Home ವಿದೇಶ ಭಾರತೀಯ ವಸ್ತುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ: ಇಂದಿನಿಂದ ಜಾರಿ

ಭಾರತೀಯ ವಸ್ತುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ: ಇಂದಿನಿಂದ ಜಾರಿ

0

ವಾಷಿಂಗ್ಟನ್: ಭಾರತೀಯ ವಸ್ತುಗಳ ಮೇಲೆ ಆಗಸ್ಟ್ 27 (ಬುಧವಾರ) ರಿಂದ ಶೇ 25ರಷ್ಟು ಹೆಚ್ಚುವರಿ ಸುಂಕಗಳನ್ನು ಜಾರಿಗೊಳಿಸುವ ವಿವರಗಳೊಂದಿಗೆ ಅಮೆರಿಕ ಕರಡು ಅಧಿಸೂಚನೆ ಹೊರಡಿಸಿದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 4,800 ಕೋಟಿ ಡಾಲರ್‌ಗಳ (ಸುಮಾರು 4.20 ಲಕ್ಷ ಕೋಟಿ ರೂ.) ಮೌಲ್ಯದ ವಸ್ತುಗಳ ಮೇಲೆ ಈ ಹೆಚ್ಚುವರಿ ಸುಂಕಗಳು ಪರಿಣಾಮ ಬೀರಲಿವೆ.

ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಅಮೆರಿಕಕ್ಕೆ ಪ್ರವೇಶಿಸುವ ಭಾರತೀಯ ವಸ್ತುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕಗಳು ಬೀಳಲಿವೆ. ಅಮೆರಿಕ ಈಗಾಗಲೇ ವಿಧಿಸಿದ್ದ ಶೇ 25ರಷ್ಟು ಸುಂಕ ಆಗಸ್ಟ್ 7ರಂದು ಜಾರಿಗೆ ಬಂದಿದ್ದು, ರಷ್ಯಾದಿಂದ ಕಚ್ಚಾ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತಿರುವ ಕಾರಣ ದಂಡವಾಗಿ ಟ್ರಂಪ್ ಸರ್ಕಾರ ಮತ್ತೊಂದು ಶೇ 25ರಷ್ಟು ಸುಂಕವನ್ನು ವಿಧಿಸಿದೆ.

ಈ ಹೆಚ್ಚುವರಿ ಸುಂಕವು ಬುಧವಾರದಿಂದ ಜಾರಿಗೆ ಬರಲಿದೆ. ಆಗಸ್ಟ್ 27ರ ಮುಂಜಾನೆ (ಆಗಸ್ಟ್ 26 ಮಧ್ಯರಾತ್ರಿ ನಂತರ) 12.01ರಿಂದ ಭಾರತೀಯ ವಸ್ತುಗಳ ಮೇಲೆ ಹೆಚ್ಚುವರಿ ಶೇ 25ರಷ್ಟು ಸುಂಕ ಜಾರಿಗೆ ಬರಲಿದೆ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಸೋಮವಾರ ಹೊರಡಿಸಿದ ಕರಡು ಆದೇಶದಲ್ಲಿ ತಿಳಿಸಿದೆ.

ಅಮೆರಿಕದಿಂದ ಭಾರಿ ಸುಂಕಗಳನ್ನು ಎದುರಿಸಲಿರುವ ಕ್ಷೇತ್ರಗಳಲ್ಲಿ ಜವಳಿ, ಬಟ್ಟೆ, ರತ್ನಗಳು, ಆಭರಣಗಳು, ಶೀಗಡಿ, ಚರ್ಮ, ಪಾದರಕ್ಷೆಗಳು, ಪ್ರಾಣಿ ಉತ್ಪನ್ನಗಳು, ರಾಸಾಯನಿಕಗಳು, ವಿದ್ಯುತ್ ಮತ್ತು ಯಾಂತ್ರಿಕ ಯಂತ್ರಗಳು ಸೇರಿವೆ. ಈ ಹೆಚ್ಚುವರಿ ಸುಂಕದ ಹೊರೆ ಬೀಳದ ಕ್ಷೇತ್ರಗಳಲ್ಲಿ ಔಷಧ, ಇಂಧನ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸೇರಿವೆ.

ಮಧ್ಯರಾತ್ರಿಯಿಂದಲೇ ಜಾರಿ

ಆಗಸ್ಟ್ 27ರ ಮುಂಜಾನೆ 12.01ರೊಳಗೆ ಲೋಡಿಂಗ್ ಆಗಿ ಅಮೆರಿಕಕ್ಕೆ ಹೊರಟಿರುವ ಹಡಗಿನಲ್ಲಿರುವ ಭಾರತೀಯ ವಸ್ತುಗಳಿಗೆ ಹೊಸ ಶೇ 50ರಷ್ಟು ಸುಂಕದಿಂದ ವಿನಾಯಿತಿ ಇರುತ್ತದೆ. ಆದರೆ, ಆ ವಸ್ತುಗಳು ದೇಶದಲ್ಲಿ ಬಳಕೆಗಾಗಿ ಅಥವಾ ಗೋದಾಮಿನಿಂದ ಬಳಕೆಗೆ ಹೊರಟಿವೆ ಎಂದು ಆಮದುದಾರರು ಅಮೆರಿಕದ ಕಸ್ಟಮ್ಸ್‌ಗೆ ಪ್ರಮಾಣೀಕರಿಸಬೇಕಾಗುತ್ತದೆ ಎಂದು ಕರಡು ಆದೇಶ ವಿವರಿಸಿದೆ. ಅಮೆರಿಕದಿಂದ ಶೇ 50ರಷ್ಟು ಆಮದು ಸುಂಕವನ್ನು ಎದುರಿಸುತ್ತಿರುವ ದೇಶಗಳಲ್ಲಿ ಭಾರತದೊಂದಿಗೆ ಬ್ರೆಜಿಲ್ ಕೂಡ ಇದೆ.

ಭಾರತಕ್ಕೆ ಸೇರಿದ ಸುಮಾರು 4,820 ಕೋಟಿ ಡಾಲರ್‌ಗಳ ಮೌಲ್ಯದ ವಸ್ತುಗಳ ಮೇಲೆ ಹೆಚ್ಚುವರಿ ಸುಂಕದ ಹೊರೆ ಬೀಳಲಿದೆ ಎಂದು ವಾಣಿಜ್ಯ ಇಲಾಖೆ ತಿಳಿಸಿದೆ. ಅಮೆರಿಕದ ಈ ಕ್ರಮವನ್ನು ಭಾರತ ಆಗಸ್ಟ್ 6ರಂದು “ಅನುಚಿತ, ಅನ್ಯಾಯ ಮತ್ತು ಅವಿವೇಕದ ಕ್ರಮ” ಎಂದು ಕರೆದಿತ್ತು.

ಈ ಹೆಚ್ಚುವರಿ ಸುಂಕಗಳ ನಂತರ ಅಮೆರಿಕದಲ್ಲಿ ಭಾರತದ ಸ್ಪರ್ಧಿಗಳಾದ ಇತರ ದೇಶಗಳಿಗೆ ಅನುಕೂಲವಾಗಿದೆ. ಭಾರತದ ಸ್ಪರ್ಧಿಗಳಾದ ಮ್ಯಾನ್ಮಾರ್ (ಶೇ 40), ಥೈಲ್ಯಾಂಡ್, ಕಾಂಬೋಡಿಯಾ (ತಲಾ ಶೇ 36), ಬಾಂಗ್ಲಾದೇಶ (ಶೇ 35), ಇಂಡೋನೇಷ್ಯಾ (ಶೇ 32), ಚೀನಾ ಮತ್ತು ಶ್ರೀಲಂಕಾ (ತಲಾ ಶೇ 30) ಒಟ್ಟು ಸುಂಕಗಳನ್ನು ಎದುರಿಸುತ್ತಿವೆ.

ಹೆಚ್ಚುವರಿ ಸುಂಕ ಬೀಳಲಿರುವ ಕ್ಷೇತ್ರಗಳು:

  • ಜವಳಿ
  • ಬಟ್ಟೆಗಳು
  • ರತ್ನಗಳು
  • ಆಭರಣಗಳು
  • ಶೀಗಡಿ
  • ಚರ್ಮ
  • ಪಾದರಕ್ಷೆಗಳು
  • ಪ್ರಾಣಿ ಉತ್ಪನ್ನಗಳು
  • ಹಾಸುಗಳು
  • ಪೀಠೋಪಕರಣಗಳು
  • ಆಟೋಮೊಬೈಲ್‌ಗಳು
  • ಆಹಾರ ಮತ್ತು ತಂಪು ಪಾನೀಯಗಳು
  • ರಾಸಾಯನಿಕಗಳು
  • ವಿದ್ಯುತ್ ಮತ್ತು ಯಾಂತ್ರಿಕ ಯಂತ್ರಗಳು

ಹೆಚ್ಚುವರಿ ಸುಂಕ ಬೀಳದ ಕ್ಷೇತ್ರಗಳು:

  • ಔಷಧ
  • ಸ್ಮಾರ್ಟ್‌ಫೋನ್‌ಗಳು
  • ಉಕ್ಕು
  • ಇಂಧನ ಉತ್ಪನ್ನಗಳು
  • ಎಲೆಕ್ಟ್ರಾನಿಕ್ ವಸ್ತುಗಳು

You cannot copy content of this page

Exit mobile version