ನವದೆಹಲಿ: ಕಳೆದ ವರ್ಷ ಅಂಗೀಕರಿಸಿದ ಮೂರು ಕ್ರಿಮಿನಲ್ ಕಾನೂನುಗಳನ್ನು ಮುಂದೂಡುವಂತೆ ಒತ್ತಾಯಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಪತ್ರ ಬರೆದಿದ್ದು, ಹೊಸದಾಗಿ ಜಾರಿಗೆ ತಂದ ಮೂರು ಕ್ರಿಮಿನಲ್ ಕಾನೂನುಗಳ ಅನುಷ್ಠಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ‘ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎ) 2023, ದಿ. ಭಾರತೀಯ ಸಾಕ್ಷಿ ಅಧಿನಿಯಮ್ (ಬಿಎಸ್‌ಎ) 2023, ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) 2023’ ಹೊಸ ಕಾನೂನುಗಳ ಅನುಷ್ಠಾನವನ್ನು ಸರಿಯಾದ ಚರ್ಚೆಯಿಲ್ಲದೇ ಮಾಡುವುದು ಬೇಡ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ನಿರ್ಣಾಯಕ ಮಸೂದೆಗಳನ್ನು ಕಳೆದ ವರ್ಷ ಡಿಸೆಂಬರ್ 20 ರಂದು ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ಸರಿಯಾದ ಚರ್ಚೆಯಿಲ್ಲದೆ ಏಕಪಕ್ಷೀಯವಾಗಿ ಅಂಗೀಕರಿಸಲಾಗಿದೆ. ಲೋಕಸಭೆಯ ಸುಮಾರು 100 ಸದಸ್ಯರನ್ನು ಅಮಾನತುಗೊಳಿಸಿ, ಆ ದಿನ ಉಭಯ ಸದನಗಳ ಒಟ್ಟು 146 ಸಂಸದರನ್ನು ಸಂಸತ್ತಿನಿಂದ ಹೊರಹಾಕಿದ ನಂತರ ಇವುಗಳನ್ನು ಅಂಗೀಕರಿಸಲಾಯಿತು ಎಂದು ಮಮತಾ ಆರೋಪಿಸಿದ್ದಾರೆ.
ಮಸೂದೆಗಳ ಅಂಗೀಕಾರವನ್ನು “ಪ್ರಜಾಪ್ರಭುತ್ವದ ಕರಾಳ ಸಮಯದಲ್ಲಿ ನಡೆದ ಸರ್ವಾಧಿಕಾರಿ ಕೃತ್ಯ” ಎಂದ ಅವರು ಕರೆದಿದ್ದಾರೆ. “ನಿಮ್ಮ ಗೌರವಾನ್ವಿತ ಕಚೇರಿಯು ಅನುಷ್ಠಾನದ ದಿನಾಂಕದ ಸ್ವಲ್ಪ ದಿನಗಳವರೆಗೆ ಮುಂದೂಡಬೇಕು. ಹೊಸದಾಗಿ ಚುನಾಯಿತವಾದ ಸಂಸತ್ತಿನ ಮುಂದೆ ಹೊಸ ಚರ್ಚೆ ಮತ್ತು ಪರಿಶೀಲನೆಗಾಗಿ ಅವಕಾಶ ಕೊಡಬೇಕು ಎಂದು ಅವರು ಕೋರಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯ್ದೆ – ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್ 21, 2023 ರಂದು ಸಂಸತ್ತಿನ ಅನುಮೋದನೆಯನ್ನು ಪಡೆದುಕೊಂಡಿವೆ. ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಡಿಸೆಂಬರ್ 25 ರಂದು ತಮ್ಮ ಸಮ್ಮತಿಯನ್ನು ನೀಡಿದರು.
ದೇಶದ ಜನರಿಗೆ ಅತ್ಯಂತ ವೇಗವಾಗಿ ನ್ಯಾಯ ಒದಗಿಸುವುದು. ನ್ಯಾಯಾಂಗ ಮತ್ತು ನ್ಯಾಯಾಲಯಗಳ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶವನ್ನು ಈ ಹೊಸ ಕಾನೂನುಗಳು ಹೊಂದಿವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.