Saturday, June 15, 2024

ಸತ್ಯ | ನ್ಯಾಯ |ಧರ್ಮ

2023: ಕ್ರಿಕೆಟ್‌ ಆಗಸದಲ್ಲಿ ಮಿಂಚಿದ ಹತ್ತು ತಾರೆಗಳು

ಕ್ರಿಕೆಟ್‌, ಫುಟ್‌ಬಾಲ್‌, ಹಾಕಿಯಂತಹ ಹಲವು ಆಟಗಳು ಒಂದು ತಂಡವಾಗಿ ಆಡಿ ಜಯಿಸುವ ಆಟಗಳು. ಈ ಆಟಗಳಲ್ಲೂ ಅನೇಕ ಆಟಗಾರರು ತಮ್ಮದೇ ಆದ ಛಾಪನ್ನು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುತ್ತಾರೆ. ತಮ್ಮದೇ ಆದ ದಾಖಲೆಗಳನ್ನು ನಿರ್ಮಿಸುವ ಮೂಲಕ ಅವರು ತಮ್ಮ ಹೆಸರುಗಳನ್ನು ದಾಖಲೆಗಳಲ್ಲಿ ವೈಯಕ್ತಿವಾಗಿ ದಾಖಲಿಸುತ್ತಾರೆ. ಪ್ರತಿ ತಂಡದಲ್ಲೂ, ಪ್ರತಿ ಪಂದ್ಯದಲ್ಲೂ ಒಬ್ಬನಲ್ಲ ಒಬ್ಬ ಸೂಪರ್‌ ಹೀರೊ ಹೊರಹೊಮ್ಮಿರುತ್ತಾನೆ. ಮತ್ತು ಅವನನ್ನು ಜನರು ಕೊಂಡಾಡಿರುತ್ತಾರೆ.

2023ರಲ್ಲೂ ಅನೇಕ ಕ್ರೀಡಾಪಟುಗಳು ತಾವು ಪ್ರತಿನಿಧಿಸುವ ತಂಡದ, ಕ್ರೀಡೆಯ ಮುಖವಾಗಿ ಹೊರಹೊಮ್ಮಿದ್ದಾರೆ. ತಮ್ಮ ಅಭಿಮಾನಿಗಳ ಮುಖದಲ್ಲಿ ಹೆಮ್ಮೆಯ ಗೆರೆಯನ್ನು ಮೂಡಿಸಿದ್ದಾರೆ. ಕಳೆದು ಹೋದ ಕ್ರೀಡಾ ವರ್ಷವನ್ನು ಸ್ಮರಣೀಯವಾಗಿಸಿದ ಒಂದಷ್ಟು ಹೀರೊಗಳನ್ನು ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತು ನೆನಪಿಸಿಕೊಳ್ಳೋಣ ಬನ್ನಿ,

ವಿರಾಟ್‌ ಕೊಹ್ಲಿ

ವಿರಾಟ್ ಕೊಹ್ಲಿ ಅವರ ವೃತ್ತಿಜೀವನದ ಗ್ರಾಫ್ 2019 ರಲ್ಲಿ ಉತ್ತುಂಗದಲ್ಲಿತ್ತು. ಆದರೆ ಇದ್ದಕ್ಕಿದ್ದಂತೆ ಎಲ್ಲವೂ ನಿಂತ ನೀರಾಯಿತು. 2020ರಿಂದ 2022 ಅವರ ಬದುಕಿನ ಕಠಿಣ ಅವಧಿಯಾಗಿತ್ತು. ಈ ಸಮಯದಲ್ಲಿ ಅವರು ಮೂರೂ ರೀತಿಯ ಕ್ರಿಕೆಟ್‌ ಪಂದ್ಯಾಟಗಳ ನಾಯಕತ್ವವನ್ನು ಕಳೆದುಕೊಂಡರು. ಆ ಸಮಯದಲ್ಲಿ ಅವರ ಕ್ರೀಡಾ ಜೀವನ ಅಕಾಲಿಕವಾಗಿ ಮುಗಿದು ಹೋಗಲಿದೆಯೆನ್ನುವ ಆತಂಕ ಅವರ ಅಭಿಮಾನಿಗಳನ್ನು ಕಾಡಿತ್ತು. ಜೊತೆಗೆ ಅವರು ಈ ಸಮಯದಲ್ಲಿ ಆಯ್ಕೆದಾರರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ.

ಆದರೆ 2023ರ ಹೊತ್ತಿಗೆ ಅವರು ಫೀನಿಕ್ಸ್‌ ಹಕ್ಕಿಯಂತೆ ಮತ್ತೆ ಕಣಕ್ಕೆ ಮರಳಿ ತಮ್ಮ ಬೂಟುಗಳನ್ನು ಬಿಗಿಯಾಗಿ ಕಟ್ಟಿಕೊಂಡರು. ಈ ವರ್ಷ ಅವರು ತಾನು ಕ್ರಿಕೆಟ್‌ ಸಾಮ್ರಾಜ್ಯದ ರಾಜನೆನ್ನುವುದನ್ನು ಮತ್ತೆ ಸಾಬೀತುಗೊಳಿಸಿದರು, 2023ರಲ್ಲಿ ಅವರು ಏಕದಿನ ಪಂದ್ಯಗಳಲ್ಲಿ 50 ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವಕಪ್ ಪಂದ್ಯಾವಳಿಯಲ್ಲಿ ದಾಖಲೆಯ 765 ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದರು. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಕೊಹ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ವರ್ಷ ಕೊಹ್ಲಿ 8 ಟೆಸ್ಟ್ ಪಂದ್ಯಗಳಲ್ಲಿ 671 ರನ್ ಮತ್ತು 27 ಏಕದಿನ ಪಂದ್ಯಗಳಲ್ಲಿ 1377 ರನ್ ಸೇರಿದಂತೆ ಒಟ್ಟು 2048 ರನ್ ಗಳಿಸಿದ್ದಾರೆ. ಜೊತೆಗೆ 2023ರಲ್ಲಿ ಆಡಿದ 36 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 8 ಶತಕ ಹಾಗೂ 10 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರು ಈ ವರ್ಷ ಯಾವುದೇ ಅಂತರರಾಷ್ಟ್ರೀಯ ಟಿ 20 ಪಂದ್ಯಗಳನ್ನು ಆಡಲಿಲ್ಲ ಆದರೆ ಐಪಿಎಲ್ ಕೂಟದ 14 ಪಂದ್ಯಗಳಲ್ಲಿ 639 ರನ್ ಗಳಿಸುವ ಮೂಲಕ ಈ ಮಾದರಿಯಲ್ಲೂ ಪ್ರಾಬಲ್ಯ ಸಾಧಿಸಿದರು.

ರೋಹಿತ್ ಶರ್ಮಾ

ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ತಂಡವನ್ನು ಮುಂಚೂಣಿಯಲ್ಲಿ ಸಾಗಿಸಿದ್ದಲ್ಲದೇ ವೈಯಕ್ತಿಕವಾಗಿಯೂ ಬಹಳಷ್ಟು ಸಾಧನೆಗಳನ್ನು ಮಾಡಿದರು. ತಂಡದ ನಾಯಕ ಉತ್ತಮ ಆಟವನ್ನಾಡಿದಾಗ ಅದು ಉಳಿದ ಆಟಗಾರರಿಗೆ ಸ್ಫೂರ್ತಿಯಾಗುತ್ತದೆ. ಈ ಪಾತ್ರವನ್ನು ರೋಹಿತ್‌ ಈ ಬಾರಿ ಸುಂದರವಾಗಿ ನಿಭಾಯಿಸಿದರು. ರೋಹಿತ್‌ ಈ ಬಾರಿಯ ವಿಶ್ವಕಪ್‌ ಸಮಯದಲ್ಲಿ ಒಂದಿಷ್ಟೂ ಸ್ವಾರ್ಥವಿಲ್ಲದೆ ಬ್ಯಾಟಿಂಗ್‌ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಅವರ ಬಲವಾದ ಪ್ರದರ್ಶನವು ನಂತರದ ಬ್ಯಾಟ್‌ಮನ್‌ಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿತು. ಅವರ ನಾಯಕತ್ವದಲ್ಲಿ ಭಾರತ ವಿಶ್ವಕಪ್ಪಿನಲ್ಲಿ ಸತತ ಹತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು. ಆದರೆ ಕೊನೆಯ ಪಂದ್ಯದಲ್ಲಿ ಕಾಂಗರೂಗಳು ಭಾರತದ ಹುಲಿಗಳ ಸದ್ದಡಗಿಸಿದವು.

ರೋಹಿತ್ ಶರ್ಮಾ 11 ವಿಶ್ವಕಪ್ ಪಂದ್ಯಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿದಂತೆ 597 ರನ್ ಗಳಿಸಿದ್ದಾರೆ. ಅವರು ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ರೋಹಿತ್ ಈ ವರ್ಷ 27 ಏಕದಿನ  ಪಂದ್ಯಗಳನ್ನು ಆಡಿದ್ದಾರೆ ಮತ್ತು 117ರ ಸ್ಟ್ರೈಕ್ ರೇಟಿನಲ್ಲಿ 1255 ರನ್ ಮತ್ತು ಎಂಟು ಟೆಸ್ಟ್ ಪಂದ್ಯಗಳಲ್ಲಿ 545  ರನ್ ಗಳಿಸಿದ್ದಾರೆ. ರೋಹಿತ್ ಏಕದಿನ ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಗಳಿಸಿದರೆ, ಟೆಸ್ಟ್‌ ಪಂಧ್ಯಗಳಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ 35 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1800 ರನ್  ನಿಜಕ್ಕೂ ಅದ್ಭುತ ಸಾಧನೆ. ಅವರು ಕಳೆದ ವರ್ಷ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು.

ಆದರೆ ವರ್ಷದ ಅಂತ್ಯದ ವೇಳೆಗೆ, ಅವರು ದೊಡ್ಡ ಹಿನ್ನಡೆಯೊಂದನ್ನು ಅನುಭವಿಸಿದರು. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಅವರಿಂದ ಕಿತ್ತುಕೊಳ್ಳಲಾಯಿತು ಮತ್ತು ಅವರ ತಂಡದಲ್ಲಿ ಆಡಿದ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ ತಂಡದಿಂದ ಖರೀದಿಸಿ ನಾಯಕರನ್ನಾಗಿ ಮಾಡಲಾಯಿತು. ರೋಹಿತ್  2013ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ತಂಡವು ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು.

ಶುಭಮನ್ ಗಿಲ್

ಕ್ರಿಕೆಟ್‌ ಜಗತ್ತಿನ ಸೂಪರ್‌ ಸ್ಟಾರ್‌ ಎಂದೇ ಕರೆಯಲ್ಪಡುವ ಶುಭಮನ್‌ ಗಿಲ್‌ 2023ರಲ್ಲಿ ತಮ್ಮ ಆಗಮನವನ್ನು ದೊಡ್ಡದಾಗಿಯೇ ಸಾರಿದ್ದಾರೆ. 2011ರಲ್ಲಿ ಕೊಹ್ಲಿ ಸಚಿನ್‌ ತೆಂಡುಲ್ಕರ್‌ ಅವರಿಂದ ಪಡೆದ ಪಟ್ಟವನ್ನು ಈ 24 ವರ್ಷದ ಯುವಕ 2023ರಲ್ಲಿ ತನ್ನದಾಗಿಸಿಕೊಂಡಿದ್ದಾನೆ. ಈ ವರ್ಷ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಶುಭಮನ್‌ ಗಿಲ್‌ ಮೊದಲ ಸ್ಥಾನದಲ್ಲಿದ್ದಾರೆ.

2023ರಲ್ಲಿ ಗಿಲ್ 48 ಪಂದ್ಯಗಳ 52 ಇನ್ನಿಂಗ್ಸ್‌ಗಳಲ್ಲಿ 47.82ರ ಸರಾಸರಿ ಮತ್ತು 101.22ರ ಸ್ಟ್ರೈಕ್ ರೇಟಿನಲ್ಲಿ ಒಟ್ಟು 2154 ರನ್ ಗಳಿಸಿದ್ದಾರೆ. ವಿರಾಟ್‌ ಕೊಹ್ಲಿ ಇವರಿಗಿಂತ 106 ರನ್ನುಗಳನ್ನು ಕಡಿಮೆ ಸ್ಕೋರ್‌ ಮಾಡಿದ್ದಾರೆ ಮತ್ತು ಅವರು ಗಿಲ್‌ ಆಡಿದ್ದಕ್ಕಿಂತಲೂ 13 ಪಂದ್ಯಗಳನ್ನು ಕಡಿಮೆ ಆಡಿದ್ದಾರೆ. ಗಿಲ್ ಈ ವರ್ಷ ಏಳು ಶತಕಗಳು ಮತ್ತು ಹತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ.

ಗಿಲ್ ಐದು ಟೆಸ್ಟ್ ಪಂದ್ಯಗಳಲ್ಲಿ 258 ರನ್, 29 ಏಕದಿನ ಪಂದ್ಯಗಳಲ್ಲಿ 1584 ರನ್ ಮತ್ತು 13 ಟಿ 20 ಪಂದ್ಯಗಳಲ್ಲಿ 312 ರನ್ ಗಳಿಸಿದ್ದಾರೆ. ಟೆಸ್ಟ್ ಮತ್ತು ಟಿ 20 ಪಂದ್ಯಗಳಲ್ಲಿ ಗಿಲ್ ಇನ್ನೂ ತಂಡದ ಖಾಯಂ ಸದಸ್ಯರಾಗಲು ಸಾಧ್ಯವಾಗದಿದ್ದರೂ, ಅವರು ಏಕದಿನ ಪಂದ್ಯಗಳಲ್ಲಿ ವರ್ಷವಿಡೀ ಸುದ್ದಿಯಲ್ಲಿದ್ದರು. ಡೆಂಗ್ಯೂ ಸೋಂಕಿನ ಕಾರಣದಿಂದಾಗಿ ಅವರು ವಿಶ್ವಕಪ್ ಪಂದ್ಯದ ಮೊದಲ ಎರಡು ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಗಿಲ್ ಉಳಿದ ಒಂಬತ್ತು ಪಂದ್ಯಗಳಲ್ಲಿ 4 ಅರ್ಧಶತಕಗಳು ಸೇರಿದಂತೆ 354 ರನ್ ಗಳಿಸಿದ್ದಾರೆ.

ಐಪಿಎಲ್ ಕೂಟದಲ್ಲಿ ಗುಜರಾತ್ ಟೈಟಾನ್ಸ್ ಪರ 17 ಇನ್ನಿಂಗ್ಸ್‌ ಮೂಲಕ 890 ರನ್ ಗಳಿಸಿದ್ದ ಶುಭಮನ್ ಪ್ಲೇಯರ್‌ ಆಫ್‌ ದಿ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾಗಿದ್ದರು.‌ ಈ ಹಂಗಾಮಿನಲ್ಲಿ ಆರೆಂಜ್‌ ಕ್ಯಾಪ್‌ ಕೂಡಾ ಅವರ ಪಾಲಾಯಿತು.

ಮೊಹಮ್ಮದ್ ಶಮಿ

ಹಲವು ಏರಿಳಿತಗಳ ಹೊರತಾಗಿಯೂ, 33 ವರ್ಷದ ಅಮ್ರೋಹಾ ಎಕ್ಸ್ಪ್ರೆಸ್ ಮೊಹಮ್ಮದ್ ಶಮಿ 2023ರಲ್ಲಿ ಕಣದಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಟೀಕಾಕಾರರಿಗೆ ಸೂಕ್ತ ಉತ್ತರ ನೀಡಿದರು. ಐಪಿಎಲ್‌ ಪಂದ್ಯಾವಳಿಯಲ್ಲಿ ಅವರು ಗುಜರಾತ್ ಟೈಟಾನ್ಸ್ ಪರ 17 ಪಂದ್ಯಗಳಲ್ಲಿ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದರು.

ಈ ಬಲವಾದ ಪ್ರದರ್ಶನದ ನಂತರವೂ, ಆಯ್ಕೆದಾರರು ಅವರತ್ತ ಗಮನ ನೀಡಲಿಲ್ಲ. ವಿಶ್ವಕಪ್‌ ಪಂದ್ಯದ ಮೊದಲ ನಾಲ್ಕು ಪಂದ್ಯಗಳಲ್ಲಿಯೂ ಅವರಿಗೆ ಅವಕಾಶ ನೀಡಲಿಲ್ಲ. ಆದರೆ ನಂತರ ಅವರಿಗೆ ಅವಕಾಶ ಸಿಕ್ಕಾಗ, ಅವರು ಮೈದಾನದಲ್ಲಿ ಕೋಲಾಹಲ ಸೃಷ್ಟಿಸಿದರು.

ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 5 ವಿಕೆಟ್, ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4,  ಶ್ರೀಲಂಕಾ  ವಿರುದ್ಧ 18 ರನ್ನುಗಳಿಗೆ 5 ವಿಕೆಟ್ ಮತ್ತು ನ್ಯೂಜಿಲೆಂಡ್ ವಿರುದ್ಧ 57 ರನ್‌ ನೀಡಿ   7 ವಿಕೆಟ್  ಪಡೆದರು. ಇದು ಇದುವರೆಗೆ ಭಾರತದ ಬೌಲರ್‌ ಒಬ್ಬ ವಿಶ್ವಕಪ್‌ ಪಂದ್ಯಾವಳಿಯಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನವಾಗಿತ್ತು.

ಏಳು ವಿಶ್ವಕಪ್ ಪಂದ್ಯಗಳಲ್ಲಿ, ಶಮಿ 10.70  ಸರಾಸರಿ  ಮತ್ತು 5.26 ಎಕಾನಮಿಯಲ್ಲಿ 24 ವಿಕೆಟುಗಳನ್ನು ಪಡೆದರು  ಮತ್ತು ತಾನು ಪಂದ್ಯಾವಳಿಯ ಅತ್ಯಂತ ಯಶಸ್ವಿ ಬೌಲರ್ ಎಂದು ಸಾಬೀತುಪಡಿಸಿದರು. ಈ ಬಾರಿ ಅವರು ಮೂರು ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟುಗಳನ್ನು ಪಡೆದರು ಮತ್ತು ಒಮ್ಮೆ ನಾಲ್ಕು ವಿಕೆಟ್ಟುಗಳನ್ನು ಪಡೆಯುವ ಅದ್ಭುತ ಕೆಲಸವನ್ನು ಮಾಡಿದರು. ಈ ಮೂಲಕ ವಿಶ್ವಕಪ್‌ ಪಂದ್ಯದ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

2023ರಲ್ಲಿ ಶಮಿ 23 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 56  ವಿಕೆಟ್  ಪಡೆದಿದ್ದರು.

ಪ್ಯಾಟ್ ಕಮಿನ್ಸ್

ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್  2023ರಲ್ಲಿ ತನ್ನೆಲ್ಲಾ ಟೀಕಾಕಾರರ ಬಾಯಿಮುಚ್ಚಿಸಿದರು. ಕಠಿಣ ಸಂದರ್ಭಗಳಲ್ಲಿಯೂ ಶಾಂತ ಮತ್ತು ಸಂಯಮದ ಗುಣ ಪ್ರದರ್ಶಿಸುವ ಕಮಿನ್ಸ್, ಕ್ಲಾಸ್ ಎಂದರೇನು ಎಂಬುದನ್ನು ಜಗತ್ತಿಗೆ ತೋರಿಸಿದರು. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಆರನೇ ಬಾರಿಗೆ ಏಕದಿನ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.

ವಿಶ್ವಕಪ್‌ ಪಂದ್ಯಾವಳಿಗೂ ಮೊದಲು ಆಸ್ಟ್ರೇಲಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಮತ್ತು ಆಶಸ್‌ ಸರಣಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಪ್ಯಾಟ್ ಕಮಿನ್ಸ್ ಈ ಎಲ್ಲಾ ಮೂರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕುತೂಹಲಕಾರಿ ಸಂಗತಿಯೆಂದರೆ, ಆಸ್ಟ್ರೇಲಿಯಾವು ಭಾರತವನ್ನು ಸೋಲಿಸುವ ಮೂಲಕವೇ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಂಡಿತು.

2023ರಲ್ಲಿ ಕಮಿನ್ಸ್ ನಾಯಕ ಮತ್ತು ಬೌಲರ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಈ ವರ್ಷ 24 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 59 ವಿಕೆಟ್, ಟೆಸ್ಟ್‌ ಪಂದ್ಯಗಳಲ್ಲಿ 42 ಮತ್ತು ಏಕದಿನದಲ್ಲಿ 17 ವಿಕೆಟ್ಗಳನ್ನು ಪಡೆದಿದ್ದಾರೆ. ಕಮಿನ್ಸ್  422 ರನ್ನುಗಳನ್ನು ತಮ್ಮ ಬ್ಯಾಟಿನಿಂದ ಸಿಡಿಸಿದ್ದಾರೆ.

ವಿಶ್ವಕಪ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗ್ಲೆನ್ ಮ್ಯಾಕ್ಸ್ವೆಲ್ ಅವರೊಂದಿಗೆ 202 ರನ್ಗಳ ಜೊತೆಯಾಟದಲ್ಲಿ, ಅವರು 68 ಎಸೆತಗಳಲ್ಲಿ 12 ರನ್ ಗಳಿಸುವ ಮೂಲಕ ದೃಢವಾಗಿ ನಿಂತರು ಮತ್ತು ಅಸಾಧ್ಯವಾದ ಗೆಲುವನ್ನು ಸಾಧ್ಯವಾಗಿಸಿದರು. ಈ ಪಂದ್ಯದಲ್ಲಿ ಮ್ಯಾಕ್ಸ್‌ ವೆಲ್‌ ಆಡಿದ 201 ರನ್ನುಗಳ ಇನ್ನಿಂಗ್ಸನ್ನು ಏಕ ದಿನ ಕ್ರಿಕೆಟ್‌ ಇತಿಹಾಸದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಸಾಧನೆ ಕಮಿನ್ಸ್‌ ಇಲ್ಲದೆ ಹೋಗಿದ್ದರೆ ಸಾಧ್ಯವಾಗುತ್ತಿರಲಿಲ್ಲ.

ಕಮಿನ್ಸ್ ಅವರ ಬುದಕಿನ ಸುವರ್ಣ ವರ್ಷ ಸುವರ್ಣ ರೀತಿಯಲ್ಲಿಯೇ ಕೊನೆಗೊಂಡಿತು. ಐಪಿಎಲ್ ಮಿನಿ ಹರಾಜಿನಲ್ಲಿ, ಸನ್‌ ರೈಸರ್ಸ್ ಹೈದರಾಬಾದ್ ಕಮಿನ್ಸ್ ಅವರನ್ನು 20.50 ಕೋಟಿ ರೂ. ನೀಡಿ ಖರೀದಿಸಿತು.

ಮಿಚೆಲ್ ಸ್ಟಾರ್ಕ್

ನಾಯಕ ಪ್ಯಾಟ್ ಕಮಿನ್ಸ್  ಐಪಿಎಲ್ ಇತಿಹಾಸದಲ್ಲಿ 20 ಕೋಟಿಗೂ  ಹೆಚ್ಚು  ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಆದರೆ ಕೆಲವೇ ನಿಮಿಷಗಳಲ್ಲಿ ಅವರ ಸಹ ಆಟಗಾರ ಮಿಚೆಲ್ ಸ್ಟಾರ್ಕ್ ಈ ದಾಖಲೆಯನ್ನು ಮುರಿದರು. ಕೋಲ್ಕತಾ ನೈಟ್ ರೈಡರ್ಸ್ ದಾಖಲೆಯ  24.75 ಕೋಟಿ ರೂಪಾಯಿಗಳಿಗೆ ಈ ವೇಗದ ಬೌಲರನ್ನು ಖರೀದಿಸಿತು. ಇದಲ್ಲದೆಯೂ 2023 ವರ್ಷವು ಸ್ಟಾರ್ಕ್ ಸ್ಮರಣೀಯವಾದುದು. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ಲಿನಲ್ಲಿ ಅವರು ನಾಲ್ಕು ವಿಕೆಟ್ಟುಗಳನ್ನು ಪಡೆದರು. ಆಶಸ್ ಸರಣಿಯಲ್ಲಿ 23 ವಿಕೆಟ್ ಹಾಗೂ ವಿಶ್ವಕಪ್‌ ಪಂದ್ಯದಲ್ಲಿ 16 ವಿಕೆಟ್ ಕಬಳಿಸಿದ್ದರು.

ಅವರು 22 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 59 ವಿಕೆಟ್ ಕಬಳಿಸಿದ್ದಾರೆ. ಅವುಗಳಲ್ಲಿ ಟೆಸ್ಟ್‌ ಕ್ರಿಕೆಟ್‌ ಮೂಲಕ 34 ವಿಕೆಟ್ಟುಗಳು ಬಂದಿದ್ದರೆ, ಏಕದಿನ ಪಂದ್ಯಗಳ ಮೂಲಕ 24 ವಿಕೆಟ್ಟುಗಳು ಬಂದಿವೆ.

ಗ್ಲೆನ್ ಮ್ಯಾಕ್ಸ್ವೆಲ್

2023ರ ವಿಶ್ವಕಪ್‌ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನದ ವಿರುದ್ಧ ಆಡಲು ಹೆಣಗಾಡುತ್ತಿತ್ತು. 47 ರನ್ನುಗಳಿಗೆ ಆಸ್ಟ್ರೇಲಿಯಾ ತನ್ನ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 97 ರನ್‌ ಆಗುವ ಹೊತ್ತಿಗಾಗಲೇ ಏಳು ಮಂದಿ ಬ್ಯಾಟ್ಸ್‌ಮನ್‌ ಪೆವಿಲಿಯನ್‌ ಹಾದಿ ಹಿಡಿದಿದ್ದರು. ಈ ಸಂದರ್ಭದಲ್ಲಿ ತಂಡದ ಪಾಲಿಗೆ ಸೋಲು ಮತ್ತು ಅವಮಾನ ಸ್ಪಷ್ಟವಾಗಿ ಕಾಣುತ್ತಿತ್ತು.

ಆದರೆ ಆ ದಿನ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಮ್ಮ ಕ್ರಿಕೆಟ್‌ ಬದುಕಿನ ಅತ್ಯಂತ ಸ್ಫೋಟಕ ಇನ್ನಿಂಗ್‌ ಒಂದನ್ನು ಆಡಿದರು. ಅದು ಏಕ ದಿನ ಕ್ರಿಕೆಟ್‌ ಪಂದ್ಯಗಳ ಇತಿಹಾಸದಲ್ಲಿ ಅತ್ಯದ್ಭುತ ಇನ್ನಿಂಗ್ಸ್‌ ಆಗಿತ್ತು. ಅಂದು ಅವರು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದರು.

ಮ್ಯಾಕ್ಸ್‌ವೆಲ್‌ ಅಂದು ತಮ್ಮ ಸ್ನಾಯು ಸೆಳೆತದ ನೋವಿನ ನಡುವೆಯೂ 128 ಎಸೆತಗಳಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಒಳಗೊಂಡ 201 ರನ್ ಗಳಿಸಿದರು. ಇದಕ್ಕೂ ಮುನ್ನ ಅವರು ನೆದರ್ಲ್ಯಾಂಡ್ಸ್ ವಿರುದ್ಧ ಕೇವಲ 40 ಎಸೆತಗಳಲ್ಲಿ ವೇಗದ ಶತಕವನ್ನು ಗಳಿಸಿದ್ದರು.

ಈ ವರ್ಷ ಮ್ಯಾಕ್ಸ್ವೆಲ್ 13 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ  ಮೂರು ಶತಕಗಳು ಸೇರಿದಂತೆ 529 ರನ್ ಗಳಿಸಿದ್ದಾರೆ.

ಡ್ಯಾರಿಲ್ ಮಿಚೆಲ್

ತಡವಾಗಿ ಬಂದರೂ ಜಡಿದು ಬಂತು ಎನ್ನುವಂತೆ 32 ವರ್ಷದ ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ಡ್ಯಾರಿಲ್ ಮಿಚೆಲ್‌ ಅವರ ಪಾಲಿಗೆ 2023 ಅತ್ಯಂತ ಯಶಸ್ವಿ ವರ್ಷವಾಗಿತ್ತು. ಶುಭಮನ್ ಗಿಲ್ ನಂತರ ಮಿಚೆಲ್ ಈ ವರ್ಷ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.

ಈ ಬಾರಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮಿಚೆಲ್ 10 ಪಂದ್ಯಗಳಲ್ಲಿ 69ರ ಸರಾಸರಿಯಲ್ಲಿ 552 ರನ್ ಗಳಿಸಿದ್ದಾರೆ. ರಚಿನ್‌ ರವೀಂದ್ರ ಹೊರತುಪಡಿಸಿದರೆ ಈ ಬಾರಿ ನ್ಯೂಜಿಲೆಂಡ್‌ ಪರ ಆಡಿದ ಅತ್ಯುತ್ತಮ ಆಟಗಾರನೆಂದರೆ ಅದು ಮಿಚೆಲ್.

ಭಾರತದ ವಿರುದ್ಧ, ಅವರು ಧರ್ಮಶಾಲಾದಲ್ಲಿ 130 ರನ್ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ 134 ರನ್ನುಗಳ ಅದ್ಭುತ ಇನ್ನಿಂಗ್ಸ್ ಆಡಿದರು, ಆದರೆ ಎರಡೂ ಬಾರಿ ಅವರ ತಂಡಕ್ಕೆ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಡ್ಯಾರಿಲ್ ಮಿಚೆಲ್  ಈ ವರ್ಷ ಏಳು ಟೆಸ್ಟ್ ಪಂದ್ಯಗಳಲ್ಲಿ 469 ರನ್, 26 ಏಕದಿನ ಪಂದ್ಯಗಳಲ್ಲಿ 1204 ರನ್ ಮತ್ತು  15 ಟಿ 20 ಪಂದ್ಯಗಳಲ್ಲಿ 283  ರನ್  ಗಳಿಸಿದ್ದಾರೆ. 48 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6 ಶತಕ ಹಾಗೂ 9 ಅರ್ಧಶತಕ ಸೇರಿದಂತೆ 1956 ರನ್ ಗಳಿಸಿದ್ದಾರೆ. ಮಿಚೆಲ್ 11 ವಿಕೆಟ್ ಕೂಡಾ ಕಬಳಿಸಿದ್ದಾರೆ.

ಐಪಿಎಲ್ ಮಿನಿ ಹರಾಜಿನಲ್ಲಿಯೂ ಮಿಚೆಲ್ ತೀವ್ರ ಪೈಪೋಟಿಯಲ್ಲಿ ಬಿಡ್ ಆಗಿದ್ದರು. ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು  14 ಕೋಟಿ ರೂ.ಗೆ ಖರೀದಿಸಿತು.

ಟ್ರಾವಿಸ್ ಹೆಡ್

ಟ್ರಾವಿಸ್ ಹೆಡ್ ಈ ವರ್ಷ ತಾನು ನಿರ್ಣಾಯಕ ಸಂದರ್ಭಗಳಲ್ಲಿ ಆಸ್ಟ್ರೇಲಿಯಾದ ಅತ್ಯುತ್ತಮ ಆಟಗಾರ ಎನ್ನವುದನ್ನು ಸಾಬೀತುಪಡಿಸಿದರು.

ಅವರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ತಮ್ಮ ಶತಕಗಳ ಮೂಲಕ ಟೀಂ ಇಂಡಿಯಾ ಮತ್ತು ಅದರ ಅಭಿಮಾನಿಗಳ ಕನಸುಗಳನ್ನು ಭಗ್ನಗೊಳಿಸಿದರು.

ಈ ವರ್ಷ ಅವರು 12 ಟೆಸ್ಟ್ ಪಂದ್ಯಗಳ 23 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 919 ರನ್ ಗಳಿಸಿದರು ಮತ್ತು 75 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಮತ್ತು 41.77 ಸರಾಸರಿ. ಅವರ ಉತ್ತಮ ಸ್ಕೋರ್ 163 ಆಗಿತ್ತು.

ಈ ವರ್ಷ, 13 ODI ಪಂದ್ಯಗಳಲ್ಲಿ, ಹೆಡ್ 51.81 ಸರಾಸರಿಯಲ್ಲಿ 570 ರನ್ ಗಳಿಸಿದರು ಮತ್ತು ಅವರ ಸ್ಟ್ರೈಕ್ ರೇಟ್‌  133 ಹೆಚ್ಚು ಇತ್ತು.

ಅವರು 13 ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಗಳಿಸಿದ್ದಾರೆ, ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 137. ಈ ವರ್ಷ ಅವರು 6 T20 ಪಂದ್ಯಗಳಲ್ಲಿ 174ರ ಸ್ಟ್ರೈಕ್ ರೇಟ್ ಮತ್ತು 34.83ರ ಸರಾಸರಿಯಲ್ಲಿ 209 ರನ್ ಗಳಿಸಿದರು.

ಒಟ್ಟಾರೆಯಾಗಿ, ಈ ವರ್ಷ 31 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ಹೆಡ್ 43.53 ಸರಾಸರಿಯಲ್ಲಿ 1698 ರನ್ ಗಳಿಸಿದರು ಮತ್ತು ಮೂರು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಒಳಗೊಂಡಂತೆ 96ರ ಸ್ಟ್ರೈಕ್ ರೇಟ್‌ ಗಳಿಸಿದರು.

ಐಡೆನ್ ಮಾರ್ಕ್ರಮ್

29 ವರ್ಷದ ದಕ್ಷಿಣ ಆಫ್ರಿಕಾದ ಸ್ಟೈಲಿಶ್ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಾಮ್ ಈ ವರ್ಷ ಮೂರು ಟೆಸ್ಟ್ ಪಂದ್ಯಗಳಲ್ಲಿ 56.20 ಸರಾಸರಿಯಲ್ಲಿ ಒಂದು ಶತಕ ಮತ್ತು ಅರ್ಧಶತಕದೊಂದಿಗೆ ಒಟ್ಟು 281 ರನ್ ಗಳಿಸಿದರು. ಅವರ ಈ  ವರ್ಷದ ಉತ್ತಮ ಸ್ಕೋರ್ 115.

24 ODIಗಳಲ್ಲಿ, ಅವರು 51.55 ರ ಸರಾಸರಿಯಲ್ಲಿ 1033 ರನ್ ಗಳಿಸಿದರು ಮತ್ತು 113ಕ್ಕಿಂತಲೂ ಹೆಚ್ಚಿನ ಸ್ಟ್ರೈಕ್ ರೇಟ್ ಸಾಧಿಸಿದರು, ಇದರಲ್ಲಿ ಮೂರು ಶತಕಗಳು ಮತ್ತು ಐದು ಅರ್ಧಶತಕಗಳು ಸೇರಿವೆ. ಅವರ ಉತ್ತಮ ಸ್ಕೋರ್ 175 ರನ್.

ವಿಶ್ವಕಪ್ ಕ್ರಿಕೆಟ್‌ನಲ್ಲಿ ಅವರು 49 ಎಸೆತಗಳಲ್ಲಿ ಶತಕ ಬಾರಿಸಿದರು, ಇದು ಪಂದ್ಯಾವಳಿಯ ಇತಿಹಾಸದಲ್ಲಿ ವೇಗದ ಶತಕವಾಯಿತು, ಆದರೆ ಕೆಲವೇ ದಿನಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 40 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ದಾಖಲೆಯನ್ನು ಮುರಿದರು.

ಈ ವರ್ಷ ಎಂಟು T20 ಗಳಲ್ಲಿ, ಅವರು 39.83 ರ ಸರಾಸರಿಯಲ್ಲಿ 239 ರನ್ ಗಳಿಸಿದರು ಮತ್ತು 162 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್, ಅವರ ಅತ್ಯುತ್ತಮ ಸ್ಕೋರ್ 49.

ಈ ವರ್ಷ, ಮಾರ್ಕ್ರಾಮ್ 36 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 37 ಇನ್ನಿಂಗ್ಸ್‌ಗಳಲ್ಲಿ 50 ಸರಾಸರಿಯಲ್ಲಿ 1553 ರನ್ ಗಳಿಸಿದರು, ಇದರಲ್ಲಿ ನಾಲ್ಕು ಶತಕಗಳು ಮತ್ತು ಆರು ಅರ್ಧ ಶತಕಗಳು ಸೇರಿವೆ.

Related Articles

ಇತ್ತೀಚಿನ ಸುದ್ದಿಗಳು