ಮತ್ತೆ ವಿಪಕ್ಷಗಳ ಮೇಲೆ ಕೇಂದ್ರದ “ಇಡಿ” ಅಸ್ತ್ರ ; ಕೇಜ್ರಿವಾಲ್ ಕಟ್ಟಿಹಾಕಲು “ಇಡಿ” ಚೂ ಬಿಟ್ಟ ಮೋದಿ ಸರ್ಕಾರ
ಲಿಂಕ್ ನಕಲಿಸಲಾಗಿದೆ ✓

ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪ ಹೊಂದಿರುವ ಕೇಂದ್ರ ಬಿಜೆಪಿ ಸರ್ಕಾರ, ವಿಪಕ್ಷಗಳ ಮೇಲೆ ಮತ್ತೊಮ್ಮೆ ತನ್ನ ಅಸ್ತ್ರ ಪ್ರಯೋಗಿಸಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಗೃಹ ಸಚಿವಾಲಯ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.
ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಗೃಹ ಸಚಿವಾಲಯ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅನುಮೋದನೆ ನೀಡಿದೆ. ಆ ಮೂಲಕ ದೆಹಲಿ ಚುನಾವಣಾ ಹೊಸ್ತಿಲಲ್ಲೇ ಬಿಜೆಪಿ ಸರ್ಕಾರ ಈ ನಿಲುವು ತಳೆದಿರುವುದು, ಸರ್ಕಾರದ ಮೇಲೆ ಮತ್ತೆ ಅನುಮಾನ ಹುಟ್ಟುವಂತೆ ಮಾಡಿದೆ.
ಈ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿಯನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅನುಮತಿ ನೀಡಿದ ನಂತರ ಗೃಹ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. ಕಳೆದ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ, ಸಾರ್ವಜನಿಕ ಸೇವಕರನ್ನು ವಿಚಾರಣೆಗೆ ಒಳಪಡಿಸುವ ಮೊದಲು ಇಡಿ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿತ್ತು.
ಆ ನಂತರ ತನಿಖಾ ಸಂಸ್ಥೆ ವಿ.ಕೆ.ಸಕ್ಸೇನಾ ಅವರಿಗೆ ಪತ್ರ ಬರೆದು, ಕೇಜ್ರಿವಾಲ್ ಈ ಹಗರಣದ “ಕಿಂಗ್ಪಿನ್ ಮತ್ತು ಪ್ರಮುಖ ಸಂಚುಕೋರ” ಆಗಿರುವುದರಿಂದ ಅನುಮತಿ ನೀಡಬೇಕು ಎಂದು ತಿಳಿಸಿದೆ. ಪ್ರಾಸಿಕ್ಯೂಷನ್ ದೂರು ಸಲ್ಲಿಸುವ ಮೊದಲು ಅಧಿಕಾರಿಗಳ ಪೂರ್ವಾನುಮತಿ ಪಡೆಯದ ಕಾರಣ ಈ ಪ್ರಕರಣದಲ್ಲಿ ತನ್ನ ಮತ್ತು ಇತರರ ವಿರುದ್ಧ ತನಿಖಾ ಸಂಸ್ಥೆ ಚಾರ್ಜ್ಶೀಟ್ ಸಲ್ಲಿಸಿರುವುದು ಕಾನೂನುಬಾಹಿರ ಎಂದು ಎಎಪಿ ಮುಖ್ಯಸ್ಥರು ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದರು.
ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 197 (1) (ಈಗ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಸೆಕ್ಷನ್ 218) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಜಾರಿ ನಿರ್ದೇಶನಾಲಯವು ಕೇಂದ್ರ ತನಿಖಾ ದಳ (ಸಿಬಿಐ) ನಂತೆ ಪೂರ್ವಾನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ನವೆಂಬರ್ 6 ರಂದು ತೀರ್ಪು ನೀಡಿದ ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
Peepal Media Desk
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
