Thursday, January 1, 2026

ಸತ್ಯ | ನ್ಯಾಯ |ಧರ್ಮ

ಸಹಾಯಕ್ಕೆ ಇಸ್ರೇಲ್ ತಡೆ: 37 ಮಾನವೀಯ ಸಂಸ್ಥೆಗಳ ಮೇಲೆ ನಿಷೇಧ; ಸಂಕಷ್ಟದಲ್ಲಿ ಗಾಜಾದ ಲಕ್ಷಾಂತರ ಜನರು

ಗಾಜಾ: ಗಾಜಾದಲ್ಲಿ ಕದನ ವಿರಾಮ ಘೋಷಣೆಯಾಗಿದ್ದರೂ ಇಸ್ರೇಲ್‌ನ ಕಠಿಣ ನಿಲುವುಗಳು ಅಲ್ಲಿನ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿವೆ. ತನ್ನ ಹೊಸ ನೋಂದಣಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಕಾರಣ ನೀಡಿ ಇಸ್ರೇಲ್ ಸರ್ಕಾರವು ಗುರುವಾರದಿಂದ 37 ಅಂತರಾಷ್ಟ್ರೀಯ ಮತ್ತು ಸ್ಥಳೀಯ ಮಾನವೀಯ ಸಂಸ್ಥೆಗಳ ಮೇಲೆ ನಿಷೇಧ ಹೇರಿದೆ.

ನಿಷೇಧಕ್ಕೊಳಗಾದ ಸಂಸ್ಥೆಗಳಲ್ಲಿ ಪ್ರಮುಖವಾಗಿ ‘ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್’ (MSF) ಕೂಡ ಸೇರಿದೆ. ಈ ಸಂಸ್ಥೆಯು ಗಾಜಾದ ಆಸ್ಪತ್ರೆಗಳ ಶೇ. 20ರಷ್ಟು ಬೆಡ್‌ಗಳಿಗೆ ಬೆಂಬಲ ನೀಡುತ್ತಿದ್ದು, ಗಾಜಾದಲ್ಲಿ ನಡೆಯುವ ಮೂರನೇ ಒಂದರಷ್ಟು ಪ್ರಸವಗಳಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದೆ. ಇಸ್ರೇಲ್‌ನ ಈ ನಿರ್ಧಾರದಿಂದಾಗಿ ತುರ್ತು ವೈದ್ಯಕೀಯ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ತನ್ನ ಮೇಲಿನ ಆರೋಪಗಳನ್ನು ಎಂಎಸ್‌ಎಫ್ ಸಂಸ್ಥೆ ತಳ್ಳಿಹಾಕಿದ್ದು, ನಿರ್ಧಾರ ಮರುಪರಿಶೀಲಿಸುವಂತೆ ಕೋರಿದೆ.

ಯುರೋಪಿಯನ್ ಯೂನಿಯನ್ (EU): ಇಸ್ರೇಲ್‌ನ ಈ ಕ್ರಮವನ್ನು ಇಯು ತೀವ್ರವಾಗಿ ಖಂಡಿಸಿದೆ. ಹೊಸ ನೋಂದಣಿ ನಿಯಮಗಳನ್ನು ನೆಪವಾಗಿಟ್ಟುಕೊಂಡು ನೆರವು ತಡೆಯುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಎಚ್ಚರಿಸಿದೆ.

ಮಾನವ ಹಕ್ಕುಗಳ ಕಾರ್ಯಕರ್ತರು: ಇಸ್ರೇಲ್ ತನ್ನ ಯುದ್ಧಾಪರಾಧಗಳಿಗೆ ಸಾಕ್ಷಿಗಳಿರಬಾರದು ಎಂಬ ಉದ್ದೇಶದಿಂದ ಈ ಸಂಸ್ಥೆಗಳನ್ನು ಹೊರಹಾಕುತ್ತಿದೆ ಎಂದು ಪ್ಯಾಲೆಸ್ತೀನ್ ವಿದೇಶಾಂಗ ಇಲಾಖೆ ಆರೋಪಿಸಿದೆ.

ಗಾಜಾದಲ್ಲಿ ಪ್ರಸ್ತುತ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಇಸ್ರೇಲ್ ಗುಡಿಸಲು ಮತ್ತು ಅಗತ್ಯ ಸಾಮಗ್ರಿಗಳ ಪೂರೈಕೆಯನ್ನು ತಡೆಹಿಡಿದಿದೆ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳು ರಸ್ತೆಬದಿಯಲ್ಲಿ ತತ್ತರಿಸುತ್ತಿದ್ದಾರೆ. ಔಷಧಗಳ ಕೊರತೆಯಿಂದಾಗಿ ಕ್ಯಾನ್ಸರ್ ರೋಗಿಗಳು ಸಾವಿನ ಅಂಚಿಗೆ ತಲುಪಿದ್ದಾರೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ಯಾಲೆಸ್ತೀನ್ ಅಂಕಿಅಂಶಗಳ ಇಲಾಖೆಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಗಾಜಾದ ಜನಸಂಖ್ಯೆಯು ಶೇ. 10.6 ರಷ್ಟು ಕಡಿಮೆಯಾಗಿದೆ. ಅಕ್ಟೋಬರ್ 2023 ರ ನಂತರ ಸುಮಾರು 71,266 ಜನರು ಸಾವನ್ನಪ್ಪಿದ್ದು, ಅವರಲ್ಲಿ 18,592 ಮಕ್ಕಳು ಮತ್ತು 12,400 ಮಹಿಳೆಯರು ಸೇರಿದ್ದಾರೆ. ಸುಮಾರು 20 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page