ಶೃಂಗೇರಿ ಅಂಚೆ ಮತ ಮರು ಎಣಿಕೆ ವಿವಾದ : ಹಾಲಿ ಶಾಸಕ ರಾಜೇಗೌಡರ 318 ಮತಗಳೂ ಅಸಿಂಧು, ಬಾರೀ ಹೈಡ್ರಾಮಾ

ಚಿಕ್ಕಮಗಳೂರು, ಮೇ 3: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗೆ ಬಿದ್ದ 318 ಮತಗಳನ್ನು ಅಸಿಂಧು ಎಂದು ಘೋಷಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೈಕೋರ್ಟ್ ನಿರ್ದೇಶನದಂತೆ ನಡೆದ ಈ ಮರು ಎಣಿಕೆ ಮತ ಟ್ಯಾಂಪರಿಂಗ್ ಆರೋಪಗಳ ನಡುವೆ ಗಮನ ಸೆಳೆದಿದೆ.

ಮರು ಎಣಿಕೆಯಲ್ಲಿ ದೊಡ್ಡ ಬದಲಾವಣೆ
ಒಟ್ಟು 1,822 ಅಂಚೆ ಮತಗಳ ಮರು ಎಣಿಕೆ ನಡೆಸಲಾಗಿದ್ದು, 2023ರ ಮೂಲ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ 692 ಮತಗಳು, ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು. ಆದರೆ ಇತ್ತೀಚಿನ ಮರು ಎಣಿಕೆಯಲ್ಲಿ ಜೀವರಾಜ್ ಅವರಿಗೆ 690 ಮತಗಳು ಲಭಿಸಿದರೆ, ರಾಜೇಗೌಡ ಅವರ ಮತಗಳು 314ಕ್ಕೆ ಕುಸಿದಿವೆ. ಅಂದರೆ 255 ಮತಗಳ ಕುಸಿತ ದಾಖಲಾಗಿದೆ.

ಇದಲ್ಲದೆ, ರಾಜೇಗೌಡ ಅವರಿಗೆ ಬಿದ್ದಿದ್ದ 318 ಮತಗಳನ್ನು ಅಸಿಂಧು ಎಂದು ಘೋಷಿಸಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೂಲ ಎಣಿಕೆಯಲ್ಲಿ 1,543 ಮತಗಳು ಸಿಂಧುವಾಗಿದ್ದು, 279 ಮತಗಳು ತಿರಸ್ಕೃತವಾಗಿದ್ದವು ಎಂದು ತಿಳಿದುಬಂದಿದೆ.

ಅಧಿಕಾರಿಗಳ ಸ್ಪಷ್ಟನೆ
ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮರು ಎಣಿಕೆ ಪ್ರಕ್ರಿಯೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆದಿದೆ ಎಂದು ತಿಳಿಸಿದ್ದಾರೆ. ಮತ ಟ್ಯಾಂಪರಿಂಗ್ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ತಮಗೆ ಅಧಿಕಾರವಿಲ್ಲ ಎಂದು ಅವರು ಹೇಳಿದ್ದಾರೆ.

ಟ್ಯಾಂಪರಿಂಗ್ ಆರೋಪ: ದೂರು ದಾಖಲು
ಮರು ಎಣಿಕೆ ಬಳಿಕ ಮತ ಟ್ಯಾಂಪರಿಂಗ್ ಆರೋಪಗಳು ಕೇಳಿಬಂದಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂವರು ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.

ರಾತ್ರಿ ಬೆಳಗಾಗುವುದರೊಳಗೆ ಉಲ್ಟಾ ಫಲಿತಾಂಶ
2023ರ ಚುನಾವಣೆಯಲ್ಲಿ ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಮರು ಎಣಿಕೆಯಲ್ಲಿ 52 ಮತಗಳ ಹಿನ್ನಡೆ ಎದುರಿಸಿರುವುದು ಅಚ್ಚರಿಯ ಸಂಗತಿಯಾಗಿ ಪರಿಣಮಿಸಿದೆ. ಅಂಚೆ ಮತಗಳಲ್ಲೇ ಕಂಡುಬಂದ ಈ ವ್ಯತ್ಯಾಸ ರಾಜಕೀಯ ವಲಯದಲ್ಲಿ ಅನುಮಾನಗಳನ್ನು ಹುಟ್ಟಿಸಿದೆ.

ಸ್ಟ್ರಾಂಗ್ ರೂಂ ಉಲ್ಲಂಘನೆ ಆರೋಪ
ಕಾಂಗ್ರೆಸ್ ಏಜೆಂಟ್ ಸುಧೀರ್ ಕುಮಾರ್ ಮುರೊಳ್ಳಿ ಅವರು ದಾಖಲಿಸಿದ ದೂರಿನಲ್ಲಿ, ಮತಪತ್ರಗಳನ್ನು ಇರಿಸಿದ್ದ ಸ್ಟ್ರಾಂಗ್ ರೂಂ ಸರಿಯಾಗಿ ಸೀಲ್ ಮಾಡಲಾಗಿರಲಿಲ್ಲ ಎಂದು ಆರೋಪಿಸಲಾಗಿದೆ. ಟ್ರಂಕ್ ಬೀಗ ಕತ್ತರಿಸಿರುವುದು, 257 ಮತಗಳನ್ನು “ಡಬಲ್ ಎಂಟ್ರಿ” ನೆಪದಲ್ಲಿ ಅಮಾನ್ಯಗೊಳಿಸಿರುವುದು ಹಾಗೂ 170 ಮತಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಚಿನ ಆರೋಪ, ತನಿಖೆ ಆರಂಭ
ಅಂದಿನ ಚುನಾವಣಾಧಿಕಾರಿ, ಬಿಜೆಪಿ ಅಭ್ಯರ್ಥಿ ಜೀವರಾಜ್ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಸಂಚಿನ ಆರೋಪ ಹೊರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮರು ಎಣಿಕೆ ಬಳಿಕ ಎಲ್ಲಾ ಮತಪತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಮರು ಸೀಲ್ ಮಾಡಲಾಗಿದ್ದು, ವರದಿ ರಾಜ್ಯ ಚುನಾವಣಾ ಆಯೋಗ ಮತ್ತು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಪ್ರಕರಣ ಈಗ ನ್ಯಾಯಾಲಯದ ಪರಿಗಣನೆಯಲ್ಲಿದ್ದು, ಅಂತಿಮ ತೀರ್ಪಿನತ್ತ ಎಲ್ಲರ ಕಣ್ಣು ನೆಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು