Column – Peepal Media

ಮರಿನಾ ಅಬ್ರಾಮೊವಿಚ್: ಮನುಷ್ಯನ ಕ್ರೌರ್ಯ ಹೊರಗೆಳೆದ ಕಲಾವಿದೆ
ಓರ್ವ ಕಲಾವಿದೆಯಾದ ಮರಿನಾ ಅಬ್ರಾಮೊವಿಚ್ ತನ್ನ ಕಲೆಯ ಪ್ರತಿ ಶೋಧನೆಯಲ್ಲಿ ಮನುಷ್ಯನ ಒಳಗಿನ ಗುಣಗಳನ್ನು ಹೊರಗೆಡುವುದರಲ್ಲಿ ನಿರತಳಾಗುತ್ತಾಳೆ.   ಅದು ಅದ್ಗುಣವೇ ಇರಲಿ ದುರ್ಗುಣವೇ ಇರಲಿ ಅದಕ್ಕಾಗಿ ತನ್ನ ದೇಹವನ್ನೇ ಪಣಕ್ಕಿಟ್ಟುಬಿಡುತ್ತಾಳೆ.

ಈಕೆ ಹುಟ್ಟಿದ್ದು ನವೆಂಬರ್ ೩೦, ೧೯೪೬ರಲ್ಲಿ ಯುಗೊಸ್ಲಾವಿಯಾದ ಬೆಲ್ಗ್ರೇಡ್ ಎಂಬ ಸ್ಥಳದಲ್ಲಿ.  ಅಲ್ಲಿನ ಒಂದು ಲಲಿತಾಕಲಾ ಅಕಾಡೆಮಿ ಶಾಲೆಯಲ್ಲಿ ಪೇಂಟಿಂಗ್ ಕಲಿಯಲು ಸೇರಿದಂತಾಕೆ.  ಮುಂದೆ ಪ್ರದರ್ಶನ ಕಲೆ ಅಂದರೆ ಪರ್ಫಾರ್ಮೆನ್ಸ್ ಆರ್ಟ್ ನಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ.

ಹಲವು ವರ್ಷಗಳ ತಲೆಬಿಸಿಯ ಸಾಂಗತ್ಯಕ್ಕೆ ಅಂತ್ಯ ಹಾಡಿದ್ದು ಇಬ್ಬರೂ ಚೀನಾ ದೇಶದ ಬೃಹತ್ ಮಹಾ ಗೋಡೆಗಳ ಮೇಲೆ ನಡೆದು, ಕಡೆಗೆ ಒಂದು ಸ್ಥಳದಲ್ಲಿ ವಿದಾಯ ಹೇಳಿ ಬಿಟ್ಟುಹೊರಡುತ್ತಾರೆ.  ಇದಕ್ಕೆ ಆಕೆ ಕೊಟ್ಟ ಹೆಸರು “ಲವ್ವರ್ಸ್”.

ಒಬ್ಬರ ಜೊತೆಗೆ ಮತ್ತೊಬ್ಬರು ಗುದ್ದಾಡಿ, ಮನದ ತಿಳಿನೀರು ರಾಡಿ ಮಾಡಿ, ಕೋರ್ಟ್ ಕಚೇರಿ ಅಲೆದು ಹೋಗುವವರ ಎದುರು ಇವರೆಲ್ಲಿಂದ ಬಂದರು ಎಂದು ಅನಿಸದಿರದು.  ಇದು ಒಂದು ಸಂಬಂಧ ಕೈಬಿಡುವ ಸುಂದರ ಪ್ರದರ್ಶನ ಎಂಬಂತೆ ಅನಿಸುವುದು.

ವಿವಾದವನ್ನು ಕೆರಳಿಸುವ ಹಾಗೆಯೇ ಗಂಡಾಂತರ ತರುವುದರ ಜೊತೆಜೊತೆಗೆ ನಗ್ನತೆ ಆಕೆಯ ಕಲಾ ಪ್ರದರ್ಶನಗಳಲ್ಲಿ ಸಾಮಾನ್ಯವಾದ ವಿಚಾರ ಆಗಿತ್ತು.  ಹೀಗಾಗಿ ಬಹಳ ವಿವಾದಗಳು ಸರ್ವೇಸಾಮಾನ್ಯವಾಗಿ ಇರುತ್ತಿದ್ದವು.

ಈಕೆಯ ಹಲವಾರು ಕಲಾಪ್ರದರ್ಶನ ಖ್ಯಾತಿ ಪಡೆದಿದೆ.  ಅದರಲ್ಲೊಂದು ಮನುಷ್ಯನ ಒಳಗಿನ ಕೊನೆಯಿಲ್ಲದ ಕ್ರೌರ್ಯವನ್ನು ಹೊರಗೆಳೆಯಲು ಸಫಲವಾಯಿತು.

ಈ ಕಲಾ ಪ್ರದರ್ಶನದ ಸಮಯ ಆಕೆ ಒಬ್ಬಂಟಿಯಾಗಿ ಕೂರುತ್ತಿದ್ದರು.  ತನ್ನ ಜೊತೆಗೆ ಯಾವುದೇ ಪೆನ್ನು, ಪೆನ್ಸಿಲ್ ಏನೂ ಹೊಂದಿರಲಿಲ್ಲ.  ಆದರೆ ಆಕೆಯ ಸಮೀಪದಲ್ಲಿ ಎಲ್ಲಾ ತರಹದ ಶಸ್ತ್ರಾಸ್ತ್ರಗಳನ್ನು ಒಂದು ಟೇಬಲ್ ಮೇಲೆ ಜೋಡಿಸಿದ್ದರು.  ಅಲ್ಲಿಗೆ ಬರುವ ಕಲಾ ಪೋಷಕರು, ವಿಸಿಟರ್ಸ್ ಆಕೆಯೊಂದಿಗೆ ಹೇಗೆ ಬೇಕಾದರು ನಡೆಸಿಕೊಳ್ಳಲು ಅವಕಾಶ ಇತ್ತು.

ಇದನ್ನೇ ಅವಕಾಶ ಎಂದುಕೊಂಡ ಕೆಲವರು ಆಕೆಯ ಮೇಲೆ ಶಸ್ತ್ರದಿಂದ ಕೀರಿದರು, ರಕ್ತ ಬರಿಸಿ ನಕ್ಕರು.  ಆಕೆಯು ಮೈಮೇಲೆ ಧರಿಸಿದ್ದ ಬಟ್ಟೆಗಳನ್ನು ಹರಿದರು.  ಒಳಗಿನ‌ಕೋಣೆಗೆ ಕರೆದೊಯ್ದು ಅವಳ ಸೂಕ್ಷ್ಮ ಅಂಗಗಳಿಗೆ ತಿವಿದು ನೋವು ನೀಡಿದರು.  ಅವಳ ಮೈಯನ್ನು ಒಂದು ಟಾಯ್ ಅಂದರೆ ಅಟಿಕೆ ತರಹ ಆಡಿಸಿ ಹೊರಟು ಹೋದರು.  ಆಕೆ ತನ್ನ ಈ ಕಲಾ ಪ್ರದರ್ಶನ ಸಮಯದಲ್ಲಿ ಮಾತನಾಡುತ್ತಿರಲಿಲ್ಲ.  ಬದಲಿಗೆ ತಮಗೆ ಬೇಕಾದ್ದನ್ನು ಮಾಡುವ ಅವಕಾಶ ಕಲಾ ಪ್ರದರ್ಶನಕ್ಕೆ ಬಂದವರಿಗೆ ನೀಡಿದ್ದರು.  ಆಕೆ ಈ ಅವಧಿಯಲ್ಲಿ ಅತ್ಯಂತ ನೋವುಂಡರೂ ತುಟಿಕ್ ಪಿಟಿಕ್ ಎನ್ನದೆ ತನ್ನ ನಂಬಿದ ಕಲಾ ಪ್ರದರ್ಶನ ತತ್ವಕ್ಕೆ ಬದ್ಧರಾಗಿ ನಡೆದುಕೊಂಡರು.  ಆದರೆ ಜನ ತಮ್ಮ ಮಂಗೆ ಚೇಷ್ಟೆಗಳನ್ನು ಮಾಡಿ ಆಕೆಯ ದೇಹಕ್ಕೆ ನೋವುಣಿಸಿದ್ದರು.

ಪ್ರದರ್ಶನದ ಕಡೆಯಲ್ಲಿ ಆಕೆಯ ಕಂಗಳಲ್ಲಿ ನೀರು ತುಂಬಿತ್ತು.  ಆಕೆ ಅಂತಿಮವಾಗಿ ಮನುಷ್ಯ ಎಲ್ಲಾ ಪ್ರಾಣಿಗಳಗಿಂತಲೂ ಕ್ರೂರ, ಯಾರಾದರೂ ಪಾಪದವರು ಪ್ರತಿಭಟಿಸದವರು ಸಿಕ್ಕರೆ ಮನುಷ್ಯರು ಹೇಗೆಲ್ಲಾ ಹಿಂಸೆಯ ವಿವಿಧ ರೀತಿಗಳಲ್ಲಿ ಶೋಷಿಸಲು ಯತ್ನಿಸಿದ್ದರು ಎಬುದಕ್ಕೆ ಈಕೆಯ ಲೈವ್ ಆರ್ಟ್ ಪರ್ಫಾಮೆನ್ಸ್ ಸಾಕ್ಷಿಯಾಗಿತ್ತು.

ಇಂತಹವು ಕಲಾವಿದರ ಜೀವಕ್ಕೂ ಕುತ್ತು ತರುವಂತವು ಎಂಬುದು ಸಹ ಸತ್ಯ.  ಈ ಕಲಾ ಪ್ರದರ್ಶನದ ಹೆಸರು “ರಿದಂ ಓ”, ಘಟಿಸಿದ್ದು ೧೯೭೪ರಲ್ಲಿ. ಈ ಪ್ರದರ್ಶನ ಅಕ್ಷರಶಃ ಮನುಷ್ಯನ ಕ್ರೌರ್ಯಕ್ಕೆ ಹೊಸ ದಾಖಲೆ ಬರೆದಂತಿತ್ತು.  ಪರ್ಫಾಮೆನ್ಸ್ ಕೊನೆಯಲ್ಲಿ ಆಕೆಯ ದೇಹದ ಮೇಲೆ ಚಿತ್ರ ವಿಚಿತ್ರ ಬರಹಗಳು ಕಂಡುಬಂದುವು.

ಈಗ ೭೭ರ ಹರಯದ ಈಕೆ ಈಗಲೂ ತನ್ನದೇ ಆದ ಆಸಕ್ತಿಯ ಕಲಾಪ್ರದರ್ಶನದಲ್ಲಿ ಆಸಕ್ತರಾಗಿದ್ದಾರೆ.  ಈಕೆಯ ಆತ್ಮಚರಿತ್ರೆ- ಗೋಡೆಗಳ ಮೂಲಕ ನಡೆಯೋಣ ಸಾಕಷ್ಟು ಗಮನಾರ್ಹವಾಗಿ ಮೂಡಿಬಂದಿದೆ.  ಆರ್ಡಿಸ್ಟ್ ಇಸ್ ಪ್ರೆಸೆಂಟ್ ಸಹ ಇವರ ಪ್ರಮುಖ ಪ್ರದರ್ಶನಗಳಲ್ಲೊಂದು.

ನಳಿನಾ ಚಿಕ್ಕಮಗಳೂರು

ಗ್ಯಾರಂಟಿಗಳು: ಕೋಡಂಗಿ ಯಾರು? ಈರಬದ್ರ ಯಾರು?
ಬೊಗಸೆಗೆ ದಕ್ಕಿದ್ದು-9

ನಿಖಿಲ್ ಕೋಲ್ಪೆ

ಸುಮ್ಮನೇ ಯೋಚಿಸುತ್ತೇನೆ: ನನ್ನ ಮಕ್ಕಳೂ ಸೇರಿದಂತೆ ನೂರಾರು ಮಕ್ಕಳನ್ನೂ, ಹೆಂಡತಿ, ತಾಯಿ, ತಂಗಿಯರೂ ಸೇರಿದಂತೆ ನೂರಾರು ಮಹಿಳೆಯರನ್ನೂ, ನೂರಾರು ಗೆಳೆಯರನ್ನೂ ನೋಡುತ್ತೇನೆ ನಿತ್ಯವೂ. ನನಗೆ ಆತಂಕವಾಗುವ ವಿಷಯ ಎಂದರೆ, ಸಂವಿಧಾನದ ಕಾರಣದಿಂದ ಬಂಧ ವಿಮುಕ್ತಿ ಹೊಂದಿದ ಇವೇ ಜನರು ಅದರ ಬಗ್ಗೆ ಅಸಡ್ಡೆ ತೋರಿಸಿ- ತಮ್ಮನ್ನು ಹಿಂದಿನಿಂದಲೂ ಬಂಧಿಸಿದ್ದ ಧರ್ಮದ ಹೆಸರಿನ ಸಾಂಸ್ಥಿಕ ಸಂಕೋಲೆಗಳಲ್ಲಿ ಬಂಧಿತರಾಗಿ ಇರುವುದನ್ನೇ ಇಷ್ಟಪಡುತ್ತಾರೆಯೇ? ಈ ಸಂಕೋಲೆಗಳು ಎಷ್ಟು ಬಹುಮುಖವಾಗಿವೆ ಎಂದು ಆಶ್ಚರ್ಯವಾಗುತ್ತದೆ. ಅನ್ಯಾಯದ ಧರ್ಮರಾಜಕಾರಣಕ್ಕೆ ಎಷ್ಟು ಸುಲಭದಲ್ಲಿ ಬಲಿಯಾಗುತ್ತಾರೆ ಇವರು!

ಇಂತದ್ದೇ ಜನರಲ್ಲಿ ಕೆಲವು ಪ್ರೀತಿ ಪಾತ್ರ ಜನರು ಮಾತನಾಡುವುದನ್ನು ಕೇಳಿದೆ. ತಲೆ ಕೆಟ್ಟಿತು: “ಗ್ಯಾರಂಟಿ ಎಂದು ಸಿದ್ದರಾಮಯ್ಯ ಕೊಡುತ್ತಾನಲ್ಲ?! ಅದನ್ನೇನು ಅವನು ಸ್ವಂತ ಹಣದಿಂದ ಕೊಡುತ್ತಾನಾ?!”. “ಎಲ್ಲದಕ್ಕೂ ಮೋದಿ ಮೋದಿ ಎನ್ನುತ್ತೀರಲ್ಲ? ಮೋದಿಯೇನು ಸ್ವಂತ ಹಣದಿಂದ ಕೊಡುತ್ತಾನಾ?” ಎಂದು ನಾನು ಕೇಳಿದರೆ ಜಗಳಕ್ಕೇ ಇಳಿಯುತ್ತಾರೆ. ಹೌದು. ಒಂದು ರೀತಿಯಲ್ಲಿ ಎರಡೂ ನಿಜವೇ. ಸರಕಾರ ನಡೆಯುವುದೇ ಜನರ ತೆರಿಗೆ ದುಡ್ಡಿನಿಂದ. ಆದರೆ, ಇವರೆಲ್ಲರೂ ತಿಳಿದುಕೊಂಡಂತೆ ಶ್ರೀಮಂತರ ತೆರಿಗೆ ದುಡ್ಡಿನಿಂದ ಅಲ್ಲ. ಬದಲಾಗಿ ನಿತ್ಯ ಜೀವನಕ್ಕೇ ಬೆವರು ಸುರಿಸುವ ಜನಸಾಮಾನ್ಯರ ತೆರಿಗೆ ದುಡ್ಡಿನಿಂದ. ಗ್ಯಾರಂಟಿ ಎಂಬುದು ಭಿಕ್ಷೆಯೇನಲ್ಲ. ಆದರೆ, ಅದರ ಲಾಭ ಪಡೆದೂ ಕಾಂಗ್ರೆಸನ್ನು ದೂರುವ, ಆದರೆ “ಗ್ಯಾರಂಟಿ” ಎಂಬ ಪದವನ್ನೇ ಹೈಜಾಕ್ ಮಾಡಿದ ಮೋದಿಗೆ ಅದರ ಶ್ರೇಯಸ್ಸನ್ನು ನೀಡಿ, ಹಾಡಿ ಹೊಗಳುತ್ತಾರಲ್ಲ! ಆಗ “ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಬದ್ರ” ಎಂಬ ಮಾತು ನೆನಪಾಗುತ್ತದೆ. ಹಾಗಾಗಿ ಈ ಕುರಿತೇ ಇಲ್ಲಿ ಕೆಲವು ಮಾತುಗಳು:

ಪ್ರಜಾಸತ್ತಾತ್ಮಕ, ಜಾತ್ಯತೀತ, ಸಮಾಜವಾದಿ ಗಣರಾಜ್ಯವಾಗಿರುವ ಭಾರತದಲ್ಲಿ ಎಲ್ಲರ ಅಭಿವೃದ್ಧಿಯು ಪ್ರತಿಯೊಂದು ಸರಕಾರದ ಸಾಂವಿಧಾನಿಕ ಜವಾಬ್ದಾರಿ. ದೇಶದ ಪ್ರತಿಯೊಬ್ಬರೂ ಶಾಂತಿ, ನೆಮ್ಮದಿ, ಸಮಾನತೆ ಮತ್ತು ಸಾಮರಸ್ಯದ ವಾತಾವರಣದಲ್ಲಿ ಬದುಕುವಂತಾಗಬೇಕು ಎಂಬುದು ಸಂವಿಧಾನದ ಆಶಯ. ಆ ಸಾಮಾಜಿಕ, ಆರ್ಥಿಕ, ರಾಜಕೀಯ ಆಶಯಗಳಲ್ಲಿ ನಾವು ಬೇರೆಬೇರೆ ಪ್ರಮಾಣದ ಯಶಸ್ಸು, ವೈಫಲ್ಯ ಮತ್ತು ತಾರತಮ್ಯಗಳನ್ನು ಕಂಡಿದ್ದೇವೆ. ಜನಸಾಮಾನ್ಯರ ಸಾಮಾಜಿಕ ಮತ್ತು ರಾಜಕೀಯ ಶಕ್ತಿಯು ಅವರ ಆರ್ಥಿಕ ಶಕ್ತಿಯ ಜೊತೆಗೆ/ಮೇಲೆ ನೇರವಾದ ಸಂಬಂಧ/ಪರಿಣಾಮ ಹೊಂದಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ನೀಡಿದ್ದ ಮತ್ತು ಸರಕಾರ ಅಸ್ತಿತ್ವಕ್ಕೆ ಬಂದ ನಂತರವೀಗ ತಪ್ಪದೇ ಅನುಷ್ಟಾನಗೊಳಿಸುತ್ತಿರುವ ಐದು “ಗ್ಯಾರಂಟಿ” ಎಂದೇ ಜನಪ್ರಿಯವಾಗಿರುವ ಐದು ಜನಪರ ಯೋಜನೆಗಳನ್ನು ನೋಡಬೇಕು.

ಇಂತಾ ನೆರವುಗಳ ತಾತ್ವಿಕ ಮತ್ತು ಪ್ರಯೋಗಿಕ ಉದ್ದೇಶಗಳನ್ನು ಚುಟುಕಾಗಿ ನೋಡುವುದಾದರೆ, ಸಮಾಜದ ಬಡವರಿಗೆ ನೆರವಾಗುವ ಯೋಜನೆಗಳು ಇಂದು ನಿನ್ನೆಯವು ಏನಲ್ಲ. ರಾಜಪ್ರಭುತ್ವದ ಕಾಲದಲ್ಲಿ ಇದನ್ನು “ದಾನ” ಎಂಬ ಹೆಸರಿನಲ್ಲಿ ಮಾಡಲಾಗುತ್ತಿತ್ತು. ಉತ್ಪಾದನಾ ಸಾಧನಗಳ-ಮುಖ್ಯವಾಗಿ ಭೂಮಿಯ- ಸಂಪೂರ್ಣ ಒಡೆತನ ಹೊಂದಿ, ಜನರಿಂದ ಯದ್ವಾತದ್ವಾ ತದ್ವಾ ಸುಲಿದು ಸಂಗ್ರಹಿಸಿದ ಹಣವನ್ನು ಮೇಲ್ವರ್ಗದ ಐಷಾರಾಮಿಗೂ, ರಾಜ್ಯ ರಕ್ಷಣೆ, ವಿಸ್ತರಣೆಗೆ ಮಾಡುವ ಯುದ್ಧಗಳಿಗೆ ವೆಚ್ಚ ಮಾಡಿ, ಉಳಿದದ್ದನ್ನು ಜನರಿಗಾಗಿ ವೆಚ್ಚ ಮಾಡುವ ವ್ಯವಸ್ಥೆಯು ಅನಿವಾರ್ಯ ರಾಜನಿಷ್ಟೆ ಮತ್ತು ಜೀಹುಜೂರ್ ಗುಲಾಮಗಿರಿಯನ್ನು ಪ್ರೋತ್ಸಾಹಿಸುವಂತೆ ಇತ್ತು. ಕೆಲವು ಉದಾರಿ ರಾಜರು ತಮ್ಮ ಪ್ರಜೆಗಳಿಗೆ ಬಹಳಷ್ಟನ್ನು ಮಾಡಿ ಜನಪ್ರಿಯರಾದ ಉದಾಹರಣೆಗಳೂ ಇತಿಹಾಸದಲ್ಲಿ ಇವೆ. ತಮ್ಮ ಅಧಿಕಾರವನ್ನು ಭದ್ರಪಡಿಸಲು, ಬಂಡಾಯ ಏಳದಂತೆ ತಡೆಯಲೂ ಇಂತಾ “ದಾನ-ಧರ್ಮ-ಸತ್ಕಾರ್ಯ”ಗಳು ಅನಿವಾರ್ಯವಾಗಿದ್ದವು ಕೂಡಾ.

ನಂತರ ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆಜೊತೆಗೆಯೇ ಅಥವಾ ಜಾಗತಿಕವಾಗಿ ನೋಡಿದರೆ ಅದಕ್ಕಿಂತಲೂ ಮೊದಲೇ ಬಂಡವಾಳಶಾಹಿ ವ್ಯವಸ್ಥೆ ಕೂಡಾ ಬೆಳೆದುಬಂತು ಎಂಬುದನ್ನು ಗಮನಿಸಬೇಕು.ಆರ್ಥಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಮೆರೆಯುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯು ಬಡವರನ್ನು ನಿರಂತರವಾಗಿ ಇನ್ನಷ್ಟು ಬಡವರನ್ನಾಗಿಯೂ, ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ನಾಜೂಕಿನ ವಂಚಕ ವ್ಯವಸ್ಥೆ ಎಂಬುದನ್ನು ಬಹಳ ಜನರು ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರಸ್ತುತ ಪ್ರಪಂಚದ ಬಹುತೇಕ ದೇಶಗಳಲ್ಲಿ- ಅವು ರಾಜಪ್ರಭುತ್ವ, ಪ್ರಜಾಪ್ರಭುತ್ವ ಅಥವಾ ಬೇರೆಬೇರೆ ಮುಖವಾಡಗಳನ್ನು ಹೊತ್ತಿರುವ ಸರ್ವಾಧಿಕಾರವೇ ಆಗಿರಲಿ- ಬಂಡವಾಳಶಾಹಿ ವ್ಯವಸ್ಥೆಯೇ ಇದೆ. ಜನರ-ಜನರ ನಡುವಿನ, ಪ್ರದೇಶ-ಪ್ರದೇಶಗಳ ನಡುವಿನ, ದೇಶ-ದೇಶ-ದೇಶಗಳ ನಡುವಿನ ಅಸಮಾನತೆಯ ಕಂದಕ ದಿನದಿಂದ ದಿನಕ್ಕೆ ಆಳವಾಗುತ್ತಾ ಹೋಗುತ್ತಿರುವುದನ್ನು ಅಂಕಿಅಂಶಗಳು ಸಾಬೀತುಮಾಡುತ್ತವೆ. ಕೆಲವೇ ಅತಿಶ್ರೀಮಂತರು ಪ್ರಪಂಚದ ಬಹುತೇಕ ಸಂಪತ್ತನ್ನು ಹೊಂದಿದ್ದು, ಬಹುಸಂಖ್ಯಾತ ಜನರು ತಮ್ಮೊಳಗೆ ಹಂಚಿಕೊಳ್ಳಬೇಕಾದ ಸಂಪತ್ತಿನ ಪಾಲು ತೀರಾ ಕಡಿಮೆ ಎಂಬುದನ್ನೂ ಈ ಅಂಕಿಅಂಶಗಳು ತಿಳಿಸುತ್ತವೆ. ಇದನ್ನೂ ಜನರು ಅರ್ಥಮಾಡಿಕೊಳ್ಳುವುದಿಲ್ಲ.

ಇಂತಾ ಸಂದರ್ಭದಲ್ಲಿ ಜನಪರ, ಜನಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡು ಜನರ ಅಸಮಾಧಾನ, ಬಂಡಾಯಗಳನ್ನು ನಿಯಂತ್ರಣದಲ್ಲಿ ಇಡುವುದು ಸರಕಾರಗಳಿಗೆ ಅನಿವಾರ್ಯವಾಗುತ್ತದೆ. ಜಾತಿ, ಧರ್ಮಗಳನ್ನು ಒಡೆದಾಳುವ ನೀತಿ ಬಹಳ ಕಾಲ ಬಾಳದು. ಶ್ರೀಮಂತ ದೇಶಗಳು ಬಡದೇಶಗಳಿಗೆ ತಾವು ದೋಚಿದ ಹಣದಲ್ಲೇ “ನೆರವು” ನೀಡುವುದು ಕೂಡಾ ಇದಕ್ಕಾಗಿಯೇ. ಇದು ನ್ಯಾಯಯುತ ವ್ಯವಸ್ಥೆ ಎಂದು ತೋರಿಸಿಕೊಳ್ಳಲು ಮತ್ತು ಈ ಸಂಪತ್ತಿನ ಉತ್ಪಾದಕರಾದ ಶ್ರಮಜೀವಿ, ನೌಕರವರ್ಗವನ್ನು ಜೀವಂತವಾಗಿ ಇಡಲು ಇದು ಅನಿವಾರ್ಯ. ಇಲ್ಲವಾದಲ್ಲಿ ನಾವು ದೌರ್ಜನ್ಯದ ಗುಲಾಮಗಿರಿಯ ಕರಾಳಯುಗಕ್ಕೆ ಮರಳಬೇಕಾಗುತ್ತದೆ. ಹಾಗಾಗಿ, ಸರಕಾರ ಜನರಿಗೆ ನೀಡುವ ಸವಲತ್ತುಗಳು “ಭಿಕ್ಷೆ” ಎಂದು ತಿಳಿದುಕೊಂಡು, ಅವುಗಳನ್ನು ಕುಟಿಲವಾಗಿ, ಅತಾರ್ಕಿಕವಾಗಿ ವಿರೋಧಿಸುತ್ತಿರುವ- ರಾಜಪ್ರಭುತ್ವವಾದಿ, ಸರ್ವಾಧಿಕಾರವಾದಿ, ಧರ್ಮಾಡಳಿತವಾದಿ ಬಲಪಂಥೀಯರ ವಿಚಾರಗಳಿಗೆ ವ್ಯತಿರಿಕ್ತವಾಗಿ, ಅವು ಜನರಿಗೆ ತಾವು ಸೃಷ್ಟಿಸಿದ ಸಂಪತ್ತಿನ, ತಾವು ಕಟ್ಟಿದ ತೆರಿಗೆಯ ಮೇಲೆ ಇರುವ ಹಕ್ಕು ಎಂಬುದನ್ನು ತಿಳಿದುಕೊಳ್ಳಬೇಕು. ಇದು ಕೂಡಾ ಮೀಸಲಾತಿಯಂತೆ ಹಕ್ಕೇ ಹೊರತು, ಭಿಕ್ಷೆಯಲ್ಲ.

ಬೇರೆಬೇರೆ ಸರಕಾರಗಳು ಶಿಕ್ಷಣದ ಮೇಲೆ, ಆರೋಗ್ಯ ಸೇವೆ ಇತ್ಯಾದಿಗಳ ಮೇಲೆ ಖರ್ಚು ಮಾಡುತ್ತಾ ಬಂದಿವೆ. ಮುಖ್ಯವಾಗಿ ಉನ್ನತ ಶಿಕ್ಷಣದಲ್ಲಿ ಕೋಟಿಗಟ್ಟಲೆ ಡೊನೇಷನ್ ನೀಡಿ, ನಂತರ ವಿದೇಶಗಳಿಗೆ ಓಡುವ ಶ್ರೀಮಂತ, ಮೇಲ್ಜಾತಿ, ಮೇಲ್ವರ್ಗಗಳ ವಿದ್ಯಾರ್ಥಿಗಳಿಗೂ ಇದು ಅನ್ವಯಿಸುತ್ತದೆ. ಇದು ವೈಯಕ್ತಿಕವಾಗಿ ಸಿಗುವ ಸಮಲತ್ತುಗಳು. ಇನ್ನು ಮೂಲಸೌಕರ್ಯಗಳ ವಿಷಯ ಬಂದಾಗ, ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳಿಗಿಂತ ಶ್ರೀಮಂತರಿಗೆ ಅನುಕೂಲಕರವಾದ ಯೋಜನೆಗಳಿಗೇ ಸರಕಾರಗಳು ಹೆಚ್ಚಿನ ಹಣ ವ್ಯಯಿಸುತ್ತವೆ. ಉದಾಹರಣೆಗೆ ವಾಹನ ಇರುವವರು ಟೋಲ್ ಕೊಟ್ಟು ಓಡಾಡಬೇಕಾದ, ಖಾಸಗಿಯವರಿಗೆ ಲಾಭ ತರುವ, ಎಕ್ಸ್‌ಪ್ರೆಸ್ ಹೈವೇಗಳಿಂದಾಗಲೀ, ಸಾಮಾನ್ಯ ರೈಲುಗಳ ಜಾಗದಲ್ಲಿ ಬರುತ್ತಿರುವ ದುಬಾರಿ “ವಂದೇ ಭಾರತ್” ಬಡಾಯಿಯಿಂದಾಗಲೀ ಬಡಜನರಿಗೆ ನೇರ ಲಾಭವಿದೆಯೇ?

ಹೀಗಿದ್ದರೂ, ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ತಂದಿರುವ ಐದು ಜನಪರ ಯೋಜನೆಗಳು- ಮಹಿಳೆಯರಿಗೆ ಮಾಸಿಕ ೨,೦೦೦ ರೂ.ಗಳನ್ನು ನೀಡುವ ಗೃಹಲಕ್ಷ್ಮೀ, ಬಡವರಿಗೆ ತಿಂಗಳಿಗೆ ೧೦ ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ, ಹಿಂದೆ ಬಳಸುತ್ತಿದ್ದ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ವಿದ್ಯಾವಂತರಿಗೆ ಎರಡು ವರ್ಷಗಳ ಕಾಲ ನೆರವು ನೀಡುವ ಯೋಜನೆಗಳಿಂದ ದೇಶದ ಆರ್ಥಿಕತೆ ದಿವಾಳಿಯಾಗುತ್ತಿದೆ ಎಂದು ಕೂಗಾಡುತ್ತಾ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವ ವಿರೋಧವನ್ನು ಗಮನಿಸಿ. ಚುನಾವಣೆಯಲ್ಲಿ ಸೋತ ಕೂಡಲೇ ಅವುಗಳ ವ್ಯವಸ್ಥಿತ ಜಾರಿಗೆ ಒತ್ತಾಯಿಸುತ್ತಾ, ಅವಸರ ಮಾಡುತ್ತಾ, ಕಾಂಗ್ರೆಸ್ ಜನರನ್ನು ವಂಚಿಸಿದೆ ಎಂದು ಮಾಡಿದ ಚೀರಾಟವನ್ನೂ, ಇಬ್ಬಗೆ ನೀತಿಯನ್ನೂ ಗಮನಿಸಿ. ಇದೀಗ ಈ ಯೋಜನೆಗಳು ಜಾರಿಯಾದಾಗ ಮಾಡುತ್ತಿರುವ ಟೀಕೆಗಳು, ಕುಹಕಗಳು, ಹುಡುಕುತ್ತಿರುವ ಹುಳುಕುಗಳು ಮತ್ತು ಸೃಷ್ಟಿಸುತ್ತಿರುವ ಗೊಂದಲಗಳನ್ನೂ ಗಮನಿಸದೇ ಇರಬೇಡಿ. ಇದೀಗ ಮೋದಿ “ಗ್ಯಾರಂಟಿ” ಎಂಬ ಪದವನ್ನೇ ಅಪಹರಿಸಿ ತನ್ನದಾಗಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರ, ತಮಿಳುನಾಡು, ಕೇರಳ, ದಿಲ್ಲಿ, ಪಂಜಾಬ್ ಮತ್ತು ಕೆಲವು ಉತ್ತರ ಪ್ರದೇಶದಂತ ಬಿಜೆಪಿ ಆಡಳಿತದ ಬೇರೆ ರಾಜ್ಯಗಳು ಕೂಡಾ ಬೇರೆಬೇರೆ ಉಚಿತ ಅಥವಾ ನೆರವಿನ ಯೋಜನೆಗಳನ್ನು ನಡೆಸುತ್ತಿವೆ. ಹಿಂದಿನ ಸಿದ್ದರಾಮಯ್ಯ ಸರಕಾರದ ‘ಭಾಗ್ಯ’ ಯೋಜನೆಗಳೂ ಜನಪ್ರಿಯ. ಆದರೆ, ಇವುಗಳ ನಡುವಿನ ವ್ಯತ್ಯಾಸ ಎಂದರೆ, ಬಿಜೆಪಿಯ ಕೊಡುಗೆಗಳು ಸಮಾಜದಲ್ಲಿ ಮತೀಯ ಬಿರುಕು ಮಾಡಬಲ್ಲ ಧಾರ್ಮಿಕ ಸ್ವರೂಪದ ಕೊಡುಗೆಗಳಾದರೆ, ಉಳಿದ ರಾಜ್ಯಗಳಲ್ಲಿ ಇರುವುದು ಆನ್ನ, ವಸತಿ, ಶಿಕ್ಷಣ, ಮಹಿಳಾ ಸಶಕ್ತೀಕರಣ ಮುಂತಾದ ಬಡಜನರ ಉಳಿವಿಗೆ ಅಗತ್ಯವಾದ ಕೊಡುಗೆಗಳು. ಆದರೆ, ಜನಸಾಮಾನ್ಯರ ಸಶಕ್ತೀಕರಣದ ಉದ್ದೇಶ ಹೊಂದಿರುವ, ಅವರ ಕೈಗೆ ಚಲಾವಣೆಯ ಹಣ ಒದಗಿಸುವ, ಆ ಮೂಲಕ ಮಾರುಕಟ್ಟೆ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಲ್ಲ, ಹೆಚ್ಚು ವಿಸ್ತಾರವಾದ, ಮತ್ತು ಇಷ್ಟು ದೊಡ್ಡ ಯೋಜನೆ ಬೇರೆಲ್ಲೂ ಬಂದಿಲ್ಲ.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿ- ಸಂಕುಚಿತ, ಕುಟಿಲ ಮತ್ತು ಕ್ರೂರವಾದ ಬಿಜೆಪಿ ರಾಜಕಾರಣವನ್ನು ಸೋಲಿಸುವಲ್ಲಿ ಸಫಲವಾದ “ಕರ್ನಾಟಕ ಮಾಡೆಲ್” ರೀತಿಯ ಯೋಜನೆಗಳು ಬಿಜೆಪಿಗೆ ಉರಿ, ಹೊಟ್ಟೆ ನೋವು ಉಂಟುಮಾಡಿದೆ. ಈ ಕಠಿಣ ಪದಗಳನ್ನು ಬಳಸಲು ಕಾರಣವೆಂದರೆ, ಅದು ಮಾಡುತ್ತಿರುವ ತರ್ಕ, ವಿವೇಕ, ಸಭ್ಯತೆಯೂ ಇಲ್ಲದ ದುಷ್ಟ ಟೀಕೆಗಳು. ಪ್ರಧಾನಿ ನರೇಂದ್ರ ಮೋದಿಯಂತೂ- ಕರ್ನಾಟಕದ ಉಚಿತ ಕೊಡುಗೆಗಳನ್ನು “ದಿವಾಳಿ ಕೊಡುಗೆ”ಗಳೆಂದು ಟೀಕಿಸಿ, ಇದು ದೇಶದ ಆರ್ಥಿಕತೆಯನ್ನು ನಾಶಪಡಿಸುವುದೆಂಬ ಅಗ್ಗದ ಹೇಳಿಕೆ ನೀಡಿದರು. ಈಗ “ಗ್ಯಾರಂಟಿ” ಎಂಬ ಬಿಜೆಪಿಯವರು ಪದವನ್ನೇ ಚೌರ್ಯ ಮಾಡಿದ್ದಾರೆ!

ಅರಾಜಕವಾದ, ಮೇಲ್ಜಾತಿ ಪ್ರಾಬಲ್ಯದ, ದಲಿತರು ಮತ್ತು ಮುಸ್ಲಿಮರ ಮೇಲಿನ ದೌರ್ಜನ್ಯದ, ಪೊಲೀಸ್ ರಾಜ್ಯಗಳಲ್ಲಿ ಅಭಿವೃದ್ಧಿ ನಡೆಯುತ್ತಿದೆ ಎಂದು ವಿದೇಶಗಳ ಕಾಮಗಾರಿಗಳ ಚಿತ್ರ ಹಾಕಿ ತಮ್ಮ ಸಾಧನೆ ಎಂದು ಹೇಳುತ್ತಾ ಸಾವಿರಾರು ಕೋಟಿ ರೂ. ವೆಚ್ಚದ ಜಾಹೀರಾತುಗಳು, ಮಾರಿಹೋದ ಕೊಳಕು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಬಾಡಿಗೆ ಭಾಷಣಕಾರರು ಸೃಷ್ಟಿಸಿದ ಟೊಳ್ಳು “ಗುಜರಾತ್ ಮಾಡೆಲ್”, “ಯುಪಿ ಮಾಡೆಲ್” ಇತ್ಯಾದಿಗಳ ಜಾಗದಲ್ಲಿ ಜನಪರ “ಕರ್ನಾಟಕ ಮಾಡೆಲ್” ಜನಪ್ರಿಯವಾಗುತ್ತಿರುವುದು ಬಿಜೆಪಿಯಲ್ಲಿ ಆತಂಕ ಉಂಟುಮಾಡಿದೆ ಎಂಬುದು ಅದರ ಯದ್ವಾತದ್ವಾ ಪ್ರತಿಕ್ರಿಯೆಗಳಿಂದಲೇ ಗೊತ್ತಾಗುತ್ತದೆ.

ಕರ್ನಾಟಕದಲ್ಲಿ ಬಿಜೆಪಿ ನಾಯಕರು ಕೀಳುಮಟ್ಟದ ಟೀಕೆಯನ್ನು ಮಾಡುತ್ತಲೇ ಇದ್ದಾರೆ. ದೇಶದಲ್ಲಿ ಪ್ರತಿಯೊಂದು ವಸ್ತುವನ್ನು ಕೊಳ್ಳುವಾಗಲೂ, ಪ್ರತೀ ಸೇವೆಯನ್ನು ಪಡೆಯುವಾಗಲೂ ಜನರು ತೆರಿಗೆ ಕಟ್ಟುತ್ತಾರೆ ಎಂಬುದನ್ನು ಮರೆತ- ಸರಕಾರದಿಂದ ಅಗ್ಗದ ಬೆಲೆಗೆ ಸಾವಿರಾರು ಎಕರೆ ಜಮೀನು, ಸರಕಾರಿ ಖರ್ಚಿನಲ್ಲಿ ಮೂಲ ಸೌಕರ್ಯ, ತೆರಿಗೆ ಸಹಿತ ಹಲವು ವಿನಾಯಿತಿ ಪಡೆದ ಬಹುರಾಷ್ಟ್ರೀಯ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥ- ತಾವು ಕಟ್ಟುವ ತೆರಿಗೆ ಹಣವನ್ನು ಬಡವರಿಗೆ ನೀಡಬಾರದು ಎಂಬರ್ಥದ ಹೇಳಿಕೆ ನೀಡಿ, ಜನರ ಕೋಪಕ್ಕೆ ಗುರಿಯಾದ. ಹಣ ಎಲ್ಲಿಂದ ತರುತ್ತೀರಿ ಎಂಬುದರಿಂದ ಹಿಡಿದು, ದೇಶ ದಿವಾಳಿಯಾಗುತ್ತದೆ, ಆರ್ಥಿಕತೆ ನಾಶವಾಗುತ್ತವೆ ಎಂಬುದು ಇವರ ಕೂಗು.

ಹಲವಾರು ವಂಚಕ ಉದ್ಯಮಿಗಳು (ಬಹುತೇಕ ಪ್ರಧಾನಿ ಮತ್ತು ಗೃಹ ಸಚಿವರ ರಾಜ್ಯದವರು) ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ಲಕ್ಷಾಂತರ ಕೋಟಿ ರೂ. ವಂಚಿಸಿ ದೇಶಬಿಟ್ಟು ಓಡಿದಾಗ, ಸರಕಾರದ ಒಲವು ಪಡೆದಿರುವ ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಮನ್ನಾ ಮಾಡಿದಾಗ, ಅಥವಾ ಅದಾನಿ ಸಂಸ್ಥೆಗಳು ಶೇರುದಾರರಿಗೆ ಸಾವಿರಾರು ಕೋಟಿ ನಷ್ಟ ಉಂಟುಮಾಡಿದಾಗ, ಲೆಕ್ಕವೇ ಕೊಡದ “ಪಿಎಂ ಕೇರ್ಸ್” ಮತ್ತು ಪಕ್ಷಕ್ಕೆ “ಚುನಾವಣಾ ಬಾಂಡ್”ಗಳಿಂದ ಹಲವು ಸಾವಿರ ಕೋಟಿ ದೇಣಿಗೆ ಪಡೆದಾಗ- ತಲಾ ೪,೨೦೦ ಕೋಟಿ ರೂ. ವೆಚ್ಚದ ಎರಡು ಐಷಾರಾಮಿ ಬೋಯಿಂಗ್ ೭೭೭ ವಿಮಾನಗಳನ್ನು, ದುಬಾರಿ ವಿದೇಶಿ ಕಾರುಗಳನ್ನು ಸ್ವಂತ ಉಪಯೋಗಕ್ಕೆ ಹೊಂದಿರುವ, ದುಬಾರಿ ಸೂಟು, ಬೂಟುಗಳ ಐಷಾರಾಮಿ ಜೀವನ ನಡೆಸುತ್ತಿರುವ, ಸ್ವಂತ ಪ್ರಚಾರಕ್ಕೆ ಸಾವಿರಾರು ಕೋಟಿ ರೂ. ವ್ಯಯಿಸುತ್ತಿರುವ, ವಿಮಾನವೇ ಈ ತನಕ ಬಂದಿಳಿಯದ ಶಿವಮೊಗ್ಗದಂತಾ ವಿಮಾನ ನಿಲ್ದಾಣಗಳನ್ನು ಉದ್ಘಾಟಿಸಲು, ಯಕಶ್ಚಿತ್ ರೈಲುಗಳಿಗೆ ಬಾವುಟ ತೋರಿಸಲು ಕೋಟಿಗಟ್ಟಲೆ ತೆರಿಗೆ ಹಣವನ್ನು ಸ್ವಂತದ ಮತ್ತು ಪಕ್ಷದ ಪ್ರಚಾರಕ್ಕೆ ಬಳಸುವ ಪ್ರಧಾನಿಯ ದುಂದು ವೆಚ್ಚದಿಂದ ದೇಶವಾಗಲೀ, ಆರ್ಥಿಕತೆಯಾಗಲಿ ದಿವಾಳಿಯಾಗಲಿಲ್ಲ. ಒಂದು ವಿಮಾನದ ವೆಚ್ಚದಲ್ಲಿ ಇಡೀ ಒಂದು ವರ್ಷ ರಾಜ್ಯದ ಮಹಿಳೆಯರು ಉಚಿತ ಬಸ್ (ಪ್ರಧಾನಿಯಂತೆ ಐಷಾರಾಮಿ ಅಲ್ಲ) ಪ್ರಯಾಣ ಮಾಡಿದರೆ, ಬಡವರು ಸವಲತ್ತು ಪಡೆದರೆ ದೇಶ ದಿವಾಳಿಯಾಗುತ್ತದೆ! ಇದೇ ಬಿಜೆಪಿಯ ವಂಚಕ ಆರ್ಥಿಕ ಸಿದ್ಧಾಂತ!

ಅವರ ಪ್ರಶ್ನೆ: ಹಣ ಎಲ್ಲಿಂದ ಬರುತ್ತದೆ? ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಆದಾಯ ಮತ್ತು ತೆರಿಗೆ ಸಂಗ್ರಹ ಇರುವ ರಾಜ್ಯಗಳಲ್ಲಿ ಕರ್ನಾಟಕ ಇದೆ. ಇಲ್ಲಿ – ದಕ್ಷಿಣ ರಾಜ್ಯಗಳು, ಮಹಾರಾಷ್ಟ್ರ, ಪಂಜಾಬ್ ಮುಂತಾದ ಅತ್ಯಂತ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಕೇಂದ್ರಕ್ಕೆ ಸಲ್ಲಿಸುವ ರಾಜ್ಯಗಳ ಕಾನೂನುಬದ್ಧ ಪಾಲು ಮರಳಿಸದೆ, ಬಿಜೆಪಿ ಆಡಳಿತವಿರುವ ಕಡಿಮೆ ತೆರಿಗೆ ಸಂಗ್ರಹಿಸುವ ಬಿಹಾರ, ಉತ್ತರಪ್ರದೇಶದಂತ ರಾಜ್ಮಗಳಿಗೆ ಹೆಚ್ಚು ಪಾಲು ನೀಡುವ ದುಷ್ಟ ಸಂಚಿನ ಬಲಿಪಶುಗಳಲ್ಲಿ ಕರ್ನಾಟಕವೂ ಒಂದು. (ಕೆಲವರ್ಷಗಳಿಂದ ಅಂಕಿಅಂಶಗಳನ್ನೇ ಸರಿಯಾಗಿ ಇಡದ, ಕಡ್ಡಾಯ ದಶವಾರ್ಷಿಕ ಜನಗಣತಿಯನ್ನೂ ನಡೆಸದ, ಅಂಕಿಆಂಶ ಸಚಿವರು ನಿದ್ದೆ ಮಾಡುತ್ತಿರುವ ಸರಕಾರದಿಂದ ನಿಖರ ಅಂಕಿಅಂಶಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ.)

ಹೀಗಿರುವಾಗ, ಈ ಜನಪರ ಕಾರ್ಯಕ್ರಮಗಳನ್ನು ಅಸಹನೆಯಿಂದ ವಿರೋಧಿಸುತ್ತಿರುವವರು, ಗೊಂದಲ ಸೃಷ್ಟಿಸುತ್ತಿರುವವರು, ಅವಹೇಳನ ಮಾಡುತ್ತಿರುವವರು ಯಾರು? ಹೀಗೆ ಮಾಡುವವರು- ಬಡವರು ಬಡವರಾಗಿಯೇ ಉಳಿಯಬೇಕೆಂದು, ತಮ್ಮ ಚಾಕರಿ ಮಾಡುತ್ತಲೇ ಇರಬೇಕೆಂದು ಬಯಸುವ ಮೇಲ್ವರ್ಗದವರು ಮತ್ತು ಮೂರು ಚಿಲ್ಲರೆ ಪರ್ಸೆಂಟ್ ಇದ್ದರೂ- ಮೊಗಲರಿರಲಿ, ಬ್ರಿಟಿಷರಿರಲಿ ಅಥವಾ ಈಗಲೂ ಅಧಿಕಾರದಲ್ಲಿ, ಆಡಳಿತದಲ್ಲಿ ಬಹುದೊಡ್ಡ ಪಾಲನ್ನು ಆಕ್ರಮಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿದ್ದರೂ ಇದೀಗ ತಮ್ಮ ಸಂಖ್ಯೆ ಮೀರಿದ ಹತ್ತು ಶೇಕಡಾ ಮೀಸಲಾತಿಯನ್ನು ಚಪ್ಪರಿಸುತ್ತಿರುವವರು, ಸಾವಿರಾರು ವರ್ಷಗಳಿಂದ ಧರ್ಮದ ಹೆಸರಲ್ಲಿ ಜನರನ್ನೂ, ರಾಜರನ್ನೂ ನಿಯಂತ್ರಿಸುತ್ತಾ ಅಥವಾ ಅವರ ಪದತಲದಲ್ಲಿ ತಲೆಯಿಟ್ಟು ಹೊಗಳಿ ಸಾವಿರಾರು ಎಕರೆ ಜಮೀನಿನ ಉಂಬಳಿ, ದೇವಸ್ಥಾನಗಳಂತಾ ಉದ್ದಿಮೆಗಳನ್ನು ಪಡೆದವರು; ಮೃಷ್ಟಾನ್ನ ಭೋಜನವನ್ನು ಬಿಟ್ಟಿಯಾಗಿ ಉಣ್ಣುವುದಕ್ಕೂ ಗೋದಾನ, ಭೂದಾನ, ಸುವರ್ಣದಾನ ಇತ್ಯಾದಿ ದಕ್ಷಿಣೆ ಪಡೆದವರು, ಬಹುಸಂಖ್ಯಾತರನ್ನು ವಿದ್ಯೆಯಿಂದ ದೂರವಿಟ್ಟವರು, ಅಧಿಕಾರದ ಲಾಲಸೆಯಿಂದ ಅವರ ಜೊತೆಗೆ ಸೇರಿದವರು, ಅವರು ಧರ್ಮದ ಹೆಸರಲ್ಲಿ ರೂಪಿಸಿರುವ ರಾಜಕೀಯ ಸಂಘಟನೆಗಳು ಮತ್ತು ಪಕ್ಷಗಳಿಗೆ- ಅದೇ ತಾರತಮ್ಯದ ಧರ್ಮದ ಹೆಸರಿನಲ್ಲಿ ಪರಂಪರಾಗತ ಗುಲಾಮರಾಗಿರಲು ಬಯಸುವವರು ಎಂಬುದನ್ನು ತಿಳಿದುಕೊಂಡು, ಯಾವತ್ತೂ ನೆನಪಿಡೋಣ.

ವಧು ವರರ ಹೆಚ್ ಐ ವಿ ಪರೀಕ್ಷೆಗೆ ಅಸಡ್ಡೆ ಸಲ್ಲ
ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.

ಮಾನವ ಸಂಘ ಜೀವಿ. ಹಾಗೆಯೇ ಮದುವೆ ಎಂಬ ಸಾಮಾಜಿಕ ಬಂಧನದ ಮೂಲಕವೇ ಮನುಷ್ಯ ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸಿಕೊಳ್ಳಲು ಸಮಾಜ ಅವಕಾಶ ನೀಡಿದೆ. ಕದ್ದು ತಿನ್ನುವ ಹಣ್ಣೇ ರುಚಿ ಎನ್ನುವಂತೆ ಕೆಲವರು ಲೈಂಗಿಕ ತೃಪ್ತಿಗಾಗಿ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ. ‌

ತೃತೀಯ ಲಿಂಗಿಗಳಲ್ಲಿ‌ ಕೆಲವರು ಸೇರಿದಂತೆ ವೇಶ್ಯಾವಾಟಿಕೆಗಳು ಈ ನಿಟ್ಟಿನಲ್ಲಿ ಲೈಂಗಿಕ ಹಿತಾಸಕ್ತಿ ಪೂರೈಕೆ ಕಾರ್ಯವನ್ನು ನಡೆಸಿಕೊಂಡು ಬರುತ್ತಾರೆ. ಈ ಕಾರಣಗಳಿಗಾಗಿಯೇ ಲೈಂಗಿಕ ರೋಗಗಳು ಮನುಕುಲದ ಬೆನ್ನು ಬಿಡದಂತೆ ಕಾಡುತ್ತಲೇ ಬಂದಿವೆ. ಅವುಗಳಲ್ಲಿ ಏಡ್ಸ್ ಒಂದು ಮಹಾಮಾರಿ. ಮಹಾನಗರಗಳಲ್ಲಿ ವೇಶ್ಯಾವಾಟಿಕೆಗಳು ಇರುವ ಕೆಲವು ಏರಿಯಾಗಳೇ ಇವೆ. ಅವು ಇಂದಿಗೂ ಜೀವಂತ ಇವೆ. ರಾಜಮಹಾರಾಜರ ಕಾಲದಿಂದಲೂ ಸಹ ವೇಶ್ಯಾವಾಟಿಕೆಗಳು ಇದ್ದೇ ಇವೆ. ಹಾಗೆಯೇ ಲೈಂಗಿಕ ರೋಗಗಳು, ಗುಪ್ತ ರೋಗಗಳು ಸಹ ಇದ್ದೇ ಇವೆ.

ಚಿಕ್ಕ ವಯಸ್ಸಿನಲ್ಲಿಯೇ ಈ ಮಾರಕ ಲೈಂಗಿಕ ರೋಗಕ್ಕೆ ತುತ್ತಾದ ಯುವಜನತೆ ಬಹಳ ನೋವಿನ ಜೀವನ ನಡೆಸುತ್ತಿದೆ.

ಇನ್ನು ಕರ್ನಾಟಕದ ಅಂಕಿ ಸಂಖ್ಯೆ ಗಮನಿಸಿದರೆ ಬೆಳಗಾವಿಯಲ್ಲಿ ಮೂವತ್ತೆಂಟು ಸಾವಿರ ಮಂದಿಗೆ ಹೆಚ್ ಐವಿ ಪಾಸಿಟಿವ್ ಇದೆ. ಇವರು ನೊಂದಾಯಿತ ಏಡ್ಸ್ ರೋಗಿಗಳು. ಅಲ್ಲಿಯ ಒಟ್ಟು ಜನಸಂಖ್ಯೆ ಸುಮಾರು ೨೭ ಲಕ್ಷವಿದೆ. ಇವರಲ್ಲಿಯೇ ಇಪ್ಪತ್ತು ಸಾವಿರ ವಿಧವೆಯರಿದ್ದಾರೆ. ಇವರು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಸಹ ಇದ್ದು ಇವರ ಪತಿ ವಿವಾಹದ ಒಂದೆರಡು ವರ್ಷಗಳಲ್ಲಿ ಏಡ್ಸ್ ರೋಗದಿಂದಾಗೇ ತೀರಿಹೋಗಿದ್ದಾರೆ.

ಹೀಗೆ ಏಡ್ಸ್ ಹಬ್ಬಲು ಕಾರಣ ಅಸುರಕ್ಷಿತ ಲೈಂಗಿಕ ಸಂಪರ್ಕ. ಕಾಂಡೂಂ ಇಲ್ಲದೆಯೇ ಸೆಕ್ಸ್ ಮಾಡಬೇಕೆಂದು ಒತ್ತಾಯಿಸುವ ಕ್ಲೈಂಟ್ ಗಳು ಹೆಚ್ಚಿನ ಹಣದ ಆಮಿಶ ತೋರಿದ್ದರು ಎಂಬುದು ಹಲವಾರು ಏಡ್ಸ್ ರೋಗಿಗಳ ಅಳಲು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಂದು ವಿದ್ಯಾರ್ಥಿಗಳು ಏಡ್ಸ್ ಬಾಧಿತರಾಗುತ್ತಿದ್ದಾರೆ. ಪ್ರೀತಿ ಪ್ರೇಮ ಪ್ರಣಯ ಅಂತ ಏಡ್ಸ್ ರೋಗ ಪೀಡಿತರಾಗುತ್ತಿದೆ ಯುವಜನತೆ.

ಮದುವೆಗೆ ಮುಂಚೆ ವಧು ವರರ ಹೆಚ್ ಐ ವಿ ಪರೀಕ್ಷೆ ಕಡ್ಡಾಯವಾಗುವುದು ಯಾವಾಗಲೋ ಗೊತ್ತಿಲ್ಲ. ಆದರೆ ಹಿರಿಯರು ಮಾಡಿದ ಮದುವೆ ನಂಬಿ ನೂರಾರು ಯುವತಿಯರು ಏಡ್ಸ್ ಗೆ ಬಲಿಯಾಗಿದ್ದುಂಟು. ಇತ್ತ ಪತಿಯೂ ಇಲ್ಲ, ಜೊತೆಗೆ ಏಡ್ಸ್ ರೋಗವೂ ಹಬ್ಬಿ ದುರ್ಬಲರಾಗುವ ನವವಿವಾಹಿತೆಯರ ಸಂಖ್ಯೆ ಸಾವಿರಾರಿದೆ.

ಸಂಯಮ ಯುವಜನತೆಯ ಹಾಡಾಗಬೇಕು. ಆಗಲೇ ಅವರು ಆದರ್ಶಯುತ ಜೀವನ ನಡೆಸಲು ಅವಕಾಶ ಒದಗುತ್ತದೆ.

ಸಂಯಮದ‌ ಬದುಕಿಗಾಗಿ ನಮಗೆ ಆದರ್ಶಪ್ರಾಯವಾದ ಸ್ವಾಮಿ ವಿವೇಕಾನಂದರು ಕಸಲ್ಲ

ದೇಶ ಮೀರಿ ನಿಲ್ಲುವ ಸಾಧಕ. ಯುವ ಜನತೆ ಇವರ ಬದುಕನ್ನು ಹತ್ತಿರದಿಂದ ನೋಡಿ, ಗ್ರಹಿಸಿ ಓದಬೇಕು. ಆಗಲೇ ವೈಯಕ್ತಿಕ ಜೀವನದಲ್ಲಿ ಸಹ ಬದಲಾವಣೆ ಸಾಧ್ಯವಿದೆ.

ಮದುವೆಗೆ ಮುನ್ನ ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡದೆ ಸಂಯಮದಿಂದ ವರ್ತಿಸಿ ತಮ್ಮ ಯೌವನ ಮತ್ತು ಬದುಕನ್ನು ಶಕ್ತಿಯುತವಾಗಿ ಕಟ್ಟಿಕೊಳ್ಳಬೇಕಾದ ಹೊಣೆಗಾರಿಕೆ ಯುವಜನತೆಯ ಮೇಲಿದೆ.

ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.

ಏಡ್ಸ್ ಬಾಧಿತರಿಗೆ ಪ್ರೀತಿ‌ಪೂರ್ಣ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಅವರಿಗೂ ಬದುಕುವ ಅವಕಾಶ ಕಲ್ಪಿಸಿ ಕೊಡಬೇಕು. ಸರಿಯಾದ ಚಿಕಿತ್ಸೆ ನೀಡುವ ಮೂಲಕ ಆತ್ಮವಿಶ್ವಾಸ ಮೂಡಿಸಿ ಬದುಕಿನೆಡೆಗೆ ಸೆಳೆಯಬೇಕು.

ಏಡ್ಸ್ ಬಾಧಿತ ಇಬ್ಬರು ದಂಪತಿಗಳು ಧೈರ್ಯದಿಂದ ಸಾವನ್ನು ಎದುರಿಸಿ ಮೂವತ್ತು ವರ್ಷದ ದಾಂಪತ್ಯ ಜೀವನ ಪೂರೈಸಿದ್ದಾರೆ.‌‌ ಇವರನ್ನು ಕಂಡಾಗ ಸಮಸ್ಯೆ ಇರದ ಅದೆಷ್ಟೋ ಗಂಡ ಹೆಂಡಿರು ಅನವಶ್ಯಕ ಜೀವನ ನರಕ‌ ಮಾಡಿಕೊಂಡಿರುವುದು ನೆನಪಾಗುತ್ತದೆ. ಪರಸ್ಪರ ಸಂಗಾತಿ ಪ್ರೀತಿ, ಸಮಯಕ್ಕೆ ಸರಿಯಾದ ಔಷಧಿ ಸೇವನೆ, ಆರೋಗ್ಯಕರ ಅಭ್ಯಾಸಗಳು ಈ‌ ದಂಪತಿಯನ್ನು ಸಾವಿನ ದವಡೆಯಿಂದ ಪಾರಾಗಿಸಿವೆ ಎನ್ನಬಹುದು.

ಏಡ್ಸ್ ಬಾರದಂತೆ ತಡೆಯಬೇಕಾದ್ದು ಮೊದಲ ಕಾರ್ಯ, ಹೀಗಾಗಿ ವಿವಾಹವಾಗುವವರ ಏಡ್ಸ್ ನೆಗೆಟಿವ್ ವರದಿ‌ ಪಡೆಯುವುದು ಅತೀ ಅವಶ್ಯಕ. ಮುಂದೆ ರೋಗ ಇದ್ದವರು ಸರಿಯಾದ ಚಿಕಿತ್ಸೆ ಪಡೆದು ಆತ್ಮವಿಶ್ವಾಸದಿಂದ ದಿಟ್ಟ ಜೀವನ ನಡೆಸಬೇಕು.

ಲೇಖಕರು: ನಳಿನಾ ಚಿಕ್ಕಮಗಳೂರು

ಬಿದಿರು ಮೆಳೆಯೊಳಗೆ…
(ಈವರೆಗೆ…)

ಕೊನೆಗೂ ಒಲ್ಲದ ಮನಸಿನಿಂದಲೇ ಗಂಗೆಯ ಮದುವೆಗೆ ಒಪ್ಪಿಗೆ ನೀಡುತ್ತಾನೆ. ಮದುವೆಗೆ ಹಣ ಹೊಂದಿಸುವುದು ಕಷ್ಟವಾಗಿ ಮನೆಯ ಪ್ರೀತಿಯ ಹಸುವನ್ನು ಮಾರಬೇಕಾಗಿ ಬರುತ್ತದೆ. ಆಗ ಗಂಗೆಗೂ ಚಂದ್ರಹಾಸನಿಗೂ ಮಾತಿಗೆ ಮಾತು ಬೆಳೆದು ಆತ ಗಂಗೆಯ ಮೇಲೆ ಕೈ ಮಾಡುತ್ತಾನೆ. ತಕ್ಷಣವೇ ಪ್ರವೇಶಿಸಿದ ಅಮ್ಮ ಗಂಗೆಯ ಪರ ವಹಿಸಿ ಮಾತಾಡಿದಾಗ ಅಪ್ಪನ ನೆನಪುಗಳು ಲಕ್ಷ್ಮೀ ಯ ಹಿಂದಕ್ಕೋಡಿದವು. ಯಾರೀ ಲಕ್ಷ್ಮೀ ? ಓದಿ.. ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆ ಅಂಕಣದ ಐದನೆಯ ಕಂತು.

ಸಾಕು ಮಗಳು “ಲಕ್ಷ್ಮೀ” ಅವ್ವನ ಮಡಿಲು ಸೇರಿದಾಗ ಮೂರು ದಿನದ ಹಸುಳೆ. ಆಗ ಅವ್ವ ಎರಡನೇ ಮಗ ಗಿರಿಧರನ ತುಂಬು ಬಸುರಿ. ಹೆರಿಗೆ ಆಗಲೋ ಈಗಲೋ ಎನ್ನುವಂತಿದ್ದಳು. ಸಾಮಾನ್ಯವಾಗಿ ಪ್ರತಿ ದಿನ ಮುಸ್ಸಂಜೆ ಆ ಬೀದಿಯ ಹೆಂಗಸರೆಲ್ಲಾ ಮಾತಾಡಿಕೊಂಡು ಒಟ್ಟಿಗೆ ಮೈಲು ದೂರದ ಹೊಳೆಗೆ ಹೋಗಿ, ಬಟ್ಟೆ ಪಾತ್ರೆಯ ಕೆಲಸ ಮುಗಿಸಿ ನೀರು ಹೊತ್ತು  ತರುತ್ತಿದ್ದುದು ವಾಡಿಕೆ. ಆ ದಿನ ಪುಟ್ಟ ಚಂದ್ರಹಾಸ ಆಟವಾಡುತ್ತಾ ನೀರಿನ ಗಡಿಗೆ ಎಳೆದು ಬೀಳಿಸಿದ್ದರಿಂದಾಗಿ ಮನೆಯಲ್ಲಿ  ಕುಡಿಯಲು ಹನಿಯೂ ನೀರಿಲ್ಲದಂತಾಯ್ತು. ಅನಿವಾರ್ಯವಾಗಿ ಅವ್ವ ಆ ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನಲ್ಲೇ ನೀರು ತರಲೆಂದು ಬಿಂದಿಗೆ ಹಿಡಿದು ಒಬ್ಬಳೇ ಹೊಳೆಯ ಕಡೆ ನಡೆದಳು.

ಅಲ್ಲಿ ನೀರ ಶಬ್ದದ ಹೊರತಾಗಿ  ಒಂದು ನರ ಪಿಳ್ಳೆಯ ಸದ್ದು ಸುಳಿವೂ ಇರಲಿಲ್ಲ. ಹಳೇ ನಾರಿಪುರದ ಜನ, ಮಧ್ಯಾಹ್ನದ ಹೊತ್ತು ಅದರಲ್ಲೂ ರಣ ಬಿಸಿಲು ರಾಚುವ ಸಮಯದಲ್ಲಿ ನೀರೊಳೆಯ ಹಾದಿಯಲ್ಲಿ ಕೆಟ್ಟ ಗಾಳಿಯ ಸುಳಿದಾಟವಿರುತ್ತದೆ ಎಂದು ಬಲವಾಗಿ ನಂಬಿದ್ದರು. ಹಾಗಾಗಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನಾಗಲಿ, ತುಂಬು ಬಸುರಿ, ಬಾಣಂತಿಯರನ್ನಾಗಲಿ ಆ ಸಮಯದಲ್ಲಿ ಹೊಳೆಯ ಕಡೆ ಸುಳಿಯದಂತೆ ನೋಡಿಕೊಳ್ಳುತ್ತಿದ್ದರು.

ಈ ಮನೆಯಲ್ಲೋ ಒಳಗಿನ ಎಲ್ಲಾ ಕೆಲಸವನ್ನು ಅವ್ವನೆ ನಿಭಾಯಿಸ ಬೇಕಿತ್ತು. ಪಕ್ಕದ ಮನೆಯಲ್ಲಿಯೇ ಅತ್ತೆ, ಮಾವ, ನಾದಿನಿ, ನಾದಿನಿಯ ಮಕ್ಕಳಿದ್ದರೂ ಕೂಡ ಅವರೊಂದಿಗಿನ ಸಂಬಂಧವೂ ಒಡೆದು ಹೋಗಿತ್ತು. ಇನ್ನು ಅಪ್ಪ ಬೆಳಿಗ್ಗೆ ರೊಟ್ಟಿ ಕಟ್ಟಿಕೊಂಡು ಹೊಲ ಹೊಕ್ಕರೆ ಬರುತ್ತಿದ್ದುದು ಸೂರ್ಯ ಮುಳುಗುವ ಹೊತ್ತಿಗೆ. ಹಾಗಾಗಿ ಅವ್ವ, ಎರಡು ವರ್ಷದ ಹಸುಳೆ ಚಂದ್ರಹಾಸನನ್ನು ಎದುರು ಮನೆಯ ತಿಮ್ಮಜ್ಜಿ ಕೈಗಿಟ್ಟು ಹೊಳೆಗೆ ಬಂದಿದ್ದಳು. ಆ ನದಿಯ ನೀರವತೆ ಅವ್ವನನ್ನು ತುಸು ಕನಲಿಸಿತಾದರು, ಬಿಸಿಲ ಬೇಗೆಯಲ್ಲಿ ನಡೆದು ಬಂದ ಅವ್ವನ ಕಾಲು ನೀರಿಗೆ ತಾಕಿದ ಕೂಡಲೇ ಅವಳಲ್ಲಿ ಹೊಸ ಜೀವ ಸಂಚಾರವಾದಂತಾಯಿತು. ನಿಧಾನವಾಗಿ ಕೈಕಾಲು ಮುಖ ತೊಳೆದು, ಬಾಯಿ ಮುಕ್ಕಳಿಸಿ ಉಗಿದು, ಎರಡು ಬೊಗಸೆ ನೀರು ಕುಡಿದು ದೇಹ ತಂಪಾಗಿಸಿ ಕೊಂಡಳು. ತಾಮ್ರದ ಬಿಂದಿಗೆಯನ್ನು ಹುಣಸೆ ಹಾಕಿ ತಿಕ್ಕಿ ತೊಳೆದು ಇನ್ನಷ್ಟು ತಳತಳಿಸುವಂತೆ ಮಾಡಿದಳು.ಇನ್ನೇನು ನೀರು ಮೊಗೆಯಬೇಕೆಂದು ಬಗ್ಗಿದಳು. ಅಷ್ಟರಲ್ಲಿ ಪಕ್ಕದ ಬಿದಿರು ಮೆಳೆಯಿಂದ ಚಿಟ್ಟನೆ ಚೀರಿದ ಹಸುಗೂಸಿನ ದನಿ ಮಿಂಚಿನಂತೆ ಅವ್ವನ ಕಿವಿಗೆ ಬಡಿಯಿತು. ಕ್ಷಣ ಅವ್ವನ ಎದೆ ಝಲ್ ಎಂದಿತ್ತು. ಸುಧಾರಿಸಿಕೊಂಡು ಸುತ್ತಲೂ ನೋಡಿದಳು. ಯಾರು ಕಾಣಲಿಲ್ಲ. ಮತ್ತೆ ಮತ್ತೆ ಉಸಿರು ಕಟ್ಟಿ ಅಳುವ ಮಗುವಿನ ದನಿ ಜೋರಾಗುತ್ತಲೇ ಇತ್ತು. ಅವ್ವ ಧೈರ್ಯ ಮಾಡಿ ಬಿಂದಿಗೆಯನ್ನು ಒಂದು ಬದಿಗೆ ಕುಕ್ಕಿ ಬಿದಿರು ಮೆಳೆ ಕಡೆಗೆ ಹೆಜ್ಜೆ ಹಾಕಿದಳು. ಅಲ್ಲಿ ಅನತಿ ದೂರದಲ್ಲಿ ತಲೆಗೆ ಮುಸುಕು ಹಾಕಿ ಕುಳಿತಿದ್ದ ಹೆಣ್ಣೊಬ್ಬಳ ಬೆನ್ನು ಕಾಣಿಸಿತು. ಅವ್ವನಿಗೆ ಒಳಗೊಳಗೆ ಅಂಜಿಕೆ. ಇದು ನಿಜಕ್ಕೂ ಹೆಂಗಸೋ ಅಥವಾ ಹೆಣ್ಣಿನ ರೂಪದ ದಯ್ಯವೋ ಎಂದು. ಅನುಮಾನಿಸುತ್ತಲೇ ಆ ಮಗುವಿನ ಅಳು  ಕೇಳಲಾರದೆ ಹತ್ತಿರ ಹೋದಳು. ಆ ಹೆಂಗಸನ್ನು ನೋಡಿ ಅವ್ವ ಕ್ಷಣ ಗರಬಡಿದವಳಂತಾದಳು. ನೋಡಲು ಕೆಂಪಗೆ ಲಕ್ಷಣವಾಗಿದ್ದ ಆ ಹೆಂಗಸು ಕಣ್ಣೀರು ಸುರಿಸುತ್ತಾ, ಆ ಎಳೇ ಹಸುಳೆಯ ಕತ್ತನ್ನು ಬಲವಾಗಿ ಹಿಸುಕ ತೊಡಗಿದ್ದಳು.

ಬಿರುಸಾಗಿಯೇ ಆ ಹೆಂಗಸಿನ ಬೆನ್ನಿಗೆ  ಗುದ್ದಿದ ಅವ್ವ ಅವಳ ಕೈಯಿಂದ ಕೆಂಪಾಗಿ ಗುಂಡು ಗುಂಡಾಗಿದ್ದ ಆ ಮೂರು ದಿನದ ಹಸುಳೆಯನ್ನು ಕಸಿದು ಕೊಂಡಳು. ಉಸಿರು ತಿರುಗಿಸಿ ಕೊಳ್ಳಲಾರದೆ ಒದ್ದಾಡುತ್ತಿದ್ದ ಆ ಹಸುಳೆಯ ನೆತ್ತಿ ಉರುಬಿ ಎದೆ, ಬೆನ್ನು, ಅಂಗಾಲುಗಳನ್ನು ಬಿರುಸಾಗಿ ಉಜ್ಜಿದಳು. ಸ್ವಲ್ಪ ಸಮಯದ ನಂತರ ಮಗು ಸುಧಾರಿಸಿಕೊಂಡಿತು. ತಲೆತಗ್ಗಿಸಿ ಕುಳಿತಿದ್ದ ಆ ಹೆಂಗಸಿನ ಕೂದಲು ಜಗ್ಗಿ ಮೇಲೆತ್ತಿದಳು. “ನಿನಗೇನ್ ಬಂದದೆ ಮುಂಡೆದೆ ದೊಡ್ರೋಗ. ಈ ಅರಿದ್ ಮಗಿನ್ ಜೀವ ತೆಗಿತಿದಿಯಲ್ಲಾ. ನೀನೇನು ಮನ್ಸೆನೋ ರಾಕ್ಷಸಿಯೋ” ಎಂದು ಜೋರು ಮಾಡಿದಳು. ಅವ್ವನ ಕಾಲಿನ ಮೇಲೆ ಬೋರಲು ಬಿದ್ದು ಗೊಳೋ ಎಂದು ಅಳತೊಡಗಿದಳು ಆ ಹೆಂಗಸು. “ಈ ಮಗಿನ್ ಎತ್ಕೊಂಡು ನಮ್ಮ ಹಟ್ಟಿಗೋದ್ರೆ, ನಮ್ಮ ಕುಲದವರು ನನ್ನ ಕೊಂದುಬಿಡ್ತಾರೆ ಕಣವ್ವ. ನಿನ್ನ ದಮ್ಮಯ್ಯ ನನ್ನ್ ಹಿಂದು ಮುಂದು ಏನು ಕೇಳ್ಬೇಡ ಎಂದು ಗೋಗರೆದುಕೊಂಡಳು. ಹೆತ್ತ ಮೂರು ದಿನದಿಂದ ಈ ಮಗಿನ ಏನು ಮಾಡಬೇಕು ಅಂತ ಗೊತ್ತಾಗದೆ ಒದ್ದಾಡಿ ಒದ್ದಾಡಿ ಇವತ್ತು ಒಂದು ನಿರ್ಧಾರಕ್ಕೆ ಬಂದು ಇಲ್ಲಿಗೆ ಬಂದೆ ಎಂದಳು. ತಿಮ್ಮಜ್ಜಿ ಬಳಿ ಮಗುವನ್ನು ಬಿಟ್ಟು ಬಂದಿದ್ದ ಅವ್ವನೂ ಮನೆ ಸೇರುವ ಧಾವಂತದಲ್ಲಿದ್ದಳು. ಹಾಗಾಗಿ ಯಾವುದನ್ನು ಕೆದಕಿ ಕೇಳುವ ಉತ್ಸಾಹವೂ ಅವಳಿಗಿರಲಿಲ್ಲ. “ಸರಿ ಈ ಮಗಿನ ಚಿಂತೆ ಬುಟ್ಟು ಎಲ್ಲಾದ್ರು  ಬದಿಕೋ ಹೋಗು. ಇದಿನ್ನು ನನ್ನ ಕೂಸು ಇನ್ಯಾವತ್ತೂ ಹುಡಿಕ್ಕೊಂಡು  ಬರಕೂಡ್ದು ಗೊತ್ತಾಯ್ತಾ” ಎಂದು ಹೇಳಿ ತಲೆಯ ಮೇಲೆ ತುಂಬಿದ ಬಿಂದಿಗೆ ಹೊತ್ತು  ಮಡಿಲಿಗೆ ಮಗುವನ್ನು ಕಟ್ಟಿಕೊಂಡು ಮನೆಯ ದಾರಿ ಹಿಡಿದಳು.

ತಮ್ಮ ತಮ್ಮ ಮನೆಯ ಬಾಗಿಲಲ್ಲಿ ಕುಳಿತು, ನಿಂತು, ಅವರಿವರ ಸುದ್ದಿ ಸಮಾಚಾರಗಳಲ್ಲಿ ಮುಳುಗಿ ಹೋಗಿದ್ದ ಹೆಂಗಸರು ತಲೆಯ ಮೇಲೆ ತುಂಬಿದ್ದ ಬಿಂದಿಗೆ, ಮಡಿಲಲ್ಲಿ ರಚ್ಚೆ ಹಿಡಿದು ಅಳುತ್ತಿರುವ ಹಸು ಗೂಸು, ತುಂಬಿ ನಿಂತಿದ್ದ ಬಸುರು ಹೊತ್ತು  ನಿಧಾನವಾಗಿ ನಡೆದು ಬರುತ್ತಿದ್ದ ಅವ್ವನನ್ನು ಕಂಡು ದಂಗು ಬಡಿದಂತಾದರು. ದಂಡುಗಟ್ಟಿ ಅವ್ವನ ಬಳಿ ಓಡಿ ಬಂದರು. ಹೆರಿಗೆ ಆಗೋಯ್ತ, ಎಲ್ಲಾಯಿತು, ಹೇಗಾಯ್ತು, ಜೊತೆಗೆ ಯಾರಿದ್ರು, ಹೊಟ್ಟೆ ಯಾಕಿಳ್ದಿಲ್ಲ, ಅದು ತುಂಬಿದ ಬಿಂದಿಗೆ ಹೊತ್ಕೊಂಡು ಹ್ಯೆಂಗ್ ನಡಿತಿದ್ದಿ…?   ಹೀಗೆ ಒಂದರ ಮೇಲೊಂದು ಪ್ರಶ್ನೆಯ ಸುರಿ ಮಳೆಯನ್ನೇ ಗರೆದರು. ಏದುಸಿರು ಬಿಡುತ್ತಿದ್ದ ಅವ್ವ ಅವರೊಂದಿಗೆ ಮನೆ ಸೇರಿ ನಡೆದ ಘಟನೆಯನ್ನೆಲ್ಲಾ ಸವಿಸ್ತಾರವಾಗಿ ಹೇಳಿದಳು. ಇಡೀ ಕತೆಯನ್ನು ಮೈ ಎಲ್ಲಾ ಕಿವಿಯಾಗಿ  ಕೇಳಿಸಿಕೊಂಡ ಆ ಹೆಂಗಸರು  ಇನ್ನಷ್ಟು ದಿನ ಬಾಯಾಡಲು ಹೊಸ ಸುದ್ದಿ ಸಿಕ್ಕ ಸಂಭ್ರಮದಲ್ಲಿ ತಮ್ಮ ತಮ್ಮ ಮನೆ ಕಡೆ ನಡೆದರು.

(ಮುಂದುವರೆಯುವುದು..)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.