Saturday, November 15, 2025

ಸತ್ಯ | ನ್ಯಾಯ |ಧರ್ಮ

ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವು; ಸಚಿವ ಈಶ್ವರ್ ಖಂಡ್ರೆಯಿಂದ ತನಿಖೆಗೆ ಆದೇಶ

ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಎರಡು ದಿನಗಳಲ್ಲಿ ಒಟ್ಟು 28 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿವೆ. ಏಕಾಏಕಿ ಇಷ್ಟು ಕೃಷ್ಣಮೃಗಗಳು ಒಂದೇ ಬಾರಿ ಸತ್ತಿದ್ದು ಬ್ಯಾಕ್ಟೀರಿಯಾ ಸೋಂಕು ಇದಕ್ಕೆ ಕಾರಣವಾಗಿರಬಹುದು ಎಂಬ ಅನುಮಾನವಿದೆ, ಆದರೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮೃಗಾಲಯದ ಅಧಿಕಾರಿ ನಾಗರಾಜ್ ಬಾಳೆಹೊಸೂರು ಹೇಳಿದ್ದಾರೆ.

ಮೊದಲ ದಿನ 20 ಹಾಗೂ ಎರಡನೇ ದಿನ 8 ಮೃಗಗಳು ಮೃತಪಟ್ಟಿದ್ದು, ಸತ್ತ ಪ್ರಾಣಿಗಳಿಗೆ ಮರಣೋತ್ತರ ಪರೀಕ್ಷೆ ನೆರವೇರಿಸಲಾಗಿದೆ. ಮಾದರಿಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನಕ್ಕೆ ಕಳುಹಿಸಲಾಗಿದೆ. ವರದಿ ಬರುವವರೆಗೆ ನಿಜವಾದ ಕಾರಣ ನಿರ್ಧಾರವಾಗುವುದಿಲ್ಲ.

ಈ ಘಟನೆಯ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಸಾಂಕ್ರಾಮಿಕ ರೋಗದಿಂದ ಸಾವಿನ ಸಾಧ್ಯತೆ ಇದೆ. ಹಾಗೆಯೇ ಇತರ ಪ್ರಾಣಿಗಳಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸಾವುಗಳು ಕಲುಷಿತ ನೀರು ಅಥವಾ ಆಹಾರದಿಂದ ನಡೆದಿವೆಯೇ, ಅಥವಾ ಸಾಕು ಪ್ರಾಣಿಗಳಿಂದ ಸೋಂಕು ಹರಡಿದೆಯೇ ಎನ್ನುವುದನ್ನು ಪತ್ತೆಹಚ್ಚಲು ತಜ್ಞರ ಸಮಿತಿಯನ್ನು ರಚಿಸುವಂತೆ ಸಚಿವರು ಸೂಚಿಸಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿತೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಈಶ್ವರ್ ಖಂಡ್ರೆ ಎಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page