Rohit Vemula – Peepal Media

ರೋಹಿತ್ ವೇಮುಲ ಕುಟುಂಬದ ದುರಂತ ಕಥೆ ಇಲ್ಲಿದೆ
ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾಗಿದ್ದ ಸುದೀಪ್ತೊ ಮಂಡಲ್ ಅವರ ಲೇಖನದ ಮುಖ್ಯಾಂಶಗಳು.

ಗುಂಟೂರಿನ ಪ್ರಶಾಂತನಗರದಲ್ಲಿ ಮಕ್ಕಳ ಗುಂಪೊಂದು ಬೇವಿನ ಮರದಡಿ ಆಟವಾಡುತ್ತಿತ್ತು. ಆ ಗುಂಪಿನಲ್ಲಿ ಮುದ್ದಾದ ಹೆಣ್ಣು ಮಗುವೊಂದೂ ಇತ್ತು. ಅದಿನ್ನೂ ಅಂಬೆಗಾಲಿಡುತ್ತಿತ್ತು. ಒಂದು ವರ್ಷದ ಮಗು ಇರಬಹುದು. ಆ ಮಗುವೇ ರೋಹಿತ್ ವೇಮುಲನ ತಾಯಿ ರಾಧಿಕ. ಆ ಮಗು (ರಾಧಿಕ) ವಿನ ತಂದೆ ತಾಯಿ ವಲಸೆ ಬಂದಿದ್ದ ಕೂಲಿಗಳು. ಆ ಹೆಣ್ಣು ಮಗುವನ್ನು ಅಂಜನಿ ಎಂಬ ಮಹಿಳೆ ತನಗೆ ಕೊಡುತ್ತೀರಾ ಎಂದಾಗ ಆ ಕೂಲಿ ಕಾರ್ಮಿಕರು ಸಂತೋಷದಿಂದ ಒಪ್ಪಿಕೊಂಡರು. ಅಂಜನಿ ಎನ್ನುವ ಆ ಮಹಿಳೆ ವಡೇರು ಎಂಬ ಜಾತಿಗೆ ಸೇರಿದವರು. ರಾಧಿಕ ತಂದೆ ತಾಯಿ ಮಾಲ ಜಾತಿಗೆ ಸೇರಿದವರು.

ಅಂಜನಿಯವರು ರಾಧಿಕರನ್ನು ಅವರದೇ ಜಾತಿಯ ಹುಡುಗ ಮಣಿಕುಮಾರ್ ಎಂಬುವನಿಗೆ ಕೊಟ್ಟು ಮದುವೆ ಮಾಡಿದರು. ಆದರೆ ರಾಧಿಕರವರ ಜಾತಿಯ ಬಗ್ಗೆಯಾಗಲೀ, ಅವರನ್ನು ಪಡೆದ ಬಗ್ಗೆಯಾಗಲೀ ಮಣಿಕುಮಾರಗೆ ತಿಳಿಸಲಾಗಿರಲಿಲ್ಲ. ಹೀಗೆ ಮದುವೆಯಾದ ರಾಧಿಕರವರಿಗೆ ಮೂರು ಮಕ್ಕಳಾದವು. ಹಿರಿ ಮಗಳು ನೀಲಿಮಾ, ನಂತರದವನೇ ರೋಹಿತ್ ವೇಮುಲ, ಕೊನೆಯ ಮಗ ರಾಜ. ಮದುವೆಯಾದ ಮೊದಲ ಐದು ವರ್ಷಕ್ಕೆ ಈ ಮೂರು ಮುದ್ದು ಮಕ್ಕಳಿಗೆ ರಾಧಿಕರವರು ಜನ್ಮ ಕೊಟ್ಟರು. ಮಣಿಕುಮಾರ್ ಒಬ್ಬ ಬೇಜವಾಬ್ದಾರಿ ಮತ್ತು ಕ್ರೂರಿಯಾಗಿದ್ದ.

ಹೀಗಿರುವಾಗ ವಿವಾಹವಾಗಿ ಐದನೇ ವರ್ಷದಲ್ಲಿ ಮಣಿಕುಮಾರನಿಗೆ ರಾಧಿಕರವರ ನೈಜ ಜಾತಿ ತಿಳಿಯಿತು. ಪ್ರಶಾಂತ ನಗರದ ಯಾರೋ ಅದನ್ನು ತಿಳಿಸಿದ್ದರು. ಆಗಿನಿಂದ ಮಣಿಕುಮಾರನ ಹಿಂಸೆ ಅತಿಯೇ ಆಯಿತು. ಇನ್ನೂ ಕ್ರೂರಿಯಾದ. ‘ನಾನು ಅಸ್ಪೃಶ್ಯಳನ್ನು ಮದುವೆಯಾದೆ, ನನಗೆ ಮೋಸ ಮಾಡಿದಿರಿ’ ಎಂದು ನಿಂದಿಸುತ್ತಿದ್ದ. ಹೀಗಿರುವಾಗ ಅಂಜನಿಯವರು ತಮ್ಮ ಮಗಳು ರಾಧಿಕ ಹಾಗೂ ಮೂರು ಮೊಮ್ಮಕ್ಕಳನ್ನು ತಮ್ಮಲ್ಲಿಗೆ 1990 ರಲ್ಲಿ ಕರೆಸಿಕೊಂಡರು.

ಹಿಂದೂಸ್ತಾನ್ ಟೈಮ್ಸ್ ರೋಹಿತ್ ವೇಮುಲನ ಹುಟ್ಟೂರಿಗೆ ಹೋದಾಗ ಅಲ್ಲಿ ತಿಳಿದ ವಿಚಾರಗಳು ದಂಗು ಬಡಿಸಿದವು. ಇದುವರೆಗೆ ಅಂಜನಿಯವರು ಹೇಳಿದ್ದಕ್ಕಿಂತ ಭಿನ್ನವಾದ ವಿಚಾರಗಳು ರೋಹಿತ್ ವೇಮುಲನ ಆಪ್ತ ಸ್ನೇಹಿತ ಶೇಕ್ ರಿಯಾಜನಿಂದ ಬೆಳಕಿಗೆ ಬಂದವು. ರೋಹಿತ್, ರಿಯಾಜ್ ಎಷ್ಟು ಆಪ್ತರೆಂದರೆ ರೋಹಿತನ ತಮ್ಮ ರಾಜನ ನಿಶ್ಚಿತಾರ್ಥ ಕಾರ್ಯಗಳನ್ನು ರಿಯಾಜರೇ ನೆರವೇರಿಸಿಕೊಟ್ಟಿದ್ದರು ಕಾರಣ ರೋಹಿತ್ ಗೆ ಹೈದರಾಬಾದ್ ಯೂನಿವರ್ಸಿಟಿಯ ಕಿರುಕುಳ ಅದಾಗಲೇ ಆರಂಭವಾಗಿತ್ತು.

ರಿಯಾಜ್ ಹೇಳುವಂತೆ ರಾಧಿಕ ಆಂಟಿ ಹಾಗೂ ಅವರ ಮೂರು ಮಕ್ಕಳು ಅಂಜನಿಯವರ ಮನೆಯಲ್ಲಿ ಮನೆ ಆಳುಗಳಂತೆ ಇದ್ದರು. ಇವರು ಎಲ್ಲಾ ಕೆಲಸಗಳನ್ನು ಮಾಡುವಾಗ ಮಿಕ್ಕವರು ಕುಂತುಣ್ಣುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ರಾಧಿಕರವರೇ ಮನೆ ಕೆಲಸ ನಿರ್ವಹಿಸುತ್ತಿದ್ದರು. ಆಗೇನಾದರು ಚೈಲ್ಡ್ ಲೇಬರ್ ಆಕ್ಟ್ ಜಾರಿಯಲ್ಲಿದ್ದರೆ ಅದರಡಿ ಅಂಜನಿ ದೇವಿಯವರು ಶಿಕ್ಷೆಗೆ ಒಳಗಾಗುತ್ತಿದ್ದರು. ಏಕೆಂದರೆ ರಾಧಿಕರವರನ್ನು ಅವರು ಕೆಲಸಕ್ಕೆ ಇಟ್ಟುಕೊಂಡಿದ್ದರು. ರಾಧಿಕರವರು ಮದುವೆಯಾದಾಗ ಅವರಿಗೆ 14 ವರ್ಷ ವಯಸ್ಸಾಗಿತ್ತು. ರಾಧಿಕ ಅವರಿಗೆ ತಮ್ಮ ನಿಜವಾದ ಇತಿಹಾಸ ಗೊತ್ತಾಗಿದ್ದು ಅವರಿಗೆ 12 ಅಥವಾ 13 ವರ್ಷವಾಗಿದ್ದಾಗ.

‘ಅಂಜನಿಯವರ ತಾಯಿ, ರಾಧಿಕಳಿಗೂ ಮತ್ತು ಅಂಜನಿಯವರಿಗೂ ಜಾತಿಯ ಕಾರಣಕ್ಕಾಗಿ ಬೈಯುತ್ತಿದ್ದರು’ ಎಂದು ಆ ಊರಿನ ಉಪ್ಪಾಳಪಟ್ಟಿ ದಾನಮ್ಮ ಹೇಳಿದರು. ಸುತ್ತ ಮುತ್ತಲ ಜನರ ಪ್ರಕಾರ ‘ರಾಧಿಕರವರು ಅಂಜನ ದೇವಿಯವರ ಮನೆ ಆಳಾಗಿ ಬದುಕುತ್ತಿದ್ದರು’

ಅಲ್ಲಿ ವಡೇರಾ ಜನಾಂಗದವರು ‘ಮಣಿಕುಮಾರನಿಗೆ ರಾಧಿಕಳನ್ನು ಮದುವೆ ಮಾಡಿ ನಮ್ಮ ಜಾತಿಯವರಿಗೆ ಮೋಸ ಮಾಡಿದರು’ ಎಂದು ಅಂಜನಾ ದೇವಿಯವರನ್ನು ಹಳಿಯುತ್ತಾರೆ.

ರಿಯಾಜ್ ಹೇಳುತ್ತಾರೆ ‘ರೋಹಿತನಿಗೆ ಮನೆಗೆ ಹೋಗಲು ಇಷ್ಟವಿರುತ್ತಿರಲಿಲ್ಲ ಏಕೆಂದರೆ ಯಾವಾಗಲೂ ತನ್ನ ತಾಯಿ ಆಳಿನಂತೆ ಅಲ್ಲಿ ದುಡಿಯುತ್ತಿದ್ದರು. ಅವರಿಲ್ಲದಿದ್ದರೆ ನೀಲಿಮಾ ಅಥವಾ ರಾಜ ದುಡಿಯುತ್ತಿದ್ದರು. ರಾಧಿಕ ಮತ್ತು ಮಕ್ಕಳು ಬೇರೆ ಮನೆ ಮಾಡಿಕೊಂಡು ಹೋದ ಮೇಲೂ ಇದು ಮುಂದುವರೆಯಿತು. ಬಿಎಸ್ಸಿ ಓದುವಾಗ ರೋಹಿತ್ ಅಪರೂಪಕ್ಕೆ ಮನೆಗೆ ಹೋಗುತ್ತಿದ್ದ. ಅವನು ತನ್ನ ಓದಿಗೆ ಬೇಕಾಗುವ ಹಣವನ್ನು ಕಟ್ಟಡ ಕಾರ್ಮಿಕನಾಗಿ ಹಾಗೂ ಊಟ ಸಪ್ಲೆ ಮಾಡುವುದರ ಮೂಲಕ ಸಂಪಾಧಿಸುತ್ತಿದ್ದ. ಜೊತೆಗೆ ಪಾಂಪ್ಲೆಟ್ ಹಂಚುತ್ತಿದ್ದ ವಸ್ತು ಪ್ರದರ್ಶನಗಳಲ್ಲಿ ಕೆಲಸಮಾಡುತ್ತಿದ್ದ’ ಮುಂದುವರೆದು ರಿಯಾಜ್ರವರು ‘ಅಂಜನಿಯವರಿಗೆ ರಾಧಿಕರವರನ್ನು ಬಿಟ್ಟು 4 ಮಕ್ಕಳಿದ್ದರು. ಅವರಲ್ಲಿ ಇಬ್ಬರು ರಾಧಿಕ ಬಂದ ನಂತರ ಹುಟ್ಟಿದ್ದರು. ಒಬ್ಬ ಮಗ ಇಂಜಿನಿಯರ್, ಇನ್ನೊಬ್ಬ ಸಿವಿಲ್ ಕಂಟ್ರಾಕ್ಟರ್, ಮಗಳು ಬಿಎಸ್ಸಿ, ಬಿ.ಎಡ್, ಇನ್ನೊಬ್ಬಾಕೆ ಮಗಳು ಬಿಕಾಂ ಬಿ.ಎಡ್. ಸ್ವತಃ ಅಂಜನಿ ದೇವಿಯವರೇ ಎಂ.ಎ, ಎಂ.ಇಡಿ ಮಾಡಿದ್ದರು ಹಾಗೂ ಮುನಿಸಿಪಲ್ ಕಾರ್ಪೋರೇಷನ್ ಹೈಸ್ಕೂಲ್, ಗುಂಟೂರಿನ ಮುಖ್ಯಗುರುಗಳಾಗಿದ್ದರು. ಅವರ ಗಂಡ ಸರ್ಕಾರಿ ಮುಖ್ಯ ಇಂಜಿನಿಯರ್ ಆಗಿದ್ದರು. ಅಂಜನಿ ದಂಪತಿ ಪ್ರಕಾಶ್ ನಗರದಲ್ಲಿ ಹಳೆಯದಾದ ಬೃಹತ್ ಬಂಗಲೆಯನ್ನು ಹೊಂದಿದ್ದಾರೆ. ಅಂಜನಿಯವರು ಸ್ವತಃ ಶಿಕ್ಷಣವೇತ್ತರಾಗಿದ್ದು ‘ತನ್ನ ಸ್ವಂತ ಮಗಳೆಂದು’ ಹೇಳಿಕೊಳ್ಳುವ ರಾಧಿಕರವರಿಗೆ ಶಿಕ್ಷಣ ಕೊಡಿಸಲಿಲ್ಲ. ಆದರೆ ತಾವು ಹಡೆದ 4 ಮಕ್ಕಳಿಗೂ ಒಳ್ಳೆಯ ಶಿಕ್ಷಣ ಹಾಗು ಸ್ಥಾನವನ್ನು ಕಲ್ಪಿಸಿಕೊಟ್ಟರು. ಇದು ನಮಗೆ ಅಂಜನಿಯವರು ರೋಹಿತ್ ಗಿಂತ ಬಹಳ ಚನ್ನಾಗಿ ಇಂಗ್ಲಿಷನ್ನು ಹೇಗೆ ಮಾತಾಡುತ್ತಾರೆ ಎಂಬುದಕ್ಕೆ ಸಾಕ್ಷ್ಯ ನೀಡುತ್ತದೆ. ರಾಧಿಕರವರ ವಿಷಯದಲ್ಲಿ ಅಂಜನಿಯವರು ಒಬ್ಬ ಯಜಮಾನಿಯಾಗಿದ್ದರೇ ಹೊರತು ಒಳ್ಳೆಯ ತಾಯಾಗಿರಲಿಲ್ಲ. ರೋಹಿತ್ ತನ್ನ ಸ್ನೇಹಿತರಲ್ಲಿ ಪಿ.ಹೆಚ್ ಡಿ ಮಾಡುವಾಗಲೂ ತನ್ನ ಕುಟುಂಬದ ಬಗ್ಗೆ ಹೆಚ್ಚು ಹೇಳಿಕೊಂಡಿರಲಿಲ್ಲ.

ರಾಜು ಮತ್ತು ರೋಹಿತ್ ವೇಮುಲ ಇಬ್ಬರಿಗೂ ಅಂಜನಿಯವರು ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಿಲ್ಲ.

ಮತ್ತೊಂದು ವಿಷಯವೆಂದರೆ ರಾಧಿಕರವರು ತಮ್ಮ ಮಕ್ಕಳ ಜೊತೆ ಪದವಿಯನ್ನು ಮುಗಿಸುತ್ತಾರೆ. ರೋಹಿತ್ ಅಂತಿಮ ಪದವಿಯಲ್ಲಿದ್ದಾಗ ಅವನ ತಾಯಿ ರಾಧಿಕ ದ್ವಿತೀಯ ಬಿ.ಎ ಓದುತ್ತಿದ್ದರು. ರಾಜ ಪ್ರಥಮ ಬಿಎಸ್.ಸಿ ಓದುತ್ತಿದ್ದ. ಮೊದಲು ರೋಹಿತ್ ಪದವಿ ಮುಗಿಸಿದರೆ, ರಾಧಿಕ ನಂತರ ಮುಗಿಸಿದರು ಆ ನಂತರ ರಾಜ ಪದವಿಯನ್ನು ಪಡೆದ. ಕೆಲವೊಮ್ಮೆ ಅಮ್ಮ ಮಕ್ಕಳಿಗೆ ಒಂದೇ ದಿನ ಪರೀಕ್ಷೆ ಇರುತ್ತಿದ್ದವು ಎಂದು ರಿಯಾಜ್ ಸ್ಮರಿಸುತ್ತಾರೆ.

ಅಂಜನಿಯವರಿಗೆ ಅವರು ಮಾಡಿದ ತಾರತಮ್ಯದ ಬಗ್ಗೆ ಪ್ರಶ್ನಿಸಿದಾಗ ಅವರು ದುರುಗುಟ್ಟಿ ‘ನನಗೆ ಗೊತ್ತಿಲ್ಲ’ ಎಂದು ಹೇಳುತ್ತಾರೆ. ನಿಮಗೆ ನನ್ನನ್ನು ತೊಂದರೆಯಲ್ಲಿ ಸಿಕ್ಕಿಸಬೇಕೆಂದಿರುವಿರಾ ಎಂದು ಪ್ರಶ್ನಿಸುತ್ತಾರೆ.

ರೋಹಿತನಿಗೆ ಅಂತರ್ಜಾಲದ ಬಗ್ಗೆ ತುಂಬಾ ತಿಳಿದಿತ್ತು. ತರಗತಿಯ ಸಿಲಬ್ಬಸ್ ಎಲ್ಲಾ ಔಟ್ ಡೇಟೆಡ್ ಅಂತ ತಿಳಿಸುತ್ತಿದ್ದ. ವಿಜ್ಞಾನದ ವೆಬ್ ಸೈಟ್ ಗಳ ಬಗ್ಗೆ ಅವನಿಗೆ ಶಿಕ್ಷಕರಿಗಿಂತ ಹೆಚ್ಚು ಗೊತ್ತಿತ್ತು. ಅವನ ಜೀವನವೆಂದರೆ ಎರಡೇ . ಒಂದು ಪಾರ್ಟ್ ಟೈಮ್ ಕೆಲಸ ಹುಡುಕುವುದು. ಇನ್ನೊಂದು ಅಂತರ್ಜಾಲದಲ್ಲಿ ಸಮಯ ಕಳೆಯುವುದು. ಅವನು ಜೂಲಿಯನ್ ಅಸ್ಸಾಂಜೆಯ ಅಭಿಮಾನಿಯಾಗಿದ್ದ. ವಿಕಿಲೀಕ್ಸ್ ಫೈಲ್ಸ್ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದ.

ರೋಹಿತ್ ಸಾಯುವ ಒಂದು ವಾರದ ಮುಂಚೆ ರಿಯಾಜಿಗೆ ಕರೆ ಮಾಡಿ ‘ನನ್ನ ಪಿ.ಎಚ್.ಡಿ ಯನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದೆಂದು ಭಯವಾಗುತ್ತಿದೆ ಎಂದು ಹೇಳಿದ್ದ. ಎ.ಬಿ.ವಿ.ಪಿ ಯವರು ತುಂಬಾ ಬಲಿಷ್ಠರಾಗಿದ್ದಾರೆ. ಏಕೆಂದರೆ ಅವರ ಪರವಾಗಿ ಎಂ.ಪಿ, ಎಂ.ಎಲ್.ಎ, ಮಿನಿಸ್ಟರ್ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸಹಕಾರ ತುಂಬಾ ಇದೆ’ ಎಂದು ಹೇಳಿದ್ದ. ಅವನಿಗೆ ಗೆಲ್ಲುವ ಛಲ ಹೊರಟುಹೋಗಿತ್ತು.

“ರೋಹಿತ್ ವೇಮುಲ ಸಾವಿಗೆ ಕೊನೆಗೂ ದಕ್ಕದ ನ್ಯಾಯ”
ಲೇಖನ: ವಿ ಎಲ್‌ ನರಸಿಂಹಮೂರ್ತಿ

2016ರಲ್ಲಿ ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ವಿಶ್ವವಿದ್ಯಾಲಯದ ವ್ಯವಸ್ಥಿತ ಕಿರುಕುಳ ಮತ್ತು ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ದೇಶದಾದ್ಯಂತ ಸಂಚಲನ ಮೂಡಿಸಿದ ರೋಹಿತ್ ಸಾವು ಒಂದು ‘ಸಾಂಸ್ಥಿಕ ಹತ್ಯೆ’ಯಾಗಿತ್ತು. ದೇಶದ ಕೇಂದ್ರಿಯ ವಿಶ್ವವಿದ್ಯಾಲಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಜಾತಿ ತಾರತಮ್ಯ ಮತ್ತು ಸಂಘಪರಿವಾರದ ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದ್ದವು. ರೋಹಿತ್ ಸಾವು ದೇಶದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಬಡಿದೆಬ್ಬಿಸಿ ಹೊಸ ತಲೆಮಾರಿನಲ್ಲಿ ದೊಡ್ಡ ಮಟ್ಟದ Dalit assertionಗೆ ಕಾರಣವಾಗಿತ್ತು.

ಹೈದರಾಬಾದ್ ಕೇಂದ್ರಿಯ ವಿವಿಯ ASA (Ambedkar Students Association)ನಲ್ಲಿ ಸಕ್ರಿಯವಾಗಿದ್ದ ರೋಹಿತ್ ವೇಮುಲ ಎಬಿವಿಪಿಗೆ ಸೈದ್ಧಾಂತಿಕವಾಗಿ ಪ್ರತಿರೋಧ ಒಡ್ಡುತ್ತಿದ್ದರು. ASA ಮತ್ತು ABVP ಮಧ್ಯೆ ನಿರಂತರವಾದ ಘರ್ಷಣೆ ನಡೆಯುತ್ತಿತ್ತು. ಯಾವಾಗ ಸೈದ್ಧಾಂತಿಕವಾಗಿ ಎದುರಿಸುವುದು ಕಷ್ಟವಾಯಿತೋ ಆಗ ವ್ಯವಸ್ಥೆಯನ್ನು ಬಳಸಿಕೊಂಡು ರೋಹಿತ್ ವೇಮುಲ ಮತ್ತವರ ಗೆಳೆಯರ ಮೇಲೆ ಸಂಘಪರಿವಾದ ಕಿರುಕುಳ ಕೊಡಲು ಪ್ರಾರಂಭಿಸಿತು. ಮುಂದುವರೆದು ಸಿಕಂದರಾಬಾದ್ ಬಿಜೆಪಿ ಎಂಪಿ ಬಂಡಾರು ದತ್ತಾತ್ರೇಯ ಮತ್ತು ಎಂಎಲ್‌ಸಿ ರಾಮಚಂದ್ರರಾವ್ ಆಗ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಸ್ಮೃತಿ ಇರಾನಿಗೆ ಪತ್ರ ಬರೆದು ASA ವಿದ್ಯಾರ್ಥಿಗಳ ಮೇಲೆ ಕ್ರಮ ಜರುಗಿಸಲು ಕೋರಿದ್ದರು. ಎಬಿವಿಪಿ ಮತ್ತು ಸಂಘಪರಿವಾರದ ಹಿನ್ನಲೆಯ ವಿಸಿ ಅಪ್ಪಾರಾವ್ ಪೊದಿಲೆ ರೋಹಿತ್ ವೇಮುಲ ಮತ್ತು ಗೆಳೆಯರನ್ನು ಹಾಸ್ಟೆಲ್‌ನಿಂದ ಅಮಾನತುಗೊಳಿಸಿದ್ದಲ್ಲದೆ ಅವರ ಫೆಲೋಶಿಪ್ ತಡೆಹಿಡಿದಿದ್ದರು. ವಿಶ್ವವಿದ್ಯಾಲಯದ ಆಡಳಿತದ ವಿರುದ್ಧ ಹೋರಾಟ ಮಾಡುತ್ತಲೇ ನೊಂದು ರೋಹಿತ್ ಆತ್ಮಹತ್ಯೆಗೆ ಒಳಗಾಗದರು.

ರೋಹಿತ್ ವೇಮುಲ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ನಡೆಸುತ್ತಿದ್ದ ಹೋರಾಟದ ಅರಿವು ಇರುವ ಎಲ್ಲರಿಗೂ ಅದೊಂದು ಸಾಂಸ್ಥಿಕ ಹತ್ಯೆ ಎನ್ನುವುದು ಗೊತ್ತಿರುವ ವಿಚಾರ. ಹಾಗಾಗಿಯೇ ಬಂಡಾರು ದತ್ತಾತ್ರೆಯ, ರಾಮಚಂದ್ರರಾವ್, ಸ್ಮೃತಿ ಇರಾನಿ, ವಿಸಿ ಮತ್ತು ಎಬಿವಿಪಿ ನಾಯಕರ ಮೇಲೆ ಕೊಲೆಗೆ ಪ್ರಚೋದನೆ ಮತ್ತು ಎಸ್ಸಿ ಎಸ್‌ಟಿ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ ಇಂದು ತೆಲಂಗಾಣ ಪೋಲಿಸರು ರೋಹಿತ್ ಹತ್ಯೆಯ ಕುರಿತು ಕೋರ್ಟಿಗೆ ಸಲ್ಲಿಸುತ್ತಿರುವ ವರದಿಯಲ್ಲಿ ಎಲ್ಲ ಆಪಾದಿತರನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ. ರೋಹಿತ್ ಆತ್ಮಹತ್ಯೆಗೆ ವಿವಿ ಆಡಳಿತ ಮಂಡಳಿ ಸೇರಿದಂತೆ ಯಾರೂ ಕಾರಣರಲ್ಲ ಬದಲಿಗೆ ರೋಹಿತ್ ತನ್ನ ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲಿಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿವಿಯ ಆಡಳಿತ ಮಂಡಳಿ ನೀಡುತ್ತಿದ್ದ ಕಿರುಕುಳದ ಕುರಿತು ಮುಂಚೆಯೇ ವಿಸಿಗೆ ರೋಹಿತ್ ವೇಮುಲ ಪತ್ರ ಬರೆದಿದ್ದರು. ಸಾವಿಗೆ ಶರಣಾಗುವ ಮುಂಚೆ ಬರೆದಿರುವ ಡೆತ್‌ನೋಟ್‌ನಲ್ಲಿ ಕೂಡ ರೊಹಿತ್ ಎದುರಿಸಿದ ಕಿರುಕುಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಪೋಲಿಸರ ವರದಿಯಲ್ಲಿ ಡೆತ್‌ನೋಟ್‌ನಲ್ಲಿ ರೋಹಿತ್ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿರುವ ಕಾರಣ ಯಾರನ್ನೂ ಜವಾಬ್ದಾರಿ ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ರೋಹಿತ್ ಸಾವಿಗೆ ಪೋಲಿಸರು ನೀಡುತ್ತಿರುವ ಇನ್ನೊಂದು ಮುಖ್ಯ ಕಾರಣ ರೋಹಿತ್ ತನ್ನ ನಿಜವಾದ ಜಾತಿ ಯಾವುದು ಎನ್ನುವುದು ಹೊರಜಗತ್ತಿಗೆ ಗೊತ್ತಾಗುತ್ತದೆ ಎನ್ನುವ ಆತಂಕದಿಂದ ಆತ್ಮಹತ್ಯೆಗೆ ಶರಣಾದ ಎಂದಿದ್ದಾರೆ.

ರೋಹಿತ್ ತೀರಿಕೊಂಡಾಗ ಆತನ‌ ಜಾತಿಯ ಕುರಿತು ಸರ್ಕಾರ ಮತ್ತು ಸಂಘಪರಿವಾರ ವಿವಾದ ಎಬ್ಬಿಸಲು ಪ್ರಯತ್ನಿಸಿದವು. ರೋಹಿತ್ ತಾಯಿ ರಾಧಿಕಾ ಮಾಲ ಸಮುದಾಯಕ್ಕೆ ಸೇರಿದವರು. ಕೂಲಿ ಕಾರ್ಮಿಕರ ಮಗಳಾಗಿದ್ದ ರಾಧಿಕಾರನ್ನು ಚಿಕ್ಕವಯಸ್ಸಿನಲ್ಲೆ ಗುಂಟೂರಿನ ವಡ್ಡೇರ(OBC) ಸಮುದಾಯದ ಅಂಜಿನಿ ದೇವಿ ದತ್ತು ಪಡೆಯುತ್ತಾರೆ. ಆದರೆ ವಾಸ್ತವದಲ್ಲಿ ಇದು ದತ್ತು ತೆಗೆದುಕೊಂಡಿದ್ದಲ್ಲ.

ಮನೆಗೆಲಸಕ್ಕೆಂದು ತಂದು ಮನೆಯಲ್ಲಿಟ್ಟುಕೊಂಡಿದ್ದು. ಅಂಜಿನಿದೇವಿ ಸರ್ಕಾರಿ ಉದ್ಯೋಗದಲ್ಲಿದ್ದವರು. ಆಕೆಯ ನಾಲ್ಕು ಮಕ್ಕಳು ಒಳ್ಳೆ ವಿಧ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸಗಳಲ್ಲಿ ಇದ್ದಾರೆ. ಆದರೆ ರಾಧಿಕಾ ವೇಮುಲ ಮನೆಗೆಲಸದವರಾಗಿಯೇ ಉಳಿದು ಮನೆಯವರಿಂದ ನಿರಂತರ ಅಪಮಾನ, ಶೋಷಣೆಗೆ ಒಳಗಾಗಿದ್ದಾರೆ. ಅದರಲ್ಲೂ ರಾಧಿಕಾರನ್ನು ಮದುವೆಯಾದ ವಡ್ಡೇರ ಸಮುದಾಯದ ವ್ಯಕ್ತಿ ರಾಧಿಕಾ ಮಾಲ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಮನೆಯಿಂದ ಹೊರಹಾಕುತ್ತಾನೆ. ಹೆತ್ತ ತಂದೆ ತಾಯಿಯಿಂದ ದೂರಾಗಿ ಸಾಕಿಕೊಂಡವರ ಮನೆಯಲ್ಲಿ ಶೋಷಣೆಗೆ ಒಳಗಾದ ರಾಧಿಕಾ ವೇಮುಲ ಮದುವೆಯಾಗಿ abusive relationshipಗೆ ಒಳಗಾಗಿತ್ತಾರೆ. ಕೊನೆಗೂ ಗಂಡನಿಂದ ದೂರಾಗಿ ಮೂರು ಮಕ್ಕಳನ್ನು ಬೆಳೆಸಲು ಕಷ್ಟ ಪಡುತ್ತಾರೆ.

ರಾಧಿಕಾ ವೇಮುಲದ ದತ್ತು ತಾಯಿ ಎಂದು ಹೇಳಿಕೊಳ್ಳುವ ಅಂಜಿನಿ ದೇವಿ ಮತ್ತವರ ಕುಟುಂಬಸ್ಥರು ಹಾಗೂ ರಾಧಿಕಾ ವೇಮುಲರ ಗಂಡ ರಾಧಿಕಾ ಅವರಿಗೆ ಕಿರುಕುಳ‌ ಕೊಡುವುದಕ್ಕೆ, ಅವಮಾನಿಸುವುದಕ್ಕೆ ಕಾರಣ ಅವರ ಜಾತಿ. ಇದು ಆ ಕುಟುಂಬವನ್ನು ಬಲ್ಲವರಿಗೆಲ್ಲ ಗೊತ್ತಿರುವ ವಿಚಾರ. ಹಾಗಾಗಿಯೇ ರಾಧಿಕಾ ವೇಮುಲ ತಮ್ಮ ಮಕ್ಕಳಿಗೆ ಎಸ್‌ಸಿ ಸರ್ಟಿಫಿಕೇಟ್ ಮಾಡಿಸಿದ್ದರು. ರೋಹಿತ್ ಮತ್ತು ಅವರ ತಮ್ಮ ಇಬ್ಬರೂ ಓದಿನಲ್ಲಿ ಚುರುಕಾಗಿದ್ದರು. ಅದರಲ್ಲೂ ರೋಹಿತ್ ವೇಮುಲ Outstanding student. ತನ್ನ ಪ್ರತಿಭೆಯ ಕಾರಣಕ್ಕೆ ಸಂಶೋಧನೆಗೆ ಎರಡು ಫೆಲೋಶಿಪ್ ಪಡೆದುಕೊಂಡಿದ್ದ ಪ್ರತಿಭಾವಂತ.

ಈಗ ಪೋಲಿಸರ ವರದಿಯಲ್ಲಿ ರೋಹಿತ್ ತಂದೆ ವಡ್ಡೇರ (OBC) ಸಮುದಾಯದಕ್ಕೆ ಸೇರಿರುವುದರಿಂದ ಆತ OBC ಸಮುದಾಯಕ್ಕೆ ಸೇರುತ್ತಾನೆ‌. ಆದರೆ ಆಕೆಯ ತಾಯಿ SC certificate ಕೊಡಿಸಿದ್ದಾರೆ. ಇದು ಗೊತ್ತಾಗುವುದರಿಂದ ಸಮಸ್ಯೆಯಾಗಿ ತಾನು ಪಡೆದಿರುವ ಪದವಿಗಳು ಮತ್ತು ತನ್ನ ಅಡಕೆಮಿಕ್ ಕೆರಿಯರ್ ಹೋಗುತ್ತದೆ. Fake Certificate ಕೇಸಿನಲ್ಲಿ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೆ ರೋಹಿತ್ student politics ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರಿಂದ ಅಕಡೆಮಿಕ್ಸ್‌ನಲ್ಲಿ ಆತನ performance ಅಷ್ಟು ಚೆನಾಗಿರಲಿಲ್ಲ ಎನ್ನಲಾಗಿದೆ.

ರೋಹಿತ್ ವೇಮುಲರನ್ನ ಬಲ್ಲ ಎಲ್ಲರೂ ಆತ ಎಂಥಹ ಪ್ರತಿಭಾವಂತ ಎನ್ನುವುದನ್ನು ಪ್ರಸ್ತಾಪಿಸದೆ ಇರಲಾರರು. ರೋಹಿತ್ ಸಾವಿನ ನಂತರ ಬಂದ ಚರ್ಚೆಗಳಲ್ಲೆಲ್ಲಾ ರೋಹಿತ್ ಸಾವಿನಿಂದ ಒಬ್ಬ ಮೇಧಾವಿಯನ್ನು ಕಳೆದುಕೊಂಡೆವು ಎನ್ನುವ ಮಾತು ಪದೆ ಪದೆ ಕೇಳಿ ಬರುತ್ತಿತ್ತು. ಆದರೀಗ ಆತನ ಬುದ್ದಿವಂತಿಕೆಯನ್ನು ಅನುಮಾನಿಸಲಾಗುತ್ತಿದೆ.

ರೋಹಿತ್ ವೇಮುಲ ಕೇವಲ ಸರ್ಟಿಫಿಕೇಟ್ ಕೇಸಿಗೆ ಹೆದರಿ ಸಾಯುವ ವ್ಯಕ್ತಿ ಅಲ್ಲ ಎನ್ನುವುದು ಜಗತ್ತಿಗೆ ಗೊತ್ತಿದೆ. ರೋಹಿತ್ ತನ್ನ ಹುಟ್ಟಿನ ಕಾರಣಕ್ಕೆ ಅನುಭವಿಸಿದ ಅವಮಾನ, ನೋವಿನಿಂದ ಬಾಲ್ಯದಿಂದಲೇ ಒಂಟಿನತವನ್ನು ಅನುಭವಿಸಿದ ನತದೃಷ್ಟ‌. ಕ್ರೂರ ತಂದೆಯ ಕಾರಣಕ್ಕೆ ಚೆಂದದ ಬಾಲ್ಯ ಕಾಣದವನು. ಬಡತನದ ನೋವು ಉಂಡವನು. ಆದರೆ ದುರ್ಬಲ ಮನಸ್ಸಿನವನಲ್ಲ.
ತನ್ನಂತೆ ನೋವು, ಅವಮಾನ ಉಂಡು ಬರುವ ತಳಸಮುದಾಯಗಳ ಏಳಿಗೆಗೆ ದುಡಿಯುವ ಕನಸು ಕಂಡಿದ್ದ ಸಮಾನತಾವಾದಿ.

ಆತನ ಪ್ರಶ್ನೆ ಮಾಡುವ ಮನೋಭಾವ, ವ್ಯವಸ್ಥೆಯ ವಿರುದ್ಧ ಹೋರಾಡುವ ಧೈರ್ಯ, ಅಂಬೇಡ್ಕರ್ ಬರಹಗಳು ಕೊಟ್ಟ ಆತ್ಮಸ್ಥೈರ್ಯ ಸಂಘಪರಿವಾರದ ವಿರುದ್ಧ ಹೋರಾಡಲು ಪ್ರೇರೆಪಿಸಿದ್ದವು. ಆದರೆ ಸಂಘಪರಿವಾರ ಹೇಡಿತನ ರೋಹಿತ್ ವೇಮುಲನನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿತು.

ರೋಹಿತ್ ಸತ್ತಾಗ ತೆಲಂಗಾಣದ ಕಾಂಗ್ರೇಸ್ ಪಕ್ಷ ವೇಮುಲ ಹತ್ಯೆಯ ವಿರುದ್ಧ ದನಿ ಎತ್ತಿತ್ತು. ಹೈದರಾಬಾದ್ ವಿವಿಗೆ ಹೋಗಿದ್ದ ರಾಹುಲ್ ಗಾಂಧಿ ರೋಹಿತ್ ಸಾವನ್ನು ವ್ಯವಸ್ಥೆ ಮಾಡಿದ ಕೊಲೆ ಎಂದಿದ್ದರು. ಕಾಂಗ್ರೆಸ್ ಸರ್ಕಾರ ಬಂದರೆ ದಲಿತ, ಆದಿವಾಸಿ, ಅಲ್ಪಸಂಖ್ಯಾತ ವಿಧ್ಯಾರ್ಥಿ-ವಿದ್ಯಾರ್ಥಿನಿಯರ ರಕ್ಷಣೆಗಾಗಿ ‘ರೋಹಿತ್ ‌ಆ್ಯಕ್ಟ್’ ಜಾರಿ ಮಾಡುವ ಭರವಸೆ ನೀಡಿದ್ದರು. ಅಲ್ಲದೆ ಕಳೆದ ವರ್ಷ ಮಾಡಿದ ಭಾರತ್ ಜೋಡೋ ಯಾತ್ರೆಗೆ ರೋಹಿತ್ ತಾಯಿ ರಾಧಿಕಾ ವೇಮುಲರನ್ನು ಆಹ್ವಾನಿಸಿದ್ದರು. ಆದರೆ ಈಗ ರಾಹುಲ್ ‌ಗಾಂಧಿಯವರ ಕಾಂಗ್ರೆಸ್ ಪಕ್ಷವೇ ತೆಲಂಗಾಣದಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನೀಡುತ್ತಿರುವ ಪೋಲಿಸ್ ವರದಿಯಲ್ಲಿ ರೋಹಿತ್ ಸಾವಿಗೆ ಯಾರೂ ಕಾರಣರಲ್ಲ ಎನ್ನುವ ಮೂಲಕ ರೋಹಿತ್ ವೇಮುಲನ ‘ಸಾಂಸ್ಥಿಕ ಹತ್ಯೆ’ಯನ್ನು ಅಲ್ಲಗೆಳೆದಿದೆ.

ಕೊನೆಗೂ ರೋಹಿತ್ ವೇಮುಲ ಸಾವಿಗೆ ನ್ಯಾಯ ನಿರಾಕರಿಸ್ಪಟ್ಟಿದೆ…

ಲೇಖನ: ವಿ ಎಲ್‌ ನರಸಿಂಹಮೂರ್ತಿ

ರೋಹಿತ್ ವೇಮುಲಾ ಸಾವಿಗೆ ೭ ವರ್ಷ: ಚುರುಕುಗೊಳ್ಳದ ತನಿಖೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಹೈದರಾಬಾದ್ ನ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಇಲ್ಲವಾಗಿ ಇಂದಿಗೆ ಏಳು ವರ್ಷಗಳು‌. ರೋಹಿತ್ ವೆಮುಲಾ ಜೊತೆಗೆ 2016 ರಲ್ಲಿ ಹೈದರಾಬಾದ್ ಯೂನಿವರ್ಸಿಟಿಯಿಂದ ಹೊರಬಿದ್ದ ನಾಲ್ವರು ವಿದ್ಯಾರ್ಥಿಗಳು ದಾಖಲಿಸಿದ ಮೊಕದ್ದಮೆ ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2016 ಅಂದ್ರೆ ಇಲ್ಲಿಗೆ 8 ವರ್ಷಗಳ ಹಿಂದೆ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್” (ASA) ಬ್ಯಾನರ್ ಅಡಿಯಲ್ಲಿ ಯೂನಿವರ್ಸಿಟಿ ಹಾಗೂ ದಲಿತ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯ ಪ್ರಶ್ನಿಸಿದ ಹಾಗೂ ಪ್ರಮುಖ ಸಮಸ್ಯೆಗಳನ್ನು ಎತ್ತಿದ್ದಕ್ಕಾಗಿ ರೋಹಿತ್ ವೇಮುಲಾ ಸೇರಿದಂತೆ ನಾಲ್ವರನ್ನು ಕ್ಯಾಂಪಸ್ ನಿಂದ ಅಮಾನತುಗೊಳಿಸಲಾಯಿತು. ಇದರ ಜೊತೆಗೆ ಅವರಿಗೆ ಬರುತ್ತಿದ್ದ 25,000 ರೂ.ಗಳ ಫೆಲೋಶಿಪ್ ಅನ್ನು ಸಹ ಯೂನಿವರ್ಸಿಟಿ ಕಡೆಯಿಂದ ತಡೆ ಹಿಡಿಯಲಾಯಿತು.

ಎಎಸ್‌ಎ (ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್) ವಿರುದ್ಧ ಎಬಿವಿಪಿಯ ದೂರುಗಳನ್ನು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು ಗಂಭೀರವಾಗಿ ತಗೆದುಕೊಂಡು, ಅವುಗಳನ್ನು ಆಗಿನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ರವಾನಿಸಿದರು ಮತ್ತು ಅವುಗಳನ್ನು ಪರಿಶೀಲಿಸುವಂತೆ ವಿಶ್ವವಿದ್ಯಾಲಯದ ಆಡಳಿತವನ್ನು ಕೇಳಿದರು.

ಈ ನಡುವೆ ಅಮಾನತುಗೊಂಡ ರೋಹಿತ್ ವೇಮುಲಾ ತನ್ನ ಖರ್ಚುಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಅವರು ಮತ್ತು ಇತರ ನಾಲ್ವರು ವಿದ್ಯಾರ್ಥಿಗಳನ್ನು ತಮ್ಮ ಹಾಸ್ಟೆಲ್ ಕೊಠಡಿಗಳಿಂದ ಹೊರಹಾಕಿದ ನಂತರ, ಅವರು ಕ್ಯಾಂಪಸ್‌ನಲ್ಲೇ ಟೆಂಟ್ ಹಾಕಿ, ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.

ಆದರೆ ತಮ್ಮ ಬೇಡಿಕೆ ಈಡೇರಿಸದ ಹಾಗೂ ತಮಗೆ ಅನ್ಯಾಯ ಎಸಗಿದವರ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ ಎಂಬ ನೋವು ರೋಹಿತ್ ವೆಮುಲಾ ಅವರಿಗೆ ಇತ್ತು. ಈ ಎಲ್ಲಾ ಬೆಳವಣಿಗೆಯಿಂದ ಮನನೊಂದ ರೋಹಿತ್ ವೆಮುಲಾ ಜನವರಿ 17 2016 ರಂದು ಒಂದು ಭಾವನಾತ್ಮಕ ಸುಧೀರ್ಘ ಪತ್ರ ಬರೆದು ಆತ್ಮಹತ್ಯೆಗೆ ಶರಣಾದರು. ಈ ಪತ್ರ ದೇಶಾದ್ಯಂತ ಹೆಚ್ಚು ಸಂಚಲನ ಉಂಟು ಮಾಡಿತ್ತು.

“ಈ ರೀತಿಯ ಪತ್ರವನ್ನು ನಾನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಇದು ನನ್ನ ಮೊದಲ ಪ್ರಯತ್ನದ ಕೊನೆಯ ಪತ್ರ. ಈ ಪತ್ರವನ್ನು ಅರ್ಥ ಮಾಡಿಕೊಳ್ಳಲು ನೀವು ವಿಫಲರಾದರೆ ನನ್ನ ಕ್ಷಮೆ ಇರಲಿ. ಬಹುಶಃ ಈ ಪ್ರಪಂಚವನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ನಾನು ತಪ್ಪಿದ್ದೇನೆ. ಪ್ರೀತಿ, ನೋವು, ಬದುಕು, ಸಾವು ಇವನ್ನೆಲ್ಲಾ ಅರ್ಥ ಮಾಡ್ಕೊಳೋದ್ರಲ್ಲಿ ತಪ್ಪಿದ್ದೇನೆ. ಆತುರವೇನೂ ಇರಲಿಲ್ಲ… ಕೆಲವರಿಗೆ ಬದುಕೇ ಒಂದು ಶಾಪ. ಆದರೆ ನನಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತವಾಗಿತ್ತು. ನನ್ನ ಬಾಲ್ಯದ ಏಕಾಂಗಿತನದಿಂದ ನಾನು ಎಂದೂ ಚೇತರಿಸಿಕೊಳ್ಳಲಾರೆ ಈ ಕ್ಷಣದಲ್ಲಿ ನನಗೆ ನೋವಿಲ್ಲ, ದುಃಖವಿಲ್ಲ, ಆತಂಕವಿಲ್ಲ…” ಎನ್ನುವ ರೀತಿಯಲ್ಲಿ ಜಾತಿಯ ಕಾರಣಕ್ಕಾಗಿ, ದೌರ್ಜನ್ಯದ ಕಾರಣಕ್ಕಾಗಿ, ಸಿದ್ಧಾಂತದ ಹಿನ್ನೆಲೆಯಲ್ಲಿ ಆದ ಅನ್ಯಾಯದ ಕಾರಣಕ್ಕಾಗಿ ಇಲ್ಲಿಯವರೆಗೆ ನೋವು ತಿಂದ ಕ್ಷಣಗಳನ್ನು ರೋಹಿತ್ ವೆಮುಲಾ ಭಾವನಾತ್ಮಕವಾಗಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ನಂತರ ಈ ಪತ್ರ ರಾಜಕೀಯವಾಗಿ ಅತಿ ಹೆಚ್ಚು ಸಂಚಲನ ಮೂಡಿಸಿತ್ತು. ದೇಶಾದ್ಯಂತ ಬಹುತೇಕ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ರೋಹಿತ್ ವೆಮುಲಾ ಸಾವಿಗೆ ಬೀದಿಗಿಳಿದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ಅನೇಕ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಕಾರ್ಯಕರ್ತರು ಮತ್ತು ಶಿಕ್ಷಕರು ‘ರೋಹಿತ್ ಆಕ್ಟ್’ ಅನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಜೆಎಸಿ ಸದಸ್ಯರು ಆಗ್ರಹಿಸಿದರು. ಈ ಶಾಸನದ ಹಿಂದಿನ ಉದ್ದೇಶವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಾಸಕಾಂಗ ರಕ್ಷಣೆಯನ್ನು ಖಚಿತಪಡಿಸುವುದಾಗಿತ್ತು.

ರೋಹಿತ್ ಸಾವಿನ ನಂತರ ಕೇಂದ್ರ ಸರ್ಕಾರ ನಡೆದುಕೊಂಡ ನಡೆ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು. ಇಂದಿಗೂ ಸಹ ಈ ಪ್ರಕರಣದ ಅಡಿಯಲ್ಲಿ ಯಾವುದೇ ಮಹತ್ವದ ಬೆಳವಣಿಗೆ ನಡೆದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಮಾನತುಗೊಂಡ ನಾಲ್ವರು ಸಂಶೋಧನಾ ವಿದ್ಯಾರ್ಥಿಗಳು ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಹೆಚ್) ಆಗಿನ ಉಪಕುಲಪತಿ ಪಿ ಅಪ್ಪಾ ರಾವ್ ಮತ್ತು ಇತರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರಲ್ಲಿ ಯಾವುದೇ ಪ್ರಗತಿಯನ್ನು ಕಂಡಿಲ್ಲ. ರೋಹಿತ್‌ನ ಜಾತಿ ಪ್ರಮಾಣ ಪತ್ರದ ಕೊರತೆಯ ಪ್ರಕರಣದಲ್ಲಿ ಆರೋಪಪಟ್ಟಿ ಕೂಡ ಸಲ್ಲಿಕೆಯಾಗಿಲ್ಲ.

ಈ ಬಗ್ಗೆ ಪ್ರಕರಣ ದಾಖಲಿಸಿದ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಇದರಿಂದ ಯಾವುದೇ ವಿದ್ಯಾರ್ಥಿಗಳು ತಮ್ಮಂತೆ ಹೋರಾಟ ಮಾಡುವ ವ್ಯವಸ್ಥೆ ಬರಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ನಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಪ್ರಗತಿ ಇದೆ, ಆದರೆ ಅಪ್ಪಾ ರಾವ್, ಬಿಜೆಪಿ ನಾಯಕರಾದ ಬಂಡಾರು ದತ್ತಾತ್ರೇಯ, ಸ್ಮೃತಿ ಇರಾನಿ ಮತ್ತು ಇತರರ ವಿರುದ್ಧ ನಾವು ದಾಖಲಿಸಿರುವ ಪ್ರಕರಣದಲ್ಲಿ ಬೆಳವಣಿಗೆ ಕಂಡುಬಂದಿಲ್ಲ ಎಂದು ರೋಹಿತ್ ಜೊತೆಗೆ ಹೊರಹಾಕಲ್ಪಟ್ಟ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

“ರೋಹಿತ್‌ಗೆ ನ್ಯಾಯ ಸಿಗುವವರೆಗೆ, ನಮಗೆ ನ್ಯಾಯ ಸಿಗುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.

ಇನ್ನು ಅಮಾನತುಗೊಂಡ ವಿದ್ಯಾರ್ಥಿಗಳು, ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ ​​(ಎಎಸ್‌ಎ) ಹಾಗೂ ಜೆಎಸಿ ಸದಸ್ಯರ ವಿರುದ್ಧ ಯುಒಎಚ್‌ (ಯೂನಿವರ್ಸಿಟಿ ಆಫ್ ಹೈದರಾಬಾದ್) ನಿಂದ ಮೂರು ಮತ್ತು ಎಬಿವಿಪಿ ನಾಯಕ ಸುಶೀಲ್ ಕುಮಾರ್ ಅವರ ತಾಯಿಯಿಂದ ನಾಲ್ಕು ಪ್ರಕರಣಗಳು ದಾಖಲಾಗಿದ್ದರೆ, ಮಾಜಿ ಕುಲಪತಿ ಅಪ್ಪಾರಾವ್ ವಿರುದ್ಧ ಅಮಾನತುಗೊಂಡ ವಿದ್ಯಾರ್ಥಿಗಳು ಅಥವಾ ಜೆಎಸಿಯಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಎಸ್‌ಸಿ/ಎಸ್‌ಟಿ ದೌರ್ಜನ್ಯ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಪೈಕಿ ಎಬಿವಿಪಿ ನಾಯಕ ಸುಶೀಲ್ ಕುಮಾರ್‌ನ ತಾಯಿ ಸಲ್ಲಿಸಿರುವ ಒಂದು ಪ್ರಕರಣ ಹೈಕೋರ್ಟ್‌ನಲ್ಲಿದೆ. ಸೈಬರಾಬಾದ್ ಪೊಲೀಸ್ ಡೇಟಾಬೇಸ್ ಮತ್ತು ಅಮಾನತುಗೊಂಡ ವಿದ್ಯಾರ್ಥಿಗಳ ಜೈ ಭೀಮಾ ರಾವ್ ಅವರ ವಕೀಲರ ಪ್ರಕಾರ, ಈ ಎರಡು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ ಮತ್ತು ಎರಡು ತನಿಖೆ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.

ಹಾಗೆಯೇ “ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ (ಅಟ್ರಾಸಿಟಿ) ಮುಂದುವರಿಯದಿರಲು ಮುಖ್ಯ ಕಾರಣ ರೋಹಿತ್‌ನ ಜಾತಿ ಪ್ರಮಾಣಪತ್ರದ ಕೊರತೆ” ಎಂದು ವಕೀಲ ಭೀಮಾ ರಾವ್ ಹೇಳಿದರು. “ಉಳಿದ ಪ್ರಕರಣಗಳಲ್ಲಿ, ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗುತ್ತದೆ ಮತ್ತು ಅವು ಸಮನ್ಸ್‌ನ ಹಂತದಲ್ಲಿವೆ.” ಎಂದು ತಿಳಿಸಿದ್ದಾರೆ.

ರೋಹಿತ್ ವೇಮುಲ: ಮತ್ತೆ ಮರುಹುಟ್ಟು ಪಡೆಯಬೇಕಾಗಿತ್ತು
ರೋಹಿತ್ ವೆಮುಲಾ ಸಾವು ಇಂದಿಗೆ 7 ವರ್ಷ. ರೋಹಿತನ ಸಾವನ್ನು ನೆನೆದು ಕಣ್ಣೀರಿಟ್ಟ ಹೃದಯಗಳು ಅಸಂಖ್ಯ. ನಾಡಿನ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರು ರೋಹಿತ್ ವೆಮುಲಾ ಬಗ್ಗೆ ಬರೆದಿರುವ ಅಪರೂಪದ ಬರಹ.. ರೋಹಿತನ ಸ್ಮರಣೆಗಾಗಿ

ರೋಹಿತ್ ವೇಮುಲನ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಲು ಕೂತಾಗಲೆಲ್ಲಾ ರೋಹಿತನ ಮುಖ, ಆತನು ಬರೆದ ಡೆತ್‍ನೋಟ್ ಕಲೆಸಿಕೊಂಡು ಕಣ್ಮುಂದೆ ನಿಲ್ಲುತ್ತದೆ. ಇದಕ್ಕೆ ಪದಗಳು ಸಿಗುತ್ತಿಲ್ಲ.
…ಸಾಯುವ ಕ್ಷಣಗಳಲ್ಲಿ ಬರೆದ ಆ ಡೆತ್‍ನೋಟ್‍ ಅನ್ನು ರೋಹಿತ್ ಯಾರಿಗೆ ಬರೆದ? ಓದಿದರೆ ಈ ಭೂಮಿ ಉದ್ದೇಶಿಸಿ ಮಾತಾಡುತ್ತಿದ್ದಾನೆ ಅನ್ನಿಸುತ್ತದೆ. ಅವನು ಸತ್ತು, ಆ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳುವ ರೋಹಿತ್ ಈಗ ಬದುಕುತ್ತಿರುವವರಿಗೆ ಅಂದರೆ ನಾಳೆ ಸಾಯುವವರಿಗೆ ಅಣುಕಿಸುತ್ತಿದ್ದಾನೊ ಅಥವಾ ಸಾಂತ್ವನ ಹೇಳುತ್ತಿದ್ದಾನೊ?
ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದ ರೋಹಿತನು ಡಿಸೆಂಬರ್ 18, 2015 ರಲ್ಲಿ ಉಪಕುಲಪತಿಗೆ ಬರೆದ ಪತ್ರದಲ್ಲಿ-

1) “ಎಲ್ಲಾ ದಲಿತ ವಿದ್ಯಾರ್ಥಿಗಳಿಗೂ ಅವರ ಪ್ರವೇಶಾತಿಯ ಸಮಯದಲ್ಲಿ 10 ಮಿಲಿಗ್ರಾಂ ಸೋಡಿಯಂ ಆಕ್ಸೈಡ್ ಕೊಡಿ. ಅಂಬೇಡ್ಕರ್ ಅನ್ನು ಓದಬೇಕು ಅನ್ನಿಸಿದಾಗ ಅವರಿಗೆ ಅದನ್ನು ತಿನ್ನಲು ಸೂಚನೆ ನೀಡಿ”,

2) “ಒಂದು ಒಳ್ಳೆಯ ಹಗ್ಗವನ್ನು ಎಲ್ಲಾ ದಲಿತ ವಿದ್ಯಾರ್ಥಿಗಳ ಕೊಠಡಿಗೆ ನಿಮ್ಮ ಗೆಳೆಯರಾದ ಮಹಾನ್ ವಾರ್ಡನ್ ಅವರಿಗೆ ಹೇಳಿ ಸರಬರಾಜು ಮಾಡಿಸಿ.”

ಈ ಮಾತುಗಳಲ್ಲಿ ರೋಹಿತನ ಅಗ್ನಿಪರ್ವತದಿಂದ ಹೊಮ್ಮುವ ಲಾವರಸದಂಥ ಮಾತುಗಳಲ್ಲಿ ಆತನ ಸಾವಿನ ಕಾರಣ ಅಡಗಿ ಕೂತಿದೆ.
ಆದರೂ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದು ನೇಣಿಗೆ ಜೀವ ಕೊಡುವ ರೋಹಿತನ ಪ್ರಜ್ಞೆ ಹೇಗಿರಬಹುದು? ತನ್ನ ಸುತ್ತಲ ಜಗತ್ತು ಹೇಗೆ ಕಂಡಿರಬಹುದು? ಈ ಜಾತಿ ಈ ಮತ ಈ ಸುಳ್ಳು, ಈ ತಾರತಮ್ಯ ವಂಚನೆಗಳಲ್ಲಿ ಬದುಕು ಸವೆಸುತ್ತಿರುವ ತನ್ನ ಸುತ್ತಲ ಸಮೂಹವು ಕ್ಷುದ್ರಜೀವಿಗಳು, ಹುಳುಗಳು ಎಂದು ಅನ್ನಿಸದಿದ್ದರೆ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆಯಲು ರೋಹಿತನಿಗೆ ಸಾಧ್ಯವಾಗುತ್ತಿತ್ತೇ? ಅದಕ್ಕೇ ಆತನಿಗೆ ಈ ಬದುಕು ಅಸಹ್ಯ ಅನ್ನಿಸಿರಬೇಕು. ಸಹ್ಯ ಮಾಡಿಕೊಳ್ಳಲು ಆತ ಆಕಾಶಕ್ಕೆ ನೆಗೆದು ಬಿಡುತ್ತಾನೇನೊ?

ಹೀಗಿದ್ದೂ, ಭಾರತವನ್ನಾಳುವ ಸಂಸತ್‍ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃ ತಿ ಇರಾನಿಯವರು “ರೋಹಿತ್ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾನೆ” ಎಂದು ಹೇಳಿ ಅದು ಸಾಲದೆ ಸುಳ್ಳಿನ ಹೂಮಾಲೆ ಕಟ್ಟಿ ಸಂಸತ್‍ ಅನ್ನೆ ಕುಬ್ಜಗೊಳಿಸಿಬಿಟ್ಟರು. ನಾಚಿಕೆಯನ್ನೇ ಕೊಂದುಬಿಟ್ಟರು. ಸಂಸತ್‍ ಅನ್ನು ಸಂವೇದನಾಹೀನ ಕುಷ್ಠ ಜೀವಿಗಳ ಸಂತೆ ಮಾಡಿಬಿಟ್ಟರು. ಇರಲಿ,
ವಿದೇಶಗಳಲ್ಲಿ ಉನ್ನತ ವ್ಯಾಸಂಗ ಪೂರೈಸಿ ಅಂಬೇಡ್ಕರ್, 1917ರಲ್ಲಿ ಭಾರತದ ಬರೋಡಾಕ್ಕೆ ಬಂದು ಎಲ್ಲೂ ಮನೆ ಸಿಗದೆ ಕೊನೆಗೆ ಪಾರ್ಸಿ ಹೋಟೆಲಿನಲ್ಲಿ ಸುಳ್ಳು ಜಾತಿ ಹೇಳಿ ಉಳಿದುಕೊಂಡಿದ್ದಾಗ ಮಹರ್ ಎಂದು ಗೊತ್ತಾಗಿ ಹೋಟೆಲ್‍ನಿಂದ ಅಂಬೇಡ್ಕರ್‍ನನ್ನು ಅವಮಾನಕರವಾಗಿ ಹೊರ ಹಾಕಲ್ಪಟ್ಟ ಆ ದಿಕ್ಕೆಟ್ಟ ಸಂದರ್ಭದ ಬಗ್ಗೆ ಅಂಬೇಡ್ಕರ್ ಬರೆಯುತ್ತಾ “ನನ್ನ ತಲೆ ಖಾಲಿಯಾಗಿತ್ತು” ಎನ್ನುತ್ತಾರೆ. ವೇಮುಲನು ತನ್ನ ಡೆತ್‍ನೋಟ್‍ನಲ್ಲಿ “ಈ ನಿಮಿಷದಲ್ಲಿ ನಾನು… ಖಾಲಿಯಾಗಿದ್ದೇನೆ” ಎಂದು ಬರೆದಿದ್ದಾನೆ. ಜರ್ಝರಿತ ಆ ಅಮಾನವೀಯ ಆ ಖಾಲಿಯಾದ ಸ್ಥಿತಿಯಲ್ಲಿ ಸಂಭಾಳಿಸಿಕೊಂಡು ಅಂಬೇಡ್ಕರ್ ಮರುಹುಟ್ಟು ಪಡೆಯುತ್ತಾರೆ. ಧಾರಣಾಶಕ್ತಿಯನ್ನು ಕೂಡಿಸಿಕೊಂಡು ವಿಷಕಂಠನಂತಾಗುತ್ತಾರೆ. ಆದರೆ ವೇಮುಲ, ಅಂಬೇಡ್ಕರ್‍ರ ಶೇಕಡ ಹತ್ತರಷ್ಟು ಅವಮಾನ, ತಾರತಮ್ಯಗಳನ್ನು ಅನುಭವಿಸದ ವೇಮುಲ, ತನ್ನ ಅಸಹಾಯಕ ಸಮುದಾಯಕ್ಕೆ ಬೆಳಕಾಗಬೇಕಿದ್ದ ವೇಮುಲ, ಆ ಖಾಲಿಯಾದ ಸ್ಥಿತಿಯೊಳಗಿಂದಲೇ ಅಂಬೇಡ್ಕರ್‍ರಂತೆ ಮರುಹುಟ್ಟು ಪಡೆಯಬೇಕಾಗಿತ್ತು, ಅಂತ ಅವನ ಮುಖ ನೆನಪಾದಾಗಲೆಲ್ಲಾ ಅನ್ನಿಸುತ್ತದೆ.