ದಾವಣಗೆರೆಯ ಕೊಂಡಜ್ಜಿ ರಸ್ತೆಯ ವಿಜಯನಗರ ಬಡಾವಣೆಯಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಪಾರ್ಕ್ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ 16 ಮನೆಗಳನ್ನು ಮಂಗಳವಾರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ ಬಳಸಿ ಈ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಮನೆ ಕಳೆದುಕೊಂಡ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಜಯನಗರದ ಪಾರ್ಕ್ ಜಾಗದಲ್ಲಿ ರಾಮಪ್ಪ ಎಂಬುವವರ ಕುಟುಂಬವು 16 ಮನೆಗಳನ್ನು ಅತಿಕ್ರಮವಾಗಿ ನಿರ್ಮಿಸಿತ್ತು ಎನ್ನಲಾಗಿದೆ. ಈ ಅತಿಕ್ರಮಣ ದೃಢಪಟ್ಟ ನಂತರ, ಮನೆಗಳನ್ನು ಖಾಲಿ ಮಾಡುವಂತೆ ಮಹಾನಗರ ಪಾಲಿಕೆಯು ಈ ಹಿಂದೆಯೇ ಸೂಚನೆ ನೀಡಿತ್ತು. ಕೆಲವು ದಿನಗಳ ಹಿಂದೆ ಮೂರು ಮನೆಗಳನ್ನು ತೆರವುಗೊಳಿಸಿ, ಉಳಿದ ಮನೆಗಳ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಕಾಲಾವಕಾಶ ನೀಡಲಾಗಿತ್ತು. ಆದರೆ ನಿಗದಿತ ಸಮಯದೊಳಗೆ ಮನೆಗಳನ್ನು ಖಾಲಿ ಮಾಡದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮನೆಗಳನ್ನು ನೆಲಸಮಗೊಳಿಸಿದ್ದಾರೆ.
ಮನೆ ಮಾಲೀಕ ರಾಮಪ್ಪ ಪಾಲಿಕೆಯ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತಾವು 25 ವರ್ಷಗಳ ಹಿಂದೆ ಸ್ವಂತ ಜಾಗದಲ್ಲೇ ಮನೆ ಕಟ್ಟಿಕೊಂಡಿರುವುದಾಗಿ ವಾದಿಸಿದ್ದಾರೆ. ವಿದ್ಯುತ್ ಬಿಲ್, ನೀರಿನ ಬಿಲ್ ಮತ್ತು ಮನೆ ತೆರಿಗೆ ಪಾವತಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ಹೇಳಿದ್ದಾರೆ. ಪಾಲಿಕೆ ಅಧಿಕಾರಿಗಳು ಯಾವುದೇ ಪೂರ್ವ ಸೂಚನೆ ನೀಡದೆ ಮನೆಗಳನ್ನು ಕೆಡವಿದ್ದಾರೆ ಮತ್ತು ಪೊಲೀಸರು ಮಹಿಳೆಯರನ್ನು ಮನೆಯಿಂದ ಹೊರಗೆ ಎಳೆದಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಕುಟುಂಬಗಳು ಕಣ್ಣೀರು ಹಾಕುತ್ತಿವೆ.
