Home ರಾಜಕೀಯ ಬಿಜೆಪಿ ವಾಷಿಂಗ್‌ ಮಷೀನ್:‌ ಬಿಜೆಪಿ ಸೇರಿದ 25 ಭ್ರಷ್ಟಾಚಾರ ಆರೋಪಿ ವಿಪಕ್ಷ ನಾಯಕರಲ್ಲಿ 23 ಮಂದಿಗೆ...

ಬಿಜೆಪಿ ವಾಷಿಂಗ್‌ ಮಷೀನ್:‌ ಬಿಜೆಪಿ ಸೇರಿದ 25 ಭ್ರಷ್ಟಾಚಾರ ಆರೋಪಿ ವಿಪಕ್ಷ ನಾಯಕರಲ್ಲಿ 23 ಮಂದಿಗೆ ರಿಲೀಫ್

0

ಹೊಸದೆಹಲಿ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರ ಪಾಲಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ‘ವಾಷಿಂಗ್ ಮೆಷಿನ್’ ನಂತೆ ವರ್ತಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಮಾಧ್ಯಮ ವರದಿಯೊಂದು ಪುಷ್ಟಿ ನೀಡಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, 2014ರಿಂದ, ಕೇಂದ್ರೀಯ ಸಂಸ್ಥೆಯಿಂದ ತನಿಖೆಗೆ ಒಳಪಟ್ಟಿರುವ ಇತರ ಪಕ್ಷಗಳಿಗೆ ಸೇರಿದ 25 ನಾಯಕರು ಬಿಜೆಪಿ ಸೇರಿದ್ದಾರೆ. ಇನ್ನೂ ಕುತೂಹಲಕಾರಿ ಅಂಶವೆಂದರೆ ಈ 25 ನಾಯಕರ ಪೈಕಿ 23 ಮಂದಿ ತನಿಖೆ ಎದುರಿಸುತ್ತಿದ್ದ ಪ್ರಕರಣಗಳಲ್ಲಿ ರಿಲೀಫ್ ಪಡೆದಿದ್ದಾರೆ. ಮೂವರು ನಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ಸಂಪೂರ್ಣ ಮುಕ್ತಾಯಗೊಂಡಿದ್ದು, ಉಳಿದ 20 ಮಂದಿಯ ವಿಷಯದಲ್ಲಿ ತನಿಖೆ ಸ್ಥಗಿತಗೊಂಡಿದೆ ಅಥವಾ ಆಮೆ ಗತಿಯಲ್ಲಿದೆ.

ಪತ್ರಿಕೆಯ ಪ್ರಕಾರ, ‘ಈ 25 ಪ್ರಕರಣಗಳಲ್ಲಿ, ಮಾಜಿ ಕಾಂಗ್ರೆಸ್ ಸಂಸದೆ ಜ್ಯೋತಿ ಮಿರ್ಧಾ ಮತ್ತು ಟಿಡಿಪಿ ಮಾಜಿ ಸಂಸದ ವೈಎಸ್ ಚೌಧರಿ ಅವರ ಎರಡು ಪ್ರಕರಣಗಳು ಮಾತ್ರ ಅಂತಹವು, ಇದರಲ್ಲಿ ಅವರು ಬಿಜೆಪಿಗೆ ಸೇರಿದ ನಂತರವೂ ಇಡಿ ಪ್ರಕರಣವನ್ನು ಸಡಿಲಿಸಿರುವ ಯಾವುದೇ ಪುರಾವೆಗಳಿಲ್ಲ.

ಈ ವರದಿಯ ಪ್ರಕಾರ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತಮ್ಮ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ನಾಯಕರಲ್ಲಿ ಕಾಂಗ್ರೆಸ್‌ನ ಹತ್ತು, ನ್ಯಾಷನಲಿಸ್ಟ್ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ನಾಲ್ವರು, ತೃಣಮೂಲ ಕಾಂಗ್ರೆಸ್‌ನ ಮೂವರು, ತೆಲುಗು ದೇಶಂ ಪಕ್ಷದ ಇಬ್ಬರು ಮತ್ತು ಸಮಾಜವಾದಿ ಪಕ್ಷ ಮತ್ತು ವೈಎಸ್‌ಆರ್‌‌ ಕಾಂಗ್ರೆಸ್ ಪಕ್ಷದ ತಲಾ ಒಬ್ಬರು ಸೇರಿದ್ದಾರೆ.

‘ಸಾರ್ವತ್ರಿಕ ಚುನಾವಣೆಗೆ ಕೆಲವು ವಾರಗಳ ಮೊದಲು ತಮ್ಮ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಆರು ನಾಯಕರು ಈ ಪಟ್ಟಿಯಲ್ಲಿದ್ದಾರೆ’ ಎಂದು ವರದಿ ಹೇಳುತ್ತದೆ.

ಎಕ್ಸ್‌ಪ್ರೆಸ್‌ನ ಈ ವರದಿಯಲ್ಲಿ, ಕಳೆದ ವರ್ಷಗಳಲ್ಲಿ ಪಕ್ಷ ಬದಲಾಯಿಸಿದ ನಾಯಕರ ಹೆಸರುಗಳಲ್ಲಿ ಅಜಿತ್ ಪವಾರ್, ಪ್ರಫುಲ್ ಪಟೇಲ್, ಅಶೋಕ್ ಚವಾಣ್, ಹಿಮಂತ ಬಿಸ್ವಾ ಶರ್ಮಾ, ಸುವೇಂದು ಅಧಿಕಾರಿ, ಪ್ರತಾಪ್ ಸರ್ನಾಯಕ್, ಹಸನ್ ಮುಶ್ರಿಫ್, ಭಾವನಾ ಗವಾಲಿ ಮತ್ತು ಇತರ ಹಲವು ನಾಯಕರ ಹೆಸರುಗಳು ಸೇರಿವೆ.

ಕೇಂದ್ರೀಯ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ನರೇಂದ್ರ ಮೋದಿ ಸರ್ಕಾರದ ‘ದುರುಪಯೋಗ’ದ ವಿರುದ್ಧ ವಿರೋಧ ಪಕ್ಷಗಳು ಕಳೆದ ಕೆಲವು ವರ್ಷಗಳಿಂದ ಪದೇ ಪದೇ ಧ್ವನಿ ಎತ್ತುತ್ತಿವೆ.

ಇತ್ತೀಚೆಗೆ, ಈ ವರ್ಷ 2024ರ ಲೋಕಸಭಾ ಚುನಾವಣೆಯ ಮೊದಲು, ಎರಡು ರಾಜ್ಯಗಳ ಮುಖ್ಯಮಂತ್ರಿಗಳಾದ ಹೇಮಂತ್ ಸೋರೆನ್ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದೆ. ಇನ್ನು ಹಲವು ನಾಯಕರ ಮೇಲೂ ದಾಳಿ ನಡೆಸಲಾಗಿದ್ದು, ಅವರನ್ನು ವಿಚಾರಣೆಗೆ ಕರೆಯಲಾಗಿದೆ.

ಬಿಜೆಪಿಯು ತನ್ನದು ‘ಸ್ವಚ್ಛ’ ಪಕ್ಷ ಮತ್ತು ಇತರ ಎಲ್ಲಾ ಪಕ್ಷಗಳು ಭ್ರಷ್ಟ ಎಂದು ಹೇಳಿಕೊಳ್ಳುತ್ತಿದೆ, ಆದರೆ ಇತ್ತೀಚಿನ ಚುನಾವಣಾ ಬಾಂಡ್ ಬಹಿರಂಗಗೊಂಡ ನಂತರ, ಪಕ್ಷದ ಈ ಕ್ಲೇಮ್ ಗಂಭೀರ ಅನುಮಾನಕ್ಕೆ ಒಳಗಾಗಿದೆ. ಪಕ್ಷವು ಆ ನಾಯಕರನ್ನು ಟಿಕೆಟ್ ನೀಡುವ ಮತ್ತು ‘ಸ್ಟಾರ್ ಕ್ಯಾಂಪೇನರ್’ಗಳಾಗಿ ಮಾಡುವ ಮೂಲ ಬಹಿರಂಗವಾಗಿ ಪುರಸ್ಕರಿಸುತ್ತಿದೆ.

ಇತ್ತೀಚಿನ ತಿಂಗಳುಗಳಲ್ಲಿ ಪಕ್ಷ ಬದಲಿಸಿದ ನಾಯಕರ ರಾಜ್ಯವಾರು ಪಟ್ಟಿಯನ್ನೂ ದಿ ವೈರ್ ಪ್ರಕಟಿಸಿತ್ತು. ಅಂದಿನಿಂದ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ಪ್ರಫುಲ್ ಪಟೇಲ್ ಅವರಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಕ್ಲೋಸಿಂಗ್ ವರದಿಯನ್ನು ಸಲ್ಲಿಸಿದೆ. ಜೊತೆಗೆ ಅಕ್ರಮ ಗಣಿಗಾರಿಕೆ ಹಗರಣದ ಆರೋಪಿ ಜಿ. ಜನಾರ್ದನರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇಡಿ ಪ್ರಕರಣಗಳಲ್ಲಿ ಶೇ.95ರಷ್ಟು ಪ್ರತಿಪಕ್ಷ ನಾಯಕರ ವಿರುದ್ಧವೇ ಇವೆ ಎಂಬುದು ಮತ್ತೊಂದು ತನಿಖೆಯಿಂದ ತಿಳಿದುಬಂದಿದೆ.

2014 ಮತ್ತು ಸೆಪ್ಟೆಂಬರ್ 2022ರ ನಡುವೆ 121 ಪ್ರಮುಖ ನಾಯಕರು ಇಡಿ ರಾಡಾರ್‌ ಅಡಿಯಲ್ಲಿ ಬಂದಿದ್ದಾರೆ, ಅವರಲ್ಲಿ 115 ಮಂದಿ ವಿರೋಧ ಪಕ್ಷದ ನಾಯಕರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಬಹಿರಂಗಪಡಿಸಿದೆ. ಅಂದಿನಿಂದ ಈ ಪಟ್ಟಿ ಬೆಳೆಯುತ್ತಲೇ ಇದೆ.

You cannot copy content of this page

Exit mobile version