Sunday, June 30, 2024

ಸತ್ಯ | ನ್ಯಾಯ |ಧರ್ಮ

ನೈಜೀರಿಯಾ: ಆತ್ಮಾಹುತಿ ದಾಳಿಗೆ 19 ಬಲಿ

ನೈಜೀರಿಯಾದಲ್ಲಿ ಆತ್ಮಹತ್ಯಾ ದಾಳಿಗಳು ನಡೆದಿವೆ. ಈ ಘಟನೆಗಳಿಂದ ಇಡೀ ನೈಜೀರಿಯಾ ತತ್ತರಿಸಿದೆ. ಒಂದರ ಹಿಂದೆ ಒಂದರಂತೆ ನಡೆದ ದಾಳಿಗಳು ದೇಶದ ನಾಗರಿಕರಲ್ಲಿ ಭಯ ಹುಟ್ಟಿಸಿದೆ.

ಆತ್ಮಹತ್ಯಾ ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಇನ್ನು 42 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರಲ್ಲಿ 20ಕ್ಕೂ ಹೆಚ್ಚು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಈಶಾನ್ಯ ರಾಜ್ಯವಾದ ಬೊರ್ನೊದಲ್ಲಿ ಆತ್ಮಹತ್ಯಾ ದಾಳಿಗಳು ನಡೆದಿವೆ. ಈ ಮಾಹಿತಿಯನ್ನು ಸ್ಥಳೀಯ ರಾಜ್ಯ ತುರ್ತು ನಿರ್ವಹಣಾ ಸಂಸ್ಥೆ ಒದಗಿಸಿದೆ.

ಮಹಿಳಾ ಆತ್ಮಹತ್ಯಾ ಬಾಂಬರ್‌ಗಳಿಂದ ಈ ಸ್ಫೋಟ ನಡೆದಿದೆ ಎಂದು ಸಂಸ್ಥೆ ಶಂಕಿಸಿದೆ. ಶಂಕಿತ ಆತ್ಮಾಹುತಿ ಬಾಂಬರ್‌ಗಳು ವಿವಿಧ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿದ್ದಾರೆ ಎಂದು ರಾಜ್ಯ ತುರ್ತು ನಿರ್ವಹಣಾ ಸಂಸ್ಥೆಯ ಮಹಾನಿರ್ದೇಶಕ ಬರ್ಕಿಂಡೋ ಸೈದು ತಿಳಿಸಿದ್ದಾರೆ. ಗ್ವೋಜಾ ನಗರದಲ್ಲಿ ಮದುವೆ, ಅಂತ್ಯಕ್ರಿಯೆ ಮತ್ತು ಆಸ್ಪತ್ರೆಯ ಮೇಲೆ ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದರು. ಸತ್ತವರ ಸಂಖ್ಯೆಯ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಸಿಗಬೇಕಿದೆ ಎಂದು ಅವರು ಹೇಳಿದರು. ಆದರೆ, ಸತ್ತವರಲ್ಲಿ ಗರ್ಭಿಣಿಯರು ಮತ್ತು ಮಕ್ಕಳೂ ಸೇರಿದ್ದಾರೆ ಎಂದು ಸೈದು ತಿಳಿಸಿದ್ದಾರೆ.

ಮತ್ತೊಂದೆಡೆ, ಈ ಆತ್ಮಹತ್ಯಾ ದಾಳಿಗಳ ಬಗ್ಗೆ ಬೊರ್ನೊ ರಾಜ್ಯ ಪೊಲೀಸರು ಇನ್ನೂ ಏನನ್ನೂ ಹೇಳಿಲ್ಲ. ನೈಜೀರಿಯಾದ ಬೊರ್ನೊ ಅನೇಕ ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿರುವ ಪ್ರದೇಶವಾಗಿರುವುದರಿಂದ, ಅವರು ಆತ್ಮಾಹುತಿ ದಾಳಿಗಳನ್ನು ನಡೆಸಿರಬಹುದು ಎನ್ನಲಾಗುತ್ತಿದೆ. ಇಸ್ಲಾಮಿಕ್ ಸ್ಟೇಟ್ ಜೊತೆ ಕೈ ಜೋಡಿಸುವ ಮೂಲಕ ಬೋಕೊ ಹರಾಮ್ ನೈಜೀರಿಯಾದಲ್ಲಿ ತನ್ನ ಭಯೋತ್ಪಾದಕ ವ್ಯಾಪ್ತಿಯನ್ನು ವಿಸ್ತರಿಸಿದೆ. ಬೊಕೊ ಹರಾಮ್ ಇದುವರೆಗೆ ಸಾವಿರಾರು ಜನರನ್ನು ಬರ್ಬರವಾಗಿ ಹತ್ಯೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು