Wang Yi – Peepal Media

ಭಾರತ-ಚೀನಾ ಗಡಿ ಮಾತುಕತೆಗೆ ಹೊಸ ತಿರುವು!
ಭಾರತ-ಚೀನಾ 3,488 ಕಿ.ಮೀ. ಗಡಿ ವಿವಾದಕ್ಕೆ 1950ರ ದಶಕದಿಂದಲೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ - ಮನೋಜ್‌ ಜೋಷಿ

ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳಾದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವೆ ಆಗಸ್ಟ್ 25ರಂದು ನಡೆದ 25ನೇ ಸುತ್ತಿನ ಮಾತುಕತೆ, ಉಭಯ ದೇಶಗಳ ನಡುವಿನ ಗಡಿ ವಿವಾದವನ್ನು ಬಗೆಹರಿಸುವ ಪ್ರಯತ್ನಗಳಲ್ಲಿ ಮಹತ್ವದ ತಿರುವಿಗೆ ಕಾರಣವಾಗಬಹುದು.

11 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಿಡುಗಡೆಯಾದ ಎಂಟು ಅಂಶಗಳ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ, ಗಡಿ ನಿರ್ಣಯ ಮತ್ತು ಗಡಿ ನಿರ್ವಹಣೆಗೆ ಸಂಬಂಧಿಸಿದಂತೆ “ಶೀಘ್ರ ಮತ್ತು ಗಮನಾರ್ಹ ಪ್ರಗತಿ” ಸಾಧಿಸುವ ನಿಟ್ಟಿನಲ್ಲಿ ಚರ್ಚೆಗಳನ್ನು ಮುಂದುವರಿಸುವುದಾಗಿ ಹೇಳಲಾಗಿದೆ.

ಭಾರತ-ಚೀನಾ ರಾಜತಾಂತ್ರಿಕ ದಾಖಲೆವೊಂದರಲ್ಲಿ “ಗಮನಾರ್ಹ (substantial)” ಎಂಬಂತಹ ಪದ ಬಳಕೆಯಾಗಿರುವುದೇ ಗಮನಾರ್ಹ. ಇದರ ಹಿಂದೆ ಯಾವುದೋ ಮಹತ್ವದ ಬೆಳವಣಿಗೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಭಾರತ ಮತ್ತು ಚೀನಾ 1950ರ ದಶಕದಿಂದಲೂ ತಮ್ಮ 3,488 ಕಿಲೋಮೀಟರ್ ಉದ್ದದ ಗಡಿ ವಿವಾದವನ್ನು ಬಗೆಹರಿಸಲು ಪ್ರಯತ್ನಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ಅಧಿಕೃತ ಮಟ್ಟದ ಮಾತುಕತೆಗಳು, ಗಡಿ ಉದ್ವಿಗ್ನತೆಗಳು ಮಾತ್ರವಲ್ಲದೆ ಯುದ್ಧವೂ ನಡೆದಿವೆ. ಆದರೂ, ಎರಡೂ ದೇಶಗಳಿಗೆ ಪರಸ್ಪರ ಒಪ್ಪಿಗೆಯಾಗುವ ಗಡಿಯನ್ನು ನಿಗದಿಪಡಿಸುವಲ್ಲಿ ಇದುವರೆಗೆ ಯಾವುದೇ ಗಮನಾರ್ಹ ಮುನ್ನಡೆ ಕಂಡುಬಂದಿಲ್ಲ. ಇದೀಗ, ಹಲವು ದಶಕಗಳಿಂದ ಸಾಗುತ್ತಿರುವ ಈ ಕಗ್ಗಂಟಿನ ಪ್ರಕ್ರಿಯೆ ಹೊಸ ತಿರುವು ಪಡೆಯುವ ಸಾಧ್ಯತೆ ಇದೆ.

ಇತಿಹಾಸ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವನ್ನು ಬಗೆಹರಿಸುವ ಪ್ರಯತ್ನಗಳ ಇತಿಹಾಸ ದೀರ್ಘವೂ ಸಂಕೀರ್ಣವೂ ಆಗಿದೆ. ಆರಂಭದಲ್ಲಿ ಭಾರತವು ಯಾವುದೇ ಗಡಿ ವಿವಾದವಿಲ್ಲ ಮತ್ತು ಭಾರತೀಯ ನಕ್ಷೆಗಳಲ್ಲಿ ತೋರಿಸಿರುವ ಗಡಿಗಳನ್ನೇ ಚೀನಾ ಒಪ್ಪಿಕೊಂಡಿದೆ ಎಂದು ಭಾವಿಸಿತ್ತು. ಆದರೆ 1959ರಲ್ಲಿ ಈ ನಿಲುವು ತಪ್ಪೆಂಬುದು ಸ್ಪಷ್ಟವಾಯಿತು. ಚೀನಾದ ಪ್ರಧಾನಮಂತ್ರಿ ಝೌ ಎನ್‌ಲೈ ಅವರು ಸೆಪ್ಟೆಂಬರ್‌ನಲ್ಲಿ ಒಂದು ಹಾಗೂ ನವೆಂಬರ್‌ನಲ್ಲಿ ಮತ್ತೊಂದು ಪತ್ರ ಬರೆದರು. ಈ ಎರಡೂ ಪತ್ರಗಳಲ್ಲಿ ಇಡೀ ಗಡಿಯೇ ವಿವಾದಕ್ಕೆ ಒಳಪಟ್ಟಿದೆ ಎಂದು ಅವರು ತಿಳಿಸಿದ್ದರು. ಅಲ್ಲದೆ, ಅರುಣಾಚಲ ಪ್ರದೇಶದಲ್ಲಿ (ಆಗ ನಾರ್ತ್ ಈಸ್ಟ್ ಫ್ರಾಂಟಿಯರ್ ಏಜೆನ್ಸಿ—NEFA) ಇರುವ ಮೆಕ್‌ಮಹೋನ್ ರೇಖೆಯನ್ನು ಗಡಿಯಾಗಿ ಒಪ್ಪಿಕೊಳ್ಳಲು ಚೀನಾ ನಿರಾಕರಿಸಿತು.

ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಎರಡೂ ದೇಶಗಳು ತಾವು ನಿಯಂತ್ರಿಸುತ್ತಿದ್ದ ಅಸ್ತಿತ್ವದಲ್ಲಿನ ರೇಖೆ—ವಾಸ್ತವಿಕ ನಿಯಂತ್ರಣ ರೇಖೆ (Line of Actual Control – LAC)—ಯಿಂದ ತಮ್ಮ ಸಶಸ್ತ್ರ ಪಡೆಗಳನ್ನು 20 ಕಿಲೋಮೀಟರ್ ಹಿಂದಕ್ಕೆ ಸರಿಸಬೇಕು ಎಂದು ಝೌ ಪ್ರಸ್ತಾಪಿಸಿದರು.

ಆ ವೇಳೆಗೆ ಅಕ್ಸಾಯಿ ಚಿನ್ ಪ್ರದೇಶದ ಮೇಲೆ ಚೀನಾ ವಾಸ್ತವಿಕ ನಿಯಂತ್ರಣ ಸಾಧಿಸಿತ್ತು. ಝೌ ಅವರ ಈ ಎರಡು ಪತ್ರಗಳ ನಡುವೆಯೇ, ಅಕ್ಟೋಬರ್ 20ರಂದು ಮೊದಲ ಗಂಭೀರ ಘರ್ಷಣೆ ನಡೆಯಿತು. ಕೊಂಗ್ಕಾ ಲಾ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಪೊಲೀಸ್ ಗಸ್ತುಪಡೆಯ ಮೇಲೆ ಹೊಂಚು ದಾಳಿ ನಡೆಸಿ, ಒಂಬತ್ತು ಭಾರತೀಯ ಪೊಲೀಸರನ್ನು ಹತ್ಯೆ ಮಾಡಿದರು.

ಆ ವರ್ಷವೇ ಉದ್ವಿಗ್ನತೆ ಈಗಾಗಲೇ ತೀವ್ರವಾಗಿತ್ತು. ಇದಕ್ಕೆ ಟಿಬೆಟ್‌ನಲ್ಲಿ ನಡೆದ ದಂಗೆ ಪ್ರಮುಖ ಕಾರಣವಾಗಿತ್ತು. 1959ರ ಮಾರ್ಚ್ ಅಂತ್ಯದಲ್ಲಿ ದಲೈ ಲಾಮಾ ಟಿಬೆಟ್‌ನಿಂದ ಭಾರತಕ್ಕೆ ಪಲಾಯನ ಮಾಡಿದರು. ಭಾರತವು ಅವರಿಗೆ ಆಶ್ರಯ ನೀಡಿತು.

ಮುಂದಿನ ಎರಡು ವರ್ಷಗಳಲ್ಲಿ ಎರಡೂ ದೇಶಗಳು ಗಡಿಯಲ್ಲಿ ತಮ್ಮ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುತ್ತಾ, ನಿಧಾನವಾಗಿ ಯುದ್ಧದತ್ತ ಸಾಗಿದವು. 1960ರ ಏಪ್ರಿಲ್‌ನಲ್ಲಿ ಚೀನಾದ ಪ್ರಧಾನಮಂತ್ರಿ ಝೌ ಎನ್‌ಲೈ ಅವರು ವಿದೇಶಾಂಗ ಸಚಿವ ಚೆನ್ ಯಿ ಅವರೊಂದಿಗೆ ನವದೆಹಲಿಗೆ ಆಗಮಿಸಿ, ಉನ್ನತ ಮಟ್ಟದ ಮಾತುಕತೆ ನಡೆಸಿದರು. ಝೌ ಅವರು ಒಂದು ಸಮಗ್ರ ಒಪ್ಪಂದದ ಪ್ರಸ್ತಾಪ ಮುಂದಿಟ್ಟರು: ಭಾರತವು ಅಕ್ಸಾಯಿ ಚಿನ್ ಮೇಲಿನ ಚೀನಾದ ನಿಯಂತ್ರಣವನ್ನು ಒಪ್ಪಿಕೊಳ್ಳಬೇಕು; ಬದಲಾಗಿ, ಪೂರ್ವ ಭಾಗದಲ್ಲಿರುವ NEFAಯನ್ನು ಭಾರತದ ಭಾಗವೆಂದು ಚೀನಾ ಮಾನ್ಯ ಮಾಡಬೇಕು ಎಂಬುದು ಅದರ ಸಾರವಾಗಿತ್ತು.

ಮಾತುಕತೆಗಳು ಯಾವುದೇ ನಿರ್ಣಯಕ್ಕೆ ಬರದೆ ಸ್ಥಗಿತಗೊಂಡವು. ಆದರೆ, ಎರಡೂ ದೇಶಗಳು ಐತಿಹಾಸಿಕ ದಾಖಲೆಗಳನ್ನು ಜಂಟಿಯಾಗಿ ಪರಿಶೀಲಿಸಿ ವರದಿ ಸಿದ್ಧಪಡಿಸಲು ಅಧಿಕಾರಿಗಳನ್ನು ನಿಯೋಜಿಸಲು ಒಪ್ಪಿಕೊಂಡವು. ಅಪಾರ ಪ್ರಮಾಣದ ಈ ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ಮುಂದುವರಿದಿದ್ದಾಗಲೇ, 1962ರ ಅಕ್ಟೋಬರ್‌ನಲ್ಲಿ ಯುದ್ಧ ಭುಗಿಲೆದ್ದಿತು.

ಮುಂದಿನ ಸುಮಾರು ಕಾಲು ಶತಮಾನದಲ್ಲಿ ಈ ಸಮಗ್ರ ಒಪ್ಪಂದದ ಪ್ರಸ್ತಾಪ ಮತ್ತೆ ಮತ್ತೆ ಮುನ್ನೆಲೆಗೆ ಬಂದಿತು. ಆದರೆ ಪ್ರತಿ ಬಾರಿಯೂ ಆಂತರಿಕ ರಾಜಕೀಯ ಬೆಳವಣಿಗೆಗಳು ಅಥವಾ ಸೂಕ್ತ ಸಮಯದ ಕೊರತೆ ಅದಕ್ಕೆ ಅಡ್ಡಿಯಾದವು. 1979ರ ಫೆಬ್ರವರಿಯಲ್ಲಿ ಬೀಜಿಂಗ್‌ಗೆ ಭೇಟಿ ನೀಡಿದ್ದ ಭಾರತೀಯ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ (1977 – 1979) ಅವರೊಂದಿಗೆ ಚೀನಾದ ನಾಯಕ ಡೆಂಗ್ ಶಿಯಾವೊಪಿಂಗ್ ಈ ಪ್ರಸ್ತಾಪವನ್ನು ಮತ್ತೆ ಮುಂದಿಟ್ಟರು. ಆದರೆ, ಯಾವುದೇ ಪ್ರಗತಿ ಸಾಧ್ಯವಾಗುವ ಮುನ್ನವೇ ಭಾರತದಲ್ಲಿನ ಜನತಾ ಸರ್ಕಾರ ಪತನಗೊಂಡಿತು.

ಆಗ ಚೀನಾದ ಪರಮೋಚ್ಚ ನಾಯಕನಾಗಿದ್ದ ಡೆಂಗ್, 1980ರಲ್ಲಿ ಭಾರತೀಯ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮತ್ತೆ ಈ ಪ್ರಸ್ತಾಪವನ್ನು ಪುನರುಜ್ಜೀವನಗೊಳಿಸಿದರು. 1982ರಲ್ಲಿ ನೀತಿ ಯೋಜನಾ ಸಮಿತಿಯ ಅಧ್ಯಕ್ಷರಾಗಿದ್ದ ಜಿ. ಪಾರ್ಥಸಾರಥಿ ಅವರೊಂದಿಗೂ ಇದೇ ಪ್ರಸ್ತಾಪವನ್ನು ಮುಂದಿಟ್ಟರು.

ಆದರೆ ಭಾರತದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 1983ರಲ್ಲಿ ಭಾರತವು “LAC Plus” ಎಂಬ ಪರ್ಯಾಯ ಸೂತ್ರವನ್ನು ಮುಂದಿಟ್ಟಿತು. ಇದರ ಪ್ರಕಾರ, ಅರುಣಾಚಲ ಪ್ರದೇಶದ ಮೇಲಿನ ಭಾರತದ ನಿಯಂತ್ರಣವನ್ನು ಚೀನಾ ಒಪ್ಪಿಕೊಳ್ಳಬೇಕು. ಜೊತೆಗೆ, ಯುದ್ಧದ ಸಂದರ್ಭದಲ್ಲಿ ಲಡಾಖ್‌ನಲ್ಲಿ ಚೀನಾ ಆಕ್ರಮಿಸಿಕೊಂಡಿದ್ದ ಸುಮಾರು 3,000 ಚದರ ಕಿಲೋಮೀಟರ್ ಪ್ರದೇಶದಿಂದಲೂ ಚೀನಾದ ಪಡೆಗಳು ಹಿಂದೆ ಸರಿಯಬೇಕು ಎಂಬುದು ಈ ಪ್ರಸ್ತಾಪದ ಉದ್ದೇಶವಾಗಿತ್ತು. ಆದರೆ ಈ ಪ್ರಸ್ತಾಪವೂ ಯಾವುದೇ ಫಲ ನೀಡಲಿಲ್ಲ.

1981ರಲ್ಲಿ ಚೀನಾದ ವಿದೇಶಾಂಗ ಸಚಿವ ಹುವಾಂಗ್ ಹುವಾ ಅವರ ಭಾರತ ಭೇಟಿಯೊಂದಿಗೆ ಅಧಿಕೃತ ಮಟ್ಟದ ಮಾತುಕತೆಗಳು ಆರಂಭವಾದವು. 1981ರಿಂದ 1987ರವರೆಗೆ ಒಟ್ಟು ಎಂಟು ಸುತ್ತಿನ ಮಾತುಕತೆಗಳು ನಡೆದವು. ಆದರೆ ಎರಡೂ ದೇಶಗಳ ನಿಲುವುಗಳ ನಡುವಿನ ಅಂತರವನ್ನು ಸೇತುವೆ ಕಟ್ಟಿ ಕಡಿಮೆ ಮಾಡುವುದು ಸಾಧ್ಯವಾಗಲಿಲ್ಲ. ಚೀನಾ ತನ್ನ ಸಮಗ್ರ ಒಪ್ಪಂದದ ಪ್ರಸ್ತಾಪವನ್ನು ಮುಂದುವರಿಸಲು ಬಯಸಿದರೆ, ಭಾರತವು ಗಡಿಯನ್ನು ಪ್ರತಿ ವಲಯದ ಆಧಾರದ ಮೇಲೆ ಪ್ರತ್ಯೇಕವಾಗಿ ಚರ್ಚಿಸುವ ನಿಲುವು ತಳೆದಿತ್ತು.

1985ರಲ್ಲಿ ಚೀನಾದ ನಿಲುವಿನಲ್ಲಿ ಏಕಾಏಕಿ ಮತ್ತು ಸ್ಪಷ್ಟ ಕಾರಣವಿಲ್ಲದ ಬದಲಾವಣೆ ಕಂಡುಬಂತು. ನವೆಂಬರ್‌ನಲ್ಲಿ ಆರಂಭವಾದ ಆರನೇ ಸುತ್ತಿನ ಮಾತುಕತೆಯ ಆರಂಭದಲ್ಲಿ, ಚೀನಾದ ಉಪ ವಿದೇಶಾಂಗ ಸಚಿವ ಲಿಯು ಶುಚಿಂಗ್ ಅವರು ತಮ್ಮ ಭಾರತೀಯ ಪ್ರತಿನಿಧಿಗೆ ಪೂರ್ವ ವಲಯದಲ್ಲಿಯೂ ವಾಸ್ತವವಾಗಿ ದೊಡ್ಡ ಮಟ್ಟದ ಗಡಿ ವಿವಾದವಿದೆ ಎಂದು ತಿಳಿಸಿದರು. ಪಶ್ಚಿಮ ವಲಯದಲ್ಲಿ ಚೀನಾ ಯಾವುದೇ ರಿಯಾಯಿತಿ ನೀಡಬೇಕಾದರೆ, ಅದಕ್ಕೂ ಮೊದಲು ಭಾರತವು NEFA ವಿಷಯದಲ್ಲಿ ನಿರ್ದಿಷ್ಟವಾಗಿ ತಿಳಿಸದ ಕೆಲವು ರಿಯಾಯಿತಿಗಳನ್ನು ನೀಡಬೇಕಾಗುತ್ತದೆ ಎಂದು ಅವರು ಹೇಳಿದರು.

ನವದೆಹಲಿ ಆರಂಭದಲ್ಲಿ ಇದನ್ನು ಚೀನಾದ ತಂತ್ರಗಾರಿಕೆಯ ಭಾಗವೆಂದು ಭಾವಿಸಿತು. ಆದರೆ ಶೀಘ್ರದಲ್ಲೇ ಈ ಬದಲಾವಣೆ ಮೂಲಭೂತ ಸ್ವರೂಪದ್ದಾಗಿದೆ ಎಂಬುದು ಸ್ಪಷ್ಟವಾಯಿತು.

ಇದರ ನಡುವೆ, 1988ರಲ್ಲಿ ರಾಜೀವ್ ಗಾಂಧಿ ಚೀನಾಗೆ ಭೇಟಿ ನೀಡಿದ ಬಳಿಕ ಉಭಯ ದೇಶಗಳ ಸಂಬಂಧದಲ್ಲಿ ಗಮನಾರ್ಹವಾದ ಸುಧಾರಣೆ ಕಂಡುಬಂತು. 1954ರಲ್ಲಿ ನೆಹರೂ ಅವರ ಭೇಟಿಯ ನಂತರ ಚೀನಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಮಂತ್ರಿಯಾಗಿದ್ದರು ರಾಜೀವ್ ಗಾಂಧಿ. ಈ ಭೇಟಿ ಬಳಿಕ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳನ್ನು ತೀವ್ರಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡವು. ಇದರೊಂದಿಗೆ ಅಧಿಕೃತ ಮಟ್ಟದ ಮಾತುಕತೆಗಳ ಬದಲಿಗೆ ಜಂಟಿ ಕಾರ್ಯಕಾರಿ ಸಮಿತಿ (JWG) ರಚನೆಯಾಯಿತು.

ಆದರೆ JWGಗೆ ಸಿಕ್ಕಿದ್ದ ನೆಲೆ ಸುಗಮವಾಗಿರಲಿಲ್ಲ. 1987ರಲ್ಲಿ ಭಾರತವು NEFAಗೆ ಅರುಣಾಚಲ ಪ್ರದೇಶ ಎಂದು ಮರುನಾಮಕರಣ ಮಾಡಿ, ಅದನ್ನು ಭಾರತೀಯ ಒಕ್ಕೂಟದ ರಾಜ್ಯವನ್ನಾಗಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ, ಯಾವುದೇ ಗಡಿ ಒಪ್ಪಂದಕ್ಕೆ ತಲುಪಬೇಕಾದರೆ ತವಾಂಗ್ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಚೀನಾ ಸ್ಪಷ್ಟಪಡಿಸಿತು.

ರಾಜೀವ್ ಗಾಂಧಿಯವರ ಚೀನಾ ಭೇಟಿಯ ಮತ್ತೊಂದು ಪ್ರಮುಖ ಫಲವೆಂದರೆ, ಗಡಿಯಲ್ಲಿ ಸ್ಥಿರತೆ ತರುವುದು ಮತ್ತು ಉಭಯ ದೇಶಗಳ ನಡುವಿನ ಸಂಬಂಧದ ಇತರ ಆಯಾಮಗಳನ್ನು ಸಹ ಸಾಮಾನ್ಯಗೊಳಿಸುವ ಅಗತ್ಯವನ್ನು ಭಾರತ ಒಪ್ಪಿಕೊಂಡದ್ದು. ನವದೆಹಲಿ ವಾಸ್ತವಿಕ ನಿಯಂತ್ರಣ ರೇಖೆ (LAC) ಎಂಬ ಪರಿಕಲ್ಪನೆಯನ್ನು ಅಂಗೀಕರಿಸಿತು. ಬಳಿಕ 1993ರಲ್ಲಿ ಗಡಿ ಶಾಂತಿ ಮತ್ತು ಸೌಹಾರ್ದ ಒಪ್ಪಂದ ಹಾಗೂ 1996ರಲ್ಲಿ ಸೇನಾ ಕ್ಷೇತ್ರದಲ್ಲಿ ವಿಶ್ವಾಸ ನಿರ್ಮಾಣ ಕ್ರಮಗಳ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಎರಡೂ ಒಪ್ಪಂದಗಳು LACಯನ್ನು ಸ್ಪಷ್ಟವಾಗಿ ಗುರುತಿಸುವ ಅಗತ್ಯಕ್ಕೆ ಒತ್ತು ನೀಡಿದ್ದವು. ಏಕೆಂದರೆ, ಪರಸ್ಪರ ಹಕ್ಕು ಪ್ರತಿಪಾದನೆಗಳು ಒಂದಕ್ಕೊಂದು ಅತಿಕ್ರಮಿಸುವ ಸುಮಾರು ಎರಡು ಡಜನ್ ಪ್ರದೇಶಗಳಿದ್ದವು. LACಯನ್ನು ಸ್ಪಷ್ಟಪಡಿಸುವ ಪ್ರಕ್ರಿಯೆಯ ಮೂಲಕ ಇವುಗಳಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು.

ಮುಂದಿನ ಒಂದು ದಶಕದಲ್ಲಿ, 1998ರಲ್ಲಿ ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷೆಗಳ ಹೊರತಾಗಿಯೂ, ಉಭಯ ದೇಶಗಳ ಸಂಬಂಧಗಳು ಒಟ್ಟಾರೆ ಸ್ಥಿರವಾಗಿಯೇ ಉಳಿದವು. ಆದರೆ ಗಡಿ ವಿವಾದದ ವಿಚಾರದಲ್ಲಿ ಹೆಚ್ಚಿನ ಪ್ರಗತಿ ಕಂಡುಬರಲಿಲ್ಲ. 1989ರಿಂದ 2005ರವರೆಗೆ JWGಯ 15 ಸುತ್ತಿನ ಮಾತುಕತೆಗಳು ನಡೆದರೂ, ಗಡಿ ಪ್ರಶ್ನೆಯಲ್ಲಿ ಗಮನಾರ್ಹ ಮುನ್ನಡೆ ಸಾಧಿಸಲಾಗಲಿಲ್ಲ. 2002ರಲ್ಲಿ ಆ ಪ್ರಕ್ರಿಯೆ ಸ್ಥಗಿತಗೊಳ್ಳುವ ಮೊದಲು, ಎರಡೂ ದೇಶಗಳು ಕೇಂದ್ರ ವಲಯಕ್ಕೆ ಸಂಬಂಧಿಸಿದ ನಕ್ಷೆಗಳನ್ನು ಮಾತ್ರ ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಯಿತು.

‘ವಿಶೇಷ ಪ್ರತಿನಿಧಿಗಳ’ ಪ್ರವೇಶ

ಮುಂದಿನ ಮಹತ್ವದ ಹೆಜ್ಜೆಯನ್ನು ಪ್ರಧಾನಿ ವಾಜಪೇಯಿ ಅವರು 2003ರಲ್ಲಿ ಬೀಜಿಂಗ್‌ಗೆ ಭೇಟಿ ನೀಡಿದಾಗ ಇಟ್ಟರು. ಕಾನೂನು ಮತ್ತು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಗಡಿ ವಿವಾದವನ್ನು ಬಗೆಹರಿಸುವ ಪ್ರಯತ್ನಗಳು ಇನ್ನು ಮುಂದುವರಿಯುವ ಹಂತವನ್ನು ದಾಟಿವೆ; ಈಗ ಸರಳವಾದ ರಾಜಕೀಯ ಒಪ್ಪಂದಕ್ಕೆ ಮುಂದಾಗುವ ಸಮಯ ಬಂದಿದೆ ಎಂದು ಅವರು ತಮ್ಮ ಚೀನಾದ ಪ್ರತಿನಿಧಿಗಳಿಗೆ ತಿಳಿಸಿದರು.

ಚೀನಾ ಕೂಡ ಸ್ವಲ್ಪ ಹಿಂಜರಿಕೆಯಿಂದಲೇ ಈ ಪ್ರಸ್ತಾಪಕ್ಕೆ ಒಪ್ಪಿಕೊಂಡಿತು. ಇದರ ಫಲವಾಗಿ ಹೊರಬಂದ ಜಂಟಿ ಘೋಷಣೆಯಲ್ಲಿ, “ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಚೌಕಟ್ಟನ್ನು, ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ರಾಜಕೀಯ ದೃಷ್ಟಿಕೋನದಿಂದ ಪರಿಶೀಲಿಸಲು ಎರಡೂ ದೇಶಗಳು ತಲಾ ಒಬ್ಬ ವಿಶೇಷ ಪ್ರತಿನಿಧಿಯನ್ನು (SR) ನೇಮಿಸಲು ಒಪ್ಪಿಕೊಂಡವು” ಎಂದು ಹೇಳಲಾಯಿತು.

ವಿಶೇಷ ಪ್ರತಿನಿಧಿಗಳ (SR) ಪ್ರಕ್ರಿಯೆಯ ಪ್ರಮುಖ ಫಲಿತಾಂಶವೆಂದರೆ, 2005ರ ಏಪ್ರಿಲ್‌ನಲ್ಲಿ ಭಾರತ-ಚೀನಾ ಗಡಿ ಪ್ರಶ್ನೆಯ ಪರಿಹಾರಕ್ಕೆ ಸಂಬಂಧಿಸಿದ ರಾಜಕೀಯ ಮಾನದಂಡಗಳು ಮತ್ತು ಮಾರ್ಗದರ್ಶಕ ತತ್ವಗಳ ಕುರಿತ ಒಪ್ಪಂದ. ಈ ಒಪ್ಪಂದದ ನಾಲ್ಕನೇ ಮತ್ತು ಏಳನೇ ವಿಧಿಗಳು ಅತ್ಯಂತ ಪ್ರಮುಖವಾಗಿದ್ದವು.

ನಾಲ್ಕನೇ ವಿಧಿಯ ಪ್ರಕಾರ, “ಪರಸ್ಪರ ಮತ್ತು ಸಮಾನ ಭದ್ರತೆ”ಯ ಚೌಕಟ್ಟಿನೊಳಗೆ ಎರಡೂ ದೇಶಗಳು “ಪರಸ್ಪರರ ಕಾರ್ಯತಂತ್ರದ ಮತ್ತು ನ್ಯಾಯಸಮ್ಮತ ಹಿತಾಸಕ್ತಿಗಳಿಗೆ” ಸೂಕ್ತ ಮಹತ್ವ ನೀಡಬೇಕಿತ್ತು.

ಏಳನೇ ವಿಧಿಯು, ಯಾವುದೇ ಗಡಿ ಒಪ್ಪಂದವು “ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಜನರ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ರಕ್ಷಿಸಬೇಕು” ಎಂದು ಘೋಷಿಸಿತು.

ಈ ಎರಡು ಅಂಶಗಳು ಸೂಚಿಸುತ್ತಿದ್ದದ್ದು, ಚೀನಾಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾಗಿರುವ ಅಕ್ಸಾಯಿ ಚಿನ್ ಪ್ರದೇಶಕ್ಕೆ ಬದಲಾಗಿ, ಅರುಣಾಚಲ ಪ್ರದೇಶದಲ್ಲಿ ನೆಲೆಸಿರುವ ಜನರ ಹಿತಾಸಕ್ತಿಗಳನ್ನು ರಕ್ಷಿಸುವ ರೀತಿಯ ಪ್ರದೇಶ ವಿನಿಮಯದ ಸಾಧ್ಯತೆಯನ್ನು.

ಇದೀಗ ವಿಶೇಷ ಪ್ರತಿನಿಧಿಗಳ ಮುಂದಿದ್ದ ಕಾರ್ಯವೆಂದರೆ, ಗಡಿಯ “ರೇಖಾನಿರ್ಣಯ ಮತ್ತು ಗಡಿ ಗುರುತಿಸುವಿಕೆ”ಗೆ ಸಂಬಂಧಿಸಿದಂತೆ ಎರಡೂ ದೇಶಗಳಿಗೆ ಒಪ್ಪಿಗೆಯಾಗುವ “ಒಂದು ಚೌಕಟ್ಟು” ರೂಪಿಸುವುದು.

ವಿಶೇಷ ಪ್ರತಿನಿಧಿಗಳಿಗೆ ಸಂಸ್ಥಾತ್ಮಕ ಮಟ್ಟದಲ್ಲಿ ಅಧಿಕೃತ ನೆರವು ಒದಗಿಸುವ ಸಲುವಾಗಿ, 2012ರಲ್ಲಿ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯವಿಧಾನ (WMCC)ವನ್ನು ಸ್ಥಾಪಿಸಲಾಯಿತು.

ಸುಮಾರು 2013ರ ವೇಳೆಗೆ, ವಿಶೇಷ ಪ್ರತಿನಿಧಿಗಳು ಗಡಿ ವಿವಾದದ ಪರಿಹಾರಕ್ಕೆ ಸಂಬಂಧಿಸಿದ ಒಂದು ಚೌಕಟ್ಟಿನ ಕುರಿತು ವ್ಯಾಪಕವಾಗಿ ಒಮ್ಮತಕ್ಕೆ ಬಂದಿದ್ದರು. ಆದರೆ ಗಡಿಯ ನಿಜವಾದ ರೇಖಾನಿರ್ಣಯ ಮತ್ತು ಗಡಿ ಗುರುತಿಸುವಿಕೆಯತ್ತ ಸಾಗಬೇಕಿದ್ದ ಪ್ರಕ್ರಿಯೆ ಸ್ಥಗಿತಗೊಂಡಿತು. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆಂದರೆ, ಅಮೆರಿಕ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಸಂಬಂಧಗಳು ಮತ್ತಷ್ಟು ಆಳವಾಗುತ್ತಿರುವುದರ ಬಗ್ಗೆ ಚೀನಾಗೆ ಅಸಮಾಧಾನವಿದ್ದದ್ದು.

ತವಾಂಗ್ ಕುರಿತ ಚೀನಾದ ಹಕ್ಕು ಪ್ರತಿಪಾದನೆಗೆ ಅಲ್ಲಿನ ನೆಲೆಸಿರುವ ಜನಸಂಖ್ಯೆಗೆ ಯಾವುದೇ ಸಂಬಂಧವಿಲ್ಲ ಎಂದು ಬೀಜಿಂಗ್ ಹೇಳಿತು. ವಿಶೇಷ ಪ್ರತಿನಿಧಿಯಾಗಿ ಒಂದು ದಶಕ (2003–2013) ಕಾರ್ಯನಿರ್ವಹಿಸಿದ ನಂತರ ಹುದ್ದೆಯಿಂದ ನಿರ್ಗಮಿಸಿದ ದಾಯಿ ಬಿಂಗುವೊ, ಬಳಿಕ ನೀಡಿದ ಸಂದರ್ಶನವೊಂದರಲ್ಲಿ ತವಾಂಗ್ “ಸಾಂಸ್ಕೃತಿಕ ಹಿನ್ನೆಲೆ ಮತ್ತು ಆಡಳಿತಾತ್ಮಕ ವ್ಯಾಪ್ತಿಯ ದೃಷ್ಟಿಯಿಂದ” ಚೀನಾಕ್ಕೆ ಸೇರಿದೆ ಎಂದು ಘೋಷಿಸಿದರು. ನಂತರ ಅವರು, ಚೀನಾ ಮತ್ತು ಭಾರತ “ಅಂತಿಮ ಒಪ್ಪಂದದತ್ತ ಕರೆದೊಯ್ಯುವ ಬಾಗಿಲಿನ ಮುಂದೆ ನಿಂತಿವೆ… ಈಗ ಆ ಬಾಗಿಲಿನ ಕೀಲಿ ಭಾರತೀಯರ ಕೈಯಲ್ಲಿದೆ” ಎಂದು ಹೇಳಿದರು.

ಇದರ ನಂತರದ ವರ್ಷಗಳಲ್ಲಿ, ವಾಸ್ತವಿಕ ನಿಯಂತ್ರಣ ರೇಖೆ (LAC)ಯುದ್ದಕ್ಕೂ ಚೀನಾ ತನ್ನ ಒಳನುಗ್ಗುವಿಕೆಗಳನ್ನು ಹೆಚ್ಚಿಸಿತು. 2013ರಲ್ಲಿ ದೆಪ್ಸಾಂಗ್‌ನಲ್ಲಿ ಸೇನಾ ಮುಖಾಮುಖಿ, 2014ರಲ್ಲಿ ಚುಮಾರ್ ಪ್ರದೇಶಕ್ಕೆ ಚೀನಾದ ಒಳನುಗ್ಗುವಿಕೆ, 2017ರಲ್ಲಿ ಪ್ಯಾಂಗಾಂಗ್ ಸರೋವರದ ಬಳಿ ಘರ್ಷಣೆ ಮತ್ತು ಅದೇ ವರ್ಷದ ಬಳಿಕ ಡೋಕ್ಲಾಂನಲ್ಲಿ ಉಂಟಾದ ಮುಖಾಮುಖಿ ಪ್ರಮುಖ ಬೆಳವಣಿಗೆಗಳಾಗಿವೆ.

2020ರಲ್ಲಿ, LACಯುದ್ದಕ್ಕೂ ಭಾರತೀಯ ಪಡೆಗಳ ಪ್ರವೇಶವನ್ನು ಆರು ಸ್ಥಳಗಳಲ್ಲಿ ಚೀನಾ ತಡೆಹಿಡಿದಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತು. ಇದರ ಪರಿಣಾಮವಾಗಿ, ಮಾರಣಾಂತಿಕ ಗಲ್ವಾನ್ ಘರ್ಷಣೆ ಸಂಭವಿಸಿತು.

‘Early Harvest’ ಎಂದರೇನು?

“Early Harvest” ಎಂಬ ಪದಪ್ರಯೋಗ 2017ರ ಡೋಕ್ಲಾಂ ಬಿಕ್ಕಟ್ಟಿನ ನಂತರ ಚೀನಾ ನೀಡಿದ ಒಂದು ರಾಜತಾಂತ್ರಿಕ ಟಿಪ್ಪಣಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಸಂಪೂರ್ಣ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಮೊದಲು, ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು ಸಿಕ್ಕಿಂ ಗಡಿಯನ್ನು “Early Harvest” ಆಗಿ ಪರಿಗಣಿಸುವ ಕುರಿತು ಚರ್ಚಿಸುತ್ತಿದ್ದಾರೆ ಎಂದು ಅದರಲ್ಲಿ ಹೇಳಲಾಗಿತ್ತು.

ಇದಕ್ಕೆ ಕಾರಣವೆಂದರೆ ಸಿಕ್ಕಿಂ-ಟಿಬೆಟ್ ಗಡಿ ಈಗಾಗಲೇ 1890ರ ಆಂಗ್ಲೋ-ಚೀನೀ ಒಪ್ಪಂದದ ಮೂಲಕ ನಿರ್ಧಾರಗೊಂಡಿತ್ತು. ಅದು ಕೇವಲ ಗಡಿಯ ರೇಖಾನಿರ್ಣಯವಾಗಿರಲಿಲ್ಲ; ಮೋಚು ಮತ್ತು ತೀಸ್ತಾ ನದಿಗಳ ನಡುವಿನ ಜಲವಿಭಜಕ ರೇಖೆಯುದ್ದಕ್ಕೂ ಗಡಿಯನ್ನು ಗುರುತಿಸುವ ಕೆಲಸವೂ ನಡೆದಿತ್ತು. ಭೂತಾನ್‌ನೊಂದಿಗೆ ಗಡಿ ಮೂರು ದೇಶಗಳು ಸೇರುವ ತ್ರಿಸಂಧಿ ಬಿಂದುವಿನ ಸ್ಥಳದ ಕುರಿತು ಮಾತ್ರ ಭಾರತ ಮತ್ತು ಚೀನಾ ನಡುವೆ ಭಿನ್ನಾಭಿಪ್ರಾಯವಿದೆ. ಉಳಿದಂತೆ, ಭಾರತವು ಗಡಿಯ ಈ ವಿನ್ಯಾಸವನ್ನು ಒಪ್ಪಿಕೊಂಡಿದೆ.

2019ರ ಡಿಸೆಂಬರ್‌ನಲ್ಲಿ ಕ್ಸಿ ಜಿನ್‌ಪಿಂಗ್ ಮತ್ತು ನರೇಂದ್ರ ಮೋದಿ ಅವರ ಮಾಮಲ್ಲಪುರಂ ಶೃಂಗಸಭೆಯ ಬಳಿಕ ನಡೆದ ವಿಶೇಷ ಪ್ರತಿನಿಧಿಗಳ ಮಾತುಕತೆಯಲ್ಲಿ ಈ ವಿಚಾರ ಮತ್ತೆ ಮುನ್ನೆಲೆಗೆ ಬಂತು. ಆದರೆ ಭಾರತ ಅದನ್ನು ತಿರಸ್ಕರಿಸಿತು. 2005ರ ರಾಜಕೀಯ ಮಾನದಂಡಗಳ ಒಪ್ಪಂದದಲ್ಲಿ ಪ್ರತಿಪಾದಿಸಿರುವ ಸಮಗ್ರ ಪ್ಯಾಕೇಜ್ ಒಪ್ಪಂದದ ನಿಲುವಿಗೆ ತಾನು ಬದ್ಧವಾಗಿರುವುದಾಗಿ ಭಾರತ ಸ್ಪಷ್ಟಪಡಿಸಿತು.

ಗಲ್ವಾನ್ ಘರ್ಷಣೆಯ ಬಳಿಕ ಮಾತುಕತೆಗಳು ದೀರ್ಘಕಾಲ ಸ್ಥಗಿತಗೊಂಡವು. 2019ರ ಡಿಸೆಂಬರ್‌ನಿಂದ 2024ರ ಡಿಸೆಂಬರ್‌ವರೆಗೆ ವಿಶೇಷ ಪ್ರತಿನಿಧಿಗಳ ಯಾವುದೇ ಸಭೆ ನಡೆಯಲಿಲ್ಲ. ಆದರೆ ಈ ಅವಧಿಯಲ್ಲಿ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯವಿಧಾನ (WMCC) ಚುರುಕಾಗಿ ಕಾರ್ಯನಿರ್ವಹಿಸಿತು ಮತ್ತು 15 ಸಭೆಗಳನ್ನು ನಡೆಸಿತು.

2025ರ ಆಗಸ್ಟ್‌ನಲ್ಲಿ ನವದೆಹಲಿಯಲ್ಲಿ ನಡೆದ 24ನೇ ಸುತ್ತಿನ ಮಾತುಕತೆಯಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪವಾಯಿತು. ಗಡಿ ರೇಖಾನಿರ್ಣಯದಲ್ಲಿ “Early Harvest” ಸಾಧ್ಯತೆಗಳನ್ನು ಪರಿಶೀಲಿಸಲು WMCC ಅಡಿಯಲ್ಲಿ ತಜ್ಞರ ಸಮೂಹವೊಂದನ್ನು ರಚಿಸುವ ಕುರಿತು ಭಾರತ ಮತ್ತು ಚೀನಾ ಎರಡೂ ದೇಶಗಳ ಪತ್ರಿಕಾ ಪ್ರಕಟಣೆಗಳಲ್ಲಿ ಉಲ್ಲೇಖಿಸಲಾಯಿತು.

ಇತ್ತೀಚಿನ ಎಂಟು ಅಂಶಗಳ ಜಂಟಿ ಪ್ರಕಟಣೆಯಲ್ಲಿ, ಎರಡೂ ದೇಶಗಳು “ಶೀಘ್ರ ಮತ್ತು ಗಮನಾರ್ಹ ಫಲಿತಾಂಶ” ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಬದ್ಧವಾಗಿವೆ. ಈ ಉದ್ದೇಶಕ್ಕಾಗಿ WMCCಯ ತಜ್ಞರ ಸಮೂಹವು ತನ್ನ ಕಾರ್ಯವ್ಯಾಪ್ತಿ ಮತ್ತು ಕಾರ್ಯನಿರ್ವಹಣೆಯ ನಿಯಮಗಳನ್ನು ರೂಪಿಸಬೇಕು ಎಂದು ಸೂಚಿಸಲಾಗಿದೆ.

ಯಾವುದೇ ನಿರ್ದಿಷ್ಟ ವಲಯದ ಹೆಸರನ್ನು ಹೇಳಲಾಗಿಲ್ಲ. ಆದರೆ ಎರಡೂ ದೇಶಗಳು ಸಿಕ್ಕಿಂ-ಟಿಬೆಟ್ ಗಡಿ (220 ಕಿ.ಮೀ.) ಮತ್ತು ಕೇಂದ್ರ ವಲಯದ ಗಡಿ (545 ಕಿ.ಮೀ.)ಯನ್ನು ಗುರಿಯಾಗಿಸಿಕೊಂಡಿರಬಹುದು ಎಂಬ ನಿರೀಕ್ಷೆಯಿದೆ. ಕೇಂದ್ರ ವಲಯವು ಹಿಮಾಚಲ ಪ್ರದೇಶದ ಶಿಪ್ಕಿ ಲಾದಿಂದ ಉತ್ತರಾಖಂಡದ ಲಿಪುಲೇಖ್‌ವರೆಗೆ ವ್ಯಾಪಿಸಿದೆ.

ಚೀನಾ ಮತ್ತು ಭಾರತ ಎರಡೂ 2005ರ ರಾಜಕೀಯ ಮಾನದಂಡಗಳ ಒಪ್ಪಂದ ಹಾಗೂ ಅದರ ಸಮಗ್ರ ಪ್ಯಾಕೇಜ್ ಒಪ್ಪಂದದ ಆಶಯಕ್ಕೆ ಇನ್ನೂ ಬದ್ಧವಾಗಿರುವುದಾಗಿ ಹೇಳುತ್ತಿವೆ. ಆದರೂ, ಈಗ ತಮ್ಮ ಒಟ್ಟು ಗಡಿಯ ಐದನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಪ್ರದೇಶವನ್ನು ಒಳಗೊಂಡ “Early Harvest” ಒಪ್ಪಂದಗಳಿಗೆ ಸಿದ್ಧತೆ ನಡೆಸುತ್ತಿವೆ. ಇದರಿಂದ ಸ್ಪಷ್ಟವಾಗುವುದೇನೆಂದರೆ, ವಾಸ್ತವವಾದಿ ನಿಲುವು ಈಗ ಮಾತುಕತೆಗಳ ದಿಕ್ಕನ್ನು ನಿರ್ಧರಿಸುತ್ತಿದೆ.

ಆರಂಭದಿಂದಲೂ ಗಡಿ ವಿವಾದ ಬಗೆಹರಿಸುವ ಪ್ರಯತ್ನಗಳು ರಾಜಕೀಯ ಮತ್ತು ಅಧಿಕೃತ ಮಟ್ಟಗಳ ನಡುವೆ ಏರಿಳಿತ ಕಂಡಿವೆ. 1950ರ ದಶಕದಲ್ಲಿ ಝೌ ಎನ್‌ಲೈ ಮತ್ತು ನೆಹರೂ ನೇರವಾಗಿ ಮಾತುಕತೆ ನಡೆಸಿದರು. 1980 ಮತ್ತು 1990ರ ದಶಕಗಳಲ್ಲಿ ಅಧಿಕಾರಿಗಳು ಹಾಗೂ ಜಂಟಿ ಕಾರ್ಯಕಾರಿ ಸಮಿತಿ ಸುದೀರ್ಘ ಮಾತುಕತೆ ನಡೆಸಿತು. ಮಾತುಕತೆಗಳು ಸ್ಥಗಿತಗೊಂಡ ಸಂದರ್ಭಗಳಲ್ಲಿ ರಾಜೀವ್ ಗಾಂಧಿ ಮತ್ತು ವಾಜಪೇಯಿ ಅವರಂತಹ ರಾಜಕೀಯ ನಾಯಕರು ಮತ್ತೆ ನೇರವಾಗಿ ಮಧ್ಯಪ್ರವೇಶಿಸಿದರು.

2003ರಲ್ಲಿ ವಿಶೇಷ ಪ್ರತಿನಿಧಿಗಳನ್ನು ನೇಮಿಸುವ ನಿರ್ಧಾರವೂ ಇಂತಹ ಒಂದು ಸ್ಥಗಿತದ ಸಂದರ್ಭದಲ್ಲಿ ಬಂದಿತ್ತು. ರಾಜಕೀಯ ನಾಯಕರು ತಾಂತ್ರಿಕ ಮತ್ತು ಪ್ರಾಥಮಿಕ ಕೆಲಸವನ್ನು ತಮ್ಮ ವಿಶ್ವಾಸಾರ್ಹ ಪ್ರತಿನಿಧಿಗಳಿಗೆ ವಹಿಸಿ, ಅಂತಿಮ ಒಪ್ಪಂದದ ನಿರ್ಧಾರವನ್ನು ತಮ್ಮ ಕೈಯಲ್ಲೇ ಉಳಿಸಿಕೊಂಡರು. ವಿಶೇಷ ಪ್ರತಿನಿಧಿಗಳು ಮತ್ತು ಅವರ ತಜ್ಞರ ಸಮೂಹ ಏನೇ ಫಲಿತಾಂಶಕ್ಕೆ ಬಂದರೂ, ಅಂತಿಮ ಗಡಿ ಒಪ್ಪಂದಕ್ಕೆ—ಅದು ಸಹಜವಾಗಿಯೇ ಪರಸ್ಪರ ಕೊಡುಗೆ ಮತ್ತು ಹೊಂದಾಣಿಕೆಯನ್ನು ಒಳಗೊಂಡಿರುತ್ತದೆ—ಕ್ಸಿ ಜಿನ್‌ಪಿಂಗ್ ಮತ್ತು ಆ ಸಮಯದಲ್ಲಿ ಭಾರತದ ಪ್ರಧಾನಿಯಾಗಿರುವವರು ಅಂತಿಮ ಅನುಮೋದನೆ ನೀಡಬೇಕಾಗುತ್ತದೆ.

“Early Harvest” ಎಂಬ ಪರಿಕಲ್ಪನೆಯಲ್ಲೇ ಅದು ಸುಲಭವಾದ ಭಾಗ ಎಂಬ ಅರ್ಥವಿದೆ. ಕಠಿಣವಾದ ಸಮಸ್ಯೆಗಳು—ಅಕ್ಸಾಯಿ ಚಿನ್ ಮತ್ತು ತವಾಂಗ್ ಪ್ರದೇಶ—ಇನ್ನೂ ಹಾಗೆಯೇ ಉಳಿದಿವೆ. ಆದ್ದರಿಂದ ಇಡೀ ಗಡಿ ವಿವಾದಕ್ಕೆ ಶೀಘ್ರವೇ ಸಂಪೂರ್ಣ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲು ಒಬ್ಬರು ನಿಜಕ್ಕೂ ಆಶಾವಾದಿಯಾಗಿರಬೇಕು.

ಮನೋಜ್‌ ಜೋಷಿ – ಇವರು ಆಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ವಿಶಿಷ್ಟ ಫೆಲೋ (Distinguished Fellow) ಆಗಿದ್ದು, Understanding the India-China Border: The Enduring Threat of War in High Himalaya (ಲಂಡನ್, 2022) ಕೃತಿಯ ಲೇಖಕ.

ಈ ಲೇಖನವು ದಿ ವೈರ್‌ನಲ್ಲಿ ಪ್ರಕಟವಾದ ‘Early and Substantial’: Parsing the Fine Print of the India-China Border Talks  ಲೇಖನದ ಕನ್ನಡಾನುವಾದ.