆಲ್ಲ ಹೊರ್ಟು ರೆಡಿಯಾಗೋದ್ರೊಳ್ಗೆ ಒಂದೆಜ್ಜೆ ನೀನು, ವಿಮಲ ಹೋಗಿ ಮುಂದಿನ ತಿರುವಿನಲ್ಲಿರೋ ಪಂಕಜ್ಜಿ ಅಂಗ್ಡಿಲಿ ಒಂದ್ ಮೂರ್ ಮಾರು ಮಲ್ಲಿಗೆ ಹೂ ಕಟ್ಟಿಸ್ಕೊಂಡ್ ಬನ್ನಿ.  ತಲೆ ಬಗ್ಗಿಸಿದವರು ಮತ್ತೆ ಇಲ್ಲೆ ಬಂದು ತಲೆ ಎತ್ತ್ಬೇಕು ಗೊತ್ತಾಯ್ತಲ್ಲ” ಎಂದು ಸಣ್ಣದಾಗಿ ಗದರಿ ಅವಳನ್ನು ಅತ್ತ ಕಳುಹಿಸಿದಳು.

ಬಿಟ್ಟ ಕಣ್ಣು ಬಿಟ್ಟಂತೆ ಇದೆಲ್ಲವನ್ನು ನೋಡುತ್ತಾ ಕೂತಿದ್ದ ಗಂಗೆ. “ಯವ್ವೇ… ಏಟೊಂದ್ ಜನ ಹುಡ್ಗಿರೂ…ಯಾರ್ ಸುಕನ್ನಿ ಇವ್ರೆಲ್ಲ…” ಎಂದು ಬಾಯಿ ಮೇಲೆ ಕೈ ಇಟ್ಟು ಕೇಳಿದಳು.  ತಾನು ಕುಳಿತ ಆರಾಮಕುರ್ಚಿಯನ್ನು ಹಿಂದಕ್ಕೂ ಮುಂದಕ್ಕೂ ಆಡಿಸತೊಡಗಿದ ಸುಕನ್ಯಾ, “ಇದು ನಾನು ಮೋಹನ್ ಸೇರಿ ನಡೆಸ್ತಿರೋ ಬಿಸ್ನೆಸ್” ಎಂದಳು. ಬಿಸ್ನೆಸ್ ಎಂದ ಕೂಡಲೇ ಗಂಗೆಗೆ, ಮೋಹನ ತನ್ನನ್ನು ಮದುವೆ ಮಾಡಿಕೊಂಡು  ಕರೆದುಕೊಂಡು ಹೋಗಿದ್ದ, ಆ ಮನೆ ನೆನಪಾಯಿತು.

ಮೋಹನ ಆ ಮನೆಯಂತೆಯೇ ಈ ಮನೆಯನ್ನೂ  ಬಹಳ ಆಕರ್ಷಕವಾಗಿ ಕಾಣುವಂತೆ ಅಲಂಕರಿಸಿದ್ದನ್ನು ಗಮನಿಸಿದಳು ಗಂಗೆ.  ಮನೆಯ ತುಂಬಾ ಬೆಲೆ ಬಾಳುವ ಸಾಮಾನುಗಳು ಕಣ್ಣು ಕುಕ್ಕುತ್ತಿದ್ದವು. ದುಬಾರಿ ಬೆಲೆಯ ಸೋಫಾ ಸೆಟ್, ಡೈನಿಂಗ್ ಟೇಬಲ್, ಟಿ. ವಿ, ಶೋಕೇಸನ್ನು ಅಲಂಕರಿಸಿದ್ದ ಚಂದನೆಯ ಸಣ್ಣಪುಟ್ಟ  ಸಾಮಾಗ್ರಿಗಳು. ಹಾಲಿನ ಮಧ್ಯದಲ್ಲಿ ತೂಗಾಡುತ್ತಿದ್ದ ಬಾರಿ ಗಾತ್ರದ ವಿದ್ಯುತ್ ಅಲಂಕೃತ ದೀಪ, ಗೋಡೆಯಲ್ಲಿ ನೇತಾಡುತ್ತಿದ್ದ ಬಗೆಬಗೆಯ ಪೇಂಟಿಂಗ್ಸ್ ಇವೆಲ್ಲವೂ ನೋಡಿದವರನ್ನು ಮಂತ್ರಮುಗ್ಧರನ್ನಾಗಿಸಿ ಇನ್ನಷ್ಟು ಹೊತ್ತು ಅಲ್ಲಿಯೇ ಕೂರುವಂತೆ ಪ್ರೇರೇಪಿಸುತ್ತಿದ್ದವು.

ಮೋಹನ ತನಗೆ ಪರಿಚಯವಾದಂದಿನಿಂದ ಇಂದಿನವರೆಗೂ ಅವನ ಸಾಂಗತ್ಯದಲ್ಲಿ ತಾನು ಕಂಡುಂಡ ಸಿಹಿಕಹಿಗಳನ್ನೆಲ್ಲ ಯಾವುದೇ ಮುಚ್ಚುಮರೆ ಇಲ್ಲದೆ ಹೇಳಿಕೊಂಡಳು ಸುಕನ್ಯಾ. ಅಷ್ಟೇ ಅಲ್ಲದೆ ತಾನು ಆಗಾಗ ಭೋಗನೂರಿಗೆ ಹೋಗಿ ಬರುವ ವಿಚಾರವನ್ನು, ವಾರದ ಕೆಳಗೆ ಮೋಹನನ ಅವ್ವ ಚಿಕ್ಕತಾಯಮ್ಮ ಮತ್ತು ತಂಗಿ ರತ್ನ ಇಲ್ಲಿಗೆ ಬಂದು ಒಂದೆರಡು ದಿನ ಇದ್ದು, ಹೊಸ ಬಟ್ಟೆಯ ಗಂಟಿನೊಂದಿಗೆ  ಸಂಭ್ರಮದಿಂದ ಊರು ಸೇರಿದ ಸುದ್ದಿಯನ್ನೆಲ್ಲಾ ಬೀಗುತ್ತಾ ಹೇಳಿ ಕೊಂಡಳು ಸುಕನ್ಯಾ.

ಇದನ್ನೆಲ್ಲಾ ಉಸಿರು ಬಿಗಿ ಹಿಡಿದು ಕೇಳಿಸಿಕೊಳ್ಳುತ್ತಿದ್ದ ಗಂಗೆಯನ್ನು, ಸುಕನ್ಯಾಳ  ಎದೆ ಮೇಲೆ ರಾರಾಜಿಸುತ್ತಿದ್ದ ಗಟ್ಟಿಮುಟ್ಟಾದ ಚಿನ್ನದ ತಾಳಿ ಸರ ಅಣಕಿಸಿದಂತೆನಿಸಿತು. ಗಂಗೆ ಪೇಲವವಾಗಿ ನೇತಾಡುತ್ತಿದ್ದ ತನ್ನ  ಕರಿಮಣಿ ಸರದತ್ತ ಒಮ್ಮೆ ಕಣ್ಣಾಡಿಸಿದಳು. ಎದೆಗೊದ್ದಂತೆ ಸಂಕಟ ಉಕ್ಕಿಬಂದಿತು. ಪರಿಚಿತಳ ಸೋಗುಹಾಕಿ ತನ್ನ ಹಿಂದೆ ಬಂದು ಈ ಮನೆ ಸೇರಿಕೊಂಡ ಸುಕನ್ಯಾಳ ಮುಂದೆ ತನ್ನ ದುಃಖ ತೋರಗೊಡಬಾರದೆಂದು ನಿರ್ಧರಿಸಿದಳು ಗಂಗೆ.

ಬಾಯಿಗೆ ಬೀಗ ಹಾಕಿದವಳಂತೆ ತುಟಿಕ್ ಪಿಟಿಕ್ ಎನ್ನದೆ ಎದ್ದು ಹೊರ ನಡೆಯಲನುವಾದಳು. ಗಂಗೆಯನ್ನು ತಡೆದು ನಿಲ್ಲಿಸಿದ ಸುಕನ್ಯಾ “ನಿನ್ನನ್ನ ನಂಬಿಕೊಂಡಿದ್ದಿದ್ರೆ  ಅವ್ರು ಇಷ್ಟರ ಮಟ್ಟಿಗೆ ಬೆಳೆದು ನಿಲ್ಲಕ್ ಆಗ್ತಿತ್ತಾ. ನಮ್ಮಿಬ್ಬರಿಗೂ ಬೇಕಾಗಿದ್ದು  ರಾಯಲ್ ಲೈಫ್. ಅದನ್ನ ನಮ್ಮ ಪರಿಶ್ರಮದಿಂದ  ಪಡ್ಕೊಂಡು ಎಂಜಾಯ್ ಮಾಡ್ತಿದ್ದೀವಿ. ನೋಡು ಬ್ಯೂಟಿನಲ್ಲಿ ನನ್ಗೂ ನಿನ್ಗೂ ತಾಳೆನೆ ಆಗೋದಿಲ್ಲ ಅಷ್ಟು ಚೆನ್ನಾಗಿದ್ಯ ನೀನು. ಸ್ವಲ್ಪ ಮನಸ್ಸು ಮಾಡು..ಆ ಮೊಗುನ ಹೆತ್ತು ನಿಮ್ನಪ್ಪನ ಮನೆಗೆ ಬಿಟ್ಟು ಬಾ. ಒಟ್ಟಿಗೆ ಜೀವ್ನ  ಮಾಡೋಣ. ನಾವು ಮೂರು ಜನ ಸೇರಿ  ಬಿಸ್ನೆಸ್ನ ಇನ್ನಷ್ಟು ಇಂಪ್ರೂ ಮಾಡಿ, ಆದಷ್ಟು ಬೇಗ ಈ ಸಿಟಿಯಲ್ಲಿ ನಮ್ಮದೇ ಒಂದು ದೊಡ್ಡ ಬಂಗ್ಲೆ ಕಟ್ಟಿ ಧಾಮ್ ಧೂಮ್ ಅಂತ ಬದುಕಿ ತೋರಿಸೋಣ….

ಸುಕನ್ಯಾ ಮಾತಾಡುತ್ತಲೇ ಇದ್ದಳು. ಗಂಗೆ ತನ್ನ ಹೊಟ್ಟೆಯ ಕೂಸಿನ ಮೇಲೊಮ್ಮೆ ಕೈ ಆಡಿಸಿ, ಮಲಿನ ಆದವಳಂತೆ ಅಲ್ಲಿಂದ ಕಾಲುಕಿತ್ತು  ಒಂದೇ ಉಸಿರಿಗೆ ತನ್ನ ಮನೆ ಸೇರಿದಳು. ಬಚ್ಚಲು ಹೊಕ್ಕಿದವಳೆ ಜೋರಾಗಿ  ನಲ್ಲಿ ತಿರುಗಿಸಿ, ಮೈ ಮನಸ್ಸುಗಳ ಉದ್ವೇಗವೆಲ್ಲಾ ತಣ್ಣಗಾಗುವವರೆಗು ಅದರ ಕೆಳಗೆ ತಲೆ ಇಟ್ಟು ಕೂತೇ ಇದ್ದಳು…

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು ಓದಿದ್ದೀರಾ?  ಮನೆಯ ಹಾದಿ ಮರೆತ ಮೋಹನ

ಮನೆಯ ಹಾದಿ ಮರೆತ ಮೋಹನ
(ಈ ವರೆಗೆ…)ಸುಕನ್ಯಾಳ ಮೋಹ ಪಾಶಕ್ಕೆ ಬಿದ್ದ ಮೋಹನ ಅವಳನ್ನು ಪ್ರೀತಿಸುವ ನಾಟಕವಾಡಿ ದಂಧೆಗೆ ಬಳಸುತ್ತಾನೆ. ಇದಕ್ಕಾಗಿ ಗಂಗೆಯನ್ನು ಬೇರೊಂದು ಬಾಡಿಗೆ ಮನೆಯಲ್ಲಿ ಬಿಟ್ಟು ಆಕೆಗೆ ಸಂಶಯ ಬರದ ರೀತಿಯಲ್ಲಿ ಇರುತ್ತಾನೆ. ಕೆಲ ಸಮಯದ ಬಳಿಕ ಸುಕನ್ಯಾಳ ಮಾತು ಕೇಳಿ ಗಂಗೆಯ ಮನೆ ಕಡೆ ಹೋಗುವುದನ್ನು ಕಡಿಮೆ ಮಾಡುತ್ತಾನೆ. ಗಂಗೆ ಏನು ಮಾಡಿದಳು? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಐವತ್ತನೆಯ ಕಂತು.

ಮೋಹನ ಮನೆ ತೊರೆದು ಆಗಲೆ ಹದಿನೈದು ದಿನ ಕಳೆದಿತ್ತು. ಡಬ್ಬದಲ್ಲಿದ್ದ ಅಕ್ಕಿಕಾಳು ತಳ ಸೇರುತ್ತಾ ಗಂಗೆಯ ಆತಂಕವನ್ನು ಇಮ್ಮಡಿಗೊಳಿಸುತ್ತಿತ್ತು. ಅವಳ ಬಸುರೊತ್ತ ಹೊಟ್ಟೆಹಸಿವು ಪಾವಕ್ಕಿ ಅನ್ನ ಉಂಡರು ಇಂಗದಂತಾಗಿತ್ತು. ಆಗಲೋ ಈಗಲೋ ಮೆಲ್ಲನೆ ಮಿಸುಕಾಡಿ ತಾಯ ಜೀವವನ್ನು ಪುಳಕಗೊಳಿಸಬೇಕಾಗಿದ್ದ ಹೊಟ್ಟೆಯ ಕೂಸು, ಅಪ್ಪನೊಂದಿಗೆ ತಾನು ಜಿದ್ದಿಗೆ ಬಿದ್ದಂತೆ ಹೊಟ್ಟೆಯೊಳಗೆಲ್ಲಾ ಆರ್ಭಟಿಸಿ ಗುದ್ದಾಡಿ ಗಂಗೆಯನ್ನು ಹೈರಾಣಗೊಳಿಸುತ್ತಿತ್ತು. ಮೋಹನನ ದಾರಿ ಕಾಯುತ್ತಾ ಹಿಡಿ ಅಕ್ಕಿಯಲ್ಲಿಯೇ ಹಸಿವು ನೀಗಿಸಲು ಒದ್ದಾಡುತ್ತಿದ್ದ ಗಂಗೆ, ಅಕ್ಕಪಕ್ಕದವರ ಮುಂದೆ ತನ್ನ ಸಂಸಾರದ ಗುಟ್ಟು ಎಲ್ಲಿ ರಟ್ಟಾಗಿ ಬಿಡುವುದೋ ಎನ್ನುವ ಆತಂಕದಲ್ಲಿಯೇ   ಬಾಗಿಲು ತೆರೆಯದೆ ಒಳಗೇ ಕೂತುಬಿಟ್ಟಳು.

ಮುಂಜಾನೆ  ತಳ್ಳುಗಾಡಿಯೊಂದಿಗೆ ಬಂದು ತನ್ನ ಕಂಚಿನ ದನಿ ಎತ್ತಿ “ತರಕಾರಿಯೋಯ್… ತರಕಾರಿ…” ಎಂದು ಕೂಗು ಹಾಕಿ  ಗಂಗೆಯಿದ್ದ ಆ ಬೀದಿಯನ್ನು ಎಚ್ಚರಗೊಳಿಸುತ್ತಿದ್ದ ತರಕಾರಿ ಕೆಂಚಮ್ಮನಿಗೆ,  ತನ್ನಂತೆಯೆ ಹಳ್ಳಿಯಿಂದ ಬಂದ ಹುಡುಗಿಯಾಗಿದ್ದ ಗಂಗೆ ಎಂದರೆ ಬಲು ಇಷ್ಟ.  ತನ್ನ ಕೂಗು ಕೇಳಿದ ಕೂಡಲೇ ನಗುಮುಖದೊಂದಿಗೆ ಪ್ರತ್ಯಕ್ಷವಾಗುತ್ತಿದ್ದ ಗಂಗೆ, ಕೆಂಚಮ್ಮನೊಂದಿಗೆ ಅರಳು ಹುರಿದಂತೆ ಮಾತಾಡಿ ತನಗೆ ಬೇಕಾದ ತರಕಾರಿ ಕೊಂಡು ಒಂದು ಕಪ್ ಬಿಸಿಬಿಸಿ ಕಾಫಿ ಕುಡಿಸಿಯೇ ಕಳುಹಿಸುತ್ತಿದ್ದಳು. ಅಂತಹ ಗಂಗವ್ವ ಯಾಕೋ ವಾರದಿಂದಲೂ ತನ್ನ ಕಣ್ಣಿಗೆ ಬಿದ್ದೇ ಇಲ್ಲವಲ್ಲ ಎಂದುಕೊಂಡ ಕೆಂಚವ್ವ, ಅವತ್ತು ತನ್ನ ತಳ್ಳುಗಾಡಿಯನ್ನು ಬದಿಗೆ ನಿಲ್ಲಿಸಿ  ಗಂಗೆ ಮನೆಯ ಕದ ಬಡಿದಳು. ಮಲಗಿದ್ದ ಗಂಗೆ ಅಸ್ಉಸ್ ಎನ್ನುತ್ತಾ ನಿಧಾನವಾಗಿ ಎದ್ದುಬಂದು ಬಾಗಿಲು ತೆಗೆದಳು.

ಕೆಂಚಮ್ಮನನ್ನು ಕಂಡ ಗಂಗೆ, ಕಷ್ಟಪಟ್ಟು  ತುಟಿಯ ಮೇಲೆ ನಗು ಅರಳಿಸಿ “ಓ….ಬಾರ್ ಕೆಂಚಕ್ಕ ಒಳ್ಗೆ” ಎಂದು ಮನಸ್ಸಿಲ್ಲದ ಮನಸ್ಸಿನಲ್ಲೇ ಕರೆದಳು.  ಲವಲವಿಕೆ ಕಳೆದುಕೊಂಡು ಸೊರಗಿದಂತೆನಿಸಿದ ಗಂಗೆಯನ್ನು ಕಂಡ  ಕೆಂಚಮ್ಮ, ಅವಳ ನಿಸ್ತೇಜ ಕಣ್ಣುಗಳನ್ನು ಕೆಳಗೆಳೆದು ನೋಡಿ “ಯಾಕ್ ಗಂಗವ್ವ ಹಿಂಗ್ ಬಿಳ್ಚೊಕೊಂಡು ಕೂತಿದ್ದಿ. ಕಣ್ಣಾಗೆ ರಕ್ತಾನೆ ಕಾಣುಸ್ತಿಲ್ಲ. ವಾರ್ದಿಂದೀಚೆಗೆ ಸೊಪ್ಪುತರಕಾರಿಗೂ ಬತ್ತಿಲ್ಲ. ಯಾಕ್ ಆರಾಮಿಲ್ವೆನವ್ವ” ಎಂದು ಗಲ್ಲ ಸವರಿದಳು.

ಈ ಹದಿನೈದು ದಿನಗಳಿಂದಲೂ ತನ್ನನ್ನು ಏನು ಎತ್ತ ಎಂದು ಕೇಳುವವರಿಲ್ಲದೆ ಅನಾಥಳಂತಾಗಿದ್ದ ಗಂಗೆಗೆ, ಕೆಂಚಮ್ಮನ ಆರ್ದ್ರವಾದ ದನಿ ಕೇಳಿ ಇಷ್ಟೂ ದಿನ ತನ್ನೊಳಗೆ ಮಡುಗಟ್ಟಿದ್ದ ದುಃಖವೆಲ್ಲ ಕಟ್ಟೆ ಒಡೆದು ಕಿತ್ತು ಬಂದಿತು. ಬಾಗಿಲು ಮುಚ್ಚಿ ಕೆಂಚಮ್ಮನೊಂದಿಗೆ ತನ್ನ  ಸಂಕಟವನ್ನೆಲ್ಲ ತೋಡಿಕೊಂಡ ಗಂಗೆ “ಇಷ್ಟು ದೊಡ್ ಊರ್ನಲ್ಲಿ ಅವರುನ್ನ ಎಲ್ಲಿ ಅಂತ ಹುಡಿಕೊಂಡೋಗ್ಲಿ ಕೆಂಚಕ್ಕ” ಎಂದು ಪರದಾಡಿದಳು.

ಗಂಗೆಯ ಮಾತು ಕೇಳಿ ಆಶ್ಚರ್ಯಚಕಿತಳಾದ ಕೆಂಚಮ್ಮ “ಇದೇನ್ ಹೇಳ್ತಿದ್ದಿ ಗಂಗವ್ವ, ನೆನ್ನೆ ದಿನ ನಿನ್ ಗಂಡುನ್ನ  ಆ ನಾಲ್ಕನೇ ಬೀದಿಲಿರೋ ಹಸ್ರುಬಣ್ಣುದ್ ಮನೆತವ ನೋಡಿದಿನಿ. ಕಾಲ್ಮೇಲೆ ಕಾಲಾಕೊಂಡು ಪೇಪರ್ ತಿರುವುತಾ ಕೂತಿದ್ರು ಅಂತಿನಿ” ಎಂದು ತಲೆಮೇಲೆ ಹೊಡೆದಂತೆ ಹೇಳಿದಳು. ಹಸಿರು ಬಣ್ಣದ ಮನೆ ಎಂದ ಕೂಡಲೇ ಗಂಗೆಗೆ ತಾನು ತಿಂಗಳ ಮಟ್ಟಿಗಿದ್ದ ಆ ದೊಡ್ಡ ಮನೆ ಧುತ್ತನೆ ಕಣ್ಣ ಮುಂದೆ ಬಂದು ನಿಂತಿತು. ಇಡೀ ಬೀದಿಗೆ ಇದ್ದಿದ್ದು ಅದೊಂದೆ ಗಾಢಹಸಿರು ಬಣ್ಣದ ಮನೆಯಾಗಿದ್ದರಿಂದ ಗಂಗೆಗೆ ಕೆಂಚಮ್ಮ ಹೇಳುತ್ತಿರುವುದು ಅದೇ ಮನೆ, ಎಂದು ಕೂಡಲೆ ತಿಳಿಯಿತು.

ಕೆಂಚಮ್ಮನ ಮಾತುಕೇಳಿ ಗಲಿಬಿಲಿಗೊಂಡ ಗಂಗೆ, “ನೀನು ಹೇಳ್ತಿರದು ನಿಜ್ವಾ ಕೆಂಚಕ್ಕ. ನನ್ನ ಗಂಡುನ್ನ್ ಮಖವ ನೀನು ಸರಿಯಾಗ್ ನೋಡಿದ್ದಿ ತಾನೆ” ಎಂದು ಕೇಳಿದಳು . “ಅಯ್ಯೋ…ಅದ್ಯಾಕಂಗ್ ಕೇಳ್ತಿ ಗಂಗವ್ವ. ಅಲ್ಲ ಅವತ್ತೊಂದಿನ ನೀನು ಒಳಗ್ ಬಂದು ಕಾಫಿ ಕುಡಿ ಬಾ ಕೆಂಚಕ್ಕ ಅಂತ ಹಠ ಹಿಡ್ಕೊಂಡು ಕೂತಾಗ, ನಾನು ತಡ ಆಯ್ತದೆ ಬ್ಯಾಡ ಕನವ್ವ ಇಲ್ಲೆ ಕೊಡು ಕುಡ್ದೋಯ್ತಿನಿ ಅಂದೆ, ಆಗ ನಿಮ್ಮ್ ಮನೆಯವರ್ ಬಂದು, “ಹೋಗ್ಲಿ ಬನ್ನಿ  ಬಸ್ರಿ ಹೆಂಗ್ಸು ಅಷ್ಟೊಂದು ಕರೀತವ್ಳೆ”  ಅಂತ ಹೇಳ್ಲಿಲ್ವಾ, ಅಮೇಲೆ ತಾನೆಯ ನಾನು ಒಳಗ್ಬಂದು ಕೂತಿದ್ದು ಎಂದು ನೆನಪಿಸಿದಳು.

“ಆ ಪರಮಾತ್ಮುನ್ ಸತ್ಯುವಾಗ್ಲು ನಾನು ನೆನ್ನೆ ದಿನ ನೋಡಿದ್ದು ನಿಮ್ಮನೆ ಅವ್ರುನ್ನೆ ಕನವ್ವ.  ಅಂತೂ, ಇದೇನು ಇಟ್ ಹೊತ್ಗೆ ಇಲ್ ಬಂದು ಕೂತ್ಕಂಡವ್ರಲ್ಲ ಅಂದ್ಕೊಂಡೆ. ಅದ್ಯಾಕೋ ಮಾತಾಡ್ಸಕೆ ಸರಿ ಬರ್ಲಿಲ್ಲ. ಹಂಗಾಗಿ ಕಾಣ್ದೋಳಂಗೆ ತಲೆ ಬಗ್ಗುಸ್ಕೊಂಡು ಗಾಡಿ ನೂಕ್ಕೊಂಡು ಬಂದ್ಬುಟ್ಟೆ. ಅಲ್ಲ ಗಂಗವ್ವ ಬಾಗ್ಲು ಹಾಕ್ಕೊಂಡು ಚಿಂತೆ ಮಾಡ್ತಾ ಕೂತ್ರೆ ಸಮಸ್ಯೆ ಬಗೆಹರ್ದಾತೇ.., ನಾಕ್ಜನುದತ್ರ ಹಿಂಗಲ್ಲ ಹಿಂಗೆ ಅಂತ ಹೇಳ್ಕೊಂಡ್ರೆ ತಾನೆ ದಾರಿ ಕಾಣದು” ಎಂದು ಸಮಾಧಾನ ಮಾಡಿ, “ಏಳೇಳು ಈಗ್ಲೆ  ಆ ಮನೆತಕೋಗಿ ಇಚಾರುಸ್ಕೊಂಡು ಬಾ” ಎಂದು ಹೇಳಿ ಒಂದಷ್ಟು ಸೊಪ್ಪು ತರಕಾರಿ ತಂದು “ಬಸ್ರೆಂಗ್ಸು ಚನ್ನಾಗಿ ಉಂಡ್ಕೊಂಡು ತಿನ್ಕೊಂಡು ಇರ್ಬೇಕು ತಗೋ ವಸಿ ಏನಾರ ಮಾಡ್ಕೊಂಡು ತಿನ್ನು ನಾಳಿಕ್ ಬತ್ತಿನಿ ” ಎಂದು ಹೇಳಿ ತರಕಾರಿ ಗಾಡಿ ನೂಕುತ್ತ ಕಣ್ಮರೆಯಾದಳು.

ಅಕ್ಕಿ ಖಾಲಿಯಾಗಿಬಿಟ್ಟರೆ ಎನ್ನುವ ಭಯಕ್ಕೆ ಪಡಿಅಕ್ಕಿ ಅನ್ನದಿಂದ, ಹಿಡಿಅಕ್ಕಿ ಅನ್ನಕ್ಕೆ ಬಂದು ನಿಂತಿದ್ದ ಗಂಗೆ, ರಾತ್ರಿ ಅರೆಹೊಟ್ಟೆಯಲ್ಲಿ ಮಲಗಿದ್ದರಿಂದಾಗಿ  ಕೆಂಚಮ್ಮ ತಂದಿಟ್ಟ ಸೊಪ್ಪು ತರಕಾರಿಗಳನ್ನು ನೋಡಿದ ಕೂಡಲೆ ಹಸಿವು ಆರ್ಭಟಿಸತೊಡಗಿತು. ಒಂದೇ ಉಸಿರಿಗೆ ಅವನ್ನೆಲ್ಲ ಚೆನ್ನಾಗಿ ತೊಳೆದು  ಉಪ್ಪು ಖಾರ ಹಾಕಿ ಬೇಯಿಸಿ ಗಬಗಬನೆ  ಒಂದು ತಟ್ಟೆ ತಿಂದು, ಹೊಟ್ಟೆಯಲ್ಲಿದ್ದ ಕೂಸನ್ನು ಶಾಂತಗೊಳಿಸಿ ಮೋಹನನನ್ನು ಹುಡುಕುತ್ತಾ ನಾಲ್ಕನೆ ಬೀದಿಯ ಆ ದೊಡ್ಡ ಮನೆಯಮುಂದೆ ಬಂದು ನಿಂತಳು.

ದೊಡ್ಡದಾಗಿ ತೆರೆದು ಕೊಂಡಿದ್ದ ಮನೆ ಬಾಗಿಲ ಮುಂದೆ ಹುಡುಗಿಯೊಬ್ಬಳು ರಂಗೋಲಿ ಹಾಕುತ್ತಾ ಕುಳಿತಿದ್ದಳು. ಅಳುಕುತ್ತಲೇ ಗೇಟ್ ತೆಗೆದು ಒಳಗೆ ಹೋದ ಗಂಗೆ, ಆ ಹುಡುಗಿಯ ಹಿಂದೆ ನಿಂತು “ಇಲ್ಲಿ ನಮ್ ಯಜ್ಮಾನ್ರೇನರ ಬಂದಿದ್ರೇನವ್ವ” ಎಂದು ಕೇಳಿದಳು. ಗಂಗೆ ಕೇಳಿದ ಪ್ರಶ್ನೆಗೆ ಗಾಬರಿಯಾಗಿ ತಲೆ ಎತ್ತಿ ನೋಡಿದ ಹುಡುಗಿ, ಒಂದೇ ನೆಗೆತಕ್ಕೆ ಒಳ ಸೇರಿ ಬಾಗಿಲು ಮುಚ್ಚಿಕೊಂಡಳು. ಹಾಗೆ ಎದ್ದೆನೋ ಬಿದ್ದೆನೋ ಎಂಬಂತೆ ಓಡಿ ಹೋದ ಹುಡುಗಿಯನ್ನು ಕಂಡು ಕಸಿವಿಸಿಕೊಂಡ ಗಂಗೆ,” ಅಯ್ಯೋ ಅದ್ಯಾಕವ್ವ ಹಂಗ್ ಓಡೋದೆ ಬಾಗ್ಲು ತಗಿ. ನಾನೇನು ಈ ಮನೆಗೆ ಹೊಸುಬ್ಳಲ್ಲ ನಿಮಗೂ ಮುಂಚೆ ಈ ಮನೇಲಿ ನಾವೆ ಇದ್ದಿದ್ದು”  ಎಂದು ಹೇಳಿ ಆ ಹುಡುಗಿಯ ಭಯವನ್ನು ದೂರ ಮಾಡಲು ಯತ್ನಿಸಿದಳು.

ಕೆಲವು ಗಳಿಗೆಯಲ್ಲಿಯೇ ಬಾಗಿಲು ಮತ್ತೆ ತೆರೆದುಕೊಂಡಿತು.  ಸದ್ ಗೃಹಿಣಿಯಂತೆ  ಸುಕನ್ಯಾ ಎದುರು ನಿಂತಿದ್ದಳು.  ಅವಳನ್ನು ಕಂಡು  ಬೆಕ್ಕಸ ಬೆರಗಾದ ಗಂಗೆ ” ವಾ…ಇದೇನವ್ವ ಸುಕನ್ನಿ ನೀನ್ ಇಲ್ಲಿ” ಎಂದು ದೊಡ್ಡದಾಗಿ ಬಾಯಿ ತೆರೆದು ನಿಂತಳು. ತಾನೇ ಮುಂದುವರಿದು ಅವಳ ಕುತ್ತಿಗೆಯಲ್ಲಿ ನೇತಾಡುತ್ತಿದ್ದ ತಾಳಿ ಹಿಡಿದು “ನಮ್ಗೊಂದು ಮಾತು ಹೇಳ್ದಂಗೆ   ಮದುವೆ ಮಾಡ್ಕೊಂಡ್ಬುಟ್ಟಿದ್ದಿ” ಎಂದು ಪ್ರೀತಿಯ ಮುನಿಸು ತೋರಿದಳು. ಗಂಗೆಯ ಮಾತಿಗೆ ದಿಮಾಕಿನಲ್ಲೆ ಉತ್ತರ ಕೊಟ್ಟ  ಸುಕನ್ಯಾ “ಬಾಗ್ಲಲ್ಲೇನು  ಮಾತು, ಬಂದು ಒಳಗ್ ಕೂತ್ಕೋ ಹೇಳ್ತೀನಿ” ಎಂದು ಬೆನ್ನು ತಿರುಗಿಸಿ ಒಳನಡೆದಳು.

ಕೆಲವು ತಿಂಗಳ ಹಿಂದಷ್ಟೇ ಹಾಗೆ ಅಕ್ಕ, ಹೀಗೆ ಅಕ್ಕ, ಎಂದು  ತನ್ನೊಂದಿಗೆ ನಯವಾಗಿ ನಡೆದು ಕೊಳ್ಳುತ್ತಿದ್ದ ಸುಕನ್ಯಾಳಿಗೂ, ಈ ದಿನ ತನ್ನ ಮುಂದೆ ನಿಂತು ದಿಮಾಕು ತೋರುತ್ತಿರುವ ಸುಕನ್ಯಾಳಿಗೂ ಅಜಗಜಾಂತರ ವ್ಯತ್ಯಾಸವೆನಿಸಿತು. ಅವಳು ಏಕವಚನ ಬಳಸಿ ಬೇಕಾಬಿಟ್ಟಿಯಾಗಿ  ನಡೆಸಿ ಕೊಳ್ಳುತ್ತಿದ್ದುದು ಗಂಗೆಗೆ ಇರುಸು ಮುರುಸೆನಿಸಿತಾದರು ಅದನ್ನು ತೋರಗೊಡದೆ ” ಓ.. ನಾವು ಆ ಕಡಿಕ್ ಹೋದ್ಮೇಲೆ ನೀವು ಈ ಮನೆಗ್ ಬಾಡಿಗೆಗೆ ಬಂದ್ರಾ ಸುಕನ್ನಿ…” ಎಂದು ಹಾಲಿನತ್ತ ಹೆಜ್ಜೆ ಹಾಕುತ್ತಾ ಕೇಳಿದಳು. ಒಮ್ಮೆ ಹಿಂದೆ ತಿರುಗಿ ಗಂಗೆಯನ್ನು  ನೋಡಿದ ಸುಕನ್ಯಾ  “ನಾನು ಎಲ್ಲೂ ಹೋಗಿಲ್ಲ ಅವತ್ತಿನಿಂದ್ಲೂ ಅವರ್ಜೊತೆ ಇಲ್ಲೇ ಇದ್ದೀನಿ”  ಎಂದು ಅಣಕಿಸುವಂತೆ ಮೂತಿ ಓರೆ ಮಾಡಿ ನಕ್ಕಳು.

ಸುಕನ್ಯಾಳ ಮಾತು ಕೇಳಿ ಗಲಿಬಿಲಿಗೊಂಡ ಗಂಗೆ ಒಂದೇ ಉಸಿರಿಗೆ ” ಅವ್ರು ಅಂದ್ರೆ ಯಾರು…? ಒಂಚೂರು ಬುಡ್ಸೇಳು…” ಎಂದು ಆತಂಕ ವ್ಯಕ್ತಪಡಿಸಿದಳು. ಗಂಗೆಯ ಮುಂದಿದ್ದ ಆರಾಮ ಕುರ್ಚಿಯಲ್ಲಿ  ಕಾಲು ಮೇಲೆ ಕಾಲಾಕಿ ಕೂತು ಅದನ್ನು ಹಿಂದಕ್ಕೂ ಮುಂದಕ್ಕೂ ಆಡಿಸತೊಡಗಿದ ಸುಕನ್ಯಾ,  ಕೂತ ಜಾಗದಿಂದಲೇ “ಎರಡು ಕಪ್ ಕಾಫಿ ತಗೊಂಡ್ ಬಾರೆ ವಸು” ಎಂದು ಜೋರು ದನಿಯಲ್ಲಿ ಒದರಿ, ಗಂಗೆಯನ್ನೇ ತದೇಕವಾಗಿ ನೋಡಿದಳು. “ನೀನ್ ಕಟ್ಕೊಂಡಿರೋ ಗಂಡ ಎಂತವ್ನು ಅಂತ ಹೇಳ್ತೀನಿ ಮನಸ್ಸುನ್ನ  ಗಟ್ಟಿ ಮಾಡ್ಕೊಂಡು ಕೇಳುಸ್ಕೊ” ಎಂದು ಮೋಹನನ ಒಂದೊಂದೇ ಪುರಾಣವನ್ನು ಬಿಚ್ಚತೊಡಗಿದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ಹಿಂದಿನ ಕಂತು ಓದಿದ್ದೀರಾ?  ಬಿರುಗಾಳಿಯ ಸುಳಿಯಲ್ಲಿ ಗಂಗೆ

ಬಿರುಗಾಳಿಯ ಸುಳಿಯಲ್ಲಿ ಗಂಗೆ
(ಈ ವರೆಗೆ)

ಗಂಗೆ ಊರಿನವರಿಗೆ ಆತ್ಮೀಯಳಾಗುತ್ತಿದ್ದಂತೆ ಮೋಹನನಿಗೂ, ಅವನ ಅಮ್ಮನಿಗೂ ಗಂಗೆಯ ಮೇಲೆ ಅಸಹನೆ ಆರಂಭವಾಗುತ್ತದೆ. ಒಂದು ದಿನ ಅಮ್ಮ ಇವರಿಬ್ಬರನ್ನೂ ಮನೆಯಿಂದ ಆಚೆಗೆ ತಳ್ಳುತ್ತಾಳೆ. ಮೋಹನನ ಮನಸು ಮತ್ತೆ ದಂಧೆಯತ್ತ ವಾಲುತ್ತದೆ. ಬಹಳಷ್ಟು ಲೆಕ್ಕಾಚಾರದೊಂದಿಗೆ ತನಗೆ ಪರಿಚಯವಾದ ಸುಂದರಿ ಸುಕನ್ಯಾಳನ್ನು ಕರೆದುಕೊಂಡು ಗಂಗೆಯೊಂದಿಗೆ ಬೆಂಗಳೂರು ತಲಪುತ್ತಾನೆ. ಮೋಹನ ಅಂದುಕೊಂಡಂತೆ ನಡೆಯಿತೇ ? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ಒಂಭತ್ತನೆಯ ಕಂತು.

ವಿರಾಜಪುರದಂತಹ ದೊಡ್ಡಪೇಟೆಯೊಳಗೆ ಹುಟ್ಟಿ ಕಾಲೇಜು, ಗೆಳತಿಯರೆಂದು ಟಾಕುಟೀಕಾಗಿ ಬೆಳೆದಿದ್ದ ಈ ಸುಕನ್ಯಾ, ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು,  ಶ್ರೀಮಂತ ಮನೆತನವಾಗಿದ್ದ ಸಾತುಗಳ್ಳಿಯ ಗುಡಿಗೌಡನ ಮನೆಗೆ ಸೊಸೆಯಾಗಿ ಹೋಗಿದ್ದಳು. ಅಪ್ಪನ ಮನೆಯಲ್ಲಿ ಬಿಡುಬೀಸಾಗಿ ಬೆಳೆದಿದ್ದ ಇವಳನ್ನು ಆ ಹಳ್ಳಿಗಾಡಿನ ವಾತಾವರಣ ಮತ್ತು ಆ ಮನೆಯ ಕಟ್ಟು ಪಾಡುಗಳು  ಉಸಿರು ಕಟ್ಟಿಸ ತೊಡಗಿದವು. ಹಾಗೂ ಹೀಗೂ ಒಂದೆರಡು ವರ್ಷಗಳ ಕಾಲ ತನ್ನ ಬಯಕೆಗಳನ್ನೆಲ್ಲಾ ಹತ್ತಿಕ್ಕಿ ಗುಡಿಗೌಡನ ಮನೆಯ ಘನತೆ ಕಾಯ್ದ ಸುಕನ್ಯಾ, ಒಂದು ದಿನ ರೋಸಿ ಎಲ್ಲ ಸಂಬಂಧಗಳನ್ನು ಕಿತ್ತೊಗೆದು  ವರ್ಷದ ತನ್ನೆರಡು ಅವಳಿ ಮಕ್ಕಳನ್ನು ತೊರೆದು, ಯಾರಿಗೂ ಕಾಣದಂತೆ ಈ ಸೋಪಾನಪೇಟೆಗೆ ಬಂದು ಸ್ವಚ್ಛಂದ ಹಕ್ಕಿಯಂತೆ ವಾಸಿಸತೊಡಗಿದ್ದಳು.

ಇದುವರೆಗೂ ತನ್ನ ದೇಹಸಿರಿಯನ್ನೆಲ್ಲ ಒತ್ತೆ ಇಟ್ಟು ನೀರಸವಾಗಿ ಬದುಕಿದ್ದ ಸುಕನ್ಯಾಳನ್ನು, ಸೋಪಾನಪೇಟೆಗೆ ಬಂದ ಮೊದಲ ದಿನವೇ ಅಲ್ಲಿನ ದೊಡ್ಡ ಫ್ಯಾನ್ಸಿ ಅಂಗಡಿಯೊಂದು ತನ್ನತ್ತ ಸೆಳೆದುಕೊಂಡು ಬಿಟ್ಟಿತ್ತು. ಸೀದಾ ಅದರೊಳಗೆ ನುಗ್ಗಿದವಳೆ, ಅಲ್ಲಿ ತನಗೊಂದು ಕೆಲಸ ಗಿಟ್ಟಿಸಿಕೊಂಡು ಹೊರ ಬಂದಿದ್ದಳು. ತನ್ನ ಪ್ರತೀ ತಿಂಗಳ ಸಂಬಳದಲ್ಲಿ ಮತ್ತಷ್ಟು ಆಕರ್ಷಕವಾಗಿ ಬದಲಾಗಿ ಮತ್ತೆ ಕಾಲೇಜಿನ ದಿನಗಳಿಗೆ ಮರಳಿದವಳಂತೆ ಟಾಕು ಟೀಕಾಗಿ  ಓಡಾಡಲಾರಂಭಿಸಿದ್ದಳು.

ಇಂತಹ ದಿನಗಳಲ್ಲಿಯೇ ಬಟ್ಟೆ ಅಂಗಡಿಯೊಂದರಲ್ಲಿ ಮೋಹನನ ಕಣ್ಣಿಗೆ ಬಿದ್ದಿದ್ದ ಸುಕನ್ಯಾ ಅವನ ಮೋಹಕ ನೋಟಕ್ಕೆ ಮನಸೋತಳು. ಗಂಡನ ಒರಟುತನದೊಳಗೆ ಮರೆಯಾಗಿದ್ದ ಅವಳೊಳಗಿನ ನವಿರು ಭಾವ ಆ ಕ್ಷಣದಲ್ಲಿಯೇ ಎಚ್ಚೆತ್ತು, ಅವನನ್ನು ಹಿಂಬಾಲಿಸಿ ಬರುವಂತೆ ಮಾಡಿತ್ತು. ಆ ಹಳ್ಳಿಗಾಡಿನ ವಾತಾವರಣದಲ್ಲಿ ದೊರಗಿನಂತಾಗಿದ್ದ ಅವಳ ಮೈ, ಮೋಹನನ ನಯನಾಜೂಕಿನ ಸ್ಪರ್ಶಕ್ಕೆ ಬೆಣ್ಣೆಯಂತೆ ಕರಗಿ ಘಮಗುಟ್ಟಿತು. ಹೀಗೆ  ನಾಲ್ಕೈದು ಭೇಟಿಯಲ್ಲೇ ಮರ ಬಳ್ಳಿಯಂತೆ ತಬ್ಬಿ ಬೆಳೆದ ಇವರ ಒಲವಿಗೆ ತಮ್ಮಿಬ್ಬರ ಪೂರ್ವಾಪರಗಳಾವುದು ತೊಡುಕೆನಿಸಲೇ ಇಲ್ಲ.

ಒಂದು ದಿನ ಸೋಪಾನ ಪೇಟೆಯ ಕೋಣಮಾರಮ್ಮನ ಗುಡಿಯಲ್ಲಿ ಅವಳ ಕುತ್ತಿಗೆಗೆ ಅರಿಶಿಣದ ಕೊನೆ ಕಟ್ಟಿದ ಮೋಹನ, ತನ್ನ ಮೇಲಿನ ಅವಳ ನಂಬಿಕೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡ.  ಅಂದಿನ  ಮೊದಲ ರಾತ್ರಿಯ ಸಿಹಿ ಅಪ್ಪುಗೆಯೊಳಗೆ, ತಾನು ಮಾಡಬೇಕೆಂದಿರುವ ದಂಧೆ ಮತ್ತು ತನ್ನ ಹೆಗಲೆಣೆಯಾಗಿ ನಿಲ್ಲಬೇಕಾದ ಅವಳ ಪಾತ್ರವನ್ನೆಲ್ಲ ರಸವತ್ತಾಗಿ ವರ್ಣಿಸಿ ಅವಳ ಸಮ್ಮತಿ ಪಡೆದ. ಇಡೀ ರಾತ್ರಿ ಮೋಹನನ ಕಲ್ಪಿತ ಸಾಮ್ರಾಜ್ಯದ ರಾಣಿಯಾಗಿ ನಲಿದ ಸುಕನ್ಯಾ, ಅವನ ನಿರ್ದೇಶನದಂತೆ ಮತ್ತಷ್ಟು ರಂಗುರಂಗಾಗಿ ತನ್ನ ಸಮಾನು ಸರಂಜಾಮುಗಳನ್ನೆಲ್ಲ ಗಂಟು ಕಟ್ಟಿಕೊಂಡು ಬೆಂಗಳೂರಿನತ್ತ ಪಯಣ ಬೆಳೆಸಿದ್ದಳು.

ಮೋಹನನೊಂದಿಗೆ ಬೆಂಗಳೂರು ಸೇರಿ ಅಲ್ಲಿನ ತಳುಕು ಬಳುಕಿನ ವಾತಾವರಣಕ್ಕೆ ಸರಾಗವಾಗಿ ಒಗ್ಗಿಕೊಂಡ ಸುಕನ್ಯಾ, ತಿಂಗಳು ಎನ್ನುವುದರೊಳಗೆ ಗಿರಾಕಿಗಳನ್ನು ಹಿಡಿದು ಹಾಕುವ ಕಲೆಯನ್ನು  ಕರಗತ ಮಾಡಿಕೊಂಡಳು. ಶ್ರೀಮಂತ ಗಿರಾಕಿಗಳ ಐಶಾರಾಮಿ ಮೋಜಿನಾಟದಲ್ಲಿ ಮಿಂದೇಳುತ್ತಿದ್ದವಳನ್ನು ಆ ದಂಧೆ ಬಹು ಬೇಗ ತನ್ನ ವಶಮಾಡಿಕೊಂಡಿತು. ಮೋಹನ ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿ ಆ ದಂಧೆಗೆ ಹೊಂದಿಕೊಂಡ ಸುಕನ್ಯಾ, ಬಹುಬೇಗ ಮೋಹನನ ಮೇಲೆ ತನ್ನ ಹಿಡಿತ ಸಾಧಿಸಿದಳು. ಮನೆಗೆ ತೊಡಕಾಗಿ ಕಂಡ ಗಂಗೆಯನ್ನು ತಿಂಗಳೊಪ್ಪತ್ತಿನಲ್ಲೆ ಬೇರೊಂದು ಸಣ್ಣಮನೆಗೆ ಸಾಗಹಾಕಿಸಿದಳು.

ಅಂದು ರಾತ್ರಿ ಮೋಹನ ಗಂಗೆಯನ್ನು ತಬ್ಬಿ “ನಿನ್ನ ರಾಣಿ ಹಂಗ್ ಇಟ್ಕೋಬೇಕು ಅನ್ನೋ ಆಸೆಗೆ ಬಿದ್ದು ಇಷ್ಟು ದೊಡ್ಡ ಮನೆ ಮಾಡ್ಬಿಟ್ಟೆ ಗಂಗೂ. ಈಗ ನೋಡಿದ್ರೆ ನನಗೆ  ಈ ಮನೆ ಬಾಡಿಗೆನೇ ತೂಗಿಸೋಕಾಗ್ತಿಲ್ಲ. ನಾವಿಬ್ರು ಒಂದು ಪುಟ್ಟ ಮನೆ ಮಾಡಿಕೊಂಡು ಹೋಗಿ ಬಿಡೋಣ ಅನ್ನಿಸ್ತಿದೆ. ಏನ್ ಮಾಡೋದು ಗೊತ್ತಾಗ್ತಿಲ್ಲ ನೀನೆ ಹೇಳು ಗಂಗು ” ಎಂದು ದುಃಖ ತಪ್ತನಂತೆ  ಗಂಗೆಯ ಬಳಿ ನಾಟಕ ಹೂಡಿದ್ದ.  ಇವರ ಒಳ ಆಟಗಳ ಅರಿವಿರದ ಗಂಗೆ ಗಂಡನ ಮಾತಿಗೆ ಮರುಗಿ “ಅಯ್ಯೋ…ಅದುಕ್ಯಾಕಿಷ್ಟು ಬೇಜಾರ್ ಮಾಡ್ಕೋತಿರಿ, ನಾನು ಮೊದ್ಲುನೇ ದಪ ಈ ಮನೆ ನೋಡ್ದಾಗ್ಲೇ ಕೇಳ್ಳಿಲ್ವ ಇರೋರಿಬ್ರುಗ್ಯಾಕೆ ಇಷ್ಟು ದೊಡ್ಡ ಮನೆ ಅಂತ,  ಇರ್ಲಿ ಬುಡು ಬಾಡಿಗೆ ಕಟ್ಟೋನು ನಾನು ನಿನ್ಗ್ಯಾಕ್ ಸಂಕ್ಟ ಅಂತ  ಜೂರತ್ ಮಾಡಿ ನನ್ ಬಾಯಿ ಮುಚ್ಚುಸಿದ್ರಿ, ಹೋಗ್ಲಿ ಬುಡಿ ಈಗ್ಲಾದ್ರೂ ನಿಮಗೆ ಬುದ್ಧಿ ಬಂತಲ್ಲ” ಎಂದು ಗಂಡನ ಜ್ಞಾನೋದಯಕ್ಕೆ  ಹಿಗ್ಗಿ, ತಿಂಗಳು ಮುಗಿಯುವುದರೊಳಗೆ ನಾಲ್ಕನೆ ಬೀದಿಯಲ್ಲಿದ್ದ ಸಣ್ಣ ಶೀಟಿನ ಮನೆಯೊಂದಕ್ಕೆ  ಸ್ಥಳಾಂತರಗೊಂಡಿದ್ದಳು.

ಗಂಗೆ ಅತ್ತ ಹೋದ ಕೂಡಲೇ ಇತ್ತ ಮೋಹನನ ದಂಧೆ ಬಿರುಸು ಪಡೆದುಕೊಂಡಿತು. ಇದುವರೆಗೂ ಖಾಲಿ ಹೊಡೆಯುತ್ತಿದ್ದ ಆ ಮನೆಯ ನಾಲ್ಕೈದು ಕೋಣೆಗಳು ಈಗ ಸದಾ ಚಟುವಟಿಕೆಯಿಂದ ಇರತೊಡಗಿದವು. ಅರ್ಧ ದಿನದಿಂದ ಹಿಡಿದು ಪೂರ್ಣಾವಧಿಯವರೆಗೂ ಈ ವೃತ್ತಿಗೆ ತಮ್ಮನ್ನು ತೊಡಗಿಸಿ ಕೊಂಡ ಅನೇಕ ಹೆಣ್ಣುಗಳು ಎಡೆಬಿಡದೆ ಇತ್ತ ಬರಲಾರಂಭಿಸಿದರು.  ಪೋಲಿಸಿನವರಾದಿಯಾಗಿ ದೊಡ್ಡ ದೊಡ್ಡ ಕುಳಗಳನ್ನೆಲ್ಲ ತನ್ನ ಬೆರಳ ತುದಿಯಲ್ಲಿ ಇಟ್ಟುಕೊಂಡಿದ್ದ ಸುಕನ್ಯಾಳನ್ನು ಈಗ ಹಿಡಿಯುವವರೆ ಇರಲಿಲ್ಲ.

ಈ ಎಲ್ಲದರ ನಡುವೆಯೂ ಗಂಗೆಯತ್ತ ಒಂದು ನಿಗ ಇಟ್ಟೇ ಇದ್ದ ಮೋಹನ, ತನ್ನ ರಾತ್ರಿಗಳನ್ನೆಲ್ಲ ಅವಳ  ಸಂತೋಷಕ್ಕಾಗಿಯೇ  ಮುಡುಪಿಟ್ಟಿದ್ದ. ” ಹಳ್ಳಿಗಾಡಿನ ಕಮಂಗಿ” ಎಂದು ಅವಳನ್ನು ಮುದ್ದು ಮುದ್ದಾಗಿ ಛೇಡಿಸುತ್ತಲೆ  ಆ ನಗರದ ವಾತಾವರಣಕ್ಕೆ ಅವಳನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದ. ಪ್ರತಿ ದಿನ ಸಂಜೆ ಐದು ಆರರ ಒಳಗೆ ಮನೆ ಸೇರಿ ಒಬ್ಬ ಒಳ್ಳೆಯ ಗೃಹಸ್ಥನಂತೆ ಬದಲಾಗಿ ಬಿಡುತ್ತಿದ್ದ ಮೋಹನ, ಹೆಂಡತಿಯನ್ನು ಸಿನಿಮಾ,‌ ಪಾರ್ಕ್, ಶಾಪಿಂಗ್ ಎಂದು ಸುತ್ತಾಡಿಸಿ ಸಂತೃಪ್ತನಾಗುತ್ತಿದ್ದ.

ಗಂಗೆಯ ಮೇಲಿನ ಇವನ ನಿಷ್ಠೆ ಮತ್ತು ಪ್ರೀತಿಯನ್ನು ಕಂಡು ಹೊಟ್ಟೆಗೆ ಬೆಂಕಿ ಬಿದ್ದಂತಾದ  ಸುಕನ್ಯಾ ” ಮೈ ಮುರಿದು ದುಡ್ದು  ಹೊಟ್ಟೆ ತುಂಬಿಸ್ತಿರೋದು ನಾವು. ನೀವು ನೋಡಿದ್ರೆ  ಮೂರ್ಕಾಸಿನ ಪ್ರಯೋಜನ ಇಲ್ಲದ ಆ ಗಂಗೆನ ರಾಣಿ ಮೆರೆಸೋಹಾಗೆ ಮೆರುಸ್ತಿದ್ದೀರಲ್ಲ. ಒಂದ ಅವಳನ್ನ ಬಿಟ್ಟು ನನ್ಜೊತೆಗಿರಿ. ಇಲ್ಲ ಅವಳನ್ನು ನನ್ನ ಜೊತೆ ದಂಧೆಗಿಳಿಸಿ” ಎಂದು ಹಠಹಿಡಿದು ಕೂತಳು.

ಚಿನ್ನದ ಮೊಟ್ಟೆ ಇಡುತ್ತಿದ್ದ ಸುಕನ್ಯಾಳ ಅಸಹನೆಯನ್ನು ಹೆಚ್ಚು ದಿನ ಮುಂದುವರೆಸಲು ಅವಕಾಶ  ಕೊಡದ ಮೋಹನ, ಅವಳ ಇಚ್ಛೆಯಂತೆ ಗಂಗೆಯ ಮೇಲಿನ ತನ್ನ ಮೋಹವನ್ನು ಕಡಿದುಕೊಳ್ಳತೊಡಗಿದ. ವಾರಕ್ಕೊ ಹದಿನೈದು ದಿನಕ್ಕೊ ಅತ್ತ ಹೋಗಿ, ಅವಳ ಕೈಗೊಂದಿಷ್ಟು ಹಣ ತುರುಕಿ ಅವಳ ಯಾವ ಮಾತಿಗೂ ಕಿವಿ ಕೊಡದೆ,  ನಿಂತ ಕಾಲಿನ ಮೇಲೆ ಹೊರಟು ಬಂದು ಬಿಡುತ್ತಿದ್ದ. ಏಕಾಏಕಿ ಹೀಗೆ ಬದಲಾದ ಗಂಡನ ನಡೆ ಕಂಡು ಆತಂಕಕ್ಕೊಳಗಾದ ಗಂಗೆ, ಇದರ ಕಾರಣ ತಿಳಿದು ಕೊಳ್ಳುವ ಸಾಹಸಮಾಡಿ ಸೋತಳು. ಅಕ್ಕ ಪಕ್ಕದವರೊಂದಿಗೆ ಸದಾ ಚಟಪಟಿಸುತ್ತಾ ಖುಷಿಯಾಗಿರುತ್ತಿದ್ದವಳು ಗಂಡನ ಗೈರು ಹೆಚ್ಚಾದಂತೆಲ್ಲ ಮಂಕಾಗುತ್ತಾ ಮೌನಕ್ಕೆ ಶರಣಾಗ ತೊಡಗಿದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು ಓದಿದ್ದೀರಾ? ದಂಧೆಯತ್ತ ಮೋಹನನ ಚಿತ್ತ

ದಂಧೆಯತ್ತ ಮೋಹನನ ಚಿತ್ತ
(ಈ ವರೆಗೆ…)

ಮೋಹನನೊಂದಿಗೆ ಎಸ್‌ ಐ ಮನೆ ತಲಪಿದ ಗಂಗೆ ನಡೆದ ವಿಷಯವನ್ನು ವಿವರಿಸುತ್ತಾಳೆ. ಗಿರಿಗೌಡನನ್ನು ಮಟ್ಟಹಾಕಲು ಕಾಯುತ್ತಿದ್ದ ಎಸ್‌ ಐ ಪೊಲೀಸರನ್ನು ಕಳುಹಿಸಿ ಗಿರಿಗೌಡನ ಸಹಿತ ಸಿಕ್ಕವರನ್ನೆಲ್ಲ ಸ್ಟೇಷನ್‌ ಗೆ ಎಳೆದು ತರುತ್ತಾರೆ. ಲಾಠಿಯ ರುಚಿಉಂಡ ಅವರೆಲ್ಲ ತಪ್ಪೊಪಿಗೆ ಬರೆದು ಕೊಟ್ಟು ಗಂಗೆಯನ್ನು ಊರಿನ ಎಲ್ಲ ಸಮಾರಂಭಗಳಿಗೂ ಕರೆಯುವುದಾಗಿ ಹೇಳಿ ಊರು ಸೇರುತ್ತಾರೆ. ಊರಿನಲ್ಲಿ ಮುಂದೇನಾಯ್ತು? ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ಎಂಟನೆಯ ಕಂತು.

ಪೊಲೀಸರ ಮಾತಿಗೆ ಕಟ್ಟು ಬಿದ್ದು ಮದುವೆ ಮುಂಜಿ, ನಾಮಕರಣ, ಒಸಗೆ,  ದೇವರ ಪೂಜೆ, ಹೀಗೆ  ಊರಿನ ಎಲ್ಲಾ ಕಾರ್ಯಕ್ರಮಗಳಿಗೂ ಗಂಗೆಯನ್ನು ಬಿಡದೆ ಕರೆಯುತ್ತಿದ್ದ ಜನ, ದಿನ ಕಳೆದಂತೆ ಅವಳ ಒಳ್ಳೆಯ ಮನೋಭಾವ ಪ್ರೀತಿ ತುಂಬಿದ ನಡೆನುಡಿ ಕಂಡು ತಮ್ಮ ಅಸಮಾಧಾನವನ್ನೆಲ್ಲ ತೊರೆದು ಬಹು ಬೇಗ ಅವಳನ್ನು ತಮ್ಮೊಳಗೊಬ್ಬಳನ್ನಾಗಿಸಿಕೊಂಡರು. ಇದುವರೆಗೂ ಒಂದು ನಾಯಿ ಕೂಡ ಸುಳಿಯದ ಚಿಕ್ಕತಾಯಮ್ಮನ ಮನೆ ಈಗ ಮಕ್ಕಳು ಮರಿಗಳಿಂದ ಹಿಡಿದು ಎಲ್ಲಾ ವಯಸ್ಸಿನವರು ನಿಸೂರಾಗಿ ಬಂದು ಆಡಿ ಹರಟಿ ಹೋಗುವ  ಮಾತಿನ ಕಟ್ಟೆಯಾಗಿ ಪರಿವರ್ತನೆ ಆಯಿತು.

ಇದುವರೆಗೂ ಗಂಗೆಯ ಆಸ್ತಿ ಅಂತಸ್ತು, ಮನೆತನಕ್ಕೆ ಹೆದರಿ ತನ್ನ ಹರಿತವಾದ ನಾಲಿಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದ ಚಿಕ್ಕ ತಾಯಮ್ಮನಿಗೆ,  ಮನೆ ಮೇಲಿನ ತನ್ನ ಹಿಡಿತವೇ ಕೈ ತಪ್ಪುತ್ತಿರುವುದನ್ನು ಕಂಡು ಸುಮ್ಮನಿರಲಾಗಲಿಲ್ಲ  ಒಳಗೊಳಗೆ ಕುದ್ದು ಕೆಂಡದುಂಡೆಯಂತಾಗಿ, ತನ್ನ ನಂಜನ್ನೆಲ್ಲಾ ಕಾರಿ ಹಗುರಾಗಲು ಅವಕಾಶಕ್ಕಾಗಿ ಹೊಂಚ ತೊಡಗಿದಳು.

ಈ ಕುದಿ ಎಸರು ಆಗಾಗ ಕುದ್ದು ಹಿಡಿತ ತಪ್ಪಿ ಹೊರಚೆಲ್ಲುತ್ತಿದ್ದದ್ದು ಚಿಕ್ಕತಾಯಮ್ಮನಿಗೆ ಮಾತ್ರವೇ ಅಲ್ಲ, ಮಗ ಮೋಹನನಿಗೂ ಹೀಗೆ ಆಗಿತ್ತು. ಆ ಮನೆಯೊಳಗೆ ಹೊಕ್ಕಾಡುತ್ತಿದ್ದ ಜನ, ಗಂಗೆಯೊಂದಿಗೆ ಮಾತ್ರವೇ ವ್ಯವಹರಿಸಿ ತಮಗೆ ಕವಡೆ ಕಿಮ್ಮತ್ತನ್ನು ಕೊಡದಂತೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದದ್ದು ಮೀಸೆ ಹೊತ್ತ ಇವನಿಗೂ ನುಂಗಲಾರದ ತುತ್ತಾಗಿತ್ತು.

ಇದೇ ತಿಕ್ಕಾಟದಲ್ಲಿ ಸುಮಾರು ಮೂರುನಾಕು ತಿಂಗಳು ಕಳೆಯುತ್ತಾ ಬಂದಿತ್ತು. ಊರಿನಲ್ಲಿ ದೊಂಬಿ ಎದ್ದ ಆ ರಾತ್ರಿ ಗಂಗೆಯ ಹಿಂದೆ ತಲೆ ತಗ್ಗಿಸಿ ಹೇಡಿಯಂತೆ ಓಡಿಹೋದ ತನ್ನ ಬಗ್ಗೆ ಆಗಾಗ ಮೋಹನನಿಗೆ ರೋಷ ಉಕ್ಕೇರುತ್ತಿತ್ತು . ತನಗೆ ಅವಮಾನ ಮಾಡಲೆಂದೇ ಊರಜನ ಗಂಗೆಯನ್ನು ತಲೆಮೇಲೆ ಹೊತ್ತು ಮೆರೆಯುತ್ತಿದ್ದಾರೆ ಎಂಬ ಅನುಮಾನಕ್ಕೆ ಬಿದ್ದ ಮೋಹನನ ಅಶಾಂತ ಮನಸ್ಸು, ಊರಿನಲ್ಲಿ ಮತ್ತೆ ದೊಂಬಿ ಎಬ್ಬಿಸಿ ತನ್ನ ಗಂಡಸುತನ ತೋರಿಸಲು ಹಾತೊರೆಯುತ್ತಲೆ ಇತ್ತು. ಆ ರಾತ್ರಿ ಊರೆಲ್ಲಾ ಉಂಡು ಮಲಗಿತ್ತು. ಗಂಗೆಯೊಂದಿಗೆ ಕಾಲುಕೆರೆದು ಜಗಳ ತೆಗೆದ ಮೋಹನ, ಇದ್ದಕ್ಕಿದ್ದಂತೆ ದಡಾರನೆ ಮನೆಬಾಗಿಲು ತೆರೆದು ಬೀದಿಗೆ ಬಂದ.

ಇದೇನಾಗುತ್ತಿದೆ ಎಂದು ಗಂಗೆ ನೋಡುವುದರ ಒಳಗೆ  “ಬಡ್ಡಿ ಮಕ್ಳ ಈ ಸರಿ ಅಂತೂ ತಲೆ ತಪ್ಪುಸ್ಕೊಂಡು ಹೋಗೋ ಮಾತೆ ಇಲ್ಲ ಒಂದಿಬ್ರುನ್ನಾದ್ರು ಸಿಗ್ದಾಕೆ ಹೋಗೋದು” ಎಂದು ಗೊಣಗುತ್ತ ಅಂಗಳದಲ್ಲಿದ್ದ ಜಲ್ಲಿಕಲ್ಲಿನ ರಾಶಿಯಿಂದ ಒಂದೊಂದೆ ಕಲ್ಲು ತೆಗೆದು ಗುರಿಯಿಟ್ಟು ಗಿರಿಗೌಡನ ಮನೆಮೇಲೆ ಬೀಸತೊಡಗಿದ. ಇದನ್ನು ಕಂಡು ಗಾಬರಿ ಬಿದ್ದ ಗಂಗೆ ಒಂದೇ ಉಸಿರಿಗೆ ಮನೆಯವರನ್ನೆಲ್ಲಾ ಎಬ್ಬಿಸಿ ಮೋಹನನನ್ನು ಒಳಗೆಳೆದು ತಂದು ಕೂಡಿಹಾಕಿದಳು.

ಮೋಹನನ ಅಟ್ಟಹಾಸವನ್ನು ಹಲ್ಲು ಕಚ್ಚಿ ಸಹಿಸಿದ ಗಿರಿಗೌಡನ ಮನೆಯವರು ದೊಂಬಿದಾಳಿ ಎಬ್ಬಿಸಲು ಹೋಗದೆ, ಅವನ ಮೇಲೆ ದೂರು ಹೊತ್ತು  ಪೋಲಿಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಗಂಡನನ್ನು ಬಿಟ್ಟುಕೊಡಲಾರದೆ ಪೀಕಲಾಟಕ್ಕೆ ಸಿಕ್ಕಿಕೊಂಡ ಗಂಗೆ ತನ್ನ ಜಾಣತನದಿಂದ ಗಿರಿಗೌಡ ಮಾಡಿದ  ಆರೋಪಗಳನ್ನೆಲ್ಲಾ ಅವನ ವಿರುದ್ಧವೇ ತಿರುಗಿಸಿ,  ಪೋಲಿಸಿನವರೆ ತಲೆದೂಗುವಂತೆ ಮಾಡಿ, ಮೋಹನನ ಕೂದಲು ಕೊಂಕದಂತೆ  ಊರಿಗೆ ಕರೆತಂದಳು.

ಮನೆಯ ಒಳ ಬರದಂತೆ ಮಗ ಸೊಸೆಯನ್ನು ಬಾಗಿಲಲ್ಲಿಯೇ ತಡೆದು ನಿಲ್ಲಿಸಿದ ಚಿಕ್ಕತಾಯಮ್ಮ ” ನಿನ್ನಂತ ಪುಂಡುನ್ನ ಮನೆಲಿಟ್ಕೊಂಡ್ರೆ ಹೊಟ್ಟೆಗೆ  ತಣ್ಣೀರ್ ಬಟ್ಟೆ ಹಾಕಬೇಕಾಯ್ತದೆ. ಒಂದ್ರುಪಾಯಿ ಅದಾಯ ಇಲ್ಲ ಏನಿಲ್ಲ ನಾನ್ಯಾಕೆ ನಿಮ್ಮುನ್ನ ಮನೆಲಿಟ್ಕೊಂಡು ವಾಂಕರಹಾತ್ಲಿ , ಇನ್ಮೇಲೆ ಈ ಮನೆ ಹಾದಿ ಮರ್ತು ಮೈ ಬಗ್ಸಿ ದುಡ್ದು ಉಣ್ಣದ್ ಕಲಿರಿ”  ಎಂದು ಹೇಳಿ ಮೊದಲೇ ಗಂಟು ಕಟ್ಟಿ ಇಟ್ಟಿದ್ದ ಅವರಿಬ್ಬರ ಬಟ್ಟೆ ಬರೆಗಳನ್ನೆಲ್ಲಾ ಜಗಲಿ ಕಟ್ಟೆಯ ಮೇಲಿಟ್ಟು ಬಾಗಿಲು ಮುಚ್ಚಿಕೊಂಡಳು.

ಇದು ಊರ ಜನರ ಗಮನಕ್ಕೆ ಬರುವ ಮೊದಲೆ ಅಲ್ಲಿಂದ ಜಾಗ ಖಾಲಿ ಮಾಡಿದ ದಂಪತಿಗಳು, ತಮ್ಮ ಬಟ್ಟೆಗಂಟಿನೊಂದಿಗೆ ಬಂದು ನಾರಿಪುರ ಸೇರಿಕೊಂಡರು. ಕೆಲವು ದಿನಗಳು ಅಲ್ಲಿಯೇ ಕತೆಹಾಕಿದ ಮೋಹನ, ಗಂಗೆಯ ಹಿಂಸೆಗೆ ಕಟ್ಟು ಬಿದ್ದು ಬೆಂಗಳೂರು ಸೇರಿ  ಕೆಲಸದ ಹುಡುಕಾಟಕ್ಕಿಳಿದ. ಅಲ್ಲಿ ಯಾವುದೇ ಕೆಲಸಕ್ಕೆ ಕೈಯಿಟ್ಟರು  ತಾನು ಮೊದಲು ಮಾಡುತ್ತಿದ್ದ ಕೆಲಸದಷ್ಟು ಸುಸೂತ್ರವೆನಿಸಲಿಲ್ಲ. ಸದಾ ತನ್ನ ಸುತ್ತ ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಮನಸ್ಸಿಗೆ ಮುದ ನೀಡುತ್ತಿದ್ದ ಹೆಣ್ಣು ಮಕ್ಕಳೊಂದಿಗಿನ ಅನಂದ, ಮತ್ತು ಅವರು ತನಗೆ ನೀಡುತ್ತಿದ್ದ ವಿಶೇಷ ಗೌರವವನೆಲ್ಲ ನೆನೆದು ಮತ್ತೆ ಅವನ ಗಮನವೆಲ್ಲ ಅದೇ ದಂಧೆಯತ್ತ ವಾಲಿತು.

ಮುಗ್ಧೆ ಎಂದುಕೊಂಡಿದ್ದ ಗಂಗೆ ತನ್ನ ಚುರುಕು ಚಾಲಾಕಿತನದಿಂದ ಪೊಲೀಸಿನವರಾದಿಯಾಗಿ ಊರಿನವರೆಲ್ಲರ ಮನಸ್ಸನ್ನು ಸೂರೆಗೊಂಡ ಪರಿ ನೆನೆದು “ಅಂಗೈಯಲ್ಲೆ ಬೆಣ್ಣೆ ಇಟ್ಕೊಂಡು ತುಪ್ಪುಕ್ಕಲಿತಿದ್ದೀನಲ್ಲ” ಎಂದು ಸೋಜಿಗಗೊಂಡ. ಯಾರ ಕಾಲ ಕೆಳಗು ಅಡಿಯಾಳಾಗದೆ ತನ್ನದೆ ಸ್ವಂತ ದಂಧೆ ಆರಂಭಿಸಿ, ವರ್ಷ ಎನ್ನುವುದರೊಳಗೆ ದೊಡ್ಡ ಬಂಗಲೆ ಕೊಂಡು ಅದರ ಮುಂದೆ ಒಂದು ಕಾರನ್ನಾದರು ನಿಲ್ಲಿಸುವಂತಾಗ ಬೇಕು ಎನ್ನುವ ಹುರುಪಿನೊಂದಿಗೆ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ರೆಡ್ಡಿ ಬಳಿ ಹೋಗಿ ಒಂದಷ್ಟು ಒಪ್ಪಂದಗಳನ್ನು ಮಾಡಿಕೊಂಡು ಕೈತುಂಬ ಹಣ ಪಡೆದು ಬಂದ. ಒಂದೆರಡು ಕೋಣೆಗಳು ಹೆಚ್ಚಿಗೆಯೇ ಇರುವಂತಹ  ದೊಡ್ಡ ಮನೆಯನ್ನೆ ಬಾಡಿಗೆ ಹಿಡಿದು ನಾರಿಪುರಕ್ಕೆ ಬಂದ.

ಹೇಗಾದರೂ ಮಾಡಿ ಗಂಗೆಯನ್ನು ಈ ದಂಧೆಗೆ ತಯಾರು ಮಾಡಲೇ ಬೇಕೆಂದುಕೊಂಡು  ಬಂದ ಮೋಹನನಿಗೆ, ಊರಿಗೆ ಬಂದ ಕೂಡಲೇ ಹೆಂಡತಿಯ ಬಸುರಿನ ವಿಷಯ ಕೇಳಿ ತನ್ನ ಕನಸಿನ ಗೋಪುರವೇ ಕುಸಿದಂತಾಯಿತು. ಒಂದೆರಡು ದಿನ ಅವಳೊಂದಿಗೆ ಸರಿಯಾಗಿ ಮಾತು ಕತೆಯಾಡದೆ ಮುಗುಮ್ಮಾಗಿಯೇ ಕಳೆದ. ಆದರೆ ವಾರ ಎನ್ನುವುದರಲ್ಲಿ ಅವಳೊಳಗೆ ನೀರಾಗಿ ಹರಿದ ಮೋಹನನೊಳಗೆ  ತಂದೆತನದ ಭಾವವೊಂದು ಮಿಡುಕಾಡ ತೊಡಗಿತ್ತು.

ಇಷ್ಟರ ನಡುವೆ ನಾಕೈದು ಬಾರಿ ಸೋಪಾನಪೇಟೆಯತ್ತ  ಎಡತಾಕಿ ಬಂದಿದ್ದ ಮೋಹನನಿಗೆ, ಬಟ್ಟೆ ಅಂಗಡಿಯಲ್ಲಿ ಪರಿಚಯವಾದ ತಿದ್ದಿ ತೀಡಿದ ಗೊಂಬೆಯಂತಿದ್ದ ಸುಕನ್ಯಾಳ ಒಡನಾಟ,  ಕುಸಿಯುತ್ತಿದ್ದ ಅವನ ಕನಸಿನ ಗೋಪುರವನ್ನು ಎತ್ತಿನಿಲ್ಲಿಸಿದಂತಾಗಿತ್ತು. ಈ ಕಾರಣದಿಂದಾಗಿಯೇ ಅವನು ಗಂಗೆಯ ಬಸುರಿನ ವಿಷಯದಲ್ಲಿ ನಿರಾಳವಾಗಲು ಸಾಧ್ಯವಾಯಿತು.

ಇಬ್ಬರನ್ನು ಒಟ್ಟಿಗೆ ಬೆಂಗಳೂರಿನತ್ತ ಕರೆದುಕೊಂಡು ಹೊರಟ ಮೋಹನ, ಮೊದಲೇ ಬಸ್ಸ್ ಹತ್ತಿ ಕುಳಿತಿದ್ದ ಸುಕನ್ಯಾಳನ್ನು ಗಂಗೆಗೆ ಪರಿಚಯಿಸುತ್ತಾ ” ಇವಳು ನನ್ನ ಫ್ರೆಂಡ್ ತಂಗಿ ಗಂಗೂ, ಇವಳು ಕೂಡ ಬೆಂಗ್ಳೂರಲ್ಲೆ ಕೆಲಸಮಾಡ್ತಿರೋದು. ಇವ್ಳು ಒಂತರ ನಮ್ಮನೆ ಹುಡ್ಗಿ ಇದ್ದಂಗೆ.  ಬೇಕು ಅಂದ್ರೆ ಮನೆಯೆಲ್ಲ ಸೆಟ್ರೆಟ್ ಆಗೋವರೆಗೂ ಒಂದು ವಾರ ನಿನ್ಜೊತೆಲೆ ಇಟ್ಕೊ. ನಮ್ಮನೆಯಿಂದ್ಲೆ ಅವಳ್ ಫ್ಯಾಕ್ಟರಿಗ್ ಓಡಾಡ್ತಳೆ ಏನಂತಿ” ಎಂದು ಕೇಳಿದ. ಆ ಅಪರಿಚಿತ ಬೆಂಗಳೂರಿನಲ್ಲಿ ವಾರದ ಮಟ್ಟಿಗಾದರು ಮಾತಾಡಿಕೊಂಡಿರಲು ಒಬ್ಬ ಜೊತೆಗಾತಿ ಸಿಕ್ಕಳಲ್ಲ ಎಂಬ ಖುಷಿಯಲ್ಲಿ ತೇಲಿದ ಗಂಗೆ ” ಅಯ್ಯೋ ಬಾಳ ಒಳ್ಳೆ ಯೋಚ್ನೆ ಮಾಡಿದಿರಿ ಕನಿ ವಾರ ಅಲ್ದಿದ್ರೆ ತಿಂಗ್ಳೆ ಇರ್ಲಿ ಬುಡಿ ಎಂದು ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸುಕನ್ಯಾಳನ್ನು ಕರೆದು, ತನ್ನ  ಪಕ್ಕವೆ ಕೂರಿಸಿಕೊಂಡು ಬೆಂಗಳೂರಿನ ದಾರಿ ಸವೆಸಿದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು ಓದಿದ್ದೀರಾ? ಲಾಠಿಯ ರುಚಿ ಸವಿದ ಬೋಗನೂರಿನ ಗಂಡಸರು