Saturday, October 25, 2025

ಸತ್ಯ | ನ್ಯಾಯ |ಧರ್ಮ

24 ಕೋಟಿ ಟೆಂಡರ್ ಅನುಮೋದನೆ, ಹಾಸನ ನಗರದ ಸರ್ವೋತ ಅಭಿವೃದ್ಧಿಗೆ

ಪಾಲಿಕೆಯ ಸರ್ವಾನುಮತ ಅನುಮೋದನೆ : ಮೇಯರ್ ಗಿರೀಶ್ ಸಂತೋಷ

ಹಾಸನ : ನಗರದ ಸರ್ವೋತ್ಮುಖ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹಾದಿ ತೆರೆದ ಮಹಾನಗರ ಪಾಲಿಕೆಯಾಗಿದ್ದು, ಕಳೆದ ಒಂದು ತಿಂಗಳಲ್ಲಿ ನಡೆದ ಎರಡು ಪ್ರಮುಖ ಸಭೆಗಳಲ್ಲಿ ಒಟ್ಟು ಸುಮಾರು ೨೪ ಕೋಟಿಯ ಟೆಂಡರ್‌ಗಳಿಗೆ ಸರ್ವಾನುಮತ ಅನುಮೋದನೆ ನೀಡಿದೆ. ಈ ನಿರ್ಧಾರ ಮುಂದಿನ ಹಾಸನದ ಮೂಲಸೌಕರ್ಯ, ನಾಗರಿಕ ಸೌಲಭ್ಯಗಳು ಮತ್ತು ನಗರಾಭಿವೃದ್ಧಿಯ ಹೊಸ ದಿಕ್ಕು ನಿರ್ಧರಿಸುವಂತಾಗಿದೆ ಎಂದು ಮೇಯರ್ ಗಿರೀಶ್ ಚನ್ನವೀರಪ್ಪ ಹೇಳಿದರು. ನಗರದ ಸಂತೇಪೇಟೆ ವೃತ್ತದ ಬಳಿ ಇರುವ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಶುಕ್ರವಾರದಂದು ನಡೆದ ಮಹಾನಗರ ಪಾಲಿಕೆಯ ವಿಶೇಷ ಸಭೆಯಲ್ಲಿ ಮೇಯರ್ ಅವರ ಅಧ್ಯಕ್ಷತೆ ಸಭೆಯಲ್ಲಿ ಹಾಸನ ನಗರದ ಅಭಿವೃದ್ಧಿ ಸಂಬಂಧಿತ ಹಲವು ಪ್ರಸ್ತಾಪಗಳಿಗೆ ಚರ್ಚೆ ನಡೆದಿದ್ದು, ಎಲ್ಲ ಸದಸ್ಯರೂ ಸರ್ವಾನುಮತದಿಂದ ಅನುಮೋದನೆ ನೀಡಿದರು.

ಸಭೆಯ ನಂತರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮೇಯರ್ ಗಿರೀಶ್ ಚನ್ನವೀರಪ್ಪ ಅವರು, 2025ರ ಫೆಬ್ರವರಿ 7 ರಂದು ಮಾಜಿ ಮೇಯರ್ ಚಂದ್ರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಲ್ಲಿ 6 ಕೋಟಿಯ 37 ಕಾಮಗಾರಿಗಳಿಗೆ ಅನುಮೋದನೆ ದೊರೆತಿತ್ತು. ಅದೇ ರೀತಿ, ಈಗ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 12ರಿಂದ 17 ಕೋಟಿಯ89 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಈ ಎರಡು ಪ್ರಕ್ರಿಯೆಗಳ ಒಟ್ಟು ಮೊತ್ತ ಸುಮಾರು 24 ಕೋಟಿ ಆಗಿದೆ. ಈ ಕಾಮಗಾರಿಗಳು ಹಾಸನ ನಗರದ ಮೂಲಭೂತ ಸೌಕರ್ಯಗಳ ಬಲಪಡಿಸಲು ಅತ್ಯಂತ ಅಗತ್ಯ ಎಂದರು. ಈ ಯೋಜನೆಗಳು ಕೇವಲ ಕಾಗದದ ಮಟ್ಟದಲ್ಲಿ ಉಳಿಯದೇ, ನೇರವಾಗಿ ನೆಲಮಟ್ಟದಲ್ಲಿ ಜಾರಿಗೆ ಬರಲಿವೆ. ಹಾಸನ ನಗರದ ಒಳಚರಂಡಿ ವ್ಯವಸ್ಥೆ, ರಸ್ತೆಗಳ ದುರಸ್ತಿಗೊಳಿಸುವುದು, ಬೀದಿ ಬೆಳಕು, ಕುಡಿಯುವ ನೀರಿನ ಪೂರೈಕೆ ಮತ್ತು ಸಾರ್ವಜನಿಕ ಸೌಲಭ್ಯಗಳ ವಿಸ್ತರಣೆ ಸೇರಿದಂತೆ ಅನೇಕ ಪ್ರಮುಖ ಕೆಲಸಗಳಿಗೆ ಈ ನಿಧಿಯನ್ನು ವಿನಿಯೋಗಿಸಲಾಗುತ್ತದೆ. ರಾಜ್ಯ ಸರ್ಕಾರದಿಂದ ಶಾಸಕರ ಕ್ಷೇತ್ರಾಭಿವೃದ್ಧಿಗೆ ೨೫ ಕೋಟಿಗಳ ನಿಧಿ ನೀಡಲಾಗಿದೆ. ಇದರಲ್ಲಿ 6.24 ಕೋಟಿಯನ್ನು ಶಾಸಕರು ಹಾಸನ ಮಹಾನಗರ ಪಾಲಿಕೆಗೆ ಮೀಸಲಿಟ್ಟಿದ್ದಾರೆ. ಈ ಮೊತ್ತವನ್ನು ನಗರಾಭಿವೃದ್ಧಿ ಕೆಲಸಗಳಿಗೆ ಬಳಸಲು ಅಗತ್ಯವಾದ ಅನುಮೋದನೆ ದೊರೆತಿದೆ. ಹಾಸನದ ಅಭಿವೃದ್ಧಿಗೆ ಶಾಸಕರು ತೋರಿರುವ ಬದ್ಧತೆಗೆ ಮಹಾನಗರ ಪಾಲಿಕೆಯ ಪರವಾಗಿ ಹಾಗೂ ಹಾಸನ ಜನರ ಪರವಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ನಗರದ ಅಭಿವೃದ್ಧಿ ಕೆಲಸಗಳು ಎಲ್ಲರ ಸಹಭಾಗಿತ್ವದಿಂದ ವೇಗ ಪಡೆದುಕೊಳ್ಳಲಿವೆ. ನಾವು ರಾಜಕೀಯ ಭೇದಗಳನ್ನು ಮರೆತು ಹಾಸನದ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಟೆಂಡರ್ ಅನುಮೋದನೆ ಹಾಸನದ ಮುಂದಿನ ದಶಕದ ಅಭಿವೃದ್ಧಿಗೆ ದಿಕ್ಕು ತೋರಲಿದೆ ಎಂದು ಅವರು ಹೇಳಿದರು

ಸಭೆಯಲ್ಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ನಗರದ ವಿಸ್ತಾರ, ಸಂಚಾರ ವ್ಯವಸ್ಥೆ, ಕಸದ ನಿರ್ವಹಣೆ ಮತ್ತು ಹಾಸನದ ಸಾಂಸ್ಕೃತಿಕ ಮೌಲ್ಯ ಉಳಿಸಿಕೊಳ್ಳುವ ಕೆಲಸಗಳಲ್ಲಿ ಹೆಚ್ಚಿನ ಗಮನ ನೀಡಬೇಕೆಂದು ಸಲಹೆ ನೀಡಿದರು. ಮೇಯರ್ ಅವರು ಎಲ್ಲ ಸಲಹೆಗಳನ್ನು ಗಮನಕ್ಕೆ ತೆಗೆದುಕೊಂಡು, ಯೋಜನೆಗಳನ್ನು ಕ್ರಮಬದ್ಧವಾಗಿ ಜಾರಿಗೊಳಿಸುವ ಭರವಸೆ ನೀಡಿದರು.ಸಭೆಯಲ್ಲಿ ಉಪ ಮೇಯರ್ ಹೇಮಾಲತಾ ಕಮಾಲ್ ಕುಮಾರ್, ನಗರಸಭೆ ಆಯುಕ್ತ ಕೃಷ್ಣಗೌಡ, ಇಂಜಿನಿಯರ್ ಪುಟ್ಟಸ್ವಾಮಿ, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page