Saturday, February 21, 2026

ಸತ್ಯ | ನ್ಯಾಯ |ಧರ್ಮ

₹227 ಕೋಟಿ ಎಸ್‌ಬಿಐ ನಕಲಿ ಸಾಲದ ಹಗರಣ: ಆರೋಪಿಗಳ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವೆಬ್‌ಸೈಟ್ ಹ್ಯಾಕ್ ಮಾಡಿ, ನಕಲಿ ಒಟಿಪಿಗಳನ್ನು (OTP) ಪಡೆಯುವ ಮೂಲಕ ಸಾಲದ ಮೊತ್ತ ವರ್ಗಾವಣೆಯಾದಂತೆ ನಟಿಸಿದ ಸೈಬರ್ ಅಪರಾಧದ ನಡಾವಳಿಗಳನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರು ಪೊಲೀಸರು ದಾಖಲಿಸಿರುವ ಈ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ದೂರುದಾರರಲ್ಲಿ ಸುರಕ್ಷತೆಯ ಸುಳ್ಳು ಭಾವನೆಯನ್ನು ಮೂಡಿಸಲು ಹೇಗೆ ಒಂದು ನಕಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ಮಿಸಲಾಯಿತು; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತೆ ನಟಿಸುವ ನಕಲಿ ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ಬಳಸಿಕೊಳ್ಳಲಾಯಿತು ಮತ್ತು ದೂರುದಾರರು ಬೃಹತ್ ಮೊತ್ತದ ಹಣವನ್ನು ಕಳೆದುಕೊಳ್ಳುವಂತೆ ಹೇಗೆ ಪ್ರೇರೇಪಿಸಲಾಯಿತು ಎಂಬುದನ್ನು ಈ ದೂರು ಹಂತ ಹಂತವಾಗಿ ವಿವರಿಸುತ್ತದೆ” ಎಂದು ಹೇಳಿದರು.

ಗದಗದ ಉದ್ಯಮಿ ವಿನಾಯಕ ಕಬಾಡಿ ಈ ಪ್ರಕರಣದ ದೂರುದಾರರಾಗಿದ್ದಾರೆ. ತಮಿಳುನಾಡಿನ ಕೆ. ಬಾಲಾಜಿ ಅಲಿಯಾಸ್ ಬಾಲಾಜಿ ಶಾ, ಸಿಲ್ಮಿಯಾ ಅಲಿಯಾಸ್ ಸಿಲ್ಮಿಯಾ ಫಾತಿಮಾ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಯುಕೆ ಮೂಲದ ಸೆಬಾ ಜೀವನ್ ಸೆಬಾರತ್ನಂ ಮತ್ತು ಬೆಂಗಳೂರಿನ ವಿನಯ್ ಕುಮಾರ್ ಅಗರ್ವಾಲ್ ಈ ಪ್ರಕರಣದ ಅರ್ಜಿದಾರ ಆರೋಪಿಗಳಾಗಿದ್ದಾರೆ.

ಆರೋಪಿಗಳು ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅಗತ್ಯವಿದ್ದ ₹227 ಕೋಟಿ ಸಾಲದ ಮೊತ್ತವು ದೂರುದಾರರ ಖಾತೆಗೆ ಜಮೆಯಾಗಿದೆ ಎಂದು ನಂಬಿಸಲು ನಕಲಿ ಎಸ್‌ಬಿಐ ವೆಬ್‌ಸೈಟ್ ಸೃಷ್ಟಿಸಿ, ಅವರ ಮೊಬೈಲ್‌ಗೆ ಒಟಿಪಿ ಬರುವಂತೆ ಮಾಡಿದ್ದರು ಎಂಬುದು ಪ್ರಾಸಿಕ್ಯೂಷನ್ ವಾದವಾಗಿದೆ. ಸಾಲದ ಮೊತ್ತ ಜಮೆಯಾಗಿದೆ ಎಂದು ನಂಬಿದ ದೂರುದಾರರು, ಕಮಿಷನ್ ರೂಪದಲ್ಲಿ ಆರೋಪಿಗಳ ಖಾತೆಗೆ ₹7.15 ಕೋಟಿ ವರ್ಗಾಯಿಸಿದ್ದರು. ಪ್ರಸ್ತುತ ಪ್ರಕರಣದಲ್ಲಿ ನಡೆದಿರುವ ಏಕೈಕ ಹಣಕಾಸು ವರ್ಗಾವಣೆ ಇದಾಗಿದೆ.

ಆರೋಪಿಗಳ ಪರ ವಕೀಲರು, ಈ ಅಪರಾಧವು ₹7.15 ಕೋಟಿ ವಸೂಲಾತಿಗೆ ಸಂಬಂಧಿಸಿದ್ದರಿಂದ ಇದು ಸಿವಿಲ್ (ನಾಗರಿಕ) ಸ್ವರೂಪದ ವಿಷಯವಾಗಿದೆ ಎಂದು ವಾದಿಸಿದರು. ಅಲ್ಲದೆ, 2018ರ ಫೆಬ್ರವರಿಯಲ್ಲಿ ನಡೆದ ವಹಿವಾಟಿಗೆ 2022ರ ಜುಲೈನಲ್ಲಿ ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ತನಿಖಾ ಸಾಮಗ್ರಿಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳು ಅಸ್ತಿತ್ವದಲ್ಲೇ ಇಲ್ಲದ www.sbicf.co.in ಎಂಬ ವೆಬ್‌ಸೈಟ್ ಸೃಷ್ಟಿಸಿ ದೂರುದಾರರ ಮೊಬೈಲ್ ಅಥವಾ ವಾಟ್ಸಾಪ್‌ಗೆ ಒಟಿಪಿ ಸಂದೇಶಗಳನ್ನು ಕಳುಹಿಸಿರುವುದನ್ನು ನ್ಯಾಯಾಲಯ ಗಮನಿಸಿತು.

“ಪ್ರಸ್ತುತ ಪ್ರಕರಣವು ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾದಂತಿದೆ” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಭಿಪ್ರಾಯಪಟ್ಟರು. ಮುಂದುವರಿದು, “ಇದು ಎಲ್ಲಾ ಆರೋಪಿಗಳು ಸೇರಿ ದೂರುದಾರರನ್ನು ವಂಚಿಸಲು ಸಂಚು ರೂಪಿಸಿರುವ ಸ್ಪಷ್ಟ ಪ್ರಕರಣವಾಗಿದೆ” ಎಂದು ತಿಳಿಸಿದರು.

“ಈ ಹಂತದಲ್ಲಿ ಸಾಕ್ಷ್ಯಗಳನ್ನು ತೂಗಿನೋಡುವುದು ಅಥವಾ ತಪ್ಪಿತಸ್ಥರೆಂದು ಘೋಷಿಸುವುದು ನ್ಯಾಯಾಲಯದ ಕೆಲಸವಲ್ಲ. ಲಭ್ಯವಿರುವ ಅಂಶಗಳು ಮೇಲ್ನೋಟಕ್ಕೆ ಪ್ರಕರಣವನ್ನು ದಾಖಲಿಸಲು ಪೂರಕವಾಗಿವೆಯೇ ಮತ್ತು ವಿಚಾರಣೆ ಮುಂದುವರಿಸುವ ಅಗತ್ಯವಿದೆಯೇ ಎಂಬುದು ಮಾತ್ರ ಇಲ್ಲಿನ ಪ್ರಶ್ನೆಯಾಗಿದೆ. ಎಚ್ಚರಿಕೆಯಿಂದ ಪರಿಶೀಲಿಸಿದಾಗ ಇದಕ್ಕೆ ಉತ್ತರ ಖಂಡಿತವಾಗಿಯೂ ಹೌದು ಎಂದೇ ಸಿಗುತ್ತದೆ. ಈ ಹಂತದಲ್ಲಿ ನಡಾವಳಿಗಳನ್ನು ರದ್ದುಗೊಳಿಸುವುದು ಒಂದು ಗಂಭೀರವಾದ ಪ್ರಾಸಿಕ್ಯೂಷನ್ ಅನ್ನು ಅದರ ಶೈಶವಾವಸ್ಥೆಯಲ್ಲೇ ಚಿವುಟಿ ಹಾಕಿದಂತಾಗುತ್ತದೆ ಮತ್ತು ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿರುವ ಪ್ರಕರಣದಲ್ಲಿ ಆರೋಪಿಗಳಿಗೆ ವಿನಾಯಿತಿ ನೀಡಿದಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page