Wednesday, February 26, 2025

ಸತ್ಯ | ನ್ಯಾಯ |ಧರ್ಮ

1984ರ ಸಿಖ್ ವಿರೋಧಿ ಹಿಂಸಾಚಾರ: ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ

1984 ರ ಸಿಖ್ ವಿರೋಧಿ ದಂಗೆಯಲ್ಲಿ ಇಬ್ಬರು ವ್ಯಕ್ತಿಗಳ ಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ದೆಹಲಿ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.

“ದಾಖಲೆಯಲ್ಲಿರುವ ಸಾಕ್ಷ್ಯಗಳಿಂದ, ಪ್ರಸ್ತುತ ಪ್ರಕರಣದ ಬಲಿಪಶುಗಳು ಅಪರಾಧದ ಭಾಗವಾಗಿದ್ದ ಗಲಭೆಕೋರ ಗುಂಪಿನ ಕೈಯಿಂದ ತಮ್ಮ ಕುಟುಂಬ ಸದಸ್ಯರು ಕ್ರೂರ ಹತ್ಯೆಯಾಗಿರುವುದನ್ನು ಕಂಡಿದ್ದಾರೆ ಮಾತ್ರವಲ್ಲದೆ, ಅವರ ವಾಸಸ್ಥಳವನ್ನು ಸುಟ್ಟು ನಾಶಪಡಿಸುವುದು ಮತ್ತು ಅವರ ವಸ್ತುಗಳನ್ನು ಲೂಟಿ ಮಾಡುವುದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ದೃಢಪಟ್ಟಿದೆ,” ಎಂದು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ತಮ್ಮ ಶಿಕ್ಷೆಯ ಆದೇಶದಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 31, 1984 ರಂದು, ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ನಂತರ ದೆಹಲಿಯಲ್ಲಿ ದೊಡ್ಡ ಪ್ರಮಾಣದ ಗಲಭೆಗಳು ಭುಗಿಲೆದ್ದವು. ಕೆಲವು ಕಾಂಗ್ರೆಸ್ ನಾಯಕರ ಸಹಾಯ ಪಡೆದಿದ್ದಾರೆಂದು ಹೇಳಲಾದ ಗುಂಪುಗಳು ಸಿಖ್ಖರ ಮೇಲೆ ದಾಳಿ ಮಾಡಿ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದವು. ದೆಹಲಿಯೊಂದರಲ್ಲೇ ಸುಮಾರು 3,000 ಸಿಖ್ಖರು ಕೊಲ್ಲಲ್ಪಟ್ಟರು.

ಕುಮಾರ್ ಅವರ ಶಿಕ್ಷೆಗೆ ಸಂಬಂಧಿಸಿದ ಪ್ರಕರಣದಲ್ಲಿ, ಮೃತಪಟ್ಟವರ ಕುಟುಂಬ ಸದಸ್ಯರಾದ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣ್ ದೀಪ್ ಸಿಂಗ್, ನವೆಂಬರ್ 1, 1984 ರಂದು ರಾಜಧಾನಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ಕುಮಾರ್ ನೇತೃತ್ವದ ಗುಂಪೊಂದು ಇಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದೆ ಎಂದು ಆರೋಪಿಸಿದ್ದರು. ಆಗ ಹೊರ ದೆಹಲಿಯಲ್ಲಿ ಕಾಂಗ್ರೆಸ್ ಸಂಸದರಾಗಿದ್ದ ಕುಮಾರ್, ತಮ್ಮ ಮನೆಗೆ ಬೆಂಕಿ ಹಚ್ಚಿದ “ಗುಂಪನ್ನು ಪ್ರಚೋದಿಸಿದರು ಮತ್ತು ಪ್ರೋತ್ಸಾಹಿಸಿದರು” ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಕುಮಾರ್ ಅವರನ್ನು ಏಪ್ರಿಲ್ 2021 ರಲ್ಲಿ ಬಂಧಿಸಲಾಯಿತು.

ಫೆಬ್ರವರಿ 12 ರಂದು ರೌಸ್ ಅವೆನ್ಯೂ ನ್ಯಾಯಾಲಯವು ಕುಮಾರ್ ಅವರನ್ನು ಕೊಲೆಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿತು. ಅಲ್ಲದೇ ಕೆಲವು ಕಾರಣದಿಂದಾಗಿ ಮರಣದಂಡನೆಗಾಗಿ ಅರ್ಜಿದಾರರ ವಿನಂತಿಯನ್ನು ತಿರಸ್ಕರಿಸಿತು.

“ಜೈಲು ಅಧಿಕಾರಿಗಳ ವರದಿಯ ಪ್ರಕಾರ ಅಪರಾಧಿಯ ‘ತೃಪ್ತಿದಾಯಕ’ ನಡವಳಿಕೆ, ಅವನು ಬಳಲುತ್ತಿರುವ ಕಾಯಿಲೆಗಳು, ಅಪರಾಧಿಗೆ ಸಮಾಜಿಕ ಬದುಕು ಮತ್ತು ಅವನ ಸುಧಾರಣೆ ಮತ್ತು ಪುನರ್ವಸತಿಯ ಸಾಧ್ಯತೆಗಳನ್ನು ಪರಿಗಣಿಸಿ, ನನ್ನ ಅಭಿಪ್ರಾಯದಲ್ಲಿ, ಮರಣದಂಡನೆಯ ಬದಲು ಜೀವಾವಧಿ ಶಿಕ್ಷೆಯನ್ನು ನೀಡುವಂತಿವೆ” ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಪೊಲೀಸರು ಸೆಪ್ಟೆಂಬರ್ 9, 1985 ರಂದು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದರು.

1994 ರಲ್ಲಿ, ಸಂಗ್ರಹಿಸಿದ ಪುರಾವೆಗಳು ಯಾರ ವಿರುದ್ಧವೂ ಮೊಕದ್ದಮೆ ಹೂಡಲು ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟ ನಂತರ ಪ್ರಕರಣವನ್ನು ಮುಚ್ಚಲಾಯಿತು. ಸಿಖ್ ವಿರೋಧಿ ಹಿಂಸಾಚಾರ ಪ್ರಕರಣಗಳನ್ನು ಮರು ತನಿಖೆ ಮಾಡಲು ರಚಿಸಲಾದ ಮೂವರು ಸದಸ್ಯರ ವಿಶೇಷ ತನಿಖಾ ತಂಡವು 2015 ರಲ್ಲಿ ಪ್ರಕರಣವನ್ನು ಮತ್ತೆ ತೆರೆಯಿತು.

2021 ರಲ್ಲಿ, ರೌಸ್ ಅವೆನ್ಯೂ ನ್ಯಾಯಾಲಯವು ಕುಮಾರ್ ವಿರುದ್ಧ ಗಲಭೆ ಮತ್ತು ಕೊಲೆ ಆರೋಪ ಹೊರಿಸಿತು. ಪ್ರಾಥಮಿಕ ತನಿಖೆಯಲ್ಲಿ, ಜಸ್ವಂತ್ ಸಿಂಗ್ ಮತ್ತು ತರುಣ್ ದೀಪ್ ಸಿಂಗ್ ಅವರ ಹತ್ಯೆಯ ಸಮಯದಲ್ಲಿ ಕುಮಾರ್ “ಗುಂಪಿನಲ್ಲಿ ಭಾಗವಹಿಸಿದ್ದಲ್ಲದೆ ಅದನ್ನು ಮುನ್ನಡೆಸಿದ್ದರು” ಎಂಬುದು ಕಂಡುಬಂತು.

1984 ರ ಗಲಭೆಗೆ ಸಂಬಂಧಿಸಿದಂತೆ ಕುಮಾರ್ ಅವರ ಇದು ಎರಡನೇ ಶಿಕ್ಷೆ. ಅವರು ಮತ್ತೊಂದು ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಡಿಸೆಂಬರ್ 2018 ರಲ್ಲಿ, ದೆಹಲಿ ಹೈಕೋರ್ಟ್ ಅವರನ್ನು ಕೊಲೆ, ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ಘೋಷಿಸಿತ್ತು. ಕುಮಾರ್ ಅವರ ಮೊದಲ ಶಿಕ್ಷೆಯ ನಂತರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page