ಅಹಮದಾಬಾದ್: ತೀವ್ರ ಜ್ವರದಿಂದ ನಾಲ್ವರು ಮಕ್ಕಳು ಸೇರಿ 12 ಮಂದಿ ಸಾವನ್ನಪ್ಪಿದ್ದಾರೆ. ರೋಗಿಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.
ಆದರೆ ವೈದ್ಯರಿಗೂ ರೋಗ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದು ಗುಜರಾತ್‌ನ ಕಚ್ ಜಿಲ್ಲೆಯ ಪರಿಸ್ಥಿತಿ. ಲಖ್ಪತ್ ತಾಲೂಕಿನ ಬೇಖಾಡ, ಸನಂದ್ರೋ, ಮೋರ್ಗಾರ್ ಮತ್ತು ಭರ್ವಂದ್ ಗ್ರಾಮಗಳಲ್ಲಿ ಜನರು ವಿಚಿತ್ರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ರೋಗಿಗಳು ಜ್ವರ, ನೆಗಡಿ, ಕೆಮ್ಮು, ನ್ಯುಮೋನಿಯಾ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸೆ.3ರಿಂದ ಇಲ್ಲಿಯವರೆಗೆ ತೀವ್ರ ಜ್ವರದಿಂದ ನಾಲ್ವರು ಮಕ್ಕಳು ಸೇರಿ 12 ಮಂದಿ ಸಾವನ್ನಪ್ಪಿದ್ದಾರೆ. ಅತಿವೃಷ್ಟಿಯಿಂದ ಈ ಭಾಗದ ರೋಗಿಗಳಿಗೆ ಹರಡುತ್ತಿರುವ ರೋಗವನ್ನು ವೈದ್ಯರಿಂದಲೂ ದೃಢಪಡಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಾವುಗಳಿಗೆ ನ್ಯುಮೋನೈಟಿಸ್ ಪ್ರಮುಖ ಕಾರಣ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಈ ತಾಲ್ಲೂಕಿನಲ್ಲಿ ವೈದ್ಯಕೀಯ ಸೇವೆಯನ್ನು ತೀವ್ರಗೊಳಿಸಲಾಗಿದೆ ಎಂದು ಕಛ್ ಜಿಲ್ಲಾಧಿಕಾರಿ ಅಮಿತ್ ಅರೋರಾ ತಿಳಿಸಿದ್ದಾರೆ. ಅಲ್ಲಿಗೆ ವೈದ್ಯಕೀಯ ತಂಡಗಳನ್ನು ಕಳುಹಿಸಿ ರೋಗಿಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದೂ ಹೇಳಲಾಗಿದೆ.