ದೆಹಲಿ: ಬಳಕೆದಾರರಿಗೆ ವಂಚನೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಅಕ್ರಮ ಸಾಲದ (Loan Apps) ಆಪ್‌ಗಳು ಸೇರಿದಂತೆ ಒಟ್ಟು 3,718 ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ (ಬ್ಲಾಕ್) ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷದ ಜೂನ್ 30 ರವರೆಗೆ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ 2000 ರ ಸೆಕ್ಷನ್ 69(A) ಮತ್ತು 79(3)(B) ಅಡಿಯಲ್ಲಿ ‘ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ’ (I4C) ನೀಡಿರುವ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೈಬರ್ ವಂಚನೆ ತಡೆಯಲು ಕೈಗೊಂಡಿರುವ ಬೃಹತ್ ಕಾರ್ಯಾಚರಣೆಯ ಭಾಗವಾಗಿ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳು ನೀಡಿದ ವರದಿಗಳ ಆಧಾರದ ಮೇಲೆ, ಕೇಂದ್ರ ಸರ್ಕಾರವು 15.75 ಲಕ್ಷಕ್ಕೂ ಹೆಚ್ಚು ನಕಲಿ ಸಿಮ್ ಕಾರ್ಡ್‌ಗಳನ್ನು ಮತ್ತು 5.77 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳ ಐಎಂಇಐ (IMEI) ಸಂಖ್ಯೆಗಳನ್ನು ಬ್ಲಾಕ್ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
