ಪಶ್ಚಿಮ ಬಂಗಾಳ: ಎರಡನೇ ಹಂತದ ಚುನಾವಣೆಗೂ ಮುನ್ನ ಟಿಎಂಸಿ ಕೌನ್ಸಿಲರ್ ಸೇರಿದಂತೆ 1,543 ಮಂದಿ ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 29ರಂದು ನಡೆಯಲಿರುವ ಎರಡನೇ ಹಂತದ ವಿಧಾನಸಭಾ ಚುನಾವಣೆಯ ಶಾಂತಿಯುತ ವಾತಾವರಣಕ್ಕೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ, ರಾಜ್ಯಾದ್ಯಂತ ಟಿಎಂಸಿ ಕೌನ್ಸಿಲರ್ ಸೇರಿದಂತೆ ಒಟ್ಟು 1,543 ಮಂದಿಯನ್ನು ಬಂಧಿಸಲಾಗಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರಲ್ಲಿ ಪುರ್ಬಾ ಬರ್ಧಮಾನ್ ಜಿಲ್ಲೆಯ ಬರ್ಧಮಾನ್ ಪುರಸಭೆಯ 22ನೇ ವಾರ್ಡ್‌ನ ಟಿಎಂಸಿ ಕೌನ್ಸಿಲರ್ ನರು ಗೋಪಾಲ್ ಭಕತ್ ಕೂಡ ಸೇರಿದ್ದಾರೆ. ಬಿಜೆಪಿ ನಾಯಕರೊಬ್ಬರ ನಿವಾಸದ ಮೇಲೆ ನಡೆದ ದಾಳಿ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಈ ಕುರಿತು ಅವರ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ. ಆದಾಗ್ಯೂ, ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಭಕತ್, “ನಾನು ಜನರಿಗಾಗಿ ಕೆಲಸ ಮಾಡುತ್ತೇನೆ, ಅದಕ್ಕಾಗಿ ನನ್ನನ್ನು ಬಂಧಿಸಲಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾವಾರು ಮಾಹಿತಿ ಪ್ರಕಾರ, ಅತಿ ಹೆಚ್ಚು ಬಂಧನಗಳು ಪುರ್ಬಾ ಬರ್ಧಮಾನ್‌ನಲ್ಲಿ (479) ನಡೆದಿವೆ. ನಂತರದ ಸ್ಥಾನಗಳಲ್ಲಿ ಉತ್ತರ 24 ಪರಗಣ (319), ದಕ್ಷಿಣ 24 ಪರಗಣ (246), ಹೂಗ್ಲಿ (49) ಮತ್ತು ನಾಡಿಯಾ (32) ಜಿಲ್ಲೆಗಳಿವೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಮತಗಟ್ಟೆಗಳಲ್ಲಿ ಬಳಸುವ ವೆಬ್‌ಕಾಸ್ಟಿಂಗ್ ಉಪಕರಣಗಳ ನಿರ್ವಹಣೆ ಕುರಿತು ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 29ರಂದು ಮತದಾನ ಮುಕ್ತಾಯಗೊಂಡ ನಂತರ, ಸೆಕ್ಟರ್ ಅಧಿಕಾರಿಗಳ ಸಮ್ಮುಖದಲ್ಲಿ ವೆಬ್‌ಕಾಸ್ಟಿಂಗ್ ಕ್ಯಾಮೆರಾಗಳನ್ನು ಬಿಚ್ಚಿ, ನಿಗದಿತ ಸ್ವೀಕೃತಿ ಕೇಂದ್ರಗಳಲ್ಲಿ ಠೇವಣಿ ಇಡಬೇಕು ಎಂದು ಸೂಚಿಸಲಾಗಿದೆ. ಮತದಾನದ ನಂತರದ ದತ್ತಾಂಶ ಮತ್ತು ಉಪಕರಣಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.


Related Articles

ಇತ್ತೀಚಿನ ಸುದ್ದಿಗಳು