Home ರಾಜಕೀಯ ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಎಸೆದ ಆರೋಪ: 10 ಬಿಜೆಪಿ ಶಾಸಕರ ಅಮಾನತು

ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಎಸೆದ ಆರೋಪ: 10 ಬಿಜೆಪಿ ಶಾಸಕರ ಅಮಾನತು

0

ಬೆಂಗಳೂರು: ಸದನದಲ್ಲಿ ಗಲಭೆಯೆಬ್ಬಿಸಿ, ಮಸೂದೆ ಪತ್ರಗಳನ್ನು ಹರಿದು ಹಾಕಿದ ಆರೋಪದ ಮೇಲೆ ಹಾಗೂ ಸದನದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿಯ ಹತ್ತು ಶಾಸಕರನ್ನು ಅಮಾನತುಗೊಳಿಸಿ, ಸ್ಪೀಕರ್‌ ಯು.ಟಿ.ಖಾದರ್‌ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ್, ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್, ಯಶ್ ಪಾಲ್ ಸುವರ್ಣ, ವೇದವ್ಯಾಸ ಕಾಮತ್, ಅರವಿಂದ್ ಬೆಲ್ಲದ್, ಧೀರಜ್ ಮುನಿರಾಜ್, ಆರ್.ಅಶೋಕ್, ಉಮಾನಾಥ್ ಕೊಟ್ಯಾನ್ ಅವರನ್ನು ಮುಂಗಾರು ಅಧಿವೇಶನ ಪೂರ್ಣಗೊಳ್ಳುವವರೆಗೂ ಅಮಾನತು ಮಾಡಲಾಗಿದೆ.

ಈ ಕುರಿತು ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, “ರಾಜಕೀಯ ಅಸ್ತಿತ್ವಕ್ಕಾಗಿ ಗಲಾಟೆ ಮಾಡುವುದು ಸರಿಯಲ್ಲ. ಪೀಠದ‌ ಗೌರವ ಉಳಿಸುವ ಕೆಲಸ ಮಾಡಬೇಕು. ಸದಸ್ಯರ ಮಾತುಗಳನ್ನು ಕೇಳಲು ನಾವು ಸಿದ್ದರಿದ್ದೇವೆ. ಪೀಠಕ್ಕೆ ಅಗೌರವ ತೋರಿಸಿದ್ದು ಸದನದ ಗೌರವಕ್ಕೆ ಕಪ್ಪು ಚುಕ್ಕೆಯಿಟ್ಟಂತಾಗಿದೆ. ಮತದಾರರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ರಾಜ್ಯದ ಜನರು ನಿಮ್ಮ ನಡವಳಿಕೆಯನ್ನು ಸಹಿಸುವುದಿಲ್ಲ” ಎಂದರು.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು, “ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದ್ದು, ಸ್ಪೀಕರ್ ಸ್ಥಾನವನ್ನು ದುರುಪಯೋಗ ಮಾಡುವ ಪ್ರಯತ್ನ ಮಾಡುತ್ತಿದೆ‌” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ವ್ಯಕ್ತಿಗಳ ಆತಿಥ್ಯಕ್ಕೆ ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದನ್ನು ವಿರೋಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಸದಸ್ಯರು ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿದರು. ಅಲ್ಲದೇ ಅವುಗಳನ್ನು ಸಭಾಪತಿ ಪೀಠದಲ್ಲಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮೇಲೆಸೆದಿದ್ದರಿಂದ ಕೋಲಾಹಲ ಸೃಷ್ಟಿಯಾಯಿತು.

You cannot copy content of this page

Exit mobile version