ಸಂಪಾದಕೀಯ – Peepal Media

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ
ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ  ಈ ಹಿಂದೆ ಇದ್ದವರಲ್ಲಿ ಹಲವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಎಸ್‌ ಜಿ ಸಿದ್ದರಾಮಯ್ಯ ಅವರು ಹಿಂದಿ ಹೇರಿಕೆಯ ಕುರಿತಂತೆ, ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದ್ದರು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಹ ಯಾವುದೇ ಗುರುತರವಾದ ಪ್ರಯತ್ನ ನಡೆಯಲಿಲ್ಲ. ಈಗ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಸರ್ಕಾರ ಸೂಕ್ತರಾದವರನ್ನು, ಕನ್ನಡದ ಕೆಲಸಕ್ಕೆ ಬದ್ಧತೆ ಮತ್ತು ಉತ್ಸಾಹ ಹೊಂದಿರುವವರನ್ನು ನೇಮಕ ಮಾಡಲಿ. ಈ ಮೂಲಕ ಕನ್ನಡದ ಕೀರ್ತಿ ಎಲ್ಲೆಡೆ ಪಸರಿಸಲಿ.

ಇದೀಗ ಕರ್ನಾಟಕ ಸರಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯು ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಇನ್ನಷ್ಟು ಬಲಪಡಿಸಲಿದೆ. ಕನ್ನಡವೂ ಸೇರಿದಂತೆ ಇತರ ಅನೇಕ ದೇಸೀ ಭಾಷೆಗಳನ್ನು ಅದು ಸದ್ಯಕ್ಕೆ ಹಿಂದಕ್ಕೆ ತಳ್ಳಿದೆ. ದೇಸೀ ಭಾಷೆಗಳ ಅಭಿವೃದ್ಧಿಯ ಜವಾಬ್ದಾರಿಯು ರಾಜ್ಯ ಸರಕಾರದ್ದು ಎಂದಷ್ಟೇ ಹೇಳಿ ಅದು ಹಿಂದಿಯನ್ನು ಎಲ್ಲರೂ ಓದುವಂತೆ ಮಾಡಲು ಕ್ರಮ ಕೈಕೊಳ್ಳುತ್ತಿದೆ. ಆದರೆ ಕರ್ನಾಟಕ ಸರಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡ ಹೊರಟಾಗ ಸುಪ್ರೀಂ ಕೋರ್ಟ್ 2015 ರಲ್ಲಿಯೇ ಅದನ್ನು   ತಿರಸ್ಕರಿಸಿ, ಈ ತೀರ್ಮಾನವು ಸಂವಿಧಾನದ (19ಎ) ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿತು. ಹಾಗಾಗಿ  ಸಂವಿಧಾನದಲ್ಲಿಯೇ ಸೂಕ್ತ ತಿದ್ದುಪಡಿ ಮಾಡದ ಹೊರತು ಕನ್ನಡದಲ್ಲಿ ಬೋಧನೆ ಸಾಧ್ಯವೇ ಇಲ್ಲ.

ಇದರ ಜೊತೆಗೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಳುವ ಶಕ್ತಿಶಾಲೀ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ‘ಇದರಿಂದಾಗುತ್ತಿರುವ ಬಹಳ ದೊಡ್ಡ ಅಪಾಯವೆಂದರೆ, ಸಜೀವವಾಗಿರುವ ಸಾವಿರಾರು ಸಣ್ಣ ಭಾಷೆಗಳು ಸಾಯುತ್ತಿರುವುದು. ಈ ಬಗ್ಗೆ ಸರಕಾರಗಳು ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಭಾರತದಲ್ಲಿ ಈ ಸಮಸ್ಯೆ ಇನ್ನೂ ತೀವ್ರತರವಾಗಿದ್ದರೂ, ಕೋಮುವಾದ, ಧರ್ಮ, ಭ್ರಷ್ಟಾಚಾರ, ಜಾತಿ, ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆದ ಹಾಗೆ, ಹಿನ್ನಡೆ ಅನುಭವಿಸುತ್ತಿರುವ ಕನ್ನಡದಂಥ ಭಾಷೆಯ ಉಳಿಯುವಿಕೆಯ ಕುರಿತು ಗಂಭೀರ ಸಂವಾದ ನಡೆಯುತ್ತಿಲ್ಲ. ಕೊರಗ, ಬ್ಯಾರಿ, ಕೊಡವ, ಬಡಗ, ಮೊದಲಾದ ಭಾಷೆಗಳು ಅನೇಕ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ.

1971ರಿಂದ 2011ರ ಅಂಕಿ ಅಂಶಗಳನ್ನು ಗಮನಿಸಿದರೆ, ಕನ್ನಡ ಮಾತಾಡುವವರ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಎಂದರೆ ಸರಾಸರಿ ಶೇಕಡಾ 3.75 ಮಾತ್ರ ಏರಿಕೆ ಆಗಿದೆ. ಇದು ಹಿಂದಿಯಲ್ಲಿ ಸರಾಸರಿ ಶೇಕಡಾ 56.6 ಆಗಿದ್ದರೆ ತಮಿಳಿನಲ್ಲಿ ಶೇಕಡಾ 6 ಆಗಿದೆ. ಈ ನಡುವೆ ಸುಮಾರು 172 ಭಾಷೆಗಳು ಅಪಾಯದ ಅಂಚಿನಲ್ಲಿವೆ. ಆಶ್ಚರ್ಯವೆಂದರೆ ಇಷ್ಟೊಂದು ಸಮಸ್ಯೆಗಳಿದ್ದರೂ ನಮ್ಮ ಸರಕಾರಗಳು  ಅದರ ಕಡೆಗೆ ಗಂಭೀರವಾಗಿ ಗಮನ ಕೊಡದಿರುವುದು. ಸುಮಾರು 72 ಭಾಷೆಗಳಿರುವ ಕರ್ನಾಟಕಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದಂಥ ಸಂಸ್ಥೆ ಅತ್ಯಂತ ಮುಖ್ಯ ಕೆಲಸಗಳನ್ನು ಮಾಡಬೇಕಾಗಿದೆ. ಇವುಗಳ ಜೊತೆಗೆ ನಾಡಿನ ಕೋಮುವಾದೀಕರಣ ಪ್ರಕ್ರಿಯೆಯೂ ನಡೆಯುತ್ತಿದ್ದು, ಕರ್ನಾಟಕ ಎಂಬ ‘ಸರ್ವಜನಾಂಗದ ಶಾಂತಿಯ ತೋಟ’ದ ಸೌಹಾರ್ದ ಪರಂಪರೆಯ ಮೇಲೆ ಘೋರ ಪರಿಣಾಮ ಉಂಟುಮಾಡಿದೆ.

ಈ ಸವಾಲುಗಳನ್ನು ಮತ್ತು ಅಪಾಯಗಳನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿಕೊಂಡು, ಕನ್ನಡವನ್ನು ಸಮಕಾಲೀನಗೊಳಿಸುವ ಕೆಲಸ ಇಂದು ಅತ್ಯಗತ್ಯವಾಗಿ ನಡೆಯಬೇಕಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು, ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳ ನೆರವನ್ನು ಪಡೆದುಕೊಂಡು, ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಾ ಕನ್ನಡ ಸಂಸ್ಕೃತಿಯ ಸಬಲೀಕರಣವನ್ನು ಸಾಧಿಸಬೇಕಾಗಿದೆ. ಕೋಮುವಾದದ ಹರಡುವಿಕೆಯನ್ನು ತಡೆಯುವ ದೃಷ್ಟಿಯಿಂದ, ಜಿಲ್ಲಾ ಮಟ್ಟದಲ್ಲಿ ಯುವಕರಿಗೆ ಕರ್ನಾಟಕ ಸೌಹಾರ್ದ ಪರಂಪರೆಯ ಕುರಿತು ಕಮ್ಮಟಗಳ ಆಯೋಜನೆ, ಪ್ರೌಢಶಾಲೆ ಮತ್ತು ಕಾಲೇಜು ಮಟ್ಟದ ವಿದ್ಯಾರ್ಥಿಗಳು ಸುಲಭವಾಗಿ ಓದಲು ಸಾಧ್ಯವಾಗುವಂತೆ ಕರ್ನಾಟಕದ ಸೌಹಾರ್ದ ಪರಂಪರೆಯ ಕುರಿತು ಪುಸ್ತಕಗಳ ಪ್ರಕಟಣೆ, ಪ್ರಾದೇಶಿಕ ಮಟ್ಟದಲ್ಲಿ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಸಾರುವ ಕಲಾ ಪ್ರದರ್ಶನಗಳ ಆಯೋಜನೆ ಹೀಗೆ ನಮ್ಮ ಬಹುಮುಖೀ ಪರಂಪರೆಯ ಕುರಿತು ಹೊಸ ತಲೆಮಾರಿನ ಜನರಿಗೆ ತಿಳಿಸುವ ಕೆಲಸ ಅಗತ್ಯವಾಗಿ ಆಗಬೇಕು. ಬದಲಾಗುತ್ತಿರುವ ಜಗತ್ತಿನ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ  ಆಲೋಚನೆ ಬರುವಂತೆ ಮಾಡುವುದು, ಭಾಷೆಯ ಮೇಲೆ ಹಿಡಿತ ಬರುವಂತೆ ವಿದ್ಯಾರ್ಥಿಗಳನ್ನು ಬೆಳೆಸುವುದು ಇತ್ಯಾದಿ ಕೆಲಸಗಳು ತುರ್ತಾಗಿ ನಡೆಯಬೇಕು.

ಯೋಗ್ಯ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭದ್ರವಾದ ನೆಲೆಯನ್ನು ಕಟ್ಟಲು ಮೇಲಿನ ಕೆಲಸಗಳು ಬಹಳ ಮುಖ್ಯ. ಈ ಕೆಲಸ ಮಾಡುವಲ್ಲಿ ಕನ್ನಡ ಪ್ರಾಧಿಕಾರವು ನಿರ್ಣಾಯಕ ಪಾತ್ರವನ್ನು ವಹಿಸಬಲ್ಲುದು. ಇದು ಸಾಧ‍್ಯವಾಗಬೇಕಾದರೆ, ಅದರ ನೇತೃತ್ವವು ಯೋಗ್ಯರ ಕೈಗೆ ಹೋಗಬೇಕು. ಇಂತಹ ಕೆಲಸಗಳನ್ನು ಮಾಡುವ ಸಾಮರ್ಥ್ಯ ಇರುವ ಅನೇಕರು ನಮ್ಮಲ್ಲಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆ, ನಟರಾಜ್‌ ಹುಳಿಯಾರ್‌, ಆಶಾದೇವಿ, ರೂಪಾ ಹಾಸನ, ರಹಮತ್‌ ತರೀಕೆರೆ ತಕ್ಷಣ ನೆನಪಿಗೆ ಬರುವ ಕೆಲವು ಹೆಸರುಗಳು. ಇವರಲ್ಲಿ ಪ್ರೊ.ಬಿಳಿಮಲೆಯವರು ಕನ್ನಡದ ಕೈಂಕರ್ಯಗಳ ಕುರಿತು ಖಚಿತತೆ ಹಾಗೂ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದವರು.

1998 ರಿಂದ ದೆಹಲಿಯ ‘ಅಮೆರಿಕನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್’ ನ ನಿರ್ದೇಶಕರಾಗಿ 17 ವರ್ಷ ಕೆಲಸ ಮಾಡಿರುವ ಅವರಿಗೆ ದೇಶ ವಿದೇಶಗಳ ಅನೇಕ ವಿವಿಗಳ ನೇರ ಸಂಪರ್ಕವಿದೆ. 2005 ರಿಂದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸ್ಥಾಪಕ ಪ್ರಾಧ‍್ಯಾಪಕ ಮತ್ತು ಮುಖ್ಯಸ್ಥರಾಗಿ ರಾಜಧಾನಿಯಲ್ಲಿ ಕರ್ನಾಟಕದ ಪ್ರತಿನಿಧೀಕರಣವನ್ನು ಸಬಲಗೊಳಿಸುವ ಕೆಲಸ ಮಾಡಿದ್ದಾರೆ. ಕನ್ನಡದ ಅಭಿಜಾತ ಕೃತಿಗಳಾದ ‘ವಡ್ಡಾರಾಧನೆ’, ‘ಗದಾಯುದ್ಧ’, ‘ಕವಿರಾಜ ಮಾರ್ಗ’ ಕೃತಿಗಳನ್ನು ಇಂಗ್ಲಿಷ್ ಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಕನ್ನಡ ಕರ್ನಾಟಕದ ಕುರಿತು ಒಟ್ಟು 27ಕೃತಿಗಳನ್ನು ಬರೆದಿದ್ದಾರೆ. ದೆಹಲಿಯಲ್ಲಿ ಕರ್ನಾಟಕ ಸಂಘದ ಹೊಸ ಕಟ್ಟಡವನ್ನು ಕಟ್ಟಿ ಬೆಳೆಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ  ಈ ಹಿಂದೆ ಇದ್ದವರಲ್ಲಿ ಹಲವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಉದಾಹರಣೆಗೆ ಎಸ್‌ ಜಿ ಸಿದ್ದರಾಮಯ್ಯ ಅವರು ಹಿಂದಿ ಹೇರಿಕೆಯ ಕುರಿತಂತೆ, ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದ್ದರು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಹ ಯಾವುದೇ ಗುರುತರವಾದ ಪ್ರಯತ್ನ ನಡೆಯಲಿಲ್ಲ. ಈಗ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಸರ್ಕಾರ ಸೂಕ್ತರಾದವರನ್ನು, ಕನ್ನಡದ ಕೆಲಸಕ್ಕೆ ಬದ್ಧತೆ ಮತ್ತು ಉತ್ಸಾಹ ಹೊಂದಿರುವವರನ್ನು ನೇಮಕ ಮಾಡಲಿ. ಈ ಮೂಲಕ ಕನ್ನಡದ ಕೀರ್ತಿ ಎಲ್ಲೆಡೆ ಪಸರಿಸಲಿ.

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?
ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು ಅಥವಾ ಯಾವುದೇ ರಾಜ್ಯ ಸರ್ಕಾರ/ಗಳು ರೂಪಿಸಿದ ಕಾನೂನಿನ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ‌ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಹೇಳಿದೆ. ಕೇಂದ್ರ ಸರ್ಕಾರಕ್ಕಾಗಲಿ, ರಾಜ್ಯ ಸರ್ಕಾರಗಳಿಗಾಗಲಿ ಪಿಎಂ ಕೇರ್ಸ್ ಟ್ರಸ್ಟ್ ಕಾರ್ಯನಿರ್ವಹಣೆ ವಿಷಯದಲ್ಲಿ ಯಾವುದೇ ರೂಪದ ನೇರ ಅಥವಾ ಪರೋಕ್ಷ ಹಿಡಿತ ಇರುವುದಿಲ್ಲ. ಪಿಎಂ ಕೇರ್ಸ್ ಟ್ರಸ್ಟ್ ಸಾರ್ವಜನಿಕ ಪ್ರಾಧಿಕಾರವಲ್ಲವಾದ್ದರಿಂದ ಅದು ಆರ್ ಟಿ ಐ ಕಾಯ್ದೆಯಡಿಯಲ್ಲೂ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡೆವಿಟ್ ನಲ್ಲಿ ಹೇಳಿದೆ.

ಈಗ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ.

ಪಿಎಂ ಕೇರ್ಸ್ ಸ್ಥಾಪನೆಯಾಗಿದ್ದು ಕೋವಿಡ್ ಸಂಕಟದ ಕಾಲದಲ್ಲಿ. ಅಪಾರ ಸಾವು ನೋವು ಆರ್ಥಿಕ ನಷ್ಟ ಗಳಿಂದ ಕಂಗಾಲಾಗಿದ್ದ ಜನರಿಗೆ ಪಿಎಂ ಕೇರ್ಸ್ ಎಂಬುದು ಗಂಧರ್ವ ಲೋಕದಿಂದ ಬಂದ ಸಂಜೀವಿನಿ ಎಂಬಂತೆ ಬಿಂಬಿಸಲಾಗಿತ್ತು. ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲವೆಂದು ಅಂದೇ ಹೇಳಬಹುದಿತ್ತಲ್ಲವೇ? ಇದೊಂದು ಖಾಸಗಿ ಟ್ರಸ್ಟ್, ಇದಕ್ಕೆ ಭಾರತ ಸಂವಿಧಾನಕ್ಕೆ, ಸರ್ಕಾರಗಳಿಗೆ, ಜನರಿಗೆ ಉತ್ತರದಾಯಿ ಅಲ್ಲ ಎಂದು ಅಂದೇ ಹೇಳಬಹುದಿತ್ತಲ್ಲವೇ?

ಇದು ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪನೆಯಾಗದಿದ್ದರೂ ರಾಷ್ಟ್ರೀಯ ಲಾಂಚನ ಬಳಸಿದ್ದು ಯಾಕೆ? ಇದು ಸರ್ಕಾರದ ಅಡಿಯಲ್ಲಿ ಬರುವ ಸಂಸ್ಥೆಯಲ್ಲವಾದರೂ gov.in ಬಳಸಿದ್ದು ಯಾಕೆ? ಹಣ ವಸೂಲಿಗೆ ಸರ್ಕಾರಿ ಯಂತ್ರಾಂಗಗಳನ್ನು ಬಳಸಿಕೊಂಡಿದ್ದು ಯಾಕೆ? ಸರ್ಕಾರವನ್ನು ಮುನ್ನಡೆಸುವವರೇ ಹಣ ಕೊಡಿ ಎಂದು ಬೇಡಿದ್ದು ಯಾಕೆ? ಸ್ವತಃ ಉಪರಾಷ್ಟ್ರಪತಿಗಳೇ ರಾಜ್ಯಸಭೆಯಲ್ಲಿ ಪಿಎಂ ಕೇರ್ಸ್ ಗೆ ದೇಣಿಗೆ ಕೊಡಿ ಎಂದು ಬೇಡಿಕೊಂಡಿದ್ದು ಯಾಕೆ?

ಒಂದು ಖಾಸಗಿ ಟ್ರಸ್ಟ್ ಗೆ ಪಿಎಂ ಕೇರ್ಸ್ ಹೆಸರು ಬಳಸಿದ್ದು ಯಾಕೆ? ಇದರಿಂದ ದೇಶದ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸಿದಂತೆ ಆಗಲಿಲ್ಲವೇ? ಖಾಸಗಿ ವ್ಯಕ್ತಿಗಳು ಪ್ರಧಾನಿ ಹೆಸರಲ್ಲಿ ಟ್ರಸ್ಟ್ ಮಾಡಿದರೆ ಅದು ಅಪರಾಧವಲ್ಲವೇ?

ಪಿಎಂ ಕೇರ್ಸ್ ಖಾಸಗಿ ಟ್ರಸ್ಟ್ ಆದ ಮೇಲೆ, ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನು ಹೇಗೆ ಕಡಿತ ಮಾಡಿಕೊಂಡು ಟ್ರಸ್ಟ್ ಅಕೌಂಟಿಗೆ ಜಮಾ ಮಾಡಲಾಯಿತು? ಆದಾಯ ತೆರಿಗೆ ವಿನಾಯಿತಿಯನ್ನು ಯಾವ ಆಧಾರದಲ್ಲಿ ನೀಡಲಾಯಿತು? ಪಿಎಂ ಹೆಸರಲ್ಲಿ ಏನನ್ನು ಬೇಕಾದರೂ ಮಾಡಬಹುದೇ?

ದೇಶದ ಜನರು ಸಾವಿರಾರು ಕೋಟಿ ರುಪಾಯಿಗಳನ್ನು ಪಿಎಂ ಕೇರ್ಸ್ ಗೆ ನೀಡಿದ್ದಾರೆ. ಈಗ ಅವರು ತಾವು ಕೊಟ್ಟ ಹಣದ ಲೆಕ್ಕ ಕೇಳುವಂತಿಲ್ಲ. ಎಷ್ಟು ಹಣ, ಯಾತಕ್ಕಾಗಿ ಖರ್ಚು ಮಾಡಿದ್ದೀರಿ ಎಂದು ಕೇಳುವಂತಿಲ್ಲ. ನಾಳೆ ಹಣವನ್ನೆಲ್ಲ ತೆಗೆದು ಅದಾನಿ ಕಂಪೆನಿಗೆ ಕೊಟ್ಟರೂ, ಭಾರತೀಯ ಜನತಾ ಪಕ್ಷ ಚುನಾವಣೆ ಖರ್ಚಿಗೋ, ಶಾಸಕರ ಖರೀದಿಗೋ ಬಳಸಿದರೂ ನಾವು ಕೇಳುವಂತಿಲ್ಲ. ಇದು ಭಾರತದ ಯಾವುದೇ ಕಾನೂನಿನ ಅಡಿಯಲ್ಲಿ ಸ್ಥಾಪಿಸಿಲ್ಲ ಎಂದು ಸರ್ಕಾರ ಹೇಳುತ್ತಿರುವುದರಿಂದ ನಾವು ಕೋರ್ಟುಗಳ ಮೊರೆ ಹೋಗುವಂತಿಲ್ಲ. ಇಂಥ ಅನೈತಿಕ ವ್ಯವಹಾರ ಯಾಕೆ ಬೇಕಿತ್ತು?

ಮೊದಲಿನಿಂದಲೂ ಇರುವ ಪಿಎಂ ರಿಲೀಫ್ ಫಂಡ್ ಗೆ ಪಿಎಂ ಕೇರ್ಸ್ ಹಣ ಕೊಡುತ್ತದೆಯಂತೆ! ಈ ಡಬ್ಬಲ್ ಎಂಜಿನ್ ಯಾಕೆ ಬೇಕಿತ್ತು? ಒಂದು ಅಧಿಕೃತ ಇರುವಾಗ ಇನ್ನೊಂದು ಅನಧಿಕೃತ ಯಾಕೆ ಬೇಕಿತ್ತು? ಪಿಎಂ ರಿಲೀಫ್ ಫಂಡ್ ಮೂಲಕ ಮಾಡಲಾಗದ ಯಾವ ಘನಂದಾರಿ ಕೆಲಸವನ್ನು ಪಿಎಂ ಕೇರ್ಸ್ ಮಾಡುತ್ತದೆ?

ನರೇಂದ್ರ ಮೋದಿ ಸರ್ಕಾರ ಬಿದ್ದು ಹೋಗಿ, ಹೊಸ ಸರ್ಕಾರ ಬಂತು ಎಂದಿಟ್ಟುಕೊಳ್ಳಿ. ಆಗ ಟ್ರಸ್ಟ್ ಹಣೆಬರೆಹವೇನು? ಹೊಸ ಪ್ರಧಾನಿಗೆ ಅಲ್ಲಿ ಪಾತ್ರವೇ ಇರುವುದಿಲ್ಲ. ಪ್ರಧಾನಿ ಬದಲಾದರೂ ಮೋದಿಯೇ ಪಿಎಂ ಕೇರ್ಸ್ ನಿರ್ವಹಿಸುತ್ತಾರೆಯೇ? ಆಗ ಪ್ರಧಾನಿಯಲ್ಲದ ವ್ಯಕ್ತಿ ಪ್ರಧಾನಿ ಹೆಸರಲ್ಲಿ ಹೇಗೆ ಟ್ರಸ್ಟ್ ನಡೆಸುತ್ತಾರೆ?

ಇದೆಲ್ಲ ಗಮನಿಸಿದರೆ ಪಿಎಂ ಕೇರ್ಸ್ ಕೂಡ ಒಂದು ದೊಡ್ಡ ಫ್ರಾಡ್ ಎಂದು ಅನಿಸುವುದಿಲ್ಲವೇ? ದೇಶವನ್ನು ಮುನ್ನಡೆಸಬೇಕಾದವರೇ ಇಂಥ ದಂಧೆಗೆ ಇಳಿದರೆ ದೇಶ ಉಳಿಯಲು ಸಾಧ್ಯವೇ?

ದಿನೇಶ್ ಕುಮಾರ್ ಎಸ್.ಸಿ.

ʼನಾವು ಕಲಿಯುವುದಾದರೆ ಮಾತ್ರ…ʼ
ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೋ ಮತ್ತು ಅದರ ನಂತರ ಸಂಸ್ಥೆ ನೀಡಿದ ಸ್ಪಷ್ಟೀಕರಣ, ಇದರೊಂದಿಗೆ ಮುಗಿದು ಹೋಗಬಹುದಾದ ಘಟನೆ ಖಂಡಿತ ಇದಲ್ಲ. ಇದು ನಮ್ಮನ್ನು ಚಿಂತನೆಗೆ ಈಡು ಮಾಡಬೇಕಾದ ವಿಡಿಯೋ. ಬೆಳೆಯುವ ಮಕ್ಕಳ ಮೇಲೆ ಆಳವಾಗಿ ಪರಿಣಾಮ ಬೀರಬಹುದಾದ ಇಂತಹ ಘಟನೆಗಳನ್ನು ಪೀಪಲ್‌ ಮೀಡಿಯಾ ಖಂಡಿಸುತ್ತದೆ. ಮತ್ತು ನೊಂದ ಮಕ್ಕಳೊಡನೆ ನಿಲ್ಲುತ್ತದೆ ಹಾಗೂ ಭಾರತದ ಶಾಲಾ ತರಗತಿಗಳು ಜಾತಿ, ಧರ್ಮ, ಲಿಂಗ ಇತ್ಯಾದಿ ಬೇಧಗಳಿಂದ ಮುಕ್ತವಾಗಿರಬೇಕೆಂದು ನಾವು ಆಗ್ರಹಿಸುತ್ತೇವೆ ಮತ್ತು ಆ ಕುರಿತು ಬದ್ಧತೆಯಿಂದ ಕೆಲಸ ಮಾಡುತ್ತೇವೆ

ನಿನ್ನೆ ಬೆಳಗಿನಿಂದ ಟ್ವಿಟರ್‌ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದು “ಓಡಾಡುತ್ತಾ” ಬಿಸಿಬಿಸಿ ಚರ್ಚೆಗೆ ಈಡಾಗುತ್ತಿದೆ, ಆ ವಿಡೀಯೊ ಗಮನಿಸಿದರೆ ಒಂದು ದೇಶವಾಗಿ ನಾವು ಎಲ್ಲಿಗೆ ತಲುಪಿದ್ದೇವೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಮೊದಲು ವಿಡೀಯೋದಲ್ಲಿ ಏನೇನಿತ್ತು ಎನ್ನುವುದನ್ನು ತಿಳಿಯೋಣ ಬನ್ನಿ.

A Professor in a class room in India calling a Muslim student ‘terrorist’ – This is what it has been to be a minority in India! pic.twitter.com/EjE7uFbsSi
— Ashok Swain (@ashoswai) November 27, 2022

ಉಡುಪಿಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಪ್ರಾಧ್ಯಾಪಕರು ವಿದ್ಯಾರ್ಥಿಯ ಬಳಿ ಅವನ ಹೆಸರನ್ನು ಕೇಳಿದ್ದಾರೆಂದು ವರದಿಯಾಗಿದೆಯಾದರೂ ಆ ಕುರಿತು ವಿಡೀಯೊದಲ್ಲಿ ಸಾಕ್ಷ್ಯವಿಲ್ಲ ಮತ್ತು ನಂತರ ಹುಡುಗ ಮುಸ್ಲಿಂ ಹೆಸರನ್ನು ಹೇಳಿದ ನಂತರ “ಓಹ್, ನೀನು ಕಸಬ್ ಹಾಗೆ ಇದ್ದೀ!” ಎಂದಿದ್ದಾರೆ ಎನ್ನಲಾಗಿದೆ. ( 26/11 ಮುಂಬೈ ದಾಳಿಯ ನಂತರ ಜೀವಂತವಾಗಿ ಸೆರೆಹಿಡಿಯಲಾದ ಏಕೈಕ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು 2012ರಲ್ಲಿ ಗಲ್ಲಿಗೇರಿಸಲಾಯಿತು.
ಎಲ್ಲೆಡೆ ವೈರಲ್‌ ಆಗಿರುವ ವೀಡಿಯೊದಲ್ಲಿ, ವಿದ್ಯಾರ್ಥಿಯು ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ನೀವು ನನ್ನನ್ನು ಭಯೋತ್ಪಾದಕ ಎನ್ನುವ ಮೂಲಕ ನನ್ನ ಧರ್ಮಕ್ಕೆ ಅಪಮಾನ ಮಾಡಿದ್ದೀರಿ ಎಂದು ನೋವಿನಿಂದ ಹೇಳಿದ್ದಾನೆ.

“26/11 ತಮಾಷೆಯಾಗಿರಲಿಲ್ಲ. ಈ ದೇಶದಲ್ಲಿ ಮುಸ್ಲಿಮನಾಗಿ ದಿನನಿತ್ಯ ಇದನ್ನೆಲ್ಲಾ ಎದುರಿಸುವುದು ತಮಾಷೆಯಲ್ಲ ಸಾರ್. ನನ್ನ ಧರ್ಮದ ಬಗ್ಗೆಯೂ ನೀವು ಹೀಗೆ ಅವಹೇಳನಕಾರಿಯಾಗಿ ತಮಾಷೆ ಮಾಡುವಂತಿಲ್ಲ. ಇದು ತಮಾಷೆಯಲ್ಲ ಸಾರ್, ಅಲ್ಲ. ,” ಎಂದು ವಿದ್ಯಾರ್ಥಿಯು ಕೂಗಿದಾಗ ಶಿಕ್ಷಕ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಾರೆ.

“ನೀನು ನನ್ನ ಮಗನಂತೆ…” ಎಂದು ಪ್ರಾಧ್ಯಾಪಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ.
ಆಗ ಹುಡುಗ “ನೀವು ನಿಮ್ಮ ಮಗನ ಬಳಿ ಹೀಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ?” ಎಂದು ಕೇಳುತ್ತಾನೆ.

ಅಧ್ಯಾಪಕರು “ಇಲ್ಲ” ಎಂದಾಗ, ವಿದ್ಯಾರ್ಥಿಯು ಮುಂದುವರಿದು: “ಹಾಗಾದರೆ ನೀವು ನನ್ನನ್ನು ಇಷ್ಟು ಜನರ ಮುಂದೆ ಹೇಗೆ ಆ ಹೆಸರಿನಿಂದ ಕರೆಯುತ್ತೀರಿ? ನೀವು ವೃತ್ತಿಪರರು, ನೀವು ಮಕ್ಕಳಿಗೆ ಕಲಿಸುತ್ತೀರಿ, ಕೇವಲ ಕ್ಷಮೆ ನೀವು ಹೇಗೆ ಯೋಚಿಸುತ್ತೀರಿ ಅಥವಾ ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳುತ್ತೀರಿ ಎನ್ನುವುದನ್ನು ಬದಲಾಯಿಸುವುದಿಲ್ಲ.”

ಶಿಕ್ಷಕ ಮುಂದುವರೆದು ಮತ್ತೆ ಕ್ಷಮೆ ಕೇಳುತ್ತಾರೆ.

ಈಗ ಘಟನೆಯ ಮುಂದುವರೆದ ಭಾಗವಾಗಿ ಮಣಿಪಾಲ್‌ ಯುನಿವರ್ಸಿಟಿ ಆ ಪ್ರಾಧ್ಯಾಪಕರನ್ನು ವಿಷಯದ ಕುರಿತಾದ ತನಿಖೆ ಮುಗಿಯುವರೆಗೆ ಅಮಾನತ್ತಿನಲ್ಲಿರಿಸುವುದಾಗಿ ಪ್ರಕಟಣೆ ನೀಡಿದೆ. ಮತ್ತು ಇಂತಹ ವಿಷಯಗಳ ಕುರಿತು ಸಂಸ್ಥೆಯು ಶೂನ್ಯ ಸಹನೆಯನ್ನು ಹೊಂದಿದ್ದು ತಮ್ಮ ಸಂಸ್ಥೆಯ ನೀತಿಯ ಪ್ರಕಾರ ವಿಚಾರಣೆ ನಡೆಸುವುದಾಗಿ ಹೇಳಿಕೊಂಡಿದೆ.

ಈ ಘಟನೆಯಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಅದರಲ್ಲಿ ಒಂದು ಆ ವಿದ್ಯಾರ್ಥಿ ಒಬ್ಬಂಟಿಯಾಗಿ ತನ್ನ ಪ್ರಾಧ್ಯಾಪಕರ ಸಂವೇದನಾ ರಹಿತ ಮಾತುಗಳನ್ನು ಪ್ರತಿಭಟಿಸಿ ಮಾತನಾಡುತ್ತಿದ್ದರೆ ಉಳಿದ ವಿದ್ಯಾರ್ಥಿಗಳು ಮೂಕಪ್ರೇಕ್ಷಕರಾಗಿ ಉಳಿದಿದ್ದರು. ಇದು ನಮ್ಮ ಭಾರತದ ಬಹುತೇಕ ಮಧ್ಯಮ ವರ್ಗ ಮತ್ತು ಅದಕ್ಕಿಂತಲೂ ಉಳಿದ ಮೇಲಿನ ವರ್ಗಗಳ ಜನರ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ದ್ವೀಪಗಳಾಗಿ ಬದುಕುವ ಈ ಜನರು ಎಂದಿಗೂ ತಮ್ಮ ಸುತ್ತಲಿನ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲದೆ ಇತ್ತೀಚೆಗೆ ಶಾಲಾ ಮಟ್ಟದಲ್ಲೇ ಮಕ್ಕಳು ಧಾರ್ಮಿಕವಾಗಿ ಗುಂಪುಗಳಾಗಿ ಒಡೆದುಹೋಗಿರುವುದು ಕೂಡಾ ಇದಕ್ಕೆ ಕಾರಣ. (ಇತ್ತೀಚಿನ ಹಿಜಾಬ್‌ ಗಲಾಟೆಯನ್ನು ನೆನಪಿಸಿಕೊಳ್ಳಿ)

ಎರಡನೆಯದಾಗಿ ಗಮನ ಸೆಳೆಯುವ ವಿಷಯವೆಂದರೆ ಸೌಹಾರ್ದತೆಯ ಪಾಠ ಹೇಳಿಕೊಡಬೇಕಿರುವ ಪ್ರಾಧ್ಯಾಪಕರೇ ಕೋಮುವಾದಿ ಮನಸ್ಥಿತಿ ಹೊಂದಿರುವುದು. ಹಿಂದೆಯೂ ಇಂತಹ ಮನಸ್ಥಿತಿಯ ಶಿಕ್ಷಕರಿದ್ದರಾದರೂ ಅವರ ಇಂತಹ ಮನಸ್ಥಿತಿಗಳು ನೇರ ತರಗತಿಗಳಲ್ಲಿ ಅಷ್ಟಾಗಿ ಪ್ರಕಟಗೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ವಾಟ್ಸಾಪ್‌ ಫೇಸ್ಬುಕ್ಕಿನಂತಹ ಸಾಮಾಜಿಕ ತಾಣಗಳ ಗ್ರೂಪುಗಳು ಇಂತಹ ಮನಸ್ಥಿತಿಯುಳ್ಳ ಶಿಕ್ಷಕರಲ್ಲಿ ಒಂದು ರೀತಿಯ ಭಂಡ ಧೈರ್ಯವನ್ನು ತುಂಬುತ್ತಿವೆ ಮತ್ತು ಇಂತಹ ಮನಸ್ಥಿತಿ ಹೊಂದಿರುವುದು ಸರಿಯೆನ್ನುವ ವಾತಾವಾರಣವನ್ನು ಸೃಷ್ಟಿಸುತ್ತಿವೆ. ಆದರೆ ಇದು ಕೇವಲ ಶಿಕ್ಷಕರಿಗಷ್ಟೇ ಸೀಮಿತವಾಗಿಲ್ಲ.

ಪ್ರಜ್ಞಾವಂತರಾಗಬೇಕಿದ್ದ ಕಲಾವಿದರು, ಸಾಹಿತಿಗಳನ್ನೂ ಈ ಕೋಮು ವಿಷ ಬಿಟ್ಟಿಲ್ಲ. ಕಲಾವಿದರು, ಸಾಹಿತಿಗಳು ಖ್ಯಾತಿಗಾಗಿ ದ್ವೇಷವನ್ನು ಬಳಸಿಕೊಳ್ಳುವುದನ್ನು ಕಲಿತಿದ್ದಾರೆ. ಇಂದು ಸಾಹಿತ್ಯಕವಾಗಿ ಏನೂ ಅಲ್ಲದ ವ್ಯಕ್ತಿಗಳೂ ದ್ವೇಷಪೂರಿತ ಲೇಖನಗಳನ್ನು ಬರೆಯುವ ಮೂಲಕ ಬಲಪಂಥೀಯ ಪಾಳಯಗಳಲ್ಲಿ ಮಿಂಚುತ್ತಿದ್ದಾರೆ. ಈ ಹಿಂದೆ ಪ್ರಜ್ಞಾವಂತರಂತೆ ಬರೆಯುತ್ತಿದ್ದ ಹಲವರೂ ಈಗೀಗ ದ್ವೇಷ ಬರಹಗಳ ಮೂಲಕ ಒಂದಿಷ್ಟು ಲೈಮ್‌ ಲೈಟಿನಡಿ ಮಿಂಚಲು ತಯಾರಾಗುತ್ತಿದ್ದಾರೆ.

ದುಷ್ಟ ರಾಜಕಾರಣಿಗಳು, ಕೋಮುವಾದಿ ಮನಸ್ಥಿತಿಯ ಚಿಂತಕರು ಅಧಿಕಾರ ಹಂಚಿಕೊಂಡರೆ ಏನಾಗಬಹುದೆನ್ನುವುದನ್ನು ನಾವು ಭಾರತದಲ್ಲಿ ನೋಡುತ್ತಿದ್ದೇವೆ. ಇಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ಹಿಂಸೆಯನ್ನು ವೈಭವೀಕರಿಸಿ ಸೋಷಿಯಲ್‌ ಮೀಡಿಯಾ ಮತ್ತು ಬಲಪಂಥೀಯ ಮಾಧ್ಯಮಗಳ ಮೂಲಕ ಒಬ್ಬ ಅಲ್ಪಸಂಖ್ಯಾತನ ಮೇಲೆ ನಡೆದ ದಾಳಿಯನ್ನು ಇಡೀ ದೇಶದ ಅಲ್ಪಸಂಖ್ಯಾತರನ್ನು ಬೆದರಿಸಿ “ಅವರಿಗೆ ಅವರ ಸ್ಥಾನವನ್ನು ನೆನಪಿಸಲು” ಬಳಸಲಾಗುತ್ತಿದೆ. ಮೇಲೆ ಹೇಳಲಾದ ವಿಡೀಯೊದಲ್ಲೂ ಕೂಡಾ ಅದನ್ನು ಖಂಡಿಸಿದವರಿಗಿಂತಲೂ ಅದನ್ನು ಸುತ್ತಿ ಬಳಸಿ ಸಮರ್ಥಿಸಿಕೊಳ್ಳುವವರೇ ಹೆಚ್ಚಿರುವುದು ಅಚ್ಚರಿಯೇನಲ್ಲ.

ಹಿಂಸೆಯ ಪರವಾಗಿ ಯಾವುದೇ ನಾಚಿಕೆಯಿಲ್ಲದೆ ಮಾತನಾಡಬಲ್ಲ, ಅದನ್ನು ಸಮರ್ಥಿಸಿಕೊಳ್ಳಬಲ್ಲವರು ನಮ್ಮ ನಿಮ್ಮ ಕುಟುಂಬಗಳಲ್ಲೇ ಇದ್ದಾರೆ. ನಮ್ಮ ಅಕ್ಕಪಕ್ಕದಲ್ಲೇ ಇದ್ದಾರೆ. ಇಂದು ಯಾವುದೇ ಮತಾಂಧ ವ್ಯಕ್ತಿ ನಾನು ಕೋಮುವಾದಿ, ಅಲ್ಪಸಂಖ್ಯಾತ ವಿರೋಧಿ, ನಾನು ಮರ್ಯಾದ ಹತ್ಯೆಯ ಪರ ಎಂದು ಬೋರ್ಡ್‌ ತಗುಲಿಸಿಕೊಂಡು ತಿರುಗುವುದಿಲ್ಲ. ಅವನು ನಮ್ಮ ನಿಮ್ಮಂತೆಯೇ ಒಬ್ಬ ನಿರುದ್ಯೋಗಿಯೋ, ಬ್ಯಾಂಕ್‌ ಉದ್ಯೋಗಿಯೋ, ಶಿಕ್ಷಕನೋ ಇನ್ನೇನೋ ಆಗಿರುತ್ತಾನೆ, ಸಮಯ ಬಂದಾಗ ಗುಂಪಿನಲ್ಲಿ ಅವನೊಳಗಿರುವ ಕೋಮುವಾದಿ ಎದ್ದು ನಿಲ್ಲುತ್ತಾನೆ. ಮತ್ತು ಈಗೀಗ ಕೋಮು ಗಲಭೆಯೆಂದರೆ ಬೀದಿಗಿಳಿದು ಕಲ್ಲು ಹೊಡೆಯುವ ಮಾದರಿಯದ್ದಲ್ಲ. ಇಂದು ಅಂತಹ ಗಲಭೆಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಎಬ್ಬಿಸಲಾಗುತ್ತದೆ. ಗುಂಪುಗುಂಪಾಗಿ ವ್ಯಕ್ತಿಗಳ ಮೇಲೆ ಗುಂಪು ಹಲ್ಲೆ ಮಾಡಲಾಗುತ್ತದೆ, ಎಲ್ಲೋ ನಡೆದ ಗುಂಪು ಹಲ್ಲೆಯ ವಿಡೀಯೊಗಳಿಗೆ ಲಜ್ಜೆಯಿಲ್ಲದೆ ಸಮರ್ಥನೆ ನೀಡಲಾಗುತ್ತದೆ. ಹೌದು ನಮ್ಮ ಭಾರತ ಬದಲಾಗಿದೆ.

ಜರ್ಮನಿಯ ಹಾಲೊಕಾಸ್ಟ್‌ ಎನ್ನುವುದು ಇದ್ದಕ್ಕಿದ್ದಂತೆ ನಡೆದಿದ್ದಲ್ಲ, ಕ್ಯಾಂಪುಗಳನ್ನು ಕಟ್ಟುವ ಮೊದಲು ಜನರನ್ನು ಮಸಿನಲ್ಲಿ ದ್ವೇಷದ ಬೀಜಗಳನ್ನು ಬಿತ್ತಲಾಗಿತ್ತು. ನಾವು ಅವರು ಎನ್ನುವ ನರೇಟಿವ್‌ಗಳನ್ನು ಸಾಧ್ಯಂತವಾಗಿ ಕಟ್ಟಲಾಗಿತ್ತು. ಇಂದು ಭಾರತದಲ್ಲಿಯೂ ಅದೇ ಆಗುತ್ತಿದೆ. ಬಲಪಂಥೀಯ ರಾಜಕಾರಣ ಕಾಲೇಜುಗಳಲ್ಲಿ ಸ್ಥಳ ಪಡೆಯುತ್ತಿದೆ. ಕಾಲೇಜುಗಳ ಒಳಗೇ ಇತಿಹಾಸದ ಪ್ರಾಧ್ಯಾಪಕರಿಗೆ ಹೊಸ ಬಗೆಯ “ರೋಚಕ ಇತಿಹಾಸ”ವನ್ನು “ಕಲಿಸಲಾಗುತ್ತಿದೆ.” ಇದೆಲ್ಲ ಹೆಚ್ಚಿಕೊಳ್ಳಲು ಕಾರಣ ದುಷ್ಟರ ಕಾರ್ಯಾಚರಣೆಯಲ್ಲ, ಬದಲಿಗೆ ಸಜ್ಜನರ ಮೌನ. ಈಗ ಇದು ತರಗತಿಗಳಿಗೆ ಹಬ್ಬಿದೆ, ಬೀದಿಗಳಿಗೆ ಹಬ್ಬಿದೆ, ಊರುಗಳಿಗೆ ಹಬ್ಬಿದೆ. ಆದರೂ ಜನರು “ಏನೂ ನಡೆದಿಲ್ಲವೆನ್ನುವಂತೆ” ಆರಾಮಾಗಿದ್ದಾರೆ. ಸದ್ಯದ ಆತಂಕವೆಂದರೆ ಅದೇ ಆಗಿದೆ. ಸದಾ ಮೂಲೆ ತಳ್ಳಲ್ಪಟ್ಟ ವ್ಯಕ್ತಿಗೆ ಇನ್ನೊಮ್ಮೆ ಮೂಲೆಗೆ ತಳ್ಳಲ್ಪಡುವುದರಲ್ಲಿ ಏನೂ ವಿಶೇಷ ಎನ್ನಿಸುವುದಿಲ್ಲ. ಆದರೆ ಇದುವರೆಗೂ ಸೆಕ್ಯುಲರ್‌ ಭಾರತ ಕರುಣಿಸಿದ ಸವಲತ್ತುಗಳು, ಜನರು ನಾಳೆ ದೇಶವೆನ್ನುವುದು ಮತಾಂಧರ ನೆಲೆವೀಡಾದಾಗ ಅಭಿವೃದ್ಧಿಯ ರುಚಿಯನ್ನುಂಡ ಜನರೂ ಕೂಡಾ ಅವರ ಗುರಿಯಾಗಲಿದ್ದಾರೆ. ಗಲಭೆ ಪೀಡಿತ ದೇಶದಲ್ಲಿ ತಿನ್ನಲೂ ಅನ್ನವೂ ಇರುವುದಿಲ್ಲ. ಆಗ ಬೀದಿಗಿಳಿದರೆ ಏನೂ ಸಿಗುವುದಿಲ್ಲ. ನಾವು ಕಲಿಯುವುದಾದರೆ ಅಕ್ಕಪಕ್ಕದ ದೇಶಗಳಲ್ಲೇ ನಮಗೆ ಪಾಠವಿದೆ. ಅದು “ನಾವು ಕಲಿಯುವದಾದರೆ ಮಾತ್ರ.”

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?
ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ ಪ್ರಶ್ನಾತೀತವೇನಲ್ಲ. ಮಾಧ್ಯಮವೂ ವಿಮರ್ಶೆಗೆ ಒಳಪಡಬೇಕು, ಯಾವುದನ್ನು ಮಾಧ್ಯಮ ತಪ್ಪು ಎಂದು ಹೇಳುತ್ತದೆಯೋ ಅದೇ ತಪ್ಪನ್ನು ಮಾಧ್ಯಮವೇ ಮಾಡಕೂಡದು ಎಂದು ಸಮಾಜ ನಿರೀಕ್ಷಿಸುತ್ತದೆ. ಆದರೆ ಈಗ ಹಾಗಾಗುತ್ತಿಲ್ಲ. ಮಾಧ್ಯಮ ಪ್ರಶ್ನಾತೀತವಾಗಿಯೇ ಇರಲು ಬಯಸುತ್ತದೆ. ಈ ಅಹಂಕಾರಕ್ಕೆ ಸ್ಪಷ್ಟ ಉದಾಹರಣೆ ಪೀಪಲ್ ಮೀಡಿಯಾ ಬಯಲಿಗೆಳೆದ ದೀಪಾವಳಿ ಭಕ್ಷೀಸು ಹಗರಣ.

ದೀಪಾವಳಿ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನೇತಾರರು, ಸರ್ಕಾರವನ್ನು ನಡೆಸುವವರು ಪತ್ರಕರ್ತರಿಗೆ ಸಿಹಿ ತಿಂಡಿ ಹಂಚುವ ಒಂದು ಸಂಪ್ರದಾಯ ಜಾರಿಯಲ್ಲಿದೆ. ಈ ಬಾರಿ ಸಿಹಿಯೊಂದಿಗೆ ಲಕ್ಷಗಟ್ಟಲೆ ಹಣವನ್ನೂ ಇಟ್ಟು ಹಂಚಲಾಯಿತು. ಇದನ್ನು ಹಂಚಿದವರು ಸ್ವತಃ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ. ಇದು ಪತ್ರಕರ್ತರನ್ನು ನೇರವಾಗಿ ಆಮಿಷಕ್ಕೆ ಒಳಪಡಿಸುವ ಭ್ರಷ್ಟಾಚಾರ‌. ನಮ್ಮ ಕಾನೂನು ಕಾಯ್ದೆಗಳ ಅಡಿಯಲ್ಲಿ ಇದೊಂದು ಅಪರಾಧ. ಮೇಲಾಗಿ ಇದು ರಾಜಕಾರಣಿಗಳು-ಪತ್ರಕರ್ತರ ನಡುವಿನ ಅನೈತಿಕ ಕೂಡಾವಳಿಗೊಂದು ಉದಾಹರಣೆ. ಆದರೆ ಹಗರಣ ಬಯಲಾದ ನಂತರ ನಡೆಯುತ್ತಿರುವ ಘಟನೆಗಳು ಗಾಬರಿ ಹುಟ್ಟಿಸುವಂತಿವೆ.

ಪತ್ರಕರ್ತರೆಲ್ಲರೂ ಭ್ರಷ್ಟರಲ್ಲ. ಆದರೆ ಪತ್ರಕರ್ತರಲ್ಲಿ ಭ್ರಷ್ಟರಿದ್ದಾರೆ ಮತ್ತು ಆ ಸಂಖ್ಯೆ ಹೆಚ್ಚುತ್ತಲೇ ಇದೆ ಎಂಬುದನ್ನು ಪ್ರಾಮಾಣಿಕ ಪತ್ರಕರ್ತರೂ ಒಪ್ಪಿಕೊಳ್ಳುತ್ತಾರೆ‌. ಲಾಗಾಯ್ತಿನಿಂದಲೂ ರಾಜಕಾರಣಿಗಳಿಂದ ಬೆಲೆ ಬಾಳುವ ಉಡುಗೊರೆ, ಹಣ ಪಡೆದವರ ಸಂಖ್ಯೆಯೇನು ಕಡಿಮೆ ಇಲ್ಲ. ತಮ್ಮ ಪ್ರಭಾವ ಬಳಸಿ ರಾಜಕಾರಣಿಗಳಿಂದ ಬೇರೆ ಬೇರೆ ರೀತಿಯ ಲಾಭ ಪಡೆದ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಆಳುವವರಿಗೆ ಮಾರಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಇದು ನಿಲ್ಲಬೇಕು ಎಂದು ಪತ್ರಕರ್ತರ ವಲಯದಲ್ಲಿನ ಪ್ರಾಮಾಣಿಕರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಆದರೆ ಈ ಧ್ವನಿಗಳು ದುರ್ಬಲವಾಗಿವೆ.  ಈ ಧ್ವನಿಗಳಿಗೆ ಶಕ್ತಿ ತುಂಬುವ ಕೆಲಸ ಆಗುತ್ತಿಲ್ಲ.

ಹಿಂದೆ ಮೆರಾಜುದ್ದೀನ್ ಪಟೇಲ್ ಅವರು ಇಂಗ್ಲಿಷ್ ಪತ್ರಿಕೆಯ ವರದಿಗಾರ್ತಿಯೊಬ್ಬರಿಗೆ ಹಣ ನೀಡಿದಾಗ ಅವರು ಅದನ್ನು ಅಲ್ಲೇ ಪ್ರತಿಭಟಿಸಿ ಸಂಸ್ಥೆಯ ಗಮನಕ್ಕೆ ತಂದಿದ್ದರು. ಆ ಮಾಧ್ಯಮವೂ ಕೂಡ ಈ ಕುರಿತು ವರದಿಯೊಂದನ್ನು ಪ್ರಕಟಿಸಿ, ಸಚಿವರ ನಿಲುವನ್ನು ಖಂಡಿಸಿತ್ತು. ಆದರೆ ಈ ಬಾರಿ ಮುಖ್ಯಮಂತ್ರಿಗಳ ಕಚೇರಿಯಿಂದ ಭಕ್ಷೀಸು ಬಂದಾಗ ಅದನ್ನು ತಿರಸ್ಕರಿಸಿದ ಮಾಧ್ಯಮಗಳು ಇದನ್ನೊಂದು ಅನೈತಿಕ ಘಟನೆ, ಭ್ರಷ್ಟಾಚಾರ ಎಂದು ಪರಿಗಣಿಸಿ ಸುದ್ದಿ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಹಣ ಹಿಂದಿರುಗಿಸಿದ ಪತ್ರಕರ್ತರು ಈ ವಿಷಯವನ್ನು ವಾಟ್ಸಾಪ್ ಗಳಲ್ಲಿ ಹಂಚಿಕೊಂಡರಾದರೂ ಮಾಧ್ಯಮಗಳು ಬಹಿರಂಗವಾಗಿ ಆದ ಘಟನೆಯನ್ನು ಹೇಳಿಕೊಳ್ಳುವ ಧೈರ್ಯ ತೋರಬೇಕಿತ್ತು. ಅದು ಆಗಲಿಲ್ಲ.

ಪ್ರಕರಣ ಈಗ ಲೋಕಾಯುಕ್ತರ ಮುಂದಿದೆ. ಜನಾಧಿಕಾರ ಸಂಘರ್ಷ ಪರಿಷತ್ ದೂರು ನೀಡಿದೆ. ಆದರೆ ಹಲವು ಪ್ರಶ್ನೆಗಳು ಹಾಗೇ ಉಳಿದಿವೆ. ದೀಪಾವಳಿ ಸಿಹಿತಿಂಡಿ ಪೊಟ್ಟಣದಲ್ಲಿ ಹಣ ಇದ್ದಿದ್ದು ಪತ್ರಕರ್ತರಿಗೆ, ಮಾಧ್ಯಮ ಸಂಸ್ಥೆಗಳಿಗೆ ಒಂದು ಆಘಾತಕಾರಿ ಸುದ್ದಿ ಎಂದು ಯಾಕೆ ಅನಿಸಲಿಲ್ಲ? ಇದು ಗಂಭೀರ ರೂಪದ ಭ್ರಷ್ಟಾಚಾರ ಪ್ರಕರಣ ಎಂದು ಅವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಹಲವಾರು ಮಾಧ್ಯಮಗಳಲ್ಲಿ ಕೆಲಸ ಮಾಡಿದವರು, ವರದಿ ಮಾತ್ರವಲ್ಲ, ಅಂಕಣಗಳನ್ನೂ ಬರೆದವರು. ಅವರು ಮುಗ್ಧರೂ ಅಲ್ಲ ಅಮಾಯಕರೂ ಅಲ್ಲ. ಸಿಹಿತಿಂಡಿಯಲ್ಲಿ ಹಣವಿರುವುದನ್ನು ಹೇಳಿಯೇ ಅವರು ಪತ್ರಕರ್ತರಿಗೆ ವಿತರಿಸಿದ್ದಾರೆ. ಹೀಗೆ ಹಣ ಕೊಡುವುದು ಭ್ರಷ್ಟಾಚಾರವೆಂಬುದು ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ತಾವು ದೀಪಾವಳಿ ಸಿಹಿಯ ಜೊತೆ ಹಣ ಕೊಡಲು ಯಾರಿಗೂ ನಿರ್ದೇಶನ ನೀಡಿರಲಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿಗಳ ಗಮನಕ್ಕೆ ಬರದಂತೆ ಮುಖ್ಯಮಂತ್ರಿಗಳ ಕಚೇರಿ ಇಂಥ ದುಸ್ಸಾಹಸ ಮಾಡಲು ಸಾಧ್ಯವೇ? ಒಂದು ವೇಳೆ ಇಂಥ ದುಸ್ಸಾಹಸವನ್ನು ಯಾರಾದರೂ ಮಾಡಿದ್ದರೆ ಅವರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ? ಇದೀಗ ದಿ ಫೈಲ್‌ ಪತ್ರಿಕೆಯಲ್ಲಿ ವರದಿಯಾದಂತೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಗೆ ಹಂಚಿಕೆಯಾಗಿರುವ ಕಾರನ್ನು (ನಂ. KA 01- G 5898) ಕೆ ಆರ್‌ ಎಸ್‌ ಕಾರ್ಯಕರ್ತರೊಬ್ಬರು ವಿಚಾರಿಸಿದ್ದರು. ಆಗ ಕಾರಿನಲ್ಲಿದ್ದವರು ಇದು ಸಿಎಂ ಕಚೇರಿಯಿಂದ ದೀಪಾವಳಿ ಉಡುಗೊರೆ ನೀಡಲು ಹೋಗುತ್ತಿರುವುದಾಗಿ ಹೇಳಿದ್ದರು. ಹೀಗೆ ಭಕ್ಷೀಸನ್ನು ಮುಖ್ಯಮಂತ್ರಿಗಳ ಸಚಿವಾಲಯದ ವಾಹನದಲ್ಲೇ ಆಯ್ದ ಪತ್ರಕರ್ತರ ಮನೆಗಳಿಗೆ ತೆರಳಿ ಉಡುಗೊರೆ ಹಂಚಲಾಗಿದೆ ಎಂಬುದಕ್ಕೆ ಬಲವಾದ ಪುರಾವೆಯೂ ಬಯಲಾಗಿವೆ. ಇಷ್ಟೆಲ್ಲಾ ಸಾಕ್ಷಿಗಳಿರುವಾಗಲೂ ಸಿ ಎಂ ಬೊಮ್ಮಾಯಿಯವರು ಒಪ್ಪಿಕೊಳ್ಳುವ ಪ್ರಾಮಾಣಿಕತೆ ತೋರಲಿಲ್ಲ ಮಾತ್ರವಲ್ಲ ಪರೋಕ್ಷವಾಗಿ ಈ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಪಕ್ಷದವರು ಹಿಂದೆ ಪತ್ರಕರ್ತರಿಗೆ ಲ್ಯಾಪ್ ಟಾಪ್, ಐ ಫೋನ್, ಬಂಗಾರದ ಉಂಗುರಗಳನ್ನು ಪತ್ರಕರ್ತರಿಗೆ ಕೊಟ್ಟಿದ್ದರು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ಭ್ರಷ್ಟಾಚಾರ ನಡೆಸಿದರು ಎಂದು ನೀವು ಭ್ರಷ್ಟಾಚಾರ ನಡೆಸುವಿರಾ? ಅವರು ಭ್ರಷ್ಟಾಚಾರ ಮಾಡಿದ್ದು, ನೀವು ಭ್ರಷ್ಟಾಚಾರ ನಡೆಸಲು ಸಿಕ್ಕ ಲೈಸೆನ್ಸ್ ಆಗುವುದು ಹೇಗೆ? ಅವರು ಐ ಫೋನು, ಲ್ಯಾಪ್ ಟಾಪ್, ಬಂಗಾರದ ಉಂಗುರ ಕೊಡುವಾಗ ನೀವೇಕೆ ಸುಮ್ಮನಿದ್ದಿರಿ? ನೀವೇಕೆ ಈ ಭ್ರಷ್ಟಾಚಾರವನ್ನು ಸಹಿಸಿಕೊಂಡಿದ್ದಿರಿ? ಒಂದೊಮ್ಮೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹೀಗೆಲ್ಲಾ ನಡೆದಿದ್ದರೆ ಈಗ ನಿಮ್ಮದೇ ಅಧಿಕಾರವಿರುವಾಗ ತನಿಖೆ ನಡೆಸಿ ಭ್ರಷ್ಟಾಚಾರ ಎಸಗಿದವರ ಮೇಲೆ ಕ್ರಮ ಕೈಗೊಳ್ಳಲು ನಿಮಗೆ ಯಾರು ತಡೆಯಾಗಿದ್ದಾರೆ?

ಮಾಧ್ಯಮ ಸಂಸ್ಥೆಗಳು ಮೌನ ಮುರಿಯಬೇಕು. ಸಾಮಾನ್ಯ ಜನರಿಗೆ ಕೇವಲ ರಾಜಕಾರಣಿಗಳ ಮೇಲೆ ಅಸಹನೆ ಇದೆ ಎಂದು ಭಾವಿಸಬೇಡಿ. ಅವರು ಪತ್ರಕರ್ತರ ಮೇಲಿನ ನಂಬಿಕೆಯನ್ನೂ ಕಳೆದುಕೊಂಡಿದ್ದಾರೆ. ಇದರಿಂದ ನೋವು ಅನುಭವಿಸುತ್ತ ಇರುವವರು ನಿಷ್ಠೆಯಿಂದ ವೃತ್ತಿಧರ್ಮ ಅನುಸರಿಸುತ್ತಿರುವ ಪ್ರಾಮಾಣಿಕ ಪತ್ರಕರ್ತರು. ಹಿಂದೆ ಇಂಥ ಪ್ರಕರಣಗಳು ನಡೆದಾಗ ನೀವು ಅದನ್ನು ಬರೆಯದೇ ಮುಚ್ಚಿಡಬಹುದಿತ್ತು. ಆದರೆ ಈಗ ಹಾಗಲ್ಲ, ಜನರೇ ಮಾಧ್ಯಮವಾಗಿದ್ದಾರೆ. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ದೀಪಾವಳಿ ಭಕ್ಷೀಸು ಹಗರಣ ಮೂಡಿಸಿದ ಸಂಚಲನವೇ ಸಾಕ್ಷಿ. ಮುಖ್ಯವಾಹಿನಿ ಮಾಧ್ಯಮ ಎನಿಸಿಕೊಂಡವು ಒಂದೇ ಒಂದು ಸಾಲು ಈ ಬಗ್ಗೆ ಬರೆಯದೇ ಇದ್ದರೂ ಹೇಗೆ ಇದು ರಾಜ್ಯದ ಜನತೆಯನ್ನು ಅಷ್ಟು ವ್ಯಾಪಕವಾಗಿ ತಲುಪಿತು? ಇದನ್ನು ಪತ್ರಕರ್ತರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.

ಭ್ರಷ್ಟಾಚಾರ ಯಾರು ಮಾಡಿದರೂ ತಪ್ಪು. ಅದರಲ್ಲೂ ಪ್ರಜಾಪ್ರಭುತ್ವದ ಕಾವಲಿಗೆ ಇದ್ದೇವೆಂದು ಹೇಳಿಕೊಳ್ಳುವ ಮಾಧ್ಯಮ ಅದನ್ನು ಮಾಡಿದರೆ ಮಹಾಪರಾಧ. ನೀವೂ ಇದರ ಸುಳಿಯಲ್ಲಿ ಇದ್ದೀರೆಂದರೆ, ಯಾವ ನೈತಿಕತೆಯಿಂದ ನಿಮ್ಮ ವೃತ್ತಿ ಮಾಡುತ್ತೀರಿ?

ರಾಜಕಾರಣಿಗಳೂ ಕೂಡ ಭ್ರಷ್ಟ ಪತ್ರಕರ್ತರನ್ನು ದೂರವಿಡಬೇಕು. ಗಿಫ್ಟ್ ಕೊಡುವ ನೀಚ ಸಂಪ್ರದಾಯವನ್ನು ನಿಲ್ಲಿಸಬೇಕು. ಇದು ನೇರವಾದ ಭ್ರಷ್ಟಾಚಾರ ಎಂಬುದು ನಿಮಗೆ ಗೊತ್ತಿಲ್ಲದೇನು ಇಲ್ಲ. ಪತ್ರಕರ್ತರಿಗೆ ಅವರು ಮಾಡುವ ಕೆಲಸಕ್ಕೆ ಸಂಸ್ಥೆಗಳಲ್ಲಿ ಸಂಬಳ ಕೊಡುತ್ತಾರೆ. ಬಡ ಪತ್ರಕರ್ತರಿಗಾಗಿ ಸರ್ಕಾರ ಕೆಲವೊಂದು ಸೌಲಭ್ಯಗಳನ್ನೂ ನೀಡುತ್ತಿದೆ. ಅದರಿಂದಾಚೆಗೆ ನೀವು ಏನೇ ಮಾಡಿದರೂ ಅದು ಭ್ರಷ್ಟಾಚಾರ.

ಮುಖ್ಯಮಂತ್ರಿಗಳ ಕಚೇರಿಯಿಂದ ಲಕ್ಷಗಟ್ಟಲೆ ಕ್ಯಾಶ್ ವಿತರಿಸಿದ ಘಟನೆಯ ಜೊತೆಯೇ ಆರೋಗ್ಯ ಸಚಿವ ಡಿ.ಸುಧಾಕರ್ ಪತ್ರಕರ್ತರಿಗೆ ಸ್ಕಾಚ್ ವಿಸ್ಕಿ, ವಾಚ್ ಇತ್ಯಾದಿ ದುಬಾರಿ ಕೊಡುಗೆಗಳ ಗಿಫ್ಟ್ ಹ್ಯಾಂಪರ್ ಕೊಟ್ಟು ಸುದ್ದಿಯಾದರು. ಅವರ ಸಮರ್ಥನೆಯೂ ವಿಚಿತ್ರವಾಗಿತ್ತು. ಗಿಫ್ಟ್ ಕೊಡುವುದು ಹಿಂದೂ ಸಂಪ್ರದಾಯ ಎಂದರು ಅವರು. ಹಬ್ಬಕ್ಕೆ ಹೆಂಡ ಹಂಚುವುದು ಹಿಂದೂ ಸಂಪ್ರದಾಯವೇ? ಹಿಂದುತ್ವದ ಠೇಕೇದಾರಿ ವಹಿಸಿಕೊಂಡವರೇ ಹೇಳಬೇಕು.

ಭ್ರಷ್ಟಾಚಾರದಲ್ಲಿ ತೊಡಗಿದವರು ಸಿಕ್ಕಿಬಿದ್ದಾಗ ಕನಿಷ್ಠ ಲಜ್ಜೆಯಿಂದ ತಲೆ ತಗ್ಗಿಸದೆ, ಸಮರ್ಥಿಸಿಕೊಂಡು ಹೂಂಕರಿಸುತ್ತಾರೆಂದರೆ ಏನರ್ಥ? ಇಲ್ಲಿ ಕಾನೂನು ಕಾಯ್ದೆಗಳಿಗೆ ಬೆಲೆಯೇ ಇಲ್ಲವೇ? ಜನಪ್ರತಿನಿಧಿಗಳು ಸಾರ್ವಜನಿಕ ಜೀವನದಲ್ಲಿ ಪಾಲಿಸಬೇಕಾದ  ನೈತಿಕ ನಡಾವಳಿಗಳು ಸತ್ತೇ ಹೋದವೇ? ನಾವು ಯಾವ ಸಮಾಜವನ್ನು ಕಟ್ಟಲು ಹೊರಟಿದ್ದೇವೆ?

ದೀಪಾವಳಿ ಭಕ್ಷೀಸು ಹಗರಣದ ಸಂಪೂರ್ಣ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇದು ಪೀಪಲ್ ಮೀಡಿಯಾ ಆಗ್ರಹ.