Vani Sathish – Peepal Media

ಇದು ಆಸ್ಪತ್ರೆ ಕಾಯಿಲೆ ಅಲ್ಲದೆಯೂ ಇರಬಹುದು ಅಲ್ಲವೇ…?
ಸೋಪಾನಪೇಟೆಯ ದೊಡ್ಡ ಆಸ್ಪತ್ರೆಗೆ ಬಂದ ಲಕ್ಷ್ಮಿಗೆ ಪೂವಯ್ಯ ಡಾಕ್ಟರರ ಮುತುವರ್ಜಿ ಯಿಂದಾಗಿ ತರಾತುರಿಯಲ್ಲೇ  ಔಷದೋಪಚಾರ ಆರಂಭವಾಗುತ್ತದೆ. ಆದರೆ ಎರಡು ಮೂರು ದಿನವಾದರೂ ಅವಳಲ್ಲಿ ಯಾವುದೇ ಬದಲಾವಣೆ ಕಾಣದೆ, ಡಾಕ್ಟರ್ ಸೇರಿದಂತೆ ಎಲ್ಲರೊಂದಿಗೂ ವಿಚಿತ್ರವಾಗಿ ವರ್ತಿಸಲು ತೊಡಗುತ್ತಾಳೆ.  ಇತ್ತ ಹೊಸ ನಾರಿಪುರದಲ್ಲಿ ದೊಡ್ಡಮ್ಮನ ಮಾತಿಗೆ ಕಟ್ಟು ಬಿದ್ದ ಚಂದ್ರಹಾಸ, ದೊಡ್ಡಮ್ಮ ಕಟ್ಟಿ ಕೊಟ್ಟ ಬುತ್ತಿಹಿಡಿದು ಗಿರಿಧರ,ಗಂಗೆಯರೊಂದಿಗೆ ಸೋಪಾನ ಪೇಟೆಯ ಬಸ್ ಹತ್ತುತ್ತಾನೆ

ವಾಣಿ ಸತೀಶ್ ಅವರ  ತಂತಿ ಮೇಲಣ ಹೆಜ್ಜೆಯ ಹತ್ತನೆಯ ಕಂತು ಓದಿ.

ಅವ್ವ ಅಪ್ಪನನ್ನು ತಮ್ಮ ಕೊಠಡಿಗೆ ಬರಲು ಹೇಳಿ ಹೋದ ಡಾಕ್ಟರ್ ಪೂವಯ್ಯ,  ತಮ್ಮ ಕುರ್ಚಿಯಲ್ಲಿ ದಿಗ್ಮೂಡರಾಗಿ ಕಣ್ಣು ಮುಚ್ಚಿ ಕುಳಿತರು. ತಮ್ಮ ಮನಸ್ಸನ್ನು ಓದಿದವಳಂತೆ ಮಾತಾಡುತ್ತಿದ್ದ ಲಕ್ಷ್ಮಿಯ ಮುಖಭಾವ, ಇವರು ಗಾಢವಾಗಿ ನಂಬಿಕೊಂಡು ಬಂದ ವಿಜ್ಞಾನವನ್ನು ಅಣಕಿಸುತ್ತಿದ್ದಂತೆನಿಸಿತ್ತು. ಅಲ್ಲದೆ ಅವರ ಮನಸ್ಸು , ಇದು ಆಸ್ಪತ್ರೆ ಕಾಯಿಲೇನೂ ಅಲ್ಲ  ಹುಷಾರಾಗುವ ಕಾಯಿಲೇನೂ ಅಲ್ಲ, ಎಂದ ಲಕ್ಷ್ಮಿಯ ನಿಷ್ಠುರವಾದ  ಮಾತಿನ ಅರ್ಥದ ಗೂಢಚರ್ಯೆಗಿಳಿಯಿತು. ತಾವು ಎಂದೂ ನಂಬದಿದ್ದ ದಯ್ಯ,ದೇವರುಗಳ ಚಿತ್ರಣ ಡಾಕ್ಟರರ ಊಹೇಗೂ ಮೀರಿ,  ನಾನಾ ಅವತಾರಗಳಲ್ಲಿ ಮೂಡಿ ನರ್ತಿಸತೊಡಗಿತು. ಈ ಗೊಂದಲದಲ್ಲಿಯೇ ಮುಳುಗಿದ್ದ ಡಾಕ್ಟರರಿಗೆ ಅಪ್ಪ ಬಂದು ಸಣ್ಣಗೆ ಕೆಮ್ಮಿದಾಗಲೆ ಎಚ್ಚರವಾಗಿದ್ದು. ತುಸು ಗಲಿಬಿಲಿಯಿಂದಲೇ ತಮ್ಮ ಎದುರಿದ್ದ ಕುರ್ಚಿಯಲ್ಲಿ ಅಪ್ಪ ಅವ್ವನನ್ನು ಕುಳಿತುಕೊಳ್ಳಲು ಹೇಳಿ, ಪರದೆಯ ಹಿಂದಿದ್ದ ವಾಷ್ ಬೇಸಿನಿನಲ್ಲಿ ಮುಖಕ್ಕೆ ನೀರು ಸಿಂಪಡಿಸಿ ಕೊಂಡು ಬಂದು ಮಾತಿಗಿಳಿದರು.

ಡಾಕ್ಟರ್: ನಿಮ್ಮ ಮಗಳು ಏನು ಓದಿದ್ದಾಳೆ ?

ಅಪ್ಪ   :  ಮೂರನೇ ಕ್ಲಾಸ್ ಸಾ; ಮೇಷ್ಟ್ರು  ಒಡ್ದು ಬುಟ್ರು ಅಂತ ಅರ್ಧಕ್ಕೆ ಇಸ್ಕೂಲ್ ಬುಟ್ಬುಟ್ಟ್ಲು .

ಡಾಕ್ಟರ್ :  ಮತ್ತೆ… ಇಂಗ್ಲೀಷ್ ಮಾತಾಡೋದನ್ನ ಹೇಗೆ ಕಲಿತಳು !?

ಅವ್ವ : ಇಂಗ್ಲೀಸಾ… ಇದೇನ್ ಡಾಕ್ಟ್ರೆ ತಮಾಸಿ ಮಾಡ್ತಿದಿರಾ. ಅವ್ಳುಗೆ ಕನ್ನಡವೇ ನೆಟ್ಟ್ಗೆ ಮಾತಾಡಕ್ಕೆ ಬರದಿಲ್ಲ ಅಂತದ್ರಲಿ ಈ‌ ಇಂಗ್ಲೀಸು ಎಲ್ಲಿಂದ ಬಂದಾತು ಬುಡಿ ಎಂದು ರಾಗ ಎಳೆಯುತ್ತಾ ಅಪ್ಪನ ಮುಖ ನೋಡಿದಳು.

ಡಾಕ್ಟರ್ : ಅಪ್ಪನನ್ನು ನೋಡುತ್ತಾ ನಿಮ್ಮ ಒಳ ಹೊರಗಿನ ವ್ಯವಹಾರಗಳನ್ನೇನಾದರು  ಅವಳಲ್ಲಿ ಹೇಳಿಕೊಳ್ಳುತ್ತೀರಾ ?

ಅವ್ವ: ಅಯ್ಯೋ..ಅವ್ಳುಗೆ ಕ್ವಾಣೆ ಉಸಾಬರಿ ಬುಟ್ರೆ ಏನು ಗೊತ್ತಿಲ್ಲ ಸಾ. ಮೂಗ ಮುತ್ನಂತ ಮಗ. ಅವ್ಳು ಮೈ ನೆರೆದ್ ಮೇಲೆ ನಮ್ಮ ಗಂಡ್ಹೈಕ್ಳು ಮನೆ ತಲೆಬಾಗ್ಲಿಂದ ಈಚೆ ಕಳ್ಸೇಯಿಲ್ಲ ಸಾ. ಅವತ್ತೆ ಮೊದ್ಲುನೆದಪ ನಮಗೆ ಯಾರಿಗೂ ಹೇಳ್ದಂಗೆ ಅವರಪ್ಪುಂಗೆ ಊಟ ಕೊಡಕ್ಕೆ ಅಂತ ಹೊಲುಕ್ಕೋಗ್ಗ್ಬುಟ್ಟಿದ್ಲು ಸಾ,  ಅಲ್ಲಿಂದ ಬಂದ್ ಮಾರನೆ ದಿನದಿಂದ್ಲೆಯ ಹಿಂಗೆ ಉಸಾರ್ ತಪ್ಪಿದ್ದು . ಎಂದು ಗದ್ಗದಿತಳಾದಳು .

ಡಾಕ್ಟರ್ : ಆಸ್ಪತ್ರೆಯಲ್ಲದೆ ಬೇರೆ ಕಡೆ ಎಲ್ಲಾದರು ಅವಳನ್ನು ತೋರಿಸಿದ್ರ ? ಎಂದು ಪ್ರಶ್ನಿಸಿದಳು

ಅವ್ವ ಅಪ್ಪ ಮುಖಾ ಮುಖ ನೋಡಿ ಕೊಂಡುರು. ಅಪ್ಪ ತುಸು ಹಿಂಜರಿಯುತ್ತಲೇ ಮಸೀದಿಯಲ್ಲಿ ಶರೀಫ ಕಾಕ ತಾಯತ ಕಟ್ಟಿ ಹೇಳಿದ ಮಾತುಗಳನ್ನೆಲ್ಲಾ ಡಾಕ್ಟರರಿಗೆ ಹೇಳಿದರು.

ಎಲ್ಲವನ್ನು ತಣ್ಣಗೆ ಕೇಳಿಸಿ ಕೊಂಡ  ಪೂವಯ್ಯ ಡಾಕ್ಟರ್ ಸಣ್ಣಗೆ ನಿಡುಸುಯ್ದು,  ಒಳಗೆ ಲಕ್ಷ್ಮಿ  ತಮ್ಮೊಂದಿಗೆ ವಿಚಿತ್ರವಾಗಿ ವರ್ತಿಸಿದ ಬಗೆಯನ್ನು ವಿವರ ವಿವರವಾಗಿ ಹೇಳಿದರು.  ಡಾಕ್ಟರ್ ಮಾತುಗಳನ್ನು ಕೇಳುತ್ತಿದ್ದ ಅಪ್ಪ ಅವ್ವನಿಗೆ ಅದಾಗಲೇ ತಮ್ಮ ಮುಂದಿನ ಹಾದಿ  ನಿಚ್ಚಳವಾಗಿ ತೆರೆದು ಕೊಂಡಿತ್ತು.  ಅಪ್ಪನಿಗೆ ಡಾಕ್ಟರರಲ್ಲಿ ತಮ್ಮ ಮುಂದಿನ ನಡೆಯನ್ನು ಹೇಳಿಬಿಡಬೇಕೆಂದು ನಾಲಿಗೆ ತುದಿಗೆ ಬಂತಾದರು ಅದನ್ನು ಹೇಗೆ ಹೇಳುವುದೆಂದು ತೋಚದೆ ಮುಗುಮ್ಮಾಗಿ ತಲೆ ತಗ್ಗಿಸಿ ಕೂತ.

ಇತ್ತ ಪೂವಯ್ಯ ಡಾಕ್ಟರ್  ಅವರಾಗಿಯೇ ಮುಂದಿನ ನಿರ್ಧಾರ  ತೆಗೆದು ಕೊಂಡು ಹೇಳಲಿ  ಎಂದು  ಕಾದು ಕುಳಿತರು. ಗೊಂದಲ್ಲಿದ್ದ ಅಪ್ಪ ಅವ್ವ ಎಷ್ಟೊತ್ತಾದರು ಬಾಯಿ ತೆಗೆಯಲೇ ಇಲ್ಲ. ಡಾಕ್ಟರ್ ಇದನ್ನು ಗ್ರಹಿಸಿದವರಂತೆ ತಾವೇ ಅವರ ಗೊಂದಲಕ್ಕೆ ತೆರೆ ಎಳೆಯಲು ಮುಂದಾದರು.  “ನಾನು ಒಬ್ಬ ಡಾಕ್ಟರ್ ಆಗಿ ಹೀಗೆ ಹೇಳುವುದು ತಪ್ಪಾಗ ಬಹುದು ಬೋಪಯ್ಯನವರೇ, ನಿಮ್ಮ ಆ ಕಾಕ ಹೇಳಿದಂತೆ ಇದು ಆಸ್ಪತ್ರೆಯ ಕಾಯಿಲೆ ಅಲ್ಲದೆಯೂ ಇರಬಹುದು ಅನ್ನಿಸಿಲ್ಲವೇ ನಿಮಗೆ ?” ಎಂದು ಅಪ್ಪನನ್ನೇ ಪ್ರಶ್ನಿಸಿದರು. ಅವ್ವ  ಡಾಕ್ಟರರ ಈ ಮಾತಿಗೆ ಕಾದು ಕುಳಿತವಳಂತೆ ಹುರುಪು ತುಂಬಿ “ಹುಂ ಡಾಕ್ಟ್ರೆ ಮೊದ್ಲಿಂದ್ಲು ನಮಗೆ ಇದೊಂದು ಅನುಮಾನ ಇದ್ದೇ ಇತ್ತು. ನೀವು ನಮ್ಮುನ್ನ ಇಲ್ಲಿಂದ ಬೇಗ ಕಳ್ಸುಡ್ಬುಟ್ರೆ ನಮ್ಮ ಮಗಿನ ಮಾದ್ಲಪುರುಕ್ಕೆ ಕರ್ಕೊಂಡೋಗಿ ಹುಸಾರ್ ಮಾಡ್ಕೊಬುಡ್ತಿವಿ”ಎಂದು ಹಲ್ಲು ಗಿಂಜುತ್ತಾ ಡಾಕ್ಟರರ ಮುಖ ನೋಡಿದಳು. ಡಾಕ್ಟರ್ “ಇದೂ ಒಂದು ಪ್ರಯತ್ನ ಮಾಡಿಯೇ ಬಿಡಿ ನೋಡುವ” ಎಂದು ಹೇಳಿ, ಇನ್ನು ಒಂದು ಇಂಜೆಕ್ಷನ್ ಮಾತ್ರ ಬಾಕಿ ಇದೆ ಅದನ್ನು ತೆಗೆದು ಕೊಂಡು ನಾಳೆ ಮಧ್ಯಾಹ್ನದ ನಂತರ ನೀವು ಹೊರಡಲು ವ್ಯವಸ್ಥೆ ಮಾಡಿಕೊಳ್ಳ ಬಹುದು ಎಂದು ಹೇಳಿ ಹೋದರು.

ಬೆಳಗ್ಗಿನ ಹನ್ನೊಂದರ  ಹೊತ್ತಿಗೆ ಸೋಪಾನಪೇಟೆಯ ದೊಡ್ಡ ಆಸ್ಪತ್ರೆ ತಲುಪಿದ ಚಂದ್ರಹಾಸ ಗಿರಿಧರರಿಗೆ ಬಾಗಿಲಲ್ಲೇ ಎದುರಾದ ಅಪ್ಪ, ಬಂದಾಗಿನಿಂದ ಇದುವರೆಗೂ ನಡೆದ ಘಟನೆಯನ್ನೆಲ್ಲಾ ವಿವರಿಸಿ, ನಂತರ ಲಕ್ಷ್ಮಿ ಇದ್ದ ಕೋಣೆಗೆ ಅವರನ್ನು ಕರೆದುಕೊಂಡು ಬಂದ. ಮಲಗಿದ್ದ ಲಕ್ಷ್ಮಿ ಅವರನ್ನೆಲ್ಲ ಕಂಡು ತುಸು ಗೆಲುವಾಗಿ ಎದ್ದು ಕುಳಿತಳು. ಅಪ್ಪನನ್ನು ನೋಡುತ್ತಾ “ಏನ್ರಪ್ಪಾ ನೀವು, ಅವರೆಲ್ಲಾ ಈಗಷ್ಟೇ ವಳಿಕ್ ಬತ್ತವ್ರೆ  ಆಗ್ಲೆಯ ಎಲ್ಲನು ವರ್ದಿ ಒಪ್ಪುಸ್ಬುಟ್ರ” ಎಂದು ಹುಸಿ ಮುನಿಸು ತೋರಿದಳು. ಗಿರಿಧರನ ಕೈಲಿದ್ದ ಬುತ್ತಿಯನ್ನು ಕಂಡು “ಪಾಪ ದೊಡ್ಡವ್ವ ನಂಗೂ ಅಪ್ಪುಂಗು ಇಷ್ಟ ಅಂತ ರೊಟ್ಟಿನು ಗೊಡ್ಗಾರನು ಮಾಡಿ ಕಳ್ಸೈತೆ  ನೋಡವ್ವ” ಎಂದು ಹೇಳಿದಳು. ಅವ್ವ ಗಂಗೆ ಹಿಡಿದಿದ್ದ ಬುತ್ತಿ ಗಂಟನ್ನು ನೋಡುತ್ತಾ “ಅಲ್ಲ ಕಣ್ಮಗ ಇನ್ನು ಆ ಬುತ್ತಿ ಗಂಟುನ್ನೇ ಬಿಚ್ಚ್ ನೋಡಿಲ್ಲ ಅಂತದ್ರಲ್ಲಿ ಅಲ್ಲಿ ರೊಟ್ಟಿ ಗೊಡ್ಗಾರನೇ ಐತೆ ಅಂತ ನಿಂಗೆ ಹೆಂಗ್ ಗೊತ್ತವ್ವ” ಎಂದು ಕೇಳಿದಳು. ಲಕ್ಷ್ಮಿ “ಅಯ್ಯೋ ನೀನೊಬ್ಳು ನಾನ್ಯಾಕವ್ವ ಸುಳ್ಳ್ ಹೇಳ್ಳಿ ತಗ್ದು ನೋಡಬೇಕಾದ್ರೆ ಎಂದು ಹೇಳಿ, ಮೊದ್ಲು ನಂಗೊಂದು ಅರ್ಧ ಮುರ್ಕು ರೊಟ್ಟಿ ಹಾಕ್ಕೊಟ್ಬುಡವ್ವ ಆಸೆ ಆಯ್ತಾಯ್ತೆ” ಎಂದಳು. ಹುಷಾರು ತಪ್ಪಿದಾಗಿನಿಂದಲೂ ಇದೇ ಮೊದಲ ಬಾರಿಗೆ ಮಗಳು ಆಸೆ ಪಟ್ಟು ತಿನ್ನಲು ಕೇಳಿದ್ದನ್ನು ಕಂಡ ಅವ್ವ, ಸಂತೋಷದಿಂದ ಓಡಿಹೋಗಿ ತಟ್ಟೆ ತೊಳೆದುಕೊಂಡು ಬಂದು ರೊಟ್ಟಿಯ ಮೇಲೊಂದಿಷ್ಟು ಮೆಣಸಿನ ಖಾರ ಹಾಕಿ ಒಂದು ತುತ್ತು ರೊಟ್ಟಿ ಮುರಿದು ಬಾಯಿಗಿಟ್ಟಳು.

ಲಕ್ಷ್ಮಿ ಬಾಯಿಗಿಟ್ಟ ತುತ್ತನ್ನು ಇನ್ನು  ನುಂಗಿಯೇ ಇರಲಿಲ್ಲ, ಅವಳಿಗೆ ಯಾರೋ ಗಂಟಲಿಗೆ ಕೈ ಹಾಕಿ  ಹೊಟ್ಟೆಯಲ್ಲಿ ಇದ್ದದ್ದನ್ನೆಲ್ಲಾ ಕಿತ್ತು ಹೊರ ತೆಗೆದಂತಹ ಅನುಭವವಾಯಿತು.  ಹೊಟ್ಟೆ ಎಲ್ಲಾ ಕಿವುಚಿದಂತಾಗಿ   ಬಕ್ಕನೆ  ವಾಂತಿ ಮಾಡಿಕೊಂಡು ಬಿಟ್ಟಳು. ಲಕ್ಷ್ಮಿಯ ತಲೆ ಬಳಿಯೇ ಕುಳಿತಿದ್ದ ಚಂದ್ರಹಾಸ ಕೂಡಲೆ ಪಕ್ಕದಲ್ಲಿದ್ದ ಬಟ್ಟಲು ತೆಗೆದು ಅವಳ ಬಾಯಿಯ ಮುಂದೆ ಹಿಡಿದ. ನಂತರ ಅವಳ ಬಾಯಿ ತೊಳೆಸಿ ಬಟ್ಟಲು ತುಂಬಿದ್ದ ವಾಂತಿಯನ್ನೆಲ್ಲ ಹೊರಗೆ ಸುರಿದು ಬಂದ. ಲಕ್ಷ್ಮಿ ಕಣ್ಣಿನಲ್ಲಿ ನೀರು ತುಂಬಿಸಿಕೊಂಡು ಚಂದ್ರಹಾಸನ ಮುಖ ನೋಡುತ್ತಾ, “ಅಣ್ಣಯ್ಯ ಅವತ್ತು ನಾನು ಮನೆ ಹೊರಿಕ್ ನಿಂತು ಅಲ್ಮೇಲಿ ಜೊತೆ ಮಾತಾಡ್ತಿದ್ದೆ ಅಂತ ಸೌದೆ ಪಾಲ್ ತಕ್ಕೊಂಡು ಬಡ್ದು, ನನ್ ತಲೆ ತೂತ ಮಾಡಿದ್ದೆ ನೋಡು ಅದ್ರು ನೋವು ಇನ್ನೂ ನನ್  ಮನಸ್ಸಲ್ಲಿ ಮಾದೇ ಇರ್ಲಿಲ್ಲ ಕನ, ನೋಡು ಈಗ ಆ ನೋವು ಮಾದೋಯ್ತು.

ಇವತ್ತು ವಾಂತಿ ಬಾಚಿ ನನ್ನ್ ಋಣ ತೀರುಸ್ತೆ ಬುಡು”. ಎಂದು ಮೊದಲ ಬಾರಿಗೆ ಚಂದ್ರಹಾಸನ ಗಲ್ಲವನ್ನು ಪ್ರೀತಿಯಿಂದ ನೇವರಿಸಿದಳು. ಚಂದ್ರಹಾಸನಿಗೆ ಆ ದಿನದ ಚಿತ್ರಣ ಧುತ್ತನೆ ಕಣ್ಣ ಮುಂದೆ ಮೂಡಿ ನಿಂತಿತು. ಅಂದು ಲಕ್ಷ್ಮಿ ತಲೆಗೆ ಬಿದ್ದ ಪೆಟ್ಟಿನ ನೋವು ತಾಳಲಾರದೆ “ಅಯ್ಯಯ್ಯೋ ಕೆಟ್ಟೆ ಕಣ್ರಪ್ಪೋ” ಎಂದು ಯಾರಿಗೂ ಕೇಳದಂತೆ ಸಣ್ಣಗೆ ಕೂಗಿಕೊಂಡಿದ್ದ ದನಿ ಇಂದು ಚಂದ್ರಹಾಸನ ಕಿವಿ ಗಡಚಿಕ್ಕುವಂತೆ ಮಾರ್ದನಿಸಿತು. ಆ ದನಿಯಲ್ಲಿದ್ದ ವೇದನೆಯ ತೀಕ್ಷ್ಣತೆ ಚಂದ್ರಹಾಸನ ಎದೆಯನ್ನು ನಾಟಿದಂತಾಗಿ  ಕ್ಷಣ ನಡುಗಿ ಹೋದ. ಇನ್ನು ಅಲ್ಲಿ ನಿಲ್ಲಲು ಸಾಧ್ಯವೇ ಇಲ್ಲ ಎನ್ನಿಸಿ, ಉಕ್ಕಿ ಬಂದ ದುಃಖವನ್ನು ಒಳಗೆ ದಬ್ಬುತ್ತಾ ಆಸ್ಪತ್ರೆಯ ಹೊರಗೆ ಓಡಿದ.

ಅಲ್ಲಿಯೇ ಅನತಿ ದೂರದಲ್ಲಿ ಅಪ್ಪ ನಿಲ್ಲಿಸಿದ್ದ ಎತ್ತಿನ ಗಾಡಿ ಏರಿ ಬೋರಲು ಬಿದ್ದು ಸಮಾಧಾನ ಆಗುವವರೆಗೂ ಕಣ್ಣೀರು ಸುರಿಸಿದ.

ತನ್ನನ್ನು ಎದೆಯ ಮೇಲೆ ಒರಗಿಸಿಕೊಂಡು ಬೆನ್ನು ನೀವುತ್ತಾ ಸಂತೈಸುತ್ತಿದ್ದ ತಮ್ಮ ಗಿರಿಧರನ ಕೈ ಹಿಡಿದು ಕೊಂಡ  ಲಕ್ಷ್ಮಿ, “ಅಪ್ಪ ಗಿರಿ ನೀನು ಅಷ್ಟೆಯ ಅವತ್ತು ಸಾರ್ ಚನ್ನಾಗ್ಮಾಡಿಲ್ಲ ಅಂತ ಅಡುಗೆ ಕ್ವಾಣೆ ಮೂಲೆಗೆ ಹಾಕ್ಕೊಂಡು  ತಪ್ಪಲೆ ಸಾರ್ನ್ನೆಲ್ಲಾ ನನ್ನ ತಲೆ ಮೇಲೆ ಊದು ಹೋದೆ ನೋಡು, ಅವತ್ತು ನನ್ನ ಕಣ್ಣ್ಗೆ ತುಂಬ್ಕೊಂಡ್  ಸಾರಿನ್ ಉರಿ  ಇವತ್ತಿನ್ಗಂಟ ಇಂಗಿರ್ಲಿಲ್ಲ ಕಣ್ಲಾ. ನೋಡು ಈಗ ನೀನ್ನ್ ತೋರ್ತಿರೋ ಪ್ರೀತಿ ಒಳಗೆ ಆ ಉರಿ ಪರಿ ಎಲ್ಲ ಕಿತ್ಕೊಂಡು ಹೊಂಟೋಯ್ತು” ಎಂದು ಮೃದುವಾಗಿ ನಕ್ಕಳು. ಅವ್ವನನ್ನು ತಬ್ಬಿ ನಿಂತಿದ್ದ ಗಂಗೆಯನ್ನು ಹತ್ತಿರ ಕರೆದು ತನ್ನ ಪಕ್ಕ ಕೂರಿಸಿ ಕೊಂಡು “ಹಠ್ಮಾರಿತನನೆಲ್ಲಾ ಬುಟ್ಬುಡವ್ವ ಗಂಗೂ” ಎಂದು ಹೇಳಿ ಲೊಚ ಲೊಚನೆ ಕೆನ್ನೆಗೆ ಮುತ್ತಿಕ್ಕಿದಳು. ಅಪ್ಪ ಡಿಸ್ಚಾರ್ಜ್ ಮಾಡಿಸಲೆಂದು ಹೋದವನು ಇನ್ನೂ ಬಂದಿರಲಿಲ್ಲವಾದ್ದರಿಂದ ಅಲ್ಲಿ ಅವ್ವ,  ಗಿರಿಧರ, ಗಂಗೆ ಮಾತ್ರ ಉಳಿದಿದ್ದರು.  ಲಕ್ಷ್ಮಿ ಅವ್ವ ಮತ್ತು ಗಿರಿಧರನನ್ನು  ನೋಡುತ್ತಾ “ನೀವಿಬ್ರು ಒಂಚೂರು ಹೊರಿಕೋಯ್ತಿರ ನಾನು ಗಂಗೂ ಹತ್ರ ಒಂದೀಟ್ ಮಾತಾಡದೈತೆ” ಎಂದಳು. ಗಂಗೆ ಒಬ್ಬಳನ್ನೆ ಅಲ್ಲಿ ಬಿಟ್ಟು ಹೋಗಲು ಹಿಂದೆ ಮುಂದೆ ನೋಡುತ್ತಿದ್ದ ಅವ್ವನ ಮನಸ್ಸನ್ನು ಅರಿತ ಲಕ್ಷ್ಮಿ “ಇದ್ಯಾಕವ್ವ ನನ್ನ ಮೇಲೆ ಇಷ್ಟು ಅನ್ಮಾನ” ಎಂದು ಮುಖ ಗಂಟು ಹಾಕಿ ಕೊಂಡಳು. ಅವ್ವ ಹಲ್ಲು ಗಿಂಜುತ್ತಾ “ಥೂ ಬುಡ್ತು ಅನ್ನು ಮಗ ನಾನ್ಯಾಕವ್ವ ನನ್ನ ಮಗಿನ್ ಮ್ಯಾಲೆ ಅನ್ಮಾನ ಪಡ್ಲಿ. ನಿನ್ನ ತಂಗಿತವ ಅದೇನ್ ಮಾತಾಡ್ಕೊತ್ತಿಯೋ ಮಾತಾಡ್ಕೊಳವ್ವ” ಎಂದು ಹೇಳಿ ಗಿರಿಧರನಿಗೆ ಒರಗಿ ಕುಳಿತಿದ್ದ ಲಕ್ಷ್ಮಿಯನ್ನು ಮಲಗಿಸಿ ಇಬ್ಬರು ಹೊರ ಬಂದರು.

