Odanadi Stanley – Peepal Media

“ಸೌಜನ್ಯಳ ಪ್ರಕರಣ ಮುಗಿದ ಅಧ್ಯಾಯವಲ್ಲ. ಮುಚ್ಚಲ್ಪಟ್ಟದ್ದು ಮತ್ತೆ ಆರಂಭವಾಗಿದೆ”
ಅಪಹರಣ ಹಾಗೂ ಅತ್ಯಾಚಾರಕ್ಕೊಳಗಾಗಿ ಕೊಲೆಗೈಯ್ಯಲ್ಪಟ್ಟ ಹದಿನಾರರ ಬಾಲೆ ಸೌಜನ್ಯಳ ಚೈತನ್ಯವು ಕರುನಾಡಿನ ಹಾಗೂ ತುಳುನಾಡಿನ ಜನರ ತಾಯ್ತನ ಹಾಗೂ ನಾಗರಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಎಲ್ಲಾ ಮಾನವ ಮಿತಿಗಳನ್ನು ದಾಟಿ , ಹಳ್ಳ ಕೊಳ್ಳಗಳ ನಡುವೆ ಓಡುತ್ತಾ , ಧುಮು ಧುಮುಕಿ ಹರಿದು, ಹೋರಾಟದ ಸಾಗರದಲ್ಲಿ ಮಿಲನಗೊಂಡು ರೂಪ ಕಳೆದುಕೊಳ್ಳುತ್ತಿರುವ ಹಲವು ನದಿಗಳ ಆವೇಗವಾಗಿ, ಆ ಸಾಗರದ ಅಲೆಗಳ ಮೇಲೆ ಏರುಜವ್ವನೆಯಾಗಿ ನರ್ತಿಸುತ್ತಾ ಭೋರ್ಗರೆದು ಅಪ್ಪಳಿಸುತ್ತಿರುವುದನ್ನು ನೋಡಿ ಅನುಭವಿಸಿದವರಾರೂ “ಆಕೆ ಕಳೆದು ಹೋಗಿದ್ದಾಳೆ” ಎನ್ನುವ ಅವಿವೇಕದ ಜಾಣತನವನ್ನು ಪ್ರದರ್ಶಿಸಲೆತ್ನಿಸಲಾರಾರು.

ಪ್ರಜಾಸತ್ತೆಯಲ್ಲಿ ಸೇವಕರಾಗಿ ಆಯ್ಕೆಯಾದವರು ಎಚ್ಚರಿಕೆಯಿಂದ ಮಾತುಗಳನ್ನಾಡಬೇಕಾಗಿದೆ. ನಿಮ್ಮ ಮಾತುಗಳನ್ನು ಈ ನೆಲದ ಜನ ಸೂಕ್ಷ್ಮವಾಗಿ ಗಮನಿಸಿ ಗಂಭೀರವಾಗಿ ಪರಿಗಣಿಸಲಿದ್ದಾರೆ. ಸೌಜನ್ಯ ಈಗಾಗಲೇ ಈ ನೆಲದ ಮಗಳಾಗಿ ಹೋಗಿದ್ದಾಳೆ. ಆ ಎಳೆ ಬಾಳೆಯ ಸುಳಿಯ ಮೇಲೆ ಬಿರುಗಾಳಿಯಂತೆ ಎರಗಿ ಭಕ್ಷಿಸಿದವರನ್ನು ರಕ್ಷಿಸಿ, ನ್ಯಾಯ ದೇವತೆಯನ್ನು ಹೂತು ಮಣ್ಣು ಮಾಡಿದ ಅಧಿಕಾರಿಗಳು ನಿಮ್ಮ ಇಲಾಖೆಯಲ್ಲೇ ಇನ್ನೂ ಸೇವೆಯಲ್ಲಿರುವುದನ್ನು ಮರೆಯದಿರಿ. ಒಬ್ಬ ಬಡ ಬ್ರಾಹ್ಮಣ ಮೇಷ್ಟ್ರ ಮಗನನ್ನು ಈ ಪ್ರಕರಣದಲ್ಲಿ ನೇಣುಗಂಬದವರೆಗೆ ತಂದು ನಿಲ್ಲಿಸಿದ ಕ್ರೂರಿಗಳು ಇನ್ನೂ ಉಸಿರಾಡುತ್ತಿದ್ದಾರೆ. ಯಾವತ್ತು ಮಾನ್ಯ ನ್ಯಾಯಾಲಯ ಸಂತೋಷ್ ರಾವ್ ಗೂ ಈ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಪು ನೀಡಿತೋ ಅಂದೇ ಸೌಜನ್ಯಳ ಪ್ರಕರಣ ಮರು ಹುಟ್ಟು ಪಡೆದಿದೆ. ಸಂತೋಷ್ ರಾವ್ ನ ಮೇಲಾದ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿ, ದೂರನ್ನು ದಾಖಲಿಸಿಕೊಂಡಿದೆ ಎಂಬುದು ನಿಮ್ಮ ಗಮನದಲ್ಲಿರಲಿ. ಸೌಜನ್ಯಳ ಪ್ರಕರಣಕ್ಕೆ ಪ್ರಾಣವಾಯು ತುಂಬುವ ಕಾರ್ಯ ಗೃಹ ಇಲಾಖೆಯಲ್ಲಿರುವ ತಮ್ಮಂತಹ ವೈದ್ಯರಿಂದ ತುರ್ತಾಗಿ ಆಗಬೇಕಿದೆ. ಈ ಚದುರಂಗವನ್ನು ಗೆಲ್ಲಲು ಇನ್ನೂ ಕೆಲವು ವಿಫುಲ ಅವಕಾಶಗಳು ಸರ್ಕಾರಕ್ಕಿದೆ. ದಕ್ಷ ಕಮಿಷನರೇಟ್ ರಚಿಸಿ, ವರದಿ ಕೇಳಿ ಪಡೆಯಿರಿ. ಅದರ ಆಧಾರದ ಮೇಲೆ ಮರು ತನಿಖೆ ಸೇರಿದಂತೆ ಇನ್ನಿನ್ಯಾವ ಕಾನೂನಿನ ಹೆಜ್ಜೆಗಳನ್ನು ಇರಿಸಬೇಕೋ ಯೋಚಿಸಿ. ಇದಕ್ಕೆ ಬೇಕಿರುವುದು ತಜ್ಞರ ಕಾನೂನು ಸಲಹೆ, ಒಂದು ದಕ್ಷ ತನಿಖಾ ತಂಡ ಹಾಗೂ ನಿಮ್ಮ ರಾಜಕೀಯ ಇಚ್ಛಾಶಕ್ತಿಯ ಪ್ರಯೋಗ! ಸರ್ಕಾರದ ಸಂಬಳ ತಿಂದು , ಪ್ರಕರಣಕ್ಕೆ ಗೋರಿ ಕಟ್ಟಿ, ಅಮಾಯಕರನ್ನು ಸೆರೆಮನೆಗೆ ತಳ್ಳಿ, ನಿಜವಾದ ಪಾತಕಿಗಳನ್ನು ರಕ್ಷಿಸಿದ ವೈದ್ಯರು ಹಾಗೂ ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಮಾನ್ಯ ಸಿಬಿಐ ನ್ಯಾಯಾಲಯ ಹೇಳಿರುವಾಗ ಹೇಗೆ ಅದು ಮುಗಿದ ಅದ್ಯಾಯವಾಗುತ್ತೆ ಹೇಳಿ? ನಿಜವಾದ ಪಾಪಿಗಳನ್ನು ಪತ್ತೆ ಹಚ್ಚಿ ಕುಣಿಕೆಯನ್ನೂ ಬಿಗಿಗೊಳಿಸಬೇಕಾದ ನೀವು ಈ ಮಾತನ್ನು ಆಡಿದಲ್ಲಿ ಬೇರೆ ಅರ್ಥವನ್ನು ನೀಡೀತು ಜೋಪಾನ! ಆ ಪಾಪಿಗಳ ಹೇಸಿಗೆಯು ಇಲಾಖೆಯ ಹೊಸ ಮೇಟಿಯಾಗಿರುವ ನಿಮ್ಮ ಮೆಟ್ಟುಗಳಿಗೆ ಅಂಟಿಕೊಂಡಿದೆ. ತೊಳೆಯಲಂಜಿದಲ್ಲಿ ನಿಮ್ಮ ಗೌರವಕ್ಕೇ ಚ್ಯುತಿಯಾದೀತು. ನೀವು ಸುಲಭವಾಗಿ ನುಡಿದಂತೆ ಸೌಜನ್ಯಳಿಗೆ ನ್ಯಾಯ ದೊರಕಿಸುವ ಹೋರಾಟ ಮುಗಿದ ಅಧ್ಯಾಯವಲ್ಲ. ಆರಂಭವಷ್ಟೇ. ನಿಮ್ಮ ನಡೆ ಹಾಗೂ ನುಡಿಯಲ್ಲಿ ಕಾನೂನಿನ ಜ್ಞಾನ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾಣದಿರಲಿ.

“ಸೌಜನ್ಯಳಿಗಾಗಿ ನ್ಯಾಯ” ಎಂಬುದು 11 ವರ್ಷಗಳ ಬಳಿಕ ಭ್ರಷ್ಟರು ಕಟ್ಟಿದ ಗೋರಿಯ ಎದೆಯ ಸೀಳಿ ಹೊರಬಂದು ಮೊಳಗಿದ ನೊಂದವರ ಕೂಗು. ಹೋರಾಟ ಕವಿ ಸಿದ್ದಲಿಂಗಯ್ಯ ಹೇಳಿದ್ದನ್ನು ನೀವಿನ್ನೂ ಮರೆತಿರಲಾರಿರಿ ಎಂದು ಅಂದುಕೊಂಡಿದ್ದೆನೆ.

ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು
ಕಪ್ಪು ಮುಖ, ಬೆಳ್ಳಿ ಗಡ್ಡ, ಉರಿಯುತ್ತಿರುವ ಕಣ್ಣುಗಳು! ಹಗಲು ರಾತ್ರಿಗಳನ್ನು ಸೀಳಿ ನಿದ್ದೆಯನ್ನು ಒದ್ದರು. ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ. ಭೂಕಂಪನವಾಯಿತು ಅವರು ಕುಣಿವ ಹುಚ್ಚಿಗೆ. ಬೀದಿಯಲ್ಲಿ ಗಲ್ಲಿಯಲ್ಲಿ ಬೇಲಿ ಮರೆಯ ಮೆಳೆಗಳಲ್ಲಿ , ಯಜಮಾನನ ಅಟ್ಟದಲ್ಲಿ, ಧಣಿ ಕೂರುವ ಪಟ್ಟದಲ್ಲಿ ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು”

ಮೊನ್ನೆ ದಿನ ಸುಳ್ಯದಲ್ಲಿ ಕಪ್ಪು ಸಾಗರವೇ ನಿಂತಿತ್ತು. ನನ್ನ ಸ್ನೇಹಿತರೂ, ಪ್ರೀತಿಯ ಗುರುಗಳಾದ “ಜನ್ನಿ”ಯ ನೋವಿನ ಕೂಗಿನಂತಿದ್ದ ಹಾಡುಗಳು ನನ್ನ ಹಾಗೂ ಅಲ್ಲಿಯ ಜನಗಳ ಎದೆಯ ಬಡಿತ ಹೆಚ್ಚಿಸುತಲಿತ್ತು. ಎಲ್ಲಾ ಜಾತಿ, ಮತ ಪಂಥಗಳ ಆ ಜನ ಸಾಗರದಲ್ಲಿ ನೈಜವಾದ ಮನುಜ ಧರ್ಮವೊಂದು ಸೌಜನ್ಯಳಿಗಾಗಿ ಸಮರವನ್ನು ಸಾರಿತ್ತು. ಈ ನೆರೆ ಬಂದ ಹೊಳೆಯು ನಿಜವಾದ ಧಾರ್ಮಿಕರು, ದಲಿತ, ಮಹಿಳಾಪರ, ಜನಪರ, ಪ್ರಗತಿಪರ, ಹಾಗೂ ಸಜ್ಜನರಿಂದ ಕೂಡಿದೆ. ಡೊಂಗಿಗಳೂ ಕೂಡಾ ಇಲ್ಲಿ ಬೆತ್ತಲಾಗುತ್ತಿದ್ದಾರೆ. ಇಲ್ಲಿ ರಾಜ್ಯದ ಸಕಲ ಜನರೂ ಸೌಜನ್ಯಗಳಿಗಾಗಿ ನ್ಯಾಯವನ್ನು ಅಪೇಕ್ಷಿಸುತ್ತಿದ್ದಾರೆ. ಆರೋಪ ಹೊತ್ತವರು ಹಾಗೂ ಆರೋಪಿಗಳ ಪಡೆಯವರು ಮಾತ್ರ ಈ ಹೋರಾಟವನ್ನು ವಿರೋಧಿಸುತ್ತಿದ್ದಾರೆ. ಇದೊಂದು ದುರ್ಜನ – ಸಜ್ಜನರ ಸಂಗ್ರಾಮವೂ ಹೌದು! ಇಂತಹದೊಂದು ಚಳುವಳಿ ಕರುನಾಡಿನಲ್ಲಿ ಜೀವ ತಳೆದಿರುವುದ್ದಕ್ಕೆ ನಿಮಗೂ ಹೆಮ್ಮೆ ಇರಲಿ.

ಆದ್ದರಿಂದ ಈ ಬರಹವನ್ನು ಜನಸಾಮಾನ್ಯನ ಅರಿಕೆ ಎಂದೇ ತಿಳಿಯಿರಿ. ನಿಮ್ಮಗಳ ಮೇಲೆ ಜನಸಾಮಾನ್ಯ ಇಟ್ಟಿರುವ ನಂಬಿಕೆಯನ್ನು ದಯಮಾಡಿ ಹುಸಿ ಮಾಡದಿರಿ. ಇದು ರಾಜಕಾರಣದ ದಾಳವಲ್ಲ. ಕರುನಾಡಿನ ಹೆಣ್ಣು ಮಕ್ಕಳ ಮಾನ ಹಾಗೂ ಪ್ರಾಣದ ವಿಚಾರ. ಸೂತಕದ ಮನೆಯಲ್ಲಿ ನೀವಾಡುವ ಮಾತುಗಳು ನ್ಯಾಯ ಸಮ್ಮತವಾಗಿರಲಿ. ಸಾಂತ್ವನ ನೀಡಿ ಹೆತ್ತ ಒಡಲ ಉರಿಯನ್ನು ಆರಿಸುವಂತಿರಲಿ ಮತ್ತು ವಿವೇಕ ಹಾಗೂ ವಿವೇಚನೆಯ ದ್ಯೋತಕವಾಗಿರಲಿ.

ಬರಹ : ಒಡನಾಡಿ ಸ್ಟ್ಯಾನ್ಲಿ