Tuesday, December 23, 2025

ಸತ್ಯ | ನ್ಯಾಯ |ಧರ್ಮ

2027ರ ಅಂತ್ಯದೊಳಗೆ 175 ಕಿ.ಮೀ ಮೆಟ್ರೋ ಜಾಲ – ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮೆಟ್ರೋ ಮಾರ್ಗಗಳ ವಿಸ್ತರಣೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಂಡಿದ್ದು, 2027ರ ಡಿಸೆಂಬರ್ ವೇಳೆಗೆ ನಗರದಲ್ಲಿ ಒಟ್ಟು 175 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರ್ಯಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದ ಬಿಎಂಆರ್‌ಸಿಎಲ್ ಕಚೇರಿಯಲ್ಲಿ ಮೆಟ್ರೋ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ 96 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿದೆ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಳದಿ ಮಾರ್ಗವನ್ನು ಚಾಲನೆಗೆ ತಂದಿದ್ದು, 24 ಕಿ.ಮೀ ಉದ್ದದ ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ. ಈ ಮಾರ್ಗದಲ್ಲಿ ದಿನಕ್ಕೆ ಸುಮಾರು ಒಂದು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಸಂಚಾರ ದಟ್ಟಣೆ ಶೇ.30ರಷ್ಟು ಕಡಿಮೆಯಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಮುಂದಿನ ಎರಡು ವರ್ಷಗಳಲ್ಲಿ ಹೊಸ ಮಾರ್ಗಗಳು
2026ರಲ್ಲಿ 41 ಕಿ.ಮೀ ಉದ್ದದ ಹೊಸ ಮೆಟ್ರೋ ಮಾರ್ಗ ಕಾರ್ಯಾರಂಭವಾಗಲಿದೆ. ಅಲ್ಲದೆ, 2027ರ ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ 38 ಕಿ.ಮೀ ಉದ್ದದ ಮಾರ್ಗಗಳು ಚಾಲನೆ ಪಡೆಯಲಿವೆ. ಈ ಮೂಲಕ ಬೆಂಗಳೂರಿನ ಮೆಟ್ರೋ ಜಾಲ 175 ಕಿ.ಮೀಗೆ ವಿಸ್ತರಿಸಲಿದೆ ಎಂದು ತಿಳಿಸಿದರು.

ಇದರ ಜೊತೆಗೆ ಮಾಗಡಿ ರಸ್ತೆ–ತಾವರೆಕೆರೆ, ಹೊಸಕೋಟೆ, ಬಿಡದಿ ಹಾಗೂ ನೆಲಮಂಗಲದವರೆಗೆ ಮೆಟ್ರೋ ವಿಸ್ತರಣೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಭಾಗಗಳಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಉಳಿದ ಕಡೆಗಳಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದರು.

ಮೆಟ್ರೋ ಮೂರನೇ ಹಂತ: 100 ಕಿ.ಮೀ ಕಾಮಗಾರಿಗೆ ಟೆಂಡರ್
ಮೆಟ್ರೋ ಮೂರನೇ ಹಂತದ ಯೋಜನೆಯಲ್ಲಿ ಎಲಿವೇಟೆಡ್ ಕಾರಿಡಾರ್ (ಡಬಲ್ ಡೆಕ್ಕರ್) ಸೇರಿದಂತೆ ಸುಮಾರು 100 ಕಿ.ಮೀ ಉದ್ದದ ಕಾಮಗಾರಿಗೆ ಮುಂದಿನ ತಿಂಗಳಲ್ಲೇ ಟೆಂಡರ್ ಕರೆಯಲಾಗುವುದು ಎಂದು ಘೋಷಿಸಿದರು.

ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡು ವಾಣಿಜ್ಯ ಚಟುವಟಿಕೆಗಳು ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ವೆಚ್ಚ ಮತ್ತು ಹಣಕಾಸು ವ್ಯವಸ್ಥೆ
ಮೂರನೇ ಹಂತದ ಯೋಜನೆಗೆ ಒಟ್ಟು 25,311 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಇದರಲ್ಲಿ ಜೈಕಾದಿಂದ 15,600 ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಉಳಿದಂತೆ, ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 9,700 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ಜನವರಿಯಲ್ಲಿ ಕರೆಯಲಾಗುವುದು ಎಂದರು.

ಮೂರನೇ ಹಂತದಲ್ಲಿ ಸಂಪೂರ್ಣ ಮಾರ್ಗ ಎಲಿವೇಟೆಡ್ ಕಾರಿಡಾರ್ ಆಗಿರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಮೂರನೇ ಹಂತದ ಎಲ್ಲಾ ಮಾರ್ಗಗಳಲ್ಲೂ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ಹಾಸನದಿಂದ ಬರುವ ಜನರ ಸಂಚಾರದ ದೃಷ್ಟಿಯಿಂದ ತಾವರೆಕೆರೆ ಬಳಿ ಕೂಡ ಡಬಲ್ ಡೆಕ್ಕರ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಟನಲ್ ರಸ್ತೆ ಟೆಂಡರ್ ಕುರಿತು ಪ್ರತಿಕ್ರಿಯೆ
ಟನಲ್ ರಸ್ತೆ ಟೆಂಡರ್ ಸಂಬಂಧ ಅದಾನಿ ಕಂಪನಿ ಕಡಿಮೆ ಬಿಡ್ ಮಾಡಿದೆ ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗ,
“ನನಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತ ಪತ್ರ ಬಂದ ನಂತರವೇ ಪ್ರತಿಕ್ರಿಯೆ ನೀಡುತ್ತೇನೆ” ಎಂದು ಶಿವಕುಮಾರ್ ಹೇಳಿದರು.

ಖಾಸಗಿ ಹೂಡಿಕೆ ಕುರಿತು ಮಾತನಾಡಿದ ಅವರು, “ನಾವು ಯಾರಿಗೂ ಹಣ ನೀಡುವುದಿಲ್ಲ. ಅವರು ಬಂಡವಾಳ ಹೂಡಿಕೆ ಮಾಡಬೇಕು. ನಾವು ನಿಗದಿ ಮಾಡಿದಷ್ಟು, ಅಂದಾಜು ಶೇ.40ರಷ್ಟು ಮಾತ್ರ ನೆರವು ನೀಡುತ್ತೇವೆ” ಎಂದರು.

ಮೆಟ್ರೋ ವೆಚ್ಚ ಹೋಲಿಕೆ ಕುರಿತು ಮಾತನಾಡಿದ ಅವರು, ಮುಂಬೈನಲ್ಲಿ ಪ್ರತಿ ಕಿ.ಮೀ ಮೆಟ್ರೋ ನಿರ್ಮಾಣಕ್ಕೆ ಸುಮಾರು 1,200 ಕೋಟಿ ರೂ. ವೆಚ್ಚವಾಗುತ್ತಿದೆ ಎಂಬ ಮಾಹಿತಿ ಸಂಗ್ರಹಿಸಿದ್ದೇವೆ ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page