India Pakistan hockey – Peepal Media

ಬೊಗಸೆಗೆ ದಕ್ಕಿದ್ದು – 6 : ಭಾರತ-ಪಾಕ್ ಹಾಕಿ ; 1948ರ ಒಂದು ‘ಪ್ರೇಮಕತೆ’
ಇಂದು ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆಯಲಾಗುತ್ತಿರುವ ಈ ಕಾಲದಲ್ಲಿ ರಾಮನನ್ನೂ ರಹೀಮನನ್ನೂ ಬೇರೆಬೇರೆ ಮಾಡಲಾಗುತ್ತಿದೆ. ಅದರ ನಡುವೆಯೇ ಎರಡೂ ಧರ್ಮಗಳ ನಡುವಿನ ಸಾಮರಸ್ಯದ ಕಥೆಯೊಂದನ್ನು ನಮ್ಮ ನಡುವೆ ಬಿಚ್ಚಿಟ್ಟಿದ್ದಾರೆ ಹಿರಿಯ ಲೇಖಕರಾದ ನಿಖಿಲ್ ಕೋಲ್ಪೆಯವರು..

ಭಾರತ-ಪಾಕ್, ಹಿಂದೂ-ಮುಸ್ಲಿಂ ಎಂದು ದ್ವೇಷವನ್ನೇ ಬಿತ್ತುತ್ತಾ ಭಾರತದ ಜನತೆಯನ್ನು ದುರುದ್ದೇಶ ಸಾಧನೆಗಾಗಿ ಒಡೆಯಲಾಗುತ್ತಿರುವ, ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎನ್ನಲಾಗುತ್ತಿರುವ ಈ ಕಾಲದಲ್ಲಿ ಇದೊಂದು ಕಣ್ಣು ಮಂಜಾಗಿಸುವ ಒಂದು ರೀತಿಯ ಪ್ರೇಮದ, ಗೆಳೆತನದ, ಸಹೋದರತ್ವದ ಕತೆ. ಜೊತೆಗೆಯೇ ದೇಶ ವಿಭಜನೆಯ ಹಿಂಸೆ, ಕ್ರೌರ್ಯ, ಅಮಾನವೀಯತೆ ಮತ್ತು ನೋವನ್ನೂ ಜೊತೆಗೆಯೇ ತೋರಿಸುತ್ತದೆ.

1947ರಲ್ಲಿ ದೇಶ ವಿಭಜನೆಗೊಂಡು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು “ಎದುರಾಳಿ” ದೇಶಗಳು ಅಸ್ತಿತ್ವಕ್ಕೆ ಬಂದಿದ್ದಾಗ, 1948ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಚಿನ್ನ ಗೆದ್ದಿತ್ತು. ಹಿಂದೆ ಒಂದಾಗಿ ಆಡುತ್ತಿದ್ದ ಭಾರತ-ಪಾಕಿಸ್ತಾನಗಳ ಆಟಗಾರರು ಎದುರಾಳಿಗಳಾಗಿದ್ದರು. ಒಡೆದದ್ದು ದೇಶ, ತಂಡಗಳು ಮಾತ್ರವೇ ಆಗಿರಲಿಲ್ಲ. ಕೂಡಿ ಆಡುತ್ತಿದ್ದ ಗೆಳೆಯರೇ ಒಡೆದುಹೋಗಿದ್ದರು.

1948ರ ಲಂಡನ್ ಒಲಿಂಪಿಕ್ಸ್ ಚಿನ್ನ ಗೆದ್ದ ಭಾರತೀಯ ಹಾಕಿ ತಂಡದ ಮತ್ತು 1952ರಲ್ಲಿ ಚಿನ್ನ ಗೆದ್ದ ಭಾರತೀಯ ಹಾಕಿ ತಂಡದ ಆಟಗಾರ ನಂದಿ ಸಿಂಗ್ ಅವರ ಮಗಳು ಬಾನಿ ಸಿಂಗ್ ಅವರು ಆ ಕಾಲದ ಕುರಿತು ಒಂದು ಸಾಕ್ಷ್ಯಚಿತ್ರ ನಿರ್ಮಿಸಿದ್ದು, ದೇಶದೊಂದಿಗೆಯೇ ಎರಡಾದ ಆಟಗಾರರ ಗೆಳೆತನವನ್ನೂ, ನೋವನ್ನೂ, ಹಂಬಲವನ್ನೂ ಅದು ಚಿತ್ರಿಸುತ್ತದೆ. ಬಾನಿ ಸಿಂಗ್ ಅವರ “ತಾಂಗ್/ಲಾಂಗಿಂಗ್” (ತಾಂಗ್ ಎಂದರೆ ಪಂಜಾಬಿಯಲ್ಲಿ ಹಂಬಲ ಅಥವಾ ತವಕ) ಎಂಬ ಚಿತ್ರವು ಈಗ ಕಾಲವಾಗಿರುವ ಮೂವರು ಆಟಗಾರರಾದ ಕೇಶವ ದತ್, ಶಾರೂಖ್ ಮತ್ತು ನಂದಿ ಸಿಂಗ್ ಅವರ ಜೀವನವನ್ನು ಮತ್ತೆ ಜೊತೆಗೆ ಬೆಸೆಯುತ್ತದೆ. ಈ ಮೂವರ ಕತೆಯು ಹಿಂದೂ, ಮುಸ್ಲಿಂ, ಸಿಕ್ಖ್ ಗೆಳೆಯರ ಆ ಕಾಲದ ತಳಮಳವನ್ನು ಹೇಳುತ್ತದೆ. ನಾನು ಈ ಚಿತ್ರವನ್ನು ಪೂರ್ತಿಯಾಗಿ ನೋಡಲು ಈ ತನಕ ಸಾಧ್ಯವಾಗಿಲ್ಲ, ನೋಡಿದ ಭಾಗವಷ್ಟೇ ಮನಕಲಕಿದುದರಿಂದ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಈ ಚಿತ್ರಕ್ಕಾಗಿ ಬಾನಿ ಸಿಂಗ್ ಆ ತಂಡದ ಸದಸ್ಯರಾಗಿದ್ದ ಶಾರೂಖ್ ಅವರನ್ನು ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗುತ್ತಾರೆ. ಯಾಕೆಂದರೆ, ಶಾರೂಖ್ ವಿಭಜನೆಯ ನಂತರದ ರೌರವ ಹಿಂಸಾಚಾರದ ವೇಳೆ ಈ ತಂಡದ ಗೆಳೆಯ ಮತ್ತು ಲಾಹೋರ್ ನಿವಾಸಿಯೇ ಆಗಿದ್ದ ಕೇಶವ ದತ್ ಸೇರಿದಂತೆ ಹಲವಾರು ಹಿಂದೂ ಮತ್ತು ಸಿಕ್ಖರ ಜೀವ ಉಳಿಸಿ ಭಾರತಕ್ಕೆ ಕಳುಹಿಸಿದವರು.

ಇದನ್ನೂ ಓದಿ : ಆ ಬಾನು ಈ ಚುಕ್ಕಿ

ಹಿಂದೆ ಲಾಹೋರ್ ನಿವಾಸಿಯಾಗಿದ್ದ ಶೆಹಝಾದ ಸೈಯದ್ ಶಾರೂಖ್, ಅವಿಭಜಿತ ಹಾಕಿ ತಂಡದ ಉಪನಾಯಕರಾಗಿದ್ದರು. ನಂತರ ಪಾಕಿಸ್ತಾನ ತಂಡದ ಉಪನಾಯಕರಾದರು. ಅವರು ತನ್ನ ಗೆಳೆಯ ಕೇಶವ ದತ್, 80 ವರ್ಷ ಪ್ರಾಯದಲ್ಲಿ ಕೋಲ್ಕತಾದಲ್ಲಿ ವಾಸವಾಗಿದ್ದು ತಿಳಿದು, ಅವರ ಚಿತ್ರ ನೋಡಿದಾಕ್ಷಣ ಭಾವನೆಗಳನ್ನು ತಾಳಲಾಗದೆ ಅತ್ತುಬಿಡುತ್ತಾರೆ.

“ಕೇಶವ ನನ್ನ ಪಂಜಾಬ್ ತಂಡದಲ್ಲಿ ಆಡುತ್ತಿದ್ದ. ಅವನಂತೆ ಕೆಲವರಿದ್ದರು.. ನಾನು ಕೇಶವನನ್ನು ತುಂಬಾ ಪ್ರೀತಿಸುತ್ತಿದ್ಧೆ. ಅವನೂ ನನ್ನನ್ನು ಪ್ರೀತಿಸುತ್ತಿದ್ದ. ವಿಭಜನೆಯು ಹಲವು ಕುಟುಂಬಗಳನ್ನು ಹಾಳು ಮಾಡಿತು” ಎಂದವರು ಗದ್ಗದಿಸುತ್ತಾರೆ. ತಾನು, ಕೇಶವ ದತ್ ಮತ್ತು ಅಮೀರ್ ಹಾಫ್‌ಲೈನಿನಲ್ಲಿ ಒಂದೇ ಸಾಲಿನಲ್ಲಿ ಅಕ್ಕಪಕ್ಕ ಆಡುತ್ತಿದ್ದುದನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಅವಿಭಜಿತ ಪಂಜಾಬ್ ಅಂದು ಪ್ರಪಂಚದಲ್ಲೇ ಅತ್ಯುತ್ತಮ ಹಾಕಿ ಆಟಗಾರರನ್ನು ಹೊಂದಿತ್ತು. ದೇಶ ವಿಭಜನೆಯ ಸುದ್ದಿ ಬಂದಾಗಲೇ ತಂಡದ ಒಳಗೆ ಒಂದು ರೀತಿಯ ಹೇಳಲಾರದ ಉದ್ವಿಗ್ನತೆ ಇತ್ತು. ಅಂದು ನಿಜವಾಗಿಯೂ ಧರ್ಮದ ನೆಲೆಯಲ್ಲಿ ತಂಡವನ್ನು ಪಾಲು ಹಾಕಲಾಗಿತ್ತು. ಭಾರತ-ಪಾಕಿಸ್ತಾನ ತಂಡಗಳನ್ನು ಹೆಸರಿಸಲಾಗಿತ್ತು.

“ರಾಜಕೀಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಸೂರ್ಯ ಮುಳುಗುತ್ತಿದ್ದಂತೆ, ಧಾರ್ಮಿಕ ಘೋಷಣೆಗಳು ಆರಂಭವಾಗಿ ಹೊತ್ತು ಕಳೆದಂತೆ ಜೋರುಜೋರಾಗಿ ಮೊಳಗುತ್ತಿದ್ದವು. ಆಗಾಗ ಫೈಯರಿಂಗ್ ನಡೆಯುತ್ತಿತ್ತು. ರಾತ್ರಿ ಮಲಗುವುದೇ ಕಷ್ಟವಾಗಿತ್ತು” ಎಂದು ಶಾರೂಖ್ ನೆನಪಿಸುತ್ತಾರೆ.

ಜೀವಭಯದಿಂದ ಕೇಶವ್ ದತ್ ಅವರು ತನ್ನ ತಂಡದ ಸದಸ್ಯ ಮತ್ತು ಲಾಹೋರ್ ಸರಕಾರಿ ಕಾಲೇಜಿನಲ್ಲಿ ತನ್ನ ಸಹಪಾಠಿಯೂ ಆಗಿದ್ದ ಶಾರೂಖ್‌ರಲ್ಲಿಗೆ ಹೋದರು. ಶಾರೂಖ್ ತನ್ನ ಮನೆಯಲ್ಲಿ ಹಲವಾರು ಹಿಂದೂಗಳು ಮತ್ತು ಸಿಕ್ಖರಿಗೆ ಆಶ್ರಯ ನೀಡಿದ್ದರು. ಅವರಲ್ಲಿ ಒಬ್ಬರೆಂದರೆ, ತಂಡದ ಇನ್ನೊಬ್ಬ ಸದಸ್ಯ ಬಲ್ಬೀರ್ ಸಿಂಗ್. ಅವರನ್ನು ಶಾರೂಖ್ ಉಪಾಯವಾಗಿ ಭಾರತಕ್ಕೆ ಕಳುಹಿಸಿದ್ದರು. ಗಲಭೆಗಳು ನಡೆಯುತ್ತಿದ್ದ ವೇಳೆ ಶಾರೂಖ್ ತನ್ನನ್ನು ಮಾವನ ಕಾರಿನಲ್ಲಿ ರೈಲು ನಿಲ್ದಾಣಕ್ಕೆ ಕೊಂಡೊಯ್ದು, ಟಿಕೇಟು ತೆಗೆದು, ರೈಲು ಹತ್ತಿಸಿ ಭಾರತಕ್ಕೆ ಕಳುಹಿಸಿದುದನ್ನು ಕೇಶವ ದತ್ ನೆನಪಿಸಿಕೊಳ್ಳುತ್ತಾರೆ.

“ಆ ದಿನಗಳಲ್ಲಿ ಕರುಣೆಯೇ ಇರಲಿಲ್ಲ. ಅವನು ಹಿಂದೂ, ಕೊಲ್ಲು. ಅವನು ಸಿಕ್ಖ್, ಕೊಲ್ಲು. ಟರ್ಬನ್‌ನಿಂದಾಗಿ ಸಿಖ್ಖರನ್ನು ಗುರುತಿಸುವುದು ಸುಲಭವಾಗಿತ್ತು. ಕೇಶವನನ್ನು ಗುರುತಿಸಲು ಕಷ್ಟ. ಅವನನ್ನು ಗುರುತಿಸಿದವರು ಅವನನ್ನು ಕೊಲ್ಲಬೇಕೆಂದಿದ್ದರು. ನಾನು ಸಬೂಬು ಹೇಳಿ ಕೊಲ್ಲಲು ಬಿಡಲಿಲ್ಲ. ರೈಲಿನಲ್ಲಿ ಕುಳ್ಳಿರಿಸಿ ಕಳಿಸಿದ ಮೇಲೆ ನಾನವನನ್ನು ನೋಡಿಲ್ಲ. ದಾರಿಯಲ್ಲಿ ಏನಾಯಿತೋ ಗೊತ್ತಿಲ್ಲ. ನಂತರ ನಾವು ಮಾತಾಡಿಯೇ ಇಲ್ಲ” ಆ ಬಳಿಕದ ಒಂದು ಸಂದರ್ಶನದಲ್ಲಿ ಹೇಳುತ್ತಾರೆ ಶಾರೂಖ್. ಭಾರತದಲ್ಲೂ ಪರಿಸ್ಥಿತಿ ಬೇರೆಯಾಗಿರಲಿಲ್ಲ.

ಇದಾದ ನಂತರ ಒಮ್ಮೆ ಪಾಕಿಸ್ತಾನದ ತಂಡ ಮುಂಬಯಿಗೆ ಬಂದಾಗ ಕೊನೆಯ ಬಾರಿಗೆ ಇವರಿಬ್ಬರು ಭೇಟಿ ಮಾಡಿದ್ದರು. ಲಾಹೋರಿಗೆ ಬರುವಂತೆ ಶಾರೂಖ್- ಕೇಶವ ದತ್‌ರನ್ನು ಕೇಳಿಕೊಂಡರು. ಆದರೆ, ಕೇಶವ ದತ್ ಒಪ್ಪಲಿಲ್ಲ.

“ಭಯದಿಂದೇನೂ ಅಲ್ಲ. ಅಲ್ಲಿ ಹೋಗಲು ಮನಸ್ಸಾಗಲೇ ಇಲ್ಲ. ನಂತರ ಲಾಹೋರಿನಿಂದ ಬಂದವರೂ ಅವನು ಬರಲು ಹೇಳಿದ್ದಾನೆ ಎಂಬ ಸಂದೇಶ ತಂದಿದ್ದರು. ಅವನು ಒಳ್ಳೆಯ ಗೆಳೆಯನಾಗಿದ್ದ. ಆ ಗೆಳೆತನ ಮುರಿದುಹೋಯಿತು. ಆದು ಮುರಿದದ್ದು ನಮ್ಮ ಇಚ್ಚೆಯಿಂದ ಅಲ್ಲವೇ ಅಲ್ಲ. ರಾಜಕೀಯ ಪರಿಸ್ಥಿತಿ ತೀರಾ ಕೆಟ್ಟು ಹೋಗಿತ್ತು” ಎನ್ನುತ್ತಾರೆ ಕೇಶವ ದತ್.

