Monday, June 17, 2024

ಸತ್ಯ | ನ್ಯಾಯ |ಧರ್ಮ

ಇನ್ಫೋಸಿಸ್ ನಾರಾಯಣಮೂರ್ತಿ 5 ತಿಂಗಳ ಮೊಮ್ಮಗನಿಗೆ 4.2 ಕೋಟಿ ಲಾಭ

ಉದ್ಯೋಗಿಗಳಿಗೆ ವಾರಕ್ಕೆ 70 ಗಂಟೆಯ ಕೆಲಸಕ್ಕೆ ಕರೆ ನೀಡಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿಯವರ 5 ತಿಂಗಳ ಮೊಮ್ಮಗನ ಲಾಭಾಂಶ 4.2 ಕೋಟಿಯಷ್ಟಾಗಿದೆ. ಇನ್ಫೋಸಿಸ್ ತನ್ನ ಷೇರುಗಳ ಲಾಭಾಂಶದ ಘೋಷಣೆ ಮಾಡಿರುವುದರಿಂದ ತಮ್ಮ ಮೊಮ್ಮಗ ಏಕಗ್ರಹ ರೋಹನ್ ಮೂರ್ತಿ ಷೇರು ಮೌಲ್ಯದಲ್ಲಿ ಈ ಮಟ್ಟಿಗಿನ ಲಾಭಾಂಶ ಕಂಡುಬಂದಿದೆ‌.

ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 20 ರೂ.ಗಳ ಅಂತಿಮ ಲಾಭಾಂಶ ಮತ್ತು ಪ್ರತಿ ಷೇರಿಗೆ 8 ರೂ.ಗಳ ವಿಶೇಷ ಲಾಭಾಂಶವನ್ನು ಇನ್ಫೋಸಿಸ್ ಮಂಡಳಿಯು ಶಿಫಾರಸು ಮಾಡಿದೆ. ಲಾಭಾಂಶವನ್ನು ಜುಲೈ 1ರಂದು ಪಾವತಿಸಲಾಗುವುದು.

ಕಳೆದ ತಿಂಗಳು ಕಂಪನಿಯು ಸಲ್ಲಿಸಿದ ನಿಯಂತ್ರಕ ಫೈಲಿಂಗ್ ಪ್ರಕಾರ, ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗನಿಗೆ 240 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಐದು ತಿಂಗಳ ಮಗು ಏಕಗ್ರಹ ಮೂರ್ತಿ ಐಟಿ ಕಂಪನಿ ಇನ್ಫೊಸಿಸ್​ನಲ್ಲಿ 15 ಲಕ್ಷ ಷೇರುಗಳನ್ನು ಅಥವಾ ಶೇಕಡಾ 0.04 ರಷ್ಟು ಪಾಲನ್ನು ಪಡೆದುಕೊಂಡಿದೆ. ಒಟ್ಟು 28 ರೂ.ಗಳ ಲಾಭಾಂಶದೊಂದಿಗೆ, ಏಕಗ್ರಹ ಮೂರ್ತಿ ಈಗ 4.2 ಕೋಟಿ ರೂ.ಗಳಷ್ಟು ಲಾಭ ಪಡೆಯಲು ಸಜ್ಜಾಗಿದ್ದಾರೆ.

ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ದಂಪತಿಗೆ ನವೆಂಬರ್ 10ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದ ಏಕಗ್ರಹ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗುವಾಗಿದೆ. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗೆ ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಅವರ ಪುತ್ರಿಯರಾದ ಕೃಷ್ಣ ಮತ್ತು ಅನೌಷ್ಕಾ ಸುನಕ್ ಎಂಬ ಇಬ್ಬರು ಮೊಮ್ಮಕ್ಕಳಿದ್ದಾರೆ. ಇನ್ಫೋಸಿಸ್ ಮಾಲೀಕತ್ವದ ಬಗ್ಗೆ ನೋಡುವುದಾದರೆ- ಅಕ್ಷತಾ 1.05%, ಸುಧಾ 0.93% ಮತ್ತು ರೋಹನ್ 1.64% ಪಾಲನ್ನು ಹೊಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು