ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತ ಆರೋಪದಡಿ ದಾಂಧಲೆಕೋರ ಪುನೀತ್ ಕೆರೆಹಳ್ಳಿಯನ್ನು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಈಗಾಗಲೇ ಪೊಲೀಸರ ವಶದಲ್ಲಿರುವ ಪುನೀತ್ ಕೆರೆಹಳ್ಳಿ ಅಸ್ವಸ್ಥನಾದಂತೆ ನಟಿಸಿ, ಆಸ್ಪತ್ರೆಯಲ್ಲಿದ್ದವನನ್ನು ನಿನ್ನೆ ಸಂಜೆಯ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಬೆಂಗಳೂರಿನ ಕಾಟನ್ ಪೇಟೆ ಠಾಣೆಯ ಪೊಲೀಸರ ವಶದಲ್ಲಿದ್ದ ಆರೋಪಿ, ಹಲವು ಅಕ್ರಮ ಚಟುವಟಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಂತಹ ಪುನೀತ್ ಕೆರೆಹಳ್ಳಿ ಮೆಜೆಸ್ಟಿಕ್ ನಲ್ಲಿ ರಾಜಸ್ತಾನದಿಂದ ಬಂದ ಮಾಂಸದ ಸರಕನ್ನು ನಾಯಿ ಮಾಂಸ ಎಂದು ಗಲಾಟೆ ಎಬ್ಬಿಸಿದ್ದ. ಮಾಂಸದ ವ್ಯಾಪಾರಿ ಅಬ್ದುಲ್ ರಜಾಕ್ ಅವರು ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಗೆ ಇಳಿದಿದ್ದ ಎಂದು ಆರೋಪಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತ ಆರೋಪದಡಿ ಆತನ ಬಂಧನವಾಗಿತ್ತು.
ಆ ಬಳಿಕ ಅವರನ್ನು ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿಗಳು ಪುನೀತ್ ಕೆರೆಹಳ್ಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೇ ಸೋಮವಾರದಂದು ಜಾಮೀನು ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಸಧ್ಯ ದಾಂಧಲೆಕೋರ ಪುನೀತ್ ಕೆರೆಹಳ್ಳಿ ಜೈಲುಪಾಲಾಗಿದ್ದಾನೆ.