Thursday, June 19, 2025

ಸತ್ಯ | ನ್ಯಾಯ |ಧರ್ಮ

ಮುಂದಿನ ಮೂರು ವರ್ಷಗಳಲ್ಲಿ ಮೂರು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳು: ಮಧು ಬಂಗಾರಪ್ಪ

ಬೆಂಗಳೂರು: ಕರ್ನಾಟಕ ಪಬ್ಲಿಕ್‌ ಸ್ಕೂಲ್‌ (ಕೆಪಿಎಸ್‌) ಯಶಸ್ಸಿನ ಹಿನ್ನೆಲೆ, ರಾಜ್ಯದಲ್ಲಿ ಈ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ರಾಜ್ಯದ ಎರಡು ಗ್ರಾಮ ಪಂಚಾಯತ್‌ಗೆ ಒಂದರಂತೆ ಕೆಪಿಎಸ್‌ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಈ ಮೂಲಕ ಮುಂದಿನ ಮೂರು ವರ್ಷದೊಳಗೆ ರಾಜ್ಯದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾರಂಭಿಸಲಾಗುವುದು. ಈಗಿರುವ ಅಂದಾಜು 300 ಕೆಪಿಎಸ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಮಾರ್ಚ್‌ ಅಂತ್ಯದೊಳಗೆ ಪ್ರತ್ಯೇಕವಾಗಿ 500 ಶಾಲೆಗಳನ್ನು ಕೆಪಿಎಸ್‌ಗಳನ್ನಾಗಿ ಮೇಲ್ದರ್ಜೆಗೇರಿಸುವ ಗುರಿ ಇದೆ ಎಂದು ಶಿಕ್ಷಣ ಸಚಿವ ತಿಳಿಸಿದ್ದಾರೆ.

ಕರ್ನಾಟಕ ಸರಕಾರದ ಈ ಮಹತ್ವಕಾಂಕ್ಷಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ಒಟ್ಟು 176 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದ್ದು ಇದರ ಪ್ರಮುಖ ಉದ್ದೇಶ ಸರಕಾರಿ ಶಾಲೆಗಳ ಗುಣಮಟ್ಟವನ್ನು ಉತ್ತಮಪಡಿಸಿ ಶಾಲೆಗಳಲ್ಲಿ ಕನಿಷ್ಠ ಶೇ.75 ರಷ್ಟು ವಿದ್ಯಾರ್ಥಿಗಳು ಶೇ.75 ರಷ್ಟು ನಿಗದಿತ ಕಲಿಕಾ ಸಾಮರ್ಥ್ಯವನ್ನು ಹೊಂದುವುದು ಮತ್ತು ಉಳಿದ ವಿದ್ಯಾರ್ಥಿಗಳೂ ನಿಗದಿಪಡಿಸಿದ ಕಲಿಕಾ ಸಾಮರ್ಥ್ಯಗಳಲ್ಲಿ ಕನಿಷ್ಠ ಶೇ.50 ರಷ್ಟು ಗಳಿಸುವುದಾಗಿದೆ. ಇದರ ಜೊತೆಗೆ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ವಿಶ್ವಾಸಾರ್ಹ ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.

ಪ್ರಾಥಮಿಕಪ್ರೌಢ ಮತ್ತು ಪದವಿಪೂರ್ವ ಸಂಸ್ಥೆಗಳನ್ನು ಆಡಳಿತಾತ್ಮಕಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಒಟ್ಟುಗೂಡಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಉತ್ಕೃಷ್ಟ ದರ್ಜೆಯ ಸೌಲಭ್ಯಗಳನ್ನೊಳಗೊಂಡ ಮಾದರಿ ಶಾಲೆಯನ್ನಾಗಿ ರೂಪಿಸಲು ಈ ಯೋಜನೆಯನ್ನು ಸಂಯೋಜಿಸಲಾಗಿದೆ.

ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಈ ಶಾಲಾ ಪದ್ಧತಿಯು ಸಾಕಷ್ಟು ಜನಪ್ರಿಯತೆ ಪಡೆದಿದ್ದು ಹನ್ನೆರಡನೆಯ ತರಗತಿಯ ತನಕ ಒಂದೇ ಸೂರಿನಡಿ ವಿದ್ಯೆ ದೊರೆಯುವುದರಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಕೂಡಾ ಕಡಿಮೆ ಎನ್ನಲಾಗಿದೆ.

.

Related Articles

ಇತ್ತೀಚಿನ ಸುದ್ದಿಗಳು

You cannot copy content of this page