Chitpavan Brahmin – Peepal Media

ಹಿಂದುತ್ವ ರಾಜಕಾರಣದ ಕಥೆ – 4 : ಬಾಲಗಂಗಾಧರ್‌ ತಿಲಕ್‌ ಮತ್ತು ರಾಜಕೀಯ ಬ್ರಾಹ್ಮನಿಸಮ್ಮಿನ ಬೆಳವಣಿಗೆ
ಮನುಸ್ಮೃತಿ ಮತ್ತು ಇತರ ಸ್ಮೃತಿಗಳ ಆಧಾರದಲ್ಲಿ ಬ್ರಾಹ್ಮಣ ಪಾರಮ್ಯದ ಆಧುನಿಕ ಶೈಲಿಯನ್ನು ಕಟ್ಟಿಕೊಳ್ಳುವುದು ತಿಲಕ್‌ ಉದ್ದೇಶವಾಗಿತ್ತು. ಪುಣೆ ಮತ್ತು ಮರಾಠ ಪ್ರಾಂತ್ಯಗಳಲ್ಲಿ ಬ್ರಾಹ್ಮಣರನ್ನು ಬಡಿದೆಬ್ಬಿಸಲು ತಿಲಕ್‌ ಅತ್ಯಂತ ಸಮರ್ಥವಾದ ತಂತ್ರವನ್ನು ಕಂಡುಕೊಂಡಿದ್ದರು.

ಇಲ್ಲಿಯವರೆಗೆ : ಚಿತ್ಪಾವನ ಬ್ರಾಹ್ಮನಿಸಮ್ಮಿನ ಆರಂಭಿಕ ರಾಜಕೀಯ ಚಟುವಟಿಕೆಗಳು

ವಿಷ್ಣುಶಾಸ್ತ್ರಿ ಚಿಪ್ಲುಂಕರ್‌ ಜನಪ್ರಿಯಗೊಳಿಸಿದ ಅವೈಚಾರಿಕ ಬ್ರಾಹ್ಮಣಿಸಂ ಅನ್ನು ಮರಾಠ ಪ್ರಾಂತ್ಯ ಮಾತ್ರವಲ್ಲದೆ, ಅದರಾಚೆಗೂ ವ್ಯಾಪಿಸಿದ ವ್ಯಕ್ತಿ ಬಾಲಗಂಗಾಧರ್‌ ತಿಲಕ್.‌ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅತ್ಯಂತ ಮುಖ್ಯ ವ್ಯಕ್ತಿಗಳಲ್ಲೊಬ್ಬರು ತಿಲಕ್‌ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಗಾಂಧಿಪೂರ್ವ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕಾಲ ಲಾಲ್-ಬಾಲ್-ಪಾಲ್‌ ಯುಗ. ಲಾಲಾ ಲಜಪತ್‌ ರಾಯ್‌, ಬಿಪಿನ್‌ ಚಂದ್ರ ಪಾಲ್‌, ಬಾಲಗಂಗಾಧರ್‌ ತಿಲಕ್‌ ಎಂಬ ಮೂರು ವ್ಯಕ್ತಿಗಳು ಬ್ರಿಟಿಷ್‌ ಇಂಡಿಯಾದ ಮೂರು ಸ್ಥಳಗಳಲ್ಲಿ ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ಮತ್ತು ಹೋರಾಟ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ತಮ್ಮ ಶೋಷಣೆಯ ಅಡಿಪಾಯದ ಆಡಳಿತಕ್ಕೆ ಇವರುಗಳು, ಅದರಲ್ಲೂ ಮುಖ್ಯವಾಗಿ ತಿಲಕ್‌, ಮಾರಕವಾಗುತ್ತಾರೆ ಎಂದು ಬ್ರಿಟಿಷ್ ಅಧಿಕಾರಿಗಳು ಮನಗಂಡಿದ್ದರು.

ಪ್ರಜಾಪ್ರಭುತ್ವವಾದಿ ಇತಿಹಾಸದ ಕಣ್ಣೋಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕಾಣಲಾಗಿತ್ತು. ಆ ಅರ್ಥದಲ್ಲಿ ತಿಲಕ್‌ ಕಾಲಮಾನದಲ್ಲಿ ಅವರಷ್ಟು ದೊಡ್ಡ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನು ಗುರುತಿಸುವುದು ಕಷ್ಟಸಾಧ್ಯ. ಆದರೆ, ಭೂತ ಕಾಲಕ್ಕೆ ಬೇರೆ ಯಾವ ಕಾಲಕ್ಕಿಂತಲೂ ಅತಿಯಾದ ಮಹತ್ವವಿರುವ ಹಿಂದುತ್ವದ ಈ ಕಾಲದಲ್ಲಿ, ಬ್ರಿಟಿಷ್‌ ವಿರೋಧಿ ಎಂಬ ಒಂದೇ ಒಂದು ಅಂಶದೊಳಗಿಟ್ಟು ಆ ಕಾಲದ ಭಾರತದ ರಾಜಕೀಯ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳುವುದು ಸರಿಯಾದ ನಡೆಯಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಪಳಸಿರಾಜನಿಂದ ಹಿಡಿದು ಸಾವರ್ಕರ್‌ತನಕದವರು ಬ್ರಿಟಿಷರನ್ನು ಎದುರಿಸಿದಲ್ಲಿ ಒಂದೇ ಒಂದು ಅಂಶ ಸಮಾನವಾಗಿರುವುದು. ಅದು ಅವರೆಲ್ಲ ಬ್ರಿಟಿಷ್‌ ವಿರೋಧಿಗಳಾಗಿದ್ದರು ಎಂಬುದು ಮಾತ್ರ. ಅದಕ್ಕೆ ಕಾರಣ, ಒಂದು ಸಾಮಾಜಿಕ ಮೌಲ್ಯದೊಂದಿಗಿನ ಅತಿಯಾದ ನಿಷ್ಠೆಯೋ, ಸಾಮ್ರಾಜ್ಯವಾದದ ವಿರುದ್ಧದ ರಾಜಕೀಯ ವಿರೋಧವೋ ಆಗಬೇಕೆಂದಿಲ್ಲ. ಬದಲಗಿ ತಮ್ಮ ಪ್ರಾಬಲ್ಯದ ಮೇಲೆ ಇನ್ನೊಂದು ಬಾಹ್ಯ ಶಕ್ತಿಯ ಪ್ರವೇಶ ಉಂಟು ಮಾಡಿದ ಅಸ್ವಸ್ಥತೆಗಳ ಕಾರಣದಿಂದಲೂ ಆಗಿರಬಹುದು.

ಒಂದರ್ಥದಲ್ಲಿ ಬ್ರಿಟಿಷರ ಪ್ರವೇಶದಿಂದ ಭಾರತದಲ್ಲಿ ಒಂದು ಅವಳಿ ಹುಟ್ಟುಪಡೆಯುತ್ತದೆ. ಹತ್ತೊಂಬತ್ತನೇ ಶತಮಾನದ ಹೊತ್ತಿಗಾಗುವಾಗ ಭಾರತದ ಜಾತಿಪದ್ಧತಿಯು ಭಾರತದ ಬಹುತ್ವದ ಮೇಲೆ ಸ್ಥಾಪಿಸಿದ್ದ ಅಧಿಕಾರಶ್ರೇಣಿಯೊಳಗೆ ನಿರಂತರವಾದ ಸಂಘರ್ಷಗಳು ಶುರುವಾಗಿದ್ದವು. ವರ್ಣವ್ಯವಸ್ಥೆಯ ನೈತಿಕ ಮೌಲ್ಯಗಳೆಲ್ಲ ಪ್ರಶ್ನಿಸಲ್ಪಟ್ಟಿದ್ದವು. ಈ ಪ್ರಶ್ನೆಗಳೆಲ್ಲ ಬಹುತೇಕ ಸಾಮಾನ್ಯವಾದ ಮೌಲ್ಯವೊಂದರ ವಿಭಿನ್ನ ವ್ಯಾಖ್ಯಾನಗಳ ಮೂಲಕವೇ ನಡೆದಿತ್ತು. ಉದಾಹರಣೆಗೆ, ಕೇರಳದಲ್ಲಿ ಶ್ರೀನಾರಾಯಣ ಗುರು ಅದ್ವೈತವನ್ನು ನಿಷೇಧಿಸಿಕೊಂಡು ತನ್ನ ಹೋರಾಟವನ್ನು ಕಟ್ಟಲಿಲ್ಲ. ಬದಲಿಗೆ ಕೆಳಜಾತಿಯೆಂಬ ನೆಲೆಯಲ್ಲಿ ತನ್ನ ಆತ್ಮನಿಷ್ಠೆ ಬಳಸಿಕೊಂಡು ಅದ್ವೈತವನ್ನು ವ್ಯಾಖ್ಯಾನಿಸಲು ಸಾಧ್ಯವಾದ ಕಾರಣದಿಂದ ಜಾತಿಲಕ್ಷಣ ಮತ್ತು ಜಾತಿನಿರ್ಣಯದಂತ ಕವಿತೆಗಳೂ, ಪರಮೇಶಪವಿತ್ರ ಪುತ್ರನೋ, ಕರುಣಾಳು ನೆಬಿ ಮುತ್ತುರತ್ನವೋ? ಮೊದಲಾದ ಸಾಲುಗಳ ಮೂಲಕ ಅನ್ಯ ಧರ್ಮಗಳನ್ನೂ ಗೌರವಿಸುವ ಹಂತಕ್ಕೆ ಗುರುವಿಗೆ ತಲುಪಲು ಸಾಧ್ಯವಾಯಿತು. ಆದರೆ, ಆ ಕಾಲದ ಹಿಂದೂ ಸಂಸ್ಥಾನವಾಗಿದ್ದ ತಿರುವಾಂಕೂರಲ್ಲಿ ಅಲ್ಲಿನ ಪ್ರಭುತ್ವ ಅದೇ ಮೌಲ್ಯವನ್ನು ಬಳಸಿಕೊಂಡು ಜಾತಿಪದ್ಧತಿಯನ್ನು ಇನ್ನಷ್ಟು ಬಲಪಡಿಸಿತ್ತು ಎಂಬುದನ್ನೂ ಕಾಣಬಹುದು.

ಇದನ್ನೂ ಓದಿ : ಅಧ್ಯಾಯ 1 – ಯಾಕಾಗಿ ಈ ಕಥನ?

ಫಾಡ್ಕೆಯ ಹಾಗೆ ಚಿತ್ಪಾವನ ಪೇಶ್ವಾ ಸಾಮ್ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಮೂಲಕ ತಿಲಕ್‌ ತನ್ನ ಬ್ರಿಟಿಷ್‌ ವಿರೋಧವನ್ನು ಎತ್ತಿ ಹಿಡಿಯಲಿಲ್ಲ. ಫಾಡ್ಕೆ ಮತ್ತು ತಿಲಕರ ಚಟುವಟಿಕೆಗಳನ್ನು ಗಮನಿಸಿದರೆ ಸುಲಭದಲ್ಲಿ ಗುರುತಿಸಬಹುದಾದ ಒಂದು ಧನಾತ್ಮಕ ವ್ಯತ್ಯಾಸ ಕಾಣಿಸುತ್ತದೆ. ಫಾಡ್ಕೆ ಪೇಶ್ವಾ ಪ್ರಧಾನ್‌ ಎಂಬ ಬಿರುದನ್ನು ತನಗೆ ತಾನೇ ಕೊಟ್ಟುಕೊಳ್ಳುವಾಗ ಹಿಂದೂ ಧರ್ಮದ ಅವತಾರ ಕಲ್ಪನೆಯೊಳಗೆ ತನ್ನನ್ನು ತಾನು ಗುರುತಿಸಿಕೊಂಡಿದ್ದ. ಅವತಾರಗಳಿಗೆ ಒಂದು ಅಡಿಪಾಯ ಇದೆ. ಶ್ರೀರಾಮ, ಶ್ರೀಕೃಷ್ಣ, ನರಸಿಂಹ ಎಲ್ಲ ಬಾಹ್ಯಕ್ಕೆ ಬೇರೆ ಬೇರೆಯಾಗಿದ್ದರೂ ಅದು ವಿಷ್ಣು ಎಂಬ ಮೂಲತತ್ವದಿಂದ ಹುಟ್ಟಿಕೊಂಡವು. ವಿದೂರಭೂತವೊಂದು ಅವತಾರಗಳನ್ನು ಪರಸ್ಪರ ಬಂಧಿಸುತ್ತದೆ. ಪೇಶ್ವಾ ಎಂಬ ವಿದೂರಭೂತದೊಂದಿಗೆ ಫಾಡ್ಕೆ ತನ್ನನ್ನು ತಾನು ಲೀನಗೊಳಿಸಿದ್ದ. ಆದ್ದರಿಂದ ಫಾಡ್ಕೆಯ ಹೋರಾಟದ ಉದ್ಧೇಶ ಶನಿವಾರವಾಡ ಯುದ್ಧದ ಪರಿಣಾಮವನ್ನು, ಬ್ರಿಟಿಷರಿಗೆ ಪೇಶ್ವೆಗಳು ಶರಣಾಗಬೇಕಾಗಿ ಬಂದ ಗಳಿಗೆಯನ್ನು ತಿರುಗಾ ಮಾಡುವುದೇ ಆಗಿತ್ತು. ಇತಿಹಾಸ ಫಾಡ್ಕೆಯನ್ನು ಆ ಗಳಿಗೆಯಲ್ಲಿ ಬಂಧಿಸಿತು. ತನ್ನ ಸೋಲಿನಲ್ಲಿ ಆತ ಒಬ್ಬ ಪೇಶ್ವೆಯೇ ಆಗಿದ್ದ. ಸೋತು ಹೋದ ಸ್ವಾಭಿಮಾನಿ ಮೇಲ್ಜಾತಿ ರಾಜನಂತೆ ಮ್ಲೇಚ್ಛರ ಕೈಯಿಂದ ತನ್ನನ್ನು ತಾನು ಪಾರಾಗಿಸಲು ಸಾವಿಗೆ ಶರಣಾಗುವುದಲ್ಲದೆ ಆತನಿಗೆ ಬೇರೆ ದಾರಿಯಿರಲಿಲ್ಲ. ಆತ ಬ್ರಿಟಿಷ್‌ ವಿರೋಧಿಯಾಗಿದ್ದ. ಆದರೆ, ಚಿತ್ಪಾವನ ಬ್ರಾಹ್ಮಣ ಅಂಗಳದಲ್ಲಿ ನಿಂತುಕೊಂಡಿರುವ ವಿರೋಧ ಮಾತ್ರವೇ ಆತನಿಗಿದ್ದದ್ದು.

ತಿಲಕರ ಪೂರ್ತಿ ರಾಜಕೀಯ ಬದುಕನ್ನು ತೆಗೆದು ನೋಡಿದರೆ ತಿಲಕ್‌ ಫಾಡ್ಕೆಗಿಂತ ಆಧುನಿಕವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಪೇಶ್ವಾ ಸಾಮ್ರಾಜ್ಯದ ಅಂಗಳದಲ್ಲಿ ನಿಂತುಕೊಂಡು ಮಾತ್ರವೇ ತಿಲಕ್‌ ಬ್ರಿಟಿಷ್‌ ವಿರೋಧಿಯಾಗಲಿಲ್ಲ. ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಎಂಬ ಮತ್ತಷ್ಟು ವಿಶಾಲವಾದ ಅಂಗಳದಲ್ಲಿ ತಿಲಕ್‌ ನಿಂತಿದ್ದರು. ರಾಜಕೀಯದಲ್ಲಿ ಬಹಳ ಎತ್ತರಕ್ಕೇರಿದರು. ಆಧುನಿಕ ವಿದ್ಯಾಭ್ಯಾಸ ಹೊಂದಿದ ಚಿತ್ಪಾವನ ಬ್ರಾಹ್ಮಣರ ಮೊದಲ ತಲೆಮಾರಿಗೆ ಸೇರಿದ ವ್ಯಕ್ತಿಯಾಗಿದ್ದರು ಆತ. ಆದರೆ, ಶುರುವಿನಲ್ಲಿ ಫಾಡ್ಕೆ ಎತ್ತಿ ಹಿಡಿದಿದ್ದ ಚಿತ್ಪಾವನ ಸಂಪ್ರದಾಯವಾದಿಗಳ ಅದೇ ದಾರಿಯಲ್ಲಿ ಬಹಳ ದೂರ ನಡೆದಿದ್ದರು. ಸಾಮಾಜಿಕವಾಗಿ ತಿಲಕ್‌ ಬ್ರಾಹ್ಮಣವಾದಿಯಾಗಿದ್ದರು. ರಾಣಡೆಯನ್ನು ನಿರಾಕರಿಸಿದರು. ಚಿಪ್ಲುಂಕರನ್ನು ಅಪ್ಪಿಕೊಂಡರು. ೧೮೮೦ರಲ್ಲಿ ಪುಣೆಯಲ್ಲಿ ಚಿಪ್ಲುಂಕರ್‌ ಸ್ಥಾಪಿಸಿದ ಇಂಗ್ಲಿಷ್‌ ಶಾಲೆಯ ಚಟುವಟಿಕೆಗಳಲ್ಲಿ ಆಕರ್ಷಿತರಾಗಿ ಸಾಮಾಜಿಕ ಕ್ಷೇತ್ರಕ್ಕೆ ಧುಮುಕಿದ ತಿಲಕ್‌ ಮುಂದೆ ಆ ಶಾಲೆಯ ಚಟುವಟಿಕೆಗಳಿಗೆ ನೇತೃತ್ವ ನೀಡಿದರು. ಗಣೇಶ್‌ ಅಗರ್ಕರ್‌ ಎಂಬ ಇನ್ನೊಬ್ಬ ಉತ್ಸಾಹಿ ತರುಣ ಕೂಡ ಆಗ ಜೊತೆಯಾಗಿದ್ದರು. ಅವರಿಬ್ಬರು ಸೇರಿಕೊಂಡು ಎರಡು ಪತ್ರಿಕೆಗಳನ್ನು ಶುರು ಮಾಡಿದರು. ಮರಾಠ ಮತ್ತು ಕೇಸರಿ. ಆ ಮೂಲಕ ಸಾಕ್ಷರತೆ ಹೊಂದಿದ ಮರಾಠ ಸಮಾಜವನ್ನು (ಅದರಲ್ಲಿ ಬಹುತೇಕರು ಬ್ರಾಹ್ಮಣರು) ಒಂದು ಮಾಧ್ಯಮ ಸಮಾಜವನ್ನಾಗಿ ಪರಿವರ್ತಿಸಲು ಅವರು ಶ್ರಮಿಸಿದರು.

ಆ ಕಾಲದಲ್ಲಿ ಪುಣೆಯ ಸಾಂಸ್ಕೃತಿಕ ಬದುಕನ್ನು ಅತಿಯಾಗಿ ಪ್ರಭಾವಿಸಿದ್ದ ಎರಡು ಸಂಘಟನೆಗಳು, ಸಾರ್ವಜನಿಕ್‌ ಸಭಾ ಮತ್ತು ಎಜುಕೇಷನ್‌ ಸೊಸೈಟಿ ಆಗಿದ್ದವು. ಮೇಲ್ನೋಟಕ್ಕೆ ಮುಸ್ಲಿಮರು ಮತ್ತು ಬ್ರಾಹ್ಮಣೇತರರು ಅದರಲ್ಲಿ ಇದ್ದರಾದರೂ ನಿಜದಲ್ಲಿ ಅವೆರಡೂ ಬ್ರಾಹ್ಮಣ ಸಂಘಟನೆಗಳಾಗಿದ್ದವು. ಆದ್ದರಿಂದಲೇ, ಬ್ರಾಹ್ಮಣರೊಳಗಿನ ಭಿನ್ನಾಭಿಪ್ರಾಯಗಳು ಇವರೆಡರ ಒಳಗೂ ಪ್ರತಿಫಲಿಸುತ್ತಿದ್ದವು. ಅದರ ಭಾಗವಾಗಿಯೇ ತಿಲಕ್‌ ಮತ್ತು ಅಗರ್ಕರ್‌ ನಡುವೆಯೂ ಭಿನ್ನಾಭಿಪ್ರಾಯಗಳು ಎದ್ದವು. ಸಾಮಾಜಿಕ ದೃಷ್ಟಿಕೋನದಲ್ಲಿರುವ ವ್ಯತ್ಯಾಸಗಳೇ ಇದರ ಹಿನ್ನೆಲೆಯಲ್ಲಿ ಕೆಲಸ ಮಾಡಿತ್ತು. ಹಿಂದೂ ಸಮಾಜದ ನಿಯಂತ್ರಣವನ್ನು ಸರಕಾರಿ ಕಾನೂನುಗಳ ಮೂಲಕವೇ ಮಾಡಬೇಕು ಎಂದು ಅಗರ್ಕರ್‌ ವಾದಿಸುವಾಗ ತಿಲಕ್‌ ಹಿಂದೂ ಸಮಾಜದ ನಿಯಂತ್ರಣ ಸಮಾಜದ ಕೈಯಲ್ಲೇ ಇರಬೇಕು ಎಂದು ವಾದಿಸಿದರು. ಕೊನೆಗೆ ಸಂಪ್ರದಾಯವಾದಿ ಬಣ ಸೇರಿದ ತಿಲಕರಿಗೆ ಸಾರ್ವಜನಿಕ್‌ ಸಭಾದಿಂದ ಹೊರನಡೆಯಬೇಕಾಯಿತು. ಇದರ ನಡುವೆ ಇಂಗ್ಲೀಷ್‌ ಶಾಲೆಯ ಆಡಳಿತ ಸಂಘ ಡೆಕ್ಕನ್‌ ಎಜುಕೇಷನ್‌ ಸೊಸೈಟಿಯಾಗಿ ವಿಸ್ತರಿಸಿಕೊಂಡಿತ್ತು. ಅದರಡಿಯಲ್ಲಿ ಪುಣೆಯ ಪ್ರತಿಷ್ಠಿತ ಫೆರ್ಗುಸನ್‌ ಕಾಲೇಜು ಕೂಡ ಆರಂಭವಾಗಿತ್ತು. ತಿಲಕ್-ಅಗರ್ಕರ್‌ ಸಂಘರ್ಷದ ಮುಂದುವರಿಕೆಯೆಂಬಂತೆ ತಿಲಕ್‌ ಈ ಸೊಸೈಟಿಯಿಂದಲೂ ಉಚ್ಛಾಟಿಸಲ್ಪಟ್ಟರು. ಆದರೆ, ಮರಾಠ ಮತ್ತು ಕೇಸರಿ ತಿಲಕ್‌ ಕೈಯಲ್ಲೇ ಉಳಿದವು. ಈ ಪತ್ರಿಕೆಗಳ ಮೂಲಕ ಅತಿಯಾದ ರಾಷ್ಟ್ರೀಯತೆ ಮತ್ತು ಹಿಂದುತ್ವ ಪ್ರಜ್ಞೆಯನ್ನು ಪೋಣಿಸಿಕೊಂಡ ರಾಜಕಾರಣವನ್ನು ತಿಲಕ್‌ ಶುರು ಮಾಡಿದರು. ೧೮೮೮ರಲ್ಲಿ ಅಗರ್ಕರ್‌ ಕೇಸರಿ ಮತ್ತು ಮರಾಠವನ್ನು ಬಿಟ್ಟು ಸುಧಾರಕ್‌  ಎಂಬ ಮರಾಠಿ ಇಂಗ್ಲೀಷ್‌ ಪತ್ರಿಕೆಯನ್ನು ಶುರು ಮಾಡಿದರು. ಕೇಸರಿ ಮತ್ತು ಮರಾಠ ಪ್ರತಿಪಾದಿಸುತ್ತಿದ್ದ ಸಂಪ್ರದಾಯವಾದಿ ವಿಚಾರಧಾರೆಯನ್ನು ಎದುರಿಸಲು ಸುಧಾರಣಾವಾದಿ ಎಂಬ ಅರ್ಥ ಬರುವ ಸುಧಾರಕ್‌ ಹೆಸರಿನಲ್ಲಿ ಅಗರ್ಕರ್‌ ಪತ್ರಿಕೆ ಆರಂಭಿಸಿದ್ದರು.

ಅಧ್ಯಾಯ 2 : ಚಿತ್ಪಾವನ ಬ್ರಾಹ್ಮಣರ ಸಾಮ್ರಾಜ್ಯ ಮತ್ತು ಸಾಮ್ರಾಜ್ಯ ನಷ್ಟ

ಮನುಸ್ಮೃತಿ ಮತ್ತು ಇತರ ಸ್ಮೃತಿಗಳ ಆಧಾರದಲ್ಲಿ ಬ್ರಾಹ್ಮಣ ಪಾರಮ್ಯದ ಆಧುನಿಕ ಶೈಲಿಯನ್ನು ಕಟ್ಟಿಕೊಳ್ಳುವುದು ತಿಲಕ್‌ ಉದ್ದೇಶವಾಗಿತ್ತು. ಪುಣೆ ಮತ್ತು ಮರಾಠ ಪ್ರಾಂತ್ಯಗಳಲ್ಲಿ ಬ್ರಾಹ್ಮಣರನ್ನು ಬಡಿದೆಬ್ಬಿಸಲು ತಿಲಕ್‌ ಅತ್ಯಂತ ಸಮರ್ಥವಾದ ತಂತ್ರವನ್ನು ಕಂಡುಕೊಂಡಿದ್ದರು. ಭೂತಕಾಲವನ್ನು ವೈಭವೀಕರಿಸುವುದೇ ಆ ತಂತ್ರವಾಗಿತ್ತು. ಬ್ರಿಟಿಷರ ಆಡಳಿತದಲ್ಲಿ ಬ್ರಾಹ್ಮಣ ಬದುಕನ್ನು, ಅವರ ನಷ್ಟ ಪ್ರಜ್ಞೆಯನ್ನು ಅತ್ಯಂತ ದಾರುಣತೆಯಾಗಿ ಇದರ ಮುಂದೆ ಪ್ರತಿಷ್ಠಾಪನೆ ಮಾಡಿದರು. ಪೇಶ್ವಾ ಸಾಮ್ರಾಜ್ಯದ ಹಾಗೆ ಒಂದು ಪ್ರದೇಶಕ್ಕೆ ಸೀಮಿತವಾದ ರಾಜಕಾರಣ ಅದಾಗಿರಲಿಲ್ಲ. ಮರಾಠ ಸಾಮ್ರಾಜ್ಯದ ಪುನರುಜ್ಜೀವನದಂತಹಾ ಪ್ರಾದೇಶಿಕ ಮಿತಿಯ ಭಾವನೆಗಳು ಮತ್ತು ಮನುಸ್ಮೃತಿಯಂತಾ ಪುರಾತನ ಗ್ರಂಥಗಳಿಗೆ ಬದಲಾಗಿ ರಾಷ್ಟ್ರೀಯತೆ ಎಂಬ ಸಿದ್ಧಾಂತವನ್ನು ಬ್ರಾಹ್ಮನಿಸಮ್ಮಿನ ಅಡಿಪಾಯವಾಗಿ ಮಾಡಿದರು. ಅದೇ ಹೊತ್ತು ಅಗರ್ಕರ್‌ ಮತ್ತು ಅವರ ಸಿದ್ಧಾಂತದ ಜೊತೆಯಾದ ಗೋಖಲೆ ಮತ್ತು ಅವರ ಸುತ್ತ ಇದ್ದ ಇತರ ಪ್ರಗತಿಪರ ಚಿತ್ಪಾವನ ಬ್ರಾಹ್ಮಣರು ಪೇಶ್ವಾಸಾಮ್ರಾಜ್ಯ ಮತ್ತು ಮನುಸ್ಮೃತಿಯ ಗೋಡೆಗಳನ್ನು ಒಡೆದು ಹೊಸ ಲೋಕಕ್ಕೆ ವ್ಯಾಪಿಸುತ್ತಿದ್ದರು. ಅವರ ಸೈದ್ಧಾಂತಿಕತೆ ಚಿತ್ಪಾವನ ಬ್ರಾಹ್ಮಣ ವಂಶದ ನಷ್ಟದ ಪ್ರಜ್ಞೆಯಲ್ಲಿ ಮುಳುಗಿರಲಿಲ್ಲ. ಒಂದು ಸಮುದಾಯದ ಪ್ರಾಬಲ್ಯಕ್ಕಿಂತ ರಾಷ್ಟ್ರ ನಿಯಮದ ಬ್ರಾಬಲ್ಯವನ್ನು ಅವರು ಬಯಸಿದ್ದರು.

ಈ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಬೇಕೆಂದರೆ ೧೮೯೧ರ ಏಜ್‌ ಆಫ್‌ ಕನ್ಸೆಂಟ್‌ ಆಕ್ಟ್‌ ಎಂಬ ಹಿಂದೂ ಹೆಣ್ಣುಮಕ್ಕಳ ವಿವಾಹ ಪ್ರಾಯಕ್ಕೆ ಸಂಬಂಧಿಸಿದ ಕಾನೂನಿನ ಬಗ್ಗೆ ಎರಡು ಪಂಗಡಗಳು ತೆಗೆದುಕೊಂಡ ನಿರ್ಣಯಗಳನ್ನು ನೋಡಬೇಕು. ಬ್ರಿಟಿಷ್‌ ಸರಕಾರ ಈ ಕಾನೂನಿನ ಮೂಲಕ ಹತ್ತು ವರ್ಷದ ಕೆಳಗಿನ ಹಿಂದು ಹೆಣ್ಣುಮಕ್ಕಳ ಮತ್ತು ಹದಿನಾರು ವರ್ಷದ ಕೆಳಗಿನ ಗಂಡುಮಕ್ಕಳ ವಿವಾಹವನ್ನು ಶಿಕ್ಷಾರ್ಹಗೊಳಿಸಿತ್ತು. ರಾಣಡೆ, ಅಗರ್ಕರ್‌ ಮತ್ತು ಗೋಖಲೆಯವರ ಸಂಘಟನೆ ಬಹಳ ಕಾಲದಿಂದ ಒತ್ತಾಯಿಸುತ್ತಾ ಬಂದಿದ್ದ ಕಾನೂನಾಗಿತ್ತು ಇದು. ಅದೇ ಹೊತ್ತು ಹಿಂದೂ ಸಮಾಜದ ಮೇಲೆ ಬ್ರಿಟಿಷರು ನಡೆಸುತ್ತಿರುವ ಅತಿಕ್ರಮಣವಾಗಿ ತಿಲಕ್‌ ಇದನ್ನು ಚಿತ್ರಿಸಿದರು. ಇದರಿಂದಾಗಿ ಸಂಪ್ರದಾಯವಾದಿ ಹಿಂದೂಗಳ ಬೆಂಬಲ ತಿಲಕರಿಗೆ ಲಭಿಸುವಂತಾಯಿತು. ಪೂರ್ಣವಾಗಿ ಅವರ ನಾಯಕ ಸ್ಥಾನಕ್ಕೆ ತಿಲಕ್‌ ಏರುವುದು ಈ ಮೂಲಕವಾಗಿತ್ತು. ವಿಧವಾ ವಿವಾಹದ ವಿಷಯದಲ್ಲೂ ಈ ಭಿನ್ನಾಭಿಪ್ರಾಯ ಸ್ಪಷ್ಟವಾಗಿತ್ತು. ಕೆಳಜಾತಿ ಸಂಘಟನೆಯಾಗಿದ್ದ ಮಹಾತ್ಮ ಫುಲೆಯ ಸತ್ಯಶೋಧಕ ಸಮಾಜ ವಿಧವಾ ವಿವಾಹಕ್ಕೋಸ್ಕರ ನಿರಂತರವಾಗಿ ಆಗ್ರಹಿಸುತ್ತಿದ್ದ ಸಂಘಟನೆಯಾಗಿತ್ತು. ಅದರ ಬೆಂಬಲಕ್ಕೆ ನಿಂತುಕೊಂಡು ಅಗರ್ಕರ್‌ ಹಲವು ಪತ್ರಗಳನ್ನು ಬರೆದರು. ಅಗರ್ಕರ್‌ ಅನುಯಾಯಿಯಾಗಿದ್ದ ಭಂಡಾರ್ಕರ್‌ ತನ್ನ ವಿಧವೆ ಮಗಳನ್ನು ಪುನಹ ಮದುವೆ ಮಾಡಿಸಿದರು. ಅದೇ ಹೊತ್ತು ತಿಲಕ್‌ ಮತ್ತು ಅನುಯಾಯಿಗಳು ವಿಧವಾ ವಿವಾಹವನ್ನು ನಖಶಿಖಾಂತ ವಿರೋಧಿಸಿದರು.

ಮಹಾತ್ಮ ಫುಲೆಯ ಜೊತೆ ಕೆಲಸ ಮಾಡುತ್ತಿದ್ದ ಮತ್ತು ವಿವೇಕಾನಂದರು ಭಾಗವಹಿಸಿದ ಚಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ್ದ ಪಂಡಿತ ರಮಾಬಾಯಿ ವಿಧವೆಯರ ವಿದ್ಯಾಭ್ಯಾಸಕ್ಕಾಗಿ ಶಾರದಾ ಸದನ್‌ ಆರಂಭಿಸಿದಾಗ ಅದನ್ನು ವಿರೋಧಿಸಲು ತಿಲಕ್ ತನ್ನ ಕೇಸರಿಯ ಪುಟಗಳನ್ನು ಬಳಸಿಕೊಂಡರು. ಮಹಿಳೆಯರಿಗೆ ವಿದ್ಯಾಭ್ಯಾಸವೆಂಬುದು ಅವರ ಸಾಮಾಜಿಕ ಸ್ಥಾನಮಾನವನ್ನು ಮೇಲಕ್ಕೇರಿಸಲು ನಡೆಸುವ ಹೂಡಿಕೆ ಎಂಬ ತತ್ವವನ್ನು ತಿಲಕ್‌ ವಿರೋಧಿಸಿದರು. ಬದಲಿಗೆ, ಗೃಹಿಣಿ ಎಂಬ ತನ್ನ ಕರ್ತವ್ಯವನ್ನು ನಿಭಾಯಿಸಲು ಬೇಕಾದ ಒಂದು ಸಾಧನವಾಗಿ ಮಾತ್ರ ತಿಲಕ್‌ ಮಹಿಳಾ ವಿದ್ಯಾಭ್ಯಾಸವನ್ನು ಕಂಡರು. ತಿಲಕ್‌ ಪ್ರಕಾರ ಒಂದು ಹೆಣ್ಣಿನ ಅತ್ಯಂತ ವಿಶಾಲ ಪ್ರಯೋಗಶಾಲೆ ಆಕೆಯ ವೈವಾಹಿಕ ಜೀವನವೇ ಆಗಿತ್ತು. ಅಸ್ಪೃಶ್ಯರಿಗೆ ವಿಧಾನಸಭೆಯಲ್ಲಿ ಮೀಸಲಾತಿ ತಂದಾಗ ಅದರ ಕುರಿತು ತಿಲಕ್‌ ಅಭಿಪ್ರಾಯ ಹೀಗಿತ್ತು, ʼವಿಧಾನಸಭೆಯಲ್ಲಿ ರೈತರು ಬಂದು ಏನು ಮಾಡುತ್ತಾರೆ? ದರ್ಜಿಗಳು ಅಲ್ಲಿ ಬಂದು ಹೊಲಿಗೆ ಕೆಲಸ ಮಾಡುತ್ತಾರೆಯೇ? ವ್ಯಾಪಾರಿಗಳು ಅಲ್ಲಿ ತಮ್ಮ ತಕ್ಕಡಿ ತೂಗುತ್ತಾರೆಯೇ?ʼ ಎಂದು. ತಿಲಕ್‌ಪರರ ನಿರಂತರವಾದ ದಾಳಿಗಳ ಫಲವಾಗಿ ರಾಣಡೆ ಮೌನವಾದರು. ಆದರೂ, ಡಾ. ಭಂಡಾರ್ಕರ್‌, ಜಸ್ಟಿಸ್‌ ತಿಲಾಂಗ್‌, ಸರ್‌ ಎನ್.ಜಿ. ಚಂದವರ್ಕರ್‌ ಮತ್ತು ಗೋಪಾಲ ಕೃಷ್ಣ ಗೋಖಲೆ ಸಹಿತ ಹಲವರು ಪ್ರಗತಿಪರ ವಲಯದಲ್ಲಿ ಗಟ್ಟಿಯಾಗಿ ನಿಂತರು.

೧೮೧೮ರ ಪೇಶ್ವಾ ಸಾಮ್ರಾಜ್ಯ ಪತನದ ನಂತರ ಹಿಂದೂ ಉತ್ಸವಗಳ ಬಣ್ಣ ಮಾಸತೊಡಗಿತ್ತು. ಅವೆಲ್ಲ ಮನೆಗಳ ಒಳಗೆ ಸ್ಥಳಾಂತರಗೊಂಡಿದ್ದವು. ಹಿಂದೂ ಧರ್ಮದ ಜಾತಿಪದ್ಧತಿಯನ್ನು ಸಾಮಾಜಿಕವಾಗಿ ಕಾಯ್ದುಕೊಳ್ಳುವಲ್ಲಿ ಉತ್ಸವಗಳಿಗೆ ದೊಡ್ಡ ಪಾಲಿತ್ತು. ಬ್ರಾಹ್ಮಣ್ಯಕ್ಕೆ ಹಿಂದೂ ಜನಸಮುದಾಯದ ಬುಡದ ತನಕ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಉತ್ಸವಗಳ ಮಧ್ಯಸ್ಥಿಕೆ ಮಹತ್ವದ್ದಾಗಿತ್ತು. ೧೮೯೦ರ ತನಕವೂ ಈ ಉತ್ಸವಗಳು ಸೊರಗಿದವು. ಸಾರ್ವಜನಿಕವಾಗಿ ಅವು ಮಾಯವಾದವು.

೧೮೯೨ರಲ್ಲಿ ಉತ್ಸವಗಳನ್ನು ಸಾರ್ವಜನಿಕ ವಲಯಕ್ಕೆ ಪುನಹ ತರುವ ಪ್ರಜ್ಞಾಪೂರ್ವಕ ಪ್ರಯತ್ನಗಳು ನಡೆಯುತ್ತವೆ. ಸಹಜವಾಗಿಯೇ ಚಿತ್ಪಾವನ ಬ್ರಾಹ್ಮಣರ ರಾಜಕೀಯ ಶಕ್ತಿ ಸಂಚಯಗೊಂಡಿದ್ದ ಪುಣೆ ಇದಕ್ಕೂ ಕೇಂದ್ರವಾಯಿತು. ಪುಣೆಯಲ್ಲಿ ಆಯುರ್ವೇದ ವೈದ್ಯರಾಗಿದ್ದ ಭಾವುಸಾಹೇಬ್‌ ಲಕ್ಷ್ಮಣ್‌ ಜಾವ್ಲೆ ಮತ್ತು ಅವರ ಗೆಳೆಯರಾದ ದಗ್ದು ಶೇಟ್‌ ಹಲ್ವಾಯಿ, ನಾನಾಸಾಹೇಬ್‌ ಖಸ್ಗಿವಾಲೇ, ಮಹಾಋಷಿ ಅಣ್ಣಾಸಾಹೇಬ್‌ ಪಟವರ್ಧನ್‌, ಬಾಳಾಸಾಹೇಬ್‌ ನಟ್ಟು, ಗಣಪತ್‌ ರಾವ್‌ ಗೋರವಾಡೇಕರ್‌, ಲಕ್ಕು ಶೇಟ್‌ ದಂಡಾಲೇ ಮೊದಲಾದವರು ಸೇರಿಕೊಂಡು ಒಂದು ಚಪ್ಪರ ಕಟ್ಟಿ ಗಣೇಶೋತ್ಸವವನ್ನು ಸಾರ್ವಜನಿಕ ವಲಯಕ್ಕೆ ಮತ್ತೆ ಬರಮಾಡಿಕೊಂಡರು. ಇದನ್ನು ಭಾವು ರಣಗರಿ ಗಣಪತಿ ಮಂಡಲ್‌ ಎಂದು ಕರೆದರು. ಹೆಣ್ಣುಮಕ್ಕಳ ವಿವಾಹ ಪ್ರಾಯವನ್ನು ಹೆಚ್ಚಿಸಿದ ಬಿಲ್ಲನ್ನು ನಖಶಿಖಾಂತ ವಿರೋಧಿಸುವ ಮೂಲಕ ಸಂಪ್ರದಾಯವಾದಿ ಬ್ರಾಹ್ಮಣರ ನಡುವೆ ಜನಪ್ರಿಯರಾಗಿದ್ದ ತಿಲಕರ ಗಮನ ಇದರ ಮೇಲೆ ಬಿತ್ತು. ಕೇಸರಿ ಮತ್ತು ಮರಾಠ ಇದಕ್ಕೆ ತಮ್ಮಿಂದಾದಷ್ಟು ಪ್ರಚಾರ ನೀಡಿದವು. ೧೮೯೪ರಲ್ಲಿ ತಿಲಕ್‌ ಸ್ವತಃ ತಾನೇ ನೇತೃತ್ವ ವಹಿಸಿಕೊಂಡು ವಿನ್ಚುರ್ಕ್‌ವಾಡಾದ ಕೇಸರಿ ಕಛೇರಿಯ ಎದುರಿನಲ್ಲಿ ದೊಡ್ಡದೊಂದು ಚಪ್ಪರ ಕಟ್ಟಿಕೊಂಡು ಗಣಪತಿ ವಿಗ್ರಹ ಇಟ್ಟರು. ರಾಜಕೀಯ ಸಭೆಗಳ ಮೇಲಿದ್ದ ಬ್ರಿಟಿಷ್‌ ಸರಕಾರದ ನಿಷೇಧವನ್ನು ಧರ್ಮದ ಮರೆಯಲ್ಲಿ ನಿಂತುಕೊಂಡು ಮುರಿಯಲು ತಿಲಕ್‌ ಈ ಉತ್ಸವವನ್ನು ಬಳಸಿಕೊಂಡರು. ತಿಲಕ್‌ ಸ್ಥಾಪಿಸಿದ ವಿಗ್ರಹಗಳು ಸಾಮಾನ್ಯ ಗಣಪತಿ ವಿಗ್ರಹಗಳಾಗಿರಲಿಲ್ಲ. ಅವು ಅಸುರನಿಗ್ರಹ ಮಾಡುತ್ತಿರುವ ಗಣಪತಿ ವಿಗ್ರಹಗಳಾಗಿದ್ದವು. ಗಣಪತಿ ವಿಗ್ರಹಗಳು ಚಿತ್ಪಾವನ ಪ್ರಜ್ಞೆಯಾಗಿಯೂ ಅಸುರ ವಿಗ್ರಹಗಳು ಬ್ರಿಟಿಷ್‌ ಸರಕಾರವಾಗಿಯೂ ಕಾಣುವ ಹೊಸತೊಂದು ಸಂಜ್ಞಾಭಾಷೆಗೆ ಈ ಮೂಲಕ ತಿಲಕ್‌ ರೂಪು ನೀಡಿದರು. ವಿಘ್ನೇಶ್ವರನಾದ ಗಣಪತಿ ಬ್ರಾಹ್ಮಣರ ಯುದ್ಧದಲ್ಲಿ ಎದುರು ಬರುವ ಅಡೆತಡೆಗಳನ್ನು ನಿವಾರಿಸಿಕೊಡುತ್ತಾನೆಂಬ ಅಭಯವನ್ನೂ ಈ ಮೂಲಕ ಪಸರಿಸಲಾಯಿತು.

ಬ್ರಾಹ್ಮಣಿಸಮ್ಮಿನ ಪ್ರಚಾರಕ್ಕೆ ಸಾಂಸ್ಕೃತಿಕ ರಾಜಕಾರಣ ಒಂದು ಮುಖ್ಯವಾದ ದಾರಿ ಎಂದು ತಿಲಕ್‌ ಕಂಡುಕೊಳ್ಳುವುದು ಈ ವಿಜಯದ ಮೂಲಕ. ತಾನು ನಿರೂಪಿಸಿದ್ದ ನವಬ್ರಾಹ್ಮನಿಸಂ ಬರಿಯ ಬ್ರಾಹ್ಮಣರಿಗಲ್ಲದೆ ಒಂದು ಜನಪ್ರಿಯ ಅಗತ್ಯತೆಯಾಗಿತ್ತು ಎಂದು ತಿಲಕ್‌ ಮನಗಾಣುವುದು ಕೂಡ ಈ ಹೊತ್ತಲ್ಲಿ. ಉತ್ಸವಗಳ ಜನಪ್ರಿಯತೆಯನ್ನು ಬ್ರಾಹ್ಮಣಿಸಂ ಸುಲಭದಲ್ಲಿ ಆಪೋಶನ ತೆಗೆದುಕೊಳ್ಳಬಹುದು ಎಂದು ಮನಗಂಡ ತಿಲಕರನ್ನು ನಾವು ಇಲ್ಲಿ ಗುರುತಿಸಬಹುದು.

ಆ ಕಾಲದ ತಿಲಕರ ಚಟುವಟಿಕೆಗಳನ್ನು ಗಮನಿಸಿದರೆ ಅದು ಬ್ರಿಟಿಷ್‌ ವಿರೋಧಿ ಎಂಬ ಹಾಗೆಯೇ ಮುಸ್ಲಿಂ ವಿರೋಧಿಯೂ ಆಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವೇನಲ್ಲ. ಗಣೋಶೋತ್ಸವದ ಆರಂಭ ಈ ಹಿನ್ನೆಲೆಯನ್ನೂ ಒಳಗೊಂಡಿತ್ತು. ಅದು ಬ್ರಿಟಿಷ್‌ ಇಂಡಿಯಾದ ಹಲವು ಭಾಗಗಳಲ್ಲಿ ಹಿಂದೂ-ಮುಸ್ಲಿಂ ಸಂಘರ್ಷ ನಡೆಯುತ್ತಿದ್ದ ಕಾಲವಾಗಿತ್ತು. ಗೋವಧೆ, ʼವರಾಹʼವಧೆಗಳ ಜೊತೆಗೆ ಶತ್ರುತ್ವ ಹೆಚ್ಚಿಸಲು ವಾದ್ಯಘೋಷಾದಿಗಳ ಬಳಕೆಯೂ ಆ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಉದಾಹರಣಗೆ, ೧೮೯೪ ಫೆಬ್ರವರಿ ೬ ರಂದು ನಾಸಿಕ್‌ ಬಳಿ ನಡೆದ ಒಂದು ಘಟನೆ ನೋಡೋಣ. ಸ್ಥಳೀಯ ಮಸೀದಿಯೊಂದರಲ್ಲಿ ಹಂದಿಯ ತಲೆ ಕಡಿದು ಹಾಕಿದ್ದಾರೆಂಬ ಸುದ್ದಿ ಕೇಳಿ ಇಸ್ಲಾಂ ಧರ್ಮಾನುಯಾಯಿಗಳು ಸಿಡಿದೆದ್ದರು. ಮಮ್ಲತ್‌ ದಾರ್‌ (ಕಲೆಕ್ಟರ್)‌ ಪರಿಶೀಲನೆಯಲ್ಲಿ ಮಸೀದಿಯೊಳಗೆ ಹಂದಿಯ ದೇಹಭಾಗಗಳು ಸಿಕ್ಕವು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ದೇವಸ್ಥಾನದಲ್ಲಿ ಹಸುವಿನ ದೇಹದ ಭಾಗಗಳು ಕಾಣಿಸಿಕೊಂಡವು. ಇದರೊಂದಿಗೆ ಸಂಘರ್ಷವು ಮಸೀದಿ ಮತ್ತು ದೇವಸ್ಥಾನದಿಂದ ಹೊರ ಬಂದು ಬೀದಿಗೆ ಇಳಿಯಿತು. ಮುರಳೀಧರ ದೇವಸ್ಥಾನಕ್ಕೆ ಮುಸ್ಲಿಮರು ಬೆಂಕಿ ಹಚ್ಚಿದ್ದಾರೆಂಬ ವದಂತಿಗಳು ಹರಡಿದವು. ಇದರ ಬೆನ್ನಿಗೆ ಹಲವಾರು ಮಸೀದಿಗಳ ಮೇಲೆ ದಾಳಿ ನಡೆಯಿತು. ದೇವಸ್ಥಾನಗಳ ಮೇಲೂ ದಾಳಿಗಳಾದವು. ಅಂತಿಮವಾಗಿ ನಾಲ್ಕು ಜನರ ಸಾವಿನೊಂದಿಗೆ ಇದು ಕೊನೆಯಾಯಿತು. ಭೀಷ್ಮ ಸಾಹನಿಯವರ ತಮಸ್‌ ತರದ ಕಾದಂಬರಿಗಳಲ್ಲಿ ಇಂತಹಾ ವಿದ್ವಂಸಕಾರಿ ಸಾಮಾಜಿಕ ಘಟನೆಗಳ ವಿವರವಾದ ಪ್ರಸ್ತಾಪಗಳಿವೆ.

ಹಿಂದೂ ಸಂಘಟನೆಗಳ ರೂಪೀಕರಣದೊಂದಿಗೆ ಇಂತಹ ಸಂಘರ್ಷಗಳು ಆಕಸ್ಮಿಕವೋ, ಒಂದರ್ಥದಲ್ಲಿ ಅನೈಚ್ಛಿಕವೋ ಅಲ್ಲದಾದವು. ದಯಾನಂದ ಸರಸ್ವತಿಯವರ ನೇತೃತ್ವದ ಆರ್ಯಸಮಾಜ ಉತ್ತರಭಾರತದಾದ್ಯಂತ ಗೋಸಂರಕ್ಷಣಸಭಾಗಳನ್ನು ವ್ಯಾಪಕವಾಗಿ ಹಬ್ಬಿಸಿದವು. ೧೮೯೦ರ ಹೊತ್ತಿಗೆ ಡೆಕ್ಕನ್‌ ಪ್ರದೇಶದಲ್ಲಿ ಗೋಸಂರಕ್ಷಣಸಭಾಗಳ ಚಟುವಟಿಕೆ ವ್ಯಾಪಿಸಿದವು. ಅಹಮದ್‌ ನಗರ, ಬೆಳಗಾವಿ, ಧಾರವಾಡ, ಪುಣೆ, ಸತಾರ, ನಾಸಿಕ್‌ ಮೊದಲಾದ ನಗರಗಳಲ್ಲೆಲ್ಲ ಈ ಸಭೆಗಳು ತಮ್ಮ ಚಟುವಟಿಕೆ ಶುರು ಮಾಡಿದಾಗ ಸಂಘರ್ಷಗಳ ವ್ಯಾಪ್ತಿಯೂ ಹೆಚ್ಚಿತು. ಮಸೀದಿಗಳ ಮುಂದೆ ವಾದ್ಯಘೋಷಾದಿಗಳೊಂದಿಗೆ ನಡೆಯುವ ಹಿಂದೂ ಮೆರವಣಿಗೆಗಳನ್ನು ೧೮೫೯ ರಲ್ಲಿ ಬಾಂಬೆ ಸದರಿನ ಫೌಜುದಾರಿ ಅದಾಲತ್‌ (ಕೋರ್ಟ್)‌ ನಿಷೇಧಿಸಿತ್ತು.

ಇಂತಹಾ ಪರಿಸ್ಥಿತಿಯಲ್ಲಿ ಡೆಕ್ಕನ್‌ ಪ್ರದೇಶದ ಜನಜೀವನವನ್ನು ಸಮತೋಲನಗೊಳಿಸುವ ಪ್ರಯತ್ನವನ್ನು ತಿಲಕ್‌ ಮತ್ತು ಕೇಸರಿ ಮಾಡುವುದಿಲ್ಲ. ಬದಲಿಗೆ ಕೇಸರಿಯ ಮೂಲಕ ಮುಸ್ಲಿಂ ವಿರೋಧಿ ಲೇಖನಗಳನ್ನು ಬೆನ್ನು ಬೆನ್ನಿಗೆ ಬರೆದರು. ಬ್ರಿಟಿಷ್‌ ಸರಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ ಎಂದು ತಿಲಕ್‌ ಆರೋಪಿಸಿದರು. ನಿಜದಲ್ಲಿ ಒಡೆದು ಆಳುವುದೇ ಬ್ರಿಟಿಷರ ತಂತ್ರವಾಗಿತ್ತು. ಅಂತಹ ಯಾವ ಅವಕಾಶವನ್ನು ಬ್ರಿಟಿಷರು ಕೈಚೆಲ್ಲುತ್ತಿರಲಿಲ್ಲ. ಹೀಗಿರುವಾಗ, ರಾಜ್ಯನಷ್ಟ ಹೊಂದಿದ ಒಂದು ಸಮುದಾಯದ ಪ್ರತಿನಿಧಿ ಎಂಬ ನೆಲೆಯಲ್ಲಿ ತಿಲಕ್‌ ಒಂದರ್ಥದಲ್ಲಿ ಬ್ರಿಟಿಷರಿಗೆ ಅವಕಾಶಗಳನ್ನು ಸೃಷ್ಟಿಸಿ ಕೊಡುತ್ತಿದ್ದರು ಎಂದು ಬೇಕಿದ್ದರೆ ವಾದಿಸಬಹುದು. ಆದರೆ, ಅದಕ್ಕೂ ಮಿಗಿಲಾಗಿ ಬ್ರಾಹ್ಮಣ ಪ್ರಾಬಲ್ಯದ ದೀರ್ಘಾಧಿಪತ್ಯವನ್ನು ಗುರಿಯಾಗಿಟ್ಟುಕೊಂಡು ತಿಲಕ್‌ ತನ್ನ ಪ್ರತಿಯೊಂದು ಹೆಜ್ಜೆಗಳನ್ನೂ ಇಡುತ್ತಿದ್ದರು ಎಂಬುದನ್ನು ತಿಲಕರ ರಾಜಕೀಯ ಚಿತ್ರಣ ನಮಗೆ ತಿಳಿಸುತ್ತದೆ.

ಹಿಂದೂ ಘೋಷಯಾತ್ರೆಗಳಲ್ಲಿ ವಾದ್ಯಘೋಷಾದಿಗಳ ಬಳಕೆಗೆ ಇದ್ದ ನಿಷೇಧವನ್ನು ಗಣೇಶೋತ್ಸವದ ಮೂಲಕ ತಿಲಕ್‌ ದಾಟಿದರು. ಗಣೇಶೋತ್ಸವದ ಅತಿ ಮುಖ್ಯ ಘಟ್ಟ ಗಣಪತಿ ವಿಗ್ರಹಗಳನ್ನು ಎತ್ತಿ ಹಿಡಿದುಕೊಂಡು ಸಾಗುವ ಮೆರವಣಿಗೆಗಳೇ ಆಗಿದ್ದವು. ಈ ಮೆರವಣಿಗೆಗಳು ಶಾಂತವಾಗಿಯೋ ಭಕ್ತಿ ನಿರ್ಭರವಾಗಿಯೋ ಇರಲೇ ಇಲ್ಲ. ಹಿಂದೂಗಳು ಆಯುಧ ಕೈಗೆತ್ತಿಕೊಂಡು ಬಾಹ್ಯ ಶಕ್ತಿಗಳನ್ನು ಹೊಡೆದೋಡಿಸಲು ಶಿವಾಜಿಯ ಹಾಗೆ ಹೋರಾಡಬೇಕೆಂಬ ಆಹ್ವಾನಗಳೇ ಈ ಮೆರವಣಿಗೆಯ ಮುಖ್ಯ ಘೋಷಣೆಯಾಗಿತ್ತು. ವಿಕೇಂದ್ರಿತವಾದ ವ್ಯವಸ್ಥೆಗಳನ್ನು ತಿಲಕ್‌ ಇದಕ್ಕಾಗಿ ಮಾಡಿಕೊಂಡಿದ್ದರು. ಯುವಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ಮೇಳ ಎಂದು ಕರೆಯಲ್ಪಡುತ್ತಿದ್ದ ಸಂಘಗಳು ಎಲ್ಲ ಕಡೆಯೂ ಗಣೇಶೋತ್ಸವಗಳನ್ನು ಆಯೋಜಿಸುತ್ತಿದ್ದವು. ಮೇಳದ ಸದಸ್ಯರು ಕಪ್ಪು ಬಟ್ಟೆಗಳನ್ನು ಧರಿಸುತ್ತಿದ್ದರು. ಮುಸ್ಸೊಲಿನಿಯ ಕಪ್ಪು ಸಮವಸ್ತ್ರಧಾರಿಗಳ ಹಾಗೆ. ಉತ್ಸವದ ಕಾಲಾವಧಿ ಹತ್ತು ದಿನಗಳು ಎಂದು ನಿಶ್ಚಯಿಸಲಾಯಿತು. ಈ ಹತ್ತು ದಿನಗಳಲ್ಲೂ ಗಣಪತಿ ವಿಗ್ರಹಗಳನ್ನು ಹೊತ್ತುಕೊಂಡು ನಗರ ಪ್ರದಕ್ಷಿಣೆ ಹಾಕಬೇಕು. ಸಮಕಾಲೀನ ರಾಜಕೀಯ ಚಟುವಟಿಕೆಗಳನ್ನು ಜನಪ್ರಿಯ ಹಾಡುಗಳ ಒಳಗೆ ತೂರಿಸಲು ಇವರು ಮರೆಯಲಿಲ್ಲ. ಇದರೊಂದಿಗೆ ಧರ್ಮದ ಪರದೆಯಿಂದ ರಾಜಕಾರಣದ ಪರದೆಯ ಕಡೆಗೆ ಚಲಿಸುವ ಗುಣವೊಂದು ಈ ಉತ್ಸವಗಳಿಗೆ ಲಭಿಸಿತು. ಧಾರ್ಮಿಕವಾಗಿಯೂ ರಾಜಕೀಯವಾಗಿಯೂ ಬ್ರಾಹ್ಮಣಿಸಮ್ಮಿನ ಪ್ರಾಬಲ್ಯವನ್ನು ಗಟ್ಟಿಗೊಳಿಸಲು ಈ ಮೂಲಕ ಒಂದೇಟಿಗೆ ಸಾಧ್ಯವಾಯಿತು. ರಾಜಕೀಯ ಬ್ರಾಹ್ಮಣಿಸಮ್ಮಿನ ಕಣ್ಣು ಕೋರೈಸುವ ವೈಭವ, ಅದರ ಚಿತ್ಪಾವನ ಪ್ರೇಮವನ್ನು ಗಟ್ಟಿಗೊಳಿಸುವ ಜೊತೆಗೆ ಬ್ರಾಹ್ಮಣೇತರವಾದ ಒಂದು ಬಾಹ್ಯ ವಾತಾವರಣವನ್ನೂ ಸೃಷ್ಟಿಸಿತು.

ಗಣೇಶೋತ್ಸವದ ವಿಜಯದ ಮೂಲಕ ಕಂಡುಕೊಂಡ ಸಾಂಸ್ಕೃತಿಕ ರಾಜಕಾರಣದ ಎರಡನೇ ಹೆಜ್ಜೆಯನ್ನು ತಿಲಕ್ ಇಡುವುದು ಶಿವಾಜಿ ಉತ್ಸವದ ಯೋಜನೆಯ ಮೂಲಕ. ೧೯೧೦ ರಲ್ಲಿ ಪ್ರಕಟಗೊಂಡ, ಬ್ರಿಟಿಷ್‌ ಪತ್ರಕರ್ತ ವ್ಯಾಲೆಂಟೈನ್‌ ಚಿರೋಲ್‌ ಬರೆದ ಇಂಡಿಯನ್‌ ಅನ್‌ರೆಸ್ಟ್‌ ಎಂಬ ಪುಸ್ತಕದಲ್ಲಿ ಶಿವಾಜಿ ಉತ್ಸವದ ಆರಂಭದ ಬಗ್ಗೆ ವಿವರಿಸುತ್ತಾರೆ. (ಇದೇ ಪುಸ್ತಕದಲ್ಲಿ ತಿಲಕರನ್ನು ಭಾರತದ ಅಶಾಂತಿಯ ಪಿತಾಮಹ ಎಂದು ಲೇಖಕರು ಕರೆಯುತ್ತಾರೆ. ತಿಲಕ್ ಬ್ರಿಟಿಷ್ ಕೋರ್ಟಲ್ಲಿ ಚಿರೋಲ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ ಅದರಲ್ಲಿ ಸೋತದ್ದು ಇನ್ನೊಂದು ಇತಿಹಾಸ). ಜೀವಿತಕಾಲದಲ್ಲಿ ಕೊಂಡಾಡಲ್ಪಟ್ಟಿದ್ದರೂ ಮರಣದ ನಂತರದ ಶಿವಾಜಿಯ ನೆನಪು, ಅದರಲ್ಲೂ ಪೇಶ್ವ ಸಾಮ್ರಾಜ್ಯದ ಪತನದ ನಂತರ, ಬಹಳ ಕಾಲ ವಿಸ್ಮೃತಿಯಲ್ಲೇ ಉಳಿಯಿತು. 1896ರಲ್ಲಿ ತಿಲಕ್‌ ಶಿವಾಜಿ ಉತ್ಸವ ಆರಂಭಿಸುವ ಮೊದಲು ಒಬ್ಬ ಬ್ರಿಟಿಷ್‌ ಅಧಿಕಾರಿ ಶಿವಾಜಿಯ ಸಮಾಧಿಗೆ ಭೇಟಿ ನೀಡಿದ್ದರು. ಯಾರೂ ಗಮನಿಸದೆ ಪಾಳುಬಿದ್ದಿದ್ದ ಅವರ ಅವಸ್ಥೆ ಕಂಡು ಬೇಸರಗೊಂಡ ಅವರು ಸ್ಥಳೀಯ ಪತ್ರಿಕೆಯೊಂದರಲ್ಲಿ ಅದರ ಕುರಿತು ಬರೆದಿದ್ದಾರೆ. ಮಹಾರಾಷ್ಟ್ರೀಯರು ತಮ್ಮ ರಾಷ್ಟ್ರೀಯ ನಾಯಕನ ಸಮಾಧಿಗೆ ನೀಡಿರುವ ಶೋಚನೀಯ ಸ್ಥಿತಿಯನ್ನು ಎತ್ತಿ ತೋರಿಸಿದ ಆ ಲೇಖನ ತಿಲಕರನ್ನು ಶಿವಾಜಿ ಉತ್ಸವದ ಕಲ್ಪನೆಗೆ ಹಚ್ಚಿತ್ತು. ಶಿವಾಜಿ ನೆನಪುಗಳನ್ನು ಪುನಃ ತರುವ ಮೂಲಕ ತಿಲಕದಲ್ಲಿ ಹಲವಾರು ಸಂಗತಿಗಳ ಸಂಗಮವನ್ನು ಮನದಲ್ಲಿ ಕಂಡಿರಬಹುದು.

ಪೇಶ್ವಾಸಾಮ್ರಾಜ್ಯ ಎಂದು ಹೆಸರುವಾಸಿಯಾಗಿದ್ದ ಚಿತ್ಪಾವನ ಬ್ರಾಹ್ಮಣರು ಅಧಿಕಾರ ನಡೆಸಿದ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿಕೊಟ್ಟದ್ದು ಚಿತ್ಪಾವನ ಬ್ರಾಹ್ಮಣನಲ್ಲದ ಶಿವಾಜಿಯಾಗಿದ್ದ. ಬ್ರಾಹ್ಮನಿಸಂ ಗಟ್ಟಿಯಾಗಬೇಕಿದ್ದರೆ ಅದರ ಸುತ್ತ ಬ್ರಾಹ್ಮಣೇತರ ಸಮುದಾಯಗಳ ಸಾನಿಧ್ಯವನ್ನು ಗಟ್ಟಿಗೊಳಿಸಬೇಕಿತ್ತು. ಅದಕ್ಕೆ ಬಳಸಬಹುದಾದ ಅತ್ಯುತ್ತಮ ಬಿಂಬವೇ ಮರಾಠ ಸಮುದಾಯದ ಶಿವಾಜಿ. ಶಿವಾಜಿ ಮತ್ತು ಆತನ ಬ್ರಾಹ್ಮಣ ಗುರುವಾಗಿದ್ದ ರಾಮದಾಸರ ನಡುವಿನ ಸಂಬಂಧವು ತಿಲಕ್‌ ಕಟ್ಟುತ್ತಿದ್ದ ನವಬ್ರಾಹ್ಮಣಿಸಮ್ಮಿಗೆ ಸುಲಭದಲ್ಲಿ ಉಪಯೋಗಿಸಬಹುದಾದ ಸಾಂಸ್ಕೃತಿಕ ದ್ವಂದ್ವವಾಗಿತ್ತು. ಡೆಕ್ಕನ್‌ ಸುಲ್ತಾನ್‌ ಆದಿಲ್‌ ಷಾ ಮತ್ತು ಮೊಘಲ್‌ ದೊರೆ ಔರಂಗಜೇಬ್‌ ಜೊತೆಗಿನ ಶಿವಾಜಿಯ ಯುದ್ಧಗಳನ್ನು ಮ್ಲೇಚ್ಛರಾದ ಮುಸ್ಲಿಮರು ಮತ್ತು ಬ್ರಿಟಿಷರ ವಿರುದ್ಧದ ಬ್ರಾಹ್ಮಣರ ಹೋರಾಟದೊಂದಿಗೆ ಸಮೀಕರಿಸಲು ಕೂಡ ಸಾಧ್ಯವಾಗಿತ್ತು.

ತಿಲಕರ ಆಸ್ಥಾನಕೇಂದ್ರವಾಗಿದ್ದ ರಾಯಗಡದಲ್ಲಿಯೇ ಶಿವಾಜಿಯ ಪಚ್ಟಾಭಿಷೇಕ ನಡೆದಿತ್ತು ಎಂಬುದು ಕೂಡ ದೊಡ್ಡದೊಂದು ಸಾಧ್ಯತೆಯಾಗಿತ್ತು. ೧೮೯೬ ಮಾರ್ಚ್ ೩ ರ ಕೇಸರಿಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ತಿಲಕ್ ಶಿವಾಜಿ ಉತ್ಸವದ ವಿವರಗಳನ್ನು ಬರೆದಿದ್ದರು. ಶಿವಾಜಿ ಮತ್ತು ರಾಮದಾಸರ ಕುರಿತ ಹಾಡುಗಳು ಅಥವಾ ಪವ್ಡಾಗಳನ್ನು ಹೊಸದಾಗಿ ರಚಿಸಿ ಹಾಡುವುದು, ಕ್ರೀಡಾಸ್ಪರ್ಧೆಗಳು, ಭಜನೆಗಳು ಮತ್ತು ನಾಟಕಗಳ ಪ್ರದರ್ಶನ, ಮರಾಠಾ ಇತಿಹಾಸದ ಕುರಿತ ಭಾಷಣಗಳು ಮೊದಲಾದ ಕಾರ್ಯಕ್ರಮಗಳ ಮೂಲಕ ಬೃಹತ್ತಾದ ಸಾಂಸ್ಕೃತಿಕ ಉತ್ಸವವಾಗಿ ೧೮೯೫ ಏಪ್ರಿಲ್ ೧೫ ರಂದು ರಾಯಘಡದಲ್ಲಿ ಶಿವಾಜಿ ಉತ್ಸವವನ್ನು ಆರಂಭಿಸಲಾಗಿತ್ತು. ಇದರ ಜೊತೆಗೆ, ಉತ್ಸವದ ಸಡಗರದ ವಾತಾವರಣವನ್ನು ಬ್ರಾಹ್ಮಣ ರಾಜಕಾರಣದೊಂದಿಗೆ ಜೋಡಿಸುವ ಪ್ರಜ್ಞಾಪೂರ್ವಕ ಹಸ್ತಕ್ಷೇಪಗಳನ್ನು ನಡೆಸಲು ತಿಲಕ್ ವಿಶೇಷ ಗಮನ ಹರಿಸಿದರು.

ʼಉತ್ಸವದ ಕೇಂದ್ರ ಬಿಂದು ಶಿವಾಜಿ ಮತ್ತು ರಾಮದಾಸರು ಆಗಿರಬೇಕು. ಮೂರು ದಿನಗಳ ಕಾಲ ಇದು ನಡೆಯಬೇಕು. ಅಧ್ಯಯನ ಶಿಬಿರಗಳು, ಭಾಷಣಗಳು, ನಾಟಕಗಳು (ಲೈಂಗಿಕ ಆಕರ್ಷಣೆ ಮತ್ತು ಅಶ್ಲೀಲಗಳಿಲ್ಲದ), ಐತಿಹಾಸಿಕ ಗೀತೆಗಳ ಗಾಯನ… ಮೊದಲಾದವು ಈ ಕಾರ್ಯಕ್ರಮದ ಮುಖ್ಯ ಚಟುವಟಿಕೆಗಳು. ವಿದೇಶಿ ನಿರ್ಮಿತವೋ ಉತ್ಪಾದಿತವೋ ಆದ ಪೆಟ್ರೋಲಿಯಂ, ಮೇಣದ ಬತ್ತಿಗಳು, ಪಿಂಗಾಣಿ ಪಾತ್ರೆಗಳು ಯಾವ ಕಾರಣಕ್ಕೂ ಉತ್ಸವದಲ್ಲಿ ಬಳಸಬಾರದು. ಸ್ವದೇಶಿ ಉತ್ಪನ್ನಗಳನ್ನೇ ಬಳಸಬೇಕು. ಇದರಿಂದ ಉತ್ಸವದ ವೈಭವಕ್ಕೆ ಧಕ್ಕೆಯಾದರೂ ಪರವಾಗಿಲ್ಲ. ಈ ಮೂರೂ ದಿನಗಳಲ್ಲಿ ದಾಸಬೋಧೆ ಮತ್ತು ಶಿವವಿಜಯದ ಭಾಗಗಳನ್ನು ಓದಬೇಕು. ಕೊನೆಯ ದಿನ ಶಿವಾಜಿಯನ್ನು ಹೊಗಳುವ, ವಿಶೇಷವಾಗಿ ರಚಿಸಿದ ಗೀತೆಯನ್ನು ಶಿವಾಜಿಯಷ್ಟು ಎತ್ತರದ ಪಟವನ್ನು ತಲೆಮೇಲೆ ಹೊತ್ತುಕೊಂಡು ಹಾಡಬೇಕು. ಆಯೋಜಕರು ಮತ್ತು ಸ್ವಯಂಸೇವಕರು ಗೀತೆಯನ್ನು ಹಾಡುವಾಗ ಎದ್ದು ನಿಲ್ಲಬೇಕು ಮತ್ತು ಹಾಡು ಮುಗಿಯುವಾಗ ಹರ ಹರ ಮಹಾದೇವ್‌ ಎಂದು ಜೋರಾಗಿ ಕೂಗಬೇಕು. ಪೂರ್ತಿ ಕಾರ್ಯಕ್ರಮದಲ್ಲಿ ಅತ್ಯಂತ ಪ್ರಮುಖ ಹಂತ ಈ ಗೀತೆ ಹಾಡುವುದೇ ಆಗಿದೆ.ʼ

ತಿಲಕ್‌ ಪ್ರತಿಪಾದಿಸಿದ ಈ ಗೀತೆಯ ಭಾಷಾಂತರವನ್ನು ವ್ಯಾಲೆಂಟೈನ್‌ ಚಿರೋಲ್‌ ಈ ರೀತಿಯಾಗಿ ಮಾಡಿದ್ದ:

ʼಕೆಟ್ಟ ಕಾಲದಲ್ಲಿ ನಾವು ಶೀವಾಜಿಯ ಹಾಗೆ ನುಡಿಯೋಣ. ನಿಮ್ಮ ಖಡ್ಗ ಗುರಾಣಿಗಳನ್ನು ಎತ್ತಿಕೊಳ್ಳಿರಿ. ಶತ್ರುಗಳ ಅಸಂಖ್ಯ ತಲೆಗಳನ್ನು ಚೆಲ್ಲಾಡೋಣ. ಕೇಳಿರಿ! ಪ್ರಾಣವೇ ಕಳೆದುಕೊಳ್ಳಬೇಕಾಗಿ ಬರಬಹುದಾದ ರಾಷ್ಟ್ರಸಮರದಲ್ಲಿ, ನಮ್ಮ ಶತ್ರುಗಳ ಜೀವರಕ್ತ ಹರಿಸಲು ನಾವು ಸನ್ನದ್ಧರಾಗೋಣ.ʼ

ಸ್ವತಹ ತಿಲಕ್ ಅಧ್ಯಕ್ಷತೆ ವಹಿಸಿದ್ದ ಶಿವಾಜಿ ಉತ್ಸವವೊಂದರ ಭಾಷಣದಲ್ಲಿ ಒಬ್ಬ ಬ್ರಾಹ್ಮಣ ಪ್ರೊಫೆಸರ್‌ ಮಾಡಿದ ಭಾಷಣ ಹೀಗಿತ್ತು:

ʼಒಬ್ಬ ಮಹಮ್ಮದೀಯ ಚಕ್ರವರ್ತಿಯ ಎದುರಲ್ಲಿ ತಲೆಬಾಗಲಾರೆ ಎಂದು ಒಂಭತ್ತನೇ ವಯಸ್ಸಿನಲ್ಲಿ ದೈವೀಕ ಪ್ರಚೋದನೆ ಲಭಿಸಿದ ವ್ಯಕ್ತಿಯನ್ನು ಯಾರು ತಾನೇ ಕೊಲೆಗಾರ ಎಂದು ಕರೆಯಲು ಧೈರ್ಯ ಮಾಡುತ್ತಾರೆ? ದೊಡ್ಡದೊಂದು ಜವಾಬ್ದಾರಿ ನಿರ್ವಹಿಸುವಾಗ ಕೇವಲವಾದ ಏನೋ ಒಂದು ಸಂಗತಿ ಪಾಲಿಸಲಿಲ್ಲ ಎಂಬುದರಲ್ಲಿ ಶಿವಾಜಿಯನ್ನು ದೂರಲು ಯಾರಿಗೆ ಧೈರ್ಯವಿದೆ? ಇದಕ್ಕಿಂತಲೂ ಐದೋ ಐವತ್ತೋ ಪಟ್ಟು ದೊಡ್ಡದಾದ ತಪ್ಪು ಶಿವಾಜಿ ಮಾಡಿದ್ದರೂ ಕೂಡ ನಮ್ಮ ಪ್ರಭುವಾದ ಶಿವಾಜಿ ಪ್ರತಿಮೆಯ ಕಾಲಡಿಯಲ್ಲಿ ನೂರು ಸಲ ನಮಸ್ಕಾರ ಮಾಡಲು ನಾನು ತಯಾರಿದ್ದೇನೆ. ಪ್ರತಿಯೊಬ್ಬ ಹಿಂದುವೂ ಪ್ರತಿಯೊಬ್ಬ ಮರಾಠನೂ ಈ ಉತ್ಸವದಲ್ಲಿ ಸಂತೋಷದಿಂದ ಪಾಲ್ಗೊಳ್ಳಬೇಕು. ಯಾಕೆಂದರೆ, ನಾವು ಕೂಡ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಹೋರಾಟದಲ್ಲಿದ್ದೇವೆ. ಆ ಯೋಜನೆಯ ಮೂಲಕ ಮಾತ್ರವೆ ಈ ನೊಗವನ್ನು ಕಿತ್ತೆಸೆಯಲು ನಮ್ಮಿಂದ ಸಾಧ್ಯ.ʼ

ಪೇಶ್ವಾ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಶಿವಾಜಿಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಗುರುತಿಸಲ್ಪಡುವ ಒಂದು ಅಧ್ಯಾಯ ಅಫ್ಸಲ್‌ ಖಾನನ ಕೊಲೆ. ಆ ಘಟನೆಯನ್ನೇ ಬ್ರಾಹ್ಮಣ ಪ್ರೊಫೆಸರ್‌ ಇಲ್ಲಿ ನೆನೆಯುತ್ತಿರುವುದು. ಶಿವಾಜಿಯ ತಂದೆ ಬಿಜಾಪುರದ ಸುಲ್ತಾನರ ಸಾಮಂತನಾಗಿದ್ದ. ಆದರೆ, ತಂದೆಯ ಸಾವಿನ ನಂತರ ಶಿವಾಜಿ ಆಡಳಿತವನ್ನು ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿದ್ದಾನೆ ಎಂಬ ಗುಮಾನಿ ಆದಿಲ್‌ ಷಾಗೆ ಶುರುವಾಗುತ್ತದೆ. ವಾಸ್ತವದಲ್ಲಿ ಆದಿಲ್‌ ಷಾ ಸುಲ್ತಾನ ಆಗಿದ್ದರೂ ಪ್ರಾಯ ಪೂರ್ತಿಯಾಗದ ಕಾರಣ ತಾಯಿ ಆಡಳಿತ ಕಾರ್ಯವನ್ನೆಲ್ಲ ನೋಡಿಕೊಳ್ಳುತ್ತಿದ್ದಳು. ಆಕೆಯ ಅಣತಿಯಂತೆ ಶೀವಾಜಿಯ ತಂದೆಯ ಗೆಳೆಯನೂ ಆಗಿದ್ದ ಅಫ್ಸಲ್‌ ಖಾನ್‌ ಶಿವಾಜಿಯೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರಲು ಆದಿಲ್‌ ಷಾನ ಪ್ರತಿನಿಧಿಯಾಗಿ ಬಂದಿದ್ದ. ಪ್ರತಾಪಗಡದ ಕೋಟೆಯಲ್ಲಿ ಈ ಮಾತುಕತೆ ಆಯೋಜಿಸಲಾಗಿತ್ತು. ೧೬೫೯ ನವೆಂಬರ್‌ ೧೦ ರ ಈ ಭೇಟಿಯಲ್ಲಿ, ಆ ಕಾಲದ ರಾಜನೀತಿಗೆ ವಿರುದ್ಧವಾಗಿ ಶಿವಾಜಿ ಅಫ್ಸಲ್‌ ಖಾನ್‌ನನ್ನು ವಂಚನೆಯಿಂದ ಕೊಂದ ಎಂದು ಜೇಮ್ಸ್‌ ಡಫ್‌ ತರಹದ ಆರಂಭಿಕ ಇತಿಹಾಸಕಾರರು ದಾಖಲಿಸಿದ್ದಾರೆ. ಆದರೆ, ಮರಾಠ ಬ್ರಾಹ್ಮಣರ ಪುನರುಜ್ಜೀವನದ ಭಾಗವಾಗಿ ನಡೆದ ಪ್ರತಿಚರಿತ್ರೆಯಲ್ಲಿ ಶಿವಾಜಿಯನ್ನು ನ್ಯಾಯೀಕರಿಸುವ ಪ್ರಯತ್ನಗಳು ನಡೆದವು. ಅಫ್ಸಲ್‌ ಖಾನನ ವಂಚನೆ ತಿಳಿದ ಕಾರಣ ಶಿವಾಜಿ ಆತನನ್ನು ಕೊಂದ ಎಂಬ ರೀತಿಯಲ್ಲಿ ಬರೆಯಲಾಯಿತು.

ಅಫ್ಜಲ್ ಖಾನ್

ತಿಲಕ್‌ ಕೇಸರಿಯಲ್ಲಿ ಈ ಐತಿಹಾಸಿಕ ಘಟನೆಯನ್ನು ಚರ್ಚಿಸುವುದು ಹೀಗೆ:

ʼಶಿವಾಜಿ ಪೂರ್ವಯೋಜಿತವಾಗಿ ಅಫ್ಸಲ್‌ ಖಾನನ ಕೊಲೆಯನ್ನು ಮಾಡಿದರೆಂದೇ ಇಟ್ಟುಕೊಳ್ಳೋಣ. ಮಹಾರಾಜರ ಈ ಕೃತ್ಯ ಸರಿಯೋ ತಪ್ಪೋ? ಈ ಪ್ರಶ್ನೆಯನ್ನು ಎದುರಿಸಬೇಕಾಗಿರುವುದು ಕಾನೂನಿನ ವಿಷಯ ಬಿಡಿ, ಮನುವಿನ ಅಥವಾ ಯಾಜ್ಞವಲ್ಕ್ಯನ ಸ್ಮೃತಿಗಳದ್ದೋ, ಪಾಶ್ಚಾತ್ಯ ಮೌರಸ್ತ್ಯ ಸಂಹಿತೆಗಳದ್ದೋ ನೈತಿಕ ಮೌಲ್ಯಗಳ ಮೇಲೆಯೂ ಕೂಡ ನಿಂತುಕೊಂಡಲ್ಲ. ಸಮಾಜದ ನಿಯಮಗಳೆಲ್ಲ ನನ್ನ ಮತ್ತು ನಿಮ್ಮಂತಹ ಸಾಮಾನ್ಯ ಮನುಷ್ಯರಿಗೆ ಮಾತ್ರ. ಯಾರು ಕೂಡ ಒಬ್ಬ ಋಷಿಯ ಮೂಲ ಹುಡುಕುವುದಿಲ್ಲ ಮತ್ತು ರಾಜರ ಮೇಲೆ ಆರೋಪಗಳನ್ನು ಮಾಡುವುದಿಲ್ಲ. ಮಹಾತ್ಮರು ನೈತಿಕ ನಿಯಮಗಳಾಚೆಗೆ ನಿಲ್ಲುವವರು. ಇಂತಹ ತತ್ವಗಳೆಲ್ಲ ಮಹಾತ್ಮರಾದ ಮನುಷ್ಯರ ಪದವಿಗೆ ತಲುಪುವ ಶಕ್ತಿಯನ್ನೇ ಹೊಂದಿಲ್ಲ. ಅಫ್ಸಲ್‌ ಖಾನನ್ನು ಕೊಲ್ಲುವ ಮೂಲಕ ಪಾಪವೆಸಗಿದರೇ? ಈ ಪ್ರಶ್ನೆಗೆ ಉತ್ತರವನ್ನು ಮಹಾಭಾರತದಿಂದಲೇ ಎತ್ತಿಕೊಳ್ಳೋಣ. ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶ ನಮ್ಮ ಗುರುಗಳನ್ನೂ ಬಂಧುಗಳನ್ನೂ ಕೊಲ್ಲಬಹುದೆಂದು. ಫಲ ಅಪೇಕ್ಷಿಸದೆ ಕರ್ಮದಲ್ಲಿ ಮುಳುಗುವವರಿಗೆ ಯಾವ ಪಾಪವೂ ಅಂಟಿಕೊಳ್ಳುವುದಿಲ್ಲ. ಶ್ರೀ ಶಿವಾಜಿ ಮಹಾರಾಜರು ತಮ್ಮ ಹೊಟ್ಟೆಯ ಖಾಲಿ ಜಾಗ ತುಂಬಿಕೊಳ್ಳಲೆಂದು ಏನನ್ನೂ ಮಾಡಿದವರಲ್ಲ. ಉದಾತ್ತವಾದ ಉದ್ದೇಶದೊಂದಿಗೆ, ಉಳಿದವರ ಒಳಿತಿಗಾಗಿ ಅವರು ಅಫ್ಸಲ್‌ ಖಾನನ್ನು ಕೊಂದರು. ಬಾವಿಯೊಳಗಿನ ಕಪ್ಪೆಯಂತೆ ನಿಮ್ಮ ನೋಟವನ್ನು ಪರಿಮಿತಗೊಳಿಸದಿರಿ. ಶಿಕ್ಷಾ ನಿಯಮಗಳಿಂದ ಹೊರಬಂದು ಶ್ರೀಮದ್‌ ಭಗವತ್‌ ಗೀತೆಯ ಉನ್ನತ ವಾತಾವರಣದಲ್ಲಿ ನಿಂತುಕೊಂಡು ಮಾತ್ರವೇ ನೀವು ಮಹಾತ್ಮರೆನಿಸಿಕೊಂಡ ವ್ಯಕ್ತಿಗಳ ಕೃತ್ಯಗಳನ್ನು ಕಾಣಿರಿ.ʼ

ಇತರ ಬ್ರಾಹ್ಮಣವಾದಿಗಳ ಹಾಗೆ ಶಿವಾಜಿ ಅಫ್ಸಲ್‌ ಖಾನನ್ನು ವಂಚನೆಯ ಮೂಲಕ ಕೊಂದಿಲ್ಲವೆಂದು ತಿಲಕ್‌ ಪ್ರತಿಚರಿತ್ರೆ ನಿರ್ಮಿಸುವುದಿಲ್ಲ. ಬದಲಿಗೆ ವಂಚನೆ ಎಂದು ಸಾಮಾನ್ಯ ಬುದ್ದಿಗೆ ಕಾಣುವ ಒಂದು ಕೆಲಸವನ್ನು ಹಾಗಲ್ಲವೆಂದೂ ಅದರ ಉದಾತ್ತತೆಯನ್ನೂ ತೋರಿಸುವ ಪ್ರಯತ್ನವನ್ನು ತಿಲಕ್‌ ಮಾಡುತ್ತಾರೆ. ಅದಕ್ಕೆ ಸಹಾಯಕ್ಕೆ ಬರುವುದು ಭಗವತ್‌ ಗೀತೆ. ವಾಸ್ತವದಲ್ಲಿ ಚಿತ್ಪಾವನ ಬ್ರಾಹ್ಮಣ ವಂಶದ ಸಂಪ್ರದಾಯವಾದಿಗಳ ಶಿವಾಜಿ ಪ್ರೇಮವನ್ನು ಸಮಾಕಾಲೀನಗೊಳಿಸಿ, ಈಗಿನ ಅವರ ಶತ್ರುಗಳಾದ ಬ್ರಿಟಿಷರನ್ನು ಅಫ್ಸಲ್‌ ಖಾನ್‌ನೊಂದಿಗೆ ಸಮೀಕರಿಸುವ ಕೆಲಸವನ್ನಷ್ಟೇ ತಿಲಕ್‌ ಮಾಡಿರಲಿಲ್ಲ. ʼಉದಾತ್ತವಾದ ಕರ್ಮಗಳನ್ನುʼ ಮಾಡಲು ಬ್ರಿಟಿಷ್‌ ಕಾನೂನುಗಳು ಹೇಳುವ ಸನ್ಮಾರ್ಗವನ್ನು ಪಾಲಿಸಬೇಕಾಗಿಲ್ಲ ಎಂದು ಪರೋಕ್ಷವಾಗಿ ಹೇಳಿಮುಗಿಸಿದ್ದಾರೆ ತಿಲಕ್.‌

ಒಂದು ಚಾರಿತ್ರಿಕ ಘಟನೆಯನ್ನು ಸಮಕಾಲೀನಗೊಳಿಸುವ ಕೆಲಸ ಮಾತ್ರವಲ್ಲ ಇಲ್ಲಿ ನಡೆಯುವುದು. ಯುದ್ಧದಷ್ಟೇ ಶಕ್ತಿಯುತವಾದ ಆಕ್ರಮಣೋತ್ಸಾಹದಿಂದ ಮಾತ್ರವೇ ಬ್ರಿಟಿಷರನ್ನು ಇಲ್ಲಿಂದ ಓಡಿಸಬಹುದು ಎಂದೂ ಹೇಳುತ್ತಿದ್ದಾರೆ. ಆಧುನಿಕ ವಿದ್ಯೆ ಪಡೆದಿದ್ದ ತಿಲಕ್‌ ಮತ್ತು ಸಂಗಡಿಗರು, ಸ್ವಾತಂತ್ರ್ಯ ನಿಷೇಧದ ಆಧುನಿಕ ಪಾಠಗಳನ್ನು ಎತ್ತಿ ತೋರಿಸಲೇ ಇಲ್ಲ. ಅವರು ತಮ್ಮ ಶಕ್ತಿ ಸಂಚಯ ಮಾಡುತ್ತಿದ್ದದ್ದು ಕೂಡ ಹೊಸ ಲೋಕಾನುಭವದಿಂದ ಆಗಿರಲಿಲ್ಲ. ಬದಲಿಗೆ ರಾಜಾಡಳಿತ ಕಾಲದ ವೀರಕಾರ್ಯಗಳಿಂದಲೇ ಆಗಿತ್ತು. ಆ ವೀರ ಕಾರ್ಯಗಳನ್ನು ಹೊಸತೋ ಹಳತೋ ಆದ ನೈತಿಕ ಪ್ರಜ್ಞೆಗಳು ನಿರ್ಣಯಿಸುತ್ತಿರಲಿಲ್ಲ. ಅವರೇ ಅದನ್ನು ತೀರ್ಮಾನಿಸುತ್ತಿದ್ದರು. ಆಕ್ರಮಣಕಾರಿ ದಾಳಿಕೋರ ತತ್ವಶಾಸ್ತ್ರವೇ ಅವರನ್ನು ಮುನ್ನಡೆಸಿತ್ತು. ಹೀಗೆ ಭೂತಕಾಲದ ಯಾವುದೋ ಸ್ಮರಣೆಗೆ ಒಂದು ಜನಸಮುದಾಯವನ್ನು ನಡೆಸುವುದರ ಮೂಲಕ ವೀರತ್ವದ ಬ್ರಾಬಲ್ಯ ಅವರಿಗೆ ತಾನಾಗಿಯೇ ಲಭಿಸುತ್ತದೆ. ಈ ಹಂತದಲ್ಲಿ ಆ ವೀರತ್ವದ ಉತ್ತರದಾಯಿತ್ವನ್ನು ಎತ್ತಿಕೊಳ್ಳಲು ಚಿತ್ಪಾವನ ಬ್ರಾಹ್ಮಣರು ಮುಂದೆ ಬಂದರು ಎಂಬುದು ಕೂಡ ವಾಸ್ತವ. ಪರದೆಯ ಹಿಂದೆ ನಿಂತು ರಂಗವನ್ನು ನಿಯಂತ್ರಿಸಲು ಅವರು ತಯಾರಿರಲಿಲ್ಲ. ರಂಗದಲ್ಲಿ ನಿಂತು ಆಡಲೆಂದೇ ಅವರು ಸಜ್ಜಾಗಿದ್ದರು.

ಟಿಪ್ಪಣಿಗಳು:

೧. ಶ್ರೀನಾರಾಯಣ ಗುರು, ಅನುಕಂಪಾದಶಕಂ, ೧೯೪೧, ಶ್ಲೋಕ ೭

೨. ವಿಕ್ರಂ ಸಂಪತ್‌, ಸಾವರ್ಕರ್:‌ ಎಕೋಸ್‌ ಫ್ರಂ ಎ ಫಾರ್ಗೋಟನ್‌ ಪಾಸ್ಟ್‌, ೧೮೮೩ – ೧೯೨೪, ಪೆಂಗ್ವಿನ್‌ ಬುಕ್ಸ್‌, ೨೦೧೯, ಪುಟ ೪೧

೩. ಅದೇ ಪುಸ್ತಕ, ಪುಟ ೪೧

೪. ಅದೇ ಪುಸ್ತಕ, ಪುಟ ೪೨

೫. ಅಶೋಕ್‌ ಕುಮಾರ್‌ ಪಾಂಡೆ, ವೈ ದೇ ಕಿಲ್ಡ್‌ ಗಾಂಧಿ: ಅನ್‌ಮಾಸ್ಕಿಂಗ್‌ ದಿ ಐಡಿಯಾಲಜಿ ಆಂಡ್‌ ದಿ ಕಾನ್ಸ್ಪಿರಸಿ, ೨೦೨೨, ಪುಟ ೪೦

೬. ಗಣಾಚಾರಿ, ಗೋಪಾಲ್‌ ಗಣೇಶ್‌ ಅಗರ್ಕರ್‌, ಪುಟ ೧೯

೭. ಅಶೋಕ್‌ ಕುಮಾರ್‌ ಪಾಂಡೆ, ವೈ ದೇ ಕಿಲ್ಡ್‌ ಗಾಂಧಿ: ಅನ್‌ಮಾಸ್ಕಿಂಗ್‌ ದಿ ಐಡಿಯಾಲಜಿ ಆಂಡ್‌ ದಿ ಕಾನ್ಸ್ಪಿರಸಿ, ೨೦೨೨, ಪುಟ ೪೦

೮. ವಿಕ್ರಂ ಸಂಪತ್‌, ಸಾವರ್ಕರ್:‌ ಎಕೋಸ್‌ ಫ್ರಂ ಎ ಫಾರ್ಗೋಟನ್‌ ಪಾಸ್ಟ್‌, ೧೮೮೩ – ೧೯೨೪, ಪೆಂಗ್ವಿನ್‌ ಬುಕ್ಸ್‌, ೨೦೧೯, ಪುಟ ೪೨

೯. ಅದೇ ಪುಸ್ತಕ, ಪುಟ ೪೨

೧೦. ಶಬ್ನಂ ತೇಜಾನಿ, ಮ್ಯೂಸಿಕ್‌, ಮೋಸ್ಕ್‌ ಆಂಡ್‌ ಕಸ್ಟಮ್: ಲೋಕಲ್‌ ಕಾನ್ಫ್ಲಿಕ್ಟ್‌ ಆಂಡ್‌ ಕಮ್ಯನಲಿಸಂ ಇನ್‌ ಎ ಮಹಾರಾಷ್ಟ್ರೀಯನ್‌ ವೀವಿಂಗ್‌ ಟೌನ್, ೧೮೯೩-೯೪, ಜರ್ನಲ್‌ ಆಫ್‌ ಸೌತ್‌ ಏಷಿಯನ್‌ ಸ್ಟಡೀಸ್, ೩೦:೨, ಪುಟ ೨೨೩-೨೪೦

೧೧. ವಿಕ್ರಂ ಸಂಪತ್‌, ಸಾವರ್ಕರ್:‌ ಎಕೋಸ್‌ ಫ್ರಂ ಎ ಫಾರ್ಗೋಟನ್‌ ಪಾಸ್ಟ್‌, ೧೮೮೩ – ೧೯೨೪, ಪೆಂಗ್ವಿನ್‌ ಬುಕ್ಸ್‌, ೨೦೧೯, ಪುಟ ೫೪

೧೨. ಕಾಪಿ ಆಫ್‌ ರೂಲಿಂಗ್‌ ಇನ್‌ ಲೆಟರ್‌ ಫ್ರಂ ಗವರ್ನ್‌ಮೆಂಟ್ ಪ್ಲೀಡರ್‌, ಹೈಕೋರ್ಟ್‌ (೨೪ ನವೆಂವರ್ ೧೮೯೩), ಜಿ.ಸಿ. ವಿಟ್‌ವರ್ಥನ ಡಿಪಾರ್ಟ್‌ಮೆಂಟಲ್‌ ಲೆಟರ್‌ (೧೮೯೪ ಮಾರ್ಚ್‌ ೧೫), ಬಿ.ಎ.ಜೆ.ಡಿ. ವೋಲ್ಯೂಂ ೨೮೪, ನಂಬರ್‌ ೫೪೫, ಪಾರ್ಟ್‌ ೩ (೧೮೯೪)

೧೩. ವಿಕ್ರಂ ಸಂಪತ್‌, ಸಾವರ್ಕರ್:‌ ಎಕೋಸ್‌ ಫ್ರಂ ಎ ಫಾರ್ಗೋಟನ್‌ ಪಾಸ್ಟ್‌, ೧೮೮೩ – ೧೯೨೪, ಪೆಂಗ್ವಿನ್‌ ಬುಕ್ಸ್‌, ೨೦೧೯, ಪುಟ ೫೭

೧೪. ವ್ಯಾಲೆಂಟೈನ್‌ ಚಿರೋಲ್‌, ಇಂಡಿಯನ್‌ ಅನ್‌ರೆಸ್ಟ್‌, ೧೯೧೦, ಮ್ಯಾಕ್‌ಮಿಲ್ಲರ್‌ ಆಂಡ್‌ ಕಂಪೆನಿ ಲಿಮಿಟೆಡ್‌, ಲಂಡನ್‌

೧೫. ವಿಕ್ರಂ ಸಂಪತ್‌, ಸಾವರ್ಕರ್:‌ ಎಕೋಸ್‌ ಫ್ರಂ ಎ ಫಾರ್ಗೋಟನ್‌ ಪಾಸ್ಟ್‌, ೧೮೮೩ – ೧೯೨೪, ಪೆಂಗ್ವಿನ್‌ ಬುಕ್ಸ್‌, ೨೦೧೯, ಪುಟ ೫೭

೧೬. ಪ್ರಾಚಿ ದೇಶ್‌ಪಾಂಡೆ, ನರೇಟಿವ್ಸ್‌ ಆಫ್‌ ಪ್ರೈಡ್‌:‌ ಹಿಸ್ಟರಿ ಆಂಡ್ ರೀಜನಲ್‌ ಐಡೆಂಟಿಟಿ ಇನ್‌ ಮಹಾರಾಷ್ಟ್ರ, ಇಂಡಿಯಾ ೧೮೭೦-೧೯೬೦. ಟಫ್ಟಸ್‌ ಯುನಿವರ್ಸಿಟಿ, ೨೦೦೨

೧೭. ವ್ಯಾಲೆಂಟೈನ್‌ ಚಿರೋಲ್‌, ಇಂಡಿಯನ್‌ ಅನ್‌ರೆಸ್ಟ್‌, ೧೯೧೦, ಮ್ಯಾಕ್‌ಮಿಲ್ಲರ್‌ ಆಂಡ್‌ ಕಂಪೆನಿ ಲಿಮಿಟೆಡ್‌, ಲಂಡನ್‌, ಪುಟ ೪೬

೧೮. ಅದೇ ಪುಸ್ತಕ, ಪುಟ ೪೬

೧೯. ಅದೇ ಪುಸ್ತಕ, ಪುಟ ೪೬-೪೭

ಹಿಂದುತ್ವ ರಾಜಕಾರಣದ ಕಥೆ : ಚಿತ್ಪಾವನ ಬ್ರಾಹ್ಮನಿಸಮ್ಮಿನ ಆರಂಭಿಕ ರಾಜಕೀಯ ಚಟುವಟಿಕೆಗಳು
ಮೇಲ್ಜಾತಿ ವೈಚಾರಿಕ ನವೋತ್ಥಾನ ಚಳುವಳಿ ಮತ್ತು ಕೆಳಜಾತಿ ಚಳುವಳಿಗಳೆರಡನ್ನೂ ಈ ಹೊಸ ಅವೈಚಾರಿಕ ಸಂಪ್ರದಾಯವಾದಿ ಬ್ರಾಹ್ಮಣ್ಯ ಎದುರಿಸಿದ್ದು ಸಾಂಸ್ಕೃತಿಕ ಮುಖಾಮುಖಿಗಳೊಂದಿಗೆ.  ಆದರೆ, ಬ್ರಿಟಿಷ್‌ ವಿರೋಧವನ್ನು ಪ್ರದರ್ಶಿಸಿದ್ದು ಬಹುತೇಕ ರಾಜಕೀಯ ಮುಖಾಮುಖಿಗಳ ಮೂಲಕವಾಗಿತ್ತು. ಬ್ರಿಟಿಷ್‌ ಇಂಡಿಯಾದಲ್ಲಿ ಬಾಂಬೆ ಗವರ್ನರ್‌ ಆಗಿದ್ದ ಸರ್‌ ರಿಚರ್ಡ್‌ ಟೆಂಪಲ್‌ ೧೮೭೯ರಲ್ಲಿ ಆಗಿನ ವೈಸ್‌ರಾಯ್‌ ಲೈಟನ್‌ಗೆ ಬರೆದ ಪತ್ರ ಓದಿದರೆ ಚಿತ್ಪಾವನ ಬ್ರಾಹ್ಮಣರು ಮತ್ತು ಬ್ರಿಟಿಷರ ನಡುವೆ ಇದ್ದ ಸಂಘರ್ಷದ ಬಗ್ಗೆ ಸ್ಪಷ್ಟವಾದ ಚಿತ್ರಣ ದೊರೆಯುತ್ತದೆ.

ʼಚಿತ್ಪಾವನ ಗೋತ್ರ ರಾಷ್ಟ್ರೀಯ ಭಾವನಾತ್ಮಕತೆಯಿಂದ ಪ್ರಚೋದಿತರಾಗಿದ್ದಾರೆ. ಇಂಡಿಯಾ ತನ್ನನ್ನು ತಾನು ಯಾವ ಉತ್ಕರ್ಷೆಯಲ್ಲಿ ಹೊದ್ದುಕೊಂಡಿದೆಯೋ ಅದೇ ಉತ್ಕರ್ಷೆಯಲ್ಲಿ ಚಿತ್ಪಾವನರು ತಮ್ಮನ್ನು ತಾವು ಹೊದ್ದುಕೊಂಡಿದ್ದಾರೆ. ನಿಜವಾದ ಚಿತ್ಪಾವನ ಸಾಹಸಿಕತೆಯನ್ನೂ ಒಬ್ಬ ಸೈನಿಕನ ಯುದ್ಧಸನ್ನಾಹದ ಎಲ್ಲ ಶಕ್ತಿಯನ್ನೂ ಒಬ್ಬ ರಾಜತಾಂತ್ರಿಕನ ಬುದ್ಧಿಯನ್ನೂ ತನ್ನೊಳಗೆ ಸಮನ್ವಯಗೊಳಿಸಿರುತ್ತಾನೆ. ವಿದ್ಯಾಭ್ಯಾಸ ಮತ್ತು ಸರಕಾರಿ ಉದ್ಯೋಗ ಮಾತ್ರವೇ ಚಿತ್ಪಾವನರನ್ನು ಸಂತೃಪ್ತಿಗೊಳಿಸಬಹುದೇ ಎಂದು ನಮಗೀಗ ತಿಳಿದಿಲ್ಲ. ಖಂಡಿತವಾಗಿ ವಿದ್ಯಾಭ್ಯಾಸ ಅವರಿಗೆ ನಮ್ಮ ಮೇಲೆ ಸಣ್ಣ ಮಟ್ಟದ ಗೌರವ ಮೂಡುವಂತೆ ಮಾಡಿದೆ. ಹಲವು ದೊಡ್ಡ ಸಂಗತಿಗಳನ್ನು ಅವರು ನಮ್ಮ ಭಾಷೆಯ ಮೂಲಕವೇ ಹೇಳುತ್ತಿದ್ದಾರೆ. ಅವರು ನಮ್ಮ ಯೋಚನೆಗಳನ್ನು ಮೈಗೂಡಿಸಿಕೊಂಡು ತಮ್ಮ ಯೋಚನೆಗಳನ್ನು ಕೈ ಬಿಡುತ್ತಲೂ ಇದ್ದಾರೆ. ಆದರೂ, ಇನ್ನೊಂದು ದಿಕ್ಕಿನಿಂದ ನೋಡುವಾಗ ವಿದ್ಯಾಭ್ಯಾಸ ಅವರನ್ನು ಅಸ್ವಸ್ಥಗೊಳಿಸಿದೆ. ಕಳೆದ ಶತಮಾನದಲ್ಲಿ ಅವರಿಗಿದ್ದ ಸ್ಥಾನಮಾನಗಳನ್ನು ಮತ್ತೆ ಪಡೆದುಕೊಳ್ಳದ ತನಕ ಅವರು ಸ್ವಸ್ಥರಾಗುವುದಿಲ್ಲ. ಈ ಮೇಲೆ ವಿವರಿಸಿದ, ಪಶ್ಚಿಮ ಇಂಡಿಯಾದ ಬ್ರಾಹ್ಮಣರಲ್ಲಿ ಒಂದು ವಿಭಾಗವಾದ ಕೊಂಕಣಸ್ತ ಬ್ರಾಹ್ಮಣರ ಹಾಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಾಷ್ಟ್ರೀಯ ಮತ್ತು ರಾಜಕೀಯ ಮಹಾತ್ವಾಂಕ್ಷೆ ಹೊಂದಿರುವ, ಅದನ್ನು ಕಾಪಿಟ್ಟುಕೊಂಡಿರುವ, ನಮ್ಮಿಂದ ಸಂತೃಪ್ತಿಪಡಿಸಲಾಗದಷ್ಟು ಅದನ್ನು ಬೆಳೆಸಿಕೊಂಡಿರುವ ಇನ್ನೊಂದು ಜನ ಸಮುದಾಯವನ್ನು ಇಂಡಿಯಾದಲ್ಲಿ ನಾನು ಕಂಡಿಲ್ಲ.ʼ

೧೮೪೭ ರಿಂದ ೧೮೮೦ ರ ತನಕ ಬ್ರಿಟಿಷ್‌ ಇಂಡಿಯಾದಲ್ಲಿ ಹಲವು ಸ್ಥಾನಗಳನ್ನು ಹೊಂದಿದ್ದ ಅಧಿಕಾರಿಯಾಗಿದ್ದ ಸರ್‌ ರಿಚರ್ಡ್‌ ಟೆಂಪಲ್.‌ ಈ ಪತ್ರ ಬರೆಯುವಾಗ ಆತ ಬಾಂಬೆ ಪ್ರಾಂತ್ಯದ ಗವರ್ನರ್‌. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮತ್ತು ಅದರ ನಂತರ ನಿರಂತರವಾಗಿ ಬ್ರಿಟಿಷ್‌ ವಿರೋಧಿ ಹೋರಾಟವನ್ನು ಎದುರಿಸಿದ್ದ ಅಧಿಕಾರಿ ಆತ. ಬ್ರಿಟಿಷ್‌ ಸಾಮ್ರಾಜ್ಯಕ್ಕೆ ನಿಷ್ಠನಾಗಿದ್ದ ಒಬ್ಬ ಅಧಿಕಾರಿಯಾಗಿ ತನ್ನ ಪ್ರಾಂತ್ಯದಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಲನವನಲಗಳನ್ನು ಆತ ನಿರೀಕ್ಷಿಸುತ್ತಿದ್ದ. ಚಿತ್ಪಾವನ ಬ್ರಾಹ್ಮಣ ಗೋತ್ರದ ವಿಭಾಗವೊಂದು ಬ್ರಿಟಿಷರ ವಿರುದ್ಧ ರಾಜಕೀಯವಾಗಿ ಹಗೆತನದ ಮನೋಭಾವ ಹೊಂದಿರುವುದನ್ನು ಆತ ನಿರೀಕ್ಷಿಸಿದ್ದನೆಂದು ಮಾತ್ರವಲ್ಲ, ಆಡಳಿತಾಧಿಕಾರಿ ಎಂಬ ನೆಲೆಯಲ್ಲಿ ಅದು ಆತನ ಅನುಭವಕ್ಕೂ ಬಂದಿತ್ತು. ಪೇಶ್ವೆಗಳ ರಾಜಧಾನಿಯಾಗಿದ್ದ ಪುಣೆ ಕೇಂದ್ರೀಕರಿಸಿಕೊಂಡು ಅವರು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಪತ್ರದಲ್ಲಿ ಆತ ಎತ್ತಿ ತೋರಿಸುವ ಒಂದು ಸಂಗತಿ, ʼಸಾಮಾನ್ಯವಾಗಿ ಹೇಳಲ್ಪಡುವುದು ಇಂಡಿಯಾದ ಆಡಳಿತಾಧಿಕಾರಿಗಳು ಎಂಬ ನೆಲೆಯಲ್ಲಿ ನಾವು ಮಹಮ್ಮದೀಯರನ್ನು ಸೋಲಿಸಿ ಓಡಿಸಿದೆವು ಎಂದು. ಇದು ಪೂರ್ಣಾರ್ಥದಲ್ಲಿ ನಿಜವಲ್ಲ. ನಾವು ಮುಖ್ಯವಾಗಿ ಮರಾಠರನ್ನು ಸೋಲಿಸಿದೆವು ಎಂದು ಹೇಳುವುದೇ ಸ್ವಲ್ಪವಾದರು ಸತ್ಯಕ್ಕೆ ಹತ್ತಿರವಾಗಿ ನಿಲ್ಲುವಂಥದ್ದು.ʼ

ಸರ್‌ ರಿಚರ್ಡ್‌ ಟೆಂಪಲ್‌ ಈ ಪತ್ರ ಬರೆಯುವ ಚಾರಿತ್ರಿಕ ಸಂದರ್ಭ ಬಹಳ ಮುಖ್ಯವಾದದ್ದು. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧರ್ಮದ ಸಂಕೀರ್ಣವಾದ ಹಸ್ತಕ್ಷೇಪವೂ ಇತ್ತು. ಕಾನ್ಪುರದಲ್ಲಿ ಇದಕ್ಕೆ ನಾಯಕತ್ವ ನೀಡಿದ್ದ ನಾನಾಸಾಹೇಬ್‌ ತರದ ಚಿತ್ಪಾವನ ಬ್ರಾಹ್ಮಣರು, ಆ ವಂಶದಲ್ಲಿ ಹುದುಗಿ ಹೋಗಿದ್ದ ಪೇಶ್ವಾ ಸಾಮ್ರಾಜ್ಯದ ದೀಪ್ತಸ್ಮರಣೆಯನ್ನು ಬಡಿದೆಬ್ಬಿಸಿದ್ದರು. ಇದು ಸಂಪ್ರದಾಯವಾದಿ ಬ್ರಾಹ್ಮಣರಿಗೆ ಇನ್ನಿಲ್ಲದ ಶಕ್ತಿ ನೀಡಿತು. ಆದರೆ, ಆ ಕ್ರಾಂತಿಯನ್ನು ಬ್ರಿಟಿಷರು ಹಿಮ್ಮೆಟ್ಟಿಸಿದ ಕಾರಣ ತಾತ್ಕಾಲಿಕವಾಗಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹುದುಗಿಸಿಟ್ಟುಕೊಳ್ಳಲು ಸಂಪ್ರದಾಯವಾದಿ ಚಿತ್ಪಾವನರು ನಿರ್ಬಂಧಿತರಾದರು. ಆದರೆ, ತಾವು ಒಂದು ಕಾಲದಲ್ಲಿ ಅನುಭವಿಸಿದ್ದ ಸಾಮಾಜಿಕ ಮೇಲುಸ್ತರದ ನೆನಪು ಅವರೊಳಗಿನ ಒಂದು ವಿಭಾಗದೊಳಗೆ ಹೊಗೆಯಾಡುತ್ತಲೇ ಇತ್ತು. ಬ್ರಿಟಿಷರು ಗೆದ್ದುಕೊಂಡಿರುವ ತಮ್ಮ ಸಾಮ್ರಾಜ್ಯವನ್ನು ಸಶಸ್ತ್ರ ಹೋರಾಟದ ಮೂಲಕವೇ ಮರಳಿ ಪಡೆದು ಪೇಶ್ವಾ ಸಾಮ್ರಾಜ್ಯವನ್ನು ಪುನರುಜ್ಜೀವನಗೊಳಿಸಲು ಬೇಕಾದ ಪ್ರಯತ್ನಗಳು ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿ ನಡೆಯುತ್ತಲೇ ಇದ್ದವು.

ವಾಸುದೇವ್‌ ಬಲವಂತ್‌ ಫಾಡ್ಕೇ (೧೮೪೫-೧೮೮೩) ೧೮೫೭ರ ಮೊದಲ ಸ್ವಾತಂತ್ರ್ಯ ಸಮರದ ನಂತರ ಬ್ರಿಟಿಷರ ವಿರುದ್ಧ ರಾಜಕೀಯ ಹೋರಾಟಕ್ಕೆ ಧುಮುಕಿದ ಚಿತ್ಪಾವನ ಬ್ರಾಹ್ಮಣರಲ್ಲಿ ಪ್ರಮುಖ ವ್ಯಕ್ತಿ. ಬ್ರಿಟಿಷರನ್ನು ಭೂಗತ ಸಶಸ್ತ್ರ ಹೋರಾಟದ ಮೂಲಕ ಸೋಲಿಸಬಹುದು ಮತ್ತು ಆ ಮೂಲಕ ಚಿತ್ಪಾವನರ ನೇತೃತ್ವದಲ್ಲಿ ಪೇಶ್ವಾಸಾಮ್ರಾಜ್ಯವನ್ನು ಪುನರ್‌ ಸ್ಥಾಪಿಸಬಹುದೆಂಬ ಅಭಿಲಾಷೆಯೇ ಫಾಡ್ಕೆಯನ್ನು ಮುನ್ನಡೆಸಿದ ಪ್ರೇರಕ ಶಕ್ತಿ ಎಂಬುದಕ್ಕೆ ಧಾರಾಳ ಸಾಕ್ಷಿಗಳಿವೆ. ಫಾಡ್ಕೆ ತನ್ನನ್ನು ತಾನು ‘ಹೊಸ ಪೇಶ್ವಾ ಪ್ರಧಾನ್’‌ ಎಂದು ಗುರುತಿಸಿಕೊಂಡಿದ್ದ. ಫಾಡ್ಕೆಯ ತೀವ್ರವಾದಿ ಸಂಘಟನೆ ನಿಜದಲ್ಲಿ ಪೂರ್ಣ ಸ್ವರೂಪದ ತೀವ್ರವಾದಿ ಸಂಘಟನೆಯಾಗಿರಲಿಲ್ಲ. ಈ ವಿಷಯದಲ್ಲಿ ಶಿವಾಜಿ ಮತ್ತು ಪೇಶ್ವೆಗಳು ಅವಲಂಬಿಸಿದ್ದ ದಾರಿಯ ಹೊಸರೀತಿಯನ್ನು ಫಾಡ್ಕೆಯೂ ಅವಲಂಬಿಸಿದ್ದ. ಕೆಳಜಾತಿಯ ಜನರನ್ನು ಸಂಘಟಿಸಿ ತಮಗೆ ನಿಷ್ಠೆ ಹೊಂದಿದ ಒಂದು ಸಂಘಟನೆ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಒಂದು ಸೈನ್ಯವನ್ನು ಕಟ್ಟುವುದು. ಮರಾಠ ಪ್ರಾಂತ್ಯದ ಕೆಳಜಾತಿ ವಿಭಾಗಗಳಾದ ಕೋಳಿಯರು, ರಾಮೋಶಿಯರು ಮತ್ತಿತರರನ್ನು ತನ್ನ ಆತ್ಮಾಹುತಿ ದಳವಾಗಿಸಲು ‘ಪೇಶ್ವಾ ಪ್ರಧಾನಿ’ಗೆ ಸಾಧ್ಯವಾಗಿತ್ತು. ಇವರುಗಳೇ ಹಲವಾರು ದರೋಡೆಗಳನ್ನು ನಡೆಸಿ ಫಾಡ್ಕೆಯ ಸಂಘಟನೆಯನ್ನು ಆರ್ಥಿಕವಾಗಿ ಸಬಲರಾಗಿಸಿದವರು.

ಫಾಡ್ಕೆ ಆಗಿನ ಗ್ರೇಟ್‌ ಇಂಡಿಯನ್‌ ಪೆನಿನ್ಸುಲಾ ರೈಲ್ವೇಯಲ್ಲಿ ಆಡಿಟ್‌ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದ. ಚಿತ್ಪಾವನ ಬ್ರಾಹ್ಮಣರು ಪೇಶ್ವಾ ಆಡಳಿತದ ಅಡಿಯಲ್ಲಿ ಗಳಿಸಿದ ಸಾಮಾಜಿಕ ಚಲನಾತ್ಮಕತೆಯ ಫಲವಾಗಿ, ಬ್ರಿಟಿಷರ ಎದುರು ಸೋತು ಶರಣಾಗಬೇಕಾಗಿ ಬಂದಿದ್ದರು ಕೂಡ, ಸಾಮಾಜಿಕವಾಗಿ ಅಸ್ತಿತ್ವ ಕಾಯ್ದುಕೊಂಡದನ್ನು ನಾವು ಕಂಡೆವು. ಫಾಡ್ಕೆ ಅಂತವರಲ್ಲಿ ಒಬ್ಬನಾಗಿದ್ದ. ಇಂಗ್ಲಿಷ್‌ ವಿದ್ಯಾಭ್ಯಾಸ ಪಡೆದ ನಂತರ ಆತ ಉದ್ಯೋಗಕ್ಕೆ ಸೇರಿದ್ದ. ೧೫ ವರ್ಷಗಳ ತನ್ನ ಔದ್ಯೋಗಿಕ ಬದುಕಿನಲ್ಲಿ ಮಿಲಿಟರಿ ಅಕೌಂಟ್ಸ್‌ ಕಂಟ್ರೋಲರ್‌ ಆಗಿಯೂ ಭಡ್ತಿ ಹೊಂದಿದ್ದ. ಪುಣೆಯಲ್ಲಿ ಆತ ಕೆಲಸ ಮಾಡುತ್ತಿದ್ದ. ಸಹಜವಾಗಿಯೇ ಅಂದಿನ ಪ್ರಗತಿಪರ ಚಿತ್ಪಾವನ ಯುವಕರ ಹಾಗೆ ಆತನೂ ರಾಣಡೆಯ ಆಕರ್ಷಣೆಗೆ ಬಿದ್ದು ಸಾರ್ವಜನಿಕ್‌ ಸಭಾದ ಸ್ವದೇಶಿ ಘೋಷಣೆಗಳನ್ನು ಕೂಗುತ್ತಲೂ ಇದ್ದ. ಉತ್ತಮ ವಾಗ್ಮಿಯಾಗಿದ್ದ ಆತ ಜನರನ್ನು ಆಕರ್ಷಿಸುತ್ತಿದ್ದ.

೧೮೭೬-೭೭ ಕಾಲದ ಡೆಕ್ಕನ್‌ ಬರಗಾಲ ಬ್ರಿಟಿಷ್‌ ಅಧಿಕಾರಿಗಳನ್ನು ಇನ್ನಿಲ್ಲದ ಒತ್ತಡಕ್ಕೆ ಸಿಲುಕಿಸಿತ್ತು. ಆ ನಡುವೆ ಮರಣಶಯ್ಯೆಯಲ್ಲಿದ್ದ ತನ್ನ ತಾಯಿಯನ್ನು ಕಾಣಲು ರಜೆ ಕೇಳಿ ಫಾಡ್ಕೆ ಹಾಕಿದ ಅರ್ಜಿಯನ್ನು ಬ್ರಿಟಿಷರು ಪರಿಗಣಿಸಲಿಲ್ಲ. ಅದನ್ನು ಲೆಕ್ಕಿಸದೆ ತನ್ನ ಗ್ರಾಮಕ್ಕೆ ಹೊರಟನಾದರೂ ತಾಯಿಯನ್ನು ಜೀವಂತ ಕಾಣಲಾಗಲಿಲ್ಲ. ಇದನ್ನೇ ನಿಮಿತ್ತವಾಗಿರಿಸಿಕೊಂಡು, ಆ ಕಾಲದಲ್ಲಿ ತನ್ನೊಳಗೆ ಕಟ್ಟಿಕೊಂಡಿದ್ದ ಬ್ರಿಟಿಷ್‌ ವಿರೋಧಕ್ಕೆ ಸಂಘಟನೆಯ ರೂಪ ನೀಡಿ ಕಾರ್ಯಾಚರಿಸಲು ಫಾಡ್ಕೆ ನಿರ್ಧರಿಸಿದ. ʼಮ್ಲೇಚ್ಛʼರಾದ ಬ್ರಿಟಿಷರನ್ನು ಓಡಿಸಿ ಬ್ರಾಹ್ಮಣರ ನೇತೃತ್ವದ ಸ್ವದೇಶಿ ರಾಷ್ಟ್ರ ಸ್ಥಾಪನೆಗೆ ಒಂದು ಭೂಗತ ಸಂಘವನ್ನು ರೂಪೀಕರಿಸಿದ.

ನಾಲ್ಕು ವಿಧದ ಸಂಘಗಳು ಸೇರಿದ ಒಂದು ಸಂಘಟನೆಯಾಗಿತ್ತು ಫಾಡ್ಕೆಯದ್ದು. ಮೊದಲನೆಯದು ವಿದ್ಯಾರ್ಥಿಗಳನ್ನು ಸಂಘಟಿಸುವುದರಲ್ಲಿ ಗಮನ ಕೇಂದ್ರೀಕರಿಸಿತ್ತು. ಎರಡನೆಯ ಸಂಘ ಪ್ರದರ್ಶನಗಳನ್ನು ಸಂಘಟಿಸಿತು. ಪೇಶ್ವಾ ಬ್ರಾಹ್ಮಣ ಸಾಮ್ರಾಜ್ಯದ ಸ್ಮೃತಿಯನ್ನು ಬಡಿದೆಬ್ಬಿಸುವ ರೀತಿಯಲ್ಲಿ ಶಿವಾಜಿಯ ಗುರುವಾಗಿದ್ದ ರಾಮದಾಸರ ಕೀರ್ತನೆಗಳ ಮೂಲಕ ಇವರು ಪ್ರದರ್ಶನಗಳನ್ನು ನಡೆಸಿದರು. ಮೂರನೆಯದ್ದು ಗಾಯಕರ ಸಂಘ. ಇವರು ಮ್ಲೇಚ್ಛರಾದ ಬ್ರಿಟಿಷರ ಆಡಳಿತದಲ್ಲಿ ಭಾರತದ ಪ್ರಜೆಗಳು ಅನುಭವಿಸುತ್ತಿರುವ ದುರಿತಗಳನ್ನು ಹಾಸ್ಯಾತ್ಮಕವಾಗಿ ಹಾಡಿದರು. ನಾಲ್ಕನೇ ಸಂಘ ಜನರಿಂದ ದೂರ ನಿಂತು ಬ್ರಿಟಿಷ್‌ ಸರಕಾರವನ್ನು ಬುಡಮೇಲು ಮಾಡಲು ಬೇಕಾದ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿತ್ತು. ಪುಣೆಯ ನರಸಿಂಹ ದೇವಸ್ಥಾನದ ಹಿಂಭಾಗದ ಕುರುಚಲು ಕಾಡಿನಲ್ಲಿ ಖಡ್ಗ ಯುದ್ಧದ ತರಬೇತಿಯನ್ನು ಫಾಡ್ಕೆ ತನ್ನ ಸಂಘಟನೆಯ ಸದಸ್ಯರಿಗೆ ನೀಡುತ್ತಿದ್ದ.

ಇವತ್ತು ಹಿಂತಿರುಗಿ ನೋಡುವಾಗ ಹಿಂದುತ್ವಸಂಘಟನೆಯ ಪರಿವಾರ ಸಂರಚನೆ ಫಾಡ್ಕೆಯ ಸಂಘಟನೆಯಲ್ಲಿ ಸೂಕ್ಷ್ಮ ರೂಪದಲ್ಲಿ ನೆಲೆ ನಿಂತಿದ್ದನ್ನು ಕಾಣಬಹುದು. ದೇವಸ್ಥಾನ ಕೇಂದ್ರಿತ ಆಯುಧ ತರಬೇತಿ ಶುರು ಮಾಡಿದ ವ್ಯಕ್ತಿ ಫಾಡ್ಕೆ. ಬಾಲ ಗಂಗಾಧರ ತಿಲಕ್‌ ಕೂಡ ತನ್ನ ಯೌವನದಲ್ಲಿ ಫಾಡ್ಕೆಯ ಆಯುಧ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದಾಗಿ ಹೇಳಲಾಗುತ್ತದೆ. ಹಿಂದುತ್ವ ಸಿದ್ಧಾಂತದ ಪಿತಾಮಹ ವಿ.ಡಿ. ಸಾವರ್ಕರ್‌ ಮಿತ್ರ ಮೇಳ ಎಂಬ ಸಂಘಟನೆ ಕಟ್ಟಿಕೊಂಡು ಅದರ ಚಟುವಟಿಕೆಗಳನ್ನು ಶುರು ಮಾಡಿದಾಗ ದೈನಂದಿನ ದೈಹಿಕ ತರಬೇತಿ ಅದರ ಪ್ರಮುಖ ಭಾಗವಾಗಿತ್ತು. ನಂತರದ ಕಾಲದಲ್ಲಿ ಆರ್‌ಎಸ್‌ಎಸ್‌ನ ಸ್ಥಾಪಕರಲ್ಲಿ ಒಬ್ಬರಾಗಿದ್ದ ಬಿ.ಎಸ್.‌ ಮುನ್ಜೇ ದೈಹಿಕ ತರಬೇತಿಗಾಗಿ ಒಂದು ಕೇಂದ್ರವನ್ನೇ ಸ್ಥಾಪಿಸಿದ್ದ. ಆರ್‌ಎಸ್‌ಎಸ್‌ ಈಗಲೂ ಕಾರ್ಯಾಚರಿಸುತ್ತಿರುವುದು ದೇವಸ್ಥಾನದ ಮೈದಾನಗಳಲ್ಲಿ ದೈಹಿಕ ತರಬೇತಿ ನೀಡುವ ಶಾಖೆಗಳ ಮೂಲಕ. ಗಾಂಧಿಹತ್ಯೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ನಾಥುರಾಮ್‌ ಗೋಡ್ಸೆ ಮತ್ತು ನಾರಾಯಣ್‌ ಆಪ್ಟೆ ಸಾವರ್ಕರ್‌ ʼಫ್ಯೂರರ್‌ʼ ಆಗಿದ್ದ ಹಿಂದು ರಾಷ್ಟ್ರ ದಳ್‌ ಎಂಬ ಒಳಸಂಘಟನೆಯ ಮುಖ್ಯ ಕಾರ್ಯಕರ್ತರಾಗಿದ್ದರು. ಗಾಂಧಿಹತ್ಯೆಯಲ್ಲಿ ಆರೋಪಿಯಾಗಿದ್ದ ಮತ್ತೊಬ್ಬ ವ್ಯಕ್ತಿ ಡಾ. ದತ್ತಾತ್ರೇಯ ಪರ್ಚುರೆ ಹಿಂದು ರಾಷ್ಟ್ರ ಸೇನ ಎಂಬ ಸಂಘಟನೆಯ ನಾಯಕನಾಗಿದ್ದ. ಈ ಸಂಘಟನೆಗಳೆಲ್ಲ ತಮ್ಮ ದೈನಂದಿನ ಚಟುವಟಿಕೆಯಲ್ಲಿ ದೈಹಿಕ ತರಬೇತಿಯನ್ನೂ ನೀಡುತ್ತಿದ್ದ ಅರೆಸೇನಾ ಸ್ವಭಾವವನ್ನು ಹೊಂದಿದ್ದವು. ಫಾಡ್ಕೆ ಇತಿಹಾಸದಲ್ಲಿ ಹೇಗೆ ಆವರಿಸಿಕೊಂಡ ಎಂಬುದರ ಬಗ್ಗೆ ಇದರಿಂದ ನಮಗೆ ಅರ್ಥವಾಗುತ್ತದೆ.

ಅಷ್ಟೇ ಅಲ್ಲ, ಚಿತ್ಪಾವನ ಬ್ರಾಹ್ಮಣ ರಾಷ್ಟ್ರ ಕಲ್ಪನೆ ನಂತರದ ಕಾಲದಲ್ಲಿ ವಿಕಾಸ ಹೊಂದಿದ್ದು ಮರಾಠ ಸಾಮ್ರಾಜ್ಯವನ್ನು ಮುಂದಿಟ್ಟುಕೊಂಡಾಗಿತ್ತು. ಶಿವಾಜಿಯ ಸಾಮ್ರಾಜ್ಯವನ್ನು ಅವರು ಹಿಂದೂ ಸಾಮ್ರಾಜ್ಯವಾಗಿ ವ್ಯಾಖ್ಯಾನಿಸಿದರು. ಗಂಭೀರವಾದ ಎಲ್ಲ ಇತಿಹಾಸ ಸಂಶೋಧನೆಗಳು ಈ ವ್ಯಾಖ್ಯಾನವನ್ನು ವಿರೋಧಿಸಿವೆ. ಶಿವಾಜಿಯ ಮುಖ್ಯ ಸೇನಾಧಿಕಾರಿ ಸಹಿತ ಹಲವರು ಮುಸ್ಲಿಮರಾಗಿದ್ದರು ಎಂಬ ಸತ್ಯವನ್ನು ಮರೆಮಾಚಿಕೊಂಡು, ಶಿವಾಜಿ ಮತ್ತು ಮೊಘಲರ ನಡುವಿನ ಯುದ್ಧವನ್ನು ಹಿಂದೂ-ಮುಸ್ಲಿಂ ಹೋರಾಟವಾಗಿ ನಿರೂಪಿಸುವ ಪ್ರಕ್ರಿಯೆಯನ್ನು ಫಾಡ್ಕೆಯಿಂದ ಹಿಡಿದು ನಂತರದ ಚಿತ್ಪಾವನ ನೇತೃತ್ವದ ಹಿಂದೂ ಸಂಘಟನೆಗಳು ನಡೆಸಿದವು. ಹಾಗಾಗಿ ಒಂದು ಬಣ್ಣವನ್ನು, ಹಿಂದೂ ಬಣ್ಣವನ್ನು ಶಿವಾಜಿ ಮತ್ತು ಮರಾಠ ಸಾಮ್ರಾಜ್ಯದ ಮೇಲೆ ಹಚ್ಚಲು ಮುಖ್ಯ ಕಾರಣ, ಶಿವಾಜಿಯ ನಂತರದ ಮರಾಠ ಸಾಮ್ರಾಜ್ಯ, ಪೇಶ್ವಾಸಾಮ್ರಾಜ್ಯ ಚಿತ್ಪಾವನ ಬ್ರಾಹ್ಮಣರ ಸುವರ್ಣ ಕಾಲವಾಗಿತ್ತು ಎಂಬುದೇ ಆಗಿದೆ. ಫಾಡ್ಕೆ ಪ್ರಯತ್ನಿಸಿದ್ದು ಪೇಶ್ವಾಸಾಮ್ರಾಜ್ಯದ ಪುನರ್‌ ಸ್ಥಾಪನೆಗೆ ಆಗಿದ್ದರೆ ತಿಲಕ್‌ ಪ್ರಯತ್ನ ಪಟ್ಟಿದ್ದು ಹಿಂದೂ ವರ್ಣ ವ್ಯವಸ್ಥೆಯ ಬುನಾದಿಯ ಮೇಲೆ ಬ್ರಾಹ್ಮಣ ರಾಷ್ಟ್ರ ಕಟ್ಟಲಾಗಿತ್ತು. ಇದು ಸಾವರ್ಕರ್‌ ತನಕ ತಲುಪುವಾಗ ಚಿತ್ಪಾವನ ಹಿಂದೂ ರಾಷ್ಟ್ರ ಕಲ್ಪನೆಯಿಂದ ಹಿಂದೂ ರಾಷ್ಟ್ರ ಕಲ್ಪನೆಯಾಗಿ ಬದಲಾಗುತ್ತದೆ. ಮನುಸ್ಮೃತಿ ಕಾಲದ ಸಾಮಾಜಿಕ ಅಧಿಪತ್ಯವನ್ನು ಹೊಸ ರಾಷ್ಟ್ರದಲ್ಲಿ ಬ್ರಾಹ್ಮಣ ಹಿಂದೂ ರಾಜಕೀಯ ಅಧಿಪತ್ಯವಾಗಿ ವಿಕಾಸ ಪಡಿಸಲು ಸಾವರ್ಕರ್‌ ಪ್ರಯತ್ನಿಸಿದ. ಈ ವಿಕಾಸದ ಉದ್ದಕ್ಕೂ ರಾಷ್ಟ್ರಾಡಳಿತದ ಮಾದರಿ ಬಿಂಬ ಮಾತ್ರ ಶಿವಾಜಿಯ ಮರಾಠಾ ಸಾಮ್ರಾಜ್ಯವೇ ಆಗಿತ್ತು. ಆದ್ದರಿಂದಲೇ ಹಿಂದೂ ವ್ಯಾಖ್ಯಾನಗಳಿಂದ ಶಿವಾಜಿಯನ್ನು ಹೊರತರುವ ಯಾವ ಇತರ ವ್ಯಾಖ್ಯಾನಗಳನ್ನೂ ಹಿಂದುತ್ವ ರಾಜಕೀಯ ಸಹಿಸಲೇ ಇಲ್ಲ. ಅದರ ಅತ್ಯಂತ ಕೊನೆಯ ಉದಾಹರಣೆ ಗೋವಿಂದ್‌ ಪನ್ಸಾರೆ. ಚಾರಿತ್ರಿಕ ದೃಷ್ಟಿಕೋನದಿಂದ ಶಿವಾಜಿಯನ್ನು ವಿಶ್ಲೇಷಿಸಿ ಪುಸ್ತಕ ಬರೆದ ಬೆನ್ನಿಗೇ ಪನ್ಸಾರೆಯನ್ನು ಹಿಂದುತ್ವ ಸಂಘಟನೆಗಳು ತಮ್ಮ ಹಿಟ್‌ಲಿಸ್ಟಿಗೆ ಸೇರಿಸಿದರು. ಕೊನೆಗೆ ಪನ್ಸಾರೆಯ ಹತ್ಯೆಯೂ ನಡೆಯಿತು.

ಶಿವಾಜಿಯನ್ನು ಈ ಮಟ್ಟಿಗೆ ಒಂದು ಬ್ರಾಹ್ಮಣ ಕೇಂದ್ರಿತ ರಾಜಕೀಯದ ಬಿಂಬವಾಗಿ ಬ್ರಿಟಿಷ್‌ ಇಂಡಿಯಾದಲ್ಲಿ ಮೊದಲ ಬಾರಿಗೆ ಪ್ರಯೋಗಿಸಿರುವುದು ಫಾಡ್ಕೆ. ಶಿವಾಜಿಯ ತಂತ್ರದ ಮುಂದುವರಿಕೆಯೆಂಬಂತೆ ಫಾಡ್ಕೆ ಮತ್ತು ಸಹಚರರು ಬ್ರಿಟಿಷರ ವಿರುದ್ಧ ಭೂಗತ ಹೋರಾಟ ಆರಂಭಿಸುತ್ತಾರೆ. ೧೮೭೯ ಮೇಯಲ್ಲಿ ತನ್ನ ಕೆಳಜಾತಿ ಆತ್ಮಾಹುತಿ ದಾಳಿಕೋರರನ್ನು ಬಳಸಿಕೊಂಡು ಕೊಂಕಣ ಪ್ರದೇಶದ ಸಿರಿವಂತರನ್ನು ಕೊಳ್ಳೆ ಹೊಡೆದು ೧,೫೦,೦೦೦ಕ್ಕೂ ಹೆಚ್ಚು ಹಣ ಫಾಡ್ಕೆಯ ಸಂಘ ಒಟ್ಟುಗೂಡಿಸಿತ್ತು. ದೌಲತ್‌ ರಾವ್‌ ನಾಯಕ್‌ ಎಂಬಾತನ ನೇತೃತ್ವದಲ್ಲಿ ಈ ದರೋಡೆ ನಡೆದಿತ್ತು. ಆದರೆ ಈ ದುಡ್ಡು ಪುಣೆ ತಲುಪುವ ಮೊದಲೇ ಮಾವಲದ ತುಳ್ಸಿ ಕಣಿವೆಯಲ್ಲಿ ಮೇಜರ್‌ ಡೇನಿಯಲನ ನೇತೃತ್ವದ ಬ್ರಿಟಿಷ್‌ ಸೈನ್ಯ ಭೀಕರವಾದ ಹೋರಾಟದಲ್ಲಿ ಅವರನ್ನು ಸೋಲಿಸಿತು. ದೌಲತ್‌ ರಾವ್‌ ನಾಯಕ್‌ ಈ ಯುದ್ಧದಲ್ಲಿ ಕೊಲೆಯಾದ. ಬೆನ್ನಲ್ಲೇ ಫಾಡ್ಕೆಯನ್ನು ಹುಡುಕಿ ಕೊಡಲು ಬ್ರಿಟಿಷ್‌ ಸರಕಾರ ನೋಟೀಸ್‌ ಜಾರಿಗೊಳಿಸಿತು.

ಪೇಶ್ವಾ ಪ್ರಧಾನ್‌ ಎಂಬ ನೆಲೆಯಲ್ಲಿ ಫಾಡ್ಕೆಯೂ ಅಂದಿನ ಬಾಂಬೆ ಗವರ್ನರ್‌ ಆಗಿದ್ದ ಸರ್‌ ರಿಚರ್ಡ್‌ ಟೆಂಪಲ್‌ನ ತಲೆ ಕಡಿದು ತರುವವರಿಗೆ ಇನಾಂ ಘೋಷಿಸಿದ. ೧೮೭೯ ಮೇ ೧೩ ರಂದು ಫಾಡ್ಕೆಯ ಸಂಘ ಪುಣೆಯ ವಿಶ್ರಂಭಾಗ್‌ ವಾಡಾ ಮತ್ತು ಬುಧವಾರ್‌ ವಾಡಾದ ಎರಡು ಬ್ರಿಟಿಷ್‌ ಬಂಗಲೆಗಳನ್ನು ಬೆಂಕಿಗಾಹುತಿಯಾಗಿಸಿತು. ಹಲವಾರು ದಾಖಲೆಗಳು ನಾಶವಾದವು. ಇದರೊಂದಿಗೆ ಫಾಡ್ಕೆಯ ಚಟುವಟಿಕೆಗಳು ಬ್ರಿಟಿಷ್‌ ಪಾರ್ಲಿಮೆಂಟಿನಲ್ಲಿ ಪ್ರತಿಧ್ವನಿಸಿತು. ಇದರ ನಡುವೆ ಕೆಳಜಾತಿಯವರಾದ ರಾಮೋಶಿಗಳು ಫಾಡ್ಕೆಯ ಸಂಘವನ್ನು ತೊರೆದಿದ್ದರು.

ಇವೆಲ್ಲ ತನಗೆ ಪ್ರತಿಕೂಲವಾಗಿದ್ದರು ಕೂಡ ಶಿವಾಜಿಯ ತಂತ್ರವನ್ನು ಬಳಸಿಕೊಂಡು ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಓಡಿಸಿ ಪೇಶ್ವಾ ಸಾಮ್ರಾಜ್ಯವನ್ನು ಮತ್ತೆ ಕಟ್ಟಬಹುದೆಂಬ ಯೋಜನೆಯೊಂದಿಗೆ ತನ್ನ ಚಟುವಟಿಕೆಗಳನ್ನು ಫಾಡ್ಕೆ ಯೋಜಿಸುತ್ತಿದ್ದ. ಬ್ರಿಟಿಷ್‌ ಇಂಡಿಯಾದ ಬೆನ್ನುಲುಬಾಗಿದ್ದ ಸೇತುವೆಗಳು, ಟೆಲಿಗ್ರಾಫ್‌ ಲೈನುಗಳು, ರೈಲ್ವೇ ಹಳಿಗಳು ಮೊದಲಾದವನ್ನು ನಾಶಪಡಿಸುತ್ತಾ ಬ್ರಿಟಿಷ್‌ ಸರಕಾರದ ವಾರ್ತಾಜಾಲವನ್ನು ತುಂಡರಿಸಬಹುದೆಂದು ಫಾಡ್ಕೆ ಯೋಚಿಸಿದ. ಅದರ ಜೊತೆಗೆ ಬ್ರಿಟಿಷ್ ಇಂಡಿಯಾದ ಜೈಲುಗಳನ್ನು ಹೊಡೆದುರುಳಿಸಿ ಖೈದಿಗಳನ್ನು ಬಿಡುಗಡೆಗೊಳಿಸಿ ಅವರನ್ನು ಬ್ರಟಿಷರ ವಿರುದ್ಧದ ಸಶಸ್ತ್ರ ಹೋರಾಟದಲ್ಲಿ ಬಳಸಬಹುದೆಂದು ಯೋಜನೆ ಹಾಕಿದ. ಆದರೆ ನಡೆದದ್ದು ಮಾತ್ರ ಇನ್ನೊಂದು. ಶೋಲಾಪುರ-ಕರ್ನಾಟಕ ಗಡಿಭಾಗದ ಗಂಗಾಪುರ ಎಂಬಲ್ಲಿ ಆತ ಬ್ರಿಟಿಷರ ಬಲೆಗೆ ಬಿದ್ದ. ವಿಚಾರಣೆಯ ನಂತರ ಆತನನ್ನು ಏಡನ್‌ಗೆ ಗಡಿಪಾರು ಮಾಡಲಾಯಿತು (ಯಮನಿನ ಏಡನ್‌ ಆಗ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು). ಅಲ್ಲಿಂದ ಪಾರಾಗಲು ಫಾಡ್ಕೆ ಪ್ರಯತ್ನಿಸಿದನಾದರೂ ಪರಾಜಯಗೊಂಡ. ಕೊನೆಗೆ ಆಹಾರ ತ್ಯಜಿಸಿ ೧೮೮೩ ಫೆಬ್ರವರಿ ೧೭ ರಂದು ಮರಣ ಹೊಂದಿದ.

೧೮೯೬-೯೭ ಕಾಲಘಟ್ಟದಲ್ಲಿ ಪ್ಲೇಗ್‌ ಸಾಂಕ್ರಾಮಿಕ ರೋಗ ಇಂಡಿಯಾ ತಲುಪಿತ್ತು. ೧೮೫೫ರಲ್ಲಿ ಚೀನಾದ ಯುನಾನ್‌ ಪ್ರಾಂತ್ಯದಲ್ಲಿ ಇದು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಭೂಮಿಯ ಮೇಲಿಂದ ದೊಡ್ಡದೊಂದು ಜನಸಂಖ್ಯೆಯನ್ನು ಅಳಿಸಿ ಹಾಕಿದ ಮಹಾಮಾರಿಯಾಗಿತ್ತು ಪ್ಲೇಗ್.‌ ಒಟ್ಟು ಭೂಮಿಯ ಮೇಲೆ ೧೫ ದಶಲಕ್ಷದಷ್ಟು ಸಾವು ಈ ಬ್ಯುಬೋನಿಕ್‌ ಪ್ಲೇಗ್‌ ಕಾರಣದಿಂದ ಸಂಭವಿಸಿತ್ತು ಎಂದು ಅಂಕಿಅಂಶಗಳು ಹೇಳುತ್ತವೆ. ಇದು ನಿಜವಾದ ಲೆಕ್ಕ ಅಲ್ಲವೆಂದೂ ೧೦ ದಶಲಕ್ಷದಷ್ಟು ಜನರು ಭಾರತದಲ್ಲಿ ಮಾತ್ರ ಸತ್ತಿದ್ದಾರೆಂದೂ ಹೇಳುತ್ತಾರೆ. ಬಹುಷಃ ಬ್ರಿಟಿಷ್‌ ಇಂಡಿಯಾದಲ್ಲಿ ಕಾಣಿಸಿಕೊಂಡ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗ ಇದೇ ಆಗಿರಬೇಕು. ಕೇರಳೀಯನೂ, ನವೋತ್ಥಾನ ಚಳುವಳಿಯ ಆರಂಭಿಕರಲ್ಲಿ ಒಬ್ಬರೂ ಆಗಿದ್ದ ಡಾ. ಪಲ್ಪು, ಮೈಸೂರಿನಲ್ಲಿ ಪ್ಲೇಗ್‌ ವಿರುದ್ಧ ಹೋರಾಡುವ ತಂಡದ ನಾಯಕತ್ವ ವಹಿಸಿದ್ದರು. ಕ್ವಾರೆಂಟೈನ್‌ ಮತ್ತು ಆಸ್ಪತ್ರೆ ಚಿಕಿತ್ಸೆಗಳನ್ನು ಒಳಗೊಂಡ ವಿಧಾನವನ್ನು ಡಾ. ಪಲ್ಪು ಕೈಗೊಂಡಿದ್ದರು. ಆದರೂ ಮನುಷ್ಯರು ಇಲಿಗಳ ಹಾಗೆ ಸತ್ತು ಬೀಳುತ್ತಿದ್ದ ದಿನಗಳ ಕುರಿತು ಡಾ. ಪಲ್ಪು ತನ್ನ ದಿನಚರಿಯಲ್ಲಿ ಹೃದಯಸ್ಪರ್ಶಿಯಾಗಿ ಬರೆದಿದ್ದಾರೆ.

೧೯೬೦ರ ತನಕವೂ ಹಬ್ಬಿದ್ದ ಮಹಾರೋಗದ ಕಾಲವನ್ನು ಈ ಪ್ಲೇಗ್‌ ಮಹಾಮಾರಿ ಅನಾವರಣಗೊಳಿಸಿತ್ತು. ಸಹಜವಾಗಿಯೇ ಬಾಂಬೆಯಲ್ಲಿ ಆರಂಭವಾದ ಮಹಾಮಾರಿಯನ್ನು ತಡೆದು ನಿಲ್ಲಿಸಬೇಕಾದ ಜವಾಬ್ದಾರಿಯೂ ಬಾಂಬೆ ಪ್ರಾಂತ್ಯದಲ್ಲಿ ಅಧಿಕಾರದಲ್ಲಿದ್ದ ಬ್ರಿಟಿಷ್‌ ಅಧಿಕಾರಿಗಳ ಹೆಗಲ ಮೇಲೆ ಬಿದ್ದಿತ್ತು. ಕ್ವಾರಂಟೈನ್‌ ಮತ್ತು ಆಸ್ಪತ್ರೆ ವ್ಯವಸ್ಥೆಗಳ ಜೊತೆಗೆ ಲಸಿಕೆ ಹಾಕಿಸುವುದನ್ನೂ ತುರ್ತಾಗಿ ಶುರು ಮಾಡಬೇಕಾಗಿತ್ತು. ಇದನ್ನೆಲ್ಲ ಜಾರಿಗೊಳಿಸಲು ವಾಲ್ಟರ್‌ ಚಾರ್ಲ್ಸ್‌ ರಾನ್ಡ್‌ ಎಂಬ ಅಧಿಕಾರಿಯನ್ನು ಪ್ಲೇಗ್‌ ಅಧಿಕಾರಿಯಾಗಿ ನೇಮಿಸಲಾಯಿತು. ಚಿಕಿತ್ಸೆಯ ಮೇಲ್ನೋಟವನ್ನು ಡಬ್ಯೂ.ಡಬ್ಯೂ. ಬೆವರಿಡ್ಜ್‌ ಎಂಬ ಸರ್ಜನ್ನಿಗೂ ವಹಿಸಲಾಯಿತು. ೧೮೯೭ರ ಫೆಬ್ರವರಿಯಲ್ಲಿ ಅವರು ಪುಣೆ ತಲುಪಿದ್ದರು. ಮಹಾಮಾರಿ ಹರಡುವಿಕೆಯನ್ನು ತಡೆಯಲು ರಚಿಸಿದ್ದ ಸ್ಪೆಷಲ್‌ ಪ್ಲೇಗ್‌ ಕಮಿಟಿಯ (ಎಸ್.ಪಿ.ಸಿ) ಸದಸ್ಯರಾಗಿದ್ದರು ಅವರಿಬ್ಬರು. ಭಾರತದಲ್ಲಿ ಪ್ಲೇಗ್‌ ಹರಡುವ ವೇಗ ನಿಯಂತ್ರಣಾತೀತವಾದಾಗ ಯುರೋಪಿನ ದೇಶಗಳು ಭಾರತದೊಂದಿಗಿನ ಆಮದು ವಹಿವಾಟನ್ನು ನಿಲ್ಲಿಸುವ ಹಂತಕ್ಕೆ ಬಂದವು. ಈ ಹೊತ್ತಲ್ಲೇ ಬ್ರಿಟಿಷ್‌ ಇಂಡಿಯಾ ಸರಕಾರ ೧೮೯೭ರ ಸಾಂಕ್ರಾಮಿಕ ರೋಗ ಕಾನೂನನ್ನು ಜಾರಿಗೆ ತರುವುದು. ಈ ಕಾನೂನಿನ ಪ್ರಕಾರ ವೈದ್ಯರುಗಳು ಮಾತ್ರವಲ್ಲದೆ ಸ್ವಯಂಸೇವಕರನ್ನೂ ಪ್ಲೇಗ್‌ ನಿಯಂತ್ರಣಕ್ಕೆ ನಿಯೋಗಿಸಬಹುದಾಗಿತ್ತು.

ಪ್ರತಿ ಕುಟುಂಬದ ಮುಖ್ಯ ವ್ಯಕ್ತಿ ತನ್ನ ಕುಟುಂಬದ ಪ್ಲೇಗ್‌ ಬಾಧಿತರ ಮತ್ತು ಪ್ಲೇಗ್‌ ಕಾರಣದಿಂದ ಸಾವನ್ನಪ್ಪಿದವರ ವಿವರಗಳನ್ನು ಎಸ್.ಪಿ.ಸಿಗೆ ನೀಡಬೇಕಾಗಿತ್ತು. ಆದರೆ, ಸರಿಯಾದ ಮಾಹಿತಿಗಳು ಎಸ್.ಪಿ.ಸಿಗೆ ಸಿಗದ ಕಾರಣ ರಾನ್ಡ್‌ ಮತ್ತು ತಂಡ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲು ಮುಂದಾದರು. ಪ್ಲೇಗ್‌ ರೋಗಿಗಳನ್ನು ಕಂಡರೆ ತಕ್ಷಣ ಅವರನ್ನು ಐಸೊಲೇಷನ್‌ ಕ್ಯಾಂಪುಗಳಿಗೆ ರವಾನಿಸಿದರು. ರೋಗಿಗಳ ಉಡುಪುಗಳನ್ನು ಮತ್ತು ಅವರು ಬಳಸುತ್ತಿದ್ದ ಬಟ್ಟೆಗಳನ್ನು ಬೆಂಕಿ ಹಾಕಿ ಸುಟ್ಟರು. ಸಾವು ರಿಜಿಸ್ಟರ್‌ ಮಾಡದ ಅಂತ್ಯ ಸಂಸ್ಕಾರಗಳನ್ನು ನಿಷೇಧಿಸಲಾಯಿತು. ಇದು ಮರಾಠ ಪ್ರಾಂತ್ಯದ ಬ್ರಾಹ್ಮಣರೊಳಗೆ ಇನ್ನಿಲ್ಲದ ಕೋಲಾಹಲಗಳನ್ನು ಸೃಷ್ಟಿಸಿತು.