1948ರ ಲಂಡನ್ ಒಲಿಂಪಿಕ್ಸ್ ವೇಳೆ ಪರಸ್ಪರರಿಂದ ದೂರ ಇರುವಂತೆ ಭಾರತ ಮತ್ತು ಪಾಕಿಸ್ತಾನದ ಟೀಂ ಮ್ಯಾನೇಜರ್‌ಗಳು ಶಾರೂಖ್ ಮತ್ತು ಕೇಶವ ದತ್ ಅವರಿಗೆ ಹೇಳಿದ್ದರು. ಆದರೆ, ಯಾಕೆಂದು ಅವರಿಗೆ ಅರ್ಥವಾಗಿರಲಿಲ್ಲ. ನಂತರ ಕೇಶವ ದತ್ ತನ್ನ ಲಾಹೋರ್‌ನ ಮನೆಗೆ ಹಿಂತಿರುಗಿದಾಗಲೇ ಪರಿಸ್ಥಿತಿಯ ಭಯಾನಕ ಗಂಭೀರತೆ ಅರ್ಥವಾದದ್ದು. ಮನೆ ಖಾಲಿಯಾಗಿತ್ತು. ಕುಟುಂಬದವರು ಆಗಲೇ ಭಾರತಕ್ಕೆ ಹೋಗಿದ್ದರು. ನೇರವಾಗಿ ಭಾರತಕ್ಕೆ ಹೋಗುವಂತೆ ಹೇಳಲಾಗಿದ್ದರೂ, ತನ್ನನ್ನು ಹೇಡಿಯೆಂದು ತಿಳಿದುಕೊಳ್ಳುತ್ತಾರೆ ಎಂದು ಲಾಹೋರಿಗೆ ಹೋಗಿದ್ದ ಕೇಶವ ದತ್, ಜೀವಕ್ಕೆ ಅಪಾಯ ಮನಗಂಡು ಶಾರೂಖ್ ಬಳಿಗೆ ಹೋದದ್ದು ಆಗಲೇ. ಭಾರತಕ್ಕೆ ಬಂದ ನಂತರ, ತನ್ನ ಸುಂದರ ರೂಪ ಮತ್ತು ಆಕರ್ಷಕ ಆಟದಿಂದ ಜನಪ್ರಿಯರಾಗಿದ್ದ ಕೇಶವ ದತ್ ಮತ್ತೊಮ್ಮೆ ಒಲಿಂಪಿಕ್ಸ್ ಚಿನ್ನ ಗೆದ್ದ 1952ರ ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದರು.

ಶಾರೂಖ್ ಹೇಳುತ್ತಾರೆ: “ಪ್ರೆಂಡ್‌ಶಿಪ್ ದಿಲ್ ಮೆ ಹೋತಿ ಹೈ, ಪ್ಯಾರ್ ಮೆ ಹೋತೀ ಹೈ. ಕಭೀ ಮಿಲ್ ಜಾಯೇ ತೋ…” (ಗೆಳೆತನ ಹೃದಯದಲ್ಲಿ ಇರುತ್ತದೆ. ಪ್ರೀತಿಯಲ್ಲಿ ಇರುತ್ತದೆ. ಎಂದರೂ ಜೊತೆ ಸೇರುವಂತಾಗಿದ್ದರೆ…) ಈ ಹಂಬಲವೇ ಚಿತ್ರದ ಹೂರಣ.

ಬಾನಿಯವರ ತಂದೆ ನಂದಿ ಸಿಂಗ್ ಹಿಂದೆಯೇ ಕಾಲವಾಗಿದ್ದಾರೆ. 1926ರಲ್ಲಿ ಹುಟ್ಟಿದ ಶಾರೂಖ್ 2015ರಲ್ಲಿ ನಿಧನರಾದರು. 1925ರಲ್ಲಿ ಹುಟ್ಟಿದ ಕೇಶವ ದತ್, 2021ರಲ್ಲಿ ತನ್ನ ಅಗಲಿದ ಗೆಳೆಯರನ್ನು ಸೇರಿಕೊಂಡರು. ಅವಿಭಜಿತ ಭಾರತದ ಹಾಕಿ ತಂಡ ಮತ್ತೆ ಸಾವಿನಲ್ಲಿ ಒಂದಾಯಿತು.

ಇಂದು ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆಯಲಾಗುತ್ತಿರುವ ಈ ಕಾಲದಲ್ಲಿ ರಾಮನನ್ನೂ ರಹೀಮನನ್ನೂ ಬೇರೆಬೇರೆ ಮಾಡಲಾಗುತ್ತಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ನೂರಾರು ಯೋಜಿತ ರಾಜಕೀಯ ನಾಟಕಗಳನ್ನೂ, ಹಿಂಸಾಚಾರಗಳನ್ನೂ ನಾವು ನಿತ್ಯವೂ ನೋಡುತ್ತಿದ್ದೇವೆ. ಅದರ ನಡುವೆಯೇ ಎರಡೂ ಧರ್ಮಗಳ ನಡುವಿನ ಸಾಮರಸ್ಯದ ಮಾನವೀಯ ನಿದರ್ಶನಗಳನ್ನೂ ಕಾಣುತ್ತಿದ್ದೇವೆ.