muttina jolige – Peepal Media

ತಾತನ ಕಾಡಂದಿ ಕಾವಲೂ.. ಅಪ್ಪನ ಭಂಗಿಭಜನೆಯೂ.. (ಮುತ್ತಿನ ಜೋಳಿಗೆ – 2)
ನಾನು ಕಂಡಂತೆ ನಮ್ಮನೆಯ ವ್ಯವಹಾರ ಸುಸ್ಥಿತಿಯಲ್ಲೇ ಇತ್ತು..
ಹೊಲ, ತೋಟ, ತೋಟಕ್ಕೊಂದು ಬಾವಿ, ಬಾವಿಗೊಂದು ಮೋಟ್ರು, ಹಟ್ಟಿತುಂಬ ಆಡುದನ, ನೋಡಿದರೆ ಕಣ್ಣೆಸರಾಗುವಂಥ ಎತ್ತುಗಳು… ಎಲ್ಲವೂ ಇತ್ತು. ಸುಗ್ಗಿಕಾಲದಲ್ಲಿ ಕಣದಲ್ಲಿ ರಾಗಿರಾಶಿಯನ್ನು ನೋಡಲು ಕಣ್ಣು ಸಾಲದಾಗಿದ್ದವು. ಆ ರಾಗಿರಾಶಿಯ ಹಿಂದೆ ಎಷ್ಟೊಂದು ಕೈಗಳ ಶ್ರಮ, ಎಷ್ಟೊಂದು ನಿದ್ದೆಗೆಟ್ಟ ರಾತ್ರಿಗಳು ಇರುತ್ತಿದ್ದವು ಎಂಬುದನ್ನು ನೆನೆಯುತ್ತೇನೆ: ಇನ್ನೇನು ಮಳೆಗಾಲ ಆರಂಭವಾಗುತ್ತಿದೆ ಅನ್ನುವಾಗಲೇ ಕಡ್ಡಿ ಕಡಿದು ಹೊಲ ಹಸನು ಮಾಡಿ, ಉತ್ತಿ ಬಿತ್ತಿ, ಕಳೆ ಕಿತ್ತು, ಕುಂಟೆ ಹೊಡೆದು ಅರಗಿ ಪೈರಿನ ನೆತ್ತಿಯಲ್ಲಿ ಕಾಚಕ್ಕಿ ಕಾಣುವಷ್ಟರಲ್ಲಿ ಆರಂಬಗೆಲಸವನ್ನೇ ನೆಚ್ಚಿಕೊಂಡಿದ್ದ ಜೀವಗಳಿಗೆ ಸಾರ್ಥಕತೆಯ ಭಾವ. ಕಾಚಕ್ಕಿ ತೆನೆಯಾಗಲು ಹೆಚ್ಚು ದಿನ ಬೇಕಿಲ್ಲ, ಅಷ್ಟರಲ್ಲಿ ಒಂದಿಷ್ಟು ಗ್ವಾಳೆಕಟ್ಟುಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂಬುದಾಗಿ ಮಾತಾಡಿಕೊಳ್ಳುದ್ದರು. ಈ ಗ್ವಾಳೆಕಟ್ಟುಗಳನ್ನು ಸಿದ್ಧಪಡಿಸುವುದು ಒಂದು ಬಗೆಯ ಪ್ರಕ್ರಿಯೆ. ಊರಿನ ಮೂರ್ನಾಲ್ಕು ಜನ ಜೊತೆಯಾಗಿ ಚೆನ್ನಾಗಿ ಕುಡ್ಲು ಮಸೆದುಕೊಂಡು ಕಾಡಿಗೆ ಹೋಗಿ ಬಿದಿರ ಗಳಗಳನ್ನು ಕಡಿದು ತಂದು, ಸುತ್ತಿಗೆಯಿಂದ ಚೆಚ್ಚಿ, ಒಂದಿಷ್ಟು ದಿನ ಬಾವಿಯಲ್ಲಿ ಉನಿಯಾಕಿ, ಆಮೇಲೆ ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳುವುದು. ರಾಗಿಯ ಕೊಯ್ಲು ಮುಗಿಸಿ ಇವುಗಳಿಂದಲೇ ಹೊರೆ ಕಟ್ಟುತ್ತಿದ್ದದ್ದು; ಬಿದಿರ ಗ್ವಾಳೆಯಂತೆಯೇ ಕತ್ತಾಳೆ ನಾರುಗಳನ್ನೂ ಬಳಸುವುದು ರೂಢಿ. ಇನ್ನೇನು ಬೆಳೆ ಕೈಗೆ ಬರುತ್ತಿದೆಅನ್ನುವ ಘಟ್ಟದಲ್ಲಿ ಒಂದು ಕಡೆ ನಿರಾಳ ಅನ್ನಿಸಿದರೆ ಇನ್ನೊಂದು ಕಡೆ ಈ ಆನೆ, ಕಾಡುಹಂದಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುವುದು ಹೇಗೆ ಅನ್ನುವ ಆತಂಕ.

ಆ ಸಂದರ್ಭದಲ್ಲಿ ನನಗಾದ ಒಂದೆರಡು ಅನುಭವಗಳನ್ನು ಹಂಚಿಕೊಳ್ಳಬೇಕು. ರಾಗಿಪೈರು ಕಾಚಕ್ಕಿ ಹೊತ್ತು ನಿಲ್ಲುತ್ತಿದ್ದ ಕಾಲ ಬಂತೆಂದರೆ ಆನೆ, ಹಂದಿಗಳು ರಾತ್ರಿಹೊತ್ತು ಒಂದೇ ಸಮನೆ ನಮ್ಮ ಹೊಲಗಳ ಮೇಲೆ ದಾಳಿ ಮಾಡುತ್ತಿದ್ದವು. ಆನೆಗಳು ರಾಗಿಹೊಲವನ್ನು ತುಳಿದು ನಾಶ ಮಾಡಿದರೆ, ಕಾಡಂದಿಗಳು ಕಡ್ಲೆಗದ್ದೆಯನ್ನು ಗುರಿಯಾಗಿಟ್ಟುಕೊಳ್ಳುತ್ತಿದ್ದವು. ರಾತ್ರಿ ಹೊತ್ತು ದಾಳಿ ಮಾಡುತ್ತಿದ್ದ ಈ ಕಾಡಂದಿಗಳು ಎಂಥ ಕಿತಾಪತಿ ಪ್ರಾಣಿಗಳೆಂದರೆ ಕಡ್ಲೆಕಾಯಿಗಿಡವನ್ನು ಅತ್ಲಾಗಿ ಪೂರ್ತಿ ತಿನ್ನುತ್ತಲೂ ಇರಲಿಲ್ಲ. ಇತ್ಲಾಗಿ ಸುಮ್ಮನೂ ಬಿಡುತ್ತಿರಲಿಲ್ಲ. ನೆಲದಲ್ಲಿ ನೆಮ್ಮದಿಯಿಂದಿರುತ್ತಿದ್ದ ಕಡ್ಲೆಕಾಯಿಗಳು ಬುಡ್ಡೆ, ಕಾಯಿ ಸಮೇತ ಹೊರಗೆ ಕಾಣಿಸುವಂತೆ ಮಾಡಿ ಹೊಲವನ್ನೆಲ್ಲ ತುಳಿದು ಪಚಗೆಡಿಸಿ ಬೆಳಗಾಗುವುದರೊಳಗೆ ಕಾಡು ಹೊಕ್ಕಿಬಿಡುತ್ತಿದ್ದವು.

“ಹಂದಿ ಊಟ್ಬುಟ್ಟವೆ…  ಹಂದಿ ಊಟ್ಬುಟ್ಟವೆ” ಅಂತ ನಾವೆಲ್ಲ ಬೆಳಗ್ಗೆ ಎದ್ದು ಹೊಲಕ್ಕೆ ಹೋಗಿ ಆಯಾಯ ಕಡ್ಲೆಕಾಯಿ ಗಿಡಗಳನ್ನು ಅವುಗಳ ಮೂಲಸ್ಥಿತಿಗೆ ತರಲು ಪ್ರಯತ್ನಿಸುವುದು. ರಾತ್ರಿಯಾದರೆ ಮತ್ತದೇ ದಾಳಿ, ಮತ್ತದೇ ಹಾವಳಿ. ಈ ಹಾಳಾದ್ದ ಹಂದಿಗಳು ದಿನಾ ಹೀಗೆ ಮಾಡಿದರೆ ಕಡ್ಲೆಕಾಯಿಗಳು ನೆಲದಲ್ಲಿ ಬಲಿಯೋದು ಯಾವಾಗ, ತೂಕ ಸಿಗೋದು ಹೇಗೆ ಅನ್ನುವ ಚಿಂತೆ ತಾತನ ತಲೆಗೆ ತಗುಲಿ “ಲೋ ತಮ್ಮಯ್ಯ, ಆ ಹುಣಸೇಮರದ್ ಮ್ಯಾಲೆ ಒಂದು ಗುಡ್ಲಾಕ್ರೋ. ನಾನು ರಾತ್ರೊತ್ತು ಮನಗಿದ್ದು ಬತ್ತೀನಿ. ಅವ್ನೆಂಡ್ರುನಾ ಕೇವ್ಳ್ಜಾತಿ ಅಂದಿಗೊಳು ಅದ್ಯಂಗ್ಗ್ ಬಂದವೊ ನಾನೂ ನೋಡ್ತೀನಿ” ಅಂತ ಆಜ್ಞೆ ಹೊರಡಿಸುತ್ತಿದ್ದಂತೆಯೇ ಹುಣಸೇಮರದ ಮೇಲೆ ಗುಡ್ಲು ನಿರ್ಮಾಣವಾಯಿತು. ಆ ಹುಣಸೆಮರದ ಬುಡದಲ್ಲೇ ನನ್ನ ತಾತನ ತಾತ ದೊಡ್ಡಮಂಚೇಗೌಡನ ಗೋರಿ ಎಂದು ಕರೆಯಲ್ಪಡುವ ಕಲ್ಗುಡ್ಡೆ ಇರುವುದು. ಪ್ರತಿ ಉಗಾದಿಯಂದು ನಾವು ಆ ಕಲ್ಗುಡ್ಡೆ ಮೇಲೆ ಹೊಸಬಟ್ಟೆ ಮಡಗಿ ಕಡ್ಡಿಹಚ್ಚಿ, ಕೈ ಮುಗಿದು, ನಾಕ್ಕಾಸಿನ ಧೂಪ ಹಾಕಿ ಬರುತ್ತೇವೆ. ಈ ದೊಡ್ಡಮಂಚೇಗೌಡನ ಬಗ್ಗೆ ನಾಲ್ಕು ಸಾಲು ಬರೆದು ಮತ್ತೆ ಆನೆ, ಹಂದಿ, ಗುಡ್ಲು ವಿಷಯಕ್ಕೆ ಬರುತ್ತೇನೆ. ಈ ಗುಡ್ಲು ಹಾಕಿರೋ ಹುಣಸೇಮರ ಏನಿದೆ, ಅಲ್ಲಿಂದ ನಾಲ್ಕು ಮಾರು ನಡೆದರೆ ಕುಂಬಾರದೊಡ್ಡಿಹಳ್ಳ ಎನ್ನುವ ಕಾಡಿನ ನೀರು ಹರಿದುಬರುವ ತೊರೆಯೊಂದಿದೆ. ಆ ತೊರೆಯನ್ನು ದಾಟಿ ಎಡಕ್ಕೆ ತಿರುಗಿ ಮೂರ್ನಾಲ್ಕು ಮೈಲಿ ನಡೆದರೆ ಸುಂಡಘಟ್ಟ/ಬೆಟ್ಟೇಗೌಡನದೊಡ್ಡಿ ಅನ್ನುವ ಊರಿದೆ. ಆ ಊರೇ ಹಿಂದೊಮ್ಮೆ ಈ ದೊಡ್ಡಮಂಚೇಗೌಡನ ಊರಾಗಿತ್ತಂತೆ. ಅಲ್ಲಿ ಯಾವುದೋ ಕೆರೆ ಕಟ್ಟಿಸುವ ವಿಚಾರ ಪ್ರತಿಷ್ಠೆಗೆ ತಿರುಗಿ, ಪ್ರತಿಷ್ಠೆ ವ್ಯಾಜ್ಯಕ್ಕೆ ತಿರುಗಿ ಆಡುದನ, ಹೊಲಮನೆ ಎಲ್ಲ ಸೀದುಬಿಟ್ಟು ಹೊಸದುರ್ಗದಲ್ಲಿ ನೆಲಗೊಳ್ಳುವ ಉದ್ದಿಶ್ಯದಿಂದ ಬುಸುಬುಸನೆ ಉಸುರು ಬಿಡುತ್ತಾ, ಹಣೆಯ ಬೆವರನ್ನು ವಲ್ಲಿಬಟ್ಟೆಯಲ್ಲಿ ಒರೆಸಿಕೊಳ್ಳುತ್ತಾ ಕಾಡಾದಿಯಲ್ಲಿ ದಡದಡನೆ ಬರುತ್ತಿರಲು, ಕುಂಬಾರದೊಡ್ಡಿಹಳ್ಳ ದಾಟಿ ಹುಣಸೇಮರದ ಸಮೀಪಕ್ಕೆ ಆಗಮಿಸಲು ಹತ್ತೇರು ಕಟ್ಟಿ ಹೊಲ ಉಳುತ್ತಿದ್ದ ಹೊಂಬಾಳೇಗೌಡರ ವಂಶಸ್ಥರು ” ಏನ್ ಮಂಚಣ್ಣ, ಎಲ್ಲೋ ಹೋಯ್ತಿದ್ದಿ, ಯಾರ ಮ್ಯಾಲೆ ಆಪಾಟಿ ಕ್ವಾಪ…?” ಅಂದಾಗ ನಡೆದುದ್ದನ್ನೆಲ್ಲ ವಿವರಿಸಿದ ಬಳಿಕ ಅವರ ಸಲಹೆಯಂತೆ ಹೊಸದುರ್ಗಕ್ಕೆ ಹೋಗುವ ಬದಲು ಸುಂಡಘಟ್ಟದಲ್ಲಿದ್ದ ತನ್ನೆಲ್ಲ ಸ್ವತ್ತನ್ನು, ರಾಸನ್ನು ಅವರಿವರಿಗೆ ಮಾರಿ ಕೆಬ್ಬರೆಯಲ್ಲಿ ಹೊಲಮನೆ ಖರೀದಿಸಿ ನೆಲೆಯೂರಿ ಕಡೆಗೆ ಈ ಹುಣಸೇಮರದಡಿಯ ಕಲ್ಗುಡ್ಡೆಯಲ್ಲಿ ಐಕ್ಯನಾದನಂತೆ.

ಆತನ ಹಿರಿಮಗನಾದ ಗೋದೇಗೌಡನ ಕಿರಿಹೆಂಡಿರ ಮಗ ದೊಡ್ಡಕರೀಗೌಡನೇ ನಮ್ತಾತ; ನಾನು ಚಿಕ್ಕವನಿದ್ದಾಗ ಸುಂಡಘಟ್ಟದ ಕಾಳೇಗೌಡ, ವೀರಭದ್ರೇಗೌಡ ಎಂಬಿಬ್ಬರು ತಾತನನ್ನು ನೋಡಲು ನಮ್ಮನೆಗೆ ಆಗಾಗ ಬರುತ್ತಿದ್ದದು ಯಾಕೆಂದೂ, ಸುಂಡಘಟ್ಟಕ್ಕೂ ನಮಗೂ ಇರುಬಹುದಾದ ನಂಟು ಏನೆಂದೂ ಕಾಲಕ್ರಮೇಣ ನನಗೆ ಉತ್ತರ ದೊರಕುತ್ತಾ ದೊರಕುತ್ತಾ ಇಲ್ಲಿ ದಾಖಲಿಸುವ ಹಂತಕ್ಕೆ ಬಂದು ನಿಂತಿದೆ.

ಹ್ಞಾ, ತಾತನ ಆಜ್ಞಾಪ್ರಕಾರ ಹುಣಸೇಮರದ ಮೇಲೆ ಗುಡ್ಲು ಸಿದ್ಧವಾದ ಬಳಿಕ ರಾತ್ರಿ ಹೊತ್ತು  ಹೊಲ ಕಾಯಲು ತಾತನ ಜೊತೆ ನಾನೂ ಹೋಗುತ್ತಿದ್ದೆ. ಗವ್ವೆನ್ನುವ ಕತ್ತಲ ಸೀಳುವಂತೆ ಕರಿಗಂಬಳಿ ಹೊದ್ದು, ಕೈಯಲ್ಲಿ ಲಾಟೀನು ಹಿಡಿದು ತಾತ ಮುಂದೆ ಮುಂದೆ ಬುಸ್ ಬುಸ್ ಅಂತ ಬೀಡಿ ಹೊಗೆ ಬಿಡುತ್ತಾ ಸಾಗುತ್ತಿದ್ದರೆ ನಾನು ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದೆ. ನನಗೆ ಚಳಿಯಾಗದಿರಲೆಂದು ಅವ್ವ ಕಿವಿ ಮುಚ್ಚುವಂತೆ ಕುಲಾವಿ ಹಾಕಿರುತ್ತಿದ್ದಳು. ಆ ಗುಡ್ಲು ಹೇಗಿತ್ತೆಂದರೆ ಕೆಳಕ್ಕೆ ಮರದ ಕವೆಗಳನ್ನು ಕೊಟ್ಟು, ಅವುಗಳ ಮೇಲೆ ಜೋಡಿಸಿಟ್ಟ ಬಿದಿರಗಳಗಳನ್ನು ಉರಿಗಳಿಂದ ಪಟ್ಟಾಗಿ ಬಿಗಿದು, ಮೇಲೆ ತೆಂಗಿನಗರಿ, ಹುಲ್ಲನ್ನು ಹೊದಿಸಿ ಜಾರದಂತೆ ಬಿಗಿಯಾಗಿ ಕಟ್ಟಿ, ಮಲಗಲು ಮೆತ್ತನೆಯ ಹುಲ್ಲು, ಮೇಲೊಂದು ಕಡ್ಡಿಮಂದಲಿಗೆ, ಹಳೆಯಬಟ್ಟೆಯನ್ನು ಚೀಲದಂತೆ ಸೂಜಿನೂಲಿನಿಂದ ಹೊಲೆದು, ಅದರೊಳಗೆ ರಾಗಿಹೊಟ್ಟು ತುಂಬಿ ಅವ್ವ ಸಿದ್ಧಪಡಿಸಿದ್ದ ತಲ್ಮೂಟೆ. ನೆಲದಿಂದ ಗುಡ್ಲು ತಲುಪಲು ಏಣಿಮೆಟ್ಟಿಲು. ಗುಡ್ಲು ನೆಲದ ಮಟ್ಟಕ್ಕಿದ್ದರೆ ಆನೆ ತುಳಿಯುವ ಸಾಧ್ಯತೆ, ಹಂದಿ ದಾಳಿ ಮಾಡುವ ಅವಕಾಶ ಹೆಚ್ಚು. ಆದ್ಧರಿಂದ ಆನೆ ತನ್ನ ಸೊಂಡಿಲನ್ನು ಎಷ್ಟೇ ಉದ್ದ ಮಾಡಿದರೂ ಎಟುಕಬಾರದಷ್ಟು ಎತ್ತರದಲ್ಲಿ, ಮರದ ಕೊಂಬೆಯ ಮೇಲೆ ಗುಡ್ಲು ನಿರ್ಮಿಸುತ್ತಿದ್ದದ್ದು; ಹಂದಿಯೋ, ಆನೆಯೋ ಬಂದರೆ ಗೊತ್ತಾಗಲೀ ಅನ್ನುವ ಉದ್ದಿಶ್ಯದಿಂದಲೂ ಕೂಡ.

ನಾನು ತಾತನೊಟ್ಟಿಗೆ ಅನೇಕ ರಾತ್ರಿಗಳನ್ನು ಆ ಗುಡ್ಲುವಿನಲ್ಲಿ ಕಳೆದ ಅನುಭವಿ. ತಾತ ಪ್ರತಿಬಾರಿ ಗುಡ್ಲುವಿನ ಏಣಿಮೆಟ್ಟಿಲು ಹತ್ತುವಾಗಲೂ ಸುತ್ತಮುತ್ತ ಕಣ್ಣಾಡಿಸುತ್ತಾ “ಬರ್ಲಿ ಇವತ್ತು ಅವ್ನೆಂಡ್ರುನಾ ಕೇವ್ಳ್ಜಾತಿ ಅಂದಿಗೊಳು, ಅವ್ನ್ತಾಯ್ನಾ ಕೇವ್ಳ್ಜಾತಿ ಆನೆಗೊಳು…” ಅನ್ನುತ್ತಲೇ ಗುಡ್ಲು ಸೇರಿಕೊಂಡು, ನನ್ನನ್ನು ಕಂಬಳಿಯೊಳಗೆ ಬೆಚ್ಚಗೆ ಮಲಗಿಸಿಕೊಂಡು ನನಗೆ ನಿದ್ದೆ ಹತ್ತುವ ತನಕ ರಾಮಾಯಣದ ಒಂದು ಭಾಗವನ್ನೋ, ಮಹಾಭಾರತದ ಒಂದು ಭಾಗವನ್ನೋ, ತಾನು ನಾಟಕಕ್ಕೆ ಸೇರಿ ಮಾಡಿದ್ದ ನಕ್ಷತ್ರಿಕನ ಪಾರ್ಟಿನ ಕುರಿತೋ  ಹೇಳುವ ರೂಢಿ. ಮಿಕ್ಕಂತೆ ಡಬ್ಬ ಬಡಿಯುತ್ತಾ, ಜೋರಾಗಿ ಕೂಗುತ್ತಾ ತನ್ನ ಡ್ಯೂಟಿ ತಾನು ಮಾಡುತ್ತಿದ್ದ. ಹೀಗೇ ಒಂದಿನ ಸರಿಹೊತ್ತಿನಲ್ಲಿ ಯಾರೋ ಜೋರಾಗಿ ಕೂಗಿಕೊಂಡಂತೆ, ಲಕ್ಷ್ಮಿಪಟಾಸು, ಆನೆಪಟಾಸು ಹೊಡೆದಂತೆ ಅನ್ನಿಸಿ ಕಣ್ಣು ತೆರೆದೆ. ತಾತ “ಹೇಹೇಹೇ … ಓಹೋಹೋ… ಹೇ.. ಹಾ.. ಹಿಡಿಯೋ ಹಿಡಿಯೋ ಹಿಡಿಯೋ .. ಹೊಡೆಯೋ ಹೊಡೆಯೋ ಹೊಡೆಯೋ.. ಬುಡಬ್ಯಾಡ್ರಿ ಅವ್ನ್ ತಾಯ್ನಾ. ಕಿಕಿಕಿಕಿಕಿ… ಹೋಯ್ ಹೋಯ್”  ಅಂತ ಕೂಗುತ್ತಾ, ಡಬ್ಬ ಬಡಿಯುತ್ತಾ ತನ್ನ ಡ್ಯೂಟಿಯಲ್ಲಿ ತಲ್ಲೀನನಾಗಿದ್ದ. ತಾತನ ಅಬ್ಬರ ನೋಡಿ ಗಾಬರಿಯಿಂದ ಎದ್ದು ಗುಡ್ಲುವಿನ ಆಚೆ ಇಣುಕಿದೆ. ನಮ್ಮ ಸುತ್ತಮುತ್ತಲ ಹೊಲದ ಗುಡ್ಲುಗಳಲ್ಲಿದ್ದ ಜನರೆಲ್ಲಾ ಕೈಯಲ್ಲಿ ಪಂಜು ಹಿಡಿದು, ಡಬ್ಬ ಬಡಿಯುತ್ತಾ, ಪಟಾಸು ಹೊಡೆಯುತ್ತಾ ಅಬ್ಬರ ಮಾಡುತ್ತಿದ್ದರೆ ಕಡ್ಲೆಗದ್ದೆಗಳನ್ನು ದ್ವಂಸ ಮಾಡಿಯೇ ತೀರಬೇಕೆಂದು ತೀರ್ಮಾನಿಸಿದಂತಿದ್ದ  ಕಾಡಂದಿಗಳು ಗೊಟರ್ ಗೊಟರ್ ಗುರ್ ಗುರ್  ಗೊಟರ್ ಎಂದು ಸದ್ದು ಮಾಡುತ್ತಾ  ಆ ಮಂದಬೆಳಕಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಾ, ಬಾಲ ಬೀಸುತ್ತಾ, ಕೋರೆಹಲ್ಲು ಪ್ರದರ್ಶಿಸುತ್ತಾ ಕತ್ತಲಲ್ಲಿ ಗುರ್ ಗುರ್ ಅನ್ನುತ್ತಾ ಕಣ್ಮರೆಯಾದವು.

ಇದೇ ರೀತಿ ಅಬ್ಬರಿಸಿ ಒಮ್ಮೆ ಗುಂಪಾನೆಗಳನ್ನು ಚದುರಿಸಿ, ಓಡಿಸಿದ್ದ ನೆನಪು. ಒಂಟಿ ಆನೆ ತಂಟೆಗೆ ಯಾರೂ ಹೋದಂತೆ ನೆನಪಿಲ್ಲ. ಕೊಯ್ಲಿನ ನಂತರ ಹುಣಸೇಮರದ ಮೇಲಿನ ಗುಡ್ಲು ಪ್ರಯೋಜನಕ್ಕೆ ಬರುತ್ತಿರಲಿಲ್ಲ. ಹೊಲದ ಒಂದಿಷ್ಟು ಜಾಗವನ್ನು ಕೂಳೆಗೀಳೆ ಕಿತ್ತು ಹಸನು ಮಾಡಿ, ತೊಪ್ಪೆನೀರಿನಿಂದ ಸಾರಿಸಿ, ಒಪ್ಪ ಮಾಡಿ, ಕಣ ಮಾಡಕೊಂಡು ರಾಶಿ ಕಾವಲಿಗೆಂದು ಒಂದು ಗುಡ್ಲು ಹಾಕಿಕೊಳ್ಳುವ ರೂಢಿಯಿತ್ತು. ಕಣದ ಗುಡ್ಲಿನಲ್ಲೂ ತಾತನೊಟ್ಟಿಗೆ ಅನೇಕ ರಾತ್ರಿಗಳನ್ನು ಕಳೆದಿದ್ದೇನೆ. ಹೀಗೆ ಆನೆಗಳಿಂದ, ಕಾಡಂದಿಗಳಿಂದ ಕೊಯ್ಲುಪೂರ್ವದಲ್ಲೂ, ಕೊಯ್ಲಿನ ನಂತರವೂ ಬೆಳೆದದ್ದನ್ನು ರಕ್ಷಿಸಿಕೊಳ್ಳುವ ಆತಂಕ ಸಹಜವಾಗಿಯೇ ಇರುತ್ತಿತ್ತು. ಅರಿ ಹಾಸಿ, ಗುಂಡು ಕಟ್ಟಿ, ಉದ್ಗೆಮಣೆಯ ಮೇಲೆ ನಿಂತು ” ವೋಲ್ಗಾ ವಾಸ್ದೇವರೇ ಹುಲಿದೇವರೇ ವೊಲ್ಗೋ…” ಎಂದು ಪ್ರಾರ್ಥಿಸುತ್ತಾ ತೂರಿ, ಕೇರಿ ರಾಶಿಮಾಡಿ, ರಾಶಿಯನ್ನು ಅಲಂಕರಿಸಿ, ಸೀಯನ್ನ ಎಡೆಯಿಟ್ಟು, ಕಡ್ಡಿ ಹಚ್ಚಿ, ಕೈ ಮುಗಿದು ಆಮೇಲೆ ಕಣದ ಹೊರಗೆ ಮುನಿಯಪ್ಪನ ಹೆಸರಿನಲ್ಲಿ ಒಂದೋ ಎರಡೋ ಮರಿಕುಯ್ದು, ಮೂರುಕಲ್ಲಿಗೆ ಮೂರುನಾಮ ಇಕ್ಕಿ, ಹಲಸಿನೆಲೆಯಲ್ಲಿ ಎಡೆ ಮಡಗಿ, ನೇಮಿನಿಷ್ಠೆಯಿಂದ ಪೂಜೆ ಮಾಡಿ, ಊರಿನ ಜನರನ್ನು ಕರೆದು ಅವರಿಗೂ ನಾಮ ಇಕ್ಕಿ ಊಟ ಮಾಡಿಸಿ, ಅಗತ್ಯವಿದ್ದವರಿಗೆ ಧರ್ಮದ ರಾಗಿ ಕೊಟ್ಟು, ಅನಂತರ ರಾಶಿಗೆ ಸಣ್ ಮಾಡಿಕೊಂಡು ಇಬ್ಬಳಿಗೆಯಲ್ಲಳೆದು ಚೀಲಗಳಿಗೆ ತುಂಬಿಸಿ ಎತ್ತಿನಗಾಡಿಯಲ್ಲಿ ಮನೆಗೆ ಸಾಗಿಸಿ, ಹಿಂದಲಟ್ಟಿಯಲ್ಲಿ ಅಣೆಕೊಟ್ಟು ಮೂಟೆಗಳನ್ನು ಜೋಡಿಸಿಡುವುದು ಇಲ್ಲವೇ ಗುಳಿಬಾವಿ (ಕಣಜ) ಗೆ ತುಂಬಿಸುವುದು ತಾತನ ಕಾಲದ ಪದ್ಧತಿಯಾಗಿತ್ತು, ಕಡ್ಲೆಕಾಯಿಯನ್ನು ಕಿತ್ತು, ಒಣಗಿಸಿ, ಬಿಡಿಸಿ ಮಾರುವುದು ಇನ್ನೊಂದು ವಿಧಾನವಾಗಿತ್ತು, ಅವರೆ, ತೊಗರಿ, ತರಗುಣಿ, ಹುರುಳಿಕಾಳುಗಳನ್ನು ಅಂಚಿಹುಲ್ಲಿನ ಮೂಡೆಗಳಲ್ಲಿ ಶೇಖರಣೆ ಮಾಡುವುದು ಮತ್ತೊಂದು ಮಾಧರಿಯಾಗಿತ್ತು.

ಕಣಜದ ತುಂಬ ದವಸ, ಮೂಡೆಗಳ ತುಂಬ ಕಾಳು, ವಾಡೆಗಳ ತುಂಬ ಧಾನ್ಯ, ಕೊಟ್ಟಿಗೆ ತುಂಬ ದನಕರುಗಳು, ಹಬ್ಬ ಬಂತೆಂದರೆ ತಾನು ಲೆಕ್ಕದಲ್ಲಿ ಬಟ್ಟೆ ಖರೀದಿ, ಹಸಿರುಮುನಿ, ಕಳದಮುನಿ, ಹೊಸ್ತೊಡಕು, ಗೂಡುನ್ ಸವೆ, ಮಾರ್ಲಮಿ, ದೇವರಸೇವೆ, ಹರಕೆ ಹೆಸರಲ್ಲಿ ಆಗಾಗ ಆಡುಕುರಿ ಬಲಿದಾನ, ಪ್ರತಿ ಗೌರಿಪಾಡ್ಯಕ್ಕೆ ಮನೆದೇವರ ಗುಡಿ ಮುಂದೆ ಅನ್ನದಾನ – ಹೀಗೆಲ್ಲ ತುಂಬಿರುತ್ತಿದ್ದ ಮನೆಯಲ್ಲಿ ಸಣ್ಣದೊಂದು ಆತಂಕದ ಗಾಳಿ ಬೀಸತೊಡಗಿತು. ತಾತನಿಂದ ಅಪ್ಪನ ಕೈಗೆ ಮನೆಯ ಯಜಮಾನಿಕೆಯ ಹೊಣೆ ವರ್ಗಾವಣೆಯಾದ ಮೇಲೆ ಎಲ್ಲವೂ ಹಿಂದಿನಂತೆ ಸುಖದಾಯಕವೂ, ಆಶಾದಾಯಕವೂ, ಸಮೃದ್ಧಿದಾಯಕವೂ ಆಗಿರಲಿಲ್ಲ. ಎಲ್ಲವೂ ಸಲೀಸಾಗೇ ಇದ್ದ ಮನೆಯಲ್ಲಿ ದಿಢೀರನೆ ಆತಂಕದ ಗಾಳಿ ಬೀಸಲು ಅವರಿವರ ಮಾತುಗಳನ್ನು ಕಟ್ಟಿಕೊಂಡು, ಮನೆಗೆ ಬರುವ ಅತಿಥಿಗಳು ಕೊಡುವ ಪುಕ್ಸಟ್ಟೆ ಸಲಹೆಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಅಪ್ಪ ಮಾಡಿಕೊಂಡ ಯಡವಟ್ಟುಗಳು ಹಲವಾರು. ದಿನೇ ದಿನೇ ಸಂಕಷ್ಟಗಳು ಎದುರಾಗತೊಡಗಿದವು. ಕೊಟ್ಟಿಗೆಯ ಆಡುದನ ಒಂದೊಂದಾಗಿ ಕರಗತೊಡಗಿದವು, ಅಣೆಕೊಟ್ಟು ಜೋಡಿಸಿಟ್ಟಿದ್ದ ರಾಗಿಮೂಟೆಗಳನ್ನು ತಲವಾಸೆಗೆ ಅಳೆದದ್ದಾಯಿತು. ಸಾಲ ಏರುತ್ತಾ ಹೋಯಿತು, ನೆಮ್ಮದಿ ಇಳಿಯುತ್ತಾ ಹೋಯಿತು. ತಾತ ರೇಗಾಡತೊಡಗಿದ. ನಮ್ಮ ನಾಯಿ ಹಾಕಿದ್ದ ಐದೂ ಮರಿಗಳನ್ನು ಮಂಕರಿಯಲ್ಲಿ ತುಂಬಿಕೊಂಡು ಹಳ್ಳದ ಮಡುವಿಗೆಸೆಯಲು ಹೋಗಿದ್ದ. ನಮ್ಮನೆಯ ಅಟ್ಟದಲ್ಲಿ ಬೆಕ್ಕುಹಾಕಿದ್ದ ಮರಿಗಳನ್ನು ಹಿಡಿದುಕೊಂಡು ಹೋಗಿ ಕಾಡಿನಲ್ಲಿ ಬಿಟ್ಟು ಬಂದಿದ್ದ. ತಾತನ ಸಿಟ್ಟಿಗೆ ಕಾರಣವಿತ್ತು. ಒಮ್ಮೊಮ್ಮೆ ಬೇಸರದಲ್ಲಿ ” ಮೂರ್ ನೀರ್ ತತ್ತಾರೈದ್ಲೇ” ಅಂತ ಒಂದು ತಪ್ಪಲೆ ನೀರನ್ನು ಅಂತುಕೊಂಡು ಗಟಗಟನೆ ಕುಡಿದು ಹಿಟ್ಟುಣ್ಣದೇ ಹಾಗೆ ಬೆಂಚಿನ ಮೇಲೆ ಮಲಗಿಬಿಡುತ್ತಿದ್ದ; ತಾತನ ಬೇಸರಕ್ಕೂ ಕಾರಣವಿತ್ತು.

ಇದನ್ನೆಲ್ಲ ನೋಡಿ ಅಪ್ಪ ಭಜನೆ, ಭಂಗಿಸೊಪ್ಪು ಇತ್ಯಾದಿಗಳಲ್ಲಿ ತೊಡಗಿಬಿಟ್ಟ. ಧನುರ್ಮಾಸ ತಿಂಗಳಲ್ಲಿ ಕೋಳಿ ಕೂಗುವ ಹೊತ್ತಿಗೆದ್ದು, ಸ್ನಾನ ಮಡಿ ಮಾಡಿಕೊಂಡು, ಪಂಚೆ ಉಟ್ಟುಕೊಂಡು, ವಿಭೂತಿಧಾರಣೆ ಮಾಡಿಕೊಂಡು, ಶಿವಪೂಜೆ ಮುಗಿಸಿಕೊಂಡು ಭಜನೆಮನೆಗೆ ಹೋಗಿ ಒಂದಿಷ್ಟು ಜನರ ಜೊತೆ ಸೇರಿಕೊಂಡು ಭಜನೆ ಮಾಡುವುದರಲ್ಲಿ ನಿರತನಾದ. “ರಾಮಾರಾಮಾ ಎನ್ನಿರೋ.. ಇದೇ ಮಹಾನಾಮ ಪರಮ ರಾಮನಾಮ, ಹಾಡಿರಿ ರಾಗಗಳ ನುಡಿಸಿರಿ ತಾಳಗಳ, ರೇಣುಕಾಚಾರ್ಯ, ಇಂಥಾ ಮಾನವ ಜನ್ಮ…” ಮುಂತಾದ ಹಾಡುಗಳನ್ನು ಹಾರ್ಮೋನಿಯಂ, ದಮ್ಮಡಿ, ಮದ್ದಳೆ, ತಾಳ ನುಡಿಸುತ್ತಾ, ಸೀತಾರಾಮಾಂಜನೇಯಲಕ್ಷ್ಮಣರ ಫೋಟೋ ಮತ್ತು  ಗರುಡಗಂಬ ಹಿಡಿದುಕೊಂಡು ಊರುತಿಬ್ಬ ಹಾಡುತ್ತಾ ಬೆಳಕರಿಯುವಷ್ಟರಲ್ಲಿ ಒಂದು ರೌಂಡು ಹಾಕುವ ರೂಢಿ; ನಾನೂ ಅಪ್ಪನೊಡನೆ ಕೆಲವೊಮ್ಮೆ ಹೋಗುತ್ತಿದ್ದೆ. ಧನುರ್ಮಾಸ ಬಿಟ್ಟರೆ ಪ್ರತಿ ಶನಿವಾರ ನಮ್ಮೂರಿನ ಭಜನೆಮನೆಯಲ್ಲಿ ಭಜನೆ ಮಾಡುವ ಅಭ್ಯಾಸವಿರಿಸಿಕೊಂಡಿದ್ದರು. ಎಷ್ಟೋ ದಿನ ಅಪ್ಪ ತಡರಾತ್ರಿಯವರೆಗೆ ಭಜನೆ ಮಾಡಿ, ಭಜನೆಮನೆಯ ಪಡಸಾಲೆಯಲ್ಲೇ ಮಲಗಿದ್ದನ್ನು ಗಮನಿಸಿದ್ದೇನೆ. ಅಪ್ಪನ ಮನಸ್ಸು ತೀವ್ರವಾಗಿ ಅಧ್ಯಾತ್ಮದೆಡೆಗೆ ತುಡಿಯಲಾರಂಭಿಸಿದ ಕಾಲಘಟ್ಟ ಬಹುಷಃ ಅದೇ ಇರಬೇಕು.

(ಮುಂದುವರೆಯುತ್ತದೆ)

-ಹೃದಯಶಿವ

ಸಮೃದ್ಧ ಬಾಲ್ಯವೇ ನನ್ನ ಬದುಕಿನ ಬೇರು (ಹೃದಯಶಿವ ಅವರ ಅಂಕಣ ಭಾಗ-01)
(ಖ್ಯಾತ ಗೀತ ರಚನೆಕಾರ, ಕವಿ ಹಾಗೂ ಲೇಖಕ ಹೃದಯ ಶಿವ ಅವರು ಇನ್ನು ವಾರಕ್ಕೊಮ್ಮೆ ತಮ್ಮ ಬಾಲ್ಯ ಕಾಲದ ಬದುಕಿನ ಕುರಿತು ಪೀಪಲ್‌ ಮಿಡಿಯಾದಲ್ಲಿ ʼಮುತ್ತಿನ ಜೋಳಿಗೆʼ ಹೆಸರಿನ ಅಂಕಣ ಬರೆಯಲಿದ್ದಾರೆ.)

ನಮ್ಮವ್ವನನ್ನು ಮದುವೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ನಮ್ಮಪ್ಪ ಮೊದಲೊಂದು ಮದುವೆಯಾಗಿ ಆಕೆಯಿಂದ ಬೇರೆಯಾಗಿದ್ದ. ಆ ಮದುವೆಯ ದೆಸೆಯಿಂದ ಕೋರ್ಟು, ಕಚೇರಿ, ಜೈಲು ಇತ್ಯಾದಿಗಳನ್ನು ನೋಡಿದ್ದ. ಆ ಬಗ್ಗೆ ಇಲ್ಲಿ ವಿವರವಾಗಿ ಬರೆಯುವುದು ಬೇಡವೆಂದು ಭಾವಿಸುತ್ತೇನೆ. ಇಷ್ಟಕ್ಕೂ ಸ್ವಭಾವದಲ್ಲಿ ಮೃದು ಸ್ವಭಾವದ ವ್ಯಕ್ತಿಯಾಗಿದ್ದ ನಮ್ಮಪ್ಪ, ಹೊಲ, ತೋಟ, ಪೂಜೆ ಇತ್ಯಾದಿಗಳಲ್ಲಿ ತೊಡಗಿರುತ್ತಿದ್ದ ನನ್ನಪ್ಪ ಹೇಗೆ ಅಂಥದೊಂದು ಆಘಾತದ ಸುಳಿಯಿಂದ ಹೊರಬಂದು ಬದುಕಿನಲ್ಲಿ ಸುಧಾರಿಸಿಕೊಂಡನೋ ಅಂತ ಅಚ್ಚರಿಯಿಂದ ಆಲೋಚಿಸುತ್ತೇನೆ. ಇಂಥದೊಂದು ಹಿನ್ನೆಲೆಯಿದ್ದ ನಮ್ಮಪ್ಪ ಆನಂತರ ನಮ್ಮವ್ವನನ್ನು ದೇವಸ್ಥಾನವೊಂದರಲ್ಲಿ ಮದುವೆಯಾದನಂತೆ. ಮದುವೆಯಾದ ಮೂರು ವರ್ಷಗಳ ನಂತರ ಮೊದಲನೇ ಮಗನಾಗಿ ಒಂದು ಸಂಕ್ರಾಂತಿಯಂದು ನಾನು ಹುಟ್ಟಿದೆ. ನನ್ನ ಹಿಂದೆ ತಲಾ ಎರಡೆರಡು ವರ್ಷಗಳಿಗೊಮ್ಮೊಮ್ಮೆ ಸುಧಾ ತಂಗಿಯಾಗಿಯೂ, ಕುಮಾರ ತಮ್ಮನಾಗಿಯೂ ಹುಟ್ಟಿದರು. ಕನಕಪುರ ಸಮೀಪದ ಕೆಬ್ಬರೆ ನಮ್ಮೂರು. ನನಗೆ ದೊಡ್ಡಮಂಚೇಗೌಡ ಅಂತ ನಾಮಕರಣ ಮಾಡಿ ಊರಿನೆಲ್ಲರನ್ನು ಆಹ್ವಾನಿಸಿ ಒಬ್ಬಟ್ಟಿನೂಟ ಮಾಡಿಸಿ ಕಳಿಸಿದ್ದನಂತೆ ನನ್ನ ತಾತ. ಸ್ಕೂಲಿಗೆ ಸೇರಿಸುವಾಗ ಕೆ.ಎಂ.ಶಿವಣ್ಣ ಆದ ನಾನೀಗ ಹೃದಯಶಿವನಲ್ಲಿಗೆ ಬಂದು ನಿಂತಿದ್ದೇನೆ.

ಮಗುವಿಗೆ ತಾಯಿಹಾಲು ಎಷ್ಟು ಮಹತ್ವಪೂರ್ಣದ್ದು ಎಂಬುದನ್ನು ನೀವು ಬಲ್ಲಿರಿ. ಅಂತಹ ತಾಯಿಹಾಲಿನಿಂದ ವಂಚಿತನಾಗಿದ್ದೆ. ನಮ್ಮವ್ವನಿಗೆ ಎದೆಬಾವು ಕಾಣಿಸಿಕೊಂಡ ಕಾರಣ ನನಗೆ ಎದೆಹಾಲು ಕುಡಿಯುವ ಅವಕಾಶ ಸಿಗಲಿಲ್ಲವೆಂದು ನಮ್ಮಮ್ಮ (ಅವ್ವನ ಅವ್ವ) ಹೇಳುತ್ತಿದ್ದಳು. ಹಾಗಾದರೆ ಹೇಗೆ ಬದುಕಿತು ಈ ಜೀವ? ಕಾಮಕಸ್ತೂರಿ ಬೀಜ, ಅಳಲೆಕಾಯಿ, ಮಂದುಪ್ಪು, ಬಜೆ ಮುಂತಾದವನ್ನು ಅರೆದು, ಅದಕ್ಕೆ ಬೆಂಕಿಯಲ್ಲಿ ಕೆಂಪಗೆ ಕಾದ ಕುಡುಗೋಲಿನ ತುದಿಯನ್ನು ಅದ್ದಿ, ಹೊಲಗೇರಿಯಿಂದ ಕರೆದು ತರುತ್ತಿದ್ದ ನಾಟಿಹಸುವಿನ ಹಾಲಿನೊಂದಿಗೆ ಬೆರೆಸಿ ಒಳಲೆಯಿಂದ ಇಷ್ಟಿಷ್ಟೇ ಇಷ್ಟಿಷ್ಟೇ ಕುಡಿಸುತ್ತಿದ್ದದ್ದು, ಶಿವಾಲದಪ್ಪ, ತಾಯಿಮುದ್ದವ್ವ, ಕ್ವಾಣನಮಾರಮ್ಮ, ಮಾದಪ್ಪ, ಬೀರಪ್ಪ, ಚಿನ್ನದಗಿರಿಯಯ್ಯ ಮುಂತಾದ ದೇವರುಗಳಿಗೆ ಅರಿಸಿನದ ಬಟ್ಟೆಯಲ್ಲಿ ನಮ್ಮಮ್ಮ ಕಾಣಿಕೆ ಕಟ್ಟಿದ್ದು,  ಹರಿಕೆ ಹೊತ್ತಿದ್ದು, ಚಿಟಿಕೆ ಹಾಕಿದ್ದು, ಇಳಿ ತೆಗೆದದ್ದು, ಮೊಗೆ ಹಾಕಿದ್ದು, ಮುದ್ದಿಸಿದ್ದು, ಉಣಿಸಿದ್ದು, ತಿನಿಸಿದ್ದು, ತೂಗಿದ್ದು, ತಟ್ಟಿದ್ದು, ಜೋಗುಳ ಹಾಡಿದ್ದು, ದೊಡ್ಡಾಲಳ್ಳಿಯ ನಿಡಗಲ್ಲು ಡಾಕ್ಟರು, ಕೋಡಳ್ಳಿಯ ಸುಬ್ಬಣ್ಣ ಡಾಕ್ಟರು ಚುಚ್ಚಿದ್ದು – ಈ ಎಲ್ಲದರ ಕೃಪೆಯಿಂದ ಎಂದೋ ಮಣ್ಣಾಗಬೇಕಿದ್ದ ನಾನು ಇನ್ನೂ ಉಸಿರಾಡುತ್ತಿದ್ದೇನೆ.

(ಹೃದಯ ಶಿವ ಅವರು ಹುಟ್ಟಿ ಬೆಳೆದ ಕೆಬ್ಬರೆ .)

ಕೆಬ್ಬರೆ ನಮ್ಮೂರಾದರೂ ನಾನು ಹುಟ್ಟಿದ್ದು ನಮ್ಮವ್ವನ ತವರೂರಾದ ಚೀಲಂದವಾಡಿಯಲ್ಲಿ; ದೊಡ್ಡಾಲಹಳ್ಳಿಯ ಮಗ್ಗುಲಿಗೆ ಅಂಟಿಕೊಂಡ ದಟ್ಟ ಕಾನನದ ಪುಟ್ಟ ದೊಡ್ಡಿ ಈ ಚೀಲಂದವಾಡಿ. ಕಾವೇರಿ ತಟದ ಮುತ್ತತ್ತಿಗೋ, ಮಾದಯ್ಯನಗಿರಿಗೋ ಹೋಗಬೇಕೆಂದರೆ ಕಾಲ್ನಡಿಗೆಯಲ್ಲೇ ಹೋಗಬಹುದಾಗಿತ್ತು. ಗಂಡ ತೀರಿಕೊಂಡ ಬಳಿಕ ಒಟ್ಟು ಎಂಟು ಮಕ್ಕಳನ್ನು ಸಾಕಿ ಸಲುಹಿ ಮದುವೆ, ಸೋಬನ ಮಾಡಿದ್ದ ನಮ್ಮಮ್ಮ ಆ ಪೈಕಿ ಮೂರು ಹೆಣ್ಣುಮಕ್ಕಳು ಹೆತ್ತ ಕೂಸುಗಳಿಗೆ ಆರೈಕೆ ಮಾಡಿ ಸೈ ಅನ್ನಿಸಿಕೊಂಡ ಗಟ್ಟಿಗಿತ್ತಿ; ನಮ್ಮವ್ವ ಕೊನೆಯವಳು. ಇದ್ದ ಹೊಲವನ್ನೆಲ್ಲ ತನ್ನೈದು ಗಂಡು ಮಕ್ಕಳಿಗೆ ಹಂಚಿ ತನಗೆಂದು ಒಂದಿಷ್ಟು ಇಟ್ಟುಕೊಂಡು ಯಾರ ಹಂಗಿನಲ್ಲೂ ಉಳಿಯದೆ ತನ್ನ ಪಾಡಿಗೆ ಪುಟ್ಟದೊಂದು ಗೂಡಿನಲ್ಲಿ ಕಾಲ ಕಳೆದವಳು ನಮ್ಮಮ್ಮ. ಅದೊಂದು ಪುಟ್ಟ ಮನೆಯಾಗಿತ್ತು. ಹಜಾರವನ್ನೂ, ಅಡುಗೆಮನೆಯನ್ನೂ ಪ್ರತ್ಯೇಕಿಸುವ ಮೋಟುಗೋಡೆ. ಅಟ್ಟದ ಮೇಲೆ ಸೌದೆ, ಮೂಲೆಯಲ್ಲಿ ಒಂದು ಗುಡಾಣ, ಅದರ ಮೇಲೊಂದು ಮಡಕೆ, ಅದರ ಮೇಲೊಂದು ಓಡು. ಮಣ್ಣಿನೊಲೆಯಲ್ಲಿ ಅಂಬಲಿಯೋ ಅಣ್ಣೆಸೊಪ್ಪೋ ಬೇಯಿಸಿ ಪ್ರೀತಿತಿಂದ ಉಣ್ಣಿಸಿ, ಮಂದಲಿಗೆ ಹಾಸಿ, ಅದರ ಮೇಲೆ ತನ್ನ ಇದ್ದ ಬದ್ದ ಹಳೆಯ ಸೀರೆಗಳನ್ನೆಲ್ಲ ಮಂದವಾಗಿ ಹಾಸಿ, ಚಿಕ್ಕೊನ್ನಿ ದೊಡ್ಡೊನ್ನಿ ಪರಸಂಗ ಹೇಳುತ್ತಾ ತನ್ನ ಸೆರಗಿನಲ್ಲಿ ಕವುಚಿಕೊಂಡರೆ ಕೋಳಿ ಕೂಗುವುದೇ ಗೊತ್ತಾಗುತ್ತಿರಲಿಲ್ಲ. ನನಗೆ ಮೂರು ವರ್ಷ ತುಂಬುತ್ತಿದ್ದಂತೆಯೇ ಅಲ್ಲೇ ಕಾಡಂಚಿನಲ್ಲಿದ್ದ ಅಂದಾನಪ್ಪನ ಮಠಕ್ಕೆ ಸೇರಿಸಿ ಅಆ ತಿದ್ದಲು, ಶಿವಪೂಜೆಗೆ ತಾವರೆ, ಕಣಗಿಲೆ ಮುಂತಾದ ಹೂವುಗಳನ್ನು ತಂದು ಕೊಡಲು ಕಾರಣಕರ್ತಳಾದಳು. ಅಂದಿನ ಅಂದಾನಪ್ಪ ಇಂದಿನ ಶ್ರೀಶ್ರೀಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ; ನನ್ನ ಪ್ರಥಮ ಗುರು. ನನಗೆ ಆರು ತುಂಬುವವರೆಗೂ ನಮ್ಮಮ್ಮನೇ ಸಾಕಿದ್ದು. ಆಕೆ ಸ್ನಾನ ಮಾಡಿಸಿದ ತಿಮ್ಮಿಕೆರೆ, ಆಕೆಯ ಹಿಂದೆ ಬಾಲದಂತೆ ಹೋಗಿ ತಂದಂತಹ ಬಿದಿರ ಕಳಲೆ, ಸೀಗೆಸೊಪ್ಪು, ಅಣ್ಣೆಸೊಪ್ಪು, ನೇರಳೆಹಣ್ಣು, ಬ್ಯಾಲದ ಹಣ್ಣು, ಸೌದೆಪುಳ್ಳೆ, ಆಲಳ್ಳಿಯಿಂದ ದೊಡ್ಡಿ ತನಕ ಆಕೆಯ ಹಿಂದೆ ಹಿಂದೆ ಹಾಕಿದ ಹೆಜ್ಜೆಗಳು, ಆಕೆ ಕೂತು ಸುಧಾರಿಸಿಕೊಳ್ಳುತ್ತಿದ್ದ ಹಾದಿಬದಿಯ ಮರಗಳು, ನೀರು ಕುಡಿಯುತ್ತಿದ್ದ ಸೊಣೆಗಳು – ನೆನೆದಾಗ ರೆಪ್ಪೆ ತೇವಗೊಳ್ಳುತ್ತವೆ.

ನನಗೆ ಆರು ತುಂಬಿದ ನಂತರ ಚೀಲಂದವಾಡಿಗೆ ಬಂದ ನನ್ನ ತಾತ (ಅಪ್ಪನ ಅಪ್ಪ) ಉಂಡು ಮಲಗಿ ಬೆಳಗೆದ್ದು ಕರಿಮಸಿಯಲ್ಲಿ ಹಲ್ಲುಜ್ಜಿ, ಮೊಕ ತೊಳೆದುಕೊಂಡು ಹಣೆಗೆ ವಿಭೂತಿ ಪಟ್ಟೆ ಬಳಿದು, ಪಂಚೆ ಎತ್ತಿಕಟ್ಟಿ, ತಲೆಗೆ ಪೇಟ ಕಟ್ಟಿಕೊಂಡು “ಬರ್ಲೇ ತಾಯಿ” ಅಂತ ನಮ್ಮಮ್ಮನಿಗೆ ಹೇಳಿ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡವನು ಸೀದಾ ಬಂದು ಕೆಬ್ಬರೆಯ ಸ್ಕೂಲಿನ ಮುಂದಿಳಿಸಿ ಒಂದನೇ ತರಗತಿಗೆ ಸೇರಿಸಿಬಿಟ್ಟ. ನಮ್ಮಪ್ಪನಿಗೂ ಮೇಷ್ಟ್ರಾಗಿದ್ದ ಮುನಿಚಿಕ್ಕಯ್ಯ ನನಗೂ ಮೇಷ್ಟ್ರಾದ. ಮಗ್ಗಿ, ಕಾಗುಣಿತವನ್ನೆಲ್ಲ ಅಂದಾನಪ್ಪ, ನಮ್ತಾತ ಅಷ್ಟೋ ಇಷ್ಟೋ ಕಲಿಸಿಕೊಟ್ಟಿದ್ದರಿಂದ ಓದಾಟದ ಕೆಲಸ ಅಷ್ಟೇನೂ ಕಷ್ಟ ಅನ್ನಿಸಲಿಲ್ಲ- ಎಲ್ಲ ಊರಿನ ಶಾಲೆಗಳು ಹೆಚ್ಚೂ ಕಮ್ಮಿ ಒಂದೇ ಥರ ಇರುವುದರಿಂದಲೂ, ಎಲ್ಲ ಊರುಗಳ ಅನುಭವಗಳೂ ಅಪ್ಪಿತಪ್ಪಿಯೂ ಒಂದೇ ಥರ ಇಲ್ಲದಿರುವುದರಿಂದಲೂ ನಮ್ಮೂರಿನ ಒಂದಿಷ್ಟು ನೆನಪುಗಳನ್ನು, ಅನುಭವಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ : ನಮ್ಮದು ಹಳೆಕಾಲದ ಹೆಂಚಿನಮನೆಯಾಗಿತ್ತು. ನಮ್ಮ ತಾತನ ಅಪ್ಪನಿಗೆ ಮೂವರು ಪತ್ನಿಯರು. ನಮ್ತಾತ ಕೊನೆಯ ಪತ್ನಿಯ ಮಗ. ನಮ್ತಾತನ ಅಣ್ಣಂದಿರಿಬ್ಬರು ಪ್ರತ್ಯೇಕವಾಗಿ ತಂತಮ್ಮ ಪಾಡಿಗೆ ವಾಸಿಸುತ್ತಿದ್ದರು. ನಮ್ತಾತ ಮತ್ತು ಆತನ ತಮ್ಮ ವಿಶಾಲವಾದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಒಲೆಗಳು ಮಾತ್ರ ಪ್ರತ್ಯೇಕವಾಗಿದ್ದವು. ಮುಂಬಾಗಿಲಿಂದ ಮನೆಯೊಳಕ್ಕೆ ಪ್ರವೇಶಿಸಿದರೆ ಒಂದು ತೊಟ್ಟಿ, ಸುತ್ತಲೂ ಹಜಾರ, ನಡುಮನೆ, ಕೋಣೆ (ಅಡುಗೆಮನೆ) ಇದ್ದವು. ಕಿರುಮನೆಯಲ್ಲಿ ವಾಡೆ, ಗುಡಾಣ, ಮಡಕೆ, ಕುಡಿಕೆ ಗಿಡಿರುತ್ತಿದ್ದವು. ಹಜಾರದಲ್ಲೊಂದು ಗುಳಿಬಾವಿ ಇತ್ತು ರಾಗಿ ಸಂಗ್ರಹಕ್ಕಾಗಿ. ಇನ್ನು ಹಿಂದಲಟ್ಟಿ ದನಕರು, ಆಡುಕುರಿಗಳ ವಾಸಸ್ಥಾನ. ಅದರಾಚೆಗೆ ಹಿತ್ತಲು, ಅಲ್ಲೊಂದು ಮರದೊಟ್ಲು, ಹೂವಿನ ಗಿಡಗಳು, ಹುಲ್ಲುಮೆದೆ.

ನಮ್ಮವ್ವ ಸೊಸೆಯಾಗಿ ನಮ್ಮನೆಗೆ ಬಂದಾಗ ನಮ್ಮಪ್ಪನ ಕಿರಿಯ ತಮ್ಮ, ತಂಗಿ ಇನ್ನೂ ಚಿಕ್ಕವರಂತೆ. ಅವರನ್ನು ತನ್ನ ಮಕ್ಕಳಂತೆ ಸಾಕಿ ಬೆಳೆಸಿದ ನಮ್ಮವ್ವ ಬೆಳಗೆದ್ದು ರಾಗಿ ಬೀಸುವುದರಲ್ಲಿ, ಹಾಲು ಕರೆದು ಹೆಪ್ಪಾಕಿ ಮಜ್ಜಿಗೆ ಕಡೆದು ಬೆಣ್ಣೆ ಕರಗಿಸಿ ತುಪ್ಪ ಮಾಡಿ ಗಡಿಗೆಗೆ ತುಂಬಿಸಿ ಜೋಪಾನವಾಗಿ ನೆಲುವಿನಲ್ಲಿಡುವುದರಲ್ಲಿ, ಕೊಟ್ಟಿಗೆಯನ್ನು ಹಸನುಗೊಳಿಸಿ ತಿಪ್ಪೆಗೆ ಕಸ ಸುರಿದು ಬಂದು ಮನೆಮಂದಿಗೆಲ್ಲ ಮಡಕೆ ತುಂಬ ಹಿಟ್ಟು ಜಡಿಯುವುದರಲ್ಲಿ, ಹಿಟ್ಟಿನ ಮಂಕರಿ ಹೊತ್ತು ಹೊಲಕ್ಕೆ ಹೋಗುವುದರಲ್ಲಿ, ಗಂಡಾಳಿಗೆ ಸಮನಾಗಿ ದುಡಿಯುವುದರಲ್ಲಿ, ಜೊತೆಗೆ ಮಕ್ಕಳ ಕಾಳಜಿ ವಹಿಸುವುದರಲ್ಲಿ ಸದಾ ಸಕ್ರಿಯಳಾಗಿರುತ್ತಿದ್ದಳು. “ಅಪ್ಪನ ಮನೇಲೂ ಸುಕ ಇಲ್ಲ, ಗಂಡನ ಮನೇಲೂ ಸುಕ ಇಲ್ಲ” ಎಂಬಂತಹ ಲೋಕಾರೂಢಿ ಮಾತನ್ನು ತನ್ನಷ್ಟಕ್ಕೆ ತಾನೇ ಗೊಟಕುತ್ತಾ ತಾನಾಯಿತು ತನ್ನ ಕೆಲಸವಾಯಿತು ಅಂತಿರುತ್ತಿದ್ದಳು.

(ಹೃದಯ ಶಿವ ಅವರ ಅವ್ವ, ಅಪ್ಪ ಮತ್ತು ತಂಗಿ)

ಆಗೆಲ್ಲ ನಮ್ಮನೆಯಲ್ಲಿ ಮೂರೊತ್ತೂ ಹಿಟ್ಟು. ಹೆಚ್ಚೆಂದರೆ ಅವರೆಕಾಯಿ ಕಾಲದಲ್ಲಿ ರೊಟ್ಟಿ ತಟ್ಟಿ ಹಿತಕಿದ ಬೇಳೆಸಾರು ಮಾಡಿ ತುಪ್ಪದೊಂದಿಗೆ ಕಲೆಸಿಕೊಂಡು ತಿನ್ನುವುದು. ಹಬ್ಬಹುಣ್ಣಿಮೆ, ನೆಂಟರಿಷ್ಟರು ಬಂದರಷ್ಟೇ ಅನ್ನಭಾಗ್ಯ. ಅನ್ನಕ್ಕಾಗಿ ಬಯಸಿಕೊಂಡು ಜ್ವರ ಬರಿಸಿಕೊಂಡು “ಹಿಟ್ಟು ಬ್ಯಾಡ, ರೊಟ್ಟಿ ಬ್ಯಾಡ ಹೊಟ್ಟೆ ಹಸೀತದೆ” ಅಂತ ಮಾರ್ಮಿಕವಾಗಿ ಅನ್ನಕ್ಕೆ ಬೇಡಿಕೆಯಿಡುತ್ತಿದ್ದ ವ್ಯಕ್ತಿಗಳು ನಮ್ಮೂರಿನಲ್ಲಿ ಆ ಕಾಲಕ್ಕೆ ಸಿಗುತ್ತಿದ್ದರು. ಇಷ್ಟಕ್ಕೂ ಹೊಲಗಳಲ್ಲಿ ಹಿಟ್ಟಿಗಾಗಿ ರಾಗಿ, ಸಾರಿಗಾಗಿ ಅವರೆ, ತೊಗರಿ, ತರಗುಣಿ ಬೆಳೆಯುತ್ತಿದ್ದೆವು. ಹರಳು (ಔಡಲ), ಎಳ್ಳು, ಹುಚ್ಚೆಳ್ಳು, ಸಾಸಿವೆಯಷ್ಟೇ ನಮ್ಮ ಬೆಳೆಗಳು. ಬಿಳಿಜ್ವಾಳ ಬೆಳೆದರೂ ಅಪರೂಪಕ್ಕೆ ಜ್ವಾಳದ ಮುದ್ದೆ, ಉಳಿದ ಜ್ವಾಳವನ್ನೆಲ್ಲ ಬೆಲ್ಲ ಟೀಸೊಪ್ಪಿನ ಖರ್ಚಿಗಾಗಿ ಮಾರಿಬಿಡುತ್ತಿದ್ದರು. ಕಡಲೆಕಾಯಿ, ರೇಷ್ಮೆ ಮುಖ್ಯ ವಾಣಿಜ್ಯಬೆಳೆಗಳಾಗಿದ್ದವು. ಹೀಗಾಗಿ ನಮ್ಮೂರಲ್ಲಿ ಭತ್ತ ಬೆಳೆಯುತ್ತಿದ್ದದ್ದು ತೀರಾ ಅಂದರೆ ತೀರಾ ಕಮ್ಮಿ. ಆದ್ದರಿಂದಲೇ ಹಿಟ್ಟು ನಮ್ಮೂಟ. ಹೈಕಳಾಗಿದ್ದ ನಾವು ದಿನಾ ಹಿಟ್ಟುಣ್ಣುವುದನ್ನು ಕಣ್ಣಲ್ಲಿ ನೋಡಲಾಗದೆ “ಲೋ ತಮ್ಮಯ್ಯ, ಆ ತ್ವಾಟ್ದಲ್ಲಿ ಒಂದಷ್ಟುಂಬಲಕ್ಕೆ ಬತ್ತ ಹಾಕ್ರುಲಾ.. ಈವೈಕ್ಳುಗೆ ಒಸಿ ಅನ್ನುಕ್ ದಾರಿ ಮಾಡ್ರುಲಾ” ಅಂತ ನಮ್ತಾತ ಹೇಳಿದ ಮೇಲೆ ನಾವೂ ಭತ್ತ ಬೆಳೆದೆವು, ಅನ್ನ ಉಣ್ಣಲು ಶುರುಮಾಡಿದೆವು. ಅಪ್ಪನನ್ನು ತಾತ ತಮ್ಮಯ್ಯ ಅಂತ ಕರೀತಿದ್ದ.

ಈ ಭತ್ತ ಬೆಳೆದುದ್ದರ ಹಿಂದೆ ಇನ್ನೊಂದು ಸ್ವಾರಸ್ಯಕರ ಸಂಗತಿಯುಂಟು. ಅದೇನೆಂದರೆ, ಆರರ ಬೆಳಗ್ಗೆ ಒಂದು ಕೈಯಲ್ಲಿ ತಗಡಿನ ಡಬ್ಬ, ಮತ್ತೊಂದು ಕೈಯಲ್ಲಿ ಮರದ ತುಂಡೊಂದನ್ನು ಹಿಡಿದು, ಮರದ ತುಂಡಿನಿಂದ ಡಬ್ಬಕ್ಕೆ ಬಡಿಯುತ್ತ ಸದ್ದು ಮಾಡುತ್ತಾ ಭತ್ತದ ಗದ್ದೆಯ ತೆವರಿಯ ಮೇಲೆ ನಾನು ಅತ್ತಿಂದಿತ್ತ ಇತ್ತಿಂದತ್ತ ಓಡಾಡಬೇಕಿತ್ತು. ಹಾಲ್ದುಂಬಿದ ತೆನೆಗಳಿಗೆ ಹಕ್ಕಿಗಳು ಮುತ್ತುವುದನ್ನು ತಪ್ಪಿಸುವ ಇಂಥದೊಂದು ಉದ್ದೇಶ ತಾತನದಾಗಿತ್ತು. ಹಸಿರನ್ನೇ ಉಸಿರಾಡುವ ತೋಟ; ಮನಸಿಗೆ ಮುದ. ತುಸು ದೂರದಲ್ಲೇ ಹರಿಯುವ ಪುಟ್ಟ ತೊರೆ. ನಾನು ಮೂರನೇ ತರಗತಿಯ ಹುಡುಗ. ತಂಪು ಸೂಸುತ್ತಿದ್ದ ಆ ತೋಟದಲ್ಲಿ ಭತ್ತದ ಪೈರುಗಳ ಜೊತೆಗೆ ಬಾಳೆಗಿಡಗಳು, ಬೇಲಿಗುಂಟ ನಿಂತಿದ್ದ ನೀಲಗಿರಿ ಸಸಿಗಳು, ಒಂದೆರಡು ಪರಂಗಿ ಮರಗಳು, ನಾಲ್ಕೋ ಐದೋ ತೆಂಗಿನ ಮರಗಳು, ಇವುಗಳ ಜೊತೆಗೆ ಅವ್ವ ಬೆಳೆಸಿದ್ದ ನುಗ್ಗೆಗಿಡ, ಕಾಕಡ ಗಿಡ, ಸ್ಪಟಿಕದ ಹೂವಿನ ಗಿಡ, ನಿಂಬೆಗಿಡಗಳೂ ಇದ್ದವು. ಡಬ್ಬ ಬಡಿದು ಕೈ ಸೋತಾಗ ಚಿಟ್ಟೆ ಹಿಡಿಯಲು ತೊಡಗುತ್ತಿದ್ದೆ. ಚಿಟ್ಟೆ ಸಿಗದಿದ್ದಾಗ ಹೂವನ್ನು ಹಿತವಾಗಿ ಬೆರಳುಗಳಿಂದ ನೇವರಿಸಿ ಮುಗುಳ್ನಗುತ್ತಿದ್ದೆ. ತಾತ ಆಗಾಗ ತೋಟದ ಕಡೆಗೆ ಸುಳಿವು ಕೊಡದಯೇ ಬರಬಲ್ಲಂಥ ವ್ಯಕ್ತಿ. ನಾನು ತೋಟದಲ್ಲಿ ಬಡಿಯುವ ಡಬ್ಬದ ಸದ್ದನ್ನು ಮನೆಯಿಂದಲೇ ಆಲಿಸಬಲ್ಲ ಚಾಣಾಕ್ಷ. ಸದ್ದು ನಿಂತೊಡನೆ ಎದ್ದು ತೋಟದೆಡೆಗೆ ಬಂದರೂ ಬರಬಹುದು. ಪೇಟ ಸುತ್ತಿದ್ದ ಆತನ ತಲೆ ಕಂಡೊಡನೆ ಡಬ್ಬ ಸದ್ದು ಮಾಡುತ್ತಿತ್ತು. ಇಂದಿಗೂ ನನ್ನೊಳಗೆ ಒಂದಿಷ್ಟು ಶಿಸ್ತು ಅಂತೇನಾದರೂ ಉಳಿದಿದ್ದರೆ ಅದಕ್ಕೆ ನನ್ನ ತಾತನೇ ಹೊಣೆಗಾರ. ತನ್ನ ಮಗ್ಗುಲಲ್ಲಿ ಮಲಗಿಸಿಕೊಂಡು ಆತ ಹೇಳಿಕೊಟ್ಟ ರಾಮಾಯಣ, ಮಹಾಭಾರತದ ಕಥೆಗಳು, ಸಂಕ್ರಾಂತಿಯಂದು ಗಟ್ಟಿಯಾಗಿ ಓದಿಸುತ್ತಿದ್ದ “ಗೋವಿನ ಹಾಡು” ಪದ್ಯ, ತಾನು ವಿವರಿಸುತ್ತಿದ್ದ ಅಮರಕೋಶದ ಪದಗಳ ಅರ್ಥ, ಬೆತ್ತದೇಟು ಕೊಟ್ಟು ಕಲಿಸುತ್ತಿದ್ದ ಮಗ್ಗಿ, ಮಹಾರಾಜರ ಕಾಲದ ಜಮೀನುಪತ್ರಗಳನ್ನು ಓದುತ್ತಿದ್ದ ಬಗೆ, ಮೈಸೂರು ದಸರಾಗೆ ತಾನು ಕಾಲ್ನಡಿಗೆಯಲ್ಲೇ ಹೋಗುತ್ತಿದ್ದದ್ದನ್ನು, ಮದ್ರಾಸಿನಲ್ಲಿ ರಾಜಕುಮಾರ್ ಮನೆಗೆ ಹೋಗಿ ಭೇಟಿಯಾಗಿದ್ದನ್ನು, ನರಸಿಂಹರಾಜು ಜೊತೆ ಮಾತಾಡಿದ್ದನ್ನು, ಧರ್ಮಸ್ಥಳದ ರತ್ನವರ್ಮಹೆಗ್ಗಡೆ ಜೊತೆಗಿನ ಸಂಪರ್ಕವನ್ನು, ಕನಕಪುರದ ಹಾಸ್ಟೆಲ್ ಕರಿಯಪ್ಪನ ಜೊತೆಗಿನ ಒಡನಾಟವನ್ನು… ಇತ್ಯಾದಿಗಳನ್ನು ಆತನ ಬಾಯಲ್ಲೇ ಕೇಳಬೇಕು.

ಇಂಥ ತಾತನನ್ನು ಕಂಡರೆ ಅವ್ವನಿಗೆ ಭಯ ಹಾಗೂ ಕೋಪ. ಭಯಕ್ಕೆ ಕಾರಣ ಆತನ ಶಿಸ್ತು, ಕೋಪಕ್ಕೆ ಕಾರಣ ಆತ ನನ್ನನ್ನು ದಂಡಿಸುತ್ತಿದ್ದ ರೀತಿ. ತಾತನಿಗೆ ವಯಸ್ಸಾಗುತ್ತಾ ಹೋದಂತೆ, ಆತ ಮಂಕಾಗುತ್ತಾ ಹೋದಂತೆ ಮನೆಯ ಉಸ್ತುವಾರಿಯನ್ನು ಅಪ್ಪ ಹೊತ್ತುಕೊಳ್ಳಬೇಕಾಯಿತು. ತಾತನ ಯಜಮಾನಿಕೆಯಲ್ಲಿ ಕಿರುಮುಚ್ಚಾಗಿ, ಅಚ್ಚುಕಟ್ಟಾಗಿ ಸಾಗುತ್ತಿದ್ದ ಮನೆಯ ಸಂಸಾರದ ಹೊಣೆ ಅಪ್ಪನ ಹೆಗಲಿಗೆ ಬೀಳುತ್ತಿದ್ದಂತೆಯೇ ಎಲ್ಲೋ ಒಂದು ಕಡೆ ಮನೆ ಲಯತಪ್ಪುವ ಸುಳುಹುಗಳು ನಿಧನಿಧಾನವಾಗಿ ಗೋಚರಿಸಲು ಶುರುವಾದವು. ಕಷ್ಟದ ದಿನಗಳು ಸಮೀಪಿಸುತ್ತಿರುವ ಸೂಚನೆಗಳು ಸುಳಿಯತೊಡಗಿದವು..

(ಮುಂದುವರೆಯುತ್ತದೆ)

-ಹೃದಯಶಿವ