P Lankesh – Peepal Media

‘ಸಹಪಾಠಿ’ ಕಥೆ ಪ್ರಸ್ತುತವಾಗಿ ಉಳಿದಿಲ್ಲ. ಅಥವಾ ಆಗಲೂ ಸಹ ಅದು ಪ್ರಸ್ತುತವಾಗಿರಲಿಲ್ಲ
ಜನವರಿ 25ಕ್ಕೆ ಲಂಕೇಶ್ ನಿಧನರಾಗಿ 24 ವರ್ಷಗಳಾಗುತ್ತದೆ. ಹೀಗೊಂದು ನೆನಪು ಮಾಡಿಕೊಳ್ಳುತ್ತಾರೆ ಚಿಂತಕರಾದ ಬಿ.ಶ್ರೀಪಾದ್ ಭಟ್

“ಕೊಟ್ಟಿಗೆಯಿಂದ ಜೋನಿಯನ್ನು ಕರೆದುಕೊಂಡು ಗೌಡನ ಕೋಣೆಗೆ ಹೋದೆ. ಗೌಡನೊಬ್ಬನೇ ಇದ್ದ. ಗೌಡ ನನ್ನ ದುರುಗುಟ್ಟಿ ನೋಡಿದ. ಪೂಜೆಯ ವಸ್ತುಗಳು ಸಿದ್ಧವಿದ್ದವು. ಗೌಡ ಸಾವು ಬದುಕಿನ ನಡುವೆ ಸಿಕ್ಕಿ ಹಾಕಿಕೊಂಡಂತಿದ್ದ. ರಾತ್ರಿ ಹನ್ನೊಂದು ಗಂಟೆಯಾಗಿದೆ. ಹಿತ್ತಿಲ ಮರಗಳಿಂದ ಮಳೆಯ ಹನಿಗಳು ಉದುರುತ್ತಿವೆ. ಗೌಡ ಎದ್ದು ಕುಳಿತ.ಜೋನಿ ನಿಂತೇ ಇದ್ದ. ಗೌಡ ಮೆಲ್ಲಗೆ ಚೆಂಬು ತೆಗೆದುಕೊಂಡ. ಜೋನಿಗೆ ಬೆಳ್ಳಿ ತಟ್ಟೆಯ ಮೇಲೆ ನಿಲ್ಲಲು ಹೇಳಿದೆ. ಗೌಡನ ಕೈಗಳು ನಡಗುತ್ತಿದ್ದವು. ಆದರೆ ನನ್ನ ಮೌನ ಒತ್ತಡ ತಂದಿತ್ತು. ನೀರಿನಿಂದ ಜೋನಿಯ ಪಾದ ತೊಳೆದ. ಇಡೀ ದೇಹ ಭೂಕಂಪಕ್ಕೆ ಸಿಕ್ಕಂತೆ ಅದುರುತ್ತಿತ್ತು. ಬೇಗ ಬೇಗ ಜೋನಿಯ ಪಾದ ತೊಳೆದು ವಿಭೂತಿ, ಗಂಧ ಪೂಸಿ, ಹೂ ಮುಡಿಸಿ ಆರತಿ ಎತ್ತಿದ. ನಾನು ಹೇಳಿದೆ “ಮನಸ್ಸು ಕೂಡ ಇದರಂತೆಯೇ ವರ್ತಿಸಬೇಕು”

ಮೇಲಿನದು ಲಂಕೇಶರ ‘ಸಹಪಾಠಿ’ ಕತೆಯ ಪ್ಯಾರ. ಆಗ ಈ ಕತೆ ತುಂಬಾ ಇಷ್ಟವಾಗಿತ್ತು. ಡಿ.ಆರ್. ನಾಗರಾಜ್ ಅವರಂತೂ ಇದು ಭಾರತದ ಶ್ರೇಷ್ಠ ಕತೆ ಅಂತೆಲ್ಲಾ ಹೊಗಳಿದ್ದರು. ನಾವೂ ಸಹ ಕನ್ನಡದ ಹತ್ತು ಶ್ರೇಷ್ಠ ಕತೆಗಳಲ್ಲಿ ಸಹಪಾಠಿ ಸೇರುತ್ತದೆ ಎಂದು ಪ್ರಚಾರ ಸಹ ಮಾಡಿದ್ದು…

ಆದರೆ ವರ್ಷಗಳು ಕಳೆದಂತೆ ಈ ಕತೆಯನ್ನು ಮರು ಓದಿದಾಗ ಯಾಕೋ ಇದರ ನೀತಿಯೆ ಹಾದಿ ತಪ್ಪಿಸುವಂತಿದೆ ಎಂದು ಅನಿಸತೊಡಗಿತು.

ಕೇಡಿತನ ಮತ್ತು ಒಳ್ಳೆಯತನ ಎರಡೂ ಮನುಷ್ಯನ ಮೂಲಭೂತ ಗುಣಗಳು. ಆದರೆ ಜಾತಿ ಮೀರಿ ಮದುವೆಯಾಗಿದ್ದಕ್ಕೆ ಮಗಳನ್ನೆ  ಕೊಂದು ಪೋಲೀಸರಿಗೆ ಶರಣಾಗುವಂತಹ ಭಾರತದಲ್ಲಿ ಸಹಪಾಠಿ ಕತೆಯಲ್ಲಿನ  ಪರಿವರ್ತನೆಯ ಕ್ರಿಯೆಗಳು ಜಾಳು ಅನಿಸುತ್ತದೆ.
ಕೇಡಿತನದ ಗೌಡನಿಗೆ ಸೇಡು, ಪ್ರಾಯಶ್ಚಿತ್ತ ಅನಿವಾರ್ಯ ಎಂದು ಕತೆಯ ನಿರೂಪಕ ಹೇಳುತ್ತಾನೆ.

ಆದರೆ ಶತಮಾನಗಳಿಂದ ಕೇವಲ ಸೇಡು ಮಾತ್ರ ಕಂಡಿದ್ದೇವೆ, ಪಾದಪೂಜೆಯಿಂದ ಪ್ರಾಯಶ್ಚಿತ್ತ ಅನಿವಾರ್ಯ ಎಂದು ನಿರ್ಧರಿಸುವುದನ್ನು ಓದಿ ಇಲ್ಲಿನ ಜಾತಿ ರೋಗ ಅಂಟಿಸಿಕೊಂಡ ಮನಸ್ಸುಗಳು ಗಹಗಹಿಸಿ ನಗುತ್ತವೆ.

ಮಾರ್ಕ್ವೇಜ್ ‘ಪೂರ್ವಗ್ರಹ ಪೀಡಿತ ಸುಳ್ಳುಗಳು ವರ್ಷಗಳ ಶ್ರಮವನ್ನು ಹಾಳು ಮಾಡುತ್ತವೆ’ ಎಂದು ಬರೆಯುತ್ತಾನೆ. ಸಹಪಾಠಿ ಕತೆಯಲ್ಲಿ ವರ್ಷಗಳಿಂದ ಪೂರ್ವ ತಲೆಮಾರುಗಳಿಂದ ಬಳುವಳಿಯಾಗಿ ಬಂದ ಗೌಡನ ಫ್ಯೂಡಲಿಸಂ ವ್ಯಕ್ತಿತ್ವ ಮತ್ತು ಕ್ರೌರ್ಯ ಒಂದು ತಿರುವಿನ ಘಟ್ಟದಲ್ಲಿ ತಲ್ಲಣಗಳಿಗೆ ಒಳಗಾಗುತ್ತದೆ ಎಂದು ನಿರೀಕ್ಷಿಸುವುದೇ ಸಮಸ್ಯಾತ್ಮಕವಾಗಿದೆ. ಲಂಕೇಶರು  ನವ್ಯದ ಸಂಕೀರ್ಣ ನಿರೂಪಣೆಯನ್ನು ಸಹಪಾಠಿ ಕತೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ ರೋಗಗ್ರಸ್ತ ಜಾತಿ ಮನಸ್ಸಿನ ಕತೆ ಹೇಳುವಾಗ ಅದು ವ್ಯಕ್ತಿಯ ಆಳದ ಕ್ರೌರ್ಯವನ್ನು ಸಾಮಾಜಿಕ ಸಂರಚನೆಯ ಜೊತೆಗೆ ಕರಾರುವಾಕ್ಕಾಗಿ ಗ್ರಹಿಸದೆ ಹೋದರೆ ಯಾವುದೇ ಬಗೆಯ ಸಂಕೀರ್ಣತೆಯೂ ನೆರವಿಗೆ ಬರುವುದಿಲ್ಲ. ಇದು ಸಹಪಾಠಿ ಕತೆಯ ದುರ್ಬಲ ಕೊಂಡಿ.

ಶತಮಾನಗಳಿಂದ ಬಂದ ಜಾತಿ ವ್ಯವಸ್ಥೆಯ ಯಜಮಾನಿಕೆಯನ್ನು ಮುಂದುವರೆಸಿದ ಗೌಡ (ಈತ ಕುರುಬರು) ತನ್ನ ನಲವತ್ತು ವರ್ಷಗಳ ಹಿಂದಿನ ಸಹಪಾಠಿ ಬರೆದ ಅಸ್ಪ್ರಶ್ಯತೆಯ ಕುರಿತಾದ ಪುಸ್ತಕಗಳನ್ನು ಓದಿ ಬದಲಾವಣೆಗೆ ಹಾತೊರೆಯುತ್ತಾನೆ. ಇಲ್ಲಿ ಲಂಕೇಶ್ ಮನಸ್ಸಿನ ಕಾಯಿಲೆಗೆ ಮದ್ದು ಅರೆಯತೊಡಗಿದಾಗ ದೈಹಿಕ ಕಾಯಿಲೆ ಶುರುವಾಗುತ್ತದೆ ಎನ್ನುವ ತಮ್ಮದೇ ನಂಬಿಕೆಯನ್ನು ಗೌಡನ ಮೇಲೂ ಪ್ರಯೋಗಿಸುತ್ತಾರೆ. ಆದರೆ ಇದು ಸಾಪೇಕ್ಷವಾಗಿ ಮೂಡಿ ಬಂದಿಲ್ಲ. ಕೇವಲ ಲಂಕೇಶರ ಆಶಯವಾಗಿ  ರೂಪಿತಗೊಂಡಿದೆ. ಈ ರೀತಿಯ ಮುಖ್ಯ ತಿರುವನ್ನು ಕೊಡುವ ವಿವರಗಳು ಲೇಖಕರ ಆಶಯಗಳಾಗಿ ತೆರೆದುಕೊಂಡರೆ ಅದು ಕತೆಯ ಸಹಜತೆಗೆ ಭಂಗ ಉಂಟು ಮಾಡುತ್ತದೆ. ಇದು ಸಹಪಾಠಿ ಕತೆಯ ಬಿಕ್ಕಟ್ಟು.

ದಲಿತ ಪಾತ್ರ ಜೋನಿ ಗೌಡನ ಪ್ರಾಯಶ್ಚಿತ್ತಕ್ಕೆ ಆಟಿಕೆಯಾಗಿ ಬಳಕೆಯಾಗುತ್ತಾನೆ. ಇಲ್ಲಿ ಮತ್ತೊಂದು ಪಾತ್ರ ಶಿವಪ್ಪನೂ ಸಹ ಜಾತಿ ಹಿಂಸೆಯನ್ನು ಹೇಳಲು ಸೃಷ್ಟಿಯಾದಂತಿದೆ. ಕತೆಯ ಒಡಲೊಳಗಿಂದ ಮೂಡಿ ಬಂದಂತಿಲ್ಲ. ಹೇರಿದಂತಿದೆ. ಮುಖ್ಯವಾಗಿ ಫ್ಯೂಡಲ್ ಮನಸ್ಸಿನ ಗೌಡ ಬದಲಾಗಲು ಬಯಸುತ್ತಿದ್ದಾನೆ, ಆದರೆ ಅದರ ಸವಾಲುಗಳಿಂದ ಹೈರಾಣಾಗಿದ್ದಾನೆ ಎನ್ನುವ ಮುಖ್ಯ ನಿರೂಪಣೆಗಾಗಿ ಇಲ್ಲಿನ ಜಾತಿ ವ್ಯವಸ್ಥೆಯ ಎಲ್ಲಾ ಕ್ಲೀಷೆ, ಜಟಿಲತೆಯನ್ನು ನಿರ್ಲಕ್ಷಿಸಿದ್ದಾರೆ. ಅಂದರೆ ಜಾತಿ ಕ್ರೌರ್ಯದ ಕುರಿತು ಹೇಳುವಾಗಲೂ ಲಂಕೇಶರು ವ್ಯಕ್ತಿ ವಿಶಿಷ್ಟತೆಯನ್ನು ನಂಬುವ ನವ್ಯದ ಶೈಲಿಯನ್ನು ನೆಚ್ಚಿಕೊಂಡಿದ್ದಾರೆ. ಇದು ಕೃತಕವಾಗಿದೆ. ಊರಿನ ಜಾತಿ ಹಿಂಸೆ ಪ್ರತ್ಯೇಕವಾಗಿ ಉಳಿದು ಗೌಡನ ಯಾತನೆ ಮಾತ್ರ ಕೇಂದ್ರವಾಗುತ್ತಾ ಹೋಗುತ್ತದೆ. ಗೌಡನ ಪ್ರಾಯಶ್ಚಿತ್ತಕ್ಕೆ ದಲಿತರನ್ನು ಗೊಂಬೆಗಳಂತೆ ಬಳಸಿಕೊಳ್ಳಲಾಗಿದೆ. ಇದೂ ಸಹ ಸಾಮಾಜಿಕತೆಯ ಹಿನ್ನಲೆಯಲ್ಲಿ ಬರದೆ ಗೌಡನ ದೌರ್ಬಲ್ಯದ ಗಳಿಗೆಯಾಗಿ ಬಿಚ್ಚಿಕೊಳ್ಳುವುದು  ತುಂಬಾ ಸಮಸ್ಯಾತ್ಮಕ.

ಕತೆಯ ಆರಂಭ ಮತ್ತು ಅಂತ್ಯದಲ್ಲಿ ಎಂದಿನಂತೆ ಹೋರಾಟಗಾರರು, ಪರಿಸರವಾದಿಗಳು ಕುರಿತು ಲಂಕೇಶರಿಗಿದ್ದ ಅಸಹನೆ ವ್ಯಕ್ತವಾಗಿದೆ.

ಮೂವತ್ತು ವರ್ಷಗಳ ನಂತರ ‘ಸಹಪಾಠಿ’ ಕತೆ ಪ್ರಸ್ತುತವಾಗಿ ಉಳಿದಿಲ್ಲ. ಅಥವಾ ಆಗಲೂ ಸಹ ಅದು ಪ್ರಸ್ತುತವಾಗಿರಲಿಲ್ಲ.

ಆದರೆ ಅದೇ ಕಾಲಘಟ್ಟದ ‘ಮುಟ್ಟಿಸಿಕೊಂಡವನು’ ತನ್ನ ಸಹಜತೆ ಮತ್ತು ಸರಳತೆಯಿಂದಾಗಿಯೇ ಅಂದಿಗೂ, ಇಂದಿಗೂ ಕಾಡುತ್ತದೆ. ಅನೇಕ ಕಾರಣಗಳಿಗೆ ಅದು ಲಂಕೇಶರ ಉತ್ತಮ ಕತೆಗಳಲ್ಲೊಂದು.