Friday, January 23, 2026

ಸತ್ಯ | ನ್ಯಾಯ |ಧರ್ಮ

1992ರ ಜನಸಂಖ್ಯೆ ನಿಯಂತ್ರಣ ಮಸೂದೆಯೂ ಸೇರಿ ರಾಜ್ಯಸಭೆಯಲ್ಲಿ 19 ಮಸೂದೆಗಳು ಬಾಕಿ

ದೆಹಲಿ: ರಾಜ್ಯಸಭೆಯಲ್ಲಿ ಪ್ರಸ್ತುತ 19 ಸರ್ಕಾರಿ ಮಸೂದೆಗಳು ಬಾಕಿ ಉಳಿದಿವೆ ಎಂದು ರಾಜ್ಯಸಭೆಯ ಬುಲೆಟಿನ್ ತಿಳಿಸಿದೆ. ವಿಶೇಷವೆಂದರೆ, ಇವುಗಳಲ್ಲಿ 1992ರಲ್ಲಿ ಮಂಡಿಸಲಾದ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಮಸೂದೆಯೂ ಸೇರಿದೆ.

ರಾಜ್ಯಸಭೆಯು ಕಾಯಂ ಸದನವಾಗಿರುವುದರಿಂದ, ಲೋಕಸಭೆಯಂತೆ ಇಲ್ಲಿ ಮಂಡಿಸಲಾದ ಮಸೂದೆಗಳು ಸದನ ವಿಸರ್ಜನೆಯಾದಾಗ ರದ್ದಾಗುವುದಿಲ್ಲ (Lapse). ಹೀಗಾಗಿ ದಶಕಗಳ ಹಿಂದಿನ ಮಸೂದೆಗಳೂ ಇನ್ನೂ ಜೀವಂತವಾಗಿವೆ.

ಬಾಕಿ ಉಳಿದಿರುವ ಮಸೂದೆಗಳ ಪೈಕಿ 1992ರ ಸಂವಿಧಾನ (79ನೇ ತಿದ್ದುಪಡಿ) ಮಸೂದೆ ಅತ್ಯಂತ ಹಳೆಯದಾಗಿದೆ. ಇದು ‘ಚಿಕ್ಕ ಕುಟುಂಬ’ದ ಪರಿಕಲ್ಪನೆಯನ್ನು ಉತ್ತೇಜಿಸುವುದು ಮತ್ತು ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿರುವವರನ್ನು ಸಂಸದ ಅಥವಾ ಶಾಸಕರಾಗಲು ಅನರ್ಹಗೊಳಿಸುವ ಪ್ರಸ್ತಾಪವನ್ನು ಒಳಗೊಂಡಿತ್ತು. ಅಲ್ಲದೆ, ಮೂಲಭೂತ ಕರ್ತವ್ಯಗಳಲ್ಲಿ ಚಿಕ್ಕ ಕುಟುಂಬದ ನಿಯಮವನ್ನು ಅಳವಡಿಸಿಕೊಳ್ಳುವ ಪ್ರಸ್ತಾಪವೂ ಇದರಲ್ಲಿತ್ತು.

ಪಟ್ಟಿಯಲ್ಲಿ 1997ರ ದೆಹಲಿ ಬಾಡಿಗೆ (ತಿದ್ದುಪಡಿ) ಮಸೂದೆ ಕೂಡ ಇದ್ದು, ಇದು ಬಾಡಿಗೆದಾರರು ಮತ್ತು ಮಾಲೀಕರ ತೀವ್ರ ವಿರೋಧ ಎದುರಿಸಿತ್ತು. ಹಾಗೆಯೇ, ಸರ್ಕಾರ ಸದ್ಯ ಹೊಸ ಬೀಜ ಮಸೂದೆ-2025 ತರಲು ಸಿದ್ಧತೆ ನಡೆಸಿದ್ದರೂ, ವಾಣಿಜ್ಯ ಉದ್ದೇಶದ ಬೀಜಗಳ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದ 2004ರ ಹಳೆಯ ಬೀಜ ಮಸೂದೆ ಇನ್ನೂ ಬಾಕಿ ಉಳಿದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೆ ಕಾರ್ಮಿಕ ಸಚಿವರಾಗಿದ್ದಾಗ ಮಂಡಿಸಿದ ಅಂತರರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳ) ತಿದ್ದುಪಡಿ ಮಸೂದೆ-2011 ಕೂಡ ಪಟ್ಟಿಯಲ್ಲಿದೆ. ಇದರ ಜೊತೆಗೆ ಯುಪಿಎ ಅವಧಿಯ ನಿರ್ಮಾಣ ಕಾರ್ಮಿಕರ ಕಾಯ್ದೆ ತಿದ್ದುಪಡಿ ಹಾಗೂ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯ ಪುನರ್‌ವಿಂಗಡಣೆ ಮಸೂದೆಗಳು (2013) ಹಾಗೆಯೇ ಉಳಿದಿವೆ.

ಎನ್‌ಡಿಎ ಅವಧಿಯಲ್ಲಿ ಮಂಡಿಸಲಾದ ಈಶಾನ್ಯ ರಾಜ್ಯಗಳ (ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂ) ಸ್ವಾಯತ್ತ ಮಂಡಳಿಗಳ ಅಧಿಕಾರ ಹೆಚ್ಚಿಸುವ ಮಸೂದೆ, ಅನಿವಾಸಿ ಭಾರತೀಯರ (NRI) ವಿವಾಹ ನೋಂದಣಿ ಮಸೂದೆ-2019 ಮತ್ತು ಕೀಟನಾಶಕ ನಿರ್ವಹಣೆ ಮಸೂದೆ-2020 ಸಹ ಅನುಮೋದನೆಗೆ ಕಾಯುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page