international-day-for-the-elimination-of-violence-against-women – Peepal Media

ಜೆಂಡರ್, ಜಾತಿ ಮತ್ತು ಧರ್ಮದ ಉರುಳಿನಲ್ಲಿ ಭಾರತೀಯ ಮಹಿಳೆಯರು
ಇಂದು (ನ.೨೫) ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ. ಇದೇ ಹೊತ್ತಿನಲ್ಲಿ ಪ್ರತೀ ೧೧ ನಿಮಿಷಗಳಿಗೊಮ್ಮೆ ಸಂಗಾತಿಯಿಂದಲೇ ಹತ್ಯೆ ನಡೆಯುತ್ತದೆ ಎಂಬ ಭಯಾನಕ ಸತ್ಯವನ್ನು ವಿಶ್ವ ಸಂಸ್ಥೆಯು ಹೊರಹಾಕಿದೆ. ಅಂದರೆ ಮಹಿಳೆಯರಿಗೆ ಮನೆಯೇ ಅತ್ಯಂತ ಅಸುರಕ್ಷಿತ ಜಾಗವಾಗಿದ್ದು ಅವರು ಈ ಹಿಂದೆಗಿಂತಲೂ ಹೆಚ್ಚು ಅಪಾಯದಲ್ಲಿದ್ದಾರೆ ಎಂದೇ ಅರ್ಥ. ಪರಿಣಾಮವಾಗಿ ಮಹಿಳೆಯರ ಪಾಲಿನ ವಿಕಾಸದ ಹಾದಿಗಳು ಎಷ್ಟು ತೆರೆದುಕೊಂಡಿವೆಯೋ ಅಷ್ಟೇ ಮುಚ್ಚಿಕೊಂಡಂತೆ ಅನ್ನಿಸುತ್ತದೆ. ಹಾಗಾದರೆ ಭಾರತೀಯ ಸಮಾಜದಲ್ಲಿ ಹಾಸು ಹೊಕ್ಕಿರುವ ಲಿಂಗತ್ವ, ಜಾತಿ ಮತ್ತು ಧರ್ಮ ಭಾರತೀಯ ಮಹಿಳೆಯರ ವಿಕಾಸಕ್ಕೆ ಉರುಳಾಗಿವೆಯೇ? ಹೀಗೆಂದು ಖುದ್ದು ಪ್ರಶ್ನಿಸಿಕೊಳ್ಳಬೇಕಾದ ಈ ಹೊತ್ತಿನಲ್ಲಿ ಲೇಖಕಿ, ಮಹಿಳಾಪರ ಚಿಂತಕಿ ಎನ್‌ ಗಾಯತ್ರಿಯವರು ಈ ಬಗ್ಗೆ ಗಮನ ಹರಿಸಿ ಬರೆದಿದ್ದಾರೆ. ಸಮಾನತೆ ಸಹಬಾಳ್ವೆಯ ಆರೋಗ್ಯಪೂರ್ಣ ಸಮಾಜದ ರೂಪಿಸುವಿಕೆಯಲ್ಲಿ ಕೈಜೋಡಿಸುತ್ತಿರುವ ಪೀಪಲ್‌ ಮೀಡಿಯಾದ ಈ ವಿಶೇಷ ಲೇಖನ ಓದಿ

ಆಧುನಿಕ ಶಿಕ್ಷಣ ಮಹಿಳೆಯರನ್ನು ಅವರನ್ನು ಅವರ ಸಂಕಷ್ಟಗಳಿಂದ ಪಾರು ಮಾಡಲಾಗುತ್ತದೆಂದು ಭಾವಿಸಲಾಗಿತ್ತು. ಮಹಿಳಾ ಶಿಕ್ಷಣವು ಮಹಿಳೆಯರ ವಿಮೋಚನೆಗೆ ಹಾದಿಯಾಗಿ, ಅವಳೆಲ್ಲ ಸಮಸ್ಯೆಗಳಿಗೆ ಪರಿಹಾರವಾಗುವುದೆಂದು ಎಲ್ಲರೂ ಭಾವಿಸಿದ್ದುಂಟು. ನಮ್ಮ ನಾಡಿನ ಎಲ್ಲ ಸಮಾಜ ಸುಧಾರಕರು ಇಂತಹ ಕನಸನ್ನು ಕಂಡವರೇ. ಆದರೆ ಸೂಕ್ತ ಸನ್ನಿವೇಶ ಮತ್ತು ಹಿನ್ನೆಲೆಯಿಲ್ಲದಿದ್ದರೆ ಇಂತಹ ಕನಸುಗಳು ವಾಸ್ತವವಾಗಲಾರವು. ಇಪ್ಪತ್ತನೆಯ ಶತಮಾನದ ಆರಂಭದಿಂದಲೂ ಸಮಾಜದಲ್ಲಿ ಯಾರು ಕಲಿಯಬೇಕು ಮತ್ತು ಏನನ್ನು ಕಲಿಯಬೇಕು ಎನ್ನುವುದು ನಿರ್ದಿಷ್ಟ ಜಾತಿ ಮತ್ತು ಧರ್ಮದ ಆಯ್ಕೆಯೊಳಗೆ ನಿರ್ಧರಿತ ವಿಷಯವಾಗಿಬಿಟ್ಟಿದೆ. ಲಿಂಗ ಸಮಾನತೆಯನ್ನು ಸಾರುವ ಸಂವಿಧಾನ ನಮಗಿದ್ದಾಗ್ಯೂ ಆಚರಣೆಯಲ್ಲಿ ಅದು ಪ್ರತಿಫಲಿತವಾಗುತ್ತಿಲ್ಲ. ಇಂದು ಶಿಕ್ಷಣ ಪಡೆದು ಸಾಧನೆಯ ಏಣಿಗಳನ್ನೇರಿ ಭೇಷ್ ಎನಿಸಿಕೊಂಡ ಮಹಿಳೆಯರ ಸಂಖ್ಯೆ ಹೆಚ್ಚಿಲ್ಲ.

ಶಿಕ್ಷಣದ ಅವಕಾಶ ಪಿತೃಶಾಹಿಗಳ ಕೃಪೆಯೊಳಗಿದೆ

ರಾಜಕಾರಣಿಗಳ, ಪಟ್ಟಭದ್ರ ಹಿತಾಸಕ್ತಿಗಳ ಕದನ ವಿಹಾರವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ರಂಗವು ಸಮಾಜವನ್ನು ಮನುವಾದದ ಕಾಲಕ್ಕೆ ಬಲವಂತದಿಂದ ಹಿಂದೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಬಹುಸಂಖ್ಯಾತ ಬಡ ಮತ್ತು ತಳಸಮುದಾಯದ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದಕ್ಕೆ ತೆರಬೇಕಾಗಿರುವ ಬೆಲೆ ಎಂತಹುದೆಂಬುದಕ್ಕೆ ಮುರುಘಾ ಮಠದ ಶಿವಮೂರ್ತಿಯ ಕರ್ಮಕಾಂಡ ಸ್ಪಷ್ಟ ಉದಾಹರಣೆ. ಹಾಗೆಯೇ ಹಿಜಾಬ್ ಸಮಸ್ಯೆಯನ್ನು ಸೃಷ್ಟಿಸಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ದಗಾಲು ಹಾಕಿದ ಕೇಸರಿ ಪಡೆಯ ದುಷ್ಕೃತ್ಯ ನಮ್ಮ ಮನಸ್ಸಿನಿಂದ ಮರೆಯಾಗಿಲ್ಲ. ಏಕಕಾಲಕ್ಕೆ ಜೆಂಡರ್ ಸಮಸ್ಯೆಯು ಹಾಗೂ ಧರ್ಮದ ಸಮಸ್ಯೆಯೂ ಆಗಿರುವ ಈ ಹಿಜಾಬ್ ಪ್ರಕರಣದ ಸೃಷ್ಟಿಯು ಪಿತೃಶಾಹಿಯ ಕ್ರೂರ ಮುಖಗಳನ್ನು ಬಿಚ್ಚಿಡುತ್ತಿದೆ. ಒಂದು ಧರ್ಮದ ಪಿತೃಶಾಹಿ ಹೆಣ್ಣು ಮಕ್ಕಳಿಗೆ ಹಿಜಾಬ್ ಸೃಷ್ಟಿಸಿದರೆ, ಮತ್ತೊಂದು ಧರ್ಮದ ಪಿತೃಶಾಹಿ ಅವಳಿಗೆ ಅದನ್ನು ತೆಗೆಯಲು ಒತ್ತಾಯಿಸುತ್ತದೆ. ಒಟ್ಟಿನಲ್ಲಿ ಆ ಮಕ್ಕಳ ಶಿಕ್ಷಣದ ಅವಕಾಶ ಈ ಎರಡು ಪಿತೃಶಾಹಿಗಳ ಕೃಪೆಯೊಳಗೆ ಅಡಗಿದೆ.

ಬ್ರಾಹ್ಮಣೀಯ ಪಿತೃಪ್ರಧಾನತೆಯ ಪ್ರಹಾರ

ಮನುವಾದ ರೂಪಿಸಿದ, ನಿಯಂತ್ರಿಸುತ್ತಿರುವ ಭಾರತೀಯ ಮಹಿಳೆಯರ ಬದುಕಿನ ಮೇಲೆ ಬ್ರಾಹ್ಮಣೀಯ ಪಿತೃಪ್ರಧಾನತೆಯ ಪ್ರಹಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ಜಾತಿ ವ್ಯವಸ್ಥೆಯು ಸಿದ್ಧಾಂತವಾಗಿ ಲಿಂಗತ್ವದೊಡನೆ ನೇಯ್ದು ಕೊಂಡಿರುವುದು ತಳವರ್ಗದ ಮಹಿಳೆಯರ ಬದುಕನ್ನು ನರಕ ಗೊಳಿಸಿದೆ. ಕೋಮುದ್ವೇಷದ ಒಡಲಲ್ಲಿಯೇ ಹುಟ್ಟಿದ ಸ್ವತಂತ್ರ ಭಾರತವು 21ನೆಯ ಶತಮಾನದಲ್ಲಿ ಕೋಮುಧ್ರುವೀಕರಣದ ಬಿಸಿಯೊಂದಿಗೆ ಅಲ್ಪಸಂಖ್ಯಾತರ ಬದುಕನ್ನು ಮೂರಾ ಬಟ್ಟೆಯಾಗಿಸಿದೆ. ಹೆಣ್ಣಿನ ಶರೀರವೇ ರಣರಂಗ ವಾಗಿರುವ  ಇಂದಿನ ಸಂದರ್ಭದ ಚಿತ್ರಣವನ್ನು ಈ ಕೆಲವೊಂದು ಪ್ರಕರಣಗಳ ವ್ಯಾಖ್ಯಾನದ ಮೂಲಕ ನೋಡಬಹುದು.

ಮಥುರಾ ಅತ್ಯಾಚಾರ ಪ್ರಕರಣ

ಸ್ವತಂತ್ರ ಭಾರತದಲ್ಲಿ 1972ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಮಥುರಾ ಅತ್ಯಾಚಾರ ಪ್ರಕರಣವು ಈ ದೇಶದಲ್ಲಿ ಕೋರ್ಟ್ ಕಟ್ಟೆ ಹತ್ತಿದ ಮೊದಲ ಪ್ರಕರಣ ಮತ್ತು ಅದು ಮಹಿಳಾ ಚಳುವಳಿಗೆ ದಿಕ್ಸೂಚಿಯಾಯಿತು. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಹದಿಹರೆಯದ ಆದಿವಾಸಿ ಹೆಣ್ಣುಮಗಳು ಮಥುರಾ ಪೊಲೀಸರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. “ಈಕೆಯ ಮೈಮೇಲೆ ಗಾಯಗಳಿಲ್ಲದಿರುವುದರಿಂದ ಅವಳು ಅತ್ಯಾಚಾರಕ್ಕೆ ಒಳಗಾಗಿಲ್ಲ. ಸಚ್ಚಾರಿತ್ರ್ಯವಿಲ್ಲದ ಇವಳು ಸಮ್ಮತಿಯಿಂದಲೇ ಲೈಂಗಿಕ ಸಂಬಂಧಕ್ಕೆ ಒಪ್ಪಿಕೊಂಡಿದ್ದಾಳೆ” ಎಂದು ಕೋರ್ಟ್ ತೀರ್ಪುಕೊಟ್ಟಿತು. ಕೂಡಲೇ 1979ರಲ್ಲಿ ಉಪೇಂದ್ರ ಭಕ್ಷಿ, ಕೇಲ್‍ಕರ್, ಲೋತಿಕಾ ಸರ್ಕಾರ್ ಮತ್ತು ವಸುಧಾ ಧಗಾಂವರ್ ನಾಲ್ವರೂ ಸೇರಿ ಜಂಟಿಯಾಗಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಪತ್ರವೊಂದನ್ನು ಬರೆದು ಈ ಪ್ರಕರಣವನ್ನು ಮುಗಿಸಿಬಿಡದೆ, ಮತ್ತೆ ಕೈಗೆತ್ತಿಕೊಳ್ಳುವಂತೆ ಕೇಳಿಕೊಂಡರು. ಅವರ ಈ ಪತ್ರ ದೇಶಾದ್ಯಂತ ಭಾರಿ ಸಂಚಲವನ್ನೇ ಉಂಟು ಮಾಡಿತು. ಇದರಿಂದ ಆ ಬುಡಕಟ್ಟು ಸಮುದಾಯದ ಈ ಅಪ್ರಾಪ್ತ ಬಾಲಕಿಗೆ ನ್ಯಾಯ ಸಿಕ್ಕಿದ್ದು ಸ್ವಲ್ಪವೇ ಆದರೂ ನ್ಯಾಯಾಲಯ ಹೆಣ್ಣನ್ನು ಕುರಿತು ಎತ್ತಿದ ಹಲವಾರು ಅನುಮಾನಗಳಿಗೆ, ಪೂರ್ವಗ್ರಹಗಳಿಗೆ ಉತ್ತರ ನೀಡುವ ರೀತಿಯಲ್ಲಿ ಮಹಿಳಾ ಚಳುವಳಿ ತನ್ನ ಹೋರಾಟದ ಅಜೆಂಡಾವನ್ನು ರೂಪಿಸಿಕೊಂಡಿತು.

ಭಾಂವ್ರಿದೇವಿ

ಮಹಿಳಾ ಹೋರಾಟದ ದಂತಕಥೆಯಾದ ಭತೇರಿ ಗ್ರಾಮದ ಭಾಂವ್ರಿದೇವಿ ರಾಜಸ್ಥಾನ ರಾಜ್ಯಸರ್ಕಾರದ ಮಹಿಳಾ ವಿಕಾಸ ಯೋಜನೆಯಡಿ ಸಾಥಿನ್ ಆಗಿ ಕೆಲಸ ಮಾಡುತ್ತಿದ್ದಾಗ, 1992ರ ಮೇ ತಿಂಗಳಲ್ಲಿ ಬಾಲ್ಯವಿವಾಹವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಆ ಕುಟುಂಬದ ಪುರುಷರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಳು. ಭಾಂವ್ರಿದೇವಿಯ ಮೇಲೆ ನಡೆದ ಅತ್ಯಾಚಾರದ ಸಂದರ್ಭದಲ್ಲಿ “ಮೇಲು ಜಾತಿಯ ಗಂಡಸು ಕೆಳಜಾತಿಯ ಹೆಂಗಸನ್ನು ಲೈಂಗಿಕವಾಗಿ ಭೋಗಿಸಿರಲು ಸಾಧ್ಯವೇ ಇಲ್ಲ” ಎಂಬುದಾಗಿ  ನ್ಯಾಯಾಲಯವೇ ಅಪನಂಬುಗೆಯ ತೀರ್ಪನ್ನು ಕೊಟ್ಟಿತ್ತು. ಇದರಿಂದ ಸಿಟ್ಟಿಗೆದ್ದ ವಿಶಾಖ ಮತ್ತು ಇತರ ಮಹಿಳಾ ಸಂಘಟನೆಗಳು ನ್ಯಾಯ ಕೋರಿ ಸುಪ್ರೀಂ ಕೋರ್ಟಿನ ಕಟ್ಟೆಯೇರಿದ್ದು ಮತ್ತು ಈ ಪ್ರಕರಣದ ಕಾರಣವಾಗಿ ದುಡಿಯುವ ಮಹಿಳೆಯರಿಗೆ ರಕ್ಷಣೆ ಕೊಡುವ ಸುಪ್ರೀಂ ಕೋರ್ಟಿನ ವಿಶಾಖ ಮಾರ್ಗದರ್ಶಿ ಸೂತ್ರಗಳು ಸಿಕ್ಕಿದ್ದು ಮತ್ತು ನಂತರದಲ್ಲಿ ಅದು ಮಸೂದೆಯಾದದ್ದು ಈಗ ಇತಿಹಾಸ.

ಬಿಲ್ಕಿಸ್ ಬಾನೋ

2002ರಲ್ಲಿ ಗುಜರಾತಿನಲ್ಲಿ ನಡೆದ ಮುಸ್ಲಿಂ ವಿರೋಧಿ ಹತ್ಯಾಕಾಂಡದಲ್ಲಿ ಮತಾಂಧ ಹಿಂದೂ ಹುಡುಗರ ಗುಂಪಿನಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದವಳು ಗರ್ಭಿಣಿ ಬಿಲ್ಕಿಸ್ ಬಾನೋ. ಅವಳ ಐದು ವರ್ಷದ ಮಗ ಮತ್ತು ಅವಳ ಕುಟುಂಬದ ಹದಿನಾಲ್ಕು ಮಂದಿ ಹತ್ಯೆಗೊಳಗಾಗಿದ್ದರು. ಆದರೆ ಇತ್ತೀಚೆಗೆ ಆ ಅಪರಾಧಿಗಳು ಶಿಕ್ಷಾ ಅವಧಿಗೆ ಪೂರ್ವವೇ ಬಿಡುಗಡೆಯಾಗಿರುವುದು ಅವರ ಸಚ್ಚಾರಿತ್ರ್ಯದ ಕಾರಣದಿಂದ ಎಂದು ಹೇಳಿರುವುದು ಇಡೀ ಸ್ತ್ರೀಸಂಕುಲವನ್ನೇ ಅವಮಾನಿಸಿದ ಘಟನೆಯಾಗಿದೆ.

ಇವು ಕೆಲವು ಉದಾಹರಣೆಗಳಷ್ಟೇ…

2012ರಲ್ಲಿ ದೆಹಲಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ತನ್ನ ಗೆಳೆಯನ ಜೊತೆ ಸಿನಿಮಾ ನೋಡಿ ಹಿಂತಿರುಗಿ ಬರುತ್ತಿರುವಾಗ ಮನೆಗೆ ಹೋಗಲು ಹತ್ತಿದ ವ್ಯಾನಿನಲ್ಲಿದ್ದ ಪುಂಡರಿಂದಾಗಿ ಅಸಹ್ಯವಾಗಿ, ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ, ನಂತರದಲ್ಲಿ ಸಾವನ್ನಪ್ಪಿದ ಕರುಳು ಹಿಂಡುವ ದೃಶ್ಯ ನಮ್ಮೆಲ್ಲರ ಕಣ್ಣ ನೀರಿನ ತೇವವನ್ನು ಆರಿಸಿಲ್ಲ. ಈ ಪ್ರಕರಣದ ನಂತರ ನೇಮಕಗೊಂಡ ವರ್ಮಾ ಸಮಿತಿ ಹಲವಾರು ಮಹಿಳಾಪರ ಕಾನೂನಿನ ತಿದ್ದುಪಡಿಗಳನ್ನು ನೀಡಿದ್ದು ಮಹತ್ವದ ಅಂಶ. ಆದರೆ ಆ ನಂತರವೂ ಈ ದಶಕದಲ್ಲಿ ನಡೆದ ಉತ್ತರ ಪ್ರದೇಶದ ಹತ್ರಾಸ್, ಹೈದರಾಬಾದಿನ ಪ್ರಿಯಾಂಕ , ಬಿಜಾಪುರದ ದಾನಮ್ಮ…. ಹೀಗೆ ಈ ಪಟ್ಟಿ ಮೈಲುಗಟ್ಟಲೆ ಸಾಗುತ್ತದೆ.

ಬ್ರಾಹ್ಮಣೀಯ ಪಿತೃ ಪ್ರಧಾನತೆಯಡಿ ನಲುಗುತ್ತಿರುವ ಮಹಿಳೆಯರು…

ಹಲವು ಬಣ್ಣಗಳಲ್ಲಿ ತೆರೆದುಕೊಂಡಿರುವ ಪಿತೃಶಾಹಿಯ ಕೊಲೆಗಡುಕ ಮನೋಭಾವವನ್ನು ಬಿಂಬಿಸುವ ಈ ನಾಲ್ಕು ಪ್ರಕರಣಗಳನ್ನು ಸಾಂಕೇತಿಕವಾಗಿ ಗಮನಿಸಿದಾಗ ನಮ್ಮ ದೇಶದ ಮಹಿಳೆಯರು ಬ್ರಾಹ್ಮಣೀಯ ಪಿತೃ ಪ್ರಧಾನತೆಯಡಿ ನಲುಗುತ್ತಿರುವ ಉಸಿರುಗಟ್ಟಿದ ವಾತಾವರಣದ ವಿಶ್ವರೂಪದರ್ಶನವಾಗುತ್ತದೆ.  ಮಥುರಾಳ ಮೇಲೆ ಅತ್ಯಾಚಾರ ನಡೆದು ಐವತ್ತು ವರ್ಷಗಳಾಗಿರುವ ಈ ಹೊತ್ತಿನಲ್ಲಿ  ಮಹಿಳಾ ಚಳುವಳಿಯು ಈ ಐವತ್ತು ವರ್ಷಗಳಲ್ಲಿ ಎದುರಿಸಿದ ಸವಾಲುಗಳು ಮತ್ತು ಗಳಿಸಿದ ಜಯಗಳ ಅವಲೋಕನ ಮಾಡಿದರೆ ನಿರಾಸೆಯಾಗುವುದು ಸಹಜವೇ. ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆಯು ಕನಸಿನ ಗಂಟಾಗುತ್ತಿದೆ. ಮಹಿಳಾ ಶಿಕ್ಷಣದ ಚರಿತ್ರೆಯೆಂದರೆ ಮಹಿಳಾ ಹೋರಾಟದ ಚರಿತ್ರೆಯೇ.  ಹೆಣ್ಣನ್ನು ಅವಳ ದೇಹದ ಮೂಲಕವಷ್ಟೇ ನೋಡುವ ಮನೋಭಾವ, ಪ್ರವೃತ್ತಿ ಬದಲಾಗಬೇಕು. ಅಂತಹ ಶಿಕ್ಷಣವನ್ನು ಸ್ತ್ರೀಪುರುಷರಿಬ್ಬರಿಗೂ ನೀಡಬೇಕು. ಹೆಂಡತಿಯನ್ನು, ಪ್ರೇಮಿಯನ್ನು ತರಕಾರಿ ಹೆಚ್ಚುವಂತೆ ಕೊಲ್ಲಬಲ್ಲ ಕ್ರಿಮಿನಲ್ ಮನಸ್ಸುಗಳನ್ನು ಬದಲಾಯಿಸುವಂತಹ ಶಿಕ್ಷಣ ಇಂದಿನ ಅಗತ್ಯವಾಗಿದೆ. ಮಥುರಾಳ ಪ್ರಕರಣ ನಡೆದು ಐವತ್ತು ವರ್ಷಗಳಾಗಿರುವ ಇಂದಿನ ಸಂದರ್ಭದಲ್ಲಿ ಶಿಕ್ಷಣದ ನೆಪದಲ್ಲಿ, ಮದುವೆಯ ಬಂಧನದೊಳಗೆ ನಡೆಯುತ್ತಿರುವ ಸಾಂಸ್ಥಿಕ ಹಲ್ಲೆ, ಅತ್ಯಾಚಾರಗಳನ್ನು ಖಂಡಿಸುತ್ತಾ, ಅದರ ವಿರುದ್ಧ ಹೋರಾಟವನ್ನು ಸಂಘಟಿಸಬೇಕಾಗಿದೆ.

ಎನ್‌ ಗಾಯತ್ರಿ

ಮಹಿಳಾಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ, ಅಚಲ ಮಾಸ ಪತ್ರಿಕೆಯ ಸಂಪಾದಕಿಯಾಗಿ ಮಹಿಳಾ ಚಳುವಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು.