ಪಾಟ್ನಾ: ಬಿಹಾರದ ಹಲವು ಜಿಲ್ಲೆಗಳಲ್ಲಿ ಬುಧವಾರ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಬುಧವಾರ ರಾಜ್ಯಾದ್ಯಂತ ಸಿಡಿಲು ಬಡಿದು 13 ಜನರು ಸಾವಿಗೀಡಾಗಿದ್ದಾರೆ.
ಬೇಗುಸರಾಯ್ ಮತ್ತು ದರ್ಭಂಗಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಮಧುಬನಿಯಲ್ಲಿ ಒಂದೇ ಕುಟುಂಬದ ತಂದೆ ಮತ್ತು ಮಗಳು ಸೇರಿದಂತೆ ಮೂವರು ನಿಧನರಾಗಿದ್ದಾರೆ.
ಸಮಷ್ಟಿಪುರದಲ್ಲಿ ಸಿಡಿಲು ಬಡಿದು ಒಬ್ಬರು ಸಾವಿಗೀಡಾಗಿದ್ದಾರೆ. ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತ್ರಸ್ತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿ, ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಸೂಚನೆಗಳನ್ನು ಪಾಲಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಏತನ್ಮಧ್ಯೆ, ಬಿಹಾರ ಆರ್ಥಿಕ ಸಮೀಕ್ಷೆ (2024-25) ಪ್ರಕಾರ, 2023 ರಲ್ಲಿ ರಾಜ್ಯದಲ್ಲಿ 275 ಜನರು ಸಿಡಿಲಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.