Monday, January 12, 2026

ಸತ್ಯ | ನ್ಯಾಯ |ಧರ್ಮ

ಅಮಿತ್ ಶಾ ಹೇಳಿಕೆಗೆ 18 ಮಾಜಿ ನ್ಯಾಯಮೂರ್ತಿಗಳಿಂದ ಆಕ್ಷೇಪ

ದೆಹಲಿ: 2011ರ ‘ಸಾಲ್ವಾ ಜುಡುಂ’ ತೀರ್ಪಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಸ್ಟಿಸ್ ಬಿ. ಸುದರ್ಶನ್ ರೆಡ್ಡಿ ವಿರುದ್ಧ ಮಾಡಿದ ಟೀಕೆಗಳು ದುರದೃಷ್ಟಕರ ಎಂದು 18 ನಿವೃತ್ತ ನ್ಯಾಯಮೂರ್ತಿಗಳು ಸೋಮವಾರ ಹೇಳಿದ್ದಾರೆ.

ವೈಯಕ್ತಿಕವಾಗಿ ಅವಮಾನಿಸುವಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ಅವರು ಅಮಿತ್ ಶಾ ಅವರಿಗೆ ಬುದ್ಧಿಮಾತು ಹೇಳಿದರು. ಮಾವೋವಾದಿಗಳ ವಿರುದ್ಧ ಹೋರಾಟದಲ್ಲಿ ಆದಿವಾಸಿ ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಬಳಸಿಕೊಂಡ ‘ಸಾಲ್ವಾ ಜುಡುಂ’ ತಂಡವು ಕಾನೂನು ಮತ್ತು ಸಂವಿಧಾನ ವಿರೋಧಿ ಎಂದು ಜಸ್ಟಿಸ್ ಬಿ. ಸುದರ್ಶನ್ ರೆಡ್ಡಿ ಮತ್ತು ಜಸ್ಟಿಸ್ ಎಸ್.ಎಸ್. ನಿಜರ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು 2011ರ ಜುಲೈನಲ್ಲಿ ತೀರ್ಪು ನೀಡಿತ್ತು.

ಈ ತೀರ್ಪಿನ ಬಗ್ಗೆ ದೇಶದ ಅತ್ಯುನ್ನತ ರಾಜಕೀಯ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಪಕ್ಷಪಾತದ ಹೇಳಿಕೆಗಳನ್ನು ನೀಡುವುದು ನ್ಯಾಯಮೂರ್ತಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಜಾಸ್ತಿ ಚಲಮೇಶ್ವರ್, ಜಸ್ಟಿಸ್ ಕುರಿಯನ್ ಜೋಸೆಫ್, ಜಸ್ಟಿಸ್ ಮದನ್ ಬಿ. ಲೋಕುರ್ ಸೇರಿದಂತೆ 18 ಮಂದಿ ನ್ಯಾಯಮೂರ್ತಿಗಳ ತಂಡ ಹೇಳಿಕೆಯಲ್ಲಿ ತಿಳಿಸಿದೆ.

ವಿವಿಧ ಹೈಕೋರ್ಟ್‌ಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ನ್ಯಾಯಮೂರ್ತಿಗಳಾದ ಸಿ. ಪ್ರವೀಣ್ ಕುಮಾರ್, ಎ. ಗೋಪಾಲ್ ರೆಡ್ಡಿ ಮತ್ತು ಮೂವರು ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page