shrini coloumn – Peepal Media

ನ್ಯಾಯಾಲಯದಲ್ಲಿ ನ್ಯಾಯ ಸಿಗ್ತದೇಂತ ನಿಮಗೆ ಯಾರು ಹೇಳಿದ್ದು?!
ಇತ್ತೀಚಿನ ವರ್ಷಗಳಲ್ಲಿ ದೇಶದ ಗಮನ ಸೆಳೆದ ಪ್ರಕರಣಗಳಲ್ಲಿ ಸಿದ್ದೀಕ್‌ ಕಪನ್‌ ಅವರ ಪ್ರಕರಣವೂ ಒಂದು. ಉತ್ತರ ಪ್ರದೇಶದ ಹತ್ರಾಸ್‌ ಎನ್ನುವಲ್ಲಿ ನಡೆದ ದಲಿತ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣವನ್ನು ವರದಿ ಮಾಡಲು ಹೊರಟಿದ್ದ ಅವರನ್ನು ತಡೆದು ಬಂಧಿಸಿ UAPA ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹೀಗೆ ಜೈಲುವಾಸಿಯಾಗಿದ್ದ ಅವರಿಗೆ ಮೊನ್ನೆಯಷ್ಟೇ ಜಾಮೀನು ದೊರೆತಿದೆ. ಈ ಹಿನ್ನೆಲೆಯಲ್ಲಿ ಚಿಂತಕ ಶ್ರೀನಿವಾಸ ಕಾರ್ಕಳ ಅವರು ಈ ವಾರದ ಶ್ರೀನಿ ಕಾಲಮ್ಮಿನಲ್ಲಿ ನ್ಯಾಯಾಲಯದ ವ್ಯವಹಾರದ ಸುತ್ತಮುತ್ತಲಿನ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ

“ನ್ಯಾಯಾಲಯದಲ್ಲಿ ನ್ಯಾಯ ಸಿಗ್ತದೇಂತ ನಿಮಗೆ ಯಾರು ಹೇಳಿದ್ದು? ಅಲ್ಲಿ ಕಾನೂನು, ಸಂವಿಧಾನ ವಿಧಿಗಳ ವ್ಯಾಖ್ಯಾನ ನಡೆಯುತ್ತದೆ. ನಿಮಗೆ ‘ನ್ಯಾಯ’ ಬೇಕಾದರೆ ಸಂಧಾನದಂತಹ ಬೇರೆ ಯಾವುದಾದರೂ ದಾರಿ ಕಂಡುಕೊಳ್ಳಿ…” ಇದು ಕರಾವಳಿಯ ಬಳಕೆದಾರರ ಹೋರಾಟ ವೇದಿಕೆಯ ಮುಖ್ಯಸ್ಥರೊಬ್ಬರು ಎರಡು ದಶಕಗಳ ಹಿಂದೆ ನೀಡಿದ ಸಲಹೆ. ಆ ಮಹನೀಯರು ಈ ಮಾತನ್ನು ಸುಮ್ಮನೆ ಹೇಳಲಿಲ್ಲ. ಬಳಕೆದಾರರಿಗೆ ಅನ್ಯಾಯವಾದಾಗ ಈ ಸಂಬಂಧ ಕೋರ್ಟ್ ಗೆ ಅಲೆದಲೆದು, ಸತ್ಯ ಎಂಬುದು ಕಣ್ಣಿನ ಎದುರೇ ಇದ್ದಾಗಲೂ ಕೋರ್ಟ್ ನಲ್ಲಿ ವರ್ಷಗಟ್ಟಲೆ ಹೆಣಗುವಂತಾಗಿ, ಅಪಾರ ಕಷ್ಟ ನಷ್ಟ ಮಾಡಿಕೊಂಡು, ಕೊನೆಗೆ ಅಲ್ಲೂ ವ್ಯತಿರಿಕ್ತ ತೀರ್ಪುಗಳು ಬರುವುದನ್ನು ಸ್ವತಃ ನೋಡಿದ ಹಿನ್ನೆಲೆಯಲ್ಲಿ ಅವರು ಹೀಗೆ ಸಲಹೆ ನೀಡಿದ್ದರು. “ಮಾರಾಟಗಾರರಿಂದ ಅನ್ಯಾಯವಾಗಿದೆಯೇ? ನೇರ ಕೋರ್ಟ್ ಗೆ ಹೋಗುವ ಬದಲು, ಮೊದಲು ಆ ಮಾರಾಟಗಾರರನ್ನು ಭೇಟಿಯಾಗಿ, ಅವರಿಗೆ ಪ್ರಕರಣದ ಬಗ್ಗೆ ಮನವರಿಕೆ ಮಾಡಿಕೊಟ್ಟು, ಅಲ್ಲೇ ನ್ಯಾಯ ಪಡೆಯಲು ಸಾಧ‍್ಯವಾದಷ್ಟು ಪ್ರಯತ್ನ ಮಾಡಿ. ಆ ಹಂತದಲ್ಲಿಯೇ ಒಮ್ಮೊಮ್ಮೆ ಸಮಸ್ಯೆ ಪರಿಹಾರವಾಗುವುದಿದೆ. ಅಲ್ಲೂ ಸಮಸ್ಯೆ ಪರಿಹಾರವಾಗಲಿಲ್ಲವೇ? ಕೊನೆಯ ಆಯ್ಕೆಯಾಗಿ ಮಾತ್ರ ನ್ಯಾಯಾಲಯಕ್ಕೆ ಹೋಗಿ. ಅಲ್ಲೂ ನಿಮಗೆ ನ್ಯಾಯ ಸಿಗುವ ಖಾತ್ರಿಯೇನೂ ಇಲ್ಲ, ನೆನಪಿಡಿ” ಎನ್ನುತ್ತಿದ್ದರು ಅವರು.

ಮಾನವ ಇತಿಹಾಸದಲ್ಲಿ ಅತ್ಯಂತ ಆದರ್ಶಯುತ ಆಡಳಿತ ಮಾದರಿ ಎಂದು ನಾವು ಅಂದುಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ ಬಹಳ ಮಹತ್ತ್ವದ ಒಂದು ಸ್ಥಾನವಿದೆ. ಶಾಸಕಾಂಗದಿಂದ, ಕಾರ್ಯಾಂಗದಿಂದ ನಮಗೆ ಅನ್ಯಾಯವಾಗಬಹುದು. ಸಾಂವಿಧಾನಿಕ ಹಕ್ಕುಗಳಿಂದ ನಾವು ವಂಚಿತರಾಗಬಹುದು. ಆಗ ಬಹುನಿರೀಕ್ಷೆಯಿಂದ ನಾವು ನೋಡುವುದು ನ್ಯಾಯಾಂಗದತ್ತ. ಆಳುವವರು ಪ್ರಜಾತಂತ್ರ, ಸಂವಿಧಾನ, ಹಕ್ಕುಗಳ ಬಗ್ಗೆ ಎಷ್ಟೇ ಆಕರ್ಷಕ ಮಾತುಗಳನ್ನಾಡಿದರೂ, ತಮ್ಮನ್ನು ಪ್ರಜೆಗಳು ಪ್ರಶ್ನಿಸುವುದನ್ನು, ಟೀಕಿಸುವುದನ್ನು, ವಿರೋಧಿಸುವುದನ್ನು ಸಹಜವಾಗಿಯೇ ಅವರು ಇಷ್ಟ ಪಡುವುದಿಲ್ಲ. ವಿರೋಧದ ದನಿಗಳನ್ನು ಹೊಸಕಿ ಹಾಕಲು ಅವರು ಯತ್ನಿಸುತ್ತಲೇ ಇರುತ್ತಾರೆ. ಆಗ ಪ್ರಜೆಗಳಿಗೆ ರಕ್ಷಣೆ ಒದಗಿಸಬೇಕಾದುದು ನ್ಯಾಯಾಂಗ. ಆದರೆ, ನಮ್ಮ ನ್ಯಾಯಾಂಗ ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆಯೇ? ಪ್ರಕ್ರಿಯೆಯೇ ಒಂದು ಶಿಕ್ಷೆಯಾಗಿ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ, ಕೊನೆಗೆ ಅಪರಾಧಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಖುಲಾಸೆ ಗೊಳಿಸಿದರೆ ಇದರಿಂದ ಸಂತ್ರಸ್ತ ವ್ಯಕ್ತಿಗೆ ಏನು ನ್ಯಾಯ ಸಿಕ್ಕಂತಾಯಿತು? ವ್ಯಕ್ತಿಯ ಆಯುಷ್ಯದ ಅನೇಕ ವರ್ಷಗಳು ಜೈಲಿನಲ್ಲಿ ಕಳೆಯುವಂತಾದರೆ ಆ ವ್ಯಕ್ತಿಗೆ ಆದ ನಷ್ಟಕ್ಕೆ ಯಾರು ಹೊಣೆ? ದೇಶದಲ್ಲಿ ಇಂತಹ ಘಟನೆಗಳು ನೂರಾರು ಸಂಖ್ಯೆಯಲ್ಲಿ ನಡೆಯುತ್ತಲೇ ಇವೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಪ್ರಕರಣ.

ಏನಿದು ಸಿದ್ದಿಖಿ ಕಪ್ಪನ್ ಪ್ರಕರಣ?

2020 ನೇ ಇಸವಿ ಸೆಪ್ಟಂಬರ್ 14 ರಂದು ಉತ್ತರಪ್ರದೇಶದ ಹಾತರಸ್ ನಲ್ಲಿ ದಲಿತ ಯುವತಿಯೊಬ್ಬಳ ಮೇಲೆ ನಾಲ್ವರು ಸವರ್ಣೀಯರಿಂದ ಬರ್ಬರ ಅತ್ಯಾಚಾರ ನಡೆಯಿತು. ಕ್ರೌರ್ಯ ಯಾವ ಮಟ್ಟಿನದಾಗಿತ್ತೆಂದರೆ, ಅಂತಿಮವಾಗಿ ಅದು ಆಕೆಯ ಸಾವಿಗೆ ಕಾರಣವಾಗಿತ್ತು. ಈ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಸಕಾಲದಲ್ಲಿ ಆಕೆಯ ನೆರವಿಗೆ ಬಂದಿರಲಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿಯೂ ತಕ್ಷಣ ಆಕೆಗೆ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ. ಸರಕಾರದ ವತಿಯ ತೀವ್ರ ಲೋಪದ ಈ ಸುದ್ದಿ ಹರಡುತ್ತಿದ್ದಂತೆ ಜನಾಕ್ರೋಶ ಹೆಚ್ಚ ತೊಡಗಿತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಉತ್ತರಪ್ರದೇಶ ಪೊಲೀಸರು ಹೆತ್ತವರಿಗೆ ಒಪ್ಪಿಸುವ ಮಾತಂತಿರಲಿ, ಅವರಿಗೆ ಸರಿಯಾಗಿ ನೋಡಲೂ ಬಿಡದೆ, ಬಲವಂತವಾಗಿ ರಾತ್ರೋರಾತ್ರಿ ಆ ಹೆಣ್ಣುಮಗಳ ಮೃತದೇಹವನ್ನು ಸುಟ್ಟು ಹಾಕಿದ್ದರು. ಪ್ರಜೆಗಳ ಹಕ್ಕುಗಳನ್ನು ರಕ್ಷಿಸಬೇಕಾದ ಚುನಾಯಿತ ಸರಕಾರವೇ ಹೀಗೆ ಕಾನೂನು ಬಾಹಿರವಾಗಿ ಮತ್ತು ಅಮಾನುಷವಾಗಿ ನಡೆದುಕೊಂಡಿತ್ತು.

ಈ ಪ್ರಕರಣವನ್ನು ವರದಿ ಮಾಡಲು ಅನೇಕರು ಹಾತರಸ್ ಗೆ  ಹೋಗಿದ್ದರು. ಇದೇ ರೀತಿಯಲ್ಲಿ ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಕೂಡಾ ಹಾತರಸ್ ಗೆ ಹೊರಟಿದ್ದರು. ಆದರೆ ಹಾತರಸ್ ನ ಹಾದಿಯಲ್ಲಿರುವಾಗಲೇ ಕಪ್ಪನ್ ಮತ್ತು ಅವರ ಜತೆಗಿದ್ದ ಮೂವರನ್ನು ಉತ್ತರಪ್ರದೇಶ ಪೊಲೀಸರು ಮಥುರಾದಲ್ಲಿ ಅಕ್ಟೋಬರ್ 5, 2020 ರಂದು ಬಂಧಿಸಿದ್ದರು.

ವಿಚಿತ್ರವೆಂದರೆ, ಕಪ್ಪನ್ ಯಾವ ಅಪರಾಧವನ್ನೂ ಮಾಡಿರಲಿಲ್ಲ. ಅವರು ಪತ್ರಕರ್ತನಾಗಿ ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದರು. ಆದರೆ ಅವರ ಹೆಸರು ಸಿದ್ದಿಖಿಯಲ್ಲವೇ?!  ಹಾತರಸ್ ಭೇಟಿಯ ಅವರ ಉದ್ದೇಶ, ಮತೀಯ ಸೌಹಾರ್ದವನ್ನು ಕದಡುವುದು, ಗಲಭೆ ಪ್ರಚೋದಿಸುವುದು, ಭಯೋತ್ಪಾದನೆ ಹರಡುವುದು ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು ಎಂದು ಪೊಲೀಸರು ಆರೋಪಿಸಿದ್ದರು. ಅವರ ಮೇಲೆ ತುಂಬ ಕಠಿಣವಾದ ‘ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಕಪ್ಪನ್ ರನ್ನು ಶಿಕ್ಷಿಸಲು ಬಲವಾದ ಪುರಾವೆಗಳಿಲ್ಲ ಎನ್ನುವುದು ಖಚಿತವಾಗುತ್ತಲೇ, ಜುಜುಬಿ 5000 ರುಪಾಯಿ ವರ್ಗಾವಣೆಯನ್ನು ನೆಪ ಮಾಡಿಕೊಂಡು ಜ್ಯಾರಿ ನಿರ್ದೇಶನಾಲಯದ ವತಿಯಿಂದ ಅಕ್ರಮ ಹಣ ವರ್ಗಾವಣೆ ಕೇಸನ್ನೂ ಅವರ ವಿರುದ್ಧ ದಾಖಲಿಸಲಾಯಿತು.

ಕಪ್ಪನ್ ರ ಕಷ್ಟಗಳ ಸರಣಿ ಇಲ್ಲಿಂದ ಆರಂಭವಾಯಿತು. ಅವರ ಮೇಲೆ ಕೇಸು ದಾಖಲಿಸಿರುವುದರ ಹಿಂದೆ ಇರುವುದು ದುರುದ್ದೇಶ ಎಂಬುದು ಮೇಲು ನೋಟಕ್ಕೇ ತಿಳಿಯುವಂತಿದ್ದರೂ ಕೆಳ ಕೋರ್ಟ್ ಗಳು ಪದೇ ಪದೇ ಅವರಿಗೆ ಜಾಮೀನು ನಿರಾಕರಿಸಿದವು. ಮುಂದೆ ಹೈಕೋರ್ಟ್ ಕೂಡಾ ಜಾಮೀನು ನಿರಾಕರಿಸಿತು. ಕೋವಿಡ್ ಕಾಲದಲ್ಲಿಯೂ ಕಪ್ಪನ್ ಜೈಲಿನಲ್ಲಿ ನರಳಬೇಕಾಯಿತು. ಪರಿಣಾಮವಾಗಿ ಅವರು ಕೋವಿಡ್ ಸೋಂಕಿಗೆ ಒಳಗಾದರು. ಆಗ ಸಿಜೆಐ  ಆಗಿದ್ದ ಜಸ್ಟಿಸ್ ರಮಣ ಅವರು ಕಪ್ಪನ್ ರನ್ನು ದಿಲ್ಲಿಗೆ ತರಿಸಿ ಅವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಿದ್ದರು.

ಮುಗಿಯದ ಯಾತನೆ

ವರ್ಷ ಉರುಳಿದರೂ ಕಪ್ಪನ್ ಗೆ ಜಾಮೀನು ಸಿಗಲೇ ಇಲ್ಲ. ಕೇರಳದಲ್ಲಿರುವ ಆಕೆಯ ಪತ್ನಿ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಯಾವ ಫಲವೂ ದೊರೆಯಲಿಲ್ಲ. ಈ ನಡುವೆ 18 ಜೂನ್ 2021 ರಲ್ಲಿ ಕಪ್ಪನ್ ಅವರ ತಾಯಿ ತೀರಿಕೊಂಡರು. ತೀರಿಕೊಳ್ಳುವ ಮೊದಲು ತನ್ನ ತಾಯಿಯ ಮುಖವನ್ನು ನೋಡುವ ಅವಕಾಶವೂ ಕಪ್ಪನ್ ಗೆ ಇರಲಿಲ್ಲ! ಯಾತನೆಗಳ ಮೇಲೆ ಯಾತನೆ. ಮಾಡಿಯೇ ಇರದ ಅಪರಾಧಕ್ಕಾಗಿ ಜೈಲಿನೊಳಗೆ ಬಂಧಿ.

ಕಪ್ಪನ್ ರನ್ನು ಜೈಲಿನಿಂದ ಹೊರ ತರಲು ಅವರ ಒಡನಾಡಿಗಳು ಹೋರಾಟ ನಡೆಸಿಯೇ ಇದ್ದರು. ಅಂತಾರಾಷ್ಟ್ರೀಯವಾಗಿ ಪ್ರತಿಭಟನೆಗಳು, ಒತ್ತಡಗಳು ಸಾಗಿಯೇ ಇದ್ದವು. ಹೀಗೆಯೇ ಒಂದೂ ಮುಕ್ಕಾಲು ವರ್ಷ ಕಳೆದುಹೋಯಿತು. ಅಂತಿಮವಾಗಿ ಪ್ರಕರಣ ಸುಪ್ರೀಂ ಕೋರ್ಟ್ ಗೆ ಬಂತು. ಆಗ ಸಿಜೆಐ ಆಗಿದ್ದವರು ಜಸ್ಟಿಸ್ ಯು ಯು ಲಲಿತ್. ಕಪ್ಪನ್ ಮೇಲಿನ  ಪ್ರಕರಣಕ್ಕೆ ಬಲವಾದ ಪುರಾವೆ ಏನಿದೆ ಎಂದು ಕೋರ್ಟ್ ಸರಕಾರಿ ವಕೀಲರನ್ನು ಕಟುವಾಗಿ ಪ್ರಶ್ನಿಸಿತು. ಆದರೆ ಸರಕಾರದ ಬಳಿ ಸೂಕ್ತ ಸಾಕ್ಷ್ಯಾಧಾರಗಳೇ ಇರಲಿಲ್ಲ. ಸರಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಕಪ್ಪನ್ ಗೆ ಜಾಮೀನು ನೀಡಿತು; ಬಂಧನದ ಸುಮಾರು 700 ದಿನಗಳ ಬಳಿಕ!

ಇದು ನಡೆದುದು ಸೆಪ್ಟಂಬರ್ 9, 2022 ರಂದು. ಯುಎಪಿಎ ಪ್ರಕರಣದಲ್ಲೇನೋ ಜಾಮೀನು ಸಿಕ್ಕಿತು. ಆದರೆ ಕಪ್ಪನ್ ಜೈಲಿನಿಂದ ಹೊರಬರುವಂತಿರಲಿಲ್ಲ. ಯಾಕೆಂದರೆ ಅವರ ಮೇಲೆ ಅಕ್ರಮ ಹಣ ವರ್ಗಾವಣೆಯ ಕೇಸು ಬಾಕಿ ಇತ್ತು. ಇನ್ನೊಂದು ಸುತ್ತಿನ ನ್ಯಾಯಕ್ಕಾಗಿನ ಹೋರಾಟ ಶುರುವಾಯಿತು. ಕೇವಲ 5000 ರುಪಾಯಿ ವರ್ಗಾವಣೆಯ ಕೇಸು! ಅಕ್ಟೋಬರ್ ಹೋಯಿತು, ನವೆಂಬರ್ ಹೋಯಿತು,  ಕೊನೆಗೆ 2022 ಡಿಸೆಂಬರ್ 23  ರಂದು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಬೆಂಚ್ ಕಪ್ಪನ್ ಗೆ ಜಾಮೀನು ಮಂಜೂರು ಮಾಡಿತು.

ಈಗ ಕಪ್ಪನ್  ಜೈಲಿನಿಂದ ಹೊರಬರಬಹುದೇ? ಉಹುಂ ಇಲ್ಲ. ಯಾಕೆಂದರೆ ಈಗ ನ್ಯಾಯಾಲಯಗಳಿಗೆ ವರ್ಷದ ಕೊನೆಯ ರಜಾದಿನಗಳು. ಮತ್ತೆ ನ್ಯಾಯಾಲಯ ಕಾರ್ಯಾರಂಭ ಮಾಡಿದ ಮೇಲೆ ಜಾಮೀನಿನ ಷರತ್ತುಗಳನ್ನು ಪೂರೈಸಿದ ಮೇಲೆಯಷ್ಟೇ ಕಪ್ಪನ್ ಮನೆಗೆ ಹೋಗಬಹುದು. ಅಂದರೆ 2020 ರಲ್ಲಿ ಜೈಲು ಸೇರಿದ ಕಪ್ಪನ್ 2023 ರಲ್ಲಿ  ಜೈಲಿನಿಂದ ಹೊರಬರಬಹುದು. ನೆನಪಿಡಿ,  ಇದು ಕೇವಲ ಜಾಮೀನು. ಆರೋಪ ಮುಕ್ತನಾಗಲು ಅವರು ಸಾಗಬೇಕಾದ ದಾರಿ  ಎಷ್ಟು ದೀರ್ಘ  ಇದೆ, ತಗಲುವ ಖರ್ಚು ಎಷ್ಟು ಊಹಿಸಿ.

ಶಿಕ್ಷೆ ಮೊದಲು, ಆಮೇಲೆ ತನಿಖೆ !!

‘ಹತ್ತು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾ‍ಗಬಾರದು’ ಎಂಬುದು ಪ್ರಸಿದ್ಧ ಇಂಗ್ಲಿಷ್ ಜ್ಯೂರಿ ವಿಲಿಯಂ ಬ್ಲಾಕ್ ಸ್ಟನ್ ಎಂಬಾತನ ಮಾತು. ಪ್ರಕರಣಗಳನ್ನು ನಿಭಾಯಿಸುವಾಗ  ಜಗತ್ತಿನ ಅನೇಕ ನ್ಯಾಯಾಲಯಗಳು ಇದನ್ನೊಂದು ಆಧಾರ ತತ್ತ್ವದಂತೆ ಪರಿಗಣಿಸುತ್ತವೆ. ಜಾಮೀನು ನೀಡುವ ವಿಷಯದಲ್ಲಿಯೂ ನ್ಯಾಯಶಾಸ್ತ್ರ ತುಂಬಾ ಸ್ಪಷ್ಟವಿದೆ. Bail is the rule and jail is the exception ಎಂದು ಅದು ಹೇಳುತ್ತದೆ. ಅಂದರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬೇಕು. ಆದರೆ ಈವತ್ತು ನಮ್ಮ ನ್ಯಾಯಾಲಯಗಳು ಹಾಗೆ ನಡೆದುಕೊಳ್ಳುತ್ತವೆಯೇ? ಪೊಲೀಸರು ದುರುದ್ದೇಶದಿಂದ ಕೇಸು ದಾಖಲಿಸಿ ಕೋರ್ಟಿ್ಗೆ ಎಳೆ ತರಬಹುದು. ಆದರೆ ನ್ಯಾಯಾಧೀಶರು ಪೂರ್ವಗ್ರಹ ರಹಿತವಾಗಿ ಪ್ರಕರಣವನ್ನು ಪರಿಶೀಲಿಸಿದರೆ ಮೇಲು ನೋಟದಲ್ಲಿಯೇ ಅದು ಗಂಭೀರ ಹೌದೋ ಅಲ್ಲವೋ ಎಂದು ಅವರಿಗೆ ತಿಳಿಯುವುದು ಕಷ್ಟವೇನಲ್ಲ. ಗಂಭೀರ ಅಪರಾಧ ಅಲ್ಲವಾದರೆ ಅವರನ್ನು ಜೈಲಿಗೆ ಹಾಕುವ ಅಗತ್ಯವಾದರೂ ಏನು?

ದೇಶದ ಆಡಳಿತವು ಕಾನೂನು ನಿಯಮಗಳ ಆಧಾರದಲ್ಲಿ ನಡೆಯಬೇಕೇ ಹೊರತು, ಭಾವನೆಗಳ ಆಧಾರದಲ್ಲಿ ಅಲ್ಲ; ಸಂಘಟನೆಗಳ ಒತ್ತಡ, ಮಾಧ್ಯಮಗಳ ಆಗ್ರಹ, ಸಾಮಾಜಿಕ ಮಾಧ್ಯಮಗಳ ಅಭಿಯಾನದ ಮೂಲಕ ಅಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದರೆಂದೋ, ಪಾಕಿಸ್ತಾನ ಕ್ರಿಕೆಟ್ ‍ಗೆದ್ದಾಗ ಸಂಭ್ರಮಿಸಿದರೆಂದು ಆರೋಪ ಹೊರಿಸಿ ತಿಂಗಳು ಗಟ್ಟಲೆ ಅವರನ್ನು ಜೈಲಿನಲ್ಲಿರಿಸುವುದು ಏನನ್ನು ಸೂಚಿಸುತ್ತದೆ? ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ಅಥವಾ ಕಾನೂನಿನ ಯಾವ ಕಲಂ ಅಡಿಯಲ್ಲಿ ಅದು ಅಪರಾಧ ಎಂದು ನ್ಯಾಯಾಲಯಗಳು ವಿವೇಚಿಸಬೇಡವೇ?!

ಈವತ್ತು ಪ್ರಭುತ್ವ ಮನಸು ಮಾಡಿದರೆ ಸುಮ್ಮನೆ ನಿಮ್ಮ ಮೇಲೆ ಕೇಸು ಹಾಕಿ ಜೈಲಿನಲ್ಲಿಡಬಹುದು. ನಿಮ್ಮ ಮೊಬೈಲ್, ಕಂಪ್ಯೂಟರ್ ವಶಪಡಿಸಿಕೊಂಡು ಅದರಲ್ಲಿ ಸುಳ್ಳು ದಾಖಲೆಗಳನ್ನು ಸೇರಿಸಿ ನಿಮ್ಮನ್ನು ವರ್ಷ ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಬಹುದು (ಭೀಮಾ ಕೋರೇಗಾಂವ್ ಕೇಸಿನಲ್ಲಿ ಹೀಗೆ ಮಾಡಲಾದುದು ಈಗಾಗಲೇ ಬೆಳಕಿಗೆ ಬಂದಿದೆ). ಒಂದು ದಿನ ನೀವು ನಿರಪರಾಧಿ ಎಂದು ಸಾಬೀತಾಗಲೂಬಹುದು. ಆದರೆ ಆಗ ಶಿಕ್ಷೆ ಅನುಭವಿಸಿಯಾಗಿರುತ್ತದೆ!

ಪ್ರಕ್ರಿಯೆಯೇ ಒಂದು ಶಿಕ್ಷೆ!

ಉತ್ತರ ಪ್ರದೇಶದ ವಿಷ್ಣು ತಿವಾರಿ ಎಂಬಾತ ಅತ್ಯಾಚಾರ ಆರೋಪದಿಂದ ಮುಕ್ತನಾದ. ಆದರೆ ಹೀಗೆ ಮುಕ್ತನಾಗುವುದಕ್ಕೆ ಮುನ್ನ ಆತ ಜೈಲಿನಲ್ಲಿ ಕಳೆದುದು ಬರೋಬ್ಬರಿ 20 ವರ್ಷಗಳನ್ನು! ಉಗ್ರರು ಎಂಬ ಆರೋಪದಡಿ ದಶಕಗಳ ಕಾಲ ಜೈಲಿನಲ್ಲಿದ್ದು, ಆಮೇಲೆ ಕೋರ್ಟ್ ತೀರ್ಪು ಪ್ರಕಾರ ಅಮಾಯಕರೆನಿಸಿಕೊಂಡು ಹೊರಬಂದವರೆಷ್ಟು ಮಂದಿ? ಭೀಮಾ ಕೋರೇಗಾಂವ್ ಪ್ರಕರಣದಲ್ಲಿ ನಿಜವಾದ ಅಪರಾಧಿಗಳು ಆರಾಮ ಹೊರಗೆ ತಿರುಗಾಡಿಕೊಂಡಿದ್ದು ಘಟನೆಗೆ ಸಂಬಂಧವೇ ಪಡದವರೆಷ್ಟು ಮಂದಿ ಜೈಲಿನಲ್ಲಿಲ್ಲ? ಮಾನವ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ವಿದ್ವಾಂಸ ಆನಂದ ತೇಲ್ತುಂಬ್ಡೆ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಕವಿ ವರವರ ರಾವ್ ಅವರದೂ ಇದೇ ಕತೆ. ಗೌತಮ ನವಲಕಾ ವರ್ಷಗಳ ಕಾಲ ಜೈಲಿನಲ್ಲಿದ್ದು ಈಗ ಗೃಹಬಂಧನದಲ್ಲಿದ್ದಾರೆ. ಸುರೇಂದ್ರ ಗಾಡ್ಲಿಂಗ್, ಸುಧೀರ್ ಧವಲೆ, ರೋನಾ ವಿಲ್ಸನ್, ಶೋಮಾ ಸೇನ್, ಮಹೇಶ್ ರಾವತ್, ಅರುಣ್ ಫೆರೇರಾ, ವರ್ನನ್ ಗೊನ್ಸಾಲ್ವೇಸ್, ಹನಿಬಾಬು, ಸಾಗರ್ ಗೋರ್ಖೆ, ರಮೇಶ್ ಗಾಯ್ಚೋರ್, ಜ್ಯೋತಿ ಜಗತಾಪ್ ಇವರೆಲ್ಲರೂ ಇದೇ ಪ್ರಕರಣದಲ್ಲಿ ಈಗಲೂ ಜೈಲಿನಲ್ಲಿದ್ದಾರೆ.  85 ರ ಮುದುಕ ಫಾದರ್ ಸ್ಟಾನ್ ಸ್ವಾಮಿಯಂತೂ ಪಾನೀಯ ಕುಡಿಯವ ಒಂದು ಸ್ಟ್ರಾ ಗಾಗಿ ಕೋರ್ಟ್ ನ ಮುಂದೆ ಅಂಗಾಲಾಚಬೇಕಾಯಿತು. ಕೊನೆಗೂ ಅವರು ಕಸ್ಟಡಿಯಲ್ಲಿಯೇ ಕೊನೆಯುಸಿರೆಳೆದರು.

ಜೆ ಎನ್ ಯು ನ ಪ್ರತಿಭಾವಂತ ವಿದ್ಯಾರ್ಥಿ ಉಮರ್ ಖಾಲೀದ್ ದೆಹಲಿ ಗಲಭೆಯ ಪಿತೂರಿಗಾರ ಎಂಬ ಆರೋಪದಲ್ಲಿ ಜೈಲಿನಲ್ಲಿದ್ದಾರೆ. ಅವರ ಜತೆಗೆ ಇನ್ನೂ ಅನೇಕ ಹೋರಾಟಗಾರರು, ಹೆಣ್ಣುಮಕ್ಕಳು ಕೂಡಾ ವರ್ಷ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಫ್ಯಾಕ್ಟ್ ಚೆಕ್ಕರ್ ಮಹಮದ್ ಜುಬೇರ್ ರಿಗೆ ಸರಕಾರ ಕಿರುಕುಳ ಕೊಡಲಾರಂಭಿಸಿದಾಗ ಕೆಳ ಕೋರ್ಟ್ ಗಳು ಆತನಿಗೆ ರಕ್ಷಣೆ ಕೊಡಲೇ ಇಲ್ಲ. ಅದಕ್ಕೆ ಸುಪ್ರೀಂ ಕೋರ್ಟೇ ಮಧ‍್ಯಪ್ರವೇಶ ಮಾಡಬೇಕಾಯಿತು.

ಇವೆಲ್ಲ ನ್ಯಾಯಾಂಗಕ್ಕೆ ಶೋಭೆ ತರುವಂತಹ ನಡೆಗಳೇ? ನ್ಯಾಯದಾನ ಎಂಬುದು ಕಾನೂನು ಮತ್ತು ಸಂವಿಧಾನವನ್ನು ಆಧರಿಸಿಯೇ ಇರುವುದಾದರೆ ಯಾವ ಕೋರ್ಟೇ ಇರಲೀ, ಯಾವ ನ್ಯಾಯಾಧೀಶರೇ ಇರಲಿ ಅವರು ನೀಡುವ ನ್ಯಾಯ ಒಂದೇ ತೆರನಾಗಿರಬೇಕಲ್ಲವೇ? ಒಂದೇ ಪ್ರಕರಣದಲ್ಲಿ ಒಂದು ಕೋರ್ಟು ಜಾಮೀನು ನಿರಾಕರಿಸುತ್ತದೆ ಇನ್ನೊಂದು ಕೋರ್ಟು ಜಾಮೀನು ನೀಡುತ್ತದೆಯಾದರೆ ನ್ಯಾಯ ಎಂದರೆ ಏನು? ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಒಬ್ಬರು ನ್ಯಾಯಮೂರ್ತಿಗೆ ಸಮವಸ್ತ್ರಕ್ಕಿಂತಲೂ ಹೆಣ್ಣುಮಕ್ಕಳ ಶಿಕ್ಷಣವೇ ಮುಖ್ಯವಾಗುತ್ತದಾದರೆ, ಇನ್ನೊಬ್ಬ ನ್ಯಾಯಮೂರ್ತಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಿಂತಲೂ ಸಮವಸ್ತ್ರವೇ ಮುಖ್ಯವಾಗುತ್ತದೆ ಎಂದರೆ ಅದು ನ್ಯಾಯದ ಅಣಕದಂತೆ ಕಾಣುವುದಿಲ್ಲವೇ? ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥವಾದರೆ ಸಾಲದು,  ‘ನ್ಯಾಯ’ ವೂ ಸಿಗುವಂಥಾಗಬೇಕಲ್ಲವೇ?

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆಯುತ್ತಿವೆಯೇ?
ದೇಶದ ಪ್ರಜಾತಂತ್ರ ಇದೀಗ ದೊಡ್ಡ ಅಪಾಯ ಎದುರಿಸುತ್ತಿದೆ. ಚುನಾವಣೆಗಳು ಅರ್ಥಹೀನವಾಗುತ್ತಿವೆ. ಜನರಲ್ಲಿ ಚುನಾವಣೆಯ ಬಗ್ಗೆ ಜಿಗುಪ್ಸೆ ಮೂಡುತ್ತಿದೆ. ಮತದಾನದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ…ಯಾಕೆ? 2022 ರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣೆಗಳ ಬಗ್ಗೆ ಒಂದು ವಸ್ತುನಿಷ್ಠ ವಿಶ್ಲೇ಼ಷಣೆ ಇಂದಿನ ಶ್ರೀನಿ ಕಾಲಂ ನಲ್ಲಿ

ದೇಶದಾದ್ಯಂತ ಭಾರೀ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ, 2022 ರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಪ್ರಕ್ರಿಯೆ ಕೊನೆಗೂ ಮುಗಿದಿದೆ. ಫಲಿತಾಂಶಗಳೂ ಹೊರಬಿದ್ದಿವೆ. ಗುಜರಾತ್ ನಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಮತ್ತೆ ಗದ್ದುಗೆಗೆ ಮರಳಿದೆ. 2002 ರ ಕೋಮುಗಲಭೆಯ ಬಳಿಕ ಗುಜರಾತ್ ಹಿಂದೂ ಮುಸ್ಲಿಂ ನೆಲೆಯಲ್ಲಿ ಸಂಪೂರ್ಣ ಒಡೆದು ಹೋಗಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಪ್ರತ್ಯೇಕವಾಗಿ ವಾಸಿಸುವ ಸ್ಥಿತಿಗೆ (ಗೆಟ್ಟೋವೈಸೇಶನ್) ತಲಪಿರುವ ಹಿನ್ನೆಲೆಯಲ್ಲಿ, ಹಿಂದೂಗಳ ಪಕ್ಷ ಎಂದು ಬಹಿರಂಗವಾಗಿಯೇ ಬಿಂಬಿಸಿಕೊಂಡು ಬಂದಿರುವ ಬಿಜೆಪಿಗೆ ಪರಿಸ್ಥಿತಿ ಸಹಜವಾಗಿಯೇ ಅನುಕೂಲಕರವಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಪಾಟೀದಾರ ಸಮುದಾಯವು ಮುನಿಸಿ ಕೊಂಡು ಬಿಜೆಪಿಯಿಂದ ದೂರ ಸರಿದುದರಿಂದ ಬಹಳ ಕಷ್ಟದಲ್ಲಿ ಅದು ಅಧಿಕಾರಕ್ಕೆ ಮರಳಿತ್ತು. ಆದರೆ ಈ ಬಾರಿ ಹಾರ್ದಿಕ್ ಪಟೇಲ್ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಪಾಟೀದಾರ್ ಸಮುದಾಯ ಗಟ್ಟಿಯಾಗಿ ಬಿಜೆಪಿಯ ಹಿಂದೆ ನಿಂತಿದೆ. ಅಲ್ಲದೆ ಬಿಜೆಪಿಗೆ ಆರ್ಥಿಕ ಸಂಪನ್ಮೂಲದ ಸಮಸ್ಯೆಯಿಲ್ಲ, ತಳಮಟ್ಟದ ಸಂಘಟನೆ ಗಟ್ಟಿಯಾಗಿದೆ. ಈ ಎಲ್ಲ ಕಾರಣಗಳಿಂದ ಬಿಜೆಪಿ ಅಲ್ಲಿ ಏಳನೇ ಬಾರಿಗೆ ಅಧಿಕಾರ ಹಿಡಿದಿದ್ದು, ಅಭಿವೃದ್ಧಿಗಿಂತಲೂ ಮುಖ್ಯವಾಗಿ ಅದರ ವಿಭಜನಕಾರಿ ರಾಜಕೀಯ ಸಿದ್ಧಾಂತದಿಂದಾಗಿ ಅಲ್ಲಿ ಮುಂದೆ ಎಂದೆಂದೂ ಬಿಜೆಪಿ ಆಳ್ವಿಕೆ ನಡೆಸಿದರೂ ಅಚ್ಚರಿಯೇನೂ ಇಲ್ಲ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದು ಕೊಳ್ಳುವುದು ಬಹುತೇಕ ನಿಶ್ಚಿತವಾಗಿತ್ತು. ಅಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಮರಳದ ಒಂದು ಪರಂಪರೆ, ಅಲ್ಲಿನ ಬಿಜೆಪಿಯೊಳಗೆ ಇದ್ದ ಒಳಜಗಳ, ಮುಖ್ಯಮಂತ್ರಿಯ ಪದೇ ಪದೇ ಬದಲಾವಣೆ, ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಘಟಿತ ಪ್ರಚಾರ ಇವೆಲ್ಲ ಇದಕ್ಕೆ ಕಾರಣವಾಗಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಮೋದಿ ಸರಕಾರದ ‘ಅಗ್ನಿವೀರ’ ಯೋಜನೆಯ ಬಗ್ಗೆ ಅಲ್ಲಿನ ಯುವ ಸಮುದಾಯದಲ್ಲಿ ವ್ಯಾಪಕ ಅಸಮಾಧಾನವಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ, ಪಂಜಾಬ್, ಉತ್ತರಪ್ರದೇಶ ಈ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಯುವಕರು ಸೇನೆಗೆ ಸೇರುತ್ತಾರೆ. ‘ಅಗ್ನಿವೀರ ಯೋಜನೆ ತಂದು ತಮ್ಮ ಉದ್ಯೋಗಾವಕಾಶಗಳಿಗೆ ಸಂಚಕಾರ ತಂದ ಬಿಜೆಪಿಗೆ ಪಾಠ ಕಲಿಸುತ್ತೇವೆ’ ಎಂದು ಹಿಮಾಚಲದ ಯುವಜನರು ಬಹಿರಂಗವಾಗಿಯೇ ಹೇಳುತ್ತಿದ್ದರು. ಹೀಗೆ ಶೇಕಡಾವಾರು ಮತಗಳಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲವಾದರೂ 68 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 40ಸ್ಥಾನ ಗೆದ್ದರೆ ಬಿಜೆಪಿ 25 ಸ್ಥಾನವನ್ನಷ್ಟೇ ಗೆಲ್ಲುವುದು ಸಾಧ್ಯವಾಯಿತು. ಕಾಂಗ್ರೆಸ್ ಅಧಿಕಾರಕ್ಕೇರಿತು; ಸುಖ್ವಿಂದರ್ ಸಿಂಗ್ ಮುಖ್ಯಮಂತ್ರಿಯಾದರು.

ಮಾಧ್ಯಮಗಳ ಪಕ್ಷಪಾತ ನೀತಿ

ಈ ನಡುವೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳನ್ನು ನಮ್ಮ ಮಾಧ್ಯಮಗಳು ವರದಿ ಮಾಡಿದ ಮತ್ತು ಚುನಾವಣಾ ಫಲಿತಾಂಶವನ್ನು ವಿಶ್ಲೇಷಣೆ ಮಾಡಿದ ರೀತಿಯು ದೇಶದಲ್ಲಿ ಮಾಧ್ಯಮ ಯಾವ ಕೆಳಮಟ್ಟವನ್ನು ತಲಪಿದೆ ಮತ್ತು ಎಷ್ಟೊಂದು ಪಕ್ಷಪಾತದಿಂದ ವರ್ತಿಸುತ್ತದೆ ಎಂಬುದರ ಸೂಚಕವಾಗಿದೆ. ಅವುಗಳ ಪ್ರಕಾರ ಗುಜರಾತ್ ರಾಜ್ಯ ಬಿಟ್ಟರೆ ಬೇರೆಲ್ಲೂ ಚುನಾವಣೆ ನಡೆದೇ ಇಲ್ಲ. ಪ್ರಧಾನ ಮಂತ್ರಿ ಮೋದಿಯವರು ಅಲ್ಲಿ ಕುಂತರೂ, ನಿಂತರೂ, ಏನು ಮಾಡಿದರೂ ಸುದ್ದಿ. ನೀತಿ ಸಂಹಿತೆಯ ಉಲ್ಲಂಘನೆಯನ್ನು ಪ್ರಶ್ನಿಸುವ ಧೈರ್ಯವನ್ನು ಅವು ಯಾವತ್ತೂ ತೋರಲೇ ಇಲ್ಲ. ಎಲ್ಲ ಅಕ್ರಮಗಳೂ ಸಕ್ರಮ! ಚುನಾವಣಾ ಫಲಿತಾಂಶ ಬಂದಾಗಲೂ ಅಷ್ಟೇ. ವಾಸ್ತವದಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ದಿಲ್ಲಿ ಎಂ ಸಿ ಡಿ ಮೂರರಲ್ಲೂ ಬಿಜೆಪಿ ಅಧಿಕಾರದಲ್ಲಿತ್ತು. ಗುಜರಾತ್ ಹೊರತುಪಡಿಸಿ ಉಳಿದ ಎರಡರಲ್ಲೂ ಅದು ಅಧಿಕಾರ ಕಳೆದುಕೊಂಡಿತು. ಒಂದು ರೀತಿಯ ರಾಜಕೀಯ ಮುಖಭಂಗ. ಆದರೆ ಮಾಧ್ಯಮಗಳಿಗೆ ಅದು ಮುಖ್ಯವಾಗಲೇ ಇಲ್ಲ. ನಿರಂತರ ಒಂದೇ ಪಕ್ಷದ ಮತ್ತು ಒಬ್ಬನೇ ನಾಯಕನ ಭಜನೆ ಮಾಡಿದ್ದೇ ಮಾಡಿದ್ದು.!

ಚುನಾವಣಾ ಆಯೋಗದ ಕಾರ್ಯವೈಖರಿ

ಟಿ ಎನ್ ಶೇಷನ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ಚುನಾವಣಾ ಆಯೋಗದ ಶಕ್ತಿ ಏನು ಎಂಬುದು ದೇಶಕ್ಕೆ ಮೊದಲ ಬಾರಿಗೆ ತಿಳಿಯಿತು. ಅದಕ್ಕೆ ಮೊದಲು ಮತ್ತು ಆನಂತರ ನಮ್ಮ ಚುನಾವಣಾ ಆಯೋಗಗಳು ನಿಷ್ಪಕ್ಷಪಾತವಾಗಿ ಮತ್ತು ದಿಟ್ಟವಾಗಿ ಕೆಲಸ ಮಾಡಿದ ಉದಾಹರಣೆಗಳು ತೀರಾ ವಿರಳ. ಕಳೆದ ಸುಮಾರು ಎಂಟು ವರ್ಷಗಳಿಂದಂತೂ ಸಂಪೂರ್ಣ ಕೇಂದ್ರ ಸರಕಾರದ ಕೈಗೊಂಬೆ. ಯಾರು ಚುನಾವಣಾ ಆಯೋಗದ ಚುಕ್ಕಾಣಿ ಹಿಡಿದರು, ಹೇಗೆ ಹಿಡಿದರು, ಸ್ವತಃ ಪ್ರಧಾನಿಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದಾಗ ಅವರು ಏನು ಕ್ರಮ ತೆಗೆದುಕೊಂಡರು ಎಂಬುದನ್ನು ಸುಮ್ಮನೆ ಅವಲೋಕಿಸಿದರೂ ಸಾಕು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಜಿಗುಪ್ಸೆ ಹುಟ್ಟೀತು. ಇದಕ್ಕೆ ಒಂದು ಕಾರಣ ಚುನಾವಣಾ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಒಕ್ಕೂಟ ಸರಕಾರದ ಬಳಿ ಇರುವುದು ಮತ್ತು ಸರಕಾರ ತಮಗೆ ಬೇಕಾದವರನ್ನು ನೇಮಕಮಾಡುವುದು!

ಇತ್ತೀಚೆಗೆ ಅರುಣ್ ಗೋಯಲ್ ಅವರನ್ನು ಚುನಾವಣಾ ಕಮಿಷನರ್ ಆಗಿ ನೇಮಕ ಮಾಡಿದಾಗ ಉಂಟಾದ ವಿವಾದ ಇದಕ್ಕೆ ಅತ್ಯುತ್ತಮ ಉದಾಹರಣೆ. ಅರುಣ್ ಗೋಯಲ್ 1985 ರ ಬ್ಯಾಚ್ ನ ಪಂಜಾಬ್ ಕೇಡರ್ ನ ಐ ಎ ಎಸ್ ಅಧಿಕಾರಿ. ಈಗಿನ ಒಕ್ಕೂಟ ಸರಕಾರದಲ್ಲಿ ಭಾರೀ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದವರು. ಡಿಸೆಂಬರ್ 31, 2022 ಕ್ಕೆ ನಿವೃತ್ತಿಯಾಗಲಿದ್ದವರು. ನಿವೃತ್ತಿಗೆ ಇನ್ನೇನು ಆರು ವಾರ ಇರುವಾಗ ಅವರು ಸ್ವಯಂ ನಿವೃತ್ತಿಗೆ (ವಿಆರ್ ಎಸ್) ಅರ್ಜಿ ಹಾಕುತ್ತಾರೆ. ನವೆಂಬರ್ 18 ರಂದು ಅವರ ಮನವಿಯನ್ನು ಅಂಗೀಕರಿಸಲಾಗುತ್ತದೆ. 19 ರಂದು ಅವರನ್ನು ಚುನಾವಣಾ ಕಮಿಷನರ್ ಆಗಿ ನೇಮಕ ಮಾಡಲಾಗುತ್ತದೆ! ಮುಂದಿನ 2027 ರ ಡಿಸೆಂಬರ್ ವರೆಗೂ ಇವರು ಚುನಾವಣಾ ಆಯುಕ್ತರಾಗಿರುತ್ತಾರೆ !

ಈ ವಿಚಾರವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಒಂದೇ ದಿನದಲ್ಲಿ, ಅದೂ ತಿಂಗಳುಗಳ ಕಾಲದಿಂದ ಖಾಲಿ ಬಿದ್ದಿದ್ದ ಹುದ್ದೆಗೆ ಅಷ್ಟು ತರಾತುರಿಯಲ್ಲಿ ನೇಮಕ ಮಾಡುವ ಅಗತ್ಯ ಏನು? ಇದಕ್ಕೆ ಅನುಸರಿಸಲಾದ ಪ್ರಕ್ರಿಯೆಯ ಎಲ್ಲ ವಿವರ ಸಲ್ಲಿಸಿ ಎಂದು ಅದು ಅಟಾರ್ನಿ ಜನರಲ್ ಆರ್ ವೆಂಕಟರಮಣಿಗೆ ಹೇಳಿದೆ. ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡಲು ಒಂದು ನಿಷ್ಪಕ್ಷಪಾತವಾದ ಒಂದು ಸಮಿತಿ ಬೇಡವೇ? ಚುನಾವಣಾ ಆಯುಕ್ತರು ಪ್ರಧಾನಿಯ ಮೇಲೂ ಕ್ರಮ ಜರುಗಿಸುವಂತಿರ ಬೇಕಲ್ಲವೇ? ಎಂದು ಅದು ಹೇಳಿದೆ. ಪ್ರಧಾನಿಯಿಂದ ನೇಮಕಗೊಂಡ ಆಯುಕ್ತರು ಪ್ರಧಾನಿಯ ಮೇಲೆ ಕ್ರಮ ಜರುಗಿಸುವರೇ ಎಂಬುದು ಕೋರ್ಟ್ ನ ಪರೋಕ್ಷ ಪ್ರಶ್ನೆಯಾಗಿತ್ತು.

ಗುಜರಾತ್ ಗೆ ಎರಡು ಹಂತದ ಚುನಾವಣೆ!

‘ಒಂದು ದೇಶ ಒಂದು ಚುನಾವಣೆ’ ಇದು ಕಳೆದ ಎಂಟು ವರ್ಷಗಳಲ್ಲಿ ಪದೇ ಪದೇ ಕೇಳಿಬರುತ್ತಿರುವ ಒಂದು ಮಾತು. ಈ ಬಗ್ಗೆ ಮಾತನಾಡಬಾರದ ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಗಳೂ ಆಗಾಗ ಇದರ ಬಗ್ಗೆ ಮಾತನಾಡುತ್ತಾ, ‘ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆಗೆ ಒಮ್ಮೆಲೇ ಚುನಾವಣೆ ನಡೆಸಲು ತಾವು ಸಿದ್ಧ’ ಎನ್ನುತ್ತಿರುತ್ತವೆ. ದೇಶದಲ್ಲಿ ಒಮ್ಮೆಲೇ ಚುನಾವಣೆ ನಡೆಸಲು ಸಿದ್ಧ ಎನ್ನುವ ಇದೇ ಚುನಾವಣಾ ಆಯೋಗ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಗೆ ಒಮ್ಮೆಲೇ ಚುನಾವಣಾ ದಿನಾಂಕ ಘೋಷಿಸುವುದಿಲ್ಲ (ಮತಗಣನೆ ಮಾತ್ರ ಒಂದೇ ದಿನ). ಗುಜರಾತ್ ನಲ್ಲಿ ಪ್ರಧಾನಿಗಳಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡಲಾಗುತ್ತಿದೆಯೋ ಎಂಬ ಅನುಮಾನ ಬರುವಂತೆ ಅಲ್ಲಿ ಅನೇಕ ವಾರಗಳ ಬಳಿಕ ಚುನಾವಣಾ ದಿನಾಂಕ ಘೋಷಿಸಲಾಗುತ್ತದೆ. ಕೇವಲ 182 ವಿಧಾನಸಭಾ ಸ್ಥಾನ ಇರುವ ಗುಜರಾತ್ ನಲ್ಲಿ ಎರಡು ಹಂತದ ಚುನಾವಣೆ ಘೋಷಿಸಲಾಗುತ್ತದೆ. ನಿಯಮದ ದುರುಪಯೋಗ ಮಾಡಿಕೊಂಡು ಮತದಾನದ ದಿನವೂ ಪ್ರಧಾನಿಗಳು ಪಕ್ಕದ ಇನ್ನೊಂದು ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಭಾಷಣ ನಡೆಸುತ್ತಾರೆ. ತಾಯಿಯನ್ನು ಭೇಟಿ ಮಾಡುತ್ತಾರೆ. ಮತ ಚಲಾವಣೆಯ ಸಮಯದಲ್ಲಿಯೂ ರೋಡ್ ಶೋ ನಡೆಸುತ್ತಾರೆ. ಮಾಧ್ಯಮ ಸ್ವಾತಂತ್ರ್ಯ ಬಳಸಿಕೊಂಡು ಮಾಧ್ಯಮಗಳು ಇವುಗಳ ಲೈವ್ ಪ್ರಸಾರ ನಡೆಸುತ್ತವೆ. ದೂರು ಕೊಟ್ಟರೆ ‘ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ’ ಎಂದು ಆಯೋಗ ಹೇಳುತ್ತದೆ. ಅಮಿತ್ ಶಾ, 2002 ರಲ್ಲಿ ‘ಅವರಿಗೆ’ ಪಾಠ ಕಲಿಸಿದೆವು ಎನ್ನುತ್ತಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಲ್ಲ ಎನ್ನುತ್ತದೆ ಆಯೋಗ!

ಚುನಾವಣಾ ಬಾಂಡುಗಳೆಂಬ ಭ್ರಷ್ಟ ಯೋಜನೆ

ಈಗಿನ ಚುನಾವಣೆಗಳು ಉಮೇದುವಾರರ ಪಾಲಿಗೆ ಬಹು ದುಬಾರಿ. ಲಕ್ಷಗಟ್ಟಲೆ ಕೆಲವೊಮ್ಮೆ ಕೋಟಿಗಟ್ಟಲೆ ಹಣ ವ್ಯಯಿಸಬೇಕು. ಜೊತೆಯಲ್ಲಿ ಮಾಧ್ಯಮಗಳೂ ನಿಮ್ಮ ಜತೆಗಿರಬೇಕು. ಆ ಎಲ್ಲ ಅನುಕೂಲಗಳೂ ಈಗ ದೇಶದಲ್ಲಿ ಒಂದು ಪಕ್ಷಕ್ಕಿದೆ. ಪಾರದರ್ಶಕತೆಯು ಬಹುಮುಖ್ಯ ಅಂಶವಾಗಿರಬೇಕಾದ ಪ್ರಜಾತಂತ್ರದಲ್ಲಿ ‘ಚುನಾವಣಾ ಬಾಂಡು’ ಎನ್ನುವುದೇ ದೊಡ್ಡದೊಂದು ಭ್ರಷ್ಟ ಯೋಜನೆ. ಈ ಬಾಂಡ್ ಮೂಲಕ ಕೋಟಿಗಟ್ಟಲೆ ಹಣ ರಾಜಕೀಯ ಪಕ್ಷಗಳಿಗೆ ಬರುತ್ತದೆ. ಆದರೆ

ಅದನ್ನು ಕೊಟ್ಟವರು ಯಾರು ಎಂಬುದು ಯಾರಿಗೂ ತಿಳಿಯದು. 2017- 18 ಮತ್ತು 2019-20 ರಲ್ಲಿ 19 ಪಕ್ಷಗಳು 6,201 ಕೋಟಿ ಹಣ ಪಡೆದವು. ಇದರಲ್ಲಿ ಬಿಜೆಪಿಗೆ 68% ಅಂದರೆ 4,215.89 ಕೋಟಿ ಬಂದರೆ, ಕಾಂಗ್ರೆಸ್ ಗೆ ಕೇವಲ 11.3%, ಅಂದರೆ 706.2 ಕೋಟಿ ಬಂತು. ದೇಶದ ಒಟ್ಟು 105 ರಾಜಕೀಯ ಪಕ್ಷಗಳ ಪೈಕಿ ಚುನಾವಣಾ ಬಾಂಡ್ ನ ಲಾಭವಾದುದು ಕೇವಲ 19 ಪಕ್ಷಗಳಿಗೆ ಎಂದು ‘ದಿ ಕ್ವಿಂಟ್’ ಹೇಳಿದೆ. ಎಲ್ಲವೂ ಗುಪ್ತ ಗುಪ್ತ. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರೂ ಇದುವರೆಗೆ ಪ್ರಯೋಜನವಾಗಿಲ್ಲ. ಈ ಚುನಾವಣಾ ಬಾಂಡುಗಳ ಮೂಲಕ ಬಹುದೊಡ್ಡ ಪ್ರಮಾಣದಲ್ಲಿ ಹಣ ಬರುವುದು ಸಹಜವಾಗಿಯೇ ಅಧಿಕಾರದಲ್ಲಿರುವ ಪಕ್ಷಕ್ಕೆ, ಅಂದರೆ ಈಗ ಬಿಜೆಪಿಗೆ. ಹಣ ಮತ್ತು ಅಧಿಕಾರ ಇದ್ದರೆ ಮಾಧ್ಯಮಗಳನ್ನು ಹೇಗೂ ನಿಯಂತ್ರಿಸಬಹುದು. ಆಮಿಷ ಮತ್ತು ಬೆದರಿಕೆ ಎರಡೂ ಇಲ್ಲಿ ಕೆಲಸಕ್ಕೆ ಬರುತ್ತದೆ. ಈಗಂತೂ ಆಳುವವರ ಆಪ್ತ ಸ್ನೇಹಿತ ಬಿಲಿಯಾಧಿಪತಿಗಳು ದೇಶದ ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳನ್ನು ಕೊಂಡುಕೊಂಡಿದ್ದು ಅದರ ಲಾಭವೂ ಆಗುತ್ತಿರುವುದು ಬಿಜೆಪಿಗೆ. ಅಂದಮೇಲೆ ಸಮಾನ ನೆಲೆಯ (ಲೆವೆಲ್ ಪ್ಲೇಯಿಂಗ್ ಫೀಲ್ಡ್) ಸ್ಪರ್ಧೆ ಎಲ್ಲಿದೆ?!

ಇಷ್ಟೆಲ್ಲ ಆದ ಮೇಲೆ ಒಂದು ಸರಕಾರ ಚುನಾಯಿತವಾಗಿ ಅಸ್ತಿತ್ವಕ್ಕೆ ಬಂತು ಅಂತಿಟ್ಟು ಕೊಳ್ಳಿ. ಬಿಜೆಪಿಯೇತರ ಪಕ್ಷದ ಸರಕಾರವಾದರೆ ಅದು ಎಷ್ಟು ದಿನ ಉಳಿದು ಕೊಂಡೀತು? ದಶಕದ ಹಿಂದೆ ‘ಆಪರೇಶನ್ ಕಮಲ’ ಎಂಬ ಒಂದು ಅನೈತಿಕ ರಾಜಕೀಯ ಪರಂಪರೆ ಕರ್ನಾಟಕದಿಂದಲೇ ಶುರುವಾಯಿತು. ಒಂದು ಪಕ್ಷದಿಂದ ಗೆದ್ದ ಶಾಸಕರಿಗೆ ಹಣಕಾಸಿನ ಮತ್ತು ಮಂತ್ರಿ ಪದವಿಯ ಆಮಿಷ ಒಡ್ಡಿ ಅಥವಾ ಕೇಂದ್ರೀಯ ಸಂಸ್ಥೆಗಳ ಮೂಲಕ ಬೆದರಿಕೆ ಒಡ್ಡಿ ಅವರು ಬೇರೊಂದು ಪಕ್ಷಕ್ಕೆ ಹೋಗುವಂತೆ ಮಾಡುವುದು, ಆ ಮೂಲಕ ಸರಕಾರಗಳನ್ನು ಉರುಳಿಸಿ ಚುನಾವಣಾ ಮ್ಯಾಂಡೇಟುಗಳನ್ನು ಅಣಕ ವಾಡುವುದು. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಬಿಜೆಪಿ ಅಗತ್ಯ ಬಹುಮತದ ಮೂಲಕ ಅಧಿಕಾರಕ್ಕೆ ಬರಲಿಲ್ಲ. ಆದರೆ ಆ ಮೂರೂ ರಾಜ್ಯಗಳಲ್ಲಿ ಈಗ ಬಿಜೆಪಿ ಆಡಳಿತವಿದೆ. ಅದು ಹೇಗೆ ಅಧಿಕಾರಕ್ಕೆ ಬಂತು ಎಂಬುದನ್ನು ವಿವರಿಸಿ ಹೇಳುವ ಅಗತ್ಯವಿಲ್ಲ. ಎಲ್ಲ ಅಕ್ರಮಗಳೂ ಕ್ರಮಬದ್ಧವಾಗಿಯೇ ನಡೆದುವು ಮತ್ತು ಇದಕ್ಕೆ ಬಹುತೇಕ ಮಾಧ್ಯಮಗಳ ಬೆಂಬಲವಿತ್ತು. ಇದು ನೈತಿಕವಾಗಿ ಮಾತ್ರವಲ್ಲ ಎಲ್ಲ ರೀತಿಯಲ್ಲೂ ತಪ್ಪು ಮತ್ತು ಇದು ಪ್ರಜಾತಂತ್ರಕ್ಕೆ ಅಪಾಯ ಎಂಬುದು ಇವಕ್ಕೆ ಅನಿಸಲೇ ಇಲ್ಲ!

ಈ ಮತ್ತು ಇಂತಹ ಅನೇಕ ಕಾರಣದಿಂದಾಗಿ ದೇಶದ ಪ್ರಜಾತಂತ್ರ ಇದೀಗ ದೊಡ್ಡ ಅಪಾಯ ಎದುರಿಸುತ್ತಿದೆ. ಚುನಾವಣೆಗಳು ಅರ್ಥಹೀನವಾಗುತ್ತಿವೆ. ಜನರಲ್ಲಿ ಚುನಾವಣೆಯ ಬಗ್ಗೆ ಜಿಗುಪ್ಸೆ ಮೂಡುತ್ತಿದೆ. ಮತದಾನದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಹೇಳಿದ ಹಾಗೆ ಪ್ರಧಾನಿಯ ಮೇಲೂ ಕ್ರಮ ಜರುಗಿಸಬಲ್ಲ ಚುನಾವಣಾ ಆಯುಕ್ತರ ನೇಮಕವಾಗಬೇಕು. ಪಕ್ಷಗಳಿಗೆ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಅಂತಾರಲ್ಲ ಅದಿರಬೇಕು. ಜನಪ್ರತಿನಿಧಿಗಳಿಗೆ ಒಂದು ಪಕ್ಷದಿಂದ ಗೆದ್ದ ಮೇಲೆ ಇನ್ನೊಂದು ಪಕ್ಷಕ್ಕೆ ಹೋಗುವ ಅವಕಾಶ ಇರಕೂಡದು. ಹಾಗೆ ಹೋದರೆ ಒಂದಷ್ಟು ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸದಂತಾಗಬೇಕು. ಇವೆಲ್ಲ ಆಗಿಲ್ಲವೆಂದರೆ ದೇಶದ ಪ್ರಜಾತಂತ್ರ, ವಿಶೇಷವಾಗಿ ಸಂಸದೀಯ ಪ್ರಜಾತಂತ್ರ ಕಾಗದದ ಮೇಲಷ್ಟೇ ಉಳಿಯುತ್ತದೆ. ಚುನಾವಣೆ ಕೇವಲ ಒಂದು ಪ್ರಹಸನವಾಗುತ್ತದೆ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇತಿಹಾಸವನ್ನು ಇತಿಹಾಸವಾಗಿ ನೋಡೋಣ
ರಾಹುಲ್ ಗಾಂಧಿಯವರನ್ನು ಬಂಧಿಸಬೇಕು ಎಂದು ಸಾವರ್ಕರ್ ಅವರ ಮೊಮ್ಮಗ ದೂರು ನೀಡಿದ್ದು ಮತ್ತು ಸಾವರ್ಕರ್ ಅವರ ಶಿಷ್ಯ ಗೋಡ್ಸೆಯಿಂದ ಹತರಾದ ಬಾಪು ಅವರ ಮರಿಮಗ ತುಷಾರ್ ಗಾಂಧಿ ರಾಹುಲ್ ಜತೆ ನಿಂತು ಅವರೊಂದಿಗೆ ಹೆಜ್ಜೆ ಹಾಕಿದ್ದು, ದೇಶದ ಇಂದಿನ ಸ್ಥಿತಿಯಲ್ಲಿ ಬಹುದೊಡ್ಡ ಒಂದು ರೂಪಕದಂತಿದೆ. ಓದಿ- ಇಂದಿನ ʼಶ್ರೀನಿ ಕಾಲಂʼ

ಎರಡು ದಿನಗಳ ಹಿಂದೆ ಆಸಕ್ತಿಕರ ವಿದ್ಯಮಾನವೊಂದು ನಡೆಯಿತು. ಮಹಾರಾಷ್ಟ್ರದಲ್ಲಿ ‘ಭಾರತ ಐಕ್ಯತಾ ಯಾತ್ರೆ’ (ಭಾರತ್ ಜೋಡೋ ಯಾತ್ರಾ) ನಡೆಸುತ್ತಿರುವ ರಾಹುಲ್ ಗಾಂಧಿಯವರ ಮೇಲೆ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ‘ರಾಹುಲ್ ಗಾಂಧಿಯವರನ್ನು ಬಂಧಿಸಬೇಕು’ ಎಂಬ ಆಗ್ರಹದೊಂದಿಗೆ ದೂರು ದಾಖಲಿಸಿದರು. ಅದೇ ದಿನ ಮಹಾತ್ಮಾ ಗಾಂಧಿಯವರ ಮರಿ ಮಗ ತುಷಾರ್ ಗಾಂಧಿ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕೈಹಿಡಿದು ಹೆಜ್ಜೆ ಹಾಕಿದರು.

ಇದರ ಹಿನ್ನೆಲೆ ಹೀಗಿದೆ – ರಾಹುಲ್ ಗಾಂಧಿ ಹಿಂದಿನಿಂದಲೂ ತನ್ನ ಮನದ ಮಾತನ್ನು ಯಾವ ಮುಲಾಜೂ ಇಲ್ಲದೆ ಹೇಳಿಕೊಂಡು ಬಂದವರು. ಹೀಗೆ ಹೇಳುವಾಗ ಅವರು ತನ್ನ ಹೇಳಿಕೆಯಿಂದ ಮುಂದೆ ಆಗಬಹುದಾದ ಚುನಾವಣಾ ನಷ್ಟವನ್ನು ನೋಡುವುದಿಲ್ಲ. ದೇಶದ ಬಗ್ಗೆ ನಿಜ ಕಾಳಜಿಯುಳ್ಳ ರಾಜಕೀಯ ನಾಯಕನೊಬ್ಬನಿಗೆ ಮುಂದಿನ ಚುನಾವಣೆ ಗೆಲ್ಲುವುದು ಗುರಿಯಾಗ ಕೂಡದು ಕೂಡಾ. ರಾಜಕೀಯ ಫುಡಾರಿಯೊಬ್ಬ ಮುಂದಿನ ಚುನಾವಣೆಯ ಬಗ್ಗೆ ಯೋಚಿಸಿದರೆ, ರಾಜಕೀಯ ಮುತ್ಸದ್ದಿಯೊಬ್ಬ ಮುಂದಿನ ತಲೆಮಾರಿನ ಬಗ್ಗೆ ಯೋಚಿಸುತ್ತಾನೆ ಎಂಬ ಮಾತೇ ಇದೆಯಲ್ಲ? ಈವತ್ತು ಮುಸ್ಲಿಂ ಸಮುದಾಯವನ್ನು ದುರುಳೀರಿಸಿ, ಅವರಿಗೆ ಅನ್ಯಾಯವಾದಾಗಲೂ ಅವರನ್ನು ಬೆಂಬಲಿಸಿ ಮಾತನಾಡುವವರನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸಲಾಗುತ್ತಿದೆ. ಹೀಗೆ ಹಿಂದೂ ವಿರೋಧಿ ಎಂದು ಬಿಂಬಿತವಾದ ತಕ್ಷಣ ಹಿಂದೂಗಳ ಓಟನ್ನು ಕಳೆದು ಕೊಳ್ಳುವ ಅಪಾಯವೂ ಇರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ದೇಶದ ಒಟ್ಟಾರೆ ಹಿತದ ಬಗ್ಗೆ ಕಾಳಜಿ ಇರುವ ಒಬ್ಬ ರಾಜಕೀಯ ನಾಯಕ ಏನು ಮಾಡಬೇಕು? ಚುನಾವಣಾ ಪರಿಣಾಮ ನೋಡಿಕೊಂಡು ಸುಮ್ಮನೆ ಕೂರಬೇಕೇ? ಅಥವಾ ಆ ದಮನಿತ ಸಮುದಾಯದ ಬಗ್ಗೆ ಮಾತನಾಡಬೇಕೇ? ಅದು ಬಿಲ್ಕಿಸ್ ಬಾನು ಪ್ರಕರಣವಿರಬಹುದು, ಮಹಮದ್ ಜುಬೇರ್ ಪ್ರಕರಣವಿರಬಹುದು, ಲಿಂಚ್ಂಗ್ ಗೆ ಬಲಿಯಾಗುತ್ತಿರುವ ಅಮಾಯಕ ಮುಸ್ಲಿಮರ ಬಗ್ಗೆಯೇ ಇರಬಹುದು, ಅನೇಕರು ಓಟು ಕಳೆದುಕೊಳ್ಳುವ  ಭಯದಿಂದ ಬಾಯಿ ಮುಚ್ಚಿ ಕೂತಿರುವಾಗ, ದಿಟ್ಟವಾಗಿ ಮಾತನಾಡಿದ್ದು ರಾಹುಲ್ ಗಾಂಧಿ.

ಸಾವರ್ಕರ್ ಬಗ್ಗೆಯೂ ರಾಹುಲ್ ಗಾಂಧಿ ಹಿಂದಿನಿಂದಲೂ ಒಂದು ಸ್ಪಷ್ಟ ನಿಲುವನ್ನು ಹೊಂದಿದ್ದಾರೆ. ದಾಖಲೆಗಳೇ ಹೇಳುವ ಪ್ರಕಾರ ಒಂದು ಕಾಲದಲ್ಲಿ ಸಾವರ್ಕರ್ ಬ್ರಿಟಿಷರ ವಿರುದ್ಧ ಇದ್ದುದು ಹೌದು. 1911 ರ ಪೂರ್ವದಲ್ಲಿ ಅವರು ಲಂಡನ್ನಿನಲ್ಲಿದ್ದಾಗ  ಭಾರತೀಯ ಕ್ರಾಂತಿಕಾರಿಗಳ ನಿಲಯವಾಗಿದ್ದ ‘ಇಂಡಿಯಾ ಹೌಸ್’ ನ ಖಾಯಂ ಸದಸ್ಯರಾಗಿದ್ದರು. ಲಂಡನ್ನಿನಲ್ಲಿದ್ದ ಬಿಸಿರಕ್ತದ ತರುಣರನ್ನು ಬ್ರಿಟಿಷ್ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದರು. ತಾವು ತೆರೆಮರೆಯಲ್ಲಿದ್ದು ಕೊಂಡು ಅಂಥಾ ಕೃತ್ಯಗಳಲ್ಲಿ ತಮ್ಮ ಪಾತ್ರ ಸಾಬೀತಾಗದಂತೆ ಎಚ್ಚರವಹಿಸುತ್ತಿದ್ದರು.  ಸಾವರ್ಕರ್ 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ಬಳಿಕ ಬಹಿರಂಗ ದೇಶದ್ರೋಹಿ ಆಗಿದ್ದರು.

ಸಾವರ್ಕರ್ ನಿಜ ಮುಖ

ಅವರು ಅಂಡಮಾನ್ ಜೈಲಿಗೆ ಹೋದುದು ನಾಸಿಕ್ ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಆಗಿದ್ದ ಎ ಎಮ್ ಟಿ ಜಾಕ್ಸನ್ ಎಂಬ ಬ್ರಿಟಿಷ್ ಅಧಿಕಾರಿಯ ಕೊಲೆಗೆ ಪಿಸ್ತೂಲ್ ಸರಬರಾಜು ಮಾಡಿದ ಪ್ರಕರಣದಲ್ಲಿ. ಅಲ್ಲಿಗೆ ಹೋದ ಆನಂತರ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆಯುತ್ತ ಹೋದರು. ಬಿಡುಗಡೆಯಾದ ಬಳಿಕ ಬ್ರಿಟಿಷರು ಕೊಟ್ಟ ರತ್ನಗಿರಿಯ ಬಂಗಲೆಯಲ್ಲಿ ವಾಸಿಸಿದರು. ಬ್ರಿಟಿಷರಿಂದ ಅಂದಿನ ಕಲೆಕ್ಟರ್ ರ ಸಂಬಳಕ್ಕೆ ಸಮನಾದ ಮಾಸಿಕ ಐವತ್ತು ರುಪಾಯಿ ಪಿಂಚಣಿ ಪಡೆದರು. ಇಡೀ ಭಾರತವೇ ಕ್ವಿಟ್ ಇಂಡಿಯಾ ಹೋರಾಟದಲ್ಲಿ ತೊಡಗಿದ್ದಾಗ ಸಾವರ್ಕರ್ ಬ್ರಿಟಿಷರ ಪರ ನಿಂತರು. ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಇದೇ ಸಾವರ್ಕರ್. ಚಿತ್ರಗುಪ್ತನ ಹೆಸರಿನಲ್ಲಿ ತನ್ನ ಜೀವನ ಚರಿತ್ರೆಯನ್ನು ತಾನೇ ಬರೆದು ತನ್ನನ್ನು ‘ವೀರ’ ಎಂದು ಕರೆದುಕೊಂಡದ್ದೂ ಇದೇ ಸಾವರ್ಕರ್. ಅಂತಿಮವಾಗಿ ರಾಷ್ಟ್ರಪಿತ ಗಾಂಧಿಯ ಕೊಲೆಗಡುಕನಾದ ನಾಥೂರಾಮ್ ಗೋಡ್ಸೆಯ ಗುರುವಾಗಿ, ಆತನಿಗೆ ಗಾಂಧಿ ಕೊಲೆಗೆ ಸೂಕ್ತ ಬಂದೂಕು ಲಭಿಸುವಂತೆ ಮಾಡಿದ್ದೂ ಇದೇ ಸಾವರ್ಕರ್. ಈ ಬಗ್ಗೆ ಗಾಂಧಿ ಮರಿಮಗ ತುಷಾರ್ ಗಾಂಧಿ ಹೀಗೆ ಹೇಳಿದ್ದಾರೆ- Savarkar not only helped the British, he also helped Nathuram Godse find an efficient gun to murder Bapu. Till two days before Bapu’s murder, Godse did not have a reliable weapon to carry out the murder of M. K. Gandhi. ಗಾಂಧಿ ಕೊಲೆಯ ಕೋರ್ಟ್ ವಿಚಾರಣೆಯಲ್ಲಿ ಆರೋಪಿಯಾಗಿ ಸಾವರ್ಕರ್ ಕೋರ್ಟ್  ಕಟಕಟೆಯಲ್ಲಿ ನಿಂತಿದ್ದರು.

ಇದು ವಾಸ್ತವ ಇತಿಹಾಸ.  ಮೊನ್ನೆ ರಾಹುಲ್ ಗಾಂಧಿಯವರು, ಸಾವರ್ಕರ್ ಬ್ರಿಟಿಷರಿಗೆ ‘ನಿಮ್ಮ ಅತ್ಯಂತ ವಿಧೇಯ ಸೇವಕನಾಗಿ ಇರುವೆ’ (I beg to remain Sir, Your most obedient servant) ಎಂದು ಕ್ಷಮಾಪಣೆ ಪತ್ರ ಬರೆದಿದ್ದ, ಆತ ಬ್ರಿಟಿಷರಿಗೆ ಸಹಾಯ ಮಾಡಿದ್ದ ಎಂದು ಹೇಳಿದರು. ಸಾವರ್ಕರ್ ರನ್ನು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸುವ ಜನ ಇರುವ ಮಹಾರಾಷ್ಟ್ರದಲ್ಲಿಯೇ ಹೀಗೆ ಹೇಳುವುದಕ್ಕೆ ಅಸಾಧಾರಣ ಧೈರ್ಯ ಬೇಕು. ಆ ಧೈರ್ಯವನ್ನು ರಾಹುಲ್ ಪ್ರದರ್ಶಿಸಿದರು. ತಡಮಾಡದೆ ಗೋದಿ ಮೀಡಿಯಾ ಅದನ್ನೊಂದು ವಿವಾದ ಮಾಡಿತು. ಇದರ ಮುಂದುವರಿದ ಭಾಗವಾಗಿ ಸಾವರ್ಕರ್ ಅವರ ಮೊಮ್ಮಗ ‘ರಾಹುಲ್ ಗಾಂಧಿ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ, ಅವರನ್ನು ತಕ್ಷಣ ಬಂಧಿಸಬೇಕು ಎಂದು ದೂರು ನೀಡಿದರು.

ಈಗ ಗೋಡ್ಸೆ ಹೀರೋ !

ರಾಹುಲ್ ಗಾಂಧಿಯವರನ್ನು ಬಂಧಿಸಬೇಕು ಎಂದು ಸಾವರ್ಕರ್ ಅವರ ಮೊಮ್ಮಗ ದೂರು ನೀಡಿದ್ದು ಮತ್ತು ಸಾವರ್ಕರ್ ಅವರ ಶಿಷ್ಯ ಗೋಡ್ಸೆಯಿಂದ ಹತರಾದ ಬಾಪು ಅವರ ಮರಿಮಗ ತುಷಾರ್ ಗಾಂಧಿ ರಾಹುಲ್ ಜತೆ ನಿಂತು ಅವರೊಂದಿಗೆ ಹೆಜ್ಜೆ ಹಾಕಿದ್ದು, ದೇಶದ ಇಂದಿನ ಸ್ಥಿತಿಯಲ್ಲಿ ಬಹುದೊಡ್ಡ ಒಂದು ರೂಪಕದಂತಿದೆ.

ರಾಹುಲ್ ಗಾಂಧಿಯವರನ್ನು ಬಂಧಿಸಬೇಕು ಎಂದು ಸಾವರ್ಕರ್ ಅವರ ಮೊಮ್ಮಗ ದೂರು ನೀಡಿದ್ದು ಮತ್ತು ಸಾವರ್ಕರ್ ಅವರ ಶಿಷ್ಯ ಗೋಡ್ಸೆಯಿಂದ ಹತರಾದ ಬಾಪು ಅವರ ಮರಿಮಗ ತುಷಾರ್ ಗಾಂಧಿ ರಾಹುಲ್ ಜತೆ ನಿಂತು ಅವರೊಂದಿಗೆ ಹೆಜ್ಜೆ ಹಾಕಿದ್ದು, ದೇಶದ ಇಂದಿನ ಸ್ಥಿತಿಯಲ್ಲಿ ಬಹುದೊಡ್ಡ ಒಂದು ರೂಪಕದಂತಿದೆ. ಗಾಂಧಿ ಹತ್ಯೆಯಲ್ಲಿ ನಾಥೂರಾಮ್ ಗೋಡ್ಸೆಯ ಪಾತ್ರ ಏನು, ಗಾಂಧಿಯನ್ನು ಆತ ಕೊಲ್ಲಲು ನಿಜ ಕಾರಣ ಏನು? ಎಂಬುದು ಎಲ್ಲರಿಗೂ ಗೊತ್ತಿದೆ. ಮಾತ್ರವಲ್ಲ, ಕೆಲವೇ ದಶಕಗಳ ಹಿಂದಿನವರೆಗೂ ಗಾಂಧಿ ಹತ್ಯೆಯ ಬಗ್ಗೆ ಒಂದು ಪಾಪ ಪ್ರಜ್ಞೆ ಇತ್ತು. ಗೋಡ್ಸೆಯ ಕೆಟ್ಟ ಅಭಿಪ್ರಾಯ ಇತ್ತು. ಆದರೆ ಇತ್ತೀಚಿನ ದಶಕಗಳಲ್ಲಿ ಬಲಪಂಥೀಯ ಶಕ್ತಿಗಳು ಬಲಗೊಂಡು ಪ್ರಭುತ್ವವೇ ಇಂತಹ ಕೆಲಸಗಳಿಗೆ ಪ್ರೋತ್ಸಾಹ ಮತ್ತು ರಕ್ಷಣೆ ಕೊಡಲಾರಂಭಿಸಿದ ಮೇಲೆ ದೇಶ ವಿಭಜನೆ ಸಹಿತ ದೇಶದ ಎಲ್ಲ ಸಮಸ್ಯೆಗಳಿಗೂ ಗಾಂಧಿಯನ್ನು ಹೊಣೆ ಮಾಡಿ ನಿಂದಿಸುವ ಮತ್ತು ಗಾಂಧಿಯನ್ನು ಕೊಂದುದು ಸರಿ ಎಂದು ವಾದಿಸುತ್ತಾ ಗೋಡ್ಸೆಯನ್ನು ಬಹಿರಂಗವಾಗಿಯೇ ಆರಾಧಿಸುವುದು, ಅತನಿಗೆ ಗುಡಿ ಕಟ್ಟುವುದು, ಗಾಂಧಿ ಪ್ರತಿಕೃತಿ ಮಾಡಿ ಗುಂಡಿಟ್ಟು ಕೊಲ್ಲುವ ಪ್ರಸಂಗವನ್ನು ಅಭಿನಯಿಸುವುದು ಇವೆಲ್ಲ ಯಾವ ಅಳುಕೂ ಇಲ್ಲದೆ ನಡೆಯುತ್ತಿವೆ. ಈ ಕೆಲಸದಲ್ಲಿ ಸೋಶಿಯಲ್ ಮಿಡಿಯಾ ಬಹುದೊಡ್ಡ ಪಾತ್ರವನ್ನು ವಹಿಸುತ್ತಿದೆ. ಸುಳ್ಳನ್ನು ಹರಡುವ ಕೆಲಸ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಇದನ್ನು ಓದುವ ನಂಬುವ ಎಳೆಯ ತಲೆಮಾರು ಗಾಂಧಿಯನ್ನು ನಿಂದಿಸುವ ಮತ್ತು ಗೋಡ್ಸೆಯನ್ನು ಹೊಗಳುವ ಕೆಲಸವನ್ನು ಬಹಿರಂಗವಾಗಿಯೇ ಮಾಡುತ್ತಿದೆ!

ದೇಶದ ಹಿಡಿತವು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಮುಖವಾದ ಬಿಜೆಪಿಯ ಕೈಗೆ ಹೋದಮೇಲೆ ಅದರ ಅಜೆಂಡಾಗಳು ಒಂದೊಂದಾಗಿ ಜಾರಿಗೆ ಬರುತ್ತಿವೆ. ಮುಸ್ಲಿಮರನ್ನು ಅನ್ಯರನ್ನಾಗಿ, ಎರಡನೆಯ ದರ್ಜೆಯ ಪ್ರಜೆಯಾಗಿ ಬಿಂಬಿಸುವ ಕಾರ್ಯಕ್ರಮವೂ ಇದರ ಮುಂದುವರಿದ ಭಾಗ. ಉದಾಹರಣೆಗೆ ನೋಡಿ, ಮೊಗಲರು ದುಷ್ಟರು, ಈ ದೇಶದ ಎಲ್ಲ ಸಮಸ್ಯೆಗಳಿಗೆ ಅವರು ಕಾರಣ ಎಂದು ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಮೊಗಲ್ ದೊರೆ ಬಾಬರ್ ಹುಟ್ಟಿದ್ದು ವಿದೇಶದಲ್ಲಿ ಅಂದರೆ ಉಜ್ಬೆಕಿಸ್ತಾನದಲ್ಲಿ. ಕೊನೆಯ ದೊರೆ ಬಹದ್ದೂರ್ ಷಾ ಜಫರ್ ಸತ್ತಿದ್ದು ಬರ್ಮಾ ಅಂದರೆ ಈಗಿನ ಮಯನ್ಮಾರ್ ನ ರಂಗೂನ್ ನಲ್ಲಿ (ಬ್ರಿಟಿಷರು ನೀಡಿದ ಶಿಕ್ಷೆಯ ಕಾರಣ). ಇದನ್ನು ಹೊರತು ಪಡಿಸಿದರೆ ಇತರ ಮೊಗಲ್ ದೊರೆಗಳೆಲ್ಲರೂ ಭಾರತದಲ್ಲಿಯೇ ಹುಟ್ಟಿದವರು, ಇಲ್ಲೇ ಮಣ್ಣಾದವರು, ಅವರಲ್ಲಿ ಅನೇಕರು ಇಲ್ಲಿನ ರಜಪೂತ ಹೆಣ್ಣುಗಳನ್ನೇ ಮದುವೆಯಾದರು ಕೂಡಾ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಅವರ ಕೊಡುಗೆ ಅಪಾರ. ಭಾರತದಾದ್ಯಂತ ಅವರು ನಿರ್ಮಿಸಿದ ಸಾವಿರಾರು ಮೋಹಕ ಸ್ಮಾರಕಗಳು ಈಗಲೂ ಇವೆ. ಅವು ದೇಶಕ್ಕೆ ಜಗತ್ತಿನಲ್ಲಿ ಕೀರ್ತಿ ತಂದಿವೆ. ತಾಜಮಹಲ್ ನಂತಹ ವಿಶ್ವವಿಸ್ಮಯ ಸ್ಮಾರಕಗಳು ದೇಶಕ್ಕೆ ಕೋಟ್ಯಂತರ ವಿದೇಶೀ ವಿನಿಮಯವನ್ನು ತಂದುಕೊಡುತ್ತಿವೆ.

ಟಿಪ್ಪೂ ನಮ್ಮವನು

ನಮ್ಮ ಟಿಪ್ಪೂ ವಿಷಯಕ್ಕೇ ಬರೋಣ. ಟಿಪ್ಪೂ ವಿದೇಶದಿಂದ ಬಂದವನಲ್ಲ. ಆತ ದೇವನಹಳ್ಳಿಯಲ್ಲಿ ಹುಟ್ಟಿ ಮೈಸೂರು ರಾಜ್ಯವನ್ನು ಆಳಿ ಶ್ರೀರಂಗಪಟ್ಟಣದಲ್ಲಿ ಮಣ್ಣಾದವನು. ಬ್ರಿಟಿಷರು ವಿದೇಶೀಯರು ಮತ್ತು ಈ ದೇಶವನ್ನು 150 ವರ್ಷ ಕೊಳ್ಳೆ ಹೊಡೆದು 45 ಟ್ರಿಲಿಯನ್ ಡಾಲರ್ ಸಂಪತ್ತನ್ನು ಈ ದೇಶದಿಂದ ತಮ್ಮ ದೇಶಕ್ಕೆ ಸಾಗಿಸಿದವರು. ಟಿಪ್ಪೂ ಏನನ್ನೂ ಇಲ್ಲಿಯಿಂದ ಹೊರಗೆ ಒಯ್ಯಲಿಲ್ಲ. ಆತ ಇಲ್ಲಿ ಸಂಪತ್ತನ್ನು ಸೃಷ್ಟಿಸಿದ. ಇಲ್ಲೇ ಬಿಟ್ಟು ಹೋದ. ಆತನಿಗೆ ತನ್ನ ಧರ್ಮದಲ್ಲಿ ಶ್ರದ್ಧೆ ಇತ್ತು ಆದರೆ ಇದನ್ನು ಬಳಸಿಕೊಂಡು ಆತ ಬೇರೆ ಧರ್ಮೀಯರಿಗೆ ತೊಂದರೆ ಮಾಡಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ತನ್ನ ಧರ್ಮದಲ್ಲಿ ಹರಾಮ್ ಅನಿಸಿಕೊಂಡ ಜೂಜು, ವೇಶ್ಯಾವಾಟಿಕೆ, ಸಾರಾಯಿ ಇವನ್ನೆಲ್ಲ ನಿಷೇಧಿಸಿ ಜನರಿಗೆ ಉಪಕಾರ ಮಾಡಿದ. ಕನ್ನಂಬಾಡಿ ಅಣೆಕಟ್ಟಿನ ಕನಸು ಕಂಡ, ರೇಷ್ಮೆ ಪರಿಚಯಿಸಿದ, ಮಹಾರಾಷ್ಟ್ರದ ಪೇಶ್ವೆಗಳು ಹಿಂದೂ ದೇವಾಲಯವಾದ ಶೃಂಗೇರಿಯ ಮೇಲೆ ದಾಳಿ ಮಾಡಿದಾಗ ಅವರನ್ನು ಓಡಿಸಿ ದೇವಾಲಯಕ್ಕೆ ರಕ್ಷಣೆ ನೀಡಿದ, ನೂರಾರು ದೇವಾಲಯಗಳಿಗೆ ಉಂಬಳಿ ನೀಡಿದ, ತನ್ನ ನಾಡಿಗಾಗಿ ಹೋರಾಡುತ್ತಾ ಕದನ ಕಣದಲ್ಲಿಯೇ ಸತ್ತ ಏಕೈಕ ರಾಜನಾದ.

ಇನ್ನು, ಟಿಪ್ಪು ತಪ್ಪು ಮಾಡಿಲ್ಲವೇ? ಖಂಡಿತಾ ಮಾಡಿರಬಹುದು. ಇಂದಿನಂತೆ ಸಂವಿಧಾನ, ಪ್ರಜಾತಂತ್ರ, ಮಾನವಹಕ್ಕುಗಳು ಇರದ ಅದು ರಾಜಸತ್ತೆಯ ಕಾಲ. ತನ್ನ ವಿರೋಧಿಗಳನ್ನು ಶಿಕ್ಷಿಸುವ, ತನ್ನ ಶತ್ರುಗಳಿಗೆ ನೆರವಾದವರನ್ನು ಶಿಕ್ಷಿಸುವ ಕೆಲಸವನ್ನು ಆತ ಮಾಡಿರಬಹುದು. 18ನೆಯ ಶತಮಾನದ ಕೊನೆಯ ದಿನಗಳ ವಿದ್ಯಮಾನಗಳನ್ನು ನಾವು 21 ನೆಯ ಶತಮಾನದಲ್ಲಿ ವಿಶ್ಲೇಷಿಸುವಾಗ ಅವೆಲ್ಲವೂ ಆ ಯುಗಧರ್ಮ ಎಂಬ ಎಚ್ಚರ ನಮ್ಮಲ್ಲಿರಬೇಕು.

ಇತಿಹಾಸವನ್ನು ಇತಿಹಾಸವಾಗಿ ನೋಡೋಣ

ಇಷ್ಟಕ್ಕೂ ಇತಿಹಾಸವೆಂದರೆ ಏನು? ಇತಿಹಾಸವನ್ನು ಬರೆಯುವುದಲ್ಲ. ಇತಿಹಾಸವನ್ನು ದಾಖಲಿಸುವುದು. ಅದು ನಡೆದು ಹೋದ ಘಟನೆಗಳ ದಾಖಲೀಕರಣ. ಹಾಗೆ ದಾಖಲಿಸಿದ ಎಲ್ಲ ಅಂಶಗಳೂ ಸತ್ಯವಿರಬಹುದೇ? ಇರಬೇಕಾಗಿಲ್ಲ. ಕೆಲವೊಮ್ಮೆ ಬಲವಾದ ಸಾಕ್ಷ್ಯಾಧಾರಗಳೂ ಇಲ್ಲದಿರಬಹುದು. ಆದರೆ ನೂರಾರು ಇತಿಹಾಸಜ್ಞರು ಸಂಶೋಧನೆ ನಡೆಸಿ, ಚುಕ್ಕಿಗಳನ್ನು ಜೋಡಿಸಿ ಒಂದು ಒಮ್ಮತಕ್ಕೆ ಬರುತ್ತಾರೆ. ಅದನ್ನು ಮುಂದೆ ಇನ್ನೂ ಹೆಚ್ಚಿನ ಪುರಾವೆ ದೊರೆಯುವ ವರೆಗೂ ಇತಿಹಾಸ ಎಂದು ಒಪ್ಪಿಕೊಳ್ಳುವುದು ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯ. ಅದು ಅನಿವಾರ್ಯ ಕೂಡಾ.

ಹಾಗಾಗಿ ನಮ್ಮ ಮುಂದಿರುವ ಇತಿಹಾಸ ನಮ್ಮ ಅಜೆಂಡಾಕ್ಕೆ ಪೂರಕವಾಗಿರಲಿಲ್ಲ ಎಂದು ಅದನ್ನು ಬದಲಾಯಿಸಲು ಬರುವುದಿಲ್ಲ. ಈಗ ಸಮಸ್ಯೆಯೇನೆಂದರೆ, ಎಲ್ಲರೂ ಇತಿಹಾಸಕಾರರು. ತಮ್ಮ ಮೂಗಿನ ನೇರಕ್ಕೆ ಇತಿಹಾಸ ಬರೆಯುತ್ತಿದ್ದಾರೆ. ಈ ಬಗ್ಗೆ ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರು ಒಂದೆಡೆ ಹೀಗೆ ಹೇಳುತ್ತಾರೆ – “ಭಾರತೀಯ ಇತಿಹಾಸ ಇದೀಗ ತೀವ್ರವಾದ ಬಿಕ್ಕಟ್ಟಿನಲ್ಲಿದೆ. ಅದಕ್ಕೆ ಮುಖ್ಯ ಕಾರಣ ಇತಿಹಾಸ ತಜ್ಞರಲ್ಲದವರು ಇತಿಹಾಸದ ಬಗ್ಗೆ ಬರೆಯುವುದು ಮತ್ತು ಮಾತಾಡುವುದು. ಇತಿಹಾಸ ರಚನೆಯನ್ನು ತಮ್ಮ ವೃತ್ತಿಯಾಗಿ ಮಾಡಿಕೊಂಡವರು ರಾಜಕೀಯ ಬದಲಾವಣೆಗಳೊಂದಿಗೆ ತಮ್ಮ ಬರವಣಿಗೆಯ ಸ್ವರೂಪವನ್ನು ಬದಲು ಮಾಡಿ ಕೊಳ್ಳುವುದಿಲ್ಲ. ಅವರು ನಿರಂತರವಾಗಿ ಬರೆಯುತ್ತಲೇ ಇರುತ್ತಾರೆ, ಹೊಸ ಮಾಹಿತಿಗಳು ಲಭಿಸಿದಾಗ ತಮ್ಮ ನಿಲುವುಗಳನ್ನು ಬದಲಿಸಿಕೊಂಡು ಮತ್ತೆ ಬರವಣಿಗೆಯನ್ನು ಮುಂದುವರೆಸುತ್ತಾರೆ. ಈ ಅರ್ಥದಲ್ಲಿ ಚರಿತ್ರೆಯ ಬರವಣಿಗೆ ನಿರಂತರವಾದ ಒಂದು ಪ್ರಕ್ರಿಯೆ. ರಾಜಕೀಯ ಆಸಕ್ತಿ ಇರುವ ನಕಲಿ ಇತಿಹಾಸಕಾರರು ಮಾತ್ರ ಆಳುವ ವರ್ಗವನ್ನು ಸಂಪ್ರೀತಗೊಳಿಸಲು ಇದ್ದಕ್ಕಿದ್ದಂತೆ ಹುಟ್ಟಿ, ರಾಡಿ ಎಬ್ಬಿಸಿ ಮರೆಯಾಗುತ್ತಾರೆ”.

ಸಾವರ್ಕರ್ ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಎಂದು ಒಂದು ಕತೆ ಕಟ್ಟಿದ ತಕ್ಷಣ ಇತಿಹಾಸವೇನೂ ಬದಲಾಗುವುದಿಲ್ಲ. ಟಿಪ್ಪೂ ಮತಾಂಧ, ಕನ್ನಡ ದ್ರೋಹಿ, ಭಾರತ ವಿರೋಧಿ ಎಂದು ನೀವು ಹೊಸ ಇತಿಹಾಸ ಬರೆಯ ಹೊರಟರೆ ನೈಜ ಇತಿಹಾಸ ಬದಲಾಗುವುದಿಲ್ಲ. ಟಿಪ್ಪೂ ಇರಲೀ, ನೆಹರೂ ಇರಲೀ ಅವರು ನಿಮಗೆ ಇಷ್ಟವಾಗಲಿಲ್ಲ ಎಂದು ಪಠ್ಯಪುಸ್ತಕದಿಂದ ಅವರ ಬಗೆಗಿನ ಪಾಠವನ್ನು ಕಿತ್ತು ಹಾಕಬಹುದು, ರೈಲಿನಿಂದ ಅವರ ಹೆಸರನ್ನು ಅಳಿಸಬಹುದು. ಆದರೆ ಇತಿಹಾಸದ ಪುಸ್ತಕದಿಂದ ಅವರ ಹೆಸರನ್ನು ಅಳಿಸಿ ಹಾಕಲಾರಿರಿ, ಜನರ ಹೃದಯಗಳಿಂದ ಅವರ ನೆನಪನ್ನು ಅಳಿಸಿ ಹಾಕಲಾರಿರಿ.

ಹಾಗಾಗಿ, ಇತಿಹಾಸವನ್ನು ಇತಿಹಾಸವಾಗಿಯೇ ನೋಡುವುದನ್ನು ಕಲಿಯಬೇಕು. ಇತಿಹಾಸ ಇರುವುದು ಓದುವುದಕ್ಕೆ, ಅಧ್ಯಯನ ಮಾಡುವುದಕ್ಕೆ, ಭೂತಕಾಲದ ತಪ್ಪುಗಳನ್ನು ಅರಿತುಕೊಂಡು ಭವಿಷ್ಯತ್ಕಾಲದಲ್ಲಿ ಅವು ಮರುಕಳಿಸದಂತೆ ಎಚ್ಚರ ವಹಿಸುವುದಕ್ಕೆ. ನೀವು ಇತಿಹಾಸವನ್ನು ವಿಮರ್ಶಿಸಬಹುದು, ವಿಶ್ಲೇಷಿಸಬಹುದು, ವ್ಯಾಖ್ಯಾನ ಮಾಡಬಹುದು, ಪುನರ್ ವ್ಯಾಖ್ಯಾನ ಮಾಡಬಹುದು. ಆದರೆ ಇತಿಹಾಸವನ್ನು ಬದಲಾಯಿಸಲಾರಿರಿ. ಇತಿಹಾಸವನ್ನು ತಿದ್ದಲು ಹೋಗುವುದು ದಾರುಣ ಇತಿಹಾಸದ ಸೃಷ್ಟಿಗೆ ಕಾರಣವಾಗುತ್ತದೆ. ವರ್ತಮಾನವನ್ನು ಮಾತ್ರವಲ್ಲ, ಭವಿಷ್ಯವನ್ನೂ ನಾಶಮಾಡುತ್ತದೆ.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.