Saturday, June 15, 2024

ಸತ್ಯ | ನ್ಯಾಯ |ಧರ್ಮ

ʼಟಿಪ್ಪು ಎಕ್ಸ್‌ಪ್ರೆಸ್‌ʼ ಹೆಸರು ಬದಲಾವಣೆ: ಎಚ್.ಸಿ.ಮಹದೇವಪ್ಪ ಕಿಡಿ

ಬೆಂಗಳೂರು: ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ರೈಲಿನ ಹೆಸರನ್ನು ʼಟಿಪ್ಪು ಎಕ್ಸ್‌ಪ್ರೆಸ್‌ʼ ಬದಲು ʼಒಡೆಯರ್ ಎಕ್ಸ್ಪ್ರೆಸ್ ʼ ಎಂದು ಮರುನಾಮಕರಣ ಮಾಡಿರುವ ಕುರಿತು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಮತ್ತು ಹಿರಿಯ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಎಕ್ಸ್​ಪ್ರೆಸ್ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ ರೈಲು ಎಂದು ಹೆಸರಿಡಲು ಸಂಸದ ಪ್ರತಾಪ್​ ಸಿಂಹ ಅವರ ಮನವಿಯೇ ಕಾರಣವಾಗಿದೆ ಎಂದು, ರೈಲ್ವೆ ಸಚಿವಾಲಯ ಆದೇಶ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರತಾಪ್‌ ಸಿಂಹ ಅವರು, ಇನ್ನು ಮುಂದೆ ಟಿಪ್ಪು ಎಕ್ಸ್‌ಪ್ರೆಸ್ ಬದಲು ಒಡೆಯರ್ ಎಕ್ಸ್‌ಪ್ರೆಸ್ ನಿಮಗೆ ಸೇವೆ ಒದಗಿಸಲಿದೆ ಎಂದು ಟ್ವೀಟ್‌ ಮಾಡಿದ್ದರು.

ಈ ಹಿನ್ನಲೆ ಟ್ವೀಟ್‌ ಮಾಡುವ ಮೂಲಕ ವಾಗ್ದಾಳಿ ನಡೆಸಿರುವ ಡಾ.ಎಚ್.ಸಿ.ಮಹದೇವಪ್ಪ ಅವರು, ಹಸುವಿಗೆ ಗುದ್ದಿದ್ದಕ್ಕೆ ವಂದೇ ಭಾರತ್ ರೈಲಿನ ಭಾಗವು ಪುಡಿಯಾಗಿ ಅದರ ಕಳಪೆ ಗುಣಮಟ್ಟದ ಬಗ್ಗೆ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಟಿಪ್ಪು ಎಕ್ಸ್‌ಪ್ರೆಸ್‌ನ ಹೆಸರನ್ನು ಬದಲಾಯಿಸಲಾಗಿದೆ. ಇನ್ನೊಂದು ಹೊಸ ರೈಲಿನ ಸೌಲಭ್ಯ ಕಲ್ಪಿಸಿ ಅದಕ್ಕೆ ಒಡೆಯರ್ ಎಂಬ ಹೆಸರನ್ನು ಇಡುವ ಕೆಲಸ ಮಾಡಿದ್ದರೆ ಇವರನ್ನು ಮೆಚ್ಚಬಹುದಿತ್ತು ಎಂದು ಟೀಕಿಸಿದ್ದಾರೆ.

ಒಂದಾದರೂ ಅಭಿವೃದ್ಧಿ ಕೆಲಸ ಮಾಡುವ ಯೋಗ್ಯತೆ ಇಲ್ಲದ ಇವರು ಕೋಮುದ್ವೇಷ ಹರಡಲು ಮತ್ತು ಹೊಲಸು ರಾಜಕೀಯ ಮಾಡಲು ರೈಲಿನ ಹೆಸರು ಬದಲಾಯಿಸಿರುವ ಕ್ರಮವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ! ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದ ಪ್ರತಾಪ್‌ ಸಿಂಹ ಅವರೇ, ನೀವು ಜನಪರವಾಗಿ ಕೆಲಸ ಮಾಡದೇ ಏನೇ ಚುನಾವಣಾ ಗಿಮಿಕ್ ಮಾಡಿದರೂ ಕೂಡಾ ಟಿಪ್ಪುವಿನಂತೆ ಮೈಸೂರಿನ ಹುಲಿ ಎಂಬ ಬಿರುದನ್ನು ಗಳಿಸಲು ನಿಮ್ಮಿಂದಾಗದು ಎಂಬುದೇ ಅಂತಿಮ ಸತ್ಯ ಎಂದು ಡಾ.ಎಚ್.ಸಿ.ಮಹದೇವಪ್ಪ ಹರಿಹಾಯ್ದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು