‘ಕಬ್ಜ’ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದೆ ಬಾಲಿವುಡ್
ಲಿಂಕ್ ನಕಲಿಸಲಾಗಿದೆ ✓

ಬೆಂಗಳೂರು: ಕನ್ನಡ ಚಿತ್ರಗಳು ಈ ವರ್ಷ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿವೆ. ‘ಕೆಜಿಎಫ್ 2’ ಮತ್ತು ‘ಕಾಂತಾರ’ ಚಿತ್ರಗಳು ಬಾಲಿವುಡ್ ಚಿತ್ರಗಳ ಗಳಿಕೆಯನ್ನೂ ಮೀರಿಸಿ ಹೊಸ ದಾಖಲೆಯನ್ನು ನಿರ್ಮಿಸಿವೆ. ಈ ಎರಡು ಚಿತ್ರಗಳ ನಂತರ ಬಾಲಿವುಡ್ನ ಕಣ್ಣು ಇದೀಗ ಉಪೇಂದ್ರ ಮತ್ತು ಸುದೀಪ್ ಅಭಿನಯದ ಅದ್ಧೂರಿ ಚಿತ್ರ ‘ಕಬ್ಜ’ ಮೇಲೆ ಬಿದ್ದಿದೆ.
ಸಚಿವ ಎಂ.ಟಿ.ಬಿ. ನಾಗರಾಜ್ ಆಶೀರ್ವಾದದೊಂದಿಗೆ ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ನಿರ್ಮಿಸಿರುವ ‘ಕಬ್ಜ’ ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಟೀಸರ್ ಸಹ ಬಿಡುಗಡೆಯಾಗಿದೆ. ಟೀಸರ್ಗೆ ಎಲ್ಲಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು. ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬರೀ ಪ್ರೇಕ್ಷಕರಷ್ಟೇ ಅಲ್ಲ, ಬೇರೆ ಚಿತ್ರರಂಗಗಳು ಸಹ ಈ ಚಿತ್ರವನ್ನು ಎದುರು ನೋಡುತ್ತಿದ್ದು, ಇತ್ತೀಚೆಗೆ ಇದೇ ವಿಚಾರವಾಗಿ ಬಾಲಿವುಡ್ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಳ್ಳುವುದರ ಜತೆಗೆ ಚಿತ್ರದ ಬಿಡುಗಡೆ ದಿನಾಂಕಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಚಿತ್ರತಂಡದವರು ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಏಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಉಪೇಂದ್ರ ಜತೆಗೆ ಸುದೀಪ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
Peepal Media Desk
Peepal Media · ಸಿನಿಮಾ ವಿಭಾಗ
