Thursday, August 15, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 30: 1923ರ ನೇತ್ರಾವತಿ ಮಹಾನೆರೆಗೆ 101 ವರ್ಷ; 1974ಕ್ಕೆ 50!

ನೇತ್ರಾವತಿ ನದಿಯಲ್ಲಿ ದಾಖಲಾದ ಅತ್ಯಂತ ದೊಡ್ಡ ನೆರೆಗೆ ಆಗಸ್ಟ್ 7ರಂದು 101 ವರ್ಷ ತುಂಬುತ್ತದೆ. 1923ರಲ್ಲಿ ಈ ಮಹಾನೆರೆ ಬಂದಿತ್ತು. ಇದರಿಂದಾಗಿ ನದಿ ಹರಿವಿನ ಬಹುತೇಕ ಭಾಗ ನೀರಿನಲ್ಲಿ ಮುಳುಗಿ ಸಾವಿರಾರು ಮನೆ, ಗುಡಿಸಲುಗಳು ನಾಶವಾಗಿ ಅಪಾರ ನಷ್ಟ ಉಂಟಾಗಿತ್ತು.

ಎಲ್ಲೆಡೆ ಮಳೆಯಾಗಿ ನೆರೆಯ ಹೆದರಿಕೆ ಕಾಣುವುತ್ತಿರುವುದರಿಂದ ಈ ಬಾರಿ ನೆರೆಯ ಬಗ್ಗೆಯೇ ಬರೆಯುವೆ. ಬೆಕ್ಕುಗಳು ನಾಲ್ಕು ದಿನ ಮಲಗಿರಲಿ.

ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯಲ್ಲಿ ದಾಖಲಾದ ಅತ್ಯಂತ ದೊಡ್ಡ ನೆರೆಗೆ ಆಗಸ್ಟ್ 7ರಂದು 101 ವರ್ಷ ತುಂಬುತ್ತದೆ. 1923ರಲ್ಲಿ ಈ ಮಹಾನೆರೆ ಬಂದಿತ್ತು. ಇದರಿಂದಾಗಿ ನದಿ ಹರಿವಿನ ಬಹುತೇಕ ಭಾಗ ನೀರಿನಲ್ಲಿ ಮುಳುಗಿ ಸಾವಿರಾರು ಮನೆ, ಗುಡಿಸಲುಗಳು ನಾಶವಾಗಿ ಅಪಾರ ನಷ್ಟ ಉಂಟಾಗಿತ್ತು.

ಆಗ ಜನಸಂಖ್ಯೆ ಕಡಿಮೆ ಹಾಗೂ ಮನೆಗಳು ತೀರಾ ವಿರಳವಾಗಿದ್ದುದರಿಂದ ನಂತರ ಬಂದ 1974ರ ಮಹಾನೆರೆಯಲ್ಲಿ ಉಂಟಾದ ಮನೆಗಳ ನಾಶಕ್ಕೆ ಹೋಲಿಸಿದಾಗ 1923ರ ವಿನಾಶ ಕಡಿಮೆ ಎಂದು ಹೇಳಬಹುದಾದರೂ, ಬ್ರಿಟಿಶ್ ಕಾಲದಲ್ಲಿ ಸರಕಾರಿ ನೆರವು ಇಲ್ಲದ ಕಾರಣದಿಂದ ಹಲವಾರು ಶ್ರೀಮಂತರೂ, ಜಮೀನ್ದಾರರೂ ಭಾರೀ ನಷ್ಟದಿಂದ ದುರ್ಗತಿ ಅನುಭವಿಸಿದರು. ಈ ನೆರೆಯಲ್ಲಿ ಉಪ್ಪಿನಂಗಡಿ, ಬಂಟ್ವಾಳ, ಪಾಣೆಮಂಗಳೂರು ಪೇಟೆ ಬಹುತೇಕ ನಾಶವಾಗಿ ವ್ಯಾಪಾರಿಗಳ ಆಹಾರ ಧಾನ್ಯ, ದಿನಸಿ, ಬಟ್ಟೆ ಇತ್ಯಾದಿ ವಸ್ತುಗಳು ಸಂಪೂರ್ಣ ನಾಶವಾಗಿದ್ದವು.

ಆದರೂ 1974ರ ಹಾನಿ ದೊಡ್ಡದು. ನಾವೀಗ ಕಾಣುವ ಜನತಾ ಕಾಲೋನಿ, ನೆಹರೂ ನಗರಗಳು ಆಗ ಮನೆ ಕಳೆದುಕೊಂಡವರಿಗೆ ಸರಕಾರ ಕಟ್ಟಿಸಿಕೊಟ್ಟ ಮನೆಗಳು.

1923ರ ನೆರೆಯ ಕುರಿತು ಹೇಳಬಲ್ಲವರು ಯಾರೂ ಈಗ ಬದುಕಿ ಉಳಿದಿಲ್ಲ. ಈ ನೆರೆಯ ಹೆಚ್ಚಿನ ದಾಖಲೆಗಳು ಇಲ್ಲದಿರುವುದರಿಂದ ಈ ಕುರಿತು ಈಗಲೂ ಚಾಲ್ತಿಯಲ್ಲಿರುವ ದಂತಕತೆಗಳನ್ನೇ ಅವಲಂಬಿಸಬೇಕು. ನಾನಂತೂ ಈ ನೆರೆಯ ಕತೆಗಳನ್ನು ಆ ನೆರೆಗೆ ಸಾಕ್ಷಿಗಳಾಗಿದ್ದ ನನ್ನ ನಾಲ್ವರು ಅಜ್ಜಿಯರ ಬಾಯಿಯಲ್ಲಿ ನೂರಾರು ಬಾರಿ ಕೇಳಿದ್ದೇನೆ. ನೇತ್ರಾವತಿ ನದಿಯಲ್ಲಿ ಉರುಳಿಹೋಗುತ್ತಿದ್ದ ಕೊಪ್ಪರಿಗೆಗಳ (ಚಿನ್ನ, ಬೆಳ್ಳಿ, ತಾಮ್ರದ ಹಣ ಕೂಡಿಟ್ಟ ತಾಮ್ರದ ಕೊಡಪಾನಗಳು, ಗುಡಾಣಗಳು) ಸದ್ದು ಘಣಘಣ ಎಂದು ಊರಿಡೀ ಕೇಳುತ್ತಿತ್ತಂತೆ. ಇವು ನಿಜವಾಗಿ ಆಗ ಬಳಕೆಯಲ್ಲಿ ಇದ್ದ ಬಿಸಿನೀರು ಕಾಯಿಸುವ, ಭತ್ತ ಬೇಯಿಸುವ ತಾಮ್ರದ ಹಂಡೆಗಳು, ಮತ್ತಿತರ ಪಾತ್ರೆಪಗಡಿಗಳಾಗಿರಬಹುದು ಎಂದು ನನ್ನ ಊಹೆ. ಅಥವಾ ನೆಲದೊಟ್ಟಡದ ಭೂಮಿ ಒಡೆಯುವ ಸದ್ಧೂ ಆಗಿರಬಹುದು‌. ಆದರೆ, ಹಳ್ಳಿಗರಲ್ಲಿ ಜನರು ಸಂಪತ್ತು ಕೂಡಿಟ್ಟರೆ ನೆರೆಬಂದು ನೆಲದಲ್ಲಿ ಹೂತಿಟ್ಟ ನಿಧಿಗಳನ್ನು ಸಮುದ್ರದ ಒಡಲಿಗೆ ಸೇರಿಸುತ್ತದೆ ಎಂದು ನಂಬಿದ್ದರು. ಇದು ಮುಗ್ಧವಾಗಿದ್ದರೂ, ಅದರಲ್ಲೊಂದು ಸಾಂಕೇತಿಕತೆ, ಆಶಯ ಇದ್ದೇ ಇದೆ. ಬಡವರಿರಲಿ, ಶ್ರೀಮಂತರಿರಲಿ ಪ್ರಕೃತಿ ವಿಕೋಪಗಳು ಯಾವುದೇ ಭೇದ ಮಾಡದೆ ಎಲ್ಲರನ್ನೂ ಬಾಧಿಸುತ್ತದೆ.

ನೇತ್ರಾವತಿ ನದಿಯ ಅಪಾಯದ ಮಟ್ಟ ಪಾಣೆಮಂಗಳೂರು ಹಳೆ ಸೇತುವೆಯ ಬಳಿ 8.5 ಮೀಟರ್ ಇದ್ದು, 1974ರ ಜುಲೈ 24ರಂದು ಬಂದ ನೆರೆಯ ಮಟ್ಟ 11.4 ಮೀಟರ್ ಇತ್ತೆಂದು ದಾಖಲೆಯಿದೆ. ನಂತರ 2018ರ ಆಗಸ್ಟ್ 10ರ ನೆರೆಯ ಮಟ್ಟ ದಾಖಲೆ ಪ್ರಕಾರ 11.9 ಮೀಟರ್ ಇದ್ದರೂ, ಪ್ರತ್ಯಕ್ಷದರ್ಶಿಗಳ ಪ್ರಕಾರ 1974ರ ನೆರೆ ಒಳಪ್ರದೇಶಗಳಲ್ಲಿ ಕನಿಷ್ಟ ಒಂದು ಮೀಟರ್ ಹೆಚ್ಚಿತ್ತು. 1974ರ ನೆರೆಯಲ್ಲಿ ಹಳೆಸೇತುವೆಯ ಒಂದು ಕಡೆಯಿಂದ ನೀರು ಹರಿದುಹೋಗಿತ್ತು. 2018ರಲ್ಲಿ ಹಾಗಾಗಿರಲಿಲ್ಲ. 1923ರ ನೆರೆಯಲ್ಲಿ ಈ ಸೇತುವೆ ಸಂಪೂರ್ಣ ಮುಳುಗಿತ್ತು. ನದಿಯ ಆಳದಲ್ಲಿ ಏರುಪೇರುಗಳಿಂದಾಗಿ ಇಂತಹ ತಪ್ಪು ಲೆಕ್ಕಾಚಾರಗಳು ಆಗಿರಬಹುದು.

1923ರ ನೆರೆ ಇದಕ್ಕಿಂತಲೂ ಬಹಳ ದೊಡ್ಡದಾಗಿತ್ತು ಎಂಬುದಕ್ಕೆ ಆಧಾರಗಳಿವೆ. ಬಂಟ್ವಾಳದಲ್ಲಿ ಮತ್ತು ಪಾಣೆಮಂಗಳೂರು ಪೇಟೆಯ ಅಂಗಡಿಯೊಂದರ ಮುಂದೆ “1923ರ ನೆರೆ ಇಲ್ಲಿಯ ತನಕ ಬಂದಿತ್ತು” ಎಂದು ಸಿಮೆಂಟು ಫಲಕದಲ್ಲಿ ಕೊರೆದು ಗೆರೆ ಎಳೆಯಲಾಗಿದೆ. ಇದಕ್ಕೆ ಹೋಲಿಸಿದಾಗ 1974ರ ನೆರೆಯ ಮಟ್ಟ ಕನಿಷ್ಟ ಒಂದು ಮೀಟರ್ ಕಡಿಮೆಯಿದೆ. 2018ರ ಮಟ್ಟ ಹತ್ತಿರಕ್ಕೂ ಬರುವುದಿಲ್ಲ. ಅಧಿಕೃತ ಅಂಕಿ-ಅಂಶದಲ್ಲಿ ದೋಷವಿರುವುದು ಖಂಡಿತ.

1923ರ ನೆರೆ, 1974ರ ನೆರೆಗಿಂತ ಬಹಳ ದೊಡ್ಡದು ಎಂದು ಹೇಳಲಾಗುತ್ತದೆ. ಇದಕ್ಕೆ ನನ್ನ ಮಟ್ಟಿಗೆ ದೊಡ್ಡ ದಾಖಲೆಗಳೇನೂ ಬೇಡ. 1923ರ ನೆರೆಗೆ ನಮ್ಮ ಹಳೆಯ ಮನೆ ಬಿದ್ದುಹೋಗಿತ್ತಂತೆ. 1974ರ ನೆರೆ ನಮ್ಮ ಮನೆ ಮೆಟ್ಟಲ ತನಕ ಬಂದಿತ್ತು ಅಷ್ಟೇ. ಇದರಿಂದಲೇ 1974ರ ನೆರೆಗಿಂತ 1923ರ ನೆರೆ ಎಷ್ಟು ದೊಡ್ಡದು ಎಂದು ಅಂದಾಜಿಸಲು ಸಾಧ್ಯ ಈಗಿರುವ ಮನೆಯನ್ನು ಮರುವರ್ಷ ಕಟ್ಟಿರುವ ಮನೆಗೆ ಈಗ ನೂರು ವರ್ಷಗಳು. 1974ರ ನಂತರ ನಮ್ಮ ತಂದೆಯವರು ಮುಂಜಾಕರೂಕತೆಯಾಗಿ ಮನೆಯನ್ನು ನವೀಕರಿಸಿ, ಎಲ್ಲಾ ಕಡೆ ಲ್ಯಾಟರೈಟ್ ಕಲ್ಲುಗಳ ಕುಂದ (ಸ್ಥಂಭ) ಹಾಕಿ ಆಧುನೀಕರಿಸಲಾಯಿತಾದರೂ, ಒಳಗಿನ್ನೂ ಇರುವುದು ಎರಡಡಿ ದಪ್ಪದ ನೂರು ವರ್ಷಗಳ ಮಣ್ಣಿನ ಗೋಡೆಗಳೇ.

ಏನಿದ್ದರೂ, ಜನಪದರಲ್ಲಿ ಏನೇ ನಡೆದರೂ, ಹುಟ್ಟಿದರೂ, ಸತ್ತರೂ, ಬಹುಕಾಲ “ಮಲ್ಲ ಬೋಲ್ಲೋಡ್ದು ದುಂಬು, ಬೊಕ್ಕ” (ಮಹಾ ನೆರೆಗೆ ಮೊದಲು, ನಂತರ) ಎಂದು ವರ್ಷಗಳ ಲೆಕ್ಕ ಹಾಕಿಸಿದ ಆ ಮಹಾ ವಿನಾಶಕಾರಿ ನೆರೆ ಮತ್ತೆ ಬರದಿರಲಿ ಎಂಬುದೇ ಹಾರೈಕೆ.

1923ರ ಮಾರಿಬೊಲ್ಲದಲ್ಲಿ ಸತ್ತವರ, ಮನೆ -ಬೆಳೆ ಕಳಕೊಂದವರ ನಿಜವಾದ ದಾಖಲೆ ಇಲ್ಲ. “Mega flood” ಎಂದು ಮೈಸೂರು ಸ್ಟೇಟ್ ಗೆಜೆಟಿಯರ್ ನಲ್ಲಿ ಇದೆ ಎಂದು ಪತ್ರಕರ್ತ ಗೆಳೆಯ ಲೋಕೇಶ್ ಪೂಜಾರಿ ಹೇಳುತ್ತಾರೆ. ಈ ಗೆಜೆಟಿಯರ್ ಈಗ ಮಂಗಳೂರಿನ ಕೇಂದ್ರ ಗ್ರಂಥಾಲಯದಲ್ಲಿ ಇಲ್ಲ. ಈ ಗಜೇಟಿಯರ್‌ಗಳನ್ನು ದಿವಂಗತ ಮತ್ತು ಗೌರವಾನ್ವಿತ ಪತ್ರಕರ್ತರೊಬ್ಬರು ಕೊಂಡೊಯ್ದು ನಮಗೆಲ್ಲಾ ಇಲ್ಲದಂತೆ ಮಾಡಿದರು ಎಂದು ಕೇಳಿದ್ದೇನೆ. ಲೈಬ್ರರಿಯಲ್ಲಿ ಇದ್ದದ್ದು ಒಂದೊಂದೇ ಪ್ರತಿಯಂತೆ.

1974ರ ನೆರೆಬಂದಾಗ ನನಗೆ ಒಂಭತ್ತು ವರ್ಷ. ನಮ್ಮ ಬಂಟ್ವಾಳ ತಾಲೂಕು ಸಣ್ಣಸಣ್ಣ ಬೆಟ್ಟಗಳಿಂದ ಕೂಡಿದ ಪ್ರದೇಶ. ಮನೆಗಳು ಸಾಮಾನ್ಯವಾಗಿ ಎತ್ತರದ ಪ್ರದೇಶಗಳಲ್ಲೇ ಇರುವುದು. ಕಣಿವೆಗಳಲ್ಲಿ ಗದ್ದೆ, ತೋಟಗಳು. ಹಾಗಾಗಿ ಇಲ್ಲಿ ನೇರವಾಗಿ ನೆರೆಯಲ್ಲಿ ಕೊಚ್ಚಿಹೋಗಿ ಸತ್ತವರು ಬಹಳ ಕಡಿಮೆ. ಮನೆ ಬಿಟ್ಟು ಇನ್ನೂ ಎತ್ತರದ ಬೆಟ್ಟದ ಬಯಲಿಗೆ (ಕುಮೇರು) ಓಡಿಹೋಗುತ್ತಾರೆ.

ಜೂನ್ 17, 1974ರಂದು ಬೆಳಿಗ್ಗೆ ಎದ್ದಾಗ ಮನೆಯ ಎದುರಿನ ಗದ್ದೆಗಳೆಲ್ಲಾ ಮುಳುಗಿದ್ದವು. ಇಂತಹ ನೆರೆಗಳು ವರ್ಷದಲ್ಲಿ ಹತ್ತಾರು ನೆರೆಗಳು ಬರುವುದರಿಂದ ಯಾರಿಗೂ ಆತಂಕವಾಗಲಿಲ್ಲ. ನೀರು ಬಂದಲ್ಲಿ ಕೋಲಿನಲ್ಲಿ ಒಂದು ಗೆರೆ ಎಳೆದು ನೆರೆ, ಏರಿತೋ ಇಳಿಯಿತೋ ಎಂದು ನೋಡುವುದು ನಮಗೆ ಮಕ್ಕಳಿಗೆ ಒಂದು ಆಟ. ಆದರೆ, ಈ ಬಾರಿ ಆಟ ನಡೆಯಲಿಲ್ಲ. ಗೆರೆ ಎಳೆದ ತಕ್ಷಣ ಅದು ನೀರಿನಲ್ಲಿ ಮಳುಗುತ್ತಿತ್ತು. ಮನೆ ಲಂಬವಾಗಿ ಇನ್ನೂ ಹತ್ತು ಹನ್ನೆರಡು ಅಡಿ ಎತ್ತರವಿತ್ತಾದರೂ, ತಂದೆಯವರು ಮನೆಯಿಂ ಸಾಮಾನುಗಳನ್ನು ಸಾಗಿಸಲು ಆರಂಭಿಸಿದರು. ಮೊದಲು ಸಾಗಿಸಿದ್ದು ಸಾವಿರದಷ್ಟಿದ್ದ ಪುಸ್ತಕಗಳನ್ನು. ಅವುಗಳನ್ನು ಗೋಣಿ ಚೀಲಗಳಲ್ಲಿ ತುಂಬಿ, ನಮ್ಮ ಮನೆಯಲ್ಲೇ ವರ್ಷಗಳಿಂದ ಕೃಷಿ ಕೆಲಸ ಮಾಡುತ್ತಿದ್ದ ಸೇಸಮ್ಮ ಮಾಮಿಯ ಸ್ವಲ್ಪ ಎತ್ತರದಲ್ಲಿ ಇದ್ದ ಮನೆಗೆ ಸಾಗಿಸಲಾಯಿತು. ನಂತರ ಅಕ್ಕಿ ಮುಡಿಗಳು ಇತ್ಯಾದಿ. ಎತ್ತರದ ಕುಮೇರಿನಲ್ಲಿ ತಂದೆ ಒಂದು ಕೋತು (ಹಳ್ಳಿಯ ಟೆಂಟ್) ಹಾಕಿಸಿದರು. ಅಲ್ಲಿ ಗಂಜಿ ಚಟ್ನಿ ಕೇಂದ್ರ ಆರಂಭವಾಯಿತು. ಆದಷ್ಟು ಸಾಮಾನುಗಳನ್ನು ಮುಖ್ಯವಾಗಿ ಅಲ್ಲಿಗೆ ಸಾಗಿಸಲಾಯಿತು. ನೆರೆ ಬೆಂಕಿ ಹರಡುವ ವೇಗದಲ್ಲಿ ಏರುತ್ತಿದ್ದರಿಂದ ಈ ನೆರೆಯನ್ನು ಸೂತ ಲೆಕ್ಕಂತಿನ ಬೊಲ್ಲ (ಬೆಂಕಿಯಂತಹ ನೆರೆ) ಎಂದು ಬಹಳ ವರ್ಷಗಳ ಕಾಲ ಕರೆಯಲಾಗುತ್ತಿತ್ತು.

ಈ ವೇಗ ಹೀಗಿತ್ತು ಎಂದರೆ ಬೆಳಿಗ್ಗೆ ಹತ್ತು ಗಂಟೆಗೆ ಗದ್ದೆಯಲ್ಲಿದ್ದ ನೀರು ಮೇಲೆ ಬರುವ ಒಂದೊಂದೇ ಮೆಟ್ಟಲನ್ನು ಏರುತ್ತಾ ಹನ್ನೆರಡು ಗಂಟೆಗೆ ಮನೆ ಅಂಗಳಕ್ಕೇ ಬಂತು! ಎಲ್ಲಾ ಕಡೆ ನೀರಿನ ಒಯ್ಲು. ಮನೆಗಳು ಬೀಳುವ ಧಡಾಲ್ ಸದ್ದು, ಗಾಳಿ, ಮಳೆ. ನಾವಾಗಲೂ ಸಾಧ್ಯವಾದ ಸಾಮಾನುಗಳನ್ನು ಸಾಗಿಸುತ್ತಲೇ ಇದ್ದೆವು. ಹಂಡೆಗಳು ಪಾತ್ರೆಪಗಡಿಗಳನ್ನು ನೂರಾರು ವರ್ಷಗಳಷ್ಟು ಹಳೆಯ ಮನೆ ಬಾವಿಯಲ್ಲಿ ಹಿರಿಯರು ಮಾಡಿದ್ದಂತೆ ನೀರು ತುಬಿಸಿ ಮುಳುಗಿಸಲಾಯಿತು. ಬದುಕಿ ಉಳಿದರೆ ನಂತರ ತೆಗೆಯಬಹುದು ಎಂದು. ಕೊನೆಗೆ ಮನೆಗೆ ಹೋಗುವುದೇ ಅಸಾಧ್ಯವಾಯಿತು. ಆದರೆ, ಮನೆಯ ಒಳಗೆ ನೀರು ಹೊಕ್ಕಲಿಲ್ಲ. ಹೊಕ್ಕಿದ್ದರೆ ನಮ್ಮ ಮಣ್ಣಿನ ಗೋಡೆ ಜರ್ರನೇ ಕುಸಿದುಬೀಳುತ್ತಿತ್ತು. ಹನ್ನೆರಡು ಗಂಟೆಗೆ ನಿಂತಲ್ಲೇ ನಿಂತ ನೆರೆ, ಸಂಜೆ ಆರರ ವರೆಗೆ ಏರಲೂ ಇಲ್ಲ ಇಳಿಯಲೂ ಇಲ್ಲ! ಇಳಿಯಲು ಆರಂಭವಾದಾಗ ಬೆಂಕಿಯಂತೆ ಬಂದದ್ದಕ್ಕಿಂತಲೂ ವೇಗವಾಗಿ ಇಳಿದು ಹೋಯಿತು. ನಮ್ಮ ಮನೆಯೇನೋ ಉಳಿಯಿತು. ನೂರಾರು ಮನೆಗಳು ಬಿದ್ದು ಹೋಗಿ, ಸಾವಿರಾರು ಮಂದಿ ನಿರಾಶ್ರಿತರಾದರು.

ಈ ದುರಂತ ಕಾಲದಲ್ಲೂ ಮಕ್ಕಳಿಗೆ ಇರುವ, ಜೀವನಪೂರ್ತಿ ಉಳಿಯುವ ಚೋದ್ಯ, ಕುಚೋದ್ಯಗಳ ಬಗ್ಗೆ ಮೂರು ವಿಷಯಗಳನ್ನು ಬರೆಯುತ್ತೇನೆ!

ನಾವು ಎತ್ತರದ ಕುಮೇರಿನಲ್ಲಿ ಕೋತು ಕಟ್ಟುತ್ತಿದ್ದಾಗ ಮತ್ತು ಸಾಮಾನುಗಳನ್ನು ಸಾಗಿಸುತ್ತಿದ್ದಾಗ ಕೆಳಗಿರುವ ಮನೆಗಳನ್ನು ನೋಡುತ್ತಿದ್ದೆವು. ಅಲ್ಲಿಯವರೆಲ್ಲಾ ಆಗಲೇ ಕುಮೇರು ಹತ್ತಿದ್ದರು. ಎದುರು ನೀರಿನ ನಡುವೆ ಎರಡು ಮನೆಗಳು. ಒಂದು ನಮ್ಮ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಪೋಂಕಜ್ಜನ ಮನೆ ಮತ್ತು ಇನ್ನೊಬ್ಬರಾದ ಸಾಂತು ಮತ್ತು ಅವರ ಮಗ ತಂದೆಯವರ ಒಡನಾಡಿಯಾಗಿದ್ದ ನಾರಾಯಣ ಎಂಬವರ ಮನೆ. ಎರಡೂ ಮುಳಿಹುಲ್ಲಿನ ಗುಡಿಸಲುಗಳು. ಒಂದು ಟರ್ರನೇ ಒಂದು ಸುತ್ತು ತಿರುಗಿ ಕುಸಿಯಿತು. ಬರೇ ಹುಲ್ಲು ಮಾತ್ರ ತೇಲುತ್ತಿತ್ತು. ಸ್ವಲ್ಪ ಸಮಯದಲ್ಲೇ ಪೋಂಕಜ್ಜನ ಮುಳಿಮಾಡು ತೇಲಿ ಹೋಗುತ್ತಿತ್ತು.

ಈ ಪೋಂಕಜ್ಜ. ಸಕಲ ಕಲಾ ವಲ್ಲಭ. ನಿಧಾನವಾದರೂ ಎಲ್ಲಾ ಗ್ರಾಮೀಣ ಕುಶಲತೆಯಲ್ಲಿ ನಿಪುಣ. ದೊಗಲೆ ಚಡ್ಡಿಯ ಕಿಸೆಯಲ್ಲಿ ಎಲೆ ಆಡಿಕೆ ಜೊತೆ ಹಲವಾರು ಕೆಲಸಕ್ಕೆ ಬೇಕಾಗುವ ಹತ್ಯಾರುಗಳು. ಹಳ್ಳಿ ವಿವೇಕದಲ್ಲಿ ಇವರು ನನ್ನ ಗುರುಳಲ್ಲಿ ಒಬ್ಬರು. ವಿನೋದದ ವ್ಯಕ್ತಿ.

ಮನೆ ಹೋಗುವ ಚಿಂತೆಯಲ್ಲಿ ಕಂಡಾಪಟ್ಟೆ ತಾನೇ ಬೇಯಿಸಿದ ಸಾರಾಯಿ ಕುಡಿದಿದ್ದ ಅವರು, ತನ್ನ ಮನೆಯ ಮುಳಿಹುಲ್ಲಿನ ಮಾಡು ತೇಲಿ ಹೋಗುತ್ತಿರುವುದನ್ನು ನೋಡಿ, “ಅಶೋಕಾ!” ಎಂದು ಕಿರುಚಿ ಛಂಗನೇ ನೆರೆಗೆ ನೆಗೆದು ತೆಪ್ಪದಂತೆ ತೇಲಿ ಹೋಗುತ್ತಿದ್ದ ತಮ್ಮ ಮಾಡಿನ ಹಿಂದೆ ಈಜಿ ಹೋದರು. ಅವರ ಚಿಂತೆ ಮನೆಯಾಗಿರಲಿಲ್ಲ! (ಅಶೋಕ ನನ್ನ ತಂದೆಯ ಹೆಸರು) ಮುಳಿ ಮಾಡಿನಲ್ಲಿ ಅಬಕಾರಿಗೆ ಹೆದರಿ ಹುದುಗಿಸಿಟ್ಟ ಎರಡು ಬಾಟಲಿ ಸಾರಾಯಿ ವ್ಯರ್ಥವಾಗಿ ನೆರೆಯಪಾಲಾಗುತ್ತದಲ್ಲ ಎಂಬುದಾಗಿತ್ತು. ಎರಡೂ ಬಾಟಲಿಗಳ ಪ್ರಾಣ ಕಾಪಾಡಿ, ಯಶಸ್ವಿಯಾಗಿ ಈ ಕಡೆ ಬಂದು ಜೈಸ್ವಾಲ್‌ನಂತೆ ಎರಡೂ ಟ್ರೋಫಿಗಳನ್ನು ಎತ್ತಿ ಕುಣಿದಾಡಿದರು. ಅಲ್ಲಿ ಸುತ್ತಮುತ್ತ ಹಲವು ಜನರಿದ್ದರು. ನಿರಾಶ್ರಿತರಾಗಿ. ಒಬ್ಬೊಬ್ಬರದ್ದೂ ಒಂದೊಂದು ಪ್ರತಿಕ್ರಿಯೆ. ಎಲ್ಲರಿಂದಲೂ ಒಂಚೂರು ಒಂಚೂರು ಕಲಿತಿದ್ದೇನೆ!

ಇಲ್ಲಿ ಕಲಿತ ಇನ್ನೊಂದು ವಿಷಯ. ನಮ್ಮ ಹಳೆ ಮನೆಯ ಜಗಲಿಗೆ ಎರಡು ಬಿದಿರಿನ ತಟ್ಟಿಗಳಿದ್ದವು. ಒಂದು ದೊಡ್ಡದು 60 ಕಿಲೋ ಇರಬಹುದು. ಇನ್ನೊಂದು 30 ಕಿಲೋ. ಇವೆರಡನ್ನೂ 50 ಮತ್ತು 25 ಕಿಲೋ ಇರಬಹುದಾಗಿದ್ದ ತಾಯಿ-ಮಗ ಎತ್ತರದ ಕುಮೇರಿಗೆ ಹೊತ್ತೊಯ್ದೆವು. ನೆರೆ ಇಳಿದ ಎರಡೂ ದಿನಗಳಲ್ಲಿ ಅದನ್ನು ವಾಪಾಸು ತರಬೇಕೆಂದರೆ ನಮಗಿಬ್ಬರಿಗೂ ಅದನ್ನು ಎತ್ತಲೂ ಸಾಧ್ಯವಾಗಿರಲಿಲ್ಲ. ಅರ್ಥ ಇಷ್ಟೇ. ಮಾನವ ಸಾಮರ್ಥ್ಯಕ್ಕೆ ಮಿತಿಯಿಲ್ಲ. ಯಶವಂತ ಚಿತ್ತಾಲರು “ಶಿಕಾರಿ”ಯಲ್ಲಿ ಬರೆದಿರುವಂತೆ ಹೇಗಾದರೂ ಬದುಕಬೇಕು ಎಂಬ ಮಾನವ ಅಭೀಪ್ಸೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೆ, ಯಾಕೆ ಬದುಬೇಕು ಎಂಬ ಪ್ರಶ್ನೆ ತೀರಾ ಇತ್ತೀಚಿನದ್ದು! ಈ ಪ್ರಶ್ನೆ ಉಳಿವು, ಬದುಕಿನ ಪ್ರಾಣಿ ಪ್ರಜ್ಞೆಯು ನಮ್ಮನ್ನು ಹಲವು ಪಟ್ಟು ಸಶಕ್ತರನ್ನಾಗಿ ಮಾಡುತ್ತದೆ ಎಂಬುದನ್ನೂ ಬಾಲ್ಯದಲ್ಲಿಯೇ ಕಲಿತೆ. ನನ್ನ ತಾಯಿ 45 ಕಿಲೋಗಳ ವಿಲಿಯರ್ಸ್ ಪಂಪನ್ನು ಎತ್ತಿಕೊಂಡು ಹೋಗಿದ್ದರು ಎಂದರೆ, ಇಂದಿಗೂ ನನಗೆ ನಂಬಲಾಗುತ್ತಿಲ್ಲ.

ಇನ್ನೊಂದು: ನೆರೆ ಏರುತ್ತಿರುವಾಗ ನನ್ನ ತಂದೆಗೆ ಇದು ಪ್ರಳಯ ಅನಿಸಿತೋ ಏನೋ!? ಸರ್ವಾಂಟಿಸ್‌ನ ದೋನ್ ಕಿಯೋತೆ (Don Quixote) ಓದಿದ್ದ ಅವರು ಕೆಯೋಟಿಕ್ ವರ್ತನೆ ತೋರಿದರು. ಅದೊಂದು ಕಲ್ಪನೆಯಲ್ಲಿ ದೈತ್ಯ ಗಾಳಿಗೋಪುರಗಳನ್ನು ರಾಕ್ಷಸರು ಎಂದು ಭ್ರಮಿಸಿ ಹೋರಾಡುವ ವಿಚಿತ್ರ ಪಾತ್ರ!ಅವರಿಗೆ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಎಷ್ಟು ಹೆಚ್ಚಾಗಿತ್ತು ಎಂದರೆ, ಒಂದು ದೊಡ್ಡ ಮರ ಕಡಿಸಿ ದೋಣಿ ಮಾಡಿ ಎಂದು ಕೆಲಸಕ್ಕೆ ಇದ್ದವರಿಗೆ ಹೇಳಿದರು. ನೀರು ಇಲ್ಲಿಯ ವರೆಗೂ ಬಂದರೆ ಮೂರೂ ಮಕ್ಕಳನ್ನೂ ತೇಲಿ ಬಿಡೋಣ, ಬದುಕಿದರೆ ಯಾರಾದರೂ ಸಾಕಿಯಾರು ಎಂದು ಎಂದು! ತಾಯಿ ಒಪ್ಪಲಿಲ್ಲ! ಸತ್ತರೂ, ಬದುಕಿದರೂ, ಜೊತೆಗೆ ಎಂದು. ಯಾರದ್ದು ನಿಸ್ವಾರ್ಥ ಸಾಹಸವಾಗಿತ್ತು, ಮೂರ್ಖತನವಾಗಿತ್ತು, ಯಾರದ್ದು ಪ್ರೀತಿಯೋ, ಸ್ವಾರ್ಥ ಆಗಿತ್ತು? ಅಂದಿನಿಂದ ಇಂದಿನವರೆಗೆ ಯೋಚಿಸುತ್ತಿದ್ದೇನೆ. ನನ್ನ ಬಹಳಷ್ಟು ಗೆಳೆಯರಿಗೆ, ಅವರ ತಮ್ಮ, ತಂಗಿಯರಿಗೆ ಮನೆ ಉಳಿಸಿಕೊಳ್ಳುವ ಆ ಭಾಗ್ಯ ಇರಲಿಲ್ಲ. ಅದುವೇ ನನ್ನ ಚಿಂತನೆಯನ್ನೇ ಬದಲಾಯಿಸಿದ್ದು ಇರಬೇಕು.

ಅದಿರಲಿ, ನಾವು ಮಕ್ಕಳಿಗೆ ಅದೊಂದು ಭಯದ ವಾತಾವರಣ ಆಗಿದ್ದರೂ, ಥ್ರಿಲ್ ಆಗಿತ್ತು ಎಂಬುದು ನನಗೆ ಗೊತ್ತು. ನನಗೆ ಒಂಭತ್ತು ವರ್ಷ, ತಮ್ಮ ಅನಿಲ್ ನನ್ನಿಂದ ಮೂರೂವರೆ ವರ್ಷ ಚಿಕ್ಕವನು. ದೊಡ್ಡ ತಂಗಿ ಕೈಗೂಸು. ನಾವು ಮಕ್ಕಳು ಸೋರುತ್ತಿರುವ ಕೋತಿನ ನಡುವೆ ಇದ್ದ ಅಜ್ಜನ ಮೇಜಿನ ಅಡಿ ಕುಳಿತು ಕಂಬಳಿ ಹೊದ್ದು ಗಂಜಿ ತಿಂದರೂ, ಮನೆ ಆಟವಾಡುತ್ತಿದ್ದೆವು. ನಮಗೆ ಆತಂಕ ಇದ್ದರೂ, ಹಿರಿಯರ ರಕ್ಷಣೆಯಲ್ಲಿ ಇದ್ದೆವು. ನೆರೆ ಇಳಿದಾಗ ಎಲ್ಲರಿಗೆ ನಿರಾಳವಾದರೂ, ಮಕ್ಕಳಿಗೆ ಮಾತ್ರ ಥ್ರಿಲ್ ಕರಗಿಹೋದ ನಿರಾಸೆ. ಈಗಲೂ, ಮೊನ್ನೆ ಮನೆಯ ಮುಂದೆ ನೆರೆ ಏರಿದಾಗ ನನಗೆ ಆತಂಕವಾದಾಗ, ಮಕ್ಕಳಿಗೆ ಥ್ರಿಲ್ ಅನಿಸುತ್ತದೆ ‌

ಇರಲಿ, ಉಳಿದ ಕಡೆ 1974ರಲ್ಲಿ ಕರಾವಳಿಯಲ್ಲಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ನನ್ನ ಪತ್ರಕರ್ತ ಗೆಳೆಯ ಲೋಕೇಶ್ ಪೂಜಾರಿ ಹೀಗೆ ಬರೆದಿದ್ದಾರೆ:

ಉಡುಪಿಯ ಇತಿಹಾಸದಲ್ಲಿ ದಾಖಲಾದ ಮಹಾಮಳೆ ಸುರಿದದ್ದು 1923 ರಲ್ಲಿ. ಬಹುಶಃ ಅದನ್ನು ನೋಡಿದ ಶತಾಯುಷಿಗಳು ಯಾರಿದ್ದಾರೋ ಗೊತ್ತಿಲ್ಲ .ಅದು ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದ ಶತಮಾನದ ಮಹಾಮಳೆ.

ಇತಿಹಾಸದ ಪುಟಗಳಲ್ಲಿ ಅದು ದಾಖಲಾಗಿದ್ದು “ಮಾರಿ ಬೊಲ್ಲ” ಎಂದು ನಂತರದ ಮಹಾಪ್ರವಾಹ 1974ರ ಜುಲೈ ತಿಂಗಳಲ್ಲಿ.
ಬಹುಶಃ ಆ ಕಾಲಘಟ್ಟದ ಯಾರೂ ಅದನ್ನು ಮರೆತಿರಲು ಸಾದ್ಯವೇ ಇಲ್ಲ.

ಈ ತಲೆಮಾರಿನ ಎಲ್ಲರೂ ಎಂತಹಾ ಪ್ರವಾಹ ಬಂದರೂ ಇದು’ 74 ರ ಪ್ರವಾಹದ ತರಾ ಆಗುತ್ತದಾ ಮಾರಾಯ’ ಅಂತಾರೆಯೇ ಹೊರತು ಅದೇ ತರಹ ಅಂತಾ ಹೇಳಿದವರಿಲ್ಲ.

1974…
ರಾಷ್ಟ್ರೀಯ ಹೆದ್ದಾರಿ ( ಹಳೇ ಸಂಖ್ಯೆ ಎನ್‌ಎಚ್ -17)ರಲ್ಲಿ ಇರುವ ಉದ್ಯಾವರ ಮತ್ತು ಕಲ್ಯಾಣಪುರದ ಸ್ವರ್ಣಾ,
ಹೇರೂರಿನ ಮಡಿಸಾಲು ಸೇತುವೆಗಳೆಲ್ಲವೂ ಮುಳುಗಿದ್ದ ಮಹಾ ಮಳೆ ಅದು.

ಕಂಡವರು ಹೇಳಿದ ಪ್ರಕಾರ ತಕ್ಷಣ ಏರಿ ಸಂಜೆ ಹೊತ್ತಿಗೆ ಇಳಿತ ಕಂಡ ಪ್ರವಾಹ ರಾಷ್ಟ್ರೀಯ ಹೆದ್ದಾರಿಯ ಸೇತುವೆಗಳ ಮೇಲೆ ‘ಒಂಜಿ ಕೋಲ್ ನೀರು ‘( ಹೆಚ್ಚು ಕಮ್ಮಿ ಒಂದು ಮೀಟರ್) ನಿಂತಿತ್ತಂತೆ. ನೂರಾರು ಗ್ರಾಮಗಳು ಸಂಪೂರ್ಣವಾಗಿ ಮುಳುಗಿ ,ಇಡೀ ತಾಲೂಕು ಜಲಾವೃತ್ತವಾಗಿತ್ತಂತೆ. ಬಹುಶಃ 74 ರ ಮಳೆ ಇಡೀ ದಕ್ಷಿಣ ಭಾರತವನ್ನು ಕಾಡಿತ್ತು ಅನ್ನಿಸುತ್ತದೆ.

ನಾನಂತೂ ನನ್ನ ಜೀವ ಮಾನದಲ್ಲಿ 1974 ರ ಮಳೆಯನ್ನು ಮರೆಯಲು ಸಾದ್ಯವೇ ಇಲ್ಲ. ಯಾಕೆಂದರೆ ನಾನು ಅದೇ ವರ್ಷ ಜನವರಿಯಲ್ಲಿ ಹುಟ್ಟಿದ್ದೆ. ಆ ವರ್ಷ ನಮ್ಮ ಅಪ್ಪ ಕಟ್ಟಿಸಿದ್ದ (ಉಪ್ಪೂರಿನ ಜಾತಾಬೆಟ್ಟು) ಉಪ್ಪರಿಗೆ ಮನೆ ಪ್ರವಾಹದ ರಭಸಕ್ಕೆ ಕುಸಿದು ಬಿತ್ತಂತೆ.

ನಾನು ಸಣ್ಣ ಮಗುವಾಗಿ‌ ಅಂಬೆಗಾಲಿಡುವಾಗಲೂ ನನ್ನನ್ನು ಎತ್ತಿಕೊಂಡು ಕೆನ್ನೆ ಚಿವುಟಿ ” ಉಂಬೆ ಇಲ್ಲ್ ಬೂಲ್ಪಾದಿನ (ಬೂರ್ಪಾದಿನ- ಬಂಟ್ವಾಳ ತುಳು) ಬಾಲೆ ಅತ್ತಾ!” ( ಇವನು ಮನೆ ಬೀಳಿಸಿದ ಮಗು ಅಲ್ವಾ) ಅಂತಾ ಇದ್ರು.
ನನಗೆ ಖುಷಿಯಾಗ್ತಾ ಇತ್ತು ಯಾಕೆಂದರೆ ಅವರೇನು ಹೇಳ್ತಾ ಇದ್ದಾರೋ ನನಗೆ ಅರ್ಥ ಆಗ್ತಾ ಇರಲಿಲ್ಲ. ನಾನು ಹುಟ್ಟಿದ ಘಳಿಗೆಗೂ ಅದಕ್ಕೂ ತಳಿಕೆ ಹಾಕುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವಷ್ಟು‌ ನನ್ನ ಮೆದುಳು ಬೆಳೆದಿರಲಿಲ್ಲ.

ಆದರೂ ನಾನು ಹೈಸ್ಕೂಲ್ ಹೋಗುವ ತನಕನೂ ನಮ್ಮ ಅಜ್ಜಿ ಅದನ್ನೇ ಹೇಳ್ತಾ ತಮಾಷೆ ಮಾಡ್ತಾ ಇದ್ದರು.ಮೀನು ತರಲು ಹೋದಾಗ ಮೀನು ಮಾರುವ ಅಮ್ಮಂದಿರೂ ಕೆಲವು ಸಲ ” ಆರು ತಿಂಗಳ ಮಗುವನ್ನು ತೊಟ್ಟಿಲು ಸಮೇತ ,ದೋಣಿಯಲ್ಲಿ ಇಟ್ಟು ದಡ ಸಾಗಿಸಿದ್ದು ” ಅಂತಾ ನೆನಪಿಸುತ್ತಿದ್ದರು.

ಶಾಲೆಗೆ ಹೋಗುವಾಗ ಮಳೆಗಾಲದಲ್ಲಿ ಉಕ್ಕುವ ಪ್ರವಾಹ ನೋಡುತ್ತಾ ಖುಷಿಯಾಗುತ್ತಿತ್ತು.
ತಗ್ಗು ಪ್ರದೇಶದ ಜನರೆಲ್ಲಾ ‌ ದೋಣಿಯಲ್ಲಿ ಬಂದು ತೆಂಕಬೆಟ್ಟು ಶಾಲೆಯಲ್ಲಿ ಉಳಿದುಕೊಳ್ಳುತ್ತಿದ್ದರು.

ಹೈವೇ ರಸ್ತೆಯ ಮೇಲೆ ನಿಂತು , ಮನೆಗಳ ಜಗುಲಿ ಏರಿ ಗೋಡೆ ಮೇಲೇರುತ್ತಾ ಹೋಗುವ , ಇಳಿದಾಗ ಗೋಡೆ ಮೇಲೆ ನೀರಿನ ರೇಖೆ ಮೂಡಿಸುವ ಪ್ರವಾಹ ನೋಡ್ತಾ ಇದ್ದೆ. ಹೈವೇ ರಸ್ತೆ ಮುಳುಗಿದರೆ ಹೇಗಿರುತ್ತದೆ ಎಂದು ನೋಡುವ ಆಸೆಯಾಗುತ್ತಿತ್ತು.

ನಮ್ಮೂರಿನಲ್ಲಿ ಆವಾಗೆಲ್ಲಾ ಜನ ಪ್ರವಾಹಕ್ಕೆ ರೆಡಿಯಾಗಿಯೇ ಬದುಕುವಂತಿದ್ದರು.
ನೆರೆ ಬಂದು ಮನೆಯಿಂದ ಹೊರಗೆಲ್ಲೋ ಇದ್ದರೂ ಖುಷಿಯಾಗಿ ಇರುತ್ತಿದ್ದರು.
ಸಾಮೂಹಿಕ ಭೋಜನ ಮಾಡುತ್ತಾ ಮಾತು ,ನಗುವಿನ ಭೋರ್ಗೆರೆತ.

ಪ್ರವಾಹದ ಹಿನ್ನೀರಲ್ಲೇ ಬಲೆ ಬೀಸಿ ಮೀನು ಹಿಡಿಯುವವರು, ಪ್ರವಾಹದಲ್ಲಿ ತೇಲಿ ಬರುವ ಘಟ್ಟದ ಕಾಡಿನ ಮರದ ದಿಮ್ಮಿಗಳನ್ನು ಹಿಡಿದು ಹಗ್ಗ ಕಟ್ಟಿ ಎಳೆದು ದಡಕ್ಕೆ ತರುವವರು..
ನಂತರದ ವರ್ಷಗಳಲ್ಲಿ ನದೀ ನೀರಿನತಟದ ಪ್ರದೇಶಗಳು ಜನ ದಟ್ಟಣೆಯಿಂದ ಸಮೃದ್ಧವಾಗುತ್ತಾ ಹೋದಂತೆ ಜನ ಒಂದೆರಡು ಮೂಟೆಗಳ ಜೊತೆಗೆ ಎತ್ತರದ ಪ್ರದೇಶಕ್ಕೆ ಹೋಗುವಂತಿಲ್ಲ.
ಅಸ್ತಿ ಪಾಸ್ತಿಗಳ ಹಾನಿ ,ಪ್ರಾಣ ಹಾನಿ…


ಏನೇ ಇರಲಿ. ಬರಲಿ, ನಾವು ಸಿದ್ಧ! ಅಪಾಯದಲ್ಲೇ ಬೆಳೆದವರು, ಬದುಕಿದವರು! ಹೋರಾಡುವುದು ನಿಲ್ಲಿಸುವುದಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page