Friday, November 21, 2025

ಸತ್ಯ | ನ್ಯಾಯ |ಧರ್ಮ

ಸಿಎಸ್‌ಆರ್‌ ನೆರವಿನೊಂದಿಗೆ 2ಸಾವಿರ ಶಾಲೆಗಳ ನಿರ್ಮಾಣ: ಮುಖ್ಯಮಂತ್ರಿ ಸಿದ್ಧರಾಮಯ್ಯ

ಬಜೆಟ್‌ನಲ್ಲಿ ಘೋಷಿಸಿರುವಂತೆ 2 ಸಾವಿರ ಪಂಚಾಯತ್‌ ವ್ಯಾಪ್ತಿಯಲ್ಲಿ ಮಾದರಿ ಶಾಲೆಗಳನ್ನು ಸಿಎಸ್‌ಆರ್‌ ಅಡಿಯಲ್ಲಿ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಲಾಗಿದೆ. ಇದಕ್ಕಾಗಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಖಾಸಗಿ ಕಂಪೆನಿಗಳ ಕಾಯ್ದೆಯ ಪ್ರಕಾರ ಕಳೆದ ಸಾಲಿನಲ್ಲಿ 8163 ಕೋಟಿ ರೂಪಾಯಿಯನ್ನು ಕಡ್ಡಾಯವಾಗಿ ಸಿಎಸ್‌ಆರ್‌ ಅಡಿ ವೆಚ್ಚ ಮಾಡಬೇಕಾಗಿತ್ತು. ಖಾಸಗಿ ಕಂಪೆನಿಗಳು ಈ ಅವಧಿಯಲ್ಲಿ 4 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. 1190 ಕೋಟಿ ಕಳೆದ ವರ್ಷ ಸಿಎಸ್‌ಆರ್‌ ಅಡಿ ವೆಚ್ಚ ಮಾಡಿದ್ದು, ಶೇ.30ರಷ್ಟು ಮೊತ್ತವನ್ನು ಮಾತ್ರವೇ ಸಿಎಸ್‌ಆರ್‌ ಅಡಿ ಬಳಸುತ್ತಿವೆ ಎಂದು ಅವರು ತಿಳಿಸಿದರು.

ರಾಮನಗರ ಜಿಲ್ಲೆಯಲ್ಲಿ ಪೈಲೆಟ್‌ ಯೋಜನೆಯಾಗಿ ಆರಂಭಿಸಲಾಗಿದ್ದು, ಮೂರು ಪಂಚಾಯತ್‌ಗಳಿಗೆ ಒಂದು ಶಾಲೆಯಂತೆ ಈಗಾಗಲೇ 20 ಶಾಲೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಟೊಯೋಟಾ ಕಂಪೆನಿ ಒಂದೇ 20 ಕೋಟಿ ಸಿಎಸ್‌ಆರ್‌ ಅಡಿ ಒದಗಿಸಿದೆ. ನಾವು 3 ಎಕ್ರೆ ಜಮೀನು ಒದಗಿಸಬೇಕು. ಶಾಲೆಯ ಮಾದರಿಯನ್ನು ಮಾತ್ರ ನಾವು ಒದಗಿಸುತ್ತೇವೆ. ನಿರ್ಮಾಣ ಕಾರ್ಯವನ್ನು ಅವರೇ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಈಗಾಗಲೇ 500 ಸ್ಥಳಗಳನ್ನು ಗುರುತಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 2ಸಾವಿರ ಶಾಲೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಪ್ರಮುಖ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳಲು ಸೂಚನೆ ನೀಡಿದ್ದೇವೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ


ಶಾಲೆಯಿಂದ ಯಾವ ಮಕ್ಕಳೂ ಹೊರಗುಳಿಯಬಾರದು. ಪ್ರತಿ ವರ್ಷ 6ರಿಂದ 16 ವರ್ಷದೊಳಗಿನ ಮಕ್ಕಳ ಸಮೀಕ್ಷೆಯನ್ನು ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು. ರಾಜಪ್ಪ ಎನ್ನುವ ಮೇಸ್ಟ್ರು ಶಾಲೆಯಿಂದ ಹೊರಗೆ ಉಳಿದಿದ್ದ ನನ್ನನ್ನು ಶಾಲೆಗೆ ಸೇರಿಸದಿದ್ದರೆ ನಾನು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ ಎಂದು ಸಭೆಗೆ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page