ಬ್ರಿಸ್ಬೇನ್: ಭಾರತೀಯ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮಧ್ಯೆ ದಿಢೀರ್ ನಿವೃತ್ತಿ ನಿರ್ಧಾರ ಘೋಷಿಸಿದ್ದಾರೆ.
ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾಗೊಂಡಿರುವ ಬೆನ್ನಲ್ಲೇ ಅಶ್ವಿನ್ ನಿವೃತ್ತಿ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸಿದೆ.
ಕುಂಬ್ಳೆ ನಂತರ ಎರಡನೇ ಸ್ಥಾನದಲ್ಲಿ ಅಶ್ವಿನ್:
ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಿಗ್ಗಜ ಅನಿಲ್ ಕುಂಬ್ಳೆ 619 ವಿಕೆಟ್ ಗಳಿಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಅಶ್ವಿನ್ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್ ಗಳಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.
38 ವರ್ಷದ ಅಶ್ವಿನ್, ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಕೊನೆಯದಾಗಿ ಭಾರತದ ಪರ ಆಡಿದ್ದರು. ಅಲ್ಲದೆ ಒಂದು ವಿಕೆಟ್ ಗಳಿಸಿದ್ದರು.
‘ನಾನು ನಿಮ್ಮ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಭಾರತೀಯ ಕ್ರಿಕೆಟಿಗನಾಗಿ ಇಂದು ನನ್ನ ಕೊನೆಯ ದಿನ’ ಎಂದು ಅಶ್ವಿನ್ ಹೇಳಿದ್ದಾರೆ.
ಗಾಬಾದ ಸ್ಟೇಡಿಯಂನಲ್ಲಿ ಭಾವೋದ್ವೇಗಕ್ಕೊಳಗಾಗಿ ವಿರಾಟ್ ಕೊಹ್ಲಿ ಅವರನ್ನು ಅಶ್ವಿನ್ ತಬ್ಬಿಕೊಳ್ಳುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಮತ್ತೊಂದೆಡೆ ಅಶ್ವಿನ್ ನಿರ್ಧಾರವನ್ನು ಗೌರವಿಸುವುದಾಗಿ ನಾಯಕ ರೋಹಿತ್ ಶರ್ಮಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.