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೋಪಾನಪೇಟೆಯ ದೊಡ್ಡಾಸ್ಪತ್ರೆಯಲ್ಲಿ……
(ಈ ವರೆಗೆ…)

ಕೈಗೆ ತಾಯತ ಕಟ್ಟಿಸಿಕೊಂಡು ಮನೆಗೆ ಬಂದ ಲಕ್ಷ್ಮಿ ಅದನ್ನು ತೆಗೆಯುವಂತೆ ದುಂಬಾಲು ಬೀಳುತ್ತಾಳೆ. ಯಾರೂ ತೆಗೆಯದಿದ್ದಾಗ ಮುನಿಸುಗೊಂಡು ಊಟಮಾಡಲು ನಿರಾಕರಿಸಿದ ಆಕೆಯನ್ನು ಒರಟಾಗಿ ಎಬ್ಬಿಸಲು ಹೋದ ಗಿರಿಧರನ ಮುಖಕ್ಕೆ ಬಿಸಿ ಅನ್ನದ ತಟ್ಟೆಯನ್ನು ಎಸೆಯುತ್ತಾಳೆ. ಕೋಪಗೊಂಡ ಆತ ಅಕೆಯ ತಲೆಯ ಮೇಲೆ ಹೊಡೆಯುತ್ತಾನೆ. ಲಕ್ಷ್ಮಿ ಏದುಸಿರು ಬಿಡುತ್ತಾ ಬಿದ್ದುಹೋಗುತ್ತಾಳೆ. ಅಪ್ಪ ಅವ್ವ ದೊಡ್ಡ ಡಾಕ್ಟರ್‌ ಗೆ ತೋರಿಸಲು ಗಾಡಿಯನ್ನು ಸೋಪಾನಪೇಟೆಯತ್ತ ಓಡಿಸುತ್ತಾರೆ. ಆಸ್ಪತ್ರೆಯಲ್ಲಿ ವಿಚಿತ್ರವೊಂದು ನಡೆಯುತ್ತದೆ. ಏನದು? ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಒಂಬತ್ತನೇ ಕಂತು ಓದಿ

ಎತ್ತಿನ ಗಾಡಿ ಆಸ್ಪತ್ರೆಯ ಮುಂದೆ ಬಂದು ನಿಂತಿತು. ಅಪ್ಪ ಗಾಡಿಯಿಂದ ಹಸುವನ್ನು ಬಿಚ್ಚಿ ಅಲ್ಲೇ ಇದ್ದ ಒಂದು ಮರಕ್ಕೆ ಕಟ್ಟಿ  ಹುಲ್ಲು ಹಾಕಿದ. “ನೀವಿಬ್ರು ಗಾಡಿಲೇ ಇರಿ ಡಾಕ್ಟ್ರು ಬಂದವ್ರಾ  ನೋಡ್ಕೊಂಡು ಬತ್ತಿನಿ”. ಎಂದು ಹೇಳಿ ಸಿಂಗು ಡಾಕ್ಟರ್ ಕೊಟ್ಟ ಪತ್ರ ಹಿಡಿದು ಹೊರಟ. ಒಳಗೆ ಹೋಗುತ್ತಿದ್ದಂತೆ ಎದುರಾದ ನರ್ಸ್  ಒಬ್ಬಳಿಗೆ ಆ ಪತ್ರ ತೋರಿಸಿ “ಈ ಡಾಕ್ಟ್ರು  ಅವ್ರಾ  ತಾಯಿ” ಎಂದು ಕೇಳಿದ. ಅವಳು ತನ್ನ ಎದುರಿದ್ದ ಕೋಣೆಯ ಕಡೆ ಕೈ ತೋರಿಸಿ ” ಪೂವಯ್ಯ ಡಾಕ್ಟರ್  ಆ ರೂಮಿನಲ್ಲಿದ್ದಾರೆ  ಹೋಗಿ” ಎಂದಳು.

ಆಗಷ್ಟೇ ದಿನದ ಕಾರ್ಯ ಆರಂಭವಾಗಿದ್ದರಿಂದ  ರೋಗಿಗಳ ಸಂಖ್ಯೆಯು ಅಷ್ಟಾಗಿ ಇರಲಿಲ್ಲವಾಗಿ ಅಪ್ಪ ಸೀದ ಒಳ ಹೋದವನೆ ಡಾಕ್ಟರ್ ಎದುರು ಸಿಂಗು ಡಾಕ್ಟರ್ ಕೊಟ್ಟ ಪತ್ರವನ್ನಿಟ್ಟು,  ಒಂದೇ ಉಸಿರಿಗೆ ತನ್ನ ಮಗಳ ಸಮಸ್ಯೆಯನ್ನೆಲ್ಲಾ ಹೇಳಿಕೊಂಡ. “ಏನಾರ ಮಾಡಿ ನನ್ನ ಮಗಳುನ್ನ ಹುಸಾರ್ ಮಾಡ್ಕೊಡಿ ಸಾ” ಎಂದು ಅಂಗಲಾಚಿದ. ಪೂವಯ್ಯ ಡಾಕ್ಟರ್ ಚೀಟಿಯನ್ನು ಓದಿ ಮುಖ ಅರಳಿಸಿ “ಓ…ಡಾಕ್ಟರ್ ಸಿಂಗ್, ಇವರಿಂದ ನಾನು ಬಹಳ ಕಲಿತಿದ್ದೇನೆ. ಒಂದು ರೀತಿ ಇವರು  ನನಗೆ  ಟೀಚರ್ ಇದ್ದ ಹಾಗೆ. ಸರಿ ಈಗ  ನಿಮ್ಮ ಮಗಳೆಲ್ಲಿ” ಎಂದು ಹೊರಗೆ ಕಣ್ಣಾಡಿಸಿದರು. “ಗಾಡಿಲೇ ಮಲಗವ್ಳೆ ಸಾ ಈಗ ಕರ್ಕೊಂಡು ಬಂದ್ಬುಡ್ತಿನಿ” ಎಂದು ಎದ್ದು ಹೊರಗೆ ಓಡಿದ.  ಲಕ್ಷ್ಮಿ ನಡೆಯುವುದಿರಲಿ ಎದ್ದು ಕೂರಲು ಆಗದಷ್ಟು  ನಿತ್ರಾಣಳಾಗಿ ಹೋಗಿದ್ದಳು. ಅಪ್ಪ ಎತ್ತಿಕೊಳ್ಳಲು ನೋಡಿದ ಆಗಲಿಲ್ಲ. ಕೊನೆಗೆ ವೀಲ್ ಚೇರ್ ತರಿಸಿ ಲಕ್ಷ್ಮಿಯನ್ನು ಒಳಗೆ ಕರೆದುಕೊಂಡು ಹೋಗಲಾಯಿತು. ತಲೆ ಎತ್ತಲು ಶಕ್ತಿ ಇಲ್ಲದಂತೆ ಕುಗ್ಗಿ ಹೋಗಿದ್ದ ಲಕ್ಷ್ಮಿಯನ್ನು  ಪರೀಕ್ಷಿಸಿದ  ಡಾಕ್ಟರ್ ಕೂಡಲೇ ನರ್ಸ್ ಒಬ್ಬಳನ್ನು ಕರೆದು  ಲಕ್ಷ್ಮಿಯನ್ನು ಅಡ್ಮಿಟ್ ಮಾಡಿಕೊಂಡು ಗ್ಲೂಕೋಸ್ ಬಾಟಲಿ ಹಾಕಲು ತಾಕೀತು ಮಾಡಿದರು.

ಪೂವಯ್ಯ ಡಾಕ್ಟರರ ಮುತುವರ್ಜಿಯಿಂದಾಗಿ ಎರಡು ದಿನಗಳ ಕಾಲ  ತರಾತುರಿಯಿಂದಲೇ ಒಂದರ ಮೇಲೊಂದರಂತೆ ಪರೀಕ್ಷೆ ಗಳು ನಡೆದವು. ಬೇರೆ ಬೇರೆ ವೈದ್ಯರುಗಳು ಬಂದು ನೋಡಿದರು. ಆದರೂ ಲಕ್ಷ್ಮಿಯ ಕಾಯಿಲೆಯನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.  ಎಲ್ಲಾ ರಿಪೋರ್ಟ್ ಗಳಲ್ಲಿಯೂ ನಾರ್ಮಲ್ ಎನ್ನುವುದನ್ನು ಬಿಟ್ಟರೆ ಒಂದು ಸಣ್ಣ ಸಮಸ್ಯೆ ಕೂಡ ಕಂಡು ಬರಲಿಲ್ಲ.  ಆದರೆ ಅವಳ ಆರೋಗ್ಯ ಸ್ಥಿತಿ ಮಾತ್ರ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಲೇ ಇತ್ತು.

ಮೂರನೆಯ ದಿನ ಬಹಳ ನುರಿತ  ಸೀನಿಯರ್ ಡಾಕ್ಟರ್ ಒಬ್ಬರು ಬಂದು ಲಕ್ಷ್ಮಿಯನ್ನು ಕೂಲಂಕಷವಾಗಿ ಪರೀಕ್ಷಿಸಿದರು. ಅವರು ಕುತ್ತಿಗೆ ಬಳಿಯ ನರದಲ್ಲಿ ಏನೋ ಸಮಸ್ಯೆ ಕಾಣುತ್ತಿದೆ ಎಂದು ಹೇಳಿ, ದುಬಾರಿ ಬೆಲೆಯ ಇಂಜೆಕ್ಷನ್ ಮಾತ್ರೆಗಳನ್ನು ಬರೆದು, “ಕೂಡಲೇ ಈ ಟ್ರೀಟ್ ಮೆಂಟ್ ಆರಂಭಿಸಿ ನೋಡೋಣ” ಎಂದು ಹೇಳಿ ಹೋದರು. ಪೂವಯ್ಯ ಡಾಕ್ಟರ್ ಅಪ್ಪ ಅವ್ವನೊಂದಿಗೆ ಹಣದ ಅಂದಾಜು ವೆಚ್ಚವನ್ನು ತಿಳಿಸಿ, ಆದಷ್ಟು ಬೇಗ ಈ ಔಷಧಿಗಳನ್ನು ತೆಗೆದು ಕೊಂಡು ಬನ್ನಿ ಎಂದು ಹೇಳಿ ಔಷಧಿಯ ಚೀಟಿಯನ್ನು ಕೊಟ್ಟು ಹೋದರು. ಡಾಕ್ಟರ್ ಅತ್ತ ಮರೆಯಾದದ್ದೇ ಅವ್ವ ತನ್ನ ಕಿವಿಯಲ್ಲಿದ್ದ ಬೆಂಡೋಲೆಯನ್ನು ಬಿಚ್ಚಿ ಅಪ್ಪನ ಕೈಗಿಟ್ಟು ” ಏನೀ ತಡ ಮಾಡ್ಬ್ಯಾಡಿ ಮಗ ಹುಸಾರಾದ್ರೆ ಸಾಕು. ಇದು ಎಷ್ಟುಕ್ಕೊಯ್ತದೆ  ಕೊಟ್ಟು ಬೇಗ ಡಾಕ್ಟ್ರು ಹೇಳಿರೋ ಔಸ್ತಿ ಮಾತ್ರೆ ತನ್ನಿ” ಎಂದು ಕಳುಹಿಸಿದಳು.

ಅಪ್ಪ ಸೋಪಾನಪೇಟೆಯ ಚಿನ್ನ ಬೆಳ್ಳಿ ಅಂಗಡಿಗಳನ್ನು ಸುತ್ತಿ, ಜಾಸ್ತಿ ಬೆಲೆ ಸಿಕ್ಕ ಅಂಗಡಿಗೆ ಆ ಓಲೆಯನ್ನು ಮಾರಿ ಡಾಕ್ಟರ್ ಹೇಳಿದ್ದ  ಔಷಧಗಳನ್ನೆಲ್ಲಾ ಕೊಂಡು ತಂದನು. ಲಕ್ಷ್ಮಿಯ ಚಿಕಿತ್ಸಾ ಕಾರ್ಯ ಆರಂಭವಾಯಿತು. ದಿನ ದಿನಕ್ಕೂ ಮಗಳು ಕುಗ್ಗುತ್ತಿರುವುದನ್ನು ನೋಡಲಾಗದ ಅವ್ವ, ಅವಳ ಚಿಂತೆಯಲ್ಲಿಯೇ ಹಸಿವು ಎಂಬುದನ್ನೇ ಮರೆತಳು. ಮೂರು ಹೊತ್ತು ಬಿಟ್ಟ ಕಣ್ಣು ಬಿಟ್ಟಂತೆ ಮಗಳನ್ನು ನೋಡುತ್ತಾ ಕೂತುಬಿಟ್ಟಳು. ಕಣ್ಣಿಗೆ ನಿದ್ರೆ ಅನ್ನುವುದೇ ಹತ್ತದಾಯಿತು. ಕಣ್ಣು ಮುಚ್ಚಿದರೆ ಮಗಳು ಎಲ್ಲಿ ಕಳೆದು ಹೋಗಿ ಬಿಡುವಳೋ ಅನ್ನುವ ಆತಂಕ ಅವಳನ್ನು ಕ್ಷಣ ಕ್ಷಣವೂ ಹೈರಾಣ ಮಾಡತೊಡಗಿತ್ತು.

ಇತ್ತ ಹೊಸ ನಾರಿಪುರಕ್ಕೆ ಹೋಗಿ ಸಿಂಗು ಡಾಕ್ಟರರ ಹತ್ತಿರ ಅಪ್ಪ ಅವ್ವ ಸೋಪಾನಪೇಟೆಯ ದೊಡ್ಡ ಆಸ್ಪತ್ರೆಗೆ ಹೋಗಿರುವ ಮಾಹಿತಿ ತಿಳಿದು ಬಂದಿದ್ದ ಚಂದ್ರಹಾಸ, ಎರಡು ದಿನವಾದರೂ ಅವರು ಬಾರದನ್ನು ಕಂಡು ಆತಂಕಿತನಾದ. ಅಪ್ಪ ಅವ್ವನ ಅನುಪಸ್ಥಿತಿಯಲ್ಲಿ ಇವರ ನಿಗಾ ನೋಡಿಕೊಳ್ಳಲು ಮೇಗಳ ಬೀದಿಯ ತನ್ನ ಮನೆಯಿಂದ ಬಂದು ಹೋಗುತ್ತಿದ್ದ ಅಪ್ಪನ ಮೊದಲ ಹೆಂಡತಿ ದೇವಿರಮ್ಮ, ಚಂದ್ರಹಾಸನಿಗೆ ದುಂಬಾಲು ಬಿದ್ದು, ಲಕ್ಷ್ಮಿಯ ಸ್ಥಿತಿಗತಿಗಳನ್ನು ತಿಳಿದು ಬರಲು  ಸೋಪಾನಪೇಟೆಗೆ ಹೊರಡಿಸಿದಳು. ಸೋಪಾನ ಪೇಟೆಗೆ ಇದ್ದದ್ದು ದಿನದಲ್ಲಿ ಎರಡೇ ಬಸ್ ಆದ್ದರಿಂದ ಚಂದ್ರಹಾಸ ಬೆಳಗ್ಗಿನ ಏಳರ ಬಸ್ಸಿಗೆ ಹೋಗುವುದೆಂದು ನಿರ್ಧರಿಸಿದ. ನಿದ್ದೆ ಪೋತನಾಗಿದ್ದ ಗಿರಿಧರನಿಗೆ ತಾಸಿಗೆ ಮುಂಚೆಯೇ ಹೊರಟು ರೆಡಿಯಾಗಿರ ಬೇಕೆಂದು ತಾಕೀತು ಮಾಡಿದ. ಅವ್ವನ ಮೋರೆ ಕಾಣದೆ ಸದಾ ಬಿಕ್ಕಳಿಸುತ್ತಲೇ ಇರುತ್ತಿದ್ದ ಗಂಗೆ ಅಣ್ಣಂದಿರ ಈ ಮಾತು ಕೇಳಿಸಿ ಕೊಂಡು ನನ್ನನ್ನು ಕರೆದು ಕೊಂಡು ಹೋಗಿ ಎಂದು ಹಠ ಹಿಡಿದು ಕೂತಳು. ಅಣ್ಣಂದಿರ ಯಾವ ಹೊಡೆತ ಬಡಿತಗಳಿಗೂ ಅವಳು ಜಗ್ಗಲಿಲ್ಲ. ಕೊನೆಗೆ ದೊಡ್ಡಮ್ಮ, ಚಂದ್ರಹಾಸ ಮತ್ತು  ಗಿರಿಧರನನ್ನು ಓಲೈಸಿ ಗಂಗೆಯನ್ನು ಅವರೊಂದಿಗೆ ಕಳಿಸಲು ವ್ಯವಸ್ಥೆ ಮಾಡಿದಳು.

ದೊಡ್ಡಮ್ಮ  ಸೂರ್ಯ ಕಣ್ಣು ಬಿಡುವುದಕ್ಕೂ  ಮುಂಚೆಯೇ, ತನ್ನ ಮನೆಯಿಂದಲೇ ಅಪ್ಪನಿಗೆ ಮತ್ತು ಲಕ್ಷ್ಮಿ ಗೆ ಇಷ್ಟವಾದ ಬಿಸಿಬಿಸಿಯಾದ ರೊಟ್ಟಿ, ಮೆಣಸಿನ ಕಾಯಿ ಗೊಡ್ಡುಗಾರ ಅರೆದು, ಅದರ ಮೇಲೊಂದಿಷ್ಟು ಬೆಣ್ಣೆಯನ್ನು ಹಾಕಿ ಬುತ್ತಿ ಕಟ್ಟಿ ಹೊಸ ನಾರಿಪುರದವರೆಗೂ ಹೋಗಿ ಮೂವರನ್ನು ಬಸ್ ಹತ್ತಿಸಿ ಬಂದಳು.

ಸಾವಿರಾರು ರೂಪಾಯಿ ಬೆಲೆಯ ಔಷಧಿ ಮಾತ್ರೆಗಳಿಗೆ ಒಡ್ಡಿ ಕೊಂಡ ಲಕ್ಷ್ಮಿಯ ದೇಹ ಒಂದು ಘಳಿಗೆ ಇದ್ದಂತೆ ಇನ್ನೊಂದು ಘಳಿಗೆ ಇರುತ್ತಿರಲಿಲ್ಲ. ಒಮ್ಮೆ ಗೆಲುವಾದಂತೆ ಕಂಡರು ಇನ್ನೊಮ್ಮೆ ಸುರುಟಿ ಕೊಂಡು ಬಿದ್ದಿರುತ್ತಿದ್ದಳು. ಅನ್ನ ನೀರು ಎಂಬುದು ದೂರವೇ ಉಳಿಯಿತು. ಮಗಳು ಏನು ತಿನ್ನದೆ ಹೀಗೆ ನಿತ್ರಾಣಳಾಗಿ ಬಿದ್ದಿರುವುದನ್ನು ನೋಡಲಾರದ ಅಪ್ಪ, ಆ ದಿನ ಮಧ್ಯಾಹ್ನ ಪಕ್ಕದಲ್ಲಿಯೇ ಇದ್ದ ಹೋಟೆಲಿನಿಂದ  ಬಿಸಿ ಬಾದಾಮಿ ಹಾಲು ತಂದು ಅವಳ  ಕೈ ಕಾಲು ಹಿಡಿದು ಕುಡಿವಂತೆ ಒತ್ತಾಯ ಮಾಡಿದ. ಅಪ್ಪನ ಹಿಂಸೆ ತಾಳಲಾರದೆ ಕಿರಿಕಿರಿ ಗೊಂಡ ಲಕ್ಷ್ಮಿ, ಕೋಪೋದ್ರಿಕ್ತಳಾಗಿ ಬಿರುಸಾಗಿ ಎದ್ದು ಅಪ್ಪನ ಕೈಯಲ್ಲಿದ್ದ ಹಾಲಿನ ಲೋಟ ಕಸಿದುಕೊಂಡು ಅವನ ಮುಖಕ್ಕೆ ರಪ್ಪೆಂದು ಎರಚಿದಳು. ಮಗಳ ಈ ಅನಿರೀಕ್ಷಿತ ನಡೆಯಿಂದ ತತ್ತರಿಸಿದ ಅಪ್ಪ ತನ್ನ ಪಂಚೆಯ ತುದಿಯಿಂದ ಉರಿಯುವ ಮುಖವನ್ನು ಒರೆಸಿಕೊಳ್ಳುತ್ತಾ, ಸಂಕೋಚದಿಂದ ತನ್ನ ಸುತ್ತಾ ಒಮ್ಮೆ ಕಣ್ಣಾಡಿಸಿದ. ಪುಣ್ಯಕ್ಕೆ ಸುತ್ತಾ ಮುತ್ತಾ ಯಾರು ಇರಲಿಲ್ಲ.  ಇಷ್ಟು ದಿನ ಲಕ್ಷ್ಮಿಯ ಪಕ್ಕದ ಹಾಸಿಗೆಯಲ್ಲಿಯೇ ಇದ್ದ ಒಬ್ಬ ರೋಗಿಯು, ಆ ದಿನ ಡಿಸ್ಚಾರ್ಜ್ ಆಗಿ ಹೋಗಿದ್ದ. ಹಾಗಾಗಿ ಆ ಕೊಣೆಯಲ್ಲಿ ಲಕ್ಷ್ಮಿ ಒಬ್ಬಳೇ ಉಳಿದಿದ್ದಳು‌.

ಅಪ್ಪ ತನ್ನ ಮುದ್ದಿನ ಮಗಳು ಹೀಗೆ ಮಾಡಿದ್ದನ್ನು ಕಂಡು ದುಃಖ ಗೊಂಡ. ಕಣ್ಣಿನಲ್ಲಿ ನೀರು ತುಳುಕಿಸುತ್ತಾ  “ಯಾಕ್ ಮಗ ಹಿಂಗ್ ಮಾಡ್ಬುಟ್ಟೆ..?  ನನ್ನ ಮಖಕ್ಕೆ ಬೆಂಕಿ ಇಟ್ಟಂಗೆ  ಉರಿತಾಯ್ತಲವ್ವ” ಎಂದ. ಕೂಡಲೇ ಎಚ್ಚರಗೊಂಡ ಲಕ್ಷ್ಮಿ ” ಅಯ್ಯೋ.. ಹಂಗ್ ಮಾಡ್ಬುಟ್ನಾ ನಂಗೆ ಗೊತ್ತೇ ಆಗ್ಲಿಲ್ವಲ್ರಪ್ಪ ನಾನೊಬ್ಳು ಹಾಳಾದೋಳು” ಎಂದು ಹೇಳಿ  ತನ್ನ ಸೆರಗಿನ ತುದಿಯಿಂದ ಅಪ್ಪನ ಮುಖವನ್ನು ವರೆಸಿದಳು. ಅಲ್ಲದೆ ಅವ್ವ ಎರಡು ದಿನದಿಂದ ಊಟ ಮಾಡದೆ ಅನ್ನವನ್ನೆಲ್ಲಾ ಕಿಟಕಿಯಿಂದ ಹೊರ ಸುರಿಯುತ್ತಿರುವ  ಗುಟ್ಟನ್ನು ಅಪ್ಪನಿಗೆ ತಿಳಿಸಿದಳು. ಅಪ್ಪ ಆಶ್ಚರ್ಯದಿಂದ ಮಗಳ ಮುಖ ನೋಡಿದ. ಲಕ್ಷ್ಮಿ ಅಪ್ಪನನ್ನು ದುರು ಗುಟ್ಟಿ ನೋಡುತ್ತಾ “ನಂಗೆ ಹೆಂಗ್ ಗೊತ್ತಾಯ್ತು ಅಂತ ನೋಡ್ತಿದ್ದೀಯ.  ನನಗೆ ಕೂತ ಜಾಗದಲ್ಲೇ ಎಲ್ಲಾ ಗೊತ್ತಾಯ್ತದೆ ಕಂತೆ  ಎಲ್ಲಾನೂ ಕೆದ್ಕಕ್ಕೋಗ್ ಬ್ಯಾಡ. ನಾನು ಹೇಳ್ದಂಗೆ ಹೋಗಿ ನಿನ್ನ ಹೆಂಡ್ತಿ ಮುಂದ್ಗಡೆನೆ ಕೂತ್ಕೊಂಡು ಏನಾರು ತಿನ್ಸು”  ಎಂದಳು. ಎಂದೂ ಏಕವಚನದಲ್ಲಿ ಮಾತಾಡದಿದ್ದ ಮಗಳ ಮಾತಿನ ವರಸೆ ಕಂಡು ಅಪ್ಪನಿಗೆ ಒಂದು ರೀತಿಯ ಆತಂಕವಾಯಿತು. ಅವನಿಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ, ಯಾರೋ ಕುತ್ತಿಗೆ ಹಿಡಿದು ದಬ್ಬುತ್ತಿದ್ದಾರೆ ಎನ್ನುವ ಅನುಭವವಾಗ ತೊಡಗಿತು. ಕೂಡಲೇ ವಾರ್ಡಿನ ಹೊರಗಿನ ವೆರಾಂಡದಲ್ಲಿ ಮಲಗಿದ್ದ ಅವ್ವನ ಬಳಿಗೆ ಬಂದ.

ರಾತ್ರಿ ಪೂರ ಮಗಳನ್ನು ಕಾಯುವುದರಲ್ಲೇ ನಿದ್ದೆ ಗೆಟ್ಟಿದ್ದ ಅವ್ವ, ಆಗಷ್ಟೆ ಚಾಪೆಯ ಮೇಲೆ ಬಂದು ಉರುಳಿ ಕೊಂಡಿದ್ದಳು. ಹೊರ ಬಂದ ಅಪ್ಪ, ಅವ್ವನನ್ನು ಎಬ್ಬಿಸಿ,  ಒಳಗೆ ಲಕ್ಷ್ಮಿ  ನಡೆದು ಕೊಂಡ  ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದುದಲ್ಲದೆ, ಅವಳು ಹೇಳಿದಂತೆ  ಊಟ ತಿಂಡಿ ಹೊರ ಹಾಕುತ್ತಿರುವುದು ನಿಜವೇ ಎಂದು ಕೇಳಿದ. ಯಾರಿಗೂ ಗೊತ್ತಾಗದಂತೆ ತಾನು ಊಟವನ್ನು ಕಿಟಕಿಯ ಹೊರಗೆ ಹಾಕುತ್ತಿರುವುದನ್ನು  ಮಿಸುಕಾಟವೇ ಇಲ್ಲದ ಮಗಳು, ನೋಡಿದವಳಂತೆ ವರ್ಣಿಸಿರುವುದು, ಅಪ್ಪನ ಮೇಲೆ  ಹಾಲು ಎರಚಿ ಏಕವಚನದಲ್ಲಿ ಮಾತನಾಡಿರುವುದು, ಈ ಎಲ್ಲವೂ ಅವ್ವನ ಒಳಗೆ ಹೊಗೆ ಆಡುತ್ತಿದ್ದ ಅನುಮಾನವನ್ನು ಇನ್ನಷ್ಟು ಗಟ್ಟಿ ಗೊಳಿಸಿತು.

ರಾತ್ರಿ ಡಾಕ್ಟರ್ ಮನೆಗೆ ಹಿಂದಿರುಗುವ ಮುನ್ನ ಲಕ್ಷ್ಮಿಯನ್ನು ಮಾತಾಡಿಸಿ ಕೊಂಡು ಹೋಗಲು ಅವಳಿದ್ದ ಕೊಠಡಿಗೆ ಬಂದರು. ಮಗಳ ತಲೆಯ ಬಳಿ ಒಬ್ಬರು ಕಾಲಿನ ಬುಡದಲ್ಲಿ ಒಬ್ಬರು ಕುಳಿತಿದ್ದ ಅಪ್ಪ, ಅವ್ವನಲ್ಲಿ  “ನಾನು ಅವಳಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ನೀವು ಸ್ವಲ್ಪ ಹೊತ್ತು ಹೊರಗಿರಿ” ಎಂದು ಕಳುಹಿಸಿದರು. ಬೆಳಗ್ಗಿನಿಂದ ಒಂದೇ ಸಮನೆ ಉರಿದ ಬಿಸಿಲಿನಿಂದಾಗಿ ವಾರ್ಡ್ ಕಾದು ಧಗೆ ತುಂಬಿತ್ತು.  ಡಾಕ್ಟರ್‌ ಗೆ ವಿಪರೀತ ಸೆಕೆ ಎನ್ನಿಸಿ ಫ್ಯಾನ್ ಹಾಕಲು  ಸ್ವಿಚ್ ಕಡೆ ನೋಡಿದರು. ಗೋಡೆಯ ಕಡೆ ಮುಖ ತಿರುಗಿಸಿ ಮಲಗಿದ್ದ ಲಕ್ಷ್ಮಿ, ಅವರ ಮನಸ್ಸನ್ನು ಓದಿದವಳಂತೆ “ಡೋಂಟ್ ಪುಟ್ ಫ್ಯಾನ್ ಡಾಕ್ಟರ್. ನನಗೆ ಗಾಳಿ ಆಗಲ್ಲ ಅಂತ ನಿಮಗೆ ಗೊತ್ತಿಲ್ವ” ಎಂದು  ಗಡುಸಾಗಿ ಹೇಳಿದಳು. ಡಾಕ್ಟರ್ ಆಶ್ಚರ್ಯದಿಂದ  ಬೆನ್ನು ತಿರುಗಿಸಿ ಮಲಗಿದ್ದ ಲಕ್ಷ್ಮಿಯನ್ನೇ ದಿಟ್ಟಿಸಿದರು. “ಏನ್ ಸರ್ ನನ್ನ ಮನಸ್ಸಿನಲ್ಲಿರೋದು ಇವಳಿಗೆ ಹೇಗೆ ಗೊತ್ತಾಯ್ತು ಅಂತ ಯೋಚಿಸ್ತಿದ್ದೀರ ಅಲ್ವ” ಎಂದು ಜೋರಾಗಿಯೇ ನಕ್ಕಳು. ಡಾಕ್ಟರ್ ತುಸು ಸಾವರಿಸಿ ಕೊಂಡು ಪ್ರಯತ್ನ ಪೂರ್ವಕವಾಗಿ  ಮುಖದ ಮೇಲೆ ನಗು ತಂದು ಕೊಂಡು  “ಯೆಸ್ ಯೆಸ್….  ಹೌ ಆರ್ ಯು ಲಕ್ಷ್ಮಿ . ಕೆನ್ ಯು ವೇಕ್ ಅಪ್ ” ಎಂದು ಕೇಳಿದರು. ” ಓ.. ಶೂರ್ ಡಾಕ್ಟರ್” ಎಂದು ತನಗೆ ಏನು ಆಗೇ ಇಲ್ಲ ಎಂಬಂತೆ  ಆರಾಮವಾಗಿ ಎದ್ದು ಡಾಕ್ಟರಿನ ಸರಿ ಸಮಕ್ಕೆ ಕಾಲು ಮೇಲೆ ಕಾಲು ಹಾಕಿ ಕೂತಳು. ಡಾಕ್ಟರ್ ಮಾತು‌ ಎತ್ತಿಕೊಳ್ಳಲು ಪೀಠಿಗೆ ಎಂಬಂತೆ ” ನಿನಗೆ ಇಂಗ್ಲೀಷ್ ಮಾತಾಡೋಕು ಬರುತ್ತಾ. ವೆರಿ ಗುಡ್” ಎಂದರು. ” ನಂದು ಎಲೆಕ್ಟ್ರಿಕ್ ಆಫೀಸ್ನಲ್ಲಿ ಮೂವತ್ತು ವರ್ಷದ ಸರ್ವಿಸ್‌ ಸರ್. ಎಂತೆಂತ ಜನ್ರು ಜೊತೆ ಇಂಟ್ರ್ಯಕ್ಟ ಮಾಡಿರ್ತಿವಿ ಅಷ್ಟು ಇಂಗ್ಲೀಷ್ ಬರ್ಲಿಲ್ಲ ಅಂದ್ರೆ ಹೇಗೆ ಹೇಳಿ” ಎಂದಳು. ಡಾಕ್ಟರ್ ಗೆ ಅವಳ ಮಾತಿನ ತಳ ಬುಡ ಅರ್ಥವಾಗಲಿಲ್ಲ. ಗಲಿಬಿಲಿ ಗೊಂಡ ಡಾಕ್ಟರ್ “ಲಕ್ಷ್ಮಿ ಆರ್ ಯು ಓಕೆ” ಎಂದು ಕೇಳಿದರು. “ಓ..ಐ ಯಮ್ ಫೈನ್ ಸರ್. ನೋಡಿ ಹೇಗ್ ಗುಂಡ್ರು ಗೂಳಿ ಇದ್ದಂಗಿದ್ದೀನಿ” ಎಂದು ಲಕ್ಷ್ಮಿ ತನ್ನ ಮೈ ಕುಣಿಸಿದಳು. ಹೀಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಡಾಕ್ಟರ್  ಕೇಳಿದ ಪ್ರಶ್ನೆಗಳಿಗೆಲ್ಲಾ ಕೆಲವೊಮ್ಮೆ ಅಸಂಬದ್ಧವಾಗಿ ಕೆಲವೊಮ್ಮೆ ತಾರ್ಕಿಕವಾಗಿ ಇಂಗ್ಲಿಷ್ ಕನ್ನಡ ಎಂಬುದರ ಹಂಗು ತೊರೆದು ಪ್ರತಿಕ್ರಿಯಿಸಿದಳು. ಹೀಗೆ ಅರಳು ಹುರಿದಂತೆ ಮಾತಾಡುತ್ತಲೇ ಇದ್ದವಳು ಇದ್ದಕ್ಕಿದ್ದಂತೆ ನಿಶಕ್ತಳಾದಳು. ದೇಹದ ತ್ರಾಣವೆಲ್ಲ ಬಸಿದು ಹೋದಂತೆ ಡಾಕ್ಟರರ ಕೈ ಹಿಡಿದು, “ಡಾಕ್ಟ್ರೇ ನಮ್ಮಪ್ಪ ಅವ್ವುಂತವ ಸುಮ್ನೆ ದುಡ್ಡು ಯಾಕ್ ಖರ್ಚು ಮಾಡುಸ್ತೀರಾ? ಇದು ಆಸ್ಪತ್ರೆ ಕಾಯಿಲೆನೂ ಅಲ್ಲ, ಹುಸಾರಾಗೋ ಕಾಯಿಲೆನೂ ಅಲ್ಲ. ಮೊದ್ಲು ನಮ್ಮುನ್ನ ಮನೆಗೆ ಕಳ್ಸ್ಬುಡಿ” ಎಂದು ಹೇಳಿ ನರಳುತ್ತಾ ಹಾಸಿಗೆ ಮೇಲೆ ಮುದುಡಿ ಮಲಗಿದಳು. ಯಾಕೋ ಅವಳು ಹೇಳಿದ “ಇದು ಆಸ್ಪತ್ರೆ ಕಾಯಿಲೆ ಅಲ್ಲ”, ಎನ್ನುವ ಮಾತು ಡಾಕ್ಟರರ ಮನಸ್ಸನ್ನು ನಾಟಿ ಕ್ಷಣ ಎದೆಯನ್ನು ನಡುಗಿಸಿತು. ಮುದುಡಿ ಮಲಗಿದ್ದವಳನ್ನು ನೆಟ್ಟ ನೋಟದಿಂದ  ಸೂಕ್ಷ್ಮವಾಗಿ ಗಮನಿಸಿದರು. ಮನಸ್ಸಿನಲ್ಲೇ, ಎಷ್ಟು ಮುದ್ದಾದ ಹುಡುಗಿ ಎಂದು ಕೊಳ್ಳುತ್ತಿದ್ದಂತೆ ಅವಳ ರವಿಕೆಯ ತೋಳ ಮರೆಯಲ್ಲಿ ಕಟ್ಟಿದ್ದ ಹಸಿರು ತಾಯತ ಕಣ್ಣಿಗೆ ಬಿತ್ತು…ಒಮ್ಮೆ ಅವಳ ತಲೆ ಸವರಿ ಏನೋ ನಿರ್ಧರಿಸಿದವರಂತೆ ನಿಟ್ಟುಸಿರು ಬಿಟ್ಟು ಎದ್ದು ಹೊರ ಬಂದರು.

(ಮುಂದುವರಿಯುವುದು…)

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲಕ್ಷ್ಮಿಯನ್ನು ಕಾಡಿದ ಅನಾರೋಗ್ಯ
(ಈವರೆಗೆ…)

ಮನೆಗೆ ಬಂದ ಲಕ್ಷ್ಮಿ ಮನೆಯ ಮಹಾಲಕ್ಷ್ಮಿಯೇ ಆದಳು. ಮದುವೆಯ ವಯಸ್ಸಿಗೆ ಬಂದ ಚೆಂದುಳ್ಳಿ ಲಕ್ಷ್ಮಿಗೆ ಒಡಾಟದ ಸ್ವಾತಂತ್ರ್ಯವಿರಲಿಲ್ಲ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಿಂದ ಹೊಲಕ್ಕೆ ಹೋದ ಲಕ್ಷ್ಮಿಗೆ ಹೊಳೆಯಲ್ಲಿ ಸ್ನಾನ ಮಾಡುವ ಆಸೆಯಾಯಿತು. ಸ್ನಾನ ಮಾಡುವಾಗ  ಅದೇನೋ ಕೀಟ ಕಚ್ಚಿ ಅಸಾಧ್ಯ ನೋವಿನೊಂದಿಗೆ ಮನೆ ಸೇರಿದ ಲಕ್ಷ್ಮಿಗೆ ಮುಂದೇನಾಯಿತು? ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಏಳನೇ ಕಂತು

ಆ ದಿನ ಶನಿವಾರ, ನಾರಿಪುರದ ಸಂತೆ. ಅವ್ವ ಬೆಳಗ್ಗೆ ಎದ್ದವಳೇ ಕೊಟ್ಟಿಗೆ ಕೆಲಸ ಮುಗಿಸಿ ಲಕ್ಷ್ಮಿಗೆ ರೊಟ್ಟಿ ತಟ್ಟಲು ಹೇಳಿ ಹೊಸ ನಾರಿಪುರದ ಸರ್ಕಲ್ಲಿನಲ್ಲಿ ಕಟ್ಟುವ ಸಂತೆಗೆ ಹೊರಟಳು. ಮನೆಯ ಹತ್ತು ಜನರಲ್ಲದೆ ಹೊಲಕ್ಕೆ ಬರುವ ಆಳುಗಳಿಗೂ ಸೇರಿಸಿ ರೊಟ್ಟಿ ತಟ್ಟಿ, ಬುತ್ತಿ ಕಟ್ಟಿ ಮುಗಿಸಿದ ಲಕ್ಷ್ಮಿಗೆ ಇದ್ದಕ್ಕಿದ್ದಂತೆ ಹೊಟ್ಟೆ ಸೊಂಟ ಎಳೆಯುತೊಡಗಿತ್ತು. ಬಚ್ಚಲು ಮನೆಗೆ ಓಡಿ ಹೋಗಿ ನೋಡಿಕೊಂಡಳು. ಒಳ ಲಂಗವೆಲ್ಲಾ ಕೆಂಪಾಗಿ ಹೋಗಿತ್ತು. ಹೊರಗಾದವರು ಮೂರುದಿನ ಒಳ ಹೋಗುವಂತಿಲ್ಲ. ಲಕ್ಷ್ಮಿ ಸ್ನಾನ ಮುಗಿಸಿ ಬಚ್ಚಲ ಪಕ್ಕದಲ್ಲಿಯೇ ಒಗೆದು ಒಣಗಿ ಹಾಕಿದ್ದ ಗಂಗೆಯ ಒಳ ಲಂಗವನ್ನು ಹಾಕಿಕೊಂಡು ಅಲ್ಲೇ ಇದ್ದ ಅವ್ವನ ಸೀರೆ ಉಟ್ಟಳು.

ಹಿಂದಿನ ಮನೆ ಪಾರ್ವತಿಯೊಂದಿಗೆ ಗದ್ದೆ ಬಯಲ ಕಡೆ ಹೋಗಿದ್ದ ಗಂಗೆ ಅದ್ಯಾವ ಮಾಯದಲ್ಲಿ ಬಂದು ನಿಂತಿದ್ದಳೊ, ರಾಕ್ಷಸಿಯಂತೆ ಲಕ್ಷ್ಮಿಯನ್ನು ಪರಚಿ  “ನನ್ ಲಂಗ ಯಾಕೆ ಹಾಕ್ಕೊಂಡಿದ್ಯೆ ಮೊದ್ಲು ಬಿಚ್ಚ್ಕೊಟ್ಬುಡು” ಎಂದು ಗುದುಮುರಿ ಬಿದ್ದಳು. ಎಂದೂ ಜೋರಾಗಿ ದನಿ ಎತ್ತದ ಲಕ್ಷ್ಮಿ ಪಿಸು ಮಾತಿನಲ್ಲೇ “ ಥೂ… ಆ ಕಡಿಕ್ ಹೋಗು ಗಂಗೂ.. ಮುಟ್ಟುಸ್ಕೋ ಬ್ಯಾಡ. ನನ್ನ ನಾಯಿ ಮುಟ್ಟೈತೆ” ಎಂದು ದೂರ ಸರಿಸಿದಳು. ಗಂಗೆ ಹುಲಿಯಂತೆ ಹಾರಿ “ನನ್ನೇ ನೂಕ್ತಿಯೇನೆ ಇರು ನಿಂಗೆ ಮಾಡ್ತಿನಿ” ಎಂದು ಅವಳ ಮುಂದಲೆ ಹಿಡಿದು ಜಗ್ಗ ತೊಡಗಿದಳು.

ಸಂತೆಯಿಂದ ಆಗಷ್ಟೇ ಒಳ ಬರುತ್ತಿದ್ದ ಅವ್ವ, ಗಂಗೆಯ ಆರ್ಭಟ ಕೇಳಿ ಅಪ್ಪನೊಂದಿಗೆ ಸೀದ ಹಿತ್ತಿಲಲ್ಲಿದ್ದ ಬಚ್ಚಲ ಕಡೆಗೆ ದೌಡಾಯಿಸಿದಳು. ಅಪ್ಪ ಅವ್ವನ ಮುಖ ಕಂಡಿದ್ದೆ ಗಂಗೆ ಮುಗಿಲೇ ಹರಿದು ಬೀಳುವಂತೆ ಅಳಲು ಆರಂಭಿಸಿದಳು. “ಇವ್ಳು ನನ್ನ ನೂಕಿದ್ಲು ಇವಳಿಗೆ ಹೊಡಿ… ಎಂದು ಸಣ್ಣ ಮಗುವಿನಂತೆ ರಚ್ಚೆ ಹಿಡಿದು ಕೂತಳು. ಅವ್ವನ ಯಾವ ಸಮಾಧಾನದ ಮಾತಿಗೂ ಅವಳು ಬಗ್ಗಲಿಲ್ಲ. “ಅಲ್ಲ ಗಂಗು ಹದ್ನಾಕೊರ್ಸ ಆದ್ರು  ಒಳ್ಳೆ ಎಳೇ ಮಗಿನಂಗಾಡ್ತಿಯಲ್ಲೆ” ಎಂದು ಅವ್ವ ಗಂಗೆಯ ತಲೆ ತಿವಿದಳು. ಗಂಗೆಗೆ ಅಷ್ಟೇ ಸಾಕಿತ್ತು ಊರು ಕೇರಿ ಒಂದಾಗುವಂತೆ ಬೊಬ್ಬೆ ಇಡ ತೊಡಗಿದಳು. ಗಟ್ಟಿಯಾಗಿ ಅವಳ ಅಳುವ ಬಾಯಿ ಮುಚ್ಚಿ ಹಿಡಿದ ಅವ್ವ, ಅವಳು ಸಮಾಧಾನವಾಗಲೆಂದು “ಯಾಕವ್ವ ಲಕ್ಷ್ಮು  ಅವಳನ್ನ ನೂಕ್ದೆ ” ಎಂದು ಗಂಗೆಗೆ ಕಾಣದಂತೆ ಕಣ್ಣು ಮಿಟುಕಿಸಿ ಲಕ್ಷ್ಮಿಯ ತಲೆಯ ಮೇಲೆ ಸಣ್ಣಗೆ ತಟ್ಟಿದಷ್ಟೇ, ಇದ್ದಕ್ಕಿದ್ದಂತೆ ಲಕ್ಷ್ಮಿ ಉಸಿರು ಮೇಲೆಳೆದು ಕೊಳ್ಳುತ್ತ  ಧೊಪ್ಪೆಂದು ನೆಲಕ್ಕೆ ಬಿದ್ದಳು. ಇದನ್ನು ಕಂಡು ಅವ್ವನ ಜೀವವೇ ಬಾಯಿಗೆ ಬಂದಂತಾಯಿತು. “ಅಯ್ಯೋ ಹೊಡಿಲಿಲ್ಲ ಬಡಿಲಿಲ್ಲ ಇದೇನಾಗೋಯ್ತು ದೇವರೆ ನನ್ನ ಮಗಿಗೆ” ಎಂದು ಪರದಾಡುತ್ತಾ ತನ್ನ ಸೀರೆಯ ಸೆರಗಿನಿಂದ ಜೋರಾಗಿ ಗಾಳಿ ಹಾಕತೊಡಗಿದಳು. ಅವ್ವ ಗಾಳಿ ಹಾಕಿದಷ್ಟು ಲಕ್ಷ್ಮಿ ಉಸಿರು ಕಟ್ಟುವುದು ಜಾಸ್ತಿ ಆಗುತ್ತಲೇ ಹೋಯಿತು. ಅಪ್ಪ ಗಾಳಿ ಹಾಕುವುದನ್ನು ನಿಲ್ಲಿಸಲು ಹೇಳಿ ಒಳಕೋಣೆಗೆ ಎತ್ತಿಕೊಂಡು ಬಂದು ನೀರು ಕುಡಿಸಿದರು. ಕುಡಿಸಿದ ನೀರೆಲ್ಲವೂ ಹೊರ ಬಂದಿತು. ತಡ ಮಾಡದೆ ಗಾಡಿ ಕಟ್ಟಿ ಕೊಂಡು ಮಾದಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದರು.

ಪರೀಕ್ಷಿಸಿದ ಡಾಕ್ಟರ್ ಮೊದಲಿಗೆ, ಲಕ್ಷ್ಮಿಯ ಒಣಗಿ ಕೊರಡಂತಾಗಿದ್ದ ಬಾಯಿಗೆ ಒದ್ದೆಯ ಹತ್ತಿಯನ್ನು ಇರಿಸಿದರು. ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಿದರು. ಯಾವ ಸಣ್ಣ ಸಮಸ್ಯೆಯೂ ದೇಹದಲ್ಲಿ ಕಾಣಲಿಲ್ಲ. “ಹಿಂದೆ ಎಂದಾದರೂ ನಾಯಿ ಕಚ್ಚಿತ್ತಾ” ಡಾಕ್ಟರ್  ಪ್ರಶ್ನಿಸಿದರು “ಹತ್ತು ವರ್ಸುದ್ ಹಿಂದೆ ಕಚ್ಚಿತ್ತು ಸ್ವಾಮಿ” ಅವ್ವ ಉತ್ತರಿಸಿದಳು. “ಬಹುಶಃ ಅದು ಈಗ ಸಮಸ್ಯೆ ಮಾಡುತ್ತಿರಬಹುದು” ಎಂದು ಉತ್ತರಿಸಿ ಒಂದು ಇಂಜೆಕ್ಷನ್ ಹಾಕಿ ಸಣ್ಣ ಬಾಟಲಿಯಲ್ಲಿ ಕೆಂಪನೆಯ ಸಿರಪ್ ಕೊಟ್ಟು ಇದನ್ನು ಮೂರುಹೊತ್ತು ಕುಡಿಸಿ ನೋಡೋಣ ಸರಿಯಾಗಬಹುದು ಎಂದರು. ಗಾಳಿ ನೀರೆ ಒಳಹೋಗದಿದ್ದ ಮಗಳು ಈ ಔಷಧಿ ಕುಡಿಸಿದ ಕೂಡಲೆ ಸರಿಯಾಗಿ ಬಿಡುತ್ತಾಳೆ ಎಂದು ಅವನಿಗೆ ಅನ್ನಿಸಲಿಲ್ಲ.

ಅವ್ವ ಏನೊಂದು ಮಾತನಾಡದೆ ಅಪ್ಪನನ್ನು ಲಕ್ಷ್ಮಿ ಹತ್ತಿರವೇ ಕೂರಲು ಹೇಳಿ “ಈಗ ಬಂದ್ಬುಡ್ತಿನಿ ಇರಿ” ಎಂದು  ಹೊರ ಹೊರಟಳು. ತ್ರಾಣವೇ ಇಲ್ಲದೆ ಏದುಸಿರು ಬಿಡುತ್ತಾ ನರಳುತ್ತಿದ್ದ ಲಕ್ಷ್ಮಿ ತಕ್ಷಣವೇ ಬಿರುಸಾಗಿ ಅವ್ವನನ್ನು ಜಗ್ಗಿ ಎಳೆದು “ನೀನು ಆ ಮಂತ್ರವಾದಿತಕ್ಕೆ ಸಾಸ್ತ್ರ ಕೆಳಕ್ಕೆ ಹೋಯ್ತಿದ್ದಿ ಅಂತ ನನಗೆ ಗೊತ್ತು. ಸುಮ್ನೆ ಅಲ್ಲೆಲ್ಲಾ ಹೋಗಿ ದುಡ್ಯಾಕೆ ಕಳ್ಕೊತ್ತಿಯ. ಇದು ಎಲ್ಲೂ ಉಸಾರಾಗೋ ಕಾಯಿಲೆ ಅಲ್ಲ. ಸುಮ್ನೆ ನನ್ನ ಮನೆ ಕರ್ಕೊಂಡು ಹೋಗಿ” ಎಂದಳು. ಅವ್ವ ಬೆಕ್ಕಸ ಬೆರಗಾಗಿ ಮಗಳನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದಳು. ಹುಟ್ಟಿದಾಗಿನಿಂದಲೂ ಲಕ್ಷ್ಮಿ ಅಷ್ಟು ಗಡುಸಾಗಿ ಬಿರುಸಿನಿಂದ ಮಾತನಾಡಿದ್ದೇ ಇಲ್ಲ. ಲಕ್ಷ್ಮಿ ಎಂದರೆ ಬೆಣ್ಣೆ ಮುರುಕು ಎಂಬಂತಿದ್ದಳು. ಅಷ್ಟು ಮೃದು ಸ್ವಭಾವದ ಮಗಳ ವರ್ತನೆ  ಕ್ಷಣದಲ್ಲಿ ಬದಲಾದದ್ದನ್ನು ಕಂಡು ಅವ್ವ ಕಸಿವಿಸಿ ಗೊಂಡಳು. “ಅಲ್ಲ ಮಗ ನಾನು ಅಲ್ಲಿಗೆ ಹೋಯ್ತಿದ್ದೀನಿ ಅಂತ ನಿನಗೆ ಹೆಂಗ್ ಗೊತ್ತಾಯ್ತವ್ವ” ಎಂದು ಕೇಳಿದಳು. “ನನಗೆ ಎಲ್ಲ ಗೊತ್ತಾಯ್ತದೆ ಸುಮ್ನೆ ತಲೆ ತಿನ್ಬೇಡ. ನಡಿರಪ್ಪ ನನ್ನ ಬಿರ್ನೆ ಮನೆ ಕರ್ಕೊಂಡು ಹೋಗಿ” ಎಂದು ಚಂಗನೆ ಹಾರಿ ಗಾಡಿ ಹತ್ತಿ ಕುಳಿತಳು.

ಅಪ್ಪನಿಗೂ ಕೂಡ ಮಗಳ ವರ್ತನೆ ಬಹಳ ವಿಚಿತ್ರವಾಗಿಯೇ ಕಂಡಿತು. ಆದರು ಹೇಗೋ ಮಗಳು ತುಸು ಗೆಲುವಾದಳಲ್ಲ ಎಂದು ಸಮಾಧಾನವೂ ಆಯಿತು. “ಸರಿ ಕನವ್ವ ಹಂಗಾದ್ರೆ ಈ ಹಾಲಿನ್ ಜೊತೆ ಅಜ್ಕೊಂಡು ಒಂದೆರಡು ಬ್ರೆಡ್ ಚೂರ್ ತಿಂದ್ಬುಡು ಬೇಗ ಹೋಗ್ಬುಡನ” ಎಂದು ಲಕ್ಷ್ಮಿ ಯನ್ನು ಪುಸಲಾಯಿಸಿದ ಅಪ್ಪ. ಒಂದು ಸಾರಿ ಈ ಜಾಗದಿಂದ ಹೋದರೆ ಸಾಕೆಂದು ತವಕಿಸುತ್ತಿದ್ದ ಲಕ್ಷ್ಮಿ, ತನಗೆ ಏನೂ ಆಗಿಯೇ ಇಲ್ಲ ಎಂಬಂತೆ ಅವ್ವ ಕೊಟ್ಟ ಬ್ರೆಡ್ಡಿನ ಚೂರು ಮತ್ತು ಹಾಲನ್ನು ಒಂದೇ ಗುಕ್ಕಿಗೆ ಮುಕ್ಕಿ ಸೆರಗಿನಿಂದ ಬಾಯೊರೆಸಿ ಕೂತಳು. “ಸಧ್ಯ ಒಂದು ಕಂಟ್ಕ ಹರಿತು ಹೆಂಗೊ ಮಗ ಸರಿಯಾಯ್ತಲ್ಲ” ಎಂದು ಅಪ್ಪ ಅವ್ವ ನಿಟ್ಟುಸಿರು ಬಿಟ್ಟರು.

ನಿಧಾನವಾಗಿ ಕತ್ತಲು ಕವುಚಿಕೊಳ್ಳಲು ಆರಂಭವಾದ್ದರಿಂದಾಗಿ ಅಪ್ಪ  ಮಾದಲಾಪುರ ಪಟ್ಟಣ ದಾಟಿದ ಕೂಡಲೇ ಗಾಡಿಯ ವೇಗವನ್ನು ತುಸು ಹೆಚ್ಚಿಸಿದ. ಗಾಡಿಯ ವೇಗ ಹೆಚ್ಚಿದಂತೆ ಗಾಳಿ ಬೀಸುವ ಬಿರುಸು ಕೂಡ ಜಾಸ್ತಿಯಾಯಿತು. ಗಾಳಿಯನ್ನು ಒಳಗೆಳೆದು ಕೊಳ್ಳಲಾರದೆ ಲಕ್ಷ್ಮಿ ಮತ್ತೆ ಉಸಿರುಕಟ್ಟಲು ಆರಂಭಿಸಿದಳು. ಅವ್ವ ಗಾಬರಿಯಾಗಿ ಮತ್ತೆ ಗಾಳಿ ಬೀಸಿ ನೀರು ಕುಡಿಸಲು ಮುಂದಾದಳು.   ಲಕ್ಷ್ಮಿಗೆ ಅದೆಲ್ಲಿತ್ತೊ ಅಷ್ಟು ಬಲ ಇನ್ನೇನು ಅವ್ವ ಆ ಎತ್ತಿನ ಗಾಡಿಯಿಂದ ಕೆಳಗೆ ಉರುಳೇ ಬಿಟ್ಟಳು  ಎನ್ನುವಂತೆ ಅವ್ವನನ್ನು ಬಲವಾಗಿ ಹಿಂದೆ ನೂಕಿದಳು. ಅಪ್ಪ ಗಕ್ಕನೆ ಲಗಾಮು ಹಾಕಿ ಒಂದು ಬದಿಗೆ ಗಾಡಿ ನಿಲ್ಲಿಸಿ “ಯಾಕವ್ವ ಹಿಂಗ್ ಮಾಡ್ದೇ ನಿಮ್ಮವ್ವ ಈಗ ಕೆಳಿಕ್ ಬಿದ್ದೋಗ್ ಬುಡೋಳಲ್ಲ ಮಗ” ಎಂದು ಹೇಳಿ ಲಕ್ಷ್ಮಿಯ ತಲೆ ನೇವರಿಸಿದ.

ಅಪ್ಪನ ಬೆರಳು ಸೋಕುತ್ತಿದ್ದಂತೆ ತುಸು ಎಚ್ಚರಗೊಂಡ ಲಕ್ಷ್ಮಿ “ಅಯ್ಯೋ… ಅವ್ವುನ್ನ ನೂಕ್ಬುಟ್ನ. ನಂಗ್ ಗೊತ್ತೇ ಆಗ್ಲಿಲ್ವಲ್ರಪ್ಪ. ಥೂ ನಾನೊಬ್ಳು ಹಾಳಾದೋಳು, ಏನ್ ಬಂದೈತೋ ಕಣೆ. ನಿಂಗೆನಾದ್ರು ನೋವು ಮಾಡಿದ್ನೆನವ್ವ ಎಂದು ಕಣ್ಣಿನಲ್ಲಿ ನೀರು ತುಂಬಿ ಕೊಂಡು ಅವ್ವನ ಮೈಕೈ ತಡವಿದಳು. ಅವ್ವ “ನನಗೇನು ಆಗಿಲ್ಲ ಕನವ್ವ.. ನಿನಗೇನಾಯ್ತವ್ವ ಲಕ್ಷ್ಮು ಯಾಕಿಂಗಾಡ್ತಿದ್ದಿ” ಎಂದು ಮಗಳನ್ನು ಗಟ್ಟಿಯಾಗಿ ತಬ್ಬಿಹಿಡಿದು ಅಳಲು ಆರಂಭಿಸಿದಳು. “ಅಯ್ಯೋ ನನಗೇನಾಗೈತವ್ವ ನಿವಿಬ್ರು ನನ್ನ ರಾಣಿ ರಾಣಿ ನೊಡ್ಕೊಂಡಂಗೆ ನೋಡ್ಕೊತಿರುವಾಗ. ಅಪ್ಪ ಒಂಚೂರು ನಿಧಾನವಾಗೇ ಗಾಡಿ ಓಡ್ಸಿ ಯಾಕೋ ಹೆದ್ರಿಕೆ ಆಯ್ತದೆ” ಎಂದು ಹೇಳಿ ಅವ್ವನ ತೊಡೆಯನ್ನು ಗಟ್ಟಿಯಾಗಿ ತಬ್ಬಿ ಮಲಗಿದಳು. ಹಾಗೂ ಹೀಗೂ ಗಾಡಿ ಹಳೇ ನಾರಿಪುರದ ಹೆಬ್ಬಾಗಿಲ ತಿರುವಿನ ಬಳಿ ಬಂತು.

ಆ ತಿರುವಿಗೆ  ಮಾರು ದೂರದಲ್ಲಿಯೇ ಇದ್ದ ಮಸೀದಿಯಿಂದ ಹೊರ ಬಂದ ಶರೀಫ ಕಾಕಾ ಅಪ್ಪನನ್ನು ಕಂಡು “ಓಹೋ ಬೋಪಣ್ಣ ಸಂಸಾರ ಸಮೇತ ಇಷ್ಟೊತ್ತಿನಲ್ಲಿ ಬರ್ತಿದ್ದೀರ ಏನ್ ಸಮಾಚಾರ ಎಂದು ವಿಚಾರಿಸಿದರು. ಅಪ್ಪ ಲಕ್ಷ್ಮಿಗೆ ಹುಷಾರಿಲ್ಲವೆಂದು ನಡೆದ ಘಟನೆಯನ್ನೆಲ್ಲಾ ಹೇಳಿದ. ಶರೀಫ ಕಾಕಾ ಗಾಡಿಯ ಹಿಂಬದಿಗೆ ಬಂದು ಅವ್ವನ ತೊಡೆ ಮೇಲೆ ಕಣ್ಣು ಮುಚ್ಚಿ ಮಲಗಿದ್ದ ಲಕ್ಷ್ಮಿಯ ತಲೆ ನೇವರಿಸಿದರು. ಕರೆಂಟು ಹೊಡೆದಂತೆ ಅದುರಿ ಕಣ್ಣು ಬಿಟ್ಟ ಲಕ್ಷ್ಮಿ ತಟ್ಟನೆ ತುಸು ದೂರ ಹಾರಿ ಕೂತು ಕೋಪದಿಂದ “ಯಾಕಯ್ಯ ನನ್ನ ತಲೆ ಮುಟ್ಟ್ದೆ ಒಳ್ಳೆ ಹಾವು ಕುಕ್ದಂಗೈತಲ್ಲ. ಯಾವನಪ್ಪ ಇವಯ್ಯ ಮೊದ್ಲು ಇಲ್ಲಿಂದ ಕಳ್ಸಿ ಒಳ್ಳೆ ದಯ್ಯ ನಿಂತಂಗೆ ನಿಂತಿರದು ನೋಡು” ಎಂದು ಹೇಳಿ ಅವ್ವನ ಬೆನ್ನ ಮರೆಗೆ ಸರಿದಳು. ಅವ್ವ “ಅಯ್ಯೋ ಸರಿಯಾಗಿ ನೋಡು ಮಗ ಅದು ನಮ್ಮ ಸರೀಫ್ ಕಾಕಾ ಅಲ್ವೆನವ್ವ” ಎಂದು ಹೇಳಿ ಶರೀಫ ಕಾಕಾನ ಕಡೆ ತಿರುಗಿ “ಮಗಿಗೆ ಮಬ್ಬಲಿ ಸರಿಯಾಗಿ ಕಂಡಿಲ್ಲ ಕಾಕಾ ಬೇಜಾರ್ ಮಾಡ್ಕಬೇಡಿ” ಎಂದಳು. ಅಪ್ಪನ ವಯಸ್ಸಿನವರೇ ಆಗಿದ್ದ ಮೃದು ಸ್ವಭಾವದ ಕಾಕಾ ತಣ್ಣನೆಯ ದನಿಯಲ್ಲಿ ಇರ್ಲಿ ಅಕ್ಕ ನಮ್ಮ ಬೇಟಿ ಅಲ್ವ ಬೇಜಾರು ಎಂತದು. ಬೇಗ ಹುಶಾರಾಗು ಬೇಟಿ” ಎಂದು ಹೇಳಿ ಅಪ್ಪನ ಹತ್ತಿರ ಬಂದು, “ಬೋಪಣ್ಣ ನಿಮ್ಮ ಜೊತೆ ಮಾತಾಡೋದಿದೆ ಸ್ವಲ್ಪ ನನ್ನ ಜೊತೆ ಬನ್ನಿ” ಎಂದು ಕರೆದು ಕೊಂಡು ಮಸೀದಿ ಕಡೆಗೆ ಹೆಜ್ಜೆ ಹಾಕಿದರು.

ಚಿಕ್ಕ ವಯಸ್ಸಿನಿಂದಲೂ ಲಕ್ಷ್ಮಿಯನ್ನು ಎತ್ತಾಡಿ ಬೆಳೆಸಿದ್ದ ಶರೀಫ ಕಾಕಾನಿಗೆ ಈಗ ಯಾವುದೇ ಅನುಮಾನ ಉಳಿದಿರಲಿಲ್ಲ. ಅಪ್ಪನನ್ನು ಮಸೀದಿಯ ಹೊರಗೆ ನಿಲ್ಲಿಸಿ ಒಳಹೋದ ಕಾಕಾ ಒಂದು ಹಸಿರು ತಾಯತದೊಂದಿಗೆ ಹೊರ ಬಂದರು “ನೋಡಿ ಬೋಪಣ್ಣ ಬೇಟಿದು ಆಸ್ಪತ್ರೆ ಕಾಯಿಲೆ ಅಲ್ಲ. ಅದು ಕೆಟ್ಟ ಗಾಳಿ  ಸಮಸ್ಯೆ. ಗಾಬ್ರಿಯಾಗ್ಬೇಡಿ ನಾನು ಅವಳನ್ನ ಹುಷಾರ್ ಮಾಡ್ತಿನಿ, ಈಗ ಹೋಗಿ ಅವಳನ್ನ ಇಲ್ಲಿಗೆ ಕರ್ಕೊಂಡು ಬನ್ನಿ ಮಂತ್ರ ಹಾಕಿರೋ ಈ ತಾಯ್ತಿನ ಕಟ್ಟ್ಕೊಡ್ತಿನಿ. ಎಂದು ಹೇಳಿ ಅಪ್ಪನಿಗೆ ಧೈರ್ಯ ತುಂಬಿ ಕಳುಹಿಸಿದರು. ಅಪ್ಪ “ಅಯ್ಯೋ ದೇವರೆ ನನ್ನ ಮಗ ಬೇಗ ಉಸಾರಾದ್ರೆ ಸಾಕಪ್ಪ” ಎಂದು ಮಸೀದಿಯ ಮುಂಬಾಗಿಲಿಗೆ ಅಡ್ಡ ಬಿದ್ದು ಗಾಡಿಯ ಕಡೆ ಬಂದ.

ಲಕ್ಷ್ಮಿ ಅಪ್ಪ ಅವ್ವನ ಯಾವ ಮಾತಿಗೂ ಜಗ್ಗಲಿಲ್ಲ. ಕಲ್ಲು ಬಂಡೆಯಂತೆ ಕೂತ ಜಾಗದಿಂದ ಮಿಸುಕಾಡದೆ ಗಟ್ಟಿಯಾಗಿ ಕೂತು “ಮೊದ್ಲು ನನ್ನ ಈ ಜಾಗದಿಂದ ಕರ್ಕೊಂಡು ಹೋದ್ರೆ ಸರಿ” ಎಂದು ಆರ್ಭಟಿಸ ತೊಡಗಿದಳು. ವಿಧಿ ಇಲ್ಲದೆ ಶರೀಫ ಕಾಕಾನೇ ಅವಳ ಬಳಿ ಬಂದು  ಕುತ್ತಿಗೆಗೆ ತಾಯತ ಕಟ್ಟಲು ಮುಂದಾದರು. ಲಕ್ಷ್ಮಿ ಕುತ್ತಿಗೆ ಮುಂಚಾಚಲು ಒಪ್ಪಲೇ ಇಲ್ಲ. ಕೊನೆಗೆ ಅವ್ವ ಅತ್ತು ಕರೆದು ಅವಳ ಮನವೊಲಿಸಿ ಎಡ ತೋಳಿಗೆ ತಾಯತವನ್ನು ಕಟ್ಟಿಸಿ ನಿಟ್ಟುಸಿರು ಬಿಟ್ಟಳು. ಕಾಕಾ ಯಾವ ಕಾರಣಕ್ಕೂ ಈ ತಾಯತ ಬಿಚ್ಚಿ ಹೋಗದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿ, ಗಾಡಿ ಮರೆಯಾಗುವವರೆಗೆ ನೋಡುತ್ತಾ “ಯಾ ಅಲ್ಲಹ್” ಎಂದು ಆಕಾಶವನ್ನೊಮ್ಮೆ ದಿಟ್ಟಿಸಿ ಮನೆಗೆ ಹೋಗಲು ಮನಸ್ಸಾಗದೆ ಮತ್ತೆ ಮಸೀದಿ ಕಡೆಗೆ ಹೆಜ್ಜೆ ಹಾಕಿದರು.

(ಮುಂದುವರೆಯುವುದು…)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿದಿರು ಮೆಳೆಯೊಳಗೆ…
(ಈವರೆಗೆ…)

ಕೊನೆಗೂ ಒಲ್ಲದ ಮನಸಿನಿಂದಲೇ ಗಂಗೆಯ ಮದುವೆಗೆ ಒಪ್ಪಿಗೆ ನೀಡುತ್ತಾನೆ. ಮದುವೆಗೆ ಹಣ ಹೊಂದಿಸುವುದು ಕಷ್ಟವಾಗಿ ಮನೆಯ ಪ್ರೀತಿಯ ಹಸುವನ್ನು ಮಾರಬೇಕಾಗಿ ಬರುತ್ತದೆ. ಆಗ ಗಂಗೆಗೂ ಚಂದ್ರಹಾಸನಿಗೂ ಮಾತಿಗೆ ಮಾತು ಬೆಳೆದು ಆತ ಗಂಗೆಯ ಮೇಲೆ ಕೈ ಮಾಡುತ್ತಾನೆ. ತಕ್ಷಣವೇ ಪ್ರವೇಶಿಸಿದ ಅಮ್ಮ ಗಂಗೆಯ ಪರ ವಹಿಸಿ ಮಾತಾಡಿದಾಗ ಅಪ್ಪನ ನೆನಪುಗಳು ಲಕ್ಷ್ಮೀ ಯ ಹಿಂದಕ್ಕೋಡಿದವು. ಯಾರೀ ಲಕ್ಷ್ಮೀ ? ಓದಿ.. ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆ ಅಂಕಣದ ಐದನೆಯ ಕಂತು.

ಸಾಕು ಮಗಳು “ಲಕ್ಷ್ಮೀ” ಅವ್ವನ ಮಡಿಲು ಸೇರಿದಾಗ ಮೂರು ದಿನದ ಹಸುಳೆ. ಆಗ ಅವ್ವ ಎರಡನೇ ಮಗ ಗಿರಿಧರನ ತುಂಬು ಬಸುರಿ. ಹೆರಿಗೆ ಆಗಲೋ ಈಗಲೋ ಎನ್ನುವಂತಿದ್ದಳು. ಸಾಮಾನ್ಯವಾಗಿ ಪ್ರತಿ ದಿನ ಮುಸ್ಸಂಜೆ ಆ ಬೀದಿಯ ಹೆಂಗಸರೆಲ್ಲಾ ಮಾತಾಡಿಕೊಂಡು ಒಟ್ಟಿಗೆ ಮೈಲು ದೂರದ ಹೊಳೆಗೆ ಹೋಗಿ, ಬಟ್ಟೆ ಪಾತ್ರೆಯ ಕೆಲಸ ಮುಗಿಸಿ ನೀರು ಹೊತ್ತು  ತರುತ್ತಿದ್ದುದು ವಾಡಿಕೆ. ಆ ದಿನ ಪುಟ್ಟ ಚಂದ್ರಹಾಸ ಆಟವಾಡುತ್ತಾ ನೀರಿನ ಗಡಿಗೆ ಎಳೆದು ಬೀಳಿಸಿದ್ದರಿಂದಾಗಿ ಮನೆಯಲ್ಲಿ  ಕುಡಿಯಲು ಹನಿಯೂ ನೀರಿಲ್ಲದಂತಾಯ್ತು. ಅನಿವಾರ್ಯವಾಗಿ ಅವ್ವ ಆ ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನಲ್ಲೇ ನೀರು ತರಲೆಂದು ಬಿಂದಿಗೆ ಹಿಡಿದು ಒಬ್ಬಳೇ ಹೊಳೆಯ ಕಡೆ ನಡೆದಳು.

ಅಲ್ಲಿ ನೀರ ಶಬ್ದದ ಹೊರತಾಗಿ  ಒಂದು ನರ ಪಿಳ್ಳೆಯ ಸದ್ದು ಸುಳಿವೂ ಇರಲಿಲ್ಲ. ಹಳೇ ನಾರಿಪುರದ ಜನ, ಮಧ್ಯಾಹ್ನದ ಹೊತ್ತು ಅದರಲ್ಲೂ ರಣ ಬಿಸಿಲು ರಾಚುವ ಸಮಯದಲ್ಲಿ ನೀರೊಳೆಯ ಹಾದಿಯಲ್ಲಿ ಕೆಟ್ಟ ಗಾಳಿಯ ಸುಳಿದಾಟವಿರುತ್ತದೆ ಎಂದು ಬಲವಾಗಿ ನಂಬಿದ್ದರು. ಹಾಗಾಗಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನಾಗಲಿ, ತುಂಬು ಬಸುರಿ, ಬಾಣಂತಿಯರನ್ನಾಗಲಿ ಆ ಸಮಯದಲ್ಲಿ ಹೊಳೆಯ ಕಡೆ ಸುಳಿಯದಂತೆ ನೋಡಿಕೊಳ್ಳುತ್ತಿದ್ದರು.

ಈ ಮನೆಯಲ್ಲೋ ಒಳಗಿನ ಎಲ್ಲಾ ಕೆಲಸವನ್ನು ಅವ್ವನೆ ನಿಭಾಯಿಸ ಬೇಕಿತ್ತು. ಪಕ್ಕದ ಮನೆಯಲ್ಲಿಯೇ ಅತ್ತೆ, ಮಾವ, ನಾದಿನಿ, ನಾದಿನಿಯ ಮಕ್ಕಳಿದ್ದರೂ ಕೂಡ ಅವರೊಂದಿಗಿನ ಸಂಬಂಧವೂ ಒಡೆದು ಹೋಗಿತ್ತು. ಇನ್ನು ಅಪ್ಪ ಬೆಳಿಗ್ಗೆ ರೊಟ್ಟಿ ಕಟ್ಟಿಕೊಂಡು ಹೊಲ ಹೊಕ್ಕರೆ ಬರುತ್ತಿದ್ದುದು ಸೂರ್ಯ ಮುಳುಗುವ ಹೊತ್ತಿಗೆ. ಹಾಗಾಗಿ ಅವ್ವ, ಎರಡು ವರ್ಷದ ಹಸುಳೆ ಚಂದ್ರಹಾಸನನ್ನು ಎದುರು ಮನೆಯ ತಿಮ್ಮಜ್ಜಿ ಕೈಗಿಟ್ಟು ಹೊಳೆಗೆ ಬಂದಿದ್ದಳು. ಆ ನದಿಯ ನೀರವತೆ ಅವ್ವನನ್ನು ತುಸು ಕನಲಿಸಿತಾದರು, ಬಿಸಿಲ ಬೇಗೆಯಲ್ಲಿ ನಡೆದು ಬಂದ ಅವ್ವನ ಕಾಲು ನೀರಿಗೆ ತಾಕಿದ ಕೂಡಲೇ ಅವಳಲ್ಲಿ ಹೊಸ ಜೀವ ಸಂಚಾರವಾದಂತಾಯಿತು. ನಿಧಾನವಾಗಿ ಕೈಕಾಲು ಮುಖ ತೊಳೆದು, ಬಾಯಿ ಮುಕ್ಕಳಿಸಿ ಉಗಿದು, ಎರಡು ಬೊಗಸೆ ನೀರು ಕುಡಿದು ದೇಹ ತಂಪಾಗಿಸಿ ಕೊಂಡಳು. ತಾಮ್ರದ ಬಿಂದಿಗೆಯನ್ನು ಹುಣಸೆ ಹಾಕಿ ತಿಕ್ಕಿ ತೊಳೆದು ಇನ್ನಷ್ಟು ತಳತಳಿಸುವಂತೆ ಮಾಡಿದಳು.ಇನ್ನೇನು ನೀರು ಮೊಗೆಯಬೇಕೆಂದು ಬಗ್ಗಿದಳು. ಅಷ್ಟರಲ್ಲಿ ಪಕ್ಕದ ಬಿದಿರು ಮೆಳೆಯಿಂದ ಚಿಟ್ಟನೆ ಚೀರಿದ ಹಸುಗೂಸಿನ ದನಿ ಮಿಂಚಿನಂತೆ ಅವ್ವನ ಕಿವಿಗೆ ಬಡಿಯಿತು. ಕ್ಷಣ ಅವ್ವನ ಎದೆ ಝಲ್ ಎಂದಿತ್ತು. ಸುಧಾರಿಸಿಕೊಂಡು ಸುತ್ತಲೂ ನೋಡಿದಳು. ಯಾರು ಕಾಣಲಿಲ್ಲ. ಮತ್ತೆ ಮತ್ತೆ ಉಸಿರು ಕಟ್ಟಿ ಅಳುವ ಮಗುವಿನ ದನಿ ಜೋರಾಗುತ್ತಲೇ ಇತ್ತು. ಅವ್ವ ಧೈರ್ಯ ಮಾಡಿ ಬಿಂದಿಗೆಯನ್ನು ಒಂದು ಬದಿಗೆ ಕುಕ್ಕಿ ಬಿದಿರು ಮೆಳೆ ಕಡೆಗೆ ಹೆಜ್ಜೆ ಹಾಕಿದಳು. ಅಲ್ಲಿ ಅನತಿ ದೂರದಲ್ಲಿ ತಲೆಗೆ ಮುಸುಕು ಹಾಕಿ ಕುಳಿತಿದ್ದ ಹೆಣ್ಣೊಬ್ಬಳ ಬೆನ್ನು ಕಾಣಿಸಿತು. ಅವ್ವನಿಗೆ ಒಳಗೊಳಗೆ ಅಂಜಿಕೆ. ಇದು ನಿಜಕ್ಕೂ ಹೆಂಗಸೋ ಅಥವಾ ಹೆಣ್ಣಿನ ರೂಪದ ದಯ್ಯವೋ ಎಂದು. ಅನುಮಾನಿಸುತ್ತಲೇ ಆ ಮಗುವಿನ ಅಳು  ಕೇಳಲಾರದೆ ಹತ್ತಿರ ಹೋದಳು. ಆ ಹೆಂಗಸನ್ನು ನೋಡಿ ಅವ್ವ ಕ್ಷಣ ಗರಬಡಿದವಳಂತಾದಳು. ನೋಡಲು ಕೆಂಪಗೆ ಲಕ್ಷಣವಾಗಿದ್ದ ಆ ಹೆಂಗಸು ಕಣ್ಣೀರು ಸುರಿಸುತ್ತಾ, ಆ ಎಳೇ ಹಸುಳೆಯ ಕತ್ತನ್ನು ಬಲವಾಗಿ ಹಿಸುಕ ತೊಡಗಿದ್ದಳು.

ಬಿರುಸಾಗಿಯೇ ಆ ಹೆಂಗಸಿನ ಬೆನ್ನಿಗೆ  ಗುದ್ದಿದ ಅವ್ವ ಅವಳ ಕೈಯಿಂದ ಕೆಂಪಾಗಿ ಗುಂಡು ಗುಂಡಾಗಿದ್ದ ಆ ಮೂರು ದಿನದ ಹಸುಳೆಯನ್ನು ಕಸಿದು ಕೊಂಡಳು. ಉಸಿರು ತಿರುಗಿಸಿ ಕೊಳ್ಳಲಾರದೆ ಒದ್ದಾಡುತ್ತಿದ್ದ ಆ ಹಸುಳೆಯ ನೆತ್ತಿ ಉರುಬಿ ಎದೆ, ಬೆನ್ನು, ಅಂಗಾಲುಗಳನ್ನು ಬಿರುಸಾಗಿ ಉಜ್ಜಿದಳು. ಸ್ವಲ್ಪ ಸಮಯದ ನಂತರ ಮಗು ಸುಧಾರಿಸಿಕೊಂಡಿತು. ತಲೆತಗ್ಗಿಸಿ ಕುಳಿತಿದ್ದ ಆ ಹೆಂಗಸಿನ ಕೂದಲು ಜಗ್ಗಿ ಮೇಲೆತ್ತಿದಳು. “ನಿನಗೇನ್ ಬಂದದೆ ಮುಂಡೆದೆ ದೊಡ್ರೋಗ. ಈ ಅರಿದ್ ಮಗಿನ್ ಜೀವ ತೆಗಿತಿದಿಯಲ್ಲಾ. ನೀನೇನು ಮನ್ಸೆನೋ ರಾಕ್ಷಸಿಯೋ” ಎಂದು ಜೋರು ಮಾಡಿದಳು. ಅವ್ವನ ಕಾಲಿನ ಮೇಲೆ ಬೋರಲು ಬಿದ್ದು ಗೊಳೋ ಎಂದು ಅಳತೊಡಗಿದಳು ಆ ಹೆಂಗಸು. “ಈ ಮಗಿನ್ ಎತ್ಕೊಂಡು ನಮ್ಮ ಹಟ್ಟಿಗೋದ್ರೆ, ನಮ್ಮ ಕುಲದವರು ನನ್ನ ಕೊಂದುಬಿಡ್ತಾರೆ ಕಣವ್ವ. ನಿನ್ನ ದಮ್ಮಯ್ಯ ನನ್ನ್ ಹಿಂದು ಮುಂದು ಏನು ಕೇಳ್ಬೇಡ ಎಂದು ಗೋಗರೆದುಕೊಂಡಳು. ಹೆತ್ತ ಮೂರು ದಿನದಿಂದ ಈ ಮಗಿನ ಏನು ಮಾಡಬೇಕು ಅಂತ ಗೊತ್ತಾಗದೆ ಒದ್ದಾಡಿ ಒದ್ದಾಡಿ ಇವತ್ತು ಒಂದು ನಿರ್ಧಾರಕ್ಕೆ ಬಂದು ಇಲ್ಲಿಗೆ ಬಂದೆ ಎಂದಳು. ತಿಮ್ಮಜ್ಜಿ ಬಳಿ ಮಗುವನ್ನು ಬಿಟ್ಟು ಬಂದಿದ್ದ ಅವ್ವನೂ ಮನೆ ಸೇರುವ ಧಾವಂತದಲ್ಲಿದ್ದಳು. ಹಾಗಾಗಿ ಯಾವುದನ್ನು ಕೆದಕಿ ಕೇಳುವ ಉತ್ಸಾಹವೂ ಅವಳಿಗಿರಲಿಲ್ಲ. “ಸರಿ ಈ ಮಗಿನ ಚಿಂತೆ ಬುಟ್ಟು ಎಲ್ಲಾದ್ರು  ಬದಿಕೋ ಹೋಗು. ಇದಿನ್ನು ನನ್ನ ಕೂಸು ಇನ್ಯಾವತ್ತೂ ಹುಡಿಕ್ಕೊಂಡು  ಬರಕೂಡ್ದು ಗೊತ್ತಾಯ್ತಾ” ಎಂದು ಹೇಳಿ ತಲೆಯ ಮೇಲೆ ತುಂಬಿದ ಬಿಂದಿಗೆ ಹೊತ್ತು  ಮಡಿಲಿಗೆ ಮಗುವನ್ನು ಕಟ್ಟಿಕೊಂಡು ಮನೆಯ ದಾರಿ ಹಿಡಿದಳು.

ತಮ್ಮ ತಮ್ಮ ಮನೆಯ ಬಾಗಿಲಲ್ಲಿ ಕುಳಿತು, ನಿಂತು, ಅವರಿವರ ಸುದ್ದಿ ಸಮಾಚಾರಗಳಲ್ಲಿ ಮುಳುಗಿ ಹೋಗಿದ್ದ ಹೆಂಗಸರು ತಲೆಯ ಮೇಲೆ ತುಂಬಿದ್ದ ಬಿಂದಿಗೆ, ಮಡಿಲಲ್ಲಿ ರಚ್ಚೆ ಹಿಡಿದು ಅಳುತ್ತಿರುವ ಹಸು ಗೂಸು, ತುಂಬಿ ನಿಂತಿದ್ದ ಬಸುರು ಹೊತ್ತು  ನಿಧಾನವಾಗಿ ನಡೆದು ಬರುತ್ತಿದ್ದ ಅವ್ವನನ್ನು ಕಂಡು ದಂಗು ಬಡಿದಂತಾದರು. ದಂಡುಗಟ್ಟಿ ಅವ್ವನ ಬಳಿ ಓಡಿ ಬಂದರು. ಹೆರಿಗೆ ಆಗೋಯ್ತ, ಎಲ್ಲಾಯಿತು, ಹೇಗಾಯ್ತು, ಜೊತೆಗೆ ಯಾರಿದ್ರು, ಹೊಟ್ಟೆ ಯಾಕಿಳ್ದಿಲ್ಲ, ಅದು ತುಂಬಿದ ಬಿಂದಿಗೆ ಹೊತ್ಕೊಂಡು ಹ್ಯೆಂಗ್ ನಡಿತಿದ್ದಿ…?   ಹೀಗೆ ಒಂದರ ಮೇಲೊಂದು ಪ್ರಶ್ನೆಯ ಸುರಿ ಮಳೆಯನ್ನೇ ಗರೆದರು. ಏದುಸಿರು ಬಿಡುತ್ತಿದ್ದ ಅವ್ವ ಅವರೊಂದಿಗೆ ಮನೆ ಸೇರಿ ನಡೆದ ಘಟನೆಯನ್ನೆಲ್ಲಾ ಸವಿಸ್ತಾರವಾಗಿ ಹೇಳಿದಳು. ಇಡೀ ಕತೆಯನ್ನು ಮೈ ಎಲ್ಲಾ ಕಿವಿಯಾಗಿ  ಕೇಳಿಸಿಕೊಂಡ ಆ ಹೆಂಗಸರು  ಇನ್ನಷ್ಟು ದಿನ ಬಾಯಾಡಲು ಹೊಸ ಸುದ್ದಿ ಸಿಕ್ಕ ಸಂಭ್ರಮದಲ್ಲಿ ತಮ್ಮ ತಮ್ಮ ಮನೆ ಕಡೆ ನಡೆದರು.

(ಮುಂದುವರೆಯುವುದು..)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವಳ ಹಣೆಲಿ ಬರ್ದಂಗ್ ಆಯ್ತದೆ
(ಈವರೆಗೆ…)

ಗಂಗೆಯ ಅಣ್ಣಂದಿರು ಒಪ್ಪಿಕೊಂಡ ಹುಡುಗನ ಜತೆ ಮದುವೆ ಮಾಡಲು ಅವಳ ಅಪ್ಪ ಆಸಕ್ತಿ ತೋರಿಸುವುದಿಲ್ಲ. ಒಂದು ಹಂತದಲ್ಲಿ ಅಪ್ಪ ಮಕ್ಕಳ ಜಗಳ ವಿಪರೀತಕ್ಕೆ ಹೋಗಿ ಅಪ್ಪ ಮನೆ ಬಿಟ್ಟು ಹೊಲದ ಗುಡಿಸಲಿಗೆ ಹೋಗಿ ಅಲ್ಲೇ ಇರುತ್ತಾನೆ. ಅಪ್ಪನ ಒಳಮನದ ನೋವನ್ನು ಸಹಿಸಲಾರದೆ ಗಂಗೆ ಗಟ್ಟಿ ಮನಸು ಮಾಡಿ ತಾನು ಮದುವೆಗೆ ಒಪ್ಪಿಕೊಂಡಿರುವುದಾಗಿ ಹೇಳುತ್ತಾಳೆ. ಗಂಗೆಯ ಅಪ್ಪ ಏನು ಮಾಡಿದರು?  ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೪

ಇಪ್ಪತ್ತೆರಡರ ಮಗಳ ಮಾತುಗಳು ಎಪ್ಪತ್ತರ ಅಪ್ಪನ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು. ಎಂದೂ ಎದುರು ಬದುರು ನಿಂತು ಮಾತಾಡದ ಮಗಳು ಇಂದು ತನ್ನ ಪ್ರಬುದ್ಧವಾದ ಮಾತುಗಳಿಂದ ತುಸುಮಟ್ಟಿಗೆ ಅಪ್ಪನ ಎದೆಯ ಭಾರ ಇಳಿಸಿದ್ದಳು. ಸಾಲದೆಂಬಂತೆ ಎದುರು ಹೊಲದ ಸಿದ್ದಣ್ಣ ಕೂಡ ಗಂಗೆಯ ಮಾತಿಗೆ ದನಿಗೂಡಿಸಿ, “ಕಳ್ಳು ಬಳ್ಳಿ ಸಂಬಂಧ ಅಂದ್ರೆ ಅಷ್ಟು ಸುಸೂತ್ರ ಅನ್ಕಂಡಿಯನ ಬೋಪಣ್ಣ. ನಾಳೆ ದಿನ ತಂಗಿಗೆ ಏನಾದ್ರು ಆದ್ರೆ ಅಣ್ಣ ತಮ್ಮದಿರ್ ಜೀವ ಚುರ್ ಅಂದಂಗಿರ್ತದ ಹೇಳು?” ಎನ್ನುವ ಪ್ರಶ್ನೆ ಎಸೆಯುವುದರ ಮುಖಾಂತರ ಅಪ್ಪನೊಳಗೆ  ಒಂದು ಸಣ್ಣ ಭರವಸೆಯ ಕಿಡಿ ಹೊತ್ತಿಸಿ, ಹೊಲದ ಗುಡಿಸಲಿನಿಂದ ಊರೊಳಗಿನ ಮನೆಯ ಕಡೆಗೆ ಎಳೆದು ತಂದಿದ್ದ.

ಮುಸ್ಸಂಜೆ ದೀಪ ಹತ್ತಿಸುವ ಹೊತ್ತು, ಎಲ್ಲರ ಮನೆಯ ಅಂಗಳದಲ್ಲಿ ಪೊರಕೆಯ ಸರ ಪರ ಸದ್ದು ಕೇಳಿ ಬರುತ್ತಿತ್ತು. ಮೇಯಲು ಹೋಗಿದ್ದ ಹಸು ಎಮ್ಮೆಗಳು ಕೊರಳ ಗಂಟೆ ಸದ್ದಿನೊಂದಿಗೆ ಕೊಟ್ಟಿಗೆಯ ಹಾದಿ ಹಿಡಿದಿದ್ದವು. ಊರೊಳಗಿನ ಆ ಕಿರಿದಾದ ಹಾದಿಯ ಉದ್ದಕ್ಕೂ ಅಂಟಿಕೊಂಡಿದ್ದ ಮನೆಗಳಿಂದ, ಮುಸ್ಸಂಜೆಯ ಕಾಫಿಯ ಘಮಲು ಹೊರ ಹೊಮ್ಮುತ್ತಿತ್ತು. ಎಷ್ಟೋ ಬಾರಿ ಅಪ್ಪ ಆ ಚಂದದ ಘಮಲನ್ನು ಆಸ್ವಾದಿಸಲೆಂದೇ ಮೇಲಿನ ಬೀದಿಯಲ್ಲಿದ್ದ ತನ್ನ ಮನೆಯಿಂದ ಕೆಳಗಿನ ಬೀದಿಗೂ, ಕೆಳಗಿನ ಬೀದಿಯಿಂದ ಮೇಲಿನ ಬೀದಿಗೂ ನಡೆದಾಡುತ್ತಿದ್ದುದುಂಟು. ಇಂದು ಅದರ ಯೋಚನೆಯೇ ಇಲ್ಲದೆ, ಬದುಕಿನ ಎಣಿಕೆ ಗುಣಿಕೆಯ ಲೆಕ್ಕಾಚಾರದಲ್ಲೇ, ಕಾಲೆಳೆಯುತ್ತಾ ಬರುತ್ತಿದ್ದವನನ್ನು, ಆ ಬೀದಿಯ ಅದೇ ಕಾಫಿಯ ಘಮಲು ಕ್ಷಣ ಜಗ್ಗಿ ನಿಲ್ಲಿಸಿ ಉಲ್ಲಾಸ ತುಂಬಿತು. ಇನ್ನೇನು ಘಮಲಿನ ಒಳಗಿಳಿದು ಮೈ ಮರೆಯಬೇಕು ಎನ್ನುವಷ್ಟರಲ್ಲಿ ಧುತ್ತನೆ ತನ್ನ ಗಂಡು ಮಕ್ಕಳ ಹುಂಬ ಮುಖ ಕಣ್ಣೆದುರು ಬಂದು ಆ ಆನಂದವನ್ನೇ ಕಸಿದು ಬಿಟ್ಟಿತು. ಕಂಕುಳಲ್ಲೊಂದು ಗಂಟನ್ನಿರುಕಿಕೊಂಡಿದ್ದ ಅಪ್ಪ ಕಾಲೆಳೆಯುತ್ತಾ ಒಲ್ಲದ ಮನಸ್ಸಿನಲ್ಲೇ ಮನೆಯ ಮುಂದೆ ಬಂದು ನಿಂತ.

ಬಾಗಿಲಿಗೆ ಎದುರಾಗಿ ಕುಳಿತು, ಕಾಫಿ ಹೀರುತ್ತಿದ್ದ ಚಂದ್ರಹಾಸನ ಮುಖನೋಡಲು ಇಚ್ಛಿಸದ ಅಪ್ಪ, ಮನೆಯ ಹೊರಗಿದ್ದ ದೊಡ್ಡ ಜಗುಲಿ ಕಟ್ಟೆಯ ಮೇಲೇ ಕುಳಿತ. ಅಂಗಳದ ಕಸ ಗುಡಿಸುತ್ತಿದ್ದ ಗಂಗೆ ಅಪ್ಪನನ್ನು ಕಂಡು ಸಂಭ್ರಮಿಸುತ್ತಾ ಪೊರಕೆಯನ್ನು ಬದಿಗೆಸೆದು ಒಳಗೋಡಿ ಅವ್ವನಿಗೆ ಸುದ್ದಿ ಮುಟ್ಟಿಸಿದಳು.

ಅವ್ವ ಬಿಸಿ ಕಾಫಿ ತಂದು ಅಪ್ಪನ ಮುಂದೆ ಹಿಡಿದಳು. ತುಸು ಸೆಟೆದುಕೊಂಡಂತೆಯೇ ಇದ್ದ ಅಪ್ಪ “ನನಗೆ ಕಾಪಿ ಗೀಪಿ ಏನು ಬೇಡ ತಗೊಂಡೋಗು.” ಎಂದು ಮುಖ ತಿರುವಿ ಕುಳಿತ.  ಅವ್ವ “ಅಲ್ಲ ಎಷ್ಟ್ ದಿನಾಂತ ಮಕ್ಕಳಂಗೆ ರಚ್ಚೆ ಹಿಡ್ದೀರಿ. ಹಿಂಗಾದ್ರೆ ಬದುಕು ನಡಿತದ. ಏಳೇಳಿ ಮುಂದಿನ ಕಾರ್ಯ ನೋಡಿ” ಎಂದಳು. ಏನೂ ನಡೆದೇ ಇಲ್ಲ ಎಂಬಂತೆ ಯಾವ ಅಳುಕು ಇಲ್ಲದೇ ಹೊರ ಬಂದ ಚಂದ್ರಹಾಸ. “ಆಗಿದ್ ಆಗೋಯ್ತು ಈಗ ಮದುವೆ ವಿಷಯ ಏನಾಯ್ತು” ಎಂದು ಕೇಳಿದ. ಅಪ್ಪ, ಅವ್ವನ ಮುಖ ನೋಡುತ್ತಾ “ನಾಳೆ ಗಂಗೆಗೆ ಏನು ಹೆಚ್ಚು ಕಮ್ಮಿ ಆದ್ರೂ ಇವರೆಲ್ಲ ಸೇರಿ ಜವಾಬ್ದಾರಿ ತಕ್ಕೊತರ ಕೇಳು ಸಾಕಿ” ಎಂದ. ಚಂದ್ರಹಾಸ, ಗಿರಿಧರ ವೆಂಕಟೇಶ ಮೂರು ಜನರು ಎದೆ ತಟ್ಟಿಕೊಂಡು. “ನಾವಿರೋ ತನ್ಕಾ ಅವಳಿಗೆ ಯಾವ ತೊಂದ್ರೆನು ಆಗ್ದಂಗ್ ನೋಡ್ಕೋತೀವಿ. ನಮ್ಮ ಮೇಲೆ ನಂಬಿಕೆ ಇಡಕೇಳವ್ವ” ಎಂದರು.  ಅಪ್ಪ “ಸರಿ ಅದೇನ್ ಮಾಡ್ತೀರೋ ಅದುನ್ನಾದ್ರು ಅಚ್ಕಾಟ್ಟಗಿ ಮಾಡಿ. ಅವಳ ಹಣೆಲಿ ಬರ್ದಂಗ್ ಆಯ್ತದೆ” ಎಂದು ಹೇಳಿ ಹೊಟ್ಟೆಯ ಸಂಕಟ ತಾಳಲಾರದೆ ಹಿತ್ತಿಲ ಕಡೆ ಹೆಜ್ಜೆ ಹಾಕಿದ.

ಕಷ್ಟ ಪಟ್ಟು ಅಪ್ಪ ಹೊಂದಿಸಿ ತಂದಿದ್ದ ಅಷ್ಟೋ ಇಷ್ಟೋ ದುಡ್ಡಿನಲ್ಲಿ, ಚಂದ್ರಹಾಸ  ಮುವತ್ತು ರೂಪಾಯಿ ಕೊಟ್ಟು  ತನ್ನ ಹೆಂಡತಿಯ ಅಡವಿಟ್ಟಿದ್ದ ಚಿನ್ನದ ಕುಚ್ಚಿನ ಕುಪ್ಪಿಗೆಯನ್ನು ಬಿಡಿಸಿ ತಂದ. ಅದನ್ನು ಕರಗಿಸಿ ಗಂಗೆಗೆ ತಾಳಿ, ಕಾಲುಂಗುರ, ಹುಡುಗ ಹುಡುಗಿಗೆ ಒಂದು ಜೊತೆ ಬಟ್ಟೆ ತರುವಷ್ಟರಲ್ಲಿ ಅಪ್ಪ ಕೂಡಿಸಿ ಕೊಟ್ಟಿದ್ದ ಅಷ್ಟೂ ಹಣವೂ ಖಾಲಿಯಾಯಿತು. ಇನ್ನು ಮದುವೆಯ ರಿಜಿಸ್ಟರ್ ಖರ್ಚು, ನಾರಿಪುರದಿಂದ ಮಾದಲಪುರಕ್ಕೆ ಅವರೆಲ್ಲರ ಓಡಾಟದ ಖರ್ಚು, ಗಂಡನ ಮನೆಗೆ ಹೋಗುವಾಗ ಮಗಳ ಕೈಗಿಡಲು ಬೇಕಾದ ಒಂದಷ್ಟು ಪುಡಿಗಾಸು ಹೀಗೆ ಸಣ್ಣ ಪುಟ್ಟ ಖರ್ಚು ವೆಚ್ಚವೇ ತಲೆ ಮೇಲೆ ಬೆಟ್ಟದಂತೆ ಕೂತಿತ್ತು. ದಾರಿ ಕಾಣದಂತಾದ ಅಪ್ಪ, ವಿಧಿಯೇ ಇಲ್ಲದೆ ಸತ್ತ ಮಗಳು ಲಕ್ಷ್ಮೀ ಹೆಸರಿನಲ್ಲಿ ಬಿಟ್ಟುಕೊಂಡಿದ್ದ ಹಸುವನ್ನು  ಮಾರಲೇಬೇಕಾದ ಪರಿಸ್ಥಿತಿ ಎದುರಾಯಿತು. ಅವ್ವ ತನ್ನ ಜೀವವನ್ನೇ ಕಿತ್ತು ಕೊಡುತ್ತಿದ್ದೇನೋ ಎನ್ನುವಂತಹ ವೇದನೆ ಅನುಭವಿಸುತ್ತಾ  ಹಸುವಿಗೆ ಪೂಜೆ ಮಾಡಿ  ನಮಸ್ಕರಿಸಿದಳು. ಮಗಳು, ಲಕ್ಷ್ಮಿಗೆ ಇಷ್ಟದ ಕೆಲವು ತಿಂಡಿಗಳನ್ನು ತಿನ್ನಿಸಿ ಗೂಟಕ್ಕೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಚಂದ್ರಹಾಸನ ಕೈಗಿತ್ತಳು. ಮಾತು ಕಳೆದುಕೊಂಡ ಅಪ್ಪ ತನ್ನ ಗಂಡು ಮಕ್ಕಳ ಹಠಮಾರಿತನಕ್ಕೆ  ಬೇಸರಿಸುತ್ತಾ, ರೆಕ್ಕೆ ಮುರಿದ ಹಕ್ಕಿಯಂತೆ ಚಡಪಡಿಸುತ್ತಾ ಕೊಟ್ಟಿಗೆಯ ಒಂದು ಬದಿಗೆ ನಿಂತಿದ್ದ.  ಹಸುವನ್ನು ತಬ್ಬಿ ಹಿಡಿದು ಒಂದೇ ಸಮನೆ ಅಳುತ್ತಿದ್ದ ಗಂಗೆಯ ಕೈಕೊಸರಿದ ಚಂದ್ರಹಾಸ, “ಈ ನಾಟ್ಕನೆಲ್ಲಾ ನಿಲ್ಸಿ ಹಸ ಬುಟ್ಟು ಆ ಕಡೆ ಹೋಗು. ನಿನ್ನಿಂದ್ಲೆ ತಾನೇ ಈ ಹಸ ಮಾರ್ತಿರದು”  ಎಂದು ಗದರಿದ. “ನಿನ್ನಿಂದಲೇ” ಎನ್ನುವ ಮಾತನ್ನು ಕೇಳಿ ಗಂಗೆಯ ಕೋಪ ನೆತ್ತಿಗೇರಿತು. “ನನ್ನ್ ಮದುವೆ ಮಾಡಿ ಅಂತ ನಿಮ್ಮ ಎದೆ ಮೇಲೆ ನಿಂತಿದ್ದೀನಿ ಅನ್ನೊ ಹಂಗೆ ಹೇಳ್ತಿದ್ದಿಯಲ್ಲ ನಾಚ್ಕೆ ಆಗಬೇಕು ನಿನ್ ಮಕ್ಕೆ” ಎಂದು ಉಗಿದಳು. ಚಂದ್ರಹಾಸ “ನನಗೆ ಉಗಿತಿಯೇನೆ ಗಂಡ್ ಬೀರಿ” ಎಂದು ಗಂಗೆಯ ಮುಂದಲೆಗೆ ಕೈ ಹಾಕಿದ. ನಡುವೆ ಬಂದ ಅವ್ವ “ಹೂಂ ಇವುಳುನ್ನು ಹೊಡ್ದು ಕೊಂದು ಬುಡಪ್ಪ ಅತ್ಲಗಿ. ಆ ಮಗಳಿರೋವರಿಗೂ ಅವಳನ್ನ ಹುರ್ದು ಮುಕ್ಕಿದ್ರಿ. ಇನ್ನು ಹೆಣ್ ಸಂತಾನ ಅಂತ ಉಳಿದಿರೋದು ಇವ್ಳೊಬ್ಬಳು. ಇವ್ಳುನ್ನು ಬಡ್ದು ಬಾಯ್ಗಾಕೋ ಬುಡಿ” ಎಂದು ಚಂದ್ರಹಾಸನ ಬೆನ್ನಿನ ಮೇಲೆ ಗುದ್ದಿದಳು. ಎಂದೂ ಯಾವ ಹೊತ್ತು ಗಂಡುಮಕ್ಕಳನ್ನು ಬಿಟ್ಟು ಕೊಟ್ಟು ಮಾತಾಡಿದ ಚರಿತ್ರೆಯೇ ಇಲ್ಲದ ಅವ್ವನ ನಡವಳಿಕೆಗೆ ಅಪ್ಪನೇ ಕ್ಷಣ ಬೆರಗಾಗಿ ಹೋದ. ಮೂರು ಜನ ಗಂಡು ಮಕ್ಕಳ ಮೇಲೆ ಹೆಣ್ಣು ಮಗು ಹುಟ್ಟಿದರೆ ದಟ್ಟ ದರಿದ್ರ ಅಡರಿಕೊಳ್ಳುತ್ತದೆ ಎಂದು ಯಾರೋ ಹೇಳಿದ್ದ ಮಾತನ್ನು ಬಲವಾಗಿ ನಂಬಿದ್ದ ಅವ್ವ, ಇದೇ ಮಗಳು ಸಾಯಲೆಂದು ಮೂರುದಿನ ಹಾಲು ನೀರು ಕೊಡದೆ ಹಠ ಹಿಡಿದು ಕೂತ ದಿನಗಳು ಅಪ್ಪನ ಕಣ್ಣ ಮುಂದೆ ರಪ್ ಎಂದು ಹಾದು ಹೋಯಿತು. ಇದೇ ಹೆಂಡತಿಯ ದೊಡ್ಡತನವನ್ನು ಕಣ್ಣಾರೆ ಕಂಡಿದ್ದ ಅಪ್ಪ, ಮನುಷ್ಯನೊಳಗಿನ ವೈರುಧ್ಯಗಳ ಬಗ್ಗೆ ಸದಾ ಕುತೂಹಲವನ್ನೂ, ಗೌರವವನ್ನೂ ಹೊಂದಿದ್ದ. ಹಾಗಾಗಿಯೇ ಎಂದೂ ಯಾವ ಉದ್ವೇಗಕ್ಕೂ ಒಳಗಾಗದೆ ಅವ್ವನ ಈ ಅವಿವೇಕದ ನಡೆಯನ್ನು ಕೂಡ ತಾಳ್ಮೆಯಿಂದಲೇ ಸರಿಪಡಿಸಿದ್ದ.

ಇದೇ ಅವ್ವ ಬಿದಿರು ಮೆಳೆಯೊಳಗೆ ಸಾವಿನ ದವಡೆಯಲ್ಲಿದ್ದ  ಮೂರು ದಿನದ ಹಸುಳೆಯನ್ನು ರಕ್ಷಿಸಿ ಹೆಣ್ಣು ,ಗಂಡು, ಜಾತಿ, ಜಾತಕ, ಸೂತಕ, ಏನೊಂದು ನೋಡದೇ ಮಡಿಲಿಗೆ ಕಟ್ಟಿಕೊಂಡು ಬಂದು, ಮಹಾಲಕ್ಷ್ಮಿ ಎಂದು ಹೆಸರಿಟ್ಟು ಇಪ್ಪತ್ತು ವರ್ಷಗಳು ಹೂವಿನಂತೆ ಸಾಕಿದ್ದಳು. ತನ್ನ ಎಲ್ಲಾ ಮಕ್ಕಳಿಗಿಂತಲೂ ಒಂದು ಹಿಡಿ ಹೆಚ್ಚೇ ಪ್ರೀತಿ ನೀಡಿ ಬಹಳ ಮುಚ್ಚಟೆಯಿಂದ ಬೆಳೆಸಿದ್ದಳು. ತಿಂಗಳು ಎನ್ನುವುದರೊಳಗೆ ಮದುವೆ ಮಂಟಪವೇರಬೇಕಾದ ಲಕ್ಷ್ಮಿ ವಾರ ಎನ್ನುವುದರೊಳಗೆ ದೆವ್ವ ಹಿಡಿದು ಸತ್ತೇ ಹೋದಳು. ಈ ಘಟನೆ ನಡೆದು ಆರು ವರ್ಷಗಳೇ ಕಳೆದು ಹೋದವು ಈ ಕಟು ಸತ್ಯವನ್ನು ಅರಗಿಸಿಕೊಳ್ಳಲು ಅವ್ವನಿಗಾಗಲಿ, ಅಪ್ಪನಿಗಾಗಲಿ, ಗಂಗೆಗಾಗಲಿ  ಇಂದಿಗೂ ಸಾಧ್ಯವಾಗಿಲ್ಲ.

(ಮುಂದುವರೆಯುವುದು)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೇವರು ಕೊಟ್ಟಿದ್ ಬ್ಯಾಡ ಅನ್ನಕೆ ನಾವ್ಯಾರು..
ಇದುವರೆಗೆ…
ಗಂಗೆಯ ಅಣ್ಣಂದಿರಾದ ಚಂದ್ರಹಾಸ ಮತ್ತು ಗಿರೀಶ ಮೋಹನನ ಮನೆ ನೋಡಲು ಅವನ ಊರಿಗೆ ಹೋಗುತ್ತಾರೆ. ಮೊದಲೇ ಯೋಚನೆ ಮಾಡಿಕೊಂಡಂತೆ ಅಲ್ಲಿ ಮೋಹನ ತನ್ನದೆಂದು ವಿಶಾಲವಾದ ತೋಟ, ಹೊಲ, ರಾಶಿ ರಾಶಿ ಫಸಲುಗಳನ್ನು ತೋರಿಸುತ್ತಾನೆ. ಖುಷಿಯಾದ ಅಣ್ಣಂದಿರು ಮದುವೆಯ ಮಾತುಕತೆ ನಡೆಸಿ ವಾಪಾಸಾಗುತ್ತಾರೆ. ಗಂಗೆಯ ಮದುವೆ ನಡೆಯಿತೇ? ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೩

ವಾತಾ, ಪಿತ್ತ, ನೆಗಡಿ, ಕೆಮ್ಮು, ಹುಣ್ಣು, ಉಳುಕು ಹೀಗೆ ನಾನಾ ತರದ ಸಮಸ್ಯೆಗಳಿಗೆಲ್ಲಾ ನಾಟಿ ಮದ್ದು ಮಾಡುವುದರಲ್ಲಿ ನಿಸ್ಸೀಮನಾಗಿದ್ದ ಅಪ್ಪ, ಅಂದು ಬೆಳಬೆಳಗ್ಗೆಯೇ ಆಮಶಂಕೆ ಹಿಡಿದು ಮನೆಗೆ ಓಡಿ ಬಂದಿದ್ದ ಕೆಂಚನಿಗೆ ಮದ್ದರೆಯುವುದರಲ್ಲಿ ಮುಳುಗಿ ಹೋಗಿದ್ದ. ಗಂಟಲು ಸರಿಪಡಿಸಿಕೊಳ್ಳುವಂತೆ ಸದ್ದು ಮಾಡಿ ಅಪ್ಪನ ಗಮನ ಸೆಳೆದ ಚಂದ್ರಹಾಸ ಗಿರಿಧರರಿಬ್ಬರೂ ಮೋಹನನ ಆಸ್ತಿ, ಅಂತಸ್ತು, ರಾಶಿ ಬೀಳುವ ಫಸಲುಗಳ ಬಗ್ಗೆ ಹಾಡಿ ಹೊಗಳ ತೊಡಗಿದರು. ಅಪ್ಪ ಅದ್ಯಾವುದಕ್ಕೂ ಕ್ಯಾರೆ ಕೆತ್ತೆ ಅನ್ನುವ ಲಕ್ಷಣ ಕಾಣಲಿಲ್ಲ. ಕೊನೆಗೆ ಗಿರಿಧರ “ನೋಡಪ್ಪ ನಾವಿರೋ ಈ ಪರಿಸ್ಥಿತಿಲಿ ಹುಡುಗನಿಗೆ ವರದಕ್ಷಿಣೆ ಕೊಟ್ಟು, ಮೈತುಂಬ ಬಂಗಾರ ಹಾಕಿ, ಸಾಲ ಸೋಲ ಮಾಡಿ ಮದುವೆ ಮಾಡಕಾಯ್ತದ ಯೋಚನೆ ಮಾಡು. ನಮ್ ಗಂಗೆ ಅದೃಷ್ಟವೋ ಇಲ್ಲ ನಮ್ಮ ಅದೃಷ್ಟವೋ ಚಿನ್ನದಂತ ಹುಡುಗ ತಾನೇ ಹುಡುಕೊಂಡು ನಮ್ಮ್ ಮನೆ ಬಾಗಿಲಿಗೆ ಬಂದು,  ದೇವಸ್ಥಾನದಲ್ಲಿ ಮದುವೆ ಮಾಡಿಕೊಡಿ ಸಾಕು ಅಂತಾವ್ನೆ. ಇಂಥ ಹೊತ್ನಲ್ಲಿ ಕಣ್ಣು ಮುಚ್ಚ್ಕೊಂಡು ಕೂತ್ಕೊಂಡ್ರೆ ನಷ್ಟ ಅನುಭವಿಸೋರು ನಾವು. ನಷ್ಟ…!? ಅನ್ನುವ ಮಾತು ಕೇಳಿ ಕಣ್ಣು ಕೆಕ್ಕರಿಸಿದ ಅಪ್ಪ ನಡುವೆ ಬಾಯಿ ಹಾಕಿ “ಬಂಚತ್  ಮುಚ್ಚೋ ಬಾಯಿ. ಇದು ಲಾಭ ನಷ್ಟದ ಮಾತಾಡೋ ವಿಚಾರವೆನ್ಲಾ. ಒಂದ್ ಹೆಣ್ಮಗಿನ್ ಜೀವನುದ್ ಪ್ರಶ್ನೆ. ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬುಟ್ಕೊಂಡು ಅಷ್ಟೋ ಇಷ್ಟೋ ಆಸ್ತಿ ಮಾಡಿಟ್ಟಿದ್ದೀನಿ. ನೀವಂತೂ ಗೇಯ್ದು ಉಣ್ಣೊ ಕುಳ ಅಲ್ಲ. ಹೆಸ್ರಿಗೆ ಆರ್ ಜನ ಗಂಡು ಮಕ್ಕಳು, ಏನ್ ಕಡ್ದು ಕಟ್ಟೆ ಹಾಕಿದ್ದೀರಿ ಹೇಳು. ನನ್ನೊಬ್ಬನ ಕೈ ದುಡಿಮೆ, ತಿನ್ನೋದು ಮಾತ್ರ ಹದ್ನಾರು ಬಾಯಿ. ಬಡತನ ಬರದೆ ಸಿರಿತನ ಬತ್ತದ ಮೈಗಳ್ಳ್ ನನ್ನಮಕ್ಳಾ. ಅವಳೇನು ನಿಮ್ಮ ಎದೆ ಮೇಲ್ ಕೂತವ್ಳಾ. ನಿಂತ್ಕಾಲ್ ಮೇಲೆ ಅವಳ ಮದುವೆ ಮಾಡಬೇಕು ಅಂತ ಯಾಕೆ ಕುಣಿತಿದಿರಿ. ನಿಧಾನವಾಗೆ ಆಗ್ಲಿ.. ಪರವಾಗಿಲ್ಲ ಒಂದಿಷ್ಟು ಜಮೀನ್ ಮಾರಾದ್ರೂ ಸರಿ, ಒಳ್ಳೆ ಸಂಬಂಧಕ್ಕೆ ಕೊಟ್ಟು ಅವಳ ಮದುವೆ ಮಾಡ್ತೀನಿ… ಅವನ್ಯಾವ ಸೀಮೆ ಗಂಡ್ಸಯ್ಯ?  ಅವ್ವ ಅಪ್ಪ ಹೋಗ್ಲಿ ಯಾರಾದ್ರು ಸಂಬಂಧಿಕ್ರುನ್ನಾದ್ರು  ಕರ್ಕೊಂಡ್ ಬಾ ಅಂದ್ರೆ ಅದಕ್ಕೂ ತಯಾರಿಲ್ಲ. ಅಂತದ್ರಲ್ಲಿ ಯಾವ ನಂಬ್ಕೆ ಇಟ್ಟು ನನ್ನ ಮಗಳನ್ನ ಅವನಿಗೆ ಕಟ್ಲಿ ? ಬೋಳಿ ಮಕ್ಳಾ ಇನ್ನೊಂದ್ಸರಿ ಅವಳ ಮದುವೆ ಮಾತೆತ್ತಬೇಡಿ” ಎಂದು ಗರ ಗರನೆ ಮದ್ದರೆಯ ತೊಡಗಿದ. “ಜಮೀನು ಮಾರಿಯಾದರು…” ಅನ್ನುವ ಮಾತು ಚಂದ್ರಹಾಸನ ಎದೆಗೆ ಕೊಳ್ಳಿ ತಾಕಿಸಿದಂತಾಯಿತು. ಬರುವ ಕೋಪವನ್ನು ಹಲ್ಲು ಕಚ್ಚಿ ತಡೆದುಕೊಳ್ಳುತ್ತಾ “ನೋಡಪ್ಪ ಆ ಹುಡುಗನಿಗೆ ಮಾತು ಕೊಟ್ಟು ಬಂದಿದ್ದೀವಿ. ಇನ್ನು ಒಂದು ತಿಂಗಳಲ್ಲಿ ಅವನು ಮದುವೆ ಮಾಡ್ಕೊಂಡು, ಹೆಂಡ್ತಿ ಸಮೇತ ಪೂನಾಕ್ಕೋಗ್ಬೇಕು. ಮಸೂರ ಹಾಕಿ ಹುಡುಕಿದ್ರೂ ಇವತ್ತು  ಕೆಲಸದಲ್ಲಿರೋ ಹುಡುಗನ್ನ ಹುಡ್ಕಾಕಾಯ್ತದ ನಮ್ಮ ಕೈಲಿ ಹೇಳು. ಅಣ್ಣಂದಿರಾಗಿ ನಮಗೂ ಜವಾಬ್ದಾರಿ ಅಂತ ಇರೋ ಹೊತ್ತಿಗೆ ತಾನೆ, ಆ ಹುಡುಗುನ ಮನೆ ಮಠ  ನೋಡ್ಕೊಂಡು ಬಂದಿದ್ದು. ಒಳ್ಳೆ ಆಸ್ತಿವಂತ್ರು ಮನೆ ಹುಡುಗ, ನಾಳೆ  ಕೆಲ್ಸ ಹೋಯ್ತು ಅಂದ್ರು ದುಡ್ಕೊಂಡು ತಿನ್ನಕೆ ಊರು ತುಂಬಾ ಆಸ್ತಿ ಐತೆ. ನೆರಳಿಗೆ ತಮ್ಮದೇ ಸೂರ್ ಐತೆ. ಇದಕ್ಕಿಂತ ಇನ್ನ ಏನ್ ಬೇಕು. ಸಿರಿ ಬಂದಾಗ ಕಣ್ ಮುಚ್ಕೊಂಡು ಕೂತ್ರು ಅನ್ನೊಹಂಗೆ ಆಗದ್ ಬ್ಯಾಡ. ರಿಜಿಸ್ಟ್ರು ಮದುವೆ ಮಾಡನ. ನಾಳೆ ಹೆಚ್ಚು ಕಮ್ಮಿ ಆದ್ರು ಕೇಳಕೆ ಕಾನೂನಿರ್ತದೆ. ಅವ್ನುಗೂ ಒಂದು ಭಯ ಇರ್ತದೆ” ಎಂದು ಹೇಳಿ ಅಪ್ಪನ ಮುಖ ನೋಡಿದ. ಇವರ ಯಾವ ಮಾತಿಗೂ ಸೊಪ್ಪು ಹಾಕದ ಅಪ್ಪ, “ಹಕ್ಕಿನ್ ಸಾಕಿ ಬೆಕ್ಕಿನ ಕೈಗೆ ಕೊಡಕ್ಕೆ ನಾನ್ ಸುತ್ರಾಮ್ ತಯಾರಿಲ್ಲ. ಅವ್ವ ಗಂಗಾ ಈ ಔಸ್ತಿ ತೇದು ಬಾಟ್ಲಿಗೆ ತುಂಬ್ಸು. ಹಂಗೆ ಆ ಕೆಂಚ ಬಂದ್ರೆ ಕೊಟ್ಕಳ್ಸು” ಎಂದು ಹೇಳಿ ಬೆನ್ನಿಗೆ ಗುದ್ದಲಿ ಹಾಕಿಕೊಂಡು ಹೊಲದ ಕಡೆ ಹೊರಟ. ಚಂದ್ರಹಾಸನ ತಾಳ್ಮೆಯ ಕಟ್ಟೆ ಒಡೆಯಿತು. ಅಪ್ಪನ ದಾರಿಗೆ ಅಡ್ಡಲಾಗಿ ನಿಂತು ಅಪ್ಪನನ್ನು ನೂಕಾಡುತ್ತಾ  ಕೂಗಾಡತೊಡಗಿದ. ಅಡಿಗೆ ಕೋಣೆಯಲ್ಲಿದ್ದ ಅವ್ವ, ಗಂಗೆ, ಚಂದ್ರಹಾಸನ ಹೆಂಡತಿ ಯಶೋಧೆ ತಡಬಡಾಯಿಸಿ ಹೊರಗೋಡಿ ಬಂದು, ಅಪ್ಪನ ಕೊರಳ ಪಟ್ಟಿಗೆ ಕೈ ಹಾಕಿ ನಿಂತ ಚಂದ್ರಹಾಸನನ್ನು ಒಳಕೋಣೆಗೆ ಎಳೆದುಕೊಂಡು ಹೋದರು.

ಯಾರೊಂದಿಗೂ ಹೆಚ್ಚು ಮಾತಾಡದ, ಯಾರನ್ನೂ ನೋಯಿಸಲು ಇಚ್ಚಿಸದ ಅಪ್ಪ, ಮಗನ ದಾಳಿಗೆ ತತ್ತರಿಸಿ ಹೋದ. ಗಂಡು ಮಕ್ಕಳೆಂದು ತಲೆ ಮೇಲೆ ಹೊತ್ತು ಮಕ್ಕಳನ್ನು ಹಾಳುಗೆಡವಿದ್ದ ಹೆಂಡತಿ ಸಾಕಿಯ ಬಗ್ಗೆ ಅಪ್ಪನಿಗೆ ಅಸಹ್ಯ ಎನ್ನಿಸಿತು. ಮಾತಿಗೆ ಮಾತು ತಾಗಿಸಿ ಇನ್ನಷ್ಟು ಬೆಂದು ಹೋಗಲು ಇಚ್ಚಿಸದೆ ಏನೊಂದು ಮಾತಾಡದೆ ಹೊಲದ ಗುಡಿಸಲು ಸೇರಿಕೊಂಡ. ಅಪ್ಪ ತನ್ನ ಮನಸ್ಸಿಗೆ ಘಾಸಿಯಾದಾಗಲೆಲ್ಲಾ  ಹೊಲದ ಗುಡಿಸಲು ಸೇರಿ ಒಂದಷ್ಟು ದಿನ  ಒಂಟಿಯಾಗಿದ್ದು ಬಿಡುತ್ತಿದ್ದುದು ಮಾಮೂಲಾಗಿತ್ತು.

ಅಪ್ಪ ಹೀಗೆ ಹೊಲ ಸೇರಿದಾಗೆಲ್ಲಾ ಗಂಗೆಗೆ ಹಿಂದೆ ನಡೆದ ಒಂದು  ಘಟನೆ ಧುತ್ತನೆ ಕಣ್ಮುಂದೆ ಬಂದು ಹೋಗಿ ಬಿಡುತ್ತಿತ್ತು.  ಬಹುಶಃ ಗಂಗೆಗೆ ಆಗ ಹದಿನಾಲ್ಕೊ ಹದಿನೈದೋ ವರ್ಷವಿರಬೇಕು. ಅವ್ವನಿಗೆ ಮಕ್ಕಳ ಮೇಲೆ ಮಕ್ಕಳು ಹುಟ್ಟುತ್ತಲೇ ಇದ್ದವು. ಹೆತ್ತ ಏಳು ಮಕ್ಕಳಲ್ಲದೆ ದತ್ತು ಮಗಳು ಲಕ್ಷ್ಮಿಯೂ  ಸೇರಿ ಒಟ್ಟು ಎಂಟು ಮಕ್ಕಳಿದ್ದ ದೊಡ್ಡ ಕುಟುಂಬವಾಗಿತ್ತದು. ಅಪ್ಪನಿಗೆ ದೊಡ್ಡ ಕುಟುಂಬದ ಜವಾಬ್ದಾರಿ ತೂಗಿಸುವುದೇನು ಸುಲಭದ ಮಾತಾಗಿರಲಿಲ್ಲ. ಪ್ರತೀ ದಿನವು ಅಪ್ಪನದು ಒಂದೇ ರಾಗ “ಮಕ್ಳು ಸಾಕಿನ್ನು ಆಪ್ರೇಶನ್ ಮಾಡುಸ್ಕೋ ಸಾಕಿ”…. ಹುಹೂಂ ಅವ್ವನದು ಒಂದೇ ಹಠ “ದೇವ್ರು ಕೊಟ್ಟಿದ್ ಬ್ಯಾಡ ಅನ್ನಕ್ಕೆ ನಾವ್ಯಾರು ಸುಮ್ಮನೆ ಬಾಯಿ ಮುಚ್ಕೊಂಡು ಹೋಗು ಗೌಡ”.  ಹೀಗೆ ಇಬ್ಬರ ನಡುವೆ ಸದಾ  ಜಟಾಪಟಿ ನಡೆಯುತ್ತಲೇ ಇತ್ತು. ಹೀಗೆ ಒಂದು ಸಾರಿ ಅಪ್ಪನಂತೆಯೇ ಹೆಂಡತಿಯರನ್ನು ಒಪ್ಪಿಸಲಾರದೆ ರೋಸಿಹೋದ ಊರಿನ ಕೆಲವು ಗಂಡಸರು ಮಾತಾಡಿಕೊಂಡು ಒಗ್ಗಟ್ಟಾಗಿ ಮಾದಲಾಪುರದ ಗೌರ್ಮೆಂಟ್ ಆಸ್ಪತ್ರೆಗೆ ಹೋಗಿ, ತಾವೇ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡು ಮನೆಗೆ ಬಂದರು. ಬಾಗಿಲಲ್ಲೇ ಗಂಗೆಯೊಂದಿಗೆ ಕುಳಿತಿದ್ದ ಅವ್ವ “ಅಲ್ಲ ಬೆಳಗಿನಿಂದ ಒಂದು ಮಾತ್ನು ಹೇಳ್ದಂಗೆ ಎಲ್ಲೊಂಟು ಹೋಗಿದ್ರಿ” ಎಂದು ಕೇಳಿದಳು. ಅಪ್ಪ ತನ್ನ ಕೈ ಚೀಲವನ್ನು ಹೆಂಡತಿಗೆ ಕೊಡುತ್ತಾ “ನೋಡು ಇದ್ರಲ್ಲಿ ಆಸ್ಪತ್ರೆಲಿ ಆರೈಕೆಗೆ ಅಂತ ಕೊಟ್ಟ ಬೆಣ್ಣೆ, ಮೊಟ್ಟೆ, ಜ್ವಾಳ, ಕಾಳು, ಕಡ್ಡಿ, ಹಣ್ಣು ಅಂಪ್ಲವೆ. ಮಕ್ಳುಗು ನನಗೂ ಅಚ್ಚ್ಕಟ್ಟಾಗಿ ಮಾಡಾಕು” ಅಂದ. ಅರ್ಥವಾಗದ ಅವ್ವ ಅಪ್ಪನ ಮುಖ ನೋಡಿದಳು. ಅಪ್ಪ ತನ್ನ ಆಪರೇಷನ್ ವಿಷಯವನ್ನು  ತಿಳಿಸಿದ್ದೇ ತಡ ಅವ್ವ ಚಂಡಿ ಚಾಮುಂಡಿಯಾದಳು.  “ಅಯ್ಯೋ ನಿನ್ ಮನೆ ಕಾಯೋಗ..  ಹೊರೋಳ್ ನಾನು ಹೆರೋಳ್ ನಾನು ನಿನಗೇನಯ್ಯ ಬಂದಿತ್ತು ದೊಡ್ಡ್ರೋಗ” ಎಂದು ದೊಡ್ಡ ರಂಪ ರಾಮಾಯಣವನ್ನೇ ಮಾಡಿ, ಒಂದು ಗುಟುಕು ನೀರನ್ನೂ ಕೊಡದೇ ಅಪ್ಪನನ್ನು ಮನೆಯಿಂದ ಹೊರಗಟ್ಟಿದಳು. ಅಂದಿನಿಂದ ಅಪ್ಪ ಒಂದಷ್ಟು ತಿಂಗಳುಗಳ ಕಾಲ, ಅವ್ವನ ಹೊಟ್ಟೆಯುರಿ ತಣ್ಣಗಾಗುವವರೆಗೂ ಇದೇ ಹೊಲದ ಗುಡಿಸಲಿನಲ್ಲಿ ವಾಸ್ತವ್ಯ ಹೂಡುವಂತಾಯಿತು. ಕಣ್ಣ ಮುಂದೆಯೇ ನಡೆದ ಈ ಜಗಳದ ಒಳ ಮರ್ಮ ಅರ್ಥವಾಗದ ಗಂಗೆ, ಕುತೂಹಲ ತಾಳಲಾರದೆ ಆಚೆ ಮನೆಯ ತನ್ನ ಸೋದರ ಅತ್ತೆಯೊಂದಿಗೆ ಅದರ ವಿವರಣೆ ತಿಳಿದು ತುಸು ಸಂಕೋಚದಿಂದಲೇ ಮನೆ ಸೇರಿದ್ದಳು. ಈಗಲೂ ಗಂಗೆಗೆ ಹೊಲದ ಮನೆ ಎಂದರೆ ಸಾಕು ಆಪರೇಶನ್ ಮಾಡಿಸಿಕೊಂಡು ಬಾಡಿದ ಮೋರೆ ಹೊತ್ತು ಕಾಲೆಳೆಯುತ್ತಾ ನಡೆದು ಬಂದ ಅಪ್ಪನ ಚಿತ್ರ, ಹುಲಿಯಂತೆ ದಾಳಿ ನಡೆಸಿ ಅಪ್ಪನನ್ನು ತಲೆ ಎತ್ತದಂತೆ ಮಾಡಿ ಹೊಲದ ಮನೆಗಟ್ಟಿದ ಅವ್ವನ ರೌದ್ರ ಅವತಾರದ ಚಿತ್ರವೇ  ನೆನಪಾಗುತ್ತದೆ.

ಇಂದು ಕೂಡ ಅಣ್ಣನ ದಾಳಿಯನ್ನು ಮನಸ್ಸಿಗೆ ಹಚ್ಚಿಕೊಂಡ ಅಪ್ಪ ಹದಿನೈದು ದಿನವಾದರೂ  ಮನೆಯ ಕಡೆ ತಲೆ ಹಾಕಲೇ ಇಲ್ಲ. ಸದಾ ಅಪ್ಪನನ್ನು ನೆನೆದು ಸಂಕಟ ಪಡುತ್ತಿದ್ದವಳೆಂದರೆ ಗಂಗೆ ಮಾತ್ರ. ಪರಸ್ಪರ ಬೆಟ್ಟದಷ್ಟು ಪ್ರೀತಿ ಹೊತ್ತಿದ್ದ ಅಪ್ಪ ಮಗಳಿಬ್ಬರೂ ಒಂದು ದಿನವೂ ಅದನ್ನು ಮುಖತಃ ವ್ಯಕ್ತಪಡಿಸಿಕೊಳ್ಳುವುದಿರಲಿ ಮುಖಕ್ಕೆ ಮುಖ ಕೊಟ್ಟು ಒಮ್ಮೆಯೂ ಮಾತಾಡಿ ಕೊಂಡವರಲ್ಲ. ಅಪ್ಪ ಅಂದರೆ ಒಂದು ರೀತಿ ಸಂಕೋಚ, ಅಂಜಿಕೆ. ಒಂದು ಮಾತಾಡಿದರೂ ಎಲ್ಲಿ ಜಾಸ್ತಿ ಆದೀತು ಎನ್ನುವ ಭಯ. ಇಷ್ಟಿದ್ದರೂ ಅವಳು ಸದಾ ಅಪ್ಪನ ಧ್ಯಾನಿ. ಮನೆಯವರೆಲ್ಲಾ ಅಪ್ಪನನ್ನು ಕಡೆಗಣಿಸಿ ನೋಡುತ್ತಿದ್ದುದನ್ನಂತೂ ಇವಳ ಕೈಲಿ ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಆ ಗಂಡು ಸಂತತಿಯೊಳಗೆ ತನ್ನ ಮಾತಿಗಾಗಲಿ, ಭಾವನೆಗಳಿಗಾಗಲಿ ಯಾವುದೇ ಬೆಲೆ ಇಲ್ಲ ಎಂಬುದು ಅವಳಿಗೆ ಅರ್ಥವಾಗಿತ್ತು. ಹಾಗಾಗಿ ಆದಷ್ಟು ತೆಪ್ಪಗಿರುವುದನ್ನು ರೂಢಿಸಿಕೊಂಡಿದ್ದಳು.

ಪ್ರತಿದಿನ ಅಪ್ಪನಿಗಾಗಿ ಊಟ ಕಟ್ಟಿಕೊಂಡು ಹೊಲದ ಗುಡಿಸಲಿಗೆ ಹೋಗೋದು ಅಲ್ಲಿ ಅಪ್ಪನಿಂದ “ಬಂಚತ್ ನನಗೆ ಆ ಮನೆ ಊಟ ತರಬೇಡ ಅಂತ ಎಷ್ಟ್ಸಾರಿ ಹೇಳೋದು ನಡಿ ಇಲ್ಲಿಂದ” ಅಂತ ಬೈಸಿಕೊಂಡು ವಾಪಸ್ ಬರೋದು ಗಂಗೆಯ ಪ್ರತಿದಿನದ ಕಾಯಕವಾಗಿತ್ತು. ಈ ಹದಿನೈದು ದಿನದಿಂದ ಅಪ್ಪ ನಾರಿಪುರದ ಅಬ್ದುಲ್ಲನ ಹೊಟೇಲಿನಲ್ಲಿ ಲೆಕ್ಕ ಬರೆಸಿ ಒಪ್ಪತ್ತು ಮಾತ್ರ ಉಂಡು ಬರುತ್ತಿದ್ದನು. ಇದನ್ನು ನೋಡಲಾರದ ಗಂಗೆ ಧೈರ್ಯ ಮಾಡಿ ಒಂದು ದಿನ ಅಪ್ಪನ ಮುಂದೆ ಮಾತಿಗೆ ಕುಳಿತಳು. “ಅಪ್ಪ ನಾನು ಹಿಂಗಂತೀನಿ ಅಂತ ತಪ್ಪು ತಿಳಿಬೇಡಿ. ನಾನು ಮಾತಾಡದೆ ಇದ್ರೆ ನೀವು ನರಳೋದು ತಪ್ಪದಿಲ್ಲ. ನೋಡ್ರಪ್ಪ  ಇವರೆಲ್ಲರ ಜೊತೆ ಎಣಗಾಡಿ ಎಣಗಾಡೇ ನಿಮ್ಮ ಆಯಸ್ಸ್  ಕಳ್ದೋಯ್ತು. ಈ ಇಳಿ ವಯಸ್ನಲ್ಲಿ ನೀವ್ ಯಾಕೆ ಅಣ್ಣಂದಿರಿಗೆ ನಿಷ್ಟೂರಾಯ್ತಿರಿ. ಏನಾದ್ರು ಆದ್ರೆ ಅವಮಾನ ಬವುಮಾನ ಒತ್ಕೊಳ್ಳೋರು ಅವರು. ನಾಳೆ ಕರ್ದು ಕಳ್ಸಕೆ ಅಣ್ಣ ತಮ್ಮಂದಿರು ಬೇಕು. ನೀವು ಮದುವೆಗೆ ಒಪ್ಕೊಳ್ಳಿ ಅದೇನ್ ಮಾಡ್ತಾರೋ ಮಾಡ್ಲಿ. ನನ್ ಮಗಳು ಮದುವೆ ಆಗೋ ಆಸೆಗೆ ಹಿಂಗ್ ಅಂತವ್ಳೆ ಅನ್ಕೋಬೇಡಿ. ನಾನಿರೋ ತನಕ ಇವರಿಗೆಲ್ಲಾ ಭಾರವೆಯ. ಗಿರಿಧರಣ್ಣನು ನನ್ನ ಮದುವೆ ಆಗಲಿ ಅಂತ ತನ್ನ್ ಮದುವೆ ಮುಂದಕ್ ಹಾಕ್ಕೊಂಡು ಕೂತವ್ನೆ. ಈ ಪಡಿಪಾಟ್ಲೆಲ್ಲಾ ಯಾಕ್ ಬೇಕು ಹೇಳಿ ಎಂದು ಅಪ್ಪನ ಮುಖ ನೋಡಿದಳು. ಕಣ್ಣಲ್ಲಿ ಉಕ್ಕುತ್ತಿದ್ದ ನೀರು ಮಗಳಿಗೆ ಕಾಣಿಸಬಾರದೆಂದು ತಲೆತಗ್ಗಿಸಿ ಕುಳಿತಿದ್ದ ಅಪ್ಪ ಅವಳು ಮರೆಯಾಗುವವರೆಗೂ ತಲೆ ಎತ್ತಿ ನೋಡಲೇ ಇಲ್ಲ.

(ಮುಂದುವರೆಯುವುದು)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೋಹನನ ರಂಗಿನಾಟವೂ ಚಂದ್ರಹಾಸನ ಮೋಜಿನಾಟವೂ…
ಈ ವರೆಗೆ…

ಬಡ ಕುಟುಂಬದ ಗಂಗೆಯನ್ನು ನೋಡಲು ಮೋಹನ ಬರುತ್ತಾನೆ. ಹುಡುಗಿ ಒಪ್ಪಿಗೆಯಾಗಿ ಮದುವೆಗೆ ಅವಸರಿಸುತ್ತಾನೆ. ಅವನ ಮನೆ, ಕುಟುಂಬ ನೋಡದೆ ಮದುವೆ ಸಾಧ್ಯವಿಲ್ಲವೆಂದು ಗಂಗೆಯ ಅಪ್ಪ ಖಡಾ ಖಂಡಿತವಾಗಿ ಹೇಳಿದಾಗ ಮೋಹನ ಆಕೆಯ ಕುಡುಕ ಅಣ್ಣ ಚಂದ್ರಹಾಸನನ್ನು ಬುಟ್ಟಿಗೆ ಹಾಕಿ ಕೊಳ್ಳುತ್ತಾನೆ. ಮುಂದೇನಾಯ್ತು? ಓದಿ… ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೨

ವಾರ ಕಳೆದು ಇಂದು ಗಂಗೆಯ ಮನೆ ಹೊಕ್ಕಿದ್ದ ಮೋಹನ ಮುಖತಃ ಅವಳನ್ನು ಕಂಡು ಮುದಗೊಂಡ. ಅವಳ ಅಪ್ಪನ  ಸಂದರ್ಶನವನ್ನು ಆತಂಕದಿಂದಲೇ  ಎದುರಿಸಿ, “ಬನ್ನಿ ಬಾವ ಹೊರಗೆ ಸುತ್ತಾಡಿಕೊಂಡು ಬರೋಣ” ಎಂದು ಚಂದ್ರಹಾಸನನ್ನು ಕರೆದುಕೊಂಡು  ಹೊರಬಂದ. ಈ ಚಂದ್ರಹಾಸನನ್ನು ಆಡಿಸುವ, ಬೀಳಿಸುವ ಮಟ್ಟು ಕಂಡುಕೊಂಡಿದ್ದ ಮೋಹನ ಅವನನ್ನು ಸೀದಾ ನಾರಿಪುರದ ಸರ್ಕಲ್ ನಲ್ಲಿದ್ದ ಮಿಲ್ಟ್ರಿ ಹೋಟೆಲಿಗೆ ಕರೆದು ಕೊಂಡು ಹೋದ. ಹೆಂಡ ಬಾಡಿನ ಸಮಾರಾಧನೆ ಮಾಡಿಸಿ ತನ್ನ ಅಳಲು ತೋಡಿಕೊಂಡ. “ನಮ್ಮ ಚಿಕ್ಕಮ್ಮ ಬಹಳ ಘಾಟಿ ಬಾವ. ನಾನು ಅವಳ ಅಣ್ಣನ ಮಗಳನ್ನು ಮದುವೆ ಆಗಬೇಕು ಅಂತ ಹಠ ಹಿಡಿದು ಕೂತಿದ್ದಾಳೆ. ಮೂರ್ಛೆರೋಗ ಬರುವ ಆ ಹುಡುಗೀನ ಹೇಗೆ ಮದುವೆ ಮಾಡ್ಕೊಳ್ಳಿ ಹೇಳಿ. ಮನೆಲಿ ನನಗೆ ನೆಮ್ಮದಿ ಅನ್ನೋದೇ ಇಲ್ಲ. ಹಾಗಾಗಿ ಹೆಚ್ಚಾಗಿ ಪೇಟೆಯಲ್ಲಿ ಗೆಳೆಯರ ರೂಮಿನಲ್ಲಿ ಇರ್ತಿನಿ. ಅಂತದ್ರಲ್ಲಿ ಬೇರೆ ಹುಡುಗಿನ ಮದುವೆ ಮಾಡ್ಕೊಂಡು ಈಗ ಮನೆಗೆ ಕರೆದುಕೊಂಡು ಬರ್ತಿನಿ ಅಂದ್ರೆ ಖಂಡಿತಾ ಅವಳು ಒಪ್ಪೋದಿಲ್ಲ. ನೀವೆಲ್ಲಾ ಹೀಗೆ ಮದುವೆ ವಿಷಯ ಮಾತಾಡೋಕೆ ಮನೆಗೆ ಬರ್ತಿದ್ದೀರಿ ಅಂದ್ರೆ ದೊಡ್ಡ ರಾದ್ಧಾಂತ ಮಾಡಿ ಬೀದಿಯಲ್ಲಿ ನಿಂತು ನಮ್ಮೆಲ್ಲರ ಮರ್ಯಾದಿನೇ ಹರಾಜಾಕಿ ಬಿಡ್ತಾಳೆ. ಪರಿಸ್ಥಿತಿ ಹೀಗಿರುವಾಗ, ನನಗೆ ಏನ್ಮಾಡೋದು ಅಂತ್ಲೆ ತೋಚುತ್ತಿಲ್ಲ ಅಂದ. ಮೋಹನನ ಬಗ್ಗೆ ಕನಿಕರಗೊಂಡ ಚಂದ್ರಹಾಸ, “ನೀವು ಏನೂ ಯೋಚನೆ ಮಾಡಬೇಡಿ ಬಾವ. ನಮ್ಮ ಅವ್ವ ಅಪ್ಪ ಬರ್ದಂಗೆ ನೋಡ್ಕೊಳ್ಳೋದು ನನ್ನ ಜವಾಬ್ದಾರಿ. ಒಬ್ಬ ತಮ್ಮನ್ನ ಮಾತ್ರ ನನ್ನ ಜೊತೆ ಕರ್ಕೊಂಡು ಬರೋಕೆ ವ್ಯವಸ್ಥೆ ಮಾಡ್ಕೋತಿನಿ. ನಿಮ್ಮ ಚಿಕ್ಕಮ್ಮನ್ನ ಹೆಂಗ್ ಸಂಭಾಳುಸ್ಬೇಕು ಅಂತ ಒಂಚೂರು ತಲೆ ಓಡ್ಸಿ” ಎಂದು ಧೈರ್ಯ ತುಂಬಿ ಕಳುಹಿಸಿದ.

ಗಂಡು ಮಕ್ಕಳು ಅನ್ನುವ ಅತಿಯಾದ ಮೋಹದಲ್ಲಿ ಕುರಾಡಾಗಿದ್ದ ಅವ್ವ, ದೇವರಂತ ಅಪ್ಪನಿಗೆ ಆ ಮನೆಯಲ್ಲಿ ಕವಡೆ ಕಿಮ್ಮತ್ತು ಸಿಗದಂತೆ ಮಾಡಿದ್ದಳು. ಇನ್ನು ಗಂಗೆಯೋ ಎಲ್ಲರ ಕಾಲಿನ ಚೆಂಡಾಗಿದ್ದಳು. ಅವಳು ಹಾಗಲ್ಲ ಹೀಗೆ ಎಂದಳೋ ಮುಗಿದೇ ಹೋಯಿತು. ಆರು ಜನ ಅಣ್ಣ ತಮ್ಮಂದಿರ ಕಾಲುಗಳು ಜಾಡಿಸಲು ಸದಾ ಸಿದ್ಧವಾಗಿಯೇ ಇರುತ್ತಿದ್ದವು. ಹಾಗಂತ ಗಂಗೆ ಏನು ಹೆದರಿ ಮುಲುಕುವ ಸ್ವಭಾವದವಳೇನಾಗಿರಲಿಲ್ಲ. ತನಗೆ ಸರಿ ಅನ್ನಿಸಿದ್ದನ್ನು ಅಣ್ಣಂದಿರೊಂದಿಗೆ ಗುದುಮುರಿ ಬಿದ್ದೋ, ಇಲ್ಲ ಕದ್ದು ಮುಚ್ಚಿಯೋ ಜಾಣತನದಿಂದ ಮಾಡಿಯೇ ತೀರುತ್ತಿದ್ದಳು. ಅವಳು ಕೂಡ ಅಣ್ಣಂದಿರ ಬೈಗುಳಕ್ಕೆ ಅವರ ಒರಟುತನಕ್ಕೆ ಜಡ್ಡು ಗಟ್ಟಿದವಳಂತಾಗಿದ್ದಳು. ಒಟ್ಟಿನಲ್ಲಿ ಆ ಮನೆಯಲ್ಲಿ ಗಂಡು ಮಕ್ಕಳ ಇರುವಿಕೆ ಅಂದರೆ ಆನೆ ನಡೆದದ್ದೇ ದಾರಿ ಎಂಬಂತಿತ್ತು. ಹೀಗಿರಲಾಗಿ ಚಂದ್ರಹಾಸನಿಗೆ, ಅಪ್ಪನನ್ನು, ಮೋಹನನ ಮನೆಗೆ ಹೋಗದಂತೆ ತಡೆಯುವುದೇನು ಕಷ್ಟದ ಕೆಲಸವಾಗಿರಲಿಲ್ಲ.

ತಮ್ಮ ಗಿರಿಧರನನ್ನು  ಬೆನ್ನಿಗೆ ಹಾಕಿಕೊಂಡು, ಅರವತ್ತು ಮೈಲು ದೂರ ಇರುವ ಭೋಗನೂರಿಗೆ ಬಂದು ತಲುಪಿದ್ದ ಚಂದ್ರಹಾಸ. ಭೋಗನೂರಿನ ಬಸ್ ಸ್ಟಾಂಡಿನಲ್ಲಿ ಕಾಯುತ್ತಾ ಕುಳಿತಿದ್ದ ಮೋಹನ ಈ ಇಬ್ಬರು ಅಣ್ಣ-ತಮ್ಮಂದಿರನ್ನು ಕರೆದುಕೊಂಡು ಮನೆಗೆ ಹೊರಟ. ದಾರಿಯುದ್ದಕ್ಕೂ ತನ್ನ ಮನೆತನದ ಗುಣಗಾನ ನಡೆಸಿದ. ತನ್ನ ಬೆನ್ನಿಗೆ ಹುಟ್ಟಿದ ತಂಗಿ ಇಬ್ಬರು ತಮ್ಮಂದಿರ ಬಗ್ಗೆ ಬಹಳ ಪ್ರೀತಿಯ ಮಾತುಗಳನ್ನಾಡಿದ. ಮನೆ ಸಮೀಪಿಸುತ್ತಿದ್ದಂತೆ ಅನತಿ ದೂರದಲ್ಲೇ ಮನೆಯತ್ತ ಕೈ ತೋರಿಸಿ “ಅದೇ ನಮ್ಮ ಮನೆ” ಎಂದು ಹೇಳಿದ. ಹರಕಲು ಮುರುಕಲಾಗಿದ್ದ ಆ ದೊಡ್ಡ ತೊಟ್ಟಿ ಮನೆಯನ್ನು ಕಂಡು ಅಣ್ಣತಮ್ಮಂದಿರ ಮುಖ ಕಳೆಗುಂದಿತು. ಇದನ್ನು ಊಹಿಸಿದ್ದ ಮೋಹನ ಕೂಡಲೇ “ಗಾಬ್ರಿಯಾಗಬೇಡಿ ಇನ್ನೇನು ಜಮೀನಿನಲ್ಲಿ ಹೊಸ ಮನೆಗೆ ಕೈ ಹಾಕ್ಬೇಕು ಅಂತಿದಿವಿ. ಇದು ಟೆಂಪ್ರವರಿ ಅಷ್ಟೇ” ಬನ್ನಿ ಕಾಫಿ ಕುಡಿರಿ, ನಮ್ಮ ಜಮೀನು ತೋರಿಸಿಕೊಂಡು ಬರ್ತಿನಿ” ಎಂದು ಮನೆಯ ಒಳ ನಡೆದ. ತನ್ನ ಚಿಕ್ಕಮ್ಮನನ್ನು ಕರೆದು “ಇವರು ನನ್ನ ಕಾಲೇಜ್ ಫ್ರೆಂಡ್ಸ್” ಎಂದು ಪರಿಚಯಿಸಿ ಟೀ ಇಡಲು ಹೇಳಿದ. ಚಿಕ್ಕಮ್ಮನಿಗೆ ಮೊದಲೇ ಇವನು ತಾಕೀತು ಮಾಡಿದ್ದರಿಂದಾಗಿ ಏನೊಂದು ಮಾತಾಡದೆ ಗಂಟು ಮೂತಿಯಲ್ಲೊಮ್ಮೆ ಅವರನ್ನೆಲ್ಲ ಕೆಕ್ಕರಿಸಿ ನೋಡಿ “ಹೂಂ” ಎಂದು ಒಳ ನಡೆದಳು.

ಟೀ ಸಮಾರಾಧನೆಯ ನಂತರ ತೋಟದ ದಾರಿ ಹಿಡಿದ ಬಾವ, ಬಾಮೈದುನರಿಗೆ ಮೋಹನ ದಾರಿ ಉದ್ದಕ್ಕೂ ತನ್ನ ತೋಟ, ಹೊಲ, ರಾಶಿ ರಾಶಿ ಒಟ್ಟಾಗುವ ಫಸಲುಗಳ ಬಗ್ಗೆ ಸವಿಸ್ತಾರವಾಗಿ ಹೇಳಿದ. ಸುತ್ತಿ ಬಳಸಿ ಒಂದು ವಿಶಾಲವಾದ ತೋಟದ ಬಳಿ ಬಂದು ನಿಂತ. ದೃಷ್ಟಿತಾಗಿತೋ ಎನ್ನುವಂತೆ ಮೈತುಂಬ ಎಳನೀರನ್ನು ಹೊತ್ತು ನಲಿಯುತ್ತಿದ್ದ ದೊಡ್ಡ ದೊಡ್ಡ ತೆಂಗಿನ ಮರಗಳ ನಡುವೆ ಅವರನ್ನು ಕೂರಿಸಿದ. ಮಾರು ದೂರದಲ್ಲಿ ನೆಲಕ್ಕೆ ಬಿದ್ದ ಕಾಯಿಗಳನ್ನು ಮಂಕರಿಗೆ ತುಂಬಿಸುತ್ತಿದ್ದ ಚಿನ್ನಪ್ಪನನ್ನು ಕರೆದು “ಇವತ್ತು ಎಷ್ಟು ಮಂಕ್ರಿ ತಳ್ಳು ಸಿಕ್ಕಿದ್ವೋ? ಎಲ್ಲನೂ ಎಲ್ಲಿ  ಒಟ್ಟ್ತಿದ್ದೀವಿ ಎಂದು ಕೇಳಿದ. ಚಿನ್ನಪ್ಪ ತಲೆ ಕೆರೆದುಕೊಂಡು ಹುಳ್ಳಗೆ ನಗುತ್ತಾ “ಈಗೊಂದು ಹತ್ತು ಮಂಕ್ರಿ  ಸಿಕ್ಕವೆ ಮೋನಣ್ಣ. ಎಲ್ಲಾನು ಶಿವಣ್ಣನ ಮನೆ ಫಸ್ಲು ಕೋಣೆಗೆ ಒಟ್ಟ್ತಿದ್ದೀವಿ” ಎಂದು ಹೇಳಿ ಕುಡ್ಲು ಹಿಡಿದು ಸರ ಸರನೆ ಮರ ಏರಿ ನಾಲ್ಕು ಎಳನೀರು ಕಿತ್ತು ಕೆಳ ಹಾಕಿದ. ಎಳನೀರು ಕುಡಿದು, ಚಿನ್ನಪ್ಪನ ಕಿಸೆಗೆ ಇಪ್ಪತ್ತು ರುಪಾಯಿ ತುರುಕಿ “ಇಲ್ಲೆ ಕೂತು ನಿಂತು ಕತೆ ಹಾಕ್ಬೇಡಿ.. ಬೇಗ ಕೆಲ್ಸ ಮುಗ್ಸಿ ನೀನು ಕೆಂಚನೂ ಮನೆ ಕಡೆಗ್ ಬನ್ನಿ” ಎಂದು ಹೇಳಿ ಚಂದ್ರಹಾಸ ಗಿರಿಧರರನ್ನು ಕರೆದುಕೊಂಡು ಅಲ್ಲೇ ಸುತ್ತಮುತ್ತ ಇದ್ದ ಗದ್ದೆಗಳೆಡೆಗೆ ನಡೆದ. ಬತ್ತದ ತೆನೆ ಹೊತ್ತು ನಳನಳಿಸುತ್ತಿದ್ದ ಗದ್ದೆಯನ್ನು ತೋರಿಸಿ “ಇದಿಷ್ಟು ನಮ್ಮ ಗದ್ದೆ. ಈಗ ಸದ್ಯಕ್ಕೆ ನಮ್ಮ ಚಿಕ್ಕಮ್ಮನೇ ಆಳು ಕಾಳು ಇಟ್ಕೊಂಡು ಇದನ್ನೆಲ್ಲ ನಿಭಾಯಿಸ್ತಿದ್ದಾಳೆ ಎಂದ.

ಇನ್ನೂ ನಾಲಿಗೆ ಮೇಲೆಯೇ ಕುಳಿತಿದ್ದ ಎಳನೀರಿನ ಸಿಹಿಯಾದ ರುಚಿ ಚಪ್ಪರಿಸುತ್ತಾ, ಕಿವಿಗೆ ಇಂಪಾಗಿ ಮೆತ್ತಿಕೊಂಡಿದ್ದ ಫಸಲು ರಾಶಿಗಳ ಲೆಕ್ಕಾಚಾರದಲ್ಲಿಯೇ ಕಳೆದು ಹೋಗಿದ್ದ ಚಂದ್ರಹಾಸ, ಎದೆಯುಬ್ಬಿಸಿ “ಸಾಕು ನಡಿರೀ ಬಾವ.. ಇದಕ್ಕಿಂತ ನನ್ನ ತಂಗಿಗೆ ಇನ್ನೇನ್ ಬೇಕು” ಎಂದು ಹೆಮ್ಮೆಯಿಂದ ಮೋಹನನ ಬೆನ್ನು ಚಪ್ಪರಿಸಿದ. ಆಗಲೇ ಮಧ್ಯಾಹ್ನವಾಗಿದ್ದರಿಂದ ಭೋಗನೂರಿನ ಹೋಟೆಲ್ನಲ್ಲಿ ಇಬ್ಬರಿಗೂ ಹೊಟ್ಟೆ ಬಿರಿಯುವಂತೆ ಊಟ ಹಾಕಿಸಿದ ಮೋಹನ, ನಿಧಾನವಾಗಿ ಮದುವೆಯ ಖರ್ಚು ವೆಚ್ಚದ ಮಾತು ಎತ್ತಿದ. “ನೋಡಿ ಬಾವ ನನಗೆ ಈ ಆಡಂಬರ ಗಿಡಂಬರ ಎಲ್ಲಾ ಇಷ್ಟ ಇಲ್ಲ. ಹಾಗಾಗಿ ಸಿಂಪಲ್ಲಾಗಿ ಯಾವುದಾದ್ರು ದೇವಸ್ಥಾನದಲ್ಲಿ  ಮದುವೆ ಮಾಡಿಕೊಟ್ರೆ ಸಾಕು. ಈಗ ನನ್ ಪರಿಸ್ಥಿತಿ ನಿಮಗೆ ಗೊತ್ತೇ ಇದೆ. ಎಲ್ಲಾ ವ್ಯವಹಾರನೂ ಚಿಕ್ಕಮ್ಮನೆ ಹಿಡ್ಕೊಂಡು ಕೂತಿರೋದ್ರಿಂದ, ಈಗ ಸದ್ಯಕ್ಕೆ ಮದುವೆಗೆ ಹಣ ಹೊಂದಿಸೋದು ನನಗೆ ಕಷ್ಟ ಆಗುತ್ತೆ. ಹಾಗಾಗಿ ನೀವೇ ಎಲ್ಲಾ ಖರ್ಚನ್ನು ಹಾಕಿ ಮಾಡಿದ್ರೆ ನಾನು ಪೂನದಲ್ಲಿ ಡ್ಯೂಟಿ ರಿಪೋರ್ಟ್ ಮಾಡ್ಕೊಂಡ್ ಕೂಡ್ಲೇ  ನಿಮಗೆ ಆ ದುಡ್ಡನ್ನೆಲ್ಲಾ ಕಳಿಸಿಬಿಡ್ತಿನಿ” ಎಂದು ಹೇಳಿ ಚಂದ್ರಹಾಸನ ಜೇಬಿಗೆ ಇನ್ನೂರು ರೂಪಾಯಿ ದುಡ್ಡನ್ನಿಟ್ಟ. ನೂರರ ಎರಡು ಭಾರೀ ಮೊತ್ತಕ್ಕೆ ಕಣ್ಣರಳಿಸಿದ ಚಂದ್ರಹಾಸ ಮನೆಯಲ್ಲಿ ಮಾತಾಡುವುದಾಗಿ ಹೇಳಿ ಮೋಹನನ ಕೈ ಕುಲುಕಿ ಅಲ್ಲಿಂದ ಬೀಳ್ಕೊಂಡ. (ಇಲ್ಲಿ ಬಳಸಿರುವ ಚಿತ್ರಗಳು ಸಾಂದರ್ಭಿಕ‌)

(ಮುಂದುವರೆಯುವುದು)

ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗಂಗೆಯ ನೋಡಲು ಬಂದಾ…
ತೇಲುಗಣ್ಣು ಮೇಲುಗಣ್ಣಾಗಿ ಅಮಲಿನ ಆನಂದ ಅನುಭವಿಸುತ್ತಿದ್ದ ಚಂದ್ರಹಾಸ “ನನಗೂ ನೀವು ಬಾಳನೇ ಇಷ್ಟ ಆಗ್ಬುಟ್ರಿ ಭಾವ. ನೋಡಕು ಟಾಕು ಟೀಕಾಗಿದ್ದೀರಿ. ಒಂದು ಕುಡಿಯದಿಲ್ಲ ಸೇದದಿಲ್ಲ. ಇದಕಿಂತ ಇನ್ನೇನ್ ಬೇಕ್ ನನ್ನ ತಂಗಿಗೆ ಎಂದ. ಚಂದ್ರಹಾಸ ಹೀಗೇಕೆ ಹೇಳಿದ? ಓದಿ.. ರಂಗಭೂಮಿ ಕಲಾವಿದೆ ವಾಣಿ ಸತೀಶ್‌ ಬರೆಯುತ್ತಿರುವ ಅಂಕಣ ʼತಂತಿ ಮೇಲಣ ಹೆಜ್ಜೆʼ ಯ ಹೆಜ್ಜೆ- ೧

ಬಿಟ್ಟರು ಕಣ್ಕಟ್ಟಿ ಶುರುವಿಟ್ಟಿತು ಆಟ
ಹಿಡಿದವರ ನಂಬು ಎಂದರು ಪಾಪ ಪುಣ್ಯಗಳ ಪಾತಳಿಯಲ್ಲಿ
ಆಸರೆಯ ಹೊರತು ಬದುಕ ಊಹಿಸಲುಂಟೆ ?!
ಹೊತ್ತ ಭಾರವ ಇಳಿಸಿ ಕಟ್ಟಿದರು ಸೂತ್ರ…

ಆಗಷ್ಟೇ ಮಟ ಮಟ ಮಧ್ಯಾಹ್ನದ ಉರಿ ಬಿಸಿಲಿನ ತಾಪ ಇಳಿಯ ತೊಡಗಿತ್ತು. ಇತ್ತ ಅಪ್ಪ ಹೊಟ್ಟೆಗೆ ಬೆಂಕಿ ಬಿದ್ದವನಂತೆ ಚಡಪಡಿಸುತ್ತಾ ಮುನಿದು ಪಡಸಾಲೆಯ ಒಂದು ಮೂಲೆಯಲ್ಲಿ ಕುಳಿತಿದ್ದ. ಅವ್ವ ಮಾತ್ರ ಒಳಗಿನಿಂದ ಒಂದೇ ಸಮನೇ “ ಏ ಸುಮ್ನೇ ಕೂತ್ಕೊಳಪ್ಪ  ಕಂಡಿದ್ದೀನಿ. ಬೆಳೆದ ಗಂಡು ಮಕ್ಕಳು ಹೆಂಗೋ ತಂಗಿ ಜವಾಬ್ದಾರಿ ತಕ್ಕೊಂಡು ಗಂಡು ಕರ್ಕೊಂಡು ಬತ್ತಾವ್ರಲ್ಲ ಅನ್ನೋದು ಬುಟ್ಟು, ಅವರ್ನೆಲ್ಲಾ ಕೇಡುಗ್ರು ಅಂತಿದ್ದೀಯಲ್ಲ ಸರಿಯಾ” ಎಂದು ಏನೇನೋ ಬಡ ಬಡಿಸುತ್ತಿದ್ದಳು. ಸಹನಾ ಮೂರ್ತಿಯಂತಿದ್ದ ಅಪ್ಪ, ಆ ದಿನ ಅವ್ವನೆದುರು ಸಿಡಿದು ಏರು ದನಿಯಲ್ಲಿ ಕೂಗಿದ. “ಮುತ್ತಿನಂತ ಮಗಿನ ಬೀದಿಲೋಗೋ ಮಾರಿಗೆ ಕಟ್ಬೇಕು ಅಂತ ಹೊರಟಿದ್ದೀರಲ್ಲ.. ಬಿಲ್ ಕುಲ್ ನನಗಿದು ಒಪ್ಪಿಗೆ ಇಲ್ಲ” ಎಂದ. ಆ ಮಾತಿಗೆ ಅವ್ವ “ಈಗೇನು ಎದೆ ತನ್ಕಾ ಬೆಳೆದಿರೋ ಈ ಗಂಡ್ ಮಕ್ಕಳನ್ನ  ಎದ್ರಾಕ್ಕೊಂಡು ಕೂತ್ಕೊತಿಯಾ ಹೇಳು. ಅವರು ಅಷ್ಟೋ ಇಷ್ಟೋ  ಓದಿರೋರು. ಅವರ್ಗೇನು ಗೊತ್ತಾಗದಿಲ್ಲ ಅಂದ್ಕೊಂಡಿದಿಯಾ. ನೋಡನ ಮೊದ್ಲು ಹುಡುಗ ಮನೆಗೆ ಬಂದೋಗ್ಲಿ ಇರು” ಎಂದಳು.

ಪಡಸಾಲೆಯ ಮಂಚದ ಮೇಲೆ ಅಂಗಾತ ಮಲಗಿ ಸೂರಿಗೆ ದೃಷ್ಟಿ ನೆಟ್ಟು ಇದನ್ನೆಲ್ಲಾ ಕೇಳಿಸಿ ಕೊಳ್ಳುತ್ತಿದ್ದಳು ಗಂಗೆ. ಸಣ್ಣ ಪುಟ್ಟ ಕಾರಣಗಳನ್ನು ಹಿಡಿದು ಸದಾ ಕೈ ಎತ್ತಲು ಮುಂದಾಗುತ್ತಿದ್ದ ದೊಡ್ಡ ಅಣ್ಣ ಚಂದ್ರಹಾಸನೊಡನೆ ಮಾತು ನಿಲ್ಲಿಸಿ ಅದಾಗಲೇ ಏಳು ವರ್ಷಗಳೇ ಕಳೆದಿತ್ತು. ಇಂದು ತಲೆಯ ಬಳಿ ಬಂದು ನಿಂತ ಅಣ್ಣ, “ಹುಡುಗ ಬಂದು ಆಚೆ ಜಗ್ಲಿ ಮೇಲೆ ಕೂತವ್ನೆ ಎದ್ದು ಒಂದು ಲೋಟ ಹಾಲ್ ತಕ್ಕೊಂಡು ಬಾ” ಎಂದ. ಅವಳಿಗೆ ಅಣ್ಣನನ್ನು ತಲೆ ಎತ್ತಿಯು ನೋಡ ಬೇಕೆನಿಸಲಿಲ್ಲ, “ನಿಮಗೆ ಕರ್ಕೊಂಡು ಬನ್ನಿ ಅಂದವರ್ಯಾರು? ನಾನ್  ಬರೋದಿಲ್ಲ ಹೋಗು” ಎಂದು ಮಕಾಡೆ ಮಗುಚಿ ಮಲಗಿದಳು. “ಹೂಂ…ಮನೆಲಿ ಮಡಿಕ್ಕೊಂಡು ಉಪ್ಪಿನಕಾಯಿ ಹಾಕಿ ನೆಕ್ತಿವಿ ನಿನ್ನ. ಎದ್ದೋಗಿ ಹೇಳಿದ್ದ್ ಮಾಡೆ” ಎಂದು ನೊರ ನೊರ ಹಲ್ಲು ಕಡಿದ. ಜಡ್ಡು ಗಟ್ಟಿದ್ದ ಅವನೊಡನೆ ಜಗಳಕ್ಕೆ ನಿಂತು ರಂಪಾಟ ಮಾಡಿದರೆ ಅಪ್ಪ ಎಲ್ಲಿ ಇನ್ನಷ್ಟು ನೊಂದು ಬಿಡುವರೋ ಎನ್ನುವ ಆತಂಕದಲ್ಲಿ ಗಂಗೆ ಗೊಣಗುತ್ತಲೇ ಎದ್ದು ಅಡಿಗೆ ಕೋಣೆಗೆ ನಡೆದಳು. ಅವಳ ಕೆದರಿದ ಕೂದಲನ್ನು ಸರಿ ಪಡಿಸಲು ಬಂದ ಅವ್ವನ ಕೈ ಕೊಸರಿ, ತಟ್ಟೆಯಲ್ಲಿಟ್ಟಿದ್ದ ಹಾಲಿನ ಲೋಟ ಹಿಡಿದು ಜಗುಲಿಗೆ ಬಂದಳು. ಹುಡುಗನ ಎದುರು ತಟ್ಟೆ ಹಿಡಿದು ಮುಖ ತಿರುಗಿಸಿ ನಿಂತಳು. ಹುಡುಗ ಮುಗುಳು ನಗುತ್ತಾ “ಅಯ್ಯೋ ನನಗೆ ಕಾಫಿ, ಟೀ ಎಲ್ಲಾ ರೂಢಿ ಇಲ್ಲ ಬೇಡ” ಅಂದ. ಇದು ಕಾಫಿ ಅಲ್ಲ ಹಾರ್ಲಿಕ್ಸು ಎಂದು ಹೇಳಿ ಅವನೆದುರು ಅದನ್ನು ಇಟ್ಟು ಬಂದಳು. ತಿಂಗಳಿಂದ ಹೊಟ್ಟೆ ನೋವೆಂದು ಬಳಲಿ ಬೆಂಡಾಗಿದ್ದ ಗಂಗೆ ಮನೆ ಮದ್ದು, ಆಸ್ಪತ್ರೆ ಎಂದೆಲ್ಲಾ ತಿರುಗಿ ಆಗಷ್ಟೇ ಸುಧಾರಿಸ ತೊಡಗಿದ್ದಳು. ಅಷ್ಟೂ ದಿನದ ಬಳಲಿಕೆಯಿಂದಾಗಿ ಅವಳ ಕಣ್ಣುಗಳು ತುಸು ಗುಳಿ ಬಿದ್ದಂತಾಗಿತ್ತು. ಜೊತೆಗೆ ಕೆದರಿದ್ದ ಕೂದಲು, ಅಲ್ಲಲ್ಲಿ ತೇಪೆ ಹಾಕಿಕೊಂಡು ಸುಕ್ಕು ಗಟ್ಟಿದ್ದ ಲಂಗ ರವಿಕೆ. ಹೀಗೆ ಈ ಎಲ್ಲಾ ಅಸ್ತವ್ಯಸ್ತದ ನಡುವೆಯೂ ನೋಡಲು ಬಂದ ಆ ಹುಡುಗನ ಕಣ್ಣಿಗೆ ಗಂಗೆ ಹಬ್ಬವಾಗಿಯೇ ಕಂಡಳು.

ಪಡಸಾಲೆಯಿಂದ ಹೊರ ಬಂದ ಅಪ್ಪ ಹುಡುಗನ ಮೂಲ ಮುಖಿಯ ವಿಚಾರಣೆಗಿಳಿದ. ತನ್ನ ಹೆಸರು ಮೋಹನನೆಂದು ಪರಿಚಯಿಸಿಕೊಂಡ ಹುಡುಗ, ತಾನೊಬ್ಬ ಅನಾಥ ಬಹಳ ಬೇಗ ತಂದೆ ತಾಯಿಯನ್ನು ಕಳೆದು ಕೊಂಡು ಬಿಟ್ಟೆ ಎಂದು ಹನಿಗಣ್ಣಾದ. ಊರಿನಲ್ಲಿ ತನ್ನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಇರುವುದಾಗಿಯೂ, ಸದ್ಯಕ್ಕೆ ಅಪ್ಪನ ಎರಡನೆಯ ಹೆಂಡತಿ ಚಿಕ್ಕಮ್ಮ ಎಲ್ಲವನ್ನೂ ನೋಡಿ ಕೊಳ್ಳುತ್ತಿದ್ದಾಳೆ ಎಂದು ಹೇಳಿದ. ಈ ತಿಂಗಳಲ್ಲಿ ತನ್ನ ಡಿಪ್ಲೊಮಾ ಕೋರ್ಸ್ ಮುಗಿಯುತ್ತಿದ್ದು, ಪೂನದಲ್ಲಿ ಕೆಲಸ ಸಿಕ್ಕಿರುವುದರಿಂದ ಆದಷ್ಟು ಬೇಗ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳ ಬೇಕಾಗಿದೆ. ಹಾಗಾಗಿ ಬೇಗ ಮದುವೆ ಮಾಡಿಕೊಟ್ಟಷ್ಟು ಅನುಕೂಲವಾಗುತ್ತದೆ ಎಂದ ತುಸು ಗೋಗರೆಯುವ ದನಿಯಲ್ಲಿ. ಅಪ್ಪನಿಗ್ಯಾಕೋ ಸಮಧಾನವಿಲ್ಲ. ಒಂದು ರೀತಿಯ ತಳ ಮಳ. “ಇಲ್ಲಪ್ಪ ನಿನ್ನ ಮನೆ ಮಠ, ಕುಟುಂಬ ಎಲ್ಲವನ್ನೂ ನೋಡದೆ ಹೆಂಗಪ್ಪ ಮದುವೆ ಮಾತಾಡಕಾಗ್ತದೆ” ಎಂದ. ಕಸಿವಿಸಿಗೊಂಡ ಮೋಹನ ʼಆಗ್ಲಿ ಎಲ್ಲವನ್ನೂ ನಿಮ್ಮ ಮಗನೊಂದಿಗೆ ಮಾತಾಡಿ ನೀವು ನಮ್ಮ ಮನೆಗೆ ಬರಲು ದಿನ ತಿಳಿಸುವೆʼ ಎಂದು ಹೇಳಿ ಚಂದ್ರಹಾಸನೊಂದಿಗೆ ಹೊರನಡೆದೇ ಬಿಟ್ಟ.

ಈ ಮನೆಗೆ ಮೋಹನನ ಆಗಮನವೇನು ಮೊದಲನೆಯದಾಗಿರಲಿಲ್ಲ. ಒಂದಷ್ಟು ತಿಂಗಳಿನಿಂದಲೂ ಕೆಲವು ಆಪ್ತರಲ್ಲಿ ತಾನು ಮದುವೆಯಾಗಬೇಕು  ಎಲ್ಲಿಯಾದರು ಹೆಣ್ಣುಗಳಿದ್ದರೆ ತಿಳಿಸಿ ಎಂದು ಹೇಳಿಕೊಂಡಿದ್ದ. ಹಾಗೆ ಹತ್ತಿರದವನಾಗಿದ್ದ ಕಾರ್ ಡ್ರೈವರ್ ಪುಂಡರೀಕ ಒಮ್ಮೆ ತನಗೆ ಗೊತ್ತಿರುವ ಹೆಣ್ಣೊಬ್ಬಳನ್ನು ತೋರಿಸುವುದಾಗಿ ಹೇಳಿ, ನಾರಿಪುರದ ಸರ್ಕಲ್ ನಲ್ಲಿ ಕಾಫಿ ವರ್ಕ್ಸ್ ನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ತನ್ನ ಪರಿಚಯದ ಹುಡುಗಿಯನ್ನು ತೋರಿಸಿದ. ಕುಂಬಳ ಕಾಯಿಯಂತೆ ಗುಂಡು ಗುಂಡಾಗಿದ್ದ ಆ ಹುಡುಗಿ ನಡೆದು ಬರುತ್ತಿದ್ದಾಳೋ ಅಥವಾ ಬುಡು ಬುಡನೇ ಉರುಳಾಡಿ ಕೊಂಡು ಬರುತ್ತಿದ್ದಾಳೋ ಎಂದು ಮೋಹನ ಗಲಿಬಿಲಿಗೊಂಡ. ಕಟ್ಟು ಮಸ್ತಾಗಿ ಸುಂದರವಾಗಿದ್ದ ಮೋಹನನಿಗೆ  ತನಗೆ ಎತ್ತಲಿಂದಲೂ ಹೊಂದಾಣಿಕೆಯಾಗದ ಆ ಹುಡುಗಿಯನ್ನು ಕಂಡು ಕೋಪ ನೆತ್ತಿಗೇರಿತು. ತನ್ನ ಸುತ್ತ ಜನರಿದ್ದಾರೆ ಎಂಬುದನ್ನು ಮರೆತು “ನನ್ನ ಮಗನೇ ಇಂತ ಹುಡುಗೀನ  ತೋರುಸ್ತಿಯೇನೋ” ಎಂದು ಪುಂಡರೀಕನನ್ನು ಹೊಡೆಯಲು ಮುಂದಾದ. “ಅಯ್ಯೋ, ನಿನ್ನ ದಮ್ಮಯ್ಯ ಹೊಡಿ ಬೇಡಣ್ಣೋ. ನನಗೆ ಒಬ್ಳು  ಅಕ್ಕ ಅವ್ಳೆ ಅಂತ ಹೇಳ್ತಿರ್ತಿನಲ್ಲ ಅವಳನ್ನ ಒಂದ್ಸರಿ ನೋಡ್ತಿಯ ಹೇಳು. ನನಗೆ ಬಾಳ ಹತ್ರದ ಪರಿಚಯ ಒಂತರ ಸ್ವಂತ ಅಕ್ಕುನ್ಗಿಂತ ಹೆಚ್ಚು. ತುಂಬಾ ಒಳ್ಳೆಯೋಳಣ್ಣ ನಿಂಗೆ ಒಳ್ಳೆ ಜೋಡಿ ಆಯ್ತಾಳೆ. ಆದ್ರೆ ಆ ಅಕ್ಕನ ಆರು ಜನ ಅಣ್ಣ ತಮ್ಮಂದಿರನ್ನ ಹೆಂಗ್ ಒಪ್ಪುಸ್ತಿಯ ಅನ್ನದು ಮಾತ್ರ ನಿನಗೆ ಬುಟ್ಟಿದ್ದು ಎಂದ. ತುಸು ಗೆಲುವಾದ ಮೋಹನ ನಿಂತ ಕಾಲಿನ ಮೇಲೆ ಹೊರಟೇ ಬಿಟ್ಟ. ಪುಂಡರೀಕ “ಅಕ್ಕನ್ಗೆ ಹುಷಾರಿಲ್ಲ. ಹಂಗಾಗಿ ಅವಳಿಗೆ ಮಾತ್ರೆ ತಗೊಂಡು ಬಾ ಅಂತ ಅವರಪ್ಪ ದುಡ್ಡ್ಕೊಟ್ಟು ಕಳಿಸೈತೆ. ನೀನು ನನ್ನ ಜೊತೆ ಬರಕೆ ಇದು ಸರಿಯಾದ ಟೈಮು ಕಣಣ್ಣೊ ಅಂದ. ಆದ್ರೆ ನೀನು ಹುಡುಗಿ ನೋಡಕೆ ಬಂದಿದ್ಯ ಅನ್ನದು ಮಾತ್ರ ಯಾರಿಗೂ ಗೊತ್ತಾಗ್ಬಾರದು” ಎಂದು ಹೇಳಿ ಕರೆದುಕೊಂಡು ಹೊರಟ.

ಲಿವರ್ಗೆ ಸೋಂಕು ತಗುಲಿ ಬಳಲುತ್ತಿದ್ದ ಗಂಗೆ ಹೆಚ್ಚು ಕಮ್ಮಿ ತಿಂಗಳಿಂದಲು ಮಂಚದಿಂದ ಎದ್ದಿರಲಿಲ್ಲ. ಮಾತ್ರೆ ಕೊಡುವ ನೆಪದಲ್ಲಿ ಪುಂಡರೀಕನೊಂದಿಗೆ ಮೋಹನನು ಒಳ ಹೋದ. ಗಂಗೆ ನಿದ್ದೆಯಲ್ಲಿದ್ದಳು ಸದ್ದು ಮಾಡದೇ ಅವಳ ತಲೆಯ ಬಳಿ ಮಾತ್ರೆಯನ್ನಿಟ್ಟು ಹೊರ ಬಂದರು. ಬಾಗಿಲ ಎದುರಿದ್ದ ದೊಡ್ಡ ಹಾಸು ಗಲ್ಲಿನ ಮೇಲೆ ಬಿಸಿಲು ಕಾಯಿಸುತ್ತಾ ಪರ ಪರ ಮೈ ಕೆರೆದು ಕೊಳ್ಳುತ್ತಾ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ, “ಇವರು ಗಂಗಕ್ಕನ ದೊಡ್ಡಣ್ಣ ಚಂದ್ರಹಾಸಣ್ಣ” ಎಂದು ಪರಿಚಯಿಸಿದ. ಕಜ್ಜಿಯಾಗಿದ್ದ ಮೈನಿಂದ ಜಿನುಗುತ್ತಿದ್ದ ರಕ್ತ ಕೀವನ್ನು ಒರೆಸಿ ಕೊಳ್ಳುತ್ತಾ ಮೋಹನನನ್ನು ಮಾತಾಡಿಸಿದ ಚಂದ್ರಹಾಸ. ಶರವೇಗದಲ್ಲಿ  ತನ್ನ ಕಾರ್ಯ ಸಿದ್ಧಿಯ ಲೆಕ್ಕಾಚಾರ ಹಾಕಿದ ಚಾಣಾಕ್ಷ ಮೋಹನ. ಹಳೆಯ ಪರಿಚಯದವನೇನೋ ಎಂಬಂತೆ ಆತ್ಮಿಯವಾಗಿ ಮಾತಾಡಿದ. ತುಸುವೂ ತಡ ಮಾಡದೆ ಚಂದ್ರಹಾಸನನ್ನು  ಒಪ್ಪಿಸಿ ಆಸ್ಪತ್ರೆಗೆ ಕರೆದು ಕೊಂಡು ಹೊರಟೇ ಬಿಟ್ಟ. ಆಸ್ಪತ್ರೆಯಲ್ಲಿ ಡಾಕ್ಟರ್  ಬರೆದು ಕೊಟ್ಟ ಮದ್ದನ್ನೆಲ್ಲಾ ಕೊಡಿಸಿದ. ಸಾಲದೆಂಬಂತೆ ಗಡಂಗಿಗೂ ಕರೆದು ಕೊಂಡು ಹೋಗಿ ಕಂಠ ಪೂರ್ತಿ ಕುಡಿಸಿ, ನಿಮ್ಮ ತಂಗಿಯನ್ನು ನನಗೆ ಮದುವೆ ಮಾಡಿ ಕೊಡಿ ಎಂದು ಧೈರ್ಯ ಮಾಡಿ ಕೇಳಿಯೇ ಬಿಟ್ಟ. ಕೈಯಲ್ಲಿ ಕೆಲಸವಾಗಲಿ, ಹಣವಾಗಲಿ ಇಲ್ಲದೆ ಮೈ ತುಂಬಾ ಕಜ್ಜಿ ಹತ್ತಿಸಿಕೊಂಡು ಪರದಾಡುತ್ತಿದ್ದ ಚಂದ್ರಹಾಸನಿಗೆ, ಇಂದು ದೇವರೇ ಬಂದು ಅಮೃತ ಕುಡಿಸಿದಂತಾಗಿತ್ತು. ತೇಲುಗಣ್ಣು ಮೇಲುಗಣ್ಣಾಗಿ ಅಮಲಿನ ಆನಂದ ಅನುಭವಿಸುತ್ತಿದ್ದ ಚಂದ್ರಹಾಸ “ನನಗೂ ನೀವು ಬಾಳನೇ ಇಷ್ಟ ಆಗ್ಬುಟ್ರಿ ಭಾವ. ನೋಡಕು ಟಾಕು ಟೀಕಾಗಿದ್ದೀರಿ. ಒಂದು ಕುಡಿಯದಿಲ್ಲ ಸೇದದಿಲ್ಲ. ಇದಕಿಂತ ಇನ್ನೇನ್ ಬೇಕ್ ನನ್ನ ತಂಗಿಗೆ. ಒಂದು ವಾರ ಬುಟ್ಕೊಂಡು ಬನ್ನಿ. ಅಷ್ಟೊತ್ತಿಗೆ ನಾನು ಮನೆಯವರನ್ನೆಲ್ಲ ಒಪ್ಸಿರ್ತಿನಿ ಎಂದು ತೊದಲುತ್ತಲೇ ನುಡಿದು ಭಾವಿ ಭಾವನನ್ನು ಬಿಟ್ಕೊಟ್ಟು ರಸ್ತೆಯ ತುಂಬಾ ಜೋಲಿ ಹೊಡೆಯುತ್ತಾ ಮನೆ ಸೇರಿದ್ದ.

(ಮುಂದುವರಿಯುವುದು…)

ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಂತಿ ಮೇಲಣ ಹೆಜ್ಜೆ
ಇದೊಂದು ಕಥೆಯಲ್ಲದ ಕಥೆ! ಚಿವುಟಿದಷ್ಟೂ ಚಿಗುರುವ ಹೆಣ್ಣಿನ ಆತ್ಮಬಲದ ಸೂಕ್ಷ್ಮತೆಯ ಅನಾವರಣದ ಕಥನ. ದೇಹವೊಂದು ವಿಕಸನಗೊಂಡಂತೆಲ್ಲ ಆ ದೇಹದ ಜತೆ ಹೆಣೆದುಕೊಂಡ ಸವಾಲುಗಳನ್ನು ಎದುರಿಸುತ್ತಾ ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಹಣ್ಣಾದ ಒಂಟಿ ಹೆಣ್ಣೊಬ್ಬಳ ಬದುಕಿನ ದಿಟ್ಟ ಪಯಣದ ಕಥನ. ಈ ಕಥನವನ್ನು “ತಂತಿ ಮೇಲಣ ಹೆಜ್ಜೆ” ಅಂಕಣದಲ್ಲಿ ಪಡಿ ಮೂಡಿಸಲಿದ್ದಾರೆ ರಂಗಭೂಮಿ ಹಾಗೂ ನೃತ್ಯ ಕಲಾವಿದೆ ವಿದುಷಿ ವಾಣಿ ಸತೀಶ್‌.

“ಏ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರ್ತು ಹುಲ್ಲೆನಲ್ಲ ತಿಳ್ಕೋ..” ಇದು ನನ್ನ ಹೈಸ್ಕೂಲಿನ ಗೆಳತಿ  ಪದೇಪದೇ ಹೇಳುತ್ತಿದ್ದ  ಮಾತು. ಆ ದಿನಗಳಲ್ಲಿ ನಮ್ಮ ನಡುವೇ ಯಾವುದೇ ಘನ ಗಂಭೀರ  ಚರ್ಚೆ ಆರಂಭವಾದರೂ ಅದು ಸುತ್ತಿ ಬಳಸಿ ಕೊನೆಯಾಗುತ್ತಿದ್ದದ್ದು ಮಾತ್ರ ಅವಳ ಇದೇ ಮಾತಿನಿಂದ. ಒಂದು ಸಾರಿ ಅವಳಲ್ಲಿ, “ಈ ಪದ ಅಂದ್ರೆ ನಿನಗೆ ಯಾಕೆ ಅಷ್ಟು ಇಷ್ಟ” ಅಂತ ಕೇಳಿದ್ದೆವು. ಆಗ ಅವಳು ಒಂದು ಕತೆಯನ್ನೇ ನಮ್ಮ ಮುಂದೆ ಬಿಚ್ಚಿಟ್ಟಿದ್ದಳು. ಅವಳ ಅತ್ತೆ ಬಹಳ ಸುಂದರಿಯೂ, ಚುರುಕಿನವಳೂ ಆಗಿದ್ದಳಂತೆ. ಅವಳ  ಸುತ್ತ ಸದಾ ಹೆಂಗಸರು ಮಕ್ಕಳು ಸಕ್ಕರೆಗೆ ಇರುವೆ ಮುತ್ತಿಕ್ಕುವಂತೆ ಸುಳಿದಾಡುತ್ತಲೇ ಇರುತ್ತಿದ್ದರಂತೆ. ಇದನ್ನು ಸಹಿಸದ ಅವರ ಗಂಡ ಸಣ್ಣ ಪುಟ್ಟ ಕಾರಣಗಳನ್ನು ಹಿಡಿದು ಬಡಿಯುತ್ತಿದ್ದನಂತೆ. ಹೊಡೆತ ತಿಂದ ಅತ್ತೆ ಮೂರು ಮೂರು ದಿನಕ್ಕೂ ತವರಿಗೆ ಬಂದು ಕೂರುವುದು, ತವರಿನವರು ಅತ್ತೆಗೆ ಬುದ್ಧಿ ಹೇಳಿ ಕಳಿಸುವುದು ಸಾಮಾನ್ಯವಾಗಿತ್ತು.  “ನಿನ್ನಂತ ಹೆಂಡ್ತಿನ ಬಾಳಿಸೋಕೆ ಏನವ್ವ ಅವನಿಗೆ ಸಂಕಟ” ಎಂದು ಪ್ರಶ್ನೆ ಮಾಡುತ್ತಿದ್ದ ನೆಂಟರಿಷ್ಟರಿಗೆ, ಊರಿನವರಿಗೆ, ಅತ್ತೆ ಹೇಳುತ್ತಿದ್ದುದು ಇದೊಂದೇ ಮಾತಂತೆ. “ಏ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರ್ತು ಹುಲ್ಲೆನಲ್ಲ ಅಲುವ್ರ….? ನನ್ನ ಬುದ್ದಿವಂತಿಕೆ ನನ್ನ ಹಿಂದೆ ಇರೋ ಜನ ಕಂಡ್ರೆ ನನ್ನ ಗಂಡುಂಗೆ ಹೆದ್ರುಕೆ. ನನ್ನುನ್ನ ಅವನ ಅಂಕೆ ಸಂಕೆಲಿಟ್ಕೊಬೇಕು ಅನ್ನೋ ಚಿತಾವಣೆ. ನಾನೇನು ಹೆಡ್ಡಿನೋ ಮಡ್ಡಿನೋ ಹೇಳಿ. ಬುಟ್ರೆ ಅವನ ಅಪ್ಪನಂಗೆ ವ್ಯವಾರ ಜಯ್ಸ್ಕೊಂಡು ಬತ್ತಿನಿ. ಅಂತದ್ರಲ್ಲಿ  ಯಾವಾಗ್ಲು ಅವನ ಕಾಲ್ ಸಂದಿಲೇ ಬಿದ್ದಿರ್ಲಿ ಅಂದ್ರೆ ನನ್ಗಾಕಿಲ್ಲ. ನಾನು ಇದುನ್ನ  ಪ್ರಶ್ನೆ ಮಾಡ್ತಿನಿ ಅಂತ್ಲೇ ನನಗೆ ಈ ಪರಿ  ಬವುಮಾನ” ಎಂದು ಹೇಳಿ ಊದಿದ ಮೈಕೈ ತೋರಿಸುತ್ತಿದ್ದಳಂತೆ. ಕೆಲವು ವರ್ಷಗಳು ಹೀಗೆ ಸರಿದು ಒಮ್ಮೆ ತವರಿಗೆ ಸುದ್ದಿ ಬಂದಿತಂತೆ ಅತ್ತೆ ಗಂಗೆಯ ಪಾಲಾದಳೆಂದು. ಅತ್ತೆ ಹೋದ ಮೂರು ತಿಂಗಳಿಗೆ  ಅವಳ ಗಂಡನ ನಿಗಾ ನೋಡಿಕೊಳ್ಳುವವರಿಲ್ಲವೆಂದು ಅವನಿಗೆ  ಸುಸೂತ್ರವಾಗಿ ಮದುವೆ ಮಾಡಿ ಮುಗಿಸಿದರಂತೆ.

ಇದನ್ನು ಹೇಳುತ್ತಿದ್ದ ಗೆಳತಿಯ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಅವಳ ಅತ್ತೆಯೇ ಇಲ್ಲಿ ಬಂದು ಅವಳ ಕತೆ ಹೇಳಿ ಹೋದಳಾ ಎಂಬಷ್ಟರ ಮಟ್ಟಿಗೆ ಅತ್ತೆಯನ್ನು ಆವಾಹಿಸಿಕೊಂಡು ಬಿಡುತ್ತಿದ್ದಳು. ಬಹುವಾಗಿ ಅತ್ತೆಯನ್ನು ಹಚ್ಚಿ ಕೊಂಡಿದ್ದ  ಗೆಳತಿಗೆ,  ಅತ್ತೆ ಸದಾ ಹೇಳುತ್ತಿದ್ದ “ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರತು ಹುಲ್ಲೆಯನ್ನಲ್ಲ” ಎನ್ನುವ ಮಾತು, ತಾನು ಅತ್ತೆಯ  ಜೊತೆಯಲ್ಲಿಯೇ ಜೀವಿಸುತ್ತಿದ್ದೇನೆ ಎನ್ನುವ ಭಾವ ಮೂಡಿಸುತ್ತಿತ್ತಂತೆ. ಹಾಗಾಗಿ ಗೆಳತಿಯ ನಾಲಿಗೆ ಮೇಲೆ  ಹುಲಿ ಹುಲ್ಲೆಯ ನೆನಪಲ್ಲಿ ಅತ್ತೆಯ ಗಾಢವಾದ ನೆನಪು ಸದಾ ಜೀವಂತವಾಗಿ ಇಣುಕುತ್ತಲೇ ಇರುತ್ತಿತ್ತು…

ಹೆಣ್ಣಿನ ದೃಷ್ಟಿಯಿಂದ ಅಕ್ಷರಶಃ ಸತ್ಯ ಎನ್ನಿಸುವ  ಈ  ವಾಕ್ಯ ನನ್ನ ಜೋಳಿಗೆಗೆ ಬಿದ್ದಂದಿನಿಂದ ನಾನು ಬಹಳ ಸೂಕ್ಷ್ಮವಾಗಿ ಹೆಣ್ಣು ಲೋಕವನ್ನು ಗಮನಿಸುತ್ತಾ ಅರಿಯ ತೊಡಗಿದೆ. ಶತ ಶತಮಾನಗಳಿಂದಲೂ ನಮ್ಮ ಪುರುಷ ಪ್ರಧಾನ ಸಮಾಜ, ಹೆಣ್ಣಿನ ಸುತ್ತಾ  ದಬ್ಬಾಳಿಕೆಯಿಂದಲೋ  ಅಥವಾ ನವಿರು ಭಾವದ ಸೋಗಿನಿಂದಲೋ ಬಲೆ ಹೆಣೆದು, ಅವಳ ಅದಮ್ಯ ಚೈತನ್ಯ ಶಕ್ತಿಯನ್ನು ತನ್ನ ಸುಪರ್ದಿಗೆ ತೆಗೆದು ಕೊಳ್ಳುವ ಹುನ್ನಾರ ನಡೆಸುತ್ತಲೇ ಬಂದಿದೆ. ಅಂದು ಅವಳು ಗೌರಮ್ಮನ ಹಾಗೆ ಸೆರಗೊದ್ದು, ತಲೆ ತಗ್ಗಿಸಿ ಮುಗ್ಧತೆಯಿಂದ ನಡೆದು ಬಂದಂದಿನಿಂದ ಹಿಡಿದು, ಇಂದು ತನ್ನಿಷ್ಟದ ಉಡುಗೆ ತೊಟ್ಟು ಆತ್ಮವಿಶ್ವಾಸದಿಂದ ತಲೆ ಎತ್ತಿ ನಡೆಯುತ್ತಿರುವ ಈ ಹೊತ್ತಿನವರೆಗೂ ಅವಳ ಬಗ್ಗೆ ನಿಂದನೆಯ ಅಪಮಾನದ ಮಾತುಗಳು ನಿಂತಿಲ್ಲ. ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ನಡೆಯುವ ಎಲ್ಲಾ ಅನಾಹುತಗಳಿಗೆ, ಅಪರಾಧಗಳಿಗೆ ಅವಳೇ ಕಾರಣೀ ಭೂತಳು ಎನ್ನುವ ಕುಹಕದ ಮಾತುಗಳಂತೂ  ಹಾಸ್ಯಾಸ್ಪದವೇ ಸರಿ. ನಮ್ಮ ಪ್ರತಿಷ್ಠಿತ ಸಮಾಜದ  ಪ್ರತಿಯೊಂದು  ಧರ್ಮ,  ಜಾತಿ, ಜನಾಂಗಗಳಲ್ಲಿಯೂ ಅಂದಿನಿಂದ ಇಂದಿನ ವರೆಗೂ  ಹೆಣ್ಣು ಕುಲ ಎಂಬುದನ್ನು ಎರಡನೆಯ ದರ್ಜೆಯಲ್ಲಿಟ್ಟೇ  ನೋಡುತ್ತಾ, ನಡೆಸಿಕೊಳ್ಳತ್ತಾ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಾನು ಸಮಾಜ ಶಾಸ್ತ್ರದಲ್ಲಿ ಓದಿದ್ದ , ಹೆಣ್ಣು ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಅಪ್ಪ, ಗಂಡ, ಮಗ ಹೀಗೆ ಗಂಡಿನ ಆಶ್ರಯದಲ್ಲಿಯೇ ಬಾಳ ಬೇಕು ಎನ್ನುವ ಸಾಲುಗಳು ನನ್ನಲ್ಲಿ ಈಗಲೂ ನಖಶಿಖಾಂತ ಕೋಪ ತರಿಸುತ್ತವೆ. ನಮ್ಮ ಬಾಲ್ಯ, ಯೌವ್ವನಗಳನ್ನು ಸೂರೆ ಗೊಳ್ಳಲು ಹೊರಟ ಇದೇ ಗಂಡಸರ  ನೀಚತನದ ಎದುರು ಸಿಡಿದು, ಒಂಟಿಯಾಗಿ ಬದುಕು ಕಟ್ಟಿಕೊಂಡ ನನ್ನ ಅಮ್ಮನಂತಹ ಅನೇಕ ಮಹಿಳೆಯರನ್ನು ನಾನು ಕಂಡಿದ್ದೇ. ಈಗಲೂ ಕಾಣುತ್ತಲೇ ಇದ್ದೇನೆ. ಹೆಣ್ಣು ತನ್ನ ಬಾಲ್ಯದಿಂದ ಮುದಿತನದ ವರೆಗೂ ಯಾರ ಆಸರೆ ಇಲ್ಲದೆ, ಹೆತ್ತ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು  ಯಶಸ್ವಿಯಾಗಿ ಒಂಟಿ ಜೀವನ ನಡೆಸ ಬಲ್ಲಳು…. ಇದು ಗಂಡಿನಿಂದ ಸಾಧ್ಯವ…?  ಎಂಬ ಪ್ರಶ್ನೆ ಎದುರಾದಾಗೆಲ್ಲಾ ನನ್ನೆದುರು ತಟ್ಟನೆ ಬಂದು ನಿಲ್ಲುವುದು “ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ” ಎಂಬ ಗಾದೆ ಮಾತು. ನಾನು ಬೆಳೆದು ಬಂದ  ಇಡೀ ವಾತಾವರಣದಲ್ಲಿ ನಾನು ಕಂಡದ್ದು, ತಮ್ಮ ದಿನಚರಿಯ ಪ್ರತೀ ಹಂತದಲ್ಲು ಹೆಣ್ಣಿನ ಮೇಲೆ ಒರಗಿ ನಿಂತಿರುವ  ಪುರುಷರ ಬಲವಾದ ಅವಲಂಬನೆಯನ್ನೇ. ತಾಯಿ, ಹೆಂಡತಿ, ಮಗಳು, ಸೊಸೆ ಹೀಗೆ ಬೇರೆ ಬೇರೆ ಹೆಣ್ಣು ಮಡಿಲಿನ ಆಶ್ರಯದಲ್ಲಿಯೇ ಪೊರೆಯಲ್ಪಡುವ ಗಂಡು, ತನ್ನ ಈ ಅವಲಂಬನೆಯನ್ನು ಯಾಕೆ ಒಪ್ಪಿಕೊಳ್ಳಲು ತಯಾರಿಲ್ಲ…!? ಎಂಬುದು  ಬಾಲ್ಯದಿಂದಲೂ ನನ್ನೊಂದಿಗೆ ಬೆಳೆದು ಬಂದ ದೊಡ್ಡ ಪ್ರಶ್ನೆಯಾಗಿತ್ತು. ನಾನು ಬೆಳೆದಂತೆಲ್ಲಾ ನಿಧಾನವಾಗಿ ಇದರ ಹಿಂದಿನ ಹುನ್ನಾರ ಅರಿವಾಗತೊಡಗಿತು.

ಪ್ರಕೃತಿದತ್ತವಾಗಿ ಬಂದ ಅವನ ದೈಹಿಕ ಬಲಾಢ್ಯತೆಯನ್ನೇ ಅಸ್ತ್ರವನ್ನಾಗಿಸಿದ ಪುರುಷ, ಹೆಣ್ಣು ತಾನು ಭೋಗಿಸಲೆಂದೇ ಹುಟ್ಟಿ ಬಂದವಳು ಎಂಬಂತೆ ಅವಳ ಮೇಲೆ ಸವಾರಿ ನಡೆಸುತ್ತಾ ಯಜಮಾನನಾಗಿ ಮೆರೆಯತೊಡಗಿದ್ದನ್ನು  ಅರಿತೆ.  ಹೆಣ್ಣು ಅಸಮಾನ್ಯ ಧಾರಣ ಶಕ್ತಿಯುಳ್ಳ ಮಹಾತಾಯಿ, ಮಹಾಲಕ್ಷ್ಮಿ, ಮಹಾಕಾಳಿ ಎಂದು ಹಾಡಿ ಹೊಗಳುತ್ತಲೇ, ಕಾದ ಒಲೆಯ ಮುಂದೆ ಅವಳನ್ನು ಪ್ರತಿಷ್ಠಾಪಿಸಿ, ಗೋರಿ ಕಟ್ಟಿ ಅವನು ಹುಲಿ ವೇಷ ತೊಟ್ಟು ಎದೆಯುಬ್ಬಿಸಿ ನಡೆದು ಬಂದುದ ಅರಿತೆ. ತನ್ನ ಕಪಿಮುಷ್ಟಿಯಲ್ಲಿ ಆರ್ಥಿಕತೆ ಎನ್ನುವ ಮಂತ್ರ ದಂಡವ ಹಿಡಿದು  ಅವಳ ಮಾತು, ಮೆದುಳು, ಬಿಸಿ ನೆತ್ತರು, ಎಲ್ಲವನ್ನು ಹೀರಿ  ಸದಾ ಕಾಲಕ್ಕೂ ಅವಳು ತನ್ನ ಸೇವೆ ಮಾಡುತ್ತಾ ತಣ್ಣಗೆ ಜೀವಿಸ ಬೇಕು ಎನ್ನುವ ಅವನ ಒಳ ಹುನ್ನಾರ ಅರಿತೆ.  ವಿಧಿ ನಿಯಮಗಳ ಸಂಕೋಲೆ ತೊಡಿಸಿ ಅವಳ ಅಭಿವ್ಯಕ್ತಿಯನ್ನೇ ಅಪಹರಿಸಿ ಮೆರೆಯುತ್ತಿರುವ ಭಯಗ್ರಸ್ಥ ಗಂಡಿನ ನಯವಂಚಕತನವನ್ನು ಅರಿತೆ. ಶ್ರೇಷ್ಠ ಎಂದು ಎದೆಯುಬ್ಬಿಸಿ ನಡೆವ  ಜಾತಿಯಿಂದ  ಹಿಡಿದು, ಕನಿಷ್ಠ ಎಂದು ನಡು ಬಗ್ಗಿಸಿ ನಡೆವ  ಜಾತಿಯವರೆಗೂ ಹೆಣ್ಣನ್ನು ಕನಿಷ್ಠಳಲ್ಲಿ ಕನಿಷ್ಠಳಾಗಿ ತಮ್ಮ ಅಡಿಯಾಳಾಗಿ ನಡೆಸಿಕೊಳ್ಳುತ್ತಲೇ ಬರುತ್ತಿರುವ ಮಹಾ ಸತ್ಯವನ್ನರಿತೆ…….!

ಈಗ ಸಮಾಜ ಬದಲಾಗಿದೆ, ಎಲ್ಲೆಡೆಯೂ ಹೆಣ್ಣು ಆರ್ಥಿಕತೆಯತ್ತ ಮುಖ ಮಾಡಿ ಗಂಡಿಗೆ ಸರಿ ಸಮನಾಗಿ ನಿಲ್ಲುತ್ತಿದ್ದಾಳೆ, ಅವಳಿಗೂ ತನ್ನ ಬೇಕು ಬೇಡಗಳನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯ ಬಂದಿದೆ ಎಂದು ಹೇಳುತ್ತಿರುವ ಈ ಹೊತ್ತಿನಲ್ಲು ನನಗೆ ಗಂಟಲು ಕಟ್ಟಿದಂತಾಗುತ್ತದೆ. ಸಂಸಾರ ಮತ್ತು ಉದ್ಯೋಗ ಎಂಬ ಎರಡು ಅಲಗಿನ ಮೇಲೆ ನಡೆಯುತ್ತಿರುವ ಇಂದಿನ  ಹೆಣ್ಣು, ತನ್ನ ತಲೆ ತಲಾಂತರದ ಕನಸು ಕನವರಿಕೆಗಳನ್ನು ಸಾಕಾರ ಗೊಳಿಸಲೋ ಎಂಬಂತೆ, ದಣಿವರಿಯದ ಹಾಗೆ ಓಡುತ್ತಲೇ ಇದ್ದಾಳೆ. ಒಳ ಹೊರಗುಗಳಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು, ದಿಟ್ಟತನದಲ್ಲಿ ಎದುರಿಸಿ ನಿಲ್ಲುವ ಸಾಹಸದಲ್ಲಿ ಹೈರಾಣಾಗುತ್ತಲೇ ಇದ್ದಾಳೆ.  ಇಷ್ಟು ಸಾಲದೆಂಬಂತೆ ಪ್ರತಿ  ಕ್ಷಣವೂ ನಡೆಯುವ ದೌರ್ಜನ್ಯ, ಅತ್ಯಾಚಾರ, ಕೊಲೆಯಂತಹ ಅಮಾನವೀಯ ಘಟನೆಗಳು ಅವಳ ಅಂತಃಶಕ್ತಿಗೆ ಸವಾಲೆಸೆದು ಭೂತದಂತೆ ನಿಂತು, ಅವಳ ಆತ್ಮವಿಶ್ವಾಸ  ಕಸಿಯುವ ಹುನ್ನಾರ ನಡೆಸುತ್ತಲೇ ಇವೆ.

ಎಲ್ಲಾ ಕಾಲದಲ್ಲು ಇಂತಹ ಲೆಕ್ಕವಿಲ್ಲದಷ್ಟು ಸಮಸ್ಯೆ ಗಳನ್ನು ಎದುರಿಸುತ್ತಲೇ ,ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸತತ ಹೋರಾಟ ಮಾಡಿಕೊಂಡೇ ಬರುತ್ತಿರುವ ಹೆಣ್ಣಿನೊಂದಿಗೆ, ಇಷ್ಟಾದರು ಇಂಬಾಗಿ ನಿಂತ, ಇಂದೂ ನಿಲ್ಲುತ್ತಿರುವ ಮಾನವೀಯ ಅಂತಃಕರಣವುಳ್ಳ ಪುರುಷರ ಬೆಂಬಲವನ್ನು ಎಂದಿಗೂ ಮರೆಯುವಂತಿಲ್ಲ ಎನ್ನುವ ಎಚ್ಚರವನ್ನು ಕಾಪಿಟ್ಟುಕೊಂಡೇ, ಈ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಹಣ್ಣಾದ ಒಂಟಿ ಹೆಣ್ಣೊಬ್ಬಳ ದಿಟ್ಟತನದ ಕಥಾನಕವನ್ನು  ಈ “ತಂತಿ ಮೇಲಣ ಹೆಜ್ಜೆ” ಅಂಕಣದ ಮೂಲಕ ಪ್ರಸ್ತುತ ಪಡಿಸುತ್ತಿದ್ದೇನೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದಾಗಿರುತ್ತೆ.)

ವಾಣಿ ಸತೀಶ್‌
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ನೋಡಿ: ಬಡವರ ಮನೆ ಕಾಣುವ BBMP ಅಧಿಕಾರಿಗಳಿಗೆ ಬಲಿತವರ ಮನೆ ಕಾಣುವುದಿಲ್ಲವೇ?

ಅಶೋಕ್‌ ಮೃತ್ಯುಂಜಯ, AAP ವಕ್ತಾರ

ಪೀಪಲ್ ಟೀವಿ ಯೂಟ್ಯೂಬ್ ಚಾನಲ್ ಅನ್ನು SUBSCRIBE ಮಾಡಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