ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಐದು ಪ್ರಮುಖ ಚುನಾವಣಾ ಭರವಸೆಗಳಲ್ಲಿ ಗೃಹ ಲಕ್ಷ್ಮಿಯೂ ಒಂದು. ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಕುರಿತು ತಮ್ಮ ಬಜೆಟ್ ಭಾಷಣದಲ್ಲಿ ಮಾತನಾಡುತ್ತಾ ಸಿಎಂ ಸಿದ್ದರಾಮಯ್ಯ ಅವರು, “1.33 ಕೋಟಿ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಜನವರಿ ಅಂತ್ಯದವರೆಗೆ 1.17 ಕೋಟಿ ಮಹಿಳೆಯರು ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದು, ಇದುವರೆಗೆ ₹ 11,726 ಕೋಟಿ ರುಪಾಯಿ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿದೆ. 2024-25ನೇ ಸಾಲಿನಲ್ಲಿ ₹ 28,608 ಕೋಟಿ ಒದಗಿಸಲಾಗುವುದು. ಇದು ಕುಟುಂಬ ನಿರ್ವಹಣೆಗೆ ಹಾಗೂ ಆದಾಯಕ್ಕೆ ಕಾರಣವಾಗುತ್ತದೆ,” ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ 15ನೇ ಬಜೆಟ್ ಭಾಷಣದಲ್ಲಿ, ತಮ್ಮ ಸರ್ಕಾರದ ಭರವಸೆಗಳನ್ನು ಟೀಕಿಸಿದ್ದಕ್ಕಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. “ಖಾತ್ರಿ ಯೋಜನೆಗಳ ಮೇಲೆ ನನಗೆ ನಂಬಿಕೆಯಿದೆ, ಕೇಂದ್ರವು ವಿಫಲವಾಗಿರುವುದನ್ನು ನಾವು ಮಾಡಿದ್ದೇವೆ,” ಎಂದು ಅವರು ಹೇಳಿದರು.
“ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸುವಾಗ, 14% ರಷ್ಟು ಬೆಳವಣಿಗೆಯಾಗುತ್ತದೆ ಮತ್ತು ಆದಾಯದಲ್ಲಿ ಕೊರತೆಯಾದರೆ ರಾಜ್ಯಗಳಿಗೆ ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ತೋರಿಸಲಾಗಿರುವ 14% ಬೆಳವಣಿಗೆಯಲ್ಲಿ, 2017 ರಿಂದ 2023-24 ರವರೆಗೆ GST ತೆರಿಗೆ ಸಂಗ್ರಹವು 4,92,296 ಕೋಟಿ ರುಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕೇವಲ ₹ 3,26,764 ಕೋಟಿ GST ಆದಾಯವನ್ನು ಸಂಗ್ರಹಿಸಲಾಗಿದೆ ಮತ್ತು 1,65,532 ಕೋಟಿ ರುಪಾಯಿ ಶಾರ್ಟ್‌ಫಾಲ್ ಆಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ₹ 1,06,258 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದೆ, ಆದ್ದರಿಂದ ಕಳೆದ 7 ವರ್ಷಗಳಲ್ಲಿ ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ₹ 59,274 ಕೋಟಿ ನಷ್ಟವಾಗಿದೆ,” ಎಂದು ಆರೋಪಿಸಿದ್ದಾರೆ.