ದತ್ತಪೀಠ ತಪ್ಪಲಿನ ಮಾಣಿಕ್ಯಾಧಾರ ಜಲಪಾತ ಬಳಿ 15 ವರ್ಷದ ಬಾಲಕಿ ನಾಪತ್ತೆ

ಚಿಕ್ಕಮಗಳೂರು: ದತ್ತಪೀಠ ತಪ್ಪಲಿನ ಮಾಣಿಕ್ಯಾಧಾರ ಜಲಪಾತ ಬಳಿ 15 ವರ್ಷದ ಬಾಲಕಿ ನಾಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆ ಮೂಲದ ಶ್ರೀನಂದ (15) ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಜಲಪಾತದ ಮೆಟ್ಟಿಲು ಇಳಿಯುವ ವೇಳೆ ಕುಟುಂಬದವರು ಮುಂದೆ ಸಾಗುತ್ತಿದ್ದಾಗ, ಹಿಂದೆ ಬರುತ್ತಿದ್ದ ಬಾಲಕಿ ಏಕಾಏಕಿ ಕಾಣೆಯಾಗಿದ್ದಾಳೆ. ತಕ್ಷಣ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ, ಪೊಲೀಸರು ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ಆರಂಭಿಸಿದ್ದು, ಬಳಿಕ ಎಸ್‌ಡಿಆರ್‌ಎಫ್ ತಂಡವೂ ಸೇರಿಕೊಂಡಿದೆ.

ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ 5 ತಂಡಗಳಾಗಿ ವಿಭಜನೆಗೊಂಡು ಥರ್ಮಲ್ ಡ್ರೋನ್ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದಾರೆ. ಕಡಿದಾದ ಬೆಟ್ಟ-ಗುಡ್ಡ ಹಾಗೂ ದಟ್ಟ ಕಾಡು ಪ್ರದೇಶವಾಗಿರುವುದರಿಂದ ಶೋಧ ಕಾರ್ಯ ಸವಾಲಾಗಿದೆ. ಬಾಲಕಿ ನಾಪತ್ತೆ ಪ್ರಕರಣ ನಿಗೂಢತೆಯನ್ನು ಹೆಚ್ಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

Related Articles

ಇತ್ತೀಚಿನ ಸುದ್ದಿಗಳು