ವಯೋಸಹಜ ಅನಾರೋಗ್ಯದಿಂದ ತ್ಯಾವರೇಕೊಪ್ಪದ ಹನುಮನ ಸಾವು
ಲಿಂಕ್ ನಕಲಿಸಲಾಗಿದೆ ✓

ಶಿವಮೊಗ್ಗದ ತ್ಯಾವರೇಕೊಪ್ಪ ಹುಲಿ ಮತ್ತು ಸಿಂಹದಾಮದಲ್ಲಿ ಅತಿ ಹೆಚ್ಚು ವರ್ಷ ಬದುಕಿದ ದಾಖಲೆ ಹೊಂದಿದ ಹುಲಿ ಹನುಮ ನಿನ್ನೆ ಸಂಜೆ ಮೃತಪಟ್ಟಿದೆ. ಹಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಹುಲಿ ಹನುಮ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿತ್ತು. ನಿರಂತರ ಚಿಕಿತ್ಸೆಯ ನಂತರವೂ ಅನಾರೋಗ್ಯ ಉಲ್ಬಣಿಸಿ ಗುರುವಾರ ಸಂಜೆ ಮೃತಪಟ್ಟಿದೆ.
ಹನುಮನ ಸಾವಿನಿಂದ ತ್ಯಾವರೇಕೊಪ್ಪ ಹುಲಿ ಮತ್ತು ಸಿಂಹದಾಮದಲ್ಲಿ ಒಟ್ಟು ಹುಲಿಗಳ ಸಂಖ್ಯೆ ಈಗ ನಾಲ್ಕಕ್ಕೆ ಇಳಿದಿದೆ. ಹನುಮ ಸೇರಿದಂತೆ 2 ಗಂಡು ಮತ್ತು 3 ಹೆಣ್ಣು ಹುಲಿಗಳು ಈ ಸಿಂಹದಾಮದಲ್ಲಿ ಇದ್ದು ಹನುಮನ ಅಗಲಿಕೆ ನಂತರ ವಿಜಯ ಎಂಬ ಏಕೈಕ ಗಂಡು ಹುಲಿ ಸಿಂಹದಾಮದಲ್ಲಿ ಇದೆ. ಹೆಣ್ಣು ಹುಲಿಗಳಲ್ಲಿ ಸೀತಾ, ದಶಮಿ ಮತ್ತು ಪೂರ್ಣಿಮಾ ಎಂಬ ಹುಲಿಗಳಿವೆ.
ಪ್ರಾಣಿ ಸಂಗ್ರಹಾಲಯದ ಹುಲಿಗಳ ಗರಿಷ್ಠ ಆಯಸ್ಸು 16 ವರ್ಷ ಎಂದು ಅಂದಾಜಿಸಿದರೂ ಗರಿಷ್ಠ ಮಿತಿಯನ್ನೂ ದಾಟಿ ಹನುಮ 19 ವರ್ಷಕ್ಕೂ ಮೀರಿ ಜೀವಿಸಿ ದಾಖಲೆ ಬರೆದಿದ್ದಾನೆ. ಸಧ್ಯ ಈಗಿರುವ ಹುಲಿಗಳಲ್ಲಿ ಸೀತಾ ಎಂಬ ಹೆಣ್ಣು ಹುಲಿ ದೊಡ್ಡ ಹುಲಿಯಾಗಿದ್ದು 16 ವರ್ಷದ ಆಯಸ್ಸಿನಲ್ಲಿದೆ.
ಹನುಮನ ಆರೈಕೆಯಲ್ಲಿ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು, ಅರಣ್ಯಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿದ್ದರು. ವಯಸ್ಸಿನ ಮಿತಿ ದಾಟಿದ ಹಿನ್ನೆಲೆಯಲ್ಲಿ ಲಘುವಾಗಿ ಜೀರ್ಣವಾಗುವ ಆಹಾರದಿಂದ ಹಿಡಿದು ಮಲಗುವ ಹಾಸಿಗೆ ಸಹ ವ್ಯವಸ್ಥಿತ ರೀತಿಯಲ್ಲಿ ಸಿದ್ದಪಡಿಸಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯಕ್ಕೆ ಹನುಮ ತುತ್ತಾಗಿ ಅಸುನೀಗಿದೆ.
Peepal Media
Peepal Media · ರಾಜ್ಯ ವಿಭಾಗ
