Thursday, August 7, 2025

ಸತ್ಯ | ನ್ಯಾಯ |ಧರ್ಮ

ಉತ್ತರಕಾಶಿಯ ಪ್ರವಾಹ: 28 ಕೇರಳ ಪ್ರವಾಸಿಗರು ನಾಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಜಲಪ್ರಳಯದ ನಂತರ, ಎರಡನೇ ದಿನವಾದ ಬುಧವಾರವೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಈ ದುರಂತದಲ್ಲಿ ಇದುವರೆಗೆ ಐವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಉತ್ತರಕಾಶಿಯಲ್ಲಿ ದಿಢೀರ್ ಪ್ರವಾಹ ಉಂಟಾದ ನಂತರ ಕೇರಳಕ್ಕೆ ಸೇರಿದ 28 ಜನರ ಪ್ರವಾಸಿಗರ ತಂಡದ ಸುಳಿವು ಪತ್ತೆಯಾಗಿಲ್ಲ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ 28 ಜನರಲ್ಲಿ 20 ಮಂದಿ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕೇರಳಿಗರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಉಳಿದ 8 ಮಂದಿ ಕೇರಳದ ವಿವಿಧ ಜಿಲ್ಲೆಗಳಿಗೆ ಸೇರಿದವರು ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಸುಖಿ ಟಾಪ್ ಪ್ರದೇಶದಲ್ಲಿಯೂ ದಿಢೀರ್ ಪ್ರವಾಹ ಉಂಟಾಗಿತ್ತು. ಕೆಸರು ಪ್ರವಾಹದಿಂದ ಹೊರಬರಲು ಆರ್ತನಾಥ ಮಾಡುತ್ತಿದ್ದ ಜನರು, ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರವಾಹದಲ್ಲಿ ಸಿಲುಕಿದ ತಮ್ಮ ಆಪ್ತರನ್ನು ಜೋರಾಗಿ ಕರೆಯುತ್ತಿದ್ದ ದೃಶ್ಯಗಳು ಅಲ್ಲಿನ ಪರಿಸ್ಥಿತಿಯನ್ನು ಬಿಂಬಿಸುತ್ತವೆ. ಧರಾಲಿ ಗ್ರಾಮದಲ್ಲಿ ಭೂಕುಸಿತದಡಿಯಲ್ಲಿ ಸಿಲುಕಿ ಮೃತಪಟ್ಟಿದ್ದ ಮತ್ತೊಬ್ಬ ವ್ಯಕ್ತಿಯ ಮೃತದೇಹವನ್ನು ಬುಧವಾರ ರಕ್ಷಣಾ ತಂಡಗಳು ಹೊರತೆಗೆದಿದ್ದು, ಇದರೊಂದಿಗೆ ಮೃತರ ಸಂಖ್ಯೆ ಐದಕ್ಕೆ ಏರಿದೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ವಕ್ತಾರ ಕಮಲೇಶ್ ಕಮಲ್ ಬುಧವಾರ ಮಾತನಾಡಿ, 100ಕ್ಕೂ ಹೆಚ್ಚು ಜನರು ಇನ್ನೂ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲು ಕ್ರಮಗಳು ಮುಂದುವರಿದಿವೆ ಎಂದು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ರಿಷಿಕೇಶ-ಉತ್ತರಕಾಶಿ ಹೆದ್ದಾರಿ ಹಾನಿಗೊಳಗಾಗಿದ್ದು, ರಸ್ತೆಯಲ್ಲಿನ ಅಡೆತಡೆಗಳನ್ನು ತೆರವುಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್ ಡಿಐಜಿ ಮೊಹ್ಸೆನ್ ಶಾಹೇದಿ ಹೇಳಿದ್ದಾರೆ. ಹರ್ಸಿಲ್ ಪ್ರದೇಶದಲ್ಲಿ 11 ಸೇನಾ ಸಿಬ್ಬಂದಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 150 ಜನರನ್ನು ರಕ್ಷಿಸಲಾಗಿದೆ ಎಂದು ಶಾಹೇದಿ ಹೇಳಿದ್ದಾರೆ. ಕಿನ್ನೋರ್ ಕೈಲಾಶ್ ಯಾತ್ರಾ ಮಾರ್ಗದಲ್ಲಿ ಸಿಲುಕಿದ್ದ 413 ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